ಹೋಗುತ್ತಾ ನನಗೆನೋ ಕೊಟ್ಟು ಒಂದಷ್ಟು ಕಸಿದುಕೊಂಡು ಟಾಟಾ ಬೈಬೈ ಹೇಳುತ್ತಾ ಕಣ್ಮರೆಯಾಯಿತು. ಮತ್ತೆ ಮನಸ್ಸಿಗೆ ಹೊಸ ತಳಮಳ. ಯಾವ್ಯಾವುದೋ ಮನುಷ್ಯ ಸಹಜ ಆಸೆಗಳು ಮೈತಳೆಯುತ್ತಿದ್ದವು. ಆದರೆ ಎಲ್ಲವೂ ಅಸ್ಪಷ್ಟ ಆಕೃತಿಗಳು. ಬಸಿರಿನಲ್ಲಿ ಕೈ ಕಾಲು ಮೂಡದ ಭ್ರೂಣಾವಸ್ತೆಯ ಹಂತದವು. ಕನಸಿನ ಮಂಜು ಮಂಜಾದ ಚಿತ್ರಪಟಗಳಂತಹವು. ಮನಸ್ಸು ಮತ್ತಷ್ಟು ಗೊಂದಲದ ಗೂಡಾಯಿತು. ಅಲ್ಲಿ ನನ್ನ ಜನರ ಮಧ್ಯದಿಂದ ಸುಂಯ್ಯ ಎಂದು ಹಾರಿದ ವಿಮಾನ ಇಲ್ಲಿ ನನ್ನವರಲ್ಲದ ಮತ್ತು ನನ್ನವರಾಗಲಿರುವವರ ಮಧ್ಯೆ ಸದ್ದಿಲ್ಲದೆ ಇಳಿಸಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೃಷ್ಣ ದೇವಾಂಗಮಠ ಬರೆದ ಕತೆ “ಪೇಯಿಂಟಿಂಗ್ “

ಹೊರ ಜಗತ್ತಿಗೆ ಬಿದ್ದು ಬರುವ ಜನವರಿಗೆ ಬರೊಬ್ಬರಿ ಒಂದು ವರ್ಷ ಕಳೆಯುತ್ತೆ. ಅದೆಷ್ಟು ಬೇಗ ಕಾಲ ಹರಿದಿದ್ದು, ಕೊಂಚ ಕೂಡಾ ಗಮನಕ್ಕೂ ಬರಲಿಲ್ಲ. ಯಾಕಿಷ್ಟು ಧಾವಂತವಿದಕೆ, ಎಲ್ಲಿಗಿದರ ಪಯಣ? ನದಿಯೊಂದು ಸಾಗರ ಸೇರಿದಂತೆ, ಹುಟ್ಟೆಂಬುದು ಸಾವು ಕಂಡಂತೆ, ಎಲ್ಲದಕ್ಕೂ ಉತ್ತರ ಹೇಳುವ ಕಾಲನಿಗೆ ಕೊನೆ ಏನು? ಇವನೊಟ್ಟಿಗೆ ನಾವೂ ತೀರಾ ಎಣ್ಣಿಸುವ ಧಾವಂತದಲ್ಲಿದ್ದೇವೆ. ಯಾಕೆ ಹೀಗೆ ಒಬ್ಬರಿಗಿಂತ ಒಬ್ಬರು ಓಟದ ಸ್ಪರ್ಧೆಗಿಳಿದಂತೆ ಗಾಳಿಯೊಟ್ಟಿಗೆ ಪಣತೊಟ್ಟಿರುವುದು. ಯಾಕೀ ನಿಲ್ಲದ ಉಸಿರಾಟದ ಗತಿ. ಸಾವಿಗಾಗೋ ಇಲ್ಲ ಬದುಕಿಗಾಗೋ!

ನನಗೆಲ್ಲ ಹೊಸದು, ಜಗತ್ತು ತೀರಾ ಹೊಸದು. ಜನ್ಮದಾಖಲಾತಿ ನೋಡಿದ್ದರ ಪ್ರಕಾರ ವಯಸ್ಸು ಹೇಳುವುದಾದರೆ ನನಗೀಗ ೨೫ ವರ್ಷ. ಒಂದೊಮ್ಮೆ ಆಶ್ಚರ್ಯವಾಗುತ್ತದೆ, ನಗು ಬರುತ್ತದೆ, ಅಳು ತಡವರಿಸುತ್ತದೆ. ಹುಚ್ಚು ಮನಸು ನಿಬ್ಬೆರಗುಗೊಳ್ಳುತ್ತದೆ. ಸರಿಸುಮಾರು ೨೦ ವರ್ಷಗಳ ಕಾಲ ನನ್ನೊಂದಿಗೆ ಮಾತಾಡದೆಯೇ ನಂಟಸ್ಥಿಕೆ ಉಳಿಸಿಕೊಂಡಿದ್ದ ನನ್ನ ರೂಮಿನ ಪ್ರತಿ ವಸ್ತುಗಳು ಈಗ ಹೊಸತು ಹಳತುಗಳನ್ನು ಕೆದಕಿ ಗರಿಬಿಚ್ಚುತ್ತಿವೆ. ನಾನು ಒಂದೊಮ್ಮೆ ಬಾಲ್ಯ ಅನುಭವಿಸಿದ್ದೆ ಎನ್ನುವುದಕ್ಕೆ ಟ್ರಸರಿಯಲ್ಲಿ ಧೂಳು ಹಿಡಿದು ಬಿದ್ದುಕೊಂಡಿರುವ ಪುಟ್ಟ ಪಾದಕ್ಕಾಗುವ ಚಿಂ ಗುಟ್ಟುವ ಶೂಗಳು, ದುಂಡಗಿನ ಅಕ್ಷರಗಳ ಹೊಮ್ ವರ್ಕ ಪುಸ್ತಕ, ಹಾಳೆಗಳ ಮಧ್ಯೆ ಒಣಗಿ ಟಕರಾಗಿರುವ ಗುಲಾಬಿ ಪಕಳೆ ಮತ್ತು ಎಲೆ. ಕೊನೆಯ ಪೇಜುಗಳಲ್ಲಿ ರಂಗೋಲಿ ಮತ್ತದೆ ಕ್ಲಿಯೋಪಾತ್ರಳ ಗೊಂಬೆ ಚಿತ್ರ. ಇಷ್ಟಲ್ಲದೆ ಆಲ್ಬಮ್ಮಿನಲ್ಲಿನ ನಾಮಕರಣದ ಚಿತ್ರಪಟಗಳು. ಅಲ್ಲಿ ಪಿಂಕ ಬಣ್ಣದ ಅಂಗಿ ತೊಟ್ಟು ಸಿಂಗಾರಗೊಂಡ ತೊಟ್ಟಿಲಿನಲ್ಲಿ ಹಾಯಾಗಿ ಮಲಗಿ ಕಿಲಕಿಲ ನಗುವ ಪುಟಾಣಿ ” ಪರಿಣಿತಾ ” ಐ ಮೀನ್ ಕ್ರಿಸ್ಟಲಿಯಾ. ಹೌದು ಅಪ್ಪ ಪ್ರೀತಿಯಿಂದ ಕರೆದ ಹೆಸರು. ಅಮ್ಮನಿಗೆ ಈ ಹೆಸರಿಗಿಂತ ನಾನೇ ಬಲು ಇಷ್ಟ.

ಡ್ರಾಯರಿಯಲ್ಲಿನ ಆಸ್ಪತ್ರೆ ಬಿಲ್ಸ್‌, ಸ್ಕಾನ್ ಕಾಪಿಸ್, ಡಾಕ್ಟರ್ ರಿಪೋರ್ಟ್ಸ್‌, ರೂಮಿಗೆ ಹೊಂದಿಕೊಂಡಂತೆಯೇ ಇರುವ ಇನ್ನೊಂದು ಪುಟ್ಟ ಕೊಠಡಿಯಲ್ಲಿ ತುಂಬಿರುವ ಸಿರಿಂಜ, ಸಲೈನ್, ಮಾತ್ರೆ ,ನಳಿಕೆ ಇನ್ನೂ ಮತ್ತೇನೊ ಒಂದಿಷ್ಟು ಸೇರಿದಂತೆ ಆಚೆಗೆ ಶೆಡ್ಡಲ್ಲಿ ನೆಗ್ಗಿಕೊಂಡು ಜಂಗು ತಿಂದು ಬಿದ್ದಿರುವ ಕಾರು ಎಲ್ಲಾ ಮನೆಯ ಹಿತ್ತಲಿನ ಸ್ಮಶಾನಕ್ಕೆ ಸೆಳೆದು ರೆಪ್ಪೆ ಒದ್ದೆ ಮಾಡುತ್ತವೆ. ಇಬ್ಬರೂ ಅಕ್ಕ – ಪಕ್ಕಕ್ಕೆ ಚಿರ ಶಾಂತವಾಗಿ ಮಲಗಿದ್ದಾರೆ. ಇವು ಗೋರಿಗಳೋ ಇಲ್ಲ ಗೂಡುಗಳೋ? ಸಾವಿನಾಚೆಗೂ ಒಂದು ಸುಂದರ ಜೀವನದ ಕನಸು ಇಬ್ಬರಿಗೂ ಇತ್ತು. ಪಕ್ಕಕ್ಕೆ ಗೋಡೆಗೆ ಆಣಿಕೊಂಡು ನನ್ನ ಸೈಕಲ್ಲು ಜಾಡು, ಹುತ್ತ ಕಟ್ಟಿಕೊಂಡಿದೆ. ಅದಕ್ಕೆ ಗಾಲಿಗಳಿದ್ದರೂ ಅದರಲ್ಲೀಗ ಉಸಿರಿಲ್ಲ ಹಾಗೆ ನನ್ನ ಜೊತೆಗೆ ಉಸಿರು ಕೊಟ್ಟವರೂ ಇಲ್ಲ.

ನನ್ನ ಆರೈಕೆಯಲ್ಲಿ ಸುಮಾರು ಆರು ವರುಷ ಕಳೆದ ಪೂರ್ವಿ ನನಗೆ ಚಿಕ್ಕ ಸಹೋದರಿ, ನನಗಿಂತ ಎರಡು ವರ್ಷ ಚಿಕ್ಕವಳಷ್ಟೆ. ಈಕೆ ಮನೆಗೆಲಸದ ಸಾವಿತ್ರಿಯ ಮಗಳು. ನನಗೊಂದು ನೆನಪಿಲ್ಲ, ಎಲ್ಲ ಪೂರ್ವಿ ಹೇಳುತ್ತಾಳೆ. ಮೊಬೈಲಿನಲ್ಲಿ ಸೆರೆ ಹಿಡಿದ ನನ್ನ ಕೋಮಾ ಸ್ಟೇಜಿನ ಎರಡು ಪಟಗಳನ್ನು ತೋರಿಸಿ
“ಅಕ್ಕ ಇದು ನೀವೆ, ನೋಡಿ ಹೇಗಿದ್ದೀರಿ” ಎನ್ನುತ್ತಾಳೆ.
ಮುಖದಲ್ಲೊಂದು ನಗು ಬಿಟ್ಟರೆ ಅವಳಿಗೆ ಹೇಳಲು ನನ್ನಲ್ಲಿ ಏನು ಇಲ್ಲ.
ಆದರೂ ಏನೇನೋ ಕೇಳಬೇಕೆನಿಸಿ ಕೇಳಿದೆ:
“ಪೂರ್ವಿ, ಸಾವಿತ್ರಿ ಎಲ್ಲಿ?”
ನಗುತ್ತಿದ್ದವಳ ಮುಖದಲ್ಲದೇನೋ ವ್ಯತ್ಯಾಸ.
ಹೇಳಿದಳು:
“ಅವ್ವನಿಗೆ ಕಳೆದ ಮೂರು ತಿಂಗಳಿಂದ ಕಿಡ್ನಿ ವೈಫಲ್ಯ ಮನೆಯಲ್ಲಿ ಮಲಗಿದ್ದಾಳೆ ”
ಮಾತು ಬರದೆ ತಡಬಡಾಯಿಸಿ ಕೇಳಿದೆ
“ನೀನು ಸಾವಿತ್ರಿಯನ್ನು ನೋಡಿಕೊಳ್ಳುವುದು ಬಿಟ್ಟು ಇಲ್ಲೇನು ಮಾಡುತ್ತಿದ್ದೀಯಾ?”
ಪೂರ್ವಿ ಏನು ಹೇಳದೆ ಸುಮ್ಮನಾದಳು.

ನಾನೂ ಎಲ್ಲಾ ಅರ್ಥವಾದವಳಂತೆ ಮರುಮಾತಾಡದೆ ಅಲ್ಲಿಂದ ಎದ್ದು ಬಂದೆ. ಅವಳ ಮೌನದಲ್ಲಿ ಹೇಳದ ಬಹಳ ಮಾತುಗಳಿದ್ದದ್ದು ನನ್ನ ಮನಸ್ಸಿಗೆ ಅರಿವಾಗಿತ್ತು. ಆದರೂ ಏನೊಂದು ತಿಳಿಯದೆ ತಲೆ ಗಿರ್ ಎಂದಂತಾಗಿ ಹೆಚ್ಚು ಯೋಚಿಸದೆ ನನ್ನವರಿಲ್ಲದ ಸೂರು ಹಳೆಯ ನೆನಪುಗಳಾವುವೂ ಬೇಡವೆನಿಸಿ, ಇನ್ನು ಹೆಚ್ಚು ಹೊತ್ತು ಬೇರೆ ಜೀವಗಳಿಗೆ ಹೊರೆಯಾಗಿರಬಾರದೆಂದು ನಿರ್ಧರಿಸಿದವಳೆ ಎಲ್ಲವನ್ನೂ ಹಾಗೆ ಬಿಟ್ಟು ಹೊಸ ಪಯಣಕ್ಕೆ ಮೊದಲುಗೊಂಡೆ.

ಭಾವನೆಗಳೆಲ್ಲವೂ ಹೊಸವೇ. ಹೊಸತಕ್ಕೂ ಹಳತಕ್ಕೂ ನನಗೆ ವ್ಯತ್ಯಾಸವೇ ಇಲ್ಲ. ಈ ಅಂತರಗಳನ್ನು ಕಂಡುಕೊಳ್ಳುವುದು ಬಹಳ ಕಷ್ಟದ ಕೆಲಸದಂತೆ ಭಾಸವಾಗುತ್ತಿದೆ. ಆದರೂ ಕಂಡುಕೊಳ್ಳಲೇ ಬೇಕಾದ ಪರಿಸ್ಥಿತಿ, ಬದುಕಿನುದ್ದಕ್ಕೂ ಕಲಿಯುವುದು ಕಡಿಮೆ ಏನಿಲ್ಲ. ಎಲ್ಲವನ್ನೂ ಬದುಕು ನಿಧಾನವಾಗಿ ಕಲಿಸುತ್ತಾ ಹೋಗುತ್ತದೆ. ಕಲಿಯುವ ತಾಳ್ಮೆಯೂ ಬಹುಮುಖ್ಯ. ಈ ತಿಳುವಳಿಕೆಯೂ ಬದುಕು ಕಲಿಸಿರುವ ಪಾಠವೇ. ಸಮಸ್ಯೆ ಅಂದರೆ ಈ ಕಲಿಕೆಗೆ ಕ್ರಮಬದ್ಧತೆ ಅನ್ನೋದೆ ಇಲ್ಲ. ಯಾವಾಗಲೋ ಎಲ್ಲಿಯೋ ಯಾವುದೋ ಸ್ಥಿತಿಯಲ್ಲಿ ಕನಸಲ್ಲಿ, ನಿರಾಸೆಯಲ್ಲಿ, ಗೆಲುವಿನಲ್ಲಿ, ಸಾವಿನ ಅಂಚಲ್ಲಿ, ಎಲ್ಲೆಡೆಯೂ ಏನೇನೋ ಹೊಳವುಗಳ ಮೂಲಕ ಸಂವೇದನೆ, ಅರಿವಿನ ಜ್ಞಾನವನ್ನು ನೀಡುತ್ತಾ ಸಾಗುತ್ತದೆ. ನಾವು ಅದಕ್ಕೊಳಪಟ್ಟು ದಕ್ಕಿಸಿಕೊಳ್ಳುತ್ತಾ ಸಾಗಬೇಕು. ಈ ಎಲ್ಲಾ ಅಂಶಗಳಿಂದಲೇ ಬದುಕು ತನ್ನ ಬಗೆಗಿನ ಕಾತುರತೆ ಕೂತೂಹಲ ಕಾಯ್ದುಕೊಂಡು ನಿಗೂಢವಾಗಿರುವುದು. ಈ ಕಾತುರತೆಯೇ ನಮ್ಮಲ್ಲಿ ಸದಾಕಾಲ ಬದುಕುವ ಆಸೆ, ಹುಮ್ಮಸನ್ನು ತುಂಬುತ್ತಾ ಬದುಕನ್ನು ಮುಂದುವರಿಸಲು ಪ್ರೇರಕವಾಗುತ್ತದೆ. ಹೀಗೆ ಮುಂದಡಿ ಇಟ್ಟು ಹೊರನಡೆದವಳು ನೇರ ಹೊರಟಿದ್ದು ಅಮೇರಿಕೆಗೆ.

ಬೆಂಗಳೂರಿನ ಏರ್ ಪೋರ್ಟ್‌ನಲ್ಲಿ ಪ್ಲೇನಿಗಾಗಿ ಕಾಯುತ್ತಾ ಸಮಯ ಕಳೆಯಲು ಪುಸ್ತಕ ಓದುತ್ತಿದ್ದೆ. ಹಿಂದಿನಿಂದ ನನ್ನನ್ನು ಅದಾವುದೋ ಪುಟ್ಟ ಕೈಗಳು ಸ್ಪರ್ಶಿಸಿದಂತಾಗಿ ತಿರುಗಿದೆ. ಆ ಸ್ಪರ್ಶದಲ್ಲಿ ಅದೇನೋ ಹಿತ. ಅಮ್ಮನ ಮೃದು ಸುಕೋಮಲ ತೆಕ್ಕೆ ನೆನಪಾಯಿತು. ಪಿಳಿಪಿಳಿ ಕಣ್ಣು ಬಡಿಯುತ್ತಾ ನಿಂತಿದ್ದ ಪುಟ್ಟ ಹುಡುಗಿ. ಮುದ್ದಾದ ಅವಳ ಮುಖದಲ್ಲಿ ಅರಳಿದ ನಗುವಿಗೆ ನನ್ನೆಲ್ಲಾ ನೋವು ಮರೆಸುವ ಶಕ್ತಿಯಿತ್ತು. ಒಂದೆರಡು ನಿಮಿಷ ಕಳೆದು ಹೋದ ನಾನು ನನ್ನ ಬಾಲ್ಯದ ದಿನಗಳಲ್ಲಿ ವಿಹರಿಸುತ್ತಿದ್ದೆ. ಅವಳನ್ನು ಹಿಡಿದುಕೊಂಡಿದ್ದ ನನ್ನ ಕೈಗಳಿಂದ ಅವಳ ಪುಟಾಣಿ ಕೈ ಜಾರಿಹೋದಾಗಲೇ ನನಗೆ ವಾಸ್ತವ ದಕ್ಕಿದ್ದು. ಆ ಕ್ಷಣಕ್ಕೆ ಯಾರೋ ನನ್ನ ಬಾಲ್ಯವನ್ನು ದೋಚಿದಂತಾ ಅನುಭವ. ಅವಳ ಕೈಯನ್ನು ಮತ್ತೆ ಬಲವಾಗಿ ಹಿಡಿದು ಗಾಬರಿಯಲ್ಲಿ ಮುಖ ಮೇಲೆತ್ತಿದೆ. ಅವರ ತಂದೆಯಂತೆ ಕಾಣುವ ಮನುಷ್ಯ. ನನ್ನನ್ನು ನೋಡಿ ನಕ್ಕು ಏನೋ ಹೇಳಿದ, ಕೇಳಿಸಿತು ಮತ್ತು ಕೇಳಲಿಲ್ಲ. ನಿಧಾನಕ್ಕೆ ನನ್ನ ಕೈ ಸಡಿಲಿಸಿದೆ. ಅವಳ ಕೈ ಧಾವಂತದಲ್ಲಿ ಜಾರಿಕೊಂಡು ಹೋಯಿತು.

ಇಬ್ಬರೂ ಅಕ್ಕ – ಪಕ್ಕಕ್ಕೆ ಚಿರ ಶಾಂತವಾಗಿ ಮಲಗಿದ್ದಾರೆ. ಇವು ಗೋರಿಗಳೋ ಇಲ್ಲ ಗೂಡುಗಳೋ? ಸಾವಿನಾಚೆಗೂ ಒಂದು ಸುಂದರ ಜೀವನದ ಕನಸು ಇಬ್ಬರಿಗೂ ಇತ್ತು. ಪಕ್ಕಕ್ಕೆ ಗೋಡೆಗೆ ಆಣಿಕೊಂಡು ನನ್ನ ಸೈಕಲ್ಲು ಜಾಡು, ಹುತ್ತ ಕಟ್ಟಿಕೊಂಡಿದೆ. ಅದಕ್ಕೆ ಗಾಲಿಗಳಿದ್ದರೂ ಅದರಲ್ಲೀಗ ಉಸಿರಿಲ್ಲ ಹಾಗೆ ನನ್ನ ಜೊತೆಗೆ ಉಸಿರು ಕೊಟ್ಟವರೂ ಇಲ್ಲ.

ಹೋಗುತ್ತಾ ನನಗೆನೋ ಕೊಟ್ಟು ಒಂದಷ್ಟು ಕಸಿದುಕೊಂಡು ಟಾಟಾ ಬೈಬೈ ಹೇಳುತ್ತಾ ಕಣ್ಮರೆಯಾಯಿತು. ಮತ್ತೆ ಮನಸ್ಸಿಗೆ ಹೊಸ ತಳಮಳ. ಯಾವ್ಯಾವುದೋ ಮನುಷ್ಯ ಸಹಜ ಆಸೆಗಳು ಮೈತಳೆಯುತ್ತಿದ್ದವು. ಆದರೆ ಎಲ್ಲವೂ ಅಸ್ಪಷ್ಟ ಆಕೃತಿಗಳು. ಬಸಿರಿನಲ್ಲಿ ಕೈ ಕಾಲು ಮೂಡದ ಭ್ರೂಣಾವಸ್ತೆಯ ಹಂತದವು. ಕನಸಿನ ಮಂಜು ಮಂಜಾದ ಚಿತ್ರಪಟಗಳಂತಹವು. ಮನಸ್ಸು ಮತ್ತಷ್ಟು ಗೊಂದಲದ ಗೂಡಾಯಿತು. ಅಲ್ಲಿ ನನ್ನ ಜನರ ಮಧ್ಯದಿಂದ ಸುಂಯ್ಯ ಎಂದು ಹಾರಿದ ವಿಮಾನ ಇಲ್ಲಿ ನನ್ನವರಲ್ಲದ ಮತ್ತು ನನ್ನವರಾಗಲಿರುವವರ ಮಧ್ಯೆ ಸದ್ದಿಲ್ಲದೆ ಇಳಿಸಿತು. ಇಳಿದವಳು ನೇರ ಐಷಾರಾಮಿ ಹೊಟೆಲೊಂದರಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಂಡು ವಿಪರೀತ ಎನ್ನುವ ಹಸಿವನ್ನು ಭರಿಸಲು ಆರ್ಡರ್ ಮಾಡಿ ಬಹಳಷ್ಟು ತಿಂಡಿ ತರಿಸಿಕೊಂಡೆ. ಆದರೆ ಸಾಧ್ಯವಾದದ್ದು ಸ್ವಲ್ಪ ಮಾತ್ರವೆ. ನುಂಗಲು ಗಂಟಲೂ ಸಹಕರಿಸಬೇಕಲ್ಲವೇ? ಮನಸ್ಸೂ ಸಿದ್ಧವಿರಬೇಕಲ್ಲವೆ? ಬಡಪಾಯಿ ದೇಹ ಎಲ್ಲವನ್ನೂ ಸಾಧಿಸಿಕೊಂಡು ಬದುಕು ದೂಡುತ್ತದೆ ಪಾಪ. ಮಧ್ಯಾಹ್ನ ಅಂದರೆ ಹತ್ತಿರತ್ತಿರ ಸಾಯಂಕಾಲವಾಗುವ ಸಮಯ ಫ್ರೂಟ್ ಸಲಾಡ್ ಮತ್ತು ಐಸ್ ಕ್ರೀಮ್ ತಂದ ಹುಡುಗ

“ಮೇಡಮ್ ಇದನ್ನಾದರೂ ತಿನ್ನಿ ಇಲ್ಲಿಗೆ ಬಂದಾಗಿಂದ ಸರಿಯಾಗಿ ಏನೂ ತಿಂದಿಲ್ಲ ನೀವು, ಮುಂಜಾವು ತಂದು ಕೊಟ್ಟವು ತಟ್ಟೆಗಳಲ್ಲಿ ಹಾಗೆ ಇದ್ದವು ಕ್ಲೀನ್ ಮಾಡೋವಾಗ ನೋಡಿದೆ” ಅಂದ ಹಾಗೆ
“ನಿಮ್ಮನ್ನು ನೋಡಿದರೆ ಏನೊ ಕೊರಗಿರುವವರಂತೆ ಕಾಣುತ್ತೀರಿ, ಸದಾ ಏನೋ ಯೋಚಿಸುತ್ತಿರುತ್ತೀರಿ! ಇಲ್ಲಿಯೇ ಸ್ವಲ್ಪ ದೂರದಲ್ಲಿ ಬೀಚ್‌ ಇದೆ. ಬೇಸರವಾದರೆ ಅಲ್ಲಿಗೆ ಹೋಗಿ ಬನ್ನಿ. ಸಮುದ್ರ ಮತ್ತು ಅಲ್ಲಿಯ ಪರಿಸರ ನಿಮ್ಮ ಮನಸ್ಥಿತಿಯನ್ನು ಬದಲಿಸಬಹುದು ಅಲ್ಲವೇ” ಎಂದು ಶುದ್ಧ ಇಂಗ್ಲಿಷಿನಲ್ಲಿ ಅಂದ.
ನಾನು ತಲೆ ಆಡಿಸಿ ಸುಮ್ಮನಾದೆ.

ಸಮುದ್ರದ ಅಲೆಗಳು ಪ್ರಶಾಂತವಾಗಿ ಏನನ್ನೋ ಧ್ಯಾನಿಸುವಂತೆ ಜೀಕುತ್ತಿದ್ದವು. ಒಂದರ ಹಿಂದೊಂದು ಅಲೆ, ವೇಗ ಒಂದೆ ಆದರೆ ಬಲ ಮಾತ್ರ ಪ್ರತೀ ಸಾರಿ ಬದಲಾಗುತ್ತಿತ್ತು. ನಮ್ಮ ಹೃದಯದ ಬಡಿತದಂತೆ. ಮೇಲ್ಮೈ ಮೇಲಿನ ವಸ್ತುಗಳಂತು ಅಲೆಗಳ ಅಬ್ಬರಕ್ಕೆ ತತ್ತರಿಸಿವೆ ಏನೋ ಎನ್ನುವಂತೆ ಅಲೆಗಳೊಡನೆ ಬಂದು ರಪ್ ಅಂತ ದಡದಾಚೆಗೆ ಬಿದ್ದರೆ ಮತ್ತೊಂದು ಅಲೆ ಬಂದದ್ದೆ ಅವನ್ನು ತನನೊಟ್ಟಿಗೆ ಸೆಳೆದೊಯ್ಯುತ್ತಿದ್ದವು. ನೋಡುವುದಕ್ಕೆ ಈ ಆಟ ಥೇಟ ಜೀವನದಂತೆ ಇತ್ತು. ಸದಾ ಕಷ್ಟಗಳಿಗೆ ಒಡ್ಡಿಕೊಳ್ಳುವುದು ಮತ್ತು ಅದನ್ನು ನೀಗುತ್ತಾ , ಬಗೆಹರಿಸುತ್ತಾ , ಅನುಭವಿಯಾಗುತ್ತಾ ಸಾಗುವುದು. ಬದುಕು ಮಾತ್ರ ನೋವುಗಳ ಹಿಂದೊಂದು ನೋವನ್ನು ಪೋಣಿಸುತ್ತಲೇ ಸಾಗುತ್ತದೆ. ಇಲ್ಲಿ ನಾವು ಮುಳುಗುವ ವಸ್ತುಗಳಾಗದೆ ಸದಾ ತೇಲುತ್ತಾ ಬದುಕು ಸಾಗಿಸುವುದು ಬಹಳ ಮುಖ್ಯ. ಈ ಎಲ್ಲಾ ಹೋಲಿಕೆಗಳ ಮಧ್ಯ ಮನಸ್ಸು ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ನಿರಾಳತೆಯತ್ತ ಸಾಗಿದ್ದಂತು ನಿಜ. ಒಂದಷ್ಟು ಖುಷಿ, ಬದುಕಿನ ಉತ್ಸಾಹದೊಂದಿಗೆ ಎದ್ದು ಮರಳ ತೀರದಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಾ ಹೋದೆ ಅಲೆ ಎಲ್ಲವನ್ನೂ ಆಪೋಷನ ಪಡೆಯಿತು.

ಇದಾದ ಮೇಲೆ ನಾನು ಜಗತ್ತನ್ನು ನೋಡುವ ದೃಷ್ಟಿ ಸ್ವಲ್ಪ ನನಗೇ ಹೊಸತು ಎನ್ನುವಂತಿತ್ತು. ಬುದ್ಧನಿಗೆ ಭೋದಿವೃಕ್ಷದಡಿ ಜ್ಞಾನೋದಯವಾದಂತೆ ನನಗೂ ಸಮುದ್ರದ ತೀರದಡಿ ಜ್ಞಾನೋದಯದಂಥದೊಂದು ಸಾಧ್ಯವಾಯಿತೇನೋ ಅಂತನಿಸಿತು. ಯೋಚಿಸುತ್ತಲೇ ಓದುತ್ತಿದ್ದ ಪುಸ್ತಕವನ್ನು ಎದೆಗವಚಿಕೊಂಡು ಹಾಗೆ ನಿದ್ದೆಹೋಗಿದ್ದೆ.

ಬೆಳಿಗ್ಗೆ ಬೆಳಿಗ್ಗೆಯೇ ಬೆಡ್ ಕಾಫಿ ಕೈಗಿಟ್ಟಅದೇ ಹುಡುಗ
“ಗುಡ್ ಮಾರ್ನಿಂಗ್ ಸಿಸ್ಟರ್ “ಎಂದ.
ನನಗೂ ಜೊತೆಗೊಬ್ಬ ತಮ್ಮ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸಿತು. ಮತ್ತು ಪ್ರತಿಯಾಗಿ ನಾನೂ
“ವೆರಿ ಗುಡ್ ಮಾರ್ನಿಂಗ್ ಬ್ರದರ್” ಅಂದೆ. ನಗುನಗುತ್ತಾ ಆತ ಹೊರಟುಹೋದ.

ಬದುಕು ಕಂಡದ್ದೆಲ್ಲವನ್ನೂ ಬಯಸುತ್ತದೆ, ಅದು ವಸ್ತು ಅಥವಾ ಮನುಷ್ಯ ಯಾವುದೇ ಆಗಿರಲಿ, ಇದಕ್ಕೆ ಇತಿಮಿತಿಗಳೆ ಇಲ್ಲ. ನನ್ನೊಳಗಿನ ಬದಲಾವಣೆಗಳ ಜೊತೆಜೊತೆಗೆ ನನ್ನ ಔಟ್ ಲುಕ್ ಕೂಡ ಸ್ವಲ್ಪ ಬದಲಾಗಬೇಕಿತ್ತು. ಹೇರ್ ಕಟ್ ಮಾಡಿಸಿದೆ. ತಕ್ಕಮಟ್ಟಿಗೆ ಸ್ಟೈಲಿಷ್ ಅನ್ನಿಸಬಹುದಾದ ಬಟ್ಟೆಗಳನ್ನೂ ತೊಟ್ಟೆ.

ದೇವರು ನೆನಪಿಗೆ ಬಂದ. ಆದರೆ ಶಿವಾ, ಲಕ್ಷ್ಮಿ, ಗಣೇಶ, ನರಸಿಂಹ ಯಾರೂ ಕಾಣಲಿಲ್ಲ, ಎಲ್ಲ ಹೃದಯದಾಳದಲ್ಲಿದ್ದರು. ಶಿಲುಬೆಗೆ ಅಂಟಿಕೊಂಡು ಏಸು ನನ್ನನ್ನು ತನ್ನ ತೆಕ್ಕೆಗೆ ಕರೆಯುತ್ತಿದ್ದ. ಇದು ಏಸುವಿನ ನನ್ನ ಮೊದಲ ಭೇಟಿ. ಚರ್ಚ್‌ ಪೂರಾ ಮೋಂಬತ್ತಿಯ ಬೆಳಕಿನಲ್ಲಿ ಹೊಳೆಯುತ್ತಿತ್ತು. ಇದು ದೀಪೋತ್ಸವವೇ ಹೌದು. ನಾನೂ ಒಂದು ಮೋಂಬತ್ತಿಯನ್ನು ದೀಪದಂತೆಯೇ ಹಚ್ಚಿಟ್ಟೆ. ಮಂಡಿಯೂರಿ ಏಸುವಿಗೆ ತಲೆ ಬಾಗಿದೆ. ಅವನ ಕಣ್ಣುಗಳಲ್ಲಿ ನೆಲೆನಿಂತ ಅಮೂರ್ತ ರೂಪ ನನ್ನ ಮೇಲೆ ಬೆಳಕಿನ ಕಿರಣಗಳನ್ನು ಬೀರುತ್ತಿದ್ದದ್ದು ಸ್ಪಷ್ಟ. ಕೊರಳಲ್ಲಿ ಹನುಮಂತನಿರುವ ಲಾಕೇಟೊಂದು ಇನ್ನೂ ತೂಗುತ್ತಿತ್ತು, ನಂಬಿಕೆಗಿರುವ ಶಕ್ತಿ ಅಗಾಧವಾದದ್ದು.

ಈಗ ಏಸು ತನ್ನ ತಾಯಿಯ ಹೆಸರಿನ ಮೇರಿಯನ್ನು ಸೇರಿ, ಗಾಗಾ, ಮೈಕಲ್‌, ಸ್ಟೀಫನ್, ಮತ್ತು ಭಾರತೀಯ ಮೂಲದ ವಿದ್ಯಾಳನ್ನು ಸ್ನೇಹಿತರ ಬಳಗಕ್ಕೆ ಒದಗಿಸಿದ್ದಾನೆ. ಎಲ್ಲರ ಕ್ಷೇತ್ರಗಳು, ಇಷ್ಟಗಳು, ಬದುಕುಗಳು ಬಹಳ ವಿಭಿನ್ನವಾದವು. ಆದರೆ ಎಲ್ಲರನ್ನೂ ಮತ್ತೆ ಮತ್ತೆ ಚರ್ಚ ಹತ್ತಿರವಾಗಿಸುತ್ತದೆ. ಗಾಗಾ ಮತ್ತು ವಿದ್ಯಾ ನನ್ನ ಅತೀ ಆತ್ಮೀಯರು. ವಿದ್ಯಾ ಸಾಫ್ಟ್‌ವೇರ್‌ ಊದ್ಯೋಗಿ. ನನಗಿಂತ ತುಸು ದೊಡ್ಡವಳು. ಆದರೆ ಗಾಗಾ ನನಗೆ ಎಲ್ಲರಿಗಿಂತ ಭಿನ್ನವಾಗಿ ದಕ್ಕುತ್ತಾಳೆ. ಪ್ರಾಯದಲ್ಲಿ, ಅಭಿರುಚಿಯಲ್ಲಿ, ಎಲ್ಲದರಲ್ಲೂ ಸಮಾನಮನಸ್ಕಳಾಗಿ ನನ್ನ ಜೊತೆಗಿರುತ್ತಾಳೆ. ಅವಳ ಕಾರ್ಯಕ್ಷೇತ್ರ ಚರ್ಚ್‌ ಮತ್ತು ಪಬ್ಬು. ಅವಳು ಬಾಹ್ಯದಿಂದಲೂ ಮತ್ತು ಆಂತರ್ಯದಿಂದಲೂ ಎಲ್ಲರಿಗೂ ಬೇಗ ಇಷ್ಟವಾಗುವ ಹುಡುಗಿ. ಪಬ್ಬಿನಲ್ಲಿ ಇವಳು ಹಾಡು ಹಾಡುತ್ತಾಳೆಂದೆ ಆ ಪಬ್ಬು ಸದಾ ತುಂಬಿರುತ್ತದೆ. ಕುಡುಕರಲ್ಲದವರಿಗೂ ಅಮಲು ಬರಿಸುವ ಧ್ವನಿ ಆಕೆಯದ್ದು. ಇನ್ನು ಕುಡಿದವರು ಸ್ವರ್ಗದಾಚೆಗೆ ತೇಲುತ್ತಾರೆ.

ಮಾರ್ಕ್‌ ಇವಳ ಮೂಲಕವೇ ಪರಿಚಯವಾಗಿ ಸ್ನೇಹಿತನು ಮತ್ತು ಪ್ರೇಮಿಯೂ ಆದದ್ದು. ಅವನು ಹತ್ತಿರವಾಗಲಿಕ್ಕೂ, ನಮ್ಮಿಬ್ಬರ ಮಧ್ಯೆ ಪ್ರೀತಿ ಬೆಳೆಯುವುದಕ್ಕೂ , ಮತ್ತು ದೂರಾಗಲಿಕ್ಕೂ ಬಹಳ ಸಮಯ ಬೇಕಾಗಲೇ ಇಲ್ಲ. ಅವನು ಅದೇ ಪಬ್ಬಿನಲ್ಲಿ ಗಿಟಾರ್ ಪ್ಲೇ ಮಾಡುತ್ತಿದ್ದ. ಅವರಿಬ್ಬರ ಕಾಂಬಿನೇಶನ್ ಅಧ್ಬುತವಾದದ್ದು. ಆದರೆ ನಮ್ಮಿಬ್ಬರ ಪ್ರೀತಿ ಹೇಗೆ ಹುಟ್ಟಿತೊ ಗೊತ್ತಾಗಲೇ ಇಲ್ಲ. ಇಬ್ಬರೂ ಒಂದಷ್ಟು ದಿನ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಇಡೀ ಲಾಸ್ ಏಂಜಲೀಸ್ ನಗರವನ್ನು ಅದೆಷ್ಟು ಸಾರಿ ಸುತ್ತಿದೆವೊ ಲೆಕ್ಕಕ್ಕಿಲ್ಲ. ಮೈಯೆಲ್ಲ ಪ್ರೀತಿ ತುಂಬಿಕೊಂಡು ಹಸಿವು, ನೀರಡಿಕೆ, ನಿದ್ರೆಗಳನ್ನೆಲ್ಲಾ ದಾಟಿ ಒಬ್ಬರಿಗೊಬ್ಬರು ಸದಾ ಅಂಟಿಕೊಂಡು ಪ್ರೀತಿಯಲ್ಲಿ ಮುಳುಗೆದ್ದೆವು. ನಾವು ಕುಳಿತುಕೊಳ್ಳದ, ನಿಂತುಕೊಳ್ಳದ, ಜಾಗಗಳೇ ಇರಲಿಲ್ಲ. ನನಗಾಗ ಲೈಫ್ ಇಸ್ ರಿಯಲಿ ಬ್ಯೂಟಿಫುಲ್ ಅಂತ ಅನ್ನಿಸತೊಡಗಿದ್ದ ಕಾಲ ಅದು. ಅದೆಲ್ಲಿ ಏನು ಎಡವಟ್ಟಾಯಿತೊ, ಅದ್ಯಾಕೆ ಅವನು ಹಾಗೆ ಮಾಡಿದನೊ, ಪ್ರೀತಿ ಇದ್ದಕ್ಕಿದ್ದಂತೆ ಮುರಿದು ಹೋದ ಸೇತುವೆ ಆಯಿತು. ನಮ್ಮ ಮಧ್ಯಕ್ಕೊಂದು ದೊಡ್ಡ ಕಂದಕವೇ ಸೃಷ್ಟಿಯಾಗಿತ್ತು. ಅಲ್ಲಿ ಮಾತನಾಡಲು ಮಾತುಗಳೇ ಇಲ್ಲವಾಗಿದ್ದವು. ಬರೀಯ ಮೌನ ಆವರಿಸಿತ್ತು.

ಈ ಮಧ್ಯೆಯೇ ನನ್ನ ಒಂಟಿತನವನ್ನು ನೀಗಿಸಿಕೊಳ್ಳಲು ನಾನು ಪೇಯಿಂಟಿಂಗಿಗೆ ಮೊರೆಹೋಗಿದ್ದೆ. ಅದೊಂದು ಎಕ್ಸಿಬಿಷನ್‌ಗೆ ಅಂತ ಹೋದವಳು ಅಲ್ಲಿಯೇ ಸೇರಿಕೊಳ್ಳಲು ಮನಸ್ಸು ಮಾಡಿದ್ದೆ. ಅದೇನು ಜಾದು ಅಂತ ತಿಳಿದಿಲ್ಲ. ಅದು ಬಣ್ಣಗಳಿಗಿರಬಹುದಾದ ಶಕ್ತಿಯೋ, ಚಿತ್ರಗಳಿಗಿರಬಹುದಾದ ಆಯಸ್ಕಾಂತೀಯ ಗುಣವೋ, ಇಲ್ಲ ಕಲಾವಿದನ ಕೈ ಚಳಕದಲ್ಲಿರಬಹುದಾದ ತಾಕತ್ತೋ ಒಟ್ಟಿನಲ್ಲಿ ನಾನಂತು ಮನಸೋತಿದ್ದೆ. ಹೊಸ ಲೋಕವೊಂದು ಮತ್ತೆ ನನ್ನೆದುರು ತನ್ನನ್ನು ತೆರೆದುಕೊಂಡಿತ್ತು ನಾನು ಅದರ ಭಾಗವಾಗಿದ್ದೆ. ಕುಂಚ ಹಿಡಿದ ನನ್ನ ಕೈಗಳಲ್ಲಿ ಎಲ್ಲವನ್ನೂ ಮೀರಿ ನಿಲ್ಲಬಹುದಾದ, ಎಲ್ಲರನ್ನೂ ಅಚ್ಚರಿಗೊಳಿಸಬಹುದಾದ ಮತ್ತು ಸ್ವತಃ ನಾನೇ ಅಚ್ಚರಿಗೊಳ್ಳಬಹುದಾದ ಅದ್ಬುತ ಜಗತ್ತೊಂದಿತ್ತು, ಅದು ಕಲ್ಪನಾ ಲೋಕ. ಅಲ್ಲಿ ಯಾರ ಹಂಗೂ ಇಲ್ಲ. ಶುಭ್ರ ಬಿಳಿ ಹಾಳೆಗಳಲ್ಲಿ ನನ್ನ ಇಲ್ಲಿಯವರೆಗಿನ ಇಡೀ ಬದುಕು ಚಿತ್ರಣಗೊಳ್ಳುತ್ತಾ ಹೋಯ್ತು , ಮುಂದಿನ ಕನಸುಗಳು ಬಣ್ಣ ಬಳಿದುಕೊಳ್ಳತೊಡಗಿದವು , ಪರಿಣಿತಾಳ ಎಲ್ಲ ಭಾವನೆ, ಕನಸು , ಆಸೆ ಎಲ್ಲ ಎಲ್ಲಾ ಅಂದರೆ ಎಲ್ಲವಕ್ಕೂ ಕುಂಚದಲ್ಲೇ ನಾನು ಒತ್ತಾಸೆಯಾಗತೊಡಗಿದೆ. ಕಲಾಕೃತಿಗಳ ಒಳಗೆ ಮತ್ತು ಹೊರಗೆ ಕ್ರಿಸ್ಟಲಿಯಾ ಜಗತ್ತಿಗೆ ಮುಖಾಮುಖಿಯಾಗತೊಡಗಿದಳು. ಎದುರು ಬದುರಿಗೆ ಏಕಾಂತದಲ್ಲಿ ಕುಳಿತ ಪುಟಾಣಿ ಪರಿಣಿತಾ ಮತ್ತು ಬೆಳೆದು ನಿಂತ ಕ್ರಿಸ್ಟಲಿಯಾ ಅಂದರೆ ನಾನು ಮಾತನಾಡಿಕೊಳ್ಳತೊಡಗಿದೆವು. ಬಿಡಿಸಿದ ಕಲಾಕೃತಿಗಳ ಕೆಳಗಿನ ಸಹಿ ಆಟೋಗ್ರಾಫ್‌ ಆಗಿ ಬದಲಾಗತೊಡಗಿತು. ಈಗ ಜನರ ಮಧ್ಯೆ ಕೃಸ್ಟಲಿಯಾಳ ಕುಂಚ ಬಣ್ಣ ಅದ್ದಿಕೊಳ್ಳುತ್ತದೆ.

ನನಗೇಕೆ ಈ ಕಥೆ ಆಪ್ತ
ಮೊದಲ ಕವಿತೆ ಬರೆದಾಗ ಆದ ಖುಷಿಯೇ ಮೊದಲ ಕಥೆ ಬರೆದಾಗಲೂ ಆಗಿತ್ತು. ಇದು ನಾ ಬರೆದ ಅಥವಾ ಬರೆಸಿಕೊಂಡ ಎರಡೂ ಒಟ್ಟಾಗಿ ಆದ ಕಥೆ. ಪ್ರತಿಯೊಂದು ಸೃಜನವು ಹೀಗೆ ಆದರೂ ಮೊದಲು ಅನ್ನುವುದಕ್ಕೆ ನಮ್ಮೊಳಗೆ ವಿಶೇಷ ಸ್ಥಾನ ಯಾವಾಗಲೂ ಜಾಗೃತವಾಗಿರುತ್ತದೆ. ನನ್ನನ್ನು ಕಥೆಗಾರನನ್ನಾಗಿಸುವುದಕ್ಕೆ ಈ ಕಥೆ ಒಳಗಿನ ಕವಿಯೊಟ್ಟಿಗೆ ಒಪ್ಪಂದ ಮಾಡಿಕೊಂಡಂತೆ ಅನ್ನಿಸುತ್ತದೆ. ಅದರಂತೆ ಈ ಕಥೆ ಓದಿದ ಬಹಳ ಕಥೆಗಾರರ ಅಭಿಪ್ರಾಯ ಇದೊಂದು ಕಾವ್ಯಮಯ ಕಥೆ ಅಂತಲೇ ಆಗಿತ್ತು. ನಂತರ ನಾಲ್ಕಾರು ಪೂರ್ಣ ಕಥೆಗಳನ್ನು ಸೇರಿ ಹಲವಾರು ಅರ್ಧಕ್ಕೆ ನಿಂತ ಕಥೆಗಳನ್ನು ಬರೆದಿದ್ದೇನಾದರೂ ಇದೆಲ್ಲದರ ಆಚೆ ಬದುಕಿನ ಅನಿಶ್ಚಿತ ಹಾದಿ, ಒಂಟಿತನ , ತಿರುವು , ಇವು ಮನುಷ್ಯನಿಗೆ ತೋರುವ ಬದುಕಿನ ಸಾಕ್ಷಾತ್ಕಾರ ದೊಡ್ಡದು. ಪರಿಣಿತಾ – ಕೃಸ್ಟಲಿಯಾ ಆಗುವ ಕೃಸ್ಟಲಿಯಾ – ಪರಿಣಿತಾಳ ಜೊತೆ ಮತ್ತೆ ಸಂವಾದಿಯಾಗುವ ಹಾದಿಯ ಜೀವಂತಿಕೆ ನನಗೆ ಈ ಕಥೆಯನ್ನು ನನ್ನ ಕಥೆಗಳಲ್ಲೆ ಆಪ್ತವಾಗಿಸಿದೆ.