ತನ್ನ ಮೇಲಿನ ಕೆಟ್ಟ ದೃಷ್ಟಿಗೆ ಹೊಲಸು ಮಾತಿಗೆ ತಕ್ಷಣವೇ ರಣಚಂಡಿಯಾಗಿ ಬಿಡುತ್ತಿದ್ದವಳು ಇತ್ತೀಚೆಗೆ ಮೌನಕ್ಕೆ ಶರಣಾಗತೊಡಗಿದ್ದು ಸರ್ಕಲ್ಲಿನಲ್ಲಿನ ಖಾಲಿ ತಿರುಗುವ ಜೀವಗಳಿಗೆ ಹೊಸ ಟಾಪಿಕ್ಕು ತಂದುಕೊಟ್ಟಿತ್ತು. ಕರಿಯಮ್ಮನ ಜೀವನದ ಅತಿ ಸಂಕಷ್ಟದ ದಿನಗಳು ಪ್ರಾರಂಭವಾಗಿಯೇ ಬಿಟ್ಟಂತೆ ಆಕೆಯ ಮಾತು ನಿಲುವು ಕೈಚಳಕ ಎಲ್ಲದರಲ್ಲೂ ಒಡಕು ಎದ್ದಿತ್ತು. ಹೋರಾಟದಿ ಕಟ್ಟಿಕೊಂಡ ಬಾಳು ವಿಲವಿಲ ಒದ್ದಾಡಿ ಸಾಯುತ್ತಿರುವಂತೆ ಆಕೆಗೆ ಭಾಸವಾಗತೊಡಗಿತು. ಆದರೂ ಒಳಗೆಲ್ಲೋ ‘ನೀನು ಸೋಲಬಾರದು’ ಎಂಬ ಧ್ವನಿ ಪ್ರತಿಧ್ವನಿಸಿದಂತಾಗಿ ಮಧ್ಯರಾತ್ರಿ ಎದ್ದು ಕಣ್ಣೀರು ಒರೆಸಿಕೊಂಡು ಮಲಗುತ್ತಿದ್ದಳು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಇಂದ್ರಕುಮಾರ್ ಎಚ್.ಬಿ. ಬರೆದ “ಚಾಕರಿಯಮ್ಮ” ಕಥೆ ನಿಮ್ಮ ಈ ಭಾನುವಾರದ ಓದಿಗೆ

ಪೇಟೆಯ ಸರ್ಕಲ್ಲಿನಲ್ಲಿ ಚಹಾ ಕುದಿಸುತ್ತ ಜನರ ಮನ ರಂಜಿಸುತ್ತ ತನ್ನ ಬದುಕು ಕಟ್ಟಿಕೊಳ್ಳುತ್ತ ಸಾಗಿದ್ದ ಹದಿನಾರು-ಹದಿನೇಳರ ಕಣ್ಣುಕುಕ್ಕುವ ಪ್ರಾಯದ ಕರಿಯಮ್ಮನಿಗೆ ‘ಚಾಕರಿಯಮ್ಮ’ ಎಂಬ ಹೆಸರು ಅಂಕಿತವಾಗಿಯೂ, ಅನ್ವರ್ಥವಾಗಿಯೂ, ಅಪಭ್ರಂಶವಾಗಿಯೂ ಸೇರಿಕೊಂಡಿತ್ತು. ಓದು ಕಲಿಯದ, ಬದುಕು ಏನೆಂದು ತಿಳಿಯದ ವಯಸ್ಸಿನಲ್ಲಿ ಅಪರಿಚಿತ ನಗರದಲ್ಲಿ ಬದುಕುವ ಸಾಹಸಕ್ಕೆ ಬಿದ್ದವಳು, ಕರಿಮಣಿಯ ಬಿಳಿಕುತ್ತಿಗೆಯನ್ನು ಕೊಂಕಿಸುತ್ತ ಬಜಾರಿಯಂತೆ ಪೋಸುಕೊಡುತ್ತಿದ್ದಳು. ಪ್ರಾರಂಭದಲ್ಲಿ ಗಿರಾಕಿಗಳಿಗೆ ‘ನನ್ನ ಸುಸ್ಮಾ ಅಂತಾ ಕರೀರಿ.’ ಅಂತಾ ವಿನಂತಿಯಿಟ್ಟರೂ ‘ಚಾಕ್ರಿಯಮ್ಮಾ.’ ಅಂತಲೇ ಬರುವ ಕರೆಗೆ ತನ್ನ ಸ್ವ-ನಾಮಕರಣದ ಪ್ರಯೋಗ ನಿಲ್ಲಿಸಿದ್ದಳು. ಬಿಳಿಬಿಳಿ ಕೈಕಾಲು ಸೊಂಟ ಕುತ್ತಿಗೆಯಲ್ಲಿ ಗೋಚರವಾಗುತ್ತ ಚಹ ಘಮಲಿನ ಜೊತೆ ರಸಿಕರಲ್ಲಿ ಅಮಲು ತರಿಸುತ್ತಿದ್ದ ಟೀ ಅಂಗಡಿಯ ಒಡತಿಗೆ ಪರಿಚಿತರು ‘ಚಾಕ್ರಿ..ಚಾಕ್ರಿ’ ಅನ್ನುತ್ತ ಹೊಸಬರೆದುರು ಮುಜುಗರವುಂಟು ಮಾಡುತ್ತಿದ್ದರು. ಸುತ್ತಲಿನ ಹೆಂಗಳೆಯರಂತೂ ‘ಏ ಚಾಕ್ರಿ.. ಹಾಲಿನ್ ಕೆಂಪಣ್ಣ ಬಂದಾನ್ ನೋಡು..’, ‘ಏ ಚಾಕ್ರಿ.. ಜಾತ್ರಿಗೆ ಹೊಂಟೀವಿ ಬರ್ತೀಯೇನ್?’, ‘ಏ ಚಾಕ್ರಿ.. ಚಲೋ ತರ್ಕಾರಿ ಬಂದಾವೆ.. ಜಲ್ದಿ ಬಾ ಇಲ್ಲಿ..’ ಅನ್ನುತ್ತ ಅವಳ ಸಂಗಕ್ಕೆ ಹಾತೊರೆದಂತೆ ನಟಿಸಿ ಬಿಟ್ಟಿ ಚಾ ಗಿಟ್ಟಿಸುತ್ತಿದ್ದರು. ಆಕೆಯಂತೂ ‘ಏನಾದ್ರೂ ಕರ್ಕಳ್ರಿ.. ನಂಗ್ ಬದುಕೂಕ್ ಒಂದ್ ತೊಂದ್ರಿ ಮಾಡಬ್ಯಾಡ್ರಿ..’ ಅನ್ನುವಂತೆ ತನ್ನ ಸುತ್ತುವರೆದ ಜನರಿಗೆ ಸ್ಪಂದಿಸುತ್ತ ತನ್ನ ಭವಿಷ್ಯದ ಹುಂಡಿಗೆ ಭರವಸೆಯ ನಾಣ್ಯ ತುಂಬತೊಡಗಿದ್ದಳು.

ಚಾಕ್ರಿಯ ಟೀ ಪರಿಮಳದಿಂದ ಬೆಳಗು, ಚಾಕ್ರಿಯ ಲಡಲಡ ಬಡಾಯಿ ಮಾತುಗಳಿಂದ ರಾತ್ರಿ – ಹಗಲು ಅನ್ನುವಂತೆ ತನ್ನ ಸುತ್ತಣ ಕೇರಿಯನ್ನು ಸಿದ್ಧಗೊಳಿಸಿಕೊಂಡಿದ್ದ ಏರು ಯೌವ್ವನದ ಚೆಲುವೆಯ ಬಯೋಡಾಟಾದಲ್ಲಿ ಅಪರೂಪದ ಸಾಧನೆ ಮಿನುಗುತ್ತಿತ್ತು. ಕುಡುಕ ತಂದೆ, ದಾರಿ ತಪ್ಪಿದ ತಾಯಿಗೆ ನಾಲ್ಕನೆಯ ಮಗಳಾಗಿ ಹುಟ್ಟಿ, ಹದಿನಾಲ್ಕನೆಯ ವಯಸ್ಸಿಗೆ ಲಂಗ ಹಸಿ ಮಾಡಿಕೊಂಡು ಅಪರಾಧ ಮಾಡಿದ್ದಳು. ಸುಳಿವು ಹಿಡಿದ ಹೆತ್ತವರು ತಿಂಗಳೆನ್ನುವಷ್ಟರಲ್ಲಿ ಲಫಂಗನೊಬ್ಬನ ಜೊತೆ ಲಗ್ನ ಫಿಕ್ಸ್ ಮಾಡಿ ತಮ್ಮತಮ್ಮ ಲಾಭ ಗಿಟ್ಟಿಸಿದ್ದರು. ತನಗಿಂತ ತನ್ನ ತಾಯಿಗೇ ಹೆಚ್ಚು ಫಿಕ್ಸ್ ಆದ ಪಡಪೋಸಿ ಗಂಡಿನ ಬೀಡಾಡಿ ಗುಣದ ಪಕ್ಕಾ ಮಾಹಿತಿ ಪಡೆದಿದ್ದಳು ಕರಿಯಮ್ಮ. ಅಂಕೆ ಮಿರಿದ ತಾಯಿ, ಬಾಟ್ಲಿ ಕೊಟ್ಟವರಿಗೆಲ್ಲಾ ಮಗಳನ್ನೇ ಕೊಡುವ ತಂದೆ, ದಿಕ್ಕು ತಪ್ಪುವುದು ಅನಿವಾರ್ಯವೆಂಬಂತೆ ಕಣ್ಣುಕಣ್ಣು ಬಿಡುವ ಅಕ್ಕಂದಿರ ಕಂಡವಳು ಪಾಪದ ಕೂಪವೆನಿಸಿದ ಬದುಕಿನಲ್ಲಿ ಪಾಪದಲ್ಲೂ ಶಾಪದಲ್ಲೂ ಬದುಕಲಾರೆ ಎಂದು ನಿರ್ಧರಿಸಿದ್ದಳು. ಈ ‘ಗುಮ್ಮನಗುಸಗಿ ಕರಿಯಮ್ಮ’ನ ಎಣ್ಣೆಕಾಣದ ತಲೆಯೊಳಗೆ ಸೀಮೋಲ್ಲಂಘನದ ಪಿಲಾನು ಹೇಗೋ ಹೊಕ್ಕುಬಿಟ್ಟಿತ್ತು. ಹಸೆಮಣೆ ಏರುವ ಹಿಂದಿನ ರಾತ್ರಿ ಭಾವಿ ಗಂಡ ಹಾಗೂ ತಾಯಿ ಬಾವಿಕಟ್ಟೆಯ ಬಳಿ ಹಸಿಬಿಸಿ ತಿಕ್ಕಾಟದಲ್ಲಿದ್ದಾಗಲೇ ಗಂಟಿನೊಂದಿಗೆ ಹಿತ್ತಿಲ ಬಾಗಿಲಿಂದ ಹೊರಬಿದ್ದಿದ್ದಳು. ‘ಅಲೆಲೆಲೆ! ಓಡೋಗಾಕತ್ತಾಳೆ.. ಹಿಡಿರಲ್ಲೇ ಆ ಬೋಸುಡಿನಾ..’ ಎಂಬ ಜನರ ಅಬ್ಬರದ ಹಿನ್ನೆಲೆಯಲ್ಲೇ ಆಳೆತ್ತರದ ಜಾಲಿಯ ಬೇಲಿ ಹಾರಿ ಜೀವ ಬಾಯಿಗೆ ಬರುವಂತೆ ಓಡುತ್ತಲೇ ಹೈವೇ ಮುಟ್ಟಿ, ಸಿಕ್ಕ ಲಾರಿ ಹತ್ತಿ ಕತ್ತಲಲ್ಲಿ ಕಣ್ಮರೆಯಾದ ಕರಿಯಮ್ಮ, ಈ ಮಹಾನಗರದ ಈಗಿದ್ದ ಸರ್ಕಲ್ಲಿಗೇ ಬಂದಿಳಿದಿದ್ದಳು. ಆ ಕ್ಷಣ ಹೊಕ್ಕಿದ್ದ ದೆವ್ವದಂತಹ ಧೈರ್ಯ ಅವಳ ಎರಡು ವರ್ಷ ಕಾಯ್ದಿತ್ತು.

ಜಾಲಿಗಿಡದ ಬೇಲಿ ಹಾರಿ ಜಾಲಿ ಬದುಕಿನ ಅರೆಬರೆ ಕನಸಲ್ಲಿ ಅಪರಿಚಿತ ಪೇಟೆಗೆ ಬಂದಿಳಿದವಳಿಗೆ ಭೀಕರ ಹಸಿವು, ದಟ್ಟದಾರಿದ್ರ್ಯ ಹಾಗೂ ಗಬ್ಬುನಾತದ ದೇಹಕ್ಕೆ ಮುತ್ತುವ ನೊಣ-ನಾಯಿ-ಕಚ್ಚೆಹರುಕರ ಕಾಟ ಹೆಚ್ಚಾಗಿ – ಬದುಕೇ ಜೋಲಿ ತಪ್ಪಿದಂತೆ ಕಂಗಾಲಾಗಿದ್ದಳು. ಹೊಟ್ಟೆಪಾಡಿಗೆ ಚರಂಡಿ ಕ್ಲೀನು ಮಾಡುತ್ತ ತಂಗಳನ್ನದಲ್ಲಿ ತಿಂಗಳು ಕಳೆದವಳಿಗೆ ಇದು ಭಿಕ್ಷಾಟನೆಗಿಂತ ಕಡೆ ಅನ್ನಿಸಿ ತನ್ನ ಮೇಲೆಯೇ ಅಸಹ್ಯ ಹುಟ್ಟಿಬಿಟ್ಟಿತ್ತು. ಆತುರದ ನಿರ್ಧಾರದಿಂದ ಕೆಟ್ಟೆನೇ.. ಊರಿಗೆ ಹಿಂತಿರುಗುವ ಬದಲು ರೈಲುಹಳಿಯೇ ಮೇಲೆಂದು ನಿರ್ಧರಿಸಿ ಎದ್ದವಳಿಗೆ ದೊಡ್ಡಕ್ಕ ತನ್ನೆದುರೇ ನೇಣುಹಾಕಿಕೊಂಡ ಬಾಲ್ಯದ ಆಘಾತಕಾರಿ ದೃಶ್ಯ ತೂರಿಬಂದು ರಪ್ಪನೆ ರಾಚಿತು. ‘ಸಾಯಲೊಲ್ಲೆ’ ಎಂದು ಕಪಾಳವೊರೆಸಿಕೊಂಡು ಮತ್ತೆ ಚರಂಡಿಗಿಳಿಯಲು ಎದ್ದವಳ ರಟ್ಟೆ ಹಿಡಿದು ‘ಆಹಾ ಅಮ್ಮಣ್ಣೀ.. ನಿನ್ನ ರೇಟೆಷ್ಟಮ್ಮೀ..?’ ಅಂತಾ ಎಳೆದಾಡತೊಡಗಿದ ಹಲ್ಕಾ ಜನರ ಒರಟು ಕೈಗೆ ಸಿಕ್ಕಿಬಿಟ್ಟಿದ್ದಳು.

ಹಲ್ಕಿರಿದು ನೋಡುತ್ತ ಮುಕುರಿದ್ದ ಜನರ ಸರಿಸಿದ ಚಾ ಅಂಗಡಿಯ ಹುಸೇನಜ್ಜ ನಡುಗುವ ಕೈಯಲ್ಲಿ ಮಚ್ಚು ಹಿಡಿದು ಅಬ್ಬರಿಸಿ ಅವರ ಓಡಿಸಿ, ತನ್ನ ಮುರುಕು ದುಖಾನಿನಲ್ಲೇ ಲೋಟತೊಳೆಯುವ ಕೆಲಸಕ್ಕೆ ನಿಲ್ಲಿಸಿಕೊಂಡ. ನೆಲೆಯೊಂದು ಗೋಚರಿಸಿದ್ದೇ ಬದುಕಿನಲ್ಲಿ ಬಿಸಿಲುಕೋಲೊಂದು ಫಳಫಳ ಮಿಂಚಿದಂತೆ ಅವಳ ಕಣ್ಣುಗಳೂ ಹೊಳೆದವು. ಆರು ತಿಂಗಳಲ್ಲಿ ಅರೆಬರೆ ಉರ್ದು ಕಲಿತು, ಅಜ್ಜನಿಗೆ ಬಿಸಿರೊಟ್ಟಿ ಮುಳಗಾಯಿ ಎಣಗಾಯಿ ಹುಚ್ಚು ಹಿಡಿಸಿದ್ದಳು. ತನ್ನ ಏರುಪ್ರಾಯ ಆಡಿಸಿದಂತೆ ಹಾಡುತ್ತ ಆಡುತ್ತ ಲೋಟ ತೊಳೆದು ಗಿರಾಕಿ ನೋಡಿಕೊಂಡು ಹಾಯಾಗಿದ್ದವಳು ಇದ್ದಕ್ಕಿದ್ದಂತೆ ಅಜ್ಜನ ಜೀವಪಕ್ಷಿ ರೆಕ್ಕೆ ಬಿಚ್ಚಿ ಹಾರಿಬಿಡುತ್ತದೆಂದು ಯೋಚಿಸಿಯೂ ಇರಲಿಲ್ಲ.

ವಿಚಿತ್ರ ಭೀತಿಗೆ ಬಿದ್ದರೂ ತೋರಿಸಿಕೊಳ್ಳದೇ ಧೈರ್ಯ ತಂದುಕೊಂಡ ಕರಿಯಮ್ಮ ಅಜ್ಜನ ಅಂತ್ಯಸಂಸ್ಕಾರವನ್ನು ಪರಿಚಿತ ಮುಸಲ್ಮಾನರ ಸಹಾಯದಿಂದ ಮುಗಿಸಿ ಮುಂದೇನು ಎಂದು ನಡುಗುತ್ತ ದಿನವೊಂದು ಕಳೆದಿದ್ದಳು. ‘ಕುರಿಮಾ’ ಮೇರಿ ಬೇಟಿ.. ಅಂತಾ ಸಾರಿದ್ದ ಅಜ್ಜನ ಅಂಗಡಿಗೆ ನೀನೇ ವಾರಸುದಾರಳೆಂದು ಜನ ಘೋಷಿಸಿದ್ದೇ.. ತನ್ನದೇ ಆದ ಖಾಯಂ ಸೂರು ಕಂಡು ನಿಡುಸುಯ್ದಿದ್ದಳು. ಬುಡ್ಡಾನ ಮಾನಸ ಬೇಟಿ ವಾರವೆನ್ನುಷ್ಟರಲ್ಲಿ ತಾನೇ ಅಂಗಡಿ ತೆರೆದು ಭರಗುಡುವ ಸ್ಟೊವ್ ಮೇಲೆ ಹಾಲುಕ್ಕಿಸಿ.. ತಾನು ಬೇಲಿ ಹಾರಿ ಬಂದದ್ದಕ್ಕೂ ಒಂದು ಅರ್ಥವಿದೆ ಎಂದು ಬೀಗಿದ್ದಳು. ಚರಂಡಿಯ ಹೇಲು ವಾಸನೆಯಿಂದ ಚಹಾದ ದಿವ್ಯ ಪರಿಮಳಕ್ಕೆ ಬಡ್ತಿ ಪಡೆದವಳು ದುಖಾನಿನಲ್ಲಿ ಮೆಕ್ಕಾ ಮದೀನಾ ಫೋಟೋಗಳ ಮಧ್ಯೆ ಗಣಪನನ್ನು ಕೂರಿಸಿ ಕುಂಕುಮವಿಟ್ಟು, ಹೂಮುಡಿಸಿ, ಕಡ್ಡಿ ಬೆಳಗಿ ಹಾಲು ಕಾಯಿಸಲು ಶುರುವಿಟ್ಟುಕೊಳ್ಳತೊಡಗಿದಳು.

ದೊಡ್ಡ ಕುಂಕುಮ ಹಳೆಸೀರೆ ದಪ್ಪನೆಯ ಕರಿಮಣಿಯ ಕುತ್ತಿಗೆಯಲ್ಲಿ ಬಜಾರಿಯಂತೆ ಕೈಯಾಡಿಸುತ್ತ ಕೈಲಾಗದ ಗಂಡಸರ ಮೇಲೆ ಕೂಗಾಡುತ್ತ ‘ನನ್ ಗಂಡಾ ನಮ್ಮೂರಾಗ ದೋಡ್ಡ ಪೆಕುಟ್ರಿ ಸುರು ಮಾಡಾಕ ಪಿಲಾನ್ ಮಾಡ್ಯಾನಾ… ಅದ್ಕೇ ಭಾಳ ರೊಕ್ಕ ಬೇಕಾಗೈತಿ… ರೊಕ್ಕ ಒಟ್ಟು ಮಾಡಾಕ ಈ ವೋಟ್ಲು ಯಾಪಾರಕ್ಕ ನಿಂತೀನಿ. ಜತಿಗೆ ಮಗನ್ ಓದ್ಸಕ್ಕೂ ರೊಕ್ಕ ಬೇಕಲ್ಲ? ಈ ಊರ್ನಾಗಿರೋ ‘ಕಾರಮೆಂಟಿ’ಗೆ ಹಾಕ್ಬೇಕು ಅಂದ್ರೆ ಏನ್ ಕಮ್ಮಿ ಅಗತೈತಾ?’ ಹುಬ್ಬೇರಿಸಿ ಕೈಯಾಡಿಸಿ ಉಲಿಯುತ್ತ ಎಲ್ಲರ ನಂಬಿಸಿಬಿಟ್ಟಿದ್ದಳು. ಜನ ನಂಬುತ್ತಿದ್ದಂತೆ ತಾನು ಅರಳುತ್ತ ಹೊಸ ಬದುಕಿನೆಡೆ ಹೊರಳುತ್ತಿದ್ದವಳಿಗೆ ಯಾವ ಕ್ಷಣದಲ್ಲೋ ತನ್ನ ಪ್ರಭಾವಳಿ ಕರಗತೊಡಗಿದ ಸೂಕ್ಷ್ಮ ತಟ್ಟಿತ್ತು. ನಡುರಾತ್ರಿ ಆಕೆಯ ಗೂಡಂತಹ ಮನೆಯ ಹೊರಗೆ ಮಾತುಗಳೂ ಸದ್ದುಗಳೂ ಕೇಳಲು ಪ್ರಾರಂಭಿಸಿ, ಕೊನೆಗೆ ದಬದಬ ಸದ್ದಿನ ಜೊತೆ ‘ಬಾಕ್ಲು ತೆಗಿಯೇ ಚಾಕ್ರಿ.. ಒಬ್ಳೇ ಎಷ್ಟು ದಿನಾಂತ ಇರ್ತೀಯಾ’ ಅನ್ನುವ ದನಿಗಳೂ ತೂರಿಬರತೊಡಗಿದವು.

‘ಯಾವನ್ಲೇ ಬೇವರ್ಸಿ.. ಕೈಯಾಗೆ ಮಚ್ಚ್ ಐತೆ.. ಈಗ್ ಬಾಗ್ಲು ತೆಗುದ್ನಂದ್ರ.. ನಿನ್ನ ಸಿಗ್ದ್ ಹಾಕ್ತೀನ್ಲೇ..’ ಅಂತಾ ನಡುಗುವ ದನಿಯಲ್ಲೇ ರಣಚಂಡಿಯಂತೆ ಅಬ್ಬರಿಸುವುದು, ಹೆಜ್ಜೆಗಳು ದುಡುದುಡು ಓಡಿದಾಕ್ಷಣ ಬಾಯಿಗೆ ಸೆರಗು ತುರುಕಿಕೊಂಡು ಬಿಕ್ಕುವುದು ತಿಂಗಳಿಂದ ನಡೆಯತೊಡಗಿತ್ತು. ಬೆಳಗ್ಗೆ ಚಹಾ ಕುಡಿಯಲು ಬಂದ ಗಿರಾಕಿಗಳಲ್ಲಿ ಆ ಕೆಟ್ಟ ಚಪಲದ ಸೊಲ್ಲು ಹುಡುಕುತ್ತ ತನ್ನೊಳಗಿನ ಭಯ ಅದುಮಿಡಲು ಎಲ್ಲರೆದುರು ತನ್ನ ಗಂಡನ ಪರಾಕ್ರಮವನ್ನು ಹೇಳುತ್ತಲೇ ದುಡ್ಡು ಕೇಳುವುದನ್ನೂ ಮರೆಯತೊಡಗಿದಳು. ನಡುರಾತ್ರಿಯ ನಿದ್ರಾಹೀನ ಸ್ಥಿತಿಯಲ್ಲಿ ಅವಳ ಅಂತರಂಗ – ನೀನು ಹೆಂಗಸು, ನಿನ್ನನ್ನು ಯಾರು ಬೇಕಾದರೂ ದೋಚಬಹುದು ಎಂಬ ಮಾರಕಮಂತ್ರವನ್ನು ಮೊಳಗಿಸುತ್ತಿತ್ತು. ಏಕಾಂಗಿ ಹೋರಾಟದ ಸುಂದರ ಬದುಕು ತನ್ನದು ಎಂದುಕೊಂಡಿದ್ದ ಕರಿಯಮ್ಮನಿಗೆ ಈಗದು ಬೇವರ್ಸಿ ಬದುಕಾಗಿ ಮಾರ್ಪಟ್ಟಿತ್ತು. ಗಂಡು ದಿಕ್ಕಿದ್ದರೆ ಮಾತ್ರ ಬದುಕು ಎಂದು ನಂಬಿ ಮಲಗುತ್ತಿದ್ದವಳು ಬೆಳಗ್ಗೆ ಸುತ್ತಲಿನ ಸಂಸಾರಗಳನ್ನು ಹದಗೆಡಿಸಿದ್ದ ಹೇತ್ಲಾಂಡಿ ಗಂಡಸರ ಕಂಡಾಕ್ಷಣ ಒಮ್ಮೆ ಕ್ಯಾಕರಿಸಿ ಉಗಿದು ‘ನಾನೇ ಗಂಡ್ಸು.. ನನಗ್ಯಾವ ಗಂಡ್ಸ್ ಬೇಕು..’ ಅಂದುಕೊಂಡು ಮಾನಸಿಕವಾಗಿ ಗಟ್ಟಿಯಾದಂತೆ ‘ಹ್ಹಾ..! ಬರ್ರಿ ಬರ್ರಿ ಬರ್ರೀ.. ಬಿಸಿಬಿಸಿಬಿಸಿ ಚ್ಚಾ ಚ್ಚಾ ಚಾ!’ ಅಂತಾ ರಾಗಬದ್ಧವಾಗಿ ವದರುತ್ತಿದ್ದಳು.

ಆತ್ಮವಿಶ್ವಾಸವೆಂಬುದು ಚಾಕ್ರಿಯ ಬದುಕಲ್ಲಿ ಕೆರೆದಡ ಆಡಲು ಪ್ರಾರಂಭಿಸಿದ್ದೇ ಸುತ್ತಲಿನ ತರಕಾರಿ ಹೂ ಚಪ್ಪಲಿ ಮಾರುವ ಹೆಂಗಸರ ಮುಂದೆಲ್ಲ ಹೆಚ್ಚೆಚ್ಚು ಗಂಡ, ಮಗನ ಸುದ್ದಿ ವದರುತ್ತ ತನ್ನ ಏಕಾಂತ ಕ್ಷಣಗಳಲ್ಲೂ ಅವೆಲ್ಲ ಸತ್ಯವೆಂದು ಭಾವಿಸತೊಡಗಿದಳು. ಭ್ರಮೆ ಕನಸಾಗಿ ಕನಸು ಸತ್ಯದಂತೆ ತೋರುವ ಲೋಕವಾಗಿ ಅವಳ ತಲೆಯೊಳಗೆ ನಿಂತುಬಿಟ್ಟಿತ್ತು. ಯಾವಾಗಲೋ ಸುರುಗೊಂಡ ತನ್ನ ಕಾಲ್ಪನಿಕ ಸಂಸಾರದಲ್ಲೇ ಜೀವಿಸತೊಡಗಿ ದಾರಿಯಲ್ಲಿ ಹೋಗುವ ಕಾನ್ವೆಂಟ್ ಮಕ್ಕಳ ನಿಲ್ಲಿಸಿ ‘ನಿಮ್ ಸ್ಕೂಲ್ನಾಗ ಏನೇನು ಕಲಿಸ್ತಾರೆ?’ ಅಂತಾ ಕೇಳುತ್ತ, ಬೀದಿ ಮೇಲೆ ಮಾರುವ ಸೆಕೆಂಡ್ ಹ್ಯಾಂಡ್ ಪ್ಯಾಂಟುಗಳನ್ನು ಗಂಡನಿಗೆಂದು ಖರೀದಿಸುತ್ತ ಕಾಲ ಕಳೆಯತೊಡಗಿದ್ದಳು.

‘ಅಯ್ಯಾ ಬಿಡವ್ವ… ನಿನ್ ಮಗಂದು, ಗಂಡಂದೂ ರಾಮಾಯ್ಣ ಕೇಳಿ ಕೇಳಿ ಸಾಕಾಗೈತೆ.. ಮೊದ್ಲು ಇಬ್ರನ್ನೂ ಕರ್ಕಂಬಾ.. ಕಂಡಾನಾ ಕಾಣ್ತೀವಿ..’ ಅಂತಾ ಸುತ್ತಲಿನ ಜನ ನಿತ್ಯ ಅವಳ ಹರಟೆಯ ಮಾತಿಗೆ ಕಡಿವಾಣ ಹಾಕತೊಡಗಿದರು. ಆಗೆಲ್ಲ ಇದು ಯಾವ ರೀತಿ ಜೀವನ ಅನ್ನಿಸಿ, ಈ ಕ್ಷಣ ಕನಸಿನಿಂದ ಆ ಗಂಡ ಆ ಮಗನನ್ನು ಹೊರಗೆಳೆದು ತನ್ನ ಚಾ ದುಖಾನಿನಲ್ಲಿ ಕೂರಿಸಿ ಟೀ-ಬ್ರೆಡ್ಡು ತಿನ್ನಿಸಿಬಿಡುವಾ ಅಂದುಕೊಳ್ಳುತ್ತಾಳೆ. ತನ್ನ ಅಂಗಡಿಯ ಹನಿ ಟೀ ಕುಡಿದು ಜೀವವಿಟ್ಟುಕೊಂಡ ಎಷ್ಟೋ ಭಿಕಾರಿಗಳ ಬೀದಿಪಾಲಾದವರ ರೋಗಿಷ್ಟರ ಕಂಡು, ಅವರೆಲ್ಲರಿಗೂ ನಿಜವಾದ ಈ ಅಸ್ತಿತ್ವ ತನ್ನ ಕಲ್ಪನೆಯ ಗಂಡ, ಮಗನಿಗೇಕೆ ಲಭ್ಯವಿಲ್ಲವೆಂದು ದೇವರ ಜೊತೆ ಮೌನ ಯುದ್ಧಕ್ಕೆ ತೊಡಗಲು ಪ್ರಾರಂಭಿಸಿದ್ದಾಳೆ.

ಎಲ್ಲಿಂದಲೋ ಬಂದು ಬಂಡಲ್ ಬಿಡುತ್ತಿರುವವಳ ನಂಬುವಷ್ಟು ಮುಗ್ಧ ಜನ ಈ ಭೂಮಿಯ ಮೇಲೆ ಎಲ್ಲೂ ಇಲ್ಲವಾದರೂ ಅವಳು ನೀಯತ್ತಾಗಿ ತಿಂಗಳ ಕೊನೆ ದಿನ ಎಲ್ಲರಿಗೂ ಕಾಣುವಂತೆ ರೆಡಿಯಾಗಿ ದೊಡ್ಡ ಬ್ಯಾಗಿಡಿದು ಎಲ್ಲರೆದುರು ರಿಕ್ಷಾ ಹತ್ತಿ ಹೊರಟು, ಮತ್ತೆ ಎರಡು ದಿನದ ನಂತರ ಇನ್ನೊಂದು ಡ್ರೆಸ್ಸಿನಲ್ಲಿ ಬಂದಿಳಿವ ನಾಟಕವಾಡಿ ಎಲ್ಲರ ಏಮಾರಿಸಿದ್ದಳು. ಪ್ರಾರಂಭದಲ್ಲಿ ಈ ತರಹದ ಕೆಲಸದಿಂದ ಅವಳ ಶೀಲ ಉಳಿದಿದ್ದರೂ ಬರಬರುತ್ತ ಅದು ಅಭ್ಯಾಸವಾಗಿ ತಿಂಗಳು ಕಳೆದರೂ ಆಕೆ ಹೋಗದಿದ್ದರೆ ಜನ ಮುಕ್ಕರಿಕೊಂಡು ‘ಏನಮ್ಮಾ ನಿನ್ ಗಂಡ್ ಇನ್ನೊಬ್ಳುನ್ನ ಇಟ್ಕಂಡಾನೇನು?’ ಅಂತಾ ಶುರುವಿಟ್ಟುಕೊಳ್ಳುತ್ತಿದ್ದರು. ಬರಬರುತ್ತ ಜನ ತನ್ನ ಖಾಸಗೀ ಜೀವನದ ಬಗ್ಗೆ ಖುಲ್ಲಂಖುಲ್ಲಾ ಮಾತನಾಡಲು, ವೈಯಕ್ತಿಯ ಜೀವನದ ತೀರಾ ಒಳಪದರುಗಳನ್ನು ಜಾಲಾಡಲು ಶುರುಮಾಡಿದ್ದು.. ಆಕೆಯೊಳಗೆ ತಳಮಳ ಎಬ್ಬಿಸಿ ಚಹಾಕ್ಕೆ ಒಮ್ಮೆ ಸಕ್ಕರೆ ಹಾಕಲು ಮರೆತರೆ ಇನ್ನೊಮ್ಮೆ ಚಾ ಪುಡಿ.

‘ಕುರಿಮಾ’ ಮೇರಿ ಬೇಟಿ.. ಅಂತಾ ಸಾರಿದ್ದ ಅಜ್ಜನ ಅಂಗಡಿಗೆ ನೀನೇ ವಾರಸುದಾರಳೆಂದು ಜನ ಘೋಷಿಸಿದ್ದೇ.. ತನ್ನದೇ ಆದ ಖಾಯಂ ಸೂರು ಕಂಡು ನಿಡುಸುಯ್ದಿದ್ದಳು. ಬುಡ್ಡಾನ ಮಾನಸ ಬೇಟಿ ವಾರವೆನ್ನುಷ್ಟರಲ್ಲಿ ತಾನೇ ಅಂಗಡಿ ತೆರೆದು ಭರಗುಡುವ ಸ್ಟೊವ್ ಮೇಲೆ ಹಾಲುಕ್ಕಿಸಿ.. ತಾನು ಬೇಲಿ ಹಾರಿ ಬಂದದ್ದಕ್ಕೂ ಒಂದು ಅರ್ಥವಿದೆ ಎಂದು ಬೀಗಿದ್ದಳು.

ತಿಂಗಳ ಕೊನೆಗೆ ಪರವೂರಿಗೆ ಗುಪ್ತ ಪ್ರಯಾಣ ನಡೆಸಿದಾಗಲೆಲ್ಲಾ ಆಯಾ ಊರಿನ ಹೆಣ್ಣು ದೇವತೆಗಳಿಗೆ ಹೆಚ್ಚೆಚ್ಚು ಹೂ ಏರಿಸಿ ಬರುತ್ತಿದ್ದವಳು ಹಾಗೆ ಹೊಸ ಪ್ರಪಂಚದಲ್ಲಿ ಸುಳಿದಾಡಿ ಬಂದಾಕ್ಷಣ ವಿಲಕ್ಷಣ ಶಕ್ತಿ ತುಂಬಿಕೊಂಡಂತಾಗಿ ಆಡುವ ಬಾಯಿಗೆ ಎದಿರಾಗಿ ಬೊಂಬಾಯಿ ಮಾಡುತ್ತ ನಿಂತುಬಿಡುತ್ತಿದ್ದಳು. ಈ ತರಹದ ವಿಚಿತ್ರ ವ್ರತವನ್ನು ವರ್ಷಗಳಿಂದ ನಡೆಸಿಕೊಂಡು ಬಂದವಳಿಗೆ ಕೇಡುಗಾಲ ಪ್ರಾರಂಭವಾದಂತೆ ಪರವೂರುಗಳಲ್ಲೂ ಅವಳ ಗುರುತು ಹಿಡಿವ ಜನ ಸಿಕ್ಕತೊಡಗಿದ್ದರು. ಮೊದಮೊದಲು ಜನರೆದುರು ರಿಕ್ಷಾ ಹತ್ತುತ್ತಿದ್ದವಳು ಬಸ್ಟ್ಯಾಂಡಿನ ಒಳಗೇ ಸಂಜೆವರೆಗೂ ಕೂತಿದ್ದು ಪಕ್ಕದ ಗಣಪತಿ ಗುಡಿಯಲ್ಲಿ ಜಪಮಾಡುವವರ ಮಧ್ಯೆ ಕೈತಟ್ಟುತ್ತ ಕಾಲಕಳೆಯುತ್ತಿದ್ದಳು. ಇಲ್ಲವೇ ಹತ್ತಿರದ ಟಾಕೀಸಿನಲ್ಲಿ ರಾತ್ರಿ ಪಾಳಿಯ ಸಿನಿಮಾ ನೋಡಿ.. ಅಲ್ಲಿಂದ ನಡುರಾತ್ರಿ ಹೊರಡುವ ಯಾವುದಾದರೂ ಬಸ್ಸಿನೊಳಗೆ ತೂರಿಕೊಂಡು ರಾತ್ರಿಯಿಡೀ ಪ್ರಯಾಣದಲ್ಲಿ ನಿದ್ರೆ ಮಾಡಿ ಬೆಳಗ್ಗೆ ಎದ್ದ ಊರಿನ ದೇವಸ್ಥಾನದಲ್ಲಿ ಹರಕೆ ಹೊತ್ತು ಬಂದವಳಂತೆ ದಿನವಿಡೀ ದೇವರಿಗೆ ಕೈಮುಗಿಯುತ್ತ ಕೂತಿದ್ದು ರಾತ್ರಿ ಅಲ್ಲಿಂದ ವಾಪಸ್ಸು ಇಲ್ಲಿಗೆ ಹೊರಟು ಬರುತ್ತಿದ್ದಳು. ಪ್ರತಿ ಬಾರಿ ಬರುವಾಗಲೂ ಅಂತೂ ಈ ಬಾರಿಯ ಕಂಠಕ ದಾಟಿಕೊಂಡೆ ಅಂದುಕೊಳ್ಳುತ್ತಲೇ ಈ ತುಡುಗು ಸಂಭ್ರಮದ ಪ್ರಯಾಣ ತನ್ನ ಬದುಕನ್ನು ಎಲ್ಲಿಗಾದರೂ ಒಯ್ಯಬಹುದೆಂದು ಯೋಚಿಸುತ್ತಿದ್ದಳು. ಆದರೆ ಅವಳ ಈ ಅಜ್ಞಾತವಾಸದ ಸುಳಿವು ಸಿಕ್ಕಂತೆ ಅಲ್ಲೆಲ್ಲಾ ಆಕೆಯ ಗುರುತು ಹಿಡಿವ ಮಂದಿ ಗೋಚರಿಸತೊಡಗಿದರು. ರಾತ್ರಿ ಬಸ್ ಪ್ರಯಾಣದ ಸಮಯದಲ್ಲಿ ಪಕ್ಕದಲ್ಲೇ ಬಂದು ಕೂತು ವಿಚಿತ್ರವಾಗಿ ಕಾಡುತ್ತ ಅವಳ ಬದುಕಿನ ಭರವಸೆಯನ್ನೇ ಅಲ್ಲಾಡಿಸತೊಡಗಿದ್ದರು.

ಅಂತೂ ರಾತ್ರಿಯೊಂದರ ಹರಟೆ ಪ್ರಾರಂಭದ ಸಮಯಕ್ಕೆ ಕರಿಯಮ್ಮ, ಮಗನ ಸುದ್ದಿ ಕೇಳೀ ಕೇಳೀ ತಲೆಚಿಟ್ಟು ಹಿಡಿಸಿದ್ದ ಮುದುಕಿಯರಿಗೆ ಅವನು ನಾಯಿ ಕಚ್ಚಿ ಸತ್ತನೆಂದು ಹೇಳಿ ಬೋರಾಡಿ ಅತ್ತುಬಿಟ್ಟಳು. ಯಾವುದೋ ಅಪವಾದದಿಂದ ಮುಕ್ತಳಾದಂತೆ ಸಂತಸಪಟ್ಟವಳಿಗೆ ತನಗಿದ್ದ ಏಕೈಕ ಭರವಸೆಯ ಆಸರೆಯನ್ನು ತಾನೇ ಸಾಯಿಸಿದ ಸಂಕಟ ಕಾಡತೊಡಗಿತ್ತು. ವಿಚಿತ್ರವೆಂಬಂತೆ ಆ ಕಾಲ್ಪನಿಕ ಕಂದ ಆಕೆಯ ಕನಸುಗಳಿಂದ ನಿಜವಾಗಿಯೂ ಮರೆಯಾಗಿ ಕರಿಯಮ್ಮಳ ಸುಂದರ ಬದುಕು ಕರಿಮಸಿಯನ್ನು ಬಸಿದುಕೊಳ್ಳತೊಡಗಿತು. ‘ಆದದ್ದಾತು.. ಇನ್ನೊಂದು ಕೂಸಾಗ್ಲಿ, ಊರಿಗ್ ಹೋಗು.. ಇಲ್ಲಾ ಆ ಯಪ್ಪನ್ನೇ ಕರ್ಕಂಬಾ..’ ಅಂತಾ ಪೀಡಿಸುತ್ತಿದ್ದ ಹೆಂಗಳೆಯರ ಕಾಟಕ್ಕೆ ‘ಇನ್ನು ಸುಳ್ಳನ್ನು ಹೆಣೆಯಲಾರೆ.. ಈ ಬಾರಿ ಆ ತರಹ ಗಂಡನ ಮನೆಗೆ ಹೋಗಲಾರೆ..’ ಅಂತಾ ಒಳಗೇ ಸಂಕಟಪಡಲು ಪ್ರಾರಂಭಿಸಿದಳು.

ತನ್ನ ಮೇಲಿನ ಕೆಟ್ಟ ದೃಷ್ಟಿಗೆ ಹೊಲಸು ಮಾತಿಗೆ ತಕ್ಷಣವೇ ರಣಚಂಡಿಯಾಗಿ ಬಿಡುತ್ತಿದ್ದವಳು ಇತ್ತೀಚೆಗೆ ಮೌನಕ್ಕೆ ಶರಣಾಗತೊಡಗಿದ್ದು ಸರ್ಕಲ್ಲಿನಲ್ಲಿನ ಖಾಲಿ ತಿರುಗುವ ಜೀವಗಳಿಗೆ ಹೊಸ ಟಾಪಿಕ್ಕು ತಂದುಕೊಟ್ಟಿತ್ತು. ಕರಿಯಮ್ಮನ ಜೀವನದ ಅತಿ ಸಂಕಷ್ಟದ ದಿನಗಳು ಪ್ರಾರಂಭವಾಗಿಯೇ ಬಿಟ್ಟಂತೆ ಆಕೆಯ ಮಾತು ನಿಲುವು ಕೈಚಳಕ ಎಲ್ಲದರಲ್ಲೂ ಒಡಕು ಎದ್ದಿತ್ತು. ಹೋರಾಟದಿ ಕಟ್ಟಿಕೊಂಡ ಬಾಳು ವಿಲವಿಲ ಒದ್ದಾಡಿ ಸಾಯುತ್ತಿರುವಂತೆ ಆಕೆಗೆ ಭಾಸವಾಗತೊಡಗಿತು. ಆದರೂ ಒಳಗೆಲ್ಲೋ ‘ನೀನು ಸೋಲಬಾರದು’ ಎಂಬ ಧ್ವನಿ ಪ್ರತಿಧ್ವನಿಸಿದಂತಾಗಿ ಮಧ್ಯರಾತ್ರಿ ಎದ್ದು ಕಣ್ಣೀರು ಒರೆಸಿಕೊಂಡು ಮಲಗುತ್ತಿದ್ದಳು.

ಅಂತೂ ಮೂವತ್ತೊಂದನೆಯ ತಾರೀಖು ದಪ್ಪ ಪೌಡರು ಲೇಪನದ ಸಪ್ಪೆಮುಖದಲ್ಲಿ ಎಲ್ಲರೆದುರು ಹೊರಟು ನಿಂತ ಕರಿಯಮ್ಮನಿಗೆ ಒಳಗೆ ತಾನು ನಿಜಕ್ಕೂ ಈ ಚಾ ಅಂಗಡಿಗೆ ವಾಪಸ್ಸು ಬರುತ್ತೇನಾ? ಎಂಬ ಪ್ರಶ್ನೆಯೇ ಹೆಚ್ಚಾಗಿ ಕಾಡಿತ್ತು. ಅಸತ್ಯದ ಜೀವನದಿಂದ ಬೇಸತ್ತವಳಿಗೆ.. ಎಲ್ಲಿ ಹೋದರೂ ಈ ತರಹದ್ದೊಂದು ಚಾ ಅಂಗಡಿ ತೆರೆದು ಬದುಕಬಹುದೆಂಬ ಆತ್ಮವಿಶ್ವಾಸವಿದ್ದರೂ, ತನ್ನ ಏರು ಯೌವನವನ್ನು ಬಿಚ್ಚಿಬಿಚ್ಚಿ ತೋರಿಸುವ ದೇಹಕ್ಕಂಜಿ ಅನಾಹುತದ ಯೋಚನೆಗಳಿಗೆ ಬಲಿಯಾಗತೊಡಗಿದ್ದಳು. ಹಾಲಿನವನಿಗೆ, ತರಕಾರಿಯವಳಿಗೆ ಕರೆದು ಬಾಕಿ ಚುಕ್ತಾ ಮಾಡಿ ಹಗುರಾದವಳಿಗೆ ತಾನು ಎಲ್ಲಾದರೂ ಹೋಗಿ ಅಲ್ಲೇ ಇರಬಹುದು ಅನ್ನಿಸಿತ್ತು. ತಾನು ಕಂಡುಕೊಂಡ ಅಪರೂಪದ ಯಶಸ್ಸನ್ನೂ ಬಲಿಕೊಟ್ಟು ಹೊರಟು ಸರ್ಕಲ್ಲಿನಲ್ಲಿ ನಿಂತವಳಿಗೆ ಅನಾಥ ಭಾವ ಕಾಡುತ್ತ ಮುಖದ ಪೌಡರೆಲ್ಲ ಕರಗಿ ಕಾಲುಗಳು ಕಂಪಿಸುತ್ತ ಗಂಟಲ ಪಸೆ ಆರಿ ಹೋಗಿತ್ತು. ಈ ಬಾರಿ ಗಂಡನ ಜೊತೆ ಬರದಿದ್ದರೆ ಈ ಜನರೆಲ್ಲ ತನ್ನ ಓಡಿಸಿಬಿಡುತ್ತಾರೇನೋ ಅನ್ನುವ ಭ್ರಮೆ ಆವರಿಸತೊಡಗಿತ್ತು. ಮತ್ತೊಂದು ಪಾನ್ ಜಗಿಯುತ್ತ ನಿಂತು ಸಾವರಿಸಿಕೊಂಡು ಅಂತೂ ಬಂದ ರಿಕ್ಷಾ ಏರಿ ಸಮಾಜದ ಅನುಮಾನದ ಕಟಕಟೆಯಿಂದ ಬಿಡಿಸಿಕೊಂಡಂತೆ ದಾಟಿಕೊಂಡಳು. ಎಂದಿನಂತೆ ಬಸ್ಟ್ಯಾಂಡ್ ಹೊಕ್ಕು ಪರಿಚಿತ ಮುಖಗಳಿಂದ ತಪ್ಪಿಸಿಕೊಂಡು ಸುಳ್ಳೇ ಪೇಟೆಯಲ್ಲಿ ತಿರುಗಾಡುತ್ತ ಕತ್ತಲಾದದ್ದೇ ಬಸ್ಟ್ಯಾಂಡಿನ ಮೂಲೆಯಲ್ಲಿ ಹೊರಡಲು ತಯಾರಾಗಿ ನಿಂತಿದ್ದ ಬಸ್ಸಿನೊಳಕ್ಕೆ ಮುಸುಕೆಳೆದುಕೊಂಡು ಹೊಕ್ಕುಬಿಟ್ಟಳು.

ಬಸ್ ಚಾರ್ಜಿಗೆ ನೂರರ ಮೂರ್ನಾಲ್ಕು ನೋಟುಗಳನ್ನೆಳೆದು ಕೊಡುವಾಗ ಮನಸ್ಸಿಗೆ ಬಹಳ ಹಿಂಸೆಯಾದರೂ ದೂರ.. ಬಹುದೂರ.. ಹೋಗುತ್ತಿರುವ ಬಗ್ಗೆ ಖಾತರಿಯಾಗಿ ನೆಮ್ಮದಿಯ ಉಸಿರೆಳೆದಿದ್ದಳು. ದೂರದ ಪಂಡರಾಪುರಕ್ಕೆ ಹೊರಟ ಬಸ್ಸಿನಲ್ಲಿ ಪಾಂಡುರಂಗನನ್ನೇ ನೆನೆದಂತೆ ಹೊರಟವಳಿಗೆ ಹುಬ್ಬಳ್ಳಿ ದಾಟಿ ಕನ್ನಡದ ಗಡಿಯೂ ದಾಟಿದ್ದೇನೆ ಅನ್ನಿಸಿದಾಕ್ಷಣ ನಿರುಮ್ಮಳವಾದ ಮನಸ್ಸು ಹೊಸ ಆಸೆಗಳನ್ನೂ ವಿಲಕ್ಷಣ ಭಯಗಳನ್ನೂ ಹುಟ್ಟಿಸತೊಡಗಿತು. ದುಡ್ಡಿನ ಗಂಟು ಅದುಮಿಕೊಳ್ಳುತ್ತ ದಾರಿ ಸವೆಸಿದ್ದವಳಿಗೆ ಸರಿರಾತ್ರಿ ನಾಲ್ಕರ ಸುಮಾರಿಗೆ ಹಿಂದಿನಿಂದ ಬಂದ ಗಂಡಸಿನ ಕೈಯೊಂದು ತನ್ನ ಎಡತೋಳಿನ ಸಂದಿಯೊಳಗೆ ಓಡಾಡಿದಂತೆ ಭಾಸವಾಯಿತು.

ಯಾರ ಚಾಕರಿಯನ್ನೂ ಮಾಡದೇ ಸ್ವಂತ ದುಡಿಮೆಯಲ್ಲಿ ಬೆಳೆದರೂ ಚಾಕರಿಯಮ್ಮ ಅಂತಲೇ ಹೆಸರಾದವಳು ಲಕ್ಷಣವಾಗಿ ಹುಟ್ಟಿದ್ದೇ ತಪ್ಪಾದಂತೆ ಮುದುಕರೂ ಜೊಲ್ಲುಸುರಿಸುತ್ತ ಬೆನ್ನತ್ತಿಬಿಡುತ್ತಿದ್ದ ಸಂದರ್ಭಗಳಿಂದ ರೋಸಿ, ಯೌವನವೇ ಬದುಕಿನ ಅನಿಷ್ಟ ಅವಧಿಯೆಂದು ನಿರ್ಧರಿಸಿದ್ದಳು. ದೂರದ ಈ ಊರಲ್ಲೂ ಮಧ್ಯರಾತ್ರಿಯಲ್ಲೂ ಬೆಂಬಿಡದ ಜೀವಗಳಿಗೆ ಶಾಪ ಹಾಕುತ್ತ ಈಗ ಈ ಮಧ್ಯರಾತ್ರಿಯಲ್ಲಿ ಬಂಡೇಳುವ ಕುರಿತು ಯೋಚಿಸುತ್ತಲೇ ಎರಡು ಗಂಟೆ ಸವೆಸಿದ್ದಳು. ಪರಸ್ಥಳದಲ್ಲಿ ತಾನು ಒಂಟಿಯಾಗಿ ಪ್ರಯಾಣಿಸುತ್ತಿರುವ ವಿಷಯ ಗೊತ್ತಾಗಬಾರದೆಂದು ಅವಡುಗಚ್ಚಿಕೊಂಡು ಸಹನೆಯ ಮೆಟ್ಟಿಲುಗಳ ಮೇಲೆ ಹತ್ತಿ ಇಳಿದು ಮಾಡತೊಡಗಿದಳು. ಕ್ಷುದ್ರ ಯೋಚನೆಗಳನ್ನು ತಂದೊಡ್ಡುತ್ತಿದ್ದ ಅನಿಷ್ಟ ಪರಿಸ್ಥಿತಿಗೆ ಕುಡುಕನೋ ಕುಂಟನೋ ನಾಮರ್ದನೋ ಅಂತೂ ಒಂದು ಗಂಡಿನ ದೇಹವಾದರೂ ಜೊತೆಗಿದ್ದರೆ ಸಾಕಿತ್ತು; ಇಂತಹ ಕಾಮುಕ ಕ್ರಿಮಿಗಳನ್ನು ಹೊಸಕಿ ಬಿಡುತ್ತಿದ್ದೆ ಅಂದುಕೊಳ್ಳುತ್ತ ಹನಿಗಣ್ಣಾದಳು. ಕಿಟಕಿಯಾಚೆ ಚಂದ್ರ ಮರೆಯಾಗುವುದು ಕಾಣಿಸಿಕೊಳ್ಳುವುದು ಮಾಡುತ್ತ ನಾನಿದ್ದೇನೆ ಅನ್ನುವಂತೆ ಬಸ್ಸಿನ ಜೊತೆಗೇ ಬರುತ್ತಿದ್ದ. ಹೊರಗಿನ ಬಯಲ ಜಾಗಗಳು ಕಪ್ಪನೆಯ ಮರಗಳು ವಿಚಿತ್ರಾಕೃತಿಗಳಾಗಿ ಎದ್ದು ಅವಳ ಕಾಡತೊಡಗಿದವು. ಬಸ್ಸಿಗೆ ಬಸ್ಸೇ ನಿದ್ರೆಯ ಅಮಲಿನಲ್ಲಿದ್ದರೆ ತನ್ನ ದೇಹದ ಏರಿಳಿತಗಳ ಸಂಶೋಧನೆಯಲ್ಲಿ ತೊಡಗಿದಂತೆ ಕೈಯಾಡಿಸುತ್ತಿರುವ ವ್ಯಕ್ತಿಗೆ ನಿದ್ರೆಯ ಸುಳಿವೇ ಇಲ್ಲವಲ್ಲ ಅಂದು ಹಲ್ಲುಕಡಿದಳು. ಅಂತೂ ಇಂತೂ ಸಹನೆಯ ಎಲ್ಲೆ ದಾಟಿದವಳು ಆ ಕೈಯನ್ನು ಬಲವಾಗಿ ಹಿಡಿದು ಎಳೆದೇ ಬಿಟ್ಟಳು. ಚಿಟ್ಟನೆ ಚೀರಿಕೊಂಡ ವ್ಯಕ್ತಿಯ ಸದ್ದಿಗೆ ಜನರೆಲ್ಲ ಏನಾಯ್ತೆಂದು ಬೊಬ್ಬೆ ಹೊಡೆಯುತ್ತ ದಡಬಡಾಯಿಸುತ್ತಲೇ ಅವನ ಕೈ ಬಿಟ್ಟು ಏನೂ ಆಗಿಲ್ಲವೆಂಬಂತೆ ಕುಳಿತುಕೊಂಡಳು.

ಪಕ್ಕನೆ ಹೊತ್ತಿಕೊಂಡ ಬೆಳಕಿಗೆ ಜನರೆಲ್ಲ ಅವನ ಕಡೆ ತಿರುಗಿ ಅವನ ಬಗ್ಗೆ ಹಲವಾರು ಬಗೆಯ ಮಾತುಗಳನ್ನು ಹೇಳುತ್ತಿದ್ದರೆ ಯಾವನೋ ಒಬ್ಬ ‘ಇರೋ ಒಂದು ಕೈನೂ ಅಲ್ಲೆಲ್ಲೋ ಇಡೋಕೆ ಹೋಗಿ ಕಳ್ಕೊಂತಿದ್ಯಲ್ಲೋ.’ ಅಂತಾ ವ್ಯಂಗ್ಯವಾಡಿದ. ಮಧ್ಯರಾತ್ರಿಯ ಹೂಸಿನ ವಾಸನೆ ಮರೆವಂತೆ ಜನ ಗೊಳ್ಳೆಂದು ನಕ್ಕರು. ಚಾಕ್ರಿಗೆ ಸಿಡಿಲು ಬಡಿದಂತಾಯಿತು. ‘ಸಣ್ ಹುಡ್ಗ ಮೈ ಮ್ಯಾಲೇ ನಿದ್ದೆ ಹೋಗ್ಯಾನೆ.. ಹೆಂಗ್ ಬೇಕೋ ಹಂಗ್ ಒದೀತಾನೆ. ನಂಗೂ ನಿದ್ದಿ ಜೊಂಪು. ಯಾರ್ಗಾದ್ರೂ ಏನಾದ್ರೂ ತೊಂದ್ರಿಯಾಗಿದ್ರೆ ಕ್ಷಮ್ಸಿ. ನಮ್ದು ಪರಸ್ಥಳ.’ ಇನ್ನೂ ಏನೇನೋ ಮೆಲುದನಿಯಲ್ಲಿ ಹೇಳುತ್ತಿದ್ದ. ‘ತಾಯಿ ಇಲ್ಲದ ತಬ್ಬಲಿ’ ಮಾತನ್ನು ಮಾತ್ರ ಸ್ಪಷ್ಟವಾಗಿ ಕೇಳಿಸಿಕೊಂಡಳು. ಕಂಡಕ್ಟರ್ ಏನೇನೋ ಗೊಣಗುತ್ತ ಲೈಟ್ ಆರಿಸಿ ಡ್ರೈವರನ ಜೊತೆ ಮಾತಿಗಿಳಿದ. ಕದಡಿಹೋದ ಚಾಕ್ರಿ ಕತ್ತಲಲ್ಲೇ ಪದೇ ಪದೇ ಹಿಂತಿರುಗಿ ನೋಡುತ್ತ ‘ತೊ ತೊ’ ಅಂದುಕೊಳ್ಳತೊಡಗಿದಳು.

ರೊಯ್ಯನೆ ನಡೆದೇ ನಡೆದ ಬಸ್ಸು ಅಂತೂ ಒಮ್ಮೆಲೇ ಎಲ್ಲರನ್ನೂ ಒಂದೆಡೆ ಕುಕ್ಕಿದಂತೆ ಬ್ರೇಕೊತ್ತಿ ನಿಲ್ಲಿಸಿತು. ಕೆಟ್ಟದ್ದನ್ನೇ ಯೋಚಿಸುವ ತನ್ನ ಅಭ್ಯಾಸದ ಅರಿವಾದ ಚಾಕ್ರಿ ಅನ್ಯಾಯವಾಗಿ ಆ ವ್ಯಕ್ತಿಗೆ ನೋವು ಕೊಟ್ಟೆನಲ್ಲಾ ಅಂತಾ ಮಾನಸಿಕವಾಗಿ ಹಿಮ್ಮುಖವಾಗಿ ಯೋಚಿಸಲು ಪ್ರಾರಂಭಿಸಿದ್ದವಳು ಯಾವ ಕ್ಷಣದಲ್ಲೋ ನಿದ್ರೆಗೆ ಜಾರಿ ಈಗ ತನ್ನ ತೋಳಿಗೆ ತಾಗಿರುವ ಮಗುವಿನ ಕೈಯನ್ನು ನಿಧಾನವಾಗಿ ಸರಿಸಿ ಹಿಂತಿರುಗಿ ಆ ವ್ಯಕ್ತಿಯನ್ನೇ ತದೇಕ ಚಿತ್ತದಿಂದ ನೋಡಿದಳು. ಮೋಟು ಕೈಯನ್ನು ನೋಡಿದಾಗ ಮಾತ್ರ ಅವಳ ಮನಸ್ಸು ವಿಪರೀತ ಸಂಕಟಕ್ಕಿಟ್ಟುಕೊಂಡಿತು. ಅವನ ಮೇಲೆ ಅವನ ಮೀಟಿಕೊಂಡು ಮಲಗಿರುವ ಮಗು. ತನ್ನ ಕಲ್ಪನೆಯ ಮಗನಷ್ಟೇ ಪ್ರಾಯದ ಮಗುವಿನಂತಿದೆಯಲ್ಲಾ – ಅಂದುಕೊಂಡಳು. ತನ್ನ ಕಲ್ಪನೆಯ ಗಂಡನ ತರಹದವನು ಅನ್ನುವ ಯೋಚನೆಗೆ ‘ಛೇ. ಅವ್ನಿಗೆ ಸೊಂಚಗೈ ಇರ್ಲಿಲ್ಲ.’ ಅಂದುಕೊಳ್ಳುತ್ತ ಅಲ್ಲಗಳೆದಳು.

ಎಲ್ಲರೂ ಇಳಿದು ಹೋಗಿದ್ದರು. ಅವನ ಕಾಲಿನಿಂದ ತನ್ನ ಬ್ಯಾಗಿನ ತುದಿಯನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿ ಸಾಕಾಗಿ ಎಲ್ಲರೂ ಇಳಿದು ಬಸ್ಸು ಖಾಲಿಯಾದದ್ದೇ ‘ರೀ ಏಳ್ರಿ..’ ಅನ್ನುತ್ತ ಮೈ ಅಲುಗಿಸಿದಳು. ಗಾಢ ನೆಮ್ಮದಿಯಿಂದ ಎದ್ದಂತೆ ಇದ್ದವನ ಮುಖ ಇದ್ದಕ್ಕಿದ್ದಂತೆ ಕಪ್ಪಿಟ್ಟಿತ್ತು. ದೈನ್ಯ ಕಂಗಳಲ್ಲಿ ಎರಡೂ ಕೈ ಒಡ್ಡಿ ‘ಬಾಯಿ. ನಿಮ್ ಬುತ್ತಿಗಂಟ್ನಾಗೆ ಒಂದೆರಡು ರೊಟ್ಟಿ ಇದ್ರ ಕೊಟ್ಟ ಪುಣ್ಯ ಕಟ್ಗೊಳಿ. ನನ್ಮಗ ನಿನ್ನಿಯಿಂದ ಏನೂ ತಿಂದಿಲ್ಲ. ನೀರು. ನೀರು. ಅಂತಾ ವದ್ರುತಾನೇ ನಿದ್ರಿ ಹೋದ. ನಿಮ್ ಬಗಲ್ನಾಗ ನೀರಿನ್ ಬಾಟ್ಲಿ ಕಂಡೇನ್ರಿ. ನೀವ್ ನಿದ್ರಿ ಹೋಗೀರಂತ. ತಕ್ಕೊಳಕ್ಕ ಹೋಗಿ ರಾತ್ರಿ ಹಂಗಾತ್ ನೋಡ್ರಿ.’ ಅಂದು ಟವೆಲ್ಲಿನಿಂದ ಮುಖ ಒರೆಸಿಕೊಂಡ. ಸಿಕ್ಕಿದ್ದೇ ಚಾನ್ಸು ಅನ್ನುವಂತೆ ರಾತ್ರಿ ಜನ ಚೆನ್ನಾಗಿ ಥಳಿಸಿದಂತೆ ಅವನ ಮುಖ ಊದಿಕೊಂಡಿದ್ದು ಗಮನಿಸಿದಳು. ತರಕಾರಿ ಪಾರತವ್ವ ಕಟ್ಟಿಕೊಟ್ಟ ಎರಡು ಹೋಳಿಗೆ ನೆನಪಾಗಿ ಚಕ್ಕನೆ ತೆಗೆದುಕೊಟ್ಟಳು. ಸೆಟೆದು ಮಲಗಿದ್ದ ಮಗನ ಕಾರಣವಾಗಿ ವಿಚಿತ್ರವಾಗಿ ಬಂಧಿತನಾಗಿದ್ದವ ಹೋಳಿಗೆ ತಗೊಳ್ಳಲಾರದ ಸ್ಥಿತಿ ಗಮನಿಸಿದವಳು ತಾನೇ ಮುಂದಾಗಿ ಮಗು ಎತ್ತಿಕೊಂಡಳು. ನಿದ್ರೆಯಲ್ಲೇ ಇದ್ದ ಆ ಮಗು ಚಾಕ್ರಿಯ ತುಂಬಿದ ಎದೆಗಳಲ್ಲೇ ತಲೆ ಹುದುಗಿಸುತ್ತ ಇನ್ನಷ್ಟು ಬಿಗಿಯಾಗಿ ಬಂಧಿಸಿಕೊಂಡಿತು. ಈಗ ಚಾಕ್ರಿ ನಿಜಕ್ಕೂ ಬಂಧಿತಳಾಗಿದ್ದಳು.

ತನ್ನೆಲ್ಲ ಚಟಗಳನ್ನು ಮುಗಿಸಿಕೊಂಡವನಂತೆ ಫ್ರೆಶ್ ಆಗಿ ಬಂದ ಕಂಡಕ್ಟರ್. ‘ನಿಮ್ದಿನ್ನಾ ಮುಗ್ದಿಲ್ಲೇನಬೇ? ನಿನ್ನೆಜ್ಮಾನಂಗ್ ಸೊಂಚಗೈ ಇದ್ದಿದ್ದ ಗೊತ್ತಿದ್ಕಂಡೂ ಏನ್ ಮಿಜಿಮಿಜಿ ಮಾಡಾಕತ್ತೀಯಬೇ. ದೌಡ ಇಳಿ. ಮಗನ್ನ ಆಮ್ಯಾಕೆ ಮುದ್ದ ಮಾಡೀವಂತೆ.’ ಅಂದವನೇ ಮತ್ತೆಲ್ಲೋ ಮರೆಯಾದ. ಚಾಕ್ರಿ ಒಳಗೆ ಹುಳ ಬಿಟ್ಟಂತಾಯಿತು. ಕ್ಷಣ ಸಾವರಿಸಿಕೊಂಡು ಹುಡುಗನ ಎತ್ತಿಕೊಂಡೇ ಕೆಳಗಿಳಿದು ನಿಂತಳು. ‘ಏನ್ ಮಾಡೋದ್ರಿ ನಮ್ ಕರ್ಮ. ವರ್ಷದಿಂದ ದುಡ್ದಿದ್ ದುಡ್ಡ್ ಇಟ್ಕಂಡ್ ಸತ್ತೋದ್ ಹೆಣ್ತಿ ಹರ್ಕಿ ತೀರ್ಸಣಾಂತ ಬಂದ್ರೆ. ಆ ಪಾಂಡ್ರಂಗ ಇಂತಾ ಸ್ಥಿತಿ ತಂದಾನ್ ನೋಡ್ರಿ. ಸೋಡಾ ಬಾಟ್ಲಿ ಹೊಡ್ದೂ ಹೊಡ್ದೂ ಕೂಡಿಟ್ಟ ದುಡ್ಡ್ ಕಣ್ರೀ. ಹಿಂಗ್ ಒಂದೇ ಸಾರ್ತಿ ಮಂಗಮಾಯ ಅಕ್ಕಾತೆ ಅಂದ್ರೆ. ಎಲ್ಲಾ ದೇವ್ರ ಮಾಯ. ಇದ್ದೊಬ್ಳು ಹೆಣ್ತಿನೂ ಕಿತ್ಕಂಡ. ಈಗ ದುಡ್ಡು ಕಿತ್ಕೊಂಡ್ ಆಟ ನೋಡಾಕತ್ತಾನ. ನೀವ್ ನಡ್ರಿ. ನನ್ದ್ ಇದ್ದಿದ್ದೇ ಕರ್ಮ. ಅನ್ಬೋಸ್ಲೇ ಬೇಕಲ್ಲ…’ ಅಂದು ಅವಳ ಸಾಮಾನು ಕೆಳಗಿಳಿಸಿಕೊಂಡು ತನ್ನ ಬ್ಯಾಗುಗಳನ್ನು ಬಗಲಿಗೆ ಏರಿಸಿಕೊಂಡು ಮಗನ ಪಡೆಯಲು ಒಂಟಿ ಕೈ ಚಾಚಿದ. ‘ಇರ್ಲಿ ಬಿಡ್ರಿ. ನೀವೂ ಗುಡಿಗೇ ಹೊಂಟೀರಲ್ಲ. ನಡ್ರಿ ಅಲ್ಲಿವರ್ಗೂ ಬರ್ತೀನಿ. ನಾನೂ ಒಬ್ಬಾಕೆ ಇದೀನಿ’ ಅಂದ ಚಾಕ್ರಿ ಅವನ ಪ್ರತ್ಯುತ್ತರಕ್ಕೆ ಕಾಯದೆ ಬಿಸಿಲಿಗೆದುರು ಮುಖ ಮಾಡಿಕೊಂಡು ನಡೆದೇ ಬಿಟ್ಟಳು. ಅಲ್ಲಿಯವರೆಗೆ ತನ್ನ ಮುಖವನ್ನೇ ದಿಟ್ಟಿಸಿ ನೋಡುತ್ತ ನಿಂತ ಗಂಡಸರಿಗೆ ದೊಡ್ಡಕಣ್ಣು ಬಿಟ್ಟು ಬೆದರಿಸಿ, ದುರುಗುಟ್ಟುತ್ತಿದ್ದ ಜೊಲ್ಲುಬುರುಕರಿಗೆ ‘ಏನ್ ಹಂಗ್ ನೋಡ್ಲಿಕತ್ತೀಯಲೇ ಭಾಡ್ಯಾ? ಹೆಂಗ್ ಅನ್ನಿಸ್‍ತೈತಿ ಮೈಗೆ?’ ಅಂದು ನಾಲಗೆ ಕಡಿದಳು.

ಮೆಟ್ಟಿಲೇರುತ್ತಿದ್ದಂತೆ ಮತ್ತೆ ಆವರಿಸಿಕೊಳ್ಳತೊಡಗಿದ್ದ ಆತ್ಮವಿಶ್ವಾಸಕ್ಕೆ ಕಾರಣ ತನ್ನ ಬಗಲಲ್ಲಿರುವ ಮಗುವೋ, ಹಿಂದೆ ತನ್ನ ಸಾಮಾನನ್ನೂ ಹೊತ್ತು ಬರುತ್ತಿರುವ ವ್ಯಕ್ತಿಯೋ. ಅರಿವಾಗದಂತೆ ನಾಲ್ಕಾರು ಬಾರಿ ಅವನ ತಿರುಗಿ ನೋಡಿದಳು. ಬೆವರಿನ ಮುಖದಲ್ಲಿ ಒಂಟಿ ಕೈಯಲ್ಲಿ ಸಾಮಾನು ಹೊತ್ತು ಬರುತ್ತಿದ್ದವನಿಗೆ ಈಗ ಕಲ್ಪನೆಯ ಗಂಡನ ಹೋಲಿಕೆ ಬರತೊಡಗಿತ್ತು. ಅವಳ ಸೊಂಟದಿಂದ ಮುಂದಕ್ಕೆ ಸೆಟೆದಿದ್ದ ಮಗುವಿನ ಕಾಲಿಗೆ ನಾಯಿ ಕಚ್ಚಿ ಗುಣವಾದಂತಹ ಗುರುತು ಇತ್ತು. ‘ಇಷ್ಟ್ ದಿನಾ ಎಲ್ಲೋಗಿದ್ರೋ ನೀವಿಬ್ರು’ ಅಂತಾ ಅಂತರಂಗದಲ್ಲಿ ಅಂದುಕೊಂಡು ಬೆವರು ಒರೆಸಿಕೊಳ್ಳುತ್ತ ನಿಡಿದಾದ ಉಸಿರಿಟ್ಟಳು. ಎದುರು ಬಿಸಿಲಿಗೆ ಈಕೆಯ ಏದುಸಿರಿಗೆ ಕಣ್ಣು ಬಿಟ್ಟ ಹುಡುಗ ಬೆಚ್ಚಿ ಇವಳ ನೋಡಿ, ಹಿಂದೆ ಬರುತ್ತಿದ್ದ ಅಪ್ಪನ ನೋಡಿ, ಇವಳ ಇನ್ನಷ್ಟು ಬಳಸಿ ಮಲಗಿದ. ಚಾಕ್ರಿಗೆ ಜಾಲಿಗಿಡದ ಬೇಲಿ ಹಾರಿದ್ದೂ, ಪೋಲಿ ಜನರ ಕಾಟಕ್ಕೆ ಅಪಾಯದೂರಿಗೆ ಇಷ್ಟು ವರ್ಷ ಸುತ್ತಿದ್ದೂ ನೆನಪಾಗಿ ಆಗೋದೆಲ್ಲ ಒಳ್ಳೇದಕ್ಕೇ ಅಂದುಕೊಂಡು ಆ ಹುಡುಗನ ಧೂಳಿನ ನೆತ್ತಿಗೆ ಮುದ್ದಿಟ್ಟಳು. ಆತ ಕಣ್ಣೀರು ಒರೆಸಿಕೊಳ್ಳಲಾರದೇ ಒಂದೇ ಕೈಯಲ್ಲಿ ಎಲ್ಲ ಚೀಲ ಸಂಭಾಳಿಸುತ್ತ ನಡೆಯುತ್ತಿದ್ದ. ಮತ್ತೊಂದು ದಿಕ್ಕಿಗೆ ಹೊರಳಿಕೊಂಡದ್ದೇ ಇಬ್ಬರ ನೆರಳುಗಳು ಈಗ ಒಂದೇ ಎಂಬಂತೆ ಅಂಟಿಕೊಂಡದ್ದೇ ದೇಗುಲದ ಘಂಟೆ ಬಾರಿಸಿತು.‌

*****

(ಇಂದ್ರಕುಮಾರ್ ಎಚ್.ಬಿ.)

ಇಂದ್ರಕುಮಾರ್ ಎಚ್.ಬಿ.
ಈ ಕಥೆ ನನಗೆ ತುಂಬಾ ಇಷ್ಟವಾಗಲು ಅನೇಕ ಕಾರಣಗಳಿವೆ. ಕಥೆಯ ಮುಖ್ಯ ಪಾತ್ರ ಕರಿಯಮ್ಮ ಎನ್ನುವವಳು. ಕಥೆಯ ಇಡೀ ಬೆಳವಣಿಗೆ ಪಾತ್ರವೊಂದರ ಬೆಳವಣಿಗೆಯೇ ಆಗುವ ವಿಶೇಷತೆಯನ್ನು ಈ ಕಥೆಯಲ್ಲಿ ಕಾಣಬಹುದಾಗಿದೆ. ಪಾತ್ರಕ್ಕೆ ನ್ಯಾಯ ಒದಗಿಸುವುದರ ಜೊತೆ ವಿವಿಧ ಸಾಮಾಜಿಕ ಸಂಕಟಗಳನ್ನು, ಮಾನಸಿಕ ತುಮುಲಗಳನ್ನು, ನೈತಿಕ ಬಿಕ್ಕಟ್ಟುಗಳನ್ನು, ಧಾರ್ಮಿಕ ಸಂಘರ್ಷವನ್ನು ಒಮ್ಮೆಲೆ ಮೀರುವ ಪಾತ್ರದ ಕಥೆಯಿದು. ಮೈನೆರೆದ ನಂತರದ ದಿನದಿಂದಲೇ ಕರಿಯಮ್ಮ ಎನ್ನುವ ಸಣ್ಣ ಪ್ರಾಯದ ಹುಡುಗಿಯ ಜೀವನ ಮುಳ್ಳಿನ ಹಾಸಿಗೆಯಾಗಿಬಿಡುತ್ತದೆ. ಗಂಡನಾಗಬೇಕಾದ ವ್ಯಕ್ತಿಯ ಅನಿಷ್ಟ ವರಸೆಯನ್ನು ಕಂಡವಳಿಗೆ ಮದುವೆಯ ಹಿಂದಿನ ದಿನವೇ ಆ ಅಸಹ್ಯದಿಂದ ಓಡಿಬಿಡುವ ಶಕ್ತಿ ದಕ್ಕುತ್ತದೆ. ಕಂಡರಿಯದ, ಕೇಳರಿಯದ ನಗರದಕ್ಕೆ ಬಂದು ಬೀಳುವ ಹುಡುಗಿ ಅಲ್ಲೂ ಕಷ್ಟಗಳನ್ನು ಅನುಭವಿಸಿ ಒಂದು ವಿಚಿತ್ರ ಸಂಕಟದ ಸಮಯದಲ್ಲಿ ಮುಸ್ಲಿಂ ಅಜ್ಜನ ನೆರಳಿಗೆ ಬಂದು ಬೀಳುತ್ತಾಳೆ. ಅವನ ಟೀ ಅಂಗಡಿಯನ್ನು ನೋಡಿಕೊಳ್ಳುತ್ತಾ ಅಕಸ್ಮಾತ್ ಸತ್ತ ಅವನ ನಂತರ ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾಳೆ. ಹಳ್ಳಿಯಿಂದ ಪಟ್ಟಣ, ದಾರಿದ್ರ್ಯದಿಂದ ಒಡೆತನ ಹೀಗೆ ವಿವಿಧ ಮಜಲುಗಳನ್ನು ಹತ್ತಿಳಿದು ಮಾಡಿದವಳು ಸಮಾಜವನ್ನು ಮೆಚ್ಚಿಸಲು ಸುಳ್ಳುಗಳ ಸರಮಾಲೆ ಹೆಣೆಯುತ್ತಾಳೆ. ತಾನೇ ತಾಳಿ ಕಟ್ಟಿಕೊಂಡು ತನಗೊಬ್ಬ ಗಂಡನೂ ಮಗನೂ ಇರುವಂತೆ ಕಥೆ ಹೇಳುತ್ತಾ ತಾನೇ ಅದರಲ್ಲಿ ಕಳೆದುಹೋಗುತ್ತಾಳೆ. ಒಂದೆಡೆ ತಾನು ಯಾರು ತನ್ನ ಬದುಕೇನು ಎಂದು ತಿಳಿದ ಒಳಮನಸ್ಸು ವಿಚಿತ್ರವಾಗಿ ಹೆದರಿಸುತ್ತಿದ್ದರೆ, ಕಾಲ್ಪನಿಕ ಸಂಸಾರದ ಗಂಡ ಮಗ ಬೇಕೆ ಬೇಕು ಎಂಬ ಅರ್ಥಹೀನ ಹಠ… ಹೀಗೆ ಒಳಗೂ ಹೊರಗೂ ವಿಲಕ್ಷಣ ನೋವಿನಿಂದ ನರಳುತ್ತಿರುವವಳಿಗೆ ಆಸರೆಯೊಂದು ದೊರಕುವ ಕಲ್ಪನೆ ವಾಸ್ತವವಾಗುವ ದಿನ ಬರುತ್ತದೆ. ಕಥೆ ಅಲ್ಲಿಗೆ ಒಂದು ನಿಲುಗಡೆಯನ್ನು ಪಡೆದುಕೊಳ್ಳುತ್ತದೆ.