ಮೀಮಾಂಸೆಯ ಕ್ಷೇತ್ರ ‘ಶಾಸ್ತ್ರೀಯ’ ಕಲೆಗಳ ಸಾಮಾಜಿಕತೆಯನ್ನೂ ತೋರಿಸಿದೆ. ವೈಯಕ್ತಿಕತೆಯ ಹುಸಿಕಲ್ಪನೆಯನ್ನು ಬಲಪಡಿಸುವುದು, ರಾಷ್ಟ್ರವನ್ನು ಪ್ರತಿನಿಧಿಸುವುದು ಮತ್ತು ಇತರೆ ಕಲೆಗಳಿಂದ ಬೇರ್ಪಡಿಸಿಕೊಂಡು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದು ಇವೆಲ್ಲವೂ ಅದರ ಕೆಲಸವೇ. ಇಂತಹ ಕೆಲಸಗಳನ್ನು ಮರೆಮಾಚುವುದು ಕೂಡ ಅದರ ಸಾಮಾಜಿಕ ಕೆಲಸವೆಂದೂ ಮುಂದುವರೆದು ಹೇಳಬಹುದು. ‘ಜಾನಪದ’ ಕಲೆಯನ್ನು ಅದರ ಸಾಮಾಜಿಕ ಉಪಯುಕ್ತತೆಗಾಗಿ ನೋಡುವುದು, ‘ಶಾಸ್ತ್ರೀಯ’ವನ್ನು ‘ಶುದ್ಧ ಸೌಂದರ್ಯದ’ ಪರಿಕಲ್ಪನೆಯಲ್ಲಿ ಮಾತ್ರ ನೋಡುವುದು ಕಲಾ ಅಧ್ಯಯನದ ಒಂದು ಮಿತಿಯೇ ಹೌದು. ಯಕ್ಷಾರ್ಥ ಚಿಂತಾಮಣಿಯಲ್ಲಿ ಕೃತಿ ಆರ್ ಪುರಪ್ಪೇಮನೆ ಬರಹ ನಿಮ್ಮ ಓದಿಗಾಗಿ. 

ಸೌಂದರ್ಯ ಮೀಮಾಂಸೆ, ಏಸ್ತೆಟಿಕ್ಸ್, ರಸ ಸಿದ್ಧಾಂತ ಇತ್ಯಾದಿ...

ಈ ಉಪಶೀರ್ಷಿಕೆಯಲ್ಲಿ ಮೂರನ್ನೂ ಹೇಳಿದ್ದೇಕೆಂದರೆ ಪ್ರತಿಯೊಂದು ಪದವೂ ಹಲವು ಧ್ವನ್ಯರ್ಥಗಳಿಂದ ಕೂಡಿದೆ. ಈ ಪದಗಳು ಒಂದು ಕಾಲದ ಕಲಾ ಪ್ರಕಾರಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಅವುಗಳದ್ದೇ ಆದ ಸಾಮಾಜಿಕ ಸಂದರ್ಭದಲ್ಲಿ ಹುಟ್ಟಿದವು. ಮತ್ತು ಅದರ ನಂತರದಲ್ಲಿ ಅವುಗಳನ್ನು ತಮ್ಮ ಕಾಲಕ್ಕೆ ತಕ್ಕಂತೆ ಅರ್ಥೈಸಿಕೊಂಡ ಹಲವಾರು ವ್ಯಾಖ್ಯಾನಗಳು, ಮುಂದುವರಿಕೆಗಳೂ ಬಂದವು. ಇವೆಲ್ಲದಕ್ಕೂ ಒಂದು ಕಾಮನ್ ಆಗಿರುವ ನೆಲೆಯೂ ಉಂಟು. ಅದೇನೆಂದರೆ ಇವೆಲ್ಲವೂ ಕಲೆಯನ್ನು ಸವಿಯುವ, ಅರ್ಥಮಾಡಿಕೊಳ್ಳುವ, ಸಮಾಜದಲ್ಲಿ ಅದರ ಕಾರ್ಯವನ್ನು, ಆದರ್ಶವನ್ನು ಸೂಚಿಸುವ, ಕಲೆಯ ರಸ ಮತ್ತು ರುಚಿಗೆ ಸಂಬಂಧಪಟ್ಟದ್ದಾಗಿದೆ. ಲಕ್ಷಣ ಗ್ರಂಥಗಳು ಕಲೆಯು ಹುಟ್ಟಿದ ಮೇಲೆ ರಚಿತವಾದರೂ, ಮತ್ತು ಕಲೆ ಬದಲಾದಂತೆ ಲಕ್ಷಣ ಗ್ರಂಥಗಳು ಬದಲಾದರೂ, ಸೌಂದರ್ಯ ಮೀಮಾಂಸೆಯೇ ಈಗ ಒಂದು ಸ್ವತಂತ್ರ ಜ್ಞಾನಶಾಖೆಯಾಗಿ ಬೆಳೆದಿದೆ. ಚೆಂದ ಅನ್ನಿಸುವ ಹೂವನ್ನಾಗಲಿ, ಭೀಕರ ಅನ್ನಿಸುವ ಕಾಡಿನ ಬೆಂಕಿಯನ್ನಾಗಲಿ ಕಲೆ ಎನ್ನುವುದಿಲ್ಲ, ಅಥವಾ ಅದನ್ನು ಮನುಷ್ಯರು ನಿರ್ಮಿಸಿಲ್ಲ. ಅದು ಚೆಂದವೊ ಭೀಕರವೊ ಅನ್ನಿಸುವುದು ಕಲೆಯನ್ನು ಸೃಷ್ಟಿಸಿದ ಮನುಷ್ಯರಿಗೆ ಮಾತ್ರ. ನಮಗೆ ಹಾಗ್ಯಾಕೆ ಅನ್ನಿಸುತ್ತದೆ ಅನ್ನುವುದು ಮೀಮಾಂಸೆಯ ವ್ಯಾಪ್ತಿಯನ್ನು ಮೀರಿ ತತ್ವಶಾಸ್ತ್ರಕ್ಕೂ, ವಿಜ್ಞಾನಕ್ಕೂ ವಿಸ್ತರಿಸುತ್ತದೆ ಅಥವಾ ಕಲಾ  ಮೀಮಾಂಸೆಯ ಪರಿಧಿ ವಿಸ್ತರಿಸಿದೆ ಎಂದೂ ಹೇಳಬಹುದು.

ಈ ಬರಹದಲ್ಲಿ ಮೀಮಾಂಸೆ ಅಥವಾ ಏಸ್ತೆಟಿಕ್ಸ್ ಬೆಳೆದು ಬಂದ ರೀತಿಯನ್ನು ಸ್ಥೂಲವಾಗಿ ಪರಿಚಯಿಸುವುದು ಉದ್ದೇಶವಿದ್ದಿತ್ತಾದರೂ, ವರ್ತಮಾನದಲ್ಲಿ ಮೀಮಾಂಸೆ ಒಳಗೊಂಡಿರುವ ಒಂದು ವಿಷಯವನ್ನು ಮಾತ್ರ ಈ ಅಂಕಣದ ಸೀಮಿತ ಚೌಕಟ್ಟಿನೊಳಗೆ ಹೇಳುವುದಕ್ಕೆ ಸಾಧ್ಯ. ಕೊನೆಪಕ್ಷ 20 ನೇ ಶತಮಾನದಲ್ಲಿ, ಈಗ ಹಿಂದಿನ ಹಾಗೆ ಎಲ್ಲ ಕಲಾ ಪ್ರಕಾರಗಳಿಗೂ ಸರಿ ಎನಿಸುವ ಒಂದೇ ಸೌಂದರ್ಯ ಮೀಮಾಂಸೆಯಾಗಲೀ ಅಥವಾ ಎಲ್ಲಾ ಕಾಲಕ್ಕೂ ಹೊಂದುವ ಮೀಮಾಂಸೆಯಾಗಲೀ ಇರಲು ಸಾಧ್ಯವಿಲ್ಲ ಎಂಬುದನ್ನು ತಿಳಿದಿದ್ದೇವೆ. ‘ಸಾಮಾಜಿಕರು’ ಬದಲಾದಂತೆ ಕಲೆಯ ಉದ್ದೇಶವಾಗಲಿ, ಸೌಂದರ್ಯದ ಅಳತೆಗೋಲಾಗಲಿ ಒಂದೇ ಆಗಿರಲು ಸಾಧ್ಯವಿಲ್ಲ. ಸಿನಿಮಾಕ್ಕೂ, ಸಾಹಿತ್ಯಕ್ಕೂ, ಯಕ್ಷಗಾನಕ್ಕೂ ಅದರದೇ ಆದ ರೂಪ, ಚಾರಿತ್ರಿಕತೆ ಕಟ್ಟಿಕೊಟ್ಟ ವಿಮರ್ಶಾ ಪರಿಕರಗಳಿರುತ್ತವೆ. ಅದರ ರೂಪ, ವಸ್ತು, ಚರಿತ್ರೆಯಿಂದ ಹೊರಗೆ ಅವುಗಳನ್ನು ಅಳೆಯುವುದು ಆ ಕಲೆಗಳಿಗೆ ಇರುವ ವಿಶಿಷ್ಟತೆಯನ್ನು ಬಿಟ್ಟುಕೊಟ್ಟಂತೆ.

ಇದಲ್ಲದೇ ಒಂದು ಕಲೆಯಲ್ಲಿಯೇ, ಉದಾಹರಣೆಗೆ ಯಕ್ಷಗಾನದಲ್ಲಿಯೇ, ರಾತ್ರಿ ಇಡೀ ಹಳ್ಳಿಯಲ್ಲಿ ಆಗುವ ಬಯಲಾಟವನ್ನೂ, ನಡು ಮಧ್ಯಾಹ್ನ ಬೆಂಗಳೂರಿನ ಒಳಾಂಗಣದಲ್ಲಿ ಆಗುವ ಮೂರು ತಾಸಿನ ಆಟವನ್ನೂ ಒಂದೇ ರೀತಿ ಸವಿಯಲಾಗುವುದಿಲ್ಲ. ಅಥವಾ ಅವೆರಡನ್ನೂ ಒಂದೇ ಮಾನದಂಡದಲ್ಲಿ ನೋಡಿದರೆ ನಮಗೆ ಬಯಲಾಟದ ವಿಶಿಷ್ಟತೆ ಸಿಗುವುದಿಲ್ಲ. ಒಮ್ಮೆ ಹಾಗೆ ನೋಡಿದಾಗ ಒಂದು ಒರಟಾಗಿಯು, ಇನ್ನೊಂದು ನಾಜೂಕಾಗಿ ಸಂಯೋಜನೆಗೊಂಡಂತೆ ಮಾತ್ರ ಕಾಣಲು ಸಾಧ್ಯವೇ ಹೊರತು ಒರಟುತನದ ಸೌಂದರ್ಯ, ಸಂವಹನ, ಅಗತ್ಯತೆ ಏನು ಅನ್ನುವುದನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ.

ಸಾಮಾನ್ಯೀಕರಣ, ಅಥವಾ ಇದು ಎಲ್ಲದಕ್ಕೂ ಹೊಂದುತ್ತದೆ ಎಂದು ನಿರ್ಧರಿಸುವುದರಲ್ಲೇ ಒಂದು ರೀತಿಯ ಹಿಂಸೆ ಅಡಗಿದೆ ಎನ್ನುವುದನ್ನು ನಾವು  ಮೀಮಾಂಸೆಯಿಂದ ಈಗ ತಿಳಿದಿದ್ದೇವೆ. ಯಾಕೆಂದರೆ ಒಂದು ಸಮಾಜದ ಎಲ್ಲಾ ಸಾಮಾಜಿಕ ಅನುಭವಗಳು, ಅಗತ್ಯಗಳು, ಆಸೆ ಆದರ್ಶಗಳು ಒಂದೇ ಆಗಿರಲು ಸಾಧ್ಯವಿಲ್ಲ. ಒಂದಷ್ಟು ಜನರನ್ನು ಬದಿಗೊತ್ತಿ ಇದು ಎಲ್ಲರಿಗೂ ಅನ್ವಯಿಸುತ್ತದೆ ಅಂದಾಗ, ಅದು ಅನ್ವಯಿಸದ ಸಮುದಾಯಗಳ ಕಲೆಗಳು ‘ಅನಾಗರೀಕ’ವಾಗಿ ಕಾಣತೊಡಗುತ್ತದೆ. ವಸಾಹತು ಕಾಲದಲ್ಲಿ ಆಳಿದವರಿಗೆ ವಸಾಹತುವಿನ ಕಲೆಗಳು ಹಾಗೆ ಕಂಡರೆ, ಈಗ ಸ್ವತಂತ್ರವಾದ ಕಾಲದಲ್ಲಿ ಕೆಲವರ ಕಲೆಗಳು ನಮಗೆ ಹಾಗೆಯೇ ಕಾಣುತ್ತವೆ. ಶಾಸ್ತ್ರೀಯ, ಜಾನಪದ ಎಂಬ ವಿಭಾಗವೂ ಇಂತಹ ಸಂದರ್ಭದಲ್ಲಿಯೇ ಹುಟ್ಟಿಕೊಂಡದ್ದು. ಹೊಸ ರಾಷ್ಟ್ರ ಹುಟ್ಟುತ್ತಿರುವಾಗ, ಅದಕ್ಕೆ ತನ್ನನ್ನು ತಾನು ಕಲೆಯಲ್ಲಿ ಪ್ರತಿನಿಧಿಸಿಕೊಳ್ಳಲು ಕಟ್ಟ್ಟಿಕೊಂಡ ಹಲವು ಪರಿಕಲ್ಪನೆಗಳಲ್ಲಿ ಈ ವಿಭಾಗೀಕರಣವೂ ಒಂದು. ಈ ಪದಗಳು ಸಾಮಾಜಿಕ ಸಾಂಸ್ಕೃತಿಕ, ಅರ್ಥವನ್ನು ಅವಾಹಿಸಿಕೊಂಡಿದ್ದರಿಂದ, ಅಂದರೆ ಕಲೆಯಲ್ಲಿ ತೊಡಗಿಸಿಕೊಂಡವರ ಸಾಮಾಜಿಕ, ಸಾಂಸ್ಕೃತಿಕ ಸ್ಥಾನಮಾನದ ಮೇಲೆ ಅವಲಂಬಿತವಾದ್ದರಿಂದ, ಕಲೆಯನ್ನು ಓದುವಲ್ಲಿನ ಮುಖ್ಯವಾದ ಸ್ತರಗಳಲ್ಲಿ ಈ ವಿಭಾಗೀಕರಣದಿಂದ ಉಪಯೋಗವೇನೂ ಆಗಿಲ್ಲ. ಅಂದರೆ ಜಾನಪದ ಅಥವಾ ಶಾಸ್ತ್ರೀಯ ಎಂದು ಉಪಯೋಗಿಸುವಾಗ ಅದರ ಕ್ಷಣವನ್ನು ಮತ್ತೆ ಮತ್ತೆ ತಮ್ಮ ಸಂದರ್ಭಕ್ಕೆ ವಿವರಿಸಿಕೊಳ್ಳಬೇಕಾದ ಮಿತಿ ಇದಕ್ಕಿದೆ. ಕಲೆಯ ಗ್ರಹಿಕೆಯಲ್ಲಿ, ಆಲೋಚನೆಯ ಭಾಗವಾಗಿ ಇದು ಬಂದಿರುವುದು ಸಾಮಾಜಿಕ ಸ್ಥಾನಮಾನಗಳ ಮೂಲಕ ಮಾತ್ರ. ಸರ್ಕಾರ ಗುರುತಿಸಿದ ‘ಶಾಸ್ತ್ರೀಯ’ ಕಲೆಗಳಿಗೆ ಯಕ್ಷಗಾನ ‘ಜಾನಪದ’ವಾಗಿ ಕಾಣಬಹುದು. ಯಕ್ಷಗಾನದವರಿಗೆ ಕೋಲಾಟವೊ, ಹೆಂಗಸರು ಹೇಳುವ ಮದುವೆ ಮನೆ ಹಾಡೊ ‘ಜಾನಪದ’ವಾಗಿ ಕಾಣಬಹುದು.

ಲಕ್ಷಣ ಗ್ರಂಥಗಳು ಕಲೆಯು ಹುಟ್ಟಿದ ಮೇಲೆ ರಚಿತವಾದರೂ, ಮತ್ತು ಕಲೆ ಬದಲಾದಂತೆ ಲಕ್ಷಣ ಗ್ರಂಥಗಳು ಬದಲಾದರೂ, ಸೌಂದರ್ಯ ಮೀಮಾಂಸೆಯೇ ಈಗ ಒಂದು ಸ್ವತಂತ್ರ ಜ್ಞಾನಶಾಖೆಯಾಗಿ ಬೆಳೆದಿದೆ.

ಯಕ್ಷಗಾನದ ವಲಯದಲ್ಲಿ ಇದು ಜಾನಪದವೊ, ಶಾಸ್ತ್ರೀಯವೊ ಎಂದು ಆಗಾಗ ಚರ್ಚೆಗೊಳಗಾಗುತ್ತಿರುತ್ತದೆ. ಯಕ್ಷಗಾನವನ್ನು ಜಾನಪದ ಕಲೆ ಎಂದು ನಿರ್ಧಾರಿತ ಸ್ವರೂಪದಿಂದಲೇ ನೋಡಿದರೆ ಅದರಲ್ಲಿರುವ ಬೇರೆ ಆಯಾಮಗಳು ನಮಗೆ ಕಾಣುವುದಿಲ್ಲ. ಅಥವಾ ಶಾಸ್ತ್ರೀಯ ಕಲೆಗಳ ಲಕ್ಷಣಗಳು ಇವೆಂದು ಪಟ್ಟಿ ಮಾಡಿಕೊಂಡು ಭರತನಾಟ್ಯವನ್ನು ನೋಡಿದರೆ ಅದನ್ನು ಕೂಡ ಮಿತಿಗೊಳಿಸಿದಂತೆಯೆ. ಉದಾಹರಣೆಯಾಗಿ ‘ಜಾನಪದ’ ಮತ್ತು ‘ಶಾಸ್ತ್ರೀಯ’ ಎನ್ನುವುದರÀ ಕೆಲವು ಲಕ್ಷಣಗಳನ್ನು ಗಮನಿಸಬಹುದು. ಜಾನಪದದ ಲಕ್ಷಣ ಮೌಖಿಕವಾಗಿ ಮುಂದುವರೆಯುವುದು, ಉಪಯೋಗಿ ಕಲೆ, ಸರಳವಾಗಿರುವುದು ಎನ್ನುವಾಗಲೇ ಅಥವಾ ಶಾಸ್ತ್ರೀಯ ಎಂದ ಕೂಡಲೇ ಪಠ್ಯಗಳ ಆಧಾರದಲ್ಲಿ, ಕಲೆಗಾಗಿ ಕಲೆ, ಸಂಕೀರ್ಣತೆ ಎನ್ನುವಾಗಲೇ ನಮಗೆ ಜಾನಪದ, ಶಾಸ್ತ್ರೀಯ ಎನ್ನುವ ವಿಭಾಗೀಕರಣದ ನಿರರ್ಥಕತೆ ತಿಳಿಯುತ್ತದೆ. ಇದರಲ್ಲಿ ಸಾಮಾಜಿಕ ಉಪಯೋಗಿ ಕಲೆಗೆ ಸ್ವಲ್ಪ ವಿವರಣೆ ಬೇಕಾಗಬಹುದು. ಸೌಂದರ್ಯ, ರುಚಿಯ ಹೊರತಾಗಿ ಜಾನಪದ ಕಲೆಗೆ ಸಾಮಾಜಿಕ ಉಪಯುಕ್ತತೆ ಇರುತ್ತದೆ ಎಂದು ಇದು ಹೇಳುತ್ತಾ ಇದೆ. ಯಕ್ಷಗಾನಕ್ಕೆ ಆರಾಧನೆಯಿದ್ದಂತೆ. ಆದರೆ ಮೀಮಾಂಸೆಯ ಕ್ಷೇತ್ರ ‘ಶಾಸ್ತ್ರೀಯ’ ಕಲೆಗಳ ಸಾಮಾಜಿಕತೆಯನ್ನೂ ತೋರಿಸಿದೆ. ವೈಯಕ್ತಿಕತೆಯ ಹುಸಿಕಲ್ಪನೆಯನ್ನು ಬಲಪಡಿಸುವುದು, ರಾಷ್ಟ್ರವನ್ನು ಪ್ರತಿನಿಧಿಸುವುದು ಮತ್ತು ಇತರೆ ಕಲೆಗಳಿಂದ ಬೇರ್ಪಡಿಸಿಕೊಂಡು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದು ಇವೆಲ್ಲವೂ ಅದರ ಕೆಲಸವೇ. ಇಂತಹ ಕೆಲಸಗಳನ್ನು ಮರೆಮಾಚುವುದು ಕೂಡ ಅದರ ಸಾಮಾಜಿಕ ಕೆಲಸವೆಂದೂ ಮುಂದುವರೆದು ಹೇಳಬಹುದು.

ಹೀಗೆ ಹೇಳಿದ ತಕ್ಷಣ ನಮಗೆ ಇದು ಸರಳೀಕರಣ ಎಂದೆನಿಸಬಹುದು. ಅಥವಾ ಕಲೆಯನ್ನು ಅದರ ಸಾಮಾಜಿಕ ಉಪಯುಕ್ತತೆಗಷ್ಟೇ ಸೀಮಿತಿಗೊಳಿಸುವುದು ಅನ್ನುವ ಹಾಗೆ ಮೇಲಿನದು ಕಾಣಿಸಬಹುದು. ‘ಜಾನಪದ’ ಕಲೆಯನ್ನು ಅದರ ಸಾಮಾಜಿಕ ಉಪಯುಕ್ತತೆಗಾಗಿ ನೋಡುವುದು, ‘ಶಾಸ್ತ್ರೀಯ’ವನ್ನು ‘ಶುದ್ಧ ಸೌಂದರ್ಯದ’ ಪರಿಕಲ್ಪನೆಯಲ್ಲಿ ಮಾತ್ರ ನೋಡುವುದು ಕಲಾ ಅಧ್ಯಯನದ ಒಂದು ಮಿತಿಯೇ ಹೌದು. ಅಥವಾ ತಕ್ಷಣಕ್ಕೆ ಕಾಣುವ ಉಪಯುಕ್ತತೆಯುಳ್ಳ ಕಲೆಯಲ್ಲಿ ಸೌಂದರ್ಯದ ಕಲ್ಪನೆ ಏನು ಎಂದು ನೋಡಲಾಗದಿದ್ದರೆ ಅದು ನಮ್ಮ ವಿಮರ್ಶಾ ಪರಿಕರಗಳ ಮಿತಿಯೆ ಹೊರತು ಕಲೆಯದಲ್ಲ.

ಆದರೆ ಇಲ್ಲಿ ನಾವು ನೆನಪಿಡಬೇಕಾದದ್ದು, ಯಾವುದೇ ಕಲೆಯಾಗಲಿ, ಅದರ ಸಾಮಾಜಿಕತೆ ಇರುವುದು ಕಲೆಯ ‘ವಸ್ತು’ವಿನಲ್ಲಲ್ಲ. ಅದಿರುವುದು ಅದರ ರೂಪದಲ್ಲಿ, ಕಲಾ ಕ್ರಿಯೆಯ ಅಂತರ್ಗತವಾದ ತರ್ಕದಲ್ಲಿ, ಅದರ ಧ್ವನಿಯಲ್ಲಿ, ಮೂಲ ವಸ್ತುವಿನಲ್ಲಿ. ಇಲ್ಲಿ ಮೂಲ ವಸ್ತುವೆಂದರೆ ಸಾಹಿತ್ಯದಲ್ಲಿ ಬಳಸುವ ಪದ, ಸಂಗೀತದಲ್ಲಿರುವ ಶಬ್ದ, ಈ ರೀತಿಯದ್ದು. ಪದವಾಗಲಿ, ಶಬ್ದವಾಗಲೀ ಅದು ಸಮುದಾಯ ಕಟ್ಟಿಕೊಟ್ಟಿರುವುದೇ ಹೊರತು ಅದು ಕವಿಯ ಸ್ವಂತದ್ದಲ್ಲ. ನಾವು ನಮ್ಮ ಹೆಂಗಸರ ತಾಳಮದ್ದಲೆ ತಂಡವನ್ನು ಕಟ್ಟಿಕೊಂಡ ಮೊದಲಿಗೆ, ‘ಭೀಷ್ಮ ವಿಜಯ ಮಾಡಿ, ಅದರಲ್ಲಿರುವ ಅಂಬೆಯ ಪಾತ್ರ ನೋಡಿ’ ಎನ್ನುವ ಸಲಹೆಗಳು ಬರುತ್ತಿದ್ದವು. ಇದು ಪ್ರಸಂಗದ ಕತೆಯ ‘ವಸ್ತುವನ್ನು’ ಗಮನದಲ್ಲಿಟ್ಟುಕೊಂಡು ಮಾಡಿದ ಸಲಹೆ. ಇದು ಮಾಡಬಾರದಂತಲ್ಲ, ಆದರೆ ಇದು ಮೇಲ್ಮೇಲಿನದು ಮಾತ್ರ. ಇದರ ಇನ್ನೊಂದು ಸ್ತರವೇ ಲೋಕದೃಷ್ಟಿ. ಯಕ್ಷಗಾನ ಪ್ರಸಂಗದ ಆಶಯವನ್ನು ಇದಕ್ಕೇ ಸಮೀಕರಿಸಬಹುದು. ಇವೆಲ್ಲವೂ ವಸ್ತುವನ್ನು ಆಧರಿಸಿರುವುದು. ಯಕ್ಷಗಾನದ ಪ್ರಸಂಗದಲ್ಲೋ, ಕಾದಂಬರಿಯಲ್ಲೊ ಈ ರೀತಿಯ ವಸ್ತು, ಆಶಯವು ನಮಗೆ ಬೇಗ ಸಿಗುತ್ತದೆ. ನೀತಿ, ಮೌಲ್ಯ, ಆದರ್ಶಗಳು ಇಂತವೇ. ಹಾಗಾಗಿಯೇ ಒಂದು ಕಲೆಯ ಸೌಂದರ್ಯವನ್ನು ಅಳೆಯುವುದು ಅದು ನೆಲೆಗೊಂಡ ಸಾಮಾಜಿಕತೆಯ ಮೂಲಕ ಆಗದಿದ್ದಾಗ ಮತ್ತು ಆ ಸಾಮಾಜಿಕತೆಯನ್ನು ಬರೀ ಅದರ ವಸ್ತುವಲ್ಲಿ ಮಾತ್ರ ನೊಡಿದಾಗ, ಮೀಮಾಂಸೆಯು ಆ ಕಲೆಯ ವಿಶಿಷ್ಟತೆಯನ್ನು ಬಲಿಕೊಡುತ್ತದೆ. ಆದ್ದರಿಂದಲೇ ಮುಖ್ಯವಾಹಿನಿ ಸಾಹಿತ್ಯ ಚರಿತ್ರೆಯಲ್ಲಿ ಮಧ್ಯಮವರ್ಗಕ್ಕೆ ಓದನ್ನು ರೂಢಿಸಿದ, ಮಹಿಳೆಯರು ಬರೆದ ನೂರಾರು ಕಾದಂಬರಿಗಳನ್ನು ಅದರಲ್ಲಿ ಮೌಲ್ಯವಿಲ್ಲವೆಂದೊ, ರುಚಿಯಿಲ್ಲವೆಂದೊ ಬಿಡುವುದಕ್ಕಾಗುತ್ತದೆ. ದೇಶವನ್ನು ಪ್ರತಿನಿಧಿಸುವ ಕಲೆಗಳು ಎಂದಾಗ ಎಷ್ಟೊ ಕಲೆಗಳನ್ನು ಬಿಡುವುದಕ್ಕಾಗುತ್ತದೆ. ನಿರ್ಲಕ್ಷ್ಯ ಮಾಡುವುದಕ್ಕೆ ಆಗದೆನಿಸುವಷ್ಟು ಬಣ್ಣ ಬ್ಯಾಗಡೆಗಳಿರುವ ಅಥವಾ ಸಂಖ್ಯಾ ಬಲವಿರುವ ಕಲೆಗಳನ್ನು ‘ಜಾನಪದ’ ವೆಂದೊ, ಹೆಸರಿಸಿ ಬೇರೆ ಇಡಲು ಆಗುತ್ತದೆ.


ಸಾಮಾಜಿಕತೆಯನ್ನು ಒಳಗೊಂಡ ಮೀಮಾಂಸೆ ಎಂದಾಗ ಮತ್ತೊಮ್ಮೆ ನಮಗೆ, ಒಂದು ಕಾಲದ/ಪ್ರದೇಶದ ಕಲೆ ಇನ್ನೊಂದು ಪ್ರದೇಶದಲ್ಲಿ/ಕಾಲದಲ್ಲಿ ಅರ್ಥವನ್ನು, ಭಾವವನ್ನೂ ಹೊಳೆಯಿಸುವುದಿಲ್ಲ ಎಂದು ಹೇಳಿದಂತೆಯೂ ಕಾಣಬಹುದು. ನಾವೆಲ್ಲರೂ ಒಂದೇ ಪ್ರಾಣಿ ಪ್ರಭೇದವಾಗಿರುವುದರಿಂದ ಸಾಮಾನ್ಯೀಕರಣಕ್ಕೆ ಪಕ್ಕಾಗುವ ಕೆಲವು ಗುಣಗಳು ಕಲೆಗಳಲ್ಲೂ ಇವೆ. ಹಾಗಾಗಿ ‘ರಸ’ದಂತಹ ಕಲ್ಪನೆಗಳು, ಕ್ರಿಯೆ ಮತ್ತು ಭಾವದ ಸಂಬಂಧವನ್ನು ಮೆದುಳಿನ ಪ್ರತಿಕ್ರಿಯೆಯ ಅಧಾರದ ಮೇಲೆ, ಈಗ ಕಲಾ ಮಿಮಾಂಸಕರಿಗಿಂತ ಮೆದುಳು ತಜ್ಞರು ಹೆಚ್ಚು ನಿಖರವಾಗಿ ಹೇಳಬಲ್ಲವರಾಗಿರಬಹುದು. ಅಲ್ಲದೇ ಆ ಸ್ತರದ  ಮೀಮಾಂಸೆಯ ಅಗತ್ಯವೂ ಈಗಿನ ಕಾಲದಲ್ಲಿ ಬೇರೇ ರೀತಿಯದ್ದಾಗಿದೆ. ಮಕ್ಕಳ ಕೊಂಡಾಟದ, ಎಲ್ಲಾ ದೇಶದ ಸಾವಿರಾರು ವಿಡಿಯೋಗಳು ಯೂ-ಟ್ಯೂಬಿನಲ್ಲಿ ಹರಿದಾಡುತ್ತಿರುತ್ತದೆ. ಅದು ನಮಗೆ ಫೆಮಿಲಿಯರ್ ಆದ ಭಾವವನ್ನು ಹುಟ್ಟಿಸುತ್ತದೆ ಎನ್ನುವುದಕ್ಕಾಗಿಯೆ ಅದು ದೇಶ, ಭಾಷೆಗಳನ್ನು ಮೀರಿ ನೊಡಲ್ಪಡುತ್ತದೆ. ಅಲ್ಲಿ ಹುಟ್ಟುವ ರಸ ಮನುಷ್ಯ ಪ್ರಭೇದದ ಎವಲೂಶನರಿ ಮಿತಿಯೊಳಗೆ ಬರುವಂತದ್ದು. ಹಲವು ಸಾರ್ವತ್ರಿಕ ಸತ್ಯಗಳು ಇಂತದ್ದೇ. ಇವುಗಳ ಹೆಸರಿನಲ್ಲಿ ಸಮಾಜ ಧರಿಸಿದ ವೇಷಗಳು ಹುಟ್ಟಿಸಿದ ಮೇಲು ಕೀಳಿನ ಹಿಂಸೆಯೂ ಮನುಷ್ಯ ಪ್ರಾಣಿ ಪ್ರಭೇದದ್ದೆ. ಹಾಗಾಗಿಯೇ ನಿರ್ದಿಷ್ಟ ಸಾಮಾಜಿಕ ಸಂದರ್ಭಕ್ಕೆ ಕಲೆ ಪ್ರಾಮಾಣಿಕವಾದಷ್ಟೂ ಅವು ದೇಶ ಕಾಲವನ್ನು ಮೀರಿ ನಮ್ಮನ್ನು ತಾಗುತ್ತವೆ.