“ಆವತ್ತು ನಾನು ಮತ್ತೆ ಅಕ್ಕಾ ಒತ್ತಾಯಿಸಿದ್ದೆವು ಅಂತ ಅಣ್ಣ ಪಾಯಿಖಾನೆ ಹಾಕಿಸಿದ್ದ. ಆದರೆ ಹೀಗೆ ನಾವು ಬೆಂಗಳೂರಿನ ಕಡೆ ಮುಖಮಾಡಿದ್ದೇ ಅದಕ್ಕೆ ಬೀಗ ಬಿದ್ದಿತ್ತು! ನಾವೀಗ ಮತ್ತೆ ಅಲ್ಲಿಗೆ ಬರೋ ಸುದ್ದಿ ಕೇಳಿದ ಮೇಲೆ, ಅದರ ಬೀಗವನ್ನು ತೆರೆಯಲಾಗಿತ್ತು. ಮನೆಯ ಗಂಡಸರಿರಲೀ, ಅಥವಾ ದೊಡ್ಡಮ್ಮ ಅದನ್ನು ಬಳಸುವ ಮಾತು ಹಾಗಿರಲಿ, ಮನೆಯ ಯಾವ ಹೆಣ್ಮಕ್ಕಳಿಗೂ ಆ “ಪಾಯಖಾನೆ”ಯ ಸುದ್ದಿಯೇ ಬೇಡ. ಮನೆಯ ಮೂರೂ ಸೊಸೆಯಂದಿರು ತೀರಾ ಅನಕ್ಷರಸ್ತರೇನಲ್ಲ. ಆದರೂ ಅವರಿಗೆ “ಪಾಯಖಾನೆ” ಬಳಸುವ ಬಗ್ಗೆ ಏನೋ ಸಂಕೋಚ. ನಾವು ಅದೇನೇ ಹೇಳಿದರೂ ಅಷ್ಟೇ ಕೊನೆಗೆ “ನಮಗ್ ಇವೆಲ್ಲಾ ಸಜ್ ಆಗೂದಿಲ್ಲ ಬಿಡ್ರಿ ಚಿಕ್ಕಮ್ಮ” ಅಂದು ಕಂಡ ಕೆಲಸಕ್ಕೆ ಹೊರಟುಬಿಡುತ್ತಾರೆ. ಅವರನ್ನು ಹಿಡಿದು ನಿಲ್ಲಿಸಿ ತಿಳುವಳಿಕೆ ಕೊಡುವುದೇ ಮಹಾ ಪ್ರಯಾಸದ ಸಂಗತಿ.”
ರೂಪಶ್ರೀ ಕಲ್ಲಿಗನೂರ್ ಅಂಕಣ

 

ಎರಡು ವರ್ಷಗಳ ಹಿಂದಿನ ಮಾತಿದು. ಬಹುತೇಕ ನನ್ನದೇ ವಯಸ್ಸಿನ, ನನ್ನ ತಮ್ಮನ (ದೊಡ್ಡಮ್ಮನ ಮಗನ) ಮದುವೆ ಆಗ ನಿಶ್ಚಯವಾಗಿತ್ತು. ಅದು ಆ ಮನೆಯ ಕೊನೆ ಹುಡುಗನ ಮದುವೆ. ಹಾಗಾಗಿ ಅವನ ದೊಡ್ಡಣ್ಣ, ಅಕ್ಕರೆಯಿಟ್ಟು ಎಲ್ಲರಿಗೂ ಮದುವೆಗೆ ಅಮಂತ್ರಣವಿಟ್ಟಿದ್ದ. ಅದರಲ್ಲೂ ನನ್ನನ್ನು ಸೇರಿಸಿ, ನನ್ನಕ್ಕ ಮತ್ತು ತಮ್ಮ, ಮೂವರೆಂದರೆ ಅವರ ಇಡೀ ಮನೆಗೆ ಎಲ್ಲಿಲ್ಲದ ಪ್ರೀತಿ. ನಮಗೂ ಅಷ್ಟೇ. ದೊಡ್ಡಮ್ಮನ ಐದೂಜನ ಮಕ್ಕಳೆಲ್ಲ ನಮಗೆ ತೀರಾ ಆಪ್ತ. ಹಾಗಾಗಿ ಅವರು ಕರೆಯುವ ಮುನ್ನವೇ ನಾವೂ ಹೊರಟು ನಿಂತಿದ್ವಿ ಅನ್ನೋದನ್ನ ಹೇಳಬೇಕಿಲ್ಲ.

ನಮ್ಮೂರಕಡೆ ಅಣ್ಣ-ತಮ್ಮಂದಿರ ಮದುವೆ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಬಂಗಾರ ಕೊಡುವ ಸಂಪ್ರದಾಯವಿದೆ. ಮದುವೆಯಾದ ಹೆಣ್ಣುಮಕ್ಕಳಂತೂ, ತಮಗೆ ಬೇಕಾದ್ದನ್ನು ಅಣ್ಣಂದಿರಿಂದ ವಸೂಲಿ ಮಾಡೋದಕ್ಕೆ, ಅವರ ಮದುವೆ ಸಂದರ್ಭಕ್ಕಾಗಿ ಕಾದು ಕುಳಿತಿರುತ್ತಾರೆ. ಹಾಗಾಗಿ ನಾವೂ ಅದೇ ಉತ್ತರಕರ್ನಾಟಕದ ಹೆಣ್ಣುಮಕ್ಕಳಲ್ಲವೇ. ತಮ್ಮನ ಮದುವೆ ಅಂದಿದ್ದೇ, ನಮಗೂ ಈ ಸಮಯದ ಬೆಲೆಯ ಅರ್ಥ ಹೊಳೆದಿತ್ತು. ಹಾಗಾಗಿ ಅಕ್ಕ ಮತ್ತು ನಾನು ಇಬ್ಬರೂ ಸೇರಿ, ಇದೇ ಛಾನ್ಸು ನಮ್ಮ ಬೇಡಿಕೆ ಈಡೇರೋಕೆ. ಅದೂ ಅಲ್ಲದೇ ಮನೆಯಲ್ಲಿ ಕೊನೆಯ ಮದುವೆಯಾದ್ದರಿಂದ, ಮತ್ತೆ ಮದುವೆಯಾದ ತಂಗಿಯರು ಹೀಗೆ ಬಾಯ್ಬಿಟ್ಟು ಕೇಳೋದ್ರಿಂದ, ನಮ್ಮ ಬೇಡಿಕೆ ಈಡೇರೇ ಈಡೇರುತ್ತೆ ಅಂತ ಲೆಕ್ಕಹಾಕಿದ್ವಿ. ಅದೂ ಅಲ್ಲದೇ ಆಗ ನನ್ನ ಮದುವೆಯಾಗಿ ಕೇವಲ 5-6 ತಿಂಗಳಾಗಿತ್ತಷ್ಟೇ. ಹೊಸ ಅಳಿಯನ ಹೆಸರಿನಿಂದ ಯಾವ ಕೆಲಸವನ್ನಾದ್ರೂ ಸಾಧಿಸಿಕೊಳ್ಳಬಹುದು ಅನ್ನೋದು ಪ್ಲಸ್ ಪಾಯಿಂಟ್ ಬೇರೆ ಆಗಿತ್ತು. ಆದರೂ ಅಲ್ಲಿ ಹೋದಾಗೆಲ್ಲ ಕುಂತರೂ, ನಿಂತರೂ ತಮ್ಮ ತಂಗಿಯರಿಗೆ ಹಾಲು, ಮೊಸರು ಎಳನೀರನ್ನು ಕುಡಿಸಿ, ಪ್ರೀತಿಯಿಂದ ಸಲಹುವ ಅವರು, ಈ ಬೇಡಿಕೆಗೆ ಒಪ್ಪೋದು ಮಾತ್ರ ಶೇಕಡಾ 50 ರಷ್ಟು ಮಾತ್ರವೇ ಇತ್ತು. ಆದ್ರೂ ಸಿಕ್ಕ ಅವಕಾಶವನ್ನು ಬಿಡುವವರುಂಟೇ. ಹಾಗಾಗಿ ಅಣ್ಣನ ಕರೆಗೆ ನಾವು ಕಾಯುತ್ತ ಕುಳಿತಿದ್ವಿ.

ಹಾಗಂದುಕೊಂಡ ಸಂಜೆಯೇ ಅಣ್ಣನಿಂದ ಫೋನು ಬಂದಿತ್ತು. ಹಿಂದೆಯೇ ಹೇಳಿದ್ದೆನಲ್ಲ ಅಕ್ಕ ಗಟ್ಟಿಗಿತ್ತಿ. ಬೇಕಂತಲೇ ಅಮ್ಮನಿಗೆ ಬಂದ ಕರೆಯನ್ನು ಅವಳೇ ರಿಸೀವ್ ಮಾಡಿ ಹಿರಿಯಣ್ಣನೊಟ್ಟಿಗೆ ಮಾತನಾಡಿದ್ದಳು. ಅತ್ತಕಡೆಯಿಂದ ಅಣ್ಣ “ತಂಗೀ ಮದುವೀಗೆ ತಪ್ಪಸ್ಬ್ಯಾಡ್ರೀ, ನಿಮ್ ಕೆಲಸಕ್ಕೆಲ್ಲಾ ಈಗ ರಜಾ ಹಾಕ್ಕೋರಿ. ಇಲ್ಲಾಂದ್ರ ಮದುವಿ ಟಾಯಮ್ಮಿಗೆ ನಿಮಗ ಕಷ್ಟ ಅಕ್ಕೇತಿ” ಅಂದಿದ್ದ. ಅದಕ್ಕವಳು “ನೀ ರಜಾದ್ದೆಲ್ಲಾ ಚಿಂತಿ ಮಾಡಬ್ಯಾಡ, ಆದ್ರ ಈ ಸಲಾ ನೀ ಟಾಯ್ಲೆಟ್ ಕಟ್ಟಸ್ದಿದ್ರ ನೋಡ್ ಮತ್ತ, ಮದುವೀಗೆ ಬರಂಗಿಲ್ಲ” ಅಂತ ಖಡಕ್ ಆಗಿಯೇ ಅಂದುಬಿಟ್ಟಳು. ಅದಾದಮೇಲೆ ಅವನು ನನ್ನ ಜೊತೆ ಮಾತನಾಡುವಾಗಲಂತೂ ತಮ್ಮ ಹೊಸ ಭಾವನನ್ನು ವಿಶೇಷವಾಗೇ ಕರೆದನು. ನಾನೂ ವಿಷಯವನ್ನು ಆಚೀಚೆ ಬಿಡಲಿಲ್ಲ, ಸಮಯದ ಲಾಭ ಪಡೆದು “ಅವರಿಗೆ ಬಯಲಾಗ ಹೋಗಾಕೆಲ್ಲ ಗೊತ್ತಿಲ್ಲ ಅಣ್ಣ (ಕಾಡಿನಲ್ಲಿ ಓಡಾಟದ ಅನುಭವವಿರೋ ವಿಪಿನ್ ಗಿದು ಹೊಸ ವಿಷಯವಲ್ಲ. ಆದ್ರೆ ಊರ ಕಡೆ ಇಂಥ ಪದ್ಧತಿ ಈಗಲೂ ಇದೆ ಅನ್ನೋದು ಸೋಜಿಗದ ವಿಷಯವಾಗಿತ್ತು ಜೊತೆಗೆ ಅಲ್ಲಿನ ಹೆಣ್ಣುಮಕ್ಕಳ ಪರಿಸ್ಥಿತಿಯ ಬಗ್ಗೆ ಕಳಕಳಿಯಿತ್ತು). ನೋಡು ಏನ್ ಮಾಡ್ತೀ ಅಂತ. ಇದ ಮೊದಲಸಲಾ ನಮ್ಮೂರ್ ಕಡೆ ಬರಾಕತ್ತಾರ ಅವರು” ಅಂತ ಅಂತಂದು ಫೋನ್ ಇಟ್ಟಿದ್ದೆ… ಅವನೀಗೆ ಪೀಕಲಾಟಕ್ಕೆ ಸಿಲುಕಿದ್ದ.

ಒಂದುಗುಂಜಿ ಬಂಗಾರ ಕೇಳಿದ್ದರೆ ಸುಲಭವಾಗಿ ಕೊಡಿಸುತ್ತಿದ್ದನೇನೋ ನಮ್ಮಣ್ಣ. ಆದರೆ ಅಕ್ಕ ಕೇಳಿದ ಮಾತಿಗೆ ಮಾತ್ರ ಪ್ರತಿಕ್ರಿಯಿಸಲು ಒದ್ದಾಡಿಹೋದ. ಅವರು ಊರಿನಲ್ಲಿ ಮನೆಕಟ್ಟಿಸುವಾಗಲೂ ಇದನ್ನೇ ಹೇಳಿದ್ದೆವು. ಆಗಿನ್ನೂ ಅವರ್ಯಾರಿಗೂ ಮದುವೆಯಾಗಿರಲಿಲ್ಲ. ಹಾಗಾಗಿ ಎಲ್ಲರಿಗೂ ಮದುವೆಯಾದಮೇಲೆ, ಮನೆಯ ಸೊಸೆಯಂದಿರಿಗೆ ತೊಂದ್ರೆ ಆಗುತ್ತದಲ್ವ? ಅಂತ ಎಷ್ಟೆಲ್ಲ ಹೇಳಿದ್ದೆವು. ಆದರೂ ಹೊಸ ಮನೆ ಸಿದ್ಧವಾಗಿ ನಿಂತು, ಒಟ್ಟೊಟ್ಟಿಗೇ ಇಬ್ಬರು ಸೊಸೆಯರು ಮನೆ ಸೇರಿದರೂ, ಆ ಮನೆಗೆ “ಪಾಯಖಾನೆ” ಬರಲಿಲ್ಲ. ಯಾಕಂದ್ರೆ ಎಲ್ಲರಿಗಿಂತ ದೊಡ್ಡದನಿಯಲ್ಲಿ ವಿರೋಧ ಮಾಡಿದ್ದೇ ದೊಡ್ಡಮ್ಮನಾಗಿದ್ದರಿಂದ ಫೈಲ್ ಮೂವ್ ಆಗೋದು ಬಹಳ ಕಷ್ಟದ ವಿಚಾರವಾಗಿತ್ತು. ಚಿಕ್ಕಂದಿನಿಂದ ನಮ್ಮನ್ನೆಲ್ಲ ತನ್ನ ಮಕ್ಕಳಂತೆಯೇ ನೋಡುವ ಅವಳಿಗೆ ನಾವಿಬ್ಬರೂ ಬಹಳ ಕಾಳಜಿಯಿಂದ ಶೌಚಾಲಯದ ಬಗ್ಗೆ ಹೇಳಿದ್ದೆವು. ಆಗವಳು “ಅಯ್ಯೋ ಬ್ಯಾಡ ತಂಗೀ, ಮನೀತುಂಬ ವಾಸನೀ ಬರ್ತೇತಿ, ಸಿಟಿ ಮನೀಹಂಗ ಅಲ್ಲಾ, ಹಳ್ಯಾಗಿನ ಮನಿಗೋಳು, ಮನ್ಯಾಗ ಕಟ್ಸೂದು ಬ್ಯಾಡ” ಅಂತ ಅಂದುಬಿಟ್ಟಿದ್ದಳು. ಮನೆಯೊಳಗೆ ಹೋಗ್ಲಿ ಮನೆಯ ಹಿಂದಾದ್ರೂ ಒಂದು ಕಟ್ಸಿದ್ರೆ ಆಗುತ್ತಲ್ವಾ ಅನ್ನೋದು ನಮ್ಮ ಪ್ರಶ್ನೆಯಾಗಿತ್ತಾದರೂ, ಅದಕ್ಕೆ ಸಂಬಂಧಪಟ್ಟ ಯಾವ ಪ್ರಶ್ನೆಗಳೂ ದೊಡ್ಡಮ್ಮಳ ಮನಸ್ಸನ್ನ ಮುಟ್ಟುತ್ತಲೇ ಇರಲಿಲ್ಲ. ಕೊನೆಗವಳು ಇದರ ಬಗ್ಗೆ ನಿರ್ಲಿಪ್ತಳಾಗಿ ಉಳಿದುಬಿಟ್ಟಿದ್ದಳು.

ಹೀಗೆ ನಾವು “ಶೌಚಾಲಯ”ಕ್ಕೆ ಬೇಡಿಕೆಯಿತ್ತ ದೊಡ್ಡಮ್ಮನ ಮನೆಯವರೇನೂ ಬಡವರಲ್ಲ. ಸುಮಾರು 23-26 ಎಕರೆ ಜಾಗದ ಒಡೆಯರು. ಅವರು ಮನಸ್ಸು ಮಾಡಿದ್ರೆ, ಪಟ್ ಅಂತ ಆಗಿಬಿಡೋ ಕೆಲಸವದು. ಹಾಗಾಗಿಯೇ ಅಣ್ಣ ಮದುವೆಗೆ ಕರೆದಾಗ ಈ ಅಸ್ತ್ರವನ್ನು ನಾವು ಉಪಯೋಗಿಸಿದ್ದೆವು. ಆಗವನು “ಅವ್ವಾನ ಬಗ್ಗೆ ಗೊತ್ತಲ್ಲ ನಿಮಗ. ಅಕೀದ ಅಡ್ಡಗಾಲು ಇದಕ್ಕ. ನೋಡೂಣ ಬಿಡು ತಂಗಿ. ನಾ ಏನರ ವ್ಯವಸ್ಥೆ ಮಾಡಸ್ತೀನಿ. ನೀವ್ ಮದುವಿ ತಪ್ಪಿಸಬ್ಯಾಡ್ರೀ ಮತ್ತ” ಅಂದು ಫೋನ್ ಇಟ್ಟಿದ್ದ.

ಒಂದುಗುಂಜಿ ಬಂಗಾರ ಕೇಳಿದ್ದರೆ ಸುಲಭವಾಗಿ ಕೊಡಿಸುತ್ತಿದ್ದನೇನೋ ನಮ್ಮಣ್ಣ. ಆದರೆ ಅಕ್ಕ ಕೇಳಿದ ಮಾತಿಗೆ ಮಾತ್ರ ಪ್ರತಿಕ್ರಿಯಿಸಲು ಒದ್ದಾಡಿಹೋದ. ಅವರು ಊರಿನಲ್ಲಿ ಮನೆಕಟ್ಟಿಸುವಾಗಲೂ ಇದನ್ನೇ ಹೇಳಿದ್ದೆವು. ಆಗಿನ್ನೂ ಅವರ್ಯಾರಿಗೂ ಮದುವೆಯಾಗಿರಲಿಲ್ಲ. ಹಾಗಾಗಿ ಎಲ್ಲರಿಗೂ ಮದುವೆಯಾದಮೇಲೆ, ಮನೆಯ ಸೊಸೆಯಂದಿರಿಗೆ ತೊಂದ್ರೆ ಆಗುತ್ತದಲ್ವ? ಅಂತ ಎಷ್ಟೆಲ್ಲ ಹೇಳಿದ್ದೆವು. ಆದರೂ ಹೊಸ ಮನೆ ಸಿದ್ಧವಾಗಿ ನಿಂತು, ಒಟ್ಟೊಟ್ಟಿಗೇ ಇಬ್ಬರು ಸೊಸೆಯರು ಮನೆ ಸೇರಿದರೂ, ಆ ಮನೆಗೆ “ಪಾಯಖಾನೆ” ಬರಲಿಲ್ಲ.

ನಾವು ಹೇಳುವುದನ್ನ ಹೇಳಿ ಮದುವೆಗೆ ತಯ್ಯಾರಾಗಿ, ಊರಿನ ಕಡೆ ಬಸ್ಸು ಹತ್ತಿದ್ವಿ. ಊರಲ್ಲಿ ಬಸ್ಸು ಇಳಿದದ್ದೇ, ಬಸ್ಟ್ಯಾಂಡಿನ ಗೋಡೆಗಳ ಮೇಲೆಲ್ಲಾ “ಪಿಚಕಾಚಾರ”ದ ವೈವಿಧ್ಯಮಯ ಚಿತ್ರಗಳು ಕಣ್ಣಿಗೆ ಬಿದ್ದಿದ್ದವು. ಉತ್ತರಕರ್ನಾಟಕದ ಹಳ್ಳಿಗಳ ಕಡೆ ಎರಡು ವಿಷಯ ವಿರಳ ಅನ್ನಬಹುದು. ಒಂದು: ಎಲೆಯಡಿಕೆ ತಿನ್ನದವರು. ಎರಡು: ಎಲೆಯಡಿಕೆ ತಿಂದು ಉಗುಳಿದ ಗುರುತಿಲ್ಲದ ಗೋಡೆಗಳು. ವಿರಾಜಪೇಟೆಯಂಥ ಸುಂದರ ಊರಿನ ವಿಪಿನ್ ಗೆ ಸದಾ ಧೂಳಿನಭಿಷೇಕದಲ್ಲಿ ನಿರತಾಗಿರುವ ನಮ್ ರಾಮದುರ್ಗದ ಸೊಗಡಿನ ಬಗ್ಗೆ ಏನನ್ನಿಸಿರಬಹುದು? ಅದರ ಬಗ್ಗೆ ನಾ ಕೇಳಲೇಇಲ್ಲ. ಎಲ್ಲವನ್ನೂ ಸೂಕ್ಷ್ಮ ದೃಷ್ಟಿಕೋನದಿಂದ ನೋಡುವ ಅವರಿಗೆ, ಅಲ್ಲಿನ ಅವ್ಯವಸ್ಥೆಗಳಿಗೆ ಕಾರಣವೇನೆಂದು ನಾನು ಹೇಳಬೇಕಿರಲಿಲ್ಲ.

ಹಾಗೆ ದೊಡ್ಡಮ್ಮನ ಮನೆ ತಲುಪಿದ ನಮಗೆ ಮಹಾದಾಶ್ಚರ್ಯ. ಅಂತೂಇಂತೂ “ಶೌಚಾಲಯ” ನಮಗಾಗಿ ಪ್ರತಿಷ್ಠಾಪನೆಯಾಗಿತ್ತು. ಅಂದ್ರೆ ಅದೇನೂ ಅವರು ಕಟ್ಟಿಸಿದ್ದಲ್ಲ. ಸರ್ಕಾರದಿಂದ ಹಳ್ಳಿಗಳಲ್ಲಿ ಕೊಡಲಾಗುವ ರೆಡಿಮೇಡ್ ಶೌಚಾಲಯಕ್ಕೆ ಅರ್ಜಿಹಾಕಿ, ಮನೆಯಿಂದ ಸ್ವಲ್ಪ ದೂರದಲ್ಲಿ, ಅದನ್ನು ಸೆಟ್ ಮಾಡಿದ್ದರು. “ಅಬ್ಬಾ ಪುಣ್ಯದ ಕೆಲಸಾ ಮಾಡಿದ್ರಪ್ಪಾ. ಇನ್ನು ಹೊಸಾ ಸೊಸೆಗೆ ಕಷ್ಟ ಇಲ್ಲಾ ಬಿಡು” ಅಂತ ನಾವೆಲ್ಲ ಸಮಾಧಾನಪಟ್ಟುಕೊಂಡ್ವಿ. ಆಮೇಲೆ ನಾಲ್ಕು ದಿನ ಅಲ್ಲಿದ್ದು, ಮದುವೆಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ಸಾಗಿದ್ವಿ. ಆಮೇಲೆ ಇತ್ತೀಚೆಗಷ್ಟೇ, ಅಂದ್ರೆ ಎರಡು ವರ್ಷದ ನಂತರ ಮತ್ತೆ ಅಲ್ಲಿಗೆ ಹೋಗುವ ಪ್ರಮೇಯ ಬಂತು. ಆಗಲೇ ನಮಗೆ “ಪಾಯಖಾನೆ”ಯ ಅಸಲಿಯತ್ತು ತಿಳಿದದ್ದು!

ಆವತ್ತು ನಾನು ಮತ್ತೆ ಅಕ್ಕಾ ಒತ್ತಾಯಿಸಿದ್ದೆವು ಅಂತ ಅಣ್ಣ ಪಾಯಿಖಾನೆ ಹಾಕಿಸಿದ್ದ. ಆದರೆ ಹೀಗೆ ನಾವು ಬೆಂಗಳೂರಿನ ಕಡೆ ಮುಖಮಾಡಿದ್ದೇ ಅದಕ್ಕೆ ಬೀಗ ಬಿದ್ದಿತ್ತು! ನಾವೀಗ ಮತ್ತೆ ಅಲ್ಲಿಗೆ ಬರೋ ಸುದ್ದಿ ಕೇಳಿದ ಮೇಲೆ, ಅದರ ಬೀಗವನ್ನು ತೆರೆಯಲಾಗಿತ್ತು. ಮನೆಯ ಗಂಡಸರಿರಲೀ, ಅಥವಾ ದೊಡ್ಡಮ್ಮ ಅದನ್ನು ಬಳಸುವ ಮಾತು ಹಾಗಿರಲಿ, ಮನೆಯ ಯಾವ ಹೆಣ್ಮಕ್ಕಳಿಗೂ ಆ “ಪಾಯಖಾನೆ”ಯ ಸುದ್ದಿಯೇ ಬೇಡ. ಮನೆಯ ಮೂರೂ ಸೊಸೆಯಂದಿರು ತೀರಾ ಅನಕ್ಷರಸ್ತರೇನಲ್ಲ. ಆದರೂ ಅವರಿಗೆ “ಪಾಯಖಾನೆ” ಬಳಸುವ ಬಗ್ಗೆ ಏನೋ ಸಂಕೋಚ. ನಾವು ಅದೇನೇ ಹೇಳಿದರೂ ಅಷ್ಟೇ ಕೊನೆಗೆ “ನಮಗ್ ಇವೆಲ್ಲಾ ಸಜ್ ಆಗೂದಿಲ್ಲ ಬಿಡ್ರಿ ಚಿಕ್ಕಮ್ಮ” ಅಂದು ಕಂಡ ಕೆಲಸಕ್ಕೆ ಹೊರಟುಬಿಡುತ್ತಾರೆ. ಅವರನ್ನು ಹಿಡಿದು ನಿಲ್ಲಿಸಿ ತಿಳುವಳಿಕೆ ಕೊಡುವುದೇ ಮಹಾ ಪ್ರಯಾಸದ ಸಂಗತಿ.

ಮೊನ್ನೆ ಊರಿಗೆ ಹೋದಾಗ ಇದರ ಬಗ್ಗೆಯೇ ಯೋಚಿಸುತ್ತಿದ್ದೆ. ಅಲ್ಲಿಯವರದ್ದು ಬಹಳ ಶ್ರಮದ ಬದುಕು. ಸದಾ ಉರಿಬಿಸಿಲು ಕಾರೋ ಒಣ ಒಣ ನಾಡದು. ಮರಗಳೆಂದರೆ ಮಾವು, ಬೇವು, ಜಾಲಿ, ಹುಣಸೆಯಂಥವುಗಳೇ ಸಾಮಾನ್ಯವಾಗಿ ಕಣ್ಣಿಗೆ ಬೀಳೋದು. ಇವುಗಳನ್ನು ಬಿಟ್ಟು ಬೇರೆ ಮರಗಳನ್ನು ನಾನು ನಿಜಕ್ಕೂ ಕಂಡಿಲ್ಲ. ಬಹುತೇಕ ಕಡಿಮೆ ಮರಗಳ ಸಪಾಟು ನೆಲ ಬಿಟ್ಟರೆ ಗುಡ್ಡಗಾಡು ಪ್ರದೇಶದ ಊರುಗಳವು. ಎಕರೆಗಟ್ಟಲೇ ಜಮೀನಿದ್ದ ಮಾತ್ರಕ್ಕೆ ಆಳುಗಳನ್ನು ತಂದು ಕೂತು ಉಣ್ಣುವ ಜನ ಬಹಳ ವಿರಳ. ಇದ್ದಷ್ಟು ಮಂದಿ ಹೊಲಕ್ಕೆ ಹೋಗಿ ದುಡಿದು ಬರುತ್ತಾರೆ. ಕೆಲಸದ ವಿಷಯದಲ್ಲಿ ಹೆಣ್ಣು-ಗಂಡಿನ ನಡುವೆ ಹೆಚ್ಚು ವ್ಯತ್ಯಾಸವಿಲ್ಲ. ಬೆಳಗ್ಗೆ ಬೇಗನೇ ರೊಟ್ಟಿ ಬಡಿದು, ಎರಡೆರಡು ರೊಟ್ಟಿಯುಂಡು, ಗಂಡಂದಿರಿದ್ದ ಹೊಲಕ್ಕೆ ಹೆಂಗಸರೂ ಹೊಲಕ್ಕೆ ಹೊರಟು ನಿಲ್ಲುತ್ತಾರೆ. ತಲೆಯ ಮೇಲೆ ಹೊರುವ ಬಿಳಿಗಂಟಿನಲ್ಲಿ ರೊಟ್ಟಿ, ಖಾರ ಹಿಂಡಿಯಿರುತ್ತದೆ.

ಹೀಗೆ ಗಂಡಸರೊಟ್ಟಿಗೆ ಎಲ್ಲಕೆಲಸದಲ್ಲೂ ಹೆಗಲುಕೊಟ್ಟು ನಿಲ್ಲುವ ಹೆಣ್ಣುಮಕ್ಕಳಿಗೆ, ಬಿಡುವು ಸಿಗುವುದೇ ಅತಿದೊಡ್ಡ ವಿಷಯವಲ್ಲಿ. ಮೊದಲು ಗಂಡುಮಕ್ಕಳಿಗೇ ಆದ್ಯತೆ. ಮನೆಯ ಗಂಡಸರ ಊಟವಾಗಿ, ಉಳಿದಮೇಲೆಯೇ ಹೆಣ್ಮಕ್ಕಳ ಊಟ. ಇದು ಯಾವತ್ತೂ ತಪ್ಪದ ದಿನಚರಿಯ ಭಾಗ ಅವರದ್ದು. ಅವರನ್ನು ಕೇಳಿ ಏನೊಂದೂ ನಡೆಯುವ ಮಾತಿಲ್ಲ ಅಲ್ಲಿ. ಅದು ಅವರ ಮದುವೆ ವಿಷಯಕ್ಕೂ ಅನ್ವಯಿಸುತ್ತೆ.

ಬಾಲ್ಯವಿವಾಹ ಪದ್ಧತಿ ಉತ್ತರಕರ್ನಾಟಕದ ಭಾಗದಲ್ಲಿ ಇಂದಿಗೂ ಜಾರಿಯಲ್ಲಿದೆ. ಅದು ತೀರಾ ಸಾಮಾನ್ಯವಾದ ವಿಷಯವಲ್ಲಿ. ಹಾಗಾಗಿ ಯಾರೂ ಅದರಬಗ್ಗೆ ಸೊಲ್ಲೆತ್ತರಾರರು. ನನ್ನಣ್ಣನ ಮಗಳು, ಈಗ 19ರ ಪ್ರಾಯದ ಹುಡುಗಿ, ಮೂರುಮಕ್ಕಳ ತಾಯಿ. ಅವಳ ಮದುವೆ ನಿಲ್ಲಿಸಲು ನಾಪಟ್ಟ ಪ್ರಯತ್ನ ಸೋತುಹೋಗಿದ್ದನ್ನ, ನಾನು ಮರೆಯುವುದಾದರೂ ಹೇಗೆ. ಅಲ್ಲಿನ ಹೆಣ್ಮಕ್ಕಳ ಶಿಕ್ಷಣ, ಆರೋಗ್ಯ, ಚಂದದ ಬದುಕು ಕಟ್ಟಿಕೊಡೋ ಬಗ್ಗೆ ಯಾರಿಗೂ ಅಷ್ಟು ಆಸಕ್ತಿ ಇರೋಲ್ಲ. ಅಂತಸ್ತಿಗೆ ಹೊಂದುವಂಥ, ಇಲ್ಲವಾದ್ರೆ ಇರೋ ಮನೆಯನ್ನೇ ಮಾರಿ, ಮಗಳನ್ನು ಮದುವೆಮಾಡಿಕೊಡುವುದೊಂದೇ ಬದುಕಿನ ಧ್ಯೇಯವಾಗಿಸಿಕೊಂಡಿದ್ದಾರೆ. ಇಂಥ ಮನಸ್ಥಿತಿಗಳನ್ನ ತಿದ್ದುವುದಾದರೂ ಹೇಗೆ. ಸುಲಭದ ಮಾತಲ್ಲ ಅದು. ವಿರಾಜಪೇಟೆಯ ಒಳಗಿನ ಸಣ್ಣಸಣ್ಣ ರಸ್ತೆಗಳೂ, ಟಾರುಹೊದ್ದು ಕರ್ರಗೆ ಹೊಳೆಯುವಾಗ, ನನಗೆ ತೆಗ್ಗುದಿಣ್ಣೆಗಳನ್ನೇ ಹಾಸಿ ಹೊದ್ದಿರುವ ನನ್ನೂರ ರಸ್ತೆಗಳೇ ನೆನಪಿಗೆ ಬರುತ್ತದೆ. ಮತ್ತೆ ಅಲ್ಲಿನ ಧೂಳೂ ಕಣ್ಣಿಗೆ ಹೊಕ್ಕಂತಾಗಿ, ಕಣ್ಣುಗಳೆರಡೂ ಕೆಂಪಾಗುತ್ತವೆ.