ಬೇಟೆಯಾಡಲು ಬಂದ ಶಂತನುವಿಗೆ ಬಹಳ ದೂರದಲ್ಲಿಂದಲೇ ಯೋಜನಗಂಧಿಯ ದೇಹದಿಂದ ಬರುತ್ತಿದ್ದ ವಾಸನೆ ಸೆಳೆಯುತ್ತದೆ. ಮೊದಲೇ ಬಳಲಿದ್ದವನು ಆ ವಾಸನೆಗೆ ಮರುಳಾಗಿ ದುಂಬಿಯಂತೆ ಅದನ್ನರಸಿ ಬರುತ್ತಾನೆ. ಬರುವಾಗಲೇ ಆ ಮಧುವಿನ ವಾಸನೆಗೆ ಸೋತವನು, ಎಳೆ ಜಿಂಕೆಯ ಹಾಗೆ ಕಣ್ಣುಗಳು ಇರುವವಳನ್ನು ಕಂಡು, ಕಂಡೊಡನೆ ಒಲಿದು, ಸತ್ಯ ಸಾಬೀತುಪಡಿಸಲು ಹಿಡಿಯುವ ದಿಬ್ಯದ ಹಾಗೆ ಅವಳನ್ನು ಹಿಡಿದು ಮಾತು ಪ್ರಾರಂಭ ಮಾಡುತ್ತಾನೆ. ಮೊದಲೇ ಬೇಟೆಗೆ ಬಂದವನು, ಬಳಲಿದವನು, ಮಧುಗೆ ಮನಸೋತವನು ಈ ಎಲ್ಲ ಪರಿಣಾಮಗಳಿಗೆ ಸಿಕ್ಕು ಅವಳನ್ನು ಹಿಡಿದವನು ಶಂತನು.
ಆರ್. ದಿಲೀಪ್ ಕುಮಾರ್ ಅಂಕಣ

 

(ಶಂತನು ಮತ್ತು ಸತ್ಯವತಿಯರ ಮೊದಲ ಭೇಟಿಯ ಕಂಪಿನ ಕಥೆ)

ಮಹಾಭಾರತದ ಬಹುಮುಖ್ಯ ಘಟನೆಗಳಲ್ಲಿ ಶಂತನು ಮತ್ತು ಸತ್ಯವತಿಯ ಮೊದಲ ಭೇಟಿಯ ಸಂದರ್ಭ. ಈ ಸಂದರ್ಭವು ಮಹಾಭಾರತವನ್ನು ಅರ್ಥೈಸಿಕೊಳ್ಳುವಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆಯುತ್ತದೆ. ಕನ್ನಡದಲ್ಲಿ ಸಂಸ್ಕೃತದ ಮಹಾಭಾರತಕ್ಕೆ ಮುಖಾಮುಖಿಯಾಗಿ ಕಾವ್ಯ ರಚಿಸಿ ಸೃಜನಶೀಲ ಪ್ರತಿಭೆಯನ್ನು ಮೆರೆದಿರುವ ಕವಿಗಳಲ್ಲಿ ಮೊದಲಿಗ ಆದಿಕವಿ ಪಂಪ. ಅವನ ಕಾವ್ಯಕ್ಕೆ ವಸ್ತುವನ್ನು ವ್ಯಾಸ ಕೃತ ಮಹಾಭಾರತದಿಂದ ಪಡೆದಿದ್ದರೂ, ತನ್ನ ಕಾಲದಲ್ಲಿ ನಿಂತು ವ್ಯಾಸ ಕೃತ ಮಹಾಭಾರತವನ್ನು ನೋಡುವ ಸೂಕ್ಷ್ಮ ಪ್ರವೃತ್ತಿಯೇ ಅವನ ಸೃಜನಶೀಲತೆಯಾಗಿ ಕೆಲಸ ಮಾಡಿದೆ. ಸೂಕ್ಷ್ಮವಾಗಿ ನೋಡುವ ಮತ್ತು ನೋಡಿದಾಗ ಕಂಡಿದ್ದನ್ನು ಅಷ್ಟೇ ಸಶಕ್ತವಾಗಿ, ಧೈರ್ಯವಾಗಿ, ಸಂಕ್ಷೇಪಮಾಡಿ ಅಭಿವ್ಯಕ್ತಿಗೊಳಿಸಿರುವುದು ತಿಳಿಯುತ್ತದೆ. ಈ ವಿಶೇಷತೆಯಿಂದ ಸಂಸ್ಕೃತದ ಭಾರತವು ಕನ್ನಡದಲ್ಲಿ ಹೊಸ ಮೈಯನ್ನು ಪಡೆದು ನಿತ್ಯನೂತನವಾಗಿ ಓದುಗರನ್ನು ಕಾಡುತ್ತಲೇ ಇದೆ.

ಪಂಪನೆ ಹೇಳುವ ಹಾಗೆ ಇದು ‘ನಿಚ್ಚಂ ಪೊಸತು’. ಹಳೆಯದಾದುದು ನಿತ್ಯವೂ ಹೊಸದಾಗಿ ಕಾಣುವ ಹಾಗೆ ಮಾಡುವಲ್ಲಿ ಪ್ರತಿಕ್ಷಣವೂ ಬದುಕಿಗೆ ಮುಖಾಮುಖಿಯಾಗಿ ಬಂದ ಅನುಭವಗಳನ್ನು ಕಲಾತ್ಮಕತೆಯನ್ನು ಹಾದಿಮಾಡಿ ಹೊರಹಾಕುವಲ್ಲಿ ತೊಡಗುವಾಗ, ಪಂಪ ಎದುರಿಸಿದ ತನ್ನ ಕಾಲದ ರಾಜರ ವರ್ತನೆಗಳು, ಅವುಗಳ ಹಿಂದೆ ಕೆಲಸ ಮಾಡುತ್ತಿದ್ದ ಹಿತಾಸಕ್ತಿಗಳು, ಸಾಮಾಜಿಕ ರಾಜಕೀಯ ಧಾರ್ಮಿಕ ಒತ್ತಡಗಳು ಬೀರಿದ ಪರಿಣಾಮಕ್ಕೆ ಹೊಂದಿಕೊಂಡು ಹೋಗುವ ಮನೋಭಾವಗಳನ್ನು ಆಸ್ಥಾನ ಕವಿಯಾಗಿದ್ದ ಪಂಪ ಬಹಳ ಸೂಕ್ಷ್ಮವಾಗಿ ಗುರುತಿಸಿರುವುದು ಬಹಳ ಮುಖ್ಯವಾಗುತ್ತದೆ. ಈ ಗುರುತಿಸುವಿಕೆ ಮತ್ತು ಪರಿಣಾಮಕಾರಿಯ ಅಭಿವ್ಯಕ್ತಿಗೆ ಮಾಡಿಕೊಂಡ ಹಾದಿಯೇ ಪಂಪನನ್ನು ತನ್ನ ಕಾಲದಲ್ಲಿ ನಿಂತೂ ಕಾಲಾತೀತವಾಗಿ ಮಾತನಾಡುವ ಹಾಗೆ ಮಾಡಿದೆ.

ಕಾವ್ಯದ ಅಭಿವ್ಯಕ್ತಿಯು ವಸ್ತುವಿನ ಆಯ್ಕೆಗೆ ಸಂಬಂಧಿಸಿದ್ದಾದರೂ ಅದು ತನ್ನ ಕಾಲವನ್ನು ಕಂಡಿರಿಸುವಲ್ಲಿ ಕವಿಯಿಂದ ರಚನೆಯಾದ ಕೃತಿಯೇ ಬಹುದೊಡ್ಡ ಪ್ರಮಾಣವಾಗಿ ಗೋಚರಿಸುತ್ತದೆ. ತನ್ನ ಮತ್ತು ತನ್ನ ಕಾಲದ ಸಮಾಜದ ಅನುಭವವನ್ನೇ ಕಾವ್ಯದ ಆತ್ಮವಾಗಿ ಹೊಂದಿ ಮತ್ತೊಂದು ವಸ್ತುವನ್ನು ಪಡೆದು ಅದರಲ್ಲಿ ಮೈಯನ್ನು ಕಡೆಯುವ, ಅದರಲ್ಲಿ ತನ್ನೆಲ್ಲ ಅನುಭವಗಳನ್ನು ಸುಪ್ತವಾಗಿ ಇಟ್ಟು ಅಭಿವ್ಯಕ್ತಿಸಿರುವಲ್ಲಿ ಪಂಪನ ಎರಡೂ ಕಾವ್ಯಗಳು ಸೂಕ್ಷ್ಮವಾದ ಹಾದಿಯವೇ ಆಗಿವೆ. ಕಾವ್ಯಕ್ಕಾಗಿ ಸ್ವತಂತ್ರವಾಗಿ ವಸ್ತುವನ್ನು ಹುಟ್ಟಿಸುವ ಶಕ್ತಿಯಿದ್ದರೂ ಮಹಾಭಾರತದಂತಹ ಕಾವ್ಯದ ಆಯ್ಕೆಯೇ ಸಂಕೀರ್ಣತೆಯ ಅಭಿವ್ಯಕ್ತಿಗೆ ಸಂಕೀರ್ಣ ಪಠ್ಯಕ್ಕೆ ಮುಖಾಮುಖಿಯಾಗುವುದನ್ನು ತಿಳಿಸುತ್ತಿದೆ. ಧರ್ಮದಲ್ಲಿ ಬೇರೆಯಾಗಿದ್ದವನು, ಮನುಷ್ಯ ಧರ್ಮವೇ ಶ್ರೇಷ್ಠವೆಂಬ ಮನೋಧರ್ಮ ಹೊಂದಿದವನು ಅದಕ್ಕೆ ವಿರುದ್ಧವಾದಂತೆ ಮೇಲ್ನೋಟಕ್ಕೆ ಭಾಸವಾಗುವ ಪಠ್ಯದ ಆಯ್ಕೆಯೇ ಅವನ ಕಾಣ್ಕೆಯ ಹಾದಿಯನ್ನು ತಿಳಿಸುತ್ತಿದೆ.

ಪಂಪ ಭಾರತದ ಬಹುಮುಖ್ಯ ಘಟನೆಗಳಲ್ಲಿ ಶಂತನು ಮತ್ತು ಯೋಜನಗಂಧಿಯರ ಮೊದಲ ಭೇಟಿಯ ಸಂದರ್ಭ ಬಹಳ ಸಂಕೀರ್ಣವಾದದ್ದು. ಇದು ಕನ್ನಡ ವಿಮರ್ಶಾ ಪರಂಪರೆಯಲ್ಲಿ ಅತಿ ಹೆಚ್ಚು ಭಿನ್ನ ಆಯಾಮಗಳ ವ್ಯಾಖ್ಯಾನ ಮತ್ತು ವಿಮರ್ಶೆಗಳಿಗೆ ತೆರೆದುಕೊಂಡ ಪಠ್ಯವಾಗಿದೆ. ಶಂತನು ಯೋಜನಗಂಧಿಯನ್ನು ಕಾಣುವ ಮೊದಲೇ ಗಂಗೆಯನ್ನು ವಿವಾಹವಾಗಿ ಅವಳು ಬಿಟ್ಟು ಹೋಗುವ ಮುನ್ನ ಕೊಟ್ಟು ಹೋದ ಮಗ ಭೀಷ್ಮನನ್ನು ಇಟ್ಟುಕೊಂಡು ಅವಳನ್ನು ನೆನೆದು ಪರಿತಾಪ ಪಟ್ಟವನು. ರಾಜನಾಗಿ ಸಪ್ತವ್ಯಸನದ ಲಕ್ಷಣಗಳೆಲ್ಲ ಇರುವವನು. ಅದರಲ್ಲಿಯೂ ಸಪ್ತವ್ಯಸನಗಳು ಬೀರುವ ಪರಿಣಾಮವಾದ ಕಾಮಸಂಭವ ಅನ್ನುವುದನ್ನು ಮೈಯೆಲ್ಲ ಹೊಂದಿದವನು. ಅದರ ಪರಿಣಾಮದಲ್ಲೆ ಬೇಟೆಗೆ ಹೋಗಿ ಅಲೆವಾಗ ಕಂಪು ತಟ್ಟಿ ಮೋಹಿತನಾಗಿ ಯೋಜನದಿಂದ ಅವಳೆಡೆಗೆ ಸೆಳೆಯಲ್ಪಟ್ಟವನು.

ಯೋಜನಗಂಧಿಯೋ ದಾಶರಾಜನ ಮಗಳು. ಪರಾಶರನು ಯಮುನಾ ನದಿ ದಾಟಿಸಲು ಕೇಳಿ, ಅವಳು ನೆರವಾದಾಗ ಅವಳನ್ನು ಕಂಡು ಮೋಹಿತನಾಗಿ ಸಾಸಿರ ಭಾರದವನಾಗಿ ದೋಣಿಯೇರಿ ಆಚೆ ದಡ ಸೇರುವ ಮೊದಲೇ ಇವಳಿಗೆ ಮನದಲ್ಲೇ ಸೋತು ಅವಳ ದೇಹದಿಂದ ಬರುತ್ತಿದ್ದ ದುರ್ಗಂಧವನ್ನು ಕಳೆದು ಯೋಜನಗಂಧಿತ್ವವನ್ನು ನೀಡಿ, ಅವಳೊಂದಿಗೆ ಕೂಡಿ ಒಂದು ಮಗುವನ್ನು ಕೊಟ್ಟು, ಅವಳಿಗೆ ಮರಳಿ ಕನ್ಯತ್ವವನ್ನು ಕೊಟ್ಟು ಮಗನ ಜೊತೆಗೆ ನಡೆದವನು. ಆ ಮಗು ಹುಟ್ಟುತ್ತಲೇ ಹದಿನಾರು ವರ್ಷದ ಪ್ರಾಯದವನು. ಹೀಗೆ ಪಂಪನ ಕಾವ್ಯದ ಪ್ರಕೃತ ಭಾಗದಲ್ಲಿ ಬರುವ ಇಬ್ಬರೂ ಶೃಂಗಾರದ ಅನುಭವವನ್ನು ಮೊದಲು ಪಡೆದವರೇ. ಇವರಿಬ್ಬರೂ ಆ ಕ್ಷಣದ ಅನಂತರ ಅದರಿಂದ ದೂರ ಉಳಿದವರೆ ಆದರೆ ಆ ಅನುಭವದ ಸಾಕ್ಷಿಯನ್ನು ಕಣ್ಣ ಮುಂದೆ ಹೊಂದಿರುವವರೆ. ಇದು ಅವರಿಬ್ಬರ ಹಿನ್ನೆಲೆ. ಸಾಮಾಜಿಕವಾಗಿ ಶಂತನು ರಾಜ, ಅವಳು ದಾಶ ಎನ್ನುವ ರಾಜನ ಮಗಳು. ವೃತ್ತಿಯಲ್ಲಿ ದೋಣಿ ನಡೆಸುವವಳು. ಇವು ಪದ್ಯ ಭಾಗದಲ್ಲಿ ಬಳಕೆಯಾಗಿರುವ ಭಾಷೆ, ವರ್ತನೆಗಳಲ್ಲಿ ಸಶಕ್ತವಾಗಿ ಕೆಲಸ ಮಾಡಿ ಅಭಿವ್ಯಕ್ತಿ ಹೊಂದಿವೆ.

ಇಷ್ಟು ಸಂಕೀರ್ಣ ಸ್ಥಿತಿಯನ್ನು ಹೊಂದಿರುವ ಸಂದರ್ಭವನ್ನು ಪಂಪ ಅಭಿವ್ಯಕ್ತಿಗೊಳಿಸುವಾಗ ವಹಿಸುವ ಜಾಣ್ಮೆ, ಭಾಷಾ ಸೂಕ್ಷ್ಮತೆ, ಅಪಾರವಾದ ಅರ್ಥವನ್ನು ಹುದುಗಿಸಿಟ್ಟು ಒಂದೊಂದೆ ಪದದಲ್ಲಿ ಭೂತ, ವರ್ತಮಾನಗಳನ್ನು ಬೆಸೆಯುತ್ತಲೇ ಓದುಗರಿಗೆ ಕಾವ್ಯದ ಹಿಂದಿನ ಘಟನೆಗಳ ಓದು ನೆನಪಿಗೆ ಬರುವ ಹಾಗೆ ಮಾಡುವ ಧ್ವನಿ ಶಕ್ತಿಪೂರ್ಣವಾದ ರಚನೆ ಈ ಪದ್ಯದಲ್ಲಿದೆ. ಅದರೊಂದಿಗೆ ಇದೊಂದು ಶೃಂಗಾರ ಆಭಾಸವಾಗಿರುವುದು ಇದರ ಮುಖ್ಯ ಅಂಶವಾಗಿದೆ.

ಮೃಗಯಾವ್ಯಾಜದಿನೊರ್ಮೆ ಶಂತನು ತೊೞಲ್ತರ್ಪಂ ಪಳಂಚಲ್ಕೆ ತ
ನ್ಮೃಗಶಾಬಾಕ್ಷಿಯ ಕಂಪು ತಟ್ಟಿ ಮಧುಪಂಬೋಲ್ ಸೊಲ್ತು ಕಂಡೊಲ್ದು ನ|
ಲ್ಮೆಗೆ ದಿಬ್ಯಂಬಿಡಿವಂತೆವೋಲ್ ಪಿಡಿದು ನೀಂ ಬಾ ಪೋಪಮೆಂದಂಗೆ ಮೆ
ಲ್ಲಗೆ ತತ್ಕನ್ಯಕೆ ನಾಣ್ಚಿ ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ||

ಕಾವ್ಯದ ಅಭಿವ್ಯಕ್ತಿಯು ವಸ್ತುವಿನ ಆಯ್ಕೆಗೆ ಸಂಬಂಧಿಸಿದ್ದಾದರೂ ಅದು ತನ್ನ ಕಾಲವನ್ನು ಕಂಡಿರಿಸುವಲ್ಲಿ ಕವಿಯಿಂದ ರಚನೆಯಾದ ಕೃತಿಯೇ ಬಹುದೊಡ್ಡ ಪ್ರಮಾಣವಾಗಿ ಗೋಚರಿಸುತ್ತದೆ. ತನ್ನ ಮತ್ತು ತನ್ನ ಕಾಲದ ಸಮಾಜದ ಅನುಭವವನ್ನೇ ಕಾವ್ಯದ ಆತ್ಮವಾಗಿ ಹೊಂದಿ ಮತ್ತೊಂದು ವಸ್ತುವನ್ನು ಪಡೆದು ಅದರಲ್ಲಿ ಮೈಯನ್ನು ಕಡೆಯುವ, ಅದರಲ್ಲಿ ತನ್ನೆಲ್ಲ ಅನುಭವಗಳನ್ನು ಸುಪ್ತವಾಗಿ ಇಟ್ಟು ಅಭಿವ್ಯಕ್ತಿಸಿರುವಲ್ಲಿ ಪಂಪನ ಎರಡೂ ಕಾವ್ಯಗಳು ಸೂಕ್ಷ್ಮವಾದ ಹಾದಿಯವೇ ಆಗಿವೆ.

ವಚನ : ಎಂಬುದುಂ ಶಂತನು ಪೊೞಲ್ಗೆ ಮಗುೞ್ದುವಂದವರಯ್ಯನಪ್ಪ ದಾಶರಾಜನಲ್ಲಿಗೆ ಕೂಸಂ ಬೇಡೆ ಪೆರ್ಗಡೆಗಳನಟ್ಟಿದೊಡೆ ಗಾಂಗೇಯಂ ದೊರೆಯ ಪಿರಿಯ ಮಗನುಂ ಕ್ರಮಕ್ರಮಾರ್ಹನುಮಿರ್ದಂತೆನ್ನ ಮಗಳಂ ಕುಡೆವೆಮ್ಮ ಮಗಳ್ಗೆ ಪುಟ್ಟಿದಾತಂ ರಾಜ್ಯಕ್ಕೊಡೆಯನುಂ ಪಿರಿಯ ಮಗನುಂ ಕ್ರಮಕ್ಕರ್ಹನುಮಪ್ಪೊಡೆ ಕುಡುವೆಮೆನೆ ತದ್ವೃತ್ತಾಂತಮುಂ ಮಂತ್ರಿಗಳಿಂ ಶಂತನು ಕೇಳ್ದು

ಎಂದು ಕಾವ್ಯ ಭಾಗವು ಮುಂದುವರೆಯುತ್ತದೆ. ವೃತ್ತವಾದ ಆನಂತರದ ಬರುವ ವಚನದಲ್ಲಿನ ಮೊದಲ ಪದ ‘ಎಂಬುದುಂ’ ಅನ್ನುವುದನ್ನು ಪದ್ಯದ ಕೊನೆಯ ಸಾಲಿನ ಜೊತೆ ಸೇರಿಸಿ ಓದಿದರೆ ವಾಕ್ಯವು ಅರ್ಥಪೂರ್ಣವಾಗುತ್ತದೆ. ಈ ಪದ್ಯ ಸಂಕೀರ್ಣವಾಗಲು ಬಹುಮುಖ್ಯ ಕಾರಣವೇ ಇಲ್ಲಿನ ಬಳುಕು ಪದಗಳು, ಕಾಲಸೂಚಕ ಪದಗಳು ಹಾಗೂ ಇದರಲ್ಲಿನ ಕಥೆಯನ್ನು ಹೇಳುವ ಕ್ರಮದೊಂದಿಗೇ ನಡೆಯುವ ನಾಟಕೀಯತೆ. ಇದು ಶೃಂಗಾರಾಭಾಸಕ್ಕೆ ಬಹಳ ಅದ್ಭುತವಾದ ಉದಾಹರಣೆಯಾಗಿದೆ. ಒಂದು ರಸವನ್ನು ಶಕ್ತಿಯುತವಾಗಿ ವರ್ಣಿಸುತ್ತಿರುವಾಗ ಆ ಜಾಗದಲ್ಲಿ ಬೇರೊಂದು ಭಾವವನ್ನು ಇದ್ದಕ್ಕಿದ್ದಂತೆ ತಂದಾಗ ರಸಕ್ಕೆ ಸರಿಹೊಂದದೆ, ಹೊಸ ಭಾವ ಧುತ್ತೆಂದು ಮೂಡಿ ಮೊದಲು ವರ್ಣಿಸುತ್ತಿದ್ದ ರಸಕ್ಕೆ ಭಂಗ ತರುವುದು ರಸಾಭಾಸವಾಗುತ್ತದೆ. ಇಲ್ಲಿ ರಸಾಭಾಸವೇ ಮುಖ್ಯವಾಗುತ್ತದೆ. ನಾಟಕೀಯತೆ ಯೋಜನಗಂಧಿಯ ವರ್ತನೆಯಲ್ಲಿ ಬಂದುಬಿಡುತ್ತದೆ. ಅವಳಲ್ಲಿನ ಈ ವರ್ತನೆಯೇ ಶೃಂಗಾರಾಭಾಸಕ್ಕೆ ಹಾದಿ ಮಾಡಿಕೊಡುತ್ತದೆ.

ಬೇಟೆಯಾಡಲು ಬಂದ ಶಂತನುವಿಗೆ ಬಹಳ ದೂರದಲ್ಲಿಂದಲೇ ಯೋಜನಗಂಧಿಯ ದೇಹದಿಂದ ಬರುತ್ತಿದ್ದ ವಾಸನೆ ಸೆಳೆಯುತ್ತದೆ. ಮೊದಲೇ ಬಳಲಿದ್ದವನು ಆ ವಾಸನೆಗೆ ಮರುಳಾಗಿ ದುಂಬಿಯಂತೆ ಅದನ್ನರಸಿ ಬರುತ್ತಾನೆ. ಬರುವಾಗಲೇ ಆ ಮಧುವಿನ ವಾಸನೆಗೆ ಸೋತವನು, ಎಳೆ ಜಿಂಕೆಯ ಹಾಗೆ ಕಣ್ಣುಗಳು ಇರುವವಳನ್ನು ಕಂಡು, ಕಂಡೊಡನೆ ಒಲಿದು, ಸತ್ಯ ಸಾಬೀತುಪಡಿಸಲು ಹಿಡಿಯುವ ದಿಬ್ಯದ ಹಾಗೆ ಅವಳನ್ನು ಹಿಡಿದು ಮಾತು ಪ್ರಾರಂಭ ಮಾಡುತ್ತಾನೆ. ಮೊದಲೇ ಬೇಟೆಗೆ ಬಂದವನು, ಬಳಲಿದವನು, ಮಧುಗೆ ಮನಸೋತವನು ಈ ಎಲ್ಲ ಪರಿಣಾಮಗಳಿಗೆ ಸಿಕ್ಕು ಅವಳನ್ನು ಹಿಡಿದವನು ಶಂತನು. ಅಲ್ಲಿಯವರೆಗಿನ ಸಂದರ್ಭ, ಪರಿಸರ, ಸುತ್ತಲಿನ ಸ್ಥಿತಿ, ಅದರ ಪರಿಣಾಮದಿಂದಾದ ಶಂತನುವಿನ ವರ್ತನೆಯೆಲ್ಲವನ್ನೂ ಹೇಳಿದ ಪಂಪ ನೇರವಾಗಿ ಅವನ ಮನಸ್ಸಿನ ಆಳಕ್ಕೆ ಇಳಿದುಬಿಡುತ್ತಾನೆ.

ಅವನಾಡುವ ಮಾತೇ “ನೀಂ ಬಾ ಪೋಪಂ” ಅನ್ನುವುದು. ಈ ಮಾತು ರಾಜನಾಗಿ ಅವನಲ್ಲಿರುವ ಧಾರ್ಷ್ಟ್ಯ, ಅಧಿಕಾರ ಮದ ಮತ್ತು ಕಾಮದ ತೀವ್ರತೆಯನ್ನು ತಿಳಿಸುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ ಹೋಗುವ ಸರಿ, ಆದರೆ ಎಲ್ಲಿಗೆ ಹೋಗುವುದು? ಏಕೆ ಹೋಗುವುದು? ಇವುಗಳನ್ನು ಹೇಳದೆ ಇರುವುದು ಇವನಲ್ಲಿನ ತೀವ್ರವಾದ ಕಾಮಕ್ಕೆ ಆ ಮಾತು ಸಾಕ್ಷಿಯಾಗಿ ನಿಲ್ಲುತ್ತದೆ (ಕುಮಾರವ್ಯಾಸ -ಕಾಮನ ಶರಕೆ ಮೈಯೊಡ್ಡಿ ಅರಮನೆಗೆ ನಡೆ- ಎಂದು ಶಂತನುವಿನ ಬಾಯಲ್ಲಿ ಆಡಿಸುತ್ತಾನೆ). ಈ ಮಾತು ಧ್ವನಿಸುವ ಅರ್ಥ ಎದುರಿನವರಿಗೆ ಆದೇಶ ಮಾಡುತ್ತಿದೆ. “ಪೋಪಂ” ಪದವು ನಿರ್ದೇಶನ ಮಾಡುತ್ತಿರುವುದು ಬಹಳ ಮುಖ್ಯ, ಅದರಲ್ಲೊಂದು ಅಧಿಕಾರ ವಾಣಿ ಇರುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಬೇಟೆಯಾಡಲು ಬಂದವನಿಗೆ ಸಿಕ್ಕ ಜಿಂಕೆ ಇವಳು. ಬಹಳ ಮುಖ್ಯವಾಗುವಂತೆಯೆ ಅವನು ಆ ಬೇಟೆಗೆ ಬಂದವನು ಸೋತದ್ದನ್ನು, ಅದರ ಮುಂದೆ ಶರಣಾಗದೆ ಮೆರೆವ ಅಧಿಕಾರದ ಜಾಗೃತಿಯನ್ನು ಇದು ಯಶಸ್ವಿಯಾಗಿ ತಿಳಿಸುತ್ತಿದೆ.

ಅವನು ಆಡಿದ ಅನಂತರ ಅವಳು ಆಡುವ ಮೊದಲ ಮಾತೇ “ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ” ಆದರೆ ಅದರ ಹಿಂದಿನ ಪದಗಳಾದ ಮೆಲ್ಲನೆ, ನಾಣ್ಚಿ ಅನ್ನುವುದು ಅವಳಲ್ಲಿನ ವರ್ತನೆ. ಮೆಲ್ಲನೆ ನಾಚುವುದು ಅವನಲ್ಲಿ ಉದಿಸಿದ ಕಾಮದ ಭಾವಕ್ಕೆ ವಿರುದ್ಧವಾದ ಹೇಸಿಗೆಯ, ಜಿಗುಪ್ಸೆಯ ವರ್ತನೆಯಿದು ಅನ್ನುವ ಭಾವವನ್ನು ಹೊರಗಾಕಿದ್ದಾಳೆ. ಈ ಭಾವವು ಅವನಿಗೆ ತಾಕಿಯೇ ತನ್ನ ನಗರಕ್ಕೆ ಮರಳುತ್ತಾನೆ. ಈ ಭಾವವೇ, ಅವಳಾಡಿದ ಮಾತುಗಳೇ ಉದಿಸಿ ಬರುತ್ತಿದ್ದ ಶೃಂಗಾರ ಭಾವವು ಇಲ್ಲಿಗೆ ನಿಲುಗಡೆ ಪಡೆದು ಕೊನೆಯಾಗುತ್ತದೆ. ಇದು ರಸಾಭಾಸಕ್ಕೆ ಪೋಷಣೆಯಾಗಿ ನಿಲ್ಲುತ್ತದೆ. “ತತ್ಕನ್ಯಕೆ” ಅನ್ನುವ ಪದವನ್ನು ಬಳಸಿ ಹಿಂದಿನ ಪರಾಶರರ ದೋಣಿಯ ಕಥೆಯನ್ನು ಓದುಗರಿಗೆ ನೆನಪಿಸುತ್ತಲೇ ವರ್ತಮಾನದ ಘಟನೆಯ ಮೇಲೆ ಭೂತದಲ್ಲಿ ನಡೆದ ಘಟನೆಯನ್ನು ತರುತ್ತಾನೆ.
ಅವರಿಬ್ಬರ ಮಾತನ್ನು ಗಮನವಿಟ್ಟು ನೋಡುವುದಾದರೆ ಶಂತನು ಅವಳೊಂದಿಗೆ ಮಾತನಾಡುವಾಗ “ನೀಂ ಬಾ ಪೋಪಂ” ಎಂದು ಏಕವಚನ ಪ್ರಯೋಗ ಮಾಡುತ್ತಾನೆ, ಅದೇ ಯೋಜನಗಂಧಿಯು “ನೀವೆಮ್ಮಯ್ಯನಂ ಬೇಡಿರೇ” ಎನ್ನುವಾಗ ಶಂತನುವನ್ನು ಸಂಬೋಧಿಸುವಾಗ ಬಹುವಚನವನ್ನೂ, ತನ್ನ ತಂದೆಯನ್ನು ಸಂಬೋಧಿಸುವಾಗ ಏಕವಚನವನ್ನೂ ಬಳಸುತ್ತಾಳೆ. ಹೊರಗಿನವನಾದ ಅಪರಿಚಿತನಿಗೆ ಅವಳು ಕೊಡುವ ಗೌರವ ಸೂಚಕವಾಗಿ ಬಹುವಚನವೂ, ತಂದೆಯ ಮೇಲಿನ ಪ್ರೀತಿಗೆ ಸಹಜವಾಗಿ ಏಕವಚನವೂ ಬಳಕೆ ಆಗುತ್ತಿದೆ.

ಈ ಪದ್ಯಭಾಗವು ಶೃಂಗಾರಾಭಾಸಕ್ಕೆ ಉದಾಹರಣೆ ಎಂದಿದ್ದು ಈ ಕಾರಣಗಳಿಂದಲೇ. ಮೊದಲು ಅವಳ ದೇಹದಿಂದ ಬಂದ ಬಾಹ್ಯ ಕಂಪಿಗೆ ಆಂತರಿಕವಾಗಿ ಸೋತವನು, ಅನಂತರ ಅವಳ ಕೈಹಿಡಿದು ಅವಳಾಡಿದ ಮಾತಿಗೆ ಬಾಹ್ಯವಾಗಿ ಮರುಮಾತುಕೊಡದೆ ಸೋತು ಮರಳುತ್ತಾನೆ. ಇಲ್ಲಿ ಮೊದಲ ಭಾವಕ್ಕೆ ಸಂಬಂಧಪಟ್ಟ ಹಾಗೇ ಕ್ರಿಯೆಯು ನಡೆದಿದ್ದರೆ ಅದು ಶೃಂಗಾರವಾಗಿ, ಅದರಲ್ಲಿಯೂ ಸಂಭೋಗ ಶೃಂಗಾರವಾಗಿ ಪದ್ಯ ಭಾಗದಲ್ಲಿನ ವರ್ಣಿತವಾಗುತ್ತಿರುವ ರಸವು ಪರಿಸಮಾಪ್ತಿಯಾಗುತ್ತಿತ್ತು. ಅವನ ಭಾವದಲ್ಲಿ ಆಗುವ ಬದಲಾವಣೆಗೆ ನೇರ ಕಾರಣ ಅವಳ ಮಾತಾದ “ಎಮ್ಮಯ್ಯನಂ ಬೇಡಿರೇ” ಅನ್ನುವುದು ಎಷ್ಟು ಕಾರಣವೋ ಅಷ್ಟೇ “ಮೆಲ್ಲನೆ ನಾಣ್ಚಿ” ದ ಕ್ರಿಯೆಯೂ ಅಷ್ಟೇ ಪರಿಣಾಮಯುತವಾದದ್ದಾಗಿದೆ. ತಂದೆಯನ್ನು ನೆನೆದು ಅವನ ಬಗೆಗಿನ ಅಪ್ಪಣೆಯ ಮಾತನ್ನು ಮಧ್ಯ ತಂದು ಅಲ್ಲಿಗೆ ಮಾತು ಕ್ರಿಯೆಗಳನ್ನು ಸಮಾಪ್ತಿ ಮಾಡುತ್ತಾಳೆ. ಆದರೆ ಅವಳ ವತ೵ನೆ ಮತ್ತು ಮಾತಿನ ತೀವ್ರ ಪ್ರಭಾವದ ಕಾವು ತಟ್ಟಿ ಮುನ್ನಡೆಯುತ್ತಾನೆ.

ಇಲ್ಲಿನ ಶಂತನುವಿನ ವರ್ತನೆ ಅವಳನ್ನ ನೋಡಿದೊಡನೆಯೇ ಧುತ್ತೆಂದು ಹಿಡಿಯುವುದು. ಜಿ ಎಚ್ ನಾಯಕರು ತಮ್ಮ ‘ಪಂಪನ ಪದ್ಯವೊಂದರ ಪುನರ್ವಿಮರ್ಶೆ’ ಎಂಬ ವಿಮರ್ಶಾ ಲೇಖನದಲ್ಲಿ ‘ಹಿಡಿಯುತ್ತಾನೆಂಬಲ್ಲಿ “ಪಿಡಿದು” ಎಂಬ ಪದಪ್ರಯೋಗವಿದೆ. “ಪಿಡಿದು” ಎಂಬುದು ಸಹಜ ಅರ್ಥವಾಗಿದೆ. ಅಂದರೆ ಕೈಯನ್ನು ಹಿಡಿದುಕೊಂಡು ಎಂದು ಡಿ ಎಲ್ ಎನ್ ಅರ್ಥ ಹೇಳಿದ್ದಾರೆ. ಆದರೆ, ‘ಕೈಯನ್ನು ಹಿಡಿದನೊ, ಮೈಯನು ಹಿಡಿದನೋ ಎಂಬ ವಿವರ ಪದ್ಯದ ಸಂದರ್ಭದಲ್ಲಿ ಸ್ಪಷ್ಟವಾಗಿ ಇಲ್ಲ’ ಎಂದಿದ್ದಾರೆ (ಮತ್ತೆ ಮತ್ತೆ ಪಂಪ, ಅಹರ್ನಿಶಿ ಪ್ರಕಾಶನ-೨೦೦೮-ಪುಟ-೨೪) ಇಲ್ಲಿನ ಗ್ರಹಿಕೆಯು ಪಠ್ಯನಿಷ್ಠೆಯಿಂದ ಕೂಡಿದ ಸ್ಪಷ್ಟವಾದ ಅಭಿಪ್ರಾಯವಾಗಿದ್ದು. ಪಿಡಿದು ಅನ್ನುವ ಪದವೇ ಹಲವಾರು ಅರ್ಥ ಛಾಯೆಗಳನ್ನು ತಿಳಿಸುತ್ತಲೇ ಮಿತಿ ಮೀರಿದ ವರ್ತನೆ ಅನ್ನುವುದನ್ನಂತೂ ತಿಳಿಸುತ್ತಿರುವಲ್ಲಿ ಯಾವುದೇ ಅನುಮಾನವಿಲ್ಲ. ಹೀಗೆ ಶಂತನುವಿನ ಕ್ರಿಯೆ, ಯೋಜನಗಂಧಿಯ ಪ್ರತಿಕ್ರಿಯೆಯಿಂದ ಇದೊಂದು ಶೃಂಗಾರಾಭಾಸವಾಗಿ ನಿಲ್ಲುತ್ತದೆ.