ಮಹಿಳೆಯರು ಗಂಟಿಚೋರ್ ಸಮುದಾಯದ ಎಲ್ಲಾ ಸಂಗತಿಗಳಲ್ಲಿಯೂ ಪಾಲುದಾರರಾಗಿದ್ದರು. ತುಡುಗುತನದಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆ ಕುತೂಹಲಕಾರಿಯಾಗಿದೆ. ಮುಖ್ಯವಾಗಿ ಮಹಿಳೆಯರು ಸಂತೆಗಳಲ್ಲಿ, ಮದುವೆ, ಬಸ್ ಸ್ಟ್ಯಾಂಡು, ರೈಲ್ವೇ ನಿಲ್ದಾಣಗಳಲ್ಲಿ ಸಣ್ಣಪುಟ್ಟ ತುಡುಗು ಮಾಡುವ ಪ್ರಾವೀಣ್ಯತೆ ಹೊಂದಿದ್ದರು. ಗುಂಪಾಗಿ ತುಡುಗು ಮಾಡುವುದಕ್ಕಿಂತ ಒಂಟಿಯಾಗಿ ತುಡುಗು ಮಾಡುವ ಪ್ರಮಾಣ ಹೆಚ್ಚಾಗಿತ್ತು. ಹಾಗಾಗಿ ಗಂಟಿಚೋರರ ತುಡುಗುತನದ ಪ್ರವೃತ್ತಿಯಲ್ಲಿ ಮಹಿಳೆಯರ ಪಾಲುದಾರಿಕೆ ವಿಶೇಷವಾಗಿದೆ. ಇವರಲ್ಲಿಯೂ ಪ್ರಾದೇಶಿಕವಾಗಿ ತುಂಬಾ ಪ್ರಸಿದ್ಧಿಯನ್ನು ಪಡೆದ ಮಹಿಳೆಯರೂ ಇದ್ದಾರೆ. ‘ಗಂಟಿಚೋರರ ಕಥನಗಳು’ ಸರಣಿಯಲ್ಲಿ ಅರುಣ್ ಜೋಳದಕೂಡ್ಲಿಗಿ ಬರೆದ ಬರಹ ಇಲ್ಲಿದೆ. 

 

ಗಂಟಿಚೋರರು ಕಳವಿಗೆ ಮುನ್ನ ಹನುಮಂತ, ಅಂಬಾಭವಾನಿ ಒಳಗೊಂಡಂತೆ ಅವರನ್ನು ಪ್ರಭಾವಿಸಿದ ಇತರೆ ಸಂಕೇತಗಳನ್ನು ಪೂಜಿಸುತ್ತಿದ್ದರು. ಕಳವಿಗೆ ಬಳಸುತ್ತಿದ್ದ ಶಸ್ತ್ರಾಸ್ತ್ರಗಳನ್ನೂ ದೈವವೆಂದು ನಂಬುತ್ತಿದ್ದರು. ಹೀಗಿರುವಾಗ 70-80ರ ದಶಕದಲ್ಲಿ ಭಾರತ್ ಬ್ಲೇಡ್ ಕಂಪನಿ ತುಂಬಾ ಪ್ರಸಿದ್ಧಿಯನ್ನು ಪಡೆದಿತ್ತು. ಆಗ ಕಿಸೆ ಕತ್ತರಿಸಲು ಈ ಭಾರತ ಬ್ಲೇಡನ್ನು ಬಳಸುತ್ತಿದ್ದರು. ಹೀಗಾಗಿ ಯಾವಾಗಲೋ ಹುಟ್ಟಿದ ನಂಬಿಕೆಯ ಭಾಗವಾಗಿ ಕಾಲಾನಂತರ ಭಾರತ ಬ್ಲೇಡಿನ ಲಕ್ಷೆಯಾಯಿತು. ಇದರ ಪರಿಣಾಮ ತುಡುಗಿಗೆ ಹೋಗುವ ಮುನ್ನ ಭಾರತ ಬ್ಲೇಡಲ್ಲಿ ಕೋಳಿ ಕತ್ತರಿಸಿ ಆ ರಕ್ತವನ್ನು ಬ್ಲೇಡಿನ ಮೇಲೂ, ತುಡುಗಿಗೆ ಹೊರಟವರ ಮೈಮೇಲೂ ಚುಮುಕಿಸಿಕೊಂಡು ತುಡುಗಿಗೆ ಹೊರಡುತ್ತಿದ್ದರು ಎನ್ನುವುದನ್ನು ಸಮುದಾಯದ ಹಿರಿಯರು ನೆನಪಿಸಿಕೊಳ್ಳುತ್ತಾರೆ (ಆರ್.ಎಲ್.ಹಂಸನೂರು: 2008:87).

ಗಂಟಿಚೋರ್ ಸಮುದಾಯದಲ್ಲಿ ಮಹಿಳೆಯರು ಕಳವು ಮಾಡುವ ಆದ್ಯತೆ ಕಡಿಮೆಯಾಗಿದೆ. ಆದರೆ ಹಿಂದೆ ಮಹಿಳೆಯರು ಗಂಟಿಚೋರ್ ಸಮುದಾಯದ ಎಲ್ಲಾ ಸಂಗತಿಗಳಲ್ಲಿಯೂ ಪಾಲುದಾರರಾಗಿದ್ದರು. ತುಡುಗುತನದಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆ ಕುತೂಹಲಕಾರಿಯಾಗಿದೆ. ಮುಖ್ಯವಾಗಿ ಮಹಿಳೆಯರು ಸಂತೆಗಳಲ್ಲಿ, ಮದುವೆ, ಬಸ್ ಸ್ಟ್ಯಾಂಡು, ರೈಲ್ವೇ ನಿಲ್ದಾಣಗಳಲ್ಲಿ ಸಣ್ಣಪುಟ್ಟ ತುಡುಗು ಮಾಡುವ ಪ್ರಾವೀಣ್ಯತೆ ಹೊಂದಿದ್ದರು. ಮುಖ್ಯವಾಗಿ ಸಂತೆಯಲ್ಲಿ ತರಕಾರಿ ಕದಿಯುವುದು, ಸಂತೆಮಾಡಿಟ್ಟ ಗಂಟು ಅಥವಾ ಚೀಲ ಕದಿಯುವುದು, ವಿಶೇಷವಾಗಿ ಮಹಿಳೆಯರ ಒಡವೆ ಕದಿಯುವುದು ಮಾಡುತ್ತಿದ್ದರು. ಇವರು ಗುಂಪಾಗಿ ತುಡುಗು ಮಾಡುವುದಕ್ಕಿಂತ ಒಂಟಿಯಾಗಿ ತುಡುಗು ಮಾಡುವ ಪ್ರಮಾಣ ಹೆಚ್ಚಾಗಿತ್ತು. ಹಾಗಾಗಿ ಗಂಟಿಚೋರರ ತುಡುಗುತನದ ಪ್ರವೃತ್ತಿಯಲ್ಲಿ ಮಹಿಳೆಯರ ಪಾಲುದಾರಿಕೆ ವಿಶೇಷವಾಗಿದೆ. ಇವರಲ್ಲಿಯೂ ಪ್ರಾದೇಶಿಕವಾಗಿ ತುಂಬಾ ಪ್ರಸಿದ್ಧಿಯನ್ನು ಪಡೆದ ಮಹಿಳೆಯರೂ ಇದ್ದಾರೆ. ವಚಲಕ್ಕನ ತಾಯಿ ಬೊಂಬಾಯಿ ಭೀಮವ್ವ, ಗದಗಿನ ಕ್ವಾಟೆ ದ್ಯಾಮವ್ವ, ಹಂಪವ್ವ, ಗುಡಿ ಸಾವಕ್ಕ, ಹೊಟ್ಟಿ ಪಾರ್ತೆವ್ವ, ಹಂಪವ್ವ, ತಿಪ್ಪವ್ವ ಮುಂತಾದವರು ಪ್ರಸಿದ್ಧ ತುಡುಗು ಮಹಿಳೆಯರಾಗಿದ್ದರು. ಶಾವಕ್ಕ, ಮಕ್ತವ್ವ ತುಡುಗಿನ ಮುಖ್ಯಸ್ಥರಾಗಿದ್ದರು.

ಜಾತ್ರಿ ಕಳವು

ಗಂಟಿಚೋರರ ಕಳವಿನ ಹಲವು ನೆಲೆಗಳಲ್ಲಿ ಜಾತ್ರೆ ಬಹುಮುಖ್ಯ ಸ್ಥಳವಾಗಿತ್ತು. ಕಾರಣ ಜಾತ್ರೆಗಳಲ್ಲಿ ಜನರು ಮೈಮರೆತು ಪಾಲ್ಗೊಂಡಿರುತ್ತಾರೆ. ಸಂಭ್ರಮದಲ್ಲಿರುತ್ತಾರೆ. ಜನಜಂಗುಳಿಯಲ್ಲಿ ತಮ್ಮ ವಸ್ತುಗಳ ಬಗ್ಗೆ ಅಷ್ಟಾಗಿ ಕಾಳಜಿ ವಹಿಸಲು ಆಗುವುದಿಲ್ಲ. ಈ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಗಂಟಿಚೋರರು ಜಾತ್ರೆಗಳ ಕಳವಿನಲ್ಲಿ ಪ್ರಾವೀಣ್ಯ ಪಡೆದಿದ್ದರು. ಹಾಗಾಗಿ ದೊಡ್ಡ ದೊಡ್ಡ ಜಾತ್ರೆಗಳು ಬಂದರೆ ಗಂಟಿಚೋರರು ತುಂಬಾ ಸಂಭ್ರಮದಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

‘ಇಂಥಾ ಜಾತ್ರಿ ಒಳಾಗ ನಾವು ಕಳವು ಹಿಡೀತೀವಿ, ಅದು ಸೆಕ್ಸಸ್ ಆಯ್ತು ಅಂದ್ರ ನಿನಗ ಇಷ್ಟು ಕೊಡ್ತೀವಿ’ ಎಂದು ದೇವರಿಗೆ ಹರಕೆ ಹೊರುತ್ತಿದ್ದರು. ಮುಂದೆ ಜರುಗಲಿರುವ ಜಾತ್ರೆಯಲ್ಲಿ ಕಳವು ಮಾಡುವ ಬಗ್ಗೆ ತಯಾರಿ ಮಾಡುತ್ತಿದ್ದರು. ಈ ತಯಾರಿಯ ಭಾಗವಾಗಿ ಮೊದಲು ದೇವರ ಪ್ರಸಾದ ಕೇಳಿ ಒಳ್ಳೆಯದೋ ಕೆಟ್ಟದ್ದೋ ಎಂದು ಖಚಿತಪಡಿಸಿಕೊಳ್ಳುತ್ತಿದ್ದರು. ಜಾತ್ರೆ ನಡೆಯುವ ಎರಡು ಕಿಲೋಮೀಟರ್ ದೂರದಲ್ಲಿ ಒಂದು ಪುಡಾಲ ಹಾಕೋದು ಅಲ್ಲಿ ಇಬ್ರನ್ನ ಕಾಯಾಕ ಇಡಾದು. ಕದ್ದು ಗಂಟನ್ನು ಅಲ್ಲಿ ಇಟ್ಟು ಬರಾದು. ಇಬ್ಬಿಬ್ಬರು ಜೋಡಿಯಾಗಿ ಜಾತ್ರೆಯಲ್ಲಿ ತುಡುಗು ಮಾಡುವುದು.

(ಕ್ಷೇತ್ರ ಕಾರ್ಯದ ಒಂದು ಸಂದರ್ಭ)

ಮನೆ ಕನ್ನ

ಮನೆ ಕನ್ನ ಹಾಕಿ ಕಳವು ಮಾಡುವುದು ವಿಶಿಷ್ಟವಾಗಿದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಒಳಹೋಗುವಷ್ಟು ಕಿಂಡಿಯನ್ನು ತೋಡುತ್ತಿದ್ದರು. ನಂತರ ಉದ್ದನೆಯ ಕೋಲಿನ ತುದಿಗೆ ಅರವಿ ಸುತ್ತಿ ಅದನ್ನು ಮನೆಯ ಒಳಕ್ಕೆ ತೂರಿಸುವುದು. ಅಕಸ್ಮಾತ್ ಮನೆ ಒಳಗೆ ಜನರು ಎಚ್ಚರಗೊಂಡಿದ್ದರೆ ಈ ಬಟ್ಟೆ ಸುತ್ತಿದ ಕೋಲಿನ ತುದಿಯನ್ನೇ ಮನುಷ್ಯನ ತಲೆಯೆಂದು ಭಾವಿಸಿ ಹೊಡೆಯಬಹುದು. ಹಾಗೆ ಹೊಡೆದರೆ ಮನೆಯಲ್ಲಿ ಎಚ್ಚರಾಗಿದ್ದಾರೆ ಎಂದು ಇವರು ಓಟ ಕೀಳುತ್ತಿದ್ದರು. ಒಂದು ಪಕ್ಷ ಕೋಲಿನ ತುದಿಗೆ ಹೊಡೆತ ಬೀಳದಿದ್ದರೆ ಆಗ ನಿಧಾನಕ್ಕೆ ಒಬ್ಬ ವ್ಯಕ್ತಿ ಮನೆಯ ಒಳಗೆ ಪ್ರವೇಶ ಮಾಡುತ್ತಿದ್ದನು. ನಂತರ ಒಬ್ಬೊಬ್ಬರೇ ಮನೆಯನ್ನು ಪ್ರವೇಶಿಸಿ ಕೈಗೆ ಸಿಕ್ಕ ಸಾಮಾನನ್ನು ಕದ್ದು ಕೆಲವೊಮ್ಮೆ ತಾವು ತೆಗೆದ ಕಿಂಡಿಯಿಂದಲೋ ಅಥವಾ ಬಾಗಿಲಿಂದಲೋ ಹೊರಬರುತ್ತಿದ್ದರು. ಹೀಗೆ ಮನೆಯ ಒಳಗೆ ತುಡುಗು ಮಾಡುವಾಗ ಒಂದು ಪಕ್ಷ ಮನೆಯವರು ಎಚ್ಚರವಾದರೆ ಅವರಿಗೆ ಕೋಲು ಬಡಿಗೆ ಚಾಕು ತೋರಿಸಿ ತಪ್ಪಿಸಿಕೊಳ್ಳುತ್ತಿದ್ದರು. ಇಲ್ಲವೆಂದರೆ ಅವರನ್ನು ಕಂಬಕ್ಕೆ ಕಟ್ಟಿ ಓಡಿ ಹೋಗುವುದೂ ಇತ್ತು. ಕೆಲವೊಮ್ಮೆ ಬಾಯಲ್ಲಿ ಬಟ್ಟೆ ತುರುಕಿ ಅವರನ್ನು ಕಂಬಕ್ಕೆ ಕಟ್ಟಿ ಬಾಗಿಲು ಹಾಕಿ ಹೊರಗಡೆ ಚಿಲಕ ಹಾಕಿ ಓಡಿಬರುತ್ತಿದ್ದರು. ಗದಗ ಬಾಲೆಹೊಸೂರು ಭಾಗದ ಚಿನಿ ಪರಸಪ್ಪ, ಕುಡ್ಡ ಯಂಕ್ಯಾ, ಗುಂಪು ಕಳವಿಗೆ ಹೋದರೆ ಒಬ್ಬರಿಗೆ ಒಂದು ಪಾಲಿದ್ದರೆ, ಇವರಿಗೆ ನಾಲ್ಕು ಪಾಲು ಇರುತ್ತಿತ್ತು. ಕಾರಣ ಇವರು ಇಡೀ ತುಡುಗಿನ ಚಾಲಕ ಶಕ್ತಿಗಳ ಹಾಗೆ ಕೆಲಸ ಮಾಡಿರುತ್ತಿದ್ದರು.

ಹಿಂದೆ ಮಹಿಳೆಯರು ಗಂಟಿಚೋರ್ ಸಮುದಾಯದ ಎಲ್ಲಾ ಸಂಗತಿಗಳಲ್ಲಿಯೂ ಪಾಲುದಾರರಾಗಿದ್ದರು. ತುಡುಗುತನದಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆ ಕುತೂಹಲಕಾರಿಯಾಗಿದೆ. ಮುಖ್ಯವಾಗಿ ಮಹಿಳೆಯರು ಸಂತೆಗಳಲ್ಲಿ, ಮದುವೆ, ಬಸ್ ಸ್ಟ್ಯಾಂಡು, ರೈಲ್ವೇ ನಿಲ್ದಾಣಗಳಲ್ಲಿ ಸಣ್ಣಪುಟ್ಟ ತುಡುಗು ಮಾಡುವ ಪ್ರಾವೀಣ್ಯತೆ ಹೊಂದಿದ್ದರು.

ಪ್ರಾಣಿ ಕಳವು

ಕುರಿ, ಮೇಕೆ, ಎಮ್ಮೆ, ಆಕಳು, ಕೋಳಿಯನ್ನು ಒಳಗೊಂಡಂತೆ ಪ್ರಾಣಿ ಪಕ್ಷಿಗಳನ್ನು ಕಳ್ಳತನ ಮಾಡುವುದು ಇತ್ತು. ಒಮ್ಮೊಮ್ಮೆ ಕುರಿ ಅಥವಾ ದನಗಳು ಸಂಜೆ ಮನೆಗೆ ಮರಳುವಾಗ ಬೇಲಿಯ ಬದಿಯಿದ್ದು ಕದಿಯುವುದು ಅಥವಾ ಆಯಾ ಕುರಿ ಹಟ್ಟಿಗಳಲ್ಲಿ ಕದಿಯುವುದು ಇತ್ತು. ಇಂತಹ ಸಂದರ್ಭದಲ್ಲಿ ಪ್ರಾಣಿಗಳನ್ನು ಕದಿಯಲು ಕೈಗೆ ಕಬ್ಬಿಣದ ಉಗುರು ಮಾಡಿಸಿರುತ್ತಿದ್ದರು ಎಂದು ಕೆನಡಿ ತನ್ನ ಪುಸ್ತಕದಲ್ಲಿ ಉಲ್ಲೇಖಿಸುತ್ತಾನೆ. ಅಂತೆಯೇ ಪ್ರಾಣಿಗಳನ್ನು ಕಳವು ಮಾಡುವಾಗ ಅವು ಅರಚದಂತೆ ನಾಲಿಗೆಗೆ ಮುಳ್ಳು ಚುಚ್ಚುವ ತಂತ್ರವನ್ನೂ ಮಾಡುತ್ತಿದ್ದರು. ಅಂತೆಯೇ ಅನೇಕ ತಂತ್ರಗಳನ್ನು ಮಾಡಿಯೂ ಪ್ರಾಣಿಗಳನ್ನು ಕದಿಯುತ್ತಿದ್ದರು. ಕುರಿ ಬಿಟ್ಟಿರುವುದನ್ನು ನೋಡುವುದು. ಒಬ್ಬರು ಕುರಿಮಂದೆಯವರ ಜತೆ ಮಾತಿಗೆ ಕೂರುವುದು. ‘ಬುಯ್ಯ ಆಡಿಕಂಡು ಕೂತಗಂತಿನಿ, ತಾಸಿಗಂಡು ನಡಿ’ ಎಂದು ಮಾತಾಡಿಕೊಳ್ಳುವುದು. ಬುಗುಡಿ(ಕುರಿ) ಚಟಾಸಿಕಂಡು ಹೋಗು ಎನ್ನುತ್ತಿದ್ದರು. ‘ಜೋಳದ ಹೊಲದ ಪಕ್ಕ ಕುರಿ ಮೇಯಿಸ್ತಿದ್ರ, ಜೋಳದ ಹೊಲದಾಗ ಹೋಗಿ ಎಷ್ಟು ಸಿಕ್ತಾವ ಅಷ್ಟನ್ನ ಹಿಡಕಂಡು ನಾಲಿಗ್ಗೆ ಮುಳ್ಳ ಚುಚ್ಚತಿದ್ವಿ. ಇಲ್ಲ ಗೋಣ ಮುರೀತಿದ್ವಿ. ಹೀಗೆ ಒಂದು ಕಡೆ ಬಚ್ಚಿಟ್ಟು ಊರಾಗ ಅಡ್ಡಾಡಿಕಂಡು ಬಂದು ಊರಲ್ಲಿ ಗದ್ದಲ ಇಲ್ಲದಿದ್ರ ತಗಂಡು ಹೋಗ್ತಿದ್ವಿ. ಎಷ್ಟು ಮಂದಿ ಇರ್ತಿದ್ವೋ ಅಷ್ಟು ಮಂದಿ ಪಾಲು ಹಾಕ್ಯಂಡು ಹಂಚಿಕಳ್ತಿದ್ವಿ. ಸಂಜಿ ಮುಂದೆ ಕುರಿಗಳು ಊರಿಗೆ ಬರುವಾಗ ಕತ್ತಾಲ ಕಾವಳ ಇದ್ದಾಗ ಕಣಗಳಲ್ಲಿ ಕೂತಕಂಡು ಕುರಿ ಎಳಕಂಡು ಕಳವು ಮಾಡತಿದ್ವಿ’ ಎಂದು ಬಾಲೆಹೊಸೂರಿನ ಹಿರಿಯರೊಬ್ಬರು ಪ್ರಾಣಿಕಳವಿನ ಸ್ವಾರಸ್ಯವನ್ನು ಹೇಳುತ್ತಾರೆ.

ಹೊಲದ ಕಳವು

ಸಾಮಾನ್ಯವಾಗಿ ಹೊಲದ ಕಳವು ನಿಜಕ್ಕೂ ಹೊಟ್ಟೆ ಪಾಡಿನ ಕಳ್ಳತನವೇ ಆಗಿತ್ತು. ಆಹಾರಧಾನ್ಯಗಳನ್ನು, ಬರಿ ಬಾಯಿಯಿಂದ ತಿನ್ನಬಹುದಾದ ಮೆಕ್ಕೆಜೋಳ, ಶೇಂಗಾ ಮುಂತಾದ ಬೆಳೆಗಳನ್ನು ಕದಿಯುತ್ತಿದ್ದರು. ಉಳಿದಂತೆ ಹತ್ತಿ, ಸೂರ್ಯಕಾಂತಿ, ತೋಟಗಳಾಗಿದ್ದರೆ ತೆಂಗಿನಕಾಯಿ, ಹೀಗೆ ತರಾವರಿ ಬೆಳೆಗಳನ್ನು ಕಳ್ಳತನ ಮಾಡುವುದರಲ್ಲಿಯೂ ಹಲವು ಬಗೆಯ ಚಾಕಚಕ್ಯತೆಯನ್ನು ತೋರುತ್ತಿದ್ದರು. ಅಂತೆಯೇ ಸುಗ್ಗಿಯ ಸಮಯದಲ್ಲಿ ಕಣಗಳಲ್ಲಿ ಕಾಳುಕಡಿ ತುಂಬಿಟ್ಟ ಚೀಲಗಳನ್ನು ಕದಿಯುವುದೂ ಇತ್ತು.

ಲಕ್ಷ್ಮಣ ಗಾಯಕವಾಡ ಅವರು ತನ್ನಜ್ಜ ಸಾಯಬೂತಾತ್ಯಾನು ಹೊಲಗಳಲ್ಲಿ ಮಾಡುವ ವಿಶೇಷ ಕಳ್ಳತನದ ಬಗ್ಗೆ ಹೇಳುತ್ತಾರೆ. ‘ತಾತ್ಯ ಮುದುಕನಾಗಿದ್ದರೂ ಬಹಳಾ ಚಾಣಾಕ್ಷ್ಯ. ಆತನ ಕಳ್ಳತನ ಉಳಿದವರೆಲ್ಲರಿಗಿಂತ ಭಿನ್ನ. ಅದು ಕಳ್ಳತನವೆಂದು ಯಾರಿಗೂ ಅನ್ನಿಸುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಇಲಿಗಳದ್ದೇ ಸಾಮ್ರಾಜ್ಯ. ನಾನು ತಾತ್ಯಾ ಇಲಿ ಹಿಡಿಯುತ್ತಿದ್ದೆವು. ಈ ಇಲಿಗಳನ್ನು ಬಳಸಿ ತಾತ್ಯಾ ಕಳ್ಳತನ ಮಾಡುತ್ತಿದ್ದ. ನಾವು ಬಲೆ ಇಟ್ಟು ಇಲಿ ಹಿಡಿಯುತ್ತಿದ್ದೆವು. ತಾತ್ಯಾ ಈ ಇಲಿಗಳನ್ನೆಲ್ಲಾ ಸನಿಹದ ಗೋಧಿ ಹೊಲಕ್ಕೊಯ್ದು ಬಿಟ್ಟು ಬರುತ್ತಿದ್ದ. ಅವು ತೆನೆ ಕತ್ತರಿಸಿ ಬಿಲದಲ್ಲಿ ಸಂಗ್ರಹಿಸುತ್ತಿದ್ದವು. ಸುಗ್ಗಿ ಬಳಿಕ ನಾನು ತಾತ್ಯಾ ಬಿಲಗಳನ್ನು ಗುದ್ದಲಿಯಿಂದ ಅಗೆದು ಅಲ್ಲಿದ್ದ ಗೋಧಿ ಕಾಳುಗಳನ್ನೆಲ್ಲಾ ತರುತ್ತಿದ್ದೆವು. ರೈತ ಇದನ್ನು ನೋಡಿಯೂ ಸುಮ್ಮನಿರುತ್ತಿದ್ದ. ಕೊನೇ ಪಕ್ಷ ತನ್ನ ಹೊಲದೊಳಗಿನ ಇಲಿಗಳಾದರೂ ಕಡಿಮೆ ಆದವಲ್ಲ ಎಂಬುದು ಆತನ ಸಮಾಧಾನ. ಈ ರೀತಿ ತಾತ್ಯಾ ನಾಲ್ಕು ಗಡಿಗೆಯಷ್ಟು ಗೋಧಿ ಸಂಗ್ರಹಿಸುತ್ತಿದ್ದ. ಈ ಗೋಧಿ ಮಾರಿದ ಹಣದಿಂದಲೇ ದಾದಾ ಮತ್ತು ಅಣ್ಣಾನ ಮದುವೆ ಮಾಡಿದ’(ಉಚಲ್ಯ: 2011:16).

ಮುಂದುವರಿದು ‘ಕೆಲವೊಮ್ಮೆ ನಮ್ಮ ಮನೆಯ ತಂಡ ಅಂದರೆ ದಾದಾ, ಭಾವು, ಅಣ್ಣಾ, ಇವರೊಂದಿಗೆ ನಾರ್ಯಾ ತುಳಸಿರಾಮ-ಇವರು ಒಳ್ಳೆ ಫಸಲು ಬೆಳೆದ ಹೊಲಕ್ಕೆ ಹೋಗಿ ತೆನೆ, ಮೆಣಸು, ಶೇಂಗಾ, ಕದ್ದು ತರುತ್ತಿದ್ದರು. ಕಳ್ಳತನ ಮಾಡಿದ್ದು ಗೊತ್ತಾಗಬಾರದೆಂದು ರಾತ್ರಿಯೇ ತೆನೆಗಳನ್ನು ಬಡಿದು ಕಾಳು ಮಾಡುತ್ತಿದ್ದರು. ಅನಂತರ ದಂಟು ಸಿಪ್ಪೆಗಳನ್ನೆಲ್ಲಾ ಸುಟ್ಟುಹಾಕುತ್ತಿದ್ದರು. ಸುಟ್ಟಕಾಳು ಬೀಸಿ ನುಚ್ಚು ತಯಾರಿಸುತ್ತಿದ್ದೆವು. ನಾನು ಒಲೆ ಮೇಲೆ ಪಾತ್ರೆ ಇಟ್ಟು ನುಚ್ಚು ಕುದಿಸುತ್ತಿದ್ದೆ. ಆ ನಂತರ ವಾರದ ಹಸಿವನ್ನು ನುಚ್ಚು ತಿಂದು ಹಿಂಗಿಸಲು ಪ್ರಯತ್ನಿಸುತ್ತಿದ್ದೆವು(ಉಚಲ್ಯ: 2011:131). ಹೀಗೆ ಹೊಲಕಳವು ಕೂಡ ಗಂಟಿಚೋರ್ ಸಮುದಾಯದ ಕಳವಿನ ಒಂದು ಮಾದರಿಯಾಗಿತ್ತು.

ಕಲ್ಲುಪಡಿ

ತುಡುಗು ಮಾಡಿದ ವಸ್ತುಗಳನ್ನು ಗೌಪ್ಯವಾಗಿ ಬಚ್ಚಿಡುವ ಕೆಲವು ಸ್ಥಳಗಳನ್ನು ಸ್ಥಳೀಯವಾಗಿ ಗುರುತಿಸಿಕೊಂಡಿದ್ದರು. ಹೀಗೆ ತುಡುಗಿನ ವಸ್ತುಗಳನ್ನು ಕಲ್ಲಿನ ಪೊಟರೆಗಳಲ್ಲಿ ಬಚ್ಚಿಡುವ ಸ್ಥಳಗಳನ್ನು ಕಲ್ಲುಪಡಿ ಎಂದು ಗುರುತಿಸುತ್ತಿದ್ದರು. ನಮಗೆ ಸದ್ಯಕ್ಕೆ ಗೋಕಾಕ ಫಾಲ್ಸ್‌ಗೆ ಹೋಗುವ ನಡುಮಧ್ಯೆ ಇಂತಹ ಕಲ್ಲುಪಡಿಯೊಂದು ಸಿಗುತ್ತದೆ. ಇದು ಕದ್ದ ಸಾಮಾನನ್ನು ಸುರಕ್ಷಿತವಾಗಿ ಬಚ್ಚಿಡುವಂತೆ ಪೊಟರೆಯನ್ನು ಹೊಂದಿದೆ. ಹೊರನೋಟಕ್ಕೆ ಪೊಟರೆಯ ಗುರುತು ಸಿಗುವುದಿಲ್ಲ. ಈ ಕಲ್ಲುಪಡಿಯಲ್ಲಿ ತುಡುಗಿನ ಸಾಮಾನುಗಳನ್ನು ಬಚ್ಚಿಟ್ಟು ನಂತರದಲ್ಲಿ ಅವುಗಳನ್ನು ಹಂಚಿಕೊಳ್ಳುವ ವ್ಯವಸ್ಥೆ ಇತ್ತು. ಅಂತೆಯೇ ಗೋಗಾಕ ಫಾಲ್ಸ್‌ನಿಂದ 2 ಕಿಲೋಮೀಟರ್ ದೂರದಲ್ಲಿ ಒಂದು ಗಣೇಶನ ದೇವಸ್ಥಾನವಿದೆ. ಅದರ ಮುಂದೆ ಹೋದರೆ ಕಲ್ಲಿನೊಳಗೆ ನೈಸರ್ಗಿಕವಾದ ಒಂದು ಗವಿ ಇತ್ತು. ಸ್ವಲ್ಪ ದೂರ ಈ ಗವಿಯಲ್ಲಿ ನಡೆದು ಮುಂದೆ ಸಾಗಿದರೆ ಇನ್ನೊಂದು ಭಾಗದಿಂದ ಹೊರಬರಬಹುದಾಗಿತ್ತು. ಈ ಗವಿಯಲ್ಲಿಯೂ ತುಡುಗು ಮಾಡಿದ ಸಾಮಾನುಗಳನ್ನು ಬಚ್ಚಿಡುತ್ತಿದ್ದರೆಂದು ಗೋಕಾಕ ಫಾಲ್ಸ್‌ನ ಶಾಬು ಅವರು ಹೇಳುತ್ತಾರೆ. ಹೀಗೆ ಪ್ರಾದೇಶಿಕವಾಗಿಯೂ ತುಡುಗು ವಸ್ತುಗಳನ್ನು ಬಚ್ಚಿಡುವ ಗೌಪ್ಯ ಸ್ಥಳಗಳನ್ನು ಮಾಡಿಕೊಂಡಿದ್ದರು.

(ಚಿತ್ರಗಳು-ಗದಗ ಜಿಲ್ಲೆ ಲಕ್ಷ್ಮೇಶ್ವರದ ಸಮೀಪದ ಬಾಲೇ ಹೊಸೂರು ಗ್ರಾಮದಲ್ಲಿ ಗಂಟಿಚೋರ್ ಸಮುದಾಯವನ್ನು ಸಂದರ್ಶನ ಮಾಡುವಾಗಿನ ಚಿತ್ರಗಳು)