ತಮ್ಮದೇ ಪ್ರಾಯದ ತಿಮ್ಮಕ್ಕ ಜೊತೆಯಾದಾಗ ಇಬ್ಬರೂ ಹಳೆಯ ಹೊಸ ಸುದ್ದಿಯನ್ನು ಮಾತನಾಡುತ್ತಾ ದೇವರನ್ನೂ ಮರೆತರು. ಉದ್ದದ ಊಟದ ಹಂತಿಯಲ್ಲಿ ಬಡಿಸುತ್ತಾ ಬರುವಾಗ ಪಾತಕ್ಕನ ಕಣ್ಣು ಮುಂಡಿಗಾಗಿ ಅರಸುತ್ತಿತ್ತು. ಬೀಟ್ರೂಟ್, ಕ್ಯಾಬೇಜು, ದೊಣ್ಣೆ ಮೆಣಸು, ಬದನೆ ಸೌತೆ ಇಂತದ್ದೇ ಕಂಡಿತು ವಿನಃ ಮುಂಡಿಯ ತುಂಡುಗಳು ಕಾಣಿಸಲಿಲ್ಲ. ಪಕ್ಕದಲ್ಲಿ ಕುಳಿತ ತಿಮ್ಮಕ್ಕನಿಗೆ ಹೇಳಿಯೂ ಬಿಟ್ಟರು.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಅನಿತಾ ನರೇಶ ಮಂಚಿ ಬರೆದ ಕಥೆ ‘ಮುಂಡಿಗೆಂಡೆ’

 

ಶಂಕರಾ.. ತೋಟದಲ್ಲಿ ಪರ ಪರ ಕೇಳ್ತದೆ ಮಗಾ.. ಒಮ್ಮೆ ಹೋಗಿ ನೋಡು.. ಹಂದಿಗಳೇನಾದ್ರು ಬಂದಿದೆಯಾ.. ಮೊದಲೆಲ್ಲಾ ರಾತ್ರೆ ಬರ್ತದೆ ಅಂತ ಇತ್ತು. ಈಗ ಹಾಗಿಲ್ಲ.. ಹೊತ್ತು ಕಂತಿದ ಕೂಡಲೇ ಶುರು ಇವರ ಉಪದ್ರ. ಈ ನಾಯಿ ಒಂದು ಯಾವುದಕ್ಕೂ ಪ್ರಯೋಜನ ಇಲ್ಲ. ಆ ಮೂಲೆಯಲ್ಲಿ ಹಂದಿ ಬಂದ್ರೆ ಇದು ಹೋಗಿ ಬೂದಿ ರಾಶಿ ಹೊಂಡದಲ್ಲಿ ಮುದ್ದೆ ಮಾಡಿ ಮಲಗುತ್ತದೆ.. ಒಮ್ಮೆ ನೋಡು ಮಗಾ..’ ಎಂದು ಹೇಳುತ್ತಲೇ ಕುಳಿತಲ್ಲಿಂದ ಮೆಲ್ಲನೆದ್ದು ಗೋಡೆಯ ಮೂಲೆಗಾನಿಸಿಟ್ಟಿದ್ದ ದಂಟೆಯನ್ನು ಕೈಗೆಟಕಿಸಿಕೊಂಡು ನಿಂತಳು ಪಾತಕ್ಕ.

ಅಯ್ಯೋ ಇಲ್ಲ ಮಾರಾಯ್ತಿ.. ಅದು ನಮ್ಮ ಬೊಗ್ಗಂದೇ ಹರಟೆ. ಅಲ್ಲೆಲ್ಲೋ ಹೆಗ್ಗಣ ಕಂಡಿದೆ.. ಅದಕ್ಕೆ ಮಣ್ಣು ಒಕ್ಕಿ ಪರ ಪರ ಮಾಡ್ತಾ ಇದೆ ಅಷ್ಟೆ..

ಎಂತಾದರೂ ನಾಳೆ ಬೆಳಿಗ್ಗೆ ಆ ಮುಂಡಿಗೆಂಡೆ ಕಡಿದಿಡಬೇಕು.. ಬ್ರಹ್ಮಕಲಶ ನಾಳೆಯಿಂದಲೇ ಶುರು ಅಲ್ಲವಾ.. ನಮ್ಮ ಕಡೆಯದ್ದು ಹೊರೆ ಕಾಣಿಕೆ ಸಂಜೆಗೆ ಅಂತ ಹೊಳ್ಳರ ಹೇಂಡ್ತಿ ಹೇಳಿದ್ಳು. ಅವಳ ಮನೆಯಿಂದ ಗುಜ್ಜೆ ಕಳಿಸ್ಲಿಕ್ಕುಂಟಂತೆ. ನಮ್ಮಲ್ಲಿನ ಗುಜ್ಜೆ ತೆಗಿವಷ್ಟು ದೊಡ್ಡ ಆಗಿದಾ..

(ಅನಿತಾ ನರೇಶ ಮಂಚಿ)

ಗುಜ್ಜೆ ಎಲ್ಲಿ ಉಂಟಮ್ಮಾ ತೋಟದಲ್ಲಿ.. ಮುಗಿಲಿಗೆ ಎಲ್ಲಾ ನೆಣೆಯೇ ಬಿದ್ದಿದೆ. ಇದೊಂದುಂಟಲ್ಲ ಇಷ್ಟು ದೊಡ್ಡದು. ಕಮ್ಮಿಯಲ್ಲಿ ಎರಡು ಸಾವಿರ ಜನರ ಪದಾರ್ಥಕ್ಕೆ ಇದೊಂದೇ ಸಾಕು ಬಿಡು ಎಂದು ಹೆಮ್ಮೆಯಿಂದ ಹೇಳಿದ ಶಂಕರ.

ಆರಡಿಗಿಂತಲೂ ಕೊಂಚ ಜಾಸ್ತಿಯೇ ಎತ್ತರಕ್ಕೆ ನೆಟ್ಟಗೆ ಬೆಳೆದು ನಿಂತ ಮುಂಡಿಗೆಂಡೆಯ ಎಲೆಗಳು ಈ ಯಾವ ಮಾತುಗಳೂ ಕಿವಿಗೆ ಬೀಳದಂತೆ ಬೀಸುವ ಗಾಳಿಗೆ ತಲೆದೂಗುತ್ತಿದ್ದವು. ಪಾತಕ್ಕನಿಗೆ ಇದ್ದದ್ದು ಅರ್ಧ ಎಕರೆ ತೋಟ. ಅದರಲ್ಲೇ ಅಡಿಕೆ ತೆಂಗು ಕರಿಮೆಣಸಿನ ಬಳ್ಳಿಗಳು ಹಬ್ಬಿದ್ದರೆ ಅದರ ನಡುವಿನಲ್ಲೆಲ್ಲ ಹರಡಿದಂತಿದ್ದ ಕೊಕ್ಕೋ ಗಿಡಗಳು ನೋಡುವವರನ್ನೂ ಮುದಗೊಳಿಸುವಂತಿತ್ತು.

ಮೊನ್ನೆಯೂ ಆಚೆ ಮನೆ ವಿಶ್ವಣ್ಣನಲ್ಲಿ ಈ ಸಲ ನಮ್ಮಲ್ಲಿಂದ ದೊಡ್ಡ ಕಾಣಿಕೆ ಕೊಡ್ಲಿಕ್ಕುಂಟು ಅಂತ ಹೇಳಿದ್ದೇನೆ. ಮೊನ್ನೆ ಬ್ರಹ್ಮಕಲಶಕ್ಕೆ ಕಲೆಕ್ಷನ್ನಿಗೆ ಬಂದಾಗ ಐನೂರು ರೂಪಾಯಿ ಕೊಟ್ಟಾಗಿದೆ. ಪೂಜೆಗೆ ಅಂತ ಮೂವತ್ತು ರೂಪಾಯಿಯದ್ದು ಚೀಟಿ ಮಾಡಿಸಿದರೆ ಸಾಕಿನ್ನು ಅಲ್ವಾ ಮಗನೆ..

ಗೊತ್ತಿಲ್ಲ ಅಮ್ಮಾ.. ಗಣೇಶ, ಮೋಹನ, ಪಾಣಿ ಅವರ ಮನೆಯವರೆಲ್ಲಾ ಕಲಶ ಅಂತ ಬೇರೆ ದುಡ್ಡು ಕೊಡ್ಲಿಕ್ಕುಂಟಂತೆ..
ಅವರು ಕೊಟ್ಟಾರು ಬಿಡು.. ನಮ್ಮಲ್ಲೆಷ್ಟು ಸಾಧ್ಯವೋ ಅಷ್ಟು ನಾವು ಮಾಡುವುದು.. ದೇವರಿಗೆಂತ.. ಒಂದು ತುಳಸಿ ಎಲೆ ಹಿಡಿದು ನಮಸ್ಕಾರ ಮಾಡಿದ್ರೂ ಸಾಕು ಬಿಡು. ಆದರೆ ಎಲ್ಲರೂ ಮಾಡುವಾಗ ನಮ್ಮ ಕೈಲಾದಷ್ಟು.. ಈಗ ನೋಡು ಇಷ್ಟು ದೊಡ್ಡ ಮುಂಡಿಗೆಂಡೆಯನ್ನು ಯಾರಾದ್ರು ನೋಡಿರ್ಲಿಕ್ಕುಂಟಾ.. ಎರಡು ವರ್ಷ ಮೊದಲು ಬ್ರಹ್ಮಕಲಶ ಆಗ್ಲಿಕ್ಕುಂಟಿನ್ನು ಅಂತ ರಾಮಾ ಜೋಯಿಸರು ಹೇಳಿದಾಗಲೇ ನಾನು ಈ ಮುಂಡಿಗೆ ಮೇನತ್ತು ಮಾಡ್ಲಿಕ್ಕೆ ಶುರು ಮಾಡಿದ್ದೆ. ಈಗ ನೋಡು.. ನಾಳೆಯ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಇದುವೇ ರೈಸುವುದು..

ಅದು ಹೌದಮ್ಮಾ.. ಇವತ್ತೊಂದು ದಿನ ಹಂದಿ ಬಾರದಿದ್ರೆ ಸಾಕು.. ಶ್ರೀಪಾದಣ್ಣ ಮೊನ್ನೆಯೇ ‘ನಿಮ್ಮ ಮುಂಡಿ ಕೊಡ್ತೀರಾ ದೇವಸ್ಥಾನಕ್ಕೆ.. ಹಾಲು ಮುಂಡಿ ಅದು ಬಾರೀ ಪಸ್ಟು ಬೇಯ್ತದೆ, ಸ್ವಲ್ಪ ಕೂಡಾ ತುರಿಸುವುದಿಲ್ಲ ಶಿಪಾರಸು ಮಾಡಿದ್ದಾರೆ ಗೊತ್ತುಂಟಾ..

ಹುಂ.. ಇಲ್ಲಿ ನಿನ್ನಪ್ಪನ ತಿಥಿಗೆ ಬಂದು ಊಟ ಮಾಡಿದವರಿಗೆಲ್ಲಾ ನಮ್ಮ ಮನೆಯ ಮುಂಡಿಯ ರುಚಿ ಗೊತ್ತುಂಟು.. ಆದ್ರೆ ಎಲ್ಲಿ ನೆಟ್ಟರೂ ಇಲ್ಲಿ ಇದ್ದ ರುಚಿ ಮಾತ್ರ ಬರ್ಲಿಕ್ಕಿಲ್ಲ.. ಅದೆಂತದಪ್ಪ .. ಕೈಯ ಗುಣವೋ ಮಣ್ಣಿನ ಗುಣವೋ ದೇವರಿಗೇ ಗೊತ್ತು..

ಆಯ್ತಪ್ಪಾ.. ಇದನ್ನು ಸಣ್ಣ ಇದ್ದಾಗಿಂದ ಕೇಳಿದ್ದೇನೆ. ನಾನೀಗ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗ್ತೇನೆ.. ಈ ಬೊಗ್ಗನನ್ನು ಈಗ ಕಟ್ಟಿ ಹಾಕು. ಇಲ್ಲದಿದ್ರೆ ನನ್ನ ಹಿಂದೆಯೇ ಬಂದೀತದು. ಇವತ್ತು ರಾತ್ರೆ ಅದನ್ನು ಬಿಡಬೇಡ.. ಸ್ವಲ್ಪ ಬೊಗಳಿಕೊಂಡಿದ್ದರೆ ಅಜನೆಗಾದ್ರೂ ಆಗ್ತದೆ.

ಬ್ರಹ್ಮಕಲಶ ನಾಳೆಯಿಂದಲೇ ಶುರು ಅಲ್ಲವಾ.. ನಮ್ಮ ಕಡೆಯದ್ದು ಹೊರೆ ಕಾಣಿಕೆ ಸಂಜೆಗೆ ಅಂತ ಹೊಳ್ಳರ ಹೇಂಡ್ತಿ ಹೇಳಿದ್ಳು. ಅವಳ ಮನೆಯಿಂದ ಗುಜ್ಜೆ ಕಳಿಸ್ಲಿಕ್ಕುಂಟಂತೆ. ನಮ್ಮಲ್ಲಿನ ಗುಜ್ಜೆ ತೆಗಿವಷ್ಟು ದೊಡ್ಡ ಆಗಿದಾ.

ಶಂಕರ ಹೋದ ಮೇಲೆ ಮಧ್ಯಾಹ್ನದ ಗಂಜಿಗೆ ಒಂಚೂರು ಹಾಲು ಹಾಕಿ ಉಂಡು, ಉಳಿದ ಅನ್ನವನ್ನು ನಾಯಿಗೆ ಹಾಕಿ, ಸ್ವಲ್ಪ ಹೊತ್ತು ಟಿ ವಿ ನೋಡಿ ಕಣ್ಣು ಬಚ್ಚಿದಾಗ, ಮನೆಯ ಎದುರಿನ ಬಾಗಿಲನ್ನು ಹಾಗೇ ಮುಂದೆ ಮಾಡಿಟ್ಟು ಹಾಸಿಗೆಯಲ್ಲಿ ಅಡ್ಡಾದಳು ಪಾತಕ್ಕ. ಮಲಗಿದವಳ ಕಣ್ಣಲ್ಲಿ ಮರುದಿನ ಉದ್ದದ ಮುಂಡಿಗೆಂಡೆ ಬೆಳ್ಳನೆ ತುಂಡುಗಳಾಗಿ ಪದಾರ್ಥದ ಕಠಾರಗಳನ್ನು ತುಂಬುತ್ತಿರುವುದು, ಒಂದೊಂದು ತುಂಡು ಬೆಂದು ಜನರ ಬಾಯೊಳಗೆ ಹೋದಾಗ ಆಹಾ ಬಾರೀ ಲಾಯ್ಕದ ಮುಂಡಿಯಪ್ಪಾ ಅಂಬ ಉದ್ಘಾರ ಎಲ್ಲವೂ ಕಣ್ಣಿಗೆ ಕಟ್ಟುತ್ತಾ ಹೋದಂತೆ ನಿದ್ದೆ ಬಂತು.

ಶಂಕರನೊಬ್ಬನಿಗೇ ಹೊರಲಾಗದೇ ಅವನ ಗೆಳೆಯರು, ಆಚೆ ಮನೆ ಐತು ನಾಯ್ಕ, ಪಾಚಪ್ಪ ಎಲ್ಲರೂ ಕೈ ಕೊಟ್ಟು ಅಷ್ಟುದ್ದದ ಮುಂಡಿಯನ್ನು ಮನೆಗೆ ತಂದಿದ್ದರು. ಹೊರೆ ಕಾಣಿಕೆಯ ಕೊಂಡೋಗುವ ಪಿಕ್ ಅಪ್ ಮನೆಗೇ ಬರಲ್ಲಿಕ್ಕಿತ್ತು. ಇಲ್ಲದಿದ್ದರೆ ಇಷ್ಟು ದೊಡ್ಡ ಮುಂಡಿಯನ್ನು ಹೊರುವುದ್ಯಾರು ಎಂದು ಮೊದಲೇ ಹೇಳಿದ್ದನಂತೆ ಶಂಕರ. ಹೇಗೂ ಎದುರಿನ ಸೀಟು ಒಂದು ಖಾಲಿ ಇರ್ತದೆ. ನೀನು ಅದರಲ್ಲೇ ಹತ್ತಿಕೊಂಡು ದೇವಸ್ಥಾನಕ್ಕೆ ಹೋಗು. ನಾನು ಬೊಗ್ಗನಿಗೆ ಊಟಕ್ಕೆ ಹಾಕಿ ಮತ್ತೆ ಬರ್ತೇನೆ ಎಂದಿದ್ದ ಶಂಕರ. ಪಾತಕ್ಕ ಪಟ್ಟೆ ಸೀರೆ ಉಟ್ಟು ಕೊರಳಿಗೊಂದು ಹವಳದ ಮಾಲೆ ಹಾಕಿಕೊಂಡು ಕೈಗೆರಡು ಚಿನ್ನದ ನೀರು ಕೊಟ್ಟ ಬಳೆ ಹಾಕಿ ಸಿದ್ಧಳಾಗಿದ್ದಳು. ಎಲ್ಲರೂ ಸೇರಿ ಮುಂಡಿಯನ್ನು ಸರ್ತ ನಿಲ್ಲಿಸಿ ಚೆಂದಕ್ಕೆ ಕಾಣುವ ಹಾಗೆ ಮಾಡಿದರು. ಪಿಕ್ ಅಪ್ಪಿನ ಬದಿಯಲ್ಲೆಲ್ಲಾ ಬಾಳೆಗೊನೆಗಳನ್ನು ನೇತು ಹಾಕಿದ್ದರು. ಗುಜ್ಜೆ, ಬೊಂಡಗಳ ಮಧ್ಯದಲ್ಲಿ ಇದು ಮರದಂತೆದ್ದು ನಿಂತಿತ್ತು.

ದಾರಿಯಲ್ಲಿ ಹೋಗುವವರೆಲ್ಲಾ ಮುಂಡಿಯನ್ನು ನೋಡಿ ಯಬ್ಬಾ.. ಎಷ್ಟು ದೊಡ್ಡ ಉಂಟಲ್ವಾ ಎಂದು ಮೂಗಿನ ಮೇಲೆ ಬೆರಳಿರಿಸಿದಾಗ ಪಾತಕ್ಕನ ಹೃದಯ ತುಂಬಿ ಬರುತ್ತಿತ್ತು.

ಅಲ್ಲಿ ಇಳಿಯುವಾಗಲೇ ಎಲ್ಲಾ ಹೊರೆಕಾಣಿಕೆಗಳಿಗೂ ವಾಲಗದ ಸ್ವಾಗತ. ಒಬ್ಬೊಬ್ಬರೇ ಬಂದು ಗಾಡಿಯಲ್ಲಿದ್ದ ತರಕಾರಿಗಳನ್ನು ಖಾಲಿ ಮಾಡಿದರು. ಮುಂಡಿಯನ್ನು ಮೂರ್ನಾಲ್ಕು ಜನ ಗಟ್ಟಿ ಜವ್ವನಿಗರು ಹೊತ್ತೊಯ್ದು ಅದು ಉಗ್ರಾಣದ ಆ ಕಡೆ ಮರೆಯಾಗುವವರೆಗೆ ಅದನ್ನೇ ನೋಡುತ್ತಾ ನಿಂತ ಪಾತಕ್ಕ ಮತ್ತೆಯೇ ದೇವರ ಕಡೆ ಮುಖ ತಿರುಗಿಸಿದ್ದು.

ತಮ್ಮದೇ ಪ್ರಾಯದ ತಿಮ್ಮಕ್ಕ ಜೊತೆಯಾದಾಗ ಇಬ್ಬರೂ ಹಳೆಯ ಹೊಸ ಸುದ್ದಿಯನ್ನು ಮಾತನಾಡುತ್ತಾ ದೇವರನ್ನೂ ಮರೆತರು. ಉದ್ದದ ಊಟದ ಹಂತಿಯಲ್ಲಿ ಬಡಿಸುತ್ತಾ ಬರುವಾಗ ಪಾತಕ್ಕನ ಕಣ್ಣು ಮುಂಡಿಗಾಗಿ ಅರಸುತ್ತಿತ್ತು. ಬೀಟ್ರೂಟ್, ಕ್ಯಾಬೇಜು, ದೊಣ್ಣೆ ಮೆಣಸು, ಬದನೆ ಸೌತೆ ಇಂತದ್ದೇ ಕಂಡಿತು ವಿನಃ ಮುಂಡಿಯ ತುಂಡುಗಳು ಕಾಣಿಸಲಿಲ್ಲ. ಪಕ್ಕದಲ್ಲಿ ಕುಳಿತ ತಿಮ್ಮಕ್ಕನಿಗೆ ಹೇಳಿಯೂ ಬಿಟ್ಟರು. ಆಕೆ ನಗುತ್ತಾ ‘ಅದೆಂತಾ ಅಂಬೆರ್ಪು ಮಾರಾಯ್ತಿ ನಿಂಗೆ.. ಇವತ್ತಿನ ತರಕಾರಿ ನಿನ್ನೆಯೇ ಹೆಚ್ಚಿ ಆಗೋದಿಲ್ವಾ.. ಅಷ್ಟು ಪಕ್ಕ ಮುಂಡಿ ಯಾರು ಕತ್ತರಿಸಿ ಕೊಡ್ತಾರೆ ನಿಂಗೆ.. ಈಗಿನ್ನೂ ಶುರುವಿನ ದಿನ ಅಷ್ಟೇ.. ಮಾಡಿಯಾರು ಇನ್ಯಾವಾಗಲಾದ್ರು.. ಎಂದಳು. ಅವಳ ಮಾತು ಪಾತಕ್ಕನಿಗೆ ಸರಿ ಎನ್ನಿಸಿತು.

ಮಜ್ಜಿಗೆಯನ್ನವನ್ನು ಸುರಿಯುತ್ತಾ ಪಾತಕ್ಕ ನೀನು ನಾಳೆಯೂ ಬರ್ಲಿಕ್ಕುಂಟಲ್ವಾ ತಿಮ್ಮಕ್ಕಾ ಎಂದಳು.
ಹುಂ.. ಇದು ಮುಗಿವಲ್ಲಿವರೆಗೆ ಇಲ್ಲಿಗೇ..

ನನ್ನಿಂದ ನಡೀಲಿಕ್ಕೆ ಕೂಡುವುದಿಲ್ಲ. ಶಂಕರ ಬೈಕಲ್ಲಿ ಕೂರು ಹೇಳ್ತಾನೆ. ನನಗೆ ಧೈರ್ಯ ಇಲ್ಲ. ನಾನಿನ್ನು ಅಕೇರಿಯ ದಿನವೇ ಬರುವುದು ಎನ್ನುತ್ತಿರುವಾಗ ಗೋವಿಂದ ಎಂದು ಕೇಳಿಸಿ ಉಂಡ ಕೈಯನ್ನು ಬಾಳೆ ಎಲೆಯ ಮೇಲೆ ಬಲ ಮಾಡಿ ಎದ್ದಳು ಪಾತಕ್ಕ.

ಮರು ದಿನದಿಂದ ದಿನವೂ ಶಂಕರ ಮನೆಗೆ ಬಂದ ಕೂಡಲೇ ಇವತ್ತು ಎಂತ ಮಗಾ ಪದಾರ್ಥ ಎಂದು ಕೇಳುವುದೂ ಶಂಕರ ಹೇಳಿದ ತರಕಾರಿಗಳಲ್ಲಿ ಮುಂಡಿಯ ಹೆಸರು ಕೇಳದೇ ಮುಖ ಸಣ್ಣದಾಗುವುದು ನಡೆದೇ ಇತ್ತು. ಅದನ್ನು ಕಂಡ ಶಂಕರ ‘ಅಯ್ಯೋ ಅಮ್ಮ.. ಈಗ ಬರುವ ಮೂನ್ನೂರು ನಾನ್ನೂರು ಜನರಿಗೆ ಅಷ್ಟು ದೊಡ್ಡ ಮುಂಡಿ ಬೇಕಾ.. ಅದು ಕೊನೇ ದಿನಕ್ಕೆ ಅಂತಲೇ ಇಟ್ಟಿರಬಹುದು.. ನೀನು ಬರ್ತೀಯಲ್ಲ ಆ ದಿನ.. ಎಂದ.

ಬ್ರಹ್ಮಕಲಶ ಮುಗಿದೂ ಆಯ್ತು. ಪಾತಕ್ಕನೂ ಹೋಗಿದ್ದಳು. ಬಾರೀ ಗೌಜಿ.. ಜನರ ದಟ್ಟಣೆ.. ಪಾತಕ್ಕನಿಗೆ ಮಾತ್ರ ನಿರಾಸೆ ಕಾದಿತ್ತು. ಆ ದಿನವೂ ಮುಂಡಿ ಊಟದ ಕಳಕ್ಕೆ ಬಂದಿರಲಿಲ್ಲ. ಹತ್ತಿರ ಕುಳಿತ ತಿಮ್ಮಕ್ಕ ‘ಅಯ್ಯೋ ಬೇರೆ ಕಡೆಯಿಂದ ಒಳ್ಳೊಳ್ಳೆ ತರಕಾರಿ ಬಂದಿದೆ ಮಾರಾಯ್ತಿ.. ನಿನ್ನ ಮುಂಡಿ ಯಾರು ಮಾಡ್ತಾರೆ.. ಅದಕ್ಕಿರುವ ಮರ್ಯಾದೆ ಇದಕ್ಕುಂಟಾ’ ಎಂದು ನಗೆಯಾಡಿದ್ದಳು.

ಅಲ್ಲಿಂದ ಬಂದ ಮೇಲೆ ಪಾತಕ್ಕ ಮತ್ತು ಶಂಕರ ಇಬ್ಬರೂ ಮುಖಕ್ಕೆ ಮುಖ ಕೊಟ್ಟು ಮಾತನಾಡಿರಲಿಲ್ಲ. ಶಂಕರ ಬರುವಾಗಲೇ ರಾತ್ರೆ ಎರಡು. ಬೆಳಗಾದಾಗಲೇ ದೇವಸ್ಥಾನದಲ್ಲಿ ಕೆಲ್ಸ ಇದೆ ಎಂದು ಹೊರಟು ಬಿಡುತ್ತಿದ್ದ. ಇವತ್ತು ದೇವಸ್ಥಾನದಲ್ಲಿ ಉಳಿದ ತರಕಾರಿಗಳನ್ನೆಲ್ಲಾ ಕಾರ್ಯಕರ್ತರಿಗೆ ಹಂಚುತ್ತಾರಂತೆ.. ನಿನ್ನೆಯೇ ಕಟ್ಟು ಕಟ್ಟು ಮಾಡಿಟ್ಟಿದ್ದಾರೆ ಎಂದು ಹೋಗುವಾಗಲೇ ಹೇಳಿದ್ದ ಶಂಕರ.

ಸಂಜೆಯ ಹೊತ್ತು. ಶಂಕರನ ಬೈಕಿನ ಸದ್ದಿನ ಜೊತೆಗೆ ಹಿಂದಿನಿಂದ ಡೊರ ಡೊರ ಮಾಡುತ್ತಾ ಪಿಕ್ ಅಪ್ ಬಂದಿತು. ಯಬ್ಬಾ ಪಿಕ್ ಅಪ್ಪಿನಲ್ಲಿ ಹಿಡಿಯುವಷ್ಟು ತರಕಾರಿ ತಂದಿದ್ದಾನೆ ಇವನು. ಇರುವುದು ಇಬ್ಬರು ಎಂತ ಮಾಡುವುದು ಅದನ್ನು ಎಂದುಕೊಂಡು ಅಂಗಳದ ತುದಿಗೆ ನಡೆದು ಹೋದಳು ಪಾತಕ್ಕ. ಬಗ್ಗಿ ನೋಡಿದವಳಿಗೆ ಕಂಡದ್ದು ಅದರಲ್ಲಿ ಅಡ್ಡವಾಗಿ ಮಲಗಿದ್ದ ಮುಂಡಿಗೆಂಡೆ.. ಮತ್ತೊಂದು ಪ್ಲಾಸ್ಟಿಕ್ ತೊಟ್ಟೆಯಲ್ಲಿ ಕಟ್ಟಿದ್ದ ಗಂಟು. ಪಿಕ್ ಅಪ್ಪಿನವನು, ಶಂಕರ ಸೇರಿ ಇಳಿಸಿ ಅಲ್ಲೇ ಅಂಗಳದ ಬದಿಯಲ್ಲಿದ್ದ ಒಂದು ಚಕ್ರದ ಗಾಡಿಯಲ್ಲಿಟ್ಟರು.

ತೊಟ್ಟೆಯನ್ನು ಪಾತಕ್ಕನ ಕೈಗೆ ಕೊಟ್ಟ ಶಂಕರ ಕೊಟ್ಟು ಪಿಕ್ಕಾಸು ಹಿಡ್ಕೊಂಡು ನೇರ ತೋಟಕ್ಕೆ ಹೋದ.
ಪಾತಕ್ಕ ಮನೆಯ ಒಳಗೆ ಹೋಗಿ ತೊಟ್ಟೆಯಲ್ಲಿದ್ದ ತರಕಾರಿಗಳನ್ನು ಬಿಚ್ಚಿದರೆ ಅದಲ್ಲಿದ್ದುದು ಅರೆ ಬರೆ ಕೊಳೆತ ಕ್ಯಾಬೇಜು, ಟೊಮೇಟೋ, ಬಿಳಿದಾಗಿ ಫಂಗಸ್ ಬಂದು ಒಂದು ಮುದ್ದೆಯಂತಾದ ಬೀನ್ಸು.. ಇದ್ದದ್ದರಲ್ಲಿ ಒಳ್ಳೆಯದು ಅಂತ ಒಂದು ನಾಲ್ಕನ್ನು ಆರಿಸಿ ಉಳಿದದ್ದನ್ನು ತೋಟಕ್ಕೆ ಚೆಲ್ಲಲೆಂದು ಹೋದವಳಿಗೆ ಮುಂಡಿ ಮೊದಲಿನ ಜಾಗದಲ್ಲೆ ತಲೆಯೆತ್ತಿ ನಿಂತಿದ್ದು ಕಾಣಿಸಿತು. ಶಂಕರ ಅದರ ಬಾಡಿದ್ದ ಎಲೆಯೆಲ್ಲಾ ಒದ್ದೆಯಾಗುವಂತೆ ನೀರು ಹನಿಸುತ್ತಿದ್ದ.

(ಮುಂಡಿಗೆಂಡೆ ಎಂಬ ನಾನು ಬರೆದ ಕಥೆ ಇಷ್ಟ ಆಗುವುದು ಅದರ ಸಹಜತೆಗೆ, ಮತ್ತು ಅದು ತೆರೆದುಕೊಳ್ಳಬಹುದಾದ ವಿಶಾಲ ಅರ್ಥಕ್ಕೆ. ಹೊಸತಿಗೆ ಹಾತೊರೆಯುವ ನಾವು ಕೊಳೆತು ನಾರುವ ವ್ಯವಸ್ಥೆಯನ್ನು ಹೊಸದೆಂದು ಅಪ್ಪಿಕೊಳ್ಳುವುದು, ಆದರೆ ಹಳತು ಮತ್ತೆ ಬೇರು ಬಿಟ್ಟು ಚಿಗಿಯುವ ಹುಮ್ಮಸ್ಸು ಹೊಂದಿರುವುದು. ಗ್ರಾಮೀಣ ಸ್ತ್ರೀಯೊಬ್ಬಳ ಸಹಜ ಆಸೆ, ನಿರಾಸೆಯಾಗಿ ಬದಲಾದರೂ ಕೊನೆಯಲ್ಲಿ ಚಿಗುರುವ ಆಶಾವಾದ.. ಇದು ಮುಖ್ಯವಾಗಿ ನಾನು ಇಷ್ಟಪಟ್ಟ ಅಂಶಗಳಿದರಲ್ಲಿ.)