ಕಾರ್ಲ್ ಬೆಂಜ್ ತನ್ನ ಪರಿಶ್ರಮದಿಂದ ನಿರ್ಮಿಸಿದ ಚಲಿಸುವ ವಾಹನದ ಬಗ್ಗೆ ಅವನಿಗೆ ಅನುಮಾನವಿತ್ತು. ಜೊತೆಗೆ ಸ್ಪಾರ್ಕ್ ಪ್ಲಗ್, ಬ್ಯಾಟರಿ ತಂತ್ರಜ್ಞಾನ ಇನ್ನೂ ಇರದ ಕಾರಣ, ನಿಂತಲ್ಲೇ ಕಾರನ್ನು ಪ್ರಾರಂಭಿಸಲು ಸಾಧ್ಯವಿರಲಿಲ್ಲ. ಈ ಕಾರಿಗೆ ಸ್ಟಿಯರಿಂಗ್ ಕೂಡ ಇಲ್ಲ. ದಿಕ್ಕು ಬದಲಾಯಿಸಲು ಸೈಕಲ್ ಗಾಲಿಗೆ ಕೊಡುವ ರೀತಿಯ ಒಂದು ಹತೋಟಿ ಮಾತ್ರ ಇದೆ.
“ದೂರದ ಹಸಿರು” ಸರಣಿಯಲ್ಲಿ ಜೆರ್ಮನಿಯ ಕಾರು ಸಂಗ್ರಹಾಲಯದ ಕುರಿತು ಗುರುದತ್ ಅಮೃತಾಪುರ ಬರಹ

ಕಾರ್ ಕಾರ್ ಕಾರ್ .. ಎಲ್ನೋಡಿ ಕಾರ್.. ಈ ಹಾಡನ್ನು ಗುನುಗದವರಿಲ್ಲ. ಜೆರ್ಮನಿಯ ಸ್ಟುಟ್ ಗಾರ್ಟ್ ನಗರದ ಹೃದಯ ಭಾಗದಲ್ಲಿರುವ ಮರ್ಸಿಡಿಸ್ ಕಾರು ಸಂಗ್ರಹಾಲಯದಲ್ಲಿ ಕಾಲು ನೋವು ಬರುವಷ್ಟು ಸುತ್ತಿದರೂ ಮುಗಿಯಲಾರದಷ್ಟು ಕಾರುಗಳ ಸಂಗ್ರಹವಿದೆ. ಬರೋಬ್ಬರಿ ಆರು ಅಂತಸ್ತಿನ ವಿಶಾಲವಾದ ಈ ಸಂಗ್ರಹಾಲಯದಲ್ಲಿ ಹಲವಾರು ವಿಶೇಷಗಳಿವೆ, ಇತಿಹಾಸವಿದೆ, ನಿಬ್ಬೆರಗಾಗಿಸುವ ಅಂಶಗಳಿವೆ. ಹೆಚ್ಚಿನ ಮಾಹಿತಿಗಾಗಿ ಎಲ್ಲೆಡೆ ಫಲಕಗಳನ್ನು ಅಳವಡಿಸಲಾಗಿದೆ, ಆಡಿಯೋ ಗೈಡ್ ಸೌಲಭ್ಯವಿದೆ.

ಮರ್ಸಿಡಿಸ್ ಕಾರು ಸಂಗ್ರಹಾಲಯದೊಳಗೆ ಟಿಕೆಟ್ ತೋರಿಸಿ ಒಳ ಹೊಕ್ಕರೆ ವಿಚಿತ್ರವಾದ ಏರಿಳಿ ತೇರು ನಮ್ಮನ್ನು ಸ್ವಾಗತಿಸುತ್ತದೆ. ನೆಲ ಮಾಳಿಗೆಯಿಂದ ಆರನೇ ಅಂತಸ್ತಿನವರೆಗೆ ಮೇಲೇರುವಾಗ, ಒಂದೆಡೆ ಗಾಜಿನ ಗೋಡೆಯಿರುವುದರಿಂದ ಇಡೀ ಸಂಗ್ರಹಾಲಯದ ಇಣುಕು ನೋಟ ಮನಸ್ಸಿಗೆ ಸಂತಸ ನೀಡುತ್ತದೆ. ಕೊನೆಯ ಅಂತಸ್ತಿನಿಂದ ಕೆಳಗಿಳಿಯುತ್ತಾ ಸಾಗುವುದು ಇಲ್ಲಿನ ವಿನ್ಯಾಸ.

(ಪ್ರಪಂಚದ ಮೊದಲೆರಡು ಕಾರುಗಳು)

ಪ್ರಪಂಚದ ಮೊದಲ ಕಾರಿನಿಂದ ಪ್ರಾರಂಭವಾಗುವ ಕಾರುಗಳ ಪ್ರದರ್ಶನ ಸಮಯದ ರೇಖೆ ಸಾಗುತ್ತಿದ್ದಂತೆ ವಾಹನ ತಂತ್ರಜ್ಞಾನದಿಂದ ಆದ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಈ ವಸ್ತು ಸಂಗ್ರಹಲಾಯದ ಒಟ್ಟು ವಿಸ್ತೀರ್ಣ 1,78,000 ಚದರ ಅಡಿಗಳು! ಇಷ್ಟು ದೊಡ್ಡ ಜಾಗದಲ್ಲಿ ಸುಮಾರು ನೂರ ಅರವತ್ತಕ್ಕೂ ಹೆಚ್ಚು ಕಾರುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. 2006 ರಲ್ಲಿ ಪ್ರಾರಂಭವಾದ ಈ ಸಂಗ್ರಹಲಾಯದಲ್ಲಿ ಕಾರು ಪ್ರಿಯರಿಗೆ ಸಮಯ ಕಳೆಯುವುದು ಗೊತ್ತಾಗುವುದೇ ಇಲ್ಲ. 1886 ರಲ್ಲಿ ನಿರ್ಮಿತವಾದ ಅತ್ಯಂತ ಹಳೆಯ ಕಾರಿನ ಹೊರ ನೋಟದಿಂದ ಪ್ರಾರಂಭವಾಗುವ ಈ ಪಯಣ ತೀರಾ ಇತ್ತೀಚೆಗಿನ ಎಲೆಕ್ಟ್ರಿಕ್ ಕಾರುಗಳವರೆಗೂ ಬಂದು ನಿಂತಿದೆ.

1886 ರಲ್ಲಿ ಮೊದಲು ನಿರ್ಮಾಣವಾದ ಕಾರಿನ ಮಾಹಿತಿಗಳು ಕುತೂಹಲಕರವಾಗಿವೆ. ಇದು ಮೂರೇ ಗಾಲಿಯ ಕಾರು. ಇದು ಪ್ರಪಂಚದಲ್ಲಿ ಇನ್ನೂ ಉಳಿದಿರುವ ಎರಡೇ ಎರಡು ಪುರಾತನ ಕಾರುಗಳಲ್ಲಿ ಒಂದು! ಕಾರ್ಲ್ ಬೆಂಜ್ ತನ್ನ ಪರಿಶ್ರಮದಿಂದ ನಿರ್ಮಿಸಿದ ಚಲಿಸುವ ವಾಹನದ ಬಗ್ಗೆ ಅವನಿಗೆ ಅನುಮಾನವಿತ್ತು. ಜೊತೆಗೆ ಸ್ಪಾರ್ಕ್ ಪ್ಲಗ್, ಬ್ಯಾಟರಿ ತಂತ್ರಜ್ಞಾನ ಇನ್ನೂ ಇರದ ಕಾರಣ, ನಿಂತಲ್ಲೇ ಕಾರನ್ನು ಪ್ರಾರಂಭಿಸಲು ಸಾಧ್ಯವಿರಲಿಲ್ಲ. ಈ ಕಾರಿಗೆ ಸ್ಟಿಯರಿಂಗ್ ಕೂಡ ಇಲ್ಲ. ದಿಕ್ಕು ಬದಲಾಯಿಸಲು ಸೈಕಲ್ ಗಾಲಿಗೆ ಕೊಡುವ ರೀತಿಯ ಒಂದು ಹತೋಟಿ ಮಾತ್ರ ಇದೆ. ಇಬ್ಬರು ಹಿಂದಿನ ಚಕ್ರಗಳನ್ನು ತಳ್ಳಿ ಕಾರು ಮುಂದೆ ಸಾಗುವಾಗ ಮಾತ್ರ ಕಾರಿನ ಎಂಜಿನ್ ಪ್ರಾರಂಭವಾಗಲು ಸಾಧ್ಯ. ನಿಮ್ಮ ಕಾರಿನ ಬ್ಯಾಟರಿ ಕೈ ಕೊಟ್ಟರೆ ಹೇಗೆ ಕಾರನ್ನು ದಬ್ಬಿದಾಗ ಮಾತ್ರ ಪ್ರಾರಂಭಿಸಲು ಸಾಧ್ಯವೋ ಹಾಗೆ.

ಕೇವಲ ಪೇಟೆಂಟ್‌ಗಾಗಿ ಮತ್ತು ಹಲವು ಪ್ರದರ್ಶನಗಳಲ್ಲಿ ತೋರಿಸಲು ಮಾತ್ರ ಕಾರ್ಲ್ ಬೆಂಜ್ ಕಾರನ್ನು ಚಲಾಯಿಸಿ ತೋರಿಸಿದ್ದನಂತೆ. ಆತನ ಉದ್ಯಮದಲ್ಲಿ ಪಾಲುದಾರಳೂ ಆಗಿದ್ದ “ಬಾರ್ತ ಬೆಂಜ್”ಗೆ ಮಾತ್ರ ತನ್ನ ಗಂಡನ ಹೊಸ ಅನ್ವೇಷಣೆಯ ಮೇರೆಗೆ ಅಪಾರವಾದ ನಂಬಿಕೆಯಿತ್ತು. ಆಕೆಗೂ ಸಹ ಕಾರು ಚಲಾಯಿಸಲು ಅನುಮತಿ ನೀಡಿರದ ಕಾರ್ಲ್ ಬೆಂಜ್ ಕಣ್ಣು ತಪ್ಪಿಸಿದ್ದಳು ಬಾರ್ತ.

ಪ್ರಪಂಚದ ಮೊದಲ ಕಾರಿನಿಂದ ಪ್ರಾರಂಭವಾಗುವ ಕಾರುಗಳ ಪ್ರದರ್ಶನ ಸಮಯದ ರೇಖೆ ಸಾಗುತ್ತಿದ್ದಂತೆ ವಾಹನ ತಂತ್ರಜ್ಞಾನದಿಂದ ಆದ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಈ ವಸ್ತು ಸಂಗ್ರಹಲಾಯದ ಒಟ್ಟು ವಿಸ್ತೀರ್ಣ 1,78,000 ಚದರ ಅಡಿಗಳು! ಇಷ್ಟು ದೊಡ್ಡ ಜಾಗದಲ್ಲಿ ಸುಮಾರು ನೂರ ಅರವತ್ತಕ್ಕೂ ಹೆಚ್ಚು ಕಾರುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

1888 ರ ಆಗಸ್ಟ್ 5 ರಂದು ತನ್ನ ಗಂಡನ ಕಣ್ಣು ತಪ್ಪಿಸಿ, ಮಕ್ಕಳಾದ ರಿಚರ್ಡ್ ಮತ್ತು ಆಯ್ಗನ್ (Eugen) ಸಹಾಯದಿಂದ ಕಾರನ್ನು ಪ್ರಾರಂಭಿಸಿಬಿಟ್ಟಳು. ಅವರಿಬ್ಬರನ್ನು ಜೊತೆಗೆ ಕರೆದೊಯ್ದು ಸುಮಾರು ನೂರು ಕಿಲೋಮೀಟರ್ ದೂರ ತಲುಪಿದ್ದಳು! ಜೆರ್ಮನಿಯ ಮನ್ ಹೈಮ್‌ನಿಂದ ಫೋರ್ಜ್ ಹೈಮ್‌ವರೆಗೂ ನಡೆದ ಕಾರಿನ ಪಯಣ ಪ್ರಪಂಚದ ಮೊಟ್ಟ ಮೊದಲ ಅಧಿಕೃತ ಕಾರು ಚಲಾವಣೆ ಎಂದು ದಾಖಲಾಯಿತು! ನೋಡಿ, ಪ್ರಪಂಚದ ಮೊಟ್ಟ ಮೊದಲ ಕಾರು ಚಲಾಯಿಸಿದ ವ್ಯಕ್ತಿ ಒಂದು ಹೆಣ್ಣು! ಆದರೆ ಇಂದು ಹೆಣ್ಣಿನ ಕಾರು ಚಲಾವಣೆಯ ಕೌಶಲ್ಯದ ಬಗೆಗೆ ಹಲವಾರು ನಗೆ ಹನಿಗಳು ಹರಿದಾಡುತ್ತಿವೆ. ಈ ಲೇಖನವನ್ನು ಓದುತ್ತಿರುವ ಮಹಿಳೆಯರಿಗೆ “ಪ್ರಪಂಚದ ಮೊಟ್ಟ ಮೊದಲ ಕಾರು ಚಲಾಯಿಸಿದ ವ್ಯಕ್ತಿ ಒಂದು ಹೆಣ್ಣು” ಎನ್ನುವ ವಿಷಯ ತಿಳಿದು ಆನಂದವಾಗಿರಬಹುದು. ಮುಂದೆ ಯಾರಾದರೂ ಹೆಣ್ಣು ಕುಲಕ್ಕೆ ಕಾರು ಚಲಾಯಿಸಲು ಸರಿಯಾಗಿ ಬರಲ್ಲ ಎಂದು ಕೆಣಕಿದರೆ, ಬೇಸರ ಮಾಡಿಕೊಳ್ಳದೆ ಹೆಮ್ಮೆ ಪಡಲು ಒಂದು ಕಾರಣ ಸಿಕ್ಕಿರಬಹುದು. ಬಾರ್ತಾ ಬೆಂಜ್ ಬಗ್ಗೆ ಒಂದು ಅದ್ಭುತ ವ್ಯಾಖ್ಯಾನ ಇದೆ, “She drove more than a CAR. She drove an INDUSTRY”! ಅಬ್ಬಾ, ಎಂತಹ ಅದ್ಭುತ ವಾಕ್ಯಗಳು.

ಸಮಕಾಲೀನ ಪರ್ವದಲ್ಲಿ ನಡೆದ ಮತ್ತೊಂದು ಬೆಳವಣಿಗೆ ಸಹ ಬಹಳ ಆಸಕ್ತಿಕರವಾಗಿದೆ. 1882 ರಲ್ಲಿ ಡೈಮ್ಲರ್ (Gottlieb Daimler) ತನ್ನ ಮನೆಯ ಉದ್ಯಾನದಲ್ಲಿ ಹವ್ಯಾಸದ ಹುಚ್ಚಿಗಾಗಿ, ಕನಸಿನ ಹಠಕ್ಕಾಗಿ ಒಂದು ಪ್ರಯೋಗಾಲಯವನ್ನು ಪ್ರಾರಂಭಿಸಿದ. ತನ್ನ ಪ್ರಯೋಗಗಳಿಗೆ ಒಬ್ಬ ತನ್ನಷ್ಟೇ ಉತ್ಸಾಹಿಯನ್ನು ನೇಮಿಸಿಕೊಂಡ. ಆತನ ಹೆಸರು ವಿಲ್ ಹೆಲ್ಮ್ ಮೇಬ್ಯಾಕ್ (Wilhelm Maybach). ಸತತ ಪ್ರಯತ್ನಗಳ ನಂತರ 1889 ರಲ್ಲಿ ಪ್ರಪಂಚದ ಮೊದಲ ಫೋರ್ ಸ್ಟ್ರೋಕ್ ಮತ್ತು ನಾಲ್ಕು ಚಕ್ರದ ಕಾರಿನ ಮಾದರಿಯನ್ನು ತಯಾರಿಸಿದರು. ಈ ಯಶಸ್ಸು ವಾಹನ ಉದ್ಯಮವೆಂಬ ಹೊಸ ಭಾಷ್ಯವನ್ನೇ ಬರೆಯಿತು. ಕನಸುಗಳ ಬೆನ್ನು ಹತ್ತಿದ ಮೂರೂ ಜನರ ಹೆಸರುಗಳು ಇಂದು ಸಿರಿವಂತರ ಅತ್ಯಂತ ಬೇಡಿಕೆಯ ಕಾರುಗಳು ಮತ್ತು ಲಾರಿಗಳಾಗಿವೆ. ಬೆಂಜ್ ಕಾರುಗಳು ಮತ್ತು ಡೈಮ್ಲರ್ ಲಾರಿಗಳು ಯಾರಿಗೆ ತಾನೇ ತಿಳಿದಿಲ್ಲ! ಕೋಟಿಗಳ ಬೆಲೆ ಬಾಳುವ ಮೇಬ್ಯಾಕ್ ಎಂಬ ಐಷಾರಾಮಿ ಕಾರಿನ ಸರಣಿ ಸಹ ಇದೆ. ವಾಹನ ಉದ್ಯಮಕ್ಕೆ ನಾಂದಿ ಹಾಡಿದ ಅಪ್ರತಿಮ ಉತ್ಸಾಹದ ಚಿಲುಮೆಗಳಾದ ಈ ತ್ರಿವಳಿಗಳ ಹೆಸರುಗಳು ಇಂದಿಗೆ ಅಜರಾಮರವಾಗಿವೆ ಎಂದರೂ ತಪ್ಪಾಗಲಾರದು. ಮರ್ಸಿಡಿಸ್ ಕಾರು ಸಂಗ್ರಹಾಲಯದಲ್ಲಿ ಪ್ರಸ್ತುತಪಡಿಸಿರುವ ಈ ಮೊದಲೆರಡು ಕಾರುಗಳು ಅತ್ಯಂತ ವಿಶೇಷ ಮತ್ತು ಕುತೂಹಲಕಾರಿ ಎನ್ನಿಸಿದವು.

ನಂತರ ನಡೆದ ಎರಡು ಮಹಾ ಯುದ್ಧಗಳು ವಾಹನ ಕ್ಷೇತ್ರವನ್ನೂ ಸೇರಿ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳಿಗೆ ತೊಡಕನ್ನುಂಟು ಮಾಡಿದವು. ಅಷ್ಟೊತ್ತಿಗಾಗಲೇ ಸ್ಥಾಪನೆಯಾಗಿದ್ದ ಹಲವಾರು ಕಾರ್ಖಾನೆಗಳು ಯುದ್ಧ ವಿಮಾನದ ಬಾಂಬುಗಳಿಗೆ ಸಿಲುಕಿ ನಡುಗಿ ಹೋದವು. ಈ ಕಂಪನಿಯ ಕಾರ್ಖಾನೆಗಳು ಸಹ ಹಾಳಾದವು. ಆದರೆ ಇಲ್ಲೊಂದು ವಿಶೇಷವಾದ ಅಂಶವಿದೆ. ಯುದ್ಧಗಳು ಹಾನಿ ಮಾಡಿದವಾದರೂ, ನಿಧಾನಗತಿಯಲ್ಲಿ ಚಲಿಸುತ್ತಿದ್ದ ಅನ್ವೇಷಣೆಗಳ ಸಾಕಾರವನ್ನು ಕ್ಷಿಪ್ರಗೊಳಿಸಿದವು. ಅದಕ್ಕೊಂದು ಉದಾಹರಣೆ ಎಂದರೆ; ಕೇವಲ ಚಲಿಸುವ ವಾಹನಗಳಿಂದ ವಿಮುಖಗೊಂಡು ಯುದ್ಧದ ಟ್ಯಾಂಕರ್, ಯುದ್ಧದ ಟ್ರಕ್ ಗಳನ್ನೂ ತಯಾರಿಸಬೇಕಾದಾಗ ಹೊಸ ಹೊಸ ಎಂಜಿನ್ ತಂತ್ರಜ್ಞಾನಗಳು ಹುಟ್ಟಿಕೊಂಡವು. ಯುದ್ಧಾನಂತರ ಈ ತಂತ್ರಜ್ಞಾನಗಳು ಸಾಮಾನ್ಯ ಜನರ ಉಪಯೋಗಕ್ಕೆ ಬಂದವು. ಅಕಸ್ಮಾತ್ ಯುದ್ಧ ನಡೆಯದೆ ಇದ್ದಿದ್ದರೆ, ಈ ತಂತ್ರಜ್ಞಾನಗಳು ಜನರನ್ನು ತಲುಪುವ ಹೊತ್ತಿಗೆ ಇನ್ನೂ ತಡವಾಗುತ್ತಿತ್ತು. ಎಲ್ಲ ಪರಿಸ್ಥಿತಿಗಳಲ್ಲಿ ಆಶಾದಾಯಕ ಅಂಶಗಳನ್ನು ಹುಡುಕುವುದಾದರೆ, ವಿಶ್ವ ಮಹಾ ಯುದ್ಧಗಳನ್ನು ತಂತ್ರಜ್ಞಾನದ ದೃಷ್ಟಿಯಿಂದ ಸಹ ಅವಲೋಕಿಸಬಹುದು. ಆದರೂ ಯುದ್ಧವೊಂದು ಮಾನವ ತನ್ನ ವಿರುದ್ಧ ತಾನೇ ಸಾರುವ ಸಂಘರ್ಷ. ಅದರಿಂದ ತುಂಬಲಾರದ ನಷ್ಟಗಳು ಸಂಭವಿಸಿರುವುದನ್ನು ಸಮರ್ಥಿಸಲು ಸಾಧ್ಯವಿಲ್ಲ.

ವಿಶ್ವ ಯುದ್ಧಗಳ ನಂತರ ವಿನೂತನ ಮಾದರಿಯ, ಶ್ರೀಮಂತರ ಜೋಳಿಗೆಗನುಸಾರವಾಗಿ ಕಾರುಗಳು ಮಾರುಕಟ್ಟೆಗೆ ಬಂದವು. ವೇಗ, ಕ್ಷಮತೆ ಮತ್ತು ಸುರಕ್ಷತೆಯ ವಿಭಾಗಗಳಲ್ಲಿ ಅಭೂತಪೂರ್ವ ಬದಲಾವಣೆಗಳಾದವು. ಕಾರಿನ ಕಂಪೆನಿಗಳೆಲ್ಲ ಸೇರಿ ರೇಸಿಂಗ್ ಸ್ಪರ್ಧೆ ಏರ್ಪಡಿಸುವುದು ಮುಂಚಿನಿಂದಲೂ ವಾಡಿಕೆ. ಇದೊಂದು ಅತ್ಯುತ್ತಮ ಮಾರುಕಟ್ಟೆಯ ತಂತ್ರ. ಇದರ ಭಾಗವಾಗಿ ಬಂದ ಮೆರ್ಸೆಡಿಸ್ ಬೆಂಜ್ ಕಂಪನಿಯ “ಸಿಲ್ವರ್ ಆರೋ” ಸರಣಿಯ ಕಾರುಗಳು ಸಹ ಇಲ್ಲಿ ಪ್ರದರ್ಶನಕ್ಕಿವೆ. ಅಲ್ಲಿಂದ ಹಿಡಿದು ಇತ್ತೀಚಿನವರೆಗಿನ ಫಾರ್ಮುಲಾ ಒನ್ ರೇಸಿಂಗ್ ಕಾರುಗಳು ನಮ್ಮನ್ನು ಮೂಕವಿಸ್ಮಿತಗೊಳಿಸಿದವು.

ಮರ್ಸಿಡಿಸ್ ಬೆಂಜ್ ಕಂಪನಿಯ ಹಲವಾರು ಇತರೆ ಕಾರುಗಳು ಸಹ ಇಲ್ಲಿವೆ. ಪ್ರತಿಷ್ಠಿತ ಎಸ್ ಕ್ಲಾಸ್‌ನಿಂದ ಹಿಡಿದು ಮೇಬ್ಯಾಕ್‌ವರೆಗೂ, ಆಂಬುಲೆನ್ಸ್ ನಿಂದ ಹಿಡಿದು ಅಗ್ನಿ ಶಾಮಕ ವಾಹನದವರೆಗೂ ಎಲ್ಲವೂ ಇಲ್ಲಿವೆ. ಮಳೆ ಬರುವ ದಿನ ಹೊರಗೆಲ್ಲೂ ಸುತ್ತಾಡಲು ಮನಸಾಗದಿದ್ದಾಗ ಇಲ್ಲಿ ಭೇಟಿ ನೀಡಬಹುದು. ಇಲ್ಲಿ ನಿಮ್ಮ ಹುಟ್ಟು ಹಬ್ಬದ ದಿನ ಉಚಿತ ಪ್ರವೇಶ! ಸ್ಟುಟ್ಟ್ ಗಾರ್ಟ್ ನಗರದಲ್ಲಿ ವರ್ಷಕ್ಕೊಮ್ಮೆ ನಡೆಯುವ ” ವಸ್ತು ಸಂಗ್ರಹಾಯಲ ದಿನ”ದಂದು ಎಲ್ಲರಿಗೂ ಉಚಿತ ಪ್ರವೇಶ. ವಾಹನ ಉದ್ಯಮದ ಹಿಂದೆ ಇರುವ ಇತಿಹಾಸ, ಕೌತುಕ, ತಂತ್ರಜ್ಞಾನ ಮತ್ತು ಬದಲಾವಣೆಗಳನ್ನು ಗಮನಿಸಲು ಮರ್ಸಿಡಿಸ್ ಬೆಂಜ್ ವಸ್ತು ಸಂಗ್ರಹಾಲಯಕ್ಕೆ ಅವಶ್ಯ ಭೇಟಿ ನೀಡಬೇಕು. ವಿಶ್ವದ ಮೊದಲ ಕಾರಿನಿಂದ ಹಿಡಿದು ಇತ್ತೀಚಿಗಿನ ಎಲೆಕ್ಟ್ರಿಕ್ ಕಾರುಗಳವರೆಗೂ ಎಲ್ಲವೂ ಇಲ್ಲಿದೆ.

(ಫೋಟೋಗಳು: ಲೇಖಕರವು)