ಹಿಂದೆ ಬಂದರೆ ಒದೆಯದ, ಮುಂದೆ ಬಂದರೆ ಹಾಯದ ಹಸುವಿನಂತಹ ಗುಣದ ಪುಗಸಟ್ಟೆ ಪುಟ್ಟರಾಜನ ಬಗ್ಗೆ ಊರಿನ ಜನರಿಗೆಲ್ಲಾ ಅಪಾರ ಪ್ರೀತಿ. ಏನೇ ಕೆಲಸ ಹೇಳಿದರೂ ಸಹ ಇಲ್ಲವೆನ್ನದೆ ಮಾಡುತ್ತಿದ್ದ ಪುಟ್ಟರಾಜ, ನೆರೆ ಹೊರೆಯ ಹಳ್ಳಿಗಳಿಗೆ ಹೋಗಿ ತೆಂಗಿನ ಮರ ಹತ್ತಿ ಕಾಯಿ ಕೀಳುವುದು, ಸುಲಿಯುವುದು, ಕಳೆ ಕೀಳುವುದು ಹೀಗೆ ನೂರೆಂಟು ಕೆಲಸಗಳನ್ನು ಪ್ರೀತಿಯಿಂದ ಮಾಡಿ ಬರುತ್ತಿದ್ದ. ಅವರು ಉಣ್ಣಲು ಅಥವಾ ಕುಡಿಯಲು ಏನಾದರೂ ಕೊಟ್ಟರೆ ಅದೇ ಅವನ ಪಾಲಿಗೆ ಪ್ರಸಾದವಾಗಿತ್ತು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಡಾ. ಎನ್. ಜಗದೀಶ್ ಕೊಪ್ಪ ಬರೆದ “ಪುಗಸಟ್ಟೆಯ ಪ್ರಣಯ ಪ್ರಸಂಗ” ಕಥೆ ನಿಮ್ಮ ಈ ಭಾನುವಾರದ ಓದಿಗೆ

ಶಾನುಭೋಗರಹಳ್ಳಿ ಎಂಬ ಹೆಸರಿನ ಆ ಊರು ಈ ದೇಶದ ಎಲ್ಲಾ ಹಳ್ಳಿಗಳ ಹಾಗೆ ಒಂದು ಕಾಲದಲ್ಲಿ ಸದಾ ತಣ್ಣಗೆ ಮೌನವಾಗಿ ಇದ್ದೂ ಇಲ್ಲದಂತಿತ್ತು. ಊರಿನಲ್ಲಿ ಸಕಲೆಂಟು ಜಾತಿಗಳು ತಮ್ಮ ತಮ್ಮ ಕುಲ ಕಸುಬುಗಳ ಜೊತೆ ಅಂಟಿಕೊಂಡಿದ್ದರೂ ಸಹ, ಊರಿನ ಜನರೆಲ್ಲಾ ಒಬ್ಬರಿಗೊಬ್ಬರು ಆಸರೆಯಾಗಿ ಬದುಕುವ ಗುಣವನ್ನು ಕಾಪಾಡಿಕೊಂಡು ಬಂದವರಾಗಿದ್ದರು. ಇದು ಅಲ್ಲಿಯ ಜನರನ್ನು ಬಣ್ಣದ ಚಿಂದಿಗಳನ್ನು ಆಯ್ದು ನೇಯ್ದ ಕೌದಿಯಂತೆ ಆಕಾಶದಡಿ ಕೂಡಿ ಹಾಕಿತ್ತು.

ಬೆಂಗಳೂರೆಂಬ ಮಹಾನಗರಿಗೆ ಕೇವಲ ಮುವತ್ತು ಕಿಲೋಮೀಟರ್ ದೂರದಲ್ಲಿದ್ದ ಶಾನುಭೋಗರಹಳ್ಳಿಗೆ ನಗರವನ್ನು ಸಂಪರ್ಕಿಸುವ ಯಾವುದೇ ಮಜಬೂತಾದ ರಸ್ತೆಗಳಿಲ್ಲದಿದ್ದ ಕಾರಣ ಊರಿನಲ್ಲಿ ನೆಮ್ಮದಿಯು ಮನೆ ಮಾಡಿತ್ತು. ಯಾವುದೇ ನಯನಾಜೂಕನ್ನು ಕಾಣದೆ, ಮಳೆಯಾಶ್ರಯದಲ್ಲಿ ಬೆಳೆದ ರಾಗಿ, ಶೆಂಗಾ, ಅವರೆ, ಅಲಸಂದೆ, ಹುರುಳಿ ಬೆಳೆಗಳ ಜೊತೆಗೆ ಕೆರೆಯ ಕೆಳಗಡೆ ಇರುತ್ತಿದ್ದ ಅಂಗೈ ಅಗಲದ ಭೂಮಿಯಲ್ಲಿ ಬೆಳೆದ ಭತ್ತ ಇವುಗಳಲ್ಲಿ ಅಲ್ಲಿನ ಜನತೆ ನೆಮ್ಮದಿ ಕಂಡುಕೊಂಡಿದ್ದರು.

ಬಡತನ ನಡುವೆಯೂ ನೆಮ್ಮದಿಯನ್ನು ಕಂಡುಕೊಂಡಿದ್ದ ಶ್ಯಾನುಭೋಗರಹಳ್ಳಿಗೂ ಬೆಂಗಳೂರೆಂಬ ನಾಯಕಸಾನಿಗೂ ನಡುವೆ ರಸ್ತೆ ಸಂಪರ್ಕ ಏರ್ಪಟ್ಟ ದಿನದಿಂದ ಇಡೀ ಊರಿನ ಚಹರೆ ಬದಲಾಯಿತು. ನಗರದೊಳಗೆ ಹಾಯ್ದು ಹೋಗಬೇಕಿದ್ದ ಹೆದ್ದಾರಿಯ ದಿಕ್ಕನ್ನು ಬದಲಿಸಿದ ಸರ್ಕಾರವು ಬೈ ಪಾಸ್ ರಸ್ತೆಯೊಂದನ್ನು ನಿರ್ಮಿಸಿತು. ಈ ಹೊಸ ಹೆದ್ದಾರಿಯು ಶ್ಯಾನುಭೋಗಹಳ್ಳಿಯ ಮಧ್ಯಭಾಗದಲ್ಲಿ ಹಾಯ್ದು ಹೋದುದರ ಫಲವಾಗಿ ಇಡೀ ಊರನ್ನು ಉದ್ದುದ್ದವಾಗಿ ಸೀಳಿ ಹಾಕಿತು. ನಮ್ಮೂರಿಗೆ ರಸ್ತೆ ಬೇಡ, ಜಮೀನಿಗೆ ಪರಿಹಾರಬೇಡ ಎಂದು ಪ್ರತಿಭಟಿಸಿದ ರೈತರ ಎದುರು, ಅದೇ ಊರಿನ ಯುವಕರನ್ನು ಎತ್ತಿಕಟ್ಟಿದ ರಾಜಕಾರಣಿಗಳು ಸರ್ಕಾರದ ಪರ ಘೋಷಣೆ ಕೂಗಿಸಿ, ರಸ್ತೆ ಬೇಕು, ಅಭಿವೃದ್ಧಿ ಬೇಕು ಎಂಬ ಫಲಕ ಹಿಡಿಸಿ, ಮೂಗಿನ ಮಟ್ಟಕ್ಕೆ ಕುಡಿಸಿ, ಕಂಠದವರೆಗೆ ಬಾಡು ಬಳ್ಳೆ ತಿನ್ನಿಸಿ ಊರಿನಲ್ಲಿ ಅಣ್ಣ ತಮ್ಮಂದಿರಂತೆ ಬದುಕಿ ಬಾಳಿದವರನ್ನು ರಾತ್ರೋರಾತ್ರಿ ವೈರಿಗಳನ್ನಾಗಿ ಪರಿವರ್ತಿಸಿದರು.

ಸದಾ ತಣ್ಣಗೆ ನಿದ್ರಿಸುತ್ತಿದ್ದ ಶ್ಯಾನುಭೋಗರಹಳ್ಳಿಯು ಹೆದ್ದಾರಿಯಾಗುತ್ತಿದ್ದಂತೆ ಇಪ್ಪತ್ತು ನಾಲ್ಕು ಗಂಟೆಯೂ ಕಾರ್ಯ ಚಟುವಟಿಕೆಯ ಕೇಂದ್ರವಾಯಿತು. ರಸ್ತೆಯ ಎಡ ಬಲಗಳಲ್ಲಿ ಸ್ಪರ್ಧೆಗಳಿದಂತೆ ಚಹಾ ಅಂಗಡಿ, ಬೇಕರಿ, ಗುಟ್ಕಾ, ಪಾನ್, ಸಿಗರೇಟ್ ಅಂಗಡಿಗಳು ತಲೆ ಎತ್ತಿದವು. ಸಂಜೆ ವೇಳೆಗೆ ಬಿಸಿ ಬಿಸಿ ಬೋಂಡಾ, ವಡೆ, ಪಕೋಡ, ಪಾನಿಪೂರಿ, ಅಂಗಡಿಗಳು ಅವತರಿಸಿದ ಫಲವಾಗಿ ಊರು ಜನರ ನಾಲಿಗೆ ಹೊಸ ರುಚಿಯ ಹುಚ್ಚನ್ನು ಹತ್ತತೊಡಗಿದಂತೆ ಶ್ಯಾನಭೋಗರಹಳ್ಳಿಯ ಜನರೆದುರು ಹೊಸ ಲೋಕವೊಂದು ತೆರೆದುಕೊಂಡಿತು.

ಊರ ಮುಂದಿನ ಅರಳಿಕಟ್ಟೆಯ ಮೇಲೆ ಅಥವಾ ಮಾರಮ್ಮನ ಗುಡಿಯ ಹಜಾರದಲ್ಲಿ ಚೌಕಾಬಾರ ಆಡುತ್ತಾ, ಬೀಡಿ ಸೇದುತ್ತಾ ಕಾಲ ಕಳೆಯುತ್ತಿದ್ದ ಪಡ್ಡೆ ಹುಡುಗರು ಊರ ಹೆದ್ದಾರಿಗೆ ಬಂದು ಕಾಲ ಕಳೆಯತೊಡಗಿದರು. ಈ ನಡುವೆ ಬೆಂಗಳೂರು ನಗರದ ಹೊರವಲಯದ ಅಂಚಿನಲ್ಲಿರುವ ಸಣ್ಣ ಪುಟ್ಟ ಕೈಗಾರಿಕೆಗಳಲ್ಲಿ ಮತ್ತು ಗಾರ್ಮೆಂಟ್ ಕಂಪನಿಗಳಲ್ಲಿ ಕೆಲಸಕ್ಕೆ ಬೇಡಿಕೆ ಹೆಚ್ಚಾಗತೊಡಗಿದಂತೆ ಕಾರ್ಮಿಕರನ್ನು ಕರೆತರುವ ವಾಹನಗಳು ಹಳ್ಳಿಯತ್ತ ಬರತೊಡಗಿದವು. ನಗರದಲ್ಲಿ ಕೆಲಸ ಸಿಗುತ್ತದೆ ಎಂದು ತಿಳಿದೊಡನೆ ಸೊಂಟಕ್ಕೊಂದು ಲುಂಗಿ ಸುತ್ತಿಕೊಂಡು; ಹೆಗಲ ಮೇಲೊಂದು ಟವಲ್ ಹಾಕಿಕೊಂಡು ಅಂಡಲೆಯುತ್ತಿದ್ದ ಶ್ಯಾನುಬೋಗರಹಳ್ಳಿಯ ಹುಡುಗರಿಗೆ ಅದೃಷ್ಟ ಅರಸಿಕೊಂಡು ಬಂದಂತಾಯಿತು. ಮನೆಯ ಮೂಲೆಯಲ್ಲಿ ಬಿಸಾಡಿದ್ದ ಹಳೆಯ ಪ್ಯಾಂಟ್‌ಗಳನ್ನು ತೆಗೆದು ಸೊಂಟಕ್ಕೇರಿಸಿಕೊಂಡು ವ್ಯಾನ್ ಹತ್ತಿ ನಗರದತ್ತ ಹೊರಟರು. ಕೆಲವು ಯುವಕರು ಗಾರ್ಮೆಂಟ್ ಕಂಪನಿಗಳಲ್ಲಿ ಸಹಾಯಕರಾಗಿ ಜಮಾವಣೆಯಾದರೆ, ಇನ್ನುಳಿದವರು, ಟೈಲ್ಸ್, ಗ್ರಾನೈಟ್, ಕೆಮಿಕಲ್ಸ್ ಹೀಗೆ ಸಣ್ಣ ಪುಟ್ಟ ಉದ್ದಿಮೆಗಳಲ್ಲಿ ದುಡಿಯತೊಡಗಿದರು. ಇದೆನ್ನೆಲ್ಲಾ ನೋಡಿದ ಊರಿನ ಮಹಿಳೆಯರು, ಯುವತಿಯರು ಸಹ ಹುಡುಗರಿಗಿಂತ ನಾವೇನು ಕಡಿಮೆ ಎನ್ನುವಂತೆ ವ್ಯಾನ್‌ಗಳನ್ನು ಹತ್ತಿ ಗಾರ್ಮೆಂಟ್ ಕಂಪನಿಗಳಿಗೆ ಹೋಗಿ ದುಡಿಯತೊಡಗಿದರು.

ಕೇವಲ ಒಂದು ಅವಧಿಯಲ್ಲಿ ಇಡೀ ಶ್ಯಾನಭೋಗರಹಳ್ಳಿಯ ವಾತಾವರಣವೇ ಬದಲಾಗಿ ಹೋಯಿತು. ಎಲ್ಲರ ಕೈಯಲ್ಲಿ ಮೊಬೈಲ್ ಮಾತನಾಡತೊಡಗಿದವು. ಯುವಕರಂತೂ ತಮ್ಮ ತಲೆಕೂದಲನ್ನು ದೋನಿ ಕಟಿಂಗ್, ಕೋಯ್ಲಿ ಕಟಿಂಗ್ ಎಂಬ ವಿನ್ಯಾಸಕ್ಕೆ ಬದಲಿಸಿಕೊಂಡು, ಅಗ್ಗದ ಜೀನ್ಸ್, ಟಿ ಶರ್ಟ್ ಹಾಗೂ ಬರ್ಮುಡಾ ಚಡ್ಡಿಯನ್ನು ತೊಟ್ಟು ಊರು ತುಂಬಾ ಓಡಾಡತೊಡಗಿದರು. ಸದಾ ಕಳಪೆ ದರ್ಜೆಯ ನೈಟಿ ಹಾಕಿಕೊಂಡಿರುತ್ತಿದ್ದ ಹುಡುಗಿಯರು ಸೆಲ್ವಾರ್, ಚೂಡಿದಾರ್, ಕುರ್ತಾ ಮತ್ತು ಜೀನ್ಸ್ ಮತ್ತು ಟೀ ಶರ್ಟ್‍ಗಳಿಗೆ ರೂಪಾಂತರಗೊಂಡರು. ಹುಟ್ಟಿದಾಗಿನಿಂದ ಈ ಹುಡುಗರಿಗೆ ಕಟಿಂಗ್ ಮಾಡುತ್ತಿದ್ದ ಮಲ್ಲಣ್ಣ ಮತ್ತು ಅಂಗಿ ಚಡ್ಡಿ ಹೊಲೆದು ಕೊಡುತ್ತಿದ್ದ ಟೈಲರ್ ನಜೀಬಣ್ಣ ಇವರನ್ನು ಕುತೂಹಲದಿಂದ ನೋಡುತ್ತಿದ್ದರು.

“ಯಾಕೆ ಅಂಗ್ ನೊಡ್ತೀರಾ? ಮಲ್ಲಣ್ಣಾ, ನೀನು ಇನ್ನು ಮೇಲೆ ಮುದುಕರಿಗೆ ಕಟಿಂಗ್ ಮಾಡ್ಕಂಡ್ ಇರು, ನಜೀಬಣ್ಣ ನೀನು “ಸ್ಪೆಷಲಿಸ್ಟ್ ಇನ್ ಬ್ಲೌಸ್” ಅಂತಾ ಬೋರ್ಡ್ ಹಾಕ್ಕೊಂಡು ಮುದುಕಿಯರಿಗೆ ರವಿಕೆ ಹೊಲ್ಕಡ್ತ ಇರು. ಇನ್ನಮೇಲೆ ಇದಷ್ಟೇ ನಿಮ್ಮ ಕೆಲಸ” ಎಂದು ಹುಡುಗರು ಚುಡಾಯಿಸತೊಡಗಿದರೆ,
ಇದಕ್ಕೆ ಉತ್ತರವೆಂಬಂತೆ “ಸರಿ ಬಿಡ್ರಪ್ಪ, ನಿಮ್ಮಪ್ಪ, ನಿಮ್ಮವ್ವಂದಿರು ನಮಗೆ ಇನ್ಮೇಲೆ ಪರ್ಮೆಂಟ್ ಗಿರಾಕಿಗಳು” ಎಂದು ಹೇಳುತ್ತಾ ಬೀಡಿ ಹಚ್ಚಿಕೊಂಡು ಮಲ್ಲಣ್ಣ, ನಜೀಬಣ್ಣ ಇಬ್ಬರೂ ಪರಸ್ಪರ ಮುಖ ನೋಡಿಕೊಂಡು ನಗಾಡುತ್ತಿದ್ದರು.

ಊರಿಗೆ ಬಂದ ಹೆದ್ದಾರಿಯು ಹೆಮ್ಮಾರಿಯಾಗಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಹುಡುಗ ಹುಡುಗಿಯರೆಂಬ ಭೇದ ಭಾವವಿಲ್ಲದೆ ಎಲ್ಲರ ಕೈಯಲ್ಲಿ ಹಣ ಓಡಾಡತೊಡಗಿದಂತೆ ಎಲ್ಲರ ಕೈಗೆ ಮೊಬೈಲ್‌ಗಳು ಬಂದವು. ಇಂಟರ್‌ನೆಟ್ ಸಂಪರ್ಕ ಅಗ್ಗವಾದ ನಂತರ ಸಿನಿಮಾಗಳು, ಹಾಡುಗಳು, ಅಶ್ಲೀಲ ವೆಬ್ ತಾಣಗಳು ಹುಡುಗರ ಮೆಚ್ಚಿನ ಹವ್ಯಾಸಗಳಾದವು. ಮುಗ್ಧತನ ಮತ್ತು ಬಡತನದಿಂದಾಗಿ ಎದೆಯೊಳಗೆ ಕಾಲು ಮುರಿದುಕೊಂಡು ಕುಳಿತಿದ್ದ ಹದಿ ಹರೆಯದ ಕಾಮವು ಎದ್ದು ಕುಣಿಯತೊಡಗಿದಂತೆ ಹುಡುಗ ಹುಡುಗಿಯರಲ್ಲಿ ನನಗೂ ಒಂದು ಹೊಸ ಜೀವ ಬೇಕೆಂಬ ಆಸೆ ಚಿಗುರೊಡೆಯತೊಡಗಿತು. ತಾವು ಕೆಲಸ ಮಾಡುವ ಸ್ಥಳದಲ್ಲಿ ಇವಳು/ನು ನನಗೆ ಜೋಡಿಯಾಗಬಲ್ಲಳೆ/ನೆ? ಎಂದೆಲ್ಲಾ ಕಣ್ಣುಗಳು ಅರಸತೊಡಗಿದವು. ಇದರ ಫಲವೇನೋ ಎಂಬಂತೆ ಹುಡುಗ ಹುಡುಗಿಯರು ಜಾತಿ, ಕುಲ ನೋಡದೆ ಪ್ರೇಮಿಸತೊಡಗಿದರು. ಮನೆಯ ಹಿರಿಯರು ಒಪ್ಪದಿದ್ದಾಗ, ಓಡಿಹೊಗುವುದು ಇಲ್ಲವೇ ಯಾವುದಾದರೊಂದು ದೇವಸ್ಥಾನದಲ್ಲಿ ತಾಳಿಕಟ್ಟಿ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಬದುಕಿನ ಬಂಡಿ ಹೂಡುವುದು ಸಾಮಾನ್ಯವಾಗತೊಡಗಿತು. ಇಂತಹ ಪ್ರೇಮ ಪ್ರಸಂಗಗಳು ಜರುಗಿದಾಗಲೆಲ್ಲಾ ಹುಡುಗ ಹುಡುಗಿಯರ ತಂದೆ ತಾಯಿಗಳು ಗೋಳಾಡುವುದನ್ನು ಕಂಡು ಶ್ಯಾನುಭೋಗರಹಳ್ಳಿಯ ಹಿರೀಕರು “ಬುಟ್ಟಾಕ್ಲಾ ಅತ್ಲಾಗೆ ಏನ್ ಮಾಡಕಾಯ್ತದೆ? ಹಾಳು ಬಸ್ತಿವು ಹುಟ್ಟುವಾಗ್ಲೇ ಹಿಂತಿರುಗಿ ಆ ಬ್ರಹ್ಮ ರಂಧ್ರನಾ ನೋಡ್ಕಂಡು ಬತ್ತಾವೆ ಕಣಾ” ಎಂದು ಸಮಾಧಾನ ಹೇಳುವುದು ಸಾಮಾನ್ಯವಾಯಿತು.

ನಮ್ಮೂರಿಗೆ ರಸ್ತೆ ಬೇಡ, ಜಮೀನಿಗೆ ಪರಿಹಾರಬೇಡ ಎಂದು ಪ್ರತಿಭಟಿಸಿದ ರೈತರ ಎದುರು, ಅದೇ ಊರಿನ ಯುವಕರನ್ನು ಎತ್ತಿಕಟ್ಟಿದ ರಾಜಕಾರಣಿಗಳು ಸರ್ಕಾರದ ಪರ ಘೋಷಣೆ ಕೂಗಿಸಿ, ರಸ್ತೆ ಬೇಕು, ಅಭಿವೃದ್ಧಿ ಬೇಕು ಎಂಬ ಫಲಕ ಹಿಡಿಸಿ, ಮೂಗಿನ ಮಟ್ಟಕ್ಕೆ ಕುಡಿಸಿ, ಕಂಠದವರೆಗೆ ಬಾಡು ಬಳ್ಳೆ ತಿನ್ನಿಸಿ ಊರಿನಲ್ಲಿ ಅಣ್ಣ ತಮ್ಮಂದಿರಂತೆ ಬದುಕಿ ಬಾಳಿದವರನ್ನು ರಾತ್ರೋರಾತ್ರಿ ವೈರಿಗಳನ್ನಾಗಿ ಪರಿವರ್ತಿಸಿದರು.

ಇಂತಹದ್ದೇ ಒಂದು ಪ್ರಕರಣದಲ್ಲಿ ಶ್ಯಾನಭೋಗರಹಳ್ಳಿ ಪುಗಸಟ್ಟೆ ಪುಟ್ಟರಾಜನ ಪ್ರೇಮ ಪ್ರಸಂಗವು ಹಳ್ಳಿಯಲ್ಲಿ ವಿಶೇಷ ಪ್ರಚಾರ ಪಡೆದುಕೊಂಡಿತು. ಹಿಂದೆ ಬಂದರೆ ಒದೆಯದ, ಮುಂದೆ ಬಂದರೆ ಹಾಯದ ಹಸುವಿನಂತಹ ಗುಣದ ಪುಗಸಟ್ಟೆ ಪುಟ್ಟರಾಜನ ಬಗ್ಗೆ ಊರಿನ ಜನರಿಗೆಲ್ಲಾ ಅಪಾರ ಪ್ರೀತಿ. ಏನೇ ಕೆಲಸ ಹೇಳಿದರೂ ಸಹ ಇಲ್ಲವೆನ್ನದೆ ಮಾಡುತ್ತಿದ್ದ ಪುಟ್ಟರಾಜ, ನೆರೆ ಹೊರೆಯ ಹಳ್ಳಿಗಳಿಗೆ ಹೋಗಿ ತೆಂಗಿನ ಮರ ಹತ್ತಿ ಕಾಯಿ ಕೀಳುವುದು, ಸುಲಿಯುವುದು, ಕಳೆ ಕೀಳುವುದು ಹೀಗೆ ನೂರೆಂಟು ಕೆಲಸಗಳನ್ನು ಪ್ರೀತಿಯಿಂದ ಮಾಡಿ ಬರುತ್ತಿದ್ದ. ಅವರು ಉಣ್ಣಲು ಅಥವಾ ಕುಡಿಯಲು ಏನಾದರೂ ಕೊಟ್ಟರೆ ಅದೇ ಅವನ ಪಾಲಿಗೆ ಪ್ರಸಾದವಾಗಿತ್ತು. “ನಮ್ಮ್ ಪುಟ್ರಾಜ ಧರ್ಮರಾಯ” ಎಂದು ಸುತ್ತಮುತ್ತಲಿನ ಹಳ್ಳಿಯ ಜನರಿಂದ ಹೊಗಳಿಸಿಕೊಳ್ಳುತ್ತಿದ್ದ ಅವನಿಗೆ ಇದರಿಂದಾಗಿ ಪುಗ್ಸಟ್ಟೆ ಎಂಬ ಬಿರುದು ಪುಕ್ಕಟೆಯಾಗಿ ಬಂದಿತ್ತು.

ಊರಿನ ಗಟ್ಟಿಗಿತ್ತಿ ಮತ್ತು ಗಯ್ಯಾಳಿ ಹೆಂಗಸು ಎಂದು ಪ್ರಸಿದ್ಧಿಯಾಗಿದ್ದ ತಿಮ್ಮಕ್ಕನ ಏಕೈಕ ಮಗನಾಗಿದ್ದ ಪುಟ್ರಾಜ ಅವ್ವನ ಬೈಗುಳದ ಕಾಟ ತಾಳಲಾರದೆ ತನ್ನ ಓರಗೆಯವರ ಜೊತೆಗೂಡಿ ಬೆಂಗಳೂರಿನ ಗಾರ್ಮಂಟ್ ಕಂಪನಿಯೊಂದರಲ್ಲಿ ದಿನಗೂಲಿ ನೌಕರನಾಗಿ ಸೇರಿಕೊಂಡು ದುಡಿಯುವನ್ನು ಕಲಿತುಕೊಂಡನು. ಅದೃಷ್ಟವೆಂಬಂತೆ ಅವನ ಹಸುವಿನಂತಹ ಗುಣ ನೋಡಿ ಮೆಚ್ಚಿಕೊಂಡ ಅಲ್ಲಿನ ಗುಣಸಾಗರಿ ಎಂಬ ತಮಿಳು ಹೆಣ್ಣು ಮಗಳ ಕಣ್ಣ ನೋಟಕ್ಕೆ ತುತ್ತಾದ ಪುಗಸಟ್ಟೆಯ ಎದೆಯೊಳಗೆ ಅವಲಕ್ಕಿ ಕುಟ್ಟಿದಂತಾಯಿತು. ಇದರಿಂದಾಗಿ ನಿದ್ದೆಯನ್ನು ಕಳೆದುಕೊಂಡು ಒದ್ದಾಡತೊಡಗಿದನು. ಕೆತ್ತಿದ ಕಪ್ಪು ಶಿಲೆಯಂತಿದ್ದ ಗುಣಸಾಗರಿಯ ಹೊಳಪುಗಣ್ಣುಗಳು ಸದಾ ಪುಗಸಟ್ಟೆಯ ಎದೆಯನ್ನು ಚೂರಿಯಂತೆ ತಿವಿಯತೊಡಗಿದಾಗ “ದುಡಿದು ಬದುಕುವ ತಾಕತ್ತಿರುವ ಇವಳು ನನಗೆ ಹೆಂಡತಿಯಾಗಿ ಬಂದರೆ ನನ್ನ ಪುಣ್ಯ” ಎಂದುಕೊಂಡನು.

ತನ್ನ ಪ್ರೇಮ ವಿವಾಹಕ್ಕೆ ಸದಾ ಮೌನಿಯಾದ ಬುದ್ಧನಂತಿದ್ದ ತನ್ನಪ್ಪ ಸಪ್ಪೆ ನಿಂಗಣ್ಣನ ಅನುಮತಿ ಪಡೆಯುವುದು ಪುಗಸಟ್ಟೆಗೆ ಕಷ್ಟವಾಗಿರಲಿಲ್ಲ. ಆದರೆ, ಅವ್ವನಿಗೆ ವಿಷಯ ತಿಳಿಸುವುದು ಹೇಗೆ ಎಂದು ಒದ್ದಾಡಿದ. ಅಂತಿಮವಾಗಿ ಗಟ್ಟಿ ಮನಸ್ಸು ಮಾಡಿದ ಅವನು ಅವ್ವನೆದುರು ಈ ವಿಷಯ ಪ್ರಸ್ತಾಪಿಸಿದನು. ಮಗನ ಮಾತಿಗೆ ಪಟಾರನೆ ಸಿಡಿದೆದ್ದ ತಿಮ್ಮಕ್ಕ “ಯಾವ ಜಾತಿನೋ, ಯಾವ ಕುಲನೋ ಕಾಣೆ, ಅಂತಹವಳನ್ನು ಕಟ್ಟಿಕೊಂಡು ಮನೆಗೆ ಬಂದರೆ, ಕಿತ್ತೋಗಿರೊ ಕಡ್ಡಿ ಪೊರಕೆ ತಕಂಡ್ ಮಖ ಕೆರಿತೀನಿ ನನ್ ಮಗ್ನೇ” ಎಂದು ಪೂಜೆ ಮಾಡಿದಳು. ಆ ರಾತ್ರಿ ಸದ್ದು ಮಾಡದೆ ಮಲಗಿದ ಪುಗಸಟ್ಟೆ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋದವನು ಮತ್ತೇ ಊರಿನತ್ತ ಮುಖ ಮಾಡಲಿಲ್ಲ. ಮಗ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತಿಮ್ಮಕ್ಕ ಊರಿನ ಹುಡುಗರನ್ನು ಕರೆದುಕೊಂಡು ಹೋಗಿ ವಿಚಾರಿಸಿದಾಗ ಗುಣಸಾಗರಿ ಮತ್ತು ಪುಗಸಟ್ಟೆ ಇಬ್ಬರೂ ಕೆಲಸ ಬಿಟ್ಟಿರುವುದಾಗಿ ತಿಳಿಯಿತು. ಎದೆ ಬಡಿದುಕೊಂಡು ಊರಿಗೆ ಬಂದ ತಿಮ್ಮಕ್ಕ ಮನೆ ಬಾಗಿಲಲ್ಲಿ ಕುಳಿತು ಊರು ಕೇರಿಯನ್ನು ಒಂದು ಮಾಡಿಕೊಂಡು “ಊರಿಗೆ ಹೆದ್ದಾರಿ ತಂದವರನ್ನು ಹಾಗೂ ಕಂಪನಿಗಳ ಕೆಲಸಕ್ಕೆ ವಾಹನ ಬಿಟ್ಟವರನ್ನು, ಮೊಬೈಲ್ ಕಂಪನಿಗಳನ್ನು ಹೀಗೆ ಎಲ್ಲರನ್ನೂ ಒಂದು ಮಾಡಿ ಕೇಳುಗರ ಕಿವಿಯಲ್ಲಿ ರಕ್ತ ಬರುವಂತೆ ಬೈಗುಳಗಳಲ್ಲಿ ಜಾಲಾಡಿದಳು. ತಿಮ್ಮಕ್ಕನ ಗಂಡ ಸಪ್ಪೆ ನಿಂಗಣ್ಣ ಮಾತ್ರ ಅವಳ ಬಾಯಿಗೆ ಹೆದರಿ ಮೌನವ್ರತ ಹಿಡಿದು ಏನೊಂದನ್ನು ಹೇಳಲಾರದೆ ಕಾಣೆಯಾದ ಮಗನನ್ನು ನೆನೆದು ಒಳಗೊಳಗೆ ಅತ್ತನು.

ಬೇಸಿಗೆ ಮತ್ತು ಮಳೆಗಾಲ ಕಳೆದು ಮಾಗಿಯ ಕಾಲ ಆರಂಭವಾಗುವ ಒಂದು ದಿನ ಬೆಳಗಿನ ಜಾವ ಹೆದ್ದಾರಿಯ ಪಕ್ಕದಲ್ಲಿ ಅರೆಬೆಂದಿದ್ದ ಹಾಗೂ ಮುಖದ ಗುರುತು ಸಿಗದಂತಹ ಯುವಕನ ಶವವೊಂದು ಬಿದ್ದಿತ್ತು. ನಗರದಿಂದ ಬಂದ ವಾಹನವೊಂದು ರಾತ್ರಿ ವೇಳೆ ಊರಂಚಿನಲ್ಲಿ ಅದನ್ನು ಎಸೆದು ಹೋಗಿತ್ತು. ಮಕಾಡೆಯಾಗಿ ಮಲಗಿದ್ದ ಆ ಶವದ ಮೇಲಿದ್ದ ಬಟ್ಟೆಗಳು ಪುಗ್ಸಟ್ಟೆ ಪುಟ್ರಾಜನು ಯಾವಾಗಲೂ ತೊಡುತ್ತಿದ್ದ ಹಸಿರು ಬಣ್ಣದ ಟಿ ಶರ್ಟ್ ಹಾಗೂ ನೀಲಿ ಜೀನ್ಸ್ ಪ್ಯಾಂಟ್ ಇವುಗಳನ್ನು ಹೋಲುತ್ತಿದ್ದರಿಂದ ಕಾಣೆಯಾಗಿದ್ದ ಪುಟ್ರಾಜುವಿನ ಶವವಿರಬೇಕೆಂದು ಕೆಲವರು ಊಹಿಸಿದರು. ಇದು ಬಾಯಿಂದ ಬಾಯಿಗೆ ಹರಡಿ ಕೊನೆಗೆ ತಿಮ್ಮಕ್ಕನ ಕಿವಿಗೂ ತಲುಪಿತು. ಮನೆಯಿಂದ ಓಡಿ ಬಂದ ತಿಮ್ಮಕ್ಕ ತನ್ನ ಬಾಯಿ ಹಾಗೂ ಎದೆಯನ್ನು ಬಡಿದುಕೊಳುತ್ತಾ, ಶವದ ಮೇಲೆ ಒಮ್ಮೆ ಕಣ್ಣಾಡಿಸಿದಳು. ನಂತರ ಕಾಣೆಯಾಗಿದ್ದ ತನ್ನ ಮಗನನ್ನು ಯಾರೋ ಹೊಡೆದು ಕೊಂದು ಹಾಕಿದ್ದಾರೆಂದು ಅಧಿಕೃತವಾಗಿ ಘೋಷಿಸುವುದರ ಮೂಲಕ ಗೋಳಾಡತೊಡಗಿದಳು.

ಅರಬೆಂದಿದ್ದ ಹೆಣದ ಮೇಲೆ ಬೆಡ್ ಶೀಟ್ ಒಂದನ್ನು ತಂದು ಹೊದಿಸಿ ನಂತರ ಅದನ್ನು ಊರಿನೊಳಕ್ಕೆ ಸಾಗಿಸಿ ತಿಮ್ಮಕ್ಕನ ಮನೆಯ ಮುಂದೆ ಇರಿಸಲಾಯಿತು. ಪುಗ್ಸಟ್ಟೆ ಪುಟ್ರಾಜುವಿನ ಸಾವಿನ ಸುದ್ದಿ ಕಾಳ್ಗಿಚ್ಚಿನಂತೆ ಸುತ್ತ ಮುತ್ತಲ ಊರುಗಳಿಗೆ ತಲುಪಿತು. ಮನೆಗೊಬ್ಬರಂತೆ ಎಲ್ಲರೂ ಬಂದು ಗುಣಗಾನ ಮಾಡುತ್ತಾ ಅವನ ಆಕಸ್ಮಿಕ ಸಾವಿಗಾಗಿ ಶೋಕಿಸಿದರು. ಊರಿನ ಪುಡಾರಿಯೊಬ್ಬ ತಕ್ಷಣವೇ ತಮ್ಮ ಮೊಬೈಲ್ ಕೈಗೆ ತೆಗೆದುಕೊಂಡು ಕ್ರೇತ್ರದ ಶಾಸಕನ ಜೊತೆ ಮಾತನಾಡಿ “ಕೊಲೆ ಆಗ್ಬುಟ್ಟದೆ ಕಣಣ್ಣಾ, ಚೀಫ್ ಮಿನಿಸ್ಟರ್‍ಗೆ ಹೇಳ್ಸಿ ತಕ್ಷಣ ಪರಿಹಾರ ಕೊಡಿಸಬೇಕು. ಎಲೆಕ್ಷನ್ ಬೇರೆ ಹತ್ರ ಬರ್ತಾ ಇದೆ. ಪುಗಸಟ್ಟೆ ಎಲ್ಲಾ ಊರಗಳಲ್ಲೂ ಫೇಮಸ್ ಆಗಿದ್ದ ಕಣಣ್ಣೊ, ಇಲ್ಲಾಂದ್ರೆ ಕಷ್ಟ ಆಗ್ತದೆ” ಎಂಬ ಸಂದೇಶವನ್ನು ರವಾನಿಸಿದನು. ಈ ವಿಷಯ ವಿರೋಧ ಪಕ್ಷದ ಹಿಂಬಾಲಕರಿಗೆ ಕಿವಿಗೆ ಬಿದ್ದಿದ್ದೆ ತಡ ತಮ್ಮ ನಾಯಕನಿಗೆ ಫೋನ್ ಮಾಡಿ “ಎಲೆಕ್ಷನ್ ಗೆಲ್ಲಕೆ ಇದು ಒಳ್ಳೇ ಛಾನ್ಸು, ಒಂದು ಹಾರ ತಕ್ಕಂಡು, ಎಲ್ಡು ಲಕ್ಷ ರೂಪಾಯಿ ಕೈಲಿ ಹಿಡ್ಕಂಡು ಬೇಗ ಬಾರಣ್ಣ” ಎಂದು ಅವಲತ್ತುಕೊಂಡರು. ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತಿದ್ದ ರಂಗೇಗೌಡ ಎಂಬ ಕಂಟ್ರಾಕ್ಟರ್ ತನ್ನ ಹಿಂಬಾಲಕರು ಹೇಳಿದ ತಕ್ಷಣ ಹಾರ, ಹಣ ಹಾಗೂ ಪತ್ರಿಕೆಗಳ ಛಾಯಾಚಿತ್ರಕಾರರೊಂದಿಗೆ ಶ್ಯಾನುಭೋಗರಹಳ್ಳಿಗೆ ಆಗಮಿಸಿ ಶವಕ್ಕೆ ಹೂವಿನ ಹಾರ ಹಾಕಿ, ಕಾಲು ಮುಟ್ಟಿ ನಮಸ್ಕರಿಸಿದ, ನಂತರ ತಿಮ್ಮಕ್ಕನ ಕೈಗೆ ಎರಡು ಲಕ್ಷ ಹಣವನ್ನು ನೀಡುವುದರ ಚಿತ್ರಗಳನ್ನು ತೆಗೆಸಿಕೊಂಡು, ಐನೂರು ಓಟು ಗ್ಯಾರಂಟಿ ಎಂದು ಲೆಕ್ಕ ಹಾಕುತ್ತಾ ಕಣ್ಣೀರು ಒರೆಸಿಕೊಂಡು ವಾಪಸ್ಸಾದನು.

ತನ್ನ ಎದುರಾಳಿ ಬಂದು ಹೋದ ತಿಳಿದಕೂಡಲೇ ಕಾರ್ಯಪ್ರವೃತ್ತನಾದ ಎಂ.ಎಲ್.ಎ. ಭೈರೇಗೌಡನು ಮುಖ್ಯಮಂತ್ರಿಗೆ ಫೋನಾಯಿಸಿ, ಜಿಲ್ಲಾಧಿಕಾರಿಯಿಂದ ಮೂರು ಲಕ್ಷ ರೂಪಾಯಿಯ ಚೆಕ್ ಬರೆಸಿಕೊಂಡು ತನ್ನ ಒಡ್ಡೋಲಗದ ಜೊತೆ ಹಾಜರಾದನು. ಪುಗ್ಸಟ್ಟೆಯ ಪೋಷಕರಿಗೆ ಪರಿಹಾರ ಧನ ವಿತರಿಸಿ, ಶವದ ಮುಂದೆ ನಿಂತು ಕಣ್ಣೀರು ಹಾಕಿ ಅದರ ಚಿತ್ರವೊಂದನ್ನು ತೆಗೆಸಿಕೊಂಡು ಸರ್ಕಾರದ ಎಲ್ಲಾ ಭಾಗ್ಯಗಳ ಯೋಜನೆಯನ್ನು ತಿಮ್ಮಕ್ಕನಿಗೆ ಕೊಡಿಸುವುದಾಗಿ ಆಶ್ವಾಸನೆ ಇತ್ತನು. ಮಗನ ಸಾವಿಗೆ ಹಾಜರಾಗಿ ಪರಿಹಾರದ ಮಳೆ ಸುರಿಸುತ್ತಿರುವ ರಾಜಕೀಯ ನಾಯಕರ ದಂಡನ್ನು ನೋಡಿ ಒಳಗೊಳಗೆ ಬೆರಗಾದ ತಿಮ್ಮಕ್ಕ ಯಾರೇ ಪುಡಾರಿಯು ಮನೆಯತ್ತ ಬರುತ್ತಿರುವುದನ್ನು ಕಂಡಕೂಡಲೇ ಧ್ವನಿ ಎತ್ತರಿಸಿ ರಾಗವಾಗಿ ಅಳತೊಡಗಿದಳು. ಹೆಚ್ಚೆಚ್ಚು ಅತ್ತಷ್ಟು ಲಾಭ ಎನ್ನುವುದು ಅವಳಿಗೆ ಅರಿವಾಗಿತ್ತು. ಸಂಜೆಯ ವೇಳೆಗೆ ಶವದ ವಾಸನೆ ಸುತ್ತೆಲ್ಲಾ ಹರಡಲು ಆರಂಭಿಸಿದ್ದರಿಂದ, ಅದನ್ನು ಊರಿನ ಪ್ರಮುಖ ಬೀದಿಯಲ್ಲಿ ಉತ್ಸವ ಮೂರ್ತಿಯಂತೆ ಮೆರವಣಿಗೆ ಮಾಡಿ ತಿಮ್ಮಕ್ಕನ ಹೊಲದಲ್ಲಿ ಮಣ್ಣು ಮಾಡಲಾಯಿತು.

ರಾಜಕೀಯ ನಾಯಕರು ಊರಿಗೆ ಬಂದಿದ್ದ ವೇಳೆಯಲ್ಲಿ ತನ್ನ ಹಿಂಬಾಲಕರ ಕೈಗೆ ಸಾವಿರ, ಐನೂರರ ನೋಟುಗಳನ್ನು ತುರುಕಿ ಹೋಗಿದ್ದರು. ಸಂಜೆ ಬಾರ್‌ಗಳಿಗೆ ನುಗ್ಗಿದ ಅವರೆಲ್ಲರೂ ಮನಸ್ಸೋ ಇಚ್ಚೇ ಏಣ್ಣೆ ಏರಿಸಿಕೊಂಡು ಗತಿಸಿ ಹೋದ ಗೆಳೆಯನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತು ವಾಂತಿ ಮಾಡಿಕೊಂಡರು. ಮರು ದಿನ ಬೆಳಿಗ್ಗೆ ತಿಮ್ಮಕ್ಕನ ಮನೆಯಿಂದ ಪುಗ್ಸಟ್ಟೆಯ ಫೋಟೊ ಒಂದನ್ನು ಪಡೆದುಕೊಂಡು ಬೆಂಗಳೂರಿಗೆ ಹೋಗಿ ಅವನ ಭಾವ ಚಿತ್ರವನ್ನು ಮುದ್ರಿಸಿ, ಅದರ ಕೆಳಗೆ “ಮತ್ತೊಮ್ಮೆ ಹುಟ್ಟಿ ಬಾ ಗೆಳೆಯ” ಎಂಬ ವಾಕ್ಯವೊಂದನ್ನು ಬರೆಸಿದರಲ್ಲದೆ, ಅದರ ಸುತ್ತ ತಮ್ಮ ಭಾವ ಚಿತ್ರಗಳನ್ನು ಎದ್ದುಕಾಣುವಂತೆ ಹಾಕಿಸಿ ಪ್ಲೆಕ್ಸ್ ಬೋರ್ಡ್‌ಗಳನ್ನು ಸಿದ್ಧಪಡಿಸಿಕೊಂಡು ಬಂದು ಹೆದ್ದಾರಿ ಇಕ್ಕೆಲಗಳ ಲೈಟ್ ಕಂಬಗಳಿಗೆ ಕಟ್ಟಿದರು. ಹನ್ನೊಂದನೆಯ ದಿನಕ್ಕೆ ರಾಜಕೀಯ ಪಕ್ಷಗಳ ಮೇಲಾಟದ ಸ್ಪರ್ಧೆಯಿಂದಾಗಿ ಪುಗ್ಸಟ್ಟೆಯ ವೈಕುಂಠ ಸಮಾರಾಧನೆ ಕೂಡ ಭರ್ಜರಿಯಾಗಿ ನೆರವೇರಿತು. ಪುಗ್ಸಟ್ಟೆಯ ಸಾವು ಊರಿನ ಜನರಿಂದ ಮರೆಯಾಯಿತು. ಈ ಸಾವಿನಿಂದಾಗಿ ತಿಮ್ಮಕ್ಕನಿಗೆ ನಷ್ಟಕ್ಕಿಂತ ಹೆಚ್ಚು ಲಾಭವಾಯಿತು. ಒಂದು ಎಕರೆ ಹೊಲ, ಎರಡು ಎಮ್ಮೆಗಳ ಜೊತೆ ದಿನದೂಡುತ್ತಿದ್ದ ತಿಮ್ಮಕ್ಕ ಪರಿಹಾರದ ಹಣದಲ್ಲಿ ಮೈ ತುಂಬಾ ಚಿನ್ನದ ಒಡವೆಗಳು, ಕೈಗೆ ಬಳೆಗಳು ಹೀಗೆ ತರಾವರಿ ಆಭರಣಗಳನ್ನು ಮಾಡಿಸಿಕೊಂಡು ಕಂಡವರ ಕಣ್ಣು ಕುಕ್ಕತೊಡಗಿದಳು. ಊರಿನ ಕೆಲವು ಹೆಂಗಸರಂತೂ “ನಮ್ಮನೆ ಮೂದೇವಿ ಸತ್ತಿದ್ದರೆ ಆಗಿತ್ತು, ನಾವೂ ತಿಮ್ಮಕ್ಕನಂತೆ ಮೆರಿಬಹುದಿತ್ತು” ಎಂದು ಹೊಟ್ಟೆ ಉರಿದುಕೊಂಡರು.

ಮರು ವರ್ಷದ ಸಂಕ್ರಾತಿಯ ದಿನದಂದು ಬೆಳ್ಳಂಬೆಳಿಗ್ಗೆ ಪುಗ್ಸಟ್ಟೆ ಪುಟ್ರಾಜು ತನ್ನ ಪತ್ನಿ ಗುಣಸಾಗರಿಯ ಜೊತೆ ತನ್ನ ಪುಟ್ಟ ಮಗುವನ್ನು ಎತ್ತಿಕೊಂಡು ಶ್ಯಾನುಭೋಗರ ಹಳ್ಳಿಯ ಮುಖ್ಯ ರಸ್ತೆಯಲ್ಲಿ ನಡೆದು ಬರುತ್ತಿದ್ದಂತೆ ಊರ ಜನರೆಲ್ಲಾ ಬೆಚ್ಚಿ ಬಿದ್ದರು. ತನ್ನ ಪ್ರೀತಿ ಪ್ರಣಯದ ವಿಷಯದಲ್ಲಿ ಅವ್ವನ ಮೇಲೆ ಮುನಿಸಿಕೊಂಡಿದ್ದ ಪುಗ್ಸಟ್ಟೆಯು ಗುಣಸಾಗರಿಯ ನೆರವಿನಿಂದ ಅವಳ ತಾಯಿಯ ಊರಾದ ತಮಿಳುನಾಡಿನ ತಿರುಪ್ರ್ಪೂರಿಗೆ ಹೋಗಿ ಆಕೆಯನ್ನು ಮದುವೆಯಾಗಿದ್ದನು. ಗಂಡ ಹೆಂಡತಿ ಇಬ್ಬರೂ ಅಲ್ಲಿನ ಸಿದ್ಧ ಉಡುಪುಗಳ ಕಾರ್ಖಾನೆಯಲ್ಲಿ ದುಡಿಯುತ್ತಾ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದರು. ಹುಟ್ಟಿದ ಊರಿನ ನೆನಪಾಗಿ ಪುಗ್ಸಟ್ಟೆಯು ಧೈರ್ಯ ಮಾಡಿ ತನ್ನ ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ಊರಿಗೆ ಕಾಲಿರಿಸಿದ್ದನು. ಯಾವುದೋ ಅನಾಥ ಶವವನ್ನು ಊರಿಗೆ ತಂದು ಶವ ಸಂಸ್ಕಾರ ಮಾಡಿರುವ ವಿಷಯ ತಿಳಿಯದ ಅವನು “ಊರಿನ ಜನರೇಕೆ ಏನನ್ನೂ ಮಾತನಾಡದೆ ಹೀಗೆ ನನ್ನನ್ನು ನೋಡುತ್ತಿದ್ದಾರಲ್ಲಾ?” ಎಂದು ಯೋಚಿಸುತ್ತಾ ಮನೆಯತ್ತಾ ಹೆಜ್ಜೆ ಹಾಕಿದನು.

ಮನೆಯ ಜಗುಲಿಯ ಮೇಲೆ ಕುಳಿತಿದ್ದ ತನ್ನಪ್ಪ ಸಪ್ಪೆ ನಿಂಗಣ್ಣನನ್ನು ನೋಡಿದ ಪುಗ್ಸಟ್ಟೆಯು ಅಪ್ಪಾ ಎಂದು ಕರೆಯುತ್ತಿದ್ದಂತೆ ತನ್ನ ಮಗ ಜೀವಂತವಾಗಿರುವುದನ್ನು ನೋಡಿ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದ ನಿಂಗಣ್ಣ ಯೋಚಿಸುತ್ತಿದ್ದಂತೆ, ಮನೆಯೊಳಗಿಂದ ಬಾಗಿಲಿಗೆ ಬಂದ ತಿಮ್ಮಕ್ಕನಿಗೆ ತನ್ನ ಮಗ ಜೀವಂತವಾಗಿದ್ದು ಸೊಸೆಯ ಜೊತೆಗೂಡಿ ಬಂದಿರುವುದನ್ನು ನೋಡಿ ಎದೆ ಧಸಕ್ಕೆಂದಿತು. ಅವಳಿಗೆ ಮಗ ಜೀವಂತವಾಗಿರುವ ಸಂತೋಷಕ್ಕಿಂತ ಹೆಚ್ಚಾಗಿ, ತನಗೆ ದಕ್ಕಿದ ಪರಿಹಾರ ಕೈ ತಪ್ಪಿತಲ್ಲಾ ಎಂಬ ನೋವಾಗತೊಡಗಿತು. “ಥೂ ನಿನ್ನ ಎಕ್ಕುಟ್ಟು ಹೋಗ, ಬರ ಬಾರದ್ ಬಂದು ಚಾಪೆ ಸುತ್ಕಂಡು ಹೋಗ, ಮತ್ತೇ ಯಾಕ್ ಬರೋಕೆ ಹೋದೆ” ಎಂದು ಮಗನನ್ನು ಶಪಿಸತೊಡಗಿದಳು. ತನ್ನ ಹೆತ್ತ ಅಪ್ಪ ಮತ್ತು ಅವ್ವ ಹಾಗೂ ಊರಿನ ಜನರ ವಿಚಿತ್ರ ಪ್ರತಿಕ್ರಿಯೆಯನ್ನು ನೋಡುತ್ತಾ ನಡುಬೀದಿಯಲ್ಲಿ ನಿಂತ ಪುಗ್ಸಟ್ಟೆ ಮತ್ತು ಗುಣಸಾಗರಿ ಇಬ್ಬರೂ ಏನೋಂದು ತಿಳಿಯದೆ ದಿಕ್ಕು ತೋಚದಂತಾದರು.