ಪರಲಾದನಿಗೆ ಇನ್ನೊಂದು ಅಕ್ಕ ಇದ್ದಳಾದರೂ ಅವಳ ಗಂಡ ಸಾಕ್ಷಾತ್ ಯಮಸ್ವರೂಪಿ! ಅವನಿಗಂಜಿ ಅವಳ ಊರಿಗೆ ಹೋದರೂ ಈ ಹುಡುಗ ಮನೆಯವರೆಗೆ ಹೋಗಲಾರ. ಊರ ಮುಂದಿನ ಗುಡಿಯಲ್ಲಿಯೇ ಕುಳಿತು, ಮಲಗಿ ಕಾಲ ಕಳೆಯುವ ಇವನನ್ನು ಕಂಡು ಮಂದಿ ಅಕ್ಕನಿಗೆ ಸುದ್ದಿ ಮುಟ್ಟಿಸಬೇಕು. ಅವಳು ಬಂದು ಸಮಯ ನೋಡಿ ಮನೆಗೆ ಕರಕೊಂಡು ಹೋಗಿ ಬಡಿಸಬೇಕು.
ಚಂದ್ರಕಾಂತ ಪೋಕಳೆ ಅನುವಾದಿಸಿದ ಮರಾಠಿ ಲೇಖಕ ಪ್ರ. ಈ. ಸೋನಕಾಂಬಳೆ ಅವರ ಆತ್ಮಕಥನ ‘ನೆನಪಿನ ಹಕ್ಕಿ’ಯ ಕುರಿತು ಸುಧಾ ಆಡುಕಳ ಬರಹ
ಓದಲೆಂದು ಪುಸ್ತಕವನ್ನು ಕೈಗೆತ್ತಿಕೊಳ್ಳುವಾಗ ಕೆಲವೊಮ್ಮೆ ಪ್ರಶ್ನೆಯೊಂದು ಕಾಡುತ್ತದೆ, ನಾವು ಯಾಕೆ ಓದಿಗೆ ಹೀಗೆ ಆತುಕೊಳ್ಳುತ್ತೇವೆಂದು. ಮನರಂಜನೆಗೆ ಎಷ್ಟೊಂದು ಮಾರ್ಗಗಳು ನಮ್ಮೆದುರು ತೆರೆದುಕೊಂಡಿವೆ, ಜ್ಞಾನಾರ್ಜನೆಗೆಂದೇ ಬೆರಳ ತುದಿಯ ಗುಂಡಿಗಳು ಮಾಹಿತಿ ಕಣಜದ ಹೆಬ್ಬಾಗಿಲಿನಂತೆ ಕಾಯುತ್ತಿರುತ್ತವೆ. ಇದರಾಚೆಗೂ ಪುಸ್ತಕಗಳು ಕಟ್ಟಿಕೊಡುವ ಹೊಸ ವಿಸ್ತಾರಗಳು ಯಾವುವು? ಕೆಲವೊಂದು ಪುಸ್ತಕಗಳನ್ನು ಓದುತ್ತ ಹೋದಂತೆ ಈ ಪ್ರಶ್ನೆಗಳಿಗೆ ಉತ್ತರಗಳು ತನ್ನಿಂದ ತಾನೇ ರೂಪುಗೊಳ್ಳುತ್ತ ಸಾಗುತ್ತವೆ. ಇತ್ತೀಚೆಗೆ ಓದಿದ ಅಪರೂಪದ ಆತ್ಮಕಥನವೊಂದು ಓದಿಗಿರುವ ಇನ್ನೊಂದು ಆಯಾಮವನ್ನು ಪರಿಚಯಿಸಿತು.
ಮನುಷ್ಯ ಒಂದು ಜೀವನದಲ್ಲಿ ತನ್ನ ಬದುಕನ್ನು ಮಾತ್ರ ಬದುಕಬಲ್ಲ. ಸೂಕ್ಷ್ಮಗ್ರಾಹಿಯಾಗಿದ್ದರೆ ತನ್ನ ಸುತ್ತಲಿನವರ ಬದುಕಿನ ವಿವೇಕವನ್ನೂ ತನ್ನದಾಗಿಸಿಕೊಳ್ಳಬಲ್ಲ. ಆದರೆ ತಾನಿನ್ನೂ ಗಮನಿಸದ, ನೋಡದ ಬದುಕನ್ನು ಜೀವಿಸಬೇಕೆಂದರೆ ಓದು ಮಾತ್ರವೇ ದಾರಿ ಎನಿಸುತ್ತದೆ. ದೃಶ್ಯಮಾಧ್ಯಮಗಳು ಮತ್ತು ಇನ್ನಿತರ ಕಲಾಮಾಧ್ಯಮಗಳು ಕಟ್ಟಿಕೊಡುವ ಬದುಕಿಗೆ ಅದರದೇ ಆದ ಮಿತಿಗಳಿವೆ. ಆದರೆ ಓದೆಂಬ ಹಕ್ಕಿ ನಮ್ಮ ಮನಸಿನಾಗಸದಲ್ಲಿ ತನ್ನ ರೆಕ್ಕೆಗಳನ್ನು ಬಿಚ್ಚಿಕೊಳ್ಳುವುದರಿಂದ ಅದರ ವಿಸ್ತಾರ ಉಳಿದೆಲ್ಲವುಗಳಿಗಿಂತ ಹೆಚ್ಚು. ಮರಾಠೀ ಲೇಖಕರಾದ ಪ್ರ. ಈ. ಸೋನಕಾಂಬಳೆ ಅವರ ಆತ್ಮಕಥನ ‘ನೆನಪಿನ ಹಕ್ಕಿ’ಯನ್ನು ಓದಿದಾಗ ಇನ್ನೂ ದರ್ಶಿಸಿರದ ಹೊಸದೊಂದು ಜಗತ್ತು ನನ್ನೆದುರು ತೆರೆದುಕೊಂಡಿತು.
ಇದು ಮರಾಠವಾಡಾದ ದಲಿತನೊಬ್ಬನ ಆತ್ಮಕಥನ. ‘ಪರಲಾದ’ ಎಂಬ ತಬ್ಬಲಿ ಹುಡುಗನೊಬ್ಬ ಹಸಿವೆಯೆಂಬ ಬವಣೆಯನ್ನು ತನ್ನ ತೊಗಲಿನಂತೆಯೇ ಹೊದ್ದುಕೊಂಡು, ಕ್ಷಣಕ್ಷಣಕ್ಕೂ ತಿರಸ್ಕಾರದ ಬೆಂಕಿಯಲ್ಲಿ ಬೇಯುತ್ತಾ, ಬೆಳೆಯುತ್ತಾ, ಕಾಲೇಜು ಶಿಕ್ಷಣವನ್ನೂ ಮುಗಿಸಿ ಅಧ್ಯಾಪಕ, ಪ್ರಾಚಾರ್ಯರಾಗುವವರೆಗಿನ ನಡೆಯನ್ನು ಇಲ್ಲಿ ವಿವರಿಸಿದ್ದಾರೆ. ಹಾಗೆಂದು ಇದು ಗೋಳಿನ ಅಥವಾ ಆಕ್ರೋಶದ ಕಥನವಾಗಿ ನಿರೂಪಣೆಗೊಂಡಿಲ್ಲ. ವಾಸ್ತವ ಘಟನೆಗಳ ಸರಣಿಯಾಗಿ ನಮ್ಮೆದುರು ತೆರೆದುಕೊಳ್ಳುತ್ತದೆ. ಲೇಖಕರು ತಮ್ಮ ಆಡುಭಾಷೆಯಾದ ಮಹಾರ್ ಭಾಷೆಯಲ್ಲಿ, ಆಡುಮಾತಿನಲ್ಲಿ ಇಡಿಯ ಕಥನವನ್ನು ನಿರೂಪಿಸಿರುವುರಿಂದ ಅದಕ್ಕೊಂದು ನೈಜತೆ ಲಭ್ಯವಾಗಿದೆ ಎಂದು ಕನ್ನಡಕ್ಕೆ ಇದನ್ನು ಅನುವಾದಿಸಿರುವ ಚಂದ್ರಕಾಂತ ಪೋಕಳೆಯವರು ಅಭಿಪ್ರಾಯಪಡುತ್ತಾರೆ.
ಈ ಆತ್ಮಕಥನದ ಮುನ್ನುಡಿಯಲ್ಲಿ ಬಾಬುರಾವ ಬಾಗೂಲ ಅವರು ಕೃತಿಯ ವಿಶಿಷ್ಟತೆಯ ಬಗ್ಗೆ ಹೀಗೆ ಹೇಳುತ್ತಾರೆ,
“ಸೋನಕಾಂಬಳೆ ಎಲ್ಲೂ ಭಾಷಣ ಬಿಗಿಯುವುದಿಲ್ಲ. ಪ್ರಸಂಗದ ದಟ್ಟ ಚಿತ್ರಣ ನೀಡುವುದಿಲ್ಲ. ನಾಟ್ಯ ನಿರ್ಮಾಣ ಮಾಡುವುದಿಲ್ಲ. ನಾಟ್ಯದ ರಸಾತ್ಮಕ, ಸ್ಫೋಟಕವಾದ ಹಲವು ಘಟನೆಗಳು ಅವರ ಮಾತಿನಲ್ಲಿ ಸುಳಿದು ಹೋಗುತ್ತದೆ. ಆದರದು ಕಲಾಕುಸುರಿ ಮಾಡುವುದಿಲ್ಲ. ಅದನ್ನವರು ಸರಳವಾಗಿ, ಸಹಜವಾಗಿ ದಾಖಲಿಸುತ್ತಾರೆ. ಮಾತು ಮುಗಿದಾಗ ಮನದ ಚಿಪ್ಪು ಕಳಚಿ ಬೀಳುತ್ತದೆ. ತಲೆಯೊಳಗೆ ಪ್ರಶ್ನೆಯ ಬಿರುಗಾಳಿಯೇ ಎದ್ದಿರುತ್ತದೆ. ಹೀಗೇಕೆ ಎಂದು ನಾವು ಕೇಳುತ್ತೇವೆ.
ಅವರು ತಮ್ಮ ಜೀವನದ ಯಾತನೆಯನ್ನು ಸಹಜವಾಗಿ ಹೇಳುತ್ತಾರೆ. ಹೇಳುವಾಗ ಹೆಚ್ಚು ಕಡಿಮೆ ಮಾಡಿದ್ದಾಗಲೀ, ದಟ್ಟವಾಗಿ ಬಣ್ಣಿಸಿದ್ದಾಗಲಿ, ಕಡಿಮೆ ವಿವರಿಸಿದ್ದಾಗಲಿ ಕಂಡುಬರುವುದಿಲ್ಲ. ಎಲ್ಲರನ್ನು, ಎಲ್ಲವನ್ನು ಪ್ರೀತಿಯಿಂದ ಕಾಣುತ್ತಾರೆ. ಅವರ ಯಾವ ಪಾತ್ರವೂ ದುಷ್ಟವಲ್ಲ. ಹಾಗೆ ಪತಿತವೂ ಅಲ್ಲ. ಖರೆಯೆಂದರೆ ಪಾತ್ರ ಮಹತ್ವದ್ದಾಗಿರುವುದಿಲ್ಲ. ಮಹತ್ವವಿರುವುದು ಅನುಭವಕ್ಕೆ. ಒಬ್ಬ ಪುಟ್ಟ ಬಾಲಕ ಭೋಗಿಸಿದ ಅನುಭವಕ್ಕೆ, ಈ ಅನುಭವವನ್ನು ಪೂರ್ಣಗೊಳಿಸಲು ಪಾತ್ರಗಳಿರುತ್ತವೆ. ಘಟನೆಯ ಓಘದಲ್ಲಿ ಅವರ ಸ್ವಭಾವ ಸ್ಪಷ್ಟವಾಗುತ್ತದೆ. ಲೇಖಕ ಪ್ರಚಾರಕನಲ್ಲ, ಅವನು ಬರೇ ಅನುಭವ ಹೇಳುತ್ತಾನೆ.”
ಈ ಕಾರಣಗಳಿಗಾಗಿಯೇ ಇರಬೇಕು. ಇಲ್ಲಿ ಯಾವ ಘಟನೆಯ ಕೊನೆಗೂ ಒಂದು ತೀರ್ಪನ್ನು ಲೇಖಕರು ಬರೆಯುವುದಿಲ್ಲ. ಅದರ ಪರಿಣಾಮದಿಂದಲೇ ಅವರ ಜೀವನದ ಪ್ರತಿಯೊಂದು ಘಟನೆಯನ್ನು ಓದುವಾಗಲೂ ಓದುಗರೊಳಗೊಂದು ಪರಿಣಾಮ ರೂಪುಗೊಳ್ಳುತ್ತಾ ಹೋಗುತ್ತದೆ. ಆ ಘಟನೆಯಲ್ಲಿ ಬರುವ ಪಾತ್ರಗಳ ವಿಶ್ಲೇಷಣೆ ಪ್ರಾರಂಭವಾಗುತ್ತದೆ. ಇದು ಬಹುಮುಖಿಯಾದ ಚಿಂತನೆಗೆ ಅವಕಾಶ ಮಾಡಿಕೊಡುವುದರಿಂದ ಬರವಣಿಗೆಯ ಪರಿಣಾಮವನ್ನು ಇನ್ನಷ್ಟು ಗಾಢವಾಗಿಸುತ್ತದೆ.
ಮನರಂಜನೆಯ ಉದ್ದೇಶವಲ್ಲದೇ ಹೊಸದೊಂದು ಲೋಕಗ್ರಹಿಕೆಯನ್ನು ಒದಗಿಸುವ ಓದಾಗಿ ಇದು ದಕ್ಕಲು ಇರುವ ಇನ್ನೊಂದು ಕಾರಣವನ್ನೂ ಮುನ್ನುಡಿಯಲ್ಲಿ ಹೇಳಲಾಗಿದೆ.
“ಕೆಲ ದಲಿತ ತರುಣರಿಗೆ ತಮ್ಮ ಅನುಭವ ಹೇಳುವಾಗ ಸಂಕೋಚವೆನಿಸುತ್ತದೆ. ಅದು ಉತ್ಕಟ, ಉತ್ಕೃಷ್ಟವಾಗಿದ್ದರೂ ಅದನ್ನು ಬರೆಯಬೇಕೆಂದು ಅನಿಸುವುದಿಲ್ಲ. ಅದು ಅವನಿಗೆ ಹೀನವೆನಿಸುತ್ತದೆ. ಆದರೆ ಸೋನುಕಾಂಬಳೆಯವರು ಯಾರ ಮರ್ಜಿ ಮುಲಾಜನ್ನೂ ಇಟ್ಟುಕೊಳ್ಳದೇ ಸ್ಪಷ್ಟವಾಗಿ ತನ್ನ ಆಯುಷ್ಯದ ಬಗ್ಗೆ ಹೇಳಿದ್ದಾರೆ. ಸೋನ ಕಾಂಬಳೆಯವರು ದಿಟ್ಟತನದಿಂದ ಸತ್ತ ಮಾಂಸವನ್ನು ತಿನ್ನುವ ವಾಸ್ತವವನ್ನು ತಮ್ಮ ಬರವಣಿಗೆಯಲ್ಲಿ ಚಿತ್ರಿಸಿದ್ದಾರೆ. ಅವರಿಗೆ ಹಸಿವಿನ ಭಾವನೆ ಮುಖ್ಯವಾಗಿದೆ. ನಮ್ಮ ದೇಶದ ವರ್ಣವ್ಯವಸ್ಥೆಯು ಉದ್ದೇಶಪೂರ್ವಕವಾಗಿ ನಿರ್ಧನವಾಗಿರಿಸಿದ, ಸವಲತ್ತನ್ನು ನಿರಾಕರಿಸಿದ ಜಾತಿಯೂ ಮಾಂಸಭಕ್ಷಕವಾಗಿದೆ.”
ಈ ಮಾತುಗಳು ಇಂದಿಗೂ ಸತ್ಯವಾಗಿವೆ. ಜೋಪಡಿಯಿಂದ ಬರುವ ಅದೆಷ್ಟೋ ವಿದ್ಯಾರ್ಥಿಗಳಿರುವ ಕಾಲೇಜಿನ ಭಿತ್ತಿಪತ್ರದಲ್ಲಿ ಹೂವು, ಹಣ್ಣು, ಚಿಟ್ಟೆ, ಅಮ್ಮ, ತ್ಯಾಗ, ದೇಶಭಕ್ತಿ, ಸೈನಿಕರ ಕುರಿತಾದ ಕತೆ, ಕವನಗಳಿರುತ್ತವೆಯೇ ಹೊರತು ಅವನ ದೈನಂದಿನವನ್ನು ಕಾಡುತ್ತಿರುವ ಯಾವುದೊಂದೂ ದಾಖಲಾಗುವುದಿಲ್ಲ. ‘ಏಕೆ ಹಳೆಯದನ್ನು ಕೆದಕುತ್ತೀಯಾ?’ ಎಂಬ ಅಸಮಾಧಾನದ ನಡುವೆಯೂ ಲೇಖಕರು ತಮ್ಮ ಜೀವನದ ದುರ್ಭರ ಗಳಿಗೆಗಳನ್ನು ಕಟ್ಟಿಕೊಟ್ಟಿರುವುದರಿಂದ ಅವರ ಕಥನವು ಕಾಲದ ಕಥನವಾಗಿ ಮಹತ್ವವನ್ನು ಪಡೆದುಕೊಳ್ಳುತ್ತದೆ.
ಕಥೆಯ ನಿರೂಪಕ ‘ಪರಲಾದ’ ತಂದೆ, ತಾಯಿಯರಿಲ್ಲದ ತಬ್ಬಲಿ. ಅಪ್ಪನನ್ನು ತೀರ ಎಳವೆಯಲ್ಲಿ ಕಳೆದುಕೊಂಡಿದ್ದು ತನ್ನನ್ನು ಫಂಡರಾಪುರಕ್ಕೆ ಕರೆದುಕೊಂಡು ಹೋಗಿ ವಾರಕರಿ ಮಾಲೆ ಹಾಕಿಸಿದ ಅಮ್ಮನ ನೆನಪು ಮಸುಕಾಗಿ ಇತ್ತು. ಅವರಿಬ್ಬರ ಮರಣದಿಂದಾಗಿ ತನ್ನ ಹಿರಿಯಕ್ಕನ ಮನೆಯಲ್ಲಿ ಅವರು ಬೆಳೆಯುವಂತಾಯಿತು. ಅದು ತುಂಬಾ ಜನರಿರುವ ಮನೆ. ದಲಿಯ ಜಾತಿಗೆ ಸೇರಿದವರಿಗೆ ನಿಶ್ಚಿತವಾದ ಕೆಲಸವೂ ಇಲ್ಲ, ಸಂಪಾದನೆಯಿಲ್ಲ, ಭೂಮಿಯಂತೂ ಕನಸಿನ ಮಾತೆ. ಅಲ್ಲಿ ದಿನವೆಲ್ಲ ಹಸಿವಿನದೇ ದರಬಾರು. ಎಲ್ಲಿ, ಏನು ಸಿಕ್ಕಿದರೂ ತಿಂದುಬಿಡು ಎನುವ ಹಸಿವೆ ಸದಾ ಬಾಯಿತೆರೆದೇ ಇರುತ್ತಿತ್ತು. ಆದರೆ ಮಗು ‘ಪರಲಾದ’ ಅವ್ವ ಹಾಕಿದ ಮಾಲೆಗೆ ಸದಾ ಬದ್ಧ.
ಅತಿಂತದ್ದನ್ನೆಲ್ಲ ತಿನ್ನುವವನಲ್ಲ. ತಿನ್ನುವಂಥದ್ದನ್ನು ಮಾಡಿಕೊಡುವ ಅನುಕೂಲತೆಯೂ ಅಕ್ಕನ ಮನೆಯಲ್ಲಿಲ್ಲ. ಹೆಚ್ಚಿನ ದಿನಗಳಲ್ಲೆಲ್ಲಾ ಚೂರು ಒಣರೊಟ್ಟಿ, ಈರುಳ್ಳಿ ಮತ್ತು ನೀರೇ ಅವರ ಆಹಾರ. ಅಕ್ಕನಿಗೆ ಅವಳ ಸಂಸಾರವೇ ಹೆಣಭಾರ. ಜೊತೆಗೆ ಇವನೊಂದು ಭಾರ. ಒಡಲ ಬೇಗೆ ಮಾತಾಗಿ ಹೊರಬಂದಾಗೆಲ್ಲ ಅವಳು ಹೇಳುತ್ತಿದ್ದುದು, “ಉಂಡ್ಗಿ ಮಗನ, ಅವ್ವ-ಅಪ್ಪನ್ನ ನುಂಗಿಕುಂತಿ, ಈಗ ನನ್ನ ನುಂಗು.”
ಇವೆಲ್ಲದರ ನಡುವೆ ‘ಪರಲಾದ’ನೆಂಬ ಪುಟ್ಟ ಹುಡುಗನ ವಿವೇಕ ಇಡಿಯ ಕಥನನುದ್ದದ್ದಕ್ಕೂ ಗಮನ ಸೆಳೆಯುತ್ತದೆ. ಮನುಷ್ಯ ಮಾತ್ರದವರು ಇಂತೆಲ್ಲ ಬವಣೆಗಳನ್ನು ಎದುರಿಸಲು ಸಾಧ್ಯವೇ? ಎಂಬ ಸನ್ನಿವೇಶದಲ್ಲೂ ಅವರು ತಣ್ಣಗೆ ‘ನನ್ನ ರೂಪಿಸಾಕ ಹಿಂಗೆಲ್ಲ ನಡೀತು’ ಎಂದು ಬರೆದುಬಿಡುತ್ತಾರೆ. ಒಂದು ದಿನವೂ ಎಲ್ಲ ಮಕ್ಕಳೊಂದಿಗೆ ಆಡದೇ ಅಕ್ಕನ ಮನೆಗೆ ಹೊರೆಯಾಗಿರಬಾರದೆಂದು ಕಂಡ, ಕಂಡ ಕೆಲಸಗಳನ್ನು ಅದೆಷ್ಟು ಕಠಿಣವಾಗಿದ್ದರೂ ಸರಿಯೆ ಮಾಡುತ್ತ ತಿರುಗುವ ಪುಟ್ಟ ಪರಲಾದನ ಚಿತ್ರ ಕಣ್ಣಲ್ಲಿ ನೀರಾಡುವಂತೆ ಮಾಡುತ್ತದೆ. ಒಂದು ರೊಟ್ಟಿಯ ತುಣುಕಿಗಾಗಿ ಅವರು ಸತ್ತು ಕೊಳೆತ ನಾಯಿಯನ್ನು ಊರಾಚೆಗೆ ಎಳೆದುಹಾಕಿ ಪಾಟೀಲರ ಮನೆಯೆದುರು ದೈನೇಸಿಯಾಗಿ ನಿಲ್ಲುತ್ತಾರೆ. ಆದರೆ ರೊಟ್ಟಿಯ ನಸೀಬು ಅವರಿಗೆ ದಕ್ಕುವುದಿಲ್ಲ. ಸತ್ತ ಪ್ರಾಣಿಗಳನ್ನು ಪಾಲುಮಾಡುವಲ್ಲಿ ಹೋಗಿ ಅಂಜುತ್ತಲೇ ಕಾಯುತ್ತಾರೆ, ಆದರೆ ಅವರದನ್ನು ತಿನ್ನುವಂತಿಲ್ಲ. ನಾಯಿಯ ಬಾಯಿಯಲ್ಲಿರುವ ಒಂದು ಮಾಂಸದ ತುಣುಕಿಗಾಗಿ ಅದರೊಂದಿಗೆ ಕಾದಾಡಲು ಹೋಗಿ ಮೈ ಪೂರ ಕಚ್ಚಿಸಿಕೊಳ್ಳುತ್ತಾರೆ.
ಗಾಯ ಮಾಗಲು ಬೇಸಿಗೆಯೇ ಬರಬೇಕಾಗುತ್ತದೆ. ಬೀದಿಯ ಮಣ್ಣನ್ನು ಗೋಳೆಮಾಡುವುದು, ಕಂಡವರ ಮನೆಯ ಸಗಣಿ ಗೋರುವುದು, ಕಾಡಿನಲ್ಲಿ ಸಿಗುವ ಥರಾವರಿ ಉತ್ಪನ್ನಗಳನ್ನು ತಂದು ಮಾರುವುದು, ತೋಟದಲ್ಲಿ ಸಂಬಳವಿಲ್ಲದೇ ದುಡಿಯುವುದು, ಶಾಲೆಯ ಊಟದ ಬಿಡುವಿನಲ್ಲಿ ಪಕ್ಕದ ಹೊಲದಲ್ಲಿ ಬಿದ್ದಿರುವ ಶೇಂಗಾ ಆರಿಸಿ ತಿನ್ನುವುದು, ಅದೂ ಸಿಗದ ದಿನ ಹಸಿವೆಯ ಶಮನಕ್ಕೆ ಹಂಚಿನ ಚೂರನ್ನೋ, ಕಲ್ಲಿನ ಚಿಪ್ಪನ್ನೋ ಅಗಿದು ನುಂಗಿ ನೀರು ಕುಡಿಯುವುದು.. ಒಡಲುಗೊಂಡ ತಪ್ಪಿಗೆ ಎಷ್ಟೆಲ್ಲ ಪಾಡು! ಹಸಿವೆಯ ಲೋಕ ಹೀಗೆಲ್ಲ ಇರುವುದೆ?
ಊರಲ್ಲೊಂದು ಶಾಲೆಯಿರುವ ಕಾರಣಕ್ಕೆ ಶಾಲೆಗೆ ದಾಖಲಾಗುವ ‘ಪರಲಾದ’ ಪೆನ್ನು, ಪೇಪರು, ಪಾಟಿ ಇಲ್ಲದೆಯೂ ಎಲ್ಲ ತರಗತಿಗಳಲ್ಲಿ ಪಾಸಾಗುವಷ್ಟು ಬುದ್ಧಿವಂತ. ಸದಾ ಕಾಡುವ ಒಡಲ ಚಿಂತೆ, ಅಕ್ಕನ ಮನೆಯ ಬಡತನದ ಬವಣೆಯನ್ನು ಹೊದ್ದುಕೊಂಡೂ ಅವನೊಳಗಿರುವ ಕಲಿಕೆಯ ಹಸಿವು ಇಂಗುವುದಿಲ್ಲ. ಆಗೆಲ್ಲ ರಜೆಯಲ್ಲಿ ಮಕ್ಕಳಿಂದ ದಿನಚರಿ ಬರೆಸುವ ರೂಢಿಯಿತ್ತು. ‘ಪರಲಾದ’ ಬರೆದ ದಿನಚರಿಯನ್ನು ಓದಿದ ಗುರುಗಳಿಗೆ ಅದೇನಾಗಿರಬಹುದು? ಅವರ ಮನೆಯ ತಂಗಳು ರೊಟ್ಟಿ ಎಷ್ಟೋ ದಿನ ಅವನನ್ನು ಸಲಹಿತು. ಯಾರಿಗೂ ಎದುರಾಡದೇ ತಗ್ಗಿಬಗ್ಗಿ ನಡೆಯಬೇಕಾದ ಅನಿವಾರ್ಯತೆಯನ್ನು ಬದುಕು ಕಲಿಸಿತ್ತು. ಅದು ಎಲ್ಲರೂ ಅವನನ್ನು ಹತ್ತಿರ ಬಿಟ್ಟುಕೊಳ್ಳುವಂತೆ ಮಾಡುತ್ತಿತ್ತು.
ಸೋನಕಾಂಬಳೆ ಎಲ್ಲೂ ಭಾಷಣ ಬಿಗಿಯುವುದಿಲ್ಲ. ಪ್ರಸಂಗದ ದಟ್ಟ ಚಿತ್ರಣ ನೀಡುವುದಿಲ್ಲ. ನಾಟ್ಯ ನಿರ್ಮಾಣ ಮಾಡುವುದಿಲ್ಲ. ನಾಟ್ಯದ ರಸಾತ್ಮಕ, ಸ್ಫೋಟಕವಾದ ಹಲವು ಘಟನೆಗಳು ಅವರ ಮಾತಿನಲ್ಲಿ ಸುಳಿದು ಹೋಗುತ್ತದೆ.
ಅದು ಎಷ್ಟು ಹತ್ತಿರ? ಅವರಲ್ಲಿರುವ ಹರಿದ ಅಂಗಿಯನ್ನು ಕೊಡುವಷ್ಟು, ಹಳಸಿದ ತಂಗಳನ್ನು ಮೋರಿಯ ಬದಿಯಲ್ಲಿ ಬಡಿಸುವಷ್ಟು, ಶಾಲೆ ಬಿಟ್ಟು ಅಲೆಯುತ್ತಿದ್ದವನನ್ನು ಶಾಲೆಗೆ ಕರೆತರುವಷ್ಟು. ಇದರ ನಡುವೆಯೆಲ್ಲೋ ತನ್ನ ಹಣ್ಣಿನ ತೋಟದಲ್ಲಿ ದಿನವಿಡೀ ದುಡಿಯುವ ಪರಲಾದನಿಗೆ ಭೀಮರಾವ ಬಾಪೂ ಪಾಟೀಲ, “ಪರಲೂ ಮಹಾರಾಜ, ತ್ವಾಟ ನಿಂದ ಐತಿ. ಒಂದೆರಡು ಹಣ್ಣು ತಿನ್ನೋ ಮಾರಾಯ. ರೊಕ್ಕಾ ಗಳಿಸಿ ಏನು ಮಾಡೋದು, ನೀನೂ ಮನಶ್ಯಾ” ಎಂದದ್ದೂ ನಡೆದಿತ್ತು. ನೀನೂ ಮನಶಾ ಅಂದದನ್ನು ಪ್ರೀತಿಯಿಂದ ದಾಖಲಿಸಿದರೂ, ಪಾಟೀಲರ ಮಕ್ಕಳ ಬಾಯಿಗೆ ಅಂಜಿದ ಪರಲಾದ ಒಂದು ಹಣ್ಣನ್ನೂ ತಿಂದದ್ದು ಕಾಣೆ.
ಪರಲಾದನಿಗೆ ಇನ್ನೊಂದು ಅಕ್ಕ ಇದ್ದಳಾದರೂ ಅವಳ ಗಂಡ ಸಾಕ್ಷಾತ್ ಯಮಸ್ವರೂಪಿ! ಅವನಿಗಂಜಿ ಅವಳ ಊರಿಗೆ ಹೋದರೂ ಈ ಹುಡುಗ ಮನೆಯವರೆಗೆ ಹೋಗಲಾರ. ಊರ ಮುಂದಿನ ಗುಡಿಯಲ್ಲಿಯೇ ಕುಳಿತು, ಮಲಗಿ ಕಾಲ ಕಳೆಯುವ ಇವನನ್ನು ಕಂಡು ಮಂದಿ ಅಕ್ಕನಿಗೆ ಸುದ್ದಿ ಮುಟ್ಟಿಸಬೇಕು. ಅವಳು ಬಂದು ಸಮಯ ನೋಡಿ ಮನೆಗೆ ಕರಕೊಂಡು ಹೋಗಿ ಬಡಿಸಬೇಕು. ಇಷ್ಟೆಲ್ಲ ಬವಣೆಯ ನಡುವೆಯೂ ಮಂದಿ ಕೂಡಿಸಿಕೊಟ್ಟ ಚಂದಾ ಹಣದಲ್ಲಿ ಉದರ್‍ಗೆ ಹೋಗಿ ಪರೀಕ್ಷೆ ಬರೆದ ಪರಲಾದ ಮ್ಯಾಟ್ರಿಕ್ ಅನ್ನು ದ್ವಿತೀಯ ಶ್ರೇಣಿಯಲ್ಲಿ ಪಾಸಾಗುವುದರೊಂದಿಗೆ ಜೀವನ ಇನ್ನೊಂದು ಮಗ್ಗುಲಿಗೆ ಹೊರಳಿಕೊಳ್ಳುತ್ತದೆ.
ಶಿಕ್ಷಣ ಸಂಸ್ಥೆಗಳನ್ನೇ ದೇವಾಲಯವೆಂದು ನಂಬಿದ ಡಾ|ಬಾಬಾಸಾಹೇಬ್ ಅಂಬೇಡ್ಕರ್ ಅವರು ಸ್ಥಾಪಿಸಿದ ಔರಂಗಾಬಾದಿನ ಮಿಲಿಂದ ವಿಶ್ವವಿದ್ಯಾಲಯ ಸೋನಕಾಂಬಳೆಯವರನ್ನು ತನ್ನ ಮಡಿಲಿಗೆ ಕರೆದುಕೊಳ್ಳುತ್ತದೆ. ಮೊದಲ ಬಾರಿಗೆ ತೆಗೆದುಕೊಂಡ ಎರಡು ರೂಪಾಯಿಯ ಚಪ್ಪಲಿಯಲ್ಲಿ ಇದ್ದ 25+26=51 ಮೊಳೆಗಳು ಚುಚ್ಚಿದ ಗಾಯದ ಗುರುತುಗಳು ಕಾಲೇಜು ಮೆಟ್ಟಿಲು ಹತ್ತಿದ ಕುರುಹಾಗಿ ಕಾಲಿನಲ್ಲಿ ಉಳಿದುಕೊಳ್ಳುತ್ತವೆ. ಅಲ್ಲಿಯ ಬೋರ್ಡಿಂಗ್‌ನಲ್ಲಿ ಊಟದ ವ್ಯವಸ್ಥೆಯಿತ್ತು ಎಂಬುದನ್ನು ಓದುವಾಗ ಒಂದು ನಿಟ್ಟುಸಿರು ಓದುಗನಿಂದಲೂ ಹೊರಬರುತ್ತದೆ!
ತೀರ ಗ್ರಾಮೀಣ ಪ್ರದೇಶದ ನಮ್ಮೂರಿನಲ್ಲಿ ಮೇಲ್ಜಾತಿಯವರ ಸಮಾರಂಭಗಳಲ್ಲಿ ಅವರು ಎಸೆಯುವ ಎಲೆಗಳಿಂದ ಅನ್ನವನ್ನು ಕೆಲವರು ಸಂಗ್ರಹಿಸುತ್ತಿದ್ದರು ಎಂಬುದನ್ನು ನೋಡಿರದಿದ್ದರೂ ಕೇಳಿದ್ದೆ. ಅವರು ಆ ಅನ್ನವನ್ನು ಹೊಳೆಯ ನೀರಿನಲ್ಲಿ ತೊಳೆದು ಮತ್ತೆ ಬಿಸಿಲಿನಲ್ಲಿ ಒಣಗಿಸುವರೆಂತಲೂ, ಆಗ ಅನ್ನ ಮತ್ತೆ ಅಕ್ಕಿಯಾಗುತ್ತದೆಯಾಗಿ ಅದನ್ನು ವರ್ಷಪೂರ್ತಿ ಬಳಸುತ್ತಿದ್ದರೆಂದು ಅಮ್ಮ ಹೇಳುತ್ತಿದ್ದರು. ಊಟ ಮಾಡುವ ಮೊದಲೇ ಗೋವಿಗೆಂದು ಗ್ರಾಸ ತೆಗೆದಿಡುವ ನಾಡಿನಲ್ಲಿ ಸಹಜೀವಿ ಮನುಷ್ಯರ ಹಸಿವು ಅದೆಷ್ಟೋ ವರ್ಷಗಳ ಕಾಲ ಸವರ್ಣೀಯರನ್ನು ತಟ್ಟದೇ ಇರುವುದು ವೈರುಧ್ಯವೆನಿಸುತ್ತದೆ. ಇದನ್ನೇ ಸೋನುಕಾಂಬಳೆಯವರು ತಮ್ಮ ಮೊದಲ ಮಾತಿನಲ್ಲಿ ಹೀಗೆ ಹೇಳುತ್ತಾರೆ,
“ಪ್ರತಿಯೊಂದು ಜೀವ ಬೆಳೆಯಲು ನೀರು-ಕರಿನೆಲ, ಗಾಳಿ-ಬೆಳಕು ಬೇಕು. ಇದೇ ಆಶಯ ಹೊತ್ತು ಜಗತ್ತು ಮುಂದೆ ಬಂದಿದೆ. ಭಾರತವನ್ನು ‘ಸುಜಲಾಂ, ಸುಫಲಾಂ’ ಎಂದೂ, ಸಂಸ್ಕೃತಿಯ ತವರೂರು ಎಂದು ಕೊಂಡಾಡಲಾಗಿದೆ. ಆದರೆ ವೈಚಾರಿಕವಾಗಿ ನಾವು ಅಷ್ಟೇ ಹಿಂದೆ ಉಳಿದಿದ್ದೇವೆ. ವೇದಿಕೆಯಲ್ಲಿ ಸ್ವಾತಂತ್ರ್ಯ, ಸಮತೆ, ಬಂಧುತ್ವದ ಬಗೆಗೆ ಎಷ್ಟೇ ಮಾತನಾಡಿದರೂ, ಹಳೆಯ ವಿಚಾರಗಳ ಕಡೆಗೇ ನಾವು ಸಾಗುವುದನ್ನು ಕಾಣಬಹುದು.
ಜೀವನವೆಂದರೆ ಹಲವು ಸಂಗತಿಗಳಿರುತ್ತವೆ. ಮನುಷ್ಯನಿಗೆ ಹೆಜ್ಜೆಹೆಜ್ಜೆಗೂ ಸಂಕಟಗಳೇ ಎದುರಾಗುತ್ತವೆ. ಹೀಗಾಗಿ ಅವನು ಸಂಕಟದಿಂದ ಹೊರಬೀಳುವ ಮತ್ತು ಸುಖ ಸಮಾಧಾನದ ಬಗೆಗೇ ಯೋಚಿಸಿರುತ್ತಾನೆ. ಕೆಲವರಿಗೆ ಸುಖ ಸಮಾಧಾನ ಅನಾಯಾಸವಾಗಿ ಸಿಗುತ್ತದೆಂದು ಜನ ಹೇಳುತ್ತಾರೆ. ಆದರೆ ಯಾರಿಗೆ ಸುಖಸಮಾಧಾನ ಲಭಿಸಿದೆಯೋ, ಅದು ಅವನ ಪ್ರಯತ್ನವಾಗಿರದಿದ್ದರೂ, ಬೇರೆ ಯಾರದೋ ಪ್ರಯತ್ನವಂತೂ ಖಂಡಿತಕ್ಕೂ ಆಗಿರುತ್ತದೆ-ಎಂದು ನಾನು ನಂಬಿದವನು.”
ಈ ನಂಬಿಕೆಯ ಬೇರು ಇಲ್ಲಿನ ಕಥನನುದ್ದಕ್ಕೂ ಹರಿದಿದೆ. ಓದುವ ಅನೇಕರನ್ನು ಸ್ಫೂರ್ತಿಯ ಸೆಲೆಯಾಗಿ ಆವರಿಸುತ್ತದೆ. ಇಡಿಯ ಕಥಾನಕದಲ್ಲಿ ಬಾಲಕ ಪರಲಾದ ಮೊದಲಬಾರಿಗೆ ಮನಸ್ಸಿನಲ್ಲಿಯೇ ತನ್ನನ್ನು ಅವಮಾನಿಸಿದವರಿಗೆ ತಕ್ಕ ಶಾಸ್ತಿಯಾಯಿತೆಂದು ಅಂದುಕೊಳ್ಳುವ ಪ್ರಸಂಗವೊಂದು ಬರುತ್ತದೆ. ತನ್ನ ಗೆಳೆಯನಿಗೆ ಅವನ ಮನೆಯಿಂದ ದಿನಸಿ ಒಯ್ದು ಕೊಡುವುದಕ್ಕಾಗಿ ಆರು ಹರದಾರಿ ದೂರ ನಡೆದು ಅವರ ಮನೆಯೆದುರು ಪರಲಾದ ನಿಲ್ಲುತ್ತಾನೆ. ಆದರೆ ಅದೇ ಸಮಯಕ್ಕೆ ಅವರ ಮನೆಯ ಹೆಣ್ಣು ಮಗಳೊಬ್ಬಳು ಗಂಡನ ಮನೆಗೆ ಹೊರಟು ನಿಂತಿರುತ್ತಾಳೆ. ಶುಭವೇಳೆಯಲ್ಲಿ ಹೊಲೆಯ ಎದುರು ಬಂದನೆಂದು ಇವನನ್ನು ಬಾಯಿಗೆ ಬಂದಂತೆ ಬಯ್ದು ಮಗಳಿಗೆ ಹಾನ ನಿವಾಳಿಸಿ ಮತ್ತೆ ಕಳಿಸುತ್ತಾರೆ. ಬದಿಯಲ್ಲಿ ನಿಂತು ಇದನ್ನೆಲ್ಲ ನೋಡುತ್ತಿದ್ದ ಪರಲಾದನಿಗೆ ಬಹಳ ಕೆಟ್ಟ ಅನಿಸುತ್ತದೆ. ಅಚಾನಕ್ಕಾಗಿ ಆ ದಿನ ಜೋರು ಮಳೆಬಂದು ಹೊಳೆದಾಟಲಾಗದೇ ಅದ್ದಿಮುದ್ದೆಯಾಗಿ ಅವಳು ಮರಳಿ ಬಂದಾಗ ಕೊನಿಗೂ ಈ ಭಟ್ಟನ ಸೊಕ್ಕಾದರೂ ಮುರಿತಲ್ಲ ಅಂತ ಒಂದುಕ್ಷಣ ಸಮಾಧಾನಪಡುತ್ತಾರೆ. ಮರುಕ್ಷಣದಲ್ಲಿ ಲೇಖಕರು ಆ ಹುಡುಗಿದೇನೂ ತಪ್ಪಿಲ್ಲವಲ್ಲ, ತಪ್ಪೆಲ್ಲ ಬರುಸು ಹಿಡಿದ ಸಂಸ್ಕಾರ ಮತ್ತು ಸಂಸ್ಕೃತಿದು ಎಂದುಕೊಳ್ಳುತ್ತಾರೆ.
ಕೊಳಕು ನೀರಲ್ಲಿ ಮೀಯುವುದು, ಧರಿಸಿದ ಬಟ್ಟೆಯನ್ನೇ ಅನಿವಾರ್ಯವಾಗಿ ಧರಿಸುವುದರಿಂದ ಮೈಮೇಲೆಲ್ಲಾ ಕಜ್ಜಿಯಾಗಿ ಪಡಿಪಾಟಲುಪಡುವ ಘಟನೆಯೊಂದು ಇಲ್ಲಿ ದಾಖಲಾಗಿದೆ. ಈ ಘಟನೆ ಹಳ್ಳಿಯ ಅಶುದ್ಧತೆಯಿಂದಾಗಿ ಮೈಯ್ಯಿಡೀ ಕಜ್ಜಿ ತುಂಬಿಸಿಕೊಂಡು ಕಳೆದ ನಮ್ಮೆಲ್ಲರ ಬಾಲ್ಯವನ್ನು ಮತ್ತೆ ಕಣ್ಣೆದುರು ತಂದು ನಿಲ್ಲಿಸಿತು. ಕಜ್ಜಿಯಾಗದೇ ಮಕ್ಕಳು ಬೆಳೆಯುವುದೇ ಇಲ್ಲವೆಂದು ಹಳ್ಳಿಯ ಜನರು ಗಾಢವಾಗಿ ನಂಬಿದ್ದರು. ಇಲ್ಲಿ ಹಾಸ್ಟೆಲ್‌ನಲ್ಲಿ ಕಜ್ಜಿಯ ಕಾರಣದಿಂದ ತೀರ ಬಳಲುವ ಬಾಲಕರಿಬ್ಬರು ಕಜ್ಜಿಯ ಔಷಧಕ್ಕೆ ಉಪ್ಪನ್ನು ಬೆರೆಸಿಕೊಂಡು, ರಾತ್ರಿ ಹಾಸ್ಟೆಲ್‍ನಿಂದ ಬಹುದೂರ ಹೋಗಿ ಇರುವ ಏಕೈಕ ಬಟ್ಟೆಯನ್ನು ತೆಗೆದಿಟ್ಟು ಮೈಯ್ಯಿಡೀ ಹಚ್ಚಿಕೊಳ್ಳುತ್ತಾರೆ. ತಾಸುಗಟ್ಟಲೇ ಬೇಯುವ ಗಾಯದ ನೋವನ್ನು ತಡೆದುಕೊಳ್ಳುತ್ತಾರೆ. ಆಶ್ಚರ್ಯವೆಂದರೆ ಮುಂದೆಂದೂ ಕಜ್ಜಿ ಅವರನ್ನು ಬಾಧಿಸುವುದಿಲ್ಲ.
ಜೀವನದಲ್ಲಿ ತೀರ ನೊಂದ ನನ್ನ ಬಂಧುವೊಬ್ಬರು ಯಾವಾಗಲೂ ಒಂದು ಘಟನೆಯನ್ನು ಹೇಳುತ್ತಿದ್ದರು. ಎಳೆಪ್ರಾಯದಲ್ಲಿ ಗಂಡ ಮರಹತ್ತಲು ಹೋಗಿ, ಬಿದ್ದು ಸೊಂಟದ ಕೆಳಗಿನ ಚಲನೆಯನ್ನೇ ಕಳಕೊಂಡು ಹಾಸಿಗೆಯಲ್ಲಿ ಮಲಗಿದ್ದರು. ಹರೆಯುವ, ನಡೆಯುವ ಪ್ರಾಯದ ಮಕ್ಕಳಿಬ್ಬರು ಜೊತೆಗಿದ್ದರು. ದಾರಿಯೂ ಸರಿಯಿಲ್ಲದ ಕಾಡಿನ ಊರದು. ಇದ್ದಕ್ಕಿದ್ದಂತೆ ಇರುವ ಕಷ್ಟ ಸಾಲದು ಎಂಬಂತೆ ಅವರಿಗೆ ಕ್ರಿಮಿಹುಳಗಳ ಬಾಧೆ ಹತ್ತಿಕೊಂಡಿತಂತೆ. ಸಂಜೆಯಾದರೆ ಸಾಕು, ಕುಂಡೆಯಿಂದ ಕೈ ತೆಗೆಯದಷ್ಟು ತುರಿಕೆ. ರಾತ್ರಿಯಿಡೀ ನಿದ್ದೆ ಮಾಡದಷ್ಟು ಕಿರಿಕಿರಿ. ಗಂಡನ್ನನ್ನು ಮಕ್ಕಳನ್ನು ಬಿಟ್ಟು ದೂರದ ಆಸ್ಪತ್ರೆಗೆ ಹೋಗಿ ಔಷಧ ತರುವುದಂತೂ ಆಗದ ಮಾತು. ಅವರಿವರಲ್ಲಿ ಹೇಳಿಕೊಳ್ಳುವ ಖಾಯಿಲೆಯೂ ಅಲ್ಲ. ಕಹಿ, ಕಷಾಯ ಯಾವುದಕ್ಕೂ ಬಗ್ಗದೇ ತಿಂಗಳುಗಟ್ಟಲೆ ಕಾಡಿದಾಗ ಒಂದು ದಿನ ತೋಟದಲ್ಲಿರುವ ಚೂರುಮೆಣಸಿನ (ಅತಿಖಾರವಿರುವ ಮೆಣಸು) ಹಣ್ಣನ್ನು ತಂದು ಕೆರೆಯುವ ಕುಂಡೆಗೆ ನುರಿದುಬಿಟ್ಟರಂತೆ. ಭೂಮಿ ಬಾಯ್ತೆರೆಯುವಂತೆ ನೋವಾದರೂ ತಡಕೊಂಡು ಸೆರಗುಕಚ್ಚಿ ಮಲಗಿದರಂತೆ. ಅಂದಿನಿಂದ ಕ್ರಿಮಿಯ ಹೆಸರೂ ಹತ್ತಿರ ಸುಳಿಯಲಿಲ್ಲ ಎನ್ನುತ್ತಿದ್ದರು! ವಿಜ್ಞಾನದ ಸತ್ಯಗಳ ಮಾತು ಅಂತಿರಲಿ, ಸ್ತ್ರೀಯರ ಮತ್ತು ದಲಿತರ ಜೀವನದ ಘಟನೆಗಳು ತಾಳೆಯಾಗುವುದು ಏನನ್ನು ಸೂಚಿಸುತ್ತದೆ?
ಇಷ್ಟೆಲ್ಲ ಗಾಯಗಳ ನಡುವೆಯೂ ಸೋನಕಾಂಬಳೆಯವರು ಮಾಯದ ಗಾಯವೆಂದು ಗುರುತಿಸುವುದು ತನ್ನ ಗುರು, ಮಾರ್ಗದರ್ಶಕರಾದ ಮಾನಖಡೆಯವರ ಅನಿರೀಕ್ಷಿತ ಸಾವನ್ನು ಮಾತ್ರ. ಉಳಿದೆಲ್ಲವೂ ನನ್ನ ರೂಪಿಸಲೆಂದೇ ನಡೆದ ಘಟನಾವಳಿಗಳು ಎಂಬಂತೆ ತಣ್ಣಗೆ ಹೇಳುತ್ತಾ ಹೋಗುತ್ತಾರೆ. ಅಂಗಳದ ಒಳಗೂ ಬಿಟ್ಟುಕೊಳ್ಳದ ಜನರ ನಡುವೆ ಮನೆಯೊಳಗೆ, ಮನದೊಳಗೆ ತಮ್ಮನ್ನು ಬಿಟ್ಟುಕೊಂಡುದಲ್ಲದೇ ಒಂದೇ ತಟ್ಟೆಯಲ್ಲಿ ತನ್ನೊಂದಿಗೆ ಊಟವನ್ನು ಹಂಚಿಕೊಂಡ ಅವರ ಮಾನಖಡೆಯವರ ಮಾನವ ಕರುಣೆಯನ್ನು ಲೇಖಕರು ಆರ್ದೃವಾಗಿ ನೆನಪಿಸಿಕೊಂಡಿದ್ದಾರೆ. ಯಾವ ಅಜೆಂಡಾಗಳ ಹಂಗಿಲ್ಲದೇ ನಿರೂಪಿಸಲ್ಪಟ್ಟ ಸೋನಕಾಂಬಳೆಯವರ ‘ನೆನಪಿನ ಹಕ್ಕಿ’ ಮರಾಠಿ ಸಾಹಿತ್ಯದಲ್ಲಿಯೇ ಹೊಸಬಗೆಯ ಕೃತಿ ಎಂದು ವಿಮರ್ಶಕರಾದ ಡಾ|ಜಿ. ಎಸ್. ಅಮೂರ ಅವರು ಗುರುತಿಸುತ್ತಾರೆ.
ಆರಂಭದಲ್ಲಿ ಎತ್ತಿದ ಪ್ರಶ್ನೆಗಳಿಗೆ ಈಗ ಉತ್ತರಗಳು ನಿಚ್ಚಳವಾಗತ್ತ ಹೋಗುತ್ತವೆ. ಜಾತಿ, ಮತ, ಧರ್ಮಗಳಿಗನುಸಾರವಾದ ಶಾಲೆಗಳಲ್ಲಿ, ಓಣಿಗಳಲ್ಲಿ, ಸಮೂಹಗಳಲ್ಲಿ ಬೆಳೆಯುತ್ತಿರುವ ಇಂದಿನ ಮಕ್ಕಳಿಗೆ ಉಳಿದೆಲ್ಲವೂ ಅನ್ಯವಾಗುತ್ತಲೇ ಸಾಗಿದೆ. ಹೀಗೆ ದ್ವೀಪದಲ್ಲಿ ಬೆಳೆದ ಜನಾಂಗ ಇನ್ನೊಬ್ಬರನ್ನು ಎಗ್ಗಿಲ್ಲದೇ ಟೀಕಿಸುತ್ತಲೇ ಹೋಗುತ್ತದೆ. ಊರಿನ ಎಲ್ಲ ಮಕ್ಕಳೊಂದಾಗಿ ಕಲೆಯದ ಪರಿಸರದಿಂದ ಸಹಿಷ್ಣುತೆಯನ್ನು, ಸಮಾನತೆಯನ್ನು ನಿರೀಕ್ಷಿಸುವಂತೆಯೇ ಇಲ್ಲ. ಇಂತಹ ಕಥನಗಳು ನಾವು ನೋಡಿರದ ಇನ್ನೊಂದು ಜಗತ್ತಿನ ದರ್ಶನವನ್ನು ಮಾಡಿಸುತ್ತವೆ. ಓದುವಷ್ಟು ಗಳಿಗೆ ಅಲ್ಲಿ ಜೀವಿಸಿ ಬರುವ ಓದುಗ ತನ್ನೊಳಗೊಂದಿಷ್ಟು ವಿವೇಕವನ್ನು ಮೂಡಿಸಿಕೊಳ್ಳಬಲ್ಲ. ತನ್ನ ಸಹಜೀವಿಯ ಲೋಕವನ್ನು ಅರಿಯಲು, ಅಕ್ಷರದ ದಾರಿ ತೆರೆದಿಡುವ ಬಿಡುಗಡೆಯನ್ನು ಅರ್ಥಮಾಡಿಕೊಳ್ಳಲು ಇಂತಹ ಕೃತಿಗಳ ಓದು ಅಗತ್ಯವಾಗಿದೆ.
(ಕೃತಿ: ನೆನಪಿನ ಹಕ್ಕಿ(ಮರಾಠವಾಡಾದ ದಲಿತನ ಆತ್ಮಕಥನ) ಮರಾಠಿ ಮೂಲ: ಪ್ರ. ಈ. ಸೋನಕಾಂಬಳೆ, ಕನ್ನಡಕ್ಕೆ: ಚಂದ್ರಕಾಂತ ಪೋಕಳೆ, ಪ್ರಕಾಶನ: ಲಡಾಯಿ ಪ್ರಕಾಶನ, ಬೆಲೆ: 140/- ರೂ)
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.