ಹೊಸದಾಗಿ ಬಂದ ಕೃಷ್ಣಾ ಜಾಣನೂ ಮೃದು ಸ್ವಭಾವದವನೂ ಆಗಿದ್ದ. ಹೆಣ್ಣು ಧ್ವನಿಯ ಆತ ‘ಬ್ಯೂಟಿಫುಲ್’ ಆಗಿದ್ದ. ಆತ ಬಂದ ಹೊಸದರಲ್ಲಿ ಜಗ್ಗು ಒಂದು ಸಲ ಕೃಷ್ಣಾಗೆ ಮತ್ತು ನನಗೆ ಐಸ್ಕ್ರೀಮ್ ತಿನ್ನಲು ಪಾರ್ಲರ್‌ಗೆ ಕರೆದುಕೊಂಡು ಹೋದ. ವಿಜಾಪುರದಲ್ಲಿ ಇದ್ದುದರಲ್ಲೇ ಅದು ಬಹಳ ಪಾಶ್ ಆಗಿತ್ತು. ಒಳಗೆ ಕ್ಯಾಬಿನ್‌ಗಳಿದ್ದವು. ಒಂದು ಕ್ಯಾಬಿನ್‌ನಲ್ಲಿ ಹೋಗಿ ಕುಳಿತೆವು. ನನಗೆ ಅಂಥ ಅನುಭವ ಮೊದಲನೆಯದಾಗಿತ್ತು. ಒಂದು ಪೆಗ್ ತುಂಬ ಐಸ್ಕ್ರೀಮ್ ಕೂಡ ಮೊದಲ ಬಾರಿಗೆ ತಿಂದದ್ದು. ದುಡ್ಡಿಗೊಂದು ಸಿಗುವ ಲಾಲವಾಲಾ ತಿನ್ನುವುದೇ ನನ್ನಂಥವರಿಗೆ ದೊಡ್ಡ ಸಾಹಸವಾಗಿತ್ತು. ಕೃಷ್ಣಾ ಬಹಳ ಮುಜುಗರದಿಂದ ತಿನ್ನುತ್ತಿದ್ದ.
ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿಯ ಇಪ್ಪತ್ತೆಂಟನೆಯ ಕಂತು

ನಾಲ್ಕನೇ ತರಗತಿಯಲ್ಲಿದ್ದಾಗ ಒಂದು ದಿನ ಗಂಜ್ ಬಳಿಯ ಬಾಪು ಮನೆಗೆ ಹೋಗಿದ್ದೆ. ಅವನ ತಂದೆ ಪ್ರಸಿದ್ಧ ಕ್ರಿಮಿನಲ್ ಲಾಯರ್ ಆಗಿದ್ದರು. ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಮಲಗಿದ್ದ ಅವರ ಆರೈಕೆ ನಡೆದಿತ್ತು. ನನ್ನನ್ನು ನೋಡಿದ ಕೂಡಲೆ ಬಾಪು ಹೊರಗೆ ಬಂದ. ಸಮೀಪದ ಗಂಜ್ ವರೆಗೆ ಬಂದೆವು. ಅವನ ಮನೆಯಲ್ಲಿ ನನಗೆ ಕಂಡುಬಂದದ್ದನ್ನೇ ಆತ ಹೇಳಿದ. ಅಷ್ಟೇ ಹೇಳಿದ್ದರೆ ಇದೇನು ನೆನಪಿನಲ್ಲಿ ಇರುವಂಥ ಘಟನೆಯಾಗುತ್ತಿರಲಿಲ್ಲ. ಅಂದು ನನಗೆ ವಿಚಿತ್ರ ಎನಿಸಿದ್ದನ್ನು ಹೇಳಿದ. ‘ಶ್ರೀಮಂತರಿಗೆ ರೋಗ ಜಾಸ್ತಿʼ ಎಂದ. ‘ಅದ್ಯಾಕೆ ಹಂಗ’ ಎಂದು ಆಶ್ಚರ್ಯದಿಂದ ಕೇಳಿದೆ. ‘ಅವರು ಮಾಡುವ ಪಾಪ’ ಎಂದ. ಇನ್ನೂ ವಿಚಿತ್ರ ಎನಿಸಿತು. ಯಾವ ಪಾಪ ಎಂದೆ. ಹಣ ಗಳಿಸುವ ಪಾಪ ಎಂದ! ಹಣ ಗಳಿಸಿದರೆ ಪಾಪ ಬರುತ್ತಾ ಎಂದು ಕೇಳಬೇಕೆನಿಸಿತು. ಇನ್ನೇನು ಹೇಳುತ್ತಾನೋ ಎಂದು ಮನದೊಳಗೇ ಅಂದುಕೊಂಡು ಸುಮ್ಮನಾದೆ. ನಾಳೆ ಸಾಲಿಗಿ ಬರೂದಿಲ್ಲ. ನಾಡಿದ್ದು ಸಿಗೋಣ ಎಂದು ಹೇಳಿದ. ನಾನು ಹೂಂಗುಟ್ಟಿ ಮನೆಯ ದಾರಿ ಹಿಡಿದೆ.

ತಲೆಯ ತುಂಬ ಅವ ಹೇಳಿದ್ದೇ ತುಂಬಿಕೊಂಡಿತು. ಆತ ಹೇಳಿದ್ದು ಸತ್ಯವೋ ಸುಳ್ಳೋ ಅದೆಲ್ಲ ಯೋಚಿಸುವ ಗೋಜಿಗೆ ಹೋಗಲಿಲ್ಲ. ಆದರೆ ನನ್ನ ತಂದೆ ತಾಯಿ ಹಣ ಗಳಿಸುವ ಪಾಪ ಮಾಡಿಲ್ಲ ಎಂದು ಅಂದುಕೊಂಡು ಹೆಮ್ಮೆಪಟ್ಟೆ. ಅದೇನೇ ಇರಲಿ ನಾವೇಕೆ ಬಡವರು, ಅವರೇಕೆ ಶ್ರೀಮಂತರು ಎಂಬ ವಿಚಾರ ನನಗೆಂದೂ ಹೊಳೆದಿರಲಿಲ್ಲ. ನಾವು ಬಡವರು ಅವರು ಶ್ರೀಮಂತರು ಎಂಬುದಷ್ಟೇ ನನಗೆ ಗೊತ್ತಿತ್ತು. ನನ್ನ ಮತ್ತು ನನ್ನ ತೆಗ್ಗಿನ ಶಾಲೆಯ ಶ್ರೀಮಂತ ಸಹಪಾಠಿಗಳ ಮನೆ, ಬಟ್ಟೆ ಮತ್ತು ಊಟದಲ್ಲಿ ವ್ಯತ್ಯಾಸವಿದ್ದರೂ ಸಂಬಂಧಗಳಲ್ಲಿ ವ್ಯತ್ಯಾಸವಿರಲಿಲ್ಲ. (ರೊಟ್ಟಿ ಮತ್ತು ಖಾರಬ್ಯಾಳಿಯಂತೂ ಎಲ್ಲರ ಮನೆಯಲ್ಲಿ ಒಂದೇ ಆಗಿತ್ತು. ನಮಗೆ ಹುಷಾರಿಲ್ಲದಾಗ ಮತ್ತು ಹಬ್ಬ ಹರಿದಿನಗಳಲ್ಲಿ ಮಾತ್ರ ಅನ್ನ ಸಿಗುತ್ತಿತ್ತು.) ಆ ಕಾಲದಲ್ಲಿ ಬಡವರು ಶ್ರೀಮಂತರು ಎನ್ನದೆ ಒಳ್ಳೆಯವರೆಲ್ಲ ಗೌರವಾರ್ಹರೇ ಆಗಿದ್ದರು. ಗೆಳೆಯರಲ್ಲಿ ಭೇದಭಾವ ಇರಲಿಲ್ಲ. ವಿವಿಧ ಜಾತಿ, ಧರ್ಮ ಮತ್ತು ವರ್ಗಗಳ ವಿದ್ಯಾರ್ಥಿಗಳೆಲ್ಲ ಬೆಂಚುಗಳಿಲ್ಲದ ಶಾಲೆಯಲ್ಲಿ ಒಂದೇ ತೆರನಾದ ಶಿಕ್ಷಣ ಪಡೆಯುತ್ತಿದ್ದೆವು. ಒಂದೇ ಹೌದಿನ ನೀರು ಕುಡಿಯುತ್ತಿದ್ದೆವು. ಅದೇ ರಾಜಗಿರಿ ಬೀಜಗಳಿಂದ ಮಾಡಿದ ಉಂಡಿ, ಅದೇ ಹುರಿದ ಹುಣಸಿಕಪ್, ಅದೇ ಲಾಲವಾಲಾ, ಅದೇ ಗರ್ದಿಗಮ್ಮತ್, ಅದೇ ಚೆಂಡು, ಎಲ್ಲ ಅದೇ ಅದೇ ಅದೇ.

ನಾವು ಐದನೇ ಇಯತ್ತೆಯಲ್ಲಿದ್ದಾಗ ಕೃಷ್ಣಾ ಎಂಬ ಹುಡುಗ ಹೊಸದಾಗಿ ಬಂದು ಸೇರ್ಪಡೆಯಾದ. ಅವನ ತಂದೆಗೆ ವಿಜಾಪುರಕ್ಕೆ ವರ್ಗವಾಗಿದ್ದರಿಂದ ಅದಾವುದೋ ಕಡೆಯಿಂದ ಬಂದಿದ್ದ. ನಮಗೋ ಹೊಸ ಹುಡುಗನ ಗೆಳೆತನ ಸಂಪಾದಿಸುವ ತವಕ. ಆತ ನನಗೆ ಬೇಗ ಗೆಳೆಯನಾದ. ನನ್ನ ಗಣಿತ ಚೆನ್ನಾಗಿತ್ತು. ಇಂಗ್ಲಿಷ್ ಕಾಟ ಅದೇ ಆಗ ಶುರುವಾಗಿತ್ತು. ನಸುಕಿನಲ್ಲಿ ಎದ್ದು ‘ಎಫ್ ಆರ್ ಆಯ್ ಇ ಎನ್ ಡಿ ಫ್ರೆಂಡ್ ಅಂದ್ರೆ ಗೆಳೆಯ’ ಎನ್ನುತ್ತ ಸ್ಪೆಲ್ಲಿಂಗ್ ಬೈಹಾರ್ಟ್ ಮಾಡುತ್ತಿದ್ದೆ. ಹೀಗೆ ಅನೇಕ ಶಬ್ದಗಳನ್ನು ಕಲಿತರೂ ಸ್ಪೆಲ್ಲಿಂಗ್ ತಪ್ಪುವುದು ನಡೆದೇ ಇತ್ತು.

ಹಿಂದಿ ಯಾವ ಕ್ಲಾಸಿನಿಂದ ಆರಂಭವಾಯಿತೊ ನೆನಪಾಗುತ್ತಿಲ್ಲ. ಅದು ಕೂಡ ಐದನೇ ಇಯತ್ತೆಗೆ ಇರಬಹುದು ಎಂದು ಅನಿಸುತ್ತಿದೆ. ಒಂದು ದಿನ ಶಾಲಾ ಇನ್ಸ್‍ಪೆಕ್ಟರ್ ಬಂದರು. ಆಗ ಹಿಂದಿ ಪಾಠ ನಡೆಯುತ್ತಿತ್ತು. ಅವರು ಮಾಸ್ತರ ಕೂಡ ಮಾತನಾಡಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿದರು. ಅವರು ಬರುವುದು ಮೊದಲೇ ಗೊತ್ತಿತ್ತು. ನಾವೆಲ್ಲ ಹುಡುಗರು ಭಯಭೀತರಾಗಿದ್ದೆವು. ಇಂಡಿ ಸರ್ ನಮಗೆ ಧೈರ್ಯ ತುಂಬಿದ್ದರೂ ಅಷ್ಟೊಂದು ಪ್ರಯೋಜನವಾಗಿರಲಿಲ್ಲ. ಆ ಇನ್ಸ್‍ಪೆಕ್ಟರ್ ಒಬ್ಬ ಹುಡುಗನಿಗೆ “ಆಪ್ ಕಾ ಬಾಪ್ ಕಾ ನಾಮ್ ಕ್ಯಾ ಹೈ” ಎಂದು ಕೇಳುವ ಮೂಲಕ ಆತನ ಹಿಂದಿ ಭಾಷೆಯ ಸಾಮರ್ಥ್ಯವನ್ನು ಪರೀಕ್ಷಿಸಲು ಯತ್ನಿಸಿದರು. ಆ ಹುಡುಗ ಬಹಳ ಶಿಸ್ತಿನಿಂದ ಎದ್ದು ನಿಂತು, ಕೈ ಕಟ್ಟಿಕೊಂಡು “ಆಪ್ ಕಾ ಬಾಪ್ ಕಾ ನಾಮ್ ಮಲ್ಲಪ್ಪಾ ಹೈ” ಎಂದುಬಿಟ್ಟ. ಇಂಡಿ ಸರ್ ಗಾಬರಿಯಾದರು. ಇನ್ಸ್‍ಪೆಕ್ಟರ್ ನಕ್ಕು ಇನ್ನೊಬ್ಬ ವಿದ್ಯಾರ್ಥಿಯ ಕಡೆಗೆ ಹೋದರು. ಅಂತೂ ಅವರು ಹೊರಗೆ ಹೋದಮೇಲೆ ಉಸಿರು ಬಂದಂತಾಯಿತು. ಇಂಡಿ ಸರ್ ಆ ಹುಡುಗನಿಗೆ ಗದರಿಸಲಿಲ್ಲ. ಧೈರ್ಯ ತುಂಬಿದರು.

ಹೊಸದಾಗಿ ಬಂದ ಕೃಷ್ಣಾ ಜಾಣನೂ ಮೃದು ಸ್ವಭಾವದವನೂ ಆಗಿದ್ದ. ಹೆಣ್ಣು ಧ್ವನಿಯ ಆತ ‘ಬ್ಯೂಟಿಫುಲ್’ ಆಗಿದ್ದ. ಆತ ಬಂದ ಹೊಸದರಲ್ಲಿ ಜಗ್ಗು ಒಂದು ಸಲ ಕೃಷ್ಣಾಗೆ ಮತ್ತು ನನಗೆ ಐಸ್ಕ್ರೀಮ್ ತಿನ್ನಲು ಪಾರ್ಲರ್‌ಗೆ ಕರೆದುಕೊಂಡು ಹೋದ. ವಿಜಾಪುರದಲ್ಲಿ ಇದ್ದುದರಲ್ಲೇ ಅದು ಬಹಳ ಪಾಶ್ ಆಗಿತ್ತು. ಒಳಗೆ ಕ್ಯಾಬಿನ್‌ಗಳಿದ್ದವು. ಒಂದು ಕ್ಯಾಬಿನ್‌ನಲ್ಲಿ ಹೋಗಿ ಕುಳಿತೆವು. ನನಗೆ ಅಂಥ ಅನುಭವ ಮೊದಲನೆಯದಾಗಿತ್ತು. ಒಂದು ಪೆಗ್ ತುಂಬ ಐಸ್ಕ್ರೀಮ್ ಕೂಡ ಮೊದಲ ಬಾರಿಗೆ ತಿಂದದ್ದು. ದುಡ್ಡಿಗೊಂದು ಸಿಗುವ ಲಾಲವಾಲಾ ತಿನ್ನುವುದೇ ನನ್ನಂಥವರಿಗೆ ದೊಡ್ಡ ಸಾಹಸವಾಗಿತ್ತು. ಕೃಷ್ಣಾ ಬಹಳ ಮುಜುಗರದಿಂದ ತಿನ್ನುತ್ತಿದ್ದ. ನಂತರ ಜಗ್ಗು ಗಾಂಧಿಚೌಕ ಬಳಿ ನಮ್ಮನ್ನು ಬಿಟ್ಟು ಪಕ್ಕದ ಬಜಾರಿನಲ್ಲಿದ್ದ ತಮ್ಮ ದೊಡ್ಡದಾದ ಕಿರಾಣಿ ಅಂಗಡಿಗೆ ಹೋದ. ನಾವಿಬ್ಬರು ಮುಂದೆ ಸಾಗುತ್ತ ನಮ್ಮ ನಮ್ಮ ಮನೆಯ ದಾರಿ ಹಿಡಿದೆವು. ಹೋಗುವಾಗ ನಾವೇನು ಹೆಚ್ಚು ಮಾತನಾಡಲಿಲ್ಲ. ಐಸ್ಕ್ರೀಮ್ ರುಚಿ ಇನ್ನೂ ನಾಲಗೆ ಮೇಲೆ ಇದ್ದು ಮೆದುಳಿಗೆ ತಂಪು ನೀಡುತ್ತಿತ್ತು.

ಮರುದಿನ ಶಾಲೆ ಬಿಟ್ಟಾಗ ನಾನು ಕೃಷ್ಣಾ ಜೊತೆ ಹೋಗುತ್ತಿದ್ದೆ. ‘ನಾವು ಜಗ್ಗು ಕೂಡ ಹೋಗಬಾರದು. ಆತ ಖರ್ಚಿಕ ಇದ್ದ ಹಾಗೆ ಕಾಣುತ್ತದೆ. ನಿನ್ನೆ ಆತನ ಜೊತೆ ಹೋಗಿದ್ದು ನನಗಿಷ್ಟವಾಗಲಿಲ್ಲ’ ಎಂದುಬಿಟ್ಟ. ನನಗೋ ವಿಚಿತ್ರವೆನಿಸಿತು. ಆದರೂ ಆತನ ಸೂಕ್ಷ್ಮತೆ ಬಹಳ ಹಿಡಿಸಿತು. ಆತನೇನು ಬಡವನಾಗಿದ್ದಿಲ್ಲ. ಮಧ್ಯಮ ವರ್ಗದ ಹಿನ್ನೆಲೆಯವನಾಗಿದ್ದು, ಸುಸಂಸ್ಕೃತನಾಗಿದ್ದ. ಆದರೆ ಜಗ್ಗೂನ ಸಂವೇದನಾಶೀಲತೆ ಬಗ್ಗೆ ಆತನಿಗೆ ಏನೂ ಗೊತ್ತಿರಲಿಲ್ಲ. ಜಗ್ಗು ಶ್ರೀಮಂತನಿದ್ದರೂ ಬಹಳ ದಯಾಳು ಆಗಿದ್ದ. ಎತ್ತರದ ವ್ಯಕ್ತಿತ್ವದ ಆತ ಬಾಲ ವಿನೋದ ಖನ್ನಾ ಹಾಗೆ ಕಾಣುತ್ತಿದ್ದ. ಆತನ ಮಾತು ಕಡಿಮೆ. ಒಂದು ಕಿವಿಯಲ್ಲಿ ಕಿರಿಕಿರಿಯಾಗುತ್ತಿತ್ತು. ಹೀಗಾಗಿ ಅನೇಕ ಬಾರಿ ಆತ ಪೇಪರ್ ತುಕಡಿ ಸುತ್ತಿ ಕಿವಿಯಲ್ಲಿ ಹಾಕಿಕೊಳ್ಳುತ್ತಿದ್ದ. ನಾವು ಮೆಲುದನಿಯಲ್ಲಿ ಮಾತನಾಡಿದರೆ ಆತನಿಗೆ ಕೇಳಿಸುತ್ತಿರಲಿಲ್ಲ.

ಇಂಡಿ ಸರ್ ನಮಗೆ ಧೈರ್ಯ ತುಂಬಿದ್ದರೂ ಅಷ್ಟೊಂದು ಪ್ರಯೋಜನವಾಗಿರಲಿಲ್ಲ. ಆ ಇನ್ಸ್‍ಪೆಕ್ಟರ್ ಒಬ್ಬ ಹುಡುಗನಿಗೆ “ಆಪ್ ಕಾ ಬಾಪ್ ಕಾ ನಾಮ್ ಕ್ಯಾ ಹೈ” ಎಂದು ಕೇಳುವ ಮೂಲಕ ಆತನ ಹಿಂದಿ ಭಾಷೆಯ ಸಾಮರ್ಥ್ಯವನ್ನು ಪರೀಕ್ಷಿಸಲು ಯತ್ನಿಸಿದರು. ಆ ಹುಡುಗ ಬಹಳ ಶಿಸ್ತಿನಿಂದ ಎದ್ದು ನಿಂತು, ಕೈ ಕಟ್ಟಿಕೊಂಡು “ಆಪ್ ಕಾ ಬಾಪ್ ಕಾ ನಾಮ್ ಮಲ್ಲಪ್ಪಾ ಹೈ” ಎಂದುಬಿಟ್ಟ.

ಎಸ್.ಎಸ್. ಹೈಸ್ಕೂಲ್ ಆಟದ ಮೈದಾನ ನಮಗೆಲ್ಲ ಬಹಳ ಪ್ರಿಯವಾಗಿತ್ತು. ನಮ್ಮ ತೆಗ್ಗಿನ ಶಾಲೆ (ಎಸ್.ಎಸ್. ಪ್ರೈಮರಿ ಸ್ಕೂಲ್) ಆ ಹೈಸ್ಕೂಲಿನ ಒಂದು ಭಾಗವಾಗಿದ್ದರಿಂದ ನಮ್ಮದೇ ಗ್ರೌಂಡ್ ಆಗಿತ್ತು. ಹೈಸ್ಕೂಲ್ ಕಟ್ಟಡದ ಬಲಬದಿಯ ನೆಲಮನೆಯಲ್ಲಿ ನಮ್ಮ ಶಾಲೆ ನಡೆಯುತ್ತಿತ್ತು. ಶಾಲೆ ಪಕ್ಕದಲ್ಲೇ ಆಟದ ಮೈದಾನವಿತ್ತು. ಹೈಸ್ಕೂಲ್ ಹುಡುಗರು ಫುಟ್ ಬಾಲ್ ಮತ್ತು ಹಾಕಿ ಆಡುವುನ್ನು ನೋಡಲು ಖುಷಿ ಅನಿಸುತ್ತಿತ್ತು.

ಅದೇ ಹೈಸ್ಕೂಲ್ ವಿದ್ಯಾರ್ಥಿಗಳಾದ ನಂತರ ಆಟದ ಪಿರಿಯಡ್‌ನಲ್ಲಿ ನಾವು ಆಡತೊಡಗಿದೆವು. ಆ ಕಾಲದಲ್ಲೇ ಅದೊಂದು ಸುಸಜ್ಜಿತ ಹೈಸ್ಕೂಲ್ ಆಗಿತ್ತು. ನೂರಾರು ವಿದ್ಯಾರ್ಥಿಗಳಿಗೆ ಸಾಕಾಗುವಷ್ಟು ಹಾಕಿ ಸ್ಟಿಕ್‌ಗಳಿದ್ದವು. ನಾವೆಲ್ಲ ಹುಯ್ಯ ಎಂದು ಹ್ಯಾಂಗೋ ಹ್ಯಾಂಗೋ ಹಾಕಿ ಆಡುತ್ತಿದ್ದೆವು. ಫುಟ್ ಬಾಲ್ ಮಾತ್ರ ನಮಗೆ ಹೆಚ್ಚು ಖುಷಿ ಕೊಡುತ್ತಿತ್ತು. ಫುಟ್ ಬಾಲ್ ಆಡುವಾಗ ಕಿಕ್ ಹೊಡೆಯುವ ಆನಂದ ಹೇಳ ತೀರದ್ದು. ಒಂದೇ ಫುಟ್ ಬಾಲ್ ಎಷ್ಟೊಂದು ಮಕ್ಕಳ ಹೃದಯ ಸ್ಪಂದನಕ್ಕೆ ಕಾರಣವಾಗುತ್ತಿತ್ತು ಎಂಬುದನ್ನು ನೆನೆಸಿಕೊಂಡರೆ ಇಂದಿಗೂ ಖುಷಿಯ ಅಲೆಯೊಂದು ಮನದಲ್ಲಿ ಹಾದುಹೋಗುವುದು. ಅದರ ಹಿಂದೆ ಓಡುವ, ಗೋಲ್ ಹೊಡೆದು ಕುಣಿದು ಕುಪ್ಪಳಿಸುವ, ಬಾಲ್ ನಮ್ಮ ಕ್ಷೇತ್ರದ ಕಡೆಗೆ ಹೋದಾಗ ಎದೆ ಬಡಿತ ಹೆಚ್ಚುವ ಮತ್ತೆ ಅರ್ಧ ನಿಮಿಷದಲ್ಲಿ ಎದುರಾಳಿಗಳ ಕ್ಷೇತ್ರದ ಕಡೆಗೆ ಬಂದಾಗ ಹುರುಪಾಗುವ ಹೀಗೆ ಏರಿಳಿತಗಳ ಮಧ್ಯೆ ಸಂತೋಷದ ಸಾಗರವೇ ನಿರ್ಮಾಣವಾಗುತ್ತಿತ್ತು.

ಎಸ್.ಎಸ್.ಎಲ್.ಸಿ. ಓದುವಾಗ ಜಗ್ಗೂನ ರೂಮಿನಲ್ಲೇ ನಾನು ಮತ್ತು ಇನ್ನಿಬ್ಬರು ಓದುತ್ತಿದ್ದೆವು. ಬಾಡಿಗೆ ಕೊಡಲು ಶಕ್ತಿ ಇಲ್ಲದ ನಮಗೆ ಇಂಥ ಅವಕಾಶವನ್ನು ಜಗ್ಗು ಕಲ್ಪಿಸಿದ್ದ. ಒಂದು ಸಲ ಯಾವನೋ ಒಬ್ಬ ನನ್ನ ಓರಿಗೆಯ ಹುಡುಗ ಆಟದ ಮೈದಾನದಲ್ಲಿ ಸುಮ್ಮ ಸುಮ್ಮನೆ ಕಿರಿಕಿರಿ ಮಾಡಿದ. ಹಾಕಿಯಿಂದ ತಿವಿದ. ನಾನು ಪ್ರತಿಭಟಿಸಿದೆ. ಅವನ ನಡಾವಳಿಯಿಂದ ಬೇಸರವಾಗಿ ರೂಮಿಗೆ ಬಂದೆ. ಮುಖ ಸಪ್ಪಗೆ ಮಾಡಿಕೊಂಡಿದ್ದರಿಂದ ಜಗ್ಗು ಕೇಳಿದ. ಘಟನೆಯನ್ನು ವಿವರಿಸಿದ ಮೇಲೆ ರೂಮಿನಲ್ಲಿದ್ದ ಹಾಕಿ ಸ್ಟಿಕ್ ತೆಗೆದುಕೊಂಡು ಗ್ರೌಂಡ್‌ಗೆ ಹೋಗೋಣು ಬಾ ಎಂದ. ನಾನು ಬೇಡ ಎಂದರೂ ಒತ್ತಾಯದಿಂದ ಕರೆದುಕೊಂಡು ಹೋದ. ಆತನಿಗೆ ಎಷ್ಟೇ ಸಿಟ್ಟು ಬಂದರೂ ಮುಖದ ಹಾವಭಾವದಲ್ಲಿ ಬದಲಾವಣೆ ಆಗುತ್ತಿರಲಿಲ್ಲ. ಗಂಭೀರ ವ್ಯಕ್ತಿತ್ವದ ಆತ ಮಾಡನಾಡಿದ್ದೇ ಕಡಿಮೆ. ಗ್ರೌಂಡ್‌ಗೆ ಹೋಗಿ ಆ ಹುಡುಗನನ್ನು ಹುಡುಕಿದೆವು. ಆತ ಸಿಗಲಿಲ್ಲ.

ಜಗ್ಗೂಗೆ ತನ್ನ ಸಾಮರ್ಥ್ಯದ ಬಗ್ಗೆ ಬಹಳ ಅಭಿಮಾನವಿತ್ತು. ಕೆಲವೊಂದು ಸಲ ನಾವು ಕೀಟಲೆ ಮಾಡುತ್ತಿದ್ದೆವು. ನಮ್ಮ ಷಡ್ಯಂತ್ರ ಆತನಿಗೆ ಗೊತ್ತಾಗುತ್ತಿರಲಿಲ್ಲ. ಒಂದು ಸಲ ಕ್ಲಾಸಿಗೆ ಹೋಗುವಾಗ ಒಬ್ಬ ಗೆಳೆಯ ಒಂದು ಸ್ಟಿಕ್ ತೆಗೆದುಕೊಂಡು ಇದನ್ನು ಮೊಣಕಾಲ ಮೇಲೆ ಇಟ್ಟು ಮುರಿದರೆ ನಿಜವಾದ ಗಂಡಸು ಎಂದು ಹೇಳಿದ. ತಾನು ಮುರಿದು ತೋರಿಸುವುದಾಗಿ ಮೊಳಕಾಲ ಮೇಲೆ ಇಟ್ಟು ಜೋರಾಗಿ ಒತ್ತುವ ನಾಟಕ ಮಾಡಿದ. ಕೊನೆಗೆ ಅಯ್ಯೋ ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ. ಇನ್ನೊಬ್ಬ ಕೂಡ ಅದೇ ರೀತಿಯ ನಾಟಕ ಆಡಿದ. ಕ್ಲಾಸಿಗೆ ಹೊತ್ತಾಯಿತು ನಡಿರೋ, ಈ ನಾಟಕ ಸಾಕು ಎಂದೆ. ಈಗ ಜಗ್ಗೂನ ಸರದಿ ಇತ್ತು. ಆತ ಆಗಲೆ ಕ್ರಿಯಾಶೀಲವಾಗಿದ್ದ. ನಾನು ಹೇಳಿದರೂ ಕೇಳಲಿಲ್ಲ. ಮಧ್ಯಾಹ್ನದ ಬಿಡುವಿನ ವೇಳೆ ರೂಮಿಗೆ ಬಂದಾಗ ಮೊಣಕಾಲು ಹಣ್ಣು ಹಣ್ಣು ಮಾಡಿಕೊಂಡು ಕುಳಿತಿದ್ದ. ಆ ಸ್ಟಿಕ್ ಹಾಗೇ ಇತ್ತು. ಹೀಗೆ ಆತ ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದ.

ಜಗ್ಗು ಸದಾ ನ್ಯಾಯದ ಪಕ್ಷಪಾತಿಯಾಗಿದ್ದ. ಹೈಸ್ಕೂಲ್ ಗ್ಯಾದರಿಂಗ್ ವೇಳೆ ಹೊರಗಿನಿಂದ ಕೆಲ ಉಡಾಳ ಹುಡುಗರು ಬಂದು ಹುಡುಗಿಯರಿಗೆ ಕಾಡಿಸುತ್ತಿದ್ದರು. ನಾವು ಮೂರ್ನಾಲ್ಕು ಜನ ಸೇರಿ ಜಗ್ಗು ನೇತೃತ್ವದಲ್ಲಿ ಅಂಥವರಿಗೆ ಪಾಠ ಕಲಿಸಲು ಗ್ಯಾದರಿಂಗ್ ಸುತ್ತೆಲ್ಲ ತಿರುಗುತ್ತಿದ್ದೆವು. ಪಾಟಣಕರ್ ಎಂಬ ಬಂಗಾರದಂಗಡಿಯ ತೆಳ್ಳನೆಯ ಹುಡುಗ ಎಗ್ರೆಸಿವ್ ಆಗಿದ್ದ. ಬೆಳ್ಳಗೆ ಇದ್ದ ಆತ ಉದ್ದನೆಯ ಕೂದಲು ಬಿಟ್ಟಿದ್ದ. ಆ ದಿನ ಕಪ್ಪು ಬಟ್ಟೆ ತೊಟ್ಟುಕೊಂಡಿದ್ದ. ಆತನ ಗ್ಯಾಂಗ್ ಹುಡುಗಿಯರನ್ನು ಚುಡಾಯಿಸುವಲ್ಲಿ ನಿರತವಾಗಿತ್ತು. ನಾವಾರೂ ಜಗ್ಗೂನ ಹಾಗೆ ಧೈರ್ಯಶಾಲಿ ಆಗಿದ್ದಿಲ್ಲ. ಆದರೆ ಆತನಿಗೆ ಬೆಂಬಲಿಗರಾಗಿ ಹೋಗುತ್ತಿದ್ದೆವು. ಅಂಥವರನ್ನು ಮಾತಿನಲ್ಲಿ ಸೋಲಿಸುವ ಚಾಣಾಕ್ಷತನ ನನ್ನಲ್ಲಿತ್ತು. ಆದರೆ ಅಂದು ನಡೆಯಲಿಲ್ಲ. ಆ ಹುಡುಗನ ಹಾರಾಟ ಬಹಳವಾಯಿತು. ಜಗ್ಗು ಆತನಿಗೆ ಸರಿಯಾಗಿ ಬಾರಿಸಿದ. ಅಭಿಮನ್ಯುವಿನ ಹಾಗೆ ಆ ಗ್ಯಾಂಗ್ ಓಡಿಹೋಗುವಹಾಗೆ ಮಾಡಿದ. ನಂತರ ಕೆಲ ದಿನಗಳವರೆಗೆ ಅವರು ಜಗ್ಗುಗೆ ಹೊಡೆಯಲು ಗುಂಪು ಕಟ್ಟಿಕೊಂಡು ಓಡಾಡಿದರು. ಆದರೆ ಯಶಸ್ಸು ಸಾಧಿಸಲಿಲ್ಲ.

ಮುಂದೆ ಕೆಲ ವರ್ಷಗಳ ನಂತರ ಜಗ್ಗು ವಿಜಾಪುರ ಮುನಿಸಿಪಾಲಿಟಿ ಪ್ರೆಸಿಡಂಟ್ ಆದ. ಒಂದೊಂದು ಸಲ ಬೆಳಿಗ್ಗೆಯೆ ಸ್ವಚ್ಛತಾ ಕಾರ್ಯ ವೀಕ್ಷಿಸಲು ನಾವಿಗಲ್ಲಿಗೂ ಬರುತ್ತಿದ್ದ. ಆ ನಮ್ಮ ಮನೆ ಮುಂದೆ ಬಂದು ಮಾತನಾಡಿಸಿ ಒಳಗೆ ಬರದೆ ಹೋಗುತ್ತಿದ್ದ.

ಬಹಳ ವರ್ಷಗಳ ನಂತರ ನಾನು ಗುಲ್ಬರ್ಗಾದಲ್ಲಿದ್ದಾಗ ಬಸ್ ಸ್ಟ್ಯಾಂಡ್ ಬಳಿ ಒಬ್ಬ ವ್ಯಕ್ತಿ ಬಾಪು ಹಾಗೆ ಹೋಗುತ್ತಿದ್ದ. ಅದಾಗಲೆ ಒಂದು ಸಲ ಅವನನ್ನು ನೋಡಿ ದಶಕ ಕಳೆದಿತ್ತು. ಮುಖಚರ್ಯೆ ಬಾಪು ಹಾಗೆ ಕಾಣುತ್ತಿದ್ದುದರಿಂದ ಬಾಪು ಎಂದು ಕೂಗಿದೆ. ಆತ ಹೊರಳಿ ನೋಡಿದ. ಖುಷಿಯಾಯಿತು. ಇಲ್ಲೇಕೆ ಎಂದು ಕೇಳಿದ. ಟ್ರಾನ್ಸ್‍ಫರ್ ಆಗಿದೆ ಎಂದೆ. ನೀನೇಕೆ ಇಲ್ಲಿ ಎಂದೆ. ಬಂದೇ ನವಾಜ್ ನಮ್ಮ ಮನೆ ದೇವರು. ಇಂದು ಉರುಸ್ ಇದೆಯಲ್ಲ. ದರ್ಗಾಕ್ಕೆ ಹೋಗಿ ಹಣ್ಣು ಕಾಯಿ ಕೊಟ್ಟು ನಮಸ್ಕರಿಸಿ ಬರುವೆ ಎಂದ. ಇದು ನಮ್ಮ ಭಾರತ. ಈ ಹಿಂದು ಮುಸ್ಲಿಂ ಹೆಸರಲ್ಲಿ ಹೊಡೆದಾಡುವ ಮೂರ್ಖರಿಗೆ ಈ ದೇಶ ಅರ್ಥ ಆಗುವುದೆ ಎಂದು ಅನಿಸಿತು. ಜಗ್ಗು ಬಗ್ಗೆ ಕೇಳಿದೆ. ಆತನ ಕಥೆ ಕೇಳಿ ದಂಗಾದೆ.
ಜಗ್ಗು ಮನೆಯಲ್ಲಿ ಅದಾವುದೋ ವಿಷಯಕ್ಕೆ ಅಣ್ಣ ತಮ್ಮಂದಿರಲ್ಲಿ ಜಗಳ ನಡೆದ ಸಂದರ್ಭದಲ್ಲಿ ಅನ್ಯಾಯ ಸಹಿಸದ ಜಗ್ಗು ಅಣ್ಣನ ಮೇಲೆ ಕೈ ಮಾಡುವಾಗ ಅಡ್ಡ ಬಂದ ತಂದೆಗೆ ಪೆಟ್ಟಾಗಿ ಅವರು ಕೊನೆಯುಸಿರೆಳೆದರು. ಜಗ್ಗೂನ ಬದುಕು ನರಕವಾಯಿತು. ಅದೇನೇನೋ ಆಯಿತು. ಮನೆ ಬಿಟ್ಟು ಹೋದವ ಬಹಳ ವರ್ಷಗಳ ನಂತರ ಬಂದಾಗ ಮಗ ಪೊಲೀಸ್ ಆಗಿ ಬೇರೆ ಕಡೆ ನೌಕರಿ ಮಾಡುತ್ತಿದ್ದ. ಹೆಂಡತಿ ಈ ಅನಾಹುತದಿಂದಾಗಿ ಬಹಳ ನೋವು ಮತ್ತು ಕಷ್ಟಗಳನ್ನು ಅನುಭವಿಸಿರಬೇಕು. ಆಕೆ ಮಗನ ಜೊತೆ ಇದ್ದಳು.

ವಿಜಾಪುರಕ್ಕೆ ಹೋದಾಗಲೆಲ್ಲ ಜಗ್ಗುನನ್ನು ಹುಡುಕುವ ಪ್ರಯತ್ನ ಮಾಡಿದೆ. ಅವರಿವರಿಗೆ ಕೇಳುತ್ತಲೇ ಇದ್ದೆ. ಕೊನೆಗೆ ಒಂದು ದಿನ ಸಿಕ್ಕ. ಆತ ಸೊರಗಿದ್ದ. ಆದರೆ ಅದೇ ಘನತೆಯಿಂದ ಕೂಡಿದವನಾಗಿದ್ದ. ಅವನಿಗೆ ಸ್ವಂತ ಮನೆ ಎಂಬುದು ಇರಲಿಲ್ಲ. ಯಾರದೋ ಅಂಗಡಿಯಲ್ಲಿ ಕೆಲಸ ಮಾಡುತ್ತ ಅಲ್ಲೇ ವಾಸ್ತವ್ಯ ಹೂಡಿದ್ದ. ಅವನ ಪರಿಸ್ಥಿತಿ ನನ್ನನ್ನು ಬಹಳ ಅಲುಗಾಡಿಸಿತು. ಆ ಕ್ಷಣದಲ್ಲಿ ನನ್ನ ಬಳಿ ಹೆಚ್ಚಿಗೆ ಹಣವಿರಲಿಲ್ಲ. ಒಂದುವೇಳೆ ಇದ್ದಿದ್ದರೆ ಒತ್ತಾಯ ಮಾಡಿ ಕೊಡಬಹುದಿತ್ತು. ಅದಾಗಲೆ ಮೊಬೈಲ್ ಬಂದಿತ್ತು. ಮೊಬೈಲ್ ನಂಬರ್ ಕೇಳಿದೆ. ಮೊಬೈಲ್ ಇಲ್ಲ ಎಂದು ಹೇಳಿದ. ಆತನಿಗೆ ಒಂದು ಮೊಬೈಲ್ ಕೊಡಿಸುವ ಯೋಗ್ಯತೆ ಕೂಡ ಇಲ್ಲ ಎಂಬ ನನ್ನ ಸ್ಥಿತಿಗೆ ನಾನೇ ಹೇಸಿಕೊಂಡೆ. ನಾನು ಹೋದಕೂಡಲೆ ಹಣ ಎಂ.ಓ. ಮಾಡುವೆ ವಿಳಾಸ ಕೊಡು ಎಂದೆ. ನನಗೆ ಹಣ ಬೇಡ. ನನ್ನ ಹೆಂಡತಿ ಮಗನ ಜೊತೆ ಇರುವ ಆಸೆಯಿದೆ. ಆದರೆ ಅವರು ತಿರಸ್ಕಾರದಿಂದ ನೋಡುತ್ತಾರೆ ಎಂದ. ಸ್ವಾಭಿಮಾನಿ ಜಗ್ಗೂಗೆ ಅದೊಂದೇ ನೋವು ಕಾಡುತ್ತಿತ್ತು ಎಂಬುದು ಸ್ಪಷ್ಟವಾಗಿತ್ತು.

ಆತನನ್ನು ಮತ್ತೆ ಮತ್ತೆ ಹುಡುಕಿದೆ. ಸಿಗಲಿಲ್ಲ. ಏನಾಯಿತೋ ಎಂದು ಚಿಂತಿಸುವಾಗ ನೋವು ಎದುರಾಗುವುದು.

(ಚಿತ್ರಗಳು: ಸುನೀಲ ಕುಮಾರ ಸುಧಾಕರ)