”ಎಡಿಟ್ ಮತ್ತು ಕಟ್ ಇಲ್ಲದ ಈ ಚಿತ್ರವನ್ನು ನೋಡುವುದೆಂದರೆ ಪಂಕ್ಚುಯೇಷನ್ ಇಲ್ಲದ ಒಂದು ಪುಸ್ತಕವನ್ನು ಓದಿದಂತಹ ಸವಾಲು ಎಂದು ಒಬ್ಬ ವಿಮರ್ಶಕರು ಹೇಳುತ್ತಾರೆ.ಬಹುಶಃ ಅದು ನಿಜವೂ ಹೌದು.ಇದನ್ನು ಮಾಮೂಲಿ ಚಿತ್ರದಂತೆ ನೋಡಲು ಸಾಧ್ಯವಿಲ್ಲ,ಅದಕ್ಕೂ ಪ್ರೇಕ್ಷಕನಲ್ಲಿ ಒಂದು ಸಿದ್ಧತೆ ಬೇಕಾಗುತ್ತದೆ.ಬಹುಶಃ ಅವರಿಗೆ ಈ ಚಿತ್ರದ ವೈಶಿಷ್ಟ್ಯ ಅರ್ಥವಾಗುತ್ತದೆ.ಹೀಗೆ ತಾಂತ್ರಿಕತೆಯ ದೃಷ್ಟಿಯಿಂದ,ಸ್ಕ್ರೀನ್ ಪ್ಲೇ ದೃಷ್ಟಿಯಿಂದ,ನಿರ್ದೇಶನದ ದೃಷ್ಟಿಯಿಂದ,ಅಭಿನಯದ ದೃಷ್ಟಿಯಿಂದ ನೋಡಲೇಬೇಕಾದ ಚಿತ್ರ ವಿಕ್ಟೋರಿಯಾ”
ಲೇಖಕಿ ಸಂಧ್ಯಾರಾಣಿ ಬರೆಯುವ ಲೋಕ ಸಿನೆಮಾ ಟಾಕೀಸಿನಲ್ಲಿ ಜರ್ಮನ್ ಚಿತ್ರ ‘ವಿಕ್ಟೋರಿಯಾ’.

 

‘ಜಿಸೆ ಭಿ ದೇಖಿಯೆ, ವೋ ಅಪ್ನೆ ಆಪ್ ಮೆ ಗುಮ್ ಹೈ
ಜುಬಾನ್ ಮಿಲಿ ಹೈ ಮಗರ್ ಹಮ್ ಜುಬಾನ್ ನಹಿ ಮಿಲ್ತಾ’

-ಯಾರನ್ನೇ ನೋಡಿದರೂ, ಅವರು ಅವರದೇ ಲೋಕದಲ್ಲಿ ಮುಳುಗಿದ್ದಾರೆ,
ಇಲ್ಲಿ ಮಾತು ಸಿಗುತ್ತದೆ, ಆದರೆ ನಮ್ಮ ಭಾಷೆಯನ್ನು ಮಾತನಾಡುವರು ಸಿಗುವುದಿಲ್ಲ.

ಒಂಟಿತನ ಎಲ್ಲಿದ್ದರೂ ಕಷ್ಟ, ಆದರೆ ಮಹಾನಗರಗಳ ವಿಸ್ತಾರ ಆ ಒಂಟಿತನವನ್ನು ಮತ್ತಷ್ಟು ಗಾಢವಾಗಿಸುತ್ತದೆ. ಯಾರೂ ಪ್ರಶ್ನಿಸುವುದಿಲ್ಲ ಎನ್ನುವ ಖುಷಿ ಒಮ್ಮೊಮ್ಮೆ ಯಾರೂ ನಮ್ಮ ಹಾಲ್ ಚಾಲ್ ಕೇಳುತ್ತಿಲ್ಲ ಎನ್ನುವ ಹತಾಶೆಯನ್ನು ಹುಟ್ಟಿಸುತ್ತದೆ. ಆ ಹತಾಶೆ ಸಿಕ್ಕ ಯಾವುದೋ ಸ್ನೇಹವನ್ನು ಆಸರೆ ಎಂದು ಆತುಗೊಳ್ಳುವಂತೆ ಮಾಡುತ್ತದೆ. ನಂತರ ಅದನ್ನು ಕಳೆದುಕೊಳ್ಳುವ ಹೆದರಿಕೆ, ನಮ್ಮಿಂದ ಏನೇನೆಲ್ಲವನ್ನೂ ಮಾಡಿಸುತ್ತಾ ಹೋಗುತ್ತದೆ. ‘ಅವಳು ಅದು ಹೇಗೆ ಒಪ್ಪಿಕೊಂಡಳು?’, Victoria ಎನ್ನುವ ಆ ಜರ್ಮನ್ ಚಿತ್ರ ನೋಡುವಾಗ ಈ ಪ್ರಶ್ನೆ ಸುಮಾರು ಸಲ ಕಾಡಿತ್ತು. ಆಗಲೇ ಅನ್ನಿಸಿದ್ದು, ‘ಕಿತನೇ ದಿನೋಂಕೆ ಪ್ಯಾಸೆ ಹೋಗೆ ಯಾರೋ ಸೋಚೋ ತೊ, ಶಬ್ನಂ ಕ ಕತರಾ ಭೀ ದಿಲ್ ಕೊ ದರಿಯಾ ಲಗತೆ ಹೈ…’ – ಎಷ್ಟು ದಿನಗಳ ಬಾಯಾರಿಕೆ ಇರಬಹುದು ಯೋಚಿಸಿ, ಇಬ್ಬನಿಯ ಹನಿ ಸಹ ಹೃದಯಕ್ಕೆ ನದಿ ಎಂದು ತೋರುತ್ತದೆ….

Sebastian Schipper ನಿರ್ದೇಶನದ, 2015 ರ ಚಿತ್ರ ವಿಕ್ಟೋರಿಯಾ (Victoria)ಗೆ ಒಂದು ವಿಶೇಷಣ ಇತ್ತು, ಇಡೀ ಚಿತ್ರ ಒಂದೇ ಕ್ಯಾಮೆರಾದಲ್ಲಿ, ಸಿಂಗಲ್ ಶಾಟ್ ನಲ್ಲಿ ತೆಗೆದ ಚಿತ್ರ. ಅಂದರೆ ಇಲ್ಲಿ ಎಡಿಟಿಂಗ್ ಇರುವುದಿಲ್ಲ. ಕ್ಯಾಮೆರಾ ಆ್ಯಂಗಲ್ ಗಳು ಬದಲಾಗುವುದಿಲ್ಲ. ಕ್ಯಾಮೆರಾಕ್ಕೆ ಸ್ಟ್ಯಾಂಡ್ ಹಾಕಿ ನಿಲ್ಲಿಸಿ ತೆಗೆದಾಗ ಬರುವ ಸ್ಥಿರತೆ ಬರುವುದಿಲ್ಲ. ಸಾಧಾರಣವಾಗಿ ಚಿತ್ರಕ್ಕೆ ಇಂತಹ ಯಾವುದಾದರೂ ವಿಶೇಷಣ ಇದ್ದಾಗ ಅದೇ ಪ್ರಧಾನವಾಗಿ, ಮಿಕ್ಕ ಅಂಶಗಳು ಗೌಣವಾಗಿ ಬಿಡುತ್ತವೆ. ಚಿತ್ರದ ಮಿಕ್ಕೆಲ್ಲಾ ಅಂಶಗಳೂ ಆ ವಿಶೇಷಣವನ್ನು ಪೋಷಿಸಲೆಂದೇ ಸೃಷ್ಟಿಯಾಗಿರುತ್ತವೆ ಅಥವಾ ಬಳಕೆಯಾಗಿರುತ್ತದೆ. ಆದರೆ ಇಲ್ಲಿ ಆ ವಿಷಯ ಚಿತ್ರಕ್ಕೆ ಪೂರಕವಾಗಿ ಬಂದಿದೆಯೇ ಹೊರತು, ಚಿತ್ರವನ್ನು ಮೀರಿ ನಿಲ್ಲುವುದಿಲ್ಲ ಎನ್ನುವುದರಲ್ಲಿ ಚಿತ್ರದ ಸಿನೆಮಾಟೋಗ್ರಾಫರ್ ಮತ್ತು ನಿರ್ದೇಶಕ ಇಬ್ಬರ ಗೆಲುವೂ ಇದೆ. ಜೊತೆಗೆ ಈ ವಿಶೇಷಣ ಇಲ್ಲದಿದ್ದರೂ ಚಿತ್ರ ಇಷ್ಟೇ ಬಿಗಿಯಾದ ಥ್ರಿಲ್ಲರ್ ಆಗಿರುತ್ತಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಕೈಯಲ್ಲಿ ಹಿಡಿದ ಕ್ಯಾಮೆರಾದ ಅಸ್ಥಿರ ಚಲನೆ ನಮ್ಮನ್ನು ನೇರ ಆ ದೃಶ್ಯದೊಳಕ್ಕೇ ಕರೆದುಕೊಂಡು ಹೋಗಿಬಿಡುತ್ತದೆ. ನಮ್ಮನ್ನೂ ಅದರ ಭಾಗವನ್ನಾಗಿ ಮಾಡಿಬಿಡುತ್ತದೆ.

ಚಿತ್ರ ಪ್ರಾರಂಭವಾಗುವುದು ಬರ್ಲಿನ್ ನಗರದ ಒಂದು ನೈಟ್ ಕ್ಲಬ್ಬಿನಲ್ಲಿ. ರಾತ್ರಿ ಮುಗಿಯುತ್ತಾ ಬಂದಿದೆ. ಕ್ಲಬ್ಬಿನಲ್ಲಿ ಗುಂಪಿನ ನಡುವಿದ್ದರೂ ಯಾರಿಗೆ ಏನೂ ಅಲ್ಲದೆ ತನ್ನಪಾಡಿಗೆ ತಾನು ನರ್ತಿಸುತ್ತಿರುವ ಹೆಣ್ಣು ವಿಕ್ಟೋರಿಯ. ಅವಳು ಸ್ಪೇನ್ ನವಳು. ಹೊಸ ಊರಿನ ಒಂಟಿತನ ಮರೆಯಲು ಕ್ಲಬ್ಬಿಗೆ ಬಂದಿದ್ದಾಳೆ. ಅವಳಿಗೆ ಇಲ್ಲಿ ಯಾರೂ ಪರಿಚಿತರಿಲ್ಲ, ಜನ ಇರಲಿ, ಭಾಷೆ ಸಹ ಅಪರಿಚಿತ. ಅವಳ ಏಕಾಕಿತನದ ಅರಿವಾಗುವುದು, ಒಂದು ಪಾನೀಯ ತೆಗೆದುಕೊಳ್ಳುವ ಅವಳು, ಬಾರ್ ಅಟೆಂಡರ್ ನನ್ನು, ‘ನೀನು ಒಂದು ಡ್ರಿಂಕ್ ತೆಗೆದುಕೊಳ್ಳುವೆಯಾ?’ ಎಂದು ಕೇಳಿದಾಗ. ಕ್ಲಬ್ಬಿನಿಂದ ಹೊರಬಂದ ಅವಳಿಗೆ ನಾಲ್ಕು ಜನ ಹುಡುಗರು ಸಿಗುತ್ತಾರೆ. ಅವರಲ್ಲೊಬ್ಬ ಸೋನ್ನ, ಮತ್ತೊಬ್ಬ ಬಾಕ್ಸರ್, ಜೊತೆಗೆ ಇನ್ನಿಬ್ಬರು. ಇವಳೊಡನೆ ಮಾತಿಗೆ ನಿಲ್ಲುತ್ತಾರೆ. ಇವಳೂ ಮಾತನಾಡತೊಡಗುತ್ತಾಳೆ. ಯಾವುದೋ ಕಾರ್ ತೋರಿಸಿ ‘ನಮ್ಮ ಕಾರ್’ ಎನ್ನುತ್ತಾರೆ. ಆಮೇಲೆ ಆ ಕಾರ್ ನ ಮಾಲೀಕರು ಕೂಗು ಹಾಕಿದಾಗ ಓಡುತ್ತಾರೆ. ‘ನಿಜವಾದ ಬರ್ಲಿನ್ ಈ ಕ್ಲಬ್ಬಿನಲ್ಲಿಲ್ಲ, ಇಲ್ಲಿನ ಬೀದಿಗಳಲ್ಲಿದೆ. ಬಾ ನಮ್ಮ ಜೊತೆ, ಒಂದು ಗಂಟೆ ಓಡಾಡೋಣ’ ಎಂದು ಕರೆಯುತ್ತಾರೆ. ಈಗಾಗಲೆ ಅವಳಿಗೆ ಸೋನ್ನ ನನ್ನು ಕಂಡರೆ ಒಂದು ವಿಚಿತ್ರ ಆಕರ್ಷಣೆ ಮೂಡಿರುತ್ತದೆ. ಒಂದಿಷ್ಟು ಅಸ್ಥಿರವಾಗಿ, ಒಂದಿಷ್ಟು ಸಾಹಸಿಯಾಗಿ, ಒಂದಿಷ್ಟು ಹೆದರಿಕೊಂಡು ಹೊರಟೇ ಬಿಡುತ್ತಾಳೆ ವಿಕ್ಟೋರಿಯಾ.

ಸಾಧಾರಣವಾಗಿ ಚಿತ್ರಕ್ಕೆ ಇಂತಹ ಯಾವುದಾದರೂ ವಿಶೇಷಣ ಇದ್ದಾಗ ಅದೇ ಪ್ರಧಾನವಾಗಿ, ಮಿಕ್ಕ ಅಂಶಗಳು ಗೌಣವಾಗಿ ಬಿಡುತ್ತವೆ. ಚಿತ್ರದ ಮಿಕ್ಕೆಲ್ಲಾ ಅಂಶಗಳೂ ಆ ವಿಶೇಷಣವನ್ನು ಪೋಷಿಸಲೆಂದೇ ಸೃಷ್ಟಿಯಾಗಿರುತ್ತವೆ ಅಥವಾ ಬಳಕೆಯಾಗಿರುತ್ತದೆ. ಆದರೆ ಇಲ್ಲಿ ಆ ವಿಷಯ ಚಿತ್ರಕ್ಕೆ ಪೂರಕವಾಗಿ ಬಂದಿದೆಯೇ ಹೊರತು, ಚಿತ್ರವನ್ನು ಮೀರಿ ನಿಲ್ಲುವುದಿಲ್ಲ ಎನ್ನುವುದರಲ್ಲಿ ಚಿತ್ರದ ಸಿನೆಮಾಟೋಗ್ರಾಫರ್ ಮತ್ತು ನಿರ್ದೇಶಕ ಇಬ್ಬರ ಗೆಲುವೂ ಇದೆ.

ಈ ಪಯಣ ಪ್ರಾರಂಭಿಸುವಾಗ ಪುಕ್ಕಲಿಯಂತೆ ಕಾಣುವ ವಿಕ್ಟೋರಿಯಾ, ನಂತರ ಅವಳಿಗೇ ಅಚ್ಚರಿಯಾಗುವ ಹಾಗೆ ಅವಳ ವ್ಯಕ್ತಿತ್ವದ ಹಲವಾರು ಮುಖಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಸೋನ್ನ ಅವಳನ್ನು ಒಂದು ಅಂಗಡಿಗೆ ಕರೆದುಕೊಂಡು ಹೋಗುತ್ತಾನೆ, ಅಂಗಡಿಯಾತ ಮಲಗಿರುತ್ತಾನೆ, ಸೋನ್ನ ಅಲ್ಲಿ ಬಿಯರ್ ಬಾಟಲಿಗಳನ್ನೆತ್ತಿಕೊಳ್ಳುತ್ತಾನೆ. ‘ಕದಿಯುತ್ತಿರುವೆಯಾ’ ಎಂದು ಅವಳು ಕೇಳಿದಾಗ, ‘ಇಲ್ಲಪ್ಪ ಇದು ನನ್ನ ಗೆಳೆಯನ ಅಂಗಡಿ, ಪಾಪ ಅವನನ್ನು ಯಾಕೆ ಎಬ್ಬಿಸುವುದು’ ಎನ್ನುತ್ತಾನೆ. ಅವನು ಸುಳ್ಳು ಹೇಳುತ್ತಿದ್ದಾನೆ ಎಂದು ಅವಳಿಗೆ ಗೊತ್ತಾಗುತ್ತಿರುತ್ತದೆ, ಅವಳು ಅವನು ಸುಳ್ಳು ಹೇಳಲು ಬಿಡುತ್ತಾಳೆ, ಅಷ್ಟೇ ಅಲ್ಲ, ಹೊರಗೆ ಬರುವಾಗ ತಾನೂ ಒಂದು ತಿಂಡಿಯ ಪ್ಯಾಕೆಟ್ ಎಳೆದುಕೊಳ್ಳುತ್ತಾಳೆ. ಅಲ್ಲಿಂದ ಶುರುವಾಗುತ್ತದೆ ಆ ರಾತ್ರಿಯಲ್ಲಿ ಅವಳ ಕತ್ತಲ ಲೋಕದ ಪಯಣ.

ಅವರು ಅವಳನ್ನು ಒಂದು ಕಟ್ಟಡದ ಮಾಳಿಗೆಯ ಮೇಲೆ ಕರೆದುಕೊಂಡು ಹೋಗುತ್ತಾರೆ. ಆರಾಮಾಗಿ ಹೋಗುತ್ತಾಳೆ. ಬಾಕ್ಸರ್ ತಾನು ಸ್ವಲ್ಪ ಕಾಲ ಜೈಲಿನಲ್ಲಿದ್ದೆ ಎಂದು ಹೇಳುತ್ತಾನೆ. ಅದೂ ಸಹ ಅವಳನ್ನು ಹೆದರಿಸುವುದಿಲ್ಲ. ಅವಳಲ್ಲಿ ಹುಚ್ಚುತನದ ಒಂದು ಎಳೆ ಇದ್ದೇ ಇರುತ್ತದೆ. ಅಲ್ಲಿನ ಪ್ಯಾರಪೆಟ್ ಗೋಡೆಯ ಮೇಲೆ ಅವಳು ಹತ್ತಿ ನಿಲ್ಲುವ ಪರಿಗೆ ಆ ಹುಡುಗರೇ ಹೆದರಿಕೊಳ್ಳುತ್ತಾರೆ. ಚಿತ್ರ ಇಂಗ್ಲಿಷ್ ಭಾಷೆಯದ್ದು. ಆದರೆ ಆ ಹುಡುಗರು ತಮ್ಮತಮ್ಮಲ್ಲಿ ಮಾತನಾಡುವಾಗ, ಅಲ್ಲಿನ ಸ್ಥಳೀಯರು ಮಾತನಾಡುವಾಗ ಜರ್ಮನ್ ಭಾಷೆ ಬಳಸುತ್ತಾರೆ. ಭಾಷೆ ಬರದ ಹುಡುಗಿಗೆ ಅದು ಅರ್ಥವಾಗುವುದಿಲ್ಲ. ಸಬ್ ಟೈಟಲ್ ಇಲ್ಲದೆ ಅದು ನಮಗೂ ಅರ್ಥವಾಗುವುದಿಲ್ಲ. ಅಂದರೆ ಅವರು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುವ ಎಲ್ಲಾ ಸಮಯದಲ್ಲೂ ನಾವು ಥೇಟ್ ಅವಳಂತೆಯೇ ಇರುತ್ತೇವೆ. ಅದು ಕೊಡುವ ಅನುಭವವೇ ವಿಭಿನ್ನ. ಜೊತೆಗೆ ಸುಮಾರು ಸಂಭಾಷಣೆಯನ್ನು ಸಂಗೀತ ಆವರಿಸಿಕೊಳ್ಳುತ್ತದೆ. ಕಡಿಮೆ ಹೇಳುತ್ತಲೇ ಚಿತ್ರ ನಮ್ಮ ಕುತೂಹಲವನ್ನು ಕೆರಳಿಸುತ್ತಾ ಹೋಗುತ್ತದೆ.

ಮಹಡಿಯ ಮೇಲೆ ಸ್ವಲ್ಪ ಕಾಲ ಕಳೆದ ನಂತರ ಅವಳು ತಾನು ಕೆಲಸ ಮಾಡುವ ಕೆಫೆಗೆ ಹೋಗಬೇಕು, ಮನೆಗೆ ಹೋಗಿ ಬರಲು ತಡವಾಗುತ್ತದೆ, ಅಲ್ಲೇ ಸ್ವಲ್ಪ ಹೊತ್ತು ಮಲಗಿ, ಬೆಳಗಿನ ಕೆಲಸ ಶುರು ಮಾಡುತ್ತೇನೆ ಎನ್ನುತ್ತಾಳೆ. ಸೋನ್ನ ಅವಳನ್ನು ಬಿಡಲು ಹೋಗುತ್ತಾನೆ. ಅಲ್ಲಿನ ಏಕಾಂತದಲ್ಲಿ ಅವರಿಬ್ಬರ ನಡುವಿನ ಬಂಧ ಬಿಗಿಯಾಗುತ್ತಾ ಹೋಗುತ್ತದೆ. ತಾನು ಒಬ್ಬ ಪಿಯಾನೋ ವಿದ್ಯಾರ್ಥಿಯಾಗಿದ್ದದ್ದೂ, ಪ್ರತಿದಿನ ಏಳುಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದದ್ದೂ, ಅನಿವಾರ್ಯವಾಗಿ ಅದನ್ನು ಬಿಡಬೇಕಾಗಿ ಬಂದದ್ದು ಎಲ್ಲವನ್ನೂ ಅವನಿಗೆ ಹೇಳಿಕೊಳ್ಳುವ ಅವಳು ಅವನಿಗೆ ಹತ್ತಿರವಾಗುತ್ತಾಳೆ. ಪ್ರೀತಿಯಿಂದ ಕೇಳುವ ಅವನು ಅವಳ ಮನಸ್ಸಿನಲ್ಲಿ ಇಳಿಯುತ್ತಾ ಹೋಗುತ್ತಾನೆ. ಚಿತ್ರ ಮತ್ತೊಂದು ‘Before Sunrise’ ಆಗಬಹುದು ಎಂದು ನಾವು ಅಂದುಕೊಳ್ಳುವ ಹೊತ್ತಿಗೆ ಅವನು ಅವಳಿಗೆ ಕೈಬೀಸಿ ಹೊರಡುತ್ತಾನೆ.

ಹೊರಟ ಎಂದು ಅವಳು ಮ್ಲಾನವಾಗಿ ನೋಡುವಷ್ಟರಲ್ಲಿ ಅವರು ಮತ್ತೆ ಬರುತ್ತಾರೆ. ಅವರಲ್ಲಿ ಒಬ್ಬ ಹುಡುಗ ವಿಪರೀತ ಕುಡಿದು ಚಿತ್ತಾಗಿರುತ್ತಾನೆ. ಬಾಕ್ಸರ್ ಜೈಲಿನಲ್ಲಿದ್ದಾಗ ಅವನಿಗೆ ರಕ್ಷಣೆ ಕೊಟ್ಟವರೊಬ್ಬರ ಕೆಲಸವೊಂದನ್ನು ಮಾಡಿಕೊಡಬೇಕಿದೆ, ಅದಕ್ಕೆ ನಾಲ್ವರು ಬೇಕು, ಈಗ ಒಬ್ಬರು ಕಡಿಮೆ ಆಗುವುದರಿಂದ ನೀನು ಬರುವೆಯಾ ಎಂದು ಅವಳನ್ನು ಕೇಳುತ್ತಾರೆ. ನಿಜಕ್ಕಾದರೆ ಆಕೆ ಅದನ್ನು ನಿರಾಕರಿಸಬೇಕು, ಆದರೆ ಅವಳು ಹೂ ಎಂದು ಹೊರಟೇಬಿಡುತ್ತಾಳೆ. ಅವರು ಕದ್ದುತಂದ ಮತ್ಯಾವುದೋ ಕಾರನ್ನು ಅವಳೇ ಓಡಿಸಲು ಪ್ರಾರಂಭಿಸುತ್ತಾಳೆ. ಅವಳು ಕಾರು ಓಡಿಸುವಾಗ ಕ್ಯಾಮೆರಾ ಕಾರ್ ಒಳಗಿರುತ್ತದೆ, ಇಕ್ಕಟ್ಟು ಜಾಗ, ಉಸಿರಾಟದ ಆವಿಗೆ ಮಸುಕಾದ ಕಾರಿನ ಗಾಜುಗಳು ಅಸ್ಪಷ್ಟವಾಗಿರುತ್ತವೆ. ರಸ್ತೆಗಳೇ ಕಾಣದಿರುವಾಗ ಕಾರ್ ಓಡಿಸುವ ಅನುಭವ. ನಿಧಾನವಾಗಿ ದೃಶ್ಯದಲ್ಲಿ ಟೆನ್ಷನ್ ಬೆಳೆಯುತ್ತಾ ಹೋಗುತ್ತದೆ. ಕಾರ್ ಒಂದು ಬೇಸ್ ಮೆಂಟಿನ ಒಳಗೆ ಹೋಗುತ್ತದೆ. ಅವಳ point of no return ಬಹುಶಃ ಅಲ್ಲಿ ಶುರುವಾಗುತ್ತದೆ. ಕಾರ್ ಬೇಸ್ ಮೆಂಟಿನ ಆಳಕ್ಕೆ ಇಳಿಯುತ್ತಾ ಹೋಗುತ್ತದೆ. ಕಾರಿನೊಳಗೆ, ಕ್ಯಾಮೆರಾ ಜೊತೆಯಲ್ಲಿ ನಾವು.

(ನಿರ್ದೇಶಕ: Sebastian Schipper)

ಈ ಪಯಣ ಪ್ರಾರಂಭಿಸುವಾಗ ಪುಕ್ಕಲಿಯಂತೆ ಕಾಣುವ ವಿಕ್ಟೋರಿಯಾ, ನಂತರ ಅವಳಿಗೇ ಅಚ್ಚರಿಯಾಗುವ ಹಾಗೆ ಅವಳ ವ್ಯಕ್ತಿತ್ವದ ಹಲವಾರು ಮುಖಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಸೋನ್ನ ಅವಳನ್ನು ಒಂದು ಅಂಗಡಿಗೆ ಕರೆದುಕೊಂಡು ಹೋಗುತ್ತಾನೆ, ಅಂಗಡಿಯಾತ ಮಲಗಿರುತ್ತಾನೆ, ಸೋನ್ನ ಅಲ್ಲಿ ಬಿಯರ್ ಬಾಟಲಿಗಳನ್ನೆತ್ತಿಕೊಳ್ಳುತ್ತಾನೆ. ‘ಕದಿಯುತ್ತಿರುವೆಯಾ’ ಎಂದು ಅವಳು ಕೇಳಿದಾಗ, ‘ಇಲ್ಲಪ್ಪ ಇದು ನನ್ನ ಗೆಳೆಯನ ಅಂಗಡಿ, ಪಾಪ ಅವನನ್ನು ಯಾಕೆ ಎಬ್ಬಿಸುವುದು’ ಎನ್ನುತ್ತಾನೆ.

ಅಲ್ಲಿ ಏನೇನೋ ಮಾತುಕತೆಯಾಗಿ, ಆ ಹುಡುಗರು ಒಂದು ಬ್ಯಾಂಕ್ ದರೋಡೆ ಮಾಡಬೇಕು ಎಂದಾಗುತ್ತದೆ. ಹೊರಡುವ ಮೊದಲು ಅವರಿಗೆ ಕೊಕೇನ್ ನೀಡಲಾಗುತ್ತದೆ. ಅವಳೂ ಅದನ್ನು ತೆಗೆದುಕೊಳ್ಳುತ್ತಾಳೆ. ಹೊರಗೆ ಬಂದಾಗ ಆ ಹುಡುಗರು ಅವಳು ಬೇಕಾದರೆ ವಾಪಸ್ ಹೋಗಬಹುದು ಎನ್ನುತ್ತಾರೆ. ಆದರೆ ಅವಳು ಈಗಾಗಲೇ ಆ ‘ಸಾಹಸ’ದ ಮತ್ತಿನಲ್ಲಿ ಮುಳುಗಿಹೋಗಿದ್ದಾಳೆ. ಅವರ ಜೊತೆಯಲ್ಲಿಯೇ ಉಳಿಯುತ್ತಾಳೆ. ಹಾಗೆ ನೋಡಿದರೆ ಅಲ್ಲಿರುವ ಮೂರು ಹುಡುಗರು ಒತ್ತಡದಲ್ಲಿರುವಂತೆ ಕಾಣುತ್ತದೆ, ಅವರು ವಿಚಲಿತರಾಗಿರುತ್ತಾರೆ. ಆದರೆ ಅವಳು ಆರಾಮಾಗೇ ಇರುತ್ತಾಳೆ. ಇಡೀ ಚಿತ್ರದಲ್ಲಿ ಅವಳು ನಿಯಂತ್ರಣ ಕಳೆದುಕೊಳ್ಳುವುದು ಒಂದೇ ಸಲ, ಸುತ್ತಲೂ ಏನಾಗುತ್ತಿದೆ ಎನ್ನುವ ಕಾರಣಕ್ಕಲ್ಲ, ಅವಳು ಓಡಿಸುತ್ತಿರುವ ಗಾಡಿಗೆ ಏನೋ ಆಗಿ, ಅವರು ತಪ್ಪಿಸಿಕೊಳ್ಳಲು ಕಷ್ಟವಾಗಬಹುದು ಎನ್ನುವ ಕಾರಣಕ್ಕೆ! ಕೈಯ್ಯಲ್ಲಿ ಬಂದೂಕು ಹಿಡಿದು ಆ ಮೂವರೂ ದರೋಡೆ ಮಾಡುತ್ತಾರೆ, ಇವಳು ಗಾಡಿಯನ್ನು ಸ್ಟಾರ್ಟ್ ಮಾಡಿಕೊಂಡು ಕಾಯುತ್ತಿರುತ್ತಾಳೆ. ಗೆದ್ದೇ ಬಿಟ್ಟೆವು ಎನ್ನುವ ಹುಮ್ಮಸ್ಸಿನಲ್ಲಿ ಅವರು ಒಂದು ಕ್ಲಬ್ಬಿಗೆ ಹೋಗುತ್ತಾರೆ. ಮೈಮರೆತು ಕುಣಿಯುತ್ತಾರೆ. ಈ ಒಂದು ದೃಶ್ಯ ಇದಕ್ಕೆ ಮೊದಲಿನ ಮತ್ತು ಇದರ ನಂತರದ ದೃಶ್ಯಕ್ಕೆ ವಿರುದ್ಧವಾಗಿ ನಿಲ್ಲುತ್ತದೆ. ಆ ಕಾರಣದಿಂದಲೇ ಮುಂದಿನ ದೃಶ್ಯ ಹೆಚ್ಚು ಶಾಕ್ ಕೊಡುತ್ತದೆ. ಕ್ಲಬ್ಬಿನಿಂದ ಹೊರಗೆ ಬರುವಾಗ ಇನ್ನೇನು ಬೆಳಕಾಗುತ್ತಿರುತ್ತದೆ. ಕತ್ತಲ ಜಗತ್ತು ಸೋಲುವ ಸಮಯ. ಈಗಾಗಲೇ ಬ್ಯಾಂಕ್ ದರೋಡೆಯ ಸುದ್ದಿ ಗೊತ್ತಾಗಿದೆ. ಪೋಲೀಸರು ಅವರ ಬೇಟೆ ಶುರು ಮಾಡಿರುತ್ತಾರೆ. ಗುಂಡಿನ ದಾಳಿಯಲ್ಲಿ ಬಾಕ್ಸರ್ ಮತ್ತು ಇನ್ನೊಬ್ಬ ಸಾಯುತ್ತಾರೆ. ಇವರ ಗುಂಡಿನಿಂದ ಜನ ಸಾಯುತ್ತಾರೆ. ದರೋಡೆಕಾರರಾಗಿದ್ದ ಇವರು ಈಗ ಕೊಲೆಗಡುಕರಾಗಿದ್ದಾರೆ. ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ವಿಕ್ಟೋರಿಯಾ ಮತ್ತು ಸೋನ್ನ ಇಬ್ಬರೂ ಒಂದು ಅಪಾರ್ಟ್ಮೆಂಟಿನ ಕಟ್ಟಡದೊಳಗೆ ನುಸುಳುತ್ತಾರೆ.

ಕ್ಲಬ್ಬಿನಲ್ಲಿ ಮುದ್ದಾಗಿ ನರ್ತಿಸುವ, ದಿನಕ್ಕೆ ಏಳು ಗಂಟೆ ಪಿಯಾನೋ ಅಭ್ಯಾಸ ಮಾಡುವ ವಿಕ್ಟೋರಿಯಾ ಎಷ್ಟು ತಣ್ಣಗೆ ಯೋಚಿಸಬಲ್ಲಳು ಮತ್ತು ಯಾವ ಹಂತಕ್ಕೆ ಕುಸಿಯಬಲ್ಲಳು ಎಂದು ಇಲ್ಲಿ ಸಾಬೀತಾಗುತ್ತದೆ. ಇನ್ನು ನಮ್ಮ ಕತೆ ಮುಗಿಯಿತು ಎಂದು ಸೋನ್ನ ಹತಾಶನಾಗಿರುತ್ತಾನೆ. ಆದರೆ ಇವಳು ಸೋಲೊಪ್ಪಿಕೊಳ್ಳುವುದಿಲ್ಲ. ಕಡೆಗೆ ಅವಳು ಯಾವ ಮಟ್ಟಕ್ಕೆ ಹೋಗುತ್ತಾಳೆ ಅಂದರೆ ಆ ಮನೆಯಲ್ಲಿದ್ದ ಪುಟ್ಟ ಮಗುವೊಂದನ್ನು ಗುರಾಣಿಯಾಗಿ ಬಳಸಿಕೊಂಡು ತಪ್ಪಿಸಿಕೊಳ್ಳುವ ಯೋಚನೆ ಮಾಡುತ್ತಾಳೆ. ಅಲ್ಲಿಂದ ಟ್ಯಾಕ್ಸಿ ಹಿಡಿದು ಒಂದು ಹೋಟೆಲ್ ತಲುಪುತ್ತಾರೆ. ಪಾಸ್ ಪೋರ್ಟ್ ಇಲ್ಲದೆ ರೂಂ ಕೊಡುವುದಿಲ್ಲ ಎಂದು ಅವನು ಹೆದರಿದರೆ, ವಿಕ್ಟೋರಿಯಾ ಅಲ್ಲೂ ಏನೋ ಒಂದು ಕತೆ ಹೇಳಿ ರೂಂ ಗಿಟ್ಟಿಸುತ್ತಾಳೆ. ಅಷ್ಟರಲ್ಲಿ ಸೋನ್ನ ನೋವಿನಿಂದ ಒದ್ದಾಡುತ್ತಿರುತ್ತಾನೆ. ಕ್ಯಾಮೆರಾ ಈಗ ಅವಳನ್ನು ಬಿಟ್ಟು ಅವನ ಜೊತೆಗೆ ನಿಲ್ಲುತ್ತದೆ. ಅವನಿಗೆ ಗುಂಡೇಟು ಬಿದ್ದಿದೆ. ರಕ್ತ ಸುರಿಯುತ್ತಿರುತ್ತದೆ. ಅವಳನ್ನು ಅಪಾರವಾದ ಪ್ರೀತಿಯಿಂದ, ನೋವಿನಿಂದ ದಿಟ್ಟಿಸುವ ಅವನು ‘ಹೋಗು, ಹೊರಟುಬಿಡು, ಈ ಹಣವನ್ನು ತೆಗೆದುಕೊಂಡು ಸ್ಪೇನ್ ಗೆ ಹೊರಟುಬಿಡು’ ಎನ್ನುತ್ತಾನೆ. ಆದರೆ ವಿಕ್ಟೋರಿಯ ಒಪ್ಪುವುದಿಲ್ಲ, ತಾವು ಸಿಕ್ಕಿಹಾಕಿಕೊಳ್ಳಬಹುದು ಎಂದು ಗೊತ್ತಿದ್ದರೂ ಡಾಕ್ಟರನ್ನು ಕರೆಯಲು ಫೋನ್ ಮಾಡುತ್ತಾಳೆ. ಒಂದೇ ವ್ಯಕ್ತಿಯಲ್ಲಿ ಎಷ್ಟು ವ್ಯಕ್ತಿಗಳಿರುತ್ತಾರೆ…. ಹಸುಗೂಸಿನ ಒಡಲಿಗೆ ಬಂದೂಕಿಡಲು ಹೇಸದ ಅವಳು ಅವನಿಗಾಗಿ, ಅವನು ಬದುಕಬಹುದು ಎನ್ನುವ ಒಂದು ಆಸೆಗಾಗಿ ಜೀವಮಾನದ ಸೆರೆವಾಸವನ್ನೆದುರಿಸಲೂ ಸಹ ತಯಾರಾಗಿಬಿಡುತ್ತಾಳೆ.

(ಸಿನಿಮಾಟೋಗ್ರಾಫರ್: Sturla Branth Grovlen)

ಅವನು ತನ್ನ ಕೊನೆ ಉಸಿರನ್ನೆಳೆಯುತ್ತಿರುತ್ತಾನೆ, ತನಗೂ ಬದುಕಿಗೂ ಇರುವ ಒಂದೇ ಒಂದು ಎಳೆ ಇವಳೇ ಎನ್ನುವಂತೆ ಅವಳ ಕೈಗಳನ್ನು ಗಟ್ಟಿಯಾಗಿ ಹಿಡಿದು ಚುಂಬಿಸುತ್ತಿರುತ್ತಾನೆ. ಎಲ್ಲಾ ಪರಿಸ್ಥಿತಿಯನ್ನೂ ಎದುರಿಸಿ ನಿಲ್ಲಬಲ್ಲ ವಿಕ್ಟೋರಿಯಾಗೆ ಅವನನ್ನು ಉಳಿಸಿಕೊಳ್ಳುವುದು ಆಗುವುದಿಲ್ಲ. ‘stay with me’ ‘stay with me’ ‘stay’ ಎಂದು ಅವಳು ಬಡಬಡಿಸುತ್ತಿರುವಾಗಲೇ ಅವನು ಸಾಯುತ್ತಾನೆ. ಅದುವರೆಗೂ ಹೃದಯ ಒಡೆದುಹೋಗುವಂತೆ ಅಳುತ್ತಿದ್ದ ವಿಕ್ಟೋರಿಯಾ ಇದನ್ನೂ ಒಪ್ಪಿಕೊಳ್ಳುತ್ತಾಳೆ. ಕಣ್ಣೊರೆಸಿಕೊಳ್ಳುತ್ತಾಳೆ. ಬಹುಶಃ ‘ಡಾಕ್ಟರು ಸಿಕ್ಕರು’ ಎಂದು ಹೇಳಲು ರಿಸೆಪ್ಷನ್ ನಿಂದ ಇವರ ಕೋಣೆಗೆ ಫೋನ್ ಬರುತ್ತಿರುತ್ತದೆ. ಮಾತಿಲ್ಲದೆ ಏಳುವ ಅವಳು, ಆ ಹಣದ ಕವರ್ ಅನ್ನು ಕೈಗೆ ತೆಗೆದುಕೊಳ್ಳುತ್ತಾಳೆ, ಹೋಟೆಲ್ ನಿಂದ ಹೊರಬೀಳುತ್ತಾಳೆ. ಬೆಳಗಿನ ಜಾವದ ಖಾಲಿ ಖಾಲಿ ರಸ್ತೆಗುಂಟಾ ಹೆಜ್ಜೆ ಹಾಕುತ್ತಾ ಹೊರಟೇಬಿಡುತ್ತಾಳೆ. ಸ್ವಲ್ಪ ಹೊತ್ತು ಅವಳ ಜೊತೆಗೆ ಹೆಜ್ಜೆ ಹಾಕುವ ಕ್ಯಾಮೆರಾ ಅಲ್ಲೇ ನಿಂತುಬಿಡುತ್ತದೆ. ವಿಕ್ಟೋರಿಯಾ ಮುಂದೆ ಮುಂದೆ ಹೊರಟುಬಿಡುತ್ತಾಳೆ.

ಕೆಲವೇ ಗಂಟೆಗಳ ಅವಧಿಯಲ್ಲಿ ಪ್ರೇಮ, ದರೋಡೆ, ಸ್ನೇಹ, ನೃತ್ಯ, ಸಂಗೀತ, ಅಪರಾಧ, ಕೊಲೆ ಎಲ್ಲವೂ ನಡೆಯುತ್ತದೆ. ಸುಮಾರು ಎರಡೂ ಕಾಲು ಗಂಟೆಗಳ ಈ ಥ್ರಿಲ್ಲರ್ ಚಿತ್ರ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡುತ್ತಾ ಹೋಗುತ್ತದೆ. ಸೋನ್ನ ಮತ್ತು ವಿಕ್ಟೋರಿಯಾ ಎನ್ನುವ ಎರಡು ಪಾತ್ರಗಳೂ ಪೈಪೋಟಿಯ ಮೇಲೆ ಅಭಿನಯಿಸಿವೆ. ಚಿತ್ರದ ಸಿನೆಮಾಟೋಗ್ರಫಿ ಮಾಡಿರುವ Sturla Branth Grovlen ಕಸುಬುದಾರಿಕೆಯನ್ನು ನೋಡಲಿಕ್ಕಾದರೂ ಈ ಚಿತ್ರವನ್ನು ನೋಡಬೇಕು. ಇಲ್ಲಿ ಒಂದು ಮಾತನ್ನು ಹೇಳಲೇಬೇಕು. ಇಡೀ ಚಿತ್ರ ಕೈಯಲ್ಲಿ ಹಿಡಿದ ಕ್ಯಾಮೆರಾದಿಂದ ಚಿತ್ರೀಕರಣಗೊಂಡಿರುವುದರಿಂದ ಎಲ್ಲಾದರೂ ಗಾಜಿನಲ್ಲಿ ಅದರ ಪ್ರತಿಬಿಂಬ ಕಂಡೇಕಂಡೀತು ಎಂದು ಹುಡುಕಾಡಿದರೂ ನನಗೆ ಒಂದು ದೃಶ್ಯದಲ್ಲೂ ಅದು ಕಾಣಲಿಲ್ಲ. ಇದು ಚಿತ್ರೀಕರಣಕ್ಕೆ ಒಡ್ಡಿರಬಹುದಾದ ಸವಾಲನ್ನು ನಾನು ಊಹಿಸಬಲ್ಲೆ. ಎಡಿಟ್ ಮತ್ತು ಕಟ್ ಇಲ್ಲದ ಈ ಚಿತ್ರವನ್ನು ನೋಡುವುದೆಂದರೆ ಪಂಕ್ಚುಯೇಷನ್ ಇಲ್ಲದ ಒಂದು ಪುಸ್ತಕವನ್ನು ಓದಿದಂತಹ ಸವಾಲು ಎಂದು ಒಬ್ಬ ವಿಮರ್ಶಕರು ಹೇಳುತ್ತಾರೆ. ಬಹುಶಃ ಅದು ನಿಜವೂ ಹೌದು. ಇದನ್ನು ಮಾಮೂಲಿ ಚಿತ್ರದಂತೆ ನೋಡಲು ಸಾಧ್ಯವಿಲ್ಲ, ಅದಕ್ಕೂ ಪ್ರೇಕ್ಷಕನಲ್ಲಿ ಒಂದು ಸಿದ್ಧತೆ ಬೇಕಾಗುತ್ತದೆ. ಬಹುಶಃ ಅವರಿಗೆ ಈ ಚಿತ್ರದ ವೈಶಿಷ್ಟ್ಯ ಅರ್ಥವಾಗುತ್ತದೆ. ಹೀಗೆ ತಾಂತ್ರಿಕತೆಯ ದೃಷ್ಟಿಯಿಂದ, ಸ್ಕ್ರೀನ್ ಪ್ಲೇ ದೃಷ್ಟಿಯಿಂದ, ನಿರ್ದೇಶನದ ದೃಷ್ಟಿಯಿಂದ, ಅಭಿನಯದ ದೃಷ್ಟಿಯಿಂದ ನೋಡಲೇಬೇಕಾದ ಚಿತ್ರ ವಿಕ್ಟೋರಿಯಾ.