”ಚಿತ್ರದುದ್ದಕ್ಕೂ ಅಂತರ್ಗತವಾಗಿ, ಹೆಣಿಗೆಯೊಳಗಿನ ದಾರದಂತೆ ಬಂದಿರುವುದು ಅಹಮದ್ ಮತ್ತು ಸಮೀರ್ ನಡುವಿನ ಮಾತೇ ಇಲ್ಲದ ಸಂಘರ್ಷ. ತಾನಿದ್ದ ಜಾಗದಲ್ಲಿ ಈಗ ಇವನು ಬಂದಿದ್ದಾನೆ ಎನ್ನುವ ತಣ್ಣನೆಯ ಆಕ್ರೋಶ ಅಹಮದ್ ಗೆ. ಇವನು ಹೋಗಿ ಆಗಿದೆ, ಈಗಲೂ ಬಂದು ಏಕೆ ಈ ಮನೆಯಲ್ಲಿ, ತನ್ನ ಪ್ರೇಯಸಿಯ ಮೇಲೆ, ಮಕ್ಕಳ ಮೇಲೆ ತನ್ನ ಇರುವಿಕೆಯನ್ನು ಸ್ಥಾಪಿಸುತ್ತಿದ್ದಾನೆ ಎನ್ನುವ ರೊಚ್ಚು ಸಮೀರ್ ಗೆ. ಅಡಿಗೆ ಮನೆಯಲ್ಲಿ, ನೀರಿನ ಪೈಪ್ ಕೆಟ್ಟಿರುತ್ತದೆ, ಸಮೀರ್ ಬೆಳಗ್ಗೆ ಎದ್ದು ಬರುವಷ್ಟರಲ್ಲಿ ಅಹಮದ್ ಅದನ್ನು ರಿಪೇರಿ ಮಾಡುತ್ತಿರುತ್ತಾನೆ, ಅದು ಅವನದೇ ಮನೆಯೇನೋ ಎನ್ನುವಂತೆ”
ಲೇಖಕಿ ಸಂಧ್ಯಾರಾಣಿ ಬರೆಯುವ ಲೋಕ ಸಿನೆಮಾ ಟಾಕೀಸಿನಲ್ಲಿ ಇರಾನ್ ದೇಶದ ಚಿತ್ರ ‘ದ ಪಾಸ್ಟ್.’

 

ಅಸ್ಘರ್ ಫರ್ಹಾದಿ – ಮನಸ್ಸುಗಳ ನಡುವಿನ ಪದರಗಳನ್ನು, ಪರದೆಗಳನ್ನು, ನಿನ್ನೆ, ಇಂದು ಮತ್ತು ನಾಳೆಗಳ ನಡುವಿನ ಹುದುಗಲಿನಲ್ಲಿ ಸಿಲುಕಿಕೊಂಡ ಸಂಬಂಧಗಳನ್ನು ಕಾಡುವ ಹಾಗೆ, ಮನಸ್ಸು ಮತ್ತು ಆಲೋಚನೆ ಎರಡನ್ನೂ ಎಚ್ಚರವಾಗಿಟ್ಟುಕೊಂಡು ನೋಡುವ ಹಾಗೆ ಚಿತ್ರಗಳನ್ನು ಕಟ್ಟುತ್ತಾನೆ. ಈ ಮೊದಲಿನ A Separation ಮತ್ತು About Elly ಗಳಲ್ಲಿ ತನ್ನನ್ನು ತಾನು ಸಾಬೀತುಪಡಿಸಿಕೊಂಡ ಆತ ೨೦೧೩ರಲ್ಲಿ ಬಿಡುಗಡೆಯಾದ The Past ನಲ್ಲಿ ಅಂತಹ ನಿನ್ನೆ ಇಂದು ನಾಳೆಗಳ ನಡುವೆ ಜೀಕಾಟವಾಡುವ ಬದುಕುಗಳ ಬಗ್ಗೆ ಹೇಳುತ್ತಾನೆ. ಸಂಬಂಧಗಳಲ್ಲಿ ಬಹುಶಃ Perfect Closure ಎನ್ನುವುದು ಸಾಧ್ಯವೇ ಇಲ್ಲ. ಎಲ್ಲಾ ಎಳೆಗಳನ್ನೂ ಕತ್ತರಿಸಿಕೊಂಡಿದ್ದೇವೆ ಎಂದು ಕೊಂಡರೂ, ಕತ್ತರಿಯಲ್ಲಿ ಉಳಿದ ಯಾವುದೋ ಒಂದು ಎಳೆ ನಮಗೆ ಕಾಣದಂತೆ ನೆಲಕ್ಕಿಳಿದು ಬೇರಾಗಿ ಬಿಟ್ಟಿರುತ್ತದೆ. ಈ ಚಿತ್ರದಲ್ಲಿ ಒಂದೆಡೆ ಮೇರಿ ಮತ್ತು ಅಹಮದ್ ಅಂತಹ ಎಳೆಯ ಎರಡು ತುದಿಯಲ್ಲಿದ್ದರೆ, ಇನ್ನೊಂದೆಡೆ ಸಮೀರ್ ಮತ್ತು ಸೆಲೆನ್ ಅಂತಹದ್ದೇ ಇನ್ನೊಂದು ಎಳೆಯ ಎರಡು ತುದಿಗಳಲ್ಲಿರುತ್ತಾರೆ. ಈ ನಡುವೆ ಮೇರಿ ಮತ್ತು ಸಮೀರ್ ನಡುವೆ ಇನ್ನೊಂದು ಸಂಬಂಧದ ಎಳೆ. ಜೊತೆಜೊತೆಗೆ ಮೇರಿಯ ಮಕ್ಕಳು ಮತ್ತು ಅಹಮದ್ ನಡುವಿನ ಸಂಬಂಧದ ಎಳೆಗಳು. ಸಮೀರ್ ಮಗ ಫವಾದ್ ನ ಸೂತ್ರ ಕಿತ್ತಿಟ್ಟಂತಹ ಸಂಬಂಧದ ಎಳೆ. ಒಟ್ಟಿನಲ್ಲಿ ಇಡೀ ಚಿತ್ರವೇ ಜೇಡರ ಬಲೆಯೊಳಗೆ ಹೆಣೆದಿಟ್ಟಂತಹ ಸಂಬಂಧಗಳ ಸಂಕೀರ್ಣ ಜೋಡಣೆ.

ಚಿತ್ರ ಪ್ರಾರಂಭವಾಗುವುದು, ವಿಮಾನ ನಿಲ್ದಾಣದ ದೃಶ್ಯದಿಂದ. ಅಹಮದ್ ಟೆಹರಾನ್ ನಿಂದ ಪ್ಯಾರೀಸ್ ಗೆ ಬಂದಿದ್ದಾನೆ, ಅವನನ್ನು ಕರೆದೊಯ್ಯಲು ಮೇರಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾಳೆ. ಗಾಜಿನ ಗೋಡೆಗಳ ಎರಡು ಬದಿಯಲ್ಲಿ ಇವರಿಬ್ಬರೂ. ಒಬ್ಬರು ಇನ್ನೊಬ್ಬರಿಗೆ ಕಾಣುತ್ತಾರೆ, ಆದರೆ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸುವುದಿಲ್ಲ. ಆದರೂ ಅಲ್ಲಿ ಅವನು, ಇಲ್ಲಿ ಇವಳು ಮಾತನಾಡುತ್ತಲೇ ಇರುತ್ತಾರೆ. ಮಾತು ಆಡಿದ ನಿರಾಳ ಇಬ್ಬರಿಗೂ, ಆದರೆ ಯಾರನ್ನು ತಲುಪಬೇಕೋ ಅವರನ್ನು ಆ ಮಾತು ತಲುಪುವುದೇ ಇಲ್ಲ. ಗುಲ್ಜಾರ್ ಒಮ್ಮೆ ಮೂರು ಸಾಲುಗಳ ಕವನ ಬರೆಯುವ ತ್ರಿವೇಣಿ ಎನ್ನುವ ಪ್ರಯೋಗ ಮಾಡಿದ್ದರು. ಮೊದಲ ಎರಡು ಸಾಲು ಒಂದು ವಿಷಯವನ್ನು ಹೇಳಿದರೆ, ಮೂರನೆಯ ಸಾಲು ಅದಕ್ಕೆ ಸಂಪೂರ್ಣ ಭಿನ್ನವಾದ ಒಂದು ಹೊಳಹನ್ನು ಕಟ್ಟಿಕೊಡುತ್ತದೆ.

‘ನನಗೆದುರಾದ, ನನ್ನನ್ನು ನೋಡಿದ, ನನ್ನೊಡನೆ ಮಾತನಾಡಿದ,
ಮುಗುಳ್ನಕ್ಕ ಸಹ, ನಿನ್ನೆಯ ಯಾವುದೋ ನೆನಪಿನ ಋಣ..

ಎಷ್ಟಾದರೂ ಹಳೆಯ ಪತ್ರಿಕೆ, ನೋಡಿದ್ದಾಯ್ತು, ಪಕ್ಕಕ್ಕೆ ಇಟ್ಟೂ ಆಯ್ತು’.

ಇಲ್ಲೂ ಹೀಗೆ, ನಾಲ್ಕು ವರ್ಷಗಳ ನಂತರ ಅವರಿಬ್ಬರೂ ಭೇಟಿಯಾಗಿದ್ದಾರೆ. ಒಂದೊಮ್ಮೆ ಗಂಡ ಹೆಂಡತಿ ಆಗಿದ್ದವರು. ಈಗ ವಿಚ್ಛೇದನದ ಪ್ರಕ್ರಿಯೆ ಪೂರ್ಣಗೊಳಿಸಲು ಅವನು ಬಂದಿದ್ದಾನೆ. ಮೊದಲಿಗೆ ಇಬ್ಬರೂ ನಗುತ್ತಾರೆ, ಹರ್ಷ ಪಡುತ್ತಾರೆ, ಆದರೆ ಕಗ್ಗತ್ತಲ ಮೂಲೆಗಳಲ್ಲಿ ಅವಿತ ಭಯದ ನೆರಳುಗಳಂತೆ ನಿನ್ನೆಗಳು ಅವರಿಬ್ಬರ ಹೆಗಲಿನ ಮೇಲೂ ಕುಳಿತೇ ಇರುತ್ತವೆ. ಕೆಮ್ಮುತ್ತಾ ಬಂದ ಅವನನ್ನು ಆಕೆ, ‘ಇನ್ನೂ ಸಿಗರೇಟು ಸೇದುತ್ತಿರುವೆಯಾ?’ ಎನ್ನುತ್ತಾಳೆ, ‘ಇಲ್ಲ ಬಿಟ್ಟಿದ್ದೇನೆ, ವಯಸ್ಸಾಯ್ತು ನಂಗೆ’ ಅನ್ನುತ್ತಾನೆ. ಅಲ್ಲಿ ಒಂದು ನಿಮಿಷದ ಒಂದು ಸನ್ನಿವೇಶ ಬರುತ್ತದೆ. ಚಳಿಗೆ ಅವಳು ನಡುಗುತ್ತಾ ಕೂತಿರುತ್ತಾಳೆ, ಪಕ್ಕದಲ್ಲೇ ಕುಳಿತ ಅವನಿಗೆ ಒಂದು ಬಗೆಯ ವಿಚಲತೆ, ದೇಹಕ್ಕೂ ನೆನಪಿನ ಹಂಗು ಬಿಡುವುದಿಲ್ಲ. ಅವನನ್ನು ಕಾರ್ ನಲ್ಲಿ ಕೂರಿಸಿಕೊಂಡ ಅವಳು ರಿವರ್ಸ್ ತೆಗೆದುಕೊಳ್ಳಲು ಹೋಗುತ್ತಾಳೆ. ಇಬ್ಬರೂ ಒಮ್ಮೆ ಹಿಂದೆ ತಿರುಗಿ, ಒಮ್ಮೆ ಮುಂದೆ ತಿರುಗಿ ನೋಡುತ್ತಲೇ ಇರುತ್ತಾರೆ, ಆದರೂ ಕ್ಷಣ ಮಾತ್ರದಲ್ಲಿ ಎಚ್ಚರ ತಪ್ಪುತ್ತದೆ. ನಿನ್ನೆಗಳ ಹಾದಿಯಲ್ಲಿ ಪಯಣಗಳು ಹೀಗೆಯೇ.

ಅವರಿಬ್ಬರೂ ನಾಲ್ಕು ವರ್ಷಗಳಿಂದ ಬೇರೆ ಇದ್ದಾರೆ, ಆದರೂ ಅವರಿಬ್ಬರಿಗೂ ಒಂದೊಮ್ಮೆ ಜೊತೆಗಿದ್ದ ನೆನಪಿನ ಸಂವೇದನೆ ಮಾಸುವುದಿಲ್ಲ, ಹೊರಗೆ ಭೋರೆಂದು ಸುರಿವ ಮಳೆ. ಇಡೀ ಚಿತ್ರದಲ್ಲಿ ನಿರ್ಣಾಯಕ ಸನ್ನಿವೇಶಗಳಲ್ಲಿ ಮಳೆ ಬ್ಯಾಕ್ ಡ್ರಾಪ್ ನ ರೀತಿಯಲ್ಲಿ ಕೆಲಸ ಮಾಡುತ್ತದೆ. ಸುರಿವ ಮಳೆಯಲ್ಲಿ, ಕೊಡೆಯ ನೆರಳೂ ಇಲ್ಲದಂತೆ ನೆನೆಯುತ್ತಲೇ ಇರುವ ಪಾತ್ರಧಾರಿಗಳು. ಚಿತ್ರದಲ್ಲಿ ಮಳೆಯ ಹಾಗೆಯೇ ರೂಪಕವಾಗುವುದು ಇಕ್ಕಟ್ಟದ ಮನೆಯ ಬಾಗಿಲು ಮತ್ತು ಪಡಸಾಲೆಗಳು. ಸದಾ ಅಲ್ಲಿ ಒಬ್ಬರು ಹಾದುಹೋಗಬೇಕಾದರೆ ಇನ್ನೊಬ್ಬರು ಇದ್ದೇ ಇರುತ್ತಾರೆ. ಸರಾಗವಾಗಿ ಹಾದುಹೋಗಲು, ಮುಂದೆ ಹೋಗಲು ಆಗುವುದೇ ಇಲ್ಲ… ಪ್ಯಾರಿಸ್ ನಲ್ಲಿ ಚಿತ್ರೀಕರಣವಾಗಿದ್ದರೂ ಫರ್ಹಾದಿ ಪ್ಯಾರಿಸ್ ನ ಯಾವ ವೈಶಿಷ್ಟ್ಯಗಳನ್ನೂ ತೋರಿಸುವುದಿಲ್ಲ, ಕಥೆ ನಡೆಯುವುದು ಅದೇ ಇಕ್ಕಟ್ಟಾದ ಜಾಗಗಳಲ್ಲಿ. ಇದು ಒಂದು ಮಟ್ಟಿಗೆ ಚಿತ್ರಕ್ಕೆ ರೂಪಕವಾಗಿ ಗೆದ್ದರೂ ಇನ್ನೊಂದು ಕಡೆ ಕಥೆಗೆ ಒಂದು ಆವರಣವನ್ನು ಕಟ್ಟಿಕೊಡುವುದರಲ್ಲಿ ಸೋಲುತ್ತದೆ.

ಗಾಜಿನ ಗೋಡೆಗಳ ಎರಡು ಬದಿಯಲ್ಲಿ ಇವರಿಬ್ಬರೂ. ಒಬ್ಬರು ಇನ್ನೊಬ್ಬರಿಗೆ ಕಾಣುತ್ತಾರೆ, ಆದರೆ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸುವುದಿಲ್ಲ. ಆದರೂ ಅಲ್ಲಿ ಅವನು, ಇಲ್ಲಿ ಇವಳು ಮಾತನಾಡುತ್ತಲೇ ಇರುತ್ತಾರೆ. ಮಾತು ಆಡಿದ ನಿರಾಳ ಇಬ್ಬರಿಗೂ, ಆದರೆ ಯಾರನ್ನು ತಲುಪಬೇಕೋ ಅವರನ್ನು ಆ ಮಾತು ತಲುಪುವುದೇ ಇಲ್ಲ.

ಕಥೆಗೆ ಹಿಂದಿರುಗುವುದಾದರೆ, ಅಹಮದ್ ಹೋಟೆಲ್ ನಲ್ಲಿ ನನಗೆ ಒಂದು ಕೋಣೆ ಕಾದಿರಿಸು ಎಂದು ಹೇಳಿರುತ್ತಾನೆ, ಆದರೆ ಮೇರಿ ಮನೆಗೇ ಹೋಗೋಣ ಎನ್ನುತ್ತಾಳೆ. ಅಷ್ಟರಲ್ಲಿ ಕಾರ್ ನಲ್ಲಿದ್ದ ಒಂದು ಫೋಟೋ ನೋಡಿದ ಅಹಮದ್ ಗೆ ಅವಳ ಬದುಕಿನಲ್ಲಿ ಬಂದಿರುವ ಹೊಸ ಗಂಡಿನ ಇರುವಿಕೆ ಅರಿವಾಗುತ್ತದೆ. ಹೀಗಾಗಿ ಮನೆಗೆ ಹೋಗಲು ಅವನಿಗೆ ಕಿರಿಕಿರಿ. ಅಷ್ಟರಲ್ಲಿ ಇಬ್ಬರು ಮಕ್ಕಳ ಪ್ರಸ್ತಾಪ ಬರುತ್ತದೆ, ಲೂಸಿ ಮತ್ತು ಲೀ. ಮೊದಲಿಗೆ ಅವರಿಬ್ಬರೂ ಮೇರಿ ಮತ್ತು ಅಹಮದ್ ನ ಮದುವೆಯ ಗುರುತುಗಳು ಎಂದೇ ಅನ್ನಿಸುತ್ತದೆ. ಆದರೆ ನಂತರ ತಿಳಿಯುವುದು, ಅವರಿಬ್ಬರೂ ಮೇರಿಯ ಮೊದಲ ಮದುವೆಗೆ ಜನಿಸಿದ ಮಕ್ಕಳು, ನಂತರ ಅವಳು ಅಹಮದ್ ನನ್ನು ಮದುವೆಯಾಗಿರುತ್ತಾಳೆ ಎಂದು. ಅವರು ಮನೆ ತಲುಪುತ್ತಾರೆ. ಅಂಗಳದಲ್ಲಿ ಇಬ್ಬರು ಮಕ್ಕಳು ಆಟವಾಡುತ್ತಿರುತ್ತಾರೆ. ಲೀ ಮತ್ತು ಫವಾದ್. ಲೀ ಗೆ ನಿಧಾನವಾಗಿ ಅಹಮದ್ ನ ಗುರುತು ಹತ್ತುತ್ತದೆ, ‘ಅಹಮದ್!’ ಎಂದು ಖಷಿಯಿಂದ ಉದ್ಘರಿಸುತ್ತಾಳೆ. ಆದರೆ ಫವಾದ್ ಹುಬ್ಬುಗಂಟಿಕ್ಕಿ ಅವನನ್ನು ನೋಡುತ್ತಲೇ ಇರುತ್ತಾನೆ. ಇಡೀ ಚಿತ್ರದಲ್ಲಿ ಫವಾದ್ ಪಾತ್ರದ ದುರಂತ ದೊಡ್ಡದು. ಅದರ ಆಳವನ್ನು, ಆ ಭಾರವನ್ನು ಆ ಮಗು ಮೈತುಂಬಾ ಹೊತ್ತಿರುತ್ತದೆ.

ಅಹಮದ್ ಮನೆಯಲ್ಲಿ ಇರುವಾಗಲೇ ಮೇರಿ ಮತ್ತು ಫವಾದ್ ನಡುವೆ ಸಣ್ಣದಾಗಿ ಪ್ರಾರಂಭವಾದ ಕಿರಿಕಿರಿ, ಎಳೆ ಹರಿದು ಫವಾದ್ ಮನೆಬಿಟ್ಟು ಓಡುತ್ತಾನೆ. ಅವನನ್ನು ಬಲವಂತದಿಂದ ಒಳಕ್ಕೆ ಎಳೆದುಕೊಂಡು ಬರುವ ಮೇರಿ ಅವನನ್ನು ಕೋಣೆಯಲ್ಲಿ ಕೂಡಿಹಾಕುತ್ತಾಳೆ. ಆ ಹುಡುಗನದು ಕಟ್ಟಿಹಾಕಲಾಗದ ಚಡಪಡಿಕೆ. ಆದರೆ ಅಹಮದ್ ಅವನನ್ನು ಸಮಾಧಾನಪಡಿಸುತ್ತಾನೆ. ಮಕ್ಕಳ ಜೊತೆ ಅವನು ಒಂದು ಸೇತುವೆ ಕಟ್ಟಿಕೊಳ್ಳುವ ರೀತಿಯೇ ಸೊಗಸು. ಮೇರಿಯ ದೊಡ್ಡ ಮಗಳು ಯಾವುದೋ ಕಾರಣಕ್ಕೆ ಮುನಿಸಿಕೊಂಡಿದ್ದಾಳೆ. ಅವಳೊಡನೆ ಮಾತನಾಡುವೆಯಾ ಎಂದು ಮೇರಿ ಕೇಳುತ್ತಾಳೆ. ತನಗೇ ಗೊತ್ತಿಲ್ಲದಂತೆ ಅಹಮದ್ ಅವಳ ಜಗತ್ತಿನ ಬಲೆಯಲ್ಲಿ ಸಿಲುಕಿಕೊಳ್ಳುತ್ತಾ ಹೋಗುತ್ತಾನೆ.

ಇಡೀ ಚಿತ್ರ ಒಂದು ಬಿಗಿಯಾಗಿ ಕಟ್ಟಿಟ್ಟ ಟೇಪಿನ ಒಂದು ತುದಿ ಬಿಚ್ಚಿಕೊಂಡಹಾಗೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮನೆಗೆ ಬಂದ ಅವನು ‘ಇಲ್ಲಿದ್ದ ಶೆಲ್ಫ್ ಏನಾಯಿತು? ಮೊದಲಿನ ಗೋಡೆಯ ಬಣ್ಣವೇ ಚೆನ್ನಾಗಿತ್ತು’ ಎಂದು ಹೇಳುತ್ತಾ ಹೋಗುತ್ತಾನೆ. ಹಾಗೆ ಹೇಳುವುದು ‘ನೋಡು ನನಗೆ ಇನ್ನೂ ನೆನಪಿದೆ’ ಎಂದು ಸಣ್ಣ ಹಕ್ಕನ್ನು ಸ್ಥಾಪಿಸಿಕೊಳ್ಳಲೋ ಅಥವಾ ‘ಹೊಸದೇನೂ ಚೆನ್ನಾಗಿಲ್ಲ’ ಎನ್ನುವ ಶರಾ ಆಗಿರುತ್ತದೆಯೋ? ಮನೆಗೆ ಆಗ ಹೊಸದಾಗಿ ಪೇಂಟ್ ಹಾಕುತ್ತಿರುವುದು ಚಿತ್ರದ ಪರಿಸ್ಥಿತಿಯನ್ನು ತೋರುತ್ತದೆ. ರಿನೋವೇಟ್ ಆಗುತ್ತಿರುವ ಮನೆಯಲ್ಲಿ ಎಲ್ಲವೂ ಅಸ್ತವ್ಯಸ್ತ. ಅಹಮದ್ ಗೆ ಕೈ ಊರಿದಲ್ಲಿ, ಒರಗಿದಲ್ಲಿ ಬಟ್ಟೆಗೆ, ಮೈಗೆ ಅಂಟುವ ಹಸಿ ಬಣ್ಣ, ಸಮೀರ್ ಗೆ ಪೇಂಟ್ ಎಂದರೆ ಅಲರ್ಜಿ, ಅವನ ಕಣ್ಣುಗಳಲ್ಲಿ ನಿಲ್ಲದ ನೀರು, ಆದರೆ ಅಲ್ಲೇ ವಾಸ ಮಾಡಬೇಕಾದ ಅನಿವಾರ್ಯತೆ. ಮಕ್ಕಳಿಗೆ ಅದರ ಪರಿವೆ ಇಲ್ಲ, ಮೇರಿಗೆ ಅದು ಅವಳದೇ ಮನೆ..

ಫವಾದ್ ಈಗ ಮೇರಿ ಮದುವೆ ಆಗಲಿರುವ ಸಮೀರ್ ನ ಮೊದಲ ಮದುವೆಯ ಕೂಸು. ಸಮೀರ್ ನ ಹೆಂಡತಿ ಆಸ್ಪತ್ರೆಯಲ್ಲಿದ್ದಾಳೆ, ಕೋಮಾದಲ್ಲಿದ್ದಾಳೆ. ಅವನಿಗೀಗ ಈ ಮನೆಯಲ್ಲಿ ಅಪ್ಪನ ಹೊಸ ಗೆಳತಿಯ ಜೊತೆ, ಅವಳ ಮಕ್ಕಳ ಜೊತೆ ಹೊಂದಿಕೊಂಡು ಇರಲೇಬೇಕಾದ ಅನಿವಾರ್ಯತೆ. ಇಡೀ ಚಿತ್ರದಲ್ಲಿ ಅವನ ಹುಬ್ಬಿನ ಗಂಟು ಬಿಚ್ಚುವುದಿಲ್ಲ, ಸಹಜವಾಗಿ ನಗುವುದು, ಎಲ್ಲರೊಡನೆ ಬೆರೆಯುವುದು ಅವನಿಗೆ ಸಾಧ್ಯವೇ ಇಲ್ಲ. ಇದರ ನಡುವೆ ಮೇರಿಯ ಮೊದಲ ಮಗಳು ಬರುತ್ತಾಳೆ, ಬಂದವಳೇ ಅವಳ ಕೋಣೆಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾಳೆ. ಒಂದು ವಿಶಿಷ್ಟ ಧಾಟಿಯಲ್ಲಿ ಅಹಮದ್ ಬಾಗಿಲು ಬಡಿದ ಕೂಡಲೇ, ‘ಅಹಮದ್!’ ಎಂದು ಬಾಗಿಲು ತೆಗೆಯುತ್ತಾಳೆ. ಜೊತೆಗಿದ್ದಾಗ ಮಕ್ಕಳ ಜೊತೆಗೆ ಅವನು ಬೆಳೆಸಿಕೊಂಡ ಸಂಬಂಧ ಅಂತಹದ್ದು. ಅಮ್ಮನ ಜೊತೆ ಮಾತನಾಡದ ಹುಡುಗಿ ಅಹಮದ್ ಜೊತೆಗೆ ಮಾತನಾಡುತ್ತಾಳೆ. ಅಮ್ಮ ಮತ್ತು ಆತನ ನಡುವಿನ ಸಂಬಂಧ ತಿಳಿದಿದ್ದರಿಂದಲೇ ಸೆಲೆನ್ ಆತ್ಮಹತ್ಯೆಗೆ ಪ್ರಯತ್ನಿಸಿದಳು, ಈಗ ಕೋಮಾದಲ್ಲಿದ್ದಾಳೆ, ಅಮ್ಮ ಅವನನ್ನು ಮದುವೆಯಾಗುವುದು ನನಗೆ ಇಷ್ಟವಿಲ್ಲ ಎನ್ನುತ್ತಾಳೆ. ಆದರೆ ಮೇರಿ ಗರ್ಭಿಣಿಯಾಗಿರುತ್ತಾಳೆ, ಮದುವೆ ತಪ್ಪಿಸಲಾಗದು ಎಂದು ಅಹಮದ್ ಹೇಳಿದಾಗ ಲೂಸಿಗೆ ಅದೊಂದು ಆಘಾತ.

ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಇವರಿಬ್ಬರ ಸಂಬಂಧದಿಂದಲ್ಲ. ಸೆಲೆನ್ ಸಾಯಲು ಬಯಸಿದ್ದು, ಅದಕ್ಕೆ ಮೊದಲು ಸಮೀರ್ ನ ಡ್ರೈ ವಾಷಿಂಗ್ ಅಂಗಡಿಯ ಗಿರಾಕಿಯೊಡನೆ ಜಗಳ ಆಗಿತ್ತು ಎಂದು ಸಾಕ್ಷಿ ಸಿಕ್ಕಾಗ, ಲೂಸಿಯಲ್ಲಿನ ರಹಸ್ಯದ ಗೋಡೆ ಸ್ಪೋಟಿಸುತ್ತದೆ. ‘ಇಲ್ಲ, ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದ ಹಿಂದಿನ ದಿನ ನಾನು ಇವರಿಬ್ಬರ ಪ್ರೀತಿಯ ಈ ಮೇಲ್ ಗಳನ್ನು ನಾನೇ ಅವಳಿಗೆ ತಲುಪಿಸಿದ್ದೆ’ ಎಂದು ಬಾಯಿಬಿಡುತ್ತಾಳೆ. ಅವಳು ಹೊತ್ತಿರುವ ಅಪರಾಧಿಪ್ರಜ್ಞೆಯ ಮೂಲ ಅಲ್ಲಿರುತ್ತದೆ. ವ್ಯಕ್ತಿಗಳಲ್ಲಿ ಮೂಲಭೂತವಾಗಿರುವ ಸ್ವಾರ್ಥ, ಸ್ವಹಿತಾಸಕ್ತಿ, ಅದಕ್ಕಾಗಿ ಅವರೇ ತೆಗೆದುಕೊಳ್ಳುವ ನಿರ್ಧಾರಗಳು, ಅದಕ್ಕೆ ತಕ್ಕಂತೆ ಅವರು ರೂಪಿಸಿಕೊಳ್ಳುವ ಅಭಿಪ್ರಾಯಗಳು, ಅವರವರ ಯುದ್ಧದಲ್ಲಿ, ಅವರವರ ಮನಸ್ಸಿನಲ್ಲಿ, ಅವರು ಯಾವಾಗಲೂ ನಿರಪರಾಧಿಗಳೇ! ಚಿತ್ರ ಮುಂದೆ ಚಲಿಸಿದಂತೆಲ್ಲ ಒಬ್ಬೊಬ್ಬರ ಮುಖದ ಜೊತೆಗೆ, ಒಂದೊಂದು ಸತ್ಯದ ಅನಾವರಣವಾಗುತ್ತಾ ಹೋಗುತ್ತದೆ. ಯಾವುದಕ್ಕೂ ಆತ್ಯಂತಿಕ ಸತ್ಯ ಎನ್ನುವುದು ಇರುವುದಿಲ್ಲ, ಅಲ್ಲಿರುವವರಿಗೆಲ್ಲಾ ಅವರದೇ ಸತ್ಯ ಎನ್ನುವುದನ್ನು ಎಲ್ಲಾ ಪಾತ್ರಧಾರಿಗಳೂ ಸಾಬೀತು ಪಡಿಸುತ್ತಾ ಹೋಗುತ್ತಾರೆ.

ಮನೆಗೆ ಬಂದ ಅವನು ‘ಇಲ್ಲಿದ್ದ ಶೆಲ್ಫ್ ಏನಾಯಿತು? ಮೊದಲಿನ ಗೋಡೆಯ ಬಣ್ಣವೇ ಚೆನ್ನಾಗಿತ್ತು’ ಎಂದು ಹೇಳುತ್ತಾ ಹೋಗುತ್ತಾನೆ. ಹಾಗೆ ಹೇಳುವುದು ‘ನೋಡು ನನಗೆ ಇನ್ನೂ ನೆನಪಿದೆ’ ಎಂದು ಸಣ್ಣ ಹಕ್ಕನ್ನು ಸ್ಥಾಪಿಸಿಕೊಳ್ಳಲೋ ಅಥವಾ ‘ಹೊಸದೇನೂ ಚೆನ್ನಾಗಿಲ್ಲ’ ಎನ್ನುವ ಶರಾ ಆಗಿರುತ್ತದೆಯೋ? ಮನೆಗೆ ಆಗ ಹೊಸದಾಗಿ ಪೇಂಟ್ ಹಾಕುತ್ತಿರುವುದು ಚಿತ್ರದ ಪರಿಸ್ಥಿತಿಯನ್ನು ತೋರುತ್ತದೆ.

ಚಿತ್ರದುದ್ದಕ್ಕೂ ಅಂತರ್ಗತವಾಗಿ, ಹೆಣಿಗೆಯೊಳಗಿನ ದಾರದಂತೆ ಬಂದಿರುವುದು ಅಹಮದ್ ಮತ್ತು ಸಮೀರ್ ನಡುವಿನ ಮಾತೇ ಇಲ್ಲದ ಸಂಘರ್ಷ. ತಾನಿದ್ದ ಜಾಗದಲ್ಲಿ ಈಗ ಇವನು ಬಂದಿದ್ದಾನೆ ಎನ್ನುವ ತಣ್ಣನೆಯ ಆಕ್ರೋಶ ಅಹಮದ್ ಗೆ. ಇವನು ಹೋಗಿ ಆಗಿದೆ, ಈಗಲೂ ಬಂದು ಏಕೆ ಈ ಮನೆಯಲ್ಲಿ, ತನ್ನ ಪ್ರೇಯಸಿಯ ಮೇಲೆ, ಮಕ್ಕಳ ಮೇಲೆ ತನ್ನ ಇರುವಿಕೆಯನ್ನು ಸ್ಥಾಪಿಸುತ್ತಿದ್ದಾನೆ ಎನ್ನುವ ರೊಚ್ಚು ಸಮೀರ್ ಗೆ. ಆ ಮನೆಯಲ್ಲಿನ ಎಲ್ಲಾ ಕೋಣೆಗಳೂ ಅಹಮದ್ ಗೆ ಪರಿಚಿತ, ಮಕ್ಕಳ ಮನಸ್ಸಿನಲ್ಲಿ ಅವನ ಸ್ಥಾನ ಇವನಿಗೆ ದಕ್ಕಿರುವುದೇ ಇಲ್ಲ. ಮನೆಯಲ್ಲಿನ ಜನ ಇರಲಿ, ವಸ್ತುಗಳೂ ಅವನಿಗೆ ಪರಿಚಿತ. ಅಡಿಗೆ ಮನೆಯಲ್ಲಿ, ನೀರಿನ ಪೈಪ್ ಕೆಟ್ಟಿರುತ್ತದೆ, ಸಮೀರ್ ಬೆಳಗ್ಗೆ ಎದ್ದು ಬರುವಷ್ಟರಲ್ಲಿ ಅಹಮದ್ ಅದನ್ನು ರಿಪೇರಿ ಮಾಡುತ್ತಿರುತ್ತಾನೆ, ಅದು ಅವನದೇ ಮನೆಯೇನೋ ಎನ್ನುವಂತೆ.

(ನಿರ್ದೇಶಕ ಅಸ್ಘರ್ ಫರ್ಹಾದಿ)

ಇಂತಹ ಹಲವಾರು ಘಟನೆಗಳು ನಡೆಯುತ್ತವೆ. ಅಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸಂಘರ್ಷವಿದೆ. ‘ಅವನು ಇರುವಾಗ ನನ್ನನ್ನು ಮನೆಗೇಕೆ ಕರೆದೆ? ರಾತ್ರಿ ಇಡೀ ಅವನ ಮಗುವಿನ ಜೊತೆಯಲ್ಲಿ ನಾನು ಮಲಗಬೇಕಾಯ್ತು. ನಾಲ್ಕು ವರ್ಷಗಳಿಂದ ಇಲ್ಲದ್ದು ಈಗಲೇ ಏಕೆ ವಿಚ್ಛೇದನ? ನಿನ್ನ ಬದುಕಿನಲ್ಲಿ ಈಗ ಇನ್ನೊಬ್ಬರು ಬಂದಿದ್ದಾರೆ ಎಂದು ಸಾಬೀತು ಪಡಿಸಲು ತಾನೆ’ ಎಂದು ಒಮ್ಮೆ ಅಹಮದ್ ಕೇಳುತ್ತಾನೆ. ಸಂಬಂಧಗಳು ಕೈಜಾರಿದ ಮೇಲೆ ಚುಕ್ತಾ ಮಾಡಿಕೊಳ್ಳಬೇಕಾದ ಲೆಕ್ಕಗಳು ಅದೆಷ್ಟು…

ಅಹಮದ್ ತಂದಿದ್ದ ಸೂಟ್ಕೇಸ್ ಮುರಿದಿದೆ. ಅಟ್ಟದಲ್ಲಿನ ನಿನ್ನ ಇನ್ನೊಂದು ಸೂಟ್ಕೇಸ್ ತೆಗೆದುಕೊಂಡು, ನಿನ್ನ ಸಾಮಾನುಗಳೆಲ್ಲವನ್ನೂ ತೆಗೆದುಕೊಂಡು ಇಲ್ಲಿಂದ ಹೊರಟುಬಿಡು ಎಂದು ಮೇರಿ ಹೇಳುತ್ತಾಳೆ. ಸುರಿವ ಮಳೆಯಲ್ಲಿ ಅಹಮದ್ ಹೊರಡುತ್ತಾನೆ. ನೆನಪುಗಳ ಎಳೆಗಳು ತುಂಡಾದವೇ? ಉಹೂ ಅದು ಇನ್ನೆಲ್ಲೋ ಹೆಡೆಯಾಡಿಸುತ್ತಿರುತ್ತದೆ.

ಆಸ್ಪತ್ರೆಯಲ್ಲಿದ್ದ ಸೆಲೆನ್ ಹೊಟ್ಟೆಯ ಮೇಲೆ ತರಚು ಗಾಯಗಳು. ಅದು ಬಂದದ್ದು ಹೇಗೆ? ಅವಳೇ ತನ್ನನ್ನು ತಾನು ಘಾಸಿಗೊಳಿಸಿಕೊಳ್ಳಲು ಪ್ರಯತ್ನಿಸಿದಳೇ? ಸಮೀರ್ ಮತ್ತು ಮೇರಿಯಲ್ಲಿ ಗಿಲ್ಟ್. ಆಸ್ಪತ್ರೆಯಲ್ಲಿ ನರ್ಸ್, ‘ಮನುಷ್ಯರ ನೆನಪುಗಳಲ್ಲಿ ಕಟ್ಟಕಡೆಗೆ ಕಳೆದುಹೋಗುವುದು ಪರಿಮಳದ ನೆನಪು.’ ಎನ್ನುತ್ತಾಳೆ. ಸಮೀರ್ ಮನೆಯಲ್ಲಿದ್ದ ಆಕೆಯ ನೆಚ್ಚಿನ ಸೆಂಟ್ ಬಾಟಲ್ ಗಳನ್ನು ತೆಗೆದುಕೊಂಡು ಹೋಗುತ್ತಾನೆ. ನರ್ಸ್ ಒಂದೆರಡು ಸಲ ಪ್ರಯತ್ನಿಸುತ್ತಾಳೆ, ಏನೂ ಪರಿಣಾಮ ಆಗುವುದಿಲ್ಲ. ಕಡೆಗೆ ಆಕೆಯ ನೆಚ್ಚಿನ ಸೆಂಟ್ ಕೆನ್ನೆ, ಭುಜಗಳ ಮೇಲೆ ಪೂಸಿಕೊಂಡ ಅವನು ಅವಳ ಮೇಲೆ ಬಾಗಿ, ನನ್ನ ಪರಿಮಳ ನಿನಗೆ ಬಂದರೆ, ನನ್ನ ಬೆರಳುಗಳನ್ನು ಹಿಡಿದುಕೋ ಅನ್ನುತ್ತಾನೆ. ಬಾಗಿ ಮೇಲೆದ್ದ ಅವನ ಕೈಗಳನ್ನು ಅವಳು ಕೋಮಾದಲ್ಲೇ ಬಿಗಿಯಾಗಿ ಹಿಡಿದುಕೊಂಡಿರುತ್ತಾಳೆ. ಕ್ಯಾಮೆರಾ ಅಲ್ಲಿಗೆ ಫ್ರೀಜ್ ಆಗಿ ಚಿತ್ರ ಮುಗಿಯುತ್ತದೆ. ಇಲ್ಲಿ ಅವಳ ಹಿಡಿಯಲ್ಲಿ ಅವನ ಬೆರಳು, ಅಲ್ಲಿ ಇನ್ನೊಬ್ಬಳ ಒಡಲೊಳಗೆ ಇವನ ಕೂಸು. ಇಟ್ಟ ಹೆಜ್ಜೆಗಳ ಗುರುತು ಸುಲಭಕ್ಕೆ ಮಾಸುವುದಿಲ್ಲ, ನಿನ್ನೆಗಳ ಹಂಗು ಸಲೀಸಾಗಿ ನಿವಾರಿಸಿಕೊಳ್ಳಲಾಗುವುದಿಲ್ಲ. ನಮಗೇ ಗೊತ್ತಿಲ್ಲದಂತೆ ಭೂತ ವರ್ತಮಾನವಾಗಿರುತ್ತದೆ, ವರ್ತಮಾನ ಭೂತವಾಗಿರುತ್ತದೆ.

ಟೆಹರಾನ್ ನಿಂದ ಬಂದ ಅಹಮದ್ ಇಲ್ಲಿನ ಒಬ್ಬೊಬ್ಬರ ಜೊತೆ ನಡೆಸುವ ಸಂವಾದದಲ್ಲಿ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಇದು ಹಿರಿಯರ ಕಥೆಯಂತೆ ಕಂಡರೂ, ಅದಕ್ಕೆ ಸಮಾನಂತರದಲ್ಲಿ ನಡೆಯುವ ಮಕ್ಕಳ ಲೋಕದ ವ್ಯಾಪಾರವನ್ನೂ ನಾವಿಲ್ಲಿ ಗಮನಿಸಬೇಕಾಗುತ್ತದೆ. ಕಣ್ಣೆದುರಲ್ಲಿ ತಾಯಿ ಕೀಟನಾಶಕ ನುಂಗಿ ಕುಸಿದಿರುವುದನ್ನು, ಆಸ್ಪತ್ರೆಯ ಹಾಸಿಗೆಯ ಮೇಲೆ ತರಕಾರಿಯಂತೆ ಬಿದ್ದವಳನ್ನೂ ತಾಯಿ ಎಂದು ಪ್ರೀತಿಸಲು ಫವಾದ್ ಗೆ ಆಗುತ್ತಿಲ್ಲ, ಹಾಗೆಂದು ಇನ್ನೊಂದು ಮನೆ ಮತ್ತು ಮನೆಯವರನ್ನೂ ಒಪ್ಪಿಕೊಳ್ಳಲಾಗುತ್ತಿಲ್ಲ. ತಾನು ಹುಟ್ಟಿದ ಮೇಲೆ ಅಮ್ಮನ ಜೀವನದಲ್ಲಿ ಮೂರು ಜನ ಗಂಡಸರು ಬಂದು ಹೋಗಿದ್ದಾರೆ. ಯಾರ ಜೊತೆಯಲ್ಲಿಯೂ ಅಮ್ಮ ನಿಂತಿಲ್ಲ, ನನ್ನ ಬದುಕಿಗೆ ಒಂದು ಭದ್ರತೆಯೇ ಇಲ್ಲ ಎನ್ನುವುದು ಲೂಸಿಯ ತೊಳಲಾಟ. ಅದನ್ನು ತಪ್ಪಿಸಲೆಂದೇ ಆಕೆ ಆ ಈಮೇಲ್ ಗಳನ್ನು ಕಳುಹಿಸಿದ್ದಾಳೆ. ಪುಟ್ಟ ಹುಡುಗಿ ಲೀ ಮನೆಯ ಎಲ್ಲಾ ಯುದ್ಧಗಳ ರಣರಂಗದಲ್ಲಿ ನಿಂತ ಪುಟ್ಟ ಬಾಲಕಿ. ಹೋರಾಡಲು ಅವಳಲ್ಲಿ ಶಸ್ತ್ರಗಳೂ ಇಲ್ಲ. ಮಕ್ಕಳು ಕೆಲವು ಸಲ ಸಂವಹನ ಮಾಡುವುದಿಲ್ಲ ಎಂದು ನಾವು ಅಂದುಕೊಳ್ಳುತ್ತೇವೆ, ಆದರೆ ಅವು ಅವರದೇ ಭಾಷೆಯಲ್ಲಿ, ಅವರದೇ ವಿಧಾನದಲ್ಲಿ ಮಾತನಾಡುತ್ತಲೇ ಇರುತ್ತಾರೆ…

ಸತ್ಯವನ್ನು ಹುಡುಕು, ಸತ್ಯ ನಿನ್ನನ್ನು ಸ್ವತಂತ್ರಗೊಳಿಸುತ್ತದೆ ಎನ್ನುವ ಮಾತಿದೆ. ಆದರೆ ಸುಮಾರು ಸಲ ಯೋಚಿಸಬೇಕಾದ್ದು, ಸತ್ಯ ಯಾರನ್ನು ಸ್ವತಂತ್ರಗೊಳಿಸುತ್ತದೆ? ಅದು ಯಾರ ಬಿಡುಗಡೆ? ಹೇಳಿದವರೇನೋ ಹೇಳಿ ಹಗುರಾಗಬಹುದು, ಆದರೆ ಕೇಳಿಸಿಕೊಂಡವರ ಪಾಡೇನು? ಈ ಚಿತ್ರದಲ್ಲಿ ಒಬ್ಬೊಬ್ಬರ ಒಂದೊಂದು ಸತ್ಯ ಅನಾವರಣಗೊಂಡಾಗಲೂ ಕೇಳಿದವರಿಗೆ ಅದು ಬಿಡುಗಡೆಯೋ ಭಾರವೋ ಗೊತ್ತೇ ಆಗುವುದಿಲ್ಲ.. ಈ ಚಿತ್ರದ ಕತೆ ಕೆಲವೊಮ್ಮೆ ಬಿಗಿಯಾಗಿ ಕೆಲವೊಮ್ಮೆ ಊಹೆಗೆ ನಿಲುಕುವ ಹಾಗೆ ಇದೆ. ಆದರೆ ಚಿತ್ರವನ್ನು ನಿಜಕ್ಕೂ ಕಟ್ಟಿ ನಿಲ್ಲಿಸುವುದು ಕಲಾವಿದರ ನಟನೆ ಮತ್ತು ಚಿತ್ರದ ನಿರ್ದೇಶನ. ತೀರಾ ಭಾವಾತಿರೇಕ ತೋರಿಸಬಹುದಾದ ದೃಶ್ಯಗಳನ್ನೂ ಸಹ ಸಾಧ್ಯವಾದಷ್ಟೂ ಸೂಚ್ಯವಾಗಿ ಕಟ್ಟಿರುವುದರಿಂದ ನೋಡುವವರಲ್ಲಿ ಅದು ಒಂದು ಒತ್ತಡವನ್ನು ಹುಟ್ಟಿಸುತ್ತದೆ. ಇನ್ನೊಂದು ವಿಶೇಷ ಎಂದರೆ ಚಿತ್ರದ ಹೆಸರು The Past ಆದರೂ ಸಹ ಒಮ್ಮೆಯೂ ಭೂತಕಾಲ ಕಣ್ಣೆದುರಿನ ದೃಶ್ಯವಾಗಿ, ವ್ಯಕ್ತವಾಗಿ ಬರುವುದೇ ಇಲ್ಲ. ಅದು ಇಂದಿನ ಒಳಗೆಯೇ ಹೆಣೆದುಕೊಂಡಿರುತ್ತದೆ. ಹಾಗಾಗಿ ಇಡೀ ಚಿತ್ರವೇ ಒಂದು ಸಶಕ್ತ ರೂಪಕವಾಗುತ್ತದೆ.