ಶತಕಸಾಹಿತ್ಯವು ಪ್ರಾಕೃತ ಸಾಹಿತ್ಯದಲ್ಲಿ ಉದಯಗೊಂಡು ಸಂಸ್ಕೃತ ಸಾಹಿತ್ಯದಲ್ಲಿ ಸರ್ವತೋಮುಖವಾಗಿ ಬೆಳೆದು ದ್ರಾವಿಡ ಭಾಷೆಗಳಲ್ಲಿ ತನ್ನ ತಣಿಯಾದ ಫಲಗಳನ್ನು ನೀಡಿದೆ. ಸಂಸ್ಕೃತ ಶತಕಗಳ ಪ್ರೇರಣೆಯಿಂದ ಉಭಯಭಾಷಾವಿಶಾರದರಾದ ಕನ್ನಡದ ಅನೇಕ ಮಹಾಕವಿಗಳು ಶತಕಗಳನ್ನು ಬರೆದು ಇದಕ್ಕೊಂದು ಮೆರುಗು ಕೊಟ್ಟಿದ್ದಾರೆ. ಸಂಸ್ಕೃತ ಸಾಹಿತ್ಯದಲ್ಲಿ ಶತಕಗಳು ಕೇವಲ ವೃತ್ತ ರೂಪದಲ್ಲಿ ಕಾಣಿಸಿಕೊಂಡಿವೆ. ಆದರೆ ಕನ್ನಡ ಸಾಹಿತ್ಯದಲ್ಲಿ ಅವು ಕಂದ, ಷಟ್ಪದಿ, ಸಾಂಗತ್ಯ, ವೃತ್ತ, ಚೌಪದಿ ಇವೇ ಮೊದಲಾದ ಹಲವು ಛಂಧೋರೂಪಗಳಲ್ಲಿ ನಿರ್ಮಾಣಗೊಂಡು ಜನಪ್ರಿಯವಾಗಿವೆ.
ನಡುಗನ್ನಡ ಕಾಲದ ಶತಕ ಸಾಹಿತ್ಯದ ಕುರಿತು ಡಾ. ರಾಜಶೇಖರ ಜಮದಂಡಿ ಬರಹ

ಪೀಠಿಕೆ:

ಶತಕ ಸಾಹಿತ್ಯವೆಂಬುದು ಬಹು ಪುರಾತನ ಸಾಹಿತ್ಯವಾಗಿದೆ. ಭಾರತೀಯ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ರೂಪವೈವಿಧ್ಯಕ್ಕೆ ಶತಕಸಾಹಿತ್ಯವೂ ಒಂದು. ‘ಶತಕ’ ಎನ್ನುವ ಮೂರು ಅಕ್ಷರಸೂಚಿಸುವ ಅರ್ಥನೂರು ಎಂಬ ಮಾತು ಸರ್ವೇಸಾಮಾನ್ಯವಾದುದು. ಶತಕವೆಂದರೆ ಸಾಮಾನ್ಯವಾಗಿ ೧೦೦ರಿಂದ ೧೨೮ ಪದ್ಯಗಳ ಒಂದು ರಚನೆ. ಶತಕ ಎಂಬುದು ಸಂಕಲನವಲ್ಲ. ಆತ್ಮನಿಷ್ಠವಾದ, ಭಾವನಿಷ್ಠವಾದ ಒಂದು ಕಾವ್ಯ ಪ್ರಕಾರ. ಇದು ಸಂಸ್ಕೃತ, ಪ್ರಾಕೃತ, ತೆಲುಗು, ತಮಿಳು, ಮಲಯಾಳಂ ಇತ್ಯಾದಿ ಭಾಷೆಗಳಲ್ಲಿ ವಿಕಾಸ ಹೊಂದಿದೆ. ಕನ್ನಡ ಸಾಹಿತ್ಯದಲ್ಲಿ ಚಂಪೂಕಾವ್ಯಗಳು, ಷಟ್ಪದಿ ಗ್ರಂಥಗಳು, ಹಾಡುಗಬ್ಬಗಳು, ವಚನಸಾಹಿತ್ಯ, ದಾಸಸಾಹಿತ್ಯ, ಶಾಸ್ತ್ರಸಾಹಿತ್ಯ, ಜನಪದ ಸಾಹಿತ್ಯ ತತ್ವಪದಸಾಹಿತ್ಯ ಇತ್ಯಾದಿ ವಿಭಾಗಗಳಿದ್ದಂತೆಯೇ ಶತಕ ಸಾಹಿತ್ಯವೂ ಒಂದಾಗಿದೆ. ಕನ್ನಡ ಕವಿಗಳಿಗೆ ಭರ್ತೃಹರಿಯ ನೀತಿಶತಕ, ಶೃಂಗಾರಶತಕ, ವೈರಾಗ್ಯಶತಕ, ನ್ಯಾಯಶತಕ, ಮಯೂರನ ಸೂರ್ಯಶತಕ ಮುಂತಾದವು ಮಾರ್ಗದರ್ಶನವಾಗಿವೆ. ಕರ್ನಾಟಕದ ಪ್ರಮುಖ ಧರ್ಮಗಳಾದ ಜೈನ-ಲಿಂಗಾಯತ ಮತ್ತು ಬ್ರಾಹ್ಮಣ ಕವಿಗಳಿಂದ ಈ ಪ್ರಕಾರದಲ್ಲಿ ವಿಪುಲವಾದ ಸಾಹಿತ್ಯ ಸೃಷ್ಟಿ ನಡೆದಿದೆ. ಸು.೪೦೦ ಕ್ಕೂ ಹೆಚ್ಚು ಕೃತಿಗಳು ಲಭ್ಯವಾಗಿರುವುದು ಅದರ ಸಂಖ್ಯಾಬಲ ಮತ್ತು ಜನಪ್ರಿಯತೆಯನ್ನು ಸೂಚಿಸುತ್ತದೆ. ಅದರಲ್ಲಿಯೇ ಲಿಂಗಾಯತ ಕವಿಗಳ ಕೊಡುಗೆ ವಿಶೇಷ ಮತ್ತು ವಿಶಿಷ್ಟವಾದುದು. ಧರ್ಮಾರಾಧನೆ, ತತ್ವ, ಸ್ತುತಿ, ಮಹಾತ್ಮರ ಸ್ತೋತ್ರ, ಶೃಂಗಾರ, ನೀತಿಬೋಧನೆ, ಭಗವಂತನಲ್ಲಿ ಭಕ್ತಿ, ಜ್ಞಾನ, ವೈರಾಗ್ಯ ಮುಂತಾದ ಪ್ರಧಾನ ಗುಣಲಕ್ಷಣಗಳನ್ನು ಶತಕ ಸಾಹಿತ್ಯದಲ್ಲಿ ಕಾಣಬಹುದು.

ಕವಿ ಮತ್ತು ಶತಕಗಳ ಪರಿಚಯ:

ಶತಕಸಾಹಿತ್ಯವು ಪ್ರಾಕೃತ ಸಾಹಿತ್ಯದಲ್ಲಿ ಉದಯಗೊಂಡು ಸಂಸ್ಕೃತ ಸಾಹಿತ್ಯದಲ್ಲಿ ಸರ್ವತೋಮುಖವಾಗಿ ಬೆಳೆದು ದ್ರಾವಿಡ ಭಾಷೆಗಳಲ್ಲಿ ತನ್ನ ತಣಿಯಾದ ಫಲಗಳನ್ನು ನೀಡಿದೆ. (ದ್ರಾವಿಡ ಭಾಷೆಯಾದ ತೆಲುಗಿನಲ್ಲಿ ಗಿರಿಮಲ್ಲಿಕಾರ್ಜುನಶತಕ, ವೃಷಾಧಿಪಶತಕ, ಭಾಸ್ಕರಶತಕ ಇತ್ಯಾದಿಗಳಿವೆ.) ಸಂಸ್ಕೃತ ಶತಕಗಳ ಪ್ರೇರಣೆಯಿಂದ ಉಭಯಭಾಷಾವಿಶಾರದರಾದ ಕನ್ನಡದ ಅನೇಕ ಮಹಾಕವಿಗಳು ಶತಕಗಳನ್ನು ಬರೆದು ಇದಕ್ಕೊಂದು ಮೆರುಗು ಕೊಟ್ಟಿದ್ದಾರೆ. ಸಂಸ್ಕೃತ ಸಾಹಿತ್ಯದಲ್ಲಿ ಶತಕಗಳು ಕೇವಲ ವೃತ್ತ ರೂಪದಲ್ಲಿ ಕಾಣಿಸಿಕೊಂಡಿವೆ. ಆದರೆ ಕನ್ನಡ ಸಾಹಿತ್ಯದಲ್ಲಿ ಅವು ಕಂದ, ಷಟ್ಪದಿ, ಸಾಂಗತ್ಯ, ವೃತ್ತ, ಚೌಪದಿ ಇವೇ ಮೊದಲಾದ ಹಲವು ಛಂಧೋರೂಪಗಳಲ್ಲಿ ನಿರ್ಮಾಣಗೊಂಡು ಜನಪ್ರಿಯವಾಗಿವೆ. ಷಟ್ಪದಿಯಲ್ಲಿಯೇ, ಮತ್ತೆ ಭಾಮಿನಿ, ವಾರ್ಧಕ, ಮತ್ತೇಭ, ಭೋಗ ಮೊದಲಾದ ವಿವಿಧ ಮುಖಗಳಲ್ಲಿ ಮೂಡಿಬಂದ ಶತಕಗಳು ವೈವಿಧ್ಯಕ್ಕೆ ನಿದರ್ಶನಗಳಾಗಿವೆ. ಹರಿಹರ, ಮೊಗ್ಗೆಯ ಮಾಯಿದೇವ, ಸೋಮನಾಥ, ರತ್ನಾಕರವರ್ಣಿ, ಸಂಗವಿಭು, ವೀರಭದ್ರರಾಜ, ಮಲ್ಲಿಕಾರ್ಜುನ, ಸಿರಿನಾಮಧೇಯ, ಗೌರವಾಚಾರ್ಯಬಸವಣ್ಣ, ಮುಮ್ಮಡಿಕೃಷ್ಣರಾಜ, ವಿರಕ್ತತೋಂಟದಾರ್ಯ ಮುಂತಾದವರು ಶ್ರೇಷ್ಠ ಶತಕ ಕರ್ತೃಗಳ ಸಾಲಿನಲ್ಲಿ ಬರುತ್ತಾರೆ. ಕ್ರಿ.ಶ.೧೦೭೧ರಲ್ಲಿದ್ದ ನಾಗವರ್ಮಾಚಾರ್ಯನೆಂಬ ಕವಿಯ‘ಚಂದ್ರಚೂಡಾಮಣಿರತ್ನಶತಕ’ ಅಥವಾ ‘ಚೂಡಾಮಣಿಶತಕ’ವೇ ಈಗ ದೊರೆತಿರುವ ಕನ್ನಡಶತಕಗಳಲ್ಲಿ ಮೊದಲನೆಯದೆಂದು ತೋರುತ್ತದೆ. ಇಲ್ಲಿನ ಪದ್ಯಗಳು ಸರ್ವಜ್ಞನ ತ್ರಿಪದಿಗಳಂತೆ ನೀತಿಬೋಧಕಗಳಾಗಿವೆ. ಉದಾಹರಣೆಗೆ:

ಎಲ್ಲಿ ಸುಶೀಲಂ ಸದ್ಗುಣ
ಮೆಲ್ಲಿ ದಯೆ ಧರ್ಮಮೆಸೆವ ಸತ್ಯಂ ನೆಲೆಗೊಂ
ಡಲ್ಲಿಯೆ ಆಯುಂ ಸಿರಿಯುಂ
ಸಲ್ಲೀಲೆಯೊಳಿಪ್ಪುವಲ್ತೆ ಚೂಡಾರತ್ನಾ (ಪದ್ಯ.೩೮)

ಈ ಶತಕವನ್ನು ಉದಯಾದಿತ್ಯನ ರಾಯಭಾರಿಯೆನಿಸಿದ ತನ್ನ ಅಣ್ಣನಾದ ಭಾಸ್ಕರ ಮೊದಲಾದವರಿಗೆಂದು ಬರೆದಿದ್ದೇನೆಂದು ಹೇಳಲಾಗಿದೆ. ಕ್ರಿ.ಶ. ಸುಮಾರು ೧೧೬೦ರಲ್ಲಿದ್ದ ಕೊಂಡಗುಳಿ ಕೇಶಿರಾಜನ ‘ಷಡಕ್ಷರಕಂದ’ ಅಥವಾ ‘ಮಂತ್ರಮಹಿಮೆ’ ಎಂಬ ಶತಕವು ಗಮನಾರ್ಹವಾಗಿವೆ. ಇದು ೧೧೦ ಪದ್ಯಗಳನ್ನೊಳಗೊಂಡಿದ್ದು, ಪ್ರತಿ ಪದ್ಯವು ‘ಓಂ ನಮಃಶಿವಾಯೆಂಬಪದ’ ಎಂಬ ಅಂಕಿತದೊಂದಿಗೆ ಮುಗಿಯುತ್ತದೆ. ಉದಾ:

ತರಿಯಲ್ ಮೋಹದ ಕೆಚ್ಚಂ
ಪರಿಯಲ್ ಭವಪಾಶಮಂ ಮನೋಜನಬಿಲ್ಲಂ
ಮುರಿಯಲ್ ಮಾಯೆಯ ಬೇರಂ
ಕೋರಿಯಲ್ ಜಪಮೋಂ ನಮಃಶಿವಾಯೆಂಬ ಪದಂ|

ಈ ಕವಿಯನ್ನು ಕುರಿತು ಸಿದ್ಧನಂಜೇಶ(೧೬೫೦) ತನ್ನ ‘ಗುರುರಾಜಚರಿತ್ರ’ದಲ್ಲಿ ‘ಮಗ್ಗೆಯಮಾಯಿದೇವಂ ಲಿಂಗವಂತನಿಗೆನರಕವಿಲ್ಲೆಂದುವಿದ್ಯಾನಗರದಲ್ಲಿ… ಜಯಸ್ತಂಭವಂ ನಿಲಿಸಿದಂ’ ಎಂದು ಕೊಂಡಾಡಿರುವುದುಂಟು. ಹಾಗೆಯೆ ವಿರಕ್ತ ತೋಂಟದಾರ್ಯನು ಈತನ ಶತಕಗಳಿಗೆ ವ್ಯಾಖ್ಯಾನವನ್ನು ಬರೆದಿರುವುದು ಅದರ ಗರಿಮೆಯನ್ನು ಎತ್ತಿ ತೋರಿಸುತ್ತದೆ. ಅಲ್ಲದೆ ಸದ್ಯ ಲಿಂಗಾಯತ ಶತಕಕಾರಲ್ಲಿ ಈತನೇ ಮೊದಲಿಗನೆಂದು ಹೇಳಲಾಗುತ್ತದೆ. ಕನ್ನಡ ಶತಕ ಸಾಹಿತ್ಯದಲ್ಲಿ ಪುಲಿಗೆರೆ(ಈಗಿನ ಲಕ್ಷ್ಮೇಶ್ವರ)ಯ ಕನ್ನಡ ಮತ್ತು ಸಂಸ್ಕೃತ ವಿದ್ವತ್ತುಗಳಲ್ಲಿ ಸೋಮಕವಿ (ಸು.೧೨-೧೩ನೇ ಶತಮಾನ) ತುಂಬಾ ಪ್ರಸಿದ್ಧನಾದವನು. ಇವನನ್ನು ನಡುಗನ್ನಡದ ವೀರಶೈವ ಕವಿಗಳ ಸಾಲಿಗೆ ಸೇರಿಸಲಾಗಿದೆ. ಇವನ ಜನಪ್ರಿಯತೆ ಶತಕ ಕವಿಗಳಲ್ಲಿ ಮತ್ತೊಬ್ಬರಿಲ್ಲವೆಂದೇ ಹೇಳಬೇಕು. ಇವನ ಭಾಷೆ ಮತ್ತು ಭಾವನಗಳ ಬಂಧ ಕೂಡ ಸರಳತೆಯಿಂದ ಕೂಡಿದುದು. ಇವನ ಪದ್ಯಗಳು ಕನ್ನಡ ನಾಡಿನ ಜನರ ನಾಲಿಗೆಯ ಮೇಲೆ ಈಗಲೂ ನಲಿದಾಡುತ್ತಿರುವುದೊಂದು ವಿಶೇಷ. ಇವನ ಶತಕಗಳು ಸಿರಿವಂತರ, ಆಳರಸರ, ಪಂಡಿತವರೇಣ್ಯರ ಓಲೈಕೆಗಾಗಿ ರಚನೆಗಳಾದುವುಗಳಲ್ಲ. ಜನಸಾಮಾನ್ಯರ ಬದುಕನ್ನು ಹಸನುಗೊಳಿಸುವುದಕ್ಕಾಗಿ ಸಮತೋಲನದ ಜಾಡಿನಲ್ಲಿ ಮುನ್ನಡೆಸುವುದಕ್ಕಾಗಿ ಉದ್ದಿಷ್ಟವಾದವುಗಳು. ಇವನು ಕ್ರಿ.ಶ. ೧೨೯೯ರಲ್ಲಿ ಮತ್ತೇಭವಿಕ್ರೀಡಿತವೃತ್ತದಲ್ಲಿ ೧೦೫ ಪದ್ಯಗಳನ್ನು ಬರೆದು ಆರಂಭ ಮತ್ತು ಕೊನೆಯ ವೃತ್ತಗಳು ಸ್ರಗ್ಧರಾ; ಮಧ್ಯದ ೧೦೫ ವೃತ್ತಗಳು ಮತ್ತೇಭವಿಕ್ರೀಡಿತ. ಈತನ ಅಂಕಿತನಾಮ ‘ಹರಹರಾಶ್ರೀಚನ್ನಸೋಮೇಶ್ವರಾ’ ಉದಾಹರಣೆಗೆ ಸರ್ವಜ್ಞನಾಗುವ ಬಗೆಗೆ ಬಹಳ ಪ್ರಸಿದ್ಧಿ ಹೊಂದಿದ ಪದ್ಯ:

ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಗಳಂ ಕೇಳುತಂ
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ
ಕೆಲವಂ ಸಜ್ಜನಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ

ಕವಿಯ ಪ್ರಕಾರ ಜ್ಞಾನ ಎಲ್ಲ ದಿಕ್ಕುಗಳಿಂದಲೂ ಬರುವಂಥದ್ದು. ಅನೇಕ ತೊರೆಗಳು ಬಂದು ಸೇರಿ ಒಂದು ದೊಡ್ಡ ಸಮುದ್ರವಾಗುವಂತೆ, ಮನಷ್ಯನು ಕೆಲವು ವಿಷಯಗಳನ್ನು ಪಂಡಿತರಿಂದಲೂ, ಕೆಲವನ್ನು ಶಾಸ್ತ್ರಗಳಿಂದಲೂ ಕೆಲವನ್ನು ಇತರರ ಆಚರಣೆಯಿಂದಲೂ, ಕೆಲವನ್ನು ಸ್ವಬುದ್ಧಿಯಿಂದಲೂ, ಕೆಲವನ್ನು ಸುಜನರ ಸಹವಾಸದಿಂದಲೂ ತಿಳಿದುಕೊಳ್ಳುವುದರಿಂದ ವ್ಯಕ್ತಿಯು ಸರ್ವಜ್ಞನಾಗುವನು ಎಂಬ ವಿಚಾರವನ್ನು ವ್ಯಕ್ತಪಡಿಸಿರುವನು. ಅನಂತರ ಶತಕಗಳನ್ನು ಕನ್ನಡ ಸಾಹಿತ್ಯದಲ್ಲಿ “ಕಾವ್ಯವಾಗಿಸಿದ” ಕೀರ್ತಿ ವೀರಶೈವ ಕವಿ ಹರಿಹರನಿಗೆ ಸಲ್ಲಬೇಕು. ತನ್ನ ದೈವವಾದ ಹಂಪೆಯ ವಿರೂಪಾಕ್ಷನನ್ನು ಅನೇಕ ವಿಧವಾಗಿ ಸ್ತುತಿಸಿದ್ದಾನೆ. ರಗಳೆಕವಿಯೆನಿಸಿಕೊಂಡಿದ್ದರೂ ತನ್ನ ಹೃದಯದ ಭಕ್ತಿಭಾವ ಮತ್ತು ವೈರಾಗ್ಯವನ್ನು ‘ಪಂಪಾಶತಕ’, ‘ರಕ್ಷಾಶತಕ’ ಮತ್ತು ‘ವಿರೂಪಾಕ್ಷಶತಕ’ದಲ್ಲಿ ವಿರೂಪಾಕ್ಷನನ್ನು ಸ್ತುತಿಸಿ, ಅದಕ್ಕಾಗಿ ಹೃದಯ ಮಿಡಿದು ಆತ್ಮವನ್ನು ಅರ್ಪಿಸಿ, ಮನೋಜ್ಞವಾಗಿ, ರಸವತ್ತಾಗಿ ನಿರೂಪಿಸಿದ್ದಾನೆ. ಆರಂಭದಲ್ಲಿ ಮನುಷ್ಯ ಜನ್ಮದ ಕ್ಲೇಶಗಳನ್ನೂ ಕಾಮಕ್ರೋಧ ಮುಂತಾದ ಹಾವಳಿಯನ್ನೂ ಕವಿ ನಿರೂಪಿಸಿ ಅವುಗಳಿಂದ ಮನಸ್ಸು ಚಂಚಲವಾಗುವುದೆಂದು ತಿಳಿಸಿ ಶಿವನನ್ನು ಹೀಗೆ ಬೇಡಿದ್ದಾನೆ.

ಪ್ರತ್ಯಕ್ಷಂ ಸತ್ತು ಹೋಗುತ್ತಿದೆನರನಿಕರಂ ತಾನದಂ ಕಂಡು ಕಂಡಂ
ನಿತ್ಯತ್ವಂಬೆತ್ತ ಪಾಂಗಿಂ ಪಳಿವ ಮುಳಿವ ಕಾಮಿಪ್ಪ ಕೋಪಿಷ್ಟ ಲೋಭಿ
ಪ್ರತ್ಯಂತಂ ಗರ್ವಿಪೆನ್ನೀ ಮನಕೆ ಪರಮ ವೈರಾಗ್ಯ ಮರ ಕೊಟ್ಟು ಸತ್ಯಂ
ಸತ್ಯಂ ಸತ್ಯಾತ್ಮ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ||

ಮನ ಸ್ಥಿರವಾಗಬೇಕಾದರೆ ಮಾಯೆಯ ಮಂಜು ಹರಿಯಬೇಕಾದರೆ ಅನಾಸಕ್ತಿಯ ಕಟ್ಟು ಬೇಕು. ವೈರಾಗ್ಯದ ಭಾವ ಬೆಳಗಬೇಕು. ಅದಕ್ಕಾಗಿ ಬುದ್ಧಿ ಭದ್ರವಾಗಿ, ಆಸೆ ನೀಗಿ, ತಾಪತ್ರಯ ಹಿಂಗಿ ಶಿವಪೂಜೆಯಲ್ಲಿ ನಿರತನಾಗುವುದು. ಹೀಗೆ ರಕ್ಷಾಶತಕದಲ್ಲಿ ದೀನನಾಗಿ ಅಪರಾಧಿಯಂತೆ ಮಾತನಾಡಿದ್ದಾನೆ. ಮಗ್ಗೆಯ ಮಾಯಿದೇವನ ವೀರಶೈವ ಸಿದ್ಧಾಂತಕ್ಕೆ ಅನುಸಾರವಾಗಿ ಶಿವಾಧವಶತಕ (೧೦೧ವೃತ್ತಗಳು), ಶಿವಾವಲ್ಲಭಶತಕ (೧೦೩ವೃತ್ತಗಳು), ಮಹಾದೈಪುರೀಶ್ವರಶತಕ (೧೧೩ವೃತ್ತಗಳು) ಎಂಬ ಮೂರು ಶತಕಗಳನ್ನು ರಚಿಸಿದ್ದಾನೆ. ಇವುಗಳಲ್ಲಿ ಭಕ್ತಿ-ಜ್ಞಾನ-ವೈರಾಗ್ಯ ವಿಷಯಗಳನ್ನು ಪ್ರತಿಪಾದಿಸಿದ್ದಾನೆ.

ಪ್ರಾಣಮುಮಂ ಶರೀರಮುಮನರ್ಥಮುಮಂ ಗುರುಲಿಂಗಜಂಗಮಂ
ಶ್ರೇಣಿಗೆ ಕೊಟ್ಟು ತನ್ಮುಖಸಮಾಗತ ಶಾಂತಿಕರ ಪ್ರಸಾದಕ
ಲ್ಯಾಣ ಸುಖಪ್ರಪೂರ್ಣ ಪರಿಣಾಮವನೈದಿದವರ್ಗ್ಗೆ ನಿತ್ಯ ನಿ
ರ್ವಾಣ ಪದಂ ಬಳಿಕ್ಕುಳಿದವರ್ಗ್ಗೆ ಪರಿಭ್ರಮಣಂ ಶಿವಾಧವಾ||

ಎಂದು ಗುರುಲಿಂಗಜಂಗಮಗಳಿಗೆ ಪ್ರಾಣ ಶರೀರ ಅರ್ಥವನಿತ್ತ ಶರಣ ಅಳವಿಲ್ಲದ ಮುಕ್ತಿಪದವನ್ನು ಹೊಂದುವನೆಂದೂ, ಉಳಿದವರು ಜನನ ಮರಣದ ರಾಟಳಚಕ್ರದ ಪರಿಭ್ರಮಣದಲ್ಲಿ ಸಿಕ್ಕುವರೆಂದೂ ಹೇಳಿದ್ದಾನೆ. ಜನರು ಅಜ್ಞಾನದಿಂದ ಎಂತೆಂತಹ ಪಾಪಕೃತ್ಯಗಳನ್ನೆಸಗುವರೆಂಬುದನ್ನು ಶತಕದ ಪದ್ಯಗಳಲ್ಲಿ ವಿವರಿಸಿದ್ದಾನೆ. ಸಂಗವಿಭು ಎಂಬ ಶತಕ ಕವಿಯು ಆದವಾನಿ ತಾಲೂಕಿಗೆ ಸೇರಿದ ನಂದವಾರದವನು. ೧೮೩೨ರಿಂದ ೧೮೫೬ರಲ್ಲಿ ಈತ ರಚಿಸಿದನೆಂದು ಹೇಳಲಾದ ಭುವನೈಕನಾಯಕೀಶತಕ, ಬಸವಶತಕ, ಪಂಪಾಶತಕ ಎಂಬ ಶತಕಗಳಲ್ಲಿ ಕಾಣುವ ಮುಖ್ಯಗುಣವೆಂದರೆ: ಧೈನ್ಯತೆ, ಭಕ್ತಿ ಮತ್ತು ಲೋಕನೀತಿ. ಅಲ್ಲದೆ ಚಮತ್ಕಾರ, ಉತ್ಪ್ರೇಕ್ಷೆ, ಉಕ್ತಿವೈಚಿತ್ರ್ಯಗಳೂ ಇವೆ. ಭುವನೈಕನಾಯಕೀಶತಕವು ಪಾರ್ವತಿಯನ್ನು ಕುರಿತುದಾಗಿದೆ. ಪಾರ್ವತಿಯ ಕಂಗಳ ದಿಟ್ಟಿಯಿಂದ ಶಿವನ ಪಂಚಮುಖಗಳು ಹೇಗೆ ಅರಳಿದುವೆಂಬುದರ ಸುಂದರ ವರ್ಣನೆ ಇಲ್ಲಿದೆ.

ಜನನಿ ತಮೋವಿಮೋಚನೆ ವಿಲೋಚನ ರೋಚಿಗಳಿಂ ಮಹೇಶನಾ
ನನ ಸರಸೀರುಹಾಬ್ಜಶತಪತ್ರ ಕುಶೇಶಯ ಪದ್ಮಮೋದ ಸಂ
ಆನಿಸೆ ಪರಾಗಕೇಸರಿಗಳಂತೆ ವಿಭೂತಿಜಟಾರುಣತ್ವಗಳ್
ಮನಸಿಗೆ ಮಂಗಳಂ ಬೆರೆಯೆ ಮೆಚ್ಚಿಸಿದೌ ಭುವನೈಕನಾಯಕೀ (ಪದ್ಯ ೫)

ಕ್ರಿ.ಶ.೧೦೭೧ರಲ್ಲಿದ್ದ ನಾಗವರ್ಮಾಚಾರ್ಯನೆಂಬ ಕವಿಯ‘ಚಂದ್ರಚೂಡಾಮಣಿರತ್ನಶತಕ’ ಅಥವಾ ‘ಚೂಡಾಮಣಿಶತಕ’ವೇ ಈಗ ದೊರೆತಿರುವ ಕನ್ನಡಶತಕಗಳಲ್ಲಿ ಮೊದಲನೆಯದೆಂದು ತೋರುತ್ತದೆ. ಇಲ್ಲಿನ ಪದ್ಯಗಳು ಸರ್ವಜ್ಞನ ತ್ರಿಪದಿಗಳಂತೆ ನೀತಿಬೋಧಕಗಳಾಗಿವೆ.

ಕತ್ತಲೆಯನ್ನು ಕಳೆದ ಪಾರ್ವತಿಯ ಕಣ್ಣನೇಸರ ಕಿರಣಗಳಿಂದ ಶಿವನ ಪಂಚಮುಖದ ಪಂಚ ಕಮಲಗಳು ಸರಸೀರುಹ, ಅಬ್ಜ, ಶತಪತ್ರ, ಕುಶೇಶಯ ಪದ್ಮಗಳು ಅರಳಿದುವು. ವಿಭೂತಿ ಮತ್ತು ಕೆಂಜಡೆಗಳು ಪರಾಗ, ಕೇಸರಿಗಳಂತೆ ಕಂಡುವು. ಸಾವಿರ ಕಮಲಗಳಿದ್ದರೂ ಅವುಗಳ ವಿಕಸನಕ್ಕೆ ಒಬ್ಬನೇ ಸೂರ್ಯ ಸಾಕು. ಶಿವನಿಗೆ ಎಷ್ಟು ಮುಖಗಳಿದ್ದರೂ ಉಮೆ ತನ್ನ ಒಂದೇ ಮುಖದಿಂದ ಆತನನ್ನು ಸಂತಸಪಡಿಸಬಲ್ಲಳು. ಶಿವನಿಗಿಂಗಲೂ ಶಕ್ತಿ ಬಲ್ಲದಳು ಎಂಬುದನ್ನು ಕವಿ ಅರ್ಥವತ್ತಾಗಿ ವರ್ಣಿಸಿದ್ದಾನೆ. ೧೫೬೦ರಲ್ಲಿ ಜೀವಿಸಿದ್ದ ಮಲ್ಲಿಕಾರ್ಜುನನೆಂಬ ಕವಿಯು ‘ಶಿವಮಹಿಮಾಶತಕ’ವನ್ನು ಬರೆದಿದ್ದಾನೆ. “ಶ್ರುತಿ ಸೂಕ್ತ ರತ್ನಮಾಲಾಸ್ತುತಿ, ವೇದಾಂತ ಪಾರಾಮಾರ್ಥದಿಂದೆಸೆದಿರ್ಪ ಶತಕಂ’ ಎಂಬುದು ಈ ಶತಕದ ಮಹಿಮೆಯನ್ನು ಕವಿಯೇ ವರ್ಣಿಸಿದ್ದಾನೆ. ಈ ಕೃತಿಗೆ ಚನ್ನಮಲ್ಲಿಕಾರ್ಜುನಶತಕವೆಂಬ ಪರ್ಯಾಯ ಹೆಸರುಂಟು. ಕೃತಿಯ ಶೀರ್ಷಿಕೆಯೇ ಸಾರುವಂತೆ ಶಿವನ ಮಹಿಮೆಯನ್ನು ಸಾರುವ ಪದ್ಯಗಳನ್ನು ಶ್ರೀಚನ್ನಮಲ್ಲೇಶ್ವರಾ ಎಂಬ ಅಂಕಿತದಲ್ಲಿ ಕಾಣುತ್ತೇವೆ. ಉದಾಹರಣೆಗೆ:

ಮೃಡ ನೀನೇ ಪರಬೊಮ್ಮವೆಂದು ನಿಗಮಂ ತಾಂ ಪ್ರೋಕ್ತಿಯಿಂ ತೋರಿ ನಿ
ನ್ನಡಿಯೊಳ್ ಭಕ್ತಿಯನುಳ್ಳ ಪುಲ್ಕಸನೆ ವಿಪ್ರಶ್ರೇಷ್ಠನೆಂದಾರ್ದು ಬ|
ಲ್ನುಡಿಗಾನಿಕ್ಕಿದೆ ನಾಂ ಪರವಾದಿಗಳ ಜಿಹ್ವಾಬಂಧನಂಗೆಯ್ಯದಿ
ರ್ದೊಡೆ ಸದ್ಭಕ್ತರ ಭಕ್ತನಲ್ತದು ವಲಂ ಶ್ರೀಚನ್ನಮಲ್ಲೇಶ್ವರಾ|| (ಪದ್ಯ.೪)

ಶಿವಭಕ್ತನಾದ ಗುಮ್ಮಟಾರ್ಯವವನೆಂಬ ಕವಿ (ಈತನ ಕಾಲ ತಿಳಿದುಬಂದಿಲ್ಲ) ೧೦೮ ವೃತ್ತಗಳಲ್ಲಿ ‘ಗುಮ್ಮಟಶತಕ’ ಅಥವಾ ‘ಅರ್ಧೇಂದುಮೌಳಿಶತಕ’ವನ್ನು ಬರೆದಿರುವನು. ಈ ಶತಕದ ಪದ್ಯಗಳ ತಾತ್ಪರ್ಯ ನೋಡಿದಾಗ “ಮಳಲನ್ನು ಹಿಂಡಿ ಎಣ್ಣೆಯನ್ನಾದರೂ ತೆಗೆಯಬಹುದು, ತಿಳಿನೀರನ್ನು ಚೆನ್ನಾಗಿ ಕಡೆದು ಬೆಣ್ಣೆಯನ್ನು ತೆಗೆಯಬಹುದು, ಗಗನಕುಸುಮದಿಂದ ಪರಿಮಳವನ್ನು ಆಘ್ರಾಣಿಸಬಹುದು ಆದರೆ ನಿಸ್ಸಾರವಾದ ಈ ದೇಹವನ್ನು ಶಾಶ್ವತಗೊಳಿಸುವೆನೆಂಬ ಮಾತು ಮಾತ್ರ ಸುಳ್ಳಾದುದು ಎಂಬ ನಿತ್ಯಸತ್ಯವಾದ ತತ್ವವನ್ನು ಕವಿ ಲೌಕಿಕ ದೃಷ್ಟಾಂತದಿಂದ ಮನಂಬುಗುವಂತೆ ಚಿತ್ರಸಿದ್ದಾನೆ. ೧೬ನೇ ಶತಮಾನದಲ್ಲಿದ್ದವನೆಂದು ತಿಳಿದುಬಂದಿರುವ ವೀರಭದ್ರರಾಜನೆಂಬ ಕವಿಯು ಉಮಾಮಹೇಶ್ವರಶತಕ, ಪಾರ್ವತೀವಲ್ಲಭಶತಕ, ಪಾರ್ವತೀ ಪ್ರಾಣನಾಥಶತಕ, ಶ್ರೀಕಂಠಸೋಮೇಶ್ವರಶತಕ ಮತ್ತು ಕಂದಶತಕ ಎಂಬ ಐದು ಶತಕಗಳನ್ನು ಶಿವನನ್ನು ಮತ್ತು ಶಿವನ ಅರ್ಧಾಂಗಿ ಪಾರ್ವತಿಯನ್ನು ಕುರಿತು ಬರೆದಿದ್ದಾನೆ. ವೀರಶೈವ ಧರ್ಮಕ್ಕೆ ಸೇರಿದ ಈತನ ಶತಕಗಳಲ್ಲಿ ಭಕ್ತಿಯ ಆರಾಧನೆಯೇ ಪ್ರಧಾನವಾಗಿ ಗುರುತಿಸಬಹುದಾಗಿದೆ. ಇಲ್ಲಿ ಶಿವನನ್ನು ಉಮಾಮಹೇಶ್ವರಾ ಎಂಬ ಅಂಕಿತದೊಂದಿಗೆ ಮುಕ್ತಾಯವಾಗುವ ಪದ್ಯಗಳಲ್ಲಿ ಉದಾಹರಣೆಗೆ:

ಎಡದಡೆಯೋಲ್ ವಿರಾಜಿಸುವ ಪಾರ್ವತಿಯಂ ನಡೆನೋಡಿ ಹಿಗ್ಗುತೊ
ಗ್ಗೊಡೆಯದ ನೇಹದಿಂದೆ ಬಿಗಿದಪ್ಪುತೆಯಾದರಿಸುತ್ತೆ ಮುದ್ದಿಸು|
ತ್ತಡಿಗಡಿಗೊರ್ಮೆ ಕೊಂಕಿದ ಕುರುಳನೋವುತೆ ರಂಜಿಪೀಶ ನೀಂ
ಕುಡುವುದಭೀಷ್ಟಮಂ ಸಕಲ ಭಕ್ತನಿಕಾಯಕುಮಾಮಹೇಶ್ವರಾ|| (ಪದ್ಯ.೬)

ತೋಂಟದ ಸಿದ್ಧಲಿಂಗಯತಿಗಳನ್ನು ತನ್ನ ಶತಕದಲ್ಲಿ ನೆನಪಿಸಿಕೊಂಡ ಮತ್ತು ೧೬ನೇ ಶತಮಾನದ ಪೂರ್ವಾದಲ್ಲಿದ್ದ ಗೌರವಾಚಾರ್ಯ ಬಸವಣ್ಣನೆಂಬಾತನು ಕಲ್ಯಾಣಶತಕ (ಕಲ್ಯಾಣದೇವಾಗ್ರಣೀ ಎಂಬ ಅಂಕಿತದಲ್ಲಿ) ಮತ್ತು ಬಸವಮಹಿಮಾಶತಕ(ವೃಷಾಧಿಪಾ ಎಂಬ ಅಂಕಿತದಲ್ಲಿ) ಎಂಬಿವುಗಳನ್ನು ಬರೆದಿದ್ದಾನೆ. ೧೯ನೇ ಶತಮಾನದ ಪೂರ್ವಾರ್ಧದಲ್ಲಿ ‘ಸಿರಿನಂಜುಂಡಶತಕ’ವೆಂಬ ಕೃತಿಯನ್ನು ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರವರು(೧೭೯೪-೧೮೬೮) ರಚಿಸಿದ್ದಾರೆ. ಇವರು ಕಾವೇರಿಮಹಾತ್ಮೆ, ಆಧ್ಯಾತ್ಮರಾಮಾಯಣ, ಸೌಗಂಧಿಕಾಪರಿಣಯ ಮುಂತಾದ ೫೦ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. ನಂಜನಗೂಡಿನ ನಂಜುಂಡೇಶ್ವರನ ಪರಮಭಕ್ತರಾದ ಇವರು ಸಂಸ್ಕೃತ-ಕನ್ನಡ ಭಾಷೆಯಲ್ಲಿ ಪ್ರಾವಿಣ್ಯತೆಯನ್ನು ಪಡೆದಿದ್ದರು. ಇಲ್ಲಿ ನಂಜುಂಡೇಶ್ವರನನ್ನು ಕುರಿತಾಗಿ ಎಷ್ಟೊಂದು ಪ್ರಾರ್ಥಿಸಿ-ವರ್ಣಿಸಿ ರಚಿಸಿದ್ದಾರೆಂದರೆ ಅವರ ಭಕ್ತಿಭಾವವು ಪ್ರತಿಪದ್ಯದಲ್ಲಿ ನದಿಯಂತೆ ಹರಿದಾಡಿದೆ. ಸಿರಿನಂಜುಂಡಾ ಎಂಬ ಅಂಕಿತದೊಂದಿಗೆ ಕೊನೆಗೊಳ್ಳುವ ಇಲ್ಲಿನ ಶತಕದ ಪದ್ಯಗಳಲ್ಲಿ ಉದಾಹರಣೆಗೆ:

ಶೂಲವ ಕರದೊಳ್ ಧರಿಸುತ
ಕಾಲನಿಗುಂ ಕಾಲನಾಗಿ ಪುಲಿದೊಗಲಿಂದಂ|
ಮೇಲಾಗಿಹ ಪುರಮರ್ಧನ
ಪಾಲಿಸು ಬೇಕಾದಭಿಷ್ಟಮಂ ಸಿರಿನಂಜುಂಡಾ|| (ಪದ್ಯ.೪)

ತುಮಕೂರು ಸೋಮೇಕಟ್ಟೆ ಚನ್ನವೀರಸ್ವಾಮಿಗಳವರು ರಚಿಸಿದ ‘ಅಷ್ಟೋತ್ತರಕಂದಶತಕಂ’ ಎಂಬುದರಲ್ಲಿ ಪರಶಿವನ ಸ್ತುತಿ ಮಾಡಿರುವುದಲ್ಲದೆ ಲೌಕಿಕ ಮಾಯಾಮೋಹಗಳಾದ ಅರಿಷಡ್ವರ್ಗಗಳಿಂದ ರಕ್ಷಿಸು ಎಂದು ಬೇಡಿಕೊಂಡಿದ್ದಾರೆ. ಇಲ್ಲಿನ ಪ್ರತಿಪದ್ಯದ ಕೊನೆಗೆ ಶ್ರೀಗುರುಲಿಂಗಾ ಎಂಬ ಅಂಕಿತದಿಂದ ಮುಕ್ತಾಯಗೊಳಿಸಿದ್ದಾರೆ. ಉದಾಹರಣೆಗೆ:

ಸಲಿಲ ಮದವೆತ್ತಿ ಶರೀರದಿ
ಸಲೆ ಸಂಸಾರವನು ಬಯಸಿ ಮರಹಂಕುರಿಸಿತು|
ತಿಳುಹಿನ ಹೊಳಹಂ ಕಾಣೆನು
ಸುಲಭದಿ ರಕ್ಷಿಪ್ಪುದೆನ್ನ ಶ್ರೀಗುರುಲಿಂಗಾ|| (ಪದ್ಯ.೪೭)

ಶಾಂತಗಿರಿ ಅಯ್ಯಪ್ಪನವರು ತ್ರಿಪದಿಯಲ್ಲಿ ‘ಬಾಲಿಕಾಗೀತಶತಕ’ವನ್ನು ತ್ರಿಪದಿಯಲ್ಲಿ ಬರೆದಿದ್ದಾರೆ. ಇದರಲ್ಲಿ ಹೆಂಗೂಸುಗಳಿಗೆ ಹಿತೋಪದೇಶ ಕುರಿತಾದ ಪದ್ಯಗಳಿವೆ. ಇವರ ಕಾಲ ತಿಳಿದುಬಂದಿಲ್ಲ. ಆರಂಭದಲ್ಲಿ ಅಲ್ಲಮಪ್ರಭು, ಚನ್ನಬಸವಣ್ಣ, ಬಸವಣ್ಣ, ಅಕ್ಕಮಹಾದೇವಿ, ರೆಮ್ಮವ್ವೆ, ರೇಚವ್ವೆ ಮುಂತಾದವರನ್ನು ನೆನೆದಿದ್ದಾರೆ. ಹಾಗೆಯೇ ಇಷ್ಟಲಿಂಗನಿಷ್ಠಾ, ಅನ್ಯದೇವತಾ ಪೂಜಾ ನಿಷೇಧ, ಜಂಗಮಭಕ್ತಿ, ಮರುಳವೇದಾಂತಿಗಳ ತಿರಸ್ಕಾರ, ಸತ್ಕ್ರಿಯಾ ಪ್ರಶಂಸೆ, ಶಿವಪೂಜಕರ ಸೇವೆ ಮಾಡುವುದು, ಪತಿಭಕ್ತಿ ಹೀಗೆ ಪೂರಕ ವಿಷಯಗಳಿಗನುಗುಣವಾಗಿ ಒಟ್ಟು ನೂರು ತ್ರಿಪದಿಗಳನ್ನು ರಚಿಸಿದ್ದಾರೆ. ಉದಾಹರಣೆಗೆ:

ಕೇಳು ಲಿಂಗವ ಕಟ್ಟಿ ಕೀಳು ದೇವರಗಡ್ಡ
ಬೀಳುವುದೇಕೆ? ಶಿವ ನಿನ್ನ ಸಿಟ್ಟಾಗಿ
ಹಾಳು ಮಾಡದಲೆ ಬಿಡುತಿಹನೆ| (ಪದ್ಯ.೩೭)
ದುರುಳ ವೇದಾಂತಿಗಳ ನೆರಳನ್ನು ಹೋಗಬೇಡ
ಮರುಳು ಹಿಡಿಸುವರು ಸುಳ್ಳಲ್ಲ-ಶಿವಭಕ್ತಿಯಾ
ಮರೆಸಿ ಭವಕೆ ನೂಕುವರು| (ಪದ್ಯ.೪೭)

ಇದೇರೀತಿ ದೇವರಾಜ(ಸು.೧೪೧೦)ನು ಪರಿವರ್ದಿನಿ ಷಟ್ಪದಿಯಲ್ಲಿ ಸಂಸ್ಕೃತದ ಅಮರುಕಶತಕವನ್ನು ಕನ್ನಡಿಸಿದ್ದಾನೆ. ಚಂದ್ರಕವಿ(ಸು.೧೪೩೦) ಗುರುಮೂತಿಶಂಕರ ಶತಕವನ್ನು ರಚಿಸಿದ್ದಾನೆ. ಮಗ್ಗೆಯ ಮಾಹಿದೇವನ (ಸು.೧೪೩೦) ಶಿವಾಧವ, ಶಿವಾವಲ್ಲಭ, ಮಹದೈಪುರೀಶ್ವರ ಶತಕಗಳು ಪಾಂಡಿತ್ಯಭಾರದಿಂದ ಕುಸಿಯಲ್ಪಟ್ಟಿವೆ. ೧೦ಕ್ಕೂ ಹೆಚ್ಚಿನ ಶತಕಗಳು ೧೬ನೇ ಶತಮಾನದಲ್ಲಿ ರಚಿತವಾಗಿವೆ. ಗುಮ್ಮಟಾರ್ಯ(ಸು.೧೫೦೦) ಸಿರಿನಾಧೇಯ (ಸು.೧೫೫೦), ಚೆನ್ನಮಲ್ಲಿಕಾರ್ಜುನ (ಸು.೧೫೬೦) ಇವರು ಒಂದೊಂದು ಶತಕವನ್ನೂ ವೀರಭದ್ರರಾಜ (ಸು.೧೫೩೦) ಐದು ಶತಕಗಳನ್ನೂ ರಚಿಸಿದ್ದಾರೆ.

ಕ್ರಿ.ಶ. ೧೬ನೇಶತಮಾನದಲ್ಲಿದ್ದ ರತ್ನಾಕರವರ್ಣಿ ಕನ್ನಡದ ಶ್ರೇಷ್ಠಕವಿಗಳಲ್ಲೊಬ್ಬನು. ಈತನು ಭರತೇಶವೈಭವವೆಂಬ ಸಾಂಗತ್ಯ ಕೃತಿಯಲ್ಲದೆ ಜೈನಧರ್ಮ ತತ್ವ ವಿಚಾರಗಳನ್ನು ಅನೂಚಾನವಾಗಿ ವಿವರಿಸುವ ತ್ರಿಲೋಕಶತಕ, ರತ್ನಾಕರಾಧೀಶ್ವರಶತಕ(೧೫೭೭) ಅಪರಾಜಿತೇಶ್ವರಶತಕ(೧೫೮೨), ಸೋಮೇಶ್ವರಶತಕಗಳನ್ನು ಬರೆದಿದ್ದಾನೆ. ರತ್ನಾಕರಶತಕದಲ್ಲಿ ೨೨೮ ಪದ್ಯಗಳಿದ್ದು ವೈರಾಗ್ಯ, ನೀತಿ, ಆಧ್ಯಾತ್ಮ ವಿಚಾರಗಳು ಬೋಧಪ್ರದವಾಗಿ ಪ್ರತಿಪಾದಿತವಾಗಿವೆ. ಅಪರಾಜಿತೇಶ್ವರಶತಕದಲ್ಲಿ ಜೈನದೃಷ್ಟಿ ಪ್ರಧಾನವಾಗಿದ್ದರೂ ಆರ್ತಭಕ್ತನ ವಾಣಿ ನುಡಿಯನ್ನೊಳಗೊಂಡ ೧೨೮ ಪದ್ಯಗಳಿವೆ. ಇದರಲ್ಲಿ ಕವಿಯ ಅಂತರಂಗದಲ್ಲಿ ಸ್ಫುರಿಸಿದ ಭಾವತರಂಗಗಳು ಒಂದರ ಹಿಂದೆ ಒಂದು ಎಂಬಂತೆ ವೀಚಿಗತಿಯಲ್ಲಿ ತೇಲಿಬರುತ್ತವೆ. ಸು.೧೭೫೦ರಲ್ಲಿ ಕೇಶವನೆಂಬ ಕವಿಯು ತಿರುವೆಂಗಡಾಚಾರ್ಯವೆಂಬ ಪಂಚಶತಕಗಳನ್ನು ಬರೆದಿದ್ದಾನೆ. ವಾರ್ಧಕ ಷಟ್ಪದಿಯಲ್ಲಿರುವ ಪ್ರತಿಪದ್ಯ ‘ತಿರುವೇಂಗಡಾಚಾರ್ಯಮೌನಿರ‍್ಯಾ’ ಎಂದು ಮುಗಿಯುತ್ತದೆ. ತನ್ನ ಈ ಗ್ರಂಥದ ಬಗೆಗೆ ಕವಿ “ದೂಷಕರಿಗೆದೆಶೂಲೆಶ್ರೀವೈಷ್ಣವರಲೀಲೆಪಾಷಂಡರಿಗೆ ಕಿಚ್ಚುಸೂರಿಗಳಮೆಚ್ಚುಸುಜ್ಞಾನಬಂಧ ಚಿಂತಾಮಣಿ” ಎಂದು ಹೇಳಿಕೊಂಡಿದ್ದಾನೆ. ಇದರಲ್ಲಿ ಸದಾಚಾರಮಹಿಮೆ, ಪೂವಾಚಾರ್ಯರ ಉದ್ಭವ, ತತ್ವತ್ರಯ, ಪಂಚಸಂಸ್ಕಾರ, ರಹಸ್ಯತ್ರಯ, ಅರ್ಥಪಂಚಕ, ಅರ್ಚಿಕಾದಿ ಮಾರ್ಗ ಇವೇ ಮೊದಲಾದ ವಿಶಿಷ್ಟಾದ್ವೈತ ಸಿದ್ಧಾಂತಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರತಿಪಾದಿಸಿದ್ದಾನೆ.

ನಮ್ಮ ಹಿಂದಿನವರು ಚತುರ್ವಿಧ ಪುರುಷಾರ್ಥಗಳಲ್ಲಿ ಕಾಮಕ್ಕೂ ಪ್ರಾಧಾನ್ಯ ನೀಡಿದ್ದಾರೆಂಬುದಕ್ಕೆ ಸು. ೧೨೦೦ ರಲ್ಲಿದ್ದ ಕವಿಕಾಮನೆಂಬ ಶೃಂಗಾರರತ್ನಾಕರದ ಕರ್ತೃ ಸ್ತನಶತಕ ಎಂಬ ಶೃಂಗಾರ ಪ್ರಧಾನವಾದ ಗ್ರಂಥವನ್ನು ರಚಿಸಿರಬಹುದೆಂದು ಕವಿಚರಿತೆಕಾರರು ಪಾರ್ಶ್ವನ(೧೨೦೫) “ಕಾಮನಬಾಣಕ್ಕಂ ಕವಿ ಕಾಮನಬಾಣಕ್ಕಮಿಲ್ಲಭೇದಂ ಸುಮನೋರಾಮತೆಯಿಂ ಸ್ತನಶತಕೋದ್ದಾಮತೆಯಿಂ ಭುವನಮಂ ವಶಂ ಮಾಳ್ಪುದರಿಂ” ಎಂಬ ಪದ್ಯದಿಂದ ನಿರ್ಧರಿಸಿದ್ದಾರೆ. ಆದರೆ ಈ ಕೃತಿ ಸಿಗದೇ ಇದ್ದುದು ಕನ್ನಡಿಗರ ದೌರ್ಭಾಗ್ಯ ಎಂದು ವಿದ್ವಾಂಸರು ವ್ಯಥೆಪಟ್ಟಿದ್ದಾರೆ. ಅದೇರೀತಿ ಶೃಂಗಾರದಿಂದೊಡಗೂಡಿದ ‘ಅಮರುಕಶತಕ’ವನ್ನು ಕವಿ ಅಮರುಕ ಬರೆದಿದ್ದಾನೆ. ಸು.೧೪೧೦ರಲ್ಲಿ ದೇಪರಾಜ, ೧೬೭೨ರಲ್ಲಿ ಚಿಕ್ಕುಪಾಧ್ಯಾಯ, ೧೮೪೨ರಲ್ಲಿ ವೆಂಕಟರಾಮಶಾಸ್ತ್ರಿ ಅವರುಗಳು ಗದ್ಯಾನುವಾದ ಮಾಡಿದ್ದಾರೆ. ಇದರಲ್ಲಿನ ಒಂದು ಪದ್ಯ ಉದಾಹರಣೆಗೆ:

ಗಂಡಹೆಂಡಿರು ರಾತ್ರೆ ಆಡಿದ ಮಾತನಾಲಿಸಿ ಮನೆಯ ಗಿಣಿ
ಬೆಳಗಿನೊಳು ಹಿರಿಯರ ಮುಂದೆ ಹೇಳಲು ದೊಡ್ಡದನಿಗೈದು
ನಾಚಿದಾಳಿಂಬೆಯನು ತಿನಿಸುವ ನೆವದೊಳಾವಧು ಕಿವಿಯ ಓಲೆಯ
ಕೆಂಪುಹರಳನು ಕೊಕ್ಕಿನೊಳಗಿಟ್ಟಿದರ ಬಾಯನು ಮುಚ್ಚಿಸಿದಳಂದು||

ಇಲ್ಲಿಯ ಕವಿಯ ಕಲ್ಪನೆ ಬಹು ಸೊಗಸಾಗಿದೆ. “ಒಂದೊಂದು ಪದ್ಯಗಳು ಒಂದೊಂದು ಚಿತ್ರಶಾಲೆಯಲ್ಲಿ ಶಬ್ದಚಿತ್ರವಾಗಿ ಪರಿಣಮಿಸಿವೆ” ಎಂದು ಎಸ್.ವಿ.ಪರಮೇಶ್ವರಭಟ್ಟರು ಮುಕ್ತಮನಸ್ಸಿನಿಂದ ಹೊಗಳಿದ್ದಾರೆ. ಕ್ರಿ.ಶ. ೧೮೦೦ ಆಗಿಹೋದ ವೀರಶೈವ ಕವಿ ನಿಜಲಿಂಗರಾಧ್ಯನು ‘ನಿಜಲಿಂಗಶತಕ’ವನ್ನು ತುಂಗಭದ್ರಾ ತೀರದಲ್ಲಿರುವ ಖಾದ್ರಿಪುರದ ನಿಜಲಿಂಗೇಶ್ವರನ ಅಂಕಿತದಲ್ಲಿ ಬರೆದಿದ್ದಾನೆಂಬುದು ಊಹೆ ಇದೆ. ಈ ಗ್ರಂಥ ಈತನದೇ ಎಂಬುದಕ್ಕೆ ಸಾಮಾನ್ಯವಾಗಿ ಕವಿ ತನ್ನ ಹೆಸರಿನಲ್ಲಿಯೇ ಶತಕವನ್ನು ಬರೆದಿರಬಹುದು. ದೊರೆತ ಹಸ್ತಪ್ರತಿಗಳಲ್ಲಿ ‘ಕುದ್ರಭವಪುರ’ಎಂದೇ ಇರುವುದರಿಂದ ಇದರ ಕನ್ನಡ ರೂಪ ‘ಹಾವನೂರು’ಎಂಬುದೇ ಕವಿಯ ಸ್ಥಳವಾಗಿದೆ. ನಿಜಲಿಂಗೇಶ ಈತನ ಇಷ್ಟದೈವವಾಗಿರಬಹುದು ಎಂದು ಡಾ. ವೀರಣ್ಣ ರಾಜೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ೧೦೦ ವಾರ್ಧಕ ಷಟ್ಪದಿಗಳು ಇವೆ. ‘ನಿಜಲಿಂಗ ಭವಭಂಗ ಶರಣಜನವರದ ಜಯತು’ ಎಂದು ಮುಕ್ತಾಯಗೊಳ್ಳುತ್ತವೆ. ‘ನಿತ್ಯ ನಿರುಪಮ ವಿಶ್ವಮೂರ್ತಿ ನಿಜಲಿಂಗೇಶನುತ್ತಮೋತ್ತಮವೆನಿಪ ಶತಕವನು ಬಲ್ಲಂತೆ ಬಿತ್ತರಿಪೆ’ ಎಂದು ಕಾವ್ಯ ಆರಂಭಿಸುವ ಕವಿ ಮುಂದೆ ಉದ್ದಕೂ ಶಿವನ ಲೀಲಾ ವಿಲಾಸವನ್ನು ಅನೇಕ ವಿಶೇಷಣ ಮತ್ತು ದೃಷ್ಟಾಂತಗಳ ಮೂಲಕ ಹೇಳುತ್ತಾ ಸಾಗುತ್ತಾನೆ. ಉದಾಹರಣೆಗೆ:

ಆವ ಮನೆಯೊಳಗಿಪ್ಪ ದೀವಿಗೆಯ ಬೆಳಗೊಂದೆ
ಆವ ಹಸುವನು ಕರೆಯೇ ಕ್ಷೀರರುಚಿ ಕರವೊಂದೆ
ಆವ ಕೃಷಿಯೊಳು ಬೆಳೆ ತಿಲದೊಳಗೆ ಬಪ್ಪ ತೈಲವ ನೋಡೆ ಗುಣಮದೊಂದೆ
ಆವ ಕುಲದೊಳಗಿರಲು ಆವ ನಾಮದೊಳಿರಲು
ಆವ ರೂಪಾಗಿರಲು ಒಳಗಿರುವ ಸ್ವಯಂ ಜ್ಯೋತಿ
ದೇವ ನೀನಹುದಹುದು ನಿಜಲಿಂಗ ಭವಭಂಗ ಶರಣಜನ ವರದ ಜಯತು

ನಿಜಲಿಂಗರಾಧ್ಯ ಹೇಗೆ ವೈತಿಕನೋ ಹಾಗೆ ರಸಿಕನೂ ಆಗಿದ್ದಾನೆ. ಹೀಗೆ ನಿಜಲಿಂಗಶತಕ ಭಕ್ತಿ ಮತ್ತು ಶೃಂಗಾರ ರಸಗಳನ್ನು ಸಮರಸಗೊಳಿಸಿಕೊಂಡು ಓದುಗರ ಮನ ಸೂರೆಗೊಳ್ಳತ್ತಾ ಬಂದಿದೆ. ಒಟ್ಟಾರೆ ಈವರೆಗೆ ಬಂದಿರುವ ಹಲವಾರು ಶತಕಗಳ ಕುರಿತು ಪುಟದ ಮಿತಿಯಲ್ಲಿರುವ ಈ ಲೇಖನದಲ್ಲಿ ಹೇಳುವುದು ಅಸಾಧ್ಯ. ಹಾಗಾಗಿ ಸಂಕ್ಷಿಪ್ತವಾಗಿ ನನ್ನ ಗಮನಕ್ಕೆ ಬಂದ ವಿಷಯ ವಸ್ತುವನ್ನು ಇಟ್ಟುಕೊಂಡು ಸಮೀಕ್ಷೆ ಮಾಡಿರುವೆನು.
ಆಕರಗಳು:

ಕನ್ನಡ ಶತಕ ಸಾಹಿತ್ಯ: ಸಂ. ಬಿ.ಶಿವಮೂರ್ತಿಶಾಸ್ತ್ರಿ, ಶರಣಸಾಹಿತ್ಯ ಗ್ರಂಥಮಾಲೆ, ಬೆಂಗಳೂರು. ೧೯೫೫
ರತ್ನಾಕರನ ಶತಕ ಸಾಹಿತ್ಯ: ಜಿ.ಬ್ರಹ್ಮಪ್ಪ, ರತ್ನಾಕರ ಪ್ರಕಾಶನ ಮಂಡಳಿ, ಬೆಂಗಳೂರು. ೧೯೬೨
ಕನ್ನಡದಲ್ಲಿ ಶತಕಸಾಹಿತ್ಯ: ಬಿ.ವಿ.ಗುಂಜೆಟ್ಟಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೨
ಶತಕ ಸಂಪುಟ: ಸಂ. ಡಾ. ವೀರಣ್ಣ ರಾಜೂರ, ಕರ್ನಾಟಕ ಸಂಸ್ಕೃತಿ ಇಲಾಖೆ, ಬೆಂಗಳೂರು, ೨೦೧೧.
ಸೋಮೇಶ್ವರ ಶತಕ: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ೨೦೧೬
ಶತಕ ಸಂಪುಟ-೨: ಜಿ.ಎ. ಶಿವಲಿಂಗಯ್ಯ, ಪ್ರಿಯದರ್ಶಿನಿ ಪ್ರಕಾಶನ, ಮೈಸೂರು. ೨೦೨೦