ಸಂತಿಯೇನೂ ತಾನು ಮದುವೆಯಾಗಲ್ಲ ಎಂದವನಲ್ಲ, ಆದರೆ ಕೇರಿಯೊಳಗೆ ಇನ್ನೇನು ನಾಳೆಯೋ ನಾಡಿದ್ದೋ ಬಿದ್ದು ಹೋಗುವುದೆಂಬಷ್ಟು ಹಳೆಯ ಮನೆಯೊಂದನ್ನು ಬಿಟ್ಟು ಯಾವುದೇ ಆಸ್ತಿಪಾಸ್ತಿ ಇಲ್ಲದ, ನೋಡಲು ತೊಳೆದ ಕೆಂಡದಂತೆ ಮುಟ್ಟಿದರೆ ಕೈಗೆ ಹತ್ತುವಷ್ಟು ಕಪ್ಪುಬಣ್ಣಕ್ಕಿದ್ದ. ಸಂತಿಗೆ ಸರಿಯಾದ ಕೆಲಸವೂ ಇರಲಿಲ್ಲವಲ್ಲಾ.. ಹೀಗೆ ಎಲ್ಲದರಲ್ಲೂ ನಪಾಸಾದ ಸಂತಿಯ ಕರ್ಮಕ್ಕೆ ಕಲಶವಿಟ್ಟಂತೆ ನಕ್ಕರೆ ಮುಂದಿದ್ದವರಿಗೆ ಚುಚ್ಚುವಷ್ಟು ಉಬ್ಬುಹಲ್ಲು ಬೇರೆ! ಅಪ್ಪ-ಅಮ್ಮ ಇಲ್ಲದ ಕೆಟ್ಟ ನಕ್ಷತ್ರದಲ್ಲಿ ಹುಟ್ಟಿ ಅಜ್ಜಿಯ ಆರೈಕೆಯಲ್ಲಿ ಬೆಳೆದ ಸಂತಿಗೆ ಕುಡಿಯದೆ ಮುಚ್ಚಟೆಯಿಂದ ಬದುಕು ಸಾಗಿಸಬಹುದಾದ ಯಾವುದೇ ಕಾರಣಗಳಿರಲಿಲ್ಲ.
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

 

ಬ್ರಾಹ್ಮಣರಲ್ಲಿ ಮದುವೆ ಲೇಟು ಎಂಬ ಮಾತು ಸರ್ವೇಸಾಮಾನ್ಯವಾಗಿ ಕೇಳಿಬರುತ್ತದೆ. ಮೊದಲೆಲ್ಲಾ ಜನಾಂಗಗಳ ಭೇದವಿಲ್ಲದೆ ಮೈನೆರೆಯುವುದರ ಹಿಂದು-ಮುಂದು ಆಗುತ್ತಿದ್ದ ಮದುವೆಗಳು, ಕಾಲಾಂತರದಲ್ಲಿ ಅವರವರ ಭಾವಕ್ಕೋ ಭಕುತಿಗೋ ಬಿಟ್ಟುಕೊಂಡು ಮೂವತ್ತು ದಾಟಿದರೂ ಆಗದೇ ಹೋಗದೇ ಉಳಿದುಬಿಟ್ಟವು. ಹೆಣ್ಣು-ಗಂಡು ಭೇದವಿಲ್ಲದ ಮಕ್ಕಳು, ಆರಾಮಾದ ಬದುಕು ಮಾಡುತ್ತಾ ಹುಟ್ಟಿರುವುದೇ ಬದುಕನ್ನು ಖುಷಿಯಲ್ಲಿ ಕಳೆಯಲಿಕ್ಕೆ ಎಂಬಂತೆ ಹಗಲು ರಾತ್ರಿಗಳ ಪರಿವೆಯಿಲ್ಲದೆ ಹಾಯಾಗಿದ್ದವು. ಇವು ಹೀಗೆ ಉಂಡಾಡಿಗುಂಡರ ಹಾಗೆ ಓಡಾಡುತ್ತಾ ಊರೂರು ತಿರುಗುತ್ತಾ ಮನಸ್ಸಿಗೆ ಬಂದದ್ದು ಮಾಡುತ್ತಾ ಎಲ್ಲರ ಕಣ್ಣಿಗೆ ಮೆಣಸಿನ ಕಾಳುಗಳಾಗಿ ನಡೆಯುತ್ತಿರುವುದು ಅವರ ಮಾತೋಶ್ರೀ ಪಿತೃಶ್ರೀಗಳಿಗೇ ಸಂಪೂರ್ಣ ಒಪ್ಪಿಗೆ ಇರಲಿಲ್ಲ. ಆದರೂ ವಿಷಯ ಅವರ ಕೈ ಮೀರಿದ್ದರಿಂದ ಅವರಲ್ಲಿ ಇದ್ಯಾವುಕ್ಕೂ ಇಲಾಜೇ ಇರಲಿಲ್ಲ. ಅವರು ಹೇಳಿದರೂ ಕೇಳುವವರ್ಯಾರು? ಹಾಗಾಗಿ ಅವರು ಮಾಡಿದ್ದು ಒಂದೇ ಕೆಲಸ, ಒಣ ವೇದಾಂತ ಮಾತಾಡುತ್ತಾ… ಬೇಗದಲ್ಲಿ ಮದುವೆಯಾದರೆ ಏನೆಲ್ಲಾ ಅನುಕೂಲಗಳಿವೆ ಎಂಬುದನ್ನು ಎಲ್ಲರೂ ಹೌದೆನ್ನುವ ಧಾಟಿಯಲ್ಲಿ ಹೇಳುತ್ತಾ‌… ತಮ್ಮ ಮಾತನ್ನೇ ಕೇಳದ ತಮ್ಮ ಮಕ್ಕಳನ್ನು ಸಣ್ಣಗೆ ಮರ್ಯಾದೆ ಹೋಗದ ಹಾಗೆ ಹಳಿಯುತ್ತಾ.. ಕೇರಿಯಲ್ಲಿ ಓಡಾಡಿಕೊಂಡಿರುವುದು.

ಇದರ ಮೂಲೋದ್ದೇಶ ಶಾಸ್ತ್ರ ಹೇಳಿ ಬದನೆಕಾಯಿ ತಿಂದ ಪಾಪದ ಫಲವನ್ನು, ಅಂಟಿಕೊಂಡ ದುರ್ನಾಮವನ್ನು ಸ್ವಲ್ಪಮಟ್ಟಿಗಾದರೂ ಕರಗಿಸಿಕೊಳ್ಳುವುದು. ಇಲ್ಲದಿದ್ದಲ್ಲಿ ಇಷ್ಟು ವರ್ಷ ಕಷ್ಟಪಟ್ಟು ಸಂಪಾದಿಸಿದ ಅವರ ಗೌರವ-ಮಾನಾಪಮಾನಗಳ ಗತಿಯೇನು!? ಹಾಗಾಗಿ ಕೇರಿಯವರು “ಅಯ್ಯೋ ಪಾಪ, ರಾಯರಿಗೂ ಅವರ ಶ್ರೀಮತಿಗೂ ಇದೆಲ್ಲಾ ಸಮ್ಮತವಿಲ್ಲ. ಆದರೂ ಓದಿರುವ ಮಕ್ಕಳಲ್ಲವೇ ಇವರ ಮಾತು ಎಲ್ಲಿ ಕೇಳ್ತಾರೆ…?” ಅಂದರೆ ಇವರಿಗೆ ಏನೋ ಸಮಾಧಾನ! ಸದ್ಯ ತಮ್ಮನ್ನು ಬಿಟ್ಟುಬಿಡಲಿ, ಮಕ್ಕಳನ್ನು ಬೇಕಾದರೆ ಆಡಿಕೊಳ್ಳಲಿ, ತಾವು ಬಚಾವಾದರೆ ಸಾಕು ಎಂಬ ಭಾವನೆ!

ಕೇರಿಯ ಇಂತಹ ಬಿಸಿಬಿಸಿ ಸುದ್ದಿಗಳನ್ನೆಲ್ಲಾ ಯಥಾವತ್ತು ಮನೆಗಳ ಒಳಗೂ ಬಿಸಿಬಿಸಿ ಚರ್ಚೆ ನಡೆಸುತ್ತಿದ್ದ ಪರಿಣಾಮ, ನಮಗೂ “ಆ‌ ಅಕ್ಕನ ಸ್ವಭಾವ ಹೇಗೆ?” “ಈ ಅಣ್ಣ ಯಾಕೆ ಹೀಗೆ?” ಎನ್ನುವಂತಹ ರಹಸ್ಯ ಮಾಹಿತಿಗಳು ಸಾಕಷ್ಟು ದೊರೆಯುತ್ತಿದ್ದವು. “ಶ್ರೀಪಾದರಾಯರ ಮಗ ಹರೀಶ ಯಾಕೆ ಇನ್ನೂ ಮದುವೆಯಾಗಿಲ್ಲ ಗೊತ್ತೇನ್ರೀ… ದಿನಾಆಆ ರಾತ್ರಿ ಕುಡಿತಾನಂತೆ! ಬೆಳಗ್ಗೆ ನೋಡ್ರಿ.. ಎಷ್ಟು ಸಂಭಾವಿತರ ಹಾಗೆ ಮಡಿ ಉಟ್ಕೊಂಡು ಮಠಕ್ಕೆ ಬರ್ತಾನೆ! ಮುದ್ರೆ ಬೇರೆ ಕೇಡು ಮುಖಕ್ಕೆ. ಬೆಳಗೆದ್ದು ಕಣ್ಣು ಊದ್ಕೂಂಡಿರೋದು ನೋಡದ್ರೇ ಗೊತ್ತಾಗಲ್ವೇ.. ನನಗೆ ಮೊದಲೇ ಡೌಟು ಬಂದಿತ್ತು. ಇನ್ನು ಇಂಥಾ ಜಗಗುಡುಕನಿಗೆ ಯಾರು ಹೆಣ್ಣು ಕೊಡ್ತಾರೆ ಹೇಳಿ…!” ಹಿಂಗಿದ್ದ ಮಾತುಗಳೆಲ್ಲಾ ಕೇಳುತ್ತಿದ್ದ ನಮಗೆ ಸೋಜಿಗ! ಇವೆಲ್ಲಾ ಹೇಳಿಕೆಗಳು ಸಂಜೆ ಆಫೀಸು ಮುಗಿಸಿ ಬಂದು ನಮ್ಮನ್ನೆಲ್ಲ ಮಹಡಿ ಮೇಲೆ ಕರೆದೊಯ್ದು ಗಾಳಿಪಟ ಹಾರಿಸಲು ಹೇಳಿಕೊಡುತ್ತಿದ್ದ, ಹೋಲಿಕೆಯಲ್ಲಿ ತಮಿಳು ಹೀರೋ ಅನಂತಸ್ವಾಮಿಯನ್ನು ಹೋಲುತ್ತಿದ್ದ ಹರೀಶಣ್ಣನಿಗೆ ಸ್ವಲ್ಪವೂ ಸರಿಹೊಂದುತ್ತಿರಲಿಲ್ಲ. ಅವನು ಎಂದೂ ಕುಡಿದವರ ಹಾಗೆ ಮತ್ತಿನಲ್ಲಿ ಇದ್ದದ್ದೇ ಇಲ್ಲ. ಹಾಗಂತ ನೆಟ್ಟಗೆ ಮನೆಯಲ್ಲಿರದೇ, ಸರಿರಾತ್ರಿಯವರೆಗೂ ಮನೆಗೆ ಬರದೇ ಎಲ್ಲಿಗೆ ಹೋದನೆಂದೂ ಹೇಳದೇ ಸುತ್ತುತ್ತಿದ್ದ ಎಂಬುದು ಮಾತ್ರ ಪರಮಸತ್ಯ.

ಒಮ್ಮೊಮ್ಮೆ ರಾತ್ರಿ ಹನ್ನೆರಡರಲ್ಲೆಲ್ಲಾ ಒಬ್ಬನೇ ಆಚೆ ಬೀದಿಯ ಕಡೆಯಿಂದ ನಡೆಯುತ್ತ ಬರುತ್ತಿದ್ದದನ್ನು ನಾವು ಅಟ್ಟದ ಮೇಲಿನ ಕಿಟಕಿಯಿಂದ ನೋಡುತ್ತಿದ್ದೆವು. ಊರೆಲ್ಲ ಮಲಗಿದ ತಂಪು ಹೊತ್ತಿನಲ್ಲಿ ಓದಿದ್ದು ಚೆನ್ನಾಗಿ ತಲೆಗೆ ಹತ್ತುವುದು ಎಂದು ನಮಗೆ ಮನೆಯಲ್ಲಿ ತಾಕೀತು ಮಾಡುತ್ತಿದ್ದರು. ಅದರ ಫಲವಾಗಿ ಅಟ್ಟದ ಮೇಲೆ ಕೂರುತ್ತಿದ್ದ ನಾವು ಓದುವುದು ಒಂದನ್ನು ಬಿಟ್ಟು ಇಡೀ ಕೇರಿಯ ಆಗುಹೋಗನ್ನೆಲ್ಲಾ ಕೂಲಂಕಷವಾಗಿ ಕಂಡು ಹಿಡಿಯುತ್ತಾ ವಿಚಿತ್ರ ಪ್ರಸಂಗಗಳಿಗೆ ಸಾಕ್ಷಿಯಾಗುತ್ತಿದ್ದೆವು.

ಅಂತಹುದೇ ಒಂದು ರಾತ್ರಿ ಗೀತಕ್ಕನ ಗಂಡ ಪೋಲೀಸು ರಾಮಣ್ಣನೂ, ಕೇಬಲ್ ಆಫೀಸಿನಲ್ಲಿ ಮನೆಯಿಂದ ಮನೆಗೆ ವೈರು ಎಳೆಯುವ ಕೆಲಸ ಮಾಡುತ್ತಿದ್ದ ಸಂತಿ ಯಾನೆ ಸಂತೋಷನೂ ಕುಡಿದು ತೂರಾಡುತ್ತಾ ರಸ್ತೆಯ ಮೇಲೆ ಎದ್ದು-ಬಿದ್ದು ನಡೆದುಬಂದು ಮನೆ ಸೇರಿದ್ದಕ್ಕೆ ನಾವು ಸಾಕ್ಷಿಯಾದೆವು. ಆಗ ಈಗಿನಂತೆ ಮನೆಯ ಮೇಲೆ ಡಿಷ್‌ಗಳಿಲ್ಲದೇ ಮನೆಯಿಂದ ಮನೆಗೆ ಕೇವಲ ಕಪ್ಪು ವಯರುಗಳನ್ನು ಎಳೆದು ಕೇಬಲ್ ಕನೆಕ್ಷನ್ ನೀಡಲಾಗುತ್ತಿತ್ತು. ಈ ವೈರು ಎಳೆಯುವ ಕೆಲಸ, ಹಲವು ನಿರಕ್ಷರಕುಕ್ಷಿಗಳಿಗೆ ಉದ್ಯೋಗ ಒದಗಿಸಿತ್ತು. ಯಾವ ಕೋರ್ಸೂ ಮಾಡುವ ಅಗತ್ಯವಿಲ್ಲದ, ಬರೇ ಮನೆಯಿಂದ ಮನೆಗೆ ಕೋತಿಯ ಹಾಗೆ ಜಿಗಿದುಕೊಂಡು ಹೋಗುವ ಧೈರ್ಯವಿದ್ದರೆ ಸಾಕು, ಮಾಡಬಹುದಾಗಿದ್ದ ಕೆಲಸ ಅದು. ಹಾಗಾಗಿ ಈ ವೈರು ಎಳೆಯುವವರು ಶುದ್ಧ ನಿರುಪಯುಕ್ತ ಪ್ರಾಣಿಗಳೆಂಬ ಭಾವನೆ. ಪಿಯೂಸಿ ಮಾಡಿದ್ದರೂ ನಮ್ಮ ಸಂತಿಯೂ ಅಂತಹ ನಿಷ್ಪ್ರಯೋಜಕ ಪ್ರಾಣಿಗಳಲ್ಲಿ ಒಬ್ಬನಾಗಿ ಕೇರಿಯಲ್ಲಿ ತೀರಾ ಅವಗಣಿತವಾದ ಮಗು. ಈಗ ಕುಡಿತದ ವಿಷಯಕ್ಕೆ ಬರೋಣ.

ಕೇರಿಯವರು ಹೇಳುವಂತೆ ಹರೀಶಣ್ಣನು ಎಂದೂ ಹಾಗೆ ತೂರಾಡಿ ಬಂದು ಮನೆ ಸೇರಿದವನಲ್ಲ. ನಿಧಾನವಾಗಿ ತಾಂಬೂಲ ಜಗಿಯುತ್ತ, ಹಿಂದಿ ಚಿತ್ರಗೀತೆಗಳನ್ನು‌ (ಹೆಚ್ಚಾಗಿ ಮೊಹಮ್ಮದ್ ರಫಿಯವರ) ಗುನುಗುತ್ತಾ ತನ್ನದೇ ಲೋಕದಲ್ಲಿ ಆನಂದತುಂದಿಲನಾಗಿ ಇರುತ್ತಿದ್ದನು. ಆದರೆ ಈ ಊಹಾಪೋಹಗಳನ್ನು ಮೀರಿದ ಸತ್ಯ ಗೊತ್ತಿದ್ದ ನಾವು ನಿಜವಾಗಲೂ ಕುಡಿದು ಬಂದವರು ಯಾರು ಎಂಬ ಬಗ್ಗೆ ಮಾತನಾಡುವಂತೆಯೇ ಇರಲಿಲ್ಲ. ದೊಡ್ಡವರಾದ ಮೇಲೆ ಗೊತ್ತಾದ ಸತ್ಯವೆಂದರೆ ಗೀತಕ್ಕನ ಗಂಡ ಕುಡುಕ ಎಂದು ಕೇರಿಗೂ ಗೊತ್ತಿದ್ದಿರಬಹುದು, ಆದರೆ ಅವನ ಸುದ್ದಿಯನ್ನು ಅಷ್ಟು ಲೀಲಾಜಾಲವಾಗಿ ನಾಲಿಗೆಗಳ ಮೇಲೆ ಕುಣಿಸುವ ಬಗ್ಗೆ ಕೇರಿಯ ಹೆಂಗಸರಿಗೆ ಮಾತ್ರವಲ್ಲ, ಗಂಡಸರಿಗೂ ಭಯವಿತ್ತು. ಪೊಲೀಸು ರಾಮಣ್ಣನ ಬಾಯಲ್ಲಿ ಧಾರಾಕಾರವಾಗಿ ಸಂಸ್ಕೃತ ಪದಗಳು ಉಕ್ಕಿ ಹರಿಯುತ್ತಿದ್ದವು. ಗೀತಕ್ಕ ತಿಂಡಿ ಕೊಡುವುದು ತಡವಾದರೆ ಇಡೀ ಕೇರಿಗೆ ಕೇಳುವಂತೆ, “ಸ್ಟೇಷನ್ನು ನನ್ನ ಕಾಯ್ತಾ ಇರುತ್ತೇನೇ ನಾಲಾಯಕ್ಕು ಮುಂಡೆ? ಹೊರಡುವ ಹೊತ್ತು ಗೊತ್ತಿದ್ದರೂ ಇನ್ನೂ ತಿಂಡಿ ಆಗಿಲ್ಲವೆಂದರೆ ಎಂಥಾ ಸೋಂಬೇರಿ ನನ ಮಗಳು ನೀನು ಭೋ(…)…?” ಎಂದು ವಾಚಾಮಗೋಚರವಾಗಿ ಬಯ್ಯುತ್ತಿದ್ದನು. ಆಟವಾಡಲು ಹೋದ ಮಗ ತಡವಾಗಿ ಬಂದರೆ, “ನಾಚಿಗ್ಗೆಟ್ಟೋಳಿಗೆ ಹುಟ್ಟಿದವನೇ… ಹೊತ್ತು ಮುಳುಗೋದ್ರೊಳಗೆ ಕೈಕಾಲು ತೊಳೆದು ನಮಸ್ಕಾರ ಹೊಡೆದು ಓದೋಕೆ ಕೂರದೇ ಯಾವ ಹಡಬೇಸಿ ಜೊತೆ ತಿರುಗೋಕೆ ಹೋಗಿದ್ದೆ?” ಅಂತ ಮಂಗಳಾರತಿ ಮಾಡಿಯೇ ಒಳಗೆ ಕರೆದುಕೊಳ್ಳುವನು. ಕೇರಿಯ ಗುಡಿಯ ಮುಂದೆ ಶನಿವಾರ ಸಂಜೆಗಳಂದು ಭಜನೆ ಮುಗಿದ ಮೇಲೆ ಯಾರೊಟ್ಟಿಗಾದರೂ ಮಾತನಾಡಲು ನಿಂತನೆಂದರೆ ಜೋರು ಧ್ವನಿಯಲ್ಲಿ “ಆ ಸುವ್ವರ್ ನನ್ಮಗನ ವಿಷಯ ನಂಗೊತ್ತು ಬಿಡಿ. ಒಳ್ಳೆ ಮಾತಲ್ಲಿ ಬಗ್ಗೋನಲ್ಲ ಬೋಳೀಮಗ. ಮರಕ್ಕೆ ಕಟ್ಟಿ ಕುಂಡೆಗೆ ಮೆಣಸಿನ ಖಾರ ತುರುಕಿ ನಾಲ್ಕು ಬಾರಿ‌ಸಬೇಕು ಇಂಥವ್ರಿಗೆ. ಮರ್ಯಾದೆಯಾಗಿ ಬದುಕದೇ ಹೀಗಾಡೋರನ್ನ ಕೈಕಾಲು ತಿರುಚಿ ಬಿಟ್ಟರೂ ತಪ್ಪೇನು ಹೇಳಿ..?” ಎಂದೆಲ್ಲ ಮಾತಾಡುವವನು. ಭಾರೀ ಮೃದುಭಾಷಿಗಳಾದ ಮಠದ ಹಿರೀಕರೂ ‘ಮರ್ಯಾದಸ್ಥರೂ’ ಪೋಲೀಸು ರಾಮಣ್ಣ ಮಾತನಾಡಲು ನಿಂತನೆಂದರೆ ಕಿವಿ ಮುಚ್ಚಿಕೊಂಡು ಓಡುವರು. ಹೀಗಿದ್ದಾಗ ‘ನೀನು ಕುಡಿಯುತ್ತೀಯಾ ರಾಮಣ್ಣ..?’ ಎಂದು ಕೇಳಲು ಯಾರಿಗಾದರೂ ಹೇಗೆ ಧೈರ್ಯ ಬರುತ್ತಿತ್ತು?

ಸಾಲದೆಂಬಂತೆ ಮೂವತ್ತು ಕಳೆದರೂ ಮದುವೆ ಇಲ್ಲದ ಸಂತಿ ಬೇರೆ ಅದು ಹೇಗೋ ಜೊತೆಯಾಗಿಬಿಟ್ಟಿದ್ದ. ಸಂತಿಯೇನೂ ನಾನು ಮದುವೆಯಾಗಲ್ಲ ಎಂದವನಲ್ಲ, ಆದರೆ ಕೇರಿಯೊಳಗೆ ಇನ್ನೇನು ನಾಳೆಯೋ ನಾಡಿದ್ದೋ ಬಿದ್ದು ಹೋಗುವುದೆಂಬಷ್ಟು ಹಳೆಯ ಮನೆಯೊಂದನ್ನು ಬಿಟ್ಟು ಯಾವುದೇ ಆಸ್ತಿಪಾಸ್ತಿ ಇಲ್ಲದ, ನೋಡಲು ತೊಳೆದ ಕೆಂಡದಂತೆ ಮುಟ್ಟಿದರೆ ಕೈಗೆ ಹತ್ತುವಷ್ಟು ಕಪ್ಪುಬಣ್ಣಕ್ಕಿದ್ದ. ಸಂತಿಗೆ ಸರಿಯಾದ ಕೆಲಸವೂ ಇರಲಿಲ್ಲವಲ್ಲಾ.. ಹೀಗೆ ಎಲ್ಲದರಲ್ಲೂ ನಪಾಸಾದ ಸಂತಿಯ ಕರ್ಮಕ್ಕೆ ಕಲಶವಿಟ್ಟಂತೆ ನಕ್ಕರೆ ಮುಂದಿದ್ದವರಿಗೆ ಚುಚ್ಚುವಷ್ಟು ಉಬ್ಬುಹಲ್ಲು ಬೇರೆ! ಅಪ್ಪ-ಅಮ್ಮ ಇಲ್ಲದ ಕೆಟ್ಟ ನಕ್ಷತ್ರದಲ್ಲಿ ಹುಟ್ಟಿ ಅಜ್ಜಿಯ ಆರೈಕೆಯಲ್ಲಿ ಬೆಳೆದ ಸಂತಿಗೆ ಕುಡಿಯದೆ ಮುಚ್ಚಟೆಯಿಂದ ಬದುಕು ಸಾಗಿಸಬಹುದಾದ ಯಾವುದೇ ಕಾರಣಗಳಿರಲಿಲ್ಲ. ಹೀಗೆ ಇವರಿಬ್ಬರೂ ಕೇರಿಯ ದೃಷ್ಟಿಚುಕ್ಕೆಗಳಂತೆ ಹಾಯಾಗಿ ಕುಡಿಯುತ್ತಾ ತಿನ್ನುತ್ತಾ ಹಗಲಿರುಳೆನ್ನದೆ ತಿರುಗುತ್ತಿದ್ದರೂ, ಪಾಪದ ಆರೋಪ ಬಂದದ್ದು ಮಾತ್ರ ಸಭ್ಯನಾದ ಹರೀಶಣ್ಣನ ಮೇಲೆ!

ಇವೆಲ್ಲಾ ಹೇಳಿಕೆಗಳು ಸಂಜೆ ಆಫೀಸು ಮುಗಿಸಿ ಬಂದು ನಮ್ಮನ್ನೆಲ್ಲ ಮಹಡಿ ಮೇಲೆ ಕರೆದೊಯ್ದು ಗಾಳಿಪಟ ಹಾರಿಸಲು ಹೇಳಿಕೊಡುತ್ತಿದ್ದ, ಹೋಲಿಕೆಯಲ್ಲಿ ತಮಿಳು ಹೀರೋ ಅನಂತಸ್ವಾಮಿಯನ್ನು ಹೋಲುತ್ತಿದ್ದ ಹರೀಶಣ್ಣನಿಗೆ ಸ್ವಲ್ಪವೂ ಸರಿಹೊಂದುತ್ತಿರಲಿಲ್ಲ.

ಹರೀಶ, ವೀಣಾ, ರೂಪ, ವಾಣಿ, ಭಾರದ್ವಾಜ, ರಾಘವ, ಸಂತೋಷ… ಹೀಗೆ ಮದುವೆಯಾಗದ ಮೂವತ್ತು ದಾಟಿದವರ ಉದ್ದ ಪಟ್ಟಿಯಿದ್ದರೂ ಅವರೆಲ್ಲ ಖುಷಿಯಿಂದ ಬದುಕುತ್ತಿದ್ದ ರೀತಿ ಮಾತ್ರ ಚೆಂದಗಿತ್ತು. ವಾರಕ್ಕೆ ಮೂರು ಬಾರಿಯಾದರೂ ಸಂಜೆ ಯಾರಾದರೊಬ್ಬರ ಮನೆಯ ಜಗುಲಿಯ ಮೇಲೆ ಕೂತು ತಡರಾತ್ರಿಯಾದರೂ ಪಟ್ಟಾಂಗ ಹೊಡೆಯುವರು. ಶಾಲೆಯ ದಿನದಿಂದಲೂ ಎಲ್ಲವನ್ನೂ ನೆನೆನೆನೆದು ಹೊಟ್ಟೆ ಹುಣ್ಣಾಗುವಂತೆ ನಗುವರು. ನಾವೆಲ್ಲ ಏನೂ ತಿಳಿಯದಿದ್ದರೂ ಕೇಕೆ ಹಾಕಿ ನಗುತ್ತಾ ಅವರೆಲ್ಲರ ಮುಖಗಳ ಮೇಲಿನ ಸಂತೋಷವನ್ನು ಎವೆಯಿಕ್ಕದೆ ನೋಡುತ್ತಾ ಆಸ್ವಾದಿಸುತ್ತಿದ್ದೆವು. ಎಲ್ಲರೂ ಎಷ್ಟು ನೆಮ್ಮದಿಯಿಂದ ನಗುತ್ತಿದ್ದರು ಎಂದರೆ ಸಾವಿಗೂ ಅವರನ್ನು ಮುಟ್ಟಲು ಭಯವಾಗುತ್ತಿತ್ತು. ಹಾಗೇ ಅಲ್ಲವೇ, ರಸ್ತೆ ಅಪಘಾತದಲ್ಲಿ ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆ ಸೇರಿದ್ದ ರಾಘವಣ್ಣನನ್ನು ಇವರೆಲ್ಲರೂ ಸೇರಿ ಆಸ್ಪತ್ರೆಗೆ ಸೇರಿಸಿ ಖರ್ಚನ್ನೂ ತಾವೇ ನೋಡಿಕೊಂಡು ಅವನನ್ನು ಬದುಕಿಸಿ ಕೊಂಡಿದ್ದು? ಹಗಲು-ರಾತ್ರಿ ಪಾಳಿಗಳ ಮೇಲೆ ಅವನು ಸುತ್ತಲೂ ಕೂತು ತಾಯ್ತಂದೆಗೂ ಮೀರಿ ನೋಡಿಕೊಂಡರು ಎಲ್ಲರೂ. ಇಲ್ಲದಿದ್ದರೆ ಪುಟ್ಟ ಗುಡಿಯೊಂದರ ಅರ್ಚಕರಾಗಿದ್ದ ರಾಘವನ ಅಪ್ಪ ಹೇಗಾದರೂ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿತ್ತು?

ಏತನ್ಮಧ್ಯೆ ಮದುವೆಯಾಗದ ಮೂವತ್ತರ ಹೆಣ್ಣುಮಕ್ಕಳ ಗಡಂಗಿನ ಖುಷಿಯೇ ಬೇರೆ! ಅವರು ಒಟ್ಟಾಗಿ ಶಾಪಿಂಗಿಗೆ ಹೋಗುವರು. ಕಣ್ಣಿಗೆ ಕಂಡ ವಸ್ತುಗಳನ್ನೆಲ್ಲಾ ಖರೀದಿಸಿ ತರುವರು, ಉಡುವರು ತೊಡುವರು. ಅವರ ಅಮ್ಮನದೋ ಅಜ್ಜಿಯದೋ ಸೀರೆಗೆ ಬ್ರಾಡ್ ನೆಕ್ ಬ್ಲೌಸ್ ಹೋಲಿಸಿ ಹಾಕಿಕೊಂಡು ಮೆರೆಯುವರು. ಗಡಂಗಿನಲ್ಲಿ ಹುಡುಗಿಯೊಬ್ಬಳು ಏನನ್ನೂ ಕೊಳ್ಳಲು ಅಶಕ್ತಳಿದ್ದರೆ, ಗೆಳತಿಯರೇ ಅವಳಿಗಾಗಿ ಚಂದದ ಉಡುಗೊರೆಗಳನ್ನು ಕೊಡುವರು. ಗಾಡಿ ಕಾರುಗಳನ್ನು ಓಡಿಸಿಕೊಂಡು ಬೇಕಾದ ಕಡೆಗೆ ತಾವೇ ಸ್ನೇಹಿತರೊಟ್ಟಿಗೆ ಹೋಗುವರು. ಕೆಲವೊಮ್ಮೆ ಕೇರಿ ಕಾಣದ ಕೆಲವು ಗಂಡೈಕ್ಳೂ ಕೂಡ ಇವರ ಸಹಪಾಠಿಗಳೆಂಬ ಒಂದೇ ಒಂದು ಕ್ಷುಲ್ಲಕ ಕಾರಣಕ್ಕೆ ಅವರ ವಾಹನಗಳಲ್ಲಿ ಕೂರುವ ಅದೃಷ್ಟ ಮಾಡಿರುತ್ತಿದ್ದರು.

ಕೇರಿಯ ಹಳೆ ತಲೆಮಾರಿಗೆ ಇದೆಲ್ಲ ಕಣ್ಣು ಕುಕ್ಕಿದರೂ ಹುಡುಗರ್ಯಾರೂ ಅಂತಹ ಈರ್ಷ್ಯೆಗೆ ಕವಡೆಯ ಕಿಮ್ಮತ್ತೂ ಕೊಡುತ್ತಿರಲಿಲ್ಲ. ವರುಷಕ್ಕೊಮ್ಮೆ ಹೋಳಿ ಹುಣ್ಣಿಮೆಯನ್ನಂತೂ ಕಂಡವರೆಲ್ಲ ಹೊಟ್ಟೆಕಿಚ್ಚು ಪಡುವಷ್ಟು ಖುಷಿಯಿಂದ ಆಚರಿಸುತ್ತಿದ್ದರು. ಮನೆಯೊಳಗಿದ್ದವರನ್ನೆಲ್ಲಾ ಹೊರಗೆಳೆದು ತಂದು ಮುಖಕ್ಕೆ ಬಣ್ಣ ಹಾಕುತ್ತಿದ್ದರು, ಓಕುಳಿಯಾಡುತ್ತಿದ್ದರು. ಕಾಮದಹನದ ಹಾಡುಗಳನ್ನು ಎಗ್ಗಿಲ್ಲದೇ ಕೇರಿಯ ಎಲ್ಲಾ ಭಾಗಗಳಲ್ಲೂ ತಿರುಗಿ ಹಾಡುತ್ತಾ ಎಲ್ಲರನ್ನೂ ನಾಚಿಸುವರು. ‘ಕಾಮಣ್ಣ ಮಕ್ಕಳು, ಕಳ್ಳ ಸೂಳೆಮಕ್ಕಳು..’ ಅಂತ ಜೋರಾಗಿ ಕೂಗುತ್ತಾ ಓಡುವರು.

ರಾಮಣ್ಣನ ಹೆಂಡತಿ ಗೀತಕ್ಕನು ಅದೊಂದು ದಿನ ಚಿಕ್ಕಮಗುವಿನಂತೆ ಎಲ್ಲರೊಂದಿಗೆ ಬೆರೆತು ಮೈಮರೆತು ಕುಣಿದು ಆಟವಾಡುತ್ತಿದ್ದಳು. ಸ್ವಭಾವತಃ ಮಗುವಿನ ಮನಸಿನ ಗೀತಕ್ಕನಿಗೆ ತೀರಾ ಎಳೆಯ ವಯಸ್ಸಿಗೆ ಘಾಟಿ ರಾಮ್ಮಣ್ಣನೊಂದಿಗೆ ಮದುವೆಯಾಗಿ ಮಗುವೂ ಹುಟ್ಟಿ ಆಸೆಗಳೆಲ್ಲಾ ಒಳಗೇ ಉಳಿದು ಕೊರಡಾಗಿದ್ದಳು. ರಾಮಣ್ಣನ ಕಟಾಪಿಟಿಗೆ ಹೆದರಿಕೊಂಡು ಮೌನವಾಗಿಬಿಟ್ಟಿದ್ದಳು. ಕೇರಿಯ ಅಣ್ಣ-ಅಕ್ಕಂದಿರೊಂದಿಗೆ ಬೆರೆತಾಗ ಅವರೊಳಗಿನ ಮಗುವು ನಿರ್ಭಿಡೆಯಿಂದ ಹೊರಗೆ ಬರುತ್ತಿತ್ತು. ಹೋಳಿ ಹಬ್ಬ ಅಂತಹದೊಂದು ಸಮಯ! ರಾಯರ ಆರಾಧನೆಯೋ, ಹನುಮ ಜಯಂತಿಯೋ, ಮಹಾನವಮಿ ಬಲಿಪಾಡ್ಯಮಿಗಳೋ ಎಲ್ಲವೂ ಕೇರಿಯ ಅಕ್ಕ ಅಣ್ಣಂದಿರಿಂದಲೇ ಕಳೆಗಟ್ಟುತ್ತಿದ್ದವು. ಅವರು ಬದುಕಿನ ಒಂದೊಂದು ಕ್ಷಣವೂ ಅಗಾಧ ಸುಖದಲ್ಲಿ ಓಲಾಡುವಂತೆ ಬದುಕುತ್ತಿದ್ದರು.

ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೀರಲು ಮಾತ್ರ ಅದ್ಯಾಕೋ ಅಕ್ಕಂದಿರು ಮನೆಯಿಂದ ಹೊರಗೆ ಹೋಗುತ್ತಿರಲಿಲ್ಲ. ತಮ್ಮ ಮನೆಯಲ್ಲಿಯೇ ಬೊಂಬೆಗಳಂತೆ ಅಲಂಕರಿಸಿಕೊಂಡು ಎಳ್ಳುಬೆಲ್ಲ ಸಿದ್ಧಮಾಡಿಕೊಂಡು ಕಾಯುತ್ತಾ ಕೂತಿರುತ್ತಿದ್ದರು. ನಮ್ಮಂತಹ ಎಡಬಿಡಂಗಿ ವಯಸ್ಸಿನ ಹೆಣ್ಣುಮಕ್ಕಳು ಸಿಕ್ಕ ಕೂಡಲೇ ಪಟಕ್ಕನೆ ಹಿಡಿದು ಎಲ್ಲರ ಮನೆಗೂ ನಮ್ಮದರ ಜೊತೆಗೆ ಅವರ ಮನೆಯ ಎಳ್ಳನ್ನೂ ಬೀರುವ ಕೆಲಸ ಹಚ್ಚುತ್ತಿದ್ದರು. ಹೋದ ಮನೆಯಲ್ಲೆಲ್ಲಾ “ಇದು ನಮ್ಮ ಎಳ್ಳು, ಇದು ವೀಣಕ್ಕನ ಮನೇದು, ಇದು ರಾಧಕ್ಕನ ಮನೇದು” ಅಂತ ಹೇಳಿ ಹೇಳಿ ಕೊಡಬೇಕಾಗುತ್ತಿತ್ತು. ಆದರೂ ಯಾವ ಬೇಸರವಿಲ್ಲದೇ ಸುತ್ತಿ ಸುತ್ತಿ ಕಾಲುಗಳು ಪದ ಹಾಡುತ್ತಿದ್ದರೂ ಸಿಗುತ್ತಿದ್ದ ಲಂಚದ ಆಸೆಗೆ ಊರೆಲ್ಲಾ ತಿರುಗುತ್ತಿದ್ದೆವು.

ಒಮ್ಮೆ ಹೀಗೆ ಎಳ್ಳು ಬೀರಿಸಿದ ವೀಣಕ್ಕ ನನಗೆ ಹೊಸ ಘಾಗ್ರಾ ಚೋಲಿ ಕೊಡಿಸಿದ್ದಳು. ಉಡುಗೊರೆ ರೂಪದಲ್ಲಿ ನಮಗೆ ಬೇಕಾದ್ದನ್ನು ಮನಸ್ಸಿಗೆ ತೋಚಿದ್ದನ್ನು ಕೇಳುವ ಸ್ವಾತಂತ್ರ್ಯ ಈ ಅಕ್ಕಂದಿರ ಬಳಿ ನಮಗೆ ದೊರೆಯುತ್ತಿತ್ತು. ನಮ್ಮ ಪಾಲಿಗೆ ಅವರು ನಮ್ಮ ಅಪ್ಪ-ಅಮ್ಮನಂತಲ್ಲದೆ ಕೇಳಿದ್ದನ್ನು ವರ ಕೊಟ್ಟಂತೆ ಕೊಡಿಸಿಬಿಡುವ ದೇವಾನುದೇವತೆಗಳಾಗಿದ್ದರು.

ಇಂತಹ ಸ್ವಾತಂತ್ರ್ಯವೇನೂ ಅವರಿಗೆ ಮುಫ್ತಿನಲ್ಲಿ ದೊರೆತದಲ್ಲ! ಗಂಡುಮಕ್ಕಳ ನಡವಳಿಕೆ, ಅಭ್ಯಾಸಗಳೂ ಹೆಣ್ಣುಮಕ್ಕಳ ಶೀಲ- ಚಾರಿತ್ರ್ಯಗಳೂ ಈ ಮದುವೆಯಾಗದ ಹಿನ್ನೆಲೆಯಲ್ಲಿ ಧಾರಾಳವಾಗಿ ವಧೆಯಾಗುತ್ತಿದ್ದವು. ಆದರೆ ಅವರ್ಯಾರೂ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿರಲಿಲ್ಲ. ನಾವು ವಿಶ್ವಾಸದ ಋಣಕ್ಕೆ ಬಿದ್ದು ಅವರನ್ನು ತೆಗಳಿದ ಪ್ರಸಂಗಗಳನ್ನು ಹೇಳಲು ಹೊರಟರೆ “ಅಯ್ಯೋ ಬಿಡೇ! ಇದೇ ಅಂತಾರೆ ಅಂತ ನಮಗೆ ಮೊದಲೇ ಗೊತ್ತು. ಅಷ್ಟೇ ತಾನೇ ಅವರು ಕೈಲಾಗೋದು. ಅಂತಾರೆ. ಇನ್ನೇನ್ ಮಾಡ್ಕೋತಾರೆ ಹೇಳು…?” ಅಂದು ನಮ್ಮ ಬಾಯಿ ಮುಚ್ಚಿಸುವರು. ಅಂದವರ ಮಾತಿಗೆ ಎಂದೂ ಸೊಪ್ಪು ಹಾಕಿದವರಲ್ಲ. ಸ್ವತಃ ನನಗೇ ತಿಪ್ಪರಲಾಗ ಹೊಡೆದರೂ ತಪ್ಪಿಸಿಕೊಳ್ಳಲಾಗದೇ ಪಿಯುಸಿ ಮುಗಿಯುವುದರೊಳಗೆ ಮನೆಯವರೆಲ್ಲಾ ಸೇರಿ ಮದುವೆ ಮಾಡಿದಾಗ ಅವರೆಲ್ಲಾ ಕಾಪಿಟ್ಟುಕೊಂಡು ಬದುಕಿದ ಸ್ವಾತಂತ್ರ್ಯದ ಬೆಲೆ ಏನೆಂಬುದು ಅರಿವಾಯಿತು.

ಆಮೇಲಿನ ದಿನಗಳಲ್ಲಿ ಒಬ್ಬೊಬ್ಬರೇ ಅಕ್ಕಂದಿರು ಮದುವೆಯಾಗಿ ಕೇರಿ ತೊರೆದು ದೂರ-ದೂರದ ಊರುಗಳಿಗೆ ಹೋಗಿಬಿಟ್ಟರು. ಮೊದಲು ಸಂಕ್ರಾಂತಿ, ಆಮೇಲೆ ದೀಪಾವಳಿ, ಕಡೆಗೆ ಹೋಳಿ ಹಬ್ಬವೂ ಕೂಡ ಬಣ್ಣ ಕಳೆದುಕೊಂಡವು. ಗೀತಕ್ಕನಂತಹ ಮಗು ಮನಸಿನವರು ಜನರೊಂದಿಗೆ ಬೆರೆಯುವುದನ್ನೇ ಕಡಿಮೆ ಮಾಡಿದರು. ಈಗ ಕೇರಿಯಲ್ಲಿ ಉಳಿದಿರುವ ಹೈಕಳಿಗೆ ನಾವು ಕಂಡ ಪ್ರಪಂಚದ ಅರಿವಿಲ್ಲ. ಅವುಗಳ ಪ್ರಪಂಚವೆಲ್ಲಾ ಕಂಪ್ಯೂಟರ್ ಹಾಗೂ ಮೊಬೈಲಿನೊಳಗಿದೆ. ಅಲ್ಲಿ ದಾಂಪತ್ಯ, ಸಂಸಾರ ಹಾಗೂ ಕೌಟುಂಬಿಕ ಚೌಕಟ್ಟಿನ ಆಕಾರ ವ್ಯಾಖ್ಯಾನಗಳು ಬದಲಾಗುತ್ತಾ ಹೋಗಿವೆ. ಈಗ ಮತ್ತೆ ವಯಸ್ಸಲ್ಲದ  ವಯಸ್ಸಿಗೆ ಪ್ರೇಮವಿವಾಹದ ನೆಪದ ಮದುವೆಗಳಾಗಿ, ನಾಲ್ಕಾರು ಕಾಲದಲ್ಲೇ ಆ ಮದುವೆಗಳು ಮುರಿದು ಬೀಳುತ್ತಿವೆ. ನಾವಂತೂ ಹಲವು ಮನ್ವಂತರಗಳಿಗೆ ಸಾಕ್ಷಿಯಾದವರಂತೆ ಆ ಕಾಲಕ್ಕೂ ಈ ಕಾಲಕ್ಕೂ ಮಧ್ಯೆ ಎಡಬಿಡಂಗಿಗಳಾಗಿ ನಿಂತಿದ್ದೇವೆ.