ಕಳೆದ ವರ್ಷ ಬಿರುಬಿಸಿಲಿನ ಬೇಸಿಗೆಯಲ್ಲಿ ಮೈಮರೆತಿದ್ದ ಆಂಗ್ಲರು ಈ ಸಲ ಬೇಸಿಗೆಯಲ್ಲಿ ಮಳೆ ದಿನಗಳನ್ನು ಕೂಡಿ ಕಳೆದು, ಅಳೆದು ತೂಗಿ ಆಮೇಲೆ ಸರಿಯಾದ ಬಿಸಿಲು ಕಂಡ ದಿನಗಳನ್ನು ಬೆರಳಿನಲ್ಲಿ ಎಣಿಸುವ ಯತ್ನದಲ್ಲಿ ಮಗ್ನರಾಗಿದ್ದಾರೆ. ಎಷ್ಟು ದಿನ, ಮಾಸ, ವರುಷ ಕಳೆದವರಿಗೂ ಮೇಲುನೋಟಕ್ಕೆ ಎಷ್ಟು ಆಪ್ತ ಸ್ನೇಹಿಯಂತೇ ಕಂಡರೂ ಮತ್ತೆ ಮತ್ತೆ ಅನಾಮಿಕ ಚಾರಿತ್ಯ್ರದಿಂದ ಅನಾವರಣಗೊಳ್ಳುವ ಬ್ರಿಟಿಷರ ಬೇಸಿಗೆ ಇಲ್ಲೀಗ ಮೆತ್ತಗೆ ಕಳೆಯುತ್ತಿದೆ.
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್.

 

ಇಂಗ್ಲೆಂಡಿನಲ್ಲಿ ಬೇಸಿಗೆಯ ಹವಾಮಾನ ಹೇಗಿರುತ್ತದೆ ಎಂದು ಸದ್ಯಕ್ಕೆ ಇಲ್ಲಿಂದ ಐದು ಸಾವಿರ ಮೈಲು ದೂರದ ಭಾರತದಲ್ಲಿ ಯಾರಿಗೂ ವಿವರಿಸುವ ಅಗತ್ಯ ಇರಲಿಕ್ಕಿಲ್ಲ. ಇದೀಗ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ಪಂದ್ಯಗಳಲ್ಲಿ ಮಳೆ ಬಂದು ಆಡದವು ಯಾವುವು, ಶುರುವಾಗಿ ನಿಂತವು ಯಾವುವು, ನಿಲ್ಲುತ್ತ ನಿಲ್ಲುತ್ತ ನಡೆದು ನಿರಾಶೆ ಹುಟ್ಟಿಸಿದವು ಎಷ್ಟು ಎನ್ನುವುದು ಭಾರತದ ಎಲ್ಲ ಕ್ರಿಕೆಟ್ ಅಭಿಮಾನಿಗಳಿಗೂ ಗೊತ್ತು.

ಇಲ್ಲಿನ ಬೇಸಿಗೆಯೊಳಗೆ ಹುದುಗಿರುವ ತುಂಟ ಮಳೆದಿನಗಳು ಬೇಸಿಗೆಯೊಂದು ಹೀಗೂ ಇರಬಹುದಾದುದರ ಬಗ್ಗೆ ಕಂಡು ಕೇಳಿರದವರೆದುರು ಈ ವರ್ಷ ತುಸು ಜಾಸ್ತಿಯಾಗಿಯೇ ಜಾಹಿರಗೊಂಡಿವೆ. ಬ್ರಿಟಿಷ್ ಸುಮ್ಮರಿನ ಗುಟ್ಟು ರಹಸ್ಯಗಳೆಲ್ಲ ಈ ವರ್ಷ ಹಿಂದಿಗಿಂತ ಹೆಚ್ಚು ಬಯಲಾಗಿವೆ. ನಮ್ಮೂರು ಬ್ರಿಸ್ಟಲಿನ ಕ್ರಿಕೆಟ್ ಮೈದಾನದಲ್ಲಿ ಮಳೆನೀರು ಮುಸಿಮುಸಿ ನಗುತ್ತ ನಿಂತ ಚಿತ್ರಗಳು, ಮತ್ತೆ ಆ ಚಿತ್ರಕ್ಕೆ “ಟಾಸ್ ಗೆದ್ದು ಈಜಲು ಆಯ್ದುಕೊಂಡರು” ಎನ್ನುವ ಚುರುಕು ಪ್ರತಿಕ್ರಿಯೆಗಳು ಮೊಬೈಲುಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಹಾಸ್ಯದ ವಸ್ತುವೂ ಆಗಿದೆ. ಮಳೆಗಾಲದಲ್ಲೂ ನೀರಿನ ಅಭಾವ ಎದುರಿಸುತ್ತಿರುವ ಭಾರತಕ್ಕಾದರೂ ವಿಶ್ವಕಪ್ ಮ್ಯಾಚುಗಳನ್ನು ಸ್ಥಳಾಂತರಿಸಿ ಮಳೆ ಬರಿಸಿ ಎನ್ನುವ ವ್ಯಂಗ್ಯ ವಿಷಾದಗಳ ಎರಡು ಅಲಗಿನ ಅಣಕಗಳೂ ಹುಟ್ಟಿಕೊಂಡಿವೆ. ಕ್ರಿಕೆಟ್ ಪ್ರೇಕ್ಷಕರಿರಲಿ, ದೂರದ ಬೆಚ್ಚಗಿನ ದೇಶಗಳಿಂದ ಬ್ರಿಟನ್ನಿಗೆ ಬಂದ ವಲಸಿಗರಿರಲಿ ಬಿಸಿಲೆಂದರೆ ಬಿಸಿಲು ಚಳಿ ಎಂದರೆ ಚಳಿ ಮಳೆ ಎಂದರೆ ಮಳೆ ಎಂದು ಪೂರ್ವ ನಿರ್ಧರಿತವಾಗಿ ಬದುಕುವ ಊರಿನವರಿಗೆಲ್ಲ ಬ್ರಿಟಿಷ್ ಸಮ್ಮರ್ ಎನ್ನುವುದೊಂದು ಆಶ್ಚರ್ಯದ ಚೋದ್ಯದ ವಿಷಯವೇ. ಮತ್ತೆ ಪ್ರತಿವರ್ಷವೂ ಊಹಿಸಿದಂತಿರದ, ಈ ಸಲ ಹೀಗೆಯೇ ಇದ್ದೀತು ಎಂದು ಬಣ್ಣಿಸಲಾಗದ ಇಲ್ಲಿನ ಬೇಸಿಗೆ ಬ್ರಿಟನ್ನಿನ ಒಳಗೆ ಜನ್ಮಜನ್ಮಾಂತರಗಳಿಂದ ವಾಸಿಸುವ ಆಂಗ್ಲರಿಗೂ ಒಂದು ಮಟ್ಟಿಗೆ ಅಪರಿಚಿತವೇ.


ಬ್ರಿಟಿಷ್ ಸಮ್ಮರ್ ಎನ್ನುವುದು ಯಾರಿಗೆ ಎಷ್ಟೇ ಸೋಜಿಗದ ವಿಷಯವೇ ಆದರೂ ಬ್ರಿಟಿಷರ ಮಟ್ಟಿಗೆ ಅದು “ಇಹಲೋಕದ ಪರಮಸತ್ಯ”. ಹವಾಮಾನದ ಅನಿಶ್ಚಿತತೆ ಅಥವಾ ಘಳಿಗೆ ಘಳಿಗೆಗೆ ಬದಲಾಗಬಲ್ಲ ವಾತಾವರಣದ ಮನೋಧರ್ಮ ಬ್ರಿಟಿಷ್ ಸುಮ್ಮರಿನ ಎದೆ ಬಡಿತದಂತೆ. ಹವಾಮಾನವೊಂದು ಅತ್ಯಂತ ಜೀವಂತವಾಗಿ ಅಲ್ಲಿನ ಜನ ಜೀವ ಗಿಡ ಮರಗಳೊಟ್ಟಿಗೆ ಸಂವಹನ ನಡೆಸುತ್ತ, ಅವುಗಳನ್ನು ಕಾಡುವ ಊರು ದೇಶ ಇದು. ಬೇಕಿದ್ದರೂ ಬೇಡದಿದ್ದರೂ ಹಿತವಾಗಿದ್ದರೂ ಅಹಿತವೆನಿಸಿದರೂ “ಇದು ಇರುವುದೇ ಹೀಗೆ” ಎನ್ನುತ್ತಲೋ ಅಥವಾ “ಎಲ್ಲ ಮನೆಯೊಳಗಿನ ಬದುಕೂ ಹಾಗೇ” ಎಂದೋ ತಾತ್ವಿಕ ಸಮಾಧಾನ ಮಾಡಿಕೊಳ್ಳುತ್ತ ಮುಂದುವರಿಸಬೇಕಾದ ಪ್ರಕೃತಿ-ಮನುಷ್ಯರ ಅನಿವಾರ್ಯ ಆತ್ಮೀಯ ಸಂಬಂಧ ಇಲ್ಲಿನ ಬೇಸಿಗೆಯದು ಮತ್ತು ನಮ್ಮದು. ಈ ಕಾರಣಕ್ಕೆ ಇಲ್ಲಿ ಬಂದ ವಲಸಿಗರು ಬೇಸಿಗೆಯ ಬಗ್ಗೆ ದೂರುವುದಿದೆ.

ಮತ್ತೆ ಬ್ರಿಟಿಷರು ತಮ್ಮ ಬೇಸಿಗೆಯನ್ನು ಯಾರ್ಯಾರೋ ಹಾಸ್ಯ ಮಾಡುವ ಮೂದಲಿಸುವ ಮೊದಲೇ ಸ್ವತಃ ತಾವೇ ಕಟುವಾಗಿ ವಿಮರ್ಶಿಸುವ ಜಾಯಮಾನದವರು. ಅನಿಶ್ಚಿತ ಅತಂತ್ರದ ಹವಾಮಾನದಲ್ಲಿಯೇ ಬದುಕುವ ಅನಿವಾರ್ಯತೆ ಇರುವಾಗ ತಾವೇ ತಮ್ಮ ಹವಾಮಾನವನ್ನು ಸ್ವಲ್ಪ ತಮಾಷೆಗೆ ಒಡ್ಡಿಕೊಂಡರೆ ಮುಂದೆ ಅಂತಹ ಹವೆಯಲ್ಲಿ ದಿನಕಳೆಯುವುದು ಸುಲಭ ಆದೀತು ಎನ್ನುವ ಯೋಚನೆಯೂ ಇರಬಹುದು.

ಕಳೆದ ಎರಡು ದಶಕಗಳ ಕಾಲ ಇಲ್ಲಿ ಇದ್ದ ಅನುಭವಸ್ಥರ ಅನುಭವಗಳನ್ನು ಕೊಡವಿದರೆ ಹವಾಮಾನ ಇಲಾಖೆಗಳ ವರದಿಗಳ ಪುಟ ತಿರುವಿದರೆ 2006ರ ನಂತರ ಕಡು ಬಿಸಿಲಿನ ಝಳ ವಾರಗಟ್ಟಲೆ ಕಾಡಿದ್ದು ಕಳೆದ ವರ್ಷದ ಅಂದರೆ 2018ರ ವೈಶಾಖದಲ್ಲೇ. ಇವುಗಳ ನಡುವಿನ ಆಸುಪಾಸಿನ ಮತ್ತುಳಿದ ಬೇಸಿಗೆಗಳೆಲ್ಲ ಅರೆಬಿಸಿಲು ಹನಿಮಳೆ ತುಸುಗಾಳಿಗಳಲ್ಲೇ ಕಳೆದು ಹೋಗಿವೆ. ಆಂಗ್ಲ ಭಾಷೆಯ ಮಹಾಕವಿ ಸಾಹಿತಿಗಳಾದ ಶೇಕ್ಸ್ಪೀಯರ್, ರಾಬರ್ಟ್ ಫ್ರಾಸ್ಟ್, ವರ್ಡ್ಸ್ ವರ್ತ್ ಮೊದಲಾದವರ ಕಾವ್ಯದಲ್ಲಿ ಕಣ್ಣಿಗೆ ಕಟ್ಟುವ ಮಹಾನ್ ಸೌಂದರ್ಯದ ಇಂಗ್ಲಿಷ್ ಬೇಸಿಗೆ, ಮಧುರ ಗೆಳೆತನದಂತಹ ವ್ಯಕ್ತಿತ್ವದ ಸಮ್ಮರ್ ಇಲ್ಲಿ ಪ್ರತಿ ವರ್ಷವೂ ಅಥವಾ ಬೇಸಿಗೆಯ ಪ್ರತಿ ವಾರವೂ ಕಾಣಸಿಗುತ್ತದೆ ಎಂದು ಹೇಳುವುದು ಕಷ್ಟ. ಸುಡು ಬಿಸಿಲು ಸರೋವರಗಳ ಮೇಲೆ ಬಿದ್ದು ಫಳಫಳಗುಡುವ, ಹೂಗಿಡಗಳ ಮೇಲೆ ಬೆಚ್ಚಗಿನ ನಗೆ ಚೆಲ್ಲಿ ಚಿತ್ತಾರ ಬಿಡಿಸುವ, ಬೆಟ್ಟ ನದಿ ಸಮುದ್ರಗಳ ಮೈಮೇಲೆ ಹತ್ತಿಳಿಯುತ್ತ ಚಿನ್ನದ ಕುಸುರಿ ಕೆತ್ತುವ ಸುಮ್ಮರ್ ತೋರಿಸುತ್ತೇನೆಂದು ದೂರ ದೇಶದ ಸ್ನೇಹಿತರನ್ನೋ ಬಂಧುಗಳನ್ನೋ ಇಲ್ಲಿಗೆ ಕರೆದುಕೊಂಡು ಬಂದರೆ, ಆ ಸಲದ ಬೇಸಿಗೆ ಇಲ್ಲಿ ಮಳೆ ಗಾಳಿ ಚಳಿಗಳಲ್ಲಿ ಕಳೆದು ತೊಳೆದು ಹೋದರು ಆಯಿತು.

ಮತ್ತೆ ಹಾಗೆ ಆದಾಗಲೆಲ್ಲ ಅಂತಹ ಬೇಸಿಗೆಯನ್ನು ಸ್ವಲ್ಪ ಬೈದು ಇಲ್ಲಿನ ಆಂಗ್ಲರು ಮುಂದಿನ ವರ್ಷಕ್ಕೆ ಕಾಯುತ್ತಾರೆ. ಇಲ್ಲಿನ ಹಿರಿಯ ಬ್ರಿಟಿಷರು ಹೇಳುವಂತೆ ಒಬ್ಬರು ಬ್ರಿಟಿಷ್ ಎನಿಸಿಕೊಳ್ಳಬೇಕಿದ್ದರೆ ಅವರಿಗೆ ತಮ್ಮ ಬೇಸಿಗೆಯ ಬಗ್ಗೆ ಕಠೋರ ವ್ಯಂಗ್ಯ ಮಾಡುವುದೂ ಗೊತ್ತಿರಬೇಕು, ಬೇಸಿಗೆಯ ಬಿಸಿಲ ದಿನವೊಂದು ಮಳೆ ಬಂದು ಹಾಳಾಗುತ್ತಿರುವಾಗ ಮೂಗು ಮುರಿಯುವುದು ಗೊಣಗುಡುವುದು ತಿಳಿದಿರಬೇಕು.

ಹಾಗಂತ ಬ್ರಿಟಿಷರು ತಮ್ಮ ಹವಾಮಾನವನ್ನು ಬರೇ ದೂರುತ್ತಾ ದಿನ ಕಳೆಯುವವರೂ ಅಲ್ಲ, ಬೇಸಿಗೆಯ ಬಗ್ಗೆ ಅವರಿಗೆ ಅಕ್ಕರೆ ಕಾತರಗಳ ಜೊತೆಗೆ ತೀವ್ರ ಕುತೂಹಲವೂ ಇದೆ. ಬ್ರಿಟನ್ನಿನಲ್ಲಿ ಹುಟ್ಟಿದವರು ಬಾಲ್ಯದಿಂದಲೇ ಹವಾಮಾನದ ಬಗ್ಗೆ ಪ್ರಜ್ಞೆ ಬೆಳೆಸಿಕೊಂಡಿರುತ್ತಾರೆ, ನಿತ್ಯವೂ ಬದಲಾಗುವ ವಾತಾವರಣದ ಬಗ್ಗೆ ವಿಚಾರಿಸುವವರಾಗಿರುತ್ತಾರೆ. ಇಲ್ಲಿ ನಿತ್ಯ ಸುದ್ದಿ ಬಿತ್ತರಿಸುವ ಬಿಬಿಸಿ, ಸ್ಕೈ ವಾರ್ತೆ, ಐ ಟಿವಿ ಗಳು ಒಂದು ದಿನದಲ್ಲಿ ಹತ್ತು ಸಲವಾದರೂ ಅಂದಿನ ಮುಂದಿನ ಹವಾಮಾನದ ಬಗ್ಗೆ ಮಾತಾಡಿರುತ್ತವೆ. ಟಿವಿ ರೇಡಿಯೋಗಳಲ್ಲಿ ಪ್ರಸಾರವಾಗುವ ಯಾವ ವಾರ್ತೆಯೂ ಹವಾಮಾನ ವರದಿ ಇಲ್ಲದೆ ಪೂರ್ಣ ಆಗುವುದಿಲ್ಲ. ಬೇಸಿಗೆಯ ಮಾಸಗಳಲ್ಲಂತೂ ಹವಾಮಾನ ವರದಿಗಳ ಬಗ್ಗೆ ವಿಶೇಷ ಆಸಕ್ತಿ ಇರುತ್ತದೆ. ಒಂದು ವೇಳೆ ಹವಾಮಾನ ಭವಿಷ್ಯಕಾರರು ಅಂದಂತೆ ಮೂರು ತಿಂಗಳ ಬೇಸಿಗೆಯಲ್ಲಿ ಕೆಲವು ದಿನಗಳ ಸುಡು ಬಿಸಿಲು ಬಿದ್ದರೂ ಅಂತಹ ದಿನಗಳಿಗೆ ಕಾದು ಆ ವರ್ಷದ ಬದುಕು ಸಾರ್ಥಕ ಆಯಿತೆಂದು ಖುಷಿಯಾಗಿರುತ್ತಾರೆ. ಬಿರುಬಿಸಿಲಿನ ಒಂದು ದಿನ ಸಿಕ್ಕರೂ ಅಂದು ಅತ್ಯಂತ ಉನ್ಮಾದದಲ್ಲಿ ತಮ್ಮ ಇಷ್ಟದ ಕೆಲಸಗಳನ್ನು ಮಾಡುತ್ತಾ ದಿನಕಳೆಯುತ್ತಾರೆ.

ಕೆಲವರು ಬಿಸಿಲನ್ನು ಮೈಮೇಲೆ ಹರಡಿಕೊಳ್ಳಲು ಅಂಗಿ ತೆಗೆದು ಓಡಾಡಬಹುದು, ಕೆಲವರು ಓಪನ್ ಟಾಪ್ ಕಾರಿನ ಧೂಳು ಒರೆಸಿ ದೊಡ್ಡ ಸಂಗೀತ ಹಾಕಿಕೊಂಡು ಸಾಗಬಹುದು, ಮತ್ತೂ ಕೆಲವರು ಮನೆಯ ಹಿಂದೋಟದಲ್ಲಿ ಮಾಂಸದ ತುಂಡುಗಳನ್ನು ಕೆಂಡದ ಶಾಖದಲ್ಲಿ ಸುಟ್ಟು ಬಾರ್ಬೆಕ್ಯೂ ಮಾಡಿ ತಿನ್ನಬಹುದು, ಪಬ್ಬಿನ ತೆರೆದ ತೋಟದಲ್ಲಿ ಬೀಯರ್ ಹೀರುತ್ತಾ ಗಟ್ಟಿ ಸ್ವರದಲ್ಲಿ ಮಾತಾಡಬಹುದು ಹೀಗೆ ಅಂದಿನ ಬಿಸಿಲಿನ ಪ್ರತಿಕ್ಷಣವನ್ನು ಸವಿಯಲು ಏನೋ ಒಂದು ಮಾಡಬಹುದು. ಅಥವಾ ಏನೋ ಮಾಡದೆ ಬಿಸಿಲಿನಲ್ಲಿ ಸುಮ್ಮನೆ ಕೂರಬಹುದು ನಿಲ್ಲಬಹುದು ನಡೆಯಬಹುದು.

ನಮ್ಮೂರು ಬ್ರಿಸ್ಟಲಿನ ಕ್ರಿಕೆಟ್ ಮೈದಾನದಲ್ಲಿ ಮಳೆನೀರು ಮುಸಿಮುಸಿ ನಗುತ್ತ ನಿಂತ ಚಿತ್ರಗಳು, ಮತ್ತೆ ಆ ಚಿತ್ರಕ್ಕೆ “ಟಾಸ್ ಗೆದ್ದು ಈಜಲು ಆಯ್ದುಕೊಂಡರು” ಎನ್ನುವ ಚುರುಕು ಪ್ರತಿಕ್ರಿಯೆಗಳು ಮೊಬೈಲುಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಹಾಸ್ಯದ ವಸ್ತುವೂ ಆಗಿದೆ.

 

ಬೇಸಿಗೆಯ ಹೆಚ್ಚಿನ ದಿನಗಳಲ್ಲಿ ತಣ್ಣಗಿನ ಗಾಳಿ ಬೀಸಿ ಮೋಡ ಕವಿದು ಮಳೆ ಸುರಿದರೂ ಅವುಗಳ ನಡುವೆಯೇ ದೊರೆಯುವ ಕೆಲವು ಮಿರ ಮಿರ ಹೊಳೆಯುವ ಸೂರ್ಯ ರಶ್ಮಿಯ ದಿನಗಳನ್ನು ಅತ್ಯಂತ ಉತ್ಸಾಹದಲ್ಲಿ ಕಳೆಯುತ್ತಾರೆ. ಊರವರಿಂದ ಬೈಯಿಸಿಕೊಳ್ಳುವ ಎಷ್ಟೇ ತುಂಟ ಪುಂಡಾಟಿಕೆಯ ಮಕ್ಕಳಾದರೂ ಹೆತ್ತವರಿಂದ ಮುದ್ದಿಸಿಕೊಳ್ಳುವಂತೆಯೇ ಇಲ್ಲಿನ ಬೇಸಿಗೆಗೂ ಪ್ರತಿವರ್ಷವೂ ವ್ಯಂಗ್ಯ ಟೀಕೆಗಳ ಜೊತೆಗೆ ಕೆಲ ದಿನಗಳ ಬಿಸಿಲೆಂಬ ಸಣ್ಣ ಯಶಸ್ಸು ದೊರೆತಾಗ ಶಹಭಾಷಿ ದಕ್ಕುತ್ತದೆ, ಸಂಭ್ರಮ ಕಾಣುತ್ತದೆ, ಮುಂದಿನ ವರ್ಷವಾದರೂ ಒಳ್ಳೆಯ ಬಿಸಿಲಿನ ದಿನಗಳು ಇದ್ದಾವು ಎನ್ನುವ ನಿರೀಕ್ಷೆ ಇರುತ್ತದೆ. ತಮ್ಮ ದೀರ್ಘ ಬದುಕಿನ ಹೆಚ್ಚಿನ ಬೇಸಿಗೆಗಳು ಸೂರ್ಯ ಅಲ್ಲೊಮ್ಮೆ ಇಲ್ಲೊಮ್ಮೆ ಕಣ್ಣ ಮುಚ್ಚಾಲೆ ಆಡಿ ಕಣ್ಮರೆ ಆಗುವವೇ ಆದರೂ ಮುಂದಿನ ಬೇಸಿಗೆ ಬರುವ ಹೊತ್ತಿಗೆ ಹೊಸ ಹುಮ್ಮಸ್ಸಿನಲ್ಲಿ ಈ ವರ್ಷದ ವೈಶಾಖದಲ್ಲಿ ಏನುಂಟೋ ಎಂದು ಕಾಯುವುದು ಮುಂದುವರಿಯುತ್ತದೆ.

ಇನ್ನು ಶಾಲಾ ಮಕ್ಕಳ ಬೇಸಿಗೆಯ ರಜೆಯ ದಿನಗಳಾದ ಜುಲೈ ಆಗಸ್ಟ್ ಸಮಯದಲ್ಲಿ ಖಡಾಖಂಡಿತ ಬಿಸಿಲು ಬೀಳುವ ಊರುಗಳನ್ನು, ಸಮುದ್ರ ಮರಳುದಂಡೆಗಳನ್ನು ಹುಡುಕಿ ಹೋಗುವ ಬಿಸಿಲು ಹುಚ್ಚಿನ ಆಂಗ್ಲ ಪ್ರವಾಸಿಗರ ದೊಡ್ಡ ಪಡೆಯೇ ಇಲ್ಲಿದೆ. ಇವರು ಬಿಸಿಲು ಎಲ್ಲಿದ್ದರೂ ಜಗದ ಯಾವ ಮೂಲೆಯಲ್ಲಿದ್ದರೂ ತಮ್ಮದಾಗಿಸಿಕೊಳ್ಳುಲು ಬಯಸುವ ಶುದ್ಧ ಬಿಸಿಲ ಪ್ರಣಯಿಗಳು ಇರಬಹುದು.

ಯಾರು ಕಾಯಲಿ ಕಾಯದಿರಲಿ, ಯಾರು ಬಿಸಿಲು ಹುಡುಕಿಕೊಂಡು ದೇಶಾಂತರ ಸುತ್ತಲಿ ಬಿಡಲಿ ಇವ್ಯಾವನ್ನೂ ಗಮನಿಸದ ಇಲ್ಲಿನ ಬೇಸಿಗೆ ಪ್ರತಿ ವರ್ಷವೂ ವಿಭಿನ್ನ ಎನಿಸುವ ಪ್ರತಿ ದಿನವೂ ಬದಲಾದ ದಿನದಂತೆ ಕಾಣುವ ಅಪರಿಚಿತ ವ್ಯಕ್ತಿ ವಿಷಯ ಪ್ರಕ್ರಿಯೆ ಆಗಿಯೇ ಬದುಕುತ್ತಿದೆ. ಮಾರ್ಚ್ ನಿಂದ ಮೇ ತಿಂಗಳ ಕೊನೆಯವರೆಗಿನ ವಸಂತದಲ್ಲಿ ಇಲ್ಲಿನ ಹೂಗಿಡ ಬಳ್ಳಿಗಳು ತರುಲತೆಗಳು ವರ್ಡ್ಸ್ ವರ್ತ್ ನ ಕಾವ್ಯದ ಸಾಲುಗಳೇ ಜೀವತುಂಬಿಕೊಂಡು ಉಸಿರಾಡುವಂತೆ ಹಾಡುಹೇಳುವಂತೆ ಮಂದಸ್ಮಿತ ಬೀರುತ್ತಾ ಕಂಗೊಳಿಸಿವೆ. ಪ್ರಾಕೃತಿಕ ಪ್ರಫುಲ್ಲತೆಯ ಮುನ್ನುಡಿಯ ನಂತರ ಎದುರಾಗುವ ವೈಶಾಖದ ಮುಂದಿನ ಮೂರು ತಿಂಗಳುಗಳು “ಈ ವರ್ಷ ತಮ್ಮೊಳಗೆ ಏನಿದೆ ಏನಿಲ್ಲ” ಎನ್ನುವ ಅನಿಶ್ಚಿತತೆಯಲ್ಲೇ ಶುರು ಆಗಿವೆ. ಆ ಕಾರಣಕ್ಕೇ, ಕ್ಷಣ ಕ್ಷಣಕ್ಕೂ ಬದಲಾಗಬಲ್ಲ ಹವಾಮಾನ ಜಗತ್ತಿನ ಯಾವ ಭಾಗದಲ್ಲಿಯೇ ಇದ್ದರೂ ಇದು ಬ್ರಿಟಿಷ್ ಹವಾಮಾನದ ತರಹ ಎನ್ನುವ ಬಳಕೆ ಹುಟ್ಟಿರಬೇಕು.

ಇನ್ನು ಅಸ್ಥಿರ ಮನೋಧರ್ಮದ ವ್ಯಕ್ತಿಗಳನ್ನು ಘಟನೆಗಳನ್ನು ಇಂಗ್ಲಿಷ್ ಸುಮ್ಮರ್ ಗೆ ಹೋಲಿಸುವ ಪದ್ಧತಿಯೂ ಬಳಕೆಯಲ್ಲಿರಬೇಕು. ಬಿಸಿಲು ಮಳೆ ಗಾಳಿ ಎಲ್ಲವೂ ಮಿಶ್ರವಾಗಿ ಎಂದು ಯಾವುದು ಎಷ್ಟು ದೊರೆಯುವುದೋ ಎನ್ನುವ ಲೆಕ್ಕಾಚಾರಕ್ಕೆ ಸಿಗದೇ, ಯಾರ ಭವಿಷ್ಯ ಊಹೆಯ ಮಿತಿಗೆ ಒಳಗಾಗದೇ ಇಲ್ಲಿನ ಬೇಸಿಗೆಯ ಚಂಚಲ ಮನಸ್ಸು ಬಯಸಿದಂತೆ ಒಂದೊಂದು ವರ್ಷದ ಒಂದೊಂದು ರೀತಿಯಲ್ಲಿ ಬಂದು ಇದ್ದು ಸರಿದು ಹೋಗುತ್ತಿದೆ. ಈ ವರ್ಷದ ಬೇಸಿಗೆ ಹೀಗೆಯೇ ಇರುತ್ತದೆ ಎಂದು ಖಡಾಖಂಡಿತ ಹೇಳಬಲ್ಲವರಿಲ್ಲದ, ಬದುಕು ಬಾಳುವೆಯಂತೆಯೇ ಕಾಣಿಸುವ ಇಲ್ಲಿನ ಬೇಸಿಗೆ “ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ” ಎಂದು ಹಾಡಿಕೊಂಡು ಓಡಾಡುತ್ತಿದೆ.

ಕಳೆದ ವರ್ಷ ಬಿರುಬಿಸಿಲಿನ ಬೇಸಿಗೆಯಲ್ಲಿ ಮೈಮರೆತಿದ್ದ ಆಂಗ್ಲರು ಈ ಸಲ ಬೇಸಿಗೆಯಲ್ಲಿ ಮಳೆ ದಿನಗಳನ್ನು ಕೂಡಿ ಕಳೆದು, ಅಳೆದು ತೂಗಿ ಆಮೇಲೆ ಸರಿಯಾದ ಬಿಸಿಲು ಕಂಡ ದಿನಗಳನ್ನು ಬೆರಳಿನಲ್ಲಿ ಎಣಿಸುವ ಯತ್ನದಲ್ಲಿ ಮಗ್ನರಾಗಿದ್ದಾರೆ. ಎಷ್ಟು ದಿನ, ಮಾಸ, ವರುಷ ಕಳೆದವರಿಗೂ ಮೇಲುನೋಟಕ್ಕೆ ಎಷ್ಟು ಆಪ್ತ ಸ್ನೇಹಿಯಂತೇ ಕಂಡರೂ ಮತ್ತೆ ಮತ್ತೆ ಅನಾಮಿಕ ಚಾರಿತ್ಯ್ರದಿಂದ ಅನಾವರಣಗೊಳ್ಳುವ ಬ್ರಿಟಿಷರ ಬೇಸಿಗೆ ಇಲ್ಲೀಗ ಮೆತ್ತಗೆ ಕಳೆಯುತ್ತಿದೆ; ವರುಷವೂ ಎದುರಾಗುವ ಮಹಾ ಒಗಟೊಂದನ್ನು ಈಗ ಬಿಡಿಸಿಯೇನು ಇನ್ನೇನು ಜಯಿಸಿಯೇನು ಎನ್ನುವವರನ್ನು ಇದೀಗ ಮತ್ತೆ ಕಾಡುತ್ತಿದೆ.