ವಿಹಾರ’ಕ್ಕಿಂತ ‘ಹದ್ದು ಹಾರುವ ಹೊತ್ತು’ ಇನ್ನೂ ವಿಸ್ತಾರವಾದ ಕ್ಯಾನ್ವಾಸ್ ಹೊಂದಿರುವ ಕತೆ. ಊರಿಗೆ ಹೊಸತಾಗಿ ಬಂದು ಹೊರವಲಯದಲ್ಲಿ ಬಾಡಿಗೆ ಮನೆ ಮಾಡಿರುವ ಈ ಕತೆಯ ನಿರೂಪಕನು ಬಡಾವಣೆಯ ಪರಿಸರವನ್ನು ತಿಳಿದುಕೊಳ್ಳುವ ಹವಣಿಕೆಯಲ್ಲಿ ಕೇಳಿಸಿಕೊಂಡಿದ್ದೆಲ್ಲ ಕತೆಯ ಪ್ರಥಮಾರ್ಧವಾದರೆ ಉತ್ತರಾರ್ಧದ ಘಟನೆಗಳಿಗೆ ಆತ ಸಾಕ್ಷಿಯಾಗುತ್ತಾನೆ. ಹೀಗೆ ಹೊರಗಿನವನಾದ, ಆದರೆ ಒಂದು ಮಟ್ಟದಲ್ಲಿ ಭಾಗಿಯೂ ಆಗಿರುವ ನಿರೂಪಕನಿಗೆ ಎಲ್ಲಾ ಪಾತ್ರ ಮತ್ತು ಘಟನೆಗಳನ್ನು ಸನಿಹದಿಂದ, ಆದರೆ ವಸ್ತುನಿಷ್ಠವಾಗಿ, ನಿರೀಕ್ಷಿಸುವ ಅನುಕೂಲತೆ ಇದೆ.
ಎ.ಎನ್. ಪ್ರಸನ್ನ ಕಥಾ ಸಂಕಲನ “ದಾಸವಾಳ”ಕ್ಕೆ ಎಂ. ಜಿ. ಹೆಗಡೆ ಬರೆದ ಮುನ್ನುಡಿ

ಪ್ರಸನ್ನರ ʻರಥಸಪ್ತಮಿʼ ಕಥಾ ಸಂಕಲನಕ್ಕೆ ಬಿ. ಎಚ್‌. ಶ್ರೀಧರ ಪ್ರಶಸ್ತಿ ಬಂದಾಗ ಅವರನ್ನು ಮೊದಲ ಸಲ ಭೆಟ್ಟಿಯಾಗಿದ್ದೆ. ಪ್ರಶಸ್ತಿ ಸ್ವೀಕರಿಸಿ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ಕುರಿತು ತುಂಬ ಕಳಕಳಿಯಿಂದ ಅವರು ಆಡಿದ ಮಾತುಗಳು ಮನಸ್ಸಿನಲ್ಲಿ ಇನ್ನೂ ಹಸಿರಾಗಿವೆ. ಮನುಷ್ಯ ತನ್ನ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾನೆ, ಸಂಬಂಧಗಳನ್ನು ಹೇಗೆ ನಿಭಾಯಿಸುತ್ತಾನೆ ಎಂಬುದನ್ನು ಅನ್ವೇಷಿಸುವ ಒಳ್ಳೆಯ ಕತೆಗಳು ಓದುಗನಲ್ಲಿ ಅರಿವು ಮೂಡಿಸುತ್ತವೆ; ಅವರನ್ನು ಸಹನಶೀಲರನ್ನಾಗಿಸುತ್ತವೆ. ಹೀಗಾಗಿ ಮಕ್ಕಳಿಗೆ ಒಳ್ಳೆಯ ಕತೆಗಳನ್ನು ಓದಿಸುವುದು ಶಿಕ್ಷಣದ ಭಾಗವಾಗಬೇಕು ಎಂದು ಅವರು ಹೇಳಿದ್ದರು.

(ಎ.ಎನ್. ಪ್ರಸನ್ನ)

ಮರುವರ್ಷ ಅವರು ಕುಮಟಾಕ್ಕೆ ಬಂದು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಸಿನಿಮಾ ರಸಗ್ರಹಣ ಶಿಬಿರವನ್ನು ನಡೆಸಿಕೊಟ್ಟರು. ಹೀಗೆ ಆರಂಭವಾಗಿ ಆಗೀಗ ಭೆಟ್ಟಿ, ದೂರವಾಣಿ, ಈ-ಮೈಲ್‌ನಲ್ಲಿ ಕತೆ-ಅಭಿಪ್ರಾಯ ವಿನಿಮಯದಿಂದ ಗಟ್ಟಿಯಾದ ಗೆಳೆತನವನ್ನು ಇನ್ನಷ್ಟು ಗಟ್ಟಿಗೊಳಿಸುವ ಉಪಕ್ರಮವಾಗಿ ಅವರ ಹೊಸ ಸಂಕಲನದ ಕತೆಗಳ ಜೊತೆ ನನ್ನ ಎರಡು ಮಾತುಗಳನ್ನು ಜೋಡಿಸುವ ಅವಕಾಶವನ್ನು ಅವರು ಕಲ್ಪಿಸಿಕೊಟ್ಟಿದ್ದಾರೆ. ಇದನ್ನೆಲ್ಲ ನೆನಪಿಸಿಕೊಂಡಿದ್ದು ಈಗಾಗಲೇ ಸಮರ್ಥರೂ ಪ್ರಯೋಗಶೀಲರೂ ಆದ ಕತೆಗಾರರೆಂದು ವಿಮರ್ಶಕರ ಮನ್ನಣೆ ಗಳಿಸಿಕೊಂಡಿರುವ ಪ್ರಸನ್ನರ ಕತೆಗಳಿಗೆ ಮುನ್ನುಡಿ ಹಿನ್ನುಡಿಗಳ ಅಗತ್ಯವಿಲ್ಲದಿದ್ದರೂ ಅಪ್ಪಟ ಸ್ನೇಹ ಜೀವಿಯಾದ ಪ್ರಸನ್ನರಿಗೆ ಅವೆಲ್ಲ ಬೇಕು ಎಂದು ಹೇಳಲು ಮಾತ್ರವಲ್ಲ, ಬದಲಾಗಿ ಇದೀಗ ಅವರು ಓದುಗರ ಕೈಯಲ್ಲಿಡುತ್ತಿರುವ ಆರು ನೀಳ್ಗತೆಗಳ ಸಂಗ್ರಹಕ್ಕೆ ಅವರು ಶಿರಸಿಯಲ್ಲಿ ಆಡಿದ ಜೀವೋತ್ಕರ್ಷಿಯಾದ ಮಾತುಗಳೇ ಅತ್ಯುತ್ತಮ ಪ್ರವೇಶಿಕೆಯೊದಗಿಸುತ್ತವೆ ಎನ್ನುವುದಕ್ಕಾಗಿ.

ಪ್ರತ್ಯೇಕ ವ್ಯಕ್ತಿಗಳು ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾರೆ, ಬಿಕ್ಕಟ್ಟಿನ ಸಂದರ್ಭಗಳಲ್ಲಿ ಹೇಗೆ ವರ್ತಿಸುತ್ತಾರೆ ಮತ್ತು ಅವನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲವೇ ಪ್ರಸ್ತುತ ಸಂಗ್ರಹದ ‘ಕುಣಿಕೆ’, ‘ಹೊರದಾರಿ’, ‘ನಿರ್ಧಾರ’ ಮತ್ತು ‘ದಾಸವಾಳ’- ಈ ನಾಲ್ಕು ಕತೆಗಳ ಕಥನ ಕಾರಣವಾಗಿದೆ. ಇವು ಮಹಿಳಾ ಕೇಂದ್ರಿತವಾಗಿವೆಯಲ್ಲದೆ ಅವುಗಳ ನಿರೂಪಣೆಯ ದೃಷ್ಟಿಕೋನವೂ ಸಹ ಮಹಿಳೆಯದು, ಇಲ್ಲವೇ ಕೇಂದ್ರ ಪಾತ್ರದ ಪ್ರಜ್ಞೆಯೊಂದಿಗೆ ಶ್ರುತಿಗೊಂಡಿದ್ದು. ಇವರೆಲ್ಲ ನಗರವಾಸಿ, ಮಧ್ಯಮ ವರ್ಗದ ಉದ್ಯೋಗಸ್ಥ ಮಹಿಳೆಯರು; ಮನೆ-ಕಛೇರಿಗಳಿಗೆ ಸೀಮಿತವಾದ ಜಗತ್ತಿನಲ್ಲಿರುವವರು; ಬಹುತೇಕವಾಗಿ ಸ್ವಕ್ಷೇಮದ ಪರಿಧಿಯಲ್ಲಿ ಯೋಚಿಸುವವರು. ಖಂಡಿತಕ್ಕೂ ಇವೆಲ್ಲ ಅವರು ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾರೆ, ಸನ್ನಿಹಿತವಾದ ಬಿಕ್ಕಟ್ಟನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಪ್ರಭಾವಿಸುತ್ತವೆ. ಆದರೆ ಅವರು ಅನುಭವಿಸುವ ತೊಳಲಾಟ, ಸಂಕಟ, ಸಂಭ್ರಮ, ಭಾವೋದ್ವೇಗಗಳು ಸರ್ವಸಾಧಾರಣ. ಅವುಗಳ ಸರ್ವಸಾಧಾರಣತೆಯನ್ನು ಸ್ವತಃ ಅವರು ಕಂಡುಕೊಳ್ಳುವ ಕ್ಷಣವೇ ಅವರು ತಮ್ಮ ಪರಿಧಿಯನ್ನು ಮೀರುವ ಮಾನವೀಯ ಆರ್ದ್ರ ಕ್ಷಣ. ಕಥನ ಮುಖ ಮಾಡಿರುವುದು ಮನುಷ್ಯ ಬದುಕಿನಲ್ಲಿ ಭರವಸೆ ಕುದುರಿಸುವ ಅಂತಹ ಹಗುರಾದ ನವಿರಾದ ಆರ್ದ್ರವಾದ ಅರಿವಿನ ತಂಪು ಘಳಿಗೆಯತ್ತ. ಹೀಗಾಗಿ ಈ ಕತೆಗಳ ವಿನ್ಯಾಸದಲ್ಲಿಯೂ ಸಹ ಸಾಮ್ಯವಿದೆ. ಪ್ರತಿ ಕತೆಯೂ ವರ್ತಮಾನದಲ್ಲಿ ಪ್ರಾರಂಭವಾಗಿ, ಭೂತಕಾಲವನ್ನು ಅಗತ್ಯಕ್ಕೆ ಬೇಕಾದಷ್ಟೇ ಅವಾಹಿಸಿ ಮತ್ತೆ ವರ್ತಮಾನಕ್ಕೆ ವಾಪಸಾಗಿ ಓದುಗನ ಮನಸ್ಸಿನಲ್ಲಿ ಬೆಳೆಯಲು ಅವಕಾಶವಾಗುವಂತೆ ಮುಕ್ತಾಯವಲ್ಲದ ಮುಕ್ತಾಯವನ್ನು ತಲುಪುತ್ತವೆ.

ಈ ನಾಲ್ಕು ಕತೆಗಳಲ್ಲಿ ‘ದಾಸವಾಳ’ ಕೊಂಚ ಭಿನ್ನವಾಗಿದೆ. ‘ಕುಣಿಕೆ’, ‘ಹೊರದಾರಿ’, ‘ನಿರ್ಧಾರ’ಗಳಲ್ಲಿ ಬಿಕ್ಕಟ್ಟಿನ ಸನ್ನಿವೇಶದಿಂದ ಹೊರದಾರಿ ಕಂಡುಕೊಳ್ಳುವುದು ಕಥಾನಾಯಕಿಯರು ತಮ್ಮನ್ನು ಬಂಧಿಸಿರುವ ‘ಅತಿ ಸಣ್ಣ ಪ್ರಪಂಚ’ದ ಹೊರಗೂ ಸ್ಪಂದಿಸಬಲ್ಲವರಾಗುವುದಷ್ಟೇ ಆಗಿದ್ದರೆ ‘ದಾಸವಾಳ’ದ ನಿರೂಪಕ-ನಾಯಕಿ ತನಗೆ ‘ಬೇಕಾದ ಉಸಿರನ್ನು ಕೊಡಿ ಅಂತ ಇನ್ನೊಬ್ಬರನ್ನು ಕೇಳದೆ ಎಲ್ಲಿ ತಿಳಿಗಾಳಿ ಸಿಗುತ್ತದೆಯೋ ಅಲ್ಲಿಗೆ ಹೋಗಿ ನಿರಾತಂಕದಿಂದ ಉಸಿರಾಡೋ ಅನುಕೂಲಕ್ಕಾಗಿ’ ಹಂಬಲಿಸಿದವಳು; ತನ್ನ ಬದುಕನ್ನು ತಾನೇ ನಿರ್ಮಿಸಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದವಳು. ಇಂತಹುದೇ ಹಂಬಲ ಮತ್ತು ಒತ್ತಡದಿಂದ ಪಾರಾದ ಅವಳ ತಾಯಿ ಅವಳಿಗೆ ಪ್ರೇರಣೆ ಮತ್ತು ಆದರ್ಶವೆನ್ನುವುದನ್ನು ಕತೆಯ ವಿವರಗಳು ಸೂಚಿಸುತ್ತವೆ. ಉದ್ದಕ್ಕೂ ಹಾಜರಿರುವ ದಾಸವಾಳದ ಪ್ರತಿಮೆ ದುಡಿಯುವುದೇ ಇದಕ್ಕಾಗಿ. ಆದರೆ ತಾಯಿ ಕಂಡುಕೊಂಡ ಯಶಸ್ಸು ಇವಳದಾಗಿಲ್ಲವೆನ್ನುವುದು ಅವಳು ಆಯ್ದುಕೊಂಡ ದಾರಿಯಲ್ಲೇ ಇರುವ ಇನ್ನೊಂದು ಸಾಧ್ಯತೆಯಷ್ಟೇ. ಹೀಗಾಗಿ “ದಿಕ್ಕುದೆಸೆಯಿಲ್ಲದೆ, ಹೇಳೋರು ಕೇಳೋರು ಯಾರು ಇಲ್ಲದೆ ಇದ್ದದ್ದು ನಾನು” ಎಂದು ತನ್ನ ಕತೆಯನ್ನು ತಾನೇ ಹೇಳಿಕೊಳ್ಳುವ ಕಥಾನಾಯಕಿಯ ನಿರೂಪಣೆ ವಸ್ತುನಿಷ್ಠವಾದ ಆತ್ಮವಿಮರ್ಶೆಯನ್ನು ಸಾಧಿಸುವ ಅಗ್ನಿ ಪರೀಕ್ಷೆಯಲ್ಲಿ ಗೆಲ್ಲುತ್ತದೆ ಎನ್ನುವುದೇ ಈ ಕತೆಯ ಹೆಚ್ಚಳವಾಗಿದೆ. ಇಷ್ಟಾದರೂ ಕತೆ ಸಂಪೂರ್ಣವಾಗಿ ತೃಪ್ತಿಕರವಾಗಿದೆ ಎನ್ನುವಂತಿಲ್ಲ. ಗತಕಾಲದ ದಿನಗಳನ್ನು ಕಾಲದ ಅಂತರ ಒದಗಿಸುವ ಸೌಲಭ್ಯದಿಂದ ವಸ್ತುನಿಷ್ಠವಾಗಿ ನೋಡಲು ಸಾಧ್ಯವಾಗುವಂತೆ ವರ್ತಮಾನದ ಈ ಕ್ಷಣವನ್ನು ನೋಡಲು ಸಾಧ್ಯವಾಗಬಹುದೇ ಎನ್ನುವುದರ ಕುರಿತು ಸ್ವತಃ ಕತೆಗಾರರಿಗೂ ಸಂದೇಹವಿರುವಂತಿದೆ. ಹೀಗಾಗಿಯೇ ಕತೆಯ ಕೊನೆಯ ಸಾಲು ಉತ್ತಮ ಪುರುಷ ನಿರೂಪಣೆಯನ್ನು ಬಿಟ್ಟುಕೊಟ್ಟು ಸರ್ವಸಾಕ್ಷಿ ನಿರೂಪಕನ ಮಾತಾಗಿದೆ. ಇದರಿಂದಾದ ಲಾಭವೆಂದರೆ ಕಥಾನಾಯಕಿಗೆ ಸ್ಪಷ್ಟವಾಗಿದೆ ಎನ್ನಲಾದ ದಾರಿ ಯಾವುದಿದ್ದೀತು ಎಂದು ಓದುಗನ ಮನಸ್ಸಿನಲ್ಲಿ ಹೊಸದೇ ಕತೆಯೊಂದು ಮೊಳೆಯುವುದಕ್ಕೆ ಬೀಜ ಬಿತ್ತಿದಂತಾಗಿದೆ.

ಅವರು ಅನುಭವಿಸುವ ತೊಳಲಾಟ, ಸಂಕಟ, ಸಂಭ್ರಮ, ಭಾವೋದ್ವೇಗಗಳು ಸರ್ವಸಾಧಾರಣ. ಅವುಗಳ ಸರ್ವಸಾಧಾರಣತೆಯನ್ನು ಸ್ವತಃ ಅವರು ಕಂಡುಕೊಳ್ಳುವ ಕ್ಷಣವೇ ಅವರು ತಮ್ಮ ಪರಿಧಿಯನ್ನು ಮೀರುವ ಮಾನವೀಯ ಆರ್ದ್ರ ಕ್ಷಣ. ಕಥನ ಮುಖ ಮಾಡಿರುವುದು ಮನುಷ್ಯ ಬದುಕಿನಲ್ಲಿ ಭರವಸೆ ಕುದುರಿಸುವ ಅಂತಹ ಹಗುರಾದ ನವಿರಾದ ಆರ್ದ್ರವಾದ ಅರಿವಿನ ತಂಪು ಘಳಿಗೆಯತ್ತ. ಹೀಗಾಗಿ ಈ ಕತೆಗಳ ವಿನ್ಯಾಸದಲ್ಲಿಯೂ ಸಹ ಸಾಮ್ಯವಿದೆ.

‘ವಿಹಾರ’ ಮತ್ತು ‘ಹದ್ದು ಹಾರುವ ಹೊತ್ತು’ ಭಿನ್ನ ಬಗೆಯ ಕತೆಗಳು. ಅವುಗಳ ಭಿತ್ತಿ ಇದೀಗ ಪ್ರಸ್ತಾವಿಸಿದ ಕತೆಗಳಿಗಿಂತ ಹೆಚ್ಚು ವಿಶಾಲವಾದದ್ದು. ‘ವಿಹಾರ’ ಪ್ರಸನ್ನರ ಆರಂಭಿಕ ಕತೆಗಳಲ್ಲೊಂದಾದ ‘ಹೊಳೆಗೆ ಹೋಗಿದ್ದು’ಗೆ ಹತ್ತಿರವಾಗಿದೆ. ಅಲ್ಲಿಯ ಹಲವು ಆಶಯಗಳು ಇಲ್ಲಿಯೂ ಕಾಣಿಸಿಕೊಳ್ಳುತ್ತವೆ. ಆದರೆ ‘ಹೊಳೆಗೆ ಹೋಗಿದ್ದು’ ಕಥಾನಾಯಕಿಯ ಆತ್ಮನಿರೂಪಣೆಯಾದರೆ ‘ವಿಹಾರ’ ಪ್ರಥಮ ಪುರುಷ ನಿರೂಪಣೆ. ಇಲ್ಲಿ ವಿಹಾರಕ್ಕೆಂದು ಬಂದ ಐದೂ ಜನ ತಮ್ಮ ಬ್ಯಾಗುಗಳೊಂದಿಗೆ ತಮ್ಮದೇ ಆದ ಸಮಸ್ಯೆಗಳನ್ನೂ ಸಂಬಂಧದ ತೊಡಕುಗಳನ್ನೂ ಹೊತ್ತು ತಂದಿದ್ದಾರೆ. ಈ ಸಂಬಂಧ ಹಾಗೂ ಸಮಸ್ಯೆಗಳ ಸ್ವರೂಪವೇ ಅವರ ಮಾತು, ಚಹರೆಗಳನ್ನು ನಿರ್ಧರಿಸುತ್ತವೆಯೆಂದೇ ನಿರೂಪಕ ಕತೆಯ ಹರಿವನ್ನು ಹಿಂತಿರುಗಿಸಿ ಆ ವಿವರಗಳನ್ನು ಒದಗಿಸುತ್ತಾನೆ. ಅವರು ಇಳಿದುಕೊಂಡ ಗೆಸ್ಟ್ ಹೌಸ್‌ನ ದುರವಸ್ಥೆ ಈ ಐವರ ಉತ್ಸಾಹವನ್ನು ತಗ್ಗಿಸುವುದರೊಂದಿಗೆ ವಿಹಾರವು ವಿಕಾರವಾಗುವ ಮುನ್ಸೂಚನೆಯನ್ನೂ ನೀಡುತ್ತದೆ. ನದಿಯಲ್ಲಿ ಮುಳುಗಿದವನ ಹುಡುಕಾಟ ಮುಂದುವರಿದಿದ್ದಾಗಲೇ ಗೆಸ್ಟ್ ಹೌಸಿನಲ್ಲಿ ಕಾದು ಕುಳಿತವರು ನೀರು ಪಾಲದವನು ತಿರುಗಿ ಬಂದಂತೆ, ವಿಹಾರ ಕಾರ್ಯಕ್ರಮ ವಿವಾಹ ಸಂಭ್ರಮವಾಗಿ ಬದಲಾದಂತೆ ಭ್ರಮಿಸುವ ಬೆಳದಿಂಗಳಲ್ಲಿ ಮಿಂದಿರುವ ಇಡೀ ದೃಶ್ಯವು ಮುಂದೆ ಅವರು ಎದುರಿಸಲಿರುವ ವಾಸ್ತವವನ್ನು ದಾರುಣವಾಗಿಸುತ್ತದೆ. ಈ ಕನಸು ವಾಸ್ತವಗಳ ಪ್ರತಿಯೊಂದು ವಿವರದಲ್ಲೂ ವೈದೃಶ್ಯವನ್ನು ಕಡೆದಿರುವುದೂ ಕುಶಲ ಕಲೆಗಾರಿಕೆಯೇ ಸರಿ. ಕತೆಯಲ್ಲಿ ಉದ್ದಕ್ಕೂ ಕಾಣುವ ಸದೃಶ ಮತ್ತು ವಿಷಯ ಸನ್ನಿವೇಶಗಳ ಜೋಡಣೆ ವಿಹಾರದ ಧ್ವನಿಶಕ್ತಿಯನ್ನು ಹೆಚ್ಚಿಸಿದೆ.

(ಎಂ. ಜಿ. ಹೆಗಡೆ)

‘ವಿಹಾರ’ಕ್ಕಿಂತ ‘ಹದ್ದು ಹಾರುವ ಹೊತ್ತು’ ಇನ್ನೂ ವಿಸ್ತಾರವಾದ ಕ್ಯಾನ್ವಾಸ್ ಹೊಂದಿರುವ ಕತೆ. ಊರಿಗೆ ಹೊಸತಾಗಿ ಬಂದು ಹೊರವಲಯದಲ್ಲಿ ಬಾಡಿಗೆ ಮನೆ ಮಾಡಿರುವ ಈ ಕತೆಯ ನಿರೂಪಕನು ಬಡಾವಣೆಯ ಪರಿಸರವನ್ನು ತಿಳಿದುಕೊಳ್ಳುವ ಹವಣಿಕೆಯಲ್ಲಿ ಕೇಳಿಸಿಕೊಂಡಿದ್ದೆಲ್ಲ ಕತೆಯ ಪ್ರಥಮಾರ್ಧವಾದರೆ ಉತ್ತರಾರ್ಧದ ಘಟನೆಗಳಿಗೆ ಆತ ಸಾಕ್ಷಿಯಾಗುತ್ತಾನೆ. ಹೀಗೆ ಹೊರಗಿನವನಾದ, ಆದರೆ ಒಂದು ಮಟ್ಟದಲ್ಲಿ ಭಾಗಿಯೂ ಆಗಿರುವ ನಿರೂಪಕನಿಗೆ ಎಲ್ಲಾ ಪಾತ್ರ ಮತ್ತು ಘಟನೆಗಳನ್ನು ಸನಿಹದಿಂದ, ಆದರೆ ವಸ್ತುನಿಷ್ಠವಾಗಿ, ನಿರೀಕ್ಷಿಸುವ ಅನುಕೂಲತೆ ಇದೆ. ನಿರೂಪಣೆಯ ದೃಷ್ಟಿಕೋನದ ಕುಶಲ ನಿರ್ವಹಣೆಯಿಂದಾಗಿ ದೇವಸ್ಥಾನ, ದೇವರು, ಧಾರ್ಮಿಕ ಸಂಕೇತಗಳೆಲ್ಲ ಜೀವನೋಪಾಯವಾಗಿ, ರಾಜಕೀಯ ದಾಳವಾಗಿ ಮಾರ್ಪಾಟಾಗಿರುವುದನ್ನಷ್ಟೇ ಹೇಳಬಹುದಾಗಿದ್ದ ಕತೆಗೆ ಮನುಷ್ಯ ಸಂಬಂಧಗಳ ನಿಗೂಢತೆ ಹಾಗೂ ವರ್ತನೆಗಳ ಅನೂಹ್ಯತೆಯನ್ನು ಕೂಡ ಧ್ವನಿಸಲು ಸಾಧ್ಯವಾಗಿದೆ.

‘ಹದ್ದು ಹಾರುವ ಹೊತ್ತು’ ಕತೆಯ ಭಾಗಿ-ನಿರೂಪಕ ಹೊಸ ಊರಿನಲ್ಲಿ ಮನೆ ಮಾಡಿದ ಮೇಲೆ ತಾನು ಮಾಡಬೇಕಿದ್ದ ಅಗತ್ಯದ ಕೆಲಸಗಳಲ್ಲಿ ಮುಖ್ಯವಾದದ್ದೆಂದರೆ “ಬೇರೆಯ ಪ್ರಪಂಚ ಎಂದು ಭಾವಿಸಿದ್ದ ಊರಿನ ಪರಿಸರಕ್ಕೆ ಹೊಂದಿಕೊಳ್ಳುವುದಷ್ಟೇ” ಎನ್ನುತ್ತಾನೆ. ಗಟ್ಟಿಮುಟ್ಟಾದ ಸಂವಿಧಾನವನ್ನು ಹೊಂದಿರುವ ಪ್ರಸನ್ನರ ಕತೆಗಳು ಓದುಗನನ್ನು ಸಹಯಾತ್ರಿಯಾಗಿ ಜೊತೆಗೂಡಿಸಿಕೊಂಡು ಬೇರೆಯದೆಂದು ಭಾವಿಸಲ್ಪಟ್ಟಿರುವ ಪ್ರಪಂಚಕ್ಕೆ ಕರೆದೊಯ್ಯುತ್ತವೆ; ಅವನ ಕುತೂಹಲವನ್ನು ಪ್ರಚೋದಿಸುತ್ತ ಸದಾ ಕ್ರಿಯಾಶೀಲನಾಗಿರುವಂತೆ ನೋಡಿಕೊಳ್ಳುತ್ತವೆ; ಬೇರೆಯದೆಂದು ಭಾವಿಸಿದ್ದು ನಮ್ಮದೇ ಪ್ರಪಂಚ, ಅಲ್ಲಿಯ ನೋವು, ನಲಿವು, ಆತಂಕಗಳು ಥೇಟ್ ನಮ್ಮದೇ ಅಲ್ಲವೇ ಎನ್ನುವ ಸಹ-ಅನುಭೂತಿ ದೊರಕಿಸಿಕೊಡುತ್ತವೆ. ಕಥನ ಸಾರ್ಥಕವಾಗುವುದೇ ಹೀಗೆ.

(ಕೃತಿ: ದಾಸವಾಳ (ಕಥಾಸಂಕಲನ), ಲೇಖಕರು: ಎ.ಎನ್.‌ ಪ್ರಸನ್ನ, ಪ್ರಕಾಶಕರು: ವಸಂತ ಪ್ರಕಾಶನ, ಬೆಲೆ: 160/-)