ನಾವೂ ನಮ್ಮ ಮಕ್ಕಳೂ, ಕೆಲಸಕ್ಕೂ, ಶಾಲೆಗೂ ಸೈಕಲ್ನಲ್ಲೋ ನಡೆದುಕೊಂಡೋ ಹೋಗಬೇಕು. ನೀವು ಹಾಕಿದ ಊಟ ತಿಂದು ಕೊಬ್ಬಿದ ನಾಯಿಗಳು ನಮ್ಮ ಮೇಲೆ ಹಾರಿ ಬೀಳ್ತವೆ. ಮೊನ್ನೆ ಮೊನ್ನೆ ಒಂದು ಸಣ್ಣ ಹುಡುಗನಿಗೆ ಸಿಕ್ಕಾಪಟ್ಟೆ ಕಚ್ಚಿ ನಾವು ಅವನನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಇನ್ನು ಮೇಲೆ ನೀವು ಇಲ್ಲಿ ತಂದು ಹಾಕಬೇಡಿ ಎಂದರಂತೆ. ಇವಳೇನೋ ಅದಕ್ಕೆ ಉತ್ತರ ಕೊಡಲು ಹೋದರೆ, ಹೊಡೆಯಲೇ ಬಂದರಂತೆ. ಇವಳು ಅದಕ್ಕೆ ಪೊಲೀಸ್ ಕಂಪ್ಲೇಂಟ್ ಕೊಡಲು ಯೋಚಿಸಿ, ಕೊನೆಗೆ ಗಂಡ ಸಮಾಧಾನ ಹೇಳಿದ, ಮೇಲೆ ಸುಮ್ಮನಾದಳಂತೆ. “ಎಲ್ಲಾ ಅನೆಜುಕೆಟೆಡ್ ಬ್ರೂಟ್ಸ್’ ಎಂದು ಬೈದುಕೊಂಡು, ಇನ್ನು ಮೇಲೆ ಆ ಸ್ಥಳ ಬಿಟ್ಟು ಬೇರೆ ಕಡೆ ಹಾಕಲು ನಿರ್ಧರಿಸಿದ್ದಳು.
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ನಾಯಿ ನೆರಳು” ನಿಮ್ಮ ಓದಿಗೆ

ಕೆಲಸದ ರತ್ನಮ್ಮ ಬಂದಾಗ ಹಿತೈಷಿಯ ಮುಖಭಾವ ಗಮನಿಸಿ “ಯಾಕಮ್ಮ ತಡವಾಯಿತಾ” ಎಂದಳು. “ನೀನು ಸರಿಯಾಗೇ ಬಂದಿದ್ದೀಯಾ ನಾನು ಸ್ವಲ್ಪ ಬೇಗ ಹೋಗಬೇಕಿತ್ತು” ಎಂದು “ಸರಿ ಕೆಲಸ ಶುರು ಮಾಡಿಕೋ, ನಿಶ್ಚಲ್ ಜಾಗಿಂಗ್ ಹೋಗಿದಾನೆ, ಇನ್ನೇನು ಬಂದ್ಬಿಡ್ತಾನೆ, ಎಲ್ಲಾ ತಂದಿದ್ದೀಯಾ” ಎಂದು ಯಾಂತ್ರಿಕವಾಗಿ ಪ್ರಶ್ನಿಸಿ, ಅವಳ ಉತ್ತರಕ್ಕೂ ಕಾಯದೆ, ಕೀ ಸ್ಟ್ಯಾಂಡ್‌ನಲ್ಲಿದ್ದ ಕಾರ್ ಕೀ ತೆಗೆದುಕೊಂಡು ಹೊರಟಳು ಹಿತೈಷಿ‌. ಮ್ಯೂಸಿಕ್ ಕ್ಲಾಸ್‌ಗೆ ರೆಡಿಯಾಗಿ ನಿಂತಿದ್ದ ಅಶುತೋಷ್ -ಆರು ವರ್ಷದ, ಹಿತೈಷಿ ನಿಶ್ಚಲ್‌ರ ಮಗ- ಅಮ್ಮನ ಹಿಂದೆ ಓಡಿದ. ಬಾಗಿಲ ಹೊರಗಿದ್ದ ದೊಡ್ಡ ಪಾತ್ರೆ ಒಂದನ್ನು ಎತ್ತಿಕೊಂಡು ಕಾರ್ ಶೆಡ್ ಕಡೆ ಹೊರಟಳು ಹಿತೈಷಿ.

ಎಂ ಟೆಕ್ ಮಾಡಿ, ಎಂಬಿಎ ಮುಗಿಸಿ ಪ್ರತಿಷ್ಠಿತ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಹಿತೈಷಿ, ಜಾಗಿಂಗ್ ಮಾಡುವಾಗ ಪರಿಚಯವಾಗಿ ಮ್ಯಾರಥಾನ್‌ಗಳಲ್ಲಿ ಜೊತೆಯಾಗಿರುತ್ತಿದ್ದ ನಿಶ್ಚಲ್‌ನನ್ನು ಮದುವೆಯಾಗುವ ವಿಷಯ ಮನೆಯಲ್ಲಿ ತಿಳಿಸಿದಾಗ, ಸಾಕಷ್ಟು ಮಾಡರ್ನ್ ಹಾಗೂ ವಿಚಾರವಂತರೆಂದು ಹೆಸರಾದ ಅವಳ ಪೋಷಕರ ಕಡೆಯಿಂದ ಯಾವ ಸಮಸ್ಯೆಯೂ ಬರದೆ ಎರಡೂ ಕುಟುಂಬದವರು ಕುಳಿತು ಮಾತನಾಡಿ ಸರಳ ಮದುವೆ ಮಾಡಿ ಗ್ರಾಂಡ್ ರಿಸೆಪ್ಶನ್ ಇಟ್ಟುಕೊಂಡರು. ಲಾʼನಲ್ಲಿ ಮಾಸ್ಟರ್ಸ್ ಮಾಡಿ ಹೆಸರಾಂತ ಅಡ್ವೋಕೇಟ್ ಪ್ರವೀಣ್ ನಾಯಕ್ ಬಳಿ ಕೆಲವು ಕಾಲ ಶಿಷ್ಯ ವೃತ್ತಿ ಮುಗಿಸಿ ಈಗ ಸಾಕಷ್ಟು ಬಿಸಿಯಾದ ಲಾಯರ್ ಆಗಿದ್ದ. ಜೊತೆಗೆ ಅವನದೇ ಒಂದು ಎನ್ ಜಿ ಓ ನಡೆಸುತ್ತಿದ್ದ. ಎರಡೂ ಕಡೆಯ ಪೋಷಕರ ಮನೆಗೆ ಹತ್ತಿರವಾಗಿರುವಂತೆ ಅಪಾರ್ಟ್ಮೆಂಟ್ ಒಂದರಲ್ಲಿ ಮೂರು ಬೆಡ್ರೂಮ್ ಫ್ಲಾಟ್‌ನಲ್ಲಿ ವಾಸ್ತವ್ಯ ಹೂಡಿದರು. ಮಗು ಬೇಕೋ ಬೇಡವೋ ಎಂದು ಚರ್ಚಿಸಿ, ಅವರಿವರ ಉದಾಹರಣೆ ಕೊಟ್ಟು, ಅಂತೂ ಒಂದು ಸಾಕು ಅದು ಹೆಣ್ಣಾಗಲಿ ಗಂಡಾಗಲಿ, ಎರಡು ವರ್ಷದ ನಂತರ ಎಂದು ನಿರ್ಧರಿಸಿ, ಒಂದು ಮಗು ಆಗಿ, ಅದು ಗಂಡಾಗಿ, ನಿಶ್ಚಲ್‌ಗೆ ಹೆಣ್ಣಾಗಿದ್ದರೆ ಚೆನ್ನಾಗಿತ್ತು ಎಂದೆನಿಸಿದರು ಒಂದು ಮಗುವಿಗೆ ಸಾಕು ಎಂದು ಅರ್ಥವಿರಾಮ ಹಾಕಿದ್ದರು. ಅಶುತೋಷನಿಗೆ ಮೂರು ತುಂಬುವಷ್ಟರಲ್ಲಿಯೇ ಲಕ್ಷಗಟ್ಟಲೆ ಡೊನೇಷನ್ ಕೊಟ್ಟು ಪ್ರತಿಷ್ಠಿತ ಶಾಲೆಯಲ್ಲಿ ಅಡ್ಮಿಶನ್ ಮಾಡಿಸಿ ನಿಟ್ಟುಸಿರು ಬಿಟ್ಟರು. ಮೀಟಿಂಗ್ ಕಾನ್ಫರೆನ್ಸ್ ಅಂತ ಹಿತೈಷಿ ಬೇಗನೆ ಮನೆ ಬಿಡಬೇಕಿತ್ತು. ನಿಶ್ಚಲ್ ಮಗನನ್ನು ಶಾಲೆಗೆ ಬಿಟ್ಟು ಆಫೀಸಿಗೆ ಹೋಗುತ್ತಿದ್ದ. ಮಗನನ್ನು ಹಿಂದುಸ್ತಾನಿ ಸಂಗೀತಕ್ಕೆ ಸೇರಿಸಿದರು ಮನೆಗೆ ಹತ್ತಿರವಿದ್ದ ಶಾಲೆಯೊಂದರಲ್ಲಿ. ಇಷ್ಟು ಬೇಗ ಯಾಕೆ? ಎಂದು ಅಜ್ಜಿ ತಾತ, ಅಮ್ಮಮ್ಮ ಅಜ್ಜ ಕೇಳಿದರು. ಸಣ್ಣ ವಯಸ್ಸಿನಲ್ಲಿ ಶುರು ಮಾಡಿದರೆ ಅನುಕೂಲ. ಅವನಿಗೆ ಏನು ಬೇಕು ಎಂದು ತಿಳಿದಿರುವುದಿಲ್ಲ ನಾವೇ ನಿರ್ಧರಿಸಬೇಕು. ಬೇಸಿಕ್ಸ್ ಕಲಿಯಲಿ, ಸಮಯ ಸರಿ ಹೊಂದದಿದ್ದರೆ ಆಮೇಲೆ ನೋಡೋಣ ಎಂಬ ಸಮಜಾಯಿಷಿ. ಹಾಗಾಗಿ ವಾರದಲ್ಲಿ ಮೂರು ದಿನ ಸಂಗೀತಕ್ಕೆ ಮಗನನ್ನು ಅಲ್ಲಿ ಬಿಟ್ಟು ಹಿತೈಷಿ ತನ್ನ ಕೆಲಸಕ್ಕೆ ಹೋಗುತ್ತಿದ್ದಳು. ಅಂತಹ ದಿನ ಕ್ಲಾಸ್ ಬಿಡುವ ಸಮಯಕ್ಕೆ ಅಲ್ಲಿದ್ದು ನಿಶ್ಚಲ್ ಮಗನನ್ನು ಕಾರಿನಲ್ಲಿ ಶಾಲೆಗೆ ಬಿಡುತ್ತಿದ್ದ‌. ಎರಡು ದಿನ ಮಾತ್ರ ಅಪಾರ್ಟ್ಮೆಂಟಿನ ಹತ್ತಿರ ಬರುತ್ತಿದ್ದ ಶಾಲಾ ವ್ಯಾನ್‌ನಲ್ಲಿ ಹೋಗುತ್ತಿದ್ದ. ಅಲ್ಲಿಯವರೆಗೂ ಕೆಲಸದ ರತ್ನಮ್ಮ ಬಿಡುತ್ತಿದ್ದಳು.

ರತ್ನಮ್ಮ ಹಾಸನ ಬಳಿಯ ಹಳ್ಳಿಯೊಂದರವಳು. ಅವಳ ಗಂಡ ಕ್ಯಾಬ್ ಓಡಿಸುತ್ತಿದ್ದ. ರತ್ನಮ್ಮ ಈ ಅಪಾರ್ಟ್ಮೆಂಟ್‌ನಲ್ಲಿ ನಾಲ್ಕು ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಅದರಲ್ಲಿ ಹೆಚ್ಚಿನ ಕೆಲಸ ಹಾಗೂ ಸಂಬಳ ಹಿತೈಷಿ ಮನೆಯಲ್ಲಿ. ಬೆಳಗ್ಗಿನ ತಿಂಡಿ ಮಾತ್ರ ಹಿತೈಷಿಯ ಕೆಲಸ. ಅದೂ ಕೆಲವೊಮ್ಮೆ ಬ್ರೆಡ್, ಬಟರ್ ಜ್ಯಾಂ, ಸ್ಯಾಂಡ್ವಿಚ್ ಎಂದು ಮುಗಿದು ಹೋಗುತ್ತಿತ್ತು. ಹಣ್ಣಿನ ರಸದ ವಿವಿಧ ನಮೂನೆಯ ಪ್ಯಾಕ್‌ಗಳು ಫ್ರಿಜ್ ತುಂಬಾ ಇರುತ್ತಿತ್ತು. ರತ್ನಮ್ಮ ಬೆಳಗಿನ ಕಸಗುಡಿಸಿ, ಸಾರಿಸಿ ಒರೆಸಿ, ಪಾತ್ರೆ ತೊಳೆದು ಒಪ್ಪ ಮಾಡಿ, ಆಶುತೋಷನನ್ನು- ಎರಡು ದಿನ-ವ್ಯಾನ್ ಬಳಿ ಬಿಟ್ಟು ಹೊರಟರೆ, ಸಂಜೆ ಬಂದು ಕಸ ಗುಡಿಸಿ ರಾತ್ರಿಯ ಅಡುಗೆ- ಮುಖ್ಯವಾಗಿ ಚಪಾತಿ, ಪಲ್ಯ, ದಾಲ್ ಮುಂತಾದವನ್ನು- ಮಾಡಿಟ್ಟು ಹೋಗುತ್ತಿದ್ದಳು. ಅವಳ ಮಗ ದರ್ಶನ್ (ಅವಳ ಗಂಡ ಸಿದ್ದೇಶ್ ದರ್ಶನ್ ಕಟ್ಟರ್ ಫ್ಯಾನ್ ಆದ್ದರಿಂದ ಮಗನಿಗೆ ಡಿ ಬಾಸ್ ಹೆಸರೇ ಇಟ್ಟಿದ್ದ) ಹತ್ತಿರದ ಸರ್ಕಾರಿ ಶಾಲೆಗೆ ನಡೆದು ಹೋಗುತ್ತಿದ್ದ. ತುಂಬಾ ಚೂಟಿ ಹುಡುಗ. ರತ್ನಮ್ಮನಿಗೂ ಮಗನನ್ನು ಯಾವುದಾದರೂ ‘ಕಾರ್ಮೆಂಟ್’ ಗೆ ಸೇರಿಸುವ ಹಂಬಲ ಇತ್ತಾದರೂ ವಾರದಲ್ಲಿ ಮೂರು ದಿನ ಕೆಲಸಕ್ಕೆ ಚಕ್ಕರ್ ಹೊಡೆಯುವ ಗಂಡನಿಂದಾಗಿ, ಮುಂದೆ ಸಾಧ್ಯವಾದಾಗ ನೋಡೋಣ ಎಂದು ಸಮಾಧಾನ ಪಟ್ಟುಕೊಂಡಿದ್ದಳು.

ಇತ್ತೀಚೆಗೆ ಅಂದರೆ ಸುಮಾರು ನಾಲ್ಕೈದು ತಿಂಗಳಿಂದ ರತ್ನಮ್ಮಳಿಗೆ ಇನ್ನೊಂದು ಕೆಲಸವನ್ನು ವಹಿಸಿದ್ದಳು ಹಿತೈಷಿ. ಅದೇನೆಂದರೆ ಕೋಳಿ ಅಂಗಡಿಯಿಂದ ಉಪಯೋಗಕ್ಕೆ ಬರದ ಅದರ ಪಾದಗಳನ್ನು ಒಟ್ಟಿಗೆ ತೆಗೆದುಕೊಂಡು ಮನೆಯಲ್ಲಿ ಬೇಯಿಸಿ, ಬೇಕಾದನ್ನು ಹಾಕಿ, ಒಂದು ದೊಡ್ಡ ಪಾತ್ರೆಯಲ್ಲಿ ತಂದು ಹಿತೈಷಿಗೆ ಕೊಡಬೇಕು. ರತ್ನಮ್ಮನಿಗೆ ಅದಕ್ಕೆ ಸಾಕಷ್ಟು ಹಣ ಸಿಗುತ್ತಿತ್ತು. ಹಿತೈಷಿಯಿಂದ. ಅಲ್ಲದೇ ಅದೊಂದು ಪುಣ್ಯದ ಕೆಲಸ ಎಂದುಕೊಂಡಿದ್ದಳು ರತ್ನಮ್ಮ.

ಹೌದು, ಹಿತೈಷಿಗೆ ಹಾಗೂ ಸ್ವಲ್ಪಮಟ್ಟಿಗೆ ನಿಶ್ಚಲ್‌ನಿಗೂ ಪ್ರಾಣಿ ಪ್ರೀತಿ. ಅದರಲ್ಲೂ ನಾಯಿಗಳೆಂದರೆ ಅಚ್ಚುಮೆಚ್ಚು. ಆದರೆ ಈಗಿದ್ದ ಪರಿಸ್ಥಿತಿಯಲ್ಲಿ ನಾಯಿ ಸಾಕಲು ಆಗುತ್ತಿರಲಿಲ್ಲ. ಹಾಗೇನಾದರೂ ಮಾಡಬೇಕೆಂದರೆ ಬೇರೆ ಕೆಲಸಗಳಿಂದ ಬಿಡಿಸಿ ಬೆಳಗಿನಿಂದ ತಾವಿಬ್ಬರೂ ಬರುವವರೆಗೂ ರತ್ನಮ್ಮನನ್ನು ಮನೆಯಲ್ಲಿ ಇರಿಸಿಕೊಳ್ಳಬೇಕು. ಮುಂದೊಂದು ದಿನ ಇದನ್ನು ಕಾರ್ಯರೂಪಕ್ಕೆ ತರುವ ಆಲೋಚನೆಯೂ ಇತ್ತು. ನಿಶ್ಚಲ್ ಲಾಯರ್ ವೃತ್ತಿಯ ಜೊತೆಗೆ ಕೆಲವೊಂದು ಎನ್‌ಜಿಓ ಗಳಲ್ಲಿ ತೊಡಗಿಸಿಕೊಂಡಿದ್ದ. ಅದರಲ್ಲಿ ಒಂದು ಅನಾಥ ಪ್ರಾಣಿಗಳನ್ನು -ಮುಖ್ಯವಾಗಿ ಬೀದಿ ನಾಯಿಗಳನ್ನು- ರಕ್ಷಿಸುವುದು. ಅಪಘಾತಕ್ಕೀಡಾಗುವ ನಾಯಿಗಳು ಸಾಯದೆ ಉಳಿದಿದ್ದರೆ, ಅವುಗಳ ಶುಶ್ರೂಷೆ ಮಾಡುವುದು ಇತ್ಯಾದಿ. ಹಿತೈಷಿಯೂ ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಳು. ಅದರ ಒಂದು ಭಾಗವೆಂಬಂತೆ ಪ್ರತಿದಿನ -ವಾರದಲ್ಲಿ ಐದು ದಿನ -ಬೀದಿ ನಾಯಿಗಳು ಹೆಚ್ಚಾಗಿ ಇರುವ ಸ್ಥಳಗಳನ್ನು ಹುಡುಕಿ, ಅವುಗಳಿಗೆ ಆಹಾರ ಹಾಕುವ ಕೆಲಸ ಮಾಡುತ್ತಿದ್ದಳು. ಒಂದು ದಿನ ಸಂಜೆ ರತ್ನಮ್ಮ ಕೆಲಸಕ್ಕೆ ಬಂದಿದ್ದಾಗ ಹಿತೈಷಿ ಏನೋ ಗೊಣಗುತ್ತಾ ಇದ್ದಳು. ಆಗ ತಿಳಿದದ್ದೇನೆಂದರೆ ಹೀಗೆ ಒಂದು ಸ್ಥಳದಲ್ಲಿ ಹಿತೈಷಿ ನಾಯಿಗಳಿಗೆ ಊಟ ಹಾಕುತ್ತಿದ್ದಾಗ, ಅಲ್ಲಿದ್ದ ಸ್ಲಂನಂತಹ ಬಡಾವಣೆಯ ಕೆಲವರು ಬಂದು ಗಲಾಟೆ ಮಾಡಿದರಂತೆ. ನೀವೇನೋ ಊಟ ಹಾಕಿ ಕಾರಿನಲ್ಲಿ ಹೋಗಿ ಬಿಡ್ತೀರಾ, ನಾವೆಲ್ಲ ಬಡವರು. ನಾವೂ ನಮ್ಮ ಮಕ್ಕಳೂ, ಕೆಲಸಕ್ಕೂ, ಶಾಲೆಗೂ ಸೈಕಲ್ನಲ್ಲೋ ನಡೆದುಕೊಂಡೋ ಹೋಗಬೇಕು. ನೀವು ಹಾಕಿದ ಊಟ ತಿಂದು ಕೊಬ್ಬಿದ ನಾಯಿಗಳು ನಮ್ಮ ಮೇಲೆ ಹಾರಿ ಬೀಳ್ತವೆ. ಮೊನ್ನೆ ಮೊನ್ನೆ ಒಂದು ಸಣ್ಣ ಹುಡುಗನಿಗೆ ಸಿಕ್ಕಾಪಟ್ಟೆ ಕಚ್ಚಿ ನಾವು ಅವನನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಇನ್ನು ಮೇಲೆ ನೀವು ಇಲ್ಲಿ ತಂದು ಹಾಕಬೇಡಿ ಎಂದರಂತೆ. ಇವಳೇನೋ ಅದಕ್ಕೆ ಉತ್ತರ ಕೊಡಲು ಹೋದರೆ, ಹೊಡೆಯಲೇ ಬಂದರಂತೆ. ಇವಳು ಅದಕ್ಕೆ ಪೊಲೀಸ್ ಕಂಪ್ಲೇಂಟ್ ಕೊಡಲು ಯೋಚಿಸಿ, ಕೊನೆಗೆ ಗಂಡ ಸಮಾಧಾನ ಹೇಳಿದ, ಮೇಲೆ ಸುಮ್ಮನಾದಳಂತೆ. “ಎಲ್ಲಾ ಅನೆಜುಕೆಟೆಡ್ ಬ್ರೂಟ್ಸ್” ಎಂದು ಬೈದುಕೊಂಡು, ಇನ್ನು ಮೇಲೆ ಆ ಸ್ಥಳ ಬಿಟ್ಟು ಬೇರೆ ಕಡೆ ಹಾಕಲು ನಿರ್ಧರಿಸಿದ್ದಳು.

ಹಾಗೆ ನೋಡಿದರೆ ಈ ಸಮಸ್ಯೆಗೆ ಹಿತೈಷಿಯಂತಹವರು ಮಾತ್ರ ಕಾರಣರಲ್ಲ. ಅನೇಕ ಸಣ್ಣ ಸಣ್ಣ ಬಡಾವಣೆಗಳಲ್ಲೂ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಾಯಿ ಹಿಡಿಯಲು ಬರುವವರು ಅದರಲ್ಲೂ ಯಾರದೋ ಕೆಲವರ ಒತ್ತಾಯಕ್ಕೆ, ನೆಪ ಮಾತ್ರಕ್ಕೆ ಬಂದಾಗ, ಎಂಟು ಹತ್ತು ನಾಯಿಗಳು ಓಡಾಡುವ ಸ್ಥಳದಲ್ಲಿ ಅವರಿಗೆ ಒಂದೇ ನಾಯಿ ಸಿಗುವುದು. ಕಾರಣ ಬಲು ಸರಳ. ಸಣ್ಣ ಸಣ್ಣ ಮನೆಯವರು ಉಳಿದದ್ದು ಪಳದದ್ದನ್ನು ಈ ನಾಯಿಗಳಿಗೆ ಹಾಕುತ್ತಾರೆ. ಅನಧಿಕೃತವಾಗಿ ಇದು ಅವರು ಸಾಕಿದ ನಾಯಿಯಂತೆ ಅವರ ಭಾವನೆ. ಹಾಗಾಗಿ ನಾಯಿ ಹಿಡಿಯಲು ಬಂದಾಗ ಇಂತಹ ನಾಯಿಗಳು ಈ ಮನೆಗಳ ಸಂದುಗೊಂದಿನಲ್ಲಿ ಆಶ್ರಯ ಪಡೆದು ತಪ್ಪಿಸಿಕೊಂಡರೆ ಸಿಕ್ಕ ಒಂದು ನಾಯಿಯು ಯಾವುದೋ ಬಡಾವಣೆಯಲ್ಲಿ ಬಿಡುಗಡೆಯಾಗಿ, ತನ್ನ ಸಂತತಿ ಬೆಳೆಸಲು ಸಿದ್ಧವಾಗುತ್ತದೆ. ಇದರ ಹಿಂದಿನ ಕಾರಣ ಬೀದಿ ನಾಯಿಗಳ ಸಂಖ್ಯೆ ಕಡಿಮೆ ಮಾಡುವ ದೃಷ್ಟಿಯಿಂದ ಅವುಗಳನ್ನು ಹಿಡಿದು, ಅವುಗಳಿಗೆ ಸಂತಾನ ಹರಣದ ಚುಚ್ಚುಮದ್ದು ಕೊಟ್ಟು, ಪುನಃ ಅವುಗಳನ್ನು ಹಿಡಿದ ಜಾಗಕ್ಕೆ ಬಿಡಬೇಕಾದದ್ದು ಆ ಸಂಸ್ಥೆಯ ಕೆಲಸ. ಇದಕ್ಕಾಗಿ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಕೆಲವು ಎನ್ ಜಿ ಒ ಗಳಿಗೆ ವ್ಯಯಿಸುತ್ತದೆ. ಆದರೆ ಅದರಲ್ಲಿ ಕೆಲವರು ಕಾಟಾಚಾರಕ್ಕೆ ನಾಯಿ ಹಿಡಿದಂತೆ, ಚುಚ್ಚುಮದ್ದು ಕೊಟ್ಟಂತೆ ಮಾಡಿ ಹಣ ಜೇಬಿಗಿಳಿಸುತ್ತಿದ್ದಾರೆ. ಇದು ಈ ಸಮಸ್ಯೆ ಬೃಹದಾಕಾರವಾಗಲು ಮುಖ್ಯ ಕಾರಣ. ಬೃಹದಾಕಾರವಾಗಿ ಬೆಳೆಯುತ್ತಿರುವ ನಗರದ ಹೊರವಲಯಗಳಲ್ಲಿ ಎಲ್ಲೆಂದರಲ್ಲಿ ತಲೆಯೆತ್ತುವ ಅಪಾರ್ಟ್ಮೆಂಟ್‌ಗಳ ಹಾಗೆಯೇ, ಅನಧಿಕೃತ, ಲೈಸೆನ್ಸ್ ಪಡೆಯದ ಕೋಳಿ ಅಂಗಡಿಗಳು ಹೆಚ್ಚಾಗಿರುವುದು, ಅವುಗಳ ತ್ಯಾಜ್ಯ ತಿಂದು ಬದುಕುವ ಶ್ವಾನಗಳು ಅವು ಸಿಗದಿದ್ದಾಗ ಮಕ್ಕಳ ಮೇಲೆ ಎರಗುವುದು ಕೆಲವು ಕಡೆ ಕಂಡು ಬಂದಿದೆ. ಆದರೆ ಈ ಬಗ್ಗೆ ಗಮನ ಕೊಡುವಷ್ಟು ಪುರುಸೊತ್ತು ಆಳುವ ರಾಜಕಾರಣಿಗಳಿಗೆ ಅಧಿಕಾರಿಗಳಿಗೆ ಇಲ್ಲ.

ಎರಡು ಮೂರು ದಿನ ರತ್ನಮ್ಮ ಕೆಲಸಕ್ಕೆ ಬರಲಿಲ್ಲ. ಫೋನ್ ಮಾಡಿದರೂ ತೆಗೆಯಲಿಲ್ಲ. ಹಿತೈಷಿ ರತ್ನಮ್ಮ ಕೆಲಸಕ್ಕೆ ಬರುತ್ತಿದ್ದ ಅಕ್ಕಪಕ್ಕದ ಫ್ಲಾಟ್‌ಗಳಲ್ಲಿ ವಿಚಾರಿಸಿದರೆ ಅವರಿಗೂ ಅದೇ ಅನುಭವ. ಗಂಡ ಹೆಂಡತಿಯೇ ಒಂದೊಂದು ದಿನ ಒಬ್ಬರು ರಜೆ ಹಾಕಿ ಮನೆ ನಿಭಾಯಿಸಿದರು. ನಾಲ್ಕನೇ ದಿನ ರತ್ನಮ್ಮ ಬಂದಳು. ಇವರಿಗೆ ಅನಾನುಕೂಲವಾಗಿದ್ದರೂ ಹಾರಾಡುವ ಹಾಗಿಲ್ಲ. ಪರ್ಮನೆಂಟಾಗಿ ಬಿಟ್ಟುಬಿಟ್ಟರೆ ತಕ್ಷಣಕ್ಕೆ ಬೇರೆಯವರು ಸಿಗಬೇಕಲ್ಲ ಹಾಗಾಗಿ “ಫೋನ್ ಆದರೂ ಮಾಡಬಹುದಿತ್ತಲ್ಲ” ಎಂದಷ್ಟೇ ಹೇಳಿದರು. ರತ್ನಮ್ಮ ಹೇಳಿದ ಸಂಗತಿಯ ವಿವರ ಏನೆಂದರೆ, ನಾಲ್ಕು ದಿನದ ಕೆಳಗೆ ಸ್ವಲ್ಪ ತಡವಾಗಿದ್ದುದರಿಂದ ಮಗನಿಗೆ ತಿಂಡಿ ಮಾಡಿಕೊಡಲು ಸಾಧ್ಯವಾಗಿರಲಿಲ್ಲ. ಅವಳಿಗೆ ಅವರಿವರ ಮನೆಯಲ್ಲಿ ಆಗುತ್ತದೆ. ಗಂಡನಿಗೂ ಹೊರಗೆ ಸಿಗುತ್ತದೆ. ಹಾಗಾಗಿ ಮಗನಿಗೆ ಮಾತ್ರ ಬೆಳಗಿನ ತಿಂಡಿ. ಅಲ್ಲದೆ ದರ್ಶನ್‌ಗೆ ಮಧ್ಯಾಹ್ನ ಬಿಸಿ ಊಟ ಸಿಗುವ ಕಾರಣ ಅವನ ಕೈಯಲ್ಲಿ ಒಂದು ಬನ್ ಕೊಟ್ಟು ಶಾಲೆಗೆ ಕಳಿಸಿ ತನ್ನ ಕೆಲಸಕ್ಕೆ ಹೊರಡುವ ಸಿದ್ಧತೆ ನಡೆಸಿದ್ದಾಳೆ. ಆದರೆ ದಾರಿಯಲ್ಲಿ ನಾಯಿಗಳ ಹಿಂಡೊಂದು ದರ್ಶನ್ ಕೈಯಲ್ಲಿದ್ದ ಬನ್ ಗಮನಿಸಿ ಅವನ ಮೇಲೆ ಮುಗಿಬಿದ್ದಿವೆ. ಸಹಜವಾಗಿಯೇ ಒಂದೆರಡು ನಾಯಿಗಳು ಕೈಕಾಲಿಗೆ ಕಚ್ಚಿ ಬಿಟ್ಟಿದೆ. ಹತ್ತಿರದವರು ಗಮನಿಸಿ ನಾಯಿಗಳನ್ನು ಓಡಿಸಿ, ತನ್ನ ಮಗನನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ಪರಿಚಿತ ಮಹಿಳೆಯ ಮೂಲಕ ವಿಷಯ ತಿಳಿದ ರತ್ನಮ್ಮ ಗಂಡನಿಗೆ ಫೋನ್ ಮಾಡಿ ಕರೆಸಿಕೊಂಡು, ಮಗನನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿ, ಅಲ್ಲಿ ನಾಯಿ ಕಡಿತಕ್ಕೆ ಕೊಡುವ ಇಂಜೆಕ್ಷನ್ ಇಲ್ಲದೆ ಕೆಆರ್ ಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಎರಡು ದಿನ ಚಿಕಿತ್ಸೆ ಪಡೆದು ನಿನ್ನೆ ಮನೆಗೆ ಕರೆದು ತಂದಿದ್ದಾರೆ.


ಅಲ್ಲದೆ ರತ್ನಮ್ಮನ ಅಕ್ಕನ ಮಗನೊಬ್ಬ ಸೈಕಲ್‌ನಲ್ಲಿ ಕೆಲಸಕ್ಕೆ ಹೋಗುವಾಗ ರಾಮಮೂರ್ತಿ ನಗರದ ಕಲ್ಕೆರೆ ಬೀದಿಯಿಂದ ಮುಖ್ಯ ರಸ್ತೆಗೆ ಬರುವಾಗ ನಾಯಿ ಒಂದು ಅವನ ಮೇಲೆ ಹಾರಿತಂತೆ. ಅದರಿಂದ ತಪ್ಪಿಸಿಕೊಳ್ಳಲು ಹೋಗಿ ರಸ್ತೆಗೆ ಬಿದ್ದಾಗ, ಅವನ ಮೇಲೆ ಕಾರು ಹರಿದು ಕಾಲಿಗೆ ತುಂಬಾ ಪೆಟ್ಟಾಗಿ ಮೂರು ತಿಂಗಳು ಆಸ್ಪತ್ರೆಯಲ್ಲಿ ಇದ್ದನಂತೆ. ಇನ್ನೊಂದು ಮುಖ್ಯ ವಿಷಯ ರತ್ನಮ್ಮ ಹಿತೈಷಿಯ ಕಡೆ ಕಿರುಗಣ್ಣಿನಿಂದ ನೋಡಿಕೊಂಡು ಹೇಳಿದ್ದೇನೆಂದರೆ ‘ಇತ್ತಿತ್ಲಾಗೆ ನಮ್ಮನೆ ಹತ್ರಾನು ಯಾರೋ ನಾಯಿಗೆ ಊಟ ತಂದಾಕ್ತಾ ಅವರೆ, ಚಿಕನ್ನು ಮಟನ್ನು ಅಂತʼ ಹಿತೈಷಿ ಮಾತು ಕೇಳಿಸಿಕೊಳ್ಳಲಿಲ್ಲವೇನೋ ಎಂಬಂತೆ ಮಗನ ಶೂ ಲೇಸ್ ಕಟ್ಟುತ್ತಿದ್ದಳು. “ನಮ್ಮನೆ ಅತ್ರ ಚಿಕ್ಕನ್ ಅಂಗಡಿ ಯಾಕೋ ಬಾಗಲಾಕೋವ್ರೆ, ಇನ್ನು ಮುಂದೆ ನಾನು ತಂದುಕೊಡಕ್ಕಿಲ್ಲ” ಎಂದಳು ರತ್ನಮ್ಮ, ಪಾಪದಲ್ಲಿ ತನ್ನ ಪಾಲು ಇರದಿರಲಿ ಎಂಬ ಉದ್ದೇಶದಿಂದ.!