ಇಲ್ಲಿರುವ ಕಥೆಗಳ ಕಥಾವಸ್ತು ಬಹುತೇಕ ಮನುಷ್ಯರ ಕಷ್ಟ ಸುಖ ನೋವು ನಲಿವಿನದೇ ಆಗಿದ್ದರೂ, ಕಥೆಗಳ ಮೂಲಕ ಹೊರಬರುವ ವ್ಯಾಕುಲತೆ ಸ್ಪಂದನೆ ಲೇಖಕರಿಗೆ ಇರುವ ಬದುಕಿನ ಅನುಭವಗಳಿಂದಲೇ ಮೂಡಿರಬಹುದು, ಹಾಗಾಗಿ ಅವುಗಳು ಗಟ್ಟಿ ಕಥೆಗಳಾಗಿ ರೂಪುಗೊಂಡಿವೆ. ಇನ್ನು ನಿರೂಪಣೆಗೆ ಬಂದರೆ ಬಹುಶಃ ಮಾಸ್ತಿಯವರಂತೆ ಲೇಖಕಿಯು ಕವಯಿತ್ರಿಯೂ ಆಗಿರುವುದರಿಂದ ಇರಬೇಕು ಕಥೆಗಳನ್ನು ನಿರೂಪಿಸುವುದಕ್ಕೆ ಬಳಸುವ ಉಪಮೆಗಳು ಸಂದರ್ಭೋಚಿತವಾಗಿದ್ದು ಇವುಗಳಿಂದ ಹೊರಹೊಮ್ಮುವ ಭಾವನೆಗಳು ನೇರವಾಗಿ ಓದುಗರನ್ನು ತಟ್ಟುತ್ತವೆ. ಈ ಮೂರು ಅಂಶಗಳಿಂದ ಲೇಖಕಿಯು ಉತ್ತಮ ಕತೆಗಾರರ ಪಟ್ಟಿಯನ್ನೇರುವುದರಲ್ಲಿ ಸಂಶಯವೇ ಇಲ್ಲ.
ತೇಜಸ್ವಿನಿ ಹೆಗಡೆ ಕಥಾ ಸಂಕಲನ “ಜೋತಯ್ಯನ ಬಿದಿರು ಬುಟ್ಟಿ”ಯ ಕುರಿತು ಸಿಂಧು ಜಗನ್ನಾಥ್‌ ಬರಹ

ಕನ್ನಡದಲ್ಲಿ ಸಣ್ಣ ಕಥೆಗಳನ್ನು ಓದಬೇಕೆಂದರೆ ಪತ್ರಿಕೆಗಳನ್ನೇ ಕಾಯುವ ಕಾಲ ಒಂದಿತ್ತು. ಆದರೆ ಈಗ ಹಲವಾರು ರೀತಿಯಲ್ಲಿ ಸಮಗ್ರವಾಗಿ ನಮಗೆ ದೊರಕುವ ಕಥಾ ಸಂಕಲನಗಳು ಒಂದು ರೀತಿಯಲ್ಲಿ ಕಾದಂಬರಿಯ ನಂತರ ಜನಪ್ರಿಯ ಪ್ರಕಾರವೆಂದೆ ಹೇಳಬಹುದು. ಸಣ್ಣ ಕಥೆಗಳನ್ನು ಬರೆಯುವುದು ನನ್ನ ಮಟ್ಟಿಗೆ ಕಷ್ಟವೇ. ಏಕೆಂದರೆ ಲೇಖಕರು ಹೇಳ ಬಯಸುವುದನ್ನೆಲ್ಲಾ ಹೆಚ್ಚು ವಿಸ್ತರಿಸದೆ ನೇರವಾಗಿ ಕಥೆಯ ಮೂಲಕ್ಕೆ ಕೈ ಹಾಕಬೇಕು. ಹಾಗೆ ಓದುಗರಿಗೆ ತಲುಪಬೇಕಾದ ಭಾವನೆಗಳಾಗಲಿ, ವಿಚಾರಗಳಾಗಲಿ, ಲೋಪವಿಲ್ಲದಂತೆ ಕಥೆಯಲ್ಲಿ ಬರುವ ಎಲ್ಲಾ ಆಯಾಮಗಳನ್ನು ಬಿಡದೆಯೂ ಹೆಚ್ಚು ಎಳೆಯದೆಯೂ ಓದುಗರ ಮನಮುಟ್ಟುವಂತೆ, ಬರೆಯುವುದು ಸುಲಭದ ಮಾತಲ್ಲ.

(ತೇಜಸ್ವಿನಿ ಹೆಗಡೆ)

ನನಗೆ ಮಾಸ್ತಿಯವರ ಸಣ್ಣ ಕಥೆಗಳು ಬಹಳ ಇಷ್ಟ ಏಕೆಂದರೆ ಅವರ ಕಥೆಗಳಲ್ಲಿ ಯಾವ ಉತ್ಪ್ರೇಕ್ಷೆಯು ಇಲ್ಲದೇ ಜೀವನದಲ್ಲಿ ಎಲ್ಲರೂ ಸರಿಸಮ ಕಾಣುವುದನ್ನೇ, ಆ ಸಹಜತೆಯನ್ನೇ ತಿಳಿಹಾಸ್ಯದೊಂದಿಗೆ ಬೆರೆಸಿ ಮತ್ತೊಂದು ದೃಷ್ಟಿಕೋನದಿಂದ ಕಥೆ ಹೇಳುವ ರೀತಿ, ಮತ್ತು ಅವುಗಳಲ್ಲಿನ ಗ್ರಾಮೀಣ ಸೊಗಡು ಬಹಳ ಚೆನ್ನ. ಅಂತಹದ್ದೇ ಸಣ್ಣ ಕಥೆಗಳನ್ನು ಮತ್ತೆ ಓದಬೇಕೆಂಬ ಹಪಹಪಿಯನ್ನು ನೀಗಿಸುವಂತೆಯೇ ವಾರದ ಹಿಂದೆ ಯುವಕತೆಗಾರ್ತಿ ತೇಜಸ್ವಿನಿ ಹೆಗಡೆ ಬರೆದಂತಹ ಹೊಸ ಕಥಾ ಸಂಕಲನ ಜ್ಯೋತಯ್ಯನ ಬಿದಿರು ಬುಟ್ಟಿ ಕೈ ಸೇರಿತ್ತು. ಈ ಹಿಂದೆ ಅವರ ಕವನ ಸಂಕಲನ ಕಾದಂಬರಿಗಳನ್ನು ಓದಿ ಆನಂದಿಸಿ ಮೆಚ್ಚಿದ ನನಗೆ, ಈ ಕಥಾ ಸಂಕಲನ ಕೈ ಸೇರಿದ್ದೆ ತಡ ಅಂದೇ ಮೊದಲ ಎರಡು ಕಥೆಗಳನ್ನು ಓದಿ ಮುಗಿಸಿದೆ. ಆಗ ನನಗನ್ನಿಸಿದ್ದು= ಈ ಕಥೆಗಳನ್ನು ನಿಜವಾಗಲು ಆಸ್ವಾದಿಸಬೇಕಾದರೆ ದಿನಕ್ಕೊಂದು ಕಥೆಯನ್ನು ಮಾತ್ರ ಓದಬೇಕು ಮತ್ತು ಆ ಕಥೆಯನ್ನು ಮೆಲುಕು ಹಾಕುತ್ತಾ ಆ ಪಾತ್ರಗಳಲ್ಲಿ ನಾವು ಒಂದಾಗಬೇಕು. ಆಗ ಲೇಖಕಿ ನುರಿತ ಶಿಲ್ಪಿಯಂತೆ ಕೆತ್ತಿರುವ ಅದ್ಭುತ ಪಾತ್ರಗಳ ಮೂಲಕ ಜೀವನ ಒಡ್ಡುವ ಎಷ್ಟೇ ಕ್ಲಿಷ್ಟಕರವಾದ ಸವಾಲುಗಳನ್ನಾಗಲಿ ಎದುರಿಸಿ ಬದುಕನ್ನು ಕಟ್ಟುಕೊಳ್ಳುವ ರೀತಿ ಮನದಟ್ಟಾಗುತ್ತದೆ.

ಕಥಾ ಸಂಕಲನದ ಬಗ್ಗೆ ಹೇಳುವುದಕ್ಕೆ ಮುನ್ನ ಕೊಂಚ ಲೇಖಕಿಯ ಕಥೆ ಹೇಳುವ ಪರಿ ಅಥವಾ ಈ ಕಥಾಸಂಕಲನ ಅಷ್ಟೇಕೆ ನನಗೆ ಆಪ್ತವಾಯಿತು ಎಂದು ಹೇಳಬಯಸುವೆ. ಸಣ್ಣ ಕಥೆಯಾಗಲಿ ಕಾದಂಬರಿಯಾಗಲಿ ಅಥವಾ ಸಾಹಿತ್ಯದ ಯಾವುದೇ ಪ್ರಕಾರಗಳಾಗಲಿ ಓದುಗರನ್ನು ಸಂಪಾದಿಸಬೇಕಾದರೆ ಕಥೆ ಹೇಳುವ ಅಥವಾ ಬರೆಯುವ ರೀತಿ ಬಹು ಮುಖ್ಯ. ಈ ಕಥಾ ಸಂಕಲನವನ್ನು ಓದಿ ಮೆಚ್ಚಿದ ನನಗೆ ಲೇಖಕಿಯ ಕಥೆ ಹೇಳುವ ವೈಖರಿಯಲ್ಲಿ ಮೂರು ಪ್ರಮುಖ ಅಂಶಗಳು ಕಂಡವು. ಅವೇ ನನಗೆ ಈ ಕಥಾ ಸಂಕಲನವನ್ನು ಬಹಳ ಆಪ್ತವಾಗಿಸಿ ಬಿಟ್ಟಿತು.

ಮೊದಲನೆಯ ಅಂಶವೆಂದರೆ ಇಲ್ಲಿ ಬರುವ ಎಲ್ಲಾ ಕಥೆಗಳು ಕುತೂಹಲ ಕೆರಳಿಸಿ ಓದುಗರನ್ನು ಗಟ್ಟಿಯಾಗಿ ಹಿಡಿದುಕೊಂಡು ಹೋಗುತ್ತಾ ಅವರು ಊಹಿಸಲೂ ಆಗದ ಅಂತ್ಯವನ್ನು ಮುಟ್ಟಿಸಿ ಬಿಡುವ ಪರಿ ಲೇಖಕಿಯ ಕಥಾಹಂದರದ ಮೇಲಿನ ಹಿಡಿತವನ್ನು ಎತ್ತಿ ಹಿಡಿಯುತ್ತದೆ.

ಎರಡನೆಯ ಅಂಶವೆಂದರೆ ಕಥೆಗಳಲ್ಲಿ ಬಳಸಿರುವ ಭಾಷೆ. ಕಥೆಗಳ ಕಾಲ, ನಡೆಯುವ ಸ್ಥಳಗಳನ್ನು ನಿರ್ಧರಿಸುವ, ಪಾತ್ರಗಳನ್ನು ಜೀವಂತಗೊಳಿಸುವ, ಕಥೆಗಳಿಗೆ ಬಲ ನೀಡುವ ಸಾಮರ್ಥ್ಯ ಇರುವುದೇ ಭಾಷೆಗೆ. ಅಂತೆಯೇ ಇಲ್ಲಿ ಬರುವ ಕಥೆಗಳಲ್ಲಿನ ಪ್ರಾಂತ್ಯಗಳನ್ನು ಬಿಂಬಿಸುವಲ್ಲಾಗಲಿ, ಗ್ರಾಮೀಣ ಕಥೆ ಹೇಳುವುದಕ್ಕಾಗಲಿ, ಐತಿಹಾಸಿಕ ಘಟನೆಯನ್ನು ಹೇಳುವುದಕ್ಕಾಗಲಿ, ಆಧುನಿಕ ಕಥೆಗಳನ್ನು ಹೇಳುವುದಕ್ಕಾಗಲಿ, ಬಳಸಿರುವ ಭಾಷೆ ಸರಳ ಹಾಗೂ ನಿರಾಡಂಬರವಾಗಿದ್ದರೂ ಪ್ರಾಂತ್ಯಕ್ಕೆ ತಕ್ಕಂತೆ ಸಮಯವನ್ನು ಸೂಚಿಸುವಂತೆ ಇರುವುದು ಗಮನಾರ್ಹ.

ಇನ್ನು ಮೂರನೆಯ ಹಾಗೂ ಬಹು ಮುಖ್ಯ ಅಂಶವಾದ ಕಥಾ ವಸ್ತುಗಳು ಮತ್ತು ನಿರೂಪಣಾ ಶೈಲಿ. ಇಲ್ಲಿರುವ ಕಥೆಗಳ ಕಥಾವಸ್ತು ಬಹುತೇಕ ಮನುಷ್ಯರ ಕಷ್ಟ ಸುಖ ನೋವು ನಲಿವಿನದೇ ಆಗಿದ್ದರೂ, ಕಥೆಗಳ ಮೂಲಕ ಹೊರಬರುವ ವ್ಯಾಕುಲತೆ ಸ್ಪಂದನೆ ಲೇಖಕರಿಗೆ ಇರುವ ಬದುಕಿನ ಅನುಭವಗಳಿಂದಲೇ ಮೂಡಿರಬಹುದು, ಹಾಗಾಗಿ ಅವುಗಳು ಗಟ್ಟಿ ಕಥೆಗಳಾಗಿ ರೂಪುಗೊಂಡಿವೆ. ಇನ್ನು ನಿರೂಪಣೆಗೆ ಬಂದರೆ ಬಹುಶಃ ಮಾಸ್ತಿಯವರಂತೆ ಲೇಖಕಿಯು ಕವಯಿತ್ರಿಯೂ ಆಗಿರುವುದರಿಂದ ಇರಬೇಕು ಕಥೆಗಳನ್ನು ನಿರೂಪಿಸುವುದಕ್ಕೆ ಬಳಸುವ ಉಪಮೆಗಳು ಸಂದರ್ಭೋಚಿತವಾಗಿದ್ದು ಇವುಗಳಿಂದ ಹೊರಹೊಮ್ಮುವ ಭಾವನೆಗಳು ನೇರವಾಗಿ ಓದುಗರನ್ನು ತಟ್ಟುತ್ತವೆ. ಈ ಮೂರು ಅಂಶಗಳಿಂದ ಲೇಖಕಿಯು ಉತ್ತಮ ಕತೆಗಾರರ ಪಟ್ಟಿಯನ್ನೇರುವುದರಲ್ಲಿ ಸಂಶಯವೇ ಇಲ್ಲ.

ಮೊದಲನೆಯ ಅಂಶವೆಂದರೆ ಇಲ್ಲಿ ಬರುವ ಎಲ್ಲಾ ಕಥೆಗಳು ಕುತೂಹಲ ಕೆರಳಿಸಿ ಓದುಗರನ್ನು ಗಟ್ಟಿಯಾಗಿ ಹಿಡಿದುಕೊಂಡು ಹೋಗುತ್ತಾ ಅವರು ಊಹಿಸಲೂ ಆಗದ ಅಂತ್ಯವನ್ನು ಮುಟ್ಟಿಸಿ ಬಿಡುವ ಪರಿ ಲೇಖಕಿಯ ಕಥಾಹಂದರದ ಮೇಲಿನ ಹಿಡಿತವನ್ನು ಎತ್ತಿ ಹಿಡಿಯುತ್ತದೆ.

ಇನ್ನು ‘ಜ್ಯೋತಯ್ಯನ ಬಿದಿರು ಬುಟ್ಟಿ’ ಕಥಾಸಂಕಲನಕ್ಕೆ ಬರುವುದಾದರೆ ಇದು 10 ಕಥೆಗಳುಳ್ಳ ಪುಟ್ಟ ಸಂಕಲನ. ನನ್ನ ಅಂತರಂಗವನ್ನು ಕಲಕಿ ಭಾವುಕಳನ್ನಾಗಿಸಿದ್ದು ‘ನೂಪುರ’ ಮತ್ತು ‘ನೀಲಿನಕ್ಷತ್ರ’ ಕಥೆಗಳು. ನೂಪುರದಲ್ಲಿನ ನಾಯಕಿ ದೀಪ್ತಿಯ ನೋವು ನಿರಾಶೆ ಹೇಗೆ ಕಲೆಯಲ್ಲಿ ಅಂತ್ಯ ಕಂಡು, ಜೀವನದಲ್ಲಿ ನಡೆದ ದುರ್ಘಟನೆಯ ಮೂಲವನ್ನೇ ಆಧಾರವಾಗಿಟ್ಟುಕೊಂಡು ಜೀವನದ ಕನಸನ್ನು ನನಸಾಗಿಸಿ ಸಂತೋಷವನ್ನು ಕಂಡುಕೊಂಡರೆ, ನೀಲಿ ನಕ್ಷತ್ರದ ವಾರಿಜತ್ತೆಯ ದುರಾದೃಷ್ಟದ ನೀರಸ ಬದುಕು ದುಃಖ ಉಂಟು ಮಾಡಿದರೂ, ಅವರ ಮಡುಗಟ್ಟಿರುವ ನೋವನ್ನು ಒಮ್ಮೆಲೇ ಹೊರ ಹಾಕುವಂತೆ ಅವರನ್ನು ಪ್ರೇರೇಪಿಸಿ ಆ ಭಾರದಿಂದ ವಿಮುಕ್ತಿ ಮಾಡಿದ ಶಾರ್ವರಿ ಕಂಡದ್ದು ದುಗುಡದ ಬದುಕನ್ನು ಲೆಕ್ಕಿಸದೆ ಸಂತೋಷವನ್ನು ಜೀವನದ ಒಂದು ಚಿಕ್ಕ ಸಿಹಿ ಸಂಗತಿಯನ್ನೇ ಹಿಡಿದು ಬದುಕಿರುವ ತುಂಬು ಹೃದಯದ ಹಿರಿಜೀವವನ್ನು!

ಸಂಕಲನದ ಹೆಸರೇ ಆದ ‘ಜೋತಯ್ಯನ ಬಿದುರು ಬುಟ್ಟಿ’ಯ ಜೋತಯ್ಯ ಓರ್ವಸಾಮಾನ್ಯ ಆಳಾದರೂ ಜೀವನದ ಬಹುಮುಖ್ಯ ಪಾಠವನ್ನು ಯಾರೂ ಎಂದೂ ಮರೆಯಲಾಗದಂತೆ ಕಲಿಸಿ ಬಿಡುವ. ಏನನ್ನು ಹೇಳದೆ ಬರೀ ತನ್ನ ತಂದೆಯಾದ ಕರ್ತವ್ಯವನ್ನು ನಿಭಾಯಿಸುವ ರೀತಿ ಎಂತಹ ಹೃದಯವನ್ನು ಸಹ ಕರಗಿಸಿ ಬಹುಕಾಲ ಅವನು ಮನದಲ್ಲಿ ಉಳಿದುಬಿಡುತ್ತಾನೆ.

‘ಯಶವಂತಿ’ ಮನುಷ್ಯರಿಗಿಂತ ಪ್ರಾಣಿಗಳ ಸ್ವಾಮಿ ನಿಷ್ಠೆ ಎಷ್ಟರ ಪಟ್ಟು ಹೆಚ್ಚಿರುತ್ತದೆ ಎಂಬುದನ್ನು, ಪಾಲಕರ ಮೇಲಿನ ಪ್ರೀತಿ ಅವರ ಕ್ಷೇಮಕ್ಕಾಗಿ ಮಿಡಿಯುವ ಮನಸ್ಸನ್ನು ಬಿಂಬಿಸುತ್ತದೆ.

‘ರತ್ನಗಂಧ’ದ ರತ್ನ ತನ್ನ ಜೀವನದ ಪ್ರಮುಖ ನಿರ್ಧಾರವನ್ನು ಹಳ್ಳಿಗರ, ಸಮಾಜದ ವಿರುದ್ಧವಾಗಿ ತೆಗೆದುಕೊಂಡು ಅದನ್ನು ಸಮರ್ಥಿಸಿಕೊಳ್ಳುವ ಪರಿ ಮತ್ತು ತನ್ನ ಸ್ವತಂತ್ರ ಮನೋಭಾವವನ್ನು ಪ್ರದರ್ಶಿಸುವ ರೀತಿ ಓದುಗರಿಂದ ಶಭಾಷ್ ರತ್ನ ಎಂಬ ಉದ್ಗಾರವನ್ನು ಅಪ್ರಯತ್ನಕವಾಗಿ ಹೊರಡಿಸಿಕೊಳ್ಳುತ್ತದೆ. ‘ಹಸಿರು ಪತ್ತಲ’ ಕತೆ ಸಂಬಂಧಗಳ ಮತ್ತು ಒಲವಿನ ತ್ರಾಣ ಬಹು ದೂರ ಸಾಗಬಲ್ಲವೂ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿಕೊಡುತ್ತದೆ.

‘ತಿರುವಿನಾಚೆಯ ಸತ್ಯ’ ಈ ಕಥೆಯಲ್ಲಿನ ಸಂಬಂಧಗಳ ಬಳಕೆ ಬಹಳ ಆಶ್ಚರ್ಯಕರವಾದದ್ದು. ಸ್ವಾರ್ಥಕ್ಕಾಗಿ ತನ್ನ ಕೆಲಸಕ್ಕಾಗಿ ಸೀಮಾಳನ್ನು ಉಪಯೋಗಿಸಿಕೊಳ್ಳ ಬಯಸುವ ಹರೀಶ್ ಮಾವ ಒಂದು ಕಡೆಯಾದರೆ ಒಂದು ಕಾಲದಲ್ಲಿ ಸೀಮಾ ನನ್ನ ಸ್ನೇಹಿತೆ ಎಂದು ಪ್ರಾಣಾಪಾಯವನ್ನು ಲೆಕ್ಕಿಸದೆ ಅವಳ ಸಹಾಯಕ್ಕಾಗಿ ಬಂದು ನಿಲ್ಲುವ ವಾಣಿ ಇಬ್ಬರೂ ತಿರುವಿನಾಚೆಯ ಸತ್ಯಗಳೇ.

‘ಬಾಳೆ ಮರ’ ಒಂದು ಗ್ರಾಮೀಣ ಸೊಗಡಿನ ಸಾಮಾಜಿಕ ಕಥೆಯಾದರೂ ಸಮಾಜದಲ್ಲಿನ ಒಳಿತು ಕೆಡುಕು ಪಾತ್ರಗಳ ಮೂಲಕ ಹೇಳುವ ಒಂದು ಚಂದದ ಕಥೆ.

‘ತೀರದ ಯಾನ’ ದಾಂಪತ್ಯದಲ್ಲಿನ ಅಸಹಾಯಕತೆಗೆ ನಾಂದಿ ಹಾಡುವ ದಿಟ್ಟತನದಿಂದ ನಿರ್ಣಾಯಕವಾಗಿ ನಿಲ್ಲುವ ಸುಮಾ ಅವಳನ್ನು ಸಂತೈಸಿ ಹೋಗಲು ಬಂದ ವಸುಧ, ಈ ಇಬ್ಬರೂ ಹೆಂಗಳೆಯರ ನೆನಪಿನ ದೋಣಿಯಲ್ಲಿ ಬರುವ ಕಾಳಜಿ… ಮೂವರು ಸೇರಿ ಜೀವನದ ಪಾಠಗಳನ್ನು ಅಲೆ ಅಲೆಯಾಗಿ ಕಲಿಸುವರು.

‘ಮುಸ್ಸಂಜೆ ಬೆಳಕು’ ನಿಜಕ್ಕೂ ವಿಷ್ಣು ಮಾಸ್ತರರ ಮೂಲಕ ಕಳೆದುಕೊಂಡದ್ದನ್ನು ಮತ್ತೆ ಪಡೆಯುವ ಒಂದು ವಿಶಿಷ್ಟವಾದ ಹಾಗೂ ಬೆಳಕಿನ ಮಾರ್ಗವನ್ನು ತೋರಿಸುವ ಸೊಗಸಾದ ಪುಟ್ಟ ಕಥೆ. ಪುಸ್ತಕ ಚಿಕ್ಕದಾದರೂ ಬದುಕಿನ ಬಹುದೊಡ್ಡ ಪಾಠಗಳನ್ನೇ ಕಲಿಸಿ ಬಿಡುವ ಅತ್ಯುತ್ತಮ ಕಥಾ ಸಂಕಲನ ಎಂಬುದು ನನ್ನ ಅಭಿಪ್ರಾಯ.

(ಕೃತಿ: ಜೋತಯ್ಯನ ಬಿದಿರು ಬುಟ್ಟಿ (ಕಥಾ ಸಂಕಲನ), ಲೇಖಕರು: ತೇಜಸ್ವಿನಿ ಹೆಗಡೆ, ಪ್ರಕಾಶಕರು: ತೇಜು ಪಬ್ಲಿಕೇಷನ್ಸ್‌, ಬೆಲೆ 120/-)