ಮಾತುಗಳು ಇರಬೇಕಾದ ಜಾಗದಲ್ಲಿ ಭಾವ ಸಂವೇದನೆ ಮತ್ತು ಸಂಜ್ಞೆಗಳನ್ನು ಪ್ರತಿಮಾತ್ಮಕವಾಗಿ ಸೃಷ್ಟಿಸಿ ಮೌನ ಪ್ರತಿಮೆ, ಭಾವರೂಪಕಗಳಲ್ಲೇ ಕತೆ ಹೇಳುವ ಪ್ರಯೋಗದಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಇದು ಹಿರಿಯರ ಚಿತ್ರವಾಗಿದ್ದರೂ ಅಷ್ಟೇನೂ ಮಹತ್ವ ಅಥವಾ ಹೊಸತನದ ವಿಶೇಷತೆ ಇದಕ್ಕೆ ಸಲ್ಲುತ್ತಿರಲಿಲ್ಲ. ಈ ರೀತಿಯ ಮಕ್ಕಳ ಚಿತ್ರವನ್ನು ನಿರ್ಮಿಸಿದ ದಾಖಲೆ ಭಾರತೀಯ ಚಲನಚಿತ್ರ ಇತಿಹಾಸದಲ್ಲೇ ಇಲ್ಲ. ಹಾಗಾಗಿ ʻದಿ ಗಾರ್ಡ್‌ʼ ಚಿತ್ರ ಆ ಸ್ಥಾನವನ್ನು ತುಂಬಿ ಕನ್ನಡದ ಹೆಚ್ಚುಗಾರಿಕೆ ಮೆರೆದಿದೆ.
ಉಮೇಶ್‌ ಬಡಿಗೇರ ನಿರ್ದೇಶನದ ಭಾತರದ ಮೊದಲ ಮಕ್ಕಳ ಮೂಕಿ ಚಿತ್ರ ʻದಿ ಗಾರ್ಡ್‌ʼ ಕುರಿತು ಕುಮಾರ ಬೇಂದ್ರೆ ಬರಹ

ʻಬೆಳಕಿನ ಕನ್ನಡಿʼ ಚಿತ್ರದ ಕತೆ-ಚಿತ್ರಕತೆ-ಸಂಭಾಷಣೆಗಾಗಿ ರಾಜ್ಯ ಪ್ರಶಸ್ತಿ ಪಡೆದು ಉತ್ತರ ಕರ್ನಾಟಕದ ವಿಶೇಷ ಪ್ರತಿಭೆಯಾಗಿ ಬೆಳಕಿಗೆ ಬಂದ ನಿರ್ದೇಶಕ ಉಮೇಶ್‌ ಬಡಿಗೇರ ಅವರು ಈಗ ತಮ್ಮದೇ ರಚನೆ-ನಿರ್ದೇಶನದ ವಿಭಿನ್ನ ಚಿತ್ರದ ಮೂಲಕ ಅಪರೂಪದ ಪ್ರಯೋಗಕ್ಕೆ ಮುಂದಾಗಿ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರ ಜಗತ್ತು ತಿರುಗಿ ನೋಡುವಂತಹ ಕೆಲಸ ಮಾಡಿದ್ದಾರೆ!

(ಉಮೇಶ್‌ ಬಡಿಗೇರ)

ಚಿತ್ರದ ಹೆಸರು ʻದಿ ಗಾರ್ಡ್‌ʼ. ಭಾರತೀಯ ಚಲನಚಿತ್ರ ರಂಗದ ಇತಿಹಾಸದಲ್ಲೇ ಈವರೆಗೆ ಯಾರೂ ನಿರ್ಮಿಸಿರದಂತಹ ಮಕ್ಕಳ ಮೊದಲ ಮೂಕಿ ಚಿತ್ರವಿದು! ʻಪುಷ್ಪಕ ವಿಮಾನʼ ಸೇರಿದಂತೆ ಕೆಲವು ಮೂಕಿ ಚಿತ್ರಗಳ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತು. ಆದರೆ ಮಕ್ಕಳಿಗಾಗಿ ಮಕ್ಕಳೇ ಅಭಿನಯಿಸಿರುವ ದೇಶದ ಮೊದಲ ಮೂಕಿ ಚಲನಚಿತ್ರ ʻದಿ ಗಾರ್ಡ್‌ʼ. ಇಂತಹ ವಿಶೇಷ ಪ್ರಯೋಗಕ್ಕೆ ಮುಂದಾಗಿ, ಈಗಾಗಲೇ ಈ ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯಿಂದ ಮಕ್ಕಳ ಚಿತ್ರವೆಂದು ʻಯುʼ ಪ್ರಮಾಣ ಪತ್ರ ಪಡೆದಿರುವುದು ಉತ್ತರ ಕರ್ನಾಟಕದ ಪ್ರತಿಭೆ ಎಂಬುದು ಗಮನಾರ್ಹ.

ಧ್ವನಿಗ್ರಹಣ ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಮೂಕಿ ಚಿತ್ರಗಳನ್ನು ನಿರ್ಮಿಸಲಾಗಿತ್ತು. ತಂತ್ರಜ್ಞಾನ ಉತ್ತುಂಗದ ಸ್ಥಿತಿಗೆ ಬೆಳೆದಿರುವ ವರ್ತಮಾನದಲ್ಲಿ ಮೂಕಿ ಚಿತ್ರ ನಿರ್ಮಿಸುವ ಅಗತ್ಯ ಏನಿತ್ತು ಎಂಬ ವಿಚಾರ ಮೂಡಬಹುದು. ʻಸಂಭಾಷಣೆ ಇರುವ ದೃಶ್ಯಗಳಲ್ಲಿ ಕತೆ ಹೇಳುವುದು ವಿಶೇಷವೇನಲ್ಲ. ಅದು ಸಾಮಾನ್ಯ ಕಲಾಕೃತಿ. ಇಡೀ ಚಿತ್ರದಲ್ಲಿ ಸಂಭಾಷಣೆಯೇ ಇಲ್ಲದಂತೆ ಕತೆ ಹೇಳುವುದು ದೊಡ್ಡ ಸವಾಲಿನ ಕೆಲಸ. ಇಂತಹ ಸವಾಲನ್ನು ನಾನು ಹಠಕ್ಕೆ ಬಿದ್ದು ಎದುರಿಸುವ ಸಾಹಕ್ಕೆ ಇಳಿದಾಗ ಹುಟ್ಟಿದ್ದೇ ʻದಿ ಗಾರ್ಡ್‌ʼ ಚಿತ್ರ ಎನ್ನುತ್ತಾರೆ ನಿರ್ದೇಶಕ ಉಮೇಶ್‌ ಬಡಿಗೇರ. ಹಾಗಾದರೆ ಮೌನದಲ್ಲೇ ಹೇಳಬಹುದಾದ ಈ ಚಿತ್ರದ ಕತೆಗೊಂದು ಮಹತ್ವವಿದೆ.

ʻದಿ ಗಾರ್ಡ್‌ʼ ಎಂಬ ಆಂಗ್ಲ ಪದಕ್ಕೆ ಕನ್ನಡದಲ್ಲಿ ಸಾಮಾನ್ಯವಾಗಿ ʻರಕ್ಷಾ ಕವಚʼ ಎನ್ನುವ ಅರ್ಥವಿದೆ. ಈ ಚಿತ್ರದ ಕತೆ ಇರುವುದು ಕೂಡ ಒಂದು ರಕ್ಷಾ ಕವಚದ ವಿಷಯವಾಗಿಯೆ. ಕ್ರಿಕೆಟ್‌ ಪ್ರೇಮಿಯಾಗಿರುವ ಬಡ ಕುಟುಂಬದ ಹನ್ನೆರಡು ವರ್ಷದ ಬಾಲಕನೊಬ್ಬ ಕ್ರಿಕೆಟ್‌ ಆಡುವಾಗ ಚೆಂಡಿನಿಂದ ತನ್ನ ಗುಪ್ತಾಂಗ ರಕ್ಷಣೆಗಾಗಿ ರಕ್ಷಾಕವಚ ಹೊಂದಲು ಏನೆಲ್ಲಾ ಸಾಹಸ ಮಾಡಿದ ಎಂಬುದೇ ಕತೆಯ ಎಳೆ. ಈ ಕತೆಯನ್ನು ಸಂಭಾಷಣೆಗಳಿರುವ ದೃಶ್ಯಗಳಲ್ಲಿ ಸೃಜಿಸಿದ್ದರೆ ಅದೊಂದು ಸಾಮಾನ್ಯ ಚಿತ್ರವಾಗಿರಬಹುದಿತ್ತು. ಪಾತ್ರಗಳ ಮೌನ ಸಂಜ್ಞೆಗಳಲ್ಲೇ ಕತೆ ಬಿಚ್ಚಿಕೊಳ್ಳುವುದು ಇದರ ವೈಶಿಷ್ಟ್ಯ. ಸಂಭಾಷಣೆ ಇರುವ ಎಷ್ಟೋ ಚಿತ್ರಗಳೇ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸೋಲುತ್ತವೆ. ಹೀಗಿರುವಾಗ ಮೌನದಲ್ಲಿ ಕತೆ ಹೇಳಿ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವುದು ಅತ್ಯಂತ ಸಂಕೀರ್ಣ ಕೆಲಸ. ಇದನ್ನು ನಿರ್ದೇಶಕರು ಸಮರ್ಪಕವಾಗಿ ನಿಭಾಯಿಸಿ ಕೊನೆಯವರೆಗೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿ ಪಾತ್ರಗಳ ನಡುವಿನ ಭಾವಸಂವೇದನೆ ಮತ್ತು ಸಂವಹನವನ್ನು ನಿರ್ದೇಶಕರು ನಿಭಾಯಿಸಿರುವ ರೀತಿ ಕಂಡು ಅಚ್ಚರಿ ಮೂಡುತ್ತದೆ. ಸಂಭಾಷಣೆ ಇಲ್ಲದೇ ಪರಸ್ಪರ ಏನನ್ನೊ ಹೇಳಬೇಕಿರುವ ಮೂರು ಅಥವಾ ನಾಲ್ಕು ಪಾತ್ರಗಳ ಏಕ ಕಾಲದ ಸಂವಹನ ಅತಿ ಕ್ಲಿಷ್ಟಕರ. ಇಂತಹ ಸನ್ನಿವೇಷದಲ್ಲಿ ಪೂರಕ ದೃಶ್ಯಗಳೇ ಪ್ರೇಕ್ಷಕನಿಗೆ ವಿಷಯ ಸೂಚಕಗಳಾಗಿ ಮಾತನಾಡಿ ಆ ಪಾತ್ರಗಳ ಸಂವಹನ ಮಾಡಿಸುತ್ತವೆ. ಈ ಮೂಲಕ ಅಲ್ಲಿರುವ ಯಾವ ಪಾತ್ರ ಇತರ ಯಾವ ಪಾತ್ರಕ್ಕೆ ಏನನ್ನು ಹೇಳುತ್ತಿದೆ ಎಂಬುದನ್ನು ನಿರ್ದೇಶಕರು ಸ್ಪಷ್ಟಪಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ಈ ಚಿತ್ರ ನೋಡುತ್ತ ಹೋದಂತೆ ಪ್ರೇಕ್ಷಕನ ಸೂಕ್ಷ್ಮ ಬುದ್ಧಿಮತ್ತೆ ಜಾಗೃತವಾಗುತ್ತದೆ. ಮೌನಿ ಪಾತ್ರಗಳ ಬುದ್ಧಿ- ಭಾವಗಳೊಂದಿಗೆ ಪ್ರೇಕ್ಷಕ ಕೂಡ ಮೌನ ಸಂವನಕ್ಕೆ ತೊಡಗಿ ಕತೆಯ ಚಲನೆ ಮತ್ತು ಪರಿಣಾಮಗಳನ್ನು ಅರ್ಥೈಸಿಕೊಳ್ಳಲು ಆರಂಭಿಸುತ್ತಾರೆ. ಈ ವಿಚಾರದಲ್ಲಿ ನಿರ್ದೇಶಕ ಉಮೇಶ್‌ ಬಡಿಗೇರ ಬಹಳ ಚಾಣಾಕ್ಷತನದಿಂದ ಯೋಚಿಸಿ, ಚಿತ್ರದ ಪ್ರತಿಹಂತದಲ್ಲೂ ಮುಂದೇನಾಗಬಹುದು ಎನ್ನುವಂತಹ ಕೌತುಕ ಉಳಿಸಿಕೊಂಡು ಪ್ರೇಕ್ಷಕರನ್ನು ಕೊನೆಯವರೆಗೂ ಕರೆದುಕೊಂಡು ಹೋಗುವ ತಂತ್ರ ಬಳಸಿದ್ದಾರೆ. ಹಾಗಾಗಿ ಚಿತ್ರ ಆರಂಭವಾದಮೇಲೆ ಕೊನೆಗೊಳ್ಳುವವರೆಗೂ ಪ್ರೇಕ್ಷಕನಿಗೆ ನಿರಾಸಕ್ತಿ ಮೂಡುವುದೇ ಇಲ್ಲ. ಮತ್ತು ಎಲ್ಲಿಯಾದರೂ ಮಾತುಗಳ ಅಗತ್ಯವಿತ್ತು ಎಂದು ಅನ್ನಿಸುವುದೇ ಇಲ್ಲ.

ಸಂಭಾಷಣೆ ಇರುವ ದೃಶ್ಯಗಳಲ್ಲಿ ಕತೆ ಹೇಳುವುದು ವಿಶೇಷವೇನಲ್ಲ. ಅದು ಸಾಮಾನ್ಯ ಕಲಾಕೃತಿ. ಇಡೀ ಚಿತ್ರದಲ್ಲಿ ಸಂಭಾಷಣೆಯೇ ಇಲ್ಲದಂತೆ ಕತೆ ಹೇಳುವುದು ದೊಡ್ಡ ಸವಾಲಿನ ಕೆಲಸ. ಇಂತಹ ಸವಾಲನ್ನು ನಾನು ಹಠಕ್ಕೆ ಬಿದ್ದು ಎದುರಿಸುವ ಸಾಹಕ್ಕೆ ಇಳಿದಾಗ ಹುಟ್ಟಿದ್ದೇ ʻದಿ ಗಾರ್ಡ್‌ʼ ಚಿತ್ರ ಎನ್ನುತ್ತಾರೆ ನಿರ್ದೇಶಕ ಉಮೇಶ್‌ ಬಡಿಗೇರ.

ಹೀಗೆ ಮಾತುಗಳು ಇರಬೇಕಾದ ಜಾಗದಲ್ಲಿ ಭಾವ ಸಂವೇದನೆ ಮತ್ತು ಸಂಜ್ಞೆಗಳನ್ನು ಪ್ರತಿಮಾತ್ಮಕವಾಗಿ ಸೃಷ್ಟಿಸಿ ಮೌನ ಪ್ರತಿಮೆ, ಭಾವರೂಪಕಗಳಲ್ಲೇ ಕತೆ ಹೇಳುವ ಪ್ರಯೋಗದಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಇದು ಹಿರಿಯರ ಚಿತ್ರವಾಗಿದ್ದರೂ ಅಷ್ಟೇನೂ ಮಹತ್ವ ಅಥವಾ ಹೊಸತನದ ವಿಶೇಷತೆ ಇದಕ್ಕೆ ಸಲ್ಲುತ್ತಿರಲಿಲ್ಲ. ಈ ರೀತಿಯ ಮಕ್ಕಳ ಚಿತ್ರವನ್ನು ನಿರ್ಮಿಸಿದ ದಾಖಲೆ ಭಾರತೀಯ ಚಲನಚಿತ್ರ ಇತಿಹಾಸದಲ್ಲೇ ಇಲ್ಲ. ಹಾಗಾಗಿ ʻದಿ ಗಾರ್ಡ್‌ʼ ಚಿತ್ರ ಆ ಸ್ಥಾನವನ್ನು ತುಂಬಿ ಕನ್ನಡದ ಹೆಚ್ಚುಗಾರಿಕೆ ಮೆರೆದಿದೆ.

ಚಿತ್ರದ ಪ್ರಮುಖ ಪಾತ್ರವಾದ ಹದಿನಾಲ್ಕು ವರ್ಷದ ಬಾಲಕನಿಗೆ ಕ್ರಿಕೆಟ್‌ ಆಡುವುದೆಂದರೆ ಬಲು ಇಷ್ಟ. ಮನೆಯಲ್ಲಿ ಬಡತನವಿದೆ. ತಾಯಿ ಕ್ಯಾಂಡಲ್‌ ತಯಾರಿಸಿ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾಳೆ. ಇವನಿಗೆ ಮಾತ್ರ ಕ್ಯಾಂಡಲ್‌ ಮಾರಿದ ಹಣದಲ್ಲಿ ಕ್ರಿಕೆಟ್‌ ತಾರೆಗಳ ಚಿತ್ರಪಟಗಳನ್ನು ತಂದು ಮನೆಯ ಗೋಡೆಗಳಿಗೆ ಹಾಕಿಕೊಳ್ಳುವ ಹುಚ್ಚು ಅಭಿಮಾನ. ಸ್ನೇಹಿತರೊಂದಿಗೆ ಕ್ರಿಕೆಟ್‌ ಆಡುತ್ತ ಬ್ಯಾಟಿಂಗ್‌ ಮಾಡುವಾಗ, ಬೊಲಿಂಗ್‌ ಮಾಡುವ ಹುಡುಗ ಇವನ ಸೋಲು ಬಯಸಿ ಇವನ ಗುಪ್ತಾಂಗಕ್ಕೇ ಗುರಿ ಇಟ್ಟು ಚೆಂಡು ಎಸೆಯುತ್ತಾನೆ. ಆ ಏಟಿನ ನೋವು ಸಹಿಸಲಾಗದೇ ಇವನು ಸೋಲು ಒಪ್ಪಬೇಕಾಗುತ್ತದೆ. ಹೀಗೆ ಎಷ್ಟು ಬಾರಿ ಆಡಲು ಹೋದರೂ ಗುಪ್ತಾಂಗಕ್ಕೆ ಬೀಳುವ ಚೆಂಡಿನ ಹೊಡೆತಕ್ಕೆ ನಲುಗುವ ಬಾಲಕ, ಆ ಭಾಗವನ್ನು ಚೆಂಡಿನ ಏಟಿನಿಂದ ರಕ್ಷಿಸಿಕೊಳ್ಳಲು ʻರಕ್ಷಾ ಕವಚʼದ ಶೋಧನೆಗೆ ತೊಡಗುತ್ತಾನೆ. ಏನೇ ಮಾಡಿದರೂ ಫಲಿಸದೇ ಕಂಗೆಟ್ಟು ಖ್ಯಾತ ಕ್ರಿಕೆಟ್‌ ತಾರೆಗಳಿಗೆ ಪೋಸ್ಟ್‌ ಕಾರ್ಡ್‌ನಲ್ಲಿ ಪತ್ರ ಬರೆದು ಒಂದು ʻರಕ್ಷಾಕವಚʼ ಕಳುಹಿಸುವಂತೆ ಕೇಳಿಕೊಳ್ಳುತ್ತಾನೆ. ಆ ಪತ್ರ ಓದುವ ಅಂಚೆ ಪೇದೆ ಬಾಲಕನ ಹುಚ್ಚುತನಕ್ಕೆ ನಕ್ಕು ಪತ್ರಗಳನ್ನು ಹರಿದು ಬಿಸಾಕುತ್ತಾನೆ. ಅದು ತಿಳಿದು ನಿರಾಶನಾಗುವ ಬಾಲಕ, ಆಟದ ವೇಳೆ ತನ್ನ ಗುಪ್ತಾಂಗಕ್ಕೆ ಬೀಳುವ ಏಟಿನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಹಗಲು ರಾತ್ರಿ ಯೋಚಿಸುತ್ತಾನೆ. ಒಂದು ದಿನ ಒಂದು ಕ್ರೀಡಾಪರಿಕರದ ಅಂಗಡಿಗೆ ಹೋದಾಗ ಅಲ್ಲಿ ಸಿದ್ಧ ಮಾದರಿಯ ʻಗಾರ್ಡ್‌ʼ ಕಂಡು ಖುಷಿಯಾಗುತ್ತದೆ. ಆದರೆ ಅದರ ಬೆಲೆ ಕಂಡು ಖರೀದಿಸಲಾಗದೇ ವಿಷಾದಿತನಾಗುತ್ತಾನೆ. ಮನೆಗೆ ಬಂದು ಏನೇನೊ ಪರಿಕರಗಳನ್ನು ಬಳಸಿ ಆ ಸಿದ್ಧ ಮಾದರಿಯಂತೆಯೇ ʻಗಾರ್ಡ್‌ʼ ಸಿದ್ಧಪಡಿಸಲು ಪ್ರಯತ್ನಿಸಿ ಕಡೆಗೂ ವಿಫಲನಾಗುತ್ತಾನೆ. ಕ್ರೀಡಾಪರಿಕರದ ಅಂಗಡಿಯ ಬಾಲಕಿಯೊಬ್ಬಳ ಪರಿಚಯವಾದ ಮೇಲೆ, ಇವನು ಅವಳ ಆಕರ್ಷಣೆಗೆ ಬಿದ್ದಮೇಲೆ ತನಗೆ ಅಗತ್ಯವಿರುವ ʻಗಾರ್ಡ್‌ʼಅನ್ನು ಹೇಗೆ ಪಡೆದ ಎಂಬುದೇ ಕತೆಯ ಅಂತ್ಯ.

ಇಂತಹ ಅಪರೂಪದ ಕಥಾನಕ ಮತ್ತು ಪರಿಕಲ್ಪನೆಯೇ ಪ್ರೇಕ್ಷಕನನ್ನು ವಿಭಿನ್ನ ನೆಲೆಯಲ್ಲಿ ಚಿಂತಿಸಲು ಹಚ್ಚುತ್ತದೆ. ಮತ್ತು ಭಾರತೀಯ ಚಿತ್ರಗಳಲ್ಲಿ ಕಂಡುಬರುವ ಕಥನ ಗುಣಲಕ್ಷಣ, ನಿರೂಪಣೆಯನ್ನು ಮೀರಿ ಪಾಶ್ಚಾತ್ಯ ಶೈಲಿಯನ್ನು ನೆನಪಿಸುತ್ತದೆ. ಅದೂ ಅಲ್ಲದೇ ಚಿತ್ರದಲ್ಲಿ ನಿರ್ದಿಷ್ಟ ಪ್ರದೇಶದ ಭಾಷೆಯ (ಸಂಭಾಷಣೆ) ಬಳಕೆ ಇಲ್ಲದಿರುವುದರಿಂದ ಈ ಚಿತ್ರವನ್ನು ಜಗತ್ತಿನ ಯಾವ ಭಾಗದಲ್ಲಿ ಪ್ರದರ್ಶಿಸಿದರೂ ಅದು ಅಲ್ಲಿಯ ಚಿತ್ರವಾಗಿಯೇ ಅನುಭವ ಕೊಡುವಂತಹದ್ದು ಈ ಚಿತ್ರದ ಇನ್ನೂಂದು ವಿಶೇಷ ಗುಣ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಬೆಳಗಾವಿ ಮೂಲದ ಯುವ ನಿರ್ದೇಶಕರೊಬ್ಬರು ಜಾಗತಿಕ ಗುಣಮಟ್ಟದ ಚಿತ್ರ ನಿರ್ಮಿಸಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಚಾರವೆ! ಇಂತಹ ಅಪರೂಪದ ಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಪೋಷಣೆ ಒದಗಿಸುವುದು ಅತ್ಯಗತ್ಯ. ಕರ್ನಾಟಕ ಚಲನಚಿತ್ರ ಅಕಾಡೆಮಿಯಾಗಲಿ ಅಥವಾ ಚಲನಚಿತ್ರಕ್ಕೆ ಸಂಬಂಧಿಸಿದ ಸರ್ಕಾರದ ಅಧಿಕೃತ ಸಂಸ್ಥೆಗಳು ಇದರತ್ತ ಗಮನ ಹರಿಸಿ ಈ ಚಿತ್ರದ ಮಹತ್ವವನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡಬೇಕಾಗದ ಅಗತ್ಯವಿದೆ.

ವಿಟಿ ಸಿನೆಮಾಸ್‌ ಲಾಂಛನದ ಅಡಿಯಲ್ಲಿ ಶಿಲ್ಪಾ ಡಿ., ಆನಂದ ಕೊಳಕಿ, ಉಜ್ವಲಾ ಶೇಠ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಪರಿಣಿತ ಮತ್ತು ಸಿಂಚನಾ ಅಭಿನಯಿಸಿದ್ದು ಇತರ ಪಾತ್ರಗಳನ್ನು ಯೋಗಿತಾ ಹುಂಚಿಕಟ್ಟಿ, ಪ್ರೇಮ ನಿರಗಟ್ಟಿ, ಮಹಾದೇವ ಅಂಗಡಿ ನಿಭಾಯಿಸಿದ್ದಾರೆ. ಚಿತ್ರಕ್ಕೆ ಹಿತನ್‌ ಹಾಸನ ಸಂಗೀತ, ಬಸವರಾಜ ನಂದಗಡ ಮತ್ತು ಹಣಮೇಶ್‌ ಗಂಗಾವತಿ ಸೌಂಡ್‌ ಎಫೆಕ್ಟ್ಸ್‌, ಕಾರ್ತಿಕ್‌ ವರ್ಣಾಲಂಕಾರ ನೀಡಿದ್ದಾರೆ.