ಶಾಲಿನಿಗೆ ರುಸ್ತುಂ ಪಪ್ಪಾ ಏಕೆ ನನ್ನ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತಾನೆ? ನನ್ನ ಬಗ್ಗೆ ಯಾಕೆ ಕಾಳಜಿ ತಗೊಳ್ತಾನೆ ಅನ್ನೋದು ಅವಳಿಗೆ ಯಕ್ಷ ಪ್ರಶ್ನೆಯಾಗಿತ್ತು. ತನ್ನ ಸಾಕು ತಾಯಿ ಮತ್ತು ಅವಳ ಚಿಕ್ಕಮ್ಮ ಒಂದು ದಿನ ಮಾತಾಡಿದ ಮಾತುಗಳನ್ನು ಕೇಳಿ ಕರಳು ಕತ್ತರಿಸಿದಂತಾಗಿ ರುಸ್ತುಂ ಪಪ್ಪಾನ ಕುರಿತು ಸತ್ಯದ ಅರಿವಾಗುತ್ತದೆ. ಬನದ ಹುಣ್ಣಿಮೆಗೆ ಸವದತ್ತಿ ಎಲ್ಲಮ್ಮನ ಗುಡ್ಡಕ್ಕೆ ಹೋದಾಗ ದೇವಿಯ ಪ್ರಸಾದವೆಂಬಂತೆ ರುಸ್ತುಂ ಅವರ ಕೈಗೆ ಬಂದ ಈ ಹಸುಗೂಸೆ ಈ ಶಾಲಿನಿ.
ವೈ.ಜಿ. ಭಗವತಿ ಬರೆದ ಮಕ್ಕಳ ಕಾದಂಬರಿ “ಮಕ್ಕಳು ಓದಿದ ಟೀಚರ್ ಡೈರಿ”ಕೃತಿಯ ಕುರಿತು ನಾಗರಾಜ್‌ ಎಂ. ಹುಡೇದ್‌ ಬರಹ

ಮಕ್ಕಳ ಸಾಹಿತ್ಯದಲ್ಲಿ ಹೊಸ ಹೊಸ ಪ್ರಯೋಗ ಗೈಯುತ್ತಿರುವ ವೈ.ಜಿ. ಭಗವತಿಯವರು ಮಕ್ಕಳಿಗಾಗಿ ಕಥೆ ಕಾದಂಬರಿಗಳನ್ನು ರಚಿಸಿ ಸೈ ಎನಿಸಿಕೊಂಡವರು. ಮಕ್ಕಳ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನೂ ಪಡೆದುಕೊಂಡಿದ್ದಾರೆ. ‘ಮಕ್ಕಳು ಓದಿದ ಟೀಚರ್ ಡೈರಿ’ ಎಂಬ ಕಾದಂಬರಿ ಮೂಲಕ ಮಕ್ಕಳ ಸಾಹಿತ್ಯವನ್ನು ಸಂಪದ್ಭರಿತವಾಗಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯ ಹೊಸತನದಿಂದ ಹೊಸ ಹರವನ್ನು ಪಡೆದುಕೊಳ್ಳುತ್ತಿದೆ.

(ವೈ.ಜಿ. ಭಗವತಿ)

ಈ ಕಾದಂಬರಿಗೆ ವೈ.ಜಿ. ಭಗವತಿಯವರು ಆಯ್ದುಕೊಂಡಿರುವ ಕಥಾವಸ್ತು ವಿಭಿನ್ನ ಮತ್ತು ವಿನೂತನ. ಟೀಚರೊಬ್ಬರು ತಮ್ಮ ಬಾಲ್ಯ ಜೀವನದಲ್ಲಿ ಎದುರಿಸಿದ ಸವಾಲುಗಳು, ರೋಚಕ ಘಟನೆಗಳನ್ನಾಧರಿಸಿದೆ. ಬಹಳ ಕುತೂಹಲಭರಿತವಾದ ಸನ್ನಿವೇಶಗಳನ್ನು ಸೃಷ್ಠಿಸಿರುವ ಭಗವತಿಯವರು ವಾಸ್ತವತೆಯೊಂದಿಗೆ ಬೆಸೆದಿದ್ದಾರೆ. ಭಾವೈಕ್ಯತೆಯ ಭಾವವನ್ನು ಹದಬೆರೆಸಿ ಹುರಿಗೊಳಿಸಿದ್ದಾರೆ. ಓದುಗರಲ್ಲಿ ಒಂದಿಷ್ಟು ಧೈರ್ಯ, ಆತ್ಮವಿಶ್ವಾಸ, ಸಾಧಿಸುವ ಛಲವನ್ನು ಈ ಕೃತಿ ತುಂಬುತ್ತದೆ. ವಿಭಿನ್ನವಾದ ಬಯಲುಸೀಮೆ ಮತ್ತು ಮಲೆನಾಡು ಪ್ರದೇಶವನ್ನು ಬೆಸೆಯುವ ತಂತ್ರಗಾರಿಕೆಯೂ ಇಲ್ಲಿದೆ.

ಭಾಷಾ ಪ್ರಯೋಗದಲ್ಲೂ ಈ ಕೃತಿ ವಿಶೇಷವಾಗಿದೆ. ಮಕ್ಕಳಿಗೆ ಮುದ ನೀಡುವ ಸರಳ ಪದಬಳಕೆ ಸೊಗಸಾಗಿದೆ. ದಡಲ್ ಬಡಲ್, ದಡಾ ದಡಾ, ನಿಗಿನಿಗಿ, ಭರ ಭರನೆ ಎಂಬಂತಹ ಪದಗಳನ್ನು ಬಳಸಿರೊದರಿಂದ ಓದಲು ಮಜಾ ನೀಡುತ್ತವೆ. ಇಲ್ಲಿ ಮಕ್ಕಳೇ ಕುತೂಹಲದಿಂದ ಡೈರಿಯನ್ನು ಓದುತ್ತಾ ಹೋಗುತ್ತಾರೆ. ಕಾದಂಬರಿಯ ಪ್ರವೇಶವೂ ಅಷ್ಟೇ ಸೊಗಸಾಗಿದೆ.

ಮಲೆನಾಡಿನ ಭಾವೈಕ್ಯದ ಬೀಡಾದ ಮುಂಡಗೋಡ ತಾಲೂಕಿನ ಇಂದೂರ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಶಾಲಿನಿ ಮಕ್ಕಳ ಅಚ್ಚುಮೆಚ್ಚಿನ ಟೀಚರ್. ಟೀಚರ್ ಸ್ವಂತ ಊರು ಬಯಲು ಸೀಮೆಯ ಬೀಳಗಿ. ಟೀಚರ್ ಯಾವಾಗಲಾದರೊಮ್ಮೆ ತಮ್ಮ ಊರಿಗೆ ಬಂದು ಹೋಗುತ್ತಿರುತ್ತಾರೆ. ಟೀಚರ್ ಊರಿಗೆ ಹೋದಾಗ ಅವರ ಮನೆಯನ್ನು ಸ್ವಚ್ಛಗೊಳಿಸಲು ಬಂದ ಗೆಳೆಯರಿಗೆ ಸಿಕ್ಕ ದಪ್ಪನೆಯ, ಕಪ್ಪನೆಯ ಪ್ಲಾಸ್ಟಿಕ್ ಕವರ್ ಹೊದಿಕೆ ಇದ್ದ ಪುಸ್ತಕ ಸಿಕ್ಕಿತು. ಹೀಗೆ ಮಕ್ಕಳು ಆಸಕ್ತಿಯಿಂದ ಓದುತ್ತಾ ಹೋಗುತ್ತಾರೆ.

ಶಾಲಿನಿ ಚಿಕ್ಕವಳಿದ್ದಾಗ ಬೋರ್‍ವೆಲ್ ನಲ್ಲಿ ಪಾಳಿ ಹಚ್ಚಿ ನೀರು ತುಂಬುತ್ತಿದ್ದ ಘಟನೆಯು ಮಕ್ಕಳಿಗೆ ಅಂದಿನ ಸ್ಥಿತಿಯ ಅರಿವಾಗುತ್ತದೆ. ಟೀಚರ್ ಅಪ್ಪನಿಗಿಂತಲೂ ಮಿಗಿಲಾಗಿರುವ ರುಸ್ತುಂ ಪಪ್ಪಾನ ಕುರಿತು ಓದುವಾಗ ಮಕ್ಕಳ ಕುತೂಹಲ ಓದುಗರಲ್ಲಿಯೂ ಉಂಟಾಗುತ್ತದೆ. ಪ್ರತಿ ಅಧ್ಯಾಯಕ್ಕೂ ಹೋಗುವಾಗ ಮಕ್ಕಳು ಕಾತರದಿಂದಿರುವುದು ಕಂಡುಬರುತ್ತದೆ. ಶಾಲಿನಿ ಟೀಚರ್ ಬಾಲ್ಯದಲ್ಲಿ ತುಂಬಾ ಹಟವಾದಿ, ಓದುವುದರಲ್ಲಿ ತುಂಬಾ ಪ್ರತಿಭಾನ್ವಿತೆಯಾಗಿದ್ದರು. ಮನೆಯಲ್ಲಿ ಏನೂ ಕೆಲಸ ಮಾಡುತ್ತಿದ್ದಿಲ್ಲ. ಅವಳ ಸಹೋದರಿಯರು ಮತ್ತು ತಮ್ಮ ಎಲ್ಲ ಕೆಲಸ ಮಾಡುತ್ತಿದ್ದರು. ಮುಂದೆ ಅವಳು ತನ್ನ ಮುಂಗೋಪಿತನವನ್ನು ಬಿಟ್ಟು, ತಪ್ಪನ್ನು ತಿಳಿದು ಮನೆ ಕೆಲಸದಲ್ಲಿ ತೊಡಗಿಕೊಳ್ಳುತ್ತಾಳೆ. ಬರೀ ಪುಸ್ತಕದ ಹುಳುವಾಗಿದ್ದ ಇವಳು ಶಾಲೆಯಲ್ಲಿ ಖೋ ಖೋ ಆಟಕ್ಕೆ ಬರುತ್ತೇನೆಂದಾಗ ಇನ್ನುಳಿದ ಮಕ್ಕಳು ಅವಳನ್ನು ಹೀಯಾಳಿಸುತ್ತಾರೆ. ಅವಳು ಛಲ ಬಿಡದೆ ನಿರಂತರ ಪ್ರ್ಯಾಕ್ಟಿಸ್ ಮಾಡಿ ಖೋಖೋ ಆಟ ಮತ್ತು ಓಟದಲ್ಲಿ ಮಣ್ಣಿಕೇರಿ ಶಾಲೆಯ ಕೀರ್ತಿಯನ್ನು ಎತ್ತರಿಸುತ್ತಾಳೆ. ಇದು ಪ್ರತಿಯೊಬ್ಬರಲ್ಲೂ ಕ್ರೀಡಾಸ್ಫೂರ್ತಿ ತುಂಬುವ ಘಟನೆಯಾಗಿದೆ.

ಶಾಲಿನಿಗೆ ರುಸ್ತುಂ ಪಪ್ಪಾ ಏಕೆ ನನ್ನ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತಾನೆ? ನನ್ನ ಬಗ್ಗೆ ಯಾಕೆ ಕಾಳಜಿ ತಗೊಳ್ತಾನೆ ಅನ್ನೋದು ಅವಳಿಗೆ ಯಕ್ಷ ಪ್ರಶ್ನೆಯಾಗಿತ್ತು. ತನ್ನ ಸಾಕು ತಾಯಿ ಮತ್ತು ಅವಳ ಚಿಕ್ಕಮ್ಮ ಒಂದು ದಿನ ಮಾತಾಡಿದ ಮಾತುಗಳನ್ನು ಕೇಳಿ ಕರಳು ಕತ್ತರಿಸಿದಂತಾಗಿ ರುಸ್ತುಂ ಪಪ್ಪಾನ ಕುರಿತು ಸತ್ಯದ ಅರಿವಾಗುತ್ತದೆ. ಬನದ ಹುಣ್ಣಿಮೆಗೆ ಸವದತ್ತಿ ಎಲ್ಲಮ್ಮನ ಗುಡ್ಡಕ್ಕೆ ಹೋದಾಗ ದೇವಿಯ ಪ್ರಸಾದವೆಂಬಂತೆ ರುಸ್ತುಂ ಅವರ ಕೈಗೆ ಬಂದ ಈ ಹಸುಗೂಸೆ ಈ ಶಾಲಿನಿ. ಈ ಘಟನೆ ಇಡಿ ಕಾದಂಬರಿಯ ಹೃದಯವಾಗಿದೆ. ಯಲ್ಲಮ್ಮನ ಗುಡ್ಡದ ಜಾತ್ರೆಯಲ್ಲಿ ಆಚರಿಸುವ ಸಂಪ್ರದಾಯಗಳು ದೇವಿಯ ವೈಶಿಷ್ಟತೆಯ ದರ್ಶನ ಮಾಡಿಸಿದ್ದಾರೆ.

ಡೈರಿ ಓದುವ ಮಕ್ಕಳು ಮಧ್ಯದಲ್ಲಿ ಹಾಸ್ಯ ಮಾಡುತ್ತಾ ಮತ್ತೆ ವಾಸ್ತವಕ್ಕೆ ಮರಳಿ ಮತ್ತೆ ಡೈರಿ ಓದುವಲ್ಲಿ ಲೀನವಾಗುವುದು ಆಯಾಸವನ್ನು ಕಡಿಮೆ ಮಾಡಿ, ಮತ್ತೆ ಓದಿಗೆ ಅಣಿಗೊಳಿಸಿರುವುದು ಲೇಖಕರ ತಂತ್ರಗಾರಿಕೆ.

ಅವಳು ಓದಿ ಟೀಚರ್ ಆದ ಮೇಲೆ ನೊಂದವರ ಬಾಳಿಗೆ ಮುಲಾಮಾಗುತ್ತಾಳೆ. ಶಾಲಿನಿ ಟೀಚರ್ ಅಕ್ಕರೆಯ ಬೋಧನೆಯಿಂದ ಎಲ್ಲರ ಮೆಚ್ಚುಗೆಗಳಿಸುತ್ತಾಳೆ. ವಿಶೇಷ ಅಗತ್ಯವುಳ್ಳ ಮಗು ಫಕೀರ ಓದಿನಲ್ಲಿ ಬದಲಾದದ್ದು, ಫಕೀರನ ತಾಯಿ ಶಾಂತಮ್ಮಳ ಮುಖಚರ್ಯೆ ಶಾಲಿನಿ ಟೀಚರ್ ತರಹನೇ ಇದ್ದದ್ದು ಕಾದಂಬರಿಯ ಇನ್ನೊಂದು ಮಗ್ಗಲಿಗೆ ಹೊರಳುತ್ತದೆ. ಇಂತಹ ಅನೇಕ ತಿರುವುಗಳಿಂದ ಕಾದಂಬರಿ ಮಕ್ಕಳಲ್ಲಿ ವಿಚಾರಶಕ್ತಿ, ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುವಂತೆ ಮಾಡುತ್ತದೆ.

ಜೀವನಯಾನ ಅನೇಕ ಅನೀರಿಕ್ಷಿತ ತಿರುವುಗಳಿಂದ ಕೂಡಿರುತ್ತದೆ. ಅವುಗಳನ್ನು ಎದುರಿಸುವ ಸಾಮರ್ಥ್ಯಗಳನ್ನು ಪಡೆಯಲು ಇಂತಹ ಸಾಹಿತ್ಯ ಕೃತಿಗಳನ್ನು ಓದುವುದರಿಂದ ಬರುತ್ತದೆ. ಕಾದಂಬರಿಯ ಕೊನೆಯಲ್ಲಿ ಮಕ್ಕಳು ತಮ್ಮ ಜೀವನದ ಘಟನೆಗಳನ್ನೆ ಬರೆದು ಓದಿ ಡೈರಿಯನ್ನು ಬಹುಮಾನವಾಗಿ ಪಡೆದದ್ದು ಸಾರ್ಥಕವೆನಿಸಿದೆ. ನಾವೂ ನಮ್ಮ ಜೀವನದ ಅಮೂಲ್ಯ ಘಟನೆಗಳ್ನು ಬರೆದಿಟ್ಟರೆ ಅದೇ ಮುಂದೆ ಅಮೂಲ್ಯ ಸಾಹಿತ್ಯವಾಗುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ ಮಕ್ಕಳಿಗೆ ಪ್ರೇರಣಾದಾಯಕವಾದ ಈ ಕೃತಿಯನ್ನು ನೀವು ಓದಿ, ನಿಮ್ಮ ಮಕ್ಕಳಿಗೂ ಓದಿಸಿ.

2021 ರ ಜಿ.ಬಿ.ಹೊಂಬಳ ಮಕ್ಕಳ ಸಾಹಿತ್ಯ ಪುರಸ್ಕಾರ ಪಡೆದಿರುವ ಈ ಕೃತಿ ಭಗವತಿಯವರ ಹಿಂದಿನ ಕೃತಿಗಳಿಗಿಂತ ಭಿನ್ನವಾಗಿದೆ. ಮಕ್ಕಳ ಮನೋಭಿತ್ತಿಯನ್ನು ಒಂದು ವಿಶಾಲ ದೃಷ್ಟಿಕೋನದಲ್ಲಿ ಚಿಂತಿಸುವ, ಬೆಳೆಸುವ ಪ್ರಯತ್ನ ಮಾಡಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ನಡೆಯುವ ಭಾವನೆಗಳ ಸಂಘರ್ಷವನ್ನು, ಎಳೆಯ ಹೃದಯಗಳಲ್ಲಿ ಕುದಿಯುತ್ತಿರುವ ಸಂಕಟ, ಉಕ್ಕುವ ಸಂಭ್ರಮ, ಹೊಯ್ದಾಡುವ ಅನುಮಾನಗಳನ್ನು ಗಾಢವಾಗಿ ತೆರೆದಿಡುತ್ತದೆ” ಎಂದು ಡಾ. ಬಸು ಬೇವಿನಗಿಡದ ಮುನ್ನುಡಿಯಲ್ಲಿ ನುಡಿದಿದ್ದಾರೆ. ಆಕರ್ಷಣೀಯ ಮುಖಪುಟ, ಮಕ್ಕಳ ಸಾಹಿತಿ ಆನಂದ ಪಾಟೀಲ ಅವರು ರಚಿಸಿದ ಸುಂದರ ಮತ್ತು ಅರ್ಥಪೂರ್ಣವಾದ ಒಳಚಿತ್ರಗಳು ಮತ್ತು ಗುಣಮಟ್ಟದ ಮುದ್ರಣ ಕೃತಿಗೆ ಮೆರಗು ತಂದಿವೆ.

(ಕೃತಿ: ಮಕ್ಕಳು ಓದಿದ ಟೀಚರ್ ಡೈರಿ(ಮಕ್ಕಳ ಕಾದಂಬರಿ), ಲೇಖಕರು: ವೈ.ಜಿ.ಭಗವತಿ, ಪ್ರಕಾಶಕರು: ವಿಜಯಾ ಪ್ರಕಾಶನ, ಕಲಘಟಗಿ, ಪುಟಗಳು: 114, ಬೆಲೆ: 110 ರೂ)