ರಂಗಭೂಮಿಯ ಬಗ್ಗೆ ನಮ್ಮಲ್ಲಿ ಅದಮ್ಯ ಒಲವು ಮೊಳೆತರೆ ಸಾಲುವುದಿಲ್ಲ. ನಾನು ಹಿಂದೆ ಕಂಡ ಮತ್ತು ಈಗ ಸದ್ಯದ ಸ್ಥಿತಿಯಲ್ಲಿ ಕಾಣುತ್ತಿರುವ ರಂಗದ ಪರಿಸರದಲ್ಲಿ ನಟನಾಗಬೇಕು, ನಟಿಯಾಗಬೇಕು ಅಂದರೆ ಅವರಿಗೆ ನಿರ್ದೇಶಕರ ಬೈಗುಳಗಳನ್ನ ನುಂಗಿಕೊಳ್ಳುವ ಶಕ್ತಿ ಇರಬೇಕು. ತಾಳ್ಮೆ ಅಗಾಧವಾಗಿರಬೇಕು. ಇನ್ನು ನಿರ್ದೇಶಕನಾಗಲು ಹೊರಟರೆ ಗುಪ್ತಗಾಮಿನಿಯಾಗಿ ಮೂದಲಿಕೆ ಶುರುವಾಗುತ್ತದೆ. ಒಬ್ಬ ನಿರ್ದೇಶಕನ ಆರ್ಟ್ ಫಾರಂ ಮತ್ತೊಬ್ಬರಿಗೆ ಆಗುವುದಿಲ್ಲ. ಎದುರಿಗೆ ಸಿಕ್ಕಾಗ ಮಾತ್ರ ನಗು ಮತ್ತು ಕೈಕುಲುಕುವಿಕೆ. ಆಂತರ್ಯದಲ್ಲಿ ವ್ಯಂಗ್ಯದ ಮೊನಚು ಮೀಟುತ್ತಲೇ ಇರುತ್ತದೆ.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರʼ ಅಂಕಣ

 

‘ಪದ್ಮಶ್ರೀ ಪುರಸ್ಕಾರಕ್ಕೆ ಅವರು ಭಾಜನರು. ಆದರೆ ಈ ಪುರಸ್ಕಾರವನ್ನ ಅವರಿಗೆ ಮೂವತ್ತು ವರ್ಷಗಳಿಗೆ ಮುಂಚೆಯೇ ಕೊಡಬೇಕಾಗಿತ್ತು.’

ಈ ಸಲದ ಪದ್ಮ ಪುರಸ್ಕೃತರ ಪಟ್ಟಿಯಲ್ಲಿ ಜಗತ್ತು ಕಂಡ ಶ್ರೇಷ್ಟ ರಂಗ ನಿರ್ದೇಶಕ ಪೀಟರ್ ಬ್ರೂಕ್ ಅವರ ಹೆಸರೂ ಕಂಡಾಗ ಮಲ್ಲಿಕಾ ಸಾರಾಬಾಯಿ ಹೀಗೊಂದು ಸ್ಟೇಟ್ಮೆಂಟ್ ಕೊಟ್ಟು ಬ್ರೂಕ್ ಅವರೊಂದಿಗಿನ ತಮ್ಮ ಒಡನಾಟ, ನಟನೆಯ ಸೂಕ್ಷ್ಮಗಳನ್ನ ಅವರಿಂದ ಕಲಿತ ಬಗೆ ಎಲ್ಲವನ್ನೂ ಸಂಕ್ಷಿಪ್ತವಾಗಿ ಪುಟ್ಟ ಲೇಖನವೊಂದರಲ್ಲಿ ವಿವರಿಸಿದರು.

ಮಲ್ಲಿಕಾ ಸಾರಾಬಾಯಿ ಪ್ರಸಿದ್ಧ ನರ್ತಕಿ, ನಟಿ ಮತ್ತು ಸಾಮಾಜಿಕ ಹೋರಾಟಗಾರ್ತಿ. ಪೀಟರ್ ಬ್ರೂಕ್ ಅವರು 1984ರ ಸಮಯದಲ್ಲಿ ನಮ್ಮ ನೆಲದ ಕಾವ್ಯ ಮಹಾಭಾರತ ಆರಿಸಿಕೊಂಡು ಅದನ್ನ ಚಿತ್ರೀಕರಿಸಲು ಪ್ರಪಂಚದ ಮೂಲೆಮೂಲೆಗಳಿಂದ ನಟರನ್ನ ಹೆಕ್ಕಿ ಆಡಿಷನ್ ಗಳಿಗೆ ಒಳಪಡಿಸುತ್ತಿದ್ದಾಗ ದ್ರೌಪದಿ ಪಾತ್ರಕ್ಕೆ ಆಯ್ಕೆಯಾದವರು ಮಲ್ಲಿಕಾ ಸಾರಾಬಾಯಿ. ಆ ಸಂದರ್ಭದಲ್ಲಿನ ತಮಗಾದ ಬೆರಗು ಮತ್ತು ಸಂತೋಷವನ್ನ ಕಟ್ಟಿಕೊಟ್ಟಿರುವ ಮಲ್ಲಿಕಾ, ಅಂತರಾಷ್ಟ್ರೀಯ ಖ್ಯಾತಿಯ ಪೀಟರ್ ಬ್ರೂಕ್ ರ ಜೊತೆಯೂ ನಿರ್ಭಿಡೆಯಿಂದ ವಾದಿಸುತ್ತಿದ್ದರಂತೆ. ಒಮ್ಮೆ ಬ್ರೂಕ್ ಅವರು ಮಲ್ಲಿಕಾಗೆ ದ್ರೌಪದಿ ಪಾತ್ರ ನಿರ್ವಹಣೆ ಸಂದರ್ಭದಲ್ಲಿ ‘ಅಷ್ಟೊಂದು ಕಿರುಚೋದು ಬೇಡ.. ಗಯ್ಯಾಳಿ ಥರ ಕೇಳಿಸುತ್ತೆ..’ ಅಂದದ್ದಕ್ಕೆ ಮಲ್ಲಿಕಾ ಪ್ರತಿಯಾಗಿ ‘ನಮ್ಮಲ್ಲಿ ಗಯ್ಯಾಳಿಗಳಿಲ್ಲ… ಕೇವಲ ಶಕ್ತಿಗಳು (ದೇವಿಯರು) ಮಾತ್ರ ಇರೋದು’ ಅಂದಿದ್ದರಂತೆ. ಆದರೂ ಈ ಹೊತ್ತು ಪೀಟರ್ ಬ್ರೂಕ್ ಅವರ ಅನನ್ಯತೆಯನ್ನ ನೆನೆಸಿಕೊಂಡಿದ್ದಾರೆ.

ರಂಗಭೂಮಿಯ ಕ್ಷೇತ್ರದಲ್ಲಿ ಪೀಟರ್ ಬ್ರೂಕ್ ಅವರ ಸಾಧನೆಗಳ ಕಡೆಗೆ ಕಣ್ಣು ಹಾಯಿಸಿದರೆ ಅವರು ಮಾಡಿದ ಪ್ರತಿಯೊಂದು ಕೆಲಸವೂ ಮೈಲಿಗಲ್ಲೇ. ನಾವು ಹಳ್ಳಿಗಳಲ್ಲಿ ರಾತ್ರಿಯಿಂದ ಬೆಳಗ್ಗೆವರೆಗೆ ನಡೆಯುವ ಪೌರಾಣಿಕ ನಾಟಕಗಳನ್ನ ನೋಡಿರುತ್ತೇವೆ. ವರ್ಷಕ್ಕೊಂದು ಸಲ ಆಯಾ ಹಳ್ಳಿಗರು ತಮ್ಮ ಸಂಭ್ರಮಕ್ಕೆ, ತಮ್ಮೊಳಗಿನ ಕಲೆಗಾರಿಕೆಯ ಅಭಿವ್ಯಕ್ತಿಗೆ ಬಣ್ಣ ಹಚ್ಚುತ್ತಾರೆ. ಇನ್ನು ಸರ್ಕಾರಿ ಅನುದಾನ ಪಡೆಯುವ ಪ್ರಸಿದ್ಧ ರಂಗಶಾಲೆಗಳ ರೆಪರ್ಟರಿಗಳು ಆಯಾ ವರ್ಷದ ಪ್ರೊಷಕ್ಷನ್ ಗಳನ್ನ ತೆಗೆದುಕೊಂಡು ರಾಜ್ಯ ಸುತ್ತಿ ಬರುತ್ತವೆ. ಆದರೆ ಸಾಹಸದ ಕೆಲಸ ಅಂತ ಕನ್ನಡ ರಂಗಭೂಮಿಯಲ್ಲಿ ಕಂಡದ್ದು ‘ಮಲೆಗಳಲ್ಲಿ ಮದುಮಗಳು’ ಪ್ರಯೋಗ. ಇದೂ ಕೂಡ ರಾತ್ರಿಯಿಂದ ಬೆಳಗ್ಗೆವರೆಗೆ ನಡೆಯುವ ಆಟ. ಅದೂ ನಾಲ್ಕು ಬೇರೆಬೇರೆ ರಂಗಸ್ಥಳಗಳಲ್ಲಿ ನಡೆದು ಗಮನ ಸೆಳೆದ ಪ್ರಯೋಗ.

ಆದರೆ ಬ್ರೂಕ್ ಆ ಕಾಲಕ್ಕೇ ನಮ್ಮದೇ ನೆಲದ ಮಹಾಕಾವ್ಯ ಮಹಾಭಾರತ ತೆಗೆದುಕೊಂಡು ಅದನ್ನ ಒಂಭತ್ತು ಗಂಟೆಗಳ ಪ್ರಯೋಗಕ್ಕೆ ಅಳವಡಿಸಿದರು. ಅದರಲ್ಲಿ ಹನ್ನೊಂದು ಇಂಟರ್ ವಲ್ ಗಳಿದ್ದವಂತೆ. ಒಂಬತ್ತು ಗಂಟೆಗಳ ಮಹಾಭಾರತ ನಾಟಕವನ್ನ ಪ್ರಪಂಚದಾದ್ಯಂತ ಸತತವಾಗಿ ನಾಲ್ಕು ವರ್ಷ ಟೂರ್ ಮಾಡಿ ಪ್ರಯೋಗಿಸಿದರಂತೆ. ಅದರಲ್ಲೂ ಎರಡು ವರ್ಷಗಳು ಅದೇ ನಾಟಕ ಫ್ರೆಂಚ್ ಹಾಗೂ ಇಂಗ್ಲಿಷ್ ನಲ್ಲಿ ಪ್ರಯೋಗ ಕಂಡವು. ಇದರ ಹಿಂದಿದ್ದ ದೈತ್ಯ ಶಕ್ತಿ ಪೀಟರ್ ಬ್ರೂಕ್. ಮತ್ತು ಅಂಥದ್ದೊಂದು ರಂಗ ಪ್ರಯೋಗ ಅಣಿಗೊಳಿಸಲಿಕ್ಕೆ ತೆಗೆದುಕೊಂಡ ಕಾಲಾವಧಿ ಎಂಟು ವರ್ಷ.

ಇದರ ಆಚೆಗೆ ಬ್ರೂಕ್ ಅವರು ಮಾಡಿದ್ದು ಒಂದೆರಡು ಪ್ರಯೋಗಗಳಲ್ಲ. ಕಿಂಗ್ ಲಿಯರ್, ಲಾರ್ಡ್ ಆಫ್ ಫ್ಲೈಸ್, ದಿ ಟೈಟ್ ರೋಪ್, ಸ್ವ್ಯಾನ್ ಇನ್ ದಿ ಲವ್… ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಇಂದಿಗೂ ನಾನು ನನ್ನ ಸುತ್ತಲಿನ ರಂಗ ಪರಿಸರದಲ್ಲಿ ಅನೇಕ ನಟರನ್ನ, ನಟಿಯರನ್ನ, ನಿರ್ದೇಶಕರನ್ನ ಕಾಣುತ್ತಲೇ ಇದ್ದೇನೆ. ರಂಗದ ಬಗ್ಗೆ ಅವರುಗಳಲ್ಲಿ ಒಂದು ಬಗೆಯ ವಿಚಿತ್ರ ಗುಂಗು ಬಿಟ್ಟರೆ ಬೇರೇನಿದೆ ಎಂದು ಅವರ ಕಣ್ಣುಗಳಲ್ಲಿ ಮತ್ತು ಮಾತುಗಳಲ್ಲಿ ಹುಡುಕಲಿಕ್ಕೆ ಪ್ರಯತ್ನಿಸುತ್ತಲೇ ಇದ್ದೇನೆ. ಈ ಬಗ್ಗೆ ಪ್ರಶ್ನೆ ಕೇಳಿ ಅಹಂಕಾರಿ ಎಂಬ ಪಟ್ಟ ಕೂಡ ಕಟ್ಟಿಕೊಂಡಿದ್ದೇನೆ. ನನ್ನಲ್ಲಿ ಕ್ಲಾರಿಟಿ ಇಲ್ಲ.. ನಿಮ್ಮಲ್ಲಾದರೂ ಇದೆಯಾ ಅಂತ ಕೇಳಿಯೂ ಮೂದಲಿಸಿಕೊಂಡಿದ್ದೇನೆ. ಗುಂಗಿನ ಮತ್ತು ಕೇವಲ ಒಂದು ಭಾವನಾತ್ಮಕ ತೋರುಗಾಣಿಕೆಯ ಆಚೆಗೆ ರಂಗದ ಬಗ್ಗೆ ಅಥಂಟಿಕ್ಕಾಗಿ ಏನು ಕೇಳಿಕೊಂಡು ಉತ್ತರಿಸಿಕೊಂಡಿದ್ದೇವೆ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕಿದೆ. ಆದರೆ ಈ ಕೆಲಸ ಆಗುತ್ತಿಲ್ಲ. ಯಾಕೆಂದರೆ ನನ್ನನ್ನೂ ಒಳಗೊಂಡಂತೆ ಮಿಕ್ಕ ಹಲವರಿಗೆ ರಂಗದಲ್ಲಿ ಭಾವನಾತ್ಮಕವಾಗಿ ತೊಡಗಿಸಿಕೊಳ್ಳವುದು ತಿಳಿದಿದೆಯೇ ಹೊರತು ಚಿತ್ರವನ್ನ ಸ್ಪಷ್ಟವಾಗಿಸಿಕೊಳ್ಳುವ ಕಲೆ ಗೊತ್ತಿಲ್ಲ. ಇಂಥವರಿಗೆ ಪೀಟರ್ ಬ್ರೂಕ್ ಅತ್ಯಮೂಲ್ಯ ಸೋರ್ಸ್ ಬುಕ್ ಇದ್ದಂತೆ. ಅವರು ರಂಗದ ಬಗ್ಗೆ ಕೇಳಿಕೊಂಡಿರುವ ಪ್ರಶ್ನೆಗಳು, ನಡೆಸಿರುವ ಚಿಂತನೆ, ಮಾಡಿರುವ ಪ್ರಯೋಗಗಳು ಒಂದೊಂದೂ ಅನನ್ಯ. ಮೊದಲಿಗೆ ನನ್ನನ್ನ ತಟ್ಟನೆ ಸೆಳೆದದ್ದು ರಂಗಭೂಮಿಯ ಬಗ್ಗೆ ಬ್ರೂಕ್ ಅವರು ಎತ್ತಿದ್ದ ವಸ್ತುನಿಷ್ಠ ಪ್ರಶ್ನೆಗಳು.

“ Theatres, actors, critics and public are interlocked in a machine that creaks but never stops. There is always a new season in hand and we are too busy to ask the only vital question which measures the whole structure. Why theatre at all? What for? Is it an anachoronism, a superannuated oddity? Surviving like an old monument or a quaint custom? Why do we applaud and what? Has the stage a real place in our lives? What function can it have? What could it serve? What could it explore? What are its special properties?…”

ಯಾವುದೇ ಒಂದು ರಂಗ ಪ್ರವೇಶಿಸುವುದು ದೊಡ್ಡ ಸಂಗತಿಯಲ್ಲ. ಆದರೆ ಪ್ರವೇಶಿಸುವ ಮೊದಲು ಪ್ರವೇಶಿಕೆಯಾಗಿ ಈ ಬಗೆಯಲ್ಲಿ ಪ್ರಶ್ನಿಸಿಕೊಳ್ಳುವುದು ತುಂಬ ದೊಡ್ಡ ಸಂಗತಿ ಎಂದು ನನಗೆ ಅನಿಸಿದೆ. ಯಾಕೆಂದರೆ ನಾವು ಪ್ರಶ್ನಿಸಿಕೊಂಡ ಬಗೆಯಲ್ಲಿ ನಮಗೆ ಉತ್ತರಗಳು ಅನಾವರಣಗೊಳ್ಳುತ್ತವೆ. ಸರಿಯಾಗಿ ಪ್ರಶ್ನಿಸಿಕೊಳ್ಳಲೂ ಬಾರದವ ಸರಿಯಾದ ಉತ್ತರಗಳನ್ನ ಹೇಗೆ ಪಡೆಯಬಲ್ಲ?

ರಂಗಭೂಮಿಯ ವಿಚಾರ ಮನಸ್ಸಿನಲ್ಲಿ ತುಂಬ ಸಿಕ್ಕುಸಿಕ್ಕಾಗಿದ್ದಾಗ ಪೀಟರ್ ಬ್ರೂಕ್ ಅವರ ಪ್ರಶ್ನೆಗಳ ಸರಮಾಲೆಯನ್ನ ನಮ್ಮದಾಗಿಸಿಕೊಳ್ಳುವುದನ್ನಾದರೂ ನಾವು ಕೆಲವರು ಕಲಿಯಬೇಕು. ಮತ್ತು ಉತ್ತರ ಕಂಡುಕೊಳ್ಳುವ ಸಾಮರ್ಥ್ಯ ಇನ್ನೂ ದಕ್ಕಿಲ್ಲ ಅನಿಸಿದಾಗ ಬ್ರೂಕ್ ಅವರ ಉತ್ತರಗಳ ಜೊತೆಗೇ ನಮ್ಮ ವರ್ತಮಾನದ ನೋಟವನ್ನ ನೋಡುತ್ತಾ ಸ್ಪಷ್ಟಪಡಿಸಿಕೊಳ್ಳಬೇಕು. ಈ ಕಾರಣಕ್ಕಾಗಿಯೇ ನಾನು ಬ್ರೂಕ್ ಅವರನ್ನ ಸೋರ್ಸ್ ಬುಕ್ ಅಂದದ್ದು.

ರಂಗಭೂಮಿಯ ಬಗ್ಗೆ ನಮ್ಮಲ್ಲಿ ಅದಮ್ಯ ಒಲವು ಮೊಳೆತರೆ ಸಾಲುವುದಿಲ್ಲ. ನಾನು ಹಿಂದೆ ಕಂಡ ಮತ್ತು ಈಗ ಸದ್ಯದ ಸ್ಥಿತಿಯಲ್ಲಿ ಕಾಣುತ್ತಿರುವ ರಂಗದ ಪರಿಸರದಲ್ಲಿ ನಟನಾಗಬೇಕು, ನಟಿಯಾಗಬೇಕು ಅಂದರೆ ಅವರಿಗೆ ನಿರ್ದೇಶಕರ ಬೈಗುಳಗಳನ್ನ ನುಂಗಿಕೊಳ್ಳುವ ಶಕ್ತಿ ಇರಬೇಕು. ತಾಳ್ಮೆ ಅಗಾಧವಾಗಿರಬೇಕು. ಇನ್ನು ನಿರ್ದೇಶಕನಾಗಲು ಹೊರಟರೆ ಗುಪ್ತಗಾಮಿನಿಯಾಗಿ ಮೂದಲಿಕೆ ಶುರುವಾಗುತ್ತದೆ. ಒಬ್ಬ ನಿರ್ದೇಶಕನ ಆರ್ಟ್ ಫಾರಂ ಮತ್ತೊಬ್ಬರಿಗೆ ಆಗುವುದಿಲ್ಲ. ಎದುರಿಗೆ ಸಿಕ್ಕಾಗ ಮಾತ್ರ ನಗು ಮತ್ತು ಕೈಕುಲುಕುವಿಕೆ. ಆಂತರ್ಯದಲ್ಲಿ ವ್ಯಂಗ್ಯದ ಮೊನಚು ಮೀಟುತ್ತಲೇ ಇರುತ್ತದೆ. ರಂಗದ ತುಂಬ ಸೆಟ್ಸ್ ತುಂಬಿಸಿದರೆ ‘ತುಂಬಿಸಿಬಿಡ್ತಾನೆ’ ಅಂತ ಮೂದಲಿಕೆ. ತುಂಬಿಸದೆ ಹಾಗೇ ಕೇವಲ ಕುರ್ಚಿ ಟೇಬಲ್ ಇಟ್ಟು ನಾಟಕ ಮಾಡಿದರೆ ಅದಕ್ಕೆ ‘ಡಿಸೈನ್ ಇಲ್ಲ’ ಎಂಬ ಪಟ್ಟ. ಬೆಳಕು ಹಾಯಿಸಿದರೆ ‘ಹಾಯ್ಸೋದೇ ಕೆಲಸ…’ ಎಂದು ನಗು. ಕಾಮಿಡಿ ನಾಟಕ ಮಾಡಿದರೆ ಅದು ಚೀಪು. ಎಡ ಮತ್ತು ಬಲ ಅಂತ ಇಬ್ಬಾಗ. ಬಲದವರಿಗೆ ಎಡ ಅಂದರೆ ಅಸಡ್ಡೆ ಮತ್ತು ಅವರದೆಲ್ಲ ಕರಪತ್ರದ ನಾಟಕಗಳು. ಎಡದವರಿಗೆ ಬಲದವರು ಸತಾತನಿಗಳು. ಇವುಗಳ ನಡುವೆ ನಿರ್ದೇಶಕನಾಗಿ ಮುಕ್ತವಾಗಿ ಎಲ್ಲ ಕಡೆ ಸಲ್ಲುವುದು ಕಷ್ಟದ ಕೆಲಸ. ಆದರೆ ಈ ಯಾವುದಕ್ಕೂ ಕ್ಯಾರೆ ಅನ್ನದಿರಲು ಛಾತಿ ಬೇಕು. ಈ ನಿಟ್ಟಿನಲ್ಲಿ ಬ್ರೂಕ್ ಅವರ ನಿರ್ದೇಶನದ ಅನನ್ಯತೆಯನ್ನ ಹೀಗೆ ಒರೆಗೆ ಹಚ್ಚಲಾಗಿದೆ- Brooks main focus in his method of acting is the sense of beauty in simplicity; taking a bare stage and creating an entire set in your mind and acting around it, giving the audience the idea of the presence of furniture… ಈ ಸಂಬಂಧವಾಗಿ ಬ್ರೂಕ್ ಅವರು ಹೇಳುವುದೇನು ಅಂದರೆ- Human connection is the essence of good theatre…

ನಮ್ಮಲ್ಲಿ ಕೆಲವರು ಸೆಟ್ ಪ್ಯಾಟ್ರನ್ ರಂಗನಿರ್ದೇಶಕರಿದ್ದಾರೆ. ಅವರ ತಿಳುವಳಿಕೆಯಲ್ಲಿ ಅವರಷ್ಟೇ ನಿರ್ದೇಶಕರು. ಉಳಿದವರು ತಾವೂ ನಿರ್ದೇಶಕರು ಅಂತ ಇವರ ಎದುರು ಮಾತಾಡಿದರೆ ತಮ್ಮ ಸಿದ್ಧಾಂತಗಳಿಂದ ಹೆದರಿಸಿ ಕಳುಹಿಸುವ ಬಹಳ ಮಂದಿಯನ್ನ ನಾನು ಕಂಡಿದ್ದೇನೆ. ಮ್ಯಾಕ್ಬೆತ್ ನಾಟಕ ಮಾಡಿಸಿ ಅಂದರೆ ಒಂದು ಕಡೆ ಮರಳಿನ ಕುಪ್ಪೆ ಮಾಡಿ ಮತ್ತೊಂದು ಕಡೆ ಕಿರೀಟ ತೂಗಿ ಹಾಕಿ ಆ ಇಮೇಜ್ ದಾಟಿಸಲು ಹೆಣಗಾಡಿದ ಒಬ್ಬ ನಿರ್ದೇಶಕ ಮತ್ತು ಅವರ ವರಸೆಗಳನ್ನೂ ನೋಡಿದ್ದೇನೆ. ಆದರೆ ನನ್ನ ಸೋರ್ಸ್ ಬುಕ್ ಬ್ರೂಕ್ ಹೆದರಿಸುವುದಿಲ್ಲ. ಅವರ ಕ್ರಮ ಬೇರೆ. Make an object completely different. Hold a suitcase and say ‘ this is a chicken’. Make the audience believe that what you are saying, no matter what is in your hand…

ಬ್ರೂಕ್ ಆ ಕಾಲಕ್ಕೇ ನಮ್ಮದೇ ನೆಲದ ಮಹಾಕಾವ್ಯ ಮಹಾಭಾರತ ತೆಗೆದುಕೊಂಡು ಅದನ್ನ ಒಂಭತ್ತು ಗಂಟೆಗಳ ಪ್ರಯೋಗಕ್ಕೆ ಅಳವಡಿಸಿದರು. ಅದರಲ್ಲಿ ಹನ್ನೊಂದು ಇಂಟರ್ ವಲ್ ಗಳಿದ್ದವಂತೆ.

ಹಾಗಾದರೆ ನಿಜ ಯಾವುದು? ಕೈಯಲ್ಲಿ ಹಿಡಿದ ಸೂಟ್ ಕೇಸೋ ಅಥವಾ ಅದನ್ನ ಮಾತಲ್ಲಿ ಚಿಕನ್ ಎನ್ನುತ್ತಿರುವುದೋ? ಈ ಸಂಬಂಧ ಪೀಟರ್ ಬ್ರೂಕ್ ಹೇಳಿದ್ದನ್ನ ಹಿಂದೊಮ್ಮೆ ನಾನು ಕನ್ನಡಕ್ಕೆ ತರ್ಜುಮೆ ಮಾಡಿಟ್ಟುಕೊಂಡಿದ್ದೆ. “ರಂಗಭೂಮಿಯಲ್ಲಿ ಸತ್ಯ ಎನ್ನುವುದು ಸದಾ ಚಲನೆಯಲ್ಲಿರುತ್ತದೆ. ನೀವು ಒಂದು ಪುಸ್ತಕ ಓದುತ್ತಾ ಸಾಗಿದಂತೆ ಅದೂ ಕಾಲದ ಚಲನೆಯಲ್ಲಿ ಹಿಂದೆ ಉಳಿಯಲು ಆರಂಭಿಸಿರುತ್ತದೆ. ಅಂದರೆ ಔಟ್ ಆಫ್ ಡೇಟ್ ಆಗುತ್ತಿರುತ್ತದೆ. ಓದುವುದು ನನಗೆ ಒಂದು ಕಸರತ್ತಿನ ಹಾಗೆ. ಓದುತ್ತಾ ಸಾಗಿದಂತೆ ಹಾಳೆ ಮೇಲೆ ಎಲ್ಲವೂ ಜಡವಾಗಲು ಆರಂಭಿಸಿರುತ್ತದೆ. ಆದರೆ ರಂಗಭೂಮಿ ಪುಸ್ತಕದ ಹಾಗಲ್ಲ. ಅದು ವಿಶೇಷ ಗುಣ ಲಕ್ಷಣ ಹೊಂದಿದೆ. ಅದೆಂದರೆ ಅದು ಮತ್ತೆ ಚಲನೆ ಪಡೆದುಕೊಳ್ಳಬಹುದು. ಆದರೆ ಜೀವನದಲ್ಲಿ ಇದು ಅಸಾಧ್ಯ. ಹೀಗೆ ಆಗೋದು ಒಂದು ಕಲ್ಪನೆ ಅಷ್ಟೇ. ನಾವು ಏನು ಮಾಡಿದರೂ ಯಾವುದರ ಸಹಾಯದಿಂದಲೂ ಹಿಂದಕ್ಕೆ ಚಲಿಸಲಿಕ್ಕೆ ಸಾಧ್ಯ ಇಲ್ಲ. ಉದುರಿದ ಎಲೆಗಳು ಮತ್ತೆ ಹಿಂದಿರುಗಿ ಮರಕ್ಕೆ ಅಂಟಿಕೊಳ್ಳಲು ಸಾಧ್ಯವಿಲ್ಲ. ಗಡಿಯಾರ ಹಿಂದಕ್ಕೆ ಚಲಿಸಲು ಸಾಧ್ಯವಿಲ್ಲ. ನಮಗೆ ಮತ್ತೊಂದು ಅವಕಾಶ ಎಂಬುದು ಇಲ್ಲ. ಆದರೆ ರಂಗಭೂಮಿಯಲ್ಲಿ ಸ್ಲೇಟನ್ನ ಮತ್ತೆ ಮತ್ತೆ ಒರೆಸಿ ಸ್ವಚ್ಛ ಮಾಡಿಕೊಳ್ಳಲಿಕ್ಕೆ ಅವಕಾಶಗಳಿವೆ…”

ಬ್ರೂಕ್ ಅವರ ಈ ಮಾತುಗಳನ್ನ ಓದಿದಾಗ ನನ್ನಲ್ಲಿ ಒಂದು ಪ್ರಶ್ನೆ ಎದ್ದಿತ್ತು. ನಿಜದಂತೆ ಇರಲು ಸಾಧ್ಯವಾಗದ್ದು ರಂಗದಲ್ಲಿ ಸಾಧಿತವಾಗುತ್ತದೆ. ಸ್ಲೇಟಿನ ಮೇಲೆ ಬರೆದದ್ದನ್ನ ಮತ್ತೆ ಒರೆಸಿ ಸ್ವಚ್ಛ ಮಾಡುವ ಅವಕಾಶವಿದೆ ಎನ್ನುವುದಾದರೆ ರಂಗದ ಮೇಲೆ ನಡೆಯುವ ಕ್ರಿಯೆಗೆ ಅರ್ಥ ಇದೆಯೆ? ಬ್ರೂಕ್ ಇದಕ್ಕೂ ಉತ್ತರಿಸಿದ್ದರು.

The meaning of theatre event is that none of us could see something so clearly as with new energy that is brought with the meeting of a theme, actors living it and an audience gradually entering it to live it with them. At that moment a certain light appears, revealing what we would never have thought of on our own…

ಇದು ನನಗೆ ಥ್ರಿಲ್ ಅನಿಸಿದ ಚಿಂತನೆ. ರಂಗದ ಮೇಲೆ ನಡೆಯುವ ನಾಟಕ, ಅದರ ಆಶಯ, ಅದರಲ್ಲಿ ಭಾಗಿಯಾಗಿರುವ ನಟ ನಟಿಯರು ಆ ಆಶಯವನ್ನ ಜೀವಂತಗೊಳಿಸುತ್ತಿರುವ ಬಗೆ, ಅದೇ ವೇಳೆ ಪ್ರೇಕ್ಷಕರೂ ಕೂಡ ಕ್ರಮೇಣ ಅವರೊಂದಿಗೆ ಜೀವಿಸಲು ಶುರುಮಾಡುವ ಸಂದರ್ಭದಲ್ಲಿ ಬೆಳಕೊಂದು ಮೂಡಿ ನಾವು ಅಂದುಕೊಳ್ಳಲಾರದ್ದನ್ನು ಅನಾವರಣಗೊಳಿಸುತ್ತದೆ… ಮತ್ತು ಈ ಅನಾವರಣ ಸ್ಪಷ್ಟತೆಯಿಂದ ಕೂಡಿ ಹೊಸ ಶಕ್ತಿ ಪ್ರವಹಿಸುತ್ತಿರುತ್ತದೆ…

ಇದನ್ನು ಅರ್ಥೈಸಿಕೊಂಡು ಇದೇ ಅರ್ಥ ಅಂದುಕೊಂಡು ರಂಗದ ಮೇಲೆ ನಡೆಸುವ ಕ್ರಿಯೆಗೆ ಪ್ರೇಕ್ಷಕರನ್ನೂ ಒಳಗುಮಾಡಿಕೊಂಡು ಸಂತೋಷಿಸೋಣ ಅಂದುಕೊಂಡರೆ ಬ್ರೂಕ್ ಮತ್ತೆ ತಿದ್ದುತ್ತಾರೆ – Nothing in theatre has any meaning before or after. Meaning is now…

ಅರ್ಥ ಅನ್ನುವುದು ಈಗ ಸದ್ಯದ್ದು ಅಂದರೆ ಏನರ್ಥ..? ನಿರ್ದೇಶಕನಾಗ ಬಯಸುವವನು ಈ ಸದ್ಯದ ಅರ್ಥವನ್ನು ಪ್ರತಿಪಾದಿಸುವ ನಾಟಕಗಳನ್ನ ಹುಡುಕಿ ಹೆಕ್ಕಿ ತೆಗೆಯುವ ಕಲೆ ಕಲಿತಿರಬೇಕು. ಹಾಗೆ ಕಾಲ ದೇಶ ಮೀರಿದರೂ ಸದ್ಯದ ಘಮ್ಮತ್ತು ಸದಾ ಉಳಿಸಿಕೊಳ್ಳುವ ನಾಟಕ ಬರೆದವರು ಯಾರು? ಬ್ರೂಕ್ ಅವರು ಹೆಸರಿಸುವುದು ಶೇಕ್ಸ್ ಪಿಯರ್. “ಶೇಕ್ಸ್ ಪಿಯರ್ ಭೂತಕಾಲಕ್ಕೆ ಸಂಬಂಧಿಸಿಲ್ಲ. ಆತನ ವಸ್ತು ಎಲ್ಲ ಕಾಲಕ್ಕೂ ಸಲ್ಲುತ್ತದೆ ಅನ್ನುವುದಾದರೆ ಇಂದಿಗೂ ಅದು ಪ್ರಸ್ತುತವಾಗುತ್ತದೆ. ಅದು ಕಲ್ಲಿದ್ದಿಲಿನ ಹಾಗೆ. ಕಲ್ಲಿದ್ದಲು ಚೂರಿನ ಅರ್ಥವಂತಿಕೆ ಆರಂಭವಾಗುವುದು ಅದಕ್ಕೆ ಬೆಂಕಿ ತಾಕಿ ಅದು ಬೆಳಕು ಮತ್ತು ಬೆಚ್ಚಗಿನ ಅನುಭೂತಿಯನ್ನ ನೀಡುತ್ತ ಮುಕ್ತಾಯವಾಗುವ ಬಗೆಯಿಂದ. ಶೇಕ್ಸ್ ಪಿಯರ್ ನನಗೆ ಬೆಳಕು ಮತ್ತು ಬೆಚ್ಚಗಿನ ಅನುಭೂತಿ…”

ಮತ್ತೆ ಪ್ರಶ್ನೆ. ಹಾಗಾದರೆ ಶೇಕ್ಸ್ ಪಿಯರ್ ಗೆ ಅಥವಾ ಆ ರೀತಿ ಬರೆದ ಮತ್ತು ಬರೆವ ಬರಹಗಾರರ ನಾಟಕಕೃತಿಗಳಿಗೆ ಸದ್ಯತನದ ಗುಂಗಿನಲ್ಲಿ ಜೋತು ಬೀಳೋಣವೆ ಅಂದರೆ ಬ್ರೂಕ್ ಮತ್ತೆ ತಿದ್ದುವುದನ್ನ ನಿಲ್ಲಿಸುವುದಿಲ್ಲ. “ನೀವು ಏನು ಕಲಿತ್ರಿ ಅಂತ ನಿಮ್ಮನ್ನ ನೀವು ಕೇಳಿಕೊಳ್ಳಬೇಡಿ. ಕಳೆದ ವರ್ಷದ ಸಂದರ್ಭಗಳು ಹೇಗೆ ಭಿನ್ನವಾಗಿದ್ದವು ಅಂತ ಮಾತ್ರ ನಿಮ್ಮನ್ನ ಕೇಳಿಕೊಳ್ಳಿ. ಆ ರೀತಿಯಲ್ಲಿ ನಾವು ಕಳೆದ ವರ್ಷದ ಪಾಠಗಳನ್ನ ಅನುಷ್ಠಾನಕ್ಕೆ ತಂದುಕೊಳ್ಳಬಹುದು..”

ಇದನ್ನ ಓದುತ್ತ ಓದುತ್ತ ನಾನು ನನ್ನ ಸೋರ್ಸ್ ಬುಕ್ ಗುರುವಿಗೆ ಶರಣಾಗಿಬಿಟ್ಟಿದ್ದೆ. ಕಡೆಗೆ ಗೊಂದಲವಾಗಿ ‘ಈಗ ಯಾವ ಪ್ರಾಕಾರದ ನಾಟಕ ಮಾಡಿಸಲಿ ಗುರುವೆ..?’ ಎಂದು ಮನಸ್ಸಿನಲ್ಲಿ ಕೇಳುತ್ತಲೇ ಗುರು ಅದಕ್ಕೂ ಉತ್ತರಿಸಿದ್ದರು- “ರಂಗಭೂಮಿಯ ಪ್ರತಿಯೊಂದು ಪ್ರಾಕಾರವೂ ಒಂದು ಸಮಾನ ಅಂಶವನ್ನ ಒಳಗೊಂಡಿರುತ್ತದೆ. ಅದು ಡಾಕ್ಟರ್ ಬಳಿ ಹೋಗುವ ಕ್ರಿಯೆಯ ಹಾಗೆ. ನಾವು ಒಳಗೆ ಹೋಗಿ ಹೊರಗೆ ಬಂದಾಗ ಒಳ ಹೋದಾದ ಇರಿಸಿಕೊಂಡಿದ್ದ ಭಾವಕ್ಕಿಂತ ಉತ್ತಮ ಭಾವ ತಳೆದಿರಬೇಕು…”

ಇಷ್ಟೆಲ್ಲ ಯೋಚಿಸುತ್ತ ನಿರ್ದೇಶನದ ಕೆಲಸ ಮಾಡುವುದಾದರೂ ಹೇಗೆ..? ಗುರುವಿನಲ್ಲಿ ಮಾತು ಬರಿದಾಗಿಲ್ಲ. ಪ್ರತಿ ಮಾತೂ ಜ್ಯೋತಿರ್ಲಿಂಗವೇ. “I have always worked a bit like a cook in a big restaurant, where you have got lots and lots of things laid out and you go and look into one cauldron and you look into the other and you see whats coming to the boil…

ಕಡಾಯಿ ಮತ್ತು ಕುದಿತದ ಚಿತ್ರ ನನ್ನ ತಲೆಯಲ್ಲಿ ಬಹುಕಾಲದಿಂದ ಹಾಗೇ ಉಳಿದುಬಿಟ್ಟಿದೆ. ಪಾತ್ರಗಳನ್ನ ಕುದಿಸಿ ತಂದು ಮುಂದೆ ಹರವುವ ಬಗೆ ವಿಚಿತ್ರ. ಆದರೆ ನಾಟಕ ಮಾಡಲು ಆರಂಭಿಸುವವರಿಗೆ ಮಾತ್ರ ಈ ಕ್ರಿಯೆಯ ನಿಜವಾದ ಅರ್ಥ ತಿಳಿದಿರುತ್ತದೆ. ಹಾಗಿದ್ದರೆ ಪಾತ್ರಗಳ ಕುದಿತ ಎಷ್ಟಿರಬೇಕು..? ಗುರು ಹೇಳಿದ್ದು ಇದೆ- “ವಾಸ್ತವತೆಗೆ ಹತ್ತಿರ. ಮತ್ತು ಕಲ್ಪನೆಗೆ ಅಂತರ ಕಾಯ್ದುಕೊಳ್ಳಬೇಕು. ಯಾಕೆಂದರೆ ಒಂದು ಅಂತರ ಇಲ್ಲ ಅಂದರೆ ನಿಮಗೆ ಬೆರಗು ಉಂಟಾಗುವುದಿಲ್ಲ. ಹಾಗೇ ಸಾಮೀಪ್ಯ ಇಲ್ಲದಿದ್ದರೆ ನೀವು ಆ ಪಾತ್ರದ ಬೆರಗಿಗೆ ಚಲಿಸೋದಿಲ್ಲ..”

ಥಿಯರಿಯಾಗಿ ಇದನ್ನ ಕೇಳಿಸಿಕೊಳ್ಳಲಿಕ್ಕೆ ಚೆಂದ. ಆದರೆ ಇದರ ಯಥಾರ್ಥತೆ ನಮಗೆ ದಕ್ಕುವ ಬಗೆ ಹೇಗೆ..? ನನ್ನ ತಿಳುವಳಿಕೆಯ ಮಟ್ಟದಲ್ಲಿ ರಿಹರ್ಸಲ್ ಗಳಲ್ಲಿ ಇದು ದಕ್ಕಬಹುದು. ಆದರೆ ನನ್ನ ಪ್ರಶ್ನೆ ಇನ್ನೂ ಮುಗಿದಿಲ್ಲ. ಇಷ್ಟಕ್ಕೂ ಈ ರಿಹರ್ಸಲ್ ಎನ್ನುವುದು ಏನು..? ನಾನು ನೋಡಿ ಗ್ರಹಿಸಿರುವಂತೆ ಅದು ನಾಟಕ ಎನ್ನುವುದು ನಮ್ಮಲ್ಲಿ ಸರಿಯಾಗಿ ಕೂತಿದೆಯೇ ಅಥವಾ ನಿಂತು ಅಲುಗಾಡುತ್ತಿದೆಯೇ ಎಂದು ಟೆಸ್ಟ್ ಮಾಡಿಕೊಳ್ಳುವ ಸಮಯದ ಒಂದು ಘಟ್ಟ. ಮತ್ತೆ ಕೆಲವು ನಿರ್ದೇಶಕರಿಗೆ ‘ಅವರನ್ನ ಉಗಿದೆ ಇವರನ್ನ ಉಗಿದೆ.. ಆದರೂ ನನಗೇ ಜೋತು ಬೀಳ್ತಾರೆ..’ ಎಂದು ಹೇಳಿಕೊಳ್ಳುವ ಖಯಾಲಿಯ ಕೆಲಸದ ಭಾಗ. ಬ್ರೂಕ್ ಹೇಳುತ್ತಾರೆ- “The work of rehearsal is looking for meaning and then making it meaningful..”

ಈ ಅರ್ಥದ ಹುಡುಕಾಟ ಮತ್ತು ಅರ್ಥಪೂರ್ಣಗೊಳಿಸುವಿಕೆಯ ಕೆಲಸ ಒಂದಲ್ಲ ಒಂದು ದಿನ ಸಾಧಿತವಾಗುತ್ತದೆ ಎಂದೇ ನಾನೂ ನಿರ್ದೇಶಕ ಎಂಬ ಟ್ಯಾಗ್ ಹಾಕಿಕೊಂಡು ರಿಹರ್ಸಲ್ ಗಳಿಗೆ ಹೋಗುತ್ತಲೇ ಇದ್ದೇನೆ. ಈ ರೀತಿಯ ಫಾರ್ಮ್ ನಲ್ಲಿ ನಾಟಕ ಕಟ್ಟುವವನು ಮಾತ್ರ ನಿರ್ದೇಶಕ ಎಂಬ ಮಿಥ್ ಒಡೆದವರು ಬ್ರೂಕ್. ಯಾವ ಮುಲಾಜಿಗೂ ಒಳಗಾಗದೆ ‘ನನಗೆ ಬ್ರೆಕ್ಟ್ ಬಗ್ಗೆ ಅಪಾರ ಗೌರವ ಇದೆ. ಆದರೆ ಅವರ ಪಥ ನನ್ನದಲ್ಲ..’ ಎಂದು ಹೇಳಿದವರು. ಈ ಕೆಚ್ಚು ಮತ್ತು ರಂಗದ ಬಗ್ಗೆ ಉಳಿದ ಅವರ ಚಿಂತನೆಗಳು ನನ್ನನ್ನು ನಿತ್ಯ ಪ್ರಭಾವಿಸುತ್ತಲೇ ಇವೆ. ಜೊತೆಗೆ ರಂಗದ ಪರಿಸರದಲ್ಲಿ ನನ್ನ ಸುತ್ತಲಿರುವವರ ಕುಹಕ ಮತ್ತು ಅಣಕವನ್ನ ಹೇಗೆ ದಿಟ್ಟವಾಗಿ ಎದುರುಗೊಳ್ಳಬೇಕು ಎನ್ನುವುದಕ್ಕೆ ಗೈಡ್ ಲೈನ್ಸ್ ರೀತಿಯಲ್ಲಿ ಬ್ರೂಕ್ ಅವರ ಮಾತುಗಳು ನನಗೆ ಕವಚದ ರೀತಿ ಒದಗಿ ಬಂದಿವೆ ಮತ್ತು ಮುಂದಕ್ಕೂ ಬರಲಿವೆ.


ಮಲ್ಲಿಕಾ ಸಾರಾಬಾಯಿ ಅವರ ಲೇಖನ ಓದುತ್ತ ಬ್ರೂಕ್ ಅವರನ್ನ ನೆನಪಿಗೆ ನಿಲುಕಿಸಿಕೊಂಡೆ. ಅವರ ಚಿಂತನೆಗಳು ವಾಸ್ತವದ ಹಲವು ಘಟ್ಟಗಳನ್ನ ನಾನು ಅರಿಯಲಿಕ್ಕೆ ಹೇಗೆ ಸಾಧ್ಯವಾಯಿತು ಎಂಬ ಚಿತ್ರಗಳು ಕಣ್ಮುಂದೆ ಸುಳಿದವು. ಬ್ರೂಕ್ ಅವರು ನಿರ್ದೇಶಿಸಿದ ಮಹಾಭಾರತದ ಸೀಡಿಯನ್ನ ಎಂದೋ ಹಿಂದೊಮ್ಮೆ ತಂದು ಇಟ್ಟುಕೊಂಡಿದ್ದದ್ದು ನೆನಪಾಯಿತು. ಹುಡುಕಿ ತೆಗೆದು ಪ್ಲೇ ಮಾಡಿ ನೋಡಲು ಕೂತೆ…