ಕ್ರಿಸ್ಮಸ್ ಲಂಚ್ ಮುಗಿಸಿಕೊಂಡು ವಾಪಸ್ ಬರುವಾಗ ನಾವು ‘ಕಂಟ್ರಿ ಸೈಡ್’ ದಾರಿ ಹಿಡಿದಿದ್ದೆವು. ನನಗೆ ಅದಾವುದರ ತಲೆಬುಡ ಗೊತ್ತಿರಲಿಲ್ಲ. ಕರೆದುಕೊಂಡು ಹೋದವರು ವಾಪಸ್ ಮನೆ ಸೇರಿಸುತ್ತಾರೆ ಎಂದು ನಿಶ್ಚಿಂತೆಯಿಂದ ಕಿಟಕಿಯಿಂದ ಕಾಣುತ್ತಿದ್ದ ಆಸ್ಟ್ರೇಲಿಯನ್ ಪೊದೆಕಾಡನ್ನು ನೋಡುತ್ತಾ ಕಳೆದುಹೋಗಿದ್ದೆ. ಇದ್ದಕ್ಕಿದ್ದಂತೆ ಕಾರಿನಲ್ಲಿ ತಾಪಮಾನ ಏರಿದಂತಾಯ್ತು. ಮುಖ ತಿರುಗಿಸಿದಾಗ ಆ ಕಡೆ ಕಂಡಿದ್ದು ಉದ್ದಾನುದ್ದಕ್ಕೆ ಹರಡಿಕೊಂಡು ಉರಿಯುತ್ತಿದ್ದ ಬೆಂಕಿಜ್ವಾಲೆ. ನಾನಿದ್ದ ಕಾರಿನಿಂದ ಸ್ಪಷ್ಟವಾಗಿ ಕಾಣುತ್ತಿದ್ದು, ಶಾಖದ ಅನುಭವವೂ ಚೆನ್ನಾಗಾಗುತ್ತಿತ್ತು. ಅಂದರೆ ಅಷ್ಟು ಹತ್ತಿರದಲ್ಲಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ಅದ್ಯಾಕೊ ಅಲ್ಲಿ ಝೋಹ್ರಾನ್ ಮಮ್ದಾನಿ ಗೆದ್ದಿದ್ದು ಇಲ್ಲಿ ಸ್ವಲ್ಪ ತಂಪುಗಾಳಿ ಬೀಸಿದಂತಾಗಿದೆ. ಅವರ ಗೆಲುವಿನಿಂದ ನ್ಯೂಯಾರ್ಕ್ ನಗರ ಯದ್ವಾತದ್ವಾ ಸುಧಾರಿಸಿಬಿಡುತ್ತದೆ ಅನ್ನೋ ಮಾತಿಗಿಂತಲೂ, ಗೆಲುವು ಅಲ್ಲಿನ ಸರ್ವಾಧಿಕಾರಿಯ ಹುಚ್ಚುಕುಣಿತದ ಲಯಕ್ಕೆ ಅರೆ ಕ್ಷಣವಾದರೂ ಬೆಪ್ಪು ತಂದಿದೆ. ಮಮ್ದಾನಿ ಕೊಟ್ಟಿರುವ ಉಚಿತ ಆರೋಗ್ಯ ಮುಂತಾದ ಆಶ್ವಾಸನೆಗಳು ಎಷ್ಟರಮಟ್ಟಿಗೆ ನಿಜವಾಗುತ್ತದೊ ನಾ ಕಾಣೆ. ಆದರೆ, ಅವರ ಮತ್ತು ಅವರ ಕುಟುಂಬದ ಭಾಷೆ-ಸಂಸ್ಕೃತಿಗಳ ವೈವಿಧ್ಯತೆಗಳು ನ್ಯೂಯಾರ್ಕ್ ನಗರದ ಅಸ್ಮಿತೆಯನ್ನು ಜ್ಞಾಪಿಸಿದೆ. ಇತ್ತೀಚಿನ ದಿನಗಳಲ್ಲಿ ಭಾರತೀಯರ ವಿರುದ್ಧ ಹೆಚ್ಚುತ್ತಿದ್ದ ಅಸಹನೆಗೆ ಪುಟ್ಟದೊಂದು ಕೊಕ್ ಬಿದ್ದಿದೆ.
ಹಾಗಂತ ಇಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತೀಯ ಜನಾಂಗದ ಬಗ್ಗೆ ಬಹಿರಂಗವಾಗಿ ಪ್ರಕಟವಾಗಿರುವ ಅಸಹನೆಯ ಅಲೆಗಳಲ್ಲಿ ಬದಲಾವಣೆಯೇನೂ ಕಂಡಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಅವು ಇನ್ನೂ ಅಪ್ಪಳಿಸುತ್ತಲೆ ಇವೆ. ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಸೋತಾಗ ಅವು ಜೋರಾಗಿ ಸದ್ದು ಮಾಡಿದ್ದವು. ಮೊನ್ನೆ ತಾನೆ ಆಸ್ಟ್ರೇಲಿಯಾ ದೇಶದ Race discrimination commissioner ಗಿರಿಧರನ್ ಶಿವರಾಮನ್ ಆಸ್ಟ್ರೇಲಿಯಾ ಸಮಾಜವನ್ನು ಬಾಧಿಸುತ್ತಿರುವ ರೇಸಿಸಮ್ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಉದ್ಯೋಗ ಸ್ಥಳಗಳಲ್ಲಿ ಆಸ್ಟ್ರೇಲಿಯಾದ ಮೂಲಜನರು ಮತ್ತು ಬಿಳಿಯರಲ್ಲದ ಬೇರೆಬೇರೆ ಜನಾಂಗಗಳವರು ಅನುಭವಿಸುತ್ತಿರುವ ರೇಸಿಸಮ್ ಪ್ರಕರಣಗಳಿಂದ ಬಹಳಷ್ಟು ನಷ್ಟವಾಗುತ್ತಿದೆ, ಎಂದಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಈ ನಷ್ಟ-ಕಷ್ಟಗಳಿಂದ ಆರ್ಥಿಕವಾಗಿ ಕೂಡ ಪರಿಣಾಮಗಳಿವೆ. ರೇಸಿಸಮ್ ಅನುಭವಗಳಿಂದ ನೊಂದು ಕೆಲಸ ಬಿಡುವವರಲ್ಲಿ ಆಸ್ಟ್ರೇಲಿಯನ್ ಮೂಲಜನರ ಸಂಖ್ಯೆ ಹೆಚ್ಚಿದ್ದರೂ, ಅದನ್ನು ಸಹಿಸಿಕೊಂಡು ಅದರ ಬಗ್ಗೆ ಬಾಯಿಬಿಡದ ಜನರ ಸಂಖ್ಯೆ ಇನ್ನೂ ದೊಡ್ಡದು. ಈ ಸಮಸ್ಯೆಯಿಂದ ದೇಶದ ಅಭಿವೃದ್ಧಿಗೆ ಕೂಡ ಪೆಟ್ಟು ಬೀಳುತ್ತಿದೆ, ಅದರ ಸಂಪೂರ್ಣ ಸ್ವರೂಪದ ಅಂದಾಜು ನಮಗಿನ್ನೂ ಇಲ್ಲ, ತಿಳಿದುಕೊಳ್ಳಬೇಕಿರುವ ಅಗತ್ಯವಿದೆ, ಎಂದು ಪಾರ್ಲಿಮೆಂಟಿನಲ್ಲಿ ಗಿರಿಧರನ್ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಆಸ್ಟ್ರೇಲಿಯನ್ ಕೇಂದ್ರೀಯ ಸರಕಾರವು ಈ ಬಗ್ಗೆ ಸ್ಪಷ್ಟ ನಿಲುವು ತೋರಬೇಕು, ಅಗತ್ಯವಿರುವ ಸುಧಾರಣೆಗಳನ್ನು ತರಬೇಕು, ಎಂದು ಗಿರಿಧರನ್ ಕೇಳಿದ್ದಾರೆ.

ಸರಿ, ಮತ್ತೊಂದು ತರಹದ ಅಸಹನೆಯತ್ತ ಮುಖ ಮಾಡೋಣವಂತೆ. ಇದು ಹೆಚ್ಚುತ್ತಿರುವ ಅಖಂಡ ಬಿಸಿಲಿನ ಬಗ್ಗೆ ಇರುವ ಅಸಹನೆ. ಇದು ಗುಡ್ ಅಸಹನೆ ಎಂದು ನನ್ನ ವಾದ. ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿರುವ ಭೂ-ತಾಪಮಾನದ ಪರಿಣಾಮ ಈ ಅತೀವ ಬಿಸಿಲು. ಹೋದವಾರದ ಸೋಮವಾರ, ೨೭ರಂದು, ಬ್ರಿಸ್ಬೇನ್ ಏರ್-ಪೋರ್ಟ್‌ನಲ್ಲಿ ದಾಖಲಾದ ಬಿಸಿಲು ಬರೋಬ್ಬರಿ ೪೦ ಡಿಗ್ರಿ. ಅವತ್ತು ಬೆಳಗ್ಗೆ ನಾನು ಕೆಲಸಕ್ಕೆ ಹೋಗಲು ಏಳೂಮುಕ್ಕಾಲು ಗಂಟೆಗೆ ಮನೆ ಬಿಟ್ಟು ಪ್ರಯಾಣ ಮಾಡುತ್ತಿದ್ದಾಗ ಬಿಸಿಲಿನ ಝಳ ರಾಚುತ್ತಿತ್ತು. ಮಧ್ಯಾಹ್ನದ ಹೊತ್ತಿಗೆ ೩೭.೮ ಡಿಗ್ರಿ ತಾಪಮಾನ ದಾಖಲಾಗಿತ್ತು. ಏರ್ ಕಂಡೀಷನ್ ಕಟ್ಟಡದಿಂದ ಹೊರಗೆ ಕಾಲಿಟ್ಟರೆ ಮೈಸುಡುವ ಶಾಖ.
ಜೊತೆಗೆ ಅದೇ ಸಂಜೆ ಸ್ಥಳೀಯ ನಗರಪಾಲಿಕೆ ಸಿಬ್ಬಂದಿ ‘backburning’ ನಡೆಸಿದ್ದರು. ಇದರಿಂದ ಸಂಜೆ ಆಕಾಶದಲ್ಲಿ ಮುಳುಗುತ್ತಿದ್ದ ಸೂರ್ಯ ಅಚ್ಚ ಕೆಂಪು ಬಣ್ಣಕ್ಕೆ ತಿರುಗಿ ಅದು ಸೂರ್ಯನೋ ಇಲ್ಲಾ ಯಾವುದೋ ಅಪರಿಚಿತ ಆಕಾಶಕಾಯವೋ ಎಂದಾಗಿತ್ತು. ನನ್ನ ಸಹೋದ್ಯೋಗಿಯೊಬ್ಬರು ‘ಇದೊಂದು ತರಹದ ಭ್ರಮೆ, ಬುದ್ಧಿಸ್ತಿಮಿತವನ್ನು ತಪ್ಪಿಸುವ ಅನುಭವ’ ಅಂದರು. ಹೌದಲ್ಲವೇ ಅನಿಸಿತ್ತು. ಈಗಾಗಲೇ, ಹವಾಮಾನ ಬದಲಾವಣೆ ಹೆಚ್ಚಾಗುತ್ತಾ ಹೋದಂತೆಲ್ಲಾ ಮಾನಸಿಕ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಅನೇಕ ವರದಿಗಳು, ಅಧ್ಯಯನಗಳು ಬಂದಿವೆ. ಆ ಕೆಂಪು ಸೂರ್ಯನನ್ನು ನೋಡುತ್ತಾ ನಾವೆಲ್ಲಾ ಅಚ್ಚರಿಯೊಂದಿಗೆ ಬೆರಗನ್ನೂ, ಒಂದಷ್ಟು ಚಿಂತೆಯನ್ನೂ ಸೇರಿಸಿಕೊಂಡಿದ್ದೆವು.
Backburning ಅಂದೆನಲ್ಲಾ, ಅದರ ಬಗ್ಗೆ ಸ್ವಲ್ಪ ಬರೀತೀನಿ. ವಸಂತಋತು ಬಂದಾಗ ಆಸ್ಟ್ರೇಲಿಯಾದಲ್ಲಿ backburning ವಿಷಯ ಏಳುತ್ತದೆ. ಅದರಲ್ಲೂ ಅಕ್ಟೋಬರ್ ತಿಂಗಳು ಬಂದು ಇನ್ನೇನು ಡಿಸೆಂಬರ್ ತಿಂಗಳಲ್ಲಿ ಬೇಸಿಗೆ ಶುರುವಾಗುತ್ತದೆ, ಬಿಸಿಲಿನ ಜೊತೆ ಬಳುವಳಿಯಾಗಿ ಬರುವ ಪೊದೆಬೆಂಕಿ (bushfire) ಎನ್ನುವ ಭಯವನ್ನು ಹೇಗೆ ನಿಯಂತ್ರಿಸುವುದು ಅನ್ನೊ ಮಾತುಕತೆಗಳು ಹರಿದಾಡುತ್ತವೆ. ಹವಾಮಾನ ಇಲಾಖೆ ಹೇಳುವ ಬಿಸಿಲಿನ ವರದಿಗಳನ್ನು ಆಧರಿಸಿ ಎಲ್ಲೆಲ್ಲಿ ಪೊದೆಕಾಡುಗಳಿವೆಯೋ ಅಲ್ಲೆಲ್ಲಾ backburning ನಡೆಯುತ್ತದೆ. ಅದೇನಿಲ್ಲ, ಪೊದೆಬೆಂಕಿ ಏಳುವ ಜಾಗಗಳನ್ನು ಗುರುತಿಸಿ, ಅವುಗಳ ಕೊನೆಯಂಚಿನಲ್ಲಿ ಇರುವ ಮರಗಿಡಗಳನ್ನು ಆಯ್ಕೆಮಾಡಿಕೊಂಡು ಅವುಗಳನ್ನು ಮಾತ್ರ ನಿಯಂತ್ರಿತವಾಗಿ ಸುಡುವುದು. ಇದರಿಂದ ನಿಜವಾಗಿಯೂ, ನೈಸರ್ಗಿಕವಾಗಿ ಉಂಟಾಗುವ ಪೊದೆಬೆಂಕಿ ಸಂದರ್ಭಗಳು ಕಡಿಮೆಯಾಗುತ್ತವೆ. ಹೇಗೆಂದರೆ, ಬೆಂಕಿ ಹತ್ತಿಕೊಳ್ಳುವ, ಹರಡುವ ಅಂಚಿನಲ್ಲಿರುವ ಮರಗಿಡಗಳು ಇರುವುದಿಲ್ಲ. ಹಾಗಾಗಿ ಪೊದೆಯೊಳಗಡೆ ಪ್ರದೇಶದಲ್ಲಿರುವ ಮರಗಿಡಗಳು ಉಳಿದುಕೊಳ್ಳುತ್ತವೆ. ಅಂದಹಾಗೆ ಈ backburning ವಿಷಯವನ್ನು ಕಲಿತಿದ್ದು ಆಸ್ಟ್ರೇಲಿಯನ್ ಮೂಲಜನರಿಂದ. ಅವರು ಸಾವಿರಾರು ವರ್ಷಗಳಿಂದ ಈ ಪದ್ಧತಿಯನ್ನು ಅನುಸರಿಸುತ್ತಿದ್ದರು. ಅದನ್ನು ಸರ್ಕಾರಗಳು ಇಪ್ಪತ್ತೊಂದನೆ ಶತಮಾನದಲ್ಲಿ ಗಮನಿಸಿ, ಮೂಲಜನರ ಅಪಾರ ಪ್ರಕೃತಿ-ಜ್ಞಾನವನ್ನು, ಅನುಭವವನ್ನು ಮನ್ನಿಸಿ ಅವರ ಪದ್ಧತಿಗಳನ್ನು ಕಲಿಯುತ್ತಿದ್ದಾರೆ.

Backburning ನಡೆಸುವ ಮುನ್ನ ನಗರಪಾಲಿಕೆಯವರು ಮುನ್ನೆಚ್ಚರಿಕೆ ಕೊಡುತ್ತಾರೆ. ಆಯಾ ಪ್ರದೇಶಗಳ ಹತ್ತಿರ ಹೋಗಲು ನಿರ್ಬಂಧವಿರುತ್ತದೆ. ಉಸಿರಾಟದ ತೊಂದರೆಯಿರುವವರು, ಆರೋಗ್ಯದ ಸಮಸ್ಯೆಯಿರುವವರು, ಮುಂತಾದವರ ಕ್ಷೇಮ, ಸೌಖ್ಯವನ್ನು ಗಮನಿಸಲು ಹೇಳುತ್ತಾರೆ. ನಮ್ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿ ಚಿಕ್ಕದೊಂದು ಪೊದೆಕಾಡು ಇದೆ. ಇಲ್ಲಿ ಆಗಾಗ ಅಷ್ಟಿಷ್ಟು ಮಟ್ಟಿಗೆ backburning ನಡೆಯುತ್ತಿದೆ. ಇನ್ನಷ್ಟು ದೂರದಲ್ಲಿ ಮೂರ್ನಾಲ್ಕು ಗುಡ್ಡಗಳಿವೆ. ಅಲ್ಲೂ ಕೂಡ ನಡೆಯುತ್ತದೆ. ಆಗೆಲ್ಲ ಮರಸುಡುವ ಗಮ್ಮೆನ್ನುವ ವಾಸನೆ ಹರಡಿ ಹಿತವಾಗುತ್ತದೆ. ನಿಜವಾದ ವಾಸನೆಯಿಂದ ಇಂದ್ರಿಯಗಳು ಚುರುಕಾಗುತ್ತವೆ. ಆಗೆಲ್ಲಾ ಜ್ಞಾಪಕಕ್ಕೆ ಬರುವುದು ಜನರು ಕ್ಯಾಂಪಿಂಗ್ ಹೋದಾಗ ಕ್ಯಾಂಪ್ ಸೈಟ್‌ನಲ್ಲಿ firepit ಇದೆಯಾ, ನಿಜವಾಗಿಯೂ ಬೆಂಕಿ ಹಚ್ಚಬಹುದಾ, ಅಡುಗೆ ಮಾಡಬಹುದಾ ಎಂದು ವಿಚಾರಿಸುವ ಪ್ರಶ್ನೆಗಳು. ಹಿಂದೊಮ್ಮೆ ನಿತ್ಯಜೀವನದ ಅಂಶಗಳಾಗಿದ್ದ ಈ ನಿಜ-ಅನುಭವಗಳಿಂದ ನಾವು ಅದೆಷ್ಟು ದೂರ ಸರಿದಿದ್ದೀವಿ ಎಂದೆನ್ನಿಸುತ್ತದೆ. ನಗರಜೀವನದಲ್ಲಿ ಅಷ್ಟಷ್ಟು ಇಷ್ಟಿಷ್ಟು ಯಂತ್ರಗಳಂತೆ ಬದುಕುತ್ತಿರುವ ನಾವು ಈ ‘ಹಳೆಯ ಕಾಲದ’ ಅನುಭವಗಳಿಗೆ ಹಾತೊರೆಯುವುದು ವಿಪರ್ಯಾಸವಲ್ಲವೇ.
ನನಗೆ ಆಸ್ಟ್ರೇಲಿಯಾದಲ್ಲಿ ‘ನಿಜವಾದ ಬೆಂಕಿ’ ಯ ಅನುಭವಾಗಿದ್ದು ೨೦೦೧ ನೇ ಇಸವಿಯಲ್ಲಿ. ಅದು ಆಸ್ಟ್ರೇಲಿಯಾ ಜೀವನದ ಮೊದಲ ವರ್ಷ ಮತ್ತು ಮೊದಲ ಕ್ರಿಸ್ಮಸ್ ಸೀಸನ್. ವಿಶ್ವವಿದ್ಯಾಲಯಕ್ಕೆ ಬಂದ ಹೊಸತರಲ್ಲೇ ಪರಿಚಯವಾಗಿ ಸ್ನೇಹಿತೆಯಾಗಿದ್ದವರು ನನ್ನನ್ನು ಕ್ರಿಸ್ಮಸ್‌ಗೆಂದು ಅವರ ತಂದೆಯ ಮನೆಗೆ ಕರೆದೊಯ್ದಿದ್ದರು. ವಲೊಂಗೊಂಗ್‌ನಿಂದ ಎರಡು ಗಂಟೆಗಳ ಪ್ರಯಾಣ. ಕಾರು ಓಡಿಸಿದ್ದು ಸ್ನೇಹಿತೆಯ ಗಂಡ. ಕ್ರಿಸ್ಮಸ್ ಲಂಚ್ ಮುಗಿಸಿಕೊಂಡು ವಾಪಸ್ ಬರುವಾಗ ನಾವು ‘ಕಂಟ್ರಿ ಸೈಡ್’ ದಾರಿ ಹಿಡಿದಿದ್ದೆವು. ನನಗೆ ಅದಾವುದರ ತಲೆಬುಡ ಗೊತ್ತಿರಲಿಲ್ಲ. ಕರೆದುಕೊಂಡು ಹೋದವರು ವಾಪಸ್ ಮನೆ ಸೇರಿಸುತ್ತಾರೆ ಎಂದು ನಿಶ್ಚಿಂತೆಯಿಂದ ಕಿಟಕಿಯಿಂದ ಕಾಣುತ್ತಿದ್ದ ಆಸ್ಟ್ರೇಲಿಯನ್ ಪೊದೆಕಾಡನ್ನು ನೋಡುತ್ತಾ ಕಳೆದುಹೋಗಿದ್ದೆ. ಇದ್ದಕ್ಕಿದ್ದಂತೆ ಕಾರಿನಲ್ಲಿ ತಾಪಮಾನ ಏರಿದಂತಾಯ್ತು. ಮುಖ ತಿರುಗಿಸಿದಾಗ ಆ ಕಡೆ ಕಂಡಿದ್ದು ಉದ್ದಾನುದ್ದಕ್ಕೆ ಹರಡಿಕೊಂಡು ಉರಿಯುತ್ತಿದ್ದ ಬೆಂಕಿಜ್ವಾಲೆ. ನಾನಿದ್ದ ಕಾರಿನಿಂದ ಸ್ಪಷ್ಟವಾಗಿ ಕಾಣುತ್ತಿದ್ದು, ಶಾಖದ ಅನುಭವವೂ ಚೆನ್ನಾಗಾಗುತ್ತಿತ್ತು. ಅಂದರೆ ಅಷ್ಟು ಹತ್ತಿರದಲ್ಲಿತ್ತು. ನನ್ನ ಸ್ನೇಹಿತೆ ನನ್ನತ್ತ ತಿರುಗಿ ಆರ್ ಯೂ ಓಕೆ ಎಂದು ಕೇಳಿದರು. ನಾನೇನೋ ಓಕೆ, ಆದರೆ ಆ ಪಾಟಿ ಗಾತ್ರದ ಅಷ್ಟುದ್ದ ಹರಡಿಕೊಂಡು ಉರಿಯುತ್ತಿದ್ದ ಬೆಂಕಿ ನಾಟ್ ಓಕೆ. ಅವರು ಬಹಳ ಸಾವಧಾನದಿಂದ ಈ ತರಹದ ಬೆಂಕಿಗೆ ಇಲ್ಲಿ bushfire ಎನ್ನುತ್ತಾರೆ. ಕೆಲವೊಮ್ಮೆ ಅದು ಗಂಭೀರವಾಗಿರುತ್ತದೆ. ಹೆದರಬೇಡ, ನಾವು ಕ್ಷೇಮವಾಗಿ ಮನೆ ತಲುಪುತ್ತೀವಿ, ಎಂದರು. ಅವರ ಗಂಡನ ಮುಖ ಬಹಳ ಗಂಭೀರವಾಗಿತ್ತು. ಪೂರ್ತಿ ಗಮನ ಕಾರ್ ಚಲಾವಣೆ, ವೇಗದ ನಿರ್ವಹಣೆಯತ್ತ ಇತ್ತು. ‘ವೀ ವಿಲ್ ಎಸ್ಕೇಪ್ ಇಟ್, ಡೋಂಟ್ ವರಿ’, ಅಂದರು. ತಪ್ಪಿಸಿಕೊಂಡು ವಲೊಂಗೊಂಗ್‌ಗೆ ಬಂದೆವು, ಕ್ಷೇಮವಾಗಿ ಮನೆ ಸೇರಿದೆವು. ಮುಂದಿನ ಎರಡು ದಿನಗಳ ಕಾಲ ಸತತವಾಗಿ ಮಾಧ್ಯಮಗಳಲ್ಲಿ ನಾವು ತಪ್ಪಿಸಿಕೊಂಡು ಬಂದ bushfire ಬಗ್ಗೆ ವರದಿಯಾಗುತ್ತಿತ್ತು. ಆಗ ನನಗೆ ಅದು ಎಷ್ಟು ದೊಡ್ಡದಾಗಿತ್ತು, ಅದರ ಪರಿಣಾಮ ಇತ್ಯಾದಿಗಳ ಬಗ್ಗೆ ತಿಳಿಯಿತು. ನಿಜವಾಗಿಯೂ ನಾವು ಪ್ರಮಾದ ಸನ್ನಿವೇಶದಲ್ಲಿ ಸಿಲುಕಿದ್ದ ಅರಿವು ಆಗಷ್ಟೇ ಆಯ್ತು. ನನ್ನ ಸ್ನೇಹಿತೆಗೆ ಫೋನ್ ಮಾಡಿ ಥ್ಯಾಂಕ್ಸ್ ಹೇಳಿ, ಆ bushfire ದೊಡ್ಡದು ಅಲ್ಲವಾ ಎಂದೆ. ಅವರು ನಕ್ಕು, ಹೌದು, ಅದು ಬಹಳ ದೊಡ್ಡದಾದ bushfire, ನಿಜವಾಗಿಯೂ ನಾವು ಆಪತ್ತಿನಲ್ಲಿದ್ದೆವು. ಹೇಳಿದರೆ ನಿನಗೆ ಗಾಬರಿಯಾಗಬಹುದು ಎಂದೆನಿಸಿ ನಾವು ಮಾತನಾಡಲಿಲ್ಲ. ಅಂತಹ ದೊಡ್ಡ ಬೆಂಕಿಯನ್ನು ನೋಡಿದವರಿಗೆ, ಆ ಸಂದರ್ಭದಲ್ಲಿ ಸಿಲುಕಿದ್ದವರಿಗೆ ಇಲ್ಲಿ psychosocial ಕೌನ್ಸೆಲಿಂಗ್ ಕೊಡುತ್ತಾರೆ. ನಿನಗೆ ಬೇಕಿದ್ದರೆ ನಾನು ಅದನ್ನು ಏರ್ಪಡಿಸುತ್ತೀನಿ, ಅಂದರು. ಬೇಡವೆಂದೆ.

ಅದೇ ದಿನ ನಾನು ಬಾಡಿಗೆಗೆ ಇದ್ದ ಫ್ಲಾಟ್ ಓನರ್ ಬಂದು, ಇಲ್ಲಿಂದ ಮೂರು ಕಿಲೋಮೀಟರ್ ಆಚೆ ಪೊದೆಬೆಂಕಿ ಬರುವ ವರದಿ ಬಂದಿದೆ. ಸ್ಥಳೀಯ ಪೊಲೀಸರು ಮನೆಮನೆಗೆ ಬಂದು ಜನರನ್ನು ಮನೆಖಾಲಿ ಮಾಡಿಸಿ ಸುರಕ್ಷಿತ ಸ್ಥಳಕ್ಕೆ (ಸ್ಥಳೀಯ ಶಾಲೆ) ಕರೆದೊಯ್ಯುವ ಪ್ಲಾನ್ ಇದೆ. ಮುಂಜಾಗರೂಕತೆ ವಹಿಸಲು ಹೇಳಿದ್ದಾರೆ. ನೀನು ನಿನ್ನ ಬ್ಯಾಗ್ ಪ್ಯಾಕ್ ಮಾಡಿಕೊಂಡು ರೆಡಿಯಾಗಿರು, ಎಂದಾಗ ಅಯ್ಯಯ್ಯೋ ಎಂದು ಉದ್ಗಾರ ತೆಗೆದಿದ್ದೆ. ಅವರು ಹೇಳಿದಂತೆಯೇ ಬ್ಯಾಗ್ ರೆಡಿ ಮಾಡಿಕೊಂಡು ಎರಡು ದಿನ ಜಪ ಮಾಡುತ್ತಾ ಫ್ಲಾಟ್‌ನಲ್ಲೆ ಇದ್ದೆ. ನನ್ನ ಸ್ನೇಹಿತೆಯೂ ಫೋನ್ ಮಾಡಿ ಅವರಿಗೂ ಅದೇ ತರಹದ ಸೂಚನೆಗಳು ಬಂದಿವೆ, ಎಂದರು. ಪುಣ್ಯಕ್ಕೆ ಪೊದೆಬೆಂಕಿ ದೂರದಲ್ಲೇ ಕಣ್ಣು ಮಿಟುಕಿಸಿ ಮರೆಯಾಯ್ತಂತೆ. ಬಚಾವ್ ಆದೆ, ಎಂದು ನೆಮ್ಮದಿಯಾಯ್ತು.
ಈ ವರ್ಷ ಪೊದೆಬೆಂಕಿಯಿಂದ ಯಾರಿಗೂ ಆಪತ್ತು ಬರದಿರಲಿ ಎಂದು ಆಶಿಸೋಣ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

