ಕರಾವಳಿ, ಕರ್ನಾಟಕ, ಭಾರತ ಹೀಗೆ ಮುಂಗಾರು ತನ್ನ ಹರಹನ್ನು ವಿಸ್ತರಿಸುತ್ತ ದೇಶವ್ಯಾಪಿಯಾಗಿರುವ ಈ ಮಳೆಗಾಲದಲ್ಲಿ ಕುಮಟಾ ಮೂಲದ ಛಾಯಾಗ್ರಾಹಕ ದಿನೇಶ್ ಮಾನೀರ ಕ್ಯಾಮೆರಾ ಹಿಡಿದು ತಮ್ಮೂರಿಗೆ ಮಳೆಯ ಜೊತೆ ಮಾತಾಡಿಸಲು ಹೋಗಿದ್ದಾರೆ. ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಹಾಗೂ ಪ್ರವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ದಿನೇಶ್ ಈ ಮಳೆಗಾಲದಲ್ಲಿ ಕೊಡೆ ಬಿಟ್ಟು ತಿರುಗಾಡಿದರೂ ಕ್ಯಾಮೆರಾ ಬಿಟ್ಟು ನಡೆಯಲಾರೆ ಎನ್ನುವಷ್ಟು ಛಾಯಾಗ್ರಹಣ ನಿಷ್ಠರು. ಕುಮಟಾದಲ್ಲಿ ತಣ್ಣಗೆ ಹರಿಯುವ ಅಘನಾಶಿನಿಯ ಪರಿಸರದಲ್ಲಿ ಅವರು ತೆಗೆದ ಫೋಟೋಗಳು ಚಿತ್ರಲೋಕದ ತಾಂತ್ರಿಕ ನಿಘಂಟಿನಲ್ಲಿ “ಮೊನೋಕಲರ್” ಎಂದು ಕರೆಸಿಕೊಳ್ಳುವ ಚಿತ್ರಗಳು. ಅವರ ಫೋಟೋ ಅನುಭಗಳನ್ನು ಅಕ್ಷರಗಳಿಗಿಳಿಸಿದ್ದಾರೆ ಯೋಗೀಂದ್ರ ಮರವಂತೆ.

ಯಾವ ಊರನ್ನು ಯಾವಾಗ ನೋಡಬೇಕು ಹೇಗೆ ನೋಡಬೇಕು ಎನ್ನುವುದನ್ನು ತಿಳಿಯುವುದು ತಿಳಿದಿರುವುದು ಕೂಡ ಒಂದು ಅರಿವು, ಜ್ಞಾನ ಮತ್ತು ಕಲೆ. ಸೂರ್ಯಾಸ್ತಕ್ಕೆ ಹೆಸರಾದ ಊರುಗಳು ಕೆಲವು, ಸೂರ್ಯೋದಯಕ್ಕೆ ಮೀಸಲಿಟ್ಟ ತಾಣಗಳು ಕೆಲವು, ಇನ್ನು ಚಳಿಗಂತಲೇ ಭೇಟಿ ನೀಡಬೇಕಾದ ಸ್ಥಳಗಳೂ ಇವೆ. ಹಿಮ ಅನುಭಸಲಿಕ್ಕೆ ಕಾಯ್ದಿಟ್ಟ ಜಾಗಗಳೂ ಗೊತ್ತು. ಇಂತಹ ಜಾಗಗಳಿಗೆಲ್ಲ ಹೇಗೆ ಯಾವಾಗ ಪಯಣಿಸಬೇಕು ಎನ್ನುವುದು ಅಲ್ಲಲ್ಲಿನ ಅಂತಂತವರಿಗೆ ಸಿದ್ಧಿಸಿದ ವಿದ್ಯೆ. ಮತ್ತೆ ಯಾವಾಗ ಜೋರಾಗಿ ಮಳೆ ಬರುವುದನ್ನು, ಆ ಮಳೆಯಲ್ಲಿ ನದಿಯೊಂದು ಉತ್ಸಾಹದಲ್ಲಿ ಕಿಲಕಿಲನಗುವುದನ್ನು ಮತ್ತೆ ಅದೇ ನಗೆಯಲ್ಲಿ ದೋಣಿಯೊಂದು ತೇಲುವುದನ್ನು ಆ ದೋಣಿಯೇರಿ ಮಕ್ಕಳು ಕೇಕೆ ಹೊಡೆಯುವುದನ್ನು ನೋಡಬೇಕಿದ್ದರೆ ಎಲ್ಲಿ ನೋಡುವುದುದು? ಇದರ ಜೊತೆಗೆ ಉತ್ತರಕನ್ನಡದ ಕರಾವಳಿಯ ಕುಮಟಾವನ್ನು ಯಾವಾಗ ನೋಡಬೇಕು ಹೇಗೆ ನೋಡಬೇಕು ಎನ್ನುವ ಜಿಜ್ಞಾಸೆ ಕೂಡ ಹುಟ್ಟಿಕೊಂಡರೆ ಇವೆರಡೂ ಪ್ರಶ್ನೆಗಳಿಗೆ ಸರಿಸುಮಾರು ಒಂದೇ ಉತ್ತರ ಅದೇ ಊರಿನ ಛಾಯಾಗ್ರಾಹಕ ದಿನೇಶ್ ಮಾನೀರರ ಅನುಭವದಲ್ಲಿ ಸಿಗಬಹುದು ಮತ್ತು ಅದಕ್ಕಿಂತ ಪರಿಣಾಮಕಾರಿಯಾಗಿ ಅವರೇ ತೆಗೆದ ತೆಗೆಯುವ ಚಿತ್ರಗಳು ನಮಗೆ ತಿಳಿಸಬಹುದು.

ಮುಂಗಾರು ಮಳೆಯ ಕಾಲದಲ್ಲಿ ಕುಮಟಾದ ಚಂದ ವರ್ಣಿಸಲು ಶಬ್ದಗಳು ಸಾಲುವುದಿಲ್ಲ; ಆದರೆ ಚಿತ್ರಗಳು ಸಾಕಾದೀತೇನೋ. ಎಂತಹ ಚಿತ್ರಗಳು ಬೇಕಾದೀತೋ? ಬಣ್ಣಬಣ್ಣದ್ದು ಬೇಕಾ ಅಥವಾ ಕಪ್ಪುಬಿಳುಪು ಸಾಕ? ಇವೆರಡೂ ಅಲ್ಲದ ಅಂದಾಜು ಒಂದೇ ಬಣ್ಣದ ಛಾಯೆಗಳ ವಸ್ತು ನೆರಳು ಬೆಳಕು ಕೂಡಿದ ಚಿತ್ರಗಳನ್ನು ತೆಗೆದು ತೋರಿಸಿ ದಿನೇಶ್ ಮಾನೀರ ಕುಮಟಾದಲ್ಲಿ ಮುಂಗಾರಿನ ಸಮಯದ ದಿವ್ಯಗಳಿಗೆಯೊಂದರ ಕತೆ ಕಟ್ಟಿದ್ದಾರೆ. ಇಂತಹ “ಒಬ್ಬಣ್ಣ”ದ ಚಿತ್ರಗಳಿಗೆ “ಮೋನೋಕಲರ್” ಚಿತ್ರಗಳು ಎನ್ನುವ ಹೆಸರಂತೆ. ಇಡೀ ಚಿತ್ರದಲ್ಲಿ ಒಂದೇ ಬಣ್ಣ ಮತ್ತು ಆ ಬಣ್ಣದ ಛಾಯೆಗಳೇ ತುಂಬಿರುವುದರಿಂದ ಆ ಹೆಸರು. ಬೇರೆ ಬೇರೆ ಮಾಸದಲ್ಲಿ ಬರಿಗಣ್ಣಿಗೆ ಎಷ್ಟೋ ಬಣ್ಣಗಳು ಕಂಡರೂ ಈ ಸಮಯಕ್ಕೆ ತಮ್ಮ ಕ್ಯಾನನ್ ೬ ಡಿ ಕ್ಯಾಮೆರಾದಲ್ಲಿ ೧೭-೪೦ರ ಮಸೂರ ಸಿಕ್ಕಿಸಿಕೊಂಡು ಕುಮಟಾದಲ್ಲಿ ಒಂದೇ ಬಣ್ಣದ ಚಿತ್ರಗಳ ಗುರಿ ಹಾಕಿಕೊಂಡು ಬೇಟೆಗಾರನಂತೆ ನಮ್ಮ ಛಾಯಾಹ್ರಗಾಕ ಓಡಾಡಿದ್ದಾರೆ. ಮತ್ತೆ ಅಲ್ಲಿ ತೆಗೆದ ಚಿತ್ರಗಳನ್ನು ನೋಡುವವರಿಗೆಲ್ಲ ದೂರದಿಂದಲೇ ದರ್ಶನ ಮಾಡಿಸಿದ್ದಾರೆ. ಈ ಚಿತ್ರಗಳು ತಾವು ಹಿಡಿದಿಡುವ ಬಣ್ಣದ ಮಟ್ಟಿಗೆ ಒಂಟಿಯಾದರೂ ಅವು ಹೇಳುವ ಕತೆಗಳು, ಹುಟ್ಟಿಸುವ ಯೋಚನೆಗಳು, ಎಬ್ಬಿಸುವ ತಳಮಳಗಳ ನಿಟ್ಟಿನಲ್ಲಿ ಒಂಟಿಯಲ್ಲವಲ್ಲ.

ಕುಮಟಾ ತಾಲೂಕಿನಲ್ಲಿ ಹೆಗಡೆ ಎನ್ನುವ ಊರಿದೆ. ಅಲ್ಲಿಂದ ಅಘನಾಶಿನಿಯ ಕಡೆ ಸಾಗುವ ಕಿರುದಾರಿಯೊಂದಿದೆ. ಮಳೆಗಾಲದಲ್ಲಿ ನೀವೆಲ್ಲಾದರೂ ಇಲ್ಲೇ ಹತ್ತಿರ ಇದ್ದರೆ ಈ ಕಿರುದಾರಿಯಲ್ಲಿ ಖಂಡಿತ ನಡೆಯಬೇಕು. ಈ ವರ್ಷ ಅಲ್ಲದಿದ್ದರೆ ಬರುವ ಮಳೆಗಾಲಕ್ಕಾದರೂ ಇಲ್ಲೊಂದು ಭೇಟಿ ಕೊಡಬೇಕು. ಈ ದಾರಿಯಲ್ಲಿ ನಡೆಯುತ್ತಾ ತುಸು ದೂರಸಾಗಿದರೆ ಮುಂದೆ ಹೆಗಡೆತಾರಿ ಸಿಗುತ್ತದೆ. ಪಶ್ಚಿಮಘಟ್ಟದಲ್ಲಿ ಉಗಮಗೊಂಡು ಬಳುಕಿ ಬಾಗಿ ಹರಿವ ಅಘನಾಶಿನಿ ಅರಬ್ಬೀ ಸಮುದ್ರ ಸೇರುವ ತಯಾರಿ ನಡೆಸುವುದು ಇಲ್ಲಿಯೇ. ಇದು ಆಳಿವೆ ಪ್ರದೇಶ. ಬಲಗಡೆಗೆ ಅಘನಾಶಿನಿ ತಣ್ಣಗೆ ಸುಮ್ಮಗೆ ಹರಿಯುತ್ತಾಳೆ. ಎಡಗಡೆಯಲ್ಲಿ ಕಣ್ಣು ಹರಿಸಿದಷ್ಟು ದೂರಕ್ಕೆ ಭತ್ತದ ಗದ್ದೆ ಮತ್ತು ನದಿಯ ಅಳಿವೆಯ ಅಕ್ಕಪಕ್ಕ ಮೀನುಗಾರರ ಮನೆಗಳು ಕಾಣುತ್ತವೆ. ಅಘನಾಶಿನಿಯ ಹಿನ್ನಲೆಯಲ್ಲಿ ಪಶ್ಚಿಮ ಘಟ್ಟಗಳ ಧೀರೋದ್ಧಾತ ನಿಲುವೂ ಇದೆ. ನದಿಯ ಇನ್ನೊಂದು ಕಡೆ ಸುಪ್ರಸಿದ್ಧ ಮಿರ್ಜಾನ ಕೋಟೆಯೂ ಕಾಣುತ್ತದೆ. ಬಸ್ಸು ಹತ್ತಿ ಮಿರ್ಜಾನ ಕೋಟೆ ನೋಡಲು ಒಂದು ಘಂಟೆ ವ್ಯಯಿಸುವ ಮನಸ್ಸಿಲ್ಲದವರು ಇಲ್ಲಿಂದಲೇ ದೋಣಿ ಹತ್ತಿ ಹತ್ತು ನಿಮಿಷದಲ್ಲಿ ಕೋಟೆ ಸೇರಬಹುದು. ಅಘನಾಶಿನಿಯ ಈ ಅಳಿವೆ ಪ್ರದೇಶದಲ್ಲಿ ಕೆಲವು ಸಣ್ಣ ಸಣ್ಣ ದ್ವೀಪಗಳೂ ಇವೆ. ಅವುಗಳಲ್ಲಿ ಮುಖ್ಯವಾದದ್ದು ಐಗಳಕುರ್ವೆ ಅಂತ ಯಾರಿಂದಲೋ ಎಂದೋ ನಾಮಕರಣ ಮಾಡಿಸಿಕೊಂಡ ದ್ವೀಪ. ಈ ದ್ವೀಪದಲ್ಲಿ ಮೀನುಗಾರರು ಸ್ವಲ್ಪ ಕೃಷಿಯನ್ನೂ ಮಾಡುತ್ತಾರೆ, ಅಲ್ಲಿರುವ ದೇವಸ್ಥಾನಗಳಿಗೂ ಹೋಗುತ್ತಾರೆ. ಅವರು ನಂಬಿದ ದೇವ ದೈವಗಳೂ ಅಘನಾಶಿನಿಯಿಂದ ಸುತ್ತುವರಿದ ಈ ದ್ವೀಪದಲ್ಲಿ ಹಾಯಾಗಿವೆ. ನೀವೆಲ್ಲೂ ಕೇಳಿರದ ಕಂಡಿರದ ಅಪೂರ್ವವಾದ ಬಬ್ರುವಾಹನನ ದೇವಸ್ಥಾನವೂ ಇದೇ ಆಳಿವೆ ಪ್ರದೇಶದಲ್ಲಿಯೇ ಇದೆ. ಹೆಸರುವಾಸಿಯಾದ ಕಗ್ಗ ಅಕ್ಕಿಯನ್ನು ಇಲ್ಲಿನ ಮೀನುಗಾರರು ಮಳೆಗಾಲದಲ್ಲಿ ಬೆಳೆಯುತ್ತಾರೆ. ಈ ಅಕ್ಕಿಯ ಹೆಗ್ಗಳಿಕೆ ಎಂದರೆ ಅದು ಚೌಳುನೆಲದಲ್ಲೂ ಮುಳುಗಡೆ ಭೂಮಿಯಲ್ಲೂ ಬೆಳೆಯುತ್ತದೆ. ಅಘನಾಶಿನಿಯ ಸುತ್ತಮುತ್ತ ಎಲ್ಲ ಇಂತಹ ವೈವಿಧ್ಯಗಳು ಅಚ್ಚರಿಗಳು ತುಂಬಿವೆ. ಅವುಗಳಲ್ಲಿ ಕೆಲವು ಈಗ ಭಾವಚಿತ್ರಗಳಾಗಿ ಮೂಡಿವೆ.

ಮುಂಗಾರಿನ ಸಮಯದಲ್ಲಿ ಇಲ್ಲಿ ವ್ಯವಸಾಯದ ಜೊತೆಗೆ ಮೀನುಗಾರಿಕೆಯೂ ಸಾಗುತ್ತದೆ; ಭತ್ತವೂ ಬೆಳೆಯುತ್ತದೆ, ಹೊಳೆಮೀನೂ ಸಿಗುತ್ತದೆ! ಭತ್ತ ಬೆಳೆಯುವುದೂ ನೀರಲ್ಲಿ ಮೀನು ಹಿಡಿಯುವುದೂ ನೀರಲ್ಲೇ. ಅಘನಾಶಿನಿಯಲ್ಲಿ ದೋಣಿ ಸಂಚಾರ ನಿರಂತರ. ಸ್ಥಳೀಯ ಮೀನುಗಾರರು ಹತ್ತಿರದ ಐಗಳಕುರ್ವೆ ದ್ವೀಪಕ್ಕೆ ಹೋಗಿ ಬರುತ್ತಿರುತ್ತಾರೆ. ದೋಣಿಚಾಲಕರು ದೋಣಿ ನಿರ್ವಾಹಕರು ಬಲಿಷ್ಠ ಪುರುಷರೇ ಆಗಿರಬೇಕಾಗಿಲ್ಲ. ಇಲ್ಲಿನ ಮಕ್ಕಳು ಹೆಣ್ಮಕ್ಕಳು ದೋಣಿ ನಡೆಸುವುದು ಕಾಣಿಸುತ್ತದೆ. ಸಣ್ಣ ಮಕ್ಕಳೂ ದೋಣಿಯನ್ನು ತಾವು ಬಯಸಿದಂತೆ ಚಲಾಯಿಸಬಲ್ಲರು ತಾವು ನುಡಿಯುವಂತೆ ನಡೆಸಬಲ್ಲರು. ಹೀಗೆ ನೋಡುತ್ತಾ ಸಾಗುವಾಗ ನೂರಾರು ದೋಣಿಗಳು ಅಘನಾಶಿನಿಯಲ್ಲಿ ಕಾಣಿಸುತ್ತವೆ. ಕೆಲವು ಚಲಿಸುವವುಗಳು, ಕೆಲವು ಕಟ್ಟಿಹಾಕಲ್ಪಟ್ಟವುಗಳು. ದೋಣಿಗಳನ್ನು ಬಂಧಿಸಿದ ಗೂಟಕ್ಕೆ ಸಾವಿರ ಸಾವಿರ ಮೀನುಗಳನ್ನು ಮೋಸದಲ್ಲೋ ಸಾಹಸದಲ್ಲೋ ಹಿಡಿದ ಬಲೆಗಳನ್ನು ನೇತು ಹಾಕಿದ್ದೂ ಕಂಡೀತು. ದೋಣಿ ಮತ್ತು ಬಲೆಗಳನ್ನು ನಿಭಾಯಿಸುವ ಯಜಮಾನರು ಇಲ್ಲದ ಹೊತ್ತಲ್ಲಿ ಅವನ್ನು ಕಟ್ಟಿದ ಗೂಟವೇ ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತಿರುತ್ತದೆ. ಕೆಲವು ಒಂಟಿ ದೋಣಿಗಳು ಕೆಲವು ಸಂಸಾರಸ್ಥ ದೋಣಿಗಳು ಮತ್ತೆ ಕೆಲವು ಯುಗಳಗೀತೆ ಹಾಡುವ ಜೋಡಿ ನಾವೆಗಳು. ಇಲ್ಲಿ ವಿಹರಿಸುವ ದೋಣಿಗಳು ಮತ್ತೆ ದೋಣಿಯನ್ನು ತೇಲಿಸುತ್ತ ಮೆಲ್ಲಗೆ ಹರಿಯುವ ನದಿಯೂ ಒಂದು ಇನ್ನೊಂದರ ಮುಖ ನೋಡಿ ಸನ್ನೆ ಮಾಡುತ್ತವೆ, ಮಾತಾಡುತ್ತವೆ; ಸುಖ ದುಃಖ ಕಷ್ಟ ಸುಖ ಹಂಚಿಕೊಳ್ಳುತ್ತವೆ. ಅಘನಾಶಿನಿಯ ಹರಿವಿನ ಮೇಲಿನ ದೋಣಿಗಳು, ದೋಣಿಯ ಮೇಲಿನ ಮೋಡಗಳು ಕೈ ಕೈ ಹಿಡಿದು ಚಲಿಸಿದಂತೆ ಭಾಸವಾಗುತ್ತದೆ. ಪುರಾತನ ಪರಿಚಯದ ಪಾರಂಪರಿಕ ಗೆಳೆತನದ ಸಖ-ಸಖಿಯರಂತೆ ಯಾವುದೊ ಕಾಲದ ಒಡನಾಡಿಗಳಂತೆ ನಗೆ ಬೀರುತ್ತವೆ. ಈ ಸುಂದರ ದೃಶ್ಯಕಾವ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಸಾಹಸಿಗಳಿಗೆ ಪ್ರತಿ ಫಲಕದಲ್ಲೂ ದೋಣಿ ಮೋಡ ನದಿ ಬೆಟ್ಟ ಒಂದು ಇನ್ನೊಂದರಿಂದ ದೂರ ಹತ್ತಿರ ಅಥವಾ ಬೇರೆ ಬೇರೆ ಸ್ಥಳದಲ್ಲಿ ಕಾಣಿಸುತ್ತ ಹೊಸ ಹೊಸ ನೋಟಗಳನ್ನೂ ಸೃಷ್ಟಿಸುತ್ತವೆ. ಪ್ರತಿಕ್ಷಣಕ್ಕೆ ತೆಗೆದ ಚಿತ್ರವೂ ಏನೋ ಒಂದು ನವೀನ ವಿಷಯ ಹೇಳುತ್ತದೆ ಹೊಸ ಹೊಳಹು ನೀಡುತ್ತದೆ. ಕ್ಯಾಮೆರಾ ಹಿಡಿದು ಗಂಟೆಗಟ್ಟಲೆ ಇಲ್ಲಿ ನಡೆದದ್ದೇ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಬೆಳಬೆಳಿಗ್ಗೆ ಕೆಲವೊಮ್ಮೆ ಮುಸ್ಸಂಜೆ, ಇಲ್ಲಿ ನಡೆಯುತ್ತಾ ಮಳೆನೋಡುವುದು, ಮಳೆಯಲ್ಲಿ ನೆನೆಯುವುದು ತೋಯುವುದು ದಿನೇಶ ನೆಚ್ಚಿಕೊಂಡ ಮಳೆಗಾಲದ ಘಳಿಗೆಗಳು. ಇಲ್ಲಿನ ತೆರೆದ ಬಾನನ್ನು ನೋಡಿಯೇ ತಿಳಿಯಬಹುದು ಮಳೆ ಯಾವಾಗ ಶುರು ಆಗಬಹುದು ಎಂದು. ಕೊಡೆ ಬಿಚ್ಚಬಹುದೋ ಮಡಚಿ ಒಳಗಿಡಬಹುದೋ ಎನ್ನುವ ನಿರ್ಧಾರವೂ ಆಗಲೇ ಮಾಡಬಹುದು.

ದಿನೇಶರ ಕ್ಯಾಮೆರಾದಲ್ಲಿ ಮುದ್ರಿತವಾದ ಸೂರ್ಯೋದಯ ಸೂರ್ಯಾಸ್ತಗಳು, ಬಣ್ಣ ಬಣ್ಣದ ಆಗಸ ಮೋಡಗಳು ಎಷ್ಟೋ ಇವೆ. ಆದರೆ ಬಣ್ಣವೇ ಇಲ್ಲದ ಅಥವಾ ಪೇಲವರ್ಣದ ಆಕಾಶದ ಹಿನ್ನೆಲೆಯು ಸಿಗಬೇಕಿದ್ದರೆ ಅದು ಮುಂಗಾರಿನ ಆಕಾಶವೇ ಆಗಬೇಕು, ಅಘನಾಶಿನಿಯ ಅಳಿವೆಯ ತಪ್ಪಲೇ ಬೇಕು. ಮುಂಗಾರಿನ ಕಾಲದ ಆಗಸದ ಬಣ್ಣದ ಬಗೆಗಿನ ವಿಶೇಷತೆ ಎಂದರೆ ಅದೊಂದು ಬಣ್ಣವಿಹೀನ ಆಕಾಶ ಎನ್ನುತ್ತಾರೆ ದಿನೇಶ್. ಹಾಗಾಗಿ ಅಲ್ಲಿನ ಸಣ್ಣ ಸಣ್ಣ ವಿವರಗಳನ್ನು ಹುಡುಕಿ ಹುಡುಕಿ ಚಿತ್ರಗಳಲ್ಲಿ ತುಂಬಿಸುವ ಕೆಲಸ ಛಾಯಾಗ್ರಾಹಕರು ಮಾಡಬೇಕಾಗುತ್ತದೆ. ಕ್ಯಾಮೆರಾವನ್ನು ಸರಿಯಾಗಿ ಏಕಾಗ್ರಗೊಳಿಸಿ ಚಿತ್ರ ತೆಗೆದರೆ ಅದ್ಭುತವಾಗಿ ಕಾಣುವ ವಿಸ್ಮಯ ಹುಟ್ಟಿಸುವ ನೇಯ್ಗೆಯ ಚಿತ್ರಗಳೂ ಈ ಸಮಯದಲ್ಲೇ ಸಿಗುತ್ತವೆ. ಅದಕ್ಕಾಗಿಯೇ ದಿನೇಶ್ ಮಳೆಗಾಲದಲ್ಲಿ ಬೆಂಗಳೂರಿಂದ ಕುಮಟಾಗೆ ಬಂದು ನೂರಾರು ಚಿತ್ರಗಳನ್ನು ಸೆರೆಹಿಡಿದದ್ದು, ಅವಕ್ಕೆ ನಾನು ಶಬ್ದ ಜೋಡಿಸಿದ್ದು, ಮತ್ತೆ ಅವುಗಳನ್ನು ನಿಮ್ಮೊಡನೆ ಹಂಚಿಕೊಂಡದ್ದು.

*****

ದಿನೇಶ್ ಮಾನೀರ್ ಕುಮಟಾ ಮೂಲದವರು. ಇವರು ತೆಗೆಯುವ ಭಾವಚಿತ್ರಗಳು ಕತೆ ಹೇಳುತ್ತವೆ,ಮಾತಾಡುತ್ತವೆ, ನಮ್ಮನ್ನು ಯೋಚನೆಗೆ ಹಚ್ಚುತ್ತವೆ. ಕನ್ನಡ ನಾಡಿನ ಸಂಸ್ಕೃತಿ, ಜಾನಪದ ಆಚರಣೆಗಳು, ಕಲಾವಿದರ ಪರಿಚಯ ಇವರ ಭಾವಚಿತ್ರಗಳಲ್ಲಿ ವಿಶಿಷ್ಟವಾಗಿ ದಾಖಲುಗೊಂಡಿವೆ. ಇವರು ಕುಂಭಮೇಳಕ್ಕೋ ,ಹಿಮಾಲಯಕ್ಕೋ ಇನ್ನೆಲ್ಲೋ ಚಿತ್ರಚಾರಣಕ್ಕೋ ಕಛೇರಿಗೆ ರಜೆ ಹಾಕಿ ಹೋಗುವಷ್ಟು “ಫೋಟೋಗ್ರಫಿ ಪರರು” . ಇವರು ತೆಗೆದ ಭಾವಚಿತ್ರಗಳು ನ್ಯಾಷನಲ್ ಜಿಯೋಗ್ರಫಿಯಂತಹ ಪತ್ರಿಕೆಗಳಲ್ಲಿ ಮುದ್ರಣಗೊಂಡಿವೆ. ಇತ್ತೀಚಿಗೆ ಬಿಡುಗಡೆಯಾದ ಉತ್ತರಕನ್ನಡದ ಚಿತ್ರಗಳನ್ನೊಳಗೊಂಡ ಪ್ರವಾಸೀ ಪುಸ್ತಕದ ಸಂಪಾದಕರು ವಿನ್ಯಾಸಕಾರರು ಇವರೇ. ದಿನೇಶ್ ಮಾನೀರ ತೆಗೆದ ಇತರ ಚಿತ್ರಗಳನ್ನು ಅವರ ಅಂತರ್ಜಾಲ ತಾಣದಲ್ಲಿ ನೋಡಬಹುದು