Advertisement
ನೂತನ ದೋಶೆಟ್ಟಿ ಬರೆದ ಈ ದಿನದ ಕವಿತೆ

ನೂತನ ದೋಶೆಟ್ಟಿ ಬರೆದ ಈ ದಿನದ ಕವಿತೆ

ನಾನಾರೆಂಬುದೀಗ ಮರೆತು ಹೋಗಿದೆಯೆ?

ಸೂರ್ಯ ಚಂದ್ರರಿಂದ ನಿರಂತರತೆಯ ಕಲಿತೆ
ದಣಿವರಿಯದ ಪಯಣದಲೂ
ಬಣ್ಣಗಳ ಚಿತ್ತಾರ ಬರೆಯುವ ರವಿ
ಕತ್ತಲಾಟದಲೂ ಬೆಳಕ ಮಿಂಚಿಸುವ ಶಶಿ
ಹಗಲು ಇರುಳ ಕಣ್ಣುಮುಚ್ಚಾಲೆ ಆಟದಲ್ಲಿ
ಸೋರಿ ಹೋದ ಕ್ಷಣಗಳ ಬಂಧಿಸಿದ್ದಾರೆ
ಹೀಗೇ …

ಸರಿಸಿದ ಹಾಳೆಗಳು ಕಟ್ಟಿಕೊಟ್ಟಿವೆ ಮಹಲುಗಳ
ಅವುಗಳಲ್ಲಿ ಓಡಾಡುತ್ತವೆ ಕಾಲುಗಳು
ದುಡಿಯುತ್ತವೆ ಕೈಗಳು
ತುಂಬಿಸಿವೆ ತಿಜೋರಿಯ ತುಂಬ ನಗದು
ಉಸಿರಾಡುತ್ತಿರುವ ಘಳಿಗೆಗಳು
ಚಲಿಸುತ್ತಿವೆ ಗಡಿಯಾರದ ಮುಳ್ಳಿನ ಲಯಕ್ಕೆ
ಟಕ್ ಟಕಾ ಟಕಾ ಟಕ್
ಠಾಕು ಠೀಕು…
ನಾನು ನಂಬಬೇಕಿದೆ ಇದನು

ಸುಲಭವಾಗಿ ಹೇಳಿಬಿಡುತ್ತವೆ ಆ ನಗುಗಳು
ಒಳಗಿಂದಲೇ ಛಿಮ್ಮುವುದು ಎಲ್ಲ
ಹ್ಹ ಹ್ಹ ಹ್ಹಾ…
ನರಕ- ನಾಕವೆಲ್ಲ ಇರುವುದಲ್ಲೇ!
ಇರಬಹುದು..
ಜೊತೆಗೆ ಸ್ನೇಹ ಬಾಂಧವ್ಯಗಳೂ….
ಹೊರಗಿಲ್ಲದ್ದು ಒಳಗಿದ್ದೀತೆ?
ಯಾವ ಹರಿಕಥೆಯಲ್ಲೂ ಉತ್ತರ ಸಿಕ್ಕಿಲ್ಲ
ಈಗ ಹರಿಕಥೆಯೂ ಇಲ್ಲ
ಎಷ್ಟಂತ ಉಪನ್ಯಾಸಗಳನ್ನು ಕೇಳುವುದು?
ಹೇಳುವವರಿಗೆ ಅರಿವಿದ್ದು ಹೇಳುತ್ತಾರಾ
ಸಂಶಯ ನನಗೆ…

ಮಂತ್ರ ಮೇಳಗಳ ಗಟ್ಟಿಸಿ
ದಾಟಿಸಿ ಬಿಟ್ಟರು ಎರಡು ದಾರಿಗಳ
ಹಿಂದಿನ ದಾರಿಯ ನೆರಳು ಹಗಲಗುಂಟ
ಮುಂದಿನದು ರಾತ್ರಿಗಳ ಊಟ
ಇಂದಿಗೂ…
ಹುಟ್ಟಿಸಿದ ಸತ್ಯದಲ್ಲೂ ಪಾಲು ಕೇಳುವುದೇ?
ಹಂಚಲದೇನು ಕಡಲೆಯೇ!
ಓ ಕಡಲೆಯೇ ನಿನ್ನದಲ್ಲ ಬಿಡು ತಪ್ಪು
ಇಂಥ ಗೊಂದಲದಲ್ಲಿ ಕಳೆದು ಹೋದ
ನನ್ನನ್ನು
ಹುಡುಕುವುದಾದರೂ ಎಲ್ಲಿ?

ಉಸಿರು – ಹಸಿರು ಕಡ ತಂದಿದ್ದು
ಅನ್ನುವುದೆಷ್ಟು ಸುಲಭ
ತೀರಿಸುವುದು..?
ಋಣ ಸಂದಾಯದ ಹೆಣ ಹೆಗಲ ಮೇಲಿದೆ
ಹೊರಿಸಿದ ಕೈಗಳೀಗ ಇಳಿಸದಾಗಿವೆ
ಹೊತ್ತೇ ಹೊರಡಬೇಕಿದೆ ಒಂದು ದಿನ
ಅಂದು
ಆ ಉಸಿರು ಹಗುರವೆಂದರೆ ಗಾಳಿಯಷ್ಟು
ಅದರಲ್ಲಿ ತೇಲುತ್ತ ಹಾರುವಷ್ಟು

ಹೆಗಲ ಹೆಣ ಉಸಿರ ಋಣ
ಕೊಡವಿ ಝಳಝಳ
ಹಿಡಿಯಬೇಕಿದೆ ನನ್ನ ನಾನೇ
ಹುಡುಕುವವರು ಯಾರಿಲ್ಲ
ಅದಕಾಗಿಯಾದರೂ
ನೆನಪಿಡಬೇಕಿದೆ
ಗುರುತು, ಚಹರೆ
ನನ್ನದೇ.

About The Author

ನೂತನ ದೋಶೆಟ್ಟಿ

ನೂತನ ದೋಶೆಟ್ಟಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಾಲವೆಂಬ ಮಹಾಮನೆ, ಭಾಗೀರತಿ ಉಳಿಸಿದ ಪ್ರಶ್ನೆಗಳು ಅವರ ಪ್ರಮುಖ ಸಂಕಲನಗಳು. ಯಾವ ವೆಬ್‌ಸೈಟಿನಲ್ಲೂ ಉತ್ತರವಿಲ್ಲ ಅವರ ಪ್ರಕಟಿತ  ಕಥಾ ಸಂಕಲನ.

2 Comments

  1. ನಾಗರಾಜ್ ಹರಪನಹಳ್ಳಿ

    ಹೆಗಲ ಹೆಣ ಉಸಿರ ಋಣ
    ಕೊಡವಿ ಝಳಝಳ
    ಹಿಡಿಯಬೇಕಿದೆ ನನ್ನ ನಾನೇ
    ಹುಡುಕುವವರು ಯಾರಿಲ್ಲ
    ಅದಕಾಗಿಯಾದರೂ
    ನೆನಪಿಡಬೇಕಿದೆ
    ಗುರುತು, ಚಹರೆ
    ನನ್ನದೇ.
    ……..ಇಲ್ಲಿ, ಈ ಸಾಲುಗಳಲ್ಲಿ ಕವಿತೆ ಗೆದ್ದಿದೆ. ಸೂರ್ಯ ಚಂದ್ರ ,ಹಗಲು ಇರುಳು..ಉಸಿರು ,ಋಣ ,ಹೆಣ ಬಾರಗಳ ನಡುವೆ ಅಸ್ತಿತ್ವ, ಅಸ್ಮಿತೆಯ ಹುಡುಕಾಟ ಕವಿತೆಯ ತುಂಬಾ ಹರಡಿಕೊಂಡಿದೆ…

    Reply
  2. ನೂತನ ದೋಶೆಟ್ಟಿ

    ಧನ್ಯವಾದಗಳು ನಾಗರಾಜ್ ಅವರೆ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ