ಎಳವೆಯಲ್ಲಿಯೇ ಪಟೇಲರು ಧೈರ್ಯಶಾಲಿಗಳೂ ನಿರ್ಭೀತ ಮಾತುಗಾರರೂ ಆಗಿದ್ದರು. ಹೈಸ್ಕೂಲಿನಲ್ಲಿ ಕೋಲಿನಿಂದ ಯಾವಾಗಲೂ ಮಕ್ಕಳನ್ನು ವಿಪರೀತ ಹೊಡೆಯುತ್ತಿದ್ದ, ವಿದ್ಯಾರ್ಥಿಗಳಿಗೆ ದೊಡ್ಡ ದಂಡ ವಿಧಿಸುತ್ತಿದ್ದ ಶಿಕ್ಷಕರೊಬ್ಬರ ವರ್ತನೆಯನ್ನು ಪ್ರತಿಭಟಿಸಿ ಗಲಾಟೆ ಮಾಡಿದ್ದರು. ಸಹವಿದ್ಯಾರ್ಥಿಗಳನ್ನು ಸಂಘಟಿಸಿ ತರಗತಿ ಬಹಿಷ್ಕರಿಸಿದ್ದರು. ಪಟೇಲರು ಸಂಘಟಿಸಿದ ಶಾಲಾದಿನಗಳ ಮೊದಲ ಮುಷ್ಕರ ಮೂರನೆಯ ದಿನಕ್ಕೆ ಕಾಲಿಟ್ಟಾಗ, ಹುಡುಗನ ನಾಯಕತ್ವ ಮತ್ತು ಸಂಘಟನೆಯನ್ನು ಗುರುತಿಸಿದ ಪ್ರಾಂಶುಪಾಲರು ಮಧ್ಯ ಪ್ರವೇಶಿಸಿ, ವಿದ್ಯಾರ್ಥಿಗಳನ್ನು ಮುಂದೆಂದೂ ಆ ಅಧ್ಯಾಪಕರು ಕಟುವಾಗಿ ಶಿಕ್ಷಿಸದಿರುವ ಆಶ್ವಾಸನೆ ನೀಡಿದರು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ರ ಕುರಿತ ಬರೆದಿದ್ದಾರೆ ಯೋಗೀಂದ್ರ ಮರವಂತೆ

ನ್ಯಾಯತೀರ್ಮಾನ ನಡೆವಳಿಯಲ್ಲಿ ತೀಕ್ಷ್ಣ ನಿರ್ಭೀತ ಪಾಟಿಸವಾಲುಗಳಿಗಾಗಿ ಹೆಸರಾಗಿದ್ದ ಯುವ ವಕೀಲ ಗುಜರಾತಿನ ಕೋರ್ಟೊಂದರಲ್ಲಿ ವಾದ ನಡೆಸುತ್ತಿದ್ದ. ಕೊಲೆ ಆರೋಪ ಹೊಂದಿದ್ದ ತನ್ನ ಕಕ್ಷಿದಾರನಿಗೆ ನ್ಯಾಯ ಒದಗಿಸಲು ಸಾಕ್ಷಿಯನ್ನು ಪ್ರಶ್ನಿಸುವುದರಲ್ಲಿ ಮುಳುಗಿದ್ದ. ಅಷ್ಟೊತ್ತಿಗೆ ವಕೀಲನ ವಿಳಾಸ ಹೊಂದಿದ್ದ ಟೆಲಿಗ್ರಾಂ ಒಂದು ಕೋರ್ಟಿನೊಳಗೆ ತಲುಪಿತು. ತೆರೆದು ನೋಡಿದರೆ ಹೆಂಡತಿಯ ಸಾವಿನ ಸುದ್ದಿ. ಕಕ್ಷಿದಾರನ ಜೀವನ್ಮರಣವನ್ನು ನಿರ್ಧರಿಸಬಹುದಾದ ವಾದದ ನಡುವೆ ಬಂದುಮುಟ್ಟಿದ ಸುದ್ದಿ ಯುವವಕೀಲನನ್ನು ಸ್ವಲ್ಪವೂ ವಿಚಲಿತಗೊಳಿಸಲೇ ಇಲ್ಲ. ತುರ್ತುಅಂಚೆಯನ್ನು ಹಾಗೇ ಮಡಚಿ ಕಿಸೆಯಲ್ಲಿಟ್ಟುಕೊಂಡು ನಿರ್ಲಿಪ್ತನಾಗಿ ವಾದ ಮುಂದುವರಿಸಿದ. ಅಲ್ಲಿ ನಡೆಯುತ್ತಿದ್ದ ಕೇಸಿನ ಇತ್ಯರ್ಥ ಯಾರ ಪರ ವಾಲುವುದರಲ್ಲಿತ್ತೋ. ಆದರೆ ವೈಯಕ್ತಿಕ ಶೋಕ ನಷ್ಟಗಳು ವೃತ್ತಿಪರತೆ ಕರ್ತವ್ಯಗಳ ಎದುರು ಸಂಪೂರ್ಣ ಸೋಲಿನ ತೀರ್ಪನ್ನು ಪಡೆದಿದ್ದವು. ಗುಜರಾತಿನ ಯುವವಕೀಲ, ಎರಡು ಮಕ್ಕಳ ತಂದೆ ವಲ್ಲಭಭಾಯಿ ಪಟೇಲ್ ಅಂದಿನ ಕೋರ್ಟ್ ಪ್ರಕ್ರಿಯೆ ನಿಂತ ಮೇಲೆಯೇ ಹೆಂಡತಿಯ ಸಾವಿನ ವಿಚಾರವನ್ನು ಅಲ್ಲಿದ್ದವರೊಡನೆ ಹಂಚಿಕೊಂಡದ್ದು.

1905ರಲ್ಲಿ, ಅಂದರೆ ಪತ್ನಿಯ ಅಕಾಲಿಕ ಅಗಲುವಿಕೆಯ ದಿನದ ಕೋರ್ಟ್ ವಾದದ ಕೆಲವರ್ಷಗಳ ಮೊದಲೇ, ವಲ್ಲಭಭಾಯಿ ಪಟೇಲರು ಉತ್ತಮ ಕ್ರಿಮಿನಲ್ ಲಾಯರ್ ಎನ್ನುವ ಹೆಸರು ಪಡೆದಿದ್ದವರು. ಇಂಗ್ಲೆಂಡ್‌ಗೆ ಹೋಗಿ ನ್ಯಾಯಶಾಸ್ತ್ರ ಓದುವ ಆಸೆ ಹೊಂದಿದ್ದವರು. ಭಾರತೀಯ ವಕೀಲರು ಆಗ ಪ್ರತಿಷ್ಠಿತ ಆಂಗ್ಲ ವ್ಯವಸ್ಥೆಯ ಬಾರ್ ಕೌನ್ಸಿಲ್‌ನಲ್ಲಿ ಗುರುತಿಸಿಕೊಳ್ಳಬೇಕಿದ್ದರೆ ಇಂಗ್ಲೆಂಡ್‌ನ ಬ್ಯಾರಿಸ್ಟರ್ ಪದವಿ ಪಡೆದಿರಬೇಕಿತ್ತು. ಧೈರ್ಯ, ಸಾಮಾನ್ಯ ಪ್ರಜ್ಞೆ, ಮನೋಧರ್ಮ, ಮನಃಶಾಸ್ತ್ರದ ತಿಳುವಳಿಕೆಗಳ ಮೂಲಕ ವಾದವನ್ನು ಮಂಡಿಸಿ ಗೆಲ್ಲಿಸುವ ವಕೀಲ ಎಂದು ಗುಜರಾತಿನ ಬೋರ್ಸಾದ್‌ನಲ್ಲಿ ಸ್ಥಳೀಯವಾಗಿ ಹೆಸರು ಪಡೆದಿದ್ದ ಪಟೇಲರು ವಕೀಲ ವೃತ್ತಿಯನ್ನು ನೆಚ್ಚಿ ಹೆಚ್ಚು ಉಜ್ವಲಗೊಳಿಸಿಕೊಳ್ಳುವ ಗುರಿ ಇದ್ದವರು. ಆದರೆ ಬಯಸಿದ ಕೂಡಲೇ ಇಂಗ್ಲೆಂಡ್ ಪ್ರಯಾಣವನ್ನು ಸಾಕಾರಗೊಳಿಸುವ ಆರ್ಥಿಕ ಅನುಕೂಲ ಕೌಟುಂಬಿಕವಾಗಿ ಇರಲಿಲ್ಲ. ಹಾಗಂತ ವಿದೇಶ ಪ್ರವಾಸದ ಯೋಜನೆಯನ್ನು ಪೂರ್ಣಗೊಳಿಸಲು ಬೇಕಾಗುವ ವೆಚ್ಚವನ್ನು ಲೆಕ್ಕ ಹಾಕಿ ಮೂರ್ನಾಲ್ಕು ವರ್ಷಗಳ ಪರಿಶ್ರಮದ ದುಡಿಮೆಯಿಂದ ಉಳಿಸಿ ಜೋಡಿಸುತ್ತಿದ್ದರು. ಲಂಡನ್‌ನ “ಮಿಡ್ಲ್ ಟೆಂಪಲ್ ” ಎನ್ನುವ ನ್ಯಾಯಾಂಗ ವಿದ್ಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದರು. “ಥಾಮಸ್ ಕುಕ್ “ಯಾತ್ರಾಸಂಸ್ಥೆಗೆ ತನ್ನ ಪ್ರಯಾಣವನ್ನು ಆಯೋಜಿಸುವಂತೆ ಪತ್ರವನ್ನೂ ಬರೆದಿದ್ದರು.

ನೋಂದಾವಣೆ ಅರ್ಜಿ ಸ್ವೀಕೃತವಾಗಿ ಪ್ರಯಾಣದ ತಯಾರಿ ನಡೆಯುತ್ತಿದ್ದಾಗ, ಪ್ರಯಾಣ ಸಂಸ್ಥೆಯ ಕೊನೆಯ ಪತ್ರ “ವಿ. ಜೆ ಪಟೇಲ್” ಎನ್ನುವ ಹೆಸರಿಗೆ ಬಂದಿತ್ತು. ಅಕಸ್ಮಾತ್ ಆಗಿ ಪತ್ರ ಅಣ್ಣ ವಿಠ್ಠಲಭಾಯಿ ಪಟೇಲರ ಕೈಸೇರಿತು. ಮತ್ತೆ ಅವರೂ ವಿ.ಜೆ ಪಟೇಲರೇ. ತಮ್ಮನಂತೆಯೇ ಲಂಡನ್‌ಗೆ ಹೋಗಿ ಬ್ಯಾರಿಸ್ಟರ್ ಮಾಡುವಲ್ಲಿ ಉತ್ಸುಕರಾಗಿದ್ದವರು. ಅವಕಾಶ ತಮ್ಮನಿಗೆ ಒದಗಿದ್ದರೂ, ತಾವೇ ಹೋಗುವೆ ಎಂದು ಕಿರಿಯನನ್ನು ಒಪ್ಪಿಸಿ ಲಂಡನ್‌ಗೆ ಹೊರಟರು. ಪ್ರಸಿದ್ಧ ವಕೀಲನಾಗುವ ತೀವ್ರ ಆಸೆಯ ವಲ್ಲಭಭಾಯಿ ಪಟೇಲರನ್ನು ಹೀಗೆ ಆಕಸ್ಮಿಕ ನಿರಾಸೆ ಆಘಾತಗಳು ಆಗಾಗ ಸಂಧಿಸುತ್ತಿದ್ದವು.

ಹೆಸರಾಂತ ನ್ಯಾಯವಾದಿಯಾಗುವ ವಲ್ಲಭಭಾಯಿಯವರ ದೊಡ್ಡ ಕನಸಿಗಿಂತ ಮೂವತ್ತು ವರ್ಷ ಹಿಮ್ಮುಖ ನಡೆದರೆ, 1875ರ ಅಕ್ಟೋಬರ್ 31ರಂದು ಗುಜರಾತಿನ ಖೇಡಾ ಜಿಲ್ಲೆಯ ನಡಿಯಾದ್‌ನ ಗ್ರಾಮೀಣ ಕುಟುಂಬದಲ್ಲಿ ಅವರ ಜನನ; ಅಂದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹುಟ್ಟುವ ಹತ್ತು ವರ್ಷ ಮೊದಲು. ತಂದೆ ಸಣ್ಣಪ್ರಮಾಣದ ಬೇಸಾಯದಲ್ಲಿ ಬದುಕು ಸಾಗಿಸುತ್ತಿದ್ದವರು. ಬಾಲ್ಯದಲ್ಲಿ ಮಗನೂ ತಂದೆಯ ಜೊತೆಗೆ ಹೊಲದಲ್ಲಿ ಕೈಜೋಡಿಸುತ್ತಿದ್ದ. ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಅಂತೂ ಮುಗಿಯಿತಾದರೂ ಹೈಸ್ಕೂಲ್ ಶಿಕ್ಷಣಕ್ಕೆ 9 ಮೈಲು ದೂರ ನಡೆದುಹೋಗಬೇಕಾಗಿತ್ತು. ಆರು ಮಕ್ಕಳಿರುವ ರೈತ ಕುಟುಂಬದಲ್ಲಿ ನಿರಂತರವಾಗಿ ಶಾಲಾ ಶಿಕ್ಷಣ ಪಡೆಯುವುದೂ ಸುಲಭ ಆಗುತ್ತಿರಲಿಲ್ಲ. ನಿಂತು ನಿಂತು ಹೊರಡುವ ಅವಸರವಿಲ್ಲದ ಹಳ್ಳಿಯ ಬಸ್ಸಿನಂತೆಯೇ ಅವರ ವಿದ್ಯಾಭ್ಯಾಸ ಮುಂದೆ ಸಾಗುತ್ತಿತ್ತು. ಬ್ರಿಟಿಷ್ ಆಡಳಿತದ ಭಾರತದಲ್ಲಿ ಆಗಿನ್ನೂ ಶಿಕ್ಷಣ ಉಚಿತವೂ ಅಲ್ಲ ಕಡ್ಡಾಯವೂ ಅಲ್ಲ. ಹಾಗಂತ ಇಂಗ್ಲೆಂಡ್‌ನಲ್ಲಿ 1870ರ ಸಮಯದ ಕಾಯ್ದೆ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿತ್ತು.

ಎಳವೆಯಲ್ಲಿಯೇ ಪಟೇಲರು ಧೈರ್ಯಶಾಲಿಗಳೂ ನಿರ್ಭೀತ ಮಾತುಗಾರರೂ ಆಗಿದ್ದರು. ಹೈಸ್ಕೂಲಿನಲ್ಲಿ ಕೋಲಿನಿಂದ ಯಾವಾಗಲೂ ಮಕ್ಕಳನ್ನು ವಿಪರೀತ ಹೊಡೆಯುತ್ತಿದ್ದ, ವಿದ್ಯಾರ್ಥಿಗಳಿಗೆ ದೊಡ್ಡ ದಂಡ ವಿಧಿಸುತ್ತಿದ್ದ ಶಿಕ್ಷಕರೊಬ್ಬರ ವರ್ತನೆಯನ್ನು ಪ್ರತಿಭಟಿಸಿ ಗಲಾಟೆ ಮಾಡಿದ್ದರು. ಸಹವಿದ್ಯಾರ್ಥಿಗಳನ್ನು ಸಂಘಟಿಸಿ ತರಗತಿ ಬಹಿಷ್ಕರಿಸಿದ್ದರು. ಪಟೇಲರು ಸಂಘಟಿಸಿದ ಶಾಲಾದಿನಗಳ ಮೊದಲ ಮುಷ್ಕರ ಮೂರನೆಯ ದಿನಕ್ಕೆ ಕಾಲಿಟ್ಟಾಗ, ಹುಡುಗನ ನಾಯಕತ್ವ ಮತ್ತು ಸಂಘಟನೆಯನ್ನು ಗುರುತಿಸಿದ ಪ್ರಾಂಶುಪಾಲರು ಮಧ್ಯ ಪ್ರವೇಶಿಸಿ, ವಿದ್ಯಾರ್ಥಿಗಳನ್ನು ಮುಂದೆಂದೂ ಆ ಅಧ್ಯಾಪಕರು ಕಟುವಾಗಿ ಶಿಕ್ಷಿಸದಿರುವ ಆಶ್ವಾಸನೆ ನೀಡಿದರು. ನಿಧಾನಕ್ಕೆ ಸಾಗುತ್ತಿದ್ದ ವಿದ್ಯಾಭ್ಯಾಸ ಮೆಟ್ರಿಕ್ ಮೈಲಿಗಲ್ಲನ್ನು ತಲುಪುವಾಗ ಪಟೇಲರ ವಯಸ್ಸು 22 ಆಗಿತ್ತು. 19ನೆಯ ಶತಮಾನದ ಮಟ್ಟಿಗೂ ಬಹಳ ತಡವಾಗಿ ಮೆಟ್ರಿಕ್ ಹಂತ ತಲುಪಿದವರು ಪಟೇಲರು. ಆದರೆ ಅಲ್ಲಿಯತನಕ ನಿಧಾನ ಸಾಗಿದ ಸಮಯಕ್ಕೆ, ತುರ್ತು ತಿರುವು ನೀಡುವಂತೆ ಮುಂದಿನ ಎರಡು ವರ್ಷ ಪುಸ್ತಕಗಳನ್ನು ಅಲ್ಲಿಲ್ಲಿಂದ ಕಡಪಡೆದು ಬೇಗ ಓದಿ ಜಿಲ್ಲಾ ಕಾನೂನು ಪರೀಕ್ಷೆಯಲ್ಲಿ ಪಾಸಾದರು. ಭವಿಷ್ಯಕ್ಕೆ ಓಟದ ವೇಗ ಕೊಟ್ಟು ವಕೀಲರಾದರು. ಯಶಸ್ಸನ್ನು ಪಡೆಯಲೆಂದೇ ಕಷ್ಟದ ಕೇಸುಗಳಿಗೆ ಕೈಹಾಕುತ್ತಿದ್ದರು. ಕ್ರಿಮಿನಲ್ ಪ್ರಕರಣ ದಾಖಲಾಗಿದ್ದವರ ಪರ ವಾದಿಸಿ ಗೆಲ್ಲುವ ಸಾಹಸ ಮಾಡುತ್ತಿದ್ದರು. ಬ್ಯಾರಿಸ್ಟರ್ ಕನಸಿಗೆ ಹಣಜೋಡಿಸುತ್ತಿದ್ದರು.

1910ರಲ್ಲಿ ಅಣ್ಣ ಲಂಡನ್ನಿನಿಂದ ಮರಳಿದ ಮೇಲೆ ವಲ್ಲಭಭಾಯಿ ಪಟೇಲರು ಕಾನೂನು ಕಾಲೇಜ್ ಸೇರಲು ಹಡಗು ಹತ್ತಿದರು. 36 ವರ್ಷದವರಾಗಿದ್ದ ಪಟೇಲರಿಗಿಂತ ಹದಿನಾಲ್ಕು ವರ್ಷ ಸಣ್ಣವರಾದ ನೆಹರೂ ಕೂಡ ಲಂಡನ್ನಿನ ಕಾನೂನು ಶಿಕ್ಷಣ ಸಂಸ್ಥೆಯಲ್ಲಿ ಅದೇ ವರ್ಷ ವಿದ್ಯಾರ್ಥಿಯಾಗಿದ್ದರು. ಲಂಡನ್ ವಿದ್ಯಾಲಯದಲ್ಲಿ ಪಟೇಲ್ ಹಾಗು ನೆಹರೂ ಒಬ್ಬರನ್ನೊಬ್ಬರು ಹಾದುಹೋಗಿರಬಹುದಾದರೂ ಅವರ ಭೇಟಿಯ ಯಾವುದೇ ದಾಖಲೆ ಸಿಗುವುದಿಲ್ಲ. ಆಗಲೇ ಲಂಡನ್‌ನಲ್ಲಿದ್ದ ರಾಜಕೀಯ ಮುತ್ಸದ್ಧಿ ದಾದಾಭಾಯಿ ನವರೋಜಿಯವರ ಸಂಪರ್ಕ ಹಾಗೂ ಪ್ರಭಾವ ಪಟೇಲರ ಮೇಲಾಗಿತ್ತು. ಲಂಡನ್ ತಲುಪಿದ ಆರಂಭದಲ್ಲಿ ಪ್ರವಾಸಕ್ಕೆಂದು ಸ್ವಲ್ಪ ಸುತ್ತಾಡಿದರೂ ನಂತರ ಪೂರ್ಣವಾಗಿ ಓದಿನಲ್ಲಿ ತೊಡಗಿಸಿಕೊಂಡರು.

ಧೈರ್ಯ, ಸಾಮಾನ್ಯ ಪ್ರಜ್ಞೆ, ಮನೋಧರ್ಮ, ಮನಃಶಾಸ್ತ್ರದ ತಿಳುವಳಿಕೆಗಳ ಮೂಲಕ ವಾದವನ್ನು ಮಂಡಿಸಿ ಗೆಲ್ಲಿಸುವ ವಕೀಲ ಎಂದು ಗುಜರಾತಿನ ಬೋರ್ಸಾದ್‌ನಲ್ಲಿ ಸ್ಥಳೀಯವಾಗಿ ಹೆಸರು ಪಡೆದಿದ್ದ ಪಟೇಲರು ವಕೀಲ ವೃತ್ತಿಯನ್ನು ನೆಚ್ಚಿ ಹೆಚ್ಚು ಉಜ್ವಲಗೊಳಿಸಿಕೊಳ್ಳುವ ಗುರಿ ಇದ್ದವರು. ಆದರೆ ಬಯಸಿದ ಕೂಡಲೇ ಇಂಗ್ಲೆಂಡ್ ಪ್ರಯಾಣವನ್ನು ಸಾಕಾರಗೊಳಿಸುವ ಆರ್ಥಿಕ ಅನುಕೂಲ ಕೌಟುಂಬಿಕವಾಗಿ ಇರಲಿಲ್ಲ.

ಇಪ್ಪತ್ತು ವರ್ಷಗಳ ಹಿಂದೆ ಲಂಡನ್ನಿನಲ್ಲಿ ಓದುತ್ತಿದ್ದ ಗಾಂಧೀಜಿಯಂತೆಯೇ ಶಿಕ್ಷಣದ ಗುರಿಯಲ್ಲಿ ತದೇಕಚಿತ್ತರಾಗಿ ವಿಲಾಯತಿ ಜೀವನ ಸಾಗಿತು. ಮೊದಲಿಗೆ ಹೋಟೆಲಿನಲ್ಲಿ ತಂಗಿದ್ದರೂ ಅಲ್ಪಕಾಲದಲ್ಲಿಯೇ ಲಂಡನ್‌ನ ಕೇಂದ್ರ ಭಾಗದಲ್ಲಿರುವ ವೆಸ್ಟ್‌ಮಿನಿಸ್ಟರ್ ಪ್ರದೇಶದ ಆಲ್ಡ್ರಿಜ್ ರಸ್ತೆಯ 23ನೆಯ ನಂಬ್ರದ ಮನೆಗೆ ವಾಸ್ತವ್ಯ ಬದಲಿಸಿದರು. ಆ ಕಾಲಕ್ಕೆ ತುಂಬಾ ದುಬಾರಿಯಲ್ಲದ ತೀರ ಅಗ್ಗವೂ ಅಲ್ಲದ ಬಾಡಿಗೆಯ ಆ ಮನೆಯಿಂದ ಶಿಕ್ಷಣ ಸಂಸ್ಥೆಯ ತನಕದ ನಾಲ್ಕು ಮೈಲಿ ದೂರವನ್ನು ನಡೆದೇ ತಲುಪುತ್ತಿದ್ದರು. ದುರ್ಬಲ ಆರ್ಥಿಕ ಸಂಪನ್ಮೂಲವನ್ನು ನಿಭಾಯಿಸುತ್ತಾ ಪಟೇಲರು ಪರಿಶ್ರಮದಿಂದ ಓದುತ್ತಿದ್ದರು. ಓದಿನುದ್ದಕ್ಕೂ ಬಹುಮಾನಗಳನ್ನು ಗೆಲ್ಲುತ್ತ ಅಸಾಮಾನ್ಯ ವಿದ್ಯಾರ್ಥಿ ಎನಿಸಿಕೊಂಡಿದ್ದರು. ಪುಸ್ತಕಾಲಯದಿಂದ ಮಿಡ್ಲ್ ಟೆಂಪಲ್‌ಗೆ ನಡೆದು ಹೋಗುತ್ತಿದ್ದರು. ಲೈಬ್ರರಿ ಮುಚ್ಚುವ ತನಕವೂ ಕುಳಿತು ಓದುತ್ತಿದ್ದರು. ಏಕಾಗ್ರತೆಯ ಅಧ್ಯಯನಶೀಲ ಪ್ರವೃತ್ತಿ 36 ತಿಂಗಳ ನ್ಯಾಯಾಂಗ ಶಿಕ್ಷಣವನ್ನು ಅವಧಿಗಿಂತ ಮೊದಲೇ 30 ತಿಂಗಳಲ್ಲಿ ಮುಗಿಸುವಲ್ಲಿ ಸಹಕಾರಿಯಾಯಿತು. ಅಂತಿಮ ಪರೀಕ್ಷೆಯಲ್ಲಿ ಮೊದಲ ಶ್ರೇಣಿ ಪಡೆದುದರ ಜೊತೆಗೆ ಐವತ್ತು ಪೌಂಡ್ ಮೌಲ್ಯದ ಬಹುಮಾನಕ್ಕೂ ಆಯ್ಕೆಯಾದರು. ಬ್ಯಾರಿಸ್ಟರ್ ಪಟೇಲರು 1912ರಲ್ಲಿ ಗುಜರಾತಿಗೆ ಮರಳಿದರು.

ವಾಪಸು ಬರುತ್ತಿದ್ದಂತೆ ಮುಂಬೈ ಮುಖ್ಯನ್ಯಾಯಾಲಯದ ಸರಕಾರಿ ಕಾನೂನು ಕಾಲೇಜಿನ ಪ್ರೊಫೆಸರ್ ಹುದ್ದೆಯನ್ನು ಅವರಿಗೆ ನೀಡಲಾಯಿತು. ಆದರೆ ಪಟೇಲರು ಅಹ್ಮದಾಬಾದಿನಲ್ಲಿ ವಕೀಲಿಕೆ ಮುಂದುವರಿಸಲು ಇಚ್ಛಿಸಿದ್ದರು. ಪಶ್ಚಿಮದ ಗಾಳಿಯಿಂದ ಪ್ರಭಾವಿತರಾಗಿ ಆಂಗ್ಲಶೈಲಿಯ ಪೋಷಾಕು ಧರಿಸುತ್ತಿದ್ದ ಪಟೇಲರು ಇಂಗ್ಲಿಷ್ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತಿದ್ದರು. ಆಂಗ್ಲ ರಿವಾಜುಗಳನ್ನು ಅನುಸರಿಸುವ ಭಾರತೀಯರು ಬೆರೆಯುವ ಗುಜರಾತ್ ಕ್ಲಬ್‌ನ ಸದಸ್ಯರಾದರು. ಬಹುಬೇಗ ಅಹಮದಾಬಾದ್ ವಲಯದ ಕ್ರಿಮಿನಲ್ ಕೇಸುಗಳ ಪ್ರಮುಖ ಬ್ಯಾರಿಸ್ಟರ್ ಎನ್ನುವ ಹೆಸರು ಪಡೆದರು. ಅವರ ವಕೀಲ ಮಿತ್ರ ಜಿ.ವಿ ಮಾವಲಂಕಾರ್, ಮುಂದೆ ಲೋಕಸಭೆಯ ಸ್ಪೀಕರ್ ಆದವರು “ಪಟೇಲರು ಕೇಸುಗಳನ್ನು ನಡೆಸುವಾಗ ವಾಸ್ತವಾಂಶಗಳನ್ನು ಒಟ್ಟುಗೂಡಿಸಿ ನೈಪುಣ್ಯದಿಂದ ಪ್ರತಿಪಾದಿಸುತ್ತಿದ್ದರು. ವಿರೋಧಿ ವಕೀಲರನ್ನು ಸರಿಯಾಗಿ ಅಳೆದು ತೂಗಿ ಪ್ರತಿವಾದ ಹೂಡುತ್ತಿದ್ದರು, ನಿರ್ಭೀತರಾಗಿಯೂ ಇದ್ದರು” ಎಂದಿದ್ದರು. 1916ರ ಹೊತ್ತಿಗೆ ಪಟೇಲರ ಶುಲ್ಕ ಅಹಮದಾಬಾದಿನಲ್ಲಿಯೇ ಅತಿ ಹೆಚ್ಚಿನದಾಗಿತ್ತು.

1915ರ ಸಮಯಕ್ಕೆ ಬ್ಯಾರಿಸ್ಟರ್ ಮೋಹನದಾಸ ಗಾಂಧಿ ಕೂಡ ಅಹ್ಮದಾಬಾದಿನಲ್ಲಿ ಇದ್ದರು. ಅವರು ಇಪ್ಪತ್ತು ವರ್ಷಗಳ ದಕ್ಷಿಣ ಆಫ್ರಿಕಾ ವಾಸದಲ್ಲಿ ಸಮಾನತೆ ಹಾಗೂ ಮಾನವ ಹಕ್ಕುಗಳ ಹೋರಾಟವನ್ನು ಮುಗಿಸಿ ಬಂದಿದ್ದರು. ಅಹ್ಮದಾಬಾದಿನ ಹೊರವಲಯದಲ್ಲಿ ಮೊದಲ ಭಾರತೀಯ ಆಶ್ರಮ ತೆರೆದ ನಂತರ ಗಾಂಧೀಜಿ ಗುಜರಾತ್ ಕ್ಲಬ್‌ನ ಸದಸ್ಯರ ಚರ್ಚೆಗಳಲ್ಲಿ ಜನಪ್ರಿಯರಾಗಿದ್ದರು. ಮೊದಲಿಗೆ ಪಟೇಲರು ಗಾಂಧಿಯವರನ್ನು ಕೇಳುವ ಯಾವುದೇ ಆಸಕ್ತಿ ತೋರಿಸಿರಲಿಲ್ಲ. ಬ್ರಿಟಿಷರಿಂದ ಅಧಿಕಾರ ಪಡೆಯುವಲ್ಲಿ ಸತ್ಯಾಗ್ರಹವನ್ನು ಆಶ್ರಯಿಸುವುದರ ಬಗ್ಗೆಯೂ ಅವರಿಗೆ ಸಂಶಯ ಇತ್ತು. ಆದರೆ ಬಿಹಾರದ ಚಂಪಾರಣ್ ಜಿಲ್ಲೆಯ ಶೋಷಿತ ಕಾರ್ಮಿಕರ ಪರವಾದ ಗಾಂಧಿಯರವ ವೀರೋಚಿತ ನಿಲುವು ಅಚಲ ಹೋರಾಟ ಪಟೇಲರ ದೃಷ್ಟಿಯನ್ನು ಬದಲಿಸಿತು. 1917 ರ ಸಮಯಕ್ಕೆ ಮಹಾತ್ಮ, ಪಟೇಲರ ರಾಜಕೀಯ ಗುರುವಾದರು. ಸ್ವಾತಂತ್ಯ್ರದ ಉದ್ದೇಶಕ್ಕೆ ಪೂರ್ಣವಾಗಿ ಮುಡಿಪಾದ ಪಟೇಲರು ಗಾಂಧಿಯವರ ಮುಖ್ಯ ಸಂಘಟನಾ ಶಕ್ತಿಯಾಗಿ ದೀರ್ಘಕಾಲ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿ ಮುಂದೆ 1931ರಲ್ಲಿ ಅಧ್ಯಕ್ಷರೂ ಆದರು. 1947ರಲ್ಲಿ ಸ್ವಾತಂತ್ಯ್ರಕ್ಕೆ ಸಂಬಂಧಿಸಿದ ಪ್ರಮುಖ ಸಂಧಾನ ಸಮಾಲೋಚನೆಗಳಲ್ಲಿ ಭಾಗವಹಿಸಿದರು. ಸ್ವಾತಂತ್ಯ್ರದ ನಂತರದ ಭಾರತವನ್ನು ಒಗ್ಗೂಡಿಸಿದರು. ಭಾರತ ಸರಕಾರದ ಗೃಹ ಇಲಾಖೆ, ನೆಹರೂರವರ ಪ್ರಧಾನಿಗಿರಿಯಲ್ಲಿ ಉಪಪ್ರಧಾನಿಯ ಹೊಣೆಯನ್ನು ನಿರ್ವಹಿಸಿದರು.

ರಾಜಕೀಯ ಹೋರಾಟದ ದಾರಿಯುದ್ದಕ್ಕೂ ಗಾಂಧೀಜಿಯವರ ಅಥವಾ ನೆಹರೂರವರ ಸಹವರ್ತಿಯ ಪಾತ್ರ ವಹಿಸಿದ ಪಟೇಲರು ದೃಢ ನಿರ್ಧಾರ, ಪ್ರಾಮಾಣಿಕತೆ, ಪಾರದರ್ಶಕತೆ, ಪ್ರಾಯೋಗಿಕ ನಿಲುವು, ಸಂಘಟನಾ ಚಾತುರ್ಯಗಳಿಗೆ ಪ್ರಖ್ಯಾತರಾದವರು. ಪ್ರಸಿದ್ಧ ಯಶಸ್ವಿ ವಕೀಲರಾಗಲು ಹೊರಟವರು ಬ್ರಿಟಿಷ್ ವಿರುದ್ಧದ ಹೋರಾಟದ ಅಪ್ರತಿಮ ನಾಯಕರಾದರು. ನೆಹರೂ ಮತ್ತೆ ಪಟೇಲರು ಸ್ವಾತಂತ್ಯ್ರ ನಂತರದ ಕಾಲದಲ್ಲಿ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರೂ, ನೆಹರೂರವರು ಪಟೇಲರ ಸಲಹೆ ಸೂಚನೆಗಳನ್ನು ಅವಲಂಬಿಸಿರುತ್ತಿದ್ದರು. ಸರ್ದಾರ್ ಪಟೇಲರು ಜೊತೆಗಿಲ್ಲದ ಗಾಂಧೀಜಿ ಅಥವಾ ನೆಹರೂರನ್ನು ಊಹಿಸಿಕೊಳ್ಳುವುದು ಕಷ್ಟ. 1928ರಲ್ಲಿ ಬಾರ್ಡೋಲಿಯ ರೈತ ಚಳವಳಿಯ ನೇತಾರರಾಗಿದ್ದಾಗ ಪಟೇಲರಿಗೆ ಬಂದ “ಸರ್ದಾರ್ ” ಬಿರುದು ಅವರ ಹೆಸರಿನೊಡನೆಯೇ ಅಥವಾ ಹೆಸರೇ ಆಗಿ ಉಳಿಯಿತು.

ಲಂಡನ್ನಿನಲ್ಲಿ ಪಟೇಲರು ವಾಸಿಸಿದ್ದ ಮನೆಯ ಗೋಡೆಯ ಮೇಲೆ 1986ರಲ್ಲಿ ನೀಲಿ ಫಲಕವನ್ನು ನೆಡಲಾಯಿತು. ಕಟ್ಟಡ ದುರಸ್ತಿ ಕೆಲಸದಲ್ಲಿ ಮುಂದೆ ಫಲಕ ಹಾಳಾದರೂ 1991ರಲ್ಲಿ ತದ್ರೂಪಿ ಫಲಕವನ್ನು ಅನುಷ್ಠಾನಗೊಳಿಸಲಾಯಿತು. ಪಟೇಲರು ಬ್ಯಾರಿಸ್ಟರ್ ಆಗುತ್ತಿದ್ದ ದಿನಗಳನ್ನು ನೆನಪಿಸುವ ಫಲಕ “ಭಾರತೀಯ ರಾಜನೀತಿಜ್ಞ ಸರ್ದಾರ್ ವಲ್ಲಭಭಾಯಿ ಪಟೇಲ್ ಇಲ್ಲಿದ್ದರು” ಎಂದು ಗೌರವಪೂರ್ವಕವಾಗಿ ಸ್ಮರಿಸುತ್ತದೆ.