“ಹೆಗಲೇರಿದ್ದ ಮಣ ಭಾರದ ಬ್ಯಾಗನ್ನ ಕೆಳಗಿಳಿಸದೇ, ನಮ್ಮನೆಯ ಬಾಗಿಲನ್ನೂ ಕಾಣದೇ, ಕರುವನ್ನು ನೋಡಲು ಅದರ ಅಮ್ಮನ ಹತ್ತಿರ ಹೋದರೆ ಕರುಮಾತ್ರ ಅಲ್ಲಿ ಕಂಡಿರಲಿಲ್ಲ. ಪಿಚ್ಚಮ್ಮ ಆಂಟಿಯನ್ನು ಕೇಳೋಣವೆಂದು ಅವರ ಮನೆಯ ಒಳಗೆ ಗೋಣು ಹಾಕಿ ಕೂಗಿ ನೋಡಿದೆ. ಮನೆಯಲ್ಲಿ ಯಾರೂ ಇದ್ದಂತೆ ಕಾಣಲಿಲ್ಲ. “ಅಯ್ಯೋ ಎಲ್ಲೋತದು” ಅಂತ ಗೊಣಗುತ್ತಾ, ನಮ್ಮನೆಗೆ ಹೋಗಿ, ಶೂ ಬಿಚ್ಚುತ್ತಾ ಅಮ್ಮನನ್ನು ಅದರ ಬಗ್ಗೆ ಕೇಳಿದ್ದೆ. ‘ಅದನ್ನ ಕಡಿಯೋರಿಗೆ ಕೊಟ್ಟುಬಿಟ್ರು ಅಪ್ಪಿ’ ಅಂದ ಅಮ್ಮನ ದನಿಯಲ್ಲಿ ನೋವು ಕಂಡಿತ್ತು.” 
ರೂಪಶ್ರೀ ಕಲ್ಲಿಗನೂರ್ ಅಂಕಣ

ಆವೊತ್ತಿನ್ನೂ ನಾನು ಬೆಳಗ್ಗೆ ಏಳುವ ಹೊತ್ತು ಆಗಿರಲೇ ಇಲ್ಲ. ಆದರೂ ಅಮ್ಮ ಯಾಕೋ ನನ್ನನ್ನ ಎಂದಿಗಿಂತ ಕೊಂಚ ಬೇಗನೇ ಏಳಿಸುತ್ತಿದ್ದಳು. “ಯಾಕಮ್ಮ ಇಷ್ಟು ಲಗೂ ಎಬ್ಬಸ್ತೀ? ಸ್ಕೂಲ್ಗಿನ್ನೂ ಹೊತ್ತಾಗಿಲ್ಲ” ಅಂದಾಗ “ಏ ಬಾಜೂ ಮನಿ ಆಕಳಾ ಕರಾ ಹಾಕೇತಿ. ನೋಡುವಂತೆ ಬಾ” ಅಂದ ಮಾತು ಕಿವಿಗೆ ಬಿದ್ದು ಕೆಲವೇ ಸೆಕೆಂಡುಗಳಲ್ಲಿ ನಾನು ಅಂಗಳಕ್ಕೆ ಜಿಗಿದಿದ್ದೆ. ಅಷ್ಟು ಹೊತ್ತಿಗಾಗಲೇ ಪಕ್ಕದ ಮನೆಯ ಪಿಚ್ಚಮ್ಮ ಆಂಟಿ ತಮ್ಮ ಹಸು ಹಾಕಿದ್ದ ಕರುವನ್ನು ತೊಳೆದು, ಶುದ್ಧಗೊಳಿಸಿ ಅಲ್ಲೇ ಆಟವಾಡಿಕೊಂಡಿರಲು ಬಿಟ್ಟಿದ್ದರು. ಪಿಚ್ಚಮ್ಮ ಆಂಟಿ, ನಾವು ಬೆಂಗಳೂರಿಗೆ ಬಂದಮೇಲೆ ಇದ್ದ ಪಕ್ಕದ ಮನೆಯವರು. ತೆಲುಗು ಭಾಷಿಕರಾದ ಅವರ ಬಾಯಲ್ಲಿ, ನಮ್ಮ ಜೊತೆ ಮಾತಾಡುವಾಗೆಲ್ಲ ಕನ್ನಡದ ಕಗ್ಗೊಲೆಯಾಗುತ್ತಿತ್ತು. ಅವರ ಮೈಮಾಟವಾಗಲೀ, ಓಡಾಡೋ ರೀತಿಯಲ್ಲಾಗಲೀ ಎಲ್ಲದರಲ್ಲೂ ಬಿರುಸುತನವಿತ್ತು. ಮೂರ್ನಾಲ್ಕು ಹಸುಗಳನ್ನು ಸಾಕಿಕೊಂಡು, ಅದರ ಹಾಲು ಮಾರಿ ಮನೆ ನಡೆಸುತ್ತಿದ್ದರು. ಅವರ ಗಂಡ ಕೆಲಸಕ್ಕೆ ಹೋಗಿದ್ದರ ಬಗ್ಗೆ ಎಂದೂ ಮಾಹಿತಿ ಸಿಕ್ಕಿಲ್ಲ. ಹಾಗವರು ತಾವು ಸಾಕಿದ ಹಸುಗಳನ್ನು ನಮ್ಮ ಊರುಗಳಲ್ಲಿ ಜನ ನೋಡಿಕೊಳ್ಳುವಂತೆ, ಅಕ್ಕರೆಯಿಟ್ಟು ಸಾಕುತ್ತಿದ್ದರೆನ್ನುವುದಕ್ಕೆ ಯಾವ ಸಾಕ್ಷಿಯೂ ನನಗೆ ಸಿಕ್ಕಿರಲಿಲ್ಲ. ಬೆಳಗ್ಗೆ ಹಾಲುಕರೆದುಕೊಂಡು ಹಸುಗಳನ್ನು ರಸ್ತೆಗೆ ಬಿಟ್ಟರೆ, ಆಮೇಲೆ ಅವುಗಳ ನೆನಪಾಗುತ್ತಿದ್ದುದು ಸಂಜೆಯ ಮೇಲೆಯೇ. ಎಲ್ಲೆಲ್ಲೆ ಏನೇನು ತಿಂದುಕೊಂಡು ಬರುತ್ತಿದ್ದವೋ. ಅವಕ್ಕೇ ಗೊತ್ತು.

ಹಾಗೆ ಬೆಂಗಳೂರಿನ ಮನೆಯಂಗಳದಲ್ಲಿ ಕರುವೊಂದು ಚಂಗಚಂಗನೆಂದು ಜಿಗಿದಾಡುತ್ತಾ ಅತ್ತಿಂದಿತ್ತ ಓಡಾಡೋದನ್ನ ನೋಡಿ, ನನ್ನ ಮನಸ್ಸು ಅದರಂತೆಯೇ ಆಗಿಹೋಗಿತ್ತು. ನಾನದನ್ನು ಹಿಡಿಯುವ ವ್ಯರ್ಥ ಪ್ರಯತ್ನವನ್ನು ನೋಡಿ ನಕ್ಕ ಪಿಚ್ಚಮ್ಮ ಆಂಟಿಯ ಮಗ ವೆಂಕಟ್ ಅಣ್ಣ ‘ಇರು ರೂಪಾ’ ಅಂತ ಬಂದು ಅದನ್ನು ಹಿಡಿದು ನಿಲ್ಲಿಸಿದ್ದ. ಆಮೇಲೆ ಅದಕ್ಕೆ ಸುಸ್ತು ಹೊಡೆಯುವಷ್ಟೂ ಹೊತ್ತು ಅದಕ್ಕೆ ಮುದ್ದುಗರೆಯುತ್ತಲೇ ಇದ್ದೆ. ಅದರ ಸಂಭ್ರಮದಲ್ಲಿ ನನಗೆ ಶಾಲೆಗೆ ಹೋಗುವ ನೆನಪೇ ಇರಲಿಲ್ಲ. ಅಮ್ಮ ಸಾಕಷ್ಟು ಬಾರಿ ಕೂಗಿ, ಪ್ರಯೋಜನವಾಗದೇ, ಬಂದೆಳೆದು ಮನೆಯೊಳಗೆ ಕರೆದುಕೊಂಡು ಹೋಗಿದ್ದರು. ಆಮೇಲೆ ಶಾಲೆಗೆ ಹೋಗುವಾಗಲೂ ಒಂದು ಸುತ್ತು ಅದರ ಮುಖವನ್ನೊಮ್ಮೆ ನನ್ನ ಕೈಗಳಲ್ಲಿ ಹಿಡಿದು ಮುತ್ತು ಕೊಟ್ಟು ‘ಸಂಜೆ ಬರ್ತೀನಿ’ ಅಂತ ಟಾಟಾ ಮಾಡಿ, ಕಾಲು ನೆಲಕ್ಕೆ ತಾಗಿಸದವಳಂತೆ ಕುಣಿದುಕೊಂಡೇ ಶಾಲೆಗೆ ಹೋಗಿದ್ದೆ.

ಅಂದು ಸಂಜೆ ಶಾಲೆಯಿಂದ ವಾಪಾಸ್ಸು ಬರುವಾಗ ಮತ್ತೆ ಆ ಮುದ್ದು ಕರುವಿನ ನೆನಪಾಗಿ, ಅದನ್ನು ಮತ್ತಷ್ಟು ಮುದ್ದಿಸುವ ಹುರುಪಿನಲ್ಲಿ ದೊಡ್ಡ ಹೆಜ್ಜೆಗಳನ್ನು ಹಾಕುತ್ತಾ ಮನೆಗೆ ಬಂದಿದ್ದೆ. ಹೆಗಲೇರಿದ್ದ ಮಣ ಭಾರದ ಬ್ಯಾಗನ್ನ ಕೆಳಗಿಳಿಸದೇ, ನಮ್ಮನೆಯ ಬಾಗಿಲನ್ನೂ ಕಾಣದೇ, ಕರುವನ್ನು ನೋಡಲು ಅದರ ಅಮ್ಮನ ಹತ್ತಿರ ಹೋದರೆ ಕರುಮಾತ್ರ ಅಲ್ಲಿ ಕಂಡಿರಲಿಲ್ಲ. ಪಿಚ್ಚಮ್ಮ ಆಂಟಿಯನ್ನು ಕೇಳೋಣವೆಂದು ಅವರ ಮನೆಯ ಒಳಗೆ ಗೋಣು ಹಾಕಿ ಕೂಗಿ ನೋಡಿದೆ. ಮನೆಯಲ್ಲಿ ಯಾರೂ ಇದ್ದಂತೆ ಕಾಣಲಿಲ್ಲ. “ಅಯ್ಯೋ ಎಲ್ಲೋತದು” ಅಂತ ಗೊಣಗುತ್ತಾ, ನಮ್ಮನೆಗೆ ಹೋಗಿ, ಶೂ ಬಿಚ್ಚುತ್ತಾ ಅಮ್ಮನನ್ನು ಅದರ ಬಗ್ಗೆ ಕೇಳಿದ್ದೆ. ‘ಅದನ್ನ ಕಡಿಯೋರಿಗೆ ಕೊಟ್ಟುಬಿಟ್ರು ಅಪ್ಪಿ’ ಅಂದ ಅಮ್ಮನ ದನಿಯಲ್ಲಿ ನೋವು ಕಂಡಿತ್ತು. ಅಮ್ಮ ಹಾಗಂತ ಹೇಳಿ ಕ್ಷಣವಾಗಿರಲಿಲ್ಲವಷ್ಟೇ, ನನ್ನ ಕಣ್ಣಲ್ಲಿ ಧಾರಾಕಾರ ನೀರು. ಗೊಡ್ಡು ಕರುವೋ, ಇನ್ನೊಂದು ಕರುವೋ ಯಾವುದನ್ನೂ ನಮ್ಮ ಊರುಗಳಲ್ಲಿ ಹಾಗೆ ಕಡಿಯೋದಕ್ಕೆ ಕೊಡೋದಿಲ್ಲ. ಇವ್ರ್ಯಾಕೆ ಹಾಗೆ ಮಾಡಿದ್ರು? ಈ ಆಂಟಿ ಚೊಲೋ ಇಲ್ಲಮ್ಮ. ಪಾಪ ಅದು ಎಷ್ಟು ಸಣ್ಣದಿತ್ತು. ಹಿಂಗ್ಯಾಕ್ ಮಾಡಿದ್ರು” ಅಂತೆಲ್ಲ ಅನ್ನುತ್ತನ್ನುತ್ತಲೇ ಇಡೀ ದಿನ ಗೋಳಾಡಿದ್ದೆ. ನನ್ನನ್ನು ಸಮಾಧಾನ ಪಡಿಸೋ ಹೊತ್ತಿಗೆ ಅಮ್ಮ ಸುಸ್ತಾಗಿಬಿಟ್ಟಿದ್ದಳು. ಬೇಡಬೇಡವೆಂದರೂ ರಾತ್ರಿಯವರೆಗೂ ದುಃಖತುಂಬಿದ್ದ ಗಂಟಲಲ್ಲಿ ಐದಾರು ತುತ್ತು ಹೋಗುವಂತೆ ಮಾಡಿ, ಮಲಗಿಸಿದ್ದಳು. ಒಂದು ವಾರವೆಲ್ಲ ಅದರ ನೆನಪಲ್ಲೇ ಮಂಕಾಗಿಹೋಗಿದ್ದೆ.

*********************

ಚಿಕ್ಕಂದಿನಿಂದ ರಜಾ ಸಮಯಕ್ಕೋ ಅಥವಾ ಯಾವುದೋ ಮುದುವೆಗಿದುವೆಯ ಕಾರಣಕ್ಕೋ ಅಮ್ಮನ ತವರು ಮನೆಯ ಕಡೆಯವರ ಊರುಗಳಿಗೆ ಹೋಗೋದು ಅಂದ್ರೆ, ಅಪ್ಪನ ಕಡೆಯ ಊರುಗಳಿಗೆ ಹೋಗೋದಕ್ಕಿಂತ ಹೆಚ್ಚು ಇಷ್ಟ. ಆಗ ಅಂತಲ್ಲ. ಈಗಲೂ ಅಷ್ಟೇ. ಅದಕ್ಕೆ ಕಾರಣವೇನೂ ದೊಡ್ಡದಿಲ್ಲ. ಅಪ್ಪನ ಊರು ತಾಲ್ಲೂಕ್ಕಾದ್ದರಿಂದ ಅದಕ್ಕೆ ಸ್ವಲ್ಪ ಪಟ್ಟಣದ ಸ್ವರೂಪ ಇದೆ. ಆದರೆ ಅಮ್ಮನ ತವರೂರು, ಮತ್ತೆ ದೊಡ್ಡಮ್ಮನ ಊರುಗಳೆಲ್ಲ ಅಪ್ಪಟ್ಟ ಹಳ್ಳಿಗಳು. ಅಲ್ಲಲ್ಲಿ ಬಾವಿ, ನೀರು ಹೊಡೆಯೋ ಬೋರು, ಎತ್ತಿನಗಾಡಿ, ಚುಟ್ಟಾ ಸೇದುವ ಅಜ್ಜಾ, ಕಟ್ಟೆಯ ಮೇಲೆ ಹರಟುವ ಹುಡುಗರು, ಹುಣಸೆ ಗಿಡಕ್ಕೆ ಕಲ್ಲು ಹೊಡೆಯುವ ಮಕ್ಕಳು, ಅಮ್ಮನೊಟ್ಟಿಗೆ ತಾವೂ ಪುಟ್ಟ ಬಿಂದಿಗೆಯಲ್ಲಿ ನೀರು ಹೊರುವ ಲಂಗಾ ಬ್ಲೌಸಿನ ಹುಡುಗಿಯರು, “ಯಾಕ್ಲೇ… ನಾನೇನ್ ಕುಡದ್ ಮಾತಾಡಾಕತ್ತೇನೇನು” ಅಂತ ಜೋರು ದನಿಯಲ್ಲಿ ರಾಜ್ಯಭಾರ ಮಾಡುವ ಮಾತಾಡುವ ಕುಡುಕರು ಮತ್ತು ಬದುಕೆಂಬ ಗಾಣಕ್ಕೆ ಕಟ್ಟಿದ ದನಗಳಂತೆ ದುಡಿಯುವ ಹೆಣ್ಣುಮಕ್ಕಳು… ಅವೆಲ್ಲಾ ಹೀಗೇಂತ ಅಥವಾ ಇಷ್ಟು ಮಾತ್ರ ಅಂತ ಪಟ್ಟಿ ಮಾಡಲಾಗದ ವೈವಿಧ್ಯಮಯ ಚಿತ್ರಣಗಳು. ಹೇಳಿದ್ದಕ್ಕಿಂತ ಹೇಳದೇ ಉಳಿದವೇ ಹೆಚ್ಚಿರಬೇಕು ಇಲ್ಲಿ. ಅದರಲ್ಲೂ ಅಮ್ಮ ಕಟ್ಟಿದ ಹಳೆಯ ಮೆತ್ತಗಿನ ಸೀರೆಯ ಜೋಳಿಗೆಯಿಂದ ಹೊರಕ್ಕೆ ಮುಖ ತೋರುವ ಕಂದನ ಪಾದಗಳನ್ನು ಮೆಲ್ಲಗೆ ಮುಟ್ಟುವುದು ಒಂದು ಖುಷಿ ಎನಿಸಿದರೆ, ಕರು ಮತ್ತು ಮೇಕೆ ಮರಿಗಳ ಜೊತೆಗಿನ ಆಟ ಅದಕ್ಕಿಂತ ದೊಡ್ಡ ಸಂಭ್ರಮ ನನಗೆ. ಅದೊಂದು ದೊಡ್ಡ ಹುಚ್ಚು ಸಂಭ್ರಮ.

ಯಾರ ಮನೆಯದ್ದೇ ಆಗಿರಲಿ, ಹೊರಗೆ ಕಟ್ಟಿರುವ ಕುರಿಮರಿ ಅಥವಾ ಕರು ಕಂಡರೆ ಸಾಕು, ಓಡಿಹೋಗಿ ಮುದ್ದಿಸಿ, ಅವಕ್ಕೆ ಸಾಕುಸಾಕು ಎನ್ನುವಂತೆ ಮಾಡುತ್ತೇನೆ. ಅವುಗಳ ಮುಖ ಸವರಿ, ಗಂಟಲನ್ನು ಮೆದುವಾಗಿ ಸವರುತ್ತಿದ್ದರೆ, ಅವಕ್ಕೂ ಖುಷಿಯೇ ಅನ್ನಿ. ಮಾಡುಮಾಡು ಇನ್ನೂ ಮಾಡು ಅನ್ನುವಂತೆ ನಾ ಬಿಟ್ಟರೂ, ನನ್ನ ಮೈಗೆ ತಮ್ಮಮೈ ಅಂಟಿಸಿಕೊಂಡು ನಿಲ್ಲುತ್ತವೆ. ಈ ನನ್ನ ಕರು ಮುದ್ದಿಸುವ ಪರಿಗೆ ಊರಿನ ಅಕ್ಕಪಕ್ಕದ ಮನೆಯವರೆಲ್ಲ ಹುಚ್ಚು ಹುಡುಗಿ ಅಂತ ನಗುತ್ತಿದ್ದರು. ಅದರಲ್ಲೂ ದೊಡ್ಡಮ್ಮ “ಯವ್ವಾ ಇದನ್ನೊಂದು ಬಸ್ಸಿಗೆ ಹಾಕ್ತೇನಿ, ಬೆಂಗ್ಳೂರಿಗೆ ತಗೊಂಡು ಹೋಗುವಂತೆ” ಅಂದುಬಿಟ್ಟರೆ ಮುಗೀತು; ‘ತಗೊಂಡು ಹೋಗ್ಬಹುದಲ್ವಾ’ ಅಂತ ಖುಷಿಯಲ್ಲಿ ಅಮ್ಮನ ಮುಖ ನೋಡಿದರೆ, “ಏ ಸುಮ್ಮನಿರಯವ್ವಾ ನೀ… ಈಗ ಮನ್ಯಾಗ ಇರೋ ಈ ನಾಕ್ ಪ್ರಾಣಿ ಹಿಡಿಯೋದ ರಗಡ್ ಆಗೇತಿ ನನಗ, ಮತ್ತ ಇದನ್ನೊಂದು ಎಲ್ಲಿಂದ ತಗೊಂಡು ಹೋಗ್ಲಿ” ಅಂತ ಅಪ್ಪ ಮತ್ತು ನಮ್ಮ ಮೂರು ಜನರ ಬೆಟಾಲಿಯನ್ನನ್ನು ಪ್ರಾಣಿಗಳ ಗುಂಪಿಗೆ ಸೇರಿಸಿಬಿಡುತ್ತಿದ್ದಳು. ಪ್ರಾಣಿಗಳೆಂದರೆ ಅಮ್ಮನಿಗೂ ನನ್ನಷ್ಟೇ ಇಷ್ಟವಾದರೂ ಬೆಂಗಳೂರಿನಲ್ಲಿ ಅದರ ಚಾಕರಿ ಕಷ್ಟದ್ದೆಂಬುದು ಸತ್ಯದ ಮಾತು.

ಅಮ್ಮ ಆಗಾಗ ಹೇಳ್ತಿರ್ತಾಳೆ. ಚಿಕ್ಕಜ್ಜ, ಅಂದರೆ ಅಮ್ಮನ ಅಪ್ಪನ ತಮ್ಮ ಕೆಲವು ಹಸುಗಳನ್ನು ಸಾಕಿಕೊಂಡಿದ್ದನಂತೆ. (ಬೆಂಗಳೂರಿನಂಥಾ ಜೆರ್ಸಿ ಹಸುಗಳು ಅಂತ ಅಂದುಕೊಳ್ಳಬೇಡಿ) ಅವನಿಗೆ ತನ್ನ ಮಕ್ಕಳಷ್ಟೇ ಅವುಗಳ ಮೇಲೂ ಅಕ್ಕರೆ. ನಿತ್ಯವೂ ಅವುಗಳನ್ನು ಕೆರೆಗೆ ಕರೆದುಕೊಂಡು ಹೋಗಿ ಅವುಗಳ ಮೈಯನ್ನು ಚೆನ್ನಾಗಿ ತಕ್ಕಿ ತೊಳೆದುಕೊಂಡು ಬರುತ್ತಿದ್ದನಂತೆ. ಹಸಿಹುಲ್ಲು, ದಂಟು ಅಂತೇನೇನೋ ಚೆನ್ನಾಗಿ ತಿನ್ನಿಸುತ್ತಿದ್ದನಂತೆ ಅವಕ್ಕೆ. ಅವನು ಬೇರೆ ಕೆಲಸದಲ್ಲಿದ್ದಾಗ ಮಾತ್ರ ಆ ಕೆಲಸಗಳನ್ನೆಲ್ಲ ತನ್ನ ಮಕ್ಕಳಿಗೆ ಹೇಳುತ್ತಿದ್ದನಂತೆ. ಆ ಅಜ್ಜನ ಮಗನೊಬ್ಬ ಮತ್ತೆ ಮತ್ತೆ ಈ ದನ ತೊಳೆಯುವ ಕೆಲಸ ತನಗೆ ಬರುತ್ತದಲ್ಲಾ ಅಂತ ಸಿಟ್ಟಿಗೆ ಬಾರುಕೋಲಿನಿಂದ ಆಕಳಿಗೆ ಹೊಡೆದ ವಿಷಯ ಗೊತ್ತಾಗಿ ಅದೇ ಬಾರುಕೋಲಿನ ಏಟುಗಳು ಅವನ ಮಗನ ಮೈಮೇಲೆ ಮೂಡಿಸಿಬಿಟ್ಟಿದ್ದರಂತೆ! ಮನೆಗೆ ದುಡಿಯುವ ಮೂಕ ಪ್ರಾಣಿಗಳ ಮೇಲೆ ಅದ್ಹೇಗೆ ಕೈ ಮಾಡಿದೆ ಎಂದು ಸಿಟ್ಟು ಮಾಡಿಕೊಂಡಿದ್ದರಂತೆ. ಸಾಕುಪ್ರಾಣಿಗಳನ್ನು ನೋಡಿಕೊಳ್ಳುವ ರೀತಿ ಅಂಥದ್ದು ಅಲ್ಲಿ. ಆದರೆ ಡೈರಿ ಹಾಲನ್ನು ಒಲ್ಲದ ಕೆಲ ಜನರಿಗಾಗಿ, ಎಲ್ಲೆಲ್ಲಿಂದಲೋ ಬಂದ ಒಂದಷ್ಟು ಜನ ಮಹಾನಗರವೆಂಬೋ ಬೆಂಗಳೂರಿನಲ್ಲೂ ಹಸುಗಳನ್ನು ಸಾಕಿ, ಜೀವನ ನಡೆಸುತ್ತಿದ್ದಾರೆ. ಆದರೆ ಅವರು ಇಲ್ಲಿ ಜಾನುವಾರುಗಳನ್ನು ನೋಡಿಕೊಳ್ಳುವ ರೀತಿ ಬೇರೆ ಥರಹವೇ ಇದೆ!

ಅದರಲ್ಲೂ ಅಮ್ಮ ಕಟ್ಟಿದ ಹಳೆಯ ಮೆತ್ತಗಿನ ಸೀರೆಯ ಜೋಳಿಗೆಯಿಂದ ಹೊರಕ್ಕೆ ಮುಖ ತೋರುವ ಕಂದನ ಪಾದಗಳನ್ನು ಮೆಲ್ಲಗೆ ಮುಟ್ಟುವುದು ಒಂದು ಖುಷಿ ಎನಿಸಿದರೆ, ಕರು ಮತ್ತು ಮೇಕೆ ಮರಿಗಳ ಜೊತೆಗಿನ ಆಟ ಅದಕ್ಕಿಂತ ದೊಡ್ಡ ಸಂಭ್ರಮ ನನಗೆ. ಅದೊಂದು ದೊಡ್ಡ ಹುಚ್ಚು ಸಂಭ್ರಮ.

ನಾನು ಈಗಿರುವ ಮನೆಯ ಬಳಿ, ಮತ್ತೆ ವಾಕಿಂಗ್ ಹೋಗುವ ಹಾದಿಯಲ್ಲೂ ಒಂದಿಬ್ಬರು ಕೆಲ ಹಸುಗಳನ್ನು ಸಾಕಿಕೊಂಡಿದ್ದಾರೆ. ನಾನು ನೋಡಿದ ಎರಡು ಮೂರು ಕಡೆಯ ಇಂಥ ಜಾಗಗಳು ಒಂದಿಷ್ಟೂ ಶುದ್ಧವಾಗಿಲ್ಲ. ಅದೂ ಹೋಗಲಿ, ಭಯ ಹುಟ್ಟಿಸುವ ವಿಷಯವೆಂದರೆ ಅವರೆಂದೂ ತಾವು ಸಾಕಿದ ಹಸುಗಳಿಗೆ ಹುಲ್ಲು ಹಾಕಿದ್ದನ್ನು ನಾನು ನೋಡಿಯೇ ಇಲ್ಲ. ಇಲ್ಲಿನ ಯಾವುದೇ ಏರಿಯಾಕ್ಕೆ ಹೋದರೂ ಟ್ರಾಫಿಕ್ ಸಿಗ್ನಲ್, ಕಸದ ತೊಟ್ಟಿ, ಮತ್ತೆ ಎಲ್ಲೆಲ್ಲೋ ಯಾವುದ್ಯಾವುದೋ ರಸ್ತೆಗಳಲ್ಲಿ ಅಡ್ಡಡ್ಡ ಉದ್ದುದ್ದ ಎಂಬಂತೆ ರಸ್ತೆಗಳ ನಡುವೇ ಮಲಗಿಕೊಂಡು ವಾಹನ ಸವಾರರಿಗೆ ಕಿರಿಕಿರಿಹುಟ್ಟಿಸುತ್ತವೆ. ಕೇಳುವವರು ಯಾರೂ ಇಲ್ಲವಾಗಿ ಅನಾಥವಾಗಿ, ದಿಕ್ಕೆಟ್ಟವಂತೆ ಓಡಾಡಿಕೊಂಡಿರುತ್ತವೆ. ಹಸುವಿನ ಮೇಲೆ ಭಕ್ತಿಯಿದ್ದ ಕೆಲ ಜನ ಒಂದು ಚಪಾತಿಯನ್ನೋ, ಸೊಪ್ಪಿನ ಕಟ್ಟನ್ನೋ ಅದು ನಿಂತ ನಡು ರಸ್ತೆಯಲ್ಲೇ ಅದಕ್ಕೆ ತಿನ್ನಿಸಿ, ನಂತರ ಅದನ್ನು ಮುಟ್ಟಿ ನಮಸ್ಕರಿಸಿ, “ಪುಣ್ಯ ಕಾರ್ಯ” ಮಾಡಿದೆವೆಂಬಂತೆ ಬೀಗುತ್ತ ಮುಂದೆ ಹೋಗುತ್ತಾರೆ. ಆದ್ರೆ ಹಾಗೊಮ್ಮೆ ಅದಕ್ಕೇನಾದರೂ ತೊಂದರೆಯಾಗಿ ನರಳುತ್ತ ಬಿದ್ದಾಗಲೋ ಅಥವಾ ಉಸಿರು ಚೆಲ್ಲಿ ನೆಲಕ್ಕುರುಳಿದಾಗಲೋ ಅವನ್ನು ತಿರುಗಿ ನೋಡುವವರು ಯಾರೂ ಇರುವುದಿಲ್ಲ.

ನಿಜವಾದ ಸಮಸ್ಯೆ ಅದಲ್ಲ. ಈ ಹಸುಗಳು ತಿನ್ನುವ ಆಹಾರದ್ದು. ಮೊದಲೇ ಹೇಳಿದ ಹಾಗೆ, ಈ ಹಸುಗಳನ್ನು ಒಂದೆಡೆ ಕಟ್ಟಿಹಾಕಿ, ಹುಲ್ಲನ್ನಾಗಲೀ, ಅಥವಾ ಅದಕ್ಕೆ ಬೇಕಿರುವ ಆಹಾರವನ್ನಾಗಲೀ ತಿನ್ನಿಸಲಾಗುತ್ತಿಲ್ಲ. ಆದರೆ ಅದರ ಹೊಟ್ಟೆಗೆ ಆಹಾರ ಬೇಕೇ ಬೇಕಲ್ಲವೇ? ಸಂದಿಸಂದಿಯಲ್ಲಿ ಮನೆಕಟ್ಟಿಕೊಂಡಿರು ಈ ಬೆಂಗಳೂರಿನಲ್ಲಿ ತಿನ್ನಲದಕ್ಕೆ ಹುಲ್ಲು ಎಲ್ಲಿಂದ ಸಿಗಬೇಕು? ಹೇಗೂ ಬೆಂಗಳೂರಿನ ತುಂಬ ತುಂಬಿತುಳುಕುವ ಕಸದ ರಾಶಿ ಇದ್ದು, ಪಾಪದ ಹಸುಗಳು ಅವುಗಳನ್ನೇ ತಮ್ಮ ಊಟದ ತಟ್ಟೆಯನ್ನಾಗಿ ಮಾಡಿಕೊಂಡಿವೆ. ಹಾಗಂತ ಆ ತೊಟ್ಟಿಗಳು ಮುಸುರೆ ಬೋಗುಣಿಗಳೂ ಅಲ್ಲ. ಪ್ಲ್ಯಾಸ್ಟಿಕ್, ಡೈಪರ್, ವಯರ್, ಕೊಳೆತ ಆಹಾರ, ಒಡೆದ ಸೆಲ್ಗಳು… ಇತ್ಯಾದಿ.. ಇತ್ಯಾದಿ ಸಮಸ್ತ ವಿನಾಶಕಾರೀ ಕಸಗಳು ಅಲ್ಲಿ ತುಂಬಿಕೊಂಡಿರುತ್ತವೆ. ಅದೇ.. ಅದೇ ಊಟವನ್ನು ಈ ನಮ್ಮ ಬೆಂಗಳೂರಿನ ಹಸುಗಳು ಉಣ್ಣುತ್ತಿರುವುದು.

ಹೀಗೆ ದಿನವೆಲ್ಲ ಹಾಳುಮೂಳು ತಿನ್ನುತ್ತ, ಅದೇ ಕಸದ ರಾಶಿಯಲ್ಲಿ ಮುಳುಗೇಳುತ್ತಿರುವ ಅವುಗಳ ಆರೋಗ್ಯ ಹೇಗಾದರೂ ಸರಿಯಿದ್ದೀತು? ಇಲ್ಲಿ ನಾನು ನೋಡಿದ ಯಾವ ಹಸುಗಳ ಮುಖದಲ್ಲೂ ಆರೋಗ್ಯದ ತುಂಬು ಕಳೆಯಿಲ್ಲ. ಎಲ್ಲ ಹಸುಗಳ ಕಾಲುಗಳಲ್ಲಿ ಮಧ್ಯಮ ಗಾತ್ರದ ತೆಂಗಿನ ಕಾಯಿಯಗಲದ ಗಡ್ಡೆಗಳಿವೆ. ದೊಡ್ಡ ಆಕಳಿರಲಿ, ಸಣ್ಣ ಪುಟ್ಟ ಕರುವೂ ಲವಲವಿಕೆಯಿಂದ ಓಡಾಡಿದ್ದನ್ನು ಇಂದಿಗೂ ಕಂಡಿಲ್ಲ ನಾನು. ಊದಿಕೊಂಡಿರುವ ತಮ್ಮ ಕಾಲುಗಳನ್ನು ಎಳೆದೆಳೆದುಕೊಂಡು ಹೋಗುವಾಗ ಅವುಗಳ ಕಣ್ಣಲ್ಲಿ ಕಾಣುವ ನೋವು ನಿಜಕ್ಕೂ ಬೇಸರ ಹುಟ್ಟಿಸುತ್ತೆ. ದೊಡ್ಡ ಹಸುಗಳಷ್ಟೇ ಅಲ್ಲ ಕರುಗಳ ಕಾಲಲ್ಲೂ ಅಂಥ ಊತವನ್ನೋ ಅಥವಾ ಗಡ್ಡೆಯಂಥದ್ದನ್ನೋ ಇರುವುದನ್ನು ಗಮನಿಸಿದ್ದೇನೆ. ಇಷ್ಟೆಲ್ಲ ಚಿತ್ರಣ ಕಣ್ಣಮುಂದೆಯೇ ಇರುವಾಗ ಇಂಥಾ ವಿಷಕಾರೀ ಹಾಲನ್ನು ಕುಡಿಯುವ ಗಟ್ಟಿ ಮನಸ್ಸಿನ ಜನ ಯಾರಿರಬಹುದು ಎಂದು ಯೋಚನೆ ಮಾಡುತ್ತೇನೆ. ಏಕೆಂದರೆ ಪುಟ್ಟ ಮಕ್ಕಳಿದ್ದ ಮನೆಯವರೇ ಹೀಗೆ ಮನೆಯ ಹತ್ತಿರ ಇರುವ ಹಸುಗಳಿಂದ ಹಾಲು ತೆಗೆದುಕೊಳ್ಳುವುದು. ಅವರ್ಯಾರೂ ಈ ಹಸುಗಳ ಪರಿಸ್ಥಿತಿಯನ್ನು ನೋಡೇ ಇಲ್ಲವೇ. ಅಂಥ ಹಾಲನ್ನು ಕುಡಿದ ಮಕ್ಕಳ ಆರೋಗ್ಯದ ಗತಿ ಏನಾಗಬಹುದು ಎಂದು ನೆನೆದೇ ನನಗೆ ತೀವ್ರ ಭಯ ಕಾಡುತ್ತದೆ. ಮೊಳಕೆಯೊಡೆದ ಕಾಳುಗಳು, ಬಾದಾಮಿ, ಕರಿಬೇವು, ಒಣ ಅಜುಂರ, ಸೋಯಾಬೀನ್, ಪಾಲಕ್ ನಂತಹ ಸೊಪ್ಪುಗಳಲ್ಲಿಯೂ ಕಾಲ್ಷಿಯಂ ಹೇರಳವಾಗಿ ಸಿಗುವುದರಿಂದ, ಇಂಥ ಹಾಲಿಗೆ ಮಣೆ ಹಾಕುವ ಅಗತ್ಯವಿಲ್ಲ. ಆದರೆ ಇದನ್ನು ಯಾರಿಗೆ ಹೇಗೆ ಹೇಳಬೇಕೆಂಬುದೇ ನನಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

ಈ ಹಸುಗಳನ್ನು ಸಾಕಿಕೊಂಡ ಮಾಲೀಕರಿಗೇನೂ ಇದು ತಿಳಿಯದ ವಿಷಯವಲ್ಲ. ಹಾಲು ಕರೆದುಕೊಂಡು ಬೆಳಗ್ಗೆ ಅವುಗಳನ್ನು ಬೀದಿಗೆ ಬಿಟ್ಟರೆ, ಸಂಜೆಗೆ ಆಕ್ಟೀವಾ ಗಾಡಿಯಲ್ಲಿ ಬಂದು ತಮ್ಮ ಶೆಡ್ಡಿಗೆ ಹಸುಗಳನ್ನು ಓಡಿಸಿಕೊಂಡು ಹೋಗಿ, ಅವುಗಳನ್ನು ಭದ್ರ ಮಾಡಿಕೊಳ್ಳುತ್ತಾರೆ. ಬೆಳಗ್ಗೆ “ಅಯ್ಯೋ ಡೈರಿ ಹಾಲು ಹಾಗಂತೆ… ಹೀಗಂತೆ…” ಅಂತ ಗೋಳಿಡುವ ಜನರಿಗೆ, ಈ ‘ಸತ್ವಯುತ… ಸಂಪತ್ಭರಿತ’ ಹಾಲನ್ನು ಕರೆದು, ಪ್ಲಾಸ್ಟಿಕ್ ಕ್ಯಾನಿನಲ್ಲಿ ತುಂಬಿಕೊಂಡು ಹೋಗಿ ಲೀಟರಿಗೆ ಇಷ್ಟೆಂದು, ಆ ವಿಷಕಾರೀ ಹಾಲನ್ನು ಹಂಚಿಬರುತ್ತಾರೆ. ಈ ಬಗ್ಗೆ ಅವರ ಮುಖದಲ್ಲಿ ಯಾವುದೇ ಪಶ್ಚಾತ್ತಾಪದ ಗೆರೆಗಳಿಲ್ಲ ಮತ್ತೆ. ಇದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ ಅನ್ನಿಸುತ್ತೆ.