Advertisement
ಮಡಿಕೇರಿ ಟು ಬೇಲೂರು: ಸುಮಾವೀಣಾ ಸರಣಿ

ಮಡಿಕೇರಿ ಟು ಬೇಲೂರು: ಸುಮಾವೀಣಾ ಸರಣಿ

ರಿಸಲ್ಟ್ ಮುಗಿದ ನಂತರ ಒಂದು ದಿನವೂ ಮಡಿಕೇರಿಯಲ್ಲಿ ಇರುತ್ತಿರಲಿಲ್ಲ. ಅಷ್ಟರಲ್ಲಿ ಬೇಲೂರಿನ ರಥೋತ್ಸವದ ಸಂದರ್ಭ ಸಂಭ್ರಮ ಎರಡೂ ಆಗಿರುತ್ತಿದ್ದ ಕಾರಣ ಬೇಲೂರಿಗೆ ಹೋಗುತ್ತಿದ್ದೆವು. ಹೋದ ನಂತರ ನಾವು ಯಾರ ಅಣತಿಯನ್ನೂ ಒಪ್ಪುತ್ತಿರಲಿಲ್ಲ. ಪೇರೋಲ್‌ನಿಂದ ಆಚೆ ಬಂದ ಖೈದಿಗಳಂತೆ ಆಡುತ್ತಿದ್ದೆವು. ಬೇಲೂರು ದೇವಸ್ಥಾನದಲ್ಲಿ ಘಂಟೆ ಬಾರಿಸಿದರೆ ನಮ್ಮಜ್ಜಿ ಮನೆಗೆ ಕೇಳಿಸುತ್ತಿತ್ತು. ಮಹಾಮಂಗಳಾರತಿ ಘಂಟೆ, ನೈವೇದ್ಯದ ಘಂಟೆಗಳು ಒಂದು ನಮೂನೆ ಅಲರಾಂ ಇದ್ದಂತೆ. ಬೇಸಗೆ ಎಂದರೆ ಎಲ್ಲ ಕಡೆ ನೀರಿಗೆ ತೊಂದರೆಯಿರುವಂತೆ ಬೇಲೂರಿನಲ್ಲಿಯೂ ಇತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ಮೂರನೆಯ ಕಂತು ನಿಮ್ಮ ಓದಿಗೆ

ನಮ್ಮ ಶಾಲಾದಿನಗಳಿಗೂ ಯುಗಾದಿಗೂ ವಿಶೇಷ ನಂಟು. ವಾರ್ಷಿಕ ಪರೀಕ್ಷೆ ನಡುವೆ ಯುಗಾದಿ ಹಬ್ಬ ಬರುತ್ತಿತ್ತು ಇಲ್ಲವೆ ಫಲಿತಾಂಶ ಬರುವುದಕ್ಕೂ ಮೊದಲು ಯುಗಾದಿ ಹಬ್ಬ ಬರುತ್ತಿತ್ತು. ಜೊತೆಗೆ ರಂಜಾನ್ ಹಬ್ಬದ ಸಂಭ್ರಮವೂ ಗೆಳತಿಯರೆಲ್ಲರೂ ಉಪವಾಸ ಜಾಗರಣೆ, ಖರೀದಿ ಬಗ್ಗೆ ಮಾತುಗಳನ್ನಾಡುತ್ತಿದ್ದರು. ನಾವು ಮೂಲ ಕೊಡಗಿನವರಲ್ಲವಾದ್ದರಿಂದ ನಮ್ಮ ಮನೆಯಲ್ಲಿ ಯುಗಾದಿ ಆಚರಣೆಗೆ ದೇವಕಿ ಆಂಟಿ ಮತ್ತು ಕವಿತಾ ಆಂಟಿ ಕುಟುಂಬದವರ ಪಾಲ್ಗೊಳ್ಳುವಿಕೆ ಇರುತ್ತಿತ್ತು. ಅದರಲ್ಲೂ ನಮ್ಮ ಮನೆಯ ಬೇಳೆ ಹೋಳಿಗೆಯ ರುಚಿ ನೆರೆಹೊರೆಯವರನ್ನು ಆಕರ್ಷಿಸಿದ್ದಿದೆ. ಯುಗಾದಿ ಕಳೆಯಿತು ಎಂದರೆ ನಮಗೆ ರಿಸಲ್ಟ್ ಬರುತ್ತದೆ ಎನ್ನುವ ಭಯ. ಪರೀಕ್ಷೆ ಬರೆದಾಗ ನಾವು ನಿರೀಕ್ಷಿಸುವ ಅಂಕಗಳು ಭಾರೀ ಗಾತ್ರದವಾಗಿರುತ್ತಿದ್ದವು. ಆದರೆ ರಿಸಲ್ಟ್ ಹಿಂದಿನ ದಿನ “ಸದ್ಯ ಪಾಸಾದರೆ ಸಾಕು” ಅನ್ನುವಲ್ಲಿಗೆ ಬಂದಿರುತ್ತಿದ್ದೆವು. ರಿಸಲ್ಟ್‌ಗೆ ಈಗಿನಂತೆ ಪೇರೆಂಟ್ಸ್ ಕಡ್ಡಾಯ ಎನ್ನುವಂತಿರಲಿಲ್ಲ. ಶಾಲೆಯ ಆಫೀಸ್ ರೂಮಿನ ಕಿಟಕಿಯ ಒಳಭಾಗದಲ್ಲಿ ರಿಸಲ್ಟ್ ಶೀಟ್ ಅಂಟಿಸಿರುತ್ತಿದ್ದರು. ಫೇಲಾದವರ ಹೆಸರು ಮಾತ್ರ ಇರುತ್ತಿತ್ತು. ನೋಡಿದ ಕೂಡಲೆ “ನಪಾಸ್ ನಪಾಸ್” ಅಷ್ಟೆ ಎಲ್ಲರ ಬಾಯಲ್ಲಿ ಕೇಳುತ್ತಿದ್ದ ಶಬ್ದ. ಆನಂತರ ನಾನು ಪಾಸ್ ಎನ್ನುತ್ತ ಸ್ವೀಟ್ ಹಂಚುವುದು.

ರಿಸಲ್ಟ್ ಮುಗಿದ ನಂತರ ಒಂದು ದಿನವೂ ಮಡಿಕೇರಿಯಲ್ಲಿ ಇರುತ್ತಿರಲಿಲ್ಲ. ಅಷ್ಟರಲ್ಲಿ ಬೇಲೂರಿನ ರಥೋತ್ಸವದ ಸಂದರ್ಭ ಸಂಭ್ರಮ ಎರಡೂ ಆಗಿರುತ್ತಿದ್ದ ಕಾರಣ ಬೇಲೂರಿಗೆ ಹೋಗುತ್ತಿದ್ದೆವು. ಹೋದ ನಂತರ ನಾವು ಯಾರ ಅಣತಿಯನ್ನೂ ಒಪ್ಪುತ್ತಿರಲಿಲ್ಲ. ಪೇರೋಲ್‌ನಿಂದ ಆಚೆ ಬಂದ ಖೈದಿಗಳಂತೆ ಆಡುತ್ತಿದ್ದೆವು. ಬೇಲೂರು ದೇವಸ್ಥಾನದಲ್ಲಿ ಘಂಟೆ ಬಾರಿಸಿದರೆ ನಮ್ಮಜ್ಜಿ ಮನೆಗೆ ಕೇಳಿಸುತ್ತಿತ್ತು. ಮಹಾಮಂಗಳಾರತಿ ಘಂಟೆ, ನೈವೇದ್ಯದ ಘಂಟೆಗಳು ಒಂದು ನಮೂನೆ ಅಲರಾಂ ಇದ್ದಂತೆ. ಬೇಸಗೆ ಎಂದರೆ ಎಲ್ಲ ಕಡೆ ನೀರಿಗೆ ತೊಂದರೆಯಿರುವಂತೆ ಬೇಲೂರಿನಲ್ಲಿಯೂ ಇತ್ತು. ಕುಡಿಯುವ ನೀರು ತರಲು ನಮ್ಮತ್ತೆ ವಿಜಿಯಮ್ಮ ದೇವಸ್ಥಾನದ ಬಾವಿಗೆ ಕರೆದುಕೊಂಡು ಹೋಗುತ್ತಿದ್ದರು. ಬಾವಿಯಲ್ಲಿ ನೀರು ಸೇದುವ ಕಾಯಕ ಅವರದ್ದೆ. ನಮಗೆ ನೀರು ತರ ಹೋಗುವುದು ಅನ್ನುವುದಕ್ಕಿಂತ ಅಲ್ಲಿ ಫಾರಿನರ್ಸ್ ಬರ್ತಾರೆ ಅವರನ್ನ ನೋಡಬೇಕು ಎನ್ನುವುದು ನಮ್ಮ ಆಸೆ. ನಮ್ಮ ಗುಂಪಿನ ಕೆಲ ಸದಸ್ಯರು ಅವರು ಬಿಸ್ಕೆಟ್, ಡ್ರೈಫ್ರೂಟ್ಸ್ ಕೊಡುವರು ಎನ್ನುವ ಕಾರಣಕ್ಕೆ ಬೇಕಂತಲೆ ಮಾತನಾಡಿಸುತ್ತಿದ್ದರು.ನಾನೇನು ಕಮ್ಮಿ ಅಲ್ಲ; ನಾವೆ ಮಾತನಾಡಿಸದಿದ್ದರೂ ಅವರೆ ಮಾತನಾಡಿಸಬೇಕು ಎಂದು ಕಾಯುತ್ತಿದ್ದೆವು. ಕಾರಣ ನಮ್ಮ ಗುಂಪಿನ ಅನೇಕರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ನನಗೇನು ಬಹಳ ಬರುತ್ತಿರಲಿಲ್ಲವಾದರೂ ಮ್ಯಾನೇಜೆಬಲ್ ಅನ್ನುವ ಹಾಗೆ ಅವರು ಮಾತನಾಡಿಸಿದರೆ ಹರಕು ಇಂಗ್ಲಿಷಲ್ಲಿ ಮಾತನಾಡುತ್ತಿದ್ದೆ. ನಮ್ಮ ಜೊತೆಗಾರರು ಅವರ ಹೆಸರು ಕೇಳು… ನಮ್ಮನೆಗೆ ಬರ್ತಾರ ಕೇಳು, ವಾಚ್ ಚೆನ್ನಾಗಿದೆ ಅನ್ನು, ಕ್ಯಾಮೆರಾ ಚೆನ್ನಾಗಿದೆ ಅನ್ನು ಎನ್ನುವರು. ನಾನು ಮಾತನಾಡುತ್ತಿದ್ದರೆ ಬಿಟ್ಟ ಬಾಯಿ ಬಿಟ್ಟ ಹಾಗೆಬಿಡುಗಣ್ಣವರ ಹಾಗೆ ನೋಡುತ್ತಿದ್ದರು ವಿಚಿತ್ರವಾಗಿ….. ಪ್ರವಾಸಿಗರು ನಮ್ಮನ್ನೆಲ್ಲ ಸಾಲಾಗಿ ನಿಲ್ಲಿಸಿ ಫೋಟೊ ತೆಗೆದುಕೊಂಡು ಬಾಯ್ ಹೇಳುತ್ತಿದ್ದರು. ಹಾಗೆ ದೇವಸ್ಥಾನದ ಆನೆಬಾಗಿಲು ಮೂಲಕ ಕಲ್ಚೌಡಿ ಧಾಟಿ ಮನೆಗೆ ಬರುವುದಕ್ಕೂ ಮುಂಚೆ ಅಜ್ಜಿ ಮನೆಯಲ್ಲಿದ್ದವರಿಗೆಲ್ಲಾ ನಾನು ಇಂಗ್ಲಿಷಿನಲ್ಲಿ ಮಾತನಾಡಿದ ಸುದ್ದಿ ಹೋಗಿರುತ್ತಿತ್ತು ಹೌದ! ಎನ್ನುವ ಹಾಗೆ ಕೆಲವರು ಕೇಳಿದರೆ ಏನ್ ಮಹಾ ಎನ್ನುವಂತೆ ಕೆಲವರು ಮೂತಿ ತಿರುಗಿಸುತ್ತಿದ್ದರು. “ಸೋ ವಾಟ್” ಎಂದು ಈಗನ್ನಿಸುತ್ತದೆ ಆದರೆ ಆಗ ಬೇಗ ಕಣ್ಣಂಚಿನಲ್ಲಿ ನೀರು ಧುಮುಕಿಬಿಡುತ್ತಿತ್ತು. ಚಿಕ್ಕ ವಯಸ್ಸಾದರೂ ಇದ್ದ ಇಗೊಗೇನೂ ಕಡಿಮೆಯಿರಲಿಲ್ಲ………

ದೇವಸ್ಥಾನದ ಹಿಂದೆ ಈಗ ಭಗ್ನಶಿಲ್ಪಗಳನ್ನು ಇರಿಸಿರುವಲ್ಲಿಯೂ ಒಂದು ಟ್ಯಾಪ್ ಇತ್ತು. ಕಾಕಡ, ಕನಕಾಂಬರ ಹೂವಿನ ಗಿಡಗಳು ತುಂಬಾ ಎತ್ತರದ ವಯಸ್ಸಾದ ತೆಂಗಿನ ಮರಗಳೆರಡು ಇದ್ದವು. ಅಲ್ಲಿ ಹಾಗೆ ಮೆಟ್ಟಿಲು ಕೂಡ ಅದರ ಮೇಲೆ ಹತ್ತಿ ಇಡೀ ಬೇಲೂರು ಪಟ್ಟಣವನ್ನು ವೀಕ್ಷಣೆ ಮಾಡುತ್ತಿದ್ದೆವು. ಈಗ ಬೇಲೂರಿನಲ್ಲಿ ನಾಟಕಗಳು ಆದರೆ ತೇರಿನ ಮನೆ ಹಿಂದೆ ಹಾಕುತ್ತಾರೆ. ಹಿಂದೆಲ್ಲಾ ಕಲ್ಚೌಡಿಯಲ್ಲಿಯೇ ನಡೆಯುತ್ತಿತ್ತು. ಉತ್ಸವಗಳು ಈಗಿನಂತೆಯೇ ನಡೆಯುತ್ತಿದ್ದವು. ಮತ್ತೆ ರಥೋತ್ಸವ ಸಂದರ್ಭದಲ್ಲಿಯೇ ಮಳೆಯೂ ಬರುತ್ತಿತ್ತು. ಧೀಡೀರ್ ಮಳೆ ಆಲಿಕಲ್ಲು ಮಳೆ ಬರುತ್ತಿದ್ದರಿಂದ ಮಳೆಯಲ್ಲಿ ನಿಂತು ಆಲಿಕಲ್ಲು ಹೆಕ್ಕಿ ನಮ್ಮ ಗುಂಪಿನವರ ಮೇಲೆ ಹಾಕಿ ಖುಷಿ ಪಡುತ್ತಿದ್ದೆವು.

ಶ್ರೀ ಚನ್ನಕೇಶವನ ದೇವಾಲಯದ ಪ್ರವೇಶದ್ವಾರದ ಎಡಕ್ಕೆ ಅಂದರೆ ಆನೆಬಾಗಿಲಿನ ಪಕ್ಕಕ್ಕೆ ಇರುವ ಮೂಲೆಯನ್ನು ಭಸ್ಮಾಸುರ ಮೂಲೆ ಎಂದು ಕರೆಯುವುದಿದೆ. ರಥೋತ್ಸವದ ಸಂದರ್ಭದಲ್ಲಿ ಇಂದಿಗೂ ಗಳಿಗೆತೇರು, ಮಡಿತೇರು ಎಂದು ಕರೆಯಲ್ಪಡುವ ರಥವನ್ನು ಭಸ್ಮಾಸುರ ಮೂಲೆಗೆ ತಂದು ನಿಲ್ಲಿಸಲಾಗುತ್ತದೆ. ಒಂದು ಇರುಳು, ರಥ ಅಲ್ಲಿದ್ದ ಬಳಿಕ ಮರುದಿನ ನಾಡರಥ ಅಥವಾ ದೊಡ್ಡರಥ ಎಳೆಯಲ್ಪಡುತ್ತದೆ. ಈ ಚನ್ನಕೇಶವನ ಅಲಂಕಾರದ ವಿಶೇಷತೆ ಎಂದರೆ ಮುಖಭಾಗ ಹೆಣ್ಣಿನ ಅಲಂಕಾರ ಶರೀರ ಭಾಗ ಗಂಡಿನ ಅಲಂಕಾರ. ಸುರಸುಂದರ ವಿಷ್ಣು ಅನ್ನುವ ಕಾರಣಕ್ಕೆ ಚನ್ನಕೇಶವ ಎಂಬ ಹೆಸರು ಬಂದಿರುವುದು. ಚನ್ನಕೇಶವನ ಅಲಂಕಾರವೆ ಅನನ್ಯ ……

ಚನ್ನಕೇಶವ ದೇವಾಲಯ ಪ್ರಸಾದ ನಿಲಯ ಈಗಿರುವೆಡೆ ಜಾತ್ರೆ ಕಟ್ಟುತ್ತಿತ್ತು. ನಮಗೋ ನಿಜವಾದ ಕುದುರೆಯ ಮೇಲೆ ಕುಳಿತ ಭಾವ ಇನ್ನು ನಿಲ್ಲಿಸುವನು ನಿಲ್ಲಿಸುವನು ಎನ್ನುವ ಧಾವಂತದಲ್ಲಿ ಆ ಆಟದ ಮಜ ತೆಗೆದುಕೊಳ್ಳುತ್ತಿರಲಿಲ್ಲ. ಅವಕಾಶ ಸಿಕ್ಕಾಗ ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುವುದು ಈಗ ತಿಳಿದಿದೆ ಆದರೆ ಪ್ರಯೋಜನವಿಲ್ಲ.

ಕೆಲವೊಮ್ಮೆ ರಿಸಲ್ಟಿಗೂ ಪೂರ್ವದಲ್ಲಿ ಜಾತ್ರೆ ಬಂದರೆ ಪಾಸ್ ಆಗುತ್ತೇವೆಯೋ ಫೇಲ್ ಆಗುತ್ತೇವೆಯೋ ಎನ್ನುವ ಪರಿಪರಿ ಪರೀಕ್ಷೆಗಳು ದೇವಾಲಯದ ಆವರಣದಲ್ಲಿ ನಡೆಯುತ್ತಿದ್ದವು. (ಗುರುತ್ವಾಕರ್ಷಕ ಕಂಬದ ಹತ್ತಿರ ಕರ್ಚಿಫ್ ಹಾಕುವುದು ಮತ್ತು ದೇವಾಲಯ ಮೂಲೆಯ ಬಲಿಕಲ್ಲುಗಳ ಮೇಲೆ ಎರಡು ಹೆಬ್ಬೆರಳುಗಳನ್ನು ಅಭಿಮುಖವಾಗಿ ಇರಿಸುವುದು… ಅವೆರಡು ಕೂಡಿದರೆ ಶುಭ ಎನ್ನುವ ಲೆಕ್ಕಾಚಾರ) ಇಂದಿಗೆ ಪ್ರವಾಸಿಗರು ಬಂದು ಸಾಲಾಗಿ ಶಿಲ್ಪಗಳನ್ನೂ ಈಗ ಕುತೂಹಲದಿಂದ ವೀಕ್ಷಿಸುತ್ತಿದ್ದರೆ ನಮಗೆ ಏನೂ ಅನ್ನಿಸುವುದಿಲ್ಲ. ಅಲ್ಲೆಲ್ಲ ಜೂಟಾಟ ಆಡಿದ ಕಿಲಾಡಿ ವೀರರು ನಾವು. ದೇವಸ್ಥಾನವನ್ನು ಪ್ರದಕ್ಷಿಣೆ ಹಾಕುವಾಗ ಸಿಗುವ ಗಣಪತಿ ವಿಗ್ರಹಕ್ಕೆ ಯಾವಾಗಲೂ ಪಾರಿಜಾತ ಹೂಗಳಿಂದ ಪೂಜೆ ಮಾಡಿರುತ್ತಿದ್ದರು ಆ ಹೂಗಳನ್ನು ನೋಡಲು ಬಹಳ ಖುಷಿ ಇತ್ತು. ಹಾಗೆ ಉಗ್ರನರಸಿಂಹ ಕೆತ್ತನೆಯೂ. ದೇವಾಲಯದ ಎದುರಿಗಿರುವ ಆನೆಗಳಂತು ಆಗ ನಮ್ಮನ್ನು ಹೊರುತ್ತಿದ್ದವು ಅವುಗಳ ಮೇಲೆ ಕೂತರೂ ಆನೆಗಳು ಕಾಣುತ್ತಿದ್ದವು. ಈಗ ಆಗದ ಮಾತು. ಊಹಿಸಲೂ ಆಗದ ವಿದ್ಯಾಮಾನ… ಹೋಗಲಿ ಕಾಲ ಬದಲಾಗುತ್ತದೆ ಅಲ್ವ!

ದೇವಾಲಯದ ಆವರಣದ ಕಲ್ಯಾಣಿಗೆ ತೊಂಬತ್ತರ ದಶಕದಲ್ಲಿ ಬೀಗವಿರಲಿಲ್ಲ. ಅಲ್ಲಿ ಮೆಟ್ಟಿಲುಗಳ ಬಳಿ ಹೋಗುವುದೆಲ್ಲಾ ಇತ್ತು. ದೊಡ್ಡವರಾದಂತೆ ಅಂದರೆ ಹೈಸ್ಕೂಲಿಗೆ ಬಂದ ನಂತರ ನಮ್ಮ ಗುಂಪಿನ ಹೆಣ್ಣು ಮಕ್ಕಳು ಗಂಡು ಮಕ್ಕಳು ಬೇರೆ ಬೇರೆ ಗುಂಪುಗಳಲ್ಲಿ ವಿಹರಿಸುತ್ತಿದ್ದೆವು. ಆಗ ನಮ್ಮ ಮಾತುಕತೆ ಅಮ್ಮನವರ ದೇವಾಲಯದ ಪ್ರಾಂಗಣಕ್ಕೆ ಶಿಫ್ಟ್ ಆಗಿತ್ತು. ಮನೆಯಲ್ಲಿ ಅಡುಗೆ ಆದ ನಂತರ ಯಾರಾದರು ಬಂದು ಕರೆಯುತ್ತಿದ್ದರು ಆಗ ಹೋಗುತ್ತಿದ್ದೆವು. ಇನ್ನು ದೇವಸ್ಥಾನದ ಬಾವಿ ನೀರಿಗೆ ಹೋಗುವುದು ಸಾಮಾನ್ಯವಾಗಿತ್ತಲ್ಲ. ಅಲ್ಲಿ ಸಂಜೆ ಉತ್ಸವವಾಗುವ ಹನುಮಂತ, ಗರುಡರನ್ನು ಇಟ್ಟಿರುತ್ತಿದ್ದರು. ಮುಖ ಹಾಗು ಕೈಗಳಿಗೆ ಬಿಳಿ ಟವೆಲ್ ಮುಚ್ಚಿರುತ್ತಿದ್ದರು. ಬಿದಿರಿನ ಬುಟ್ಟಿ ತುಂಬಾ ಹುಣಸೆಹಣ್ಣು ಇಟ್ಟಿರುತ್ತಿದ್ದರು. ಅದನ್ನು ನೆನೆಸಿಕೊಂಡರೆ ಈಗ ಎಷ್ಟು ಚಂದ ಇತ್ತಲ್ಲ ಅನ್ನಿಸುತ್ತದೆ. ಸಂಜೆ ಉತ್ಸವದ ಹೊತ್ತಿಗೆ ಬಾವಿಯಲ್ಲಿ ಒಬ್ಬರು ನೀರು ಎಳೆದುಕೊಟ್ಟರೆ ಒಂದಿಬ್ಬರು ಹುಣಸೆಹಣ್ಣು ಇಟ್ಟಿಗೆ ಪುಡಿ ರಂಗೋಲಿ ಪುಡಿ ಹಾಕಿ ತೊಳೆದು ಫಳ ಫಳ ಎನ್ನಿಸುತ್ತಿದ್ದರು. ಈಗಿನಂತೆ ಗಾಡಿಗಳು ಇರಲಿಲ್ಲ, ಅಡ್ಡೆಯನ್ನು ಹೊರುತ್ತಿದ್ದರು. ಅದರಲ್ಲೂ ಗರುಡೋತ್ಸವ ಬಹಳ ಫೇಮಸ್. ವೈಕುಂಠ ಬೀದಿಯಲ್ಲಿ ಉತ್ಸವ ಬರುತ್ತಿದ್ದರೆ ಡಿವೈನ್ ಫೀಲ್ ಬರುತ್ತಿತ್ತು. ಇತ್ತೀಚಿಗೆ ಬರೆ ಫೋಟೊಗಳನ್ನು ನೋಡುವುದಾಗಿದೆ.

ಮತ್ತೆ ಜಾತ್ರೆ ಕಾಲ ಅಂದರೆ ಇಂದಿಗೂ ನೆನಪಿಗೆ ಬರುವುದು ಗೋಲಿಸೋಡ, ಕಲರ್ ಕಲರ್ ಗ್ಲಾಸಲ್ಲಿ ಜ್ಯೂಸ್ ಇಟ್ಟಿರುತ್ತಿದ್ದರು. ಆದರೆ ಅದನ್ನು ಎಂದಿಗೂ ಸೇವಿಸಿಲ್ಲ. ಮಾವಿನಕಾಯಿ ಸಿಹಿಜೋಳ, ಚರ್ಮುರಿ, ನಿಪ್ಪಟ್ಟು ಆಗಸ್ಟಾದರೂ ಬಿಡಿಸಿ ಮಾರುವ ಹಲಸಿನಹಣ್ಣಿನ ತೊಳೆಗಳು. ಯಾವಾಗಲೂ ಮಾರುವ ಕಲ್ಲಿನ ದೀಪಗಳು, ದೇವಸ್ಥಾನದ ಮೆಟ್ಟಿಲುಗಳ ಮೇಲೆ ಮಾರುವ ಅ್ಯಂಟಿಕ್ ವಿಗ್ರಹಗಳು ಬೇಲೂರಿನ ಐಡೆಂಟಿಟಿ.

ಉತ್ಸವಗಳು ಹೊರಡುವ ಸಮಯಕ್ಕೆ ಹಿರಿಯರ ಜೊತೆಗೆ ಮತ್ತೆ ದೇವಾಲಯದ ಆವರಣಕ್ಕೆ ಪ್ರವೇಶ. ಕಡ್ಲೆ ಪುರಿ ಬಾಳೆ ಹಣ್ಣು ಸೇವನೆ… ಅದರ ಸ್ಪಾನ್ಸರ್ ಯಾರಾದರು ಆಗಿರುತ್ತಿದ್ದರು. ಹಗಲಿನ ಬಿಸಿಲಿನ ಝಳಕ್ಕೆ ಕಾದಿರುತ್ತಿದ್ದ ಕಲ್ಲುಗಳು ಸಂಜೆ ಸಮಯಕ್ಕೆ ಬೆಚ್ಚಗೆ ಕುಳಿತುಕೊಳ್ಳಲು ಹಾಯ್ ಎನ್ನಿಸುವಂತೆ ಇರುತ್ತಿದ್ದವು. ಅಲ್ಲಿ ಮತ್ತೆ ಹಿಡಿಯಾಟ. ಆ ಜೋಶ್ ಈಗಿಲ್ಲ…… ನನ್ನ ತಮ್ಮ ಹರೀಶ ಚಿಕ್ಕವನಿರುವಾಗ ಉತ್ಸವದ ಜೊತೆ ಹೋಗಿ ಮನೆಗೆ ಬರಲು ದಾರಿ ತಿಳಿಯದೆ ಇನ್ಯಾರದೋ ಮನೆಯಲ್ಲಿ ಹಾಯಾಗಿ ತಿಂಡಿ ತಟ್ಟೆ ಎದಿರು ಕುಳಿತಿದ್ದನಂತೆ. ಆಟೋದಲ್ಲಿ ಅನೌನ್ಸ್ ಮಾಡಿ ಅವನನ್ನು ಹುಡುಕಿಸಿದ ಆ ಧಾವಂತದ ಸಮಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಉತ್ಸವಗಳು ಮುಗಿಯುವ ಹೊತ್ತಿಗೆ ನಮಗೆಲ್ಲ ನಿದ್ರೆ; ನಮ್ಮನ್ನು ಮಲಗಿಸಿ ಹಿರಿಯರು ಉತ್ಸವಗಳನ್ನು ನೋಡಲು ಹೋಗುತ್ತಿದ್ದರು. ಅಲ್ಲಿನ ಸಂಸ್ಕೃತ ಪಾಠಶಾಲೆಯಲ್ಲಿ ಮಕ್ಕಳು ಕಲಿಯುತ್ತಿದ್ದರು. ನಮ್ಮನ್ನೂ ಸೇರಿಸಿಕೊಳ್ಳಬಾರದೆ ಎನ್ನುವ ಆಸೆಯೂ ನಮ್ಮದು. ಈಗ ಬೇಲೂರಿನ ನಿಲ್ದಾಣ ಇಳಿದರೆ ಆಟೋ ಹುಡುಕುತ್ತೇವೆ ಚಿಕ್ಕವರಿದ್ದಾಗ ಆಟೋ ಹತ್ತುವ ಸೀನ್ ಇರಲಿಲ್ಲ. ನಮಗಿಂತ ನಮ್ಮಮ್ಮ ಆಟೋ ಹತ್ತುತ್ತಿರಲಿಲ್ಲ. ಎಷ್ಟೇ ಆದರೂ ಅದು ಅವರ ತವರು ಅಲ್ವೆ! ನಿಧಾನವಾಗಿ ಎಲ್ಲಾ ಮನೆಗಳನ್ನು ನೋಡಿಕೊಂಡು ಬೋರ್ಡ್ ಓದಿಕೊಂಡು ಕರೆದುಕೊಂಡು ಹೋಗುತ್ತಿದ್ದರು. ಸರಕಾರಿ ಆಸ್ಪತ್ರೆ ಬಳಿ ಇರುವ ವೇಲಾಪುರಿಗೆ ಸ್ವಾಗತ ಅನ್ನುವ ಕಮಾನು ನಮ್ಮ ಖುಷಿಯನ್ನು ಹಿಗ್ಗಿಸುತ್ತಿತ್ತು. ಲಗ್ಗೇಜ್ ಹಿಡಿದು ವೈಕುಂಠ ಬೀದಿ ಮುಖೇನ ಮನೆ ದಾರಿ ಹಿಡಿಯುತ್ತಿದ್ದೆವು. ಅಲ್ಲಿ ಜಗುಲಿಯ ಮೇಲೆ ಕುಳಿತವರು “ನೀವು ಯಾರ ಮಕ್ಕಳು? ಏನು ಓದುತ್ತೀರಿ?” ಎಂದರೆ ಬಾಯ್ ಬಿಡದೆ ಬೈಗುಳ ತಿಂದ ಉದಾಹರಣೆ ಎಷ್ಟೋ. ನಾವು ಚಿಕ್ಕವರಿರುವಾಗ ಮೂಡಿಗೆರೆ ಚಿಕ್ಕಮಗಳೂರು ಸೈಡಿಗೆ ಬಸ್‌ಗಳು ದೇವಸ್ಥಾನದ ಮುಂದೆಯೇ ಬಂದು ನಿಲ್ಲುತ್ತಿದ್ದವು.

ಜಾತ್ರೆ ಮುಗಿಸಿ ಊರಿಗೆ ಹೊರಡುವುದೆಂದರೆ ಯಮಯಾತನೆ. “ಹೋಗಬೇಕಲ್ಲ!” ಎಂದು ನಾವು ಮಡಿಕೇರಿಗೆ ಬರಬೇಕೆಂದರೆ ಬಸ್ ಸ್ಟ್ಯಾಂಡಿಗೆ ಬರಬೇಕಿತ್ತು. ಬೆಳಗ್ಗೆ ಆರು ಗಂಟೆಗೆ ಅಲ್ಲಿ ಚಿಕ್ಕಮಂಗಳೂರು ಮಡಿಕೇರಿ ಬಸ್ಸಿನಲ್ಲಿ ಕುಳಿತರ ಮಡಿಕೇರಿಗೆ ಹನ್ನೆರಡು ಗಂಡೆಗೆ ತಲುಪುತ್ತಿದ್ದೆವು. ಹೊಟ್ಟೆ ಹಸಿವಿಗೆ ಶೆಟ್ರ ಅಂಗಡಿ ಬನ್, ಕೊಬ್ಬರಿ ಮಿಠಾಯಿ ಖಾಯಂ ಆಗಿ ಬ್ಯಾಗಲ್ಲಿ ಇರುತ್ತಿದ್ದವು. ಬೇಲೂರು ಅಂದರೆ ಗೆಣಸು ಆಲೂಗೆಡ್ಡೆ ಇತ್ಯಾದಿ ತರಕಾರಿ… ನಮ್ಮಜ್ಜಿ ಆಗಲ್ಲ ಎಂದರೂ ತರುತ್ತಿದ್ದರು. ಅಲ್ಲಿ ಪರಿಚಯವರು ಯಾರೆ ಸಿಕ್ಕರೂ ಮಡಿಕೇರಿ ಅಂದರೆ ಗುಲಾಬಿ ಹೂಗಳು ಹೆಚ್ಚು ಅಲ್ಲವ ಅನ್ನೋರು. ಅಂದ ಹಾಗೆ ನಾನು ಬಾಲ್ಯದಲ್ಲಿ ಗಮನಿಸಿದಂತೆ ಬೇಲೂರಿನಲ್ಲಿ ಬಗೆ ಬಗೆಯ ಕ್ರೋಟನ್ ಗಿಡಗಳೆ ಹೆಚ್ಚು. ನಾವು ಒಂಬತ್ತನೆ ತರಗತಿಯಲ್ಲಿರುವಾಗೊಮ್ಮೆ ಮಳೆಗಾಲ ರಜೆಗೆ ಬೇಲೂರಿಗೆ ಹೋಗಿದ್ದಿದೆ. ಹೆಚ್ಚು ಜನರಿಲ್ಲದ ಕಾರಣ ದೇವಾಲಯವನ್ನು ಸೂಕ್ಷ್ಮವಾಗಿ ವೀಕ್ಷಿಸಿದೆ. ಆದರೆ ವಾಸ್ತುಶಿಲ್ಪದ ಹಿನ್ನೆಲೆ ತಿಳಿದಿರದ ಕಾರಣ ಸ್ಪಷ್ಟ ಚಿತ್ರಣ ಸಿಗಲಿಲ್ಲ. ಮುಂದೆ ಇತಿಹಾಸದ ವಿದ್ಯಾರ್ಥಿ ಆದಕಾರಣ ವಾಸ್ತುಶಿಲ್ಪದ ದೃಷ್ಟಿಯಿಂದ ದೇವಾಲುವನ್ನು ವೀಕ್ಷಿಸಿದೆ. ಮುಂದಿನ ಬರಹದಲ್ಲಿ ದೇವಾಲಯದ ವಾಸ್ತುಶಿಲ್ಪದ ಕುರಿತು ನೋಡೋಣ.

About The Author

ಸುಮಾವೀಣಾ

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, 'ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.

1 Comment

  1. ANURADHA ARUN

    ನಪಾಸ್ ಅಂದರೆ FAIL ಎಂದು ಅರ್ಥ.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ