ಗೆಯ್ಮೆ ಮಾಡುತ್ತಲೇ ಬದುಕು ಕಟ್ಟಿಕೊಂಡವನು ಜಯಂತ ಪೂಜಾರಿ. ಶಾಲಾ ದಿನಗಳಿಂದಲೇ ಕಬಡ್ಡೀ ಜಯಂತ ಎಂದೇ ಹೆಸರು ಪಡೆದವನು. ಅವನಿದ್ದಲ್ಲಿ ಎಂತಹ ಜಡಬರತನೂ ಪುಟಿದೇಳಲೇಬೇಕು ಅಂತಹ ಪಾದರಸ. ದೇವ ನಗರಿಯಿಂದ ಹತ್ತು ಮೈಲು ದೂರದ ಏಯ್ಡೆಡ್ ಹೈಸ್ಕೂಲ್‌ನಲ್ಲಿ ದಿನ ಗುತ್ತಿಗೆಗೆ ಪಿ.ಟಿ. ಮೇಷ್ಟ್ರಾಗಿ ಸೇರಿದಂದಿನಿಂದ ವಿದ್ಯಾರ್ಥಿಗಳನ್ನು ಕಂಬಳದ ಕೋಣಗಳಂತೆ ಹುರಿಗೊಳಿಸುತ್ತಾನೆಂದು ಪ್ರಸಿದ್ದಿ ಪಡೆದಿದ್ದ.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಅನುಪಮಾ ಪ್ರಸಾದ್ ಬರೆದ ಕಥೆ ‘ಕಾಳಿಂದಿ ಮಡು’

 

ಅವರು ವಾರಣಾಸಿಗೆ ಬಂದು ಆಗಲೇ ಐದು ದಿನಗಳಾಗಿತ್ತು. ಅಲ್ಲಲ್ಲಿ ವಿಶ್ರಮಿಸಿ ಪ್ರಯಾಣ ಮಾಡಿದ್ದರೂ ನಾಲ್ಕು ದಿನಗಳ ದೀರ್ಘಯಾನದ ಆಯಾಸದಿಂದ ಸುಧಾರಿಸಿಕೊಳ್ಳಲೇ ಎರಡು ದಿನ ಬೇಕಾಗಿತ್ತು. ಎರಡು ದಿನಗಳಿಂದ ವಾರಣಾಸಿ ಸುತ್ತ ಮುತ್ತ ಓಡಾಡಲು ಸುರು ಮಾಡಿದ್ದರು. ಜಯಂತಪೂಜಾರಿ ಜನ ಜಂಗುಳಿಯ ತಳ್ಳಾಟದಿಂದ ಅದಷ್ಟು ದೂರವೇ ಇರಲು ಬಯಸಿದ್ದರಿಂದ ಶೇಖರಬಲ್ಲಾಳರು ಹೆಂಗಸರಿಬ್ಬರನ್ನು ದೇವರ ದರ್ಶನಕ್ಕಾಗಿ ದೇವಾಲಯದೊಳಗೆ ಕರೆದೊಯ್ದರೆ ಮಹೇಂದ್ರ ಜಯಂತನನ್ನು ಗಂಗೆಯ ದಂಡೆಯುದ್ದಕ್ಕು ಓಡಾಡಿಸಿದ್ದ. ವಸತಿ ಗೃಹದಲ್ಲಿ ಕೆಳಗಿನ ಕೋಣೆಗಳೇ ಸಿಕ್ಕಿದ್ದರಿಂದ ಜಯಂತನ ಗಾಲಿಕುರ್ಚಿಗೆ ಅನುಕೂಲವಾಗಿತ್ತು. ನಿರಂತರ ದಹನ ಕ್ರಿಯೆ ನಡೆಯುತ್ತಿರುವ ಅಲ್ಲಿಯ ಘಾಟ್‌ಗಳನ್ನು, ನಿರಂತರ ಬಂದು ಬೀಳುವ ಮನುಷ್ಯನ ಶವಗಳನ್ನೂ, ಅದರ ನಡುವೆ ನಡೆಯುವ ದೈನಂದಿನ ವ್ಯಾಪಾರಗಳನ್ನು ನೋಡಿ ದಂಗಾಗಿ ಹೋಗಿದ್ದರು ಅವರು.

`ಇದೆಂತದು ಮಾರಾಯ, ಸಾಮಾನಿನ ಮೂಟೆಗಳನ್ನು ಲಾರಿಗಳಿಗೆ ಲೋಡ್ ಮಾಡುವಂತೆ ಚಿತೆಗಳಿಗೆ ಶವಗಳನ್ನು ಏರಿಸುತ್ತಲೇ
ಇರುತ್ತಾರಲ್ಲ! ಎಲ್ಲಿಂದ ಬರ್ತದೆ ಇಷ್ಟೊಂದು ಹೆಣಗಳು! ಸಾವು ಇಷ್ಟು ಸುಲಭವಾ ಮಾರಾಯ!? ‘ಕೇಳಿಯೇ ಬಿಟ್ಟಿದ್ದ ಜಯಂತ.

`ದ್ರೌಪದಿಯ ಪಾತ್ರೆ ಅಕ್ಷಯವಾಗಿತ್ತೊ ಇಲ್ವೊ. ಇಲ್ಲಿಯ ಘಾಟ್‌ಗಳಲ್ಲಿ ಮಾತ್ರ ಚಿತೆಯ ಬೆಂಕಿ ಅಕ್ಷಯ.ʼ ಅಂದಿದ್ದರು ಬಲ್ಲಾಳರು.

ಮೂರು ವರ್ಷಗಳಿಂದ ಗಿಳಿಬಾಗಿಲ ದಳಿಗಳೆಡೆಯಿಂದಲೇ ಹಗಲಿರುಳನ್ನು ಕಂಡ ಜಯಂತನ ಮನಸ್ಸು ಅಂಗಳದಲ್ಲಿ ಬಿಟ್ಟ ಪುಟ್ಟ
ಕರುವಿನಂತಾಗಿತ್ತು. ಬೆಳಗು ಹರಿಯಲಾರಂಭಿಸುತ್ತಿದ್ದಂತೆ ಹೊರ ಹೋಗುವ ಆತುರ ಜಯಂತನಿಗೆ. ಹರಿಣಾಕ್ಷಿಗೆ ಅವನ ಶರೀರ ಸ್ಥಿತಿಯ ಬಗ್ಗೆ ಆತಂಕ.

`ಉಸಿರು ಹಿಡಿದಿರುವ ಈ ಶವವನ್ನು ಇನ್ನಷ್ಟು ಕಾಳಜಿ ಮಾಡಿ ಹಿಂಸೆ ಕೊಡಬೇಡ ಹರಿಣಿ. ಅದನ್ನು ಅದರಷ್ಟಕ್ಕೆ ಬಿಟ್ಟು ನೀವುಗಳು ಈ ಜಯಂತನ ಮನಸಿಗೊಂದು ಜೀವ ಇದೆಯಲ್ಲ, ಅದನ್ನು ಕಾಳಜಿ ಮಾಡಿ. ಈ ಗಂಗೆಯ ಮೇಲಿನ ಸೂರ್ಯೋದಯದ ಸೂರ್ಯರಶ್ಮಿ ಮೈ-ಮನಸಿಗೆ ಸೋಕಿದರೆ ಕಾಯಿಲೆ ಮರೆತೇ ಹೋಗುತ್ತದೆ.ʼ ಅನ್ನುತ್ತ ಜಯಂತ ಹರಿಣಾಕ್ಷಿಯ ಮುಖದಲ್ಲಿ ವಾರದ ಹಿಂದೆ ನಡೆದ ಘಟನೆಯ ಬಗ್ಗೆ ನೋವಿನ ಛಾಯೆ ಏನಾದರೂ ಕಾಣಿಸುತ್ತಿದೆಯೊ ಎಂಬ ಅನುಮಾನದಿಂದ ಅವಳ ಮುಖಭಾವ ಓದಲು ಪ್ರಯತ್ನ ಪಟ್ಟ.

ಆ ರಾತ್ರಿಯ ಘಟನೆಯ ನಂತರ ಅವಳ ವರ್ತನೆಯಲ್ಲಿ ಬದಲಾವಣೆ ಇಲ್ಲದಿದ್ದರೂ ಆ ವಿಚಾರದ ಪ್ರಸ್ತಾಪ ಬೇಡವೆನ್ನುವಂತೆ ಇರುತ್ತಿದ್ದಳು.

ಯಾವಾಗೆಂದರಾವಾಗ ಬಂದು ಹಿಂಸಿಸುವ ಅವನ ಪಕ್ಕೆಲುಬುಗಳ ನೋವಿಗಾಗಿ ಅಂದು ರಾತ್ರಿ ತೈಲ ಹಚ್ಚುತ್ತಿದ್ದ ಹರಿಣಾಕ್ಷಿಯ ಕೈ ಸ್ವಲ್ಪಹೊತ್ತಿನಲ್ಲೇ ಅವನ ಎದೆಯ ಮೇಲೆ ನೇವರಿಸಿದಂತೆ ಚಲಿಸಲಾರಂಭಿಸಿತ್ತು. ಯಾವಾಗಲೂ ಅವಳು ಎಣ್ಣೆ ತಿಕ್ಕುವ ರಭಸಕ್ಕೆ ಅವನೇ ‘ಸ್ವಲ್ಪಮೆಲ್ಲಗೆ ಹಚ್ಚು ಮಾರಾಯ್ತಿ. ನೀನು ಅಷ್ಟು ಒತ್ತಿ ತಿಕ್ಕಿದ್ರೆ ಅದರಿಂದ ಇನ್ನೊಂದು ನೋವು ಸುರುವಾದೀತು’ ಅನ್ನುತ್ತಿದ್ದ. ಇಂದೇನಾಗಿದೆ ಇವಳಿಗೆ! ಅನಿಸುತ್ತಿದ್ದಾಗಲೇ ಜಯಂತನಿಗೆ ಕಚಗುಳಿ ಇಟ್ಟಂತಾಗಿ ರೋಮಕೂಪ ನಿಮಿರಿ ಮನ ಪುಳಕಗೊಂಡು ಅವನ ಹತೋಟಿ ಮೀರಿ ಭಾವ ಕೆರಳಿತ್ತು. ಮೆಲ್ಲ ಮೆಲ್ಲ ಅವನ ಬೆರಳುಗಳು ಕೈಗೆ ಸಿಗುವ ಅಂತರದಲ್ಲಿದ್ದ ಅವಳ ಶರೀರ ಸವರಿತು. ವರ್ಷಗಳೇ ಉರುಳಿತ್ತು ಮೈ-ಮನ ಸುಖಿಸದೆ. ಅದೇ ಬಿಗಿ ಮೈ ಕಟ್ಟು ಇವಳದು. ನಾನೂ ಇವಳನ್ನು ಮೀರಿಸುವಂತಿದ್ದೆ. ಸುಖದ ಸುಗ್ಗಿ ಹರಿಯುತ್ತಿತ್ತು. ಯಾರದೋ ತಪ್ಪಿಗೆ ಯಾರಿಗೊ ಶಿಕ್ಷೆ ವಿಧಿಸಿತಲ್ಲ ಈ ಬದುಕು! ಹುಚ್ಚು ಹೊಳೆ ಮೈಯಲ್ಲೆಲ್ಲ ಹರಿದು ಉದ್ರೇಕದ ಪ್ರವಾಹ. ಆದರೆ ಅಸಹಾಯಕ ಶರೀರ. ಉಕ್ಕಿದ ಕೋಪಕ್ಕೆ ಬಲಿಯಾದವಳು ಹರಿಣಾಕ್ಷಿ. `ನೋವು ಅಂತ ಸಾಯ್ತಾ ಇದ್ರೆ ಹರಕೆ ಸಂದಾಯಕ್ಕೆ ಎಣ್ಣೆ ಹಚ್ಚಿದ ನಾಟಕ ಮಾಡುವುದಾ?

ಮನೆಯಲ್ಲೇ ಬಿದ್ದಿರುವವನು ಅಂತ ಸಸಾರ ಅಲ್ವಾ ನಿಂಗೆ? ದುಡಿದು ತರುವವಳು ಅಂತ ಅಹಂಕಾರವಾ ನಿಂಗೆ? ನೆಟ್ಟಗೆ ಸೆರಗು ಹೊದೆದು ಓಡಾಡುವುದು ಕಲಿ ಮೊದಲು. ನಾನೊಂದು ಹೊರೆ ಅಂತನಿಸಿದ್ರೆ ನನ್ನನ್ನು ಆ ಪಕ್ಕಿಹಳ್ಳಕ್ಕೆ ಹಾಕು.ʼ ಇದ್ದಕ್ಕಿದ್ದಂತೆ ಅಬ್ಬರಿಸಲಾರಂಭಿಸಿದವನು ಬಿಕ್ಕಿ ಬಿಕ್ಕಿ ಅತ್ತಿದ್ದ.

`ಎರಡು ದಿನಗಳಿಂದ ಪುರೊಸೊತ್ತಿರಲಿಲ್ಲ. ನಿತ್ಯದ ಕೆಲಸಗಳ ಜೊತೆ ಯಾತ್ರೆಗೆ ಬೇಕಾದ ತಯಾರಿಯೂ ಆಗಬೇಕಲ್ಲ. ಆಯಾಸವಾಗಿ ನಿದ್ದೆ ತೂಗಿದೆ. ದೇವರಾಣೆ ನಿನ್ನನ್ನು ಸಸಾರ ಮಾಡಲಿಲ್ಲ ನಾನು’ ಅವಳು ಮಗುವನ್ನು ರಮಿಸಿದಂತೆ ಹೇಳುತ್ತಿದ್ದರೆ ಕಿವಿಕೊಟ್ಟಿರಲಿಲ್ಲ ಅವನು.

`ನನ್ನನ್ನ ನನ್ನಷ್ಟಕ್ಕೆ ಬಿಟ್ಟು ಹೋಗು ನೀನು’ ಅವನು ಮಾತು ಮುಗಿಸುವ ಮೊದಲೇ ಚಾವಡಿಯಲ್ಲಿ ಮಲಗಿದ್ದ ಮಹೇಂದ್ರ ಒಳ ಬಂದಾಗ ಹರಿಣಾಕ್ಷಿ ಹೊರ ನಡೆದಿದ್ದಳು.

ಈ ಘಟನೆ ನಡೆಯುವ ನಾಲ್ಕೈದು ದಿನಗಳ ಹಿಂದೆ ಮೂವರೂ ಕುಳಿತು ಚಹ ಕುಡಿಯುತ್ತಿದ್ದಾಗ ಜಯಂತ ಹರಿಣಾಕ್ಷಿಯನ್ನುದ್ದೇಶಿಸಿ `ಈ ಮಹೇಂದ್ರ ಎಂತಾ ಪೇಡಿತುಕ್ಕ ಅಂತ ನಿಂಗೆ ಗೊತ್ತಿಲ್ಲ ಹರಿಣಿ. ನಾವು ಹತ್ತನೆ ಕ್ಲಾಸಿನಲ್ಲಿದ್ದಾಗೊಮ್ಮೆ ಇವನನ್ನು ನಂಬಿ ಮಳೆಗಾಲದಲ್ಲಿ ಪಕ್ಕಿಹಳ್ಳಕ್ಕೆ ಈಜಲು ಹೋಗಿ ಮೂರುಕೆರೆ ನೀರು ಕುಡಿದಿದ್ದೆ. ಹಳ್ಳದ ಮಧ್ಯೆ ತಲುಪುವಾಗ ಇವ ಕೈ-ಕಾಲು ಬಿಟ್ಟು ಬೊಬ್ಬೆ ಹಾಕ್ಲಿಕ್ಕೆ ಸುರು. ಇವನನ್ನು ಬೆನ್ನಿಗೆ ಹಾಕಿಕೊಂಡು ಅರ್ಧದವರೆಗೆ ಈಜಿದವನಿಗೆ ಮತ್ತೆ ಮತ್ತೆ ಕಷ್ಟವಾಗಲಾರಂಭಿಸಿತ್ತು. ಆಗ ಗಂಗಮ್ಮನಿಗೆ ದಮ್ಮಯ್ಯ ಹಾಕಿದೆ. ಇವತ್ತು ನಮ್ಮನ್ನು ಬದುಕಿಸಿದರೆ ಸಾಯುವ ಮೊದಲೊಮ್ಮೆ ಕಾಶಿಗೆ ಬಂದು ಈಜಿ ಹೋಗ್ತೇನೆ ಗಂಗಮ್ಮ ಅಂದೆ ನೋಡು. ಅದೆಲ್ಲಿಂದ ಶಕ್ತಿ ಬಂತೊ. ಹೇಗೋ ಇವನನ್ನೆಳೆದುಕೊಂಡು ನೆಲಕ್ಕೆ ಬಂದೆ. ಈಗ ಆ ಗಂಗೆಗೆ ನನ್ನ ಮೇಲೆ ಕೋಪ. ಅದಕ್ಕೇ ಇರಬೇಕು ಈ ಅವಸ್ಥೆ.’

ಗೆಳೆಯನ ಮಾತಿನ ಕೊನೆಯಲ್ಲಿದ್ದ ವಿಷಾದಕ್ಕೆ ಸಣ್ಣ ಸಾಂತ್ವನವೆಂಬಂತೆ ಮಹೇಂದ್ರ `ನಾವೆಲ್ಲ ಒಮ್ಮೆ ವಾರಣಾಸಿಗೆ ಹೋಗಿ ಬರುವಾ. ದೊಡ್ಡ ವಾಹನ ಮಾಡಿದರೆ ಜಯಂತನಿಗೆ ಅಷ್ಟೇನೂ ಕಷ್ಟವಾಗ್ಲಿಕ್ಕಿಲ್ಲ’ ಅಂದುಬಿಟ್ಟ.

`ಗಂಗೆಯ ಎದುರು ನಿಂತರೆ ನನ್ನ ಕಾಲು ಬಂದೇ ಬಿಡಬಹುದೇನೊ ಅಲ್ವಾ ಮಹೇಂದ್ರ!?’ ಕಣ್ಣರಳಿಸಿ ಕೇಳಿದ ಜಯಂತನ ಹಸ್ತ ಅದುಮಿ, `ಜಯಂತನಿಗೆ ತೊಂದರೆಯಾಗದಿದ್ರೆ ಹೋಗೋಣ’ ಅಂದುಬಿಟ್ಟಿದ್ದಳು ಹರಿಣಾಕ್ಷಿ. ನಾವೆಲ್ಲ ಇರುವಾಗ ಅಂತಹ ತೊಂದರೆಯೇನಾಗ್ಲಿಕ್ಕಿಲ್ಲ ಅಂದವನೇ ಅದೇ ದಿನ ಪೇಟೆಗೆ ಹೋಗಿ ಹಂಸತೂಲಿಕಾತಲ್ಪದಂತಹ ಕಾರನ್ನೇ ಬಾಡಿಗೆಗೆ ಗೊತ್ತು ಮಾಡಿಕೊಂಡು ಬಂದಿದ್ದ ಮಹೇಂದ್ರ. ಸುಖದ ನಿರೀಕ್ಷೆಯೇ ಇಲ್ಲದೆ ಬದುಕಿನ ನೊಗ ಹೊತ್ತವಳ ಮುಖದಲ್ಲಿ ಯಾತ್ರೆ ನಿಗದಿಯಾದ ಮೇಲೆ ಸಣ್ಣ ಸಂಭ್ರಮದ ಕಳೆ ಗುರುತಿಸಿದ್ದ ಜಯಂತನಿಗೆ ಈಗ ಯಾತ್ರೆಯ ಮುನ್ನಾದಿನ ತನ್ನ ಅಸಹಾಯಕತೆಗೆ ಅವಳನ್ನು ಬಲಿಪಶು ಮಾಡಿ ಅವಮಾನಿಸಿದೆನಲ್ಲ. ಒಂದು ವೇಳೆ ಇದೇ ನೋವಿನಲ್ಲಿ ನಾಳೆ ಅವಳು ಹೊರಡಲು ಸಿದ್ಧಳಾಗದಿದ್ದರೆ ಅನ್ನುವ ಅನುಮಾನ ಕಾಡಿತ್ತು. ಆದರೆ, ಮರುದಿನ ಬೆಳಗ್ಗೆ ಅಂತದೊಂದು ಪ್ರಸಂಗ ನಡೆದಿದ್ದೇ ಸುಳ್ಳೆನ್ನುವಂತೆ ಸೇವೆಗೆ ಬಂದವಳೆದುರು ಪಾಪಭಾವದಿಂದ ಕುಗ್ಗಿತ್ತು ಅವನ ಮನಸ್ಸು. ‘ಕ್ಷಮಿಸುತ್ತೀಯಾ’ ಕೇಳಬೇಕೆನಿಸಿದರೂ ನಾಲಿಗೆ ಸಹಕರಿಸಿರಲಿಲ್ಲ. ವಾರಣಾಸಿಗೆ ಬಂದ ಮೇಲೂ ಜಯಂತನೊಳಗಿನ ತಪ್ಪಿತಸ್ಥ ಭಾವ ಹರಿಣಾಕ್ಷಿಯ ಮುಖದಲ್ಲಿ ನೋವು ಹುಡುಕುತ್ತ ಕ್ಷಮೆ ಕೇಳಲು ಹವಣಿಸುತ್ತಿತ್ತು. ಹರಿಣಾಕ್ಷಿ ಅವನನ್ನು ಸಾಂತ್ವನಿಸುವಂತೆ ತಲೆ ನೇವರಿಸಿ ಬೆಚ್ಚಗಿನ ವಸ್ತ್ರ ತೊಡಿಸಿ ಮಹೇಂದ್ರನೊಂದಿಗೆ ನದಿತೀರಕ್ಕೆ ಕಳುಹಿಸುತ್ತಿದ್ದಳು.

ಈ ದಿನ ಮಾತ್ರ ಜಯಂತ ಮಧ್ಯಾಹ್ನದವರೆಗೂ ಮಲಗಿದ್ದರಿಂದ ಸಂಜೆ ತಿರುಗಾಟಕ್ಕೆ ಹೊರಟರು. ಬಲ್ಲಾಳರು ‘ನಾವೂ ಹೋಗೋಣ’ಅಂದಾಗ ಅವರ ಹೆಂಡತಿ ಕಾವೇರಿ, `ನಿಮಗೂ ಆ ಹುಡುಗರಂತೆ ಹೊಳೆಯ ಭ್ರಾಂತು ಹಿಡಿಯಿತಾ? ಇವತ್ತು ಗಂಗೆ ಆರತಿ ನೋಡಲು ಹೋಗ್ಬೇಕು. ನೀವು ನಮ್ಮೊಟ್ಟಿಗೆ ಬನ್ನಿ. ನಾವಿಬ್ಬರೇ ಹೇಗೆ ಹೋಗುವುದು?’ ಅಂದಿದ್ದರಿಂದ ಬಲ್ಲಾಳರು ನಿರ್ವಾಹವಿಲ್ಲದೆ ಹೆಂಗಸರೊಂದಿಗೆ ಉಳಿದುಕೊಂಡರು.

ಗಂಗಾ ತಟದ `ದಶಾಶ್ವಮೇಧ ಘಾಟ್’ನ ಸಂಜೆಯ ಆರತಿಯಲ್ಲಿ ಭಾಗವಹಿಸುವ ಮುಂಚೆ ಕೈ-ಕೈ ಹಿಡಿದುಕೊಂಡು ನದಿಯಲ್ಲಿ ಮುಳುಗು ಹಾಕಬೇಕೆನ್ನುವ ಕಾವೇರಿಯ ತೀವ್ರ ಆಸೆ ಬಲ್ಲಾಳರಿಗೆ ಹಿತ ನೀಡದಿದ್ದರೂ ಅದನ್ನು ತಿರಸ್ಕರಿಸುವಂತೆಯೂ ಇರಲಿಲ್ಲ. ಶೇಖರ ಬಲ್ಲಾಳರು ತುಟಿ ಪಿಟಕ್ಕೆನ್ನದೆ ಶಾಂತವಾಗಿ ಹರಿಯುತ್ತಿದ್ದಂತೆ ಕಾಣುವ ಗಂಗೆಯೊಳಗೆ ಇಳಿದರು. ಕಾವೇರಿಗೊ ಪುಣ್ಯ ಸಂಪಾದನೆಯ ಸಾರ್ಥಕ ಭಾವ.

ಜನ್ಮಾಂತರದ ಪಾಪ ಕರ್ಮಗಳೆಲ್ಲ ತೊಳೆದು ಹೋಗಲಿ ಎಂದು ಪ್ರಾರ್ಥನೆ ಮಾಡುತ್ತ ಒಂದು ಕೈಯಲ್ಲಿ ಮೂಗು ಮುಚ್ಚಿ ಇನ್ನೊಂದು ಕೈಯಲ್ಲಿ ಬಲ್ಲಾಳರ ಕೈ ಹಿಡಿದು ಮುಳುಗು ಹಾಕುತ್ತಿದ್ದರೆ ಸುಖ ಅನುಭವಿಸಬೇಕಾದ ವಯಸ್ಸಲ್ಲಿ ಕೊನೆಯಿಲ್ಲದ ಯಾತನೆಯನ್ನೇ ಬೆನ್ನಿಗೆ ಕಟ್ಟಿಕೊಂಡು ಒಂಟಿಯಾಗಿ ನದಿ ಪಾವಟಿಗೆಯ ಮೇಲೆ ಕುಳಿತಿದ್ದ ಹರಿಣಾಕ್ಷಿಯನ್ನು ನೆನೆದು ಶೇಖರ ಬಲ್ಲಾಳರ ಎದೆ ತಿದಿಯೊತ್ತಿದಂತೆ ಒದ್ದಾಡುತ್ತಿತ್ತು. ನೀರಿಗಿಳಿಯುವ ಮೊದಲು ಕಾವೇರಿಯ ಹತ್ತಿರ ಅದನ್ನೇ ಪಿಸುಗುಟ್ಟಿದ್ದಕ್ಕೆ, `ಆ ಬೇಜಾರು ನಂಗೂ ಉಂಟು ಮಾರಾಯ್ರೆ. ಹಾಗಂತ ಇನ್ನೊಂದು ಸರ್ತಿ ಇದಕ್ಕೇ ಅಂತ ಇಲ್ಲಿಗೆ ಬರ್ತೇವಾ? ಅಷ್ಟೂ ಅರ್ಥವಾಗದವಳಲ್ಲ ಅವಳು’ ಅಂದಿದ್ದಳು.

ಅವರಿಬ್ಬರೂ ಮೂರು ಮುಳುಗು ಹಾಕಿ ಮೇಲೆ ಬಂದು ಒದ್ದೆ ವಸ್ತ್ರ ಬದಲಿಸಿ ನೀರ ಹರಿವಿನತ್ತಲೇ ಕಣ್ಣು ನೆಟ್ಟು ಕುಳಿತಿದ್ದ
ಹರಿಣಾಕ್ಷಿಯನ್ನುದ್ದೇಶಿಸಿ `ಬಾ ಹರಿಣಿ. ಮೇಲೆ ಹೋಗೋಣ’ ಅನ್ನುತ್ತ ಎರಡು ಮೆಟ್ಟಿಲು ಮೇಲೇರಿದರೂ ಹರಿಣಾಕ್ಷಿ ಕುಳಿತಲ್ಲಿಂದ ಏಳಲಿಲ್ಲ.

`ನೋಡು. ಇಲ್ಲಿಂದಲೇ ಆರತಿಗೆ ಕೈ ಮುಗಿದುಕೊ. ಮುಂದೆ ಹೋದರೆ ಇಲ್ಲಿ ಹರಿಣಿಯೊಬ್ಬಳೇ ಆಗ್ತಾಳೆ.’

ಬಲ್ಲಾಳರ ಮಾತು ಸರಿ ಎನಿಸಿದ್ದರಿಂದ ಮತ್ತೆರಡು ಮೆಟ್ಟಿಲು ಮೇಲೆ ಹತ್ತಿ ಕೈ ಮುಗಿದು ನಿಂತಳು ಕಾವೇರಿ. ಸುತ್ತ ಹಚ್ಚಿದ ದೀಪಗಳ ನಡುವೆ ಸಂಜೆ ಆರತಿಗಾಗಿಯೇ ಸಿದ್ಧಪಡಿಸಿದ ಎತ್ತರದ ವೇದಿಕೆಗಳಲ್ಲಿ ನಿಂತು ಪುರೋಹಿತರುಗಳು ಆರತಿಗೆ ಸಿದ್ಧತೆ ನಡೆಸಿದ್ದರು. ವಿದೇಶಿಯರೊ-ಸ್ವದೇಶಿಯರೊ, ಹೆಂಗಸರೊ-ಮಕ್ಕಳೊ, ವೃದ್ಧರೊ-ಜವ್ವನಿಗರೊ ಬೇಧವಿಲ್ಲದೆ ನೆರೆದ ಜನಜಂಗುಳಿ. ಕೆಳಗೆ ನದಿಯಲ್ಲಿ ಯಾರೋ ತೇಲಿ ಬಿಟ್ಟ ದೀಪ. ಅದನ್ನು ನೋಡಿದ ಕಾವೇರಿಗೆ `ಅಯ್ಯೋ ತಲೆಗೆ ಹೊಳಿಲೇ ಇಲ್ಲ. ನಾವೂ ಪೆರ್ಣತ್ತಿ ತೇಲಿಬಿಡಬಹುದಿತ್ತು’ ಅನಿಸಿ ಬಲ್ಲಾಳರಿಗೆ ಹೇಳಲು ಹೊರಟವಳಿಗೆ ನದಿಯಲ್ಲಿ ದೋಣಿಯಲ್ಲಿ ಕುಳಿತು ತಿಂದು ಕುಡಿಯುತ್ತ ವೀಡಿಯೊ ತೆಗೆಯುತ್ತಿದ್ದವರ ಗುಂಪು ಕಂಡಿತು.

`ಅಲ್ಲಾ, ಭಯ-ಭಕ್ತಿ ಒಂದೂ ಇಲ್ಲದವರ ಹಾಗೆ ಈ ಮುಸ್ಸಂಜೆಗೆ ಅದೂ ಈ ಜಾಗದಲ್ಲಿ ತಿನ್ನುತ್ತಾರಲ್ಲ, ಎಂತಾ ಮನುಷ್ಯರೊ’ ಎಂದು ಗೊಣಗುತ್ತಿದ್ದಂತೆ ಅದರಲ್ಲಿದ್ದವರ ವಿಡಿಯೊ ಕೆಮರಾ ಇವರು ನಿಂತ ಕಡೆ ತಿರುಗಿದಂತೆ ಕಂಡಿತು. `ಮಾನ-ಮರ್ಯಾದೆ ಬೇಡವಾ? ಹೆಂಗಸರ ಫೊಟೊ ತೆಗಿತಾರೆ’ ಜೋರಾಗಿಯೇ ಹೇಳಿದಾಗ ಬಲ್ಲಾಳರು `ಮಹರಾಯ್ತಿ, ಅವರು ಇಡೀ ಪರಿಸರದ ಫೊಟೊ ತೆಗೆದದ್ದು’ ಅಂದರು. ಅಷ್ಟರಲ್ಲಿ ಧೂಪದ ಪರಿಮಳ ಮೂಗನ್ನಾವರಿಸುವುದರ ಜೊತೆಗೆ ಘಂಟೆಯ ಶಬ್ದ ಕೇಳಿದ್ದರಿಂದ ಕಾವೇರಿಗೆ ಅರೆ ಕ್ಷಣದಲ್ಲೇ ಲೌಕಿಕ ಮರೆತು ಹೋಯಿತು.

ಕಿವಿಯೊಳಗೆ ಒಂದೇ ಸಮನೆ ಶಂಖ ಧ್ವನಿ, ಘಂಟಾನಾದ ಅನುರಣಿಸಲಾರಂಭಿಸಿದಾಗ ಹರಿಣಾಕ್ಷಿ ಅದೃಶ್ಯದ ಸೆಳೆತಕ್ಕೆ ಸಿಕ್ಕಿದವಳಂತೆ ಎದ್ದುನಿಂತಳು. ಅಳಿದುಳಿದ ಬೆಳಕನ್ನು ಗಬ ಗಬನೆ ನುಂಗುತ್ತ ಆವರಿಸಿಕೊಳ್ಳುತ್ತಿದ್ದ ಸಂಜೆಗತ್ತಲನ್ನು ಸೀಳಿ ಸುತ್ತಲಿನ ಪರಿಸರದಲ್ಲಿ ನಿಗಿನಿಗಿಸುವ ಕೆಂಬಣ್ಣ-ಹೊಂಬಣ್ಣ ಮಿಶ್ರಿತ ಓಕುಳಿ ಎರಚಾಡಿ ಅದೇ ಸತ್ಯವೆಂದು ಭ್ರಮೆ ಹುಟ್ಟಿಸುವ ಶಕ್ತಿ ಆ ಬೃಹತ್ ಸಪ್ತಾರತಿಗಳಿಗೆ, ಆ ಮಹಾಶಂಖನಾದಕ್ಕೆ, ಕಿವಿ ತಮಟೆಯಾಳಕ್ಕಿಳಿದು ಘೂಂಗುಡುವ ಘಂಟಾನಾದಕ್ಕೆ ಇದ್ದಿದ್ದರಿಂದಲೇ ಅವಳ ಮನಸ್ಸು ಇಕ್ಕಳದ ನಡುವೆ ಸಿಕ್ಕಿಕೊಂಡು ಭೂತ-ಭವಿಷ್ಯದತ್ತ ಚಲಿಸದೆ ವರ್ತಮಾನವನ್ನೂ ಅರಗಿಸಿಕೊಳ್ಳಲಾಗದೆ ಕಣ್ಣ ಮುಂದಿನ ಭ್ರಾಮಕ ಜಗತ್ತಿನ ಹೊರತಾಗಿ ಉಳಿದಿದ್ದೆಲ್ಲ ನಶ್ವರವೆಂಬ ಭಾವ ಮೂಡಿಸುವ ಆ ಮಾಂತ್ರಿಕ ಪರಿಸರಕ್ಕೆ ತನ್ನನ್ನು ಒಪ್ಪಿಸಿಕೊಂಡುಬಿಟ್ಟಿತು.

ಭಗಭಗ ಜ್ವಲಿಸುತ್ತಿರುವ ಆರತಿಯನ್ನು ಭಯ-ಭಕ್ತಿಯಿಂದ ಕಣ್ಣೊಳಗೆ ಇಳಿಸಿಕೊಳ್ಳುವುದರಲ್ಲಿ ತನ್ಮಯಳಾಗಿದ್ದ ಕಾವೇರಿಗೆ
ಜಯಂತ ಪೂಜಾರಿಯ ನೆನಪು. ಎಲ್ಲಾ ಇದ್ದಕ್ಕಿದ್ದಂತೆ ತೀರ್ಮಾನವಾಗಿದ್ದು. ಕಳೆದ ಬುಧವಾರ ಬಲ್ಲಾಳರು ಬೆಳಗ್ಗೆ ಚಾಯ ಕುಡಿದು ಬಯಲಿಗೆಹೋಗಿ ಬಂದವರೇ,
`ಇಕಾ, ನಾನು ಬೇಗ ಒಮ್ಮೆ ಜಯಂತನ ಮನೆಗೆ ಹೋಗಿ ಬರ್ತೇನೆ. ಎಂಡೊ ಸಲ್ಫಾನ್ ಸಂತ್ರಸ್ತರ ಅಪ್ಲಿಕೇಷನ್ ಫಾರಂನಲ್ಲಿ ಅವನ ದಸ್ಕತ್ತು ಹಾಕಿಸಿ ಆಗಲಿಲ್ಲ. ಇವತ್ತು ಪೇಟೆಗೆ ಹೋಗುವ ಕೆಲಸ ಇದೆ. ತಾಲೂಕಾಫೀಸಿಗೆ ಹೋಗಿ ಅದನ್ನು ಕೊಟ್ಟು ಬರ್ತೇನೆ’ ಅಂತ ಹೇಳಿ ಹೋದವರು ಹೊಸ ಸುದ್ದಿ ತಂದಿದ್ದರು: `ಮಹೇಂದ್ರ ಜಯಂತನನ್ನು ಕಾಶಿಗೆ ಕರ್ಕೊಂಡು ಹೋಗ್ತಾನಂತೆ. ಹೇಗೂ ದೊಡ್ಡ ಕಾರು ಮಾಡಬೇಕು. ನೀವೂ ಬನ್ನಿ ಬಲ್ಲಾಳ ಮಾವ ಅಂತ ಒತ್ತಾಯ ಮಾಡಿದ್ದಾರೆ. ಹರಿಣಾಕ್ಷಿಯೂ ಹೊರಡ್ತಾಳಂತೆ. ಒಂದು ವಾರದ ಮಟ್ಟಿಗೆ ಮಕ್ಕಳನ್ನು ನೋಡಿಕೊಳ್ಳಲು ಅವಳ ತಾಯಿ ಬಂದು ಇರ್ತಾರಂತೆ. ನಿಂಗೆ ಪುರುಸೊತ್ತಿದೆಯಾ..?’ ಕೇಳಿದಾಗ `ನಿಮ್ಮದೊಳ್ಳೆ ಸಂಗತಿ. ದೇವರಾಣೆ ನನ್ನ ಜನ್ಮದಲ್ಲಿ ಇಂತದ್ದೊಂದು ಭಾಗ್ಯ ಬರ್ತದೆ ಅಂದುಕೊಂಡಿರ್ಲಿಲ್ಲ ಮಾರಾಯರೆ. ಆ ಮಹೇಂದ್ರ ಅಷ್ಟು ದೊಡ್ಡ ಕೆಲಸ ಮರ್ತು ಹೀಗೆ ಊರಿಗೆ ಬಂದು ಜಾತಿ ಎಲ್ಲ ಬಿಟ್ಟು ದೋಸ್ತಿ ಅಂತ ಅವನ ಮನೆಯಲ್ಲೇ ಕೂತದ್ದೂ ಅಲ್ಲದೆ ಈಗ ಕಾಶಿಯಾತ್ರೆ ಮಾಡಿಸ್ತಾನ!? ಜಯಂತನ ದೆಸೆಯಿಂದ ಕಾಶಿ ಯಾತ್ರೆಯ ಪುಣ್ಯ ಸಿಗ್ತದೆ ಅಂತಾದ್ರೆ ನಾನದನ್ನು ಬಿಡ್ತೇನಾ? ಕಾಶಿಗೆ ಹೋಗಿ ಹರಸಿಕೊಂಡರಾದರೂ ಸೊಸೆಗೆ ಬಸುರು ನಿಲ್ತದೇನೊ’ ಅಂದವರೇ ಆ ದಿನದಿಂದಲೇ ಹೊರಡುವ ತಯಾರಿ ಸುರುಮಾಡಿದ್ದರು.

ಎಂತದ್ದೇ ಆದ್ರೂ ಈ ದೇವರು ಜಯಂತನಿಗೆ ಇಷ್ಟು ಅನ್ಯಾಯ ಮಾಡ್ಬಾರ್ದಿತ್ತು. ಪಾಪ! ಹರಿಣಾಕ್ಷಿ ಎಷ್ಟೂ ಅಂತ ಕಷ್ಟ ಸಹಿಸಿಕೊಳ್ಳುವುದು? ಅವಳಾದ್ದಕ್ಕೆ ಇನ್ನೊಬ್ಬರ ಮನೆಯಲ್ಲಿ ಗೇಯ್ದಾದರೂ ಸಂಸಾರ ಸಾಕ್ತಾಳೆ. ನಾನಾಗಿದ್ರೆ ಇಷ್ಟು ಹೊತ್ತಿಗೆ ಯಾವಾಗಲೊ ಬಾವಿಗೆ ಹಾರಿಕೊಳ್ತಿದ್ದೆನೇನೊ ಅನಿಸುತ್ತಿದ್ದಂತೆ ಮೈ ಜುಂ ಅಂದಿತು. `ಅಲ್ಲಾ, ಈ ಹೆಣ್ಣಿನ ಮೇಲೆ ಒಂದು ಕಣ್ಣಿಟ್ಟಿರಬೇಕು. ಕಷ್ಟದಲ್ಲಿರುವಾಗ ಯಾರ ಮನಸ್ಸು ಹೇಗೆ ಅಂತ ತೀರ್ಮಾನ ಮಾಡ್ಲಿಕ್ಕಾಗುವುದಿಲ್ಲ. ಆವಾಗಿಂದ ನೀರಿನ ಹತ್ತಿರವೇ ಕುಳಿತಿದ್ದಾಳೆ. ಮುಸ್ಸಂಜೆ ಬೇರೆ. ನಮ್ಮ ಗಮನ ಅವಳ ಮೇಲಿಲ್ಲ ಅಂತ ಗೊತ್ತಾದ ಕೂಡ್ಲೆ ಸಂಕಟದಲ್ಲಿರುವವಳು ಏನಾದ್ರೂ ಹೆಚ್ಚು ಕಮ್ಮಿ ಮಾಡಿಕೊಂಡರೆ ಕಷ್ಟ ಅನಿಸಿದ್ದರಿಂದ; ತನ್ನ ಜನ್ಮದಲ್ಲಿ ಇನ್ನುಮುಂದೆ ಸಿಗಲಾರದ ಗಂಗಾ ತಟದ ದಶಾಶ್ವಮೇಧ ಘಾಟ್‌ನ ಆ ಬೃಹದಾರತಿಗೆ ಮನಸೋ ಇಚ್ಚೆ ಕೈ ಮುಗಿದು ಧನ್ಯತೆ ಅನುಭವಿಸಲು ತಡೆಉಂಟಾದಂತಾದರೂ; ತನ್ನ ಗಮನ ಅವಳ ಮೇಲಿಲ್ಲ ಅಂತ ಗೊತ್ತಾದ ಕೂಡಲೆ ಅವಳು ಗಂಗೆಗೆ ಹಾರಿಕೊಂಡೇ ಬಿಡುತ್ತಾಳೆ ಎಂಬ ಕಲ್ಪನೆಯಿಂದಲೇ ಮೈ ನಡುಗಿ ಅವಳತ್ತ ನೋಡಿದವಳಿಗೆ ಕೈ ಜೋಡಿಸಿ ನಿಂತ ಹರಿಣಾಕ್ಷಿಯನ್ನು ನೋಡಿ ಕಣ್ಣೊಳಗೆ ನೀರು ತುಂಬಿತು. ಚೆಕ್..!

ಎಂತದೇ ಆದ್ರೂ ಜಯಂತನ ಸಂಸಾರಕ್ಕೆ ದೇವರು ಹೀಗೆ ಮಾಡಿದ್ದು ಸರಿಯಲ್ಲ. ಅಷ್ಟು ಗಟ್ಟಿಮುಟ್ಟಾಗಿದ್ದ ಆಣ್ಮಗನಿಗೆ ಹೀಗಾಗುವುದೆಂದರೆ ಸಹಿಸುವುದು ಹೇಗೆ? ಮನಸ್ಸು ಲೊಚಗುಟ್ಟುತ್ತಿದ್ದಂತೆ ಅದೇ ಮನಸ್ಸಿನೊಳಗೆ ನಾಗಶಾಪ ಅಂದ್ರೆ ಸುಮ್ಮನೆಯಾ?

ಅವನ ಅಮ್ಮ ತೀರಿ ಹೋದವರ್ಷ ಈ ಜಯಂತ ಅವನ ಮನೆಯೊಳಗೆ ಸೇರಿಕೊಂಡಿದ್ದ ನಾಗರ ಹಾವನ್ನು ಹಿಡಿಯಲು ಆ ಹಾವು ಹಿಡಿಯುವ ಸೋಜನನ್ನು ಕರೆಸಿ ಅವನಿಗೂ ಹಿಡಿಯಲಿಕ್ಕಾಗದೆ ಬಡಿದಾಗ ಅದರ ಸೊಂಟ ಮುರಿದರೂ ಕೋಪದಿಂದ ಬುಸುಗುಡುತ್ತ ಪೆಡಚ್ಚಿದಾಗಲೇ ಎಂತದೋ ಆಪತ್ತು ಕಾದಿದೆ. ಜೋಯಿಸರನ್ನು ಕಂಡು ಪರಿಹಾರ ಮಾಡಿ ಅಂದದ್ದಕ್ಕೆ ನನ್ನ ಮಾತು ಎಲ್ಲರಿಗೂ ಸಸಾರ ಆಯ್ತು. ಕುಮಾರ ಮಂಗಲದಲ್ಲಿ ಆಶ್ಲೇಷಾಬಲಿ ಮಾಡಿಸಿದರಾಯ್ತು ಅಂತ ಬಾಯಿ ಮುಚ್ಚಿಸಿದರು. ಈಗ ಇವನು, ಇವನ ಮಗಳು ಎಲ್ಲರೂ ಪೆಡಚ್ಚುವಂತಾಗಿದೆ. ಅವರವರ ಪ್ರಾರಬ್ದ ಅವರವರೇ ಅನುಭವಿಸಬೇಕಲ್ಲ. ಹಾಗಂದುಕೊಂಡದ್ದೂ ಪಾಪವೆಂಬಂತೆ ಕಾವೇರಿ ಎರಡೂ ಕೈಗಳಿಂದ ಗಲ್ಲ ಗಲ್ಲ ಬಡಿದುಕೊಂಡು ಮತ್ತಷ್ಟುಭಯ-ಭಕ್ತಿಯಿಂದ ಕೈ ಮುಗಿದಳು.

ಹೆಂಡತಿಯ ಬಾಯಿಗೆ ಹೆದರಿ ಕೈ ಮುಗಿದು ನಿಂತಿದ್ದ ಶೇಖರ ಬಲ್ಲಾಳರಿಗೆ ಕಳೆದ ಬೇಸಾಯದ ಸಮಯದಲ್ಲಿ ತಮ್ಮ ಗದ್ದೆಯಲ್ಲಿ ನೇಜಿನೆಡುತ್ತಿದ್ದಾಗ ಹರಿಣಾಕ್ಷಿ ಪಾಡ್ದನ ಹೇಳುತ್ತ ಬಿಕ್ಕಳಿಸಿದ್ದು ನೆನಪಾಗಿ ಅವಳತ್ತ ನೋಡಿದ್ದೂ, ಯಾವುದರ ಮೇಲೂ ಲಕ್ಷ್ಯವಿಲ್ಲದಂತೆ ನದಿಗಿಳಿಯುವ ಪಾವಟಿಗೆಯ ಬದಿಯಲ್ಲಿ ಕುಳಿತಿದ್ದ ಹರಿಣಾಕ್ಷಿ ಇದ್ದಕ್ಕಿದ್ದಂತೆ ಎದ್ದು ನಿಂತಿದ್ದು ಒಂದೇ ಘಳಿಗೆಯಲ್ಲಾದ್ದರಿಂದ ಕೆಡುಕು ಯೋಚಿಸಿ ಅನಾಹುತವಾಗುವ ಲಕ್ಷಣವೇನಾದರು ಕಂಡರೆ ಕೂಡಲೆ ಅವಳನ್ನು ಸಮೀಪಿಸಲು ಸಾಧ್ಯವಾಗುವಂತೆ ನಿಂತರು. ಆಕೆ ತನ್ನ ಎರಡೂ ಕೈಗಳನ್ನೂ ಕಿವಿಗಳಿಗೆ ತಾಗುವಂತೆ ಮೇಲೆತ್ತಿ ಜೋಡಿಸಿದಾಗ ಬಲ್ಲಾಳರ ಒದ್ದೆಯಾದ ಕಣ್ಣುಗಳೊಳಗೆ ಆ ಪುಟ್ಟ ಸಂಸಾರದ ದುರಂತಚಿತ್ರ ಹಸಿ ಹಸಿಯಾಗಿ ಬಿಡಿಸಿಕೊಂಡಿತು.

ಜಯಂತನನ್ನು ಮದುವೆಯಾದ ಹೊಸತರಲ್ಲಿ ಅಪರಿಚಿತರಲ್ಲದಿದ್ದರೂ ಹರಿಣಾಕ್ಷಿ ಬಲ್ಲಾಳರ ಮನೆಗೆ ಹೋಗುತ್ತಿದ್ದುದೇ ಅಪರೂಪ. ಜಯಂತನೊ ಬಾಲ್ಯದಿಂದಲೇ ಬಲ್ಲಾಳರ ಮನೆಯ ಕಷ್ಟ-ಸುಖ ಬೇರೆ ಅಲ್ಲ, ತನ್ನದು ಬೇರೆ ಅಲ್ಲ ಅನ್ನುವಂತೆ ಬೆಳೆದವನು. ಅವನದೇ ಪ್ರಾಯದ ಬಲ್ಲಾಳರ ಮಗ ರಜನೀಂದ್ರ, ತೊಟ್ಟಿಮನೆ ಮಹೇಂದ್ರ ಜೊತೆಯಲ್ಲೇ ಆಡಿ ಬೆಳೆದವರು. ರಜನೀಂದ್ರ ಮುಂಬಯಿ ಸೇರಿ ಅಲ್ಲೇ ಮದುವೆಯಾಗಿ ಮಾವನ ಮನೆಯಲ್ಲೇ ನಿಂತರೂ ಜಯಂತ ಬಲ್ಲಾಳ ಬೀಡಿನ ಸಹವಾಸ ಬಿಡಲಿಲ್ಲ. ಶೇಖರ ಬಲ್ಲಾಳರ ಸಣ್ಣ ಪುಟ್ಟ ಸಮಾಜಸೇವೆಯಲ್ಲಿ ಅವನೂ ಕೈ ಜೋಡಿಸುತ್ತಿದ್ದುದರಿಂದ ಕ್ರಮೇಣ ಅವರ ಬಲಗೈ ಬಂಟನೇ ಆಗಿದ್ದ. ನಿಧಾನಕ್ಕೆ ಹರಿಣಾಕ್ಷಿಗೂ ಅದು ಅರ್ಥವಾಗಿಸಂಕೋಚ ಬಿಟ್ಟು ಅಲ್ಲಿಯ ಅಗತ್ಯಗಳಿಗೆ ಹೆಗಲು ಕೊಡಲಾರಂಭಿಸಿದ್ದಳು. ಮದುವೆಗೆ ಮೊದಲು ಬೀಡಿಕಟ್ಟುತ್ತ ಊರವರ ಕೃಷಿ ಕೂಲಿಗೆ ತಾಯಿಯೊಂದಿಗೆ ಹೋಗುತ್ತಿದ್ದ ಹರಿಣಾಕ್ಷಿ ಅಮ್ಮ ಹೇಳುವ ಪಾಡ್ದನ, ಓ.. ಬೇಲೇ ಪದಗಳನ್ನೂ ಕಲಿತಿದ್ದಳು. ಜಯಂತನ ಹೆಂಡತಿಯಾದಮೇಲೆ ಅದನ್ನೆಲ್ಲ ಪೂರ್ತಿಯಾಗಿ ಬಿಟ್ಟು ಬೀಡಿಕಟ್ಟುತ್ತ ಮನೆಯಲ್ಲೇ ಇರುತ್ತಿದ್ದವಳು ನೇಜಿ ಸಮಯದಲ್ಲಿ ಬಲ್ಲಾಳರ ಗದ್ದೆಗೆ ಮಾತ್ರ ಹೋಗುತ್ತಿದ್ದಳು. ಗದ್ದೆಗೆ ಇಳಿದಳೆಂದರೆ ಅವಳೂ ತಾಯಿಯ ಹಾಗೇ ಪದಗಾರ್ತಿ. ಅಲಕಾ ಹುಟ್ಟಿ ಅವಳ ಅಂಗ ವೈಕಲ್ಯ ಬೆಳಕಿಗೆ ಬಂದಾಗ ಜಯಂತ-ಹರಿಣಾಕ್ಷಿಯರ ಚೊಕ್ಕ ಸಂಸಾರಕ್ಕೆ ಮೊದಲ ಪೆಟ್ಟು ಬಿದ್ದಿತ್ತು. ಆದರೆ, ಅವರ ಬದುಕು ಎತ್ತಿ ನಿಲ್ಲಿಸಲಾಗದಂತೆ ಹಾಗೆ ಇದ್ದಕ್ಕಿದ್ದಂತೆ ಕಣ್ಣೆದುರೇ ಕುಸಿದದ್ದು ಮಾತ್ರ ದಯನೀಯ ದುರಂತ.

ಗೆಯ್ಮೆ ಮಾಡುತ್ತಲೇ ಬದುಕು ಕಟ್ಟಿಕೊಂಡವನು ಜಯಂತ ಪೂಜಾರಿ. ಶಾಲಾ ದಿನಗಳಿಂದಲೇ ಕಬಡ್ಡೀ ಜಯಂತ ಎಂದೇ ಹೆಸರು ಪಡೆದವನು. ಅವನಿದ್ದಲ್ಲಿ ಎಂತಹ ಜಡಬರತನೂ ಪುಟಿದೇಳಲೇಬೇಕು ಅಂತಹ ಪಾದರಸ. ದೇವ ನಗರಿಯಿಂದ ಹತ್ತು ಮೈಲು ದೂರದ ಏಯ್ಡೆಡ್ ಹೈಸ್ಕೂಲ್‌ನಲ್ಲಿ ದಿನ ಗುತ್ತಿಗೆಗೆ ಪಿ.ಟಿ. ಮೇಷ್ಟ್ರಾಗಿ ಸೇರಿದಂದಿನಿಂದ ವಿದ್ಯಾರ್ಥಿಗಳನ್ನು ಕಂಬಳದ ಕೋಣಗಳಂತೆ ಹುರಿಗೊಳಿಸುತ್ತಾನೆಂದು ಪ್ರಸಿದ್ದಿ ಪಡೆದಿದ್ದ. ಅಂತವನು ಮೂರು ವರ್ಷದ ಹಿಂದೆ ಒಂದು ದಿನಶಾಲೆಯಲ್ಲಿ ಮಕ್ಕಳಿಗೆ ಕೊಕ್ಕೊ ಆಡಿಸುತ್ತಿದ್ದಾಗ ಊದುತ್ತಿದ್ದ ಬಿಗಿಲ್ ಕೆಳಗೆ ಬಿತ್ತೆಂದು ಹೆಕ್ಕಲು ಬಗ್ಗಿದವನು ಮತ್ತೆ ಏಳಲಾಗದಂತೆ ಅಲ್ಲೇ ಕುಸಿದು ಬೀಳಬಹುದೆಂಬ ಕಲ್ಪನೆ ಯಾರಿಗಾದರು ಇತ್ತೆ. ಆ ದಿನ ಮುಸ್ಸಂಜೆ ಮೆಟ್ಟುಕಲ್ಲು ಹತ್ತಲು ಹವಣಿಸುವ ಹೊತ್ತಲ್ಲಿ ಹರಿಣಾಕ್ಷಿ ಸೊಂಟದ ಕೆಳಗೆ ಬಲವಿಲ್ಲದೆ ತೆವಳುವ ಕಿರಿ ಮಗಳು ಅಲಕಾಳನ್ನು ಸೊಂಟಕ್ಕೇರಿಸಿಕೊಂಡು ಎಲ್.ಪಿ.ಶಾಲೆಯಲ್ಲಿ ಓದುತ್ತಿರುವ ಎಂಟು ವರ್ಷದ ಹಿರಿಮಗಳು ಅಶ್ವತಿಯ ಕೈ ಹಿಡಿದುಕೊಂಡು ಏದುತ್ತ ಬಂದವಳು `ಬಲ್ಲಾಳರೇ, ಇವರನ್ನು ಆಸ್ಪತ್ರೆಗೆ ಸೇರಿಸಿದ್ದಾರಂತೆ’ ಅನ್ನುತ್ತ ಕುಸಿದು ಕುಳಿತು ಬಿಕ್ಕಲಾರಂಭಿಸಿದ್ದಳು.

ಜಗಲಿ ಕಟ್ಟೆಯಲ್ಲಿ ಕುಳಿತು ತೆಂಗಿನ ಮಡಲು ಮೊಡೆಯುತ್ತಿದ್ದ ಶೇಖರ ಬಲ್ಲಾಳರಿಗೆ ಆಕೆ ಏನು ಹೇಳುತ್ತಿದಳೆಂಬುದು ಸ್ಪಷ್ಟವಾಗದಿದ್ದರೂ ಗಾಬರಿಯಿಂದ ಓಡಿ ಬಂದಿದ್ದಾಳೆನ್ನುವುದು ಅರ್ಥವಾಗಿತ್ತು. ಅವಳ ಮುಖದಲ್ಲಿ ಢಾಳಾಗಿ ಕಾಣುತ್ತಿರುವ ಆತಂಕ, ಅವಳು ತಡೆ ಹಿಡಿಯಲು ಪ್ರಯತ್ನಿಸಿದ್ದರೂ ಹತೋಟಿ ಮೀರಿ ನುಗ್ಗಿ ಬಂದ ಅಳು-ಇದನ್ನೆಲ್ಲ ನೋಡಿ ಜಯಂತ ಯಾವುದೋ ಅಪಾಯಕ್ಕೆ ಸಿಲುಕಿದ್ದಾನೆ ಅನಿಸಿತ್ತು.

ಅಲ್ಲಿಂದಲೇ ಒಳಗಿದ್ದ ಹೆಂಡತಿಗೆ ಕೇಳುವಂತೆ ಏರು ಸ್ವರದಲ್ಲಿ `ಏ, ಕಾವೇರಿ, ಒಂದು ಚೆಂಬು ಬೆಲ್ಲ-ನೀರು ತಾ. ಹರಿಣಾಕ್ಷಿ ಮಕ್ಕಳೊಡನೆ ಬಂದಿದ್ದಾಳೆ’ ಅನ್ನುತ್ತ ಹರಿಣಾಕ್ಷಿಯ ತೆಕ್ಕೆಯಿಂದ ಮೂರು ವರ್ಷದ ಅಲಕಾಳನ್ನು ತನ್ನ ಕೈಗೆ ತೆಗೆದುಕೊಂಡು ದೊಡ್ಡವಳ ಹತ್ತಿರ `ಅಪ್ಪ ಎಲ್ಲಿದ್ದಾರೆ ಪುಟ್ಟಿ?’ ಕೇಳಿದ್ದರು. `ಅಪ್ಪನನ್ನು ಕಾಲು ನೋವು ಅಂತ ಜಿಲ್ಲಾಸ್ಪತ್ರೆಗೆ ಸೇರ್ಸಿದ್ದಾರಂತೆ’ ಅವಳು ಮಾತು ಪೂರ್ತಿಗೊಳಿಸುವ ಮೊದಲೇ, `ಶಂಕರಾ…, ಮೇಲೆ ಬಸ್ಸು ಬರುವಲ್ಲಿಗೆ ಹೋಗಿ ನಿಲ್ಲು. ದುರ್ಗಾಂಬಾ ಸರ್ವಿಸ್ ಕೊನೆಯ ಟ್ರಿಪ್ ಬರುವ ಹೊತ್ತಾಯ್ತು. ನಾನು ಹೊರಟು ಹೋಗುವಷ್ಟರಲ್ಲಿ ಬಸ್ಸು ಬಂದು ವಾಪಸ್ಸು ಹೊರಟರೆ ಕಷ್ಟ. ಬಸ್ಸು ಬಂದರೆ ಐದು ನಿಮಿಷ ಕಾಯಲು ಹೇಳು. ನಾನು ಅರ್ಜೆಂಟಾಗಿ ಜಿಲ್ಲಾಸ್ಪತ್ರೆಗೆ ಹೋಗಬೇಕು. ಜಯಂತ ಮಾಷ್ಟ್ರನ್ನು ಆಸ್ಪತ್ರೆಗೆ ಸೇರ್ಸಿದ್ದಾರಂತೆ’ ಅನ್ನುತ್ತ ಕೈಯಲ್ಲಿದ್ದ ಅಲಕಾಳನ್ನು ಕೆಳಗಿಳಿಸಿ ಬಚ್ಚಲಿನತ್ತ ಓಡಿದ್ದರು. ಬೆಲ್ಲ-ನೀರುಹಿಡಿದು ಬಂದ ಕಾವೇರಿ ಗಂಡ ಬಚ್ಚಲಿನತ್ತ ಓಡುವುದು ನೋಡಿ `ಇಗೊಳ್ಳಿ. ಸ್ವಲ್ಪ ನಿಲ್ಲಿ. ಅಲ್ಲಿ ಚಿಮಣಿ ಇಟ್ಟಾಗಲಿಲ್ಲ ಮಾರಾಯರೆ. ಚೇಳೊ, ಕಟ್ಟಬುಳಕ್ಕರಿಯೊ ಚುರುಟಿ ಮಲಗಿಕೊಂಡಿದ್ರೆ ಅದರ ಮೇಲೇ ಕಾಲಿಟ್ಟೀರಿ. ಈಗ ದೀಪ ತರ್ತೇನೆ.’ ಅನ್ನುತ್ತ ಬೆಲ್ಲ-ನೀರನ್ನು ಮಕ್ಕಳ ಕೈಯಲ್ಲಿಟ್ಟು ಮತ್ತೆ ಒಳಗೆ ಓಡಿದ್ದರು. ಕಾವೇರಿ ಚಿಮಣಿ ಬುಡ್ಡಿ ಹಿಡಿದು ಬರುವವರೆಗೆ ಕಾಯುವ ತಾಳ್ಮೆ ಇಲ್ಲದ ಬಲ್ಲಾಳರಿಗೆ ಅಭ್ಯಾಸ ಬಲದಿಂದ ಹಂಡೆಯ ಮುಚ್ಚಳ ತೆಗೆದು ಕಾಲಿಗೆ ನೀರು ಸೋಕಿಸಿ ಆಗಿತ್ತು. ದೀಪವನ್ನು ಕಟ್ಟೆಯ ಮೇಲಿಟ್ಟ ಕಾವೇರಿ `ಹಾಗೆ ಆಸ್ಪತ್ರೆಗೆ ಸೇರಿಸಲು ನಮ್ಮ ಜಯಂತನಿಗೆ ಆಗಿದ್ದಾದರೂ ಏನಂತೆ ಅಂತ?!’ ಅನ್ನುತ್ತ ಅಲ್ಲೇ ನಿಂತವರಿಗೆ ಗದರಿಬಿಟ್ಟಿದ್ದರು.

`ಆ ಹೆಣ್ಣು ಕಂಗಾಲಾಗಿದೆ ಪಾಪ. ಅವಳಿಗೆ ಎಂತ ವಿವರವೂ ಗೊತ್ತಿಲ್ಲ. ಮಕ್ಕಳನ್ನು ಆಡಿಸುವಾಗ ಬಿದ್ದು ಕಾಲಿಗೆ ಪೆಟ್ಟಾಗಿರಬೇಕು. ನೀನು ಬೇಗ ಹೋಗಿ ಹೆಗಲಿಗೆ ಹಾಕುವ ನನ್ನ ಬೈರಾಸು, ಆ ನೀಲಿ ಚೌಕ ಇರುವ ಅಂಗಿ, ಕೆಂಪು ಕಂಬಿಯ ಬಿಳಿ ಮುಂಡು ತೆಗೆದಿಡು. ಹರಿಣಾಕ್ಷಿಗೆ ಧೈರ್ಯ ಹೇಳಿ ಮನೆಗೆ ಕಳಿಸು. ಜಯಂತನನ್ನು ಇವತ್ತೇ ಮನೆಗೆ ಕಳಿಸ್ತಾರಂತಾದ್ರೆ ಕಾರು ಮಾಡಿಕೊಂಡು ರಾತ್ರಿಯೇ ಬರ್ತೇನೆ.’ ಬಲ್ಲಾಳರು ಮಾತು ಮುಗಿಸುವ ಮೊದಲೇ ಕಾವೇರಿ `ಪಾಪ! ಆ ಗಂಡ-ಹೆಂಡತಿಗೆ ಕಷ್ಟಕ್ಕೆ ಅಂತ ಆಗುವ ಸಂಬಂಧಿಕರಿಲ್ಲ. ಅಣ್ಣ ಅನಿಸಿಕೊಂಡವ ಹೆಸರಿಗೆ ಮಾತ್ರ. ಎಲ್ಲಿ ಹೋಗಿ ಸ್ಪಿರಿಟ್ಟು ಕುಡಿದು ಬಿದ್ದಿರ್ತಾನೊ.’ ಮಾತಾಡುತ್ತಲೇ ಬಲ್ಲಾಳತಿಯೂ ಆಕೆ ಹರಿಣಾಕ್ಷಿಗೆ ಸಮಾಧಾನ ಹೇಳಲು ಹೋಗಿಯಾಗಿತ್ತು.

ಆದರೆ, ಆ ರಾತ್ರಿ ಜಯಂತನನ್ನು ಮನೆಗೆ ಕರೆತರುವುದಿರಲಿ ಮುಂದಿನ ಮೂರು ತಿಂಗಳು ಜಯಂತನನ್ನು ಹೊತ್ತುಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಬೇಕಾಗಿ ಬಂದಿತ್ತು. ಮಲ-ಮೂತ್ರ, ರಕ್ತ ಪರೀಕ್ಷೆ ಅತ್ಯಾಧುನಿಕ ವೈದ್ಯಕೀಯ ಯಂತ್ರಗಳೊಳಗೆ ಅವನನ್ನು ತುರುಕಿಸಿ ತೆಗೆದರೂ ಕಾಯಿಲೆ ಪತ್ತೆಯಾಗಲೇ ಇಲ್ಲ. ಆಸ್ಪತ್ರೆಗೆ ಸೇರಿದ ಮೊದಲ ದಿನಗಳಲ್ಲಿ ಎಡದ ಕಾಲು ಶರೀರವನ್ನಾಧರಿಸಲು ಸಹಕಾರ ನೀಡುತ್ತಿದುದು ದಿನ ಕಳೆದಂತೆ ಅದೂ ಕುಸಿಯಲಾರಂಭಿಸುತ್ತಿದೆ. ಜೊತೆಗೆ ಜಯಂತನ ಮಾನಸಿಕ ಸ್ಥೈರ್ಯವೂ ಅನ್ನುವುದು ಬಲ್ಲಾಳರಿಗೆ ಅರ್ಥವಾಗಿದ್ದು ಸುರೇಶನ ಹೃದಯ ಭೇದಿಸುವ ಅಳುವಿನ ಮೂಲಕ. ಕತ್ತಲನ್ನು ಬಿರಿದು ಬೆಳಕು ಹರಿದಿರದ ಆ ಬೆಳಗಿನ ಜಾವದಲ್ಲಿ ಎದೆ ಬಿರಿಯುವ ರೋದನ ಕೇಳಿ ನಿದ್ದೆಯ ಮಂಪರಿನಲ್ಲಿದ್ದ ಬಲ್ಲಾಳರು ದಡಕ್ಕನೆದ್ದು ಕುಳಿತರೆ ಸುರೇಶ ತಾನು ಮಲಗಿದ ಮಂಚದ ಎರಡೂ ಬದಿಗೆ ಕೈಗಳಿಂದ ಬಲ ಹಾಕಿ ಏಳಲು ಪ್ರಯತ್ನಿಸಿ ಸೋತವನಂತೆ ಅದೇ ಭಂಗಿಯಲ್ಲಿ ತಲೆ ಹಿಂದಕ್ಕೆ ವಾಲಿಸಿ ಸೂರು ನೋಡುತ್ತ ಒಳಗಿನ ಅಸಹಾಯಕತೆಯನ್ನೆಲ್ಲ ಹೊರ ಹಾಕುವವನಂತೆ ಬಾಯಿ ಅಗಲಿಸಿ ಗಂಟಲೊಡೆಯುವಂತೆ ರೋದಿಸುತ್ತಿದ್ದ. ಓಡಿ ಹೋಗಿ ಅವನ ತಲೆಯಡಿಗೆ ತಮ್ಮ ತೊಡೆ ಇಟ್ಟು ಕುಳಿತ ಬಲ್ಲಾಳರು ಅವನ ತಲೆಯನ್ನು ನೇವರಿಸತೊಡಗಿದರು. `ಬಲ್ಲಾಳ ಮಾವ, ನನಗೊಂದಿಷ್ಟು ವಿಷ ಕೊಡಿ. ನನ್ನ ಎಡದ ಕಾಲೂ ಹೊರಟುಹೋಯ್ತು. ನಾನು ಪೂರ್ತಿ ನಾಶ ಆದೆ ಬಲ್ಲಾಳ ಮಾವ. ನಂಗೆ ಅರ್ಥವಾಗ್ತಿದೆ. ಆ ಹೆಮ್ಮಾರಿ ನನ್ನನ್ನೂ ಬಲಿ ತೆಗೆದುಕೊಂಡಿತು.’

ಜಯಂತ ಹೇಳುತ್ತಿದ್ದರೆ ಬಲ್ಲಾಳರಿಗೆ ಬೆನ್ನುಹುರಿಯಲ್ಲಿ ಹಾವು ಹರಿದ ಅನುಭವ. ನಾಲ್ಕೈದು ದಿನಗಳಿಂದ ಅವರ ಒಳ ಮನಸ್ಸು ಅದನ್ನೇ ಶಂಕಿಸಲಾರಂಭಿಸಿತ್ತು. ಮೂರು ವರ್ಷವಾದರೂ ತೆವಳುವ ಜಯಂತನ ಸಣ್ಣ ಮಗಳು, ಕೈ-ಕಾಲುಗಳು ಕೊಕ್ಕೆಗಟ್ಟಿದ ಸುಲೇಮಾನ್ ಬ್ಯಾರಿ, ಕೈ-ಕಾಲುಗಳ ಬೆರಳುಗಳಿರಬೇಕಾದಲ್ಲಿ ಮೊಂಡಾಗಿರುವ ಅಂಗೈ-ಅಂಗಾಲುಗಳಿರುವ ಜಯ ಪಾಠಾಳಿಯ ಮಗಳು, ಹದಿನೆಂಟನೆ ವರ್ಷದಲ್ಲಿ ಇದ್ದಕ್ಕಿದ್ದಂತೆ ಬೆಳೆಯಲಾರಂಭಿಸಿದ ತಲೆಯನ್ನು ಹೊತ್ತುಕೊಳ್ಳಲಾರದೆ ದೇವಸ್ಥಾನದ ಹೊರಾಂಗಣದ ಕೆರೆಗೆ ಹಾರಿ ಸತ್ತು ಹೋದ ಪರಮೇಸ ಭಟ್ಟರ ಮಗ ವೆಂಕಪ್ಪ ಇವರೆಲ್ಲ ಕಣ್ಮುಂದೆ ಸುಳಿದ ಕ್ಷಣದಲ್ಲೇ ಜಯಂತನನ್ನೂ ಆ ಹೆಮ್ಮಾರಿ ಬಲಿತೆಗೆದುಕೊಳ್ಳದಿರಲಿ ಅಂದುಕೊಳ್ಳುತ್ತ ಮನೆತನದ ದೈವ ರಕ್ತೇಶ್ವರಿಗೆ ಹರಕೆ ಹೊತ್ತಿದ್ದರು. ಈಗ ಜಯಂತನೇ ಹಾಗನ್ನುವಾಗ ಅವನ ಬಾಯಿಗೆ ಕೈ ಅಡ್ಡ ಹಿಡಿದು `ಇಷ್ಟು ಬೇಗ ಹಾಗೆಲ್ಲ ತೀರ್ಮಾನ ಮಾಡ್ಬೇಡ ಜಯಂತ. ನಾವು ಇವತ್ತೇ ಮಣಿಪಾಲಕ್ಕೆ ಹೋಗುವಾ.’ ಬಲ್ಲಾಳರು ಜಯಂತನಿಗೆ ಧೈರ್ಯ ಹೇಳುವ ನೆಪದಲ್ಲಿ ತನಗೇ ಧೈರ್ಯ ತುಂಬಿಕೊಳ್ಳುತ್ತ ಅವನ ಕಾಲು ಸವರಿದರು. ಆ ದಿನವೇ ಮಣಿಪಾಲದ ದಾರಿ ಹಿಡಿದಾಗಿತ್ತು. ಆದರೆ, ಶೇಖರ ಬಲ್ಲಾಳರಿಗೆ ಉಳಿದಿದ್ದು ದಿನವುರುಳಿದಂತೆ ಎಲ್ಲಾ ಭರವಸೆ ಹುಸಿಯಾಗಿ ಸೊಂಟದ ಕೆಳಗೆ ಪೂರ್ತಿ ಬಲ ಕಳೆದುಕೊಂಡ ಜಯಂತನನ್ನು ಅಂಬಾಸೆಡರ್ ಕಾರಿನಲ್ಲಿ ಹಾಕಿಕೊಂಡು ಮನೆಗೆ ಕರೆತರುವ ಅಸಹಾಯಕ ಜವಾಬ್ದಾರಿ.

ಸುಖದ ನಿರೀಕ್ಷೆಯೇ ಇಲ್ಲದೆ ಬದುಕಿನ ನೊಗ ಹೊತ್ತವಳ ಮುಖದಲ್ಲಿ ಯಾತ್ರೆ ನಿಗದಿಯಾದ ಮೇಲೆ ಸಣ್ಣ ಸಂಭ್ರಮದ ಕಳೆ ಗುರುತಿಸಿದ್ದ ಜಯಂತನಿಗೆ ಈಗ ಯಾತ್ರೆಯ ಮುನ್ನಾದಿನ ತನ್ನ ಅಸಹಾಯಕತೆಗೆ ಅವಳನ್ನು ಬಲಿಪಶು ಮಾಡಿ ಅವಮಾನಿಸಿದೆನಲ್ಲ. ಒಂದು ವೇಳೆ ಇದೇ ನೋವಿನಲ್ಲಿ ನಾಳೆ ಅವಳು ಹೊರಡಲು ಸಿದ್ಧಳಾಗದಿದ್ದರೆ ಅನ್ನುವ ಅನುಮಾನ ಕಾಡಿತ್ತು.

ಮಣಿಪಾಲ ಆಸ್ಪತ್ರೆಯಿಂದ ಮನೆಗೆ ಹೋಗುವ ದಿನ ಬೀಜದ ಗುಡ್ಡೆಗೆ ಹಾಕಿದ ಬೇಲಿ ಬದಿಯ ತಗ್ಗು-ದಿಣ್ಣೆಗಳಿಂದ ಕೂಡಿದ ಮಣ್ಣಿನ ದಾರಿಯ ಕೊನೆಯ ತಿರ್ಗಾಸಿನವರೆಗೆ ಮಾತ್ರ ಕಾರು ಹೋಗುವುದರಿಂದ ಅಲ್ಲಿಗೇ ಬಲ್ಲಾಳರ ಆಳು ಗುರುವ, ಜಯಂತನ ಚಿಕ್ಕಪ್ಪನ ಮಗ ಜಯೇಶ ಕುರ್ಚಿಯೊಡನೆ ಬಂದು ನಿಂತಿದ್ದರು. ನಾಲ್ಕು ಹೆಜ್ಜೆ ಕಾಲು ದಾರಿಯಲ್ಲಿ ನಡೆದರೆ ತಗ್ಗಿನಲ್ಲಿ ಕಾಣುವ ನಾಡ ಹೆಂಚಿನ ಪುಟ್ಟ ಮನೆಗೆ ಗುಡ್ಡದ ಇಳಿಜಾರಿನಲ್ಲಿ ಜಯಂತನನ್ನು ಕುರ್ಚಿಯಲ್ಲಿ ಕೂರಿಸಿಕೊಂಡು ಹೊತ್ತುಕೊಂಡು ಹೋಗುವುದು ಮೂರು ಜನರಿಗೆ ಅಷ್ಟೇನು ಕಷ್ಟದ ಕೆಲಸವಾಗಿರಲಿಲ್ಲ. ಆದರೆ ಕಷ್ಟವಾಗಿದ್ದು ಮನಸಿಗೆ. ಒಬ್ಬರ ಮುಖ ಒಬ್ಬರು ನೋಡಿಕೊಂಡರೆ ಮೂವರ ಕಣ್ಣುಗಳೂ ದೇವಸ್ಥಾನದ ತುಂಬಿದ ಕೆರೆ. ಪ್ರತಿಯೊಬ್ಬರಿಗೂ ಇನ್ನೊಬ್ಬರ ಕಾಲು ತಡವರಿಸುತ್ತಿರುವುದೇಕೆಂದು ಅರ್ಥವಾಗಿತ್ತು.

ಅಂಗಳದಲ್ಲಿ ನಿಂತು ಇವರ ದಾರಿ ಕಾಯುತ್ತಿದ್ದ ಹರಿಣಾಕ್ಷಿಯನ್ನು ಕಂಡೊಡನೆ ಜಯಂತ `ಹರಿಣಿ, ನಾನು ಆರು ವರ್ಷದವನಿದ್ದಾಗ ಕಾಲಿನಲ್ಲಿ ಹುಣ್ಣಾಗಿ ನಡೆಯಲಾಗದೆ ಅಪ್ಪನ ಹೆಗಲಿನಲ್ಲಿ ಸವಾರಿ ಮಾಡಿದ್ದೆ. ಈಗ ನೋಡು ಮಾರಾಯ್ತಿ ನನ್ನ ಸೌಭಾಗ್ಯ! ಪಲ್ಲಕ್ಕಿ ಸೇವೆ ಅನುಭವಿಸ್ತಿದ್ದೇನೆ. ಇನ್ನು ಚಾಮರ ಸೇವೆಯೊಂದು ಬಾಕಿ’.

ಅವನು ಮಾತು ಮುಗಿಸುವ ಮೊದಲೇ ಹರಿಣಾಕ್ಷಿ `ನಿಮ್ಮ ಈ ಸೌಭಾಗ್ಯಕ್ಕೆಲ್ಲ ವಾರದೊಳಗೆ ಪಾಣಾಜೆ ವೈದ್ಯರಿಂದ ಗತಿಕಾಣಿಸ್ತೇವೆ ನೋಡಿ’ ಅಂದವಳೇ, `ಬಲ್ಲಾಳರೇ, ಸ್ವಲ್ಪ ಹೊತ್ತು ಜಗಲಿಯಲ್ಲೇ ಕೂರಿಸಿ. ಚಾಯ ಕುಡಿದಾದ ಮೇಲೆ ಮಲಗಿಸಿದರಾಯ್ತ’ ಅನ್ನುತ್ತ ಒಳ ಸರಿದಳು. ಬಟ್ಟಲು, ಲೋಟ, ಪುಂಡಿ-ಲಾಂಬಿನ ಚಟ್ನಿ ಎಲ್ಲವನ್ನು ಹರಿಣಾಕ್ಷಿ ಜಗಲಿಗೇ ತಂದಿಟ್ಟು ಜಯಂತನಿಗೆ ಕೈ ತೊಳೆಯಲು ನೀರು ತಂದಳು.

`ಇಷ್ಟು ದಿನ ಅಲಕಾಳ ಚಾಕ್ರಿ ಮಾಡಿದರೆ ಆಗಿತ್ತು. ಇನ್ನು ಈ ಗೋಣನ ಚಾಕ್ರಿಯೂ ಸುರುವಾಯ್ತು ನೋಡು.’

`ಜಯಂತಾ, ಚಾಕ್ರಿ ವಿಚಾರ ಪುರುಸೊತ್ತಿನಲ್ಲಿ ಮಾತಾಡು. ಈಗ ಹೊಟ್ಟೆಗೆ ಹಾಕುವಾ’ ಅನ್ನುತ್ತ ಬಲ್ಲಾಳರು ತಾನೇ ಬಟ್ಟಲಿಗೆ ಪುಂಡಿ-ಚಟ್ನಿ ಬಡಿಸಿ ಅವನ ಕೈಗೆ ಕೊಟ್ಟರು. ನಾಲ್ಕು ಪುಂಡಿ ತಿಂದು ಸುರ್ರನೆ ಚಾಯ ಕುಡಿದ ಗುರುವ, `ಹರಿಣಕ್ಕ, ಚಾಯ, ಲಾಂಬಿನ ಚಟ್ನಿ ಒಳ್ಳೆ ರುಚಿ ಉಂಟು. ಈ ಧಣಿಗಳ ಮನೆಯಲ್ಲಿ ಯಾವಾಗ್ಲೂ ಕನರಟೆ ಚಾಯ ಕುಡಿದು ನಾಲಗೆಯೇ ಕನರಿತ್ತು’ ಅಂದುಬಿಟ್ಟ.

`ಎಂತ ಮಾಡುವುದು ಹೇಳು. ನಿಂಗೆ ಗೊತ್ತಿಲ್ಲದ್ದೇನಲ್ಲ. ನಮ್ಮ ಯಜಮಾಂತಿ ಬೆಳಗ್ಗೆ ಕುದಿಸಿದ ಚಾಯದ ಚರಟಕ್ಕೇ ಮತ್ತೆ ಸ್ವಲ್ಪ ಹುಡಿ ಹಾಕಿ ಕುದಿಸ್ತಾಳೆ. ಅದು ಕನರದೇ ಇರ್ತದಾ? ನೀನು ಹೀಗೆ ಹೇಳಿದ್ದೇನಾದರೂ ಅವಳ ಬಾಯಿಗೆ ಬಿದ್ರೆ ನನ್ನ ಗತಿ
ಗೋವಿಂದಾ.’ ತನ್ನ ಮಾತಿಗೆ ಎಲ್ಲರಿಗಿಂತ ಜೋರಾಗಿ ನಕ್ಕವನು ಜಯಂತ ಅನಿಸಿ ಖುಷಿಯಾಯ್ತು ಬಲ್ಲಾಳರಿಗೆ.

`ಗುರುವ, ನಿನ್ನಿಂದ ಒಂದು ಉಪಕಾರ ಆಗಬೇಕಲ್ಲ ಮಾರಾಯ. ಆ ಹರಗಣ ತುಂಬಿದ ಕೋಣೆಯನ್ನು ಒತ್ತರೆ ಮಾಡಿ ನನ್ನ ಮಂಚವನ್ನು ಅಲ್ಲಿಯ ಕಿಟಕಿ ಬದಿಗೆ ಹಾಕಬೇಕು.’

ಜಯಂತ ಮಾತು ಮುಗಿಸುವ ಮೊದಲೇ ಹರಿಣಾಕ್ಷಿ `ಅದೆಲ್ಲ ಎಂತದ್ದೂ ಬೇಡ. ಆ ಕೋಣೆಗೆ ಸಾರಣೆಯೇ ಇಲ್ಲ. ಈ ವರ್ಷ ಕೈ ಮಣ್ಣು ಹಾಕಲಿಲ್ಲ. ನಿಮಗೆ ಈ ಕೋಣೆಯಲ್ಲೇ ಮಲಗ್ಲಿಕ್ಕೆ ಏನು ಕಷ್ಟ? ಇಷ್ಟಕ್ಕೂ ಹೆಚ್ಚೆಂದರೆ ಒಂದೆರಡು ತಿಂಗಳು ಅಷ್ಟೆ. ನಾನು ನಿನ್ನೆ ಪಾಣಾಜೆಗೆ ಹೋಗಿ ಬಂದಿದೇನೆ. ನೀವು ಮನೆಗೆ ಬಂದ ಮೇಲೆ ಇಲ್ಲಿಗೇ ಬಂದು ಮದ್ದು ಕೊಡ್ತೇನೆ ಹೇಳಿದ್ದಾರೆ ವೈದ್ಯರು’ ಅಂದಳು.
`ನೀನು ಇಷ್ಟು ಬೇಗ ಯಜಮಾಂತಿ ಆಗಿ ಆಯ್ತ? ಈಗ ಆಸ್ಪತ್ರೆಗೆ ಕಾಸು ಪರಡಿದ್ದಾಯ್ತು. ಡಾಕ್ಟ್ರು ಚೀಟಿಯಲ್ಲಿ ಬರೆದುಕೊಟ್ಟ ಮದ್ದು ಯಾವಾಗಲೂ ತಿನ್ನಬೇಕಂತೆ. ಅದಕ್ಕೆ ಕಾಸೆಲ್ಲಿಂದ? ಊಟಕ್ಕೆ ಗತಿ ಎಲ್ಲಿಂದ? ಅಂತ ನನ್ನ ಚಿಂತೆ. ಶಾಲೆ ಕೆಲಸವೂ ಇಲ್ಲ. ರಬ್ಬರ್ ಹಾಲು ತೆಗೆಯುವುದೂ ಇಲ್ಲ. ನಿನ್ನ ಬೀಡಿಯಲ್ಲಿ ಗಂಜಿ ಬೇಯಿಸುವುದಾ? ಮದ್ದು ಮಾಡುವುದಾ? ಇಂಗ್ಲಿಷ್ ಮದ್ದಿನಲ್ಲಿ ಮಗಳಿಗೆ ಗುಣ ಕಾಣಲಿಲ್ಲ ಅಂತ ಆಯುರ್ವೇದ-ಹೊಮಿಯೋಪತಿ, ಬೈದ್ಯರು ಅಂತ ನಾಯಿ ತಿರುಗಿದ ಹಾಗೆ ತಿರುಗಿದ್ದಾಯ್ತು. ಗುಣ ಸಿಕ್ಕಿತಾ? ಗೇರು ತೋಟದಲ್ಲಿ ಕೆಲಸ ಮಾಡ್ತಿದ್ದ ಸುಲೇಮಾನ್ ನರಕ್ಕ ಬರ್ಲಿಲ್ವಾ. ನಂಗೂ ಅದೇ ಗತಿ. ಅಲಕಾ ತೆವಳಿಕೊಂಡಾದ್ರು ಮನೆಯೊಳಗೆಲ್ಲ ತಿರುಗ್ತಾಳೆ. ಅವಳು ಬಂದು ಎತ್ತಿಕೊ ಅಂತ ಹಠ ಮಾಡಿದ್ರೆ ನಾನು ಏನು ಮಾಡ್ಲಿ? ಈ ಕೋಣೆಯೊಳಗಾದ್ರೆ ಅವಳು ಬರುವುದಿಲ್ಲ.’

ಜಯಂತ ಇದ್ದಕ್ಕಿದ್ದಂತೆ ಸ್ವರ ಏರಿಸಿ ಮಾತು ಆರಂಭಿಸಿದಾಗ ಕಕ್ಕಾಬಿಕ್ಕಿಯಾದ ಹರಿಣಾಕ್ಷಿಯ ಮುಖ ಕಂದಿದ್ದನ್ನು ಗಮನಿಸಿದ ಬಲ್ಲಾಳರಿಗೆ ಕೆಡುಕೆನಿಸಿತು. ಜಯಂತನನ್ನು ಮಣಿಪಾಲದಿಂದ ಡಿಸ್‌ಚಾರ್ಜ್‌ ಮಾಡಿಸುವ ಎರಡು ದಿನಗಳ ಹಿಂದೆ ಬಲ್ಲಾಳರು ಊರಿಗೆ ಬಂದು ಹರಿಣಾಕ್ಷಿಗೆ ಜಯಂತನ ಸ್ಥಿತಿ ವಿವರಿಸಿ ಅವನ ಮುಂದೆ ಅತ್ತರೆ ಅವನು ಇನ್ನಷ್ಟು ಕುಗ್ಗಬಹುದು ಅಂದಿದ್ದರು.
ಅಂದು ಹೆಗಲಿಗೆ ತಲೆ ಇಟ್ಟು ಅತ್ತವಳನ್ನು ಸುಳ್ಳು ಸುಳ್ಳೇ ಭರವಸೆ ಕೊಡುತ್ತ ಸಂತೈಸುವ ಬದಲು ಅವಳ ಬೆನ್ನು ನೇವರಿಸುತ್ತ ಮುಂದಿನ ದಿನಗಳ ಕರಾಳತೆಯನ್ನು, ಅವಳದನ್ನು ಸಹ್ಯವಾಗಿಸಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಅರ್ಥ ಮಾಡಿಸಿದ್ದರಿಂದ ಹರಿಣಾಕ್ಷಿ ಜಯಂತನಿಗೆ ಹೇಳುವ ನೆಪದಲ್ಲಿ ತನಗೆ ತಾನೇ ನಿರೀಕ್ಷೆ ಹುಟ್ಟಿಸಿಕೊಳ್ಳಲು ಮಾತಾಡಿದ್ದಳೆಂದು ಬಲ್ಲಾಳರಿಗೆ ಅರ್ಥವಾಗಿತ್ತು.

`ಆಯ್ತು ಜಯಂತಣ್ಣಾ, ನಾನು ಅರ್ಧ ಘಂಟೆಯಲ್ಲಿ ಆ ಕೋಣೆ ಒತ್ತರೆ ಮಾಡ್ತೇನೆ’ ಇನ್ನು ಮಾತು ಬೇಡ ಅನ್ನುವಂತೆ ತಲೆಗೆ ಮುಂಡಾಸು ಕಟ್ಟಿ ನಿಂತೇ ಬಿಟ್ಟಿದ್ದ ಗುರುವ. ಜಯೇಶನೂ ಅವನ ಸಹಾಯಕ್ಕೆ ನಿಂತಿದ್ದರಿಂದ ಒತ್ತರೆ ಕೆಲಸ ಬೇಗ ಮುಗಿದಿತ್ತು. ಮೂರೂ ಜನ ಸೇರಿ ಮಂಚ ಹೊತ್ತು ತಂದು ಅಲ್ಲಿ ಹಾಕಿ ಕಿಟಕಿ ಬದಿಗೆ ಸರಿಸಿದರು. ಜಯಂತನನ್ನು ಆ ಮಂಚದ ಮೇಲೆ ಮಲಗಿಸುವಾಗ ಬಲ್ಲಾಳರಿಗೆ ಅವನ ಮುಖ ನೋಡುವ ಧೈರ್ಯವಾಗಲಿಲ್ಲ.

`ಬಲ್ಲಾಳ ಮಾವ, ಈ ಮಂಚ ಗಿಳಿಬಾಗಿಲಿನಷ್ಟೇ ಎತ್ತರಕ್ಕೆ ಬರುವಂತೆ ಇದರ ಕಾಲುಗಳ ಅಳತೆಗೆ ಸರಿ ಹೊಂದುವಂತೆ ಮರದ ಗೂಟ ಮಾಡಲು ಇವತ್ತೇ ತುಕ್ರಾಚಾರಿಗೆ ಹೇಳ್ತೀರಾ?’ ಜಯಂತ ತಣ್ಣಗಿನ ಸ್ವರದಲ್ಲಿ ಮುಂದಿನ ದಿನಗಳಲ್ಲಿ ಹೊರ ಜಗತ್ತಿಗೂ ತನಗೂ ಸಂಪರ್ಕ ಕೊಂಡಿಯಾಗಿರುವುದು ಈ ತೆರೆದ ಗಿಳಿಬಾಗಿಲು ಮಾತ್ರ ಅನ್ನುವುದನ್ನು ಅದಾಗಲೇ ಒಪ್ಪಿಕೊಂಡ ಧ್ವನಿಯಲ್ಲಿ ಹೇಳುತ್ತಿದ್ದರೆ ಶೇಖರ ಬಲ್ಲಾಳರು ಬಿಗಿಯುತ್ತಿದ್ದ ಗಂಟಲನ್ನು ಅದುಮಿಡಲು ವ್ಯರ್ಥ ಪ್ರಯತ್ನ ಮಾಡಿದರೂ ಅದು ಬೆತ್ತಲಾಗಿತ್ತು.
ಜಯಂತನ ನೆನಪಿನಲ್ಲಿ ತೊಯ್ಯುತ್ತಿದ್ದ ಬಲ್ಲಾಳರನ್ನು ಹಿಂದಿನಿಂದ ಮೂರ್ನಾಲ್ಕು ಮಕ್ಕಳು ಹಿಂದಿ ಮಾತಾಡುತ್ತ ದೂಡಿಕೊಂಡೇ ಮುಂದೆ ಓಡಿದರು. ಮುಗ್ಗರಿಸಿದರೂ ಸಾವರಿಸಿಕೊಂಡು ನಿಂತವರಿಗೆ ಕಣ್ಣೆದುರಿನ ಆ ಬೃಹದಾರತಿ ಹಳ್ಳಿಗಳಲ್ಲಿ ರಾತ್ರಿಯ ಹೊತ್ತಲ್ಲಿ ಸಂಚರಿಸುವಾಗ ಹಿಡಿಯುವ ಸೂಟೆಯನ್ನು ನೆನಪಿಸಿತು. ಮತ್ತೆ ಹರಿಣಾಕ್ಷಿಯತ್ತ ನೋಡಿದರು. ದಿಕ್ಕುಗೆಟ್ಟಂತೆ ನಿಂತ ಹರಿಣಾಕ್ಷಿಯನ್ನು ಆ ಭಂಗಿಯಲ್ಲಿ ನೋಡುವುದು ಕಷ್ಟವೆನಿಸಿ ಆಕಾಶ ನೋಡಿದರು. ಸೂಟೆಯಂತೆ ನಿಗಿನಿಗಿಸುತ್ತಿರುವ ಆರತಿ ಚಂದ್ರನ ತಂಪು ನುಂಗುತ್ತಿದೆ ಅನಿಸಿತು. ಬಲ್ಲಾಳರು ಕಾವೇರಿಗೆ `ನೋಡು, ನಾನು ಓ.. ಅಲ್ಲಿ ಕುಳಿತಿರುತ್ತೇನೆ. ನೀವು ಆರತಿ ಆದೊಡನೆ ಅಲ್ಲಿಗೇ ಬನ್ನಿ’ ಅನ್ನುತ್ತ ಜನರ ಗುಂಪಿನಿಂದ ದೂರ ಸರಿದರು.

***

ಜಯಂತನನ್ನು ಕುಳ್ಳಿರಿಸಿದ್ದ ಗಾಲಿ ಕುರ್ಚಿಯನ್ನು ದಶಾಶ್ವಮೇಧ ಘಾಟ್‌ನ ಸುತ್ತಲಿನ ಪರಿಸರ ಕಾಣುವಂತೆ ಗಂಗೆಯ ದಂಡೆಯಲ್ಲಿ ಸರಿಯಾದ ಜಾಗ ನೋಡಿ ನಿಲ್ಲಿಸಿದ ಮಹೇಂದ್ರ ಅವನ ಶಾಲು ಸರಿಪಡಿಸಿ ತಾನೂ ಕುಳಿತ. ದಗ ದಗ ಉರಿಯುತ್ತ ಚಟಪಟ ಸದ್ದು ಹೊರಡಿಸುವ ಚಿತೆಗಳು, ಕೆಲವು ಚಿತೆಗಳಿಂದ ಹೊರಗೆ ಚಾಚಿದ ಕಾಲುಗಳು. ಸರಿಯಾಗಿ ಬೆಂಕಿ ಹಿಡಿಯದ ಕಟ್ಟಿಗೆಗಳನ್ನು ಕೋಲುಗಳಿಂದ ಕೆದಕಿ ಒಟ್ಟುಗೂಡಿಸುವ ದೃಶ್ಯದಷ್ಟೆ ಸಾಮಾನ್ಯವಾಗಿ ಕಂಡ ಇನ್ನೊಂದು ದೃಶ್ಯವೆಂದರೆ ಸರಿದು ಬಿದ್ದ ಕಟ್ಟಿಗೆಗಳನ್ನು ಮತ್ತಷ್ಟು ಬದಿಗೆ ಸರಿಸಿ ಅವುಗಳಿಗೆ ನೀರು ಹಾಕಿ ನಂದಿಸಿಡುವ ಒಂದು ಗುಂಪು. ದೋಣಿಗಳಲ್ಲಿ ತಂದು ಸುರಿದ ಕಟ್ಟಿಗೆಗಳ ರಾಶಿ. ಕಟ್ಟಿಗೆ ಕೊಳ್ಳುವ ಜನರ ಚೌಕಾಶಿ. ಅವರು ನೋಡ ನೋಡುತ್ತಿದ್ದಂತೆ ಒಂದು ಕಡೆ ಉರಿಯುತ್ತಿದ್ದ ಚಿತೆಗೆ ನಾಲ್ಕೈದು ಜನ ನೀರು ಸುರಿದು ಕಟ್ಟಿಗೆಗಳನ್ನು ಎಳೆದು ಅರೆ ಸುಟ್ಟ ಹೆಣವನ್ನು ಹೊಳೆಗೆಸೆಯುವ ಕಾರ್ಯದಲ್ಲಿ ನಿರತರಾದರು. ದೋಣಿಯಿಂದ ಇಳಿಸಿದ ಕಟ್ಟಿಗೆಗಳನ್ನು, ಮರದ ಕುಂಟೆಗಳನ್ನು ಪೇರಿಸಿಡುತ್ತಿದ್ದ ಒಬ್ಬಾತನಲ್ಲಿ ಹಾಗೇಕೆ ಮಾಡುತ್ತಾರೆಂದು ಕೇಳಿದ್ದಕ್ಕೆ`ಶವ ತಂದ ಮಂದಿ ಚೌಕಾಸಿ ಮಾಡಿ ಕೇಳಿದಷ್ಟು ದುಡ್ಡು ಕೊಡದಿದ್ದರೆ ಹಾಗೇ ಮಾಡುವುದು. ಮರ್ಯಾದಿಯಲ್ಲಿ ಅಂತ್ಯಕ್ರಿಯೆ ಮಾಡಬೇಕಾದ್ರೆ ಬೇಡಿಕೆಯ ಮೇಲೆ ದುಡ್ಡು ಕೊಟ್ಟು ಆರಡಿ ಉದ್ದ-ನಾಲ್ಕಡಿ ಅಗಲಕ್ಕೆ ಜಾಲರಿ ಹಾಕಿದ ಆ ಜಾಗದಲ್ಲಿ ಸುಡ್ತಾರೆ’ ಅನ್ನುತ್ತ ಇವರ ಪೈಕಿ ಯಾರಾದರೂ ಸತ್ತಿರಬಹುದೊ ಅದಕ್ಕೇ ವಿಚಾರಿಸುತ್ತಿರಬಹುದೊ ಮಧ್ಯಸ್ಥಿಕೆ ವಹಿಸಿ ಏನಾದರೂ ಗಿಟ್ಟಿಸಿಕೊಳ್ಳಬಹುದೊ ಅನ್ನುವಂತೆ ಅವರನ್ನೊಮ್ಮೆ ಸಂಶಯದಿಂದ ನೋಡಿ ಭುಜ ಜಾಡಿಸಿ ತನ್ನ ಪಾಡಿಗೆ ದೋಣಿಯತ್ತ ನಡೆದಿದ್ದ.

`ಮಹಿ, ನಂಗೆ ಈ ಜನರ ದೋಣಿಯಲ್ಲಿ ಕುಳಿತು ಗಂಗೆಯಲ್ಲಿ ತೇಲುವ ಆಸೆ. ಆದರೆ, ಈ ಗಾಲಿಕುರ್ಚಿಗೆ ಅಂಟಿಕೊಂಡ ನನ್ನನ್ನು ಇಲ್ಲಿ ಯಾರು ಕೂತ್ಕೊಳಿಸ್ಲಿಕ್ಕೆ ಒಪ್ತಾರೆ ಮಾರಾಯ?’ ಅಂದ ಜಯಂತ.

`ಅದಕ್ಕೆ ಚಿಂತೆ ಮಾಡ್ಬೇಡ. ಇವರ ದೋಣಿಗಳಲ್ಲಿ ನಿನ್ನ ಎರಡು ಕುರ್ಚಿ ಇಡಬಹುದು. ಆದರೆ, ಇಲ್ಲಿ ಯಾಕೆ? ಬೋಟಿಂಗ್ ವ್ಯವಸ್ಥೆ ಇದೆಯಲ್ಲ. ಅಲ್ಲೇ ಕೇಳಿದರಾಯ್ತು.’

`ನಂಗೆ ದೋಣಿ ವಿಹಾರ ಬೇಡ ಮಾರಾಯ. ಅವರು ಕುದುರೆಗೆ ಲಗಾಮು ಹಾಕಿದ ಹಾಗೆ ಹೋಗುವವರು. ನಿಜದ ಗಂಗೆಯ ಮೇಲೆ ತೇಲುವ ಆಸೆ’.

`ಹಾಗಾದರೆ ಆ ಮನುಷ್ಯನ ಹತ್ತಿರವೇ ವಿಚಾರಿಸೋಣವಂತೆ’ ಅಂದವನೆ ಅವನ ಹತ್ತಿರ ಮಾತಾಡಿದ.

ಅವನು `ನದಿಯ ಈ ಭಾಗದಲ್ಲಿ ನೀರಿನ ಸೆಳವು ಜಾಸ್ತಿ. ಹಾಗೆಲ್ಲ ಕರೆದುಕೊಂಡು ಹೋಗಲಾಗುವುದಿಲ್ಲ’ ಅಂದಾಗ ದುಡ್ಡಿನ ಮುಖ ತೋರಿಸಿ ವ್ಯವಹಾರ ಕುದುರಿಸಿಕೊಂಡೇ ಬಂದ ಮಹೇಂದ್ರ. ದೋಣಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಕರಕಲಾಗುತ್ತಿದ್ದ ಹೆಣಗಳ ವಾಸನೆಯನ್ನೂ ಮೀರಿಸಿದ ಕೊಳಕು ನಾತವನ್ನು ಮೂಗು ಗ್ರಹಿಸುತ್ತಿರುವುದನ್ನು ನಿರ್ಲಕ್ಷಿಸಲಾಗದೆ ಮಹೇಂದ್ರ ದೋಣಿಯವನಲ್ಲಿ, `ಅದ್ಯಾಕೆ ಮಾರಾಯ ಅಷ್ಟೊಂದು ಕೆಟ್ಟ ವಾಸನೆ ಬರ್ತಿದೆ?’ ಕೇಳಿದ.

`ಓ.. ಅಲ್ಲಿ ನೋಡಿ ಸಾಬ್. ಅಲ್ಲಿಂದಲೇ ಬರ್ತಿರುವುದು ಅದು. ಆತ ಕೈ ತೋರಿಸಿದತ್ತ ಕಣ್ಣು ಹರಿಸಿದರೆ ಪಾದ ಮುಳುಗುವಷ್ಟು ನೀರಿರುವ ಆ ಜಾಗ ಗಟಾರವನ್ನೇ ಮೀರಿಸುವಂತಿತ್ತು. ಅನಾಥ ಚಪ್ಪಲಿಗಳ ರಾಶಿ. ಭಗ್ನಗೊಂಡ ದೇವರ ಮೂರ್ತಿಗಳು, ಅರೆ ಬಾಯಿ ತೆರೆದ ಪ್ಲ್ಯಾಸ್ಟಿಕ್‌ಗಳಿಂದ ಹೊರಗಿಣುಕುವ ತ್ಯಾಜ್ಯ. ಅಷ್ಟರಲ್ಲಿ ಬಿಳಿ ವಸ್ತ್ರದಲ್ಲಿ ಸುತ್ತಿದ ಶರೀರವೊಂದು ತೇಲುತ್ತ ಬಂದು ಇವರ ದೋಣಿಯನ್ನೊರೆಸಿತು. ದೋಣಿಯಾತ ಇವರ ಗಾಬರಿ ನೋಡಿ ನಗುತ್ತ `ಇಲ್ಲಿ ಕೆಲವು ಪಂಗಡದವರು ಗರ್ಭಿಣಿ ಹೆಂಗಸು ಸತ್ತರೆ, ಹಾವು ಕಚ್ಚಿ ಸತ್ತರೆ, ಸಣ್ಣ ಮಕ್ಕಳು ಸತ್ತರೆ ಹೀಗೇ ಹೆಣವನ್ನು ನೀರಿಗೆ ಬಿಡುವುದು ಮಾಮೂಲು’ ಅವನು ತನ್ನ ಬನಾರಸಿ ಹಿಂದಿಯಲ್ಲಿ ಹೇಳುತ್ತ ಹರಿಗೋಲಿನಲ್ಲಿ ಅದನ್ನು ಬದಿಗೆ ಸರಿಸುತ್ತ ಮುಂದೆ ಸಾಗಿದಾಗ ಇಬ್ಬರೂ ಸ್ತಂಭಿಸಿದರು.

ದೋಣಿ ಸ್ವಲ್ಪ ದೂರ ಸರಿದಿತ್ತೊ ಇಲ್ಲವೊ. ದೂರದಿಂದ ಮರದ ದಿಮ್ಮಿಯೊಂದು ತೇಲಿ ಬರುತ್ತಿರುವುದು ಕಂಡಿತು. ಹತ್ತಿರ ಬಂದಾಗಲೇ ಕೊಳೆತು ಉಬ್ಬರಿಸಿದ ಅರೆ ಸುಟ್ಟ ದೇಹ ಅದೆಂದು ಗೊತ್ತಾಗಿದ್ದು. ದೋಣಿಯಾತನಿಗೇನನಿಸಿತೊ. ಇವರು ಪ್ರಶ್ನಿಸುವ ಮೊದಲೇ `ಸರ್. ನಿಮ್ಗೆ ಗೊತ್ತಿಲ್ಲ ಕಾಣ್ತದೆ. ಇಲ್ಲಿ ಹೆಚ್ಚಿನ ಕಾರ್ಖಾನೆಗಳೂ ಭೂಮಿಯ ಅಡಿಯಿಂದ ಪೈಪ್ ಹಾಕಿ ಅದರ ಕೊಳಕನ್ನೆಲ್ಲ ಗಂಗೆಗೇ ಬಿಡ್ತವೆ. ಕೆಲವು ಲಾಡ್ಜಿಂಗ್‌ಗಳಿಂದ, ಹೋಟೆಲುಗಳಿಂದ, ಮನೆಗಳಿಂದ ಒಳ ಚರಂಡಿಯ ಬಾಯಿ ತೆರೆದುಕೊಳ್ಳುವುದು ಗಂಗೆಗೇ. ಎಷ್ಟು ಕೊಳಕು ಚೆಲ್ಲಿದರೂ ನಮ್ಮ ಗಂಗಾಮಾತೆ ಪರಿಶುದ್ಧಳು ಸರ್.’ ಅವನ ಧ್ವನಿಯಲ್ಲಿ ಹೆಮ್ಮೆ ಇತ್ತು. ಇಬ್ಬರೂ ಪ್ರತಿಕ್ರಿಯಿಸದಾದಾಗ ಅವನೂ ಬಾಯಿ ಮುಚ್ಚಿದ. ದೋಣಿ ಮುಂದೆ ಸಾಗಿದಾಗ ಜಯಂತ ನೀರಿನೊಂದಿಗೆ ತಾದಾತ್ಮ್ಯ ಸಾಧಿಸಿ ತಾನೇ ನೀರೊಳಗೆ ಈಜುತ್ತಿರುವ ಅನುಭೂತಿ ಪಡೆಯುವ ಪ್ರಯತ್ನಕ್ಕೆ ತೊಡಗಿದರೆ ಮಹೇಂದ್ರನಿಗೆ ವರ್ಷದ ಹಿಂದೆ ಕಾವ್ಯಳೊಂದಿಗೆ ಊಟಿ ಸರೋವರದಲ್ಲಿ ಬೋಟಿಂಗ್ ಹೋದ ನೆನಪಾಯ್ತು.

ಆಗಲೇ ಬೆಟ್ಟಿಯಾಗಿದ್ದು ಒಂದಾನೊಂದು ಕಾಲದ ಗೆಳೆಯರನ್ನು. ಇವರು ದೋಣಿ ವಿಹಾರಕ್ಕಾಗಿ ದೋಣಿ ವಿಚಾರಿಸುತ್ತಿದ್ದಾಗ ಅತ್ಯಂತ ಸಮೀಪದಿಂದ ‘ಯಾಞ್ರೀ….’ ಎಂಬ ವಿಕಾರಕೂಗು ಕೇಳಿ ಬೆಚ್ಚಿ ಅತ್ತ ಕಣ್ಣು ಹೊರಳಿಸಿದ್ದರು. ಬದಿಯಲ್ಲೇ ನಿಂತಿದ್ದ ದಂಪತಿಗಳ ಜೊತೆ ಮನುಷ್ಯಾಕೃತಿ ಎಂದು ಗುರುತಿಸಲು ಮಾತ್ರ ಸಾಧ್ಯವಿರುವ ಒಂದು ವಿಕೃತಿ. ಮೂಳೆಗಳಿಗಂಟಿದ ತೊಗಲು. ತೀವ್ರ ಬುದ್ಧಿಮಾಂದ್ಯ ಸೂಚಿಸುವ ಗಲಗಲ ಹೊರಳಿಸುವಂತೆ ಕಾಣುವ ಆಳದಲ್ಲಿರುವ ನೀಲಿ ಕಣ್ಣುಗಳು. ಹೆದರಿಕೆ ಹುಟ್ಟಿಸುವಷ್ಟು ದೊಡ್ಡದೆನಿಸುವ ಅಂಡಾಕಾರದ ತಲೆ.

ಭೋಪಾಲ್ ವಿಷಾನಿಲ ದುರಂತದ ಪರಿಣಾಮದ ಮಗುವೇನೋ ಅನಿಸುವಂತಿತ್ತು. ಆ ದಂಪತಿಗಳದ್ದು ಎಂದೋ ನೋಡಿದ ಪರಿಚಿತ ಮುಖದಂತೆ ಕಂಡದ್ದರಿಂದ ಅವರನ್ನು ಮತ್ತೊಮ್ಮೆ ಗಮನಿಸಿದ್ದ. ಅವರು ಅವನ ಬಾಲ್ಯಕಾಲ ಮಿತ್ರರು. ಸಹಜವಾಗಿಯೇ ಮಾತಿನ ನಡುವೆ ಮಗುವಿನ ಸಮಸ್ಯೆಯ ಬಗ್ಗೆ ವಿಚಾರಿಸಿದ್ದ. ಆಗಲೇ ಅವನಿಗೆ ತನ್ನೂರ, ತನ್ನ ಜನರ ಅದರಲ್ಲೂ ಒಂದಾನೊಂದು ಕಾಲದ ಅವನ ಜೀವದ ಗೆಳೆಯ ಜಯಂತ ಪೂಜಾರಿಯ ದೈನೇಸಿ ಸ್ಥಿತಿಯ ಅರಿವಾಗಿದ್ದು. ಇಡೀ ಊರನ್ನೇ ಮಾರಕ ಕಾಯಿಲೆಗಳ ಗೂಡಾಗಿಸಿದ್ದು ತಾವೆಲ್ಲ ಬಾಲ್ಯದಲ್ಲಿ ಗುಡುಗುಡು ಸದ್ದು ಕೇಳಿದೊಡನೆ ಸಂಭ್ರಮದಿಂದ ಅಂಗಳಕ್ಕೋ ಮನೆಹತ್ತಿರದ ಗುಡ್ಡೆಗೋ ಓಡಿ ಹೋಗಿ ನೋಡುತ್ತಿದ್ದ ಹೆಲಿಕಾಪ್ಟರಿನಲ್ಲಿ ಗೇರು ಗುಡ್ಡೆಗೆ ತಂದು ಸುರಿದ ಎಂಡೋಸಲ್ಫಾನ್ ಎಂಬ ದ್ರಾವಣ ಎಂದು ತಿಳಿದಾಗ ತಲ್ಲಣಿಸಿ ಹೋಗಿದ್ದ. ಜೊತೆಗೆ ಅರೆಕ್ಷಣ ಅದು ಎಂಡೋಸಲ್ಫಾನಿನಿಂದಲೇ ಇರಬಹುದಾ.. ಅಥವಾ ಇನ್ನೇನಾದರೂ.. ಅಂತನಿಸಿದ್ದೂ ಸುಳ್ಳಲ್ಲ.

ಮಹೇಂದ್ರನಿಗೆ ಕಂಪ್ಯೂಟರ್ ಪರದೆಯ ಡೆಸ್ಕ್ ಟಾಪ್‌ನಲ್ಲಿ ಇಷ್ಟರವರೆಗೆ ತೆರೆಯದೆಬಿಟ್ಟ ರಿಸೈಕಲ್‌ಬಿನ್‌ನಿಂದ ಊರ ನೆನಪು, ಗೆಳೆಯರ ಅದರಲ್ಲೂ ರಜನೀಂದ್ರ, ಹರಿಣಾಕ್ಷಿ, ಜಯಂತರ ನೆನಪನ್ನು ಹುಡುಕಿ ತೆಗೆದಂತಾಗಿತ್ತು. ಪಿ.ಯು.ಸಿ.ಗೆ ಮಂಗಳೂರು ಸೇರಿದ ಮೇಲೆ ದೇವನಗರಿಯ ಸಂಪರ್ಕ ಕಡಿಮೆಯಾಗಿತ್ತು. ಮತ್ತೆರಡು ವರ್ಷದಲ್ಲಿ ಅಜ್ಜ ತೊಟ್ಟಿಮನೆ ಆಸ್ತಿ ಮಾರಿದ ಮೇಲೆ ಅಲ್ಲಿಗೆ ಹೋಗುವ ಸಂದರ್ಭವೇ ಇರಲಿಲ್ಲ. ಕುಟುಂಬದ ಆಪ್ತರಾಗಿದ್ದ ಶೇಖರ ಬಲ್ಲಾಳರಿಗೂ ಮಹೇಂದ್ರನ ತಂದೆಗೂ ಮಾತು-ಕಥೆ ನಿಂತು ಹೋಗಿದ್ದರಿಂದ ಸಂಪರ್ಕ ಸೇತುವಾಗಬಹುದಾಗಿದ್ದ ಕೊಂಡಿಯೇ ತಪ್ಪಿ ಹೋಗಿತ್ತು. ಅದರಲ್ಲೂ ಶಾಲೆಯಲ್ಲಿ ಯಾವಾಗಲೂ ಆಟೋಟಗಳಲ್ಲಿ ಮುಂದಿರುತ್ತಿದ್ದ ತಮ್ಮ ಶಾಲೆ ಕಬಡ್ಡಿ ಚಾಂಪಿಯನ್‌ಶಿಪ್‌ ಪಡೆಯಲು ಕಾರಣನಾಗಿರುತ್ತಿದ್ದ; ಮಳೆಗಾಲದಲ್ಲಿ ತೋಡು ದಾಟುವಾಗ ಕೆಂಪು ನೀರು ನೋಡಿ ಕೈ-ಕಾಲುನಡುಗಿ ಮಧ್ಯದಲ್ಲೇ ಕುಳಿತು ಬಿಡುತ್ತಿದ್ದ ತನ್ನನ್ನು ಬೆನ್ನ ಮೇಲೆ ಉಪ್ಪಿನ ಮೂಟೆಯಂತೆ ಹೊತ್ತುಕೊಂಡು ಓಡುತ್ತಿದ್ದ ಜೀವದ ಗೆಳೆಯ ಜಯಂತ ಹಾಸಿಗೆ ವಶವಾಗಿದ್ದು ತಿಳಿದ ಮೇಲಂತು ತನ್ನ ಸೂಕ್ಷ್ಮಾತಿಸೂಕ್ಷ್ಮ ಸಂವೇದನೆಗಳನ್ನು ಜಯಂತನನ್ನು ಕಾಣದ ಹೊರತಾಗಿ ಬೇರಾವುದರ ಮೇಲೂ ಕೇಂದ್ರೀಕರಿಸಲು ಸಾಧ್ಯವಿಲ್ಲವೆನಿಸಿತ್ತು. ಬೆಂಗಳೂರಿಗೆ ಮರಳಿದವನೇ ಅನಿರ್ದಿಷ್ಟ ರಜೆಬರೆದು ಹಾಕಿ ದೇವನಗರಿಯ ದಾರಿ ಹಿಡಿದಿದ್ದ.

ಊರಿಗೆ ಬಂದ ಗೆಳೆಯನ ಮಗನನ್ನು ಬಲ್ಲಾಳರು ಪ್ರೀತಿಯಿಂದ ಅಪ್ಪಿಕೊಂಡಿದ್ದರು. ಊರಿನ ದಾರುಣತೆಯನ್ನು ಅವನ ಮನಕ್ಕೆ
ಮುಟ್ಟಿಸಿದ್ದರು. ‘ಎಂಡೋ ಸಲ್ಫಾನ್ ಸುರಿಸಲು ಆ ಹೆಲಿಕಾಪ್ಟರುಗಳು ಬಂದಾಗಲೇ ನಿನ್ನ ತೊಂಡಜ್ಜ ಊರಿಗೆ ಹೆಮ್ಮಾರಿ ಬಂತು ಅಂತ ಭವಿಷ್ಯ ನುಡಿದಿದ್ದರು. ನಮಗೆ ಆವಾಗ ಅದು ಅರ್ಥವಾಗಲೇ ಇಲ್ಲ ನೋಡು. ಅವರಿಗೆ ಕಂಡ ಸತ್ಯ ನಮಗೆ ಕಾಣುವ ಹೊತ್ತಿಗೆ ದೇವನಗರಿಯಲ್ಲಿ ಮಳೆಗಾಲ ಬಂತು ಅಂತ ಕೂಗುವ ಗೋಂಕ್‌ರ್‌ಕಪ್ಪೆ ಸ್ವರ ಕ್ಷೀಣವಾಗಿತ್ತು ಮಗ. ನಮ್ಮ ಹಟ್ಟಿಯಲ್ಲಿ ಜಾನುವಾರುಗಳಿಗೆ ಗರ್ಭ ಕಟ್ಟುವುದು ಕಡಿಮೆಯಾಗಿತ್ತು. ಕೆಲವರಂತು ತಮ್ಮ ಗದ್ದೆಗಳಿಗೆ, ತರಕಾರಿ ಬೆಳೆಗೂ ಅದೇ ಮದ್ದು ಬಿಟ್ಟು ಹುಳದ ಬಾದೆಗೆ ಮದ್ದು ಅರೆದೆವು ಅಂತ ಖುಷಿಯಿಂದ ಬೀಗಿದ್ದೇ ಬೀಗಿದ್ದು. ಈಗೇನಾಯ್ತು ನೋಡು.’ ಅನ್ನುತ್ತ ನಿಟುಸಿರಿಟ್ಟಿದ್ದರು.
ಅವರವರ ಭಾವ ಕೋಶದೊಳಗೆ ಹೊಕ್ಕು ಮುನಿಗಳಂತೆ ಕುಳಿತಿದ್ದ ಇವರಿಬ್ಬರ ದೀರ್ಘ ಮೌನಕ್ಕೆ ಪ್ರತಿಕ್ರಿಯೆ ಎಂಬಂತೆ ದೋಣಿಯಾತ ಏರು ಧ್ವನಿಯಲ್ಲಿ ಓ…ಲೆ…ಲಾ… ಅನ್ನುತ್ತ ಹಾಡಲಾರಂಭಿಸಿದ್ದರಿಂದ ಮಹೇಂದ್ರನ ಮೆಲುಕಾಟಕ್ಕೆ ತಡೆ ಬಿತ್ತು.
ಜಯಂತನತ್ತ ನೋಡಿದ.

ಜಯಂತನಿಗೊ ಅದಾಗಷ್ಟೆ ನೀರಿನ ಸ್ಪರ್ಶ ದಕ್ಕಿತ್ತು. ಅದು ಅವನ ಒಳಹೊರಗನ್ನಾವರಿಸಿಕೊಂಡು ನೇವರಿಸಲಾರಂಭಿಸಿತ್ತು. ಪುಳಕಗೊಂಡ ಮನಕ್ಕೆ ವಿಶಾಲ ಪಾತ್ರದ ಗಂಗೆಯನ್ನು ಇಡಿಯಾಗಿ ತಬ್ಬಿಕೊಳ್ಳವ ತುಡಿತ. ಹೇಗಾದರೂ ಸರಿ. ಗಂಗೆಯನ್ನು ಸ್ಪರ್ಶಿಸಬೇಕು. ಗಂಗೆಯೊಳಗೆ ಧುಮುಕಿ ಅವಳ ಒಳ-ಹೊರಗುಗಳಲ್ಲಿ ಉರುಳಾಡಬೇಕೆಂಬ ತೀವ್ರ ಅನಿಸಿಕೆಯ ಉತ್ತುಂಗ ತಲುಪುತ್ತಿದ್ದವನಿಗೆ ಹಾಡು ಮತ್ತಷ್ಟು ಸಾತ್ ನೀಡಿದಂತಾಗಿರಬೇಕು. ಮಹೇಂದ್ರನಿಗೆ ಗೆಳೆಯ ತಪಸ್ಸಿಗೆ ಕುಳಿತವನಂತೆ ಕಂಡ. ದಡದತ್ತ ನೋಡಿದ. ಅಲ್ಲಲ್ಲಿ ಉರಿಯುತ್ತಿರುವ ಚಿತೆಗಳ ಬೆಂಕಿ ಗಾಳಿಯ ಹೊಡೆತಕ್ಕೆ ವಾಲಾಡುತ್ತಿದುದರಿಂದ ನೀರಿನಲ್ಲಿ ಅದರ ಪ್ರತಿಫಲನ ಗಂಗೆಯೊಳಗೆ ಕುಲುಮೆ ಉರಿಯುವಂತೆ ಕಂಡಿತು. ಅದನ್ನೇ ನೋಡುತ್ತ ಪದ್ಯಕ್ಕೆ ಕಿವಿಯಾದವನಿಗೆ ತೊಂಡಜ್ಜನ ನೆನಪು.. ಅದೇ ಗುಂಗಿನಲ್ಲಿ ಜೊಂಪು ಹತ್ತಿತು.

“ಮಗಾ, ನಮ್ಮ ಭೂಮಿ ನಮ್ಮ ನೀರು ಎಲ್ಲವನ್ನೂ ಕಾಳಿಂದಿ ಮಡು ಮಾಡ್ತಾರೆ.” ಹೆಲಿಕಾಪ್ಟರ್ ನೋಡಲು ಗೇರು ಗುಡ್ಡೆಯ ಬುಡಕ್ಕೆ ಹೊರಟಾಗ ಅಜ್ಜ ಹೇಳುತ್ತಿದ್ದ ಮಾತು.

“ನಿಜ ಅಜ್ಜ. ಎಲ್ಲ.. ಎಲ್ಲವೂ ಕಾಳಿಂದಿ ಮಡು ಆಯ್ತು ಅಜ್ಜ..” ಜೊಂಪಿನಲ್ಲೇ ಕನವರಿಸಿದ. ಇದ್ದಕ್ಕಿದ್ದಂತೆ ಸಹಿಸಲಸಾಧ್ಯ ವಾಸನೆ. ಹೊಕ್ಕುಳ ಬುಡದಿಂದಲೇ ವಾಕರಿಕೆ ಒದ್ದುಕೊಂಡು ಬಂತು. ದಡಕ್ಕನೆದ್ದು ಕುಳಿತ. ಕಣ್ಣೆದುರು ಕರ್ರಗಿನ ವಿಕಾರ ಸ್ತ್ರೀ. ನೇರವಾಗಿ ಗಟಾರದಿಂದ ಎದ್ದು ಬಂದಿದ್ದಾಳೆ. ತಲೆಯಿಂದ ಕಾಲವರೆಗೂ ಇಳಿಯುತ್ತಿರುವ ಕೊಚ್ಚೆ. ಅದು ಅವಳ ಮೈ ವಾಸನೆ. ಬಹುಶಃ ಹುಚ್ಚಿ ಇರಬಹುದು. ಎದ್ದು ಓಡಲು ಪ್ರಯತ್ನಿಸಿದ. ಆದರೆ ನೆಲದಿಂದ ಕಾಲು ಕೀಳಲಾಗುತ್ತಿಲ್ಲ!. ಒಮ್ಮೆ ಗಹಗಹಿಸಿದ ಆಕಾರ ಅಳುಮುಖ ಮಾಡಿ;

“ಗೆಳೆಯನಿಗೆ ಗಂಗೆ ದರ್ಶನ ಮಾಡಿಸಲು ಬಂದೆ. ಎದುರು ಬಂದರೆ ಓಟ ಯಾಕೊ?’ ನನ್ನನ್ನು ಸರಿಯಾಗೇ ನೋಡು” ಗೊಗ್ಗರು ಧ್ವನಿಯಿಂದ ಆಜ್ಞಾಪಿಸಿತು. ವಾಕರಿಕೆ ತಹಬಂದಿಗೆ ತಂದುಕೊಂಡು ಅವಳನ್ನೇ ದಿಟ್ಟಿಸಿದ. ಅಂಕುಡೊಂಕಿನ ಮಾಟವಾದ ಆಕಾರ. ತಲೆಯಿಂದ ಮೊಣಕಾಲವರೆಗೆ ಇಳಿಬಿದ್ದಿದೆ ಕೇಶರಾಶಿ ಅಂದುಕೊಂಡು ಗಮನಿಸಿದರೆ ಅಲ್ಲಿ ಇಳಿಬಿದ್ದುಕೊಂಡಿದ್ದುದು ಜಡೆಗಟ್ಟಿದ ವೃಣಗಳು. ಸರ್ವಾಂಗದಲ್ಲು ಕೀವು ಸುರಿಸುತ್ತಿರುವ ಹುಣ್ಣುಗಳು. ತುಂಬಿನಿಂತ ಸ್ತನಗಳಿಂದ ಮಡ್ಡು ಮಡ್ಡಾದ ಕೊಳಕುದ್ರವದ ಪ್ರವಾಹ… ಅದರಲ್ಲಿ ಅರೆಬರೆ ಸುಟ್ಟ ಕೊಳೆತ ಮಾಂಸದ ತುಂಡುಗಳು. ಮಿಜಿಗುಡುತ್ತ ದಬ ದಬನೆ ಉದುರುತ್ತಿರುವ ಹುಳುಗಳು. ಇನ್ನೇನು ಆ ಪ್ರವಾಹದ ಸುಳಿ ತನ್ನನ್ನು ಸೆಳೆದುಕೊಳ್ಳುತ್ತಿದೆ ಅನ್ನುವಷ್ಟರಲ್ಲಿ ಹಿಂತಿರುಗಿ ಓಡಲು ತಿರುಗಿದ ಆತ ಗಕ್ಕನೆ ನಿಂತ. ಅಲ್ಲಿ ಅದು ತೆವಳುತ್ತ ಇವನತ್ತ ಬರುತ್ತಿತ್ತು. ಕೈ ಚಾಚಿತ್ತು. ಮನುಷ್ಯಾಕೃತಿಯುಂತಿರುವ ಎಲುಬುಗಳಿಗಂಟಿಕೊಂಡಿರುವ ತೊಗಲು. ಕುತ್ತಿಗೆ ಎಂದು ಗುರುತಿಸಬಹುದಾದ ಜಾಗಕ್ಕೆ ತಗುಲಿಕೊಂಡಿರುವ ವಿಪರೀತ ದೊಡ್ಡದಾದ ಅಂಡಾಕಾರದಲ್ಲಿರುವ ತಲೆ. ತೀವ್ರ ಬುದ್ದಿಮಾಂದ್ಯತೆ ಸೂಚಿಸುವ ಗಲಗಲ ಹೊರಳುವ ಹೊಂಡದೊಳಗಿರುವಂತೆ ಕಾಣುವ ಎರಡು ಕಣ್ಣುಗಳು.

ಬಿದಿರು ತೂಗಿದಂತೆ ನೇಲುತ್ತಿರುವ ಕೈಗಳಲ್ಲಿ ಅರೆಬರೆ ಕರಗಿದಂತಿರುವ ಅಂಗೈಗಳಿಗಂಟಿದ ನಾಲ್ಕು ಮೊಂಡು ಬೆರಳುಗಳು ಅದಕ್ಕೆ ತದ್ವಿರುದ್ಧವಾಗಿ ಎಷ್ಟು ಬೇಕಾದರೂ ಹಿಂದೆ ಮುಂದೆ ಬಾಗುವ ಉದ್ದನೆಯ ಹೆಬ್ಬೆರಳು. ಮಗು ಯಾ…ಞ್ರ..ಯಾ… ಞ್ರ ಅನ್ನುತ್ತ ಚಾಚಿದ ಕೈಯ ಅಂಟಿದ ನಾಲ್ಕು ಬೆರಳು ಹಾಗು ಹೆಬ್ಬೆರಳುಗಳ ನಡುವೆ ಕಬೆಯಂತಿರುವ ಜಾಗ ನೇರವಾಗಿ ಅವನ ಕುತ್ತಿಗೆಯ ಮಧ್ಯ ಒತ್ತಿ ಹಿಡಿಯಿತು. ಒಂದೇ ಹಿಡಿತಕ್ಕೆ ಉಸಿರು ಸಿಕ್ಕಿಕೊಂಡದ್ದರಿಂದ ಆ ಹಿಡಿತದಿಂದ ತಪ್ಪಿಸಿಕೊಳ್ಳಲು ತನ್ನೆಲ್ಲ ಶಕ್ತಿ ಹಾಕಿ ಹೆಣಗಿದಾಗ ಆ ಕೈ ಬಿಗಿ ಸ್ವಲ್ಪ ಸಡಿಲಾದಂತಾಯ್ತು. ಓಡಲು ಕಾಲು ಕೀಳಬೇಕೆಂದುಕೊಂಡರೆ ಜಯಂತನ ಉಕ್ಕಿನ ಹಿಡಿತಕ್ಕೆ ಸಿಕ್ಕಿಕೊಂಡಿತು ಕಾಲು. ಕಬಡ್ಡಿ ಕಬಡ್ಡಿ ಅನ್ನುತ್ತ ತಪ್ಪಿಸಿಕೊಳ್ಳಲು ಹೆಣಗಿದರೆ ಕಪಿ ಮುಷ್ಠಿಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಕೊಳೆತ ಪ್ರವಾಹ ಮೊಣಕಾಲಿನಿಂದ ಮೇಲೇರುತ್ತಿದೆ. ಕಬಡ್ಡೀ.. ಕಬಡ್ಡೀ.. ಬಡ್ಡೀ..ಡ್ಡೀ.. ಇದ್ದಕ್ಕಿದ್ದಂತೆ ದಡಬಡ ಸದ್ದಿನೊಂದಿಗೆ ದೋಣಿ ಸ್ತಿಮಿತ ಕಳೆದುಕೊಂಡಂತೆ ವಾಲಾಡಿತು. ನೀರ ಮಧ್ಯೆ ಆ ಸಂಜೆಯಲ್ಲು ಬೆವರಿ ಮುದ್ದೆಯಾಗಿದ್ದ ಮಹೇಂದ್ರ ಒಂದು ಕ್ಷಣದ ಹಿಂದೆ ತಾನು ಕಂಡದ್ದು ಕನಸೋ ನನಸೋ ಅಂದುಕೊಳ್ಳುತ್ತ ಕಣ್ಣುಜ್ಜಿಕೊಳ್ಳುತ್ತ ನೋಡಿದರೆ ಗಾಲಿಕುರ್ಚಿಯಿಂದ ಮುಗ್ಗರಿಸಿದ್ದ ಜಯಂತ. ಶರೀರದ ವಿಕಲತೆ ಮರೆತು ತಾನು ಕುಳಿತ ಗಾಲಿ ಕುರ್ಚಿಯ ಹಿಡಿಗಳ ಮೇಲೆ ಕೈ ಊರಿ ಗಂಗೆಯೊಳಗೆ ಮೀನಾಗಲು ಬಯಸಿ ಧುಮುಕಲು ಹವಣಿಸಿದ ಜಯಂತನಿಗೆ ನಿಷ್ಪಾಪಿ ಕಾಲುಗಳು ಸಹಕರಿಸಿರಲಿಲ್ಲ.

*****

“ನಾನು ಮೆಚ್ಚಿದ ನನ್ನ ಕಥೆ” ಎಂದು ಯಾವುದಾದರೊಂದನ್ನು ಆಯ್ಕೆ ಮಾಡುವುದು ಬಹು ಕಷ್ಟ. ಬರವಣಿಗೆಯ ಸಮಯದಲ್ಲಿ ಬೇರೆ ಬೇರೆ ಕಾರಣಕ್ಕೆ ಬೇರೆ ಬೇರೆ ಕಥೆಗಳು ಮನಸನ್ನು ಆದ್ರವಾಗಿಸುತ್ತವೆ. ಈ ಸಂದರ್ಭದಲ್ಲಿ ಸಂಪಾದಕರು ಇರಿಸಿಕೊಂಡ ನಿಯಮ – ಕಥೆ ಯಾವುದೇ ಪ್ರಾತಿನಿಧಿಕ ಸಂಕಲನಗಳಲ್ಲಿ ಸೇರಿರಬಾರದು ಎಂಬುದು. ಇದು ಅನುಕೂಲವೂ ಹೌದು. ಮಿತಿಯೂ ಹೌದು.
ಇಲ್ಲಿ ನಾನು 2012ರಲ್ಲಿ ಪಲ್ಲವ ಪ್ರಕಾಶನ ಪ್ರಕಟಿಸಿದ `ದೂರತೀರ’ ಎಂಬ ನನ್ನ ಕಥಾ ಸಂಕಲನದಿಂದ “ಕಾಳಿಂದಿ ಮಡು” ಎಂಬ ಕಥೆಯನ್ನು ಆಯ್ದುಕೊಂಡಿದ್ದೇನೆ.
ಸಹಜವಾಗಿದ್ದ ನೆಲ-ಜಲ, ಜೀವ ಜಗತ್ತಿನ ಸಂಬಂಧಗಳು ಬುದ್ದಿವಂತ ಮನುಷ್ಯನ ಆಸೆಗಳಿಂದ ವಿಕಾರವಾಗುವ ಪರಿ, ತನ್ನ ವಿಕೃತಿಗಳಿಂದ ಕೊನೆಗೆ ಅದೇ ಮನುಷ್ಯ ತನ್ನನ್ನೂ ಒಳಗೊಂಡಂತೆ ಇಡೀ ಜೀವಜಾಲವನ್ನೇ ಬಲಿಗೊಡುವ ಅಸಹಾಯ ಸಂಕಟಗಳು ಎಂತದ್ದೆಂಬುದನ್ನು ನಾನು ಬದುಕುವ ನೆಲದಲ್ಲಿ ಕಾಣುತ್ತ, ನನ್ನೊಳಗೆ ಸಂವಾದಿಸಿದ, ಮಥಿಸಿದ ಪಾತ್ರಗಳೊಂದಿಗೆ ಹಗಲೆನ್ನದೆ ಇರುಳೆನ್ನದೆ ಕನವರಿಸುತ್ತ ಚಿತ್ರಿಸುತ್ತ ಕಥೆಯನ್ನು ಒಂದು ಹಂತಕ್ಕೆ ನಿಲ್ಲಿಸಿದರೂ, ಅದು ನನ್ನಲ್ಲಿ ಇನ್ನೂ ಬೆಳೆಯುತ್ತಲೇ ಇದೆ. ಅದಕ್ಕಾಗಿಯೇ ಈ ಕಥೆಗೆ ನನ್ನ ಕೃತಜ್ಞತೆ.