ಮೈಮರವು

ಹೆಂತಾ ಚದರಂಗಿ ಚೆಲುವ ಬಂಗಾರ
ಗೊಂಬಿಯ ಜಲಮಕ್ಕss ಸಿಂಗಾರ

ಮೂಗುತಿ ಕಳದಿತ್ತ ಮನಿ-ಮಟ ಅದರಿತ್ತ
ಮೈಮರತ ಕುಂತಾಗ ಮನಸ ಖೂನಾಗಿತ್ತ
ಕನಸಿsನ ಕಿಡಿಕ್ಯಾಗ ತುಡಗಾತ
ಹಾರಬಡದ ಹೆಂತಾ ಮೋಸಾತ

ಮೂರು ಫಿರಕುಳ್ಳ ಮೋಜಿನ ಮೂಗುತಿ
ನೀರಿಗಿ ಅಳಕಿಲ್ಲ ನೋಡ ವಾರಿಗಿ ಗೆಣತಿ
ಹಂಗೆಂಗ ಜೀವಕ್ಕ ಮೋಸಾತsss
ಯಾವ ಮಾಯಿಲೆ ಹಿಂತಾ ಮೋಸಾತ

ಮೂರ ಮುತ್ತುಳ್ಳ ಹೊಳಪಿನ ತಿರಪ
ಚಂದರಕಾಳಿ ಸೀರಿ ಶಾಪೂರ ಮಾಟದ ಹುರುಪ
ಮುಟಗಿಯೊಳಗಿನ ಗುಟ್ಟ ಉಟರಾಗಿತ್ತ
ಯಾವ ಮಾಯಿಲೆ ಹಿಂತಾ ಮೋಸಾತ

ಮೂರೋಣಿ ಕೂಡಿದರ ಬಾಳೇವ ಹಾರ
ಬೇಬರಶಿ ಹೊತ್ತೀಗಿ ಯಾರ ಮ್ಯಾಗ ಭಾರ
ಮಾರಿ ಮ್ಯಾಗಿನ ಡೌಲ ಮರಿಯಾತ
ಯಾವ ಮಾಯಿಲೆ ಹಿಂತಾ ಮೋಸಾತ

ನೀಹಾರಿಕೆ

ಕುಕ್ಕುರಗಾಲೂರಿ ಕೂರುವ ಭವಬಂಧನವ
ಸ್ಟ್ರೆಚರಿನ ನಾಲ್ಕೂ ಗಾಲಿಗಳು
ಉರುಳಿಸಿಕೊಂಡು ಹೋಗುವವು
ನುಗಿಸಿದ ಕಡೆಗೆಲ್ಲ
ಕಾಣದ ಗುರುತುಗಳಲ್ಲಿ ಭಯದ ಗೆರೆಗಳ ಉಳಿಸುತ

ನಿರೀಕ್ಷೆಯ ಕಣ್ಣುಗಳು ನಿಚ್ಚಳವಾಗಿ
ತೆರೆಯದೆ ಮುಚ್ಚಿಕೊಳ್ಳದೆ
ನೋವನ್ನು ಈಟೀಟೇ ಹನಿಸುತಿವೆ
ಗಳಿಗೆಗೊಮ್ಮೆ ಒಪ್ಪತ್ತಿಗೊಮ್ಮೆ
ಅರನಿದ್ದೆಯ ಕನಸುಗಳು
ಕರುಳ ಹಿಂಡುತಿವೆ ನುರಿನುರಿಯಾಗಿ

ಆಗಾಗ ತೆಗೆಯುವ ಎಕ್ಸರೆಯ
ಅಚ್ಚುಗಳಲ್ಲಿ ದೇವರು ಸುಳ್ಳಾದರೂ
ಕಟಕಟಯೊಳಗೆ ಯಾರೇ ನಿಂತರೂ
ವಾದ ಪ್ರತಿವಾದಗಳು ಎಷ್ಟೇ ನಡೆದರೂ
ಕೊನೆಗೆ ಕೇಸು ಗೆಲ್ಲುವುದು ಕಾಲನೇ

ಓ ಕಾಲನೇ,
ಒಂದಿಷ್ಟು ಹನಿಗಳ ಸಿಂಪಡಿಸು
ಕನಸುಗಳ ಬೆಂಕಿಯಾರುವಷ್ಟೇ
ಅದೊಂದು ಅನರ್ಘ್ಯ ಹಾಗೆಯೇ
ಹೊಳೆಯುತಿರಲಿ ಸದಾಕಾಲ
ಈಟೀಟೇ ಬೆಳಕ ಸೂಸುತ
ದೀರ್ಘಾಯುಷಿ ನಕ್ಷತ್ರಪುಂಜದ ಹಾಗೆ

ಭುವನಾ ಹಿರೇಮಠ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮನಟ್ಟಿಯವರು.
ಸದ್ಯ ಬೆಳಗಾವಿ ಜಿಲ್ಲೆಯ ಹಿರೇನಂದಿಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
“ಟ್ರಯಲ್ ರೂಮಿನ ಅಪ್ಸರೆಯರು”, “ಮತ್ತೆ ಮತ್ತೆ ಮರ್ತಕ್ಕಿಳಿಯುತ್ತೇನೆ” ಅವರ ಪ್ರಕಟಿತ ಕವನ ಸಂಕಲನಗಳು.