ಆಯಾ ಕಾಲಕ್ಕನುಗುಣವಾಗಿ ಲೇಖಕಿ ಸೂಕ್ಷ್ಮ ಕುಸುರಿಯ ನೇಯ್ಗೆಯಿಂದ ಕಲಾತ್ಮಕವಾಗಿ ನಿರ್ಮಿಸಿರುವ ಪರಿ ಓದುಗರನ್ನು ಕೈಯ್ಯಲ್ಲಿ ಹಿಡಿದ ಪುಸ್ತಕ ಕೆಳಗಿಡದಂತೆ ಸೆಳೆಯುತ್ತದೆ. ಕಾದಂಬರಿಯ ಘಟನೆಗಳ ಕಾಲಮಾನ, ಅದಕ್ಕನುಗುಣವಾಗಿ ಒಂದೊಂದೂ ಪಾತ್ರಗಳಲ್ಲಿ ಲೇಖಕಿ ಪರಕಾಯ ಪ್ರವೇಶ ಮಾಡಿದಂತೆ ಕಡೆದಿಟ್ಟ ಪಾತ್ರ ಚಿತ್ರಣವು ಓದುಗರ ಮನೋ ಭೂಮಿಕೆಯಲ್ಲೂ ಜೀವಂತವಾಗಿ ನೆಲೆಸಿ ಭಾವನೆಗಳೊಂದಿಗೆ ಸ್ಪಂದಿಸುತ್ತವೆ. ಮಳೆಗಾಲದಲ್ಲಿ ಪಾಚಿ ಕಟ್ಟಿಕೊಳ್ಳುವ ಮನೆಯ ಸುತ್ತಲಿನ ಕಲ್ಲಿನ ಪಾಗರವನ್ನು ಲೇಖಕಿ ಒಂದು ರೂಪಕದಂತೆ ಬಳಸಿಕೊಂಡಿದ್ದು ಕಾದಂಬರಿಯಲ್ಲಿ ಪಾಗಾರದ ಪ್ರಸ್ತಾಪ, ಅದರ ಪಾಚಿ ಕೂಡ ಅಷ್ಟೇ ಕಲಾತ್ಮಕವಾಗಿ ಮೂಡಿ ಬಂದಿದೆ.
ಮಿತ್ರಾ ವೆಂಕಟ್ರಾಜ ಅವರ ʻಪಾಚಿ ಕಟ್ಟಿದ ಪಾಗಾರʼ ಕಾದಂಬರಿಯ ಕುರಿತು, ಲೇಖಕಿ ಕೆ.ಆರ್.ಉಮಾದೇವಿ ಉರಾಳ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ

ಮಿತ್ರಾ ವೆಂಕಟ್ರಾಜರ ಕಾದಂಬರಿ “ಪಾಚಿ ಕಟ್ಟಿದ ಪಾಗಾರ”ವು ಸುತ್ತಲೂ ಕಲ್ಲಿನ ಪಾಗಾರ ಹೊಂದಿರುವ ಸುಭದ್ರವಾದ ಕಟ್ಟೋಣದ ಒಂದು ಸುವ್ಯವಸ್ಥಿತ ಸಮೃದ್ಧತೆಯ ಮನೆಯೊಂದರಂತೆ, ಸ್ಪಷ್ಟವಾದ ಕಾಲದ ಚೌಕಟ್ಟಿನ ಪಾಗಾರ ಹೊಂದಿರುವ ಕಾದಂಬರಿ. ೧೯೨೦ರ ನೇತ್ರಾವತಿ ನದಿಯ ಭೀಕರ ನೆರೆಯ ಪ್ರಸ್ತಾಪ ಕಾದಂಬರಿಯ ಪ್ರಾರಂಭದಲ್ಲೇ ಬರುವಂತೆ ಮುಂದೆ ಎರಡನೇ ಮಹಾಯುದ್ಧದ ಸಂದರ್ಭದ ಬದುಕಿನ ಜಟಿಲ ಪರಿಸ್ಥಿತಿಗಳು, ಸ್ವಾತಂತ್ರ್ಯಕ್ಕಾಗಿ ಹೋರಾಟ ಹಾಗೂ ಸ್ವಾತಂತ್ರ್ಯ ಬಂದ ಪ್ರಾರಂಭದ ಜನರ ನಿರೀಕ್ಷೆ ಭರವಸೆಗಳು, ಮುಂದೆ ಆ ನಿರೀಕ್ಷೆ ಭರವಸೆಗಳು ಹುಸಿಯಾಗುವುದು, ಉಳ್ಳವರು ಇಲ್ಲದವರ ನಡುವಿನ ಆಳ ಕಂದರದ ಆಕ್ರೋಶ ಸೃಜಿಸಿದ ನಕ್ಸಲ್ ಸಂಘಟನೆಗಳು, ಸಮಾಜವಾದ, ಭೂ ಸುಧಾರಣಾ ಚಳುವಳಿ, ಮುಂದೆ ಚೀನಾದಿಂದ ಈಶಾನ್ಯ ಭಾರತದ ಆಕ್ರಮಣ, ನಂತರದಲ್ಲಿ ಎಪ್ಪತ್ತರ ದಶಕದವರೆಗೂ ಸ್ಪಷ್ಟ ಕಾಲ ನಿರ್ದೇಶನ ಕಾದಂಬರಿಯಲ್ಲಿದೆ. ಘಟನೆಗಳು, ಸನ್ನಿವೇಶಗಳು, ಪಾತ್ರಚಿತ್ರಣ, ಪಾತ್ರ ಪರಿಪೋಷಣೆ, ಸಂಭಾಷಣೆ, ಜೀವನಶೈಲಿ ಎಲ್ಲವುಗಳನ್ನೂ ಆಯಾ ಕಾಲಕ್ಕನುಗುಣವಾಗಿ ಲೇಖಕಿ ಸೂಕ್ಷ್ಮ ಕುಸುರಿಯ ನೇಯ್ಗೆಯಿಂದ ಕಲಾತ್ಮಕವಾಗಿ ನಿರ್ಮಿಸಿರುವ ಪರಿ ಓದುಗರನ್ನು ಕೈಯ್ಯಲ್ಲಿ ಹಿಡಿದ ಪುಸ್ತಕ ಕೆಳಗಿಡದಂತೆ ಸೆಳೆಯುತ್ತದೆ.

(ಮಿತ್ರಾ ವೆಂಕಟ್ರಾಜ)

ಕಾದಂಬರಿಯ ಘಟನೆಗಳ ಕಾಲಮಾನ, ಅದಕ್ಕನುಗುಣವಾಗಿ ಒಂದೊಂದೂ ಪಾತ್ರಗಳಲ್ಲಿ ಲೇಖಕಿ ಪರಕಾಯ ಪ್ರವೇಶ ಮಾಡಿದಂತೆ ಕಡೆದಿಟ್ಟ ಪಾತ್ರ ಚಿತ್ರಣವು ಓದುಗರ ಮನೋ ಭೂಮಿಕೆಯಲ್ಲೂ ಜೀವಂತವಾಗಿ ನೆಲೆಸಿ ಭಾವನೆಗಳೊಂದಿಗೆ ಸ್ಪಂದಿಸುತ್ತವೆ. ಮಳೆಗಾಲದಲ್ಲಿ ಪಾಚಿ ಕಟ್ಟಿಕೊಳ್ಳುವ ಮನೆಯ ಸುತ್ತಲಿನ ಕಲ್ಲಿನ ಪಾಗಾರವನ್ನು ಲೇಖಕಿ ಒಂದು ರೂಪಕದಂತೆ ಬಳಸಿಕೊಂಡಿದ್ದು ಪ್ರಮುಖವಾಗಿ ಮೂರು ಬಾರಿ ಕಾದಂಬರಿಯಲ್ಲಿ ಪಾಗಾರದ ಪ್ರಸ್ತಾಪ, ಅದರ ಪಾಚಿ ಕೂಡ ಅಷ್ಟೇ ಕಲಾತ್ಮಕವಾಗಿ ಮೂಡಿ ಬಂದಿದೆ. ಮನೋಹರ ಗ್ರಂಥಮಾಲೆಯ ಈ ಕೃತಿ ದ್ವಿತೀಯ ಮುದ್ರಣದ ಭಾಗ್ಯ ಕೂಡ ಕಂಡಿದೆಯಲ್ಲದೆ ಲೇಖಕಿಯ ಪತಿ ವೆಂಕಟ್ರಾಜರವರು ಇದನ್ನು “ದ ರ‍್ಯಾಪ್‌ಡ್ ಸ್ಪೇಸ್” ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

‘ದೊಡ್ಡಮನೆ’ ಎಂದೇ ಹೆಸರಾಗಿದ್ದ ಕೃಷ್ಣದೇವರಾಯರ ಕೆಮ್ಮಾಡಿ ಮನೆತನ ಊರಿನ ಪ್ರಮುಖ ವಹಿವಾಟುಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದ ಮನೆತನ. ಕೃಷ್ಣದೇವರಾಯರು ಲಕ್ಷ್ಮೀದೇವಮ್ಮನದು ಅನುರೂಪ ದಾಂಪತ್ಯ. ನ್ಯಾಯಪರತೆ ಸಾತ್ವಿಕ ಸ್ವಭಾವದ ರಾಯರು ಎಲ್ಲರ ಗೌರವಕ್ಕೆ ಪಾತ್ರರಾದವರು. ಇಂತಹವರ ಮಗ ಮಾಧವನದು ಸ್ವೇಚ್ಛಾಚಾರ ಅಧಿಕಾರಲಾಲಸೆ ಸರ್ವಾಧಿಕಾರಿ ಪ್ರವೃತ್ತಿ ಹಾಗೂ ತಾನು ನಡೆದದ್ದೇ ದಾರಿ ಎನ್ನುವ ಸ್ವಭಾವ. ಮಗನ ದುರ್ವರ್ತನೆಯಿಂದ ಘಾಸಿಗೊಂಡ ಮನಃಸ್ಥಿತಿಯ ರಾಯರು ಹಾಸಿಗೆ ಹಿಡಿದವರು ಅವಸಾನ ಹೊಂದುವುದು ಕಾದಂಬರಿಯ ಆರಂಭಲ್ಲೇ ಘಟಿಸಿದೆ. ಹೀಗಾಗಿ ಕಾದಂಬರಿಯಾದ್ಯಂತ ವಿಜೃಂಭಿಸುವವನು ವಿಶೃಂಖಲ ಮನೋವೃತ್ತಿಯ ಮಾಧವ. ಆದರೆ ಅವನಲ್ಲೂ ಎಲ್ಲೋ ಒಂದೆಡೆ ಸೂಕ್ಷ್ಮತೆ, ಮೃದುತ್ವ ಇದೆ ಎನ್ನುವುದು ಆತ ತನ್ನ ತಾಯಿಯನ್ನು ಗೌರವಿಸುವುದು, ತಮ್ಮನನ್ನು ಜೀವದಂತೆ ಪ್ರೀತಿಸುವುದು, ಅಸಹಾಯಕಿ ಪಾರಳ ನೆರವಿಗೆ ಒದಗಿ ಬರುವುದರಲ್ಲಿ ವ್ಯಕ್ತವಾಗುತ್ತದೆ.

ಲಕ್ಷ್ಮೀದೇವಮ್ಮನ ಪಾತ್ರ ಕೂಡ ಕಾದಂಬರಿಯಾದ್ಯಂತ ಮೂಡಿಬಂದಿರುವ ಒಂದು ವಿಶಿಷ್ಟ ಪಾತ್ರ. ಮಗನ ಸ್ವೇಚ್ಛಾಚಾರದಿಂದಾಗಿ ಮನನೊಂದು ಪತಿ ಹಾಸಿಗೆ ಹಿಡಿದಾಗ ‘ಹರಕೆ ಹೇಳಿಕೋ’ ಎಂಬ ಸಲಹೆಗೆ ವಿಷಣ್ಣ ನಗುವಿನೊಂದಿಗೆ ಮಾತ್ರ ಪ್ರತಿಕ್ರಿಯಿಸುವ, ತಟಸ್ಥ ಧೋರಣೆಯಿಂದಾಗಿ ಪ್ರಾರ್ಥನೆಗೂ ನಾಲಗೆ ಏಳದಂತಾಗುವ ಅವರ ವೈಚಾರಿಕತೆ ಕಾದಂಬರಿಯಾದ್ಯಂತ ಹಲವು ಹಂತಗಳಲ್ಲಿ ವಿಕಸಿತವಾಗಿದೆ. ಬಾಲಕ ಕುಪ್ಪನಿಗೆ ಮನೆಯಲ್ಲಿ ಆಶ್ರಯ ನೀಡಿದಾಗ, ಬಾವಿಕಟ್ಟೆಗೆ ಸ್ನಾನಕ್ಕೆ ಹೋದ ಅವನು “ಬಾಮಿ ಮುಟ್ಟಲಕ್ಕ? ಯಾವ ಜಾತಿಯ ಏನ….?” ಎಂಬ ಪ್ರಶ್ನೆ ಎದುರಿಸಿದಾಗ ಲಕ್ಷ್ಮೀದೇವಿ “ಜಾತಿ ಮನುಷ್ಯ ಜಾತಿ. ನೀ ಸುಮ್ಮನೆ ಕುಳ್ಕ” ಎಂದು ಗದರಿ ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸುತ್ತಾಳೆ. ಚೀಂಕ್ರನ ಮೇಲೆ ಮಾಧವನ ದೌರ್ಜನ್ಯ ಕಂಡು ಅವಳಿಗೆ ಪ್ರಾರಂಭವಾದ ಹೊಟ್ಟೆನೋವು ಕೊನೆಯುಸಿರಿರುವವರೆಗೂ ನಿಲ್ಲುವುದಿಲ್ಲ. ಮಗಳು ಶಂಕರಿ ಗಂಡನ ಮನೆಯಲ್ಲಿ ಕಷ್ಟ ಅನುಭವಿಸುವಾಗ ಪರದೇಶಗಳ ವಿಚ್ಛೇದನ, ತಮ್ಮಲ್ಲೇ ಒಕ್ಕಲು ಮಕ್ಕಳ ಕೂಡಿಕೆ ಬಗ್ಗೆ ಚಿಂತಿಸುವವಳು. ಕೆಮ್ಮಾಡಿ ಮನೆತನದಲ್ಲಿ ಹೆಂಗಸರಿಗೆ ಅದೆಂತಹ ದಿಗ್ಭಂದನದ ಬದುಕೆಂದರೆ ಅವರು ಮರಿ ಅರಮನೆಯಂತಹ ಮನೆಯಲ್ಲೇ ಒಳಭಾಗದಲ್ಲಿ ಮಾತ್ರ ಇರಬೇಕಾದವರು. ಹೊರಗೆ ಚಾವಡಿಗೂ ಪ್ರವೇಶವಿಲ್ಲದವರು. ಅಂತಹ ಪರಿಸರದಲ್ಲಿ ಲಕ್ಷ್ಮೀದೇವಿ ಹೊರಗೊಂದು ದೊಡ್ಡ ಜಗತ್ತಿದೆ, ಅಲ್ಲಿಯ ಆಗುಹೋಗುಗಳು ತಮ್ಮೆಲ್ಲರ ಮೇಲೆ ಪರಿಣಾಮ ಬೀರುತ್ತವೆ, ರಾಮಾಯಣ ಮಹಾಭಾರತಗಳು ಇನ್ನೂ ಜಗತ್ತಿನಲ್ಲಿ ನಡೆಯುತ್ತಲೇ ಇವೆ, ಬರೇ ಉಂಡು ತಿಂದು ದಿನ ಬೆಳಗ್ಗೆ ಮಾಡುವುದೇ ಬದುಕಲ್ಲ ಎಂಬ ಪಾಠಗಳನ್ನು ಕಲಿತವರು.
ದೊಡ್ಡಮನೆ ಕೆಮ್ಮಾಡಿ ಮನೆತನದ ಕತೆಯೊಂದಿಗೆ ಹೆಣೆದುಕೊಂಡು ಬರುವ ಇನ್ನೊಂದು ಬದುಕಿನ ಕತೆ ಪಾರಳದು. ವಿಧವೆ ತಾಯಿ ತನ್ನದೇ ಹಕ್ಕಿನ ಮನೆಯಲ್ಲೇ ಆದರೂ ಅಸ್ಥಿರತೆಯ ಅಂಚಿನಲ್ಲಿದ್ದಂತೆ ಬದುಕು ದೂಡುವಾಗ, ಮಗಳು ಪಾರಳ ಹಿತಚಿಂತನೆಯ ಕುರಿತ ಒತ್ತಡದಿಂದಾಗಿ, ಅವಳ ಮಮತೆಯ ಸೆಲೆ ಗುಪ್ತಗಾಮಿನಿಯಾಗಿದ್ದು, ಬಾಹ್ಯದಲ್ಲಿ ಹೊಡೆತ ಬಡಿತ ಬೈಗುಳ ನಿಂದನೆಗಳ ಸುರಿಮಳೆಯಲ್ಲೇ ಬೆಳೆದು ದೊಡ್ಡವಳಾದವಳಾದರೂ, ಕೆಸುವಿನೆಲೆಯ ಮೇಲಿನ ನೀರ ಹನಿಯಂತೆ ಅವುಗಳನ್ನೆಲ್ಲಾ ಮನಸ್ಸಿಗೆ ಅಂಟಿಸಿಕೊಳ್ಳದೆ ಕೆಲಸ ಕಾರ್ಯ ಗುಣ ನಡತೆಯಲ್ಲಿ ಅಪರಂಜಿಯಂತೆ ರೂಪುಗೊಂಡವಳು, ಪಾರ. ಶಾಲಾ ಮಾಸ್ತರ ಗೋಪಾಲನ ಪತ್ನಿಯಾದಳು. ದೇಶದ ಸ್ವಾತಂತ್ರ್ಯ, ಸ್ವಾತಂತ್ರ್ಯಾನಂತರದ ಸುದಿನಗಳು, ಜಾತಿರಹಿತ ವರ್ಗರಹಿತ ಸಮಾಜದ ಬಗ್ಗೆ ಕನಸು ಕಾಣುವ ಗೆಳೆಯ ಸದಾನಂದನ ಹೋರಾಟದ ಬದುಕಿಗೆ ಒತ್ತಾಸೆಯಾಗಿರುವವನು ಗೋಪಾಲ. ವಿದ್ಯಾಭ್ಯಾಸ, ಬಡತನ ನಿರ್ಮೂಲನ, ಅನಾಥಾಶ್ರಮ ಎಂದು ತಾನು ದೇಶ ಕಟ್ಟುವ ಕೆಲಸದಲ್ಲಿ ತೊಡಗಬೇಕೆಂಬುವ ಸದಾನಂದ, ತಾನು ಮದುವೆಯಾಗದೆ ತನ್ನ ಪಾಲಿನ ಆಸ್ತಿಯನ್ನು ಅನಾಥಾಶ್ರಮಕ್ಕಾಗಿ ವಿನಿಯೋಗಿಸಿದ್ದವ. ಗೆಳೆಯನ ಈ ಕ್ರಿಯಾಶೀಲತೆಗೆ ಸ್ಪಂದಿಸುವ ಗೋಪಾಲ ಪಾರಳನ್ನೂ ತನ್ನ ಕನಸುಗಳಲ್ಲಿ ಸಹಭಾಗಿಯಾಗಿಸುತ್ತಾನೆ. ಹತ್ತು ವರ್ಷಗಳಲ್ಲಿ ನಾಲ್ಕು ಮಕ್ಕಳ ತಾಯಿಯಾಗುತ್ತಾಳೆ ಪಾರ. ಗೋಪಾಲ ಹಾವು ಕಡಿತದಿಂದ ಅಸುನೀಗಿದಾಗ ಅಕ್ಷರಶಃ ದಿಕ್ಕಿಲ್ಲದವಳಾಗುತ್ತಾಳೆ. ಮೂವರು ಮಕ್ಕಳನ್ನು ಸದಾನಂದನ ಅನಾಥಾಶ್ರಮಕ್ಕೆ ಸೇರಿಸಿ ಒಬ್ಬ ಮಗನೊಂದಿಗೆ ಲಕ್ಷೀ ದೇವಮ್ಮನ ಆತ್ಮಸಖಿಯಂತೆ ನೆಲೆಗೊಳ್ಳುವ ಪಾರಳ ಕರ್ತವ್ಯಪರತೆ, ಕಾರ್ಯಕ್ಷಮತೆ, ವಿವೇಚನಾಮಯ ವ್ಯಕ್ತಿತ್ವ ಕಾದಂಬರಿಯಾದ್ಯಂತ ರೂಪುಗೊಂಡಿದೆ.

ಕೆಮ್ಮಾಡಿ ಮನೆತನದ ಮಾಧವನದು ವಿಕ್ಷಿಪ್ತ ವ್ಯಕ್ತಿತ್ವವಾದಂತೆ ಅದರ ಪ್ರಭಾವದಿಂದಾಗಿಯೋ, ಅವನ ಮಿತಿ ಮೀರಿದ ಮಮತೆಯಿಂದಾಗಿಯೋ ಮತ್ತೋರ್ವ ವಿಕ್ಷಿಪ್ತ ವ್ಯಕ್ತಿಯಾಗಿ ರೂಪುಗೊಂಡವನು ಅವನ ತಮ್ಮ ಸೀತಾರಾಮ. ಇವನ ಪತ್ನಿಯಾಗಿ ಬಂದ ಕಮಲಿನಿಯು ಹಲವು ರೀತಿಯ ಭ್ರಮ ನಿರಸನಕ್ಕೊಳಪಡಬೇಕಾಗುತ್ತದೆ. ಕಮಲಿನಿಯಲ್ಲಿ ಸುಪ್ತವಾಗಿದ್ದ ದಿಟ್ಟತನ ಧೈರ್ಯ ಮೆಲ್ಲನೆ ಪ್ರಕಾಶಮಾನವಾಗುತ್ತಿದೆ ಎಂದು ಲೇಖಕಿ ಒಂದೆಡೆ ಹೇಳಿರುವುದು ಓದುಗರಲ್ಲಿ ಕಮಲಿನಿಯ ಕುರಿತು ಕೌತುಕದ ನಿರೀಕ್ಷೆ ಮೂಡಿಸುತ್ತದಾದರೂ, ಮುಂದೆ ಪತಿಯು ಮಾಧವನ ಸಾವಿನ ನಂತರ ಚೈತನ್ಯಶೀಲತೆಯನ್ನೇ ಕಳೆದುಕೊಂಡವನಂತಾದಾಗ ಮನೆತನ ನಿರ್ವಹಣೆಯ ಹೊಣೆಗಾರಿಕೆಗೆ ಕಮಲಿನಿಯು ಭುಜ ಕೊಡುವುದು ಪರಿಸ್ಥಿತಿಯ ಅನಿವಾರ್ಯತೆಯಿಂದಾಗಿ ಎಂಬಂತೆ ಚಿತ್ರಿತವಾಗಿದ್ದು, ಅವಳ ಅಂತರಂಗದ ಸುಪ್ತ ಶಕ್ತಿಯ ಅನಾವರಣದ ಸನ್ನಿವೇಶವು ನಿರೀಕ್ಷೆಯಾಗಿಯೇ ಉಳಿಯಿತೇನೋ ಎನಿಸುತ್ತದಾದರೂ, ಅವಳ ಕರ್ತವ್ಯ ಶ್ರದ್ಧೆ ಓದುಗರ ಮನ ಮಿಡಿಯುತ್ತದೆ.

ಭೂಮಾಲಿಕರು ತಮ್ಮ ಒಕ್ಕಲುಗಳು, ಊಳಿಗದವರನ್ನು ಹೀನಾಯವಾಗಿ ನಡೆಸಿಕೊಳ್ಳುವ ರೀತಿ, ಸಮಾಜದ ವರ್ಗಗಳು, ಸಮಾನತೆಯು ಒಂದು ಆದರ್ಶವಾಗಿರುವ ಸಮಾಜದ ನಿರ್ಮಾಣಕ್ಕಾಗಿ ಮಾಲಿಕರ ವರ್ಗವೇ ನಾಶವಾಗಬೇಕಾದ ಅನಿವಾರ್ಯತೆ- ಇದು ಸಾಧ್ಯವಾಗಲು ಕ್ರಾಂತಿಯೇ ಆಗಬೇಕಾಗಿರುವುದು ಅನಿವಾರ್ಯ ಎಂಬಂತಹ ವಿಚಾರಗಳತ್ತ ಒಲವು ಬೆಳೆಸಿಕೊಂಡ ಯುವಜನತೆಯು ಕೇರಳದ ಕುಟ್ಟಿಯ ನಾಯಕತ್ವದ ಕ್ರಾಂತಿಕೂಟದೆಡೆ ಆಕರ್ಷಿತರಾಗುತ್ತಾರೆ. ಕೇರಳದ ಸೆರಗಿನ ಈ ಭಾಗದಲ್ಲಿ ನಂಬೂದರಿಪಾದರ ಕಮ್ಯುನಿಸ್ಟ್ ಸರ್ಕಾರದ ಪ್ರಭಾವ ನಿಚ್ಚಳವಾಗಿತ್ತು. ಕ್ರಾಂತಿಯನ್ನು ನಡೆಸುವ ನಕ್ಸಲ್ ಚಟುವಟಿಕೆಗಳು, ‘ಉಳುವವನಿಗೇ ಭೂಮಿ’ ಎಂಬ ಶ್ರಮಿಕರ ಪರವಾದ ಧೋರಣೆಗಳು, ಭೂ ಹಿಡುವಳಿ ಕಾನೂನು, ಸಮಾನತೆಯ ಆಶಯದ ಸಮಾಜವಾದಿ ಸಿದ್ಧಾಂತ, ಸ್ವಾತಂತ್ರ್ಯಾನಂತರದ ಭ್ರಮ ನಿರಸನ ಎಂದು ಲೇಖಕಿ ಸಾಮಾಜಿಕ ಚಟುವಟಿಕೆಗಳು, ರಾಜಕೀಯ ತಲ್ಲಣಗಳು ಜನಜೀವನದ ಮೇಲೆ ಬೀರಿದ ಪ್ರಭಾವವನ್ನು ಕಾದಂಬರಿಯ ಹಂದರದಲ್ಲಿ ಸಮರ್ಥವಾಗಿ ಪ್ರತಿಪಾದಿಸಿದ್ದಾರೆ.

ಕಾದಂಬರಿಯಲ್ಲಿ ತನ್ನ ಘಟನಾವಳಿಗಳ ರಂಗಸ್ಥಳವಾದ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ, ಪಾಣೆ ಮಂಗಳೂರಿನ ಕಡೆಯ ಪ್ರಾದೇಶಿಕ ಭಾಷೆಯನ್ನು ಸಾದ್ಯಂತವಾಗಿ ಬಳಸಲಾಗಿದೆ. ಕೊನೆಯಲ್ಲಿ ಅರ್ಥದ ಪಟ್ಟಿ ಕೂಡ ಇದೆ. ಕ್ವಚಿತ್ತಾಗಿ ತುಳುವಿನ ಬಳಕೆಯೂ ಇದೆ. ಒಂದು ಮನೆತನದ ಕಥೆಯೊಂದಿಗೆ ಒಂದು ಪ್ರದೇಶದ ನಿರ್ದಿಷ್ಟ ಕಾಲಮಾನದ ಜೀವನ ಶೈಲಿ, ಪ್ರಾದೇಶಿಕ ವಿವರಗಳ, ನೈಜ ಚಿತ್ರಣದ, ಚಿತ್ರಕ ಶಕ್ತಿಯಿಂದ ಸ್ಫುಟವಾಗಿ ರೂಪಿಸಿದ ಪಾತ್ರಗಳ, ಸಂಯಮಪೂರ್ಣ ನಿರೂಪಣೆಯ “ಪಾಚಿಗಟ್ಟಿದ ಪಾಗಾರ” ಕಾದಂಬರಿ ಓದುಗರ ಮನದಲ್ಲಿ ಬುದ್ಧಿ ಭಾವಗಳಿಗೆ ಮೀಟುಗೋಲು ಹಾಕುವ ಸತ್ವಪೂರ್ಣ ಕಾದಂಬರಿ.

(ಕೃತಿ: ʻಪಾಚಿ ಕಟ್ಟಿದ ಪಾಗಾರʼ (ಕಾದಂಬರಿ), ಲೇಖಕರು: ಮಿತ್ರಾ ವೆಂಕಟ್ರಾಜ, ಪ್ರಕಾಶಕರು: ಮನೋಹರ ಗ್ರಂಥ ಮಾಲಾ, ಧಾರವಾಡ.)