ನನ್ನ ಪತ್ರದಿಂದ ನಿಮಗೆ ಈಗಾಗಲೇ ಸುಟ್ಟ ಮಾಂಸದ ವಾಸನೆ ಬರಲು ಶುರುವಾಗಿದೆಯೆಂದು ನನಗೆ ಗೊತ್ತು. ಕಾಶ್ಮೀರದಲ್ಲಿ ‘ಘನಿ ಕಾಶ್ಮೀರಿ’ ಎಂದು ಹೆಸರಾದ ಕವಿಯೊಬ್ಬನಿದ್ದ ಎಂಬ ಸಂಗತಿ ನಿಮಗೂ ಗೊತ್ತಿರಬಹುದು. ಅವನನ್ನು ಭೇಟಿ ಮಾಡಲು ಇರಾನಿನಿಂದ ಕವಿಯೊಬ್ಬ ಬಂದ. ನೋಡಿದರೆ ಅವನ ಮನೆಯ ಬಾಗಿಲುಗಳು ತೆರೆದೇ ಇದ್ದವು. ಅವನು ಹೇಳುತ್ತಿದ್ದ- ಬಾಗಿಲು ಹಾಕಿಕೊಂಡು ಒಳಗೆ ಬಚ್ಚಿಟುಕೊಳ್ಳುವಂತಹದ್ದು ನನ್ನ ಮನೆಯಲ್ಲೇನಿದೆ?
ಎಸ್‌. ಸಿರಾಜ್‌ ಅಹಮದ್ ತಮ್ಮ ಅಂಕಣದಲ್ಲಿ ಸಾದತ್‌ ಹಸನ್‌ ಮಾಂಟೋ ಆಗಿನ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರೂರವರಿಗೆ ಬರೆದ ಪತ್ರವನ್ನು ಅನುವಾದಿಸಿದ್ದಾರೆ

 

ಪಂಡಿತ್‍ ಜೀ ಅವರೆ
ಅಸ್ಸಲಾಮ್ ಅಲೈಕುಮ್!

ಇದು ನಾನು ನಿಮಗೆ ಬರೆಯುತ್ತಿರುವ ಮೊದಲ ಕಾಗದ. ದೇವರ ಕೃಪೆ ನಿಮ್ಮ ಮೇಲೆ ಹೆಚ್ಚಾಗಿಯೇ ಇರುವುದರಿಂದ ಅಮೇರಿಕನ್ನರೂ ನಿಮ್ಮನ್ನು ಸುರಸುಂದರಾಂಗನೆಂದು ಹೊಗಳುತ್ತಿದ್ದಾರೆ. ಹಾಗಂತ ನಾನೇನು ಕುರೂಪಿಯಲ್ಲ. ಒಂದು ಪಕ್ಷ ನಾನೇನಾದರೂ ಅಮೇರಿಕಾಕ್ಕೆ ಹೋದರೆ ನಿಮಗೆ ಸಿಕ್ಕ ಬಿರುದಾವಳಿಯೇ ನನಗೂ ಸಿಗಬಹುದು. ಆದರೆ, ನೀವೋ ಭಾರತ ದೇಶದ ಪ್ರಧಾನಮಂತ್ರಿಗಳು, ಆದರೆ ನಾನು ಪಾಕಿಸ್ತಾನದಲ್ಲಿರುವ ಒಬ್ಬ ಖ್ಯಾತ ಲೇಖಕ. ನಮ್ಮಿಬ್ಬರ ನಡುವೆ ದೊಡ್ಡ ಕಂದಕವೇ ಇದೆ ಬಿಡಿ. ಹಾಗಿದ್ದರೂ ಸಾಮ್ಯತೆಯಲ್ಲಿ ನಾವಿಬ್ಬರೂ ಕಾಶ್ಮೀರಿಗಳೇ. ಆದರೂ ನೀವು ನೆಹರೂ… ನಾನು ಮಾಂಟೋ. ಕಾಶ್ಮೀರಿಗಳು ಎಂದರೆ ಸುರಸುಂದರಾಂಗರು ಎಂದು ಹೇಳಿದಂತೆ… ಹಾಗೇ ಸುರಸುಂದರಾಂಗರಾಗಿರುವುದು ಅಂದರೆ ಏನು…..? ನನಗಂತೂ ಗೊತ್ತಿಲ್ಲ.

ಬಹಳ ದಿನಗಳಿಂದ ನನಗೊಂದು ಆಸೆ ಇದೆ. ನಮ್ಮ ದೇಶದಲ್ಲಿ ವಯಸ್ಸಾದವರೆಲ್ಲ ನಿಮ್ಮಲ್ಲಿಗೆ ಬಂದು ಅವರಿಗೆ ಬೇಕಾದವರನ್ನೆಲ್ಲ ಮಾತಾಡಿಸಿ ಬರುತ್ತಾರೆ. ಆದರೆ ಅಂಥ ಸೌಭಾಗ್ಯ ನನಗಿನ್ನೂ ಸಿಕ್ಕಿಲ್ಲ. ನೋವಿನ ಮಾತೆಂದರೆ ಇದುವರೆಗೂ ನಿಮ್ಮನ್ನು ಕಣ್ಣಾರೆ ನೋಡಿಯೇ ಇಲ್ಲ. ಒಂದು ಸಾರಿ ಮಾತ್ರ ನೀವು ಮಾತಾಡುವುದನ್ನು ರೇಡಿಯೋದಲ್ಲಿ ಕೇಳಿಸಿಕೊಂಡಿದ್ದೇನೆ. ಆವತ್ತಿನಿಂದ ನಿಮ್ಮನ್ನು ನೋಡಬೇಕೆಂಬ ಆಸೆ ಬಲವಾಗುತ್ತಲೇ ಇದೆ. ನಾವಿಬ್ಬರೂ ಕಾಶ್ಮೀರಿಗಳಾಗಿರುವುದರಿಂದ ಎಲ್ಲಿಯೇ ಇರಲಿ ನಾವಿಬ್ಬರೂ ಒಂದೇ. ಆದರೆ ನಾವಿಬ್ಬರೂ ಸೇರಲು ಇನ್ನೂ ಯಾವ ಅನಿವಾರ್ಯಗಳು ಘಟಿಸಬೇಕಾಗಿವೆಯೋ? ಒಬ್ಬ ಕಾಶ್ಮೀರಿ ಇನ್ನೊಬ್ಬ ಕಾಶ್ಮೀರಿಯನ್ನು ಯಾವ ಯಾವ ಓಣಿಗಳಲ್ಲಿ, ಎಂಥೆಂಥ ಕವಲುದಾರಿಗಳಲ್ಲಿ ಭೇಟಿಯಾಗಬೇಕಾಗಿದೆಯೋ?

ನಿಮ್ಮ ವಂಶಜರು ನದಿಯ(ನಹ್ರ್) ದಂಡೆಯ ಮೇಲೊಂದರ ಮೇಲೆ ನೆಲೆಸಿದ್ದರಿಂದ ನಿಮಗೂ ನೆಹರೂ ಎಂಬ ಹೆಸರು ಅಂಟಿಕೊಂಡಿತು. ನನ್ನ ಹೆಸರು ಯಾವ ಕಾರಣಕ್ಕೆ ಮಾಂಟೋ ಎಂದು ಬಿತ್ತೋ ನನಗೂ ಗೊತ್ತಿಲ್ಲ. ಒಬ್ಬ ಕಾಶ್ಮೀರಿಯಾಗಿ, ನೀವು ಕಾಶ್ಮೀರಕ್ಕೆ ಲೆಕ್ಕವಿಲ್ಲದಷ್ಟು ಸಲ ಭೇಟಿನೀಡಿರಬೇಕು. ನನ್ನ ಗೆಳೆಯರು ಮಾಂಟೋ ಎನ್ನುವ ಹೆಸರು ಕಾಶ್ಮೀರಿ ಭಾಷೆಯ ‘ಮಾಂಟ್’ ಎಂಬ ಪದದಿಂದ ಬಂದಿರಬೇಕು ಎನ್ನತ್ತಾರೆ. ಹಾಗೆಂದರೆ ಒಂದೂವರೆ ಸೇರಿನ ತೂಕವಿರುವ ಅಳತೆಯ ಕಲ್ಲು ಎಂದು ಅರ್ಥವಂತೆ. ಇಷ್ಟು ಕಾಶ್ಮೀರಿ ಭಾಷೆ ನಿಮಗೂ ಬಂದೇ ಬರುತ್ತೆ ಎಂದು ನನ್ನ ಊಹೆ. ನಿಮಗೇನಾದರೂ ನನ್ನ ಪತ್ರಕ್ಕೆ ಉತ್ತರ ಬರೆಯಬೇಕು ಅನಿಸಿದಲ್ಲಿ ‘ಮಾಂಟೋ’ ಎಂಬ ಹೆಸರಿನ ಹಿಂದೆ ಇನ್ನೇನು ಅರ್ಥಗಳು ಇವೆಯೋ ನನಗೂ ಸ್ವಲ್ಪ ತಿಳಿಸಿ.

ರಾಜಕೀಯದಲ್ಲಿ ನಿಮ್ಮ ಹೆಸರನ್ನು ನಾನು ಬಹಳ ಹೆಮ್ಮೆಯಿಂದ ಯಾಕೆ ಉಲ್ಲೇಖಿಸುತ್ತೇನೆ ಎಂದರೆ- ನಿಮ್ಮ ಮಾತಿಗೆ ಪೂರ್ಣ ಎದುರಾಡುವುದು ನಿಮಗೆ ಬಿಟ್ಟರೆ ಇನ್ನಾರಿಗೆ ಬರುತ್ತೆ ನೀವೇ ಹೇಳಿ ನೋಡೋಣ? ಇವತ್ತಿಗೂ ಕಾಶ್ಮೀರಿಗಳನ್ನು ಜಂಗೀಕುಸ್ತಿಯಲ್ಲಿ ಸೋಲಿಸಲು ಬೇರೆ ಯಾರಿಗಾದರೂ ಸಾಧ್ಯವೆ? ಕಾವ್ಯದಲ್ಲಿ ನಮ್ಮನ್ನು ಮೀರಿಸುವವರು ಯಾರಾದರೂ ಇದ್ದಾರಾ? ಆದರೆ ನಮ್ಮ ದೇಶದುದ್ದಕ್ಕೂ ಹರಿಯುವ ನದಿಗಳನ್ನು ನೀವು ನಿಲ್ಲಿಸಲು ಹೊರಟಿದ್ದೀರೆಂದು ತಿಳಿದು ಬಹಳ ಆಶ್ಚರ್ಯವಾಯಿತು. ಪಂಡಿತ್‍ ಜೀ…, ನಿಮ್ಮ ಹೆಸರೇ ನೆಹರೂ ಎಂಬುದು ನಿಮಗೆ ಮರೆತು ಹೋಯಿತೆ? ನಾನೋ ಕೇವಲ ಒಂದೂವರೆ ಸೇರಿನ ತೂಕವಿರುವ ಕಲ್ಲು. ನಾನೇನಾದರೂ ಮೂವತ್ತು-ನಲವತ್ತು ಸಾವಿರ ಸೇರಿನ ತೂಕವಿರುವ ಸಣ್ಣ ಗುಡ್ಡವೇನಾದರೂ ಆಗಿದ್ದಿದ್ದರೆ ನೀವು ನಿಲ್ಲಿಸಬೇಕೆಂದಿರುವ ನದಿಗೆ ಅಡ್ಡಲಾಗಿ ಬಿದ್ದುಬಿಡುತ್ತಿದ್ದೆ. ಆಗ, ಇದನ್ನು ಹೇಗಪ್ಪಾ ಹೊರಗೆ ತೆಗೆಯುವುದು ಎಂದು ಇಂಜಿನಿಯರುಗಳ ಜೊತೆ ಕೂತು ತಲೆಕೆಡಿಸಿಕೊಳ್ಳಬೇಕಾದ ಉಸಾಬರಿ ನಿಮಗೆ ಬರುತ್ತಿತ್ತು.

ನೀವೋ ಭಾರತ ದೇಶದ ಪ್ರಧಾನಮಂತ್ರಿಗಳು, ಆದರೆ ನಾನು ಪಾಕಿಸ್ತಾನದಲ್ಲಿರುವ ಒಬ್ಬ ಖ್ಯಾತ ಲೇಖಕ. ನಮ್ಮಿಬ್ಬರ ನಡುವೆ ದೊಡ್ಡ ಕಂದಕವೇ ಇದೆ ಬಿಡಿ. ಹಾಗಿದ್ದರೂ ಸಾಮ್ಯತೆಯಲ್ಲಿ ನಾವಿಬ್ಬರೂ ಕಾಶ್ಮೀರಿಗಳೇ. ಆದರೂ ನೀವು ನೆಹರೂ… ನಾನು ಮಾಂಟೋ.

ಪಂಡಿತ್‍ ಜೀ, ನೀವು ಬಹಳ ದೊಡ್ಡ ಮನುಷ್ಯ ಎಂಬುದರಲ್ಲಿ ಅನುಮಾನವಿಲ್ಲ. ನೀವು ಭಾರತ ದೇಶದ ಪ್ರಧಾನಿ ಕೂಡ ಆಗಿದ್ದೀರಿ. ನೀವು ಈಗ ಆಡಳಿತ ನಡೆಸುತ್ತಿರುವ ದೇಶ ಮೊದಲು ನನ್ನದೂ ಆಗಿತ್ತು ಎಂಬುದು ನಿಮಗೆ ತಿಳಿದಿರಲಿ. ಇಲ್ಲಿ ನಿಮ್ಮಷ್ಟು ಪ್ರಭಾವಶಾಲಿ ವ್ಯಕ್ತಿ ಇನ್ನೊಬ್ಬರು ಯಾರೂ ಇಲ್ಲ. ಆದರೆ ನನ್ನಂಥ ಸಾಮಾನ್ಯ ವ್ಯಕ್ತಿಗಾಗಿ ನೀವು ಏನೂ ಮಾಡಲಿಲ್ಲ ಎಂದು ನಾನು ಹೇಳಿದರೆ ನೀವು ಕೋಪಿಸಿಕೊಳ್ಳಬಾರದು. ನಿಮಗೆ ನನ್ನ ಪ್ರಾಣ ಬೇಕಾದರೆ…. ದೇವರಾಣೆ… ಕೊಡಲು ಸಿದ್ಧ. ಕಾಶ್ಮೀರದಲ್ಲಿ ಹುಟ್ಟಿದ ನಿಮಗೆ, ಈ ನೆಲದ ಬಗ್ಗೆ ಎಲ್ಲಿಲ್ಲದ ಪ್ರೀತಿ-ಅಭಿಮಾನ ಇದೆ ಎಂದು ನನಗೆ ಖಂಡಿತ ಗೊತ್ತಿದೆ. ಪ್ರತಿಯೊಬ್ಬ ಕಾಶ್ಮೀರಿಯೂ ಜೀವನದಲ್ಲಿ ಒಮ್ಮೆಯೂ ಕಾಶ್ಮೀರವನ್ನು ನೋಡದೆ ಇದ್ದರೂ ಇದೇ ರೀತಿ ಭಾವಿಸುತ್ತಾನೆಂದು ನನಗೆ ಗೊತ್ತಿದೆ.

ನಾನು ನಿಮಗೆ ಹೇಳಿದ ಹಾಗೆ ನಾನು ಬನೀಹಾಲ್‍ ಅನ್ನು ಮಾತ್ರ ನೋಡಿದ್ದೇನೆ. ಕುದ್, ಬತೌತ್ ಮತ್ತು ಕಶ್ತ್ವಾರ್‍ ಗಳನ್ನೂ ಸಹ ನೋಡಿದ್ದೇನೆ. ಆ ಪ್ರದೇಶಗಳಲ್ಲಿ ಇರುವ ಅಪಾರ ಸೌಂದರ್ಯ ಮತ್ತು ಅಪಾರ ಬಡತನ ಎರಡನ್ನೂ ನೋಡಿದ್ದೇನೆ. ನಿಮಗೆ ಇಲ್ಲಿನ ಬಡತನವನ್ನು ನಿವಾರಿಸಲು ಸಾಧ್ಯ ಎನ್ನುವುದಾದರೆ ಕಾಶ್ಮೀರವನ್ನು ನೀವೇ ಇಟ್ಟುಕೊಳ್ಳಿ. ಆದರೆ ಇದು ನಿಮಗೆ ಸಾಧ್ಯವಿಲ್ಲ. ಯಾಕೆಂದರೆ ಕಾಶ್ಮೀರದಲ್ಲಿ ಹುಟ್ಟಿಯೂ ಅದಕ್ಕಾಗಿ ಏನು ಮಾಡಲೂ ಸಹ ನಿಮಗೆ ಸಮಯ ಇಲ್ಲ ಎಂಬುದು ನನಗೆ ಗೊತ್ತಿದೆ.

ನಿಜವಾಗಿ ಹೇಳಿ: ನೀವು ನನ್ನ ಪುಸ್ತಕಗಳನ್ನು ಯಾಕೆ ಓದುವುದಿಲ್ಲ? ಒಂದು ಪಕ್ಷ ನೀವು ಅವುಗಳನ್ನು ಓದಿದ್ದರೂ ನೀವು ಅವುಗಳ ಬಗ್ಗೆ ಏನೂ ಹೇಳಿಲ್ಲ. ನೀವು ಒಬ್ಬ ಲೇಖಕರಾಗಿ ನನ್ನ ಪುಸ್ತಕಗಳನ್ನು ಓದಿಲ್ಲ ಅಂದರೆ ಅದಕ್ಕಿಂತ ವಿಷಾದದ ವಿಚಾರ ಬೇರೆ ಯಾವುದೂ ಇಲ್ಲ. ನಿಮ್ಮ ಬಗ್ಗೆ ನನಗೆ ಇನ್ನೊಂದು ದೂರಿದೆ. ನೀವು ನಮ್ಮ ದೇಶದಲ್ಲಿ ಹರಿಯುವ ನದಿಗಳನ್ನು ನಿಲ್ಲಿಸಬೇಕು ಎಂದು ಪ್ರಯತ್ನಮಾಡುತ್ತಿರುವಾಗ, ನಿಮ್ಮ ದೇಶದ ಪ್ರಕಾಶಕರು ನನ್ನ ಅನುಮತಿಯನ್ನೂ ಪಡೆಯದೆ ನನ್ನ ಪುಸ್ತಕಗಳನ್ನು ಅಚ್ಚು ಹಾಕುತ್ತಿದ್ದಾರೆ. ಇದು ಸರಿಯೇ? ನಿಮ್ಮಂಥವರು ದೇಶದ ಆಡಳಿತ ಹಿಡಿದಿರುವಾಗ ಇಂಥ ಮೋಸ ನಡೆಯುವುದುಂಟೆ? ಬೇಕಾದರೆ ದೆಹಲಿ, ಲಕ್ನೋ ಮತ್ತು ಜಲಂಧರಗಳಲ್ಲಿರುವ ಹಲವಾರು ಪ್ರಕಾಶಕರು ನನ್ನ ಪುಸ್ತಕಗಳನ್ನು ಹೇಗೆ ಕದ್ದು ಪ್ರಕಟಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ನೀವೇ ನೋಡಿ.

ನನ್ನ ಬರಹಗಳು ಅಶ್ಲೀಲವಾಗಿವೆಯೆಂದು ನನ್ನ ವಿರುದ್ಧ ಈಗಾಗಲೇ ಹಲವಾರು ದೂರುಗಳು ದಾಖಲಾಗಿವೆ. ನನ್ನ ದುರಾದೃಷ್ಟ ಎಂತಹದು ಎಂದರೆ, ನಿಮ್ಮ ಮೂಗಿನ ಕೆಳಗೇ ಇರುವ ದೆಹಲಿಯಲ್ಲಿ ಪ್ರಕಾಶಕನೊಬ್ಬ ನನ್ನ ಕತೆಗಳ ಪುಸ್ತಕವನ್ನು ‘ಮಾಂಟೋನ ಅಶ್ಲೀಲ ಕತೆಗಳು’ ಎಂಬ ಹೆಸರಿನಲ್ಲಿ ಪ್ರಕಟಿಸಿ ಲಾಭ ಮಾಡಿಕೊಳ್ಳುತ್ತಾನೆ. ನಾನು ‘ಗಂಜಾ ಫರಿಷ್ತಾ’ ಎಂಬ ಹೆಸರಿನ ಪುಸ್ತಕವನ್ನು ಬರೆದಿದ್ದರೆ ಭಾರತದ ಪ್ರಕಾಶಕನೊಬ್ಬ ಅದನ್ನು ‘ಪರದೆಯ ಹಿಂದೆ…’ ಎಂಬ ಹೆಸರಿನಲ್ಲಿ ಅಚ್ಚು ಹಾಕಿಸುತ್ತಾನೆ. ಈಗ ನೀವೇ ಹೇಳಿ ನಾನು ಏನು ಮಾಡಲಿ?

ಸದ್ಯ ನಾನು ಇನ್ನೊಂದು ಪುಸ್ತಕವನ್ನು ಬರೆದಿದ್ದೇನೆ. ಆ ಪುಸ್ತಕದ ಮುನ್ನುಡಿಯ ಭಾಗವಾಗಿಯೇ ಈ ಪತ್ರವನ್ನು ನಿಮಗೆ ಬರೆಯುತ್ತಿದ್ದೇನೆ. ಈ ಪುಸ್ತಕವೂ ಕಳ್ಳ ಪ್ರಕಾಶಕರ ಕೈ ಸೇರಿ ಅಚ್ಚಾಗಿಬಿಟ್ಟರೆ ದೇವರಾಣೆ ಹೇಳುತ್ತಿದ್ದೇನೆ… ದೆಹಲಿಗೆ ಬಂದು ನಾನು ನಿಮ್ಮ ಕೊರಳಪಟ್ಟಿ ಹಿಡಿದು, ಇಂಥದ್ದನ್ನೆಲ್ಲ ಸರಿಪಡಿಸುವವರೆಗೂ ನಿಮ್ಮನ್ನು ಬಿಡುವುದಿಲ್ಲ. ನನ್ನ ಕೈಗೆ ನೀವು ಸಿಕ್ಕಿದ್ದೇ ಆದರೆ ಜೀವಮಾನ ಪೂರ್ತಿ ನೀವು ನನ್ನನ್ನು ಮರೆಯಲಾರಿರಿ…. ಪುಸ್ತಕ ಅಚ್ಚಾದ ತಕ್ಷಣ ನಿಮಗೆ ಕಳಿಸುತ್ತೇನೆ. ಈಗಲಾದರೂ ಓದಿ ನಿಮ್ಮ ಅಭಿಪ್ರಾಯ ಹೇಳುತ್ತೀರೆಂಬ ನಂಬಿಕೆ ನನಗಿದೆ.

ನನ್ನ ಪತ್ರದಿಂದ ನಿಮಗೆ ಈಗಾಗಲೇ ಸುಟ್ಟ ಮಾಂಸದ ವಾಸನೆ ಬರಲು ಶುರುವಾಗಿದೆಯೆಂದು ನನಗೆ ಗೊತ್ತು. ಕಾಶ್ಮೀರದಲ್ಲಿ ‘ಘನಿ ಕಾಶ್ಮೀರಿ’ ಎಂದು ಹೆಸರಾದ ಕವಿಯೊಬ್ಬನಿದ್ದ ಎಂಬ ಸಂಗತಿ ನಿಮಗೂ ಗೊತ್ತಿರಬಹುದು. ಅವನನ್ನು ಭೇಟಿ ಮಾಡಲು ಇರಾನಿನಿಂದ ಕವಿಯೊಬ್ಬ ಬಂದ. ನೋಡಿದರೆ ಅವನ ಮನೆಯ ಬಾಗಿಲುಗಳು ತೆರೆದೇ ಇದ್ದವು. ಅವನು ಹೇಳುತ್ತಿದ್ದ- ಬಾಗಿಲು ಹಾಕಿಕೊಂಡು ಒಳಗೆ ಬಚ್ಚಿಟುಕೊಳ್ಳುವಂತಹದ್ದು ನನ್ನ ಮನೆಯಲ್ಲೇನಿದೆ? ನಾನು ಬಾಗಿಲು ಹಾಕಿಕೊಳ್ಳುವುದು ನಾನೇ ಸ್ವತಃ ಒಳಗೆ ಇದ್ದಾಗ ಮಾತ್ರ. ಯಾಕೆಂದರೆ ನನ್ನ ಮನೆಯಲ್ಲಿ ನನಗಿಂತ ಅನರ್ಘ್ಯ ವಸ್ತು ಬೇರೇನೂ ಇಲ್ಲ. ಹೀಗೆ ಬಟಾಬಯಲಾಗಿದ್ದ ಮನೆಯಲ್ಲಿ ಇರಾನಿನಿಂದ ಬಂದ ಕವಿ ತನ್ನ ಕವಿತೆಗಳ ಪುಟ್ಟ ಟಿಪ್ಪಣಿಪುಸ್ತಕವನ್ನು ಬಿಟ್ಟು ಹೋದ. ಅದರಲ್ಲಿನ ಒಂದು ಕವಿತೆಯ ದ್ವಿಪದಿ ಪೂರ್ತಿಯಾಗಿರಲಿಲ್ಲ. ಎರಡನೆಯ ಸಾಲನ್ನು ಬರೆದಿದ್ದರೂ ಮೊದಲಿನ ಸಾಲು ಅಪೂರ್ಣವಾಗಿತ್ತು. ಎರಡನೆಯ ಸಾಲು ಹೀಗಿತ್ತು: ‘ಸುಟ್ಟ ಕಬಾಬಿನ ವಾಸನೆ ನಿನ್ನ ಬಟ್ಟೆಗಳಿಂದ ನಿಧಾನಕ್ಕೆ ಈಗ ಎಲ್ಲ ಕಡೆ ಆವರಿಸುತ್ತಿದೆ’. ಘನಿಯ ಮನೆಗೆ ಮತ್ತೊಮ್ಮೆ ಆ ಇರಾನಿ ಕವಿ ಬಂದು ನೋಡಿದರೆ ಅವನ ಕವಿತೆಯ ಮೊದಲ ಸಾಲು ಹೀಗೆ ಪೂರ್ತಿಯಾಗಿತ್ತು: ‘ವಿನಾಶದ ಯಾವುದೋ ಕೈಯೊಂದು ನಿನ್ನ ಮುಂಗೈಬಟ್ಟೆಯ ಅಂಚನ್ನು ಯಾವಾಗ ಮುಟ್ಟಿತು?’

ಪಂಡಿತ್‍ ಜೀ, ನಾನೂ ಸಹ ಹೀಗೆಯೇ ನಾಶಗೊಂಡಿರುವ ಒಂದು ಜೀವ. ಇಂಥ ವಿಷಯಗಳೆಲ್ಲ ನಿಮಗೆ ತಿಳಿಯಲಿ ಎಂಬುದಕ್ಕಾಗಿಯೇ ನಾನು ನಿಮಗೆ ಈ ಪುಸ್ತಕವನ್ನು ಅರ್ಪಿಸುತ್ತಿದ್ದೇನೆ.

(ಮೂಲ ಇಂಗ್ಲಿಷ್: ಸಾದತ್ ಹಸನ್ ಮಾಂಟೋ, 27 ಆಗಸ್ಟ್ 1954)