ಪುರುಷರ ಪ್ರಾಬಲ್ಯವೇ ಇರುವ ಯಕ್ಷಗಾನ ಕ್ಷೇತ್ರದಲ್ಲಿ ಇತ್ತೀಚೆಗೆ ಮಹಿಳೆಯರು ಮುಮ್ಮೇಳ ಮತ್ತು ಹಿಮ್ಮೇಳ ಕಲಾವಿದರಾಗಿ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಆದರೆ ಸುಮಾರು ಐದು ದಶಕಗಳ ಹಿಂದೆಯೇ ಲೀಲಾವತಿ ಬೈಪಡಿತ್ತಾಯರು  ಮಹಿಳಾ ಭಾಗವತರಾಗಿ ರಂಗಸ್ಥಳದಲ್ಲಿ ಪಡಿಯೇರಿದ್ದಷ್ಟೇ ಅಲ್ಲದೆ, ಮೇಳದ ತಿರುಗಾಟಕ್ಕೂ ಸೈ ಎಂದವರು. ಜೊತೆಗೆ ಪತಿ ಹರಿನಾರಾಯಣ ಬೈಪಡಿತ್ತಾಯರು ಮದ್ದಳೆಗಾರರಾಗಿ ಅವರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಯಕ್ಷಗಾನ ಕ್ಷೇತ್ರದ ಮೊದಲ ಮಹಿಳಾ ಭಾಗವತರಾದ ಲೀಲಾವತಿ ಬೈಪಡಿತ್ತಾಯರ ಜೀವನ ಕಥನವನ್ನು ಲೇಖಕಿ ವಿದ್ಯಾರಶ್ಮಿ ಪೆಲತ್ತಡ್ಕ  ನಿರೂಪಿಸಿದ್ದಾರೆ. ‘ಯಕ್ಷ ಗಾನ ಲೀಲಾವಳಿ’ ಎಂಬ ಆ ಕೃತಿಯು ಕೇವಲ ಆತ್ಮಕಥೆಯಷ್ಟೇ ಆಗಿರದೆ, ಯಕ್ಷಗಾನದ ಇತರ ಆಯಾಮಗಳನ್ನೂ ತೆರೆದಿಡುವ ಕೃತಿ. ಈ ಕೃತಿಯ ಒಂದು ಅಧ್ಯಾಯ ಇಲ್ಲಿದೆ. 

 

ಮೇಳಕ್ಕೆ ಸೇರಿದ ಬಳಿಕ ಜೀವನಶೈಲಿ ಬದಲಾಯಿತು. ಹಗಲು ನಿದ್ದೆ, ರಾತ್ರಿ ಕೆಲಸ. ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುವ ಅನಿವಾರ್ಯತೆ ಮೊದಲು ಎದುರಾಯಿತು. ಒಂದು ಯಕ್ಷಗಾನ ಮುಗಿಯುವುದೇ ಮತ್ತೊಂದು ಯಕ್ಷಗಾನದ ಆರಂಭ. ಬೆಳಿಗ್ಗೆ ಯಕ್ಷಗಾನ ಮುಗಿದ ತಕ್ಷಣ, ಮುಂದಿನ ಊರಿಗೆ ಹೋಗಲು ಸಿದ್ಧತೆ. ಹೆಚ್ಚಾಗಿ ಇವರ ದ್ವಿಚಕ್ರ ವಾಹನದಲ್ಲೇ ತೆರಳುತ್ತಿದ್ದೆ. ಇಲ್ಲವೆಂದಾದರೆ, ಮೇಳದ ವ್ಯಾನಿನಲ್ಲಿ ಮುಂಭಾಗದ ಸೀಟು ನನಗೆ ಮೀಸಲಿಡುತ್ತಿದ್ದರು. ಮುಂದಿನ ಯಕ್ಷಗಾನ ಮನೆಯ ಆಸುಪಾಸಲ್ಲಿದ್ದರೆ ಮನೆಗೇ ಹೋಗಿಬಿಡುತ್ತಿದ್ದೆವು. ಮನೆಯಲ್ಲಿ ಹಗಲು ನಿದ್ದೆ ಮಾಡಲು ಸಿಗುವಷ್ಟು ನೆಮ್ಮದಿ ಬೇರೆಲ್ಲೂ ಸಿಗುವುದಿಲ್ಲ. ಮನೆಗೆ ಹೋದ ಬಳಿಕ ಒಂದೋ, ದಾರಿಯಲ್ಲೇ ತಿಂಡಿ ಮುಗಿಸಿ ಬರುತ್ತಿದ್ದೆವು, ಇಲ್ಲವೆಂದಾದರೆ, ಮನೆಗೆ ಬಂದು ಮಾಡಿಕೊಳ್ಳಬೇಕಿತ್ತು. ಅಮ್ಮ ಇದ್ದರೆ, ಅವರು ಮಾಡಿಡುತ್ತಿದ್ದರು. ಮಕ್ಕಳು ಶಾಲೆಗೆ ಹೋಗಿರುತ್ತಿದ್ದರು. ತಿಂಡಿ ಆದ ಬಳಿಕ ಮಧ್ಯಾಹ್ನಕ್ಕೆ, ರಾತ್ರಿಗೆ (ಅಗತ್ಯವಿದ್ದರೆ ಕಟ್ಟಿಕೊಂಡು ಹೋಗುತ್ತಿದ್ದೆವು) ಅಡುಗೆ ಮಾಡಿ, ಸ್ನಾನ ಮುಗಿಸಿ ಮಲಗುತ್ತಿದ್ದೆವು. ಎಚ್ಚರವಾದಾಗ ಎದ್ದು ಊಟ. ನಂತರ ಪುನಃ ನಿದ್ದೆ. ಸಂಜೆ ದೂರ ಹೋಗಬೇಕಿದ್ದರೆ, ಅದಕ್ಕೆ ಅನುಗುಣವಾಗಿ ಬೇಗನೇ ಎದ್ದು ಹೊರಡಬೇಕಿತ್ತು. ಹತ್ತಿರವೇ ಇದ್ದರೆ ನಾಲ್ಕೈದು ಗಂಟೆಗೆಲ್ಲಾ ಎದ್ದು, ಶಾಲೆಯಿಂದ ಮರಳಿದ ಮಕ್ಕಳೊಂದಿಗೆ ಮಾತನಾಡಿ, ನಂತರ ಆಟಕ್ಕೆ ಹೊರಡುತ್ತಿದ್ದೆವು. ಆದರೆ, ಮುಂದಿನ ಬಿಡಾರ ದೂರವಿದ್ದರೆ, ಆ ದಿನ ಬೆಳಿಗ್ಗೆ ಆಟ ಮುಗಿಸಿ ಅತ್ತ ಹೋಗುವಾಗ ದಾರಿ ಮಧ್ಯೆ ಸಿಕ್ಕಿದ, ನಮ್ಮ ಯಕ್ಷಗಾನ ಕಲಾವಿದರ ವಲಯದಲ್ಲಿ ಕೇಳಿ ತಿಳಿದಿರುವಂತೆ ‘ಒಳ್ಳೆಯ’ ಎಂದುಕೊಳ್ಳಬಹುದಾದ ಹೋಟೆಲ್‌ಗೆ ಹೋಗಿ ಕಾಫಿ ತಿಂಡಿ ಆಗುತ್ತಿತ್ತು. ಚಳಿಯಲ್ಲಿ ಬಂದ ನಮಗೆ ಬಿಸಿಬಿಸಿ ತಿಂದಾಗ ಸಿಗುವ ಆನಂದವೇ ಬೇರೆ. ಆಗೆಲ್ಲಾ ಈಗಿನಂತೆ ದಾರಿ ಮಧ್ಯೆ ಸ್ಟಾರ್ ಹೋಟೆಲ್‌ಗಳಿಲ್ಲ. ಸಣ್ಣ ಪುಟ್ಟ ಹೋಟೆಲ್‌ಗಳ ಗುಣಮಟ್ಟವೂ ಅದ್ಭುತವಾಗಿರುತ್ತಿತ್ತು. ತಿಂಡಿ ಮುಗಿಸಿ ಮತ್ತೆ ಮುಂದಿನ ತಾಣದತ್ತ ಪಯಣ.

ರಾತ್ರಿ ಪ್ರದರ್ಶನದ ಸ್ಥಳದಲ್ಲೇ ಉಳಿಯುವುದು, ಮೇಳದೊಂದಿಗೆ ದೂರದೂರಿಗೆ ಹೋಗುವುದು ಈ ವೃತ್ತಿಗೆ ಸಹಜವೇ ಆಗಿತ್ತು. ನನಗೆ ಮಾತ್ರ ಆ ಬದುಕು ಹೊಸದಷ್ಟೇ. ಗಂಡುಮಕ್ಕಳಾದರೆ ಸಿಕ್ಕ ಜಾಗದಲ್ಲಿ ಹಗಲು ಮಲಗಿಕೊಳ್ಳುತ್ತಾರೆ. ದೇವಸ್ಥಾನದ ಜಗಲಿಯೋ ಅಥವಾ ಶಾಲೆಗಳ ಜಗಲಿಯೋ… ಹೀಗೆ ಎಲ್ಲಿ ಜಾಗ ಸಿಕ್ಕಿತೆಂದರೆ ಅಲ್ಲಿ ನಿದ್ರೆ ಪೂರೈಸುತ್ತಾರೆ. ನನಗೆ ಅದು ಸಾಧ್ಯವಿರಲಿಲ್ಲ. ಅದಕ್ಕಾಗಿ, ‘ಪರವೂರಿಗೆ ಹೋದಾಗ ನನಗೆ ಬ್ರಾಹ್ಮಣರ ಮನೆಯಲ್ಲೇ ವಾಸ್ತವ್ಯ, ಊಟದ ವ್ಯವಸ್ಥೆ ಮಾಡಿಕೊಡಿ. ಇಲ್ಲವಾದರೆ ಮರುದಿನವೇ ಮನೆಗೆ ಹೋಗುತ್ತೇನೆ ಅಂದಿದ್ದೆ. ಅದಕ್ಕೆ ಒಪ್ಪಿಕೊಂಡು ಎಲ್ಲ ಕಡೆಯೂ ನನಗೆ ಸೂಕ್ತ ವ್ಯವಸ್ಥೆ ಮಾಡಿಕೊಡುತ್ತಿದ್ದರು. ಅದೆಷ್ಟೋ ಯಕ್ಷಗಾನ ಅಭಿಮಾನಿಗಳೂ,‘ಬೈಪಾಡಿತ್ತಾಯರು ಬರ್‍ತಾರಾ? ಹಾಗಿದ್ದರೆ ನಮ್ಮ ಮನೆಗೆ ಬರಲಿʼ ಎಂದು ಕರೆಯುತ್ತಿದ್ದರು. ಇಲ್ಲೆಲ್ಲಾ ನಿದ್ರೆಗೆ ತೊಂದರೆಯಾಗಿದ್ದು ನಿಜ. ಆತ್ಮೀಯರೆನಿಸಿದವರ ಮನೆಗೆ ಹೋದಾಗ ಅಲ್ಲಿನ ಮಕ್ಕಳು ‘ಓ, ಹಗಲು ಮಲಗುವವರು ಬಂದ್ರು’ ಅಂತೆಲ್ಲ ಹೇಳಿದ್ದನ್ನು ಈಗ ನೆನಪಿಸಿಕೊಂಡರೆ ನಗು ಬರುತ್ತದೆ.

ಕೆಲವೊಮ್ಮೆ, ಆ ಊರಿಗೆ ಹೋದ ಬಳಿಕ ಚೌಕಿಯಂತೆ ಕಟ್ಟಿದ ನಂತರ, ಅದರೊಳಗೆ ಮಲಗಿದ ಉದಾಹರಣೆಗಳೂ ಇವೆ. ಅಲ್ಲಿ ಹೋಗಿ, ಸ್ನಾನ ಮುಗಿಸಿ, ಬಟ್ಟೆ ಒಗೆದು ಮಲಗುತ್ತಿದ್ದೆವು. ಬಿಡಾರದಲ್ಲೇ ಊಟ ತಯಾರಿಸುವವರು ಇದ್ದರು, ಅವರು ಮೊದಲೇ ಹೇಳಿದರೆ ನಮಗಾಗಿ ತೆಗೆದು ಇರಿಸುತ್ತಿದ್ದರು. ನಂತರ ನಮಗೆ ಎಚ್ಚರವಾದಾಗ ಎದ್ದು ಊಟ ಮಾಡುತ್ತಿದ್ದೆವು. ಪುನಃ ಸಂಜೆಯವರೆಗೆ ನಿದ್ದೆ. ಮತ್ತೆ ಎದ್ದು ಎಲ್ಲ ನಿತ್ಯವಿಧಿಗಳನ್ನು ಪೂರೈಸಿ, ಆರೇಳು ಗಂಟೆಯ ಹೊತ್ತಿಗೆ ಚೌಕಿ ಪ್ರವೇಶಿಸುತ್ತಿದ್ದೆವು.

ಅಲ್ಲಿ ಆ ದಿನದ ಪ್ರಸಂಗದ ಬಗ್ಗೆ ಸಮಾಲೋಚನೆ, ಚೆಂಡೆ-ಮದ್ದಳೆ ಶ್ರುತಿ ಮಾಡುವ ಕೆಲಸ, ಮೇಳದ ಧಣಿಗಳೊಂದಿಗೆ ಚರ್ಚಿಸಿ ಪಾತ್ರ ಹಂಚಿಕೆಯ ಕೆಲಸ, ಯಾವ ಪಾತ್ರಧಾರಿಗಳಿದ್ದಾರೆ, ಯಾರು ರಜೆಯಲ್ಲಿದ್ದಾರೆ ಅಂತೆಲ್ಲ ತಿಳಿದುಕೊಂಡು, ಹಿರಿಯ-ಕಿರಿಯ ಕಲಾವಿದರೊಂದಿಗೆ ಮಾತನಾಡಿ, ಪ್ರಸಂಗ ಹೇಗೆ ಹೋಗಬೇಕು ಅಂತೆಲ್ಲ ಸಮಾಲೋಚನೆ ನಡೆಯುತ್ತಿತ್ತು. ನಂತರ ಚೌಕಿ ಪೂಜೆಯಾಗಿ, ರಂಗಸ್ಥಳದಲ್ಲಿ ಬಾಲಗೋಪಾಲ (ಕಟ್ಟೆ ವೇಷ), ಡೌರು, ಮುಖ್ಯ ಸ್ತ್ರೀವೇಷ, ಕಚ್ಚೆ ಸ್ತ್ರೀವೇಷ, ಪ್ರಸಂಗ ಪೀಠಿಕೆ ಬಳಿಕ ಕ್ಲುಪ್ತ ಸಮಯಕ್ಕೆ ‘ಅಂಬುರುಹದಳ ನೇತ್ರೆ’ಯೊಂದಿಗೆ ಆ ದಿನದ ಆಟ ಶುರುವಾಗುತ್ತಿತ್ತು.

ಔದ್ಯೋಗಿಕವಾಗಿಯೇ ಆಗಲಿ, ಕೌಟುಂಬಿಕವಾಗಿಯೇ ಆಗಲಿ ಹೆಣ್ಣುಮಕ್ಕಳ ದಾರಿ ಸುಲಭದ್ದೇನಲ್ಲ. ಹೆಣ್ಣು ಎಂಬ ಕಾರಣಕ್ಕಾಗಿಯೇ ಇಂದಿಗೂ ಉದ್ಯೋಗದ ಸ್ಥಳದಲ್ಲಿ ಕಿರುಕುಳಗಳನ್ನು ಅನುಭವಿಸುವವರು ಅನೇಕರಿದ್ದಾರೆ. ನಾನು ವೃತ್ತಿಗೆ ಸೇರಿದ ಆ ಕಾಲದಲ್ಲಂತೂ ಮಹಿಳೆಯೊಬ್ಬಳು ಬಂದು ಎಲ್ಲರ ಜತೆ ಪ್ರತಿನಿತ್ಯ ಪ್ರದರ್ಶನದಲ್ಲಿ ಪಾಲ್ಗೊಳ್ಳುವುದು ಹೊಸದೇ ಹೊಸದು. ಹೀಗಾಗಿ ಭಿನ್ನ ನೋಟಗಳಿಂದ ನೋಡಿದವರಿರಬಹುದು, ಮಾತಾಡಿಸಿದವರೂ ಇರಬಹುದು. ಆದರೆ, ಎಲ್ಲರಲ್ಲಿಯೂ ಎಷ್ಟು ಬೇಕೋ ಅಷ್ಟೇ ಮಾತಾಡುತ್ತಿದ್ದೆ. ಎಷ್ಟು ದೂರವಿಡಬೇಕೋ ಅಷ್ಟು ದೂರವಿಡುತ್ತಿದ್ದೆ. ಪತಿಯೂ ಜೊತೆಗಿದ್ದುದೇ ಈ ವಿಷಯದಲ್ಲಿ ನನಗೆ ಬಹುದೊಡ್ಡ ಸುರಕ್ಷತೆಯ ಭಾವನೀಡಿತ್ತು. ಅನೇಕ ವೇಷಧಾರಿಗಳಿಗೆ ಈಕೆ ಹೆಣ್ಣು ಎಂಬ ಲಘುಭಾವ ಇದ್ದಿತೇನೋ. ಒಮ್ಮೆ ಯಾರೋ ವೇಷಧಾರಿಗಳು ನನ್ನನ್ನು ಕುರಿತು ತಮಾಷೆ ಮಾಡಿದರು. ನಾನು ಕೂಡಲೇ,‘ನಾನು ನನ್ನ ಪಾಡಿಗೆ ಇದ್ದೇನೆ. ನಿಮಗೆ ಏನೂ ತೊಂದರೆ ಕೊಟ್ಟಿಲ್ಲ. ಸುಮ್ಮನೇ ನನಗೇಕೆ ತೊಂದರೆ ಕೊಡುತ್ತೀರಿʼ ಎಂದೆ. ವಿಷಯ ತಿಳಿದ ಮೇಳದ ಯಜಮಾನರು ಕೂಡ, ‘ಅಮ್ಮನಿಗೆ ಏನಾದರೂ ಹೇಳಿದರೆ ಜಾಗ್ರತೆʼ ಎಂದು ಎಚ್ಚರಿಸಿದರು. ಹೀಗಾಗಿ ಆಮೇಲೆ ಏನೂ ತೊಂದರೆ ಆಗಲಿಲ್ಲ. ಅರುವ ನಾರಾಯಣ ಶೆಟ್ಟರು ಒಳ್ಳೆಯ ನಾಯಕತ್ವದ ಗುಣವಿದ್ದವರು. ಅವರು ಮೇಳವನ್ನು ಚೆನ್ನಾಗಿ ನಡೆಸುತ್ತಿದ್ದರು. ನಮಗೆ ಒಳ್ಳೆಯ ಅನುಕೂಲವನ್ನೂ ಮಾಡಿಕೊಟ್ಟರು. ತಿರುಗಾಟಕ್ಕೆ ಹೋದಾಗಲೆಲ್ಲ ಹಗಲಿನಲ್ಲಿ ಒಳ್ಳೆಯ ಮನೆಗಳಲ್ಲಿ ವಾಸ್ತವ್ಯ ಒದಗಿಸಿಕೊಡುತ್ತಿದ್ದರು. ರಾತ್ರಿ ಹೊತ್ತಿನಲ್ಲೂ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಚೌಕಿಯಲ್ಲೇ ಬೇರೆಯೇ ಕೋಣೆಯಂತೆ ಪ್ರತ್ಯೇಕವಾಗಿ ಜಾಗ ಮಾಡಿಕೊಡುತ್ತಿದ್ದರು. ಡೇರೆ ಕಟ್ಟುವಾಗಲೇ ನಮಗಾಗಿ ಮಾಡುತ್ತಿದ್ದ ಈ ಕೋಣೆಗಾಗಿ ನೆಲದಲ್ಲಿ ಪ್ರತ್ಯೇಕವಾಗಿ ಕಂಬ ಹುಗಿದೇ ಕಟ್ಟಲಾಗುತ್ತಿತ್ತು. ಯಾರೂ ಅದನ್ನು ಮೇಲಕ್ಕೆತ್ತಲಾಗದಂತೆ ಭದ್ರವಾಗಿ ನಿರ್ಮಿಸುತ್ತಿದ್ದರು. ಮೇಳಕ್ಕೆ ಸೇರುವಾಗ ನಾವು ಈ ಷರತ್ತು ಹಾಕಿಯೇ ಸೇರುತ್ತಿದ್ದೆವು. ಕ್ರಮೇಣ ಯಾವುದೇ ಮೇಳದಲ್ಲಿದ್ದರೂ ಇದೇ ಸಂಪ್ರದಾಯ ರೂಢಿಗೆ ಬಂತು. ಹೀಗಾಗಿ ಭಾಗವತಿಕೆ ಇಲ್ಲದ ಹೊತ್ತಿನಲ್ಲಿ ಮಲಗಿ ವಿಶ್ರಮಿಸುವುದಕ್ಕೆ ಏನೂ ತೊಂದರೆಯಾಗುತ್ತಿರಲಿಲ್ಲ. ಕುಡಿದುಕೊಂಡು ಬರುವವರು, ಹೆಣ್ಣು ಎಂದು ವಿಶೇಷವಾಗಿ ನೋಡುವವರು ಪ್ರೇಕ್ಷಕರಲ್ಲೂ ಇದ್ದರು, ಮೇಳದೊಳಗೂ ಇದ್ದರು. ಕೆಲವೊಮ್ಮೆ ಚೌಕಿಗೂ ಕುಡಿದುಕೊಂಡೇ ಪ್ರೇಕ್ಷಕರು ಬರುತ್ತಿದ್ದರು, ಮಾತನಾಡಿಸುತ್ತಿದ್ದರು. ಆದರೆ, ನಾರಾಯಣ ಶೆಟ್ಟರ ಗದರಿಕೆ ಹಾಗೂ ನನ್ನ ಯಜಮಾನರು ನನ್ನ ಜತೆಯಲ್ಲೇ ಇದ್ದುದು ನನಗೆ ರಕ್ಷಣೆಯಾಗಿ ಒದಗಿಬಂತು ಎಂದೇ ಹೇಳಬೇಕು. ನನಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಲಿಲ್ಲ. ಈ ಮೇಳಕ್ಕೆ ಸೇರಿದ ಸಮಯದಲ್ಲೇ ನಮ್ಮ ವಾಸಸ್ಥಳವೂ ಬದಲಾಯಿತು. ನಾವು ಅರುವದಲ್ಲೇ ಮನೆ ಮಾಡಿದೆವು.

ಮುಂದಿನ ಬಿಡಾರ ದೂರವಿದ್ದರೆ, ಆ ದಿನ ಬೆಳಿಗ್ಗೆ ಆಟ ಮುಗಿಸಿ ಅತ್ತ ಹೋಗುವಾಗ ದಾರಿ ಮಧ್ಯೆ ಸಿಕ್ಕಿದ, ನಮ್ಮ ಯಕ್ಷಗಾನ ಕಲಾವಿದರ ವಲಯದಲ್ಲಿ ಕೇಳಿ ತಿಳಿದಿರುವಂತೆ ‘ಒಳ್ಳೆಯ’ ಎಂದುಕೊಳ್ಳಬಹುದಾದ ಹೋಟೆಲ್‌ಗೆ ಹೋಗಿ ಕಾಫಿ ತಿಂಡಿ ಆಗುತ್ತಿತ್ತು.

ತೂಯರ ಮದಪಡೇ…

ಕ್ರಮೇಣ ಅರುವ ಮೇಳದಲ್ಲಿ ನಾನು ಭಾಗವತಳಾಗಿ ಜನಮೆಚ್ಚುಗೆ ಗಳಿಸಿದೆ. ಹೀಗಾಗಿ ಅಲ್ಲಿ ಆರಂಭದ ವರ್ಷಗಳಲ್ಲಿ ಆಟದ ಪ್ರಚಾರ ಮಾಡುವಾಗಲೆಲ್ಲ ‘ಲೀಲಾವತಿ ಬೈಪಾಡಿತ್ತಾಯರ ಭಾಗವತಿಕೆ, ಕೇಳಲು ಮರೆಯದಿರಿʼ ಎಂದು ಪ್ರಚಾರ ಮಾಡುತ್ತಿದ್ದರು!

ತುಳುವಿನಲ್ಲಿ, ‘ಅಣ್ಣನಕುಲೇ, ಅಕ್ಕನಕುಲೇ ಅರುವ ಮೇಳದಕ್ಲೆನ ಒಂಜೇ ಒಂಜಿ ಆಟ…
ತೂಯರ ಮದಪಡೇ, ಮದತ್ ನಿರಾಶರಾವಡೇ… ವಿಶೇಷ ಆಕರ್ಷಣೆಯಾದ್
ಗಾನಕೋಗಿಲೆ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರೆನ ಕಂಚಿನ ಕಂಠದ ಭಾಗವತಿಕೆನ್
ಕೇನರ ಮದಪಡೇ…ʼ ಅನ್ನುತ್ತಿದ್ದರು. ನನಗೆ ಇದರಿಂದ ಮುಜುಗರವಾಗುತ್ತಿತ್ತು. ಆದರೆ ನಮ್ಮ ಬಿಡಾರ ಇದ್ದ ಕಡೆ ಅಷ್ಟಾಗಿ ಮೈಕ್‌ನಲ್ಲಿ ಕೂಗುತ್ತಿರಲಿಲ್ಲ. ಯಾಕೆಂದರೆ ಕಲಾವಿದರಿಗೆ ಹಗಲು ನಿದ್ರೆಗೆ ತೊಂದರೆಯಾಗಬಾರದೆಂಬ ಕಾಳಜಿ.

(ವಿದ್ಯಾರಶ್ಮಿ ಪೆಲತಡ್ಕ)

ಒಮ್ಮೆ ಶಿಬಾಜೆಯಲ್ಲಿ ಅರುವ ಮೇಳದ ಆಟ. ಪ್ರಸಂಗ ನೆನಪಿಗೆ ಬರುತ್ತಿಲ್ಲ. ಕಾಂಚನ ಸಂಜೀವ ರೈ ಹಾಗೂ ಅರುವ ನಾರಾಯಣ ಶೆಟ್ಟರ ವೇಷವಿತ್ತು ಆ ದಿನ. ಆ ದಿನ ನನಗೆ ಅತಿಸಾರದಂತಾಗಿ ಏಳುವುದಕ್ಕೂ ಆಗುತ್ತಿರಲಿಲ್ಲ. ಆಯಾಸಗೊಂಡಿದ್ದೆ. ಡಾಕ್ಟರನ್ನು ಕರೆಸಿದ್ದರು. ನೋಡಲು ಬಂದ ವೈದ್ಯರಾದ ಡಾ. ಶ್ರೀಮತಿಯವರು ಔಷಧ ಕೊಟ್ಟು ‘ರಾತ್ರಿಯ ಹೊತ್ತಿಗೆ ನೀವು ಹುಷಾರಾಗಿ ಹಾಡುತ್ತೀರಿ, ಹಾಡಲೇಬೇಕುʼ ಎಂದು ಹೋಗಿದ್ದರು. ಊರವರೂ ನಾರಾಯಣ ಶೆಟ್ಟರ ವೇಷಕ್ಕೆ ನನ್ನ ಪದ ಬೇಕೇ ಬೇಕು ಎಂದರು. ಕೊನೆಗೂ ರಾತ್ರಿಯ ವೇಳೆಗೆ ಸ್ವಲ್ಪ ಚೇತರಿಸಿಕೊಂಡು ಹಾಡಲು ಕೂತಿದ್ದೆ. ಹೇಗೋ ಸುಮಾರಾಗಿ ಚೆನ್ನಾಗಿಯೇ ಹಾಡಿದ್ದೆ. ಪ್ರಸಂಗ ಮುಗಿದಾಗ ಕಲಾಭಿಮಾನಿಗಳು ರಂಗಸ್ಥಳಕ್ಕೇ ಬಂದು ಅಭಿಮಾನ ತೋರಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಕಲೆ ಕಲಾವಿದರಿಗೆ ಕೊಡುವ ಭಾಗ್ಯ ಇದು, ಕಲಾಭಿಮಾನಿಗಳ ಅಭಿಮಾನ.

ಯಕ್ಷಗಾನ ಎಂಬುದು ಆರಾಧನಾ ಕಲೆ ಮತ್ತು ಇದರಲ್ಲಿ ಚೌಕಿಯಲ್ಲಿ ದೇವರೇ ಇರುವುದರಿಂದ ತಿಂಗಳ ರಜೆಯ ವೇಳೆ ಮೂರು ದಿನ ನಾನು ಆಟಕ್ಕೆ ಹೋಗುತ್ತಿರಲಿಲ್ಲ. ಆ ತಿಂಗಳೂ ಅದೇ ರೀತಿಯ ರಜೆಯಲ್ಲಿದ್ದೆ ನಾನು. ಸಾಮಾನ್ಯವಾಗಿ ಆ ಊರಿನಲ್ಲಿ ಆಟವಾಡಿದರೆ ಹೌಸ್‌ಫುಲ್ ಆಗುತ್ತಿತ್ತು. ಆ ದಿನ ಅದೇಕೋ ಏನೋ ಜನರಿಗೆ ಈ ದಿನ ಲೀಲಾವತಿ ಬೈಪಾಡಿತ್ತಾಯರು ಹಾಡುವುದಿಲ್ಲ ಎಂದು ಸಂದೇಹ ಬಂದಿತ್ತಂತೆ. ಕೆಲವರಂತೂ ಎರಡು-ಮೂರು ಕಾರಿನಲ್ಲಿ ಬಂದವರು ಕೌಂಟರಿನಲ್ಲಿ ವಿಚಾರಿಸಿ ಟಿಕೆಟ್ ತೆಗೆದುಕೊಳ್ಳದೆ ಹೋದರಂತೆ. ಇದೆಲ್ಲ ಆದ ಬಳಿಕ ಮೇಳದ ಯಜಮಾನರಾದ ನಾರಾಯಣ ಶೆಟ್ಟರು, ‘ನೀವಿಲ್ಲದ ದಿನ ಕಲೆಕ್ಷನ್ ಕಡಿಮೆಯಾಯಿತು ಅಮ್ಮʼ ಅಂದಿದ್ದರು.

ಅದೆಷ್ಟೋ ಬಾರಿ ನಾನು ರಜೆಯ ನಿಮಿತ್ತ ಪದ ಹಾಡದೇ ಇದ್ದಾಗ ಯಕ್ಷಗಾನ ನೋಡಲು ಬಂದ ಅಭಿಮಾನಿಗಳು ‘ಹ್ಯಾಂಡ್‌ಬಿಲ್‌ನಲ್ಲಿ ಸುಮ್ಮನೇ ಹೆಸರು ಹಾಕಿ ಮೋಸ ಮಾಡುತ್ತಿದ್ದೀರಾ?ʼ ಎಂದು ಜಗಳವಾಡಿದ್ದರು ಕೂಡ.

ಒಮ್ಮೆ ಉಡುಪಿ ಸಮೀಪ ಎಲ್ಲೋ ಒಂದು ಕಡೆ ಆಟ. ಆ ದಿನ ಮಹಿಳಾ ಭಾಗವತರು ಹಾಡುತ್ತಾರೆಂದು ವಿಶೇಷ ಪ್ರಚಾರ ಮಾಡಲಾಗಿತ್ತು. ಜನ ಸಿಕ್ಕಾಪಟ್ಟೆ ಸೇರಿದ್ದರು. ಎಷ್ಟೆಂದರೆ ಅವರೆಲ್ಲರಿಗೂ ಕೂರಲು ಸ್ಥಳವಿಲ್ಲದಾಯಿತು. ಅದು ಡೇರೆ ಮೇಳವಾದ್ದರಿಂದ ಕೊನೆಗೆ ಟೆಂಟ್ ಬಿಚ್ಚಿಸಿ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಬೇಕಾಯಿತು. ೮೦ರ ದಶಕದಲ್ಲಿ ಹಲವು ಪ್ರದರ್ಶನಗಳ ಸಂದರ್ಭದಲ್ಲಿ ಹೀಗಾಗಿದೆ. ಅದನ್ನು ನೆನಪಿಸಿಕೊಂಡರೆ ಈಗಲೂ ಹೆಮ್ಮೆ ಅನಿಸುತ್ತದೆ.

(ಕೃತಿ: ಯಕ್ಷ ಗಾನ ಲೀಲಾವಳಿ (ಲೀಲಾವತಿ ಬೈಪಾಡಿತ್ತಾಯ ಆತ್ಮಕಥೆ), ನಿರೂಪಕರು: ವಿದ್ಯಾರಶ್ಮಿ ಪೆಲತಡ್ಕ, ಪ್ರಕಾಶಕರು: ಅಭಿನವ ಪ್ರಕಾಶನ, ಬೆಲೆ: 150/-)