ಹಿರೇಕಲ್ಲುಗುಡ್ಡ ಅನೇಕ ವಿಷಯಗಳನ್ನು ಸಾಕ್ಷೀಕರಿಸುವ ಸಾಕ್ಷಾತ್ ಸಾಕ್ಷಿಕಲ್ಲೆಂದರೂ ಆದೀತು. ದೇವಸ್ಥಾನ, ಜೀವವೈವಿಧ್ಯತೆ, ಪಾಳುಬಂಗಲೆ, ಸನ್ಯಾಸಿಗಳ ಆಶ್ರಮತಾಣ, ಮುಕುಂದೂರುಸ್ವಾಮಿಗಳು ಬಂದು ಹೋಗುವ ಸ್ಥಳ, ಹಣದ ವ್ಯಾಮೋಹಕ್ಕೆ ಬಿದ್ದು, ಯಾವುದರ ಬೆಲೆಯನ್ನೂ ಅರಿಯದೆ ಚಿಪ್ಪುಹಂದಿ, ಹಾವುಗಳು ಇನ್ನಿತರ ಪ್ರಾಣಿಗಳನ್ನು ಹಿಡಿದು ಕಳ್ಳಸಾಗಣೆ ಮಾಡುವ ಪೆದ್ದು ಮುಖವಾಡದ ನಿರ್ದಯೀ ಪ್ರವೃತ್ತಿಯ ಕೆಂಚಪ್ಪನ ಕಾರಸ್ಥಾನ…. ಹೀಗೆ ಹಿರೇಕಲ್ಲುಗುಡ್ಡ ಕೆಟ್ಟ ರಾಜಕೀಯ, ಅಧ್ಯಾತ್ಮ, ಐತಿಹ್ಯ, ದುರಾಸೆಗಳ ಪ್ರತೀಕವಾಗಿ ನಿಲ್ಲುತ್ತದೆ. ಅಲ್ಲದೆ ಅಂಜುಬುರುಕ ಕೆಂಚಪ್ಪನ ಚಾಣಾಕ್ಷತನ ಕುಟಿಲತೆ ಅವನು ಬ್ಯಾಂಕಿನಲ್ಲಿ ಹಣ ವಿನಿಯೋಗಿಸುವುದರ ಮೂಲಕ ತೆರೆದುಕೊಳ್ಳುತ್ತದೆ.
ಶಶಿಧರ ಹಾಲಾಡಿ ಕಾದಂಬರಿ “ಅಬ್ಬೆ” ಕುರಿತು ಬಿ.ಕೆ. ಮೀನಾಕ್ಷಿ ಬರಹ

ನನ್ನ ಹುಟ್ಟಿದೂರು ಅರಸಿಕೆರೆ, ಬೆಳೆದ ಬಾಣಾವರದ ಪರಿಸರದಲ್ಲಿ ನಾವು ಬಾಲ್ಯದಲ್ಲಿ ಆಡಿದ ಆಟಗಳನ್ನು ಒಂದು ಪ್ರಬಂಧವಾಗಿ ಬರೆದಿದ್ದೆನಷ್ಟೆ. ಆಗ ಹಾಲಾಡಿಯವರು ನಿಮ್ಮೂರಿನಲ್ಲಿ ಅಬ್ಬೆಗಳಿವೆಯಂತೆ ಅದರ ಬಗ್ಗೆ ಗೊತ್ತೇ ಎಂದರು. ನನಗೆ ನಿಜಕ್ಕೂ ಅಬ್ಬೆ ಗೊತ್ತಿರಲಿಲ್ಲ. ಆದರೆ ಮಯೂರದಲ್ಲಿ ಅದ್ಭುತವಾದ ಒಂದು ಪತ್ತೇದಾರಿ ಕಥೆ ಓದಿದ್ದೆ. ಅದರ ಬಗ್ಗೆ ಹೇಳಿದೆ. ಅಲ್ಲಿಗೆ ಅಬ್ಬೆಯ ಬಗ್ಗೆ ಮಾತುಕತೆ ಮುಗಿಯಿತು.

ನೋಡಿದರೆ ಅಬ್ಬೆಯನ್ನೇ ಕಥಾವಸ್ತುವಾಗುಳ್ಳ ಕಾದಂಬರಿಯನ್ನೇ ಪ್ರಕಟಿಸಿದ್ದಾರೆ ಶ್ರೀಯುತ ಶಶಿಧರ ಹಾಲಾಡಿಯವರು.. ಸೋಜಿಗ ಸಂತೋಷಗಳ ಜೊತೆಗೆ ಕುತೂಹಲವೂ ಉಂಟಾಯಿತು. ಹಾಗಾದರೆ ಅಬ್ಬೆಯ ಬಗ್ಗೆ ಕೂಲಂಕುಷವಾದ ವಿವರಣೆ ತಿಳಿವಳಿಕೆ ಇದರಲ್ಲಿ ಸಿಗುತ್ತದೆ. ಅಬ್ಬೆಯ ಬೆನ್ನುಹತ್ತಿ ಅಬ್ಬೆಯ ಜನ್ಮ ಜಾಲಾಡಿದ್ದಾರೆ ಎಂದುಕೊಂಡೆ. ಅಂತೆಯೇ ಅಬ್ಬೆ ಓದುತ್ತಾ ಹೋದೆ.

(ಶಶಿಧರ ಹಾಲಾಡಿ)

ಅಬ್ಬೆ ಕಚ್ಚಿದರೆ ಹೆಬ್ಬಾಗಿಲಿಗೆ ಬರಲೂ ಸಮಯವಿರದಷ್ಟು ಬೇಗ ಕಚ್ಚಿಸಿಕೊಂಡವನು ಜೀವ ಬಿಡುತ್ತಾನೆ ಎಂಬ ವ್ಯಾಖ್ಯಾನವನ್ನೇ ಆಧಾರವಾಗಿಟ್ಟುಕೊಂಡು, ನಮ್ಮ ಪಕ್ಕದಲ್ಲೇ ಇರುವ ನೀಚ ಮನುಷ್ಯರಿಗೆ ರೂಪಕವಾಗಿಸಿ ಮನುಷ್ಯನ ಗುಣಸ್ವಭಾವವನ್ನು ಕಥಾನಾಯಕ ಶಿವರಾಂನ ಮೂಲಕ ಬಿಚ್ಚಿಡುತ್ತಾ ಹೋಗುತ್ತಾರೆ ಕಾದಂಬರಿಕಾರರು. ಹಳ್ಳಿಯ ಜೀವನ, ಪರಿಸರ ಕಾಳಜಿ, ಅಲ್ಲಿಯ ಕೆಟ್ಟ ರಾಜಕೀಯ, ದುಷ್ಟ ಜನರ ಸ್ವಭಾವವನ್ನು ಅನಾವರಣಗೊಳಿಸುತ್ತಲೇ. ಕತೆ ಬೆಳೆದುಕೊಂಡು ಹೋಗುತ್ತದೆ. ಅಬ್ಬೆಯ ಬೆನ್ನು ಹತ್ತಿದ ಕಥಾನಾಯಕ, ಹಳ್ಳಿಯಲ್ಲಿ ನಡೆಯುವ ದೌರ್ಜನ್ಯ, ಕಳ್ಳಸಾಗಣೆ, ಯುವಶಕ್ತಿಯ ನಷ್ಟಗಳನ್ನು ಗಮನಿಸುತ್ತಲೇ ತನಗಾಗುತ್ತಿರುವ ಅನ್ಯಾಯದ ವಿರುದ್ಧದ ತಿಕ್ಕಾಟದಲ್ಲಿ ಸೌಮ್ಯವಾದ ಪ್ರತಿಭಟನೆ ಪ್ರಾರಂಭಿಸುತ್ತಾನೆ. ಮೂರ್ತದಿಂದ ಅಮೂರ್ತದೆಡೆಗೆ ಸಾಗುವ ಈ ಕತೆ ಕಡೆಯವರೆಗೂ ಕುತೂಹಲಕಾರಿ ಚಿತ್ರಣವಾಗಿಯೇ ಉಳಿಯುತ್ತದೆ.

ಅಬ್ಬೆ ಕಾದಂಬರಿ, ನಿರ್ಮಲವಾದ ತಿಳಿನೀರ ಅಲೆಯಂತೆ ನಿಧಾನವಾಗಿ ಸಾಗಿಬಂದು ಮನಸ್ಸನ್ನು ಆಗಾಗ ತಟ್ಟಿ ಮತ್ತೆ ಹಿಂದೆ ಸರಿಯುತ್ತದೆ. ಉಬ್ಬರವಿಳಿತಗಳ ರೋಚಕ ಸನ್ನಿವೇಶಗಳನ್ನು ಕೂಡ ಯಾವುದೇ ಉದ್ವೇಗಕ್ಕೊಳಗಾಗದೆ ದೂರನಿಂತು ವಿವರಿಸುವ ಕಾದಂಬರಿಕಾರರಿಗೆ ಓದುಗರನ್ನು ಹಿಡಿದಿಡುವ ಕಲೆ ಸಿದ್ಧಿಸಿದೆ. ಕಾದಂಬರಿಯ ಪುಟ ತೆರೆದಂತೆ, ನೀರವತೆ ತಾನೇತಾನಾಗಿ ಜನ್ಮ ತಳೆದು ಕಥಾಲೋಕದ ಬಾಗಿಲು ತೆರೆದುಕೊಳ್ಳುತ್ತದೆ..

ಹಾಲಾಡಿಯವರ ಶಶಾಂಕಣದ ಸುಮಾರು ಲೇಖನಗಳನ್ನು ಓದಿದಾಗ ಇವರ ಪರಿಸರ ಪ್ರೀತಿ, ಅದರ ಬಗೆಗಿನ ಕಾಳಜಿ, ಲೇಖನಿಯ ಮೂಲಕವೇ ತಮ್ಮ ಸಶಕ್ತ ಹೋರಾಟವನ್ನು ಮುಂದುವರೆಸುತ್ತಲೇ ಬಂದಿದ್ದಾರೆನ್ನುವುದು ಅವರ ಓದುಗರೆಲ್ಲರಿಗೂ ಅರಿವಿಗೆ ಬಂದಿರುವ ವಿಷಯ. ಅಂತೆಯೇ ಅಬ್ಬೆ ಕೂಡ ಅನ್ವೇಷಣೆಗೊಳಪಟ್ಟೂ ನಿರ್ಣಯವನ್ನೀಯಲಾಗದ ಅತಂತ್ರ ಮನಃಸ್ಥಿತಿಯಲ್ಲೇ ಪರಸ್ಥಳಕ್ಕೆ ಕಥಾನಾಯಕ ಸಾಗಬೇಕಾಗುತ್ತದೆ.

ದಟ್ಟ ಮಲೆನಾಡಿನ ಪರಿಸರದಿಂದ ಬಯಲುಸೀಮೆಗೆ ಉದ್ಯೋಗಾರ್ಥಿಯಾಗಿ ಬಂದ ಕಥಾನಾಯಕ ಶಿವರಾಂ, ಬರಗಾಲ ಕಾಲುಮುರಿದು ಬಿದ್ದ ಬಯಲು ಸೀಮೆಯಲ್ಲೂ ಜೀವವೈವಿಧ್ಯವನ್ನರಸಿ ಹೋಗುವ ಆತನ ಸಂಶೋಧನಾ ಮನಸ್ಸಿಗೆ ಗರುಡನಗಿರಿ, ಹಿರೇಕಲ್ಲುಗುಡ್ಡ, ಅಲ್ಲಿಯ ಬಂಡೆಗಳು, ಪುತ್ರಜಾಜಿಗಳೇ ಪಾತ್ರಗಳಾಗಿ ರೂಪುಗೊಂಡು, ಓದುಗರ ಕುತೂಹಲಕ್ಕೆ ಪಕ್ಕಾಗುತ್ತವೆ. ಕಾಡಿನ ನಾಶಕ್ಕೆ ಕಾರಣವನ್ನು ಕಂಡುಕೊಳ್ಳುವ ಶಿವರಾಂ ಕಡೆಗೆ ಅದಕ್ಕೊಂದು ಪರಿಹಾರವನ್ನೂ ಸೂಚಿಸಿ ಅರಣ್ಯನಾಶವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು ಕಾದಂಬರಿಯ ಸಾರ್ಥಕತೆಯನ್ನು ಸಾರುತ್ತದೆ.

ತಂತ್ರಜ್ಞಾನ ಮುಂದುವರೆಯದ ಕಾಲಘಟ್ಟದಲ್ಲಿ ನಡೆಯುವ ಈ ಕತೆಯಲ್ಲಿ ಡಾ. ಕಲ್ಲೂರಾಯರು ಕಲ್ಕೆರೆಯ ಖಾಸಗಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿಕೊಳ್ಳುತ್ತಲೇ ತಮ್ಮ ಪರಿಸರಪ್ರೀತಿ ಮತ್ತು ಕಾಳಜಿಯ ಕಾರಣ, ಶಿವರಾಂನ ಜೊತೆಗೂಡಿ ಗರುಡನಗಿರಿ, ಹಿರೇಕಲ್ಲುಗುಡ್ಡಗಳಿಗೆ ಭೇಟಿ ಕೊಡುವುದು, ಅಲ್ಲಿನ ವಿಶೇಷತೆ ಮತ್ತು ಇತಿಹಾಸಗಳನ್ನರಿಯಲು ಪ್ರಯತ್ನಿಸುವುದು ಕಾದಂಬರಿಯ ತಿರುವೊಂದರಲ್ಲಿ ನಮ್ಮನ್ನು ತಂದು ನಿಲ್ಲಿಸುತ್ತದೆ. ಹಾಗೆಯೇ ಗ್ರಾಮದ ನಿರುದ್ಯೋಗಿ ಪಡ್ಡೆ ಹುಡುಗರ ಕ್ರಿಕೆಟ್ ಟೀಮಿಗೆ, ಬ್ಯಾಂಕ್ ಉದ್ಯೋಗಿಯಾಗಿಯೂ ಅವರ ನಡುವೆ ಅಂತರ ಕಾಪಾಡಿಕೊಳ್ಳದೆ, ಈ ಹುಡುಗರ ಜೊತೆ ಸೇರಿ ಕ್ರಿಕೆಟ್ ಆಡುವ ಶಿವರಾಂ ಬಗ್ಗೆ ಬ್ಯಾಂಕಿನವರ ಕೋಪದ ಮೂರನೇ ಕಣ್ಣು ತೆರೆಯುತ್ತದೆ. ಆ ಹುಡಗರ ದಂಡನ್ನೇ ಕಟ್ಟಿಕೊಂಡು ಗರುಡನಗಿರಿಗೆ ಪ್ರವಾಸ ಹೋಗುವ ಶಿವರಾಂ ಮ್ಯಾನೇಜರರ ರೋಷದ ಕಹಿಯನನುಭವಿಸಲು ಸಿದ್ಧನಾಗಬೇಕಾಗುತ್ತದೆ. ತಾವು ನಿಷ್ಪ್ರಯೋಜಕರೆಂದು ಭಾವಿಸಿದ್ದ ಆ ಯುವಕರು, ಶಿವರಾಂ ತಮ್ಮ ಜೊತೆ ಸೇರಿಕೊಳ್ಳುವುದರಿಂದ ತಮ್ಮಲ್ಲೇ ಹೊಸ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾರೆ. ಅಂತೆಯೇ ಭಾಸ್ಕರನು ಕೂಡ ಮುಂದೆ ಡಿಗ್ರಿ ಕಟ್ಟಲು ಶಿವರಾಂ ಪ್ರಚೋದನೆ ನೀಡುವುದು ಧನಾತ್ಮಕ ಪರಿವರ್ತನೆಗೆ ಕಾರಣವಾಗುತ್ತದೆ.

ಪೂಚಂತೇಯವರು ಹಾರುವ ಓತಿಯ ಹಿಂದೆ ನಮ್ಮನ್ನು ಕರೆದೊಯ್ದಂತೆ, ಕಾದಂಬರಿಕಾರರು ಜೀವನದ ಸಂಕಷ್ಟಗಳ ನಡುನಡುವೆಯೇ ನಮ್ಮನ್ನು ಅಬ್ಬೆಯ ಬೆನ್ನಿಗೆ ದುಂಬಾಲು ಬೀಳುವಂತೆ ಮಾಡುತ್ತಾರೆ. ಅಬ್ಬೆ ಕಚ್ಚಿ ಸತ್ತವರ ನಿಜಕಾರಣವನ್ನರಸುತ್ತಾ ಅಬ್ಬೆಯನ್ನು ನಿಗೂಢವಾಗಿಯೇ ಓದುಗರ ಮನದಲ್ಲಿ ಉಳಿಯುವಂತೆ ಬಲೆ ನೇಯುತ್ತಾರೆ. ಎಲ್ಲಿಯೋ ಏನನ್ನೋ ಓದಿ ನಂಬಿಕೊಂಡಿದ್ದ ಸಾಕ್ಷಿಗಳೆಲ್ಲ ಬುಡಮೇಲಾಗುವಂತೆ ಮಾಡುತ್ತಾರೆ.

ಹಿರೇಕಲ್ಲುಗುಡ್ಡ ಅನೇಕ ವಿಷಯಗಳನ್ನು ಸಾಕ್ಷೀಕರಿಸುವ ಸಾಕ್ಷಾತ್ ಸಾಕ್ಷಿಕಲ್ಲೆಂದರೂ ಆದೀತು. ದೇವಸ್ಥಾನ, ಜೀವವೈವಿಧ್ಯತೆ, ಪಾಳುಬಂಗಲೆ, ಸನ್ಯಾಸಿಗಳ ಆಶ್ರಮತಾಣ, ಮುಕುಂದೂರುಸ್ವಾಮಿಗಳು ಬಂದು ಹೋಗುವ ಸ್ಥಳ, ಹಣದ ವ್ಯಾಮೋಹಕ್ಕೆ ಬಿದ್ದು, ಯಾವುದರ ಬೆಲೆಯನ್ನೂ ಅರಿಯದೆ ಚಿಪ್ಪುಹಂದಿ, ಹಾವುಗಳು ಇನ್ನಿತರ ಪ್ರಾಣಿಗಳನ್ನು ಹಿಡಿದು ಕಳ್ಳಸಾಗಣೆ ಮಾಡುವ ಪೆದ್ದು ಮುಖವಾಡದ ನಿರ್ದಯೀ ಪ್ರವೃತ್ತಿಯ ಕೆಂಚಪ್ಪನ ಕಾರಸ್ಥಾನ…. ಹೀಗೆ ಹಿರೇಕಲ್ಲುಗುಡ್ಡ ಕೆಟ್ಟ ರಾಜಕೀಯ, ಅಧ್ಯಾತ್ಮ, ಐತಿಹ್ಯ, ದುರಾಸೆಗಳ ಪ್ರತೀಕವಾಗಿ ನಿಲ್ಲುತ್ತದೆ. ಅಲ್ಲದೆ ಅಂಜುಬುರುಕ ಕೆಂಚಪ್ಪನ ಚಾಣಾಕ್ಷತನ ಕುಟಿಲತೆ ಅವನು ಬ್ಯಾಂಕಿನಲ್ಲಿ ಹಣ ವಿನಿಯೋಗಿಸುವುದರ ಮೂಲಕ ತೆರೆದುಕೊಳ್ಳುತ್ತದೆ.

ಇಲ್ಲಿ ಕಾದಂಬರಿ ಕಲ್ಕೆರೆಯೆಂಬ ಕಲ್ಪಿತ ಗ್ರಾಮದ ಘಾಟಿ ಜನರ ನಡುವೆಯೆ, ಅಬ್ಬೇಪಾರಿಯಂಥ ಶಿವರಾಮನ ಜೀವನ ಕಲ್ಕೆರೆಗೆ ಬೆಸೆದುಕೊಂಡರೂ ಬೆಸೆಯದಂತೆ, ಮಲೆನಾಡಿನ ತನ್ನ ಮಣ್ಣಿನ ಸತ್ವ ಹಾಗೂ ಬಯಲು ಮಣ್ಣಿನ ಸತ್ವವನ್ನು ತಾಳೆ ಹಾಕುತ್ತಾ ಅವುಗಳನ್ನೇ ಸಮೀಕರಿಸಿಕೊಂಡು ಬದುಕುವ ಕಥಾನಾಯಕ ಬದುಕಿನ ಬದಲಾವಣೆಗಳಿಗೆ ಅನಿವಾರ್ಯವಾಗಿ ಹೊಂದಿಕೊಳ್ಳುವ ಜಾಣತನ ತೋರುತ್ತಾನೆ. ಮನರಂಜನೆಯೆಂದರೆ ಕೇವಲ ಇಸ್ಪೀಟು ಕುಡಿತ ಎಂದು ತಿಳಿದವರ ಮನಸ್ಸುಗಳಲ್ಲಿ, ಹೀಗೂ ಒಂದು ಬದುಕನ್ನು ರೂಢಿಸಿಕೊಳ್ಳಬಹುದೆಂಬ ಜಾಗೃತಿಯನ್ನು ಶಿವರಾಂ ಮೂಡಿಸುತ್ತಾನೆ. ಜೀವನದ ಏರುಪೇರುಗಳ ನಡುವೆಯೂ, ಸ್ವಭಾವದ ಮೂಲಗುಣವನ್ನು ಅದರ ತುಡಿತವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ಜಯಶೀಲನಾಗುವ ಕಥಾನಾಯಕ ಆದರ್ಶಗಳ ಪ್ರತೀಕವಾಗಿ ನಿಲ್ಲುತ್ತಾನೆ. ಕಲ್ಕೆರೆಯಲ್ಲೂ ಪರಿಸರವನ್ನು ಪ್ರೀತಿಸುವ ಜನರಿದ್ದರು ಎಂಬುದನ್ನು ಭಾಸ್ಕರನ ತಂದೆ ಪ್ರತಿನಿಧಿಸುತ್ತಾರೆ. ಹಳ್ಳಿಯ ಕೆಟ್ಟ ರಾಜಕೀಯ, ಅದಕ್ಕೆ ಪೂರಕವಾದ ಪಾತ್ರಗಳು, ಬ್ಯಾಂಕ್ ಎಂಬ ಬ್ಯಾಂಕಿನಲ್ಲೂ ಕೆಟ್ಟ ಹುಳುವೊಂದರಿಂದ ನಡೆವ ಅಪಚಾರಗಳು ಆರೋಪಗಳು, ಸಾಲಮೇಳದ ರಾಜಕೀಯಗಳು ಅಬ್ಬೆ ಕಾದಂಬರಿಯನ್ನು ಸಮಕಾಲೀನ ವಿಷಯ ವೈವಿಧ್ಯತೆಯ ಆಗರವನ್ನಾಗಿಸುತ್ತದೆ.

ಬದುಕು, ಪರಿಸರ, ಪರಿಸರಕಾಳಜಿ, ದುಷ್ಟರ ಮಧ್ಯೆಯೂ ದುಷ್ಟತನ ತೋರದೆ ಸನ್ನಡತೆ ಕಾಪಾಡಿಕೊಳ್ಳುವ, ಜೀವನದ ಮೂಲಭೂತ ಸೌಕರ್ಯಗಳಾದ ಅನ್ನ, ವಸತಿ, ವಸನಗಳನ್ನು ದೊರಕಿಸಿಕೊಳ್ಳುವಲ್ಲಿ ಪ್ರಾಮಾಣಿಕತೆ ಬಿಡದ, ದುಶ್ಚಟಗಳನ್ನು ಅಂಟಿಸಿಕೊಳ್ಳದೆ. ಶಾಂತ ಬದುಕನ್ನು ಬಯಸುತ್ತಾ ಹಾಗೇ ನಡೆಯಬಯಸುವ ಶಿವರಾಂ ಎಲ್ಲ ಕಾಲಕ್ಕೂ ಸಲ್ಲುತ್ತಾನೆ. ಗಾಢ ಪರಿಸರ ಪ್ರೇಮಿ, ಪರಿಸರಕತೆಗಳ ಪೂಚಂತೆಯವರು ಕಾದಂಬರಿಯಲ್ಲಿ ಆಗಾಗ ಗೋಚರಿಸುತ್ತಾರೆ. ಅಂದರೆ, ಅವರ ಜಾಡಿನಲ್ಲೇ ಹೆಜ್ಜೆ ಹಾಕುತ್ತಿರುವ ಶ್ರೀಯುತ ಶಶಿಧರ ಹಾಲಾಡಿಯವರು ಪೂಚಂತೆಯವರ ಪ್ರತಿನಿಧಿಯಾಗಿ ನಿಲ್ಲುತ್ತಾರೆಂದರೆ ಅಬ್ಬೆ ಪರಿಸರಪ್ರೀತಿಯನ್ನು ಪ್ರಚೋದಿಸುವಲ್ಲಿ ಯಶಸ್ವಿಯಾಗಿದೆ ಎಂದರ್ಥ.

(ಕೃತಿ: ಅಬ್ಬೆ (ಕಾದಂಬರಿ), ಲೇಖಕರು: ಶಶಿಧರ ಹಾಲಾಡಿ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 250/-)