“ಕೈನೆಟಿಕ್ ಹೋಂಡದ ಮೇಲಿದ್ದ ನನ್ನ ಮನಸ್ಸಿನಲ್ಲಿ ಮಾತ್ರ ಚೊಚ್ಚಲ ಮಗುವಿನ ಸುಂದರ ಕನಸು. ಹೆರಿಗೆಯ ದಿನಕ್ಕೆ ಹತ್ತು ದಿನಗಳಿದ್ದವು. ಸ್ವಂತ ಉದ್ಯೋಗದಲ್ಲಿದ್ದ ನಾನು ಆಗಲೇ ಕೆಲಸ ನಿಲ್ಲಿಸಿದ್ದೆ. ಕೆಲಸ ಮಾಡಲು ಸಹಾಯಕನನ್ನು ನೇಮಿಸಿಕೊಂಡಿದ್ದೆ. ಅವತ್ತು ಆ ಸಹಾಯಕ ನನಗೆ ಫೋನಾಯಿಸಿದ್ದ. ತನಗೆ ತಿಳಿಯದ ವಿಚಾರವೊಂದಕ್ಕೆ ಸಹಾಯ ಕೋರಿದ್ದ. ಅದಕ್ಕಾಗಿ ಹೊರಟ ನನ್ನಲ್ಲಿ ತುಂಬಿದ್ದೆಲ್ಲ ಭವಿಷ್ಯದ ಹೊಂಗನಸು. ಕೆಂಪು ದೀಪ ಹಸಿರಾಯ್ತು. ಕೈನೆಟಿಕ್ ಮುಂದೆ ಚಲಿಸಿತು. ಹಿಂದಿನಿಂದ ರಭಸ ತುಂಬಿದ ಸದ್ದೊಂದು ನನ್ನನ್ನು ಗುದ್ದಿ ನೆಲಕ್ಕೆ ಕೆಡವಿತ್ತು!!
ಡಾ.ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ.

 

ಇದೇ ಏಪ್ರಿಲ್ 18 ರಂದು ನಿಗದಿತ ಮಟ್ಟಕ್ಕಿಂತ ಹೆಚ್ಚು ಮದ್ಯ ಕುಡಿದು ಕಾರು ಚಲಾಯಿಸಿದ ವ್ಯಕ್ತಿಯೋರ್ವನಿಗೆ ಸರ್ಕಾರ ಇಡೀ ಯು. ಕೆ. ಯಲ್ಲೇ ಇದುವರೆಗಿನ ದಾಖಲೆ ಎನ್ನಬಹುದಾದ £86,000 ಪೌಂಡುಗಳ ಅತ್ಯಧಿಕ ಮೊತ್ತದ ದಂಡ ವಿಧಿಸಿತು. 20 ತಿಂಗಳ ಕಾಲ ಆತನ ಡ್ರೈವಿಂಗ್ ಲೈಸನ್ಸ್ ನ್ನು ರದ್ದು ಮಾಡಿತು!! ಈ ವ್ಯಕ್ತಿಗೆ ಒಂದು ಟಿ. ವಿ. ಶೋ ನಡೆಸಲು ವಾರಕ್ಕೆ £130,000 ಪೌಂಡುಗಳ ದುಡಿಮೆಯಿತ್ತು. ಒಂದು ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೋರ್ವ ತನ್ನ ಕರ್ತವ್ಯ, ಘನತೆ, ಎಲ್ಲ ಜನರ ಪ್ರೀತಿಗೆ ಕುಂದು ತರುವಂತ ನೀಚ ನಡವಳಿಕೆ ತೋರಿದನೆಂದು ನ್ಯಾಯಾಲಯ ಇವನಿಗೆ ಛೀಮಾರಿ ಹಾಕಿತು. ಆತ ಸಾರ್ವಜನಿಕರ ಎದುರಿಗೆ ಅಪಘಾತದಿಂದ ನೊಂದ ವ್ಯಕ್ತಿಗಳಿಗೆ, ತನ್ನನ್ನು ಪ್ರೀತಿಸುವ ಜನರಿಗೆ ಕ್ಷಮಾಪಣೆ ಕೋರಿದ.

ಇದೇ ವರ್ಷ ಮಾರ್ಚ್ 8 ಭಾನುವಾರದಂದು ‘ಆಂಟ್’(Ant McPartlin) ಎಂದೇ ಖ್ಯಾತನಾದ ಇಂಗ್ಲೆಂಡಿನ ಮಲ್ಟಿ ಮಿಲಿಯನೇರ್ ಟಿ.ವಿ. ಪ್ರೆಸೆಂಟರ್ ಲಂಡನ್ನಿನ ರಸ್ತೆಯಲ್ಲಿ ಕುಡಿದು ಕಾರು ಚಲಾಯಿಸಿ ಅಪಘಾತ ನಡೆಸಿದ. ಇವನ ಕಾರೂ ಸೇರಿದಂತೆ ಮೂರು ಕಾರುಗಳು ಈ ಅಪಘಾತದಲ್ಲಿ ಸಿಲುಕಿದ್ದವು. ಆತನನ್ನು ಪೋಲೀಸರು ಸ್ಥಳದಲ್ಲೇ ಬಂಧಿಸಿದರು. ಬುಧವಾರದ ವೇಳೆಗೆ ಪೋಲಿಸರು ಆತ ಕಾರು ನಡೆಸುವಾಗ ಮದ್ಯ ಕುಡಿದಿದ್ದನೆಂದು ಆತನ ವಿರುದ್ಧ ಕೇಸನ್ನು ದಾಖಲಿಸಿದ್ದರು. ಆತನ ಉಸಿರಿನಲ್ಲಿ ಲೀಗಲ್ ಲಿಮಿಟ್ಟಿಗಿಂತ ದುಪ್ಪಟ್ಟು ಮದ್ಯದ ಅಂಶವಿತ್ತಂತೆ. ಈ ಅಪಘಾತದಲ್ಲಿ ಯಾರಿಗೂ ಪ್ರಾಣಹಾನಿಯಾಗಲಿಲ್ಲ; ಶಿಲ್ಪಾ ಎಂಬ ರೆಸ್ಟೋರಾಂಟಿನ ಒಡತಿಯೊಬ್ಬರಿಗೆ ಅಲ್ಪ ಮಟ್ಟಿನ ಅಂದರೆ ಮೇಲ್ದುಟಿಯ ಗಾಯವಾಗಿತ್ತಷ್ಟೇ. ಆದರೂ ಮೂರು ಕಾರುಗಳು ಈತನ ಮದ್ಯದ ವ್ಯಸನದ ಕಾರಣಕ್ಕೆ ಅಪಘಾತಕ್ಕೆ ತುತ್ತಾದವು.

ಇಂತಹ ವಿಚಾರಗಳು ಸಿಕ್ಕರೆ ಇಂಗ್ಲೆಂಡಿನ ಮಾಧ್ಯಮದವರು, ಜನರು ಎಂತಹ ದೊಡ್ಡ ಮನುಷ್ಯರಾದರೂ, ಸೆಲೆಬ್ರಿಟಿಗಳಾದರೂ, ವಶೀಲಿಯಿರುವ ರಾಜಕಾರಣಿಗಳೇ ಆದರೂ ಶಿಕ್ಷೆಯಾಗುವವರೆಗೆ ಬಿಡದೇ ಅವರನ್ನು ಜಾಲಾಡಿಬಿಡುತ್ತಾರೆ. ಒಮ್ಮೊಮ್ಮೆ ಕೆಲವು ನೈತಿಕ ಧ್ಯೇಯಗಳಿಗೆ ಇಂಗ್ಲೆಂಡಿನ ಸರ್ಕಾರ ವ್ಯಯಿಸುವ ಹಣದಲ್ಲಿ ಏನೆಲ್ಲ ಮಾಡಬಹುದು ಎನಿಸುತ್ತದೆ. ಮಾನವನ ಸಂವೇದನೆಗಳು ಇಷ್ಟೊಂದು ಸೂಕ್ಷ್ಮ ಮಟ್ಟ ತಲುಪಿರುವ ಇಂಗ್ಲೆಂಡಿನ ಸಮಾಜ ಮುಂದೆ ಇನ್ನೆಲ್ಲಿಗೆ ಹೋಗಿ ಮುಟ್ಟುವುದೋ ಎಂದು ಕುತೂಹಲವಾಗುತ್ತದೆ! ಇಂಗ್ಲೆಂಡಿನಲ್ಲಿ ಹಾಗೆಯೇ. ನೇರ ರಸ್ತೆಗಳು. ವೇಗದ ಚಾಲನೆ. ಶಿಸ್ತಿನ ರಸ್ತೆ ನಿಯಮಗಳು. ಕಾಲುನಡಿಗೆಯವರು ರಸ್ತೆ ದಾಟಲು ನಿಂತದ್ದನ್ನು ಕಂಡರೆ ಬಹುತೇಕರು ಕಾರನ್ನು ನಿಲ್ಲಿಸಿ ಕಾಲ್ನಡಿಗೆಯ ನಮ್ಮನ್ನು ರಸ್ತೆ ದಾಟಲು ಬಿಟ್ಟು, ಸುಶಿಕ್ಷಿತ ಸಮಾಜದ ಉದಾಹರಣೆಯಾಗುತ್ತಾರೆ. ಅಪಘಾತದದಲ್ಲಿ ಯಾರಿಗಾದರೂ ತೊಂದರೆಯಾದಲ್ಲಿ ತಕ್ಷಣವೇ ಉಚಿತ ವೈದ್ಯಕೀಯ ಚಿಕಿತ್ಸೆ, ಕೆಲಸಕ್ಕೆ ರಜೆ, ಮಣಗಟ್ಟಲೆ ಇನ್ಷೂರನ್ಸ್ ಹಣ ದೊರೆಯುತ್ತದೆ. ಅಪಘಾತವೆಸಗಿದ ಚಾಲಕ ಪ್ರಧಾನಿಯೇ ಆದರೂ ಆತನಿಗೆ ಶಿಕ್ಷೆಯಾಗುತ್ತದೆ. ಇಂತಹ ಅಪಘಾತದ ವಿಚಾರ ಬಂದಾಗ ನನ್ನ ಅನುಭವವೇ ಬೇರೆಯಿದ್ದ ಕಾರಣ ಮುಂದುವರೆದ ದೇಶ ಅಂದರೆ ಇದೇ ಇರಬೇಕು ಎಂದು ಮನಸ್ಸಿಗೆ ಅನ್ನಿಸಿದ್ದು ನಿಜ.

(‘ಆಂಟ್’ Ant McPartlin)

ಇಂತಹ ವಿಚಾರಗಳು ಸಿಕ್ಕರೆ ಇಂಗ್ಲೆಂಡಿನ ಮಾಧ್ಯಮದವರು, ಜನರು ಎಂತಹ ದೊಡ್ಡ ಮನುಷ್ಯರಾದರೂ, ಸೆಲೆಬ್ರಿಟಿಗಳಾದರೂ, ವಶೀಲಿಯಿರುವ ರಾಜಕಾರಣಿಗಳೇ ಆದರೂ ಶಿಕ್ಷೆಯಾಗುವವರೆಗೆ ಜಾಲಾಡಿಬಿಡುತ್ತಾರೆ. ಒಮ್ಮೊಮ್ಮೆ ಕೆಲವು ನೈತಿಕ ಧ್ಯೇಯಗಳಿಗೆ ಇಂಗ್ಲೆಂಡಿನ ಸರ್ಕಾರ ವ್ಯಯಿಸುವ ಹಣದಲ್ಲಿ ಏನೆಲ್ಲ ಮಾಡಬಹುದು ಎನಿಸುತ್ತದೆ. ಮಾನವನ ಸಂವೇದನೆಗಳು ಇಷ್ಟೊಂದು ಸೂಕ್ಷ್ಮ ಮಟ್ಟ ತಲುಪಿರುವ ಇಂಗ್ಲೆಂಡಿನ ಸಮಾಜ ಮುಂದೆ ಇನ್ನೆಲ್ಲಿಗೆ ಹೋಗಿ ಮುಟ್ಟುವುದೋ ಎಂದು ಕುತೂಹಲವಾಗುತ್ತದೆ!ಇಂಗ್ಲೆಂಡಿನಲ್ಲಿ ಹಾಗೆಯೇ. ನೇರ ರಸ್ತೆಗಳು. ವೇಗದ ಚಾಲನೆ. ಶಿಸ್ತಿನ ರಸ್ತೆ ನಿಯಮಗಳು. ಕಾಲುನಡಿಗೆಯವರು ರಸ್ತೆ ದಾಟಲು ನಿಂತದ್ದನ್ನು ಕಂಡರೆ ಬಹುತೇಕರು ಕಾರನ್ನು ನಿಲ್ಲಿಸಿ ಕಾಲ್ನಡಿಗೆಯ ನಮ್ಮನ್ನು ರಸ್ತೆ ದಾಟಲು ಬಿಟ್ಟು, ಸುಶಿಕ್ಷಿತ ಸಮಾಜದ ಉದಾಹರಣೆಯಾಗುತ್ತಾರೆ.

ಆ ಹೊತ್ತು ಟೌನ್ ಹಾಲ್ ಮುಂದಿನ ಸರ್ಕಲ್ ನಲ್ಲಿ ಸಿಗ್ನಲ್ ಕೆಂಪುದೀಪಕ್ಕೆ ತಿರುಗಿತ್ತು. ಸುತ್ತಲಿನ ರಸ್ತೆಗಳಲ್ಲಿ ಸಣ್ಣಗೆ ಗುರ್ರೆನ್ನುತ್ತ ನಿಂತ ನಾನಾ ವಾಹನಗಳು. ಬಲಕ್ಕೆ ತಿರುಗುವ ದೀಪ ಹಾಕಿಕೊಂಡು ಕೈನೆಟಿಕ್ ಹೊಂಡಾದಲ್ಲಿ ನಿಂತಿದ್ದ ನಾನು ತುಂಬು ಗರ್ಭಿಣಿ. ನನ್ನ ಹಿಂದೆ ನನಗಿಂತ ಅತೀ ಭಾರದ ಗರ್ಭ ಕಟ್ಟಿಕೊಂಡು ನಿಂತ ಲಾರಿ. ಇವೆರೆಲ್ಲರ ಜೊತೆ ಸರ್ಕಲ್ಲಿನ ಮದ್ಯೆ ಕೆಟ್ಟ ಧೂಳನ್ನು ಕುಡಿಯುತ್ತ ನಿಂತ ಪೋಲೀಸು ಪೇದೆ. ಭಾರತದ ಬಿಝಿ ರಸ್ತೆಗಳ ಒಂದು ಸಾಮಾನ್ಯ ದೃಶ್ಯವೇ ಅದು! ಅಲ್ಲಿ ಕೈನೆಟಿಕ್ ಹೋಂಡದ ಮೇಲಿದ್ದ ನನ್ನ ಮನಸ್ಸಿನಲ್ಲಿ ಮಾತ್ರ ಚೊಚ್ಚಲ ಮಗುವಿನ ಸುಂದರ ಕನಸು. ಹೆರಿಗೆಯ ದಿನಕ್ಕೆ ಹತ್ತು ದಿನಗಳಷ್ಟೇ ಉಳಿದಿದ್ದವು. ಸ್ವಂತ ಉದ್ಯೋಗದಲ್ಲಿದ್ದ ನಾನು ಆಗಲೇ ಕೆಲಸ ನಿಲ್ಲಿಸಿದ್ದೆ. ಕೆಲಸ ಮಾಡಲು ಸಹಾಯಕನನ್ನು ನೇಮಿಸಿಕೊಂಡಿದ್ದೆ. ಅವತ್ತು ಆ ಸಹಾಯಕ ನನಗೆ ಫೋನಾಯಿಸಿ, ತನಗೆ ತಿಳಿಯದ ವಿಚಾರವೊಂದಕ್ಕೆ ಸಹಾಯ ಬೇಕೆಂದು ನನ್ನನ್ನು ಕೋರಿದ್ದ. ಅದಕ್ಕಾಗಿ ಹೊರಟ ನನ್ನಲ್ಲಿ ತುಂಬಿದ್ದೆಲ್ಲ ಭವಿಷ್ಯದ ಹೊಂಗನಸು. ಕೆಂಪು ದೀಪ ಹಸಿರಾಯ್ತು. ನನ್ನ ಕೈನೆಟಿಕ್ ಮುಂದೆ ಚಲಿಸಿ ಕ್ಷಣಮಾತ್ರವಾಗಿತ್ತಷ್ಟೇ; ಹಿಂದಿನಿಂದ ದಬ್ಬನೆ ಗುದ್ದಿದ ರಭಸ ಮತ್ತು ಸದ್ದು!! ಕೈನೆಟಿಕ್ ನೆಲಕ್ಕೆ ಬೀಳುವಂತಿತ್ತಾದರೂ, ಅದನ್ನು ಬೀಳದಂತೆ ಆಧಾರಕ್ಕಾಗಿ  ಕಾಲು ಪಕ್ಕನೇ ನೆಲಕ್ಕೆ ಅಡಿಯಿಡಲು ಹೋಗಿ, ಗಾಡಿಯ ಚಕ್ರದಡಿ ಸಿಲುಕಿತ್ತು. ಅದೂ ಅಲ್ಲದೇ ನನ್ನ ಗಾಡಿಯ ಮೇಲೆ ಲಾರಿಯ ಮುಂದಿನ ಚಕ್ರವೂ ಹರಿದುಬಿಟ್ಟಿತ್ತು.

“ನಿಲ್ಸೀ…..” ಎನ್ನುವ ನನ್ನ ಆಕ್ರಂದನಕ್ಕೆ ಎಲ್ಲರ ಗಮನ ನನ್ನೆಡೆ ಹರಿಯಿತು. ಲಾರಿ ಪಟ್ಟೆಂದು ತನ್ನ ಚಕ್ರಗಳನ್ನು ಹಿಂತೆಗೆಯಿತು. ಟ್ರಾಫಿಕ್ ನಿಂತು, ಪೋಲೀಸು ಪೇದೆ ಸ್ಥಳಕ್ಕೆ ಧಾವಿಸಿದ್ದ. ನನ್ನ ಕೂಗು ಕೇಳಿ ನೆರೆದಿದ್ದ ಹಲವರು ಸೇರಿ 100 ಕೆಜಿ ಭಾರದ ಕೈನೆಟಿಕ್ ಹೋಂಡವನ್ನು ಮೇಲೆತ್ತಿದರು. ಅಷ್ಟೊತ್ತಿಗಾಗಲೇ ನುಜ್ಜು ಗುಜ್ಜಾಗಿದ್ದ ನನ್ನ ಬಲಗಾಲನ್ನು ನಾನು ಎಳೆಯುತ್ತಿದ್ದೆನಾದರೂ, ಪೆಟ್ಟಾಗಿದ್ದ ಕಾಲಿಗಿಂತ ಹೊಟ್ಟೆಯಲ್ಲಿದ್ದ ನನ್ನ ಕಂದನಿಗೇನಾದರೂ ಆಗಿರಬಹುದೇ? ಅಥವಾ ಆಗಿದಿದ್ದರೆ ಎಂಬ ಕಳವಳದಲ್ಲಿ ನನ್ನ ಕೈ ಹೊಟ್ಟೆಯನ್ನು ನೇವರಿಸುತ್ತಿತ್ತು.

ಪೋಲೀಸು ಪೇದೆ ಕರೆದ ಕಾರಣಕ್ಕೆ ಒಲ್ಲೆ ಎನ್ನಲಾಗದೆ ಬಂದು ನಿಂತ ಆಟೋದಲ್ಲಿ 300 ಅಡಿ ದೂರದಲ್ಲಿಯೇ ಇದ್ದ ಸರಕಾರೀ ಆಸ್ಪತ್ರೆಗೆ ದಾಖಲು. ಪೋಲೀಸು ಪೇದೆಯ ಕಣ್ಣು ನನ್ನ ಕೈ ಬ್ಯಾಗ್ ಮೇಲೆ. ಆಟೋದ ತಳವನ್ನೆಲ್ಲ ತೋಯಿಸಿದ್ದ ರಕ್ತಧಾರೆಗೆ ತುರ್ತಾಗಿ ಬ್ಯಾಂಡೇಜು ಚಿಕಿತ್ಸೆ. ಇತ್ತ ಮುಂದಿನ ನಿಮಿಷಗಳಲ್ಲಿ ಅದೇ ರಸ್ತೆಯಲ್ಲಿ ಟಾಟಾ ಸುಮೋದಲ್ಲಿ ಹಾದು ಹೋದ ನನ್ನ ಅಣ್ಣ, ರಸ್ತೆಯನ್ನು ತೋಯಿಸಿದ್ದ ರಕ್ತ ನೋಡಿ ಯಾರೋ ಸತ್ತಿರಬಹುದೆಂದು ಮುಂದೆ ಹೋಗಿದ್ದ! ತುರ್ತಾಗಿ ನನ್ನ ಮನೆಗೆ ಕರೆ ಹೋಯ್ತು. ಬೇರೊಂದು ಖಾಸಗಿ ಆಸ್ಪತ್ರೆಗೆ ದಾಖಲಾದೆ. ಧಾವಿಸಿ ಬಂದ ಸ್ನೇಹಿತರು ಮತ್ತು ಬಂಧುಗಳಲ್ಲಿ ಆರು ಜನರಿಂದ ರಕ್ತದಾನ. ಮೊದಲು ಮಗುವಿನ ಒಳಿತಿಗಾಗಿ ಹೆರಿಗೆಯ ತುರ್ತು ಶಸ್ತ್ರ ಚಿಕಿತ್ಸೆ. ಅದರ ಹಿಂದೆಯೇ ರಸ್ತೆಯ ಧೂಳಲ್ಲಿ ಮಿಂದಿದ್ದ ಕಾಲಿನ ಗಾಯಕ್ಕೆ ಶಸ್ತ್ರ ಚಿಕಿತ್ಸೆ. ನನಗೆ ಮಗುವಿನ ಸ್ಪರ್ಷವಿಲ್ಲ. ಮಗುವಿಗೆ ಅಮ್ಮನ ಸಾಮೀಪ್ಯವಿಲ್ಲ. ಮರುದಿನ ಫ್ಯಾಮಿಲಿ ವೈದ್ಯರು ಬಂದರು. ಕೋಣೆಯ ಬಾಗಿಲಿಗೆ ಅಗುಳಿ ಹಾಕಿದರು. ಭಾರತೀಯ ಅಭ್ಯಾಸದಂತೆ ಬ್ಯಾಡ್ ನ್ಯೂಸ್ ಬ್ರೇಕ್ ಮಾಡಿದರು. ಕಾಲಿನ ಶಸ್ತ್ರ ಚಿಕಿತ್ಸೆ ಫಲಕಾರಿಯಾಗಲಿಲ್ಲವೆಂತಲೂ, ಬಲಗಾಲನ್ನು ಕತ್ತರಿಸಿ ತೆಗೆಯಬೇಕೆಂತಲೂ ಹೇಳಿ ಧೈರ್ಯ ನೀಡಿ ಹೊರಟು ಹೋದರು.

ಸುತ್ತಲಿನ ರಸ್ತೆಗಳಲ್ಲಿ ಸಣ್ಣಗೆ ಗುರ್ರೆನ್ನುತ್ತ ನಿಂತ ನಾನಾ ವಾಹನಗಳು. ಬಲಕ್ಕೆ ತಿರುಗುವ ದೀಪ ಹಾಕಿಕೊಂಡು ಕೈನೆಟಿಕ್ ಹೊಂಡಾದಲ್ಲಿ ನಿಂತಿದ್ದ ನಾನು ತುಂಬು ಗರ್ಭಿಣಿ. ನನ್ನ ಹಿಂದೆ ನನಗಿಂತ ಅತೀ ಭಾರದ ಗರ್ಭ ಕಟ್ಟಿಕೊಂಡು ನಿಂತ ಲಾರಿ. ಇವೆರೆಲ್ಲರ ಜೊತೆ ಸರ್ಕಲ್ಲಿನ ಮದ್ಯೆ ಕೆಟ್ಟ ಧೂಳನ್ನು ಕುಡಿಯುತ್ತ ನಿಂತ ಪೋಲೀಸು ಪೇದೆ. ಭಾರತದ ಬಿಝಿ ರಸ್ತೆಗಳ ಒಂದು ಸಾಮಾನ್ಯ ದೃಶ್ಯವೇ ಅದು! ಅಲ್ಲಿ ಕೈನೆಟಿಕ್ ಹೋಂಡದ ಮೇಲಿದ್ದ ನನ್ನ ಮನಸ್ಸಿನಲ್ಲಿ ಮಾತ್ರ ಚೊಚ್ಚಲ ಮಗುವಿನ ಸುಂದರ ಕನಸು. ಹೆರಿಗೆಯ ದಿನಕ್ಕೆ ಹತ್ತು ದಿನಗಳಷ್ಟೇ ಉಳಿದಿದ್ದವು. ಸ್ವಂತ ಉದ್ಯೋಗದಲ್ಲಿದ್ದ ನಾನು ಆಗಲೇ ಕೆಲಸ ನಿಲ್ಲಿಸಿದ್ದೆ. ಕೆಲಸ ಮಾಡಲು ಸಹಾಯಕನನ್ನು ನೇಮಿಸಿಕೊಂಡಿದ್ದೆ. ಅವತ್ತು ಆ ಸಹಾಯಕ ನನಗೆ ಫೋನಾಯಿಸಿ, ತನಗೆ ತಿಳಿಯದ ವಿಚಾರವೊಂದಕ್ಕೆ ಸಹಾಯ ಬೇಕೆಂದು ನನ್ನನ್ನು ಕೋರಿದ್ದ. ಅದಕ್ಕಾಗಿ ಹೊರಟ ನನ್ನಲ್ಲಿ ತುಂಬಿದ್ದೆಲ್ಲ ಭವಿಷ್ಯದ ಹೊಂಗನಸು. ಕೆಂಪು ದೀಪ ಹಸಿರಾಯ್ತು. ನನ್ನ ಕೈನೆಟಿಕ್ ಮುಂದೆ ಚಲಿಸಿ ಕ್ಷಣಮಾತ್ರವಾಗಿತ್ತಷ್ಟೇ; ಹಿಂದಿನಿಂದ ರಭಸ ತುಂಬಿದ ಸದ್ದೊಂದು ನನ್ನನ್ನು ಗುದ್ದಿ ನೆಲಕ್ಕೆ ಕೆಡವಿತ್ತು!!

!!

ಬಹು ಚರ್ಚೆಯ ನಂತರ ನನ್ನ ಕುಟುಂಬ ಅವತ್ತೇ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಗೆ ಸೇರಿಸಲು ನಿರ್ಧರಿಸಿದರು. ಸೈರನ್ ಹೊಡೆದುಕೊಳ್ಳುವ ಆಂಬ್ಯುಲೆನ್ಸ್ ನಲ್ಲಿ ಒಂದು ದಿನದ ಮಗುವಿನೊಂದಿಗೆ ಪ್ರಯಾಣ. ಅಲ್ಲಿ ನನ್ನ ಕಾಲಿನ ಮೇಲೆ ಮತ್ತೆ ಮೂರು ಸರ್ಜರಿಗಳು. ಒಟ್ಟು ಮೂರು ತಿಂಗಳ ಆಸ್ಪತ್ರೆಯ ವಾಸ. ಆಕ್ಸಿಡೆಂಟ್ ಆದಾಗಿನಿಂದ ನೋವೆನ್ನದೆ ಸಹಕರಿಸಿದ್ದ ನನಗೆ ದೇಹದಲ್ಲಿ ಈಗ ಯಮ ಯಾತನೆ. ಅಲ್ಲದೆ ಮಲಗಿದ್ದೆಡೆ ಮಲಗಬೇಕಾದ ಸಂಕಟ. ಪ್ರತಿದಿನ ಎಲ್ಲದ್ದಕ್ಕೂ ಬೇರೆಯವರ ಮೇಲೆ ಅವಲಂಬಿತವಾಗಬೇಕಾದ ಅಸಹಾಯಕತೆ. ಕಂದನನ್ನು ಎತ್ತಿ ಆಡಿಸಲಾಗದೆ ದೂರದಿಂದ ನೋಡಬೇಕಾದ ಅನಿವಾರ್ಯತೆ. ಅಪಾರ ನೋವಿನ ಕಾರಣ 6 ವಾರಗಳ ಕಾಲ ಪ್ರತಿದಿನವೂ ಜ್ವರ. ನೋವು ನಿವಾರಕ ಪೆತೆಡಿನ್ ಮತ್ತಿತರ ನಿದ್ದೆ ಬರುವ ಔಷಧಗಳ ಕಾರಣ ಮಗುವಿಗೆ ಹಾಲೂಡಿಸದಿರಲು ವೈದ್ಯರಿಂದ ಅಣತಿ. ಅಸಲಿಗೆ ನೋವಿನ ಕಾರಣ ನನ್ನೆದೆಯಲ್ಲಿ ಹಾಲೂಡುತ್ತಲೂ ಇರಲಿಲ್ಲ. ಪ್ರತಿ ದಿನ ಪ್ರಗತಿಯ ನಿರೀಕ್ಷೆ. ನಿಧಾನವಾಗಿ ಫಿಸಿಯೋತೆರಪಿ, ವ್ಯಾಯಾಮ, ಪ್ರೋಟೀನು ಭರಿತ ಊಟಗಳು ಇತ್ಯಾದಿ. ಇಷ್ಟೆಲ್ಲ ಆದರೂ ನನ್ನ ಗಂಡನ ಪತ್ತೆಯಿರಲಿಲ್ಲ. ಆದರೆ ಪರೀಕ್ಷೆ ಬರೆದು ಇಂಗ್ಲೆಂಡಿನಲ್ಲಿ ಮೊದಲ ಕೆಲಸಕ್ಕೆ ಸೇರಿದ್ದ ಅವನಿಂದ ಬಹುತೇಕ ಪ್ರತಿದಿನ ಫೋನುಗಳ ಕರೆ. ಇವಳಿಂದಲೇ ಅವನಿಗೆ ಧೈರ್ಯದ ರವಾನೆ!! ನಿಧಾನವಾಗಿ ಬೆಂಬಲದ ಸಹಾಯದಿಂದ ನಾನು ನಡೆದಾಡುವ ವೇಳೆಗೆ ಅವನ ಆಗಮನ. ವೀಸಾಕ್ಕೆ ಓಡಾಟ. ವೀಲ್ ಚೇರಿನಲ್ಲಿ ಮೂರು ತಿಂಗಳ ಮಗುವಿನಿನೊಂದಿಗೆ ಇಂಗ್ಲೆಂಡಿಗೆ ಆಗಮನ. ಇದೆಲ್ಲ ನಡೆದು 15 ವರ್ಷಗಳಾಗಿವೆ. ಬದುಕು ಮತ್ತೆ ತೆರೆದುಕೊಂಡಿದೆ. ಪ್ರತಿದಿನ ಓಡಾಡುವಾಗ ನಾನು ನನ್ನಿಂದ ಬೇರೆಯಾಗದ ಕಾಲನ್ನು ನೋಡಿಕೊಳ್ಳುತ್ತೇನೆ. ಆಕ್ಸಿಡೆಂಟ್ ಆದ ಮರುದಿನ ಪೇಪರಿನಲ್ಲಿ ಹೀಗಂತ ಹಾಕಿದ್ದರಂತೆ“ ಲಾರಿ ಹರಿದರೂ ಪವಾಡ ಸದೃಶವಾಗಿ ಬದುಕುಳಿದ ಗರ್ಭಿಣಿ ಮತ್ತು ಮಗು…..” ಯಮಯಾತನೆಯನ್ನು ಅನುಭವಿಸುತ್ತಿದ್ದಾಗ ಕೃತಕ ಎನ್ನಿಸಿದ್ದ ಈ ವರದಿ ನನ್ನ ಬದುಕಿನಲ್ಲಿ ನಿಜಕ್ಕೂ ಪ್ರಮಾಣಿತವಾಗಿಬಿಟ್ಟಿತ್ತು!!

ಈ ಮದ್ಯೆ ಒಂದು ದಿನ ನ್ಯಾಯಾಧಿಪತಿಗಳ ಮುಂದೆ ಸಾಕ್ಷ್ಯ ಹೇಳಲು, ಸಂತ್ರಸ್ತೆಯಾಗಿ ನಿಂತಿದ್ದೆ. ಊಟ ಮುಗಿಸಿ ಬಹಳ ಗಂಭೀರವಾದ ಅವರು ಬಂದು ಕೂತಾಗ ಸಿನಿಮಾದ ಕೋರ್ಟಿನ ಸೀನಿಗೂ, ಇದಕ್ಕೂ ಯಾವ ಸಂಭಂದವೂ ಇಲ್ಲ ಅಂತ ಗೊತ್ತಾಯಿತು. ನನ್ನ ಲಾಯರು ಕೂಡ ವಾದ ಮಾಡಲಿಲ್ಲ.
“ಮಗು ಬದುಕಿದೆಯಾ?” ಅಂತ ನ್ಯಾಯಾಧೀಶರು ಕೇಳಿದರು.
“ಹೌದು” ಎಂದೆ.
“ಎಂತ ಮಗು ಗಂಡಾ.. ಹೆಣ್ಣಾ?” ಅಂದರು.
“ಗಂಡು” ಎಂದೆ. ನನ್ನೆದೆಯಲ್ಲಿ ಅದು ಪಾಪದ ಕಂದಮ್ಮನಾಗಿತ್ತೇ ಹೊರತು ಅದಕ್ಕೆ ಲಿಂಗದ ಯಾವ ಭೇದವೂ ಇರಲಿಲ್ಲ.
“ಇನ್ನೇನು ಬೇಕು, ಎಲ್ಲ ಸರಿಯಾಯ್ತಲ್ಲಾ?…” ಅಂತ ನ್ಯಾಯ ಹೇಳುವಂತೆ ಹೇಳಿದರು.

ಪೋಲೀಸು ಪೇದೆ ಕರೆದ ಕಾರಣಕ್ಕೆ ಒಲ್ಲೆ ಎನ್ನಲಾಗದೆ ಬಂದು ನಿಂತ ಆಟೋದಲ್ಲಿ 300 ಅಡಿ ದೂರದಲ್ಲಿಯೇ ಇದ್ದ ಸರಕಾರೀ ಆಸ್ಪತ್ರೆಗೆ ದಾಖಲು. ಪೋಲೀಸು ಪೇದೆಯ ಕಣ್ಣು ನನ್ನ ಕೈ ಬ್ಯಾಗ್ ಮೇಲೆ. ಆಟೋದ ತಳವನ್ನೆಲ್ಲ ತೋಯಿಸಿದ್ದ ರಕ್ತಧಾರೆಗೆ ತುರ್ತಾಗಿ ಬ್ಯಾಂಡೇಜು ಚಿಕಿತ್ಸೆ. ಇತ್ತ ಮುಂದಿನ ನಿಮಿಷಗಳಲ್ಲಿ ಅದೇ ರಸ್ತೆಯಲ್ಲಿ ಟಾಟಾ ಸುಮೋದಲ್ಲಿ ಹಾದು ಹೋದ ನನ್ನ ಅಣ್ಣ, ರಸ್ತೆಯನ್ನು ತೋಯಿಸಿದ್ದ ರಕ್ತ ನೋಡಿ ಯಾರೋ ಸತ್ತಿರಬಹುದೆಂದು ಮುಂದೆ ಹೋಗಿದ್ದ! ತುರ್ತಾಗಿ ನನ್ನ ಮನೆಗೆ ಕರೆ ಹೋಯ್ತು. ಬೇರೊಂದು ಖಾಸಗಿ ಆಸ್ಪತ್ರೆಗೆ ದಾಖಲಾದೆ. ಧಾವಿಸಿ ಬಂದ ಸ್ನೇಹಿತರು ಮತ್ತು ಬಂಧುಗಳಲ್ಲಿ ಆರು ಜನರಿಂದ ರಕ್ತದಾನ. ಮೊದಲು ಮಗುವಿನ ಒಳಿತಿಗಾಗಿ ಹೆರಿಗೆಯ ತುರ್ತು ಶಸ್ತ್ರ ಚಿಕಿತ್ಸೆ. ಅದರ ಹಿಂದೆಯೇ ರಸ್ತೆಯ ಧೂಳಲ್ಲಿ ಮಿಂದಿದ್ದ ಕಾಲಿನ ಗಾಯಕ್ಕೆ ಶಸ್ತ್ರ ಚಿಕಿತ್ಸೆ. ನನಗೆ ಮಗುವಿನ ಸ್ಪರ್ಷವಿಲ್ಲ.

ಒಬ್ಬ ಬೇಜವಾಬ್ದಾರೀ ಲಾರಿಯ ಚಾಲಕನಿಂದ ಇಷ್ಟೆಲ್ಲ ದುಖಃ ಅನುಭವಿಸಿದವಳಿಗೆ ಹುಟ್ಟಿದ ಗಂಡುಮಗು ಬದುಕಿರುವ ಕಾರಣ ಮುಕ್ತಿ ಖಂಡಿತ’ ಎನ್ನುವ ಆತನ ವೈಕ್ತಿಕ ಕುಹಕಕ್ಕೆ ಅಸಹ್ಯ, ಆಶ್ಚರ್ಯ, ತಾತ್ಸಾರ ಎಲ್ಲವೂ ಒಟ್ಟಿಗೆ ಮೂಡಿತು. ಯಾರದು ತಪ್ಪು, ಯಾಕೆ ಹೀಗಾಯ್ತು ಎಲ್ಲವೂ ಇವರಿಗೆ ಗೌಣ. ಇಂಥ ನ್ಯಾಯಾಧೀಶರ ಕೆಳಗಿನ ಯಾವ ಲಾಯರಿಗೂ ಆತನ ಮುಂದೆ ಮಾತಾಡುವ ಖದರಿರಲಿಲ್ಲ. ಇನ್ನು ಸರ್ಕಾರೀ ಆಸ್ಪತ್ರೆಯ ವೈದ್ಯರು ಆಕ್ಸಿಡೆಂಟ್ ಕೇಸನ್ನು ಮೊದಲು ನೋಡಿದ ಕಾರಣ ರೂ. 500 ತಗೊಳ್ಳದೆ ಪ್ರಮಾಣ ಪತ್ರ ಕೊಟ್ಟಿರಲಿಲ್ಲ. ಆತನಿಗೆ ಯಾವ ರೂಲುಗಳ ರಿವಾಜೂ ಇರಲಿಲ್ಲ. ಕರೆದುಕೊಂಡು ಆಸ್ಪತ್ರೆಗೆ ಸೇರಿಸಿದ ಪೋಲೀಸು ಪೇದೆ ಕೂಡ ತನ್ನ ಲಂಚದ ಹಣಕ್ಕಾಗಿ ಹುಡುಕಿ ಬಂದಿದ್ದ. ಅದನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆಂಬ ಕಾರಣ ಮನೆಯವರೇ ಹಣ ನೀಡಿ ಕಳಿಸಿಬಿಟ್ಟಿದ್ದರು. ಯಾವ ಓದಿದ್ದರೂ, ಸ್ವತಃ ವೃತ್ತಿಯಲ್ಲಿ ವೈದ್ಯೆಯೇ ಆಗಿದ್ದರೂ ಯಾರೂ ಮುಲಾಜು ತೋರಿಸಿರಲಿಲ್ಲ. ಇದೆಲ್ಲ ಮಾಮೂಲು ಎಂಬಂತೆ ನಡೆವ ಭಾರತದಿಂದ ಬಂದ ನಮಗೆ ಇಂಗ್ಲೆಂಡಿನ ನ್ಯಾಯ, ನೀತಿಗಳು, ಮಾನಸಿಕ ಸ್ಥಿತಿಯ ಬಗ್ಗೆ ಹೇರುವ ಮೌಲ್ಯಗಳ ಬಗ್ಗೆ ನಿಧಾನವಾಗಿ ಅರಿವಾಗುತ್ತ ಹೋಯಿತು.

ವೀಲ್ ಚೇರಿನಲ್ಲಿ ಆಗಷ್ಟೇ ಇಂಗ್ಲೆಂಡಿಗೆ ಬಂದಿದ್ದ ಹೊಸತರಲ್ಲಿ ಇಂತಹ ವಿಚಾರಗಳು ನನಗೆ ಅಚ್ಚರಿ ತರುತ್ತಿದ್ದವು. “ಅಯ್ಯೋ, ಮೂರು ತಿಂಗಳ ಹಿಂದೆ ಭಾರತದಲ್ಲಿ ನಿನಗಾದ ಅಪಘಾತ, ಇಂಗ್ಲೆಂಡಿನಲ್ಲಿ ನಡೆದಿದ್ದರೆ ನೀನು ಈ ವೇಳೆಗೆ ಮಿಲಿಯನೇರ್ ಆಗಿಬಿಡುತ್ತಿದ್ದೆ” ಅಂತ ಗಂಡ ಒಮ್ಮೆ ಅಂದಿದ್ದ. ಆಗಷ್ಟೇ ಮತ್ತೊಮ್ಮೆ ಮರುಹುಟ್ಟು ಪಡೆದಿದ್ದ ನನಗೆ ಇದು ನಿಜವೆನಿಸಿದರೂ, ನಾನು ಬದುಕಿದ್ದುದು, ಓಡಾಡುತ್ತಿದ್ದುದರ ಪವಾಡದ ಮುಂದೆ ಆ ಮಿಲಿಯನ್ನುಗಟ್ಟಳೆ ಹಣ ದೊಡ್ಡದೆಂದು ಮಾತ್ರ ಇವತ್ತಿಗೂ ಅನ್ನಿಸಿಲ್ಲ. ನಮ್ಮದೇ ಜನರ ಸಂವೇದನೆಗಳು ಇಷ್ಟು ಮೊಂಡಾಗಬಲ್ಲವೇ ಅಂತ ಅನ್ನಿಸದೆಯೂ ಇರಲಿಲ್ಲ!!

(ಮುಂದುವರೆಯುವುದು)