ಯಕ್ಷಗಾನದ ಆವರಣದಲ್ಲೇ ಹುಟ್ಟಿ ಬೆಳೆದ ಜಿ ಎಸ್ ಭಟ್ಟರು, ಗುಂಡುಬಾಳದ ಆಟ ನೋಡುತ್ತಲೇ ಬೆಳೆದವರು. ಅವರ ಯೌವನ ಕಾಲದಲ್ಲಿ ನಾಟಕದ ಬಗ್ಗೆಯು ಆಸಕ್ತಿ ವಹಿಸಿದ್ದರು. ಗುಂಡುಬಾಳದ ಹರಕೆ ಆಟವು ಯಕ್ಷಗಾನ ಕಲಾ ಪ್ರಕಾರದಲ್ಲೇ ವಿಶಿಷ್ಟವಾದ ಮಾದರಿ. ಅಲ್ಲಿ ದೇವರೇ ಪ್ರೇಕ್ಷಕರು. ಹಾಗಾದ್ದರಿಂದಲೇ ಅದು ಹೊಸ ನಡೆಯ ಪ್ರಯೋಗಗಳಿಗೆ, ಕಲಿಯುವವರಿಗೆ ಧೈರ್ಯದಿಂದ ತಮ್ಮ ಪ್ರಯತ್ನವನ್ನು ರಂಗದ ಮೇಲೆ ತಂದು ಅದರ ಸಾರ್ಥಕತೆಯನ್ನು ಪರಿಶೀಲಿಸುವ ಕಲಿಕಾ ಕೇಂದ್ರವಾಗಿದೆ ಎನ್ನುವುದನ್ನು ಜಿ ಎಸ್ ಭಟ್ಟರು ಗುರುತಿಸಿದ್ದಾರೆ.
“ಯಕ್ಷಾರ್ಥ ಚಿಂತಾಮಣಿ”ಯಲ್ಲಿ ಜಿ ಎಸ್ ಭಟ್ಟರ ಜೊತೆಗೆ ತಾವು ನಡೆಸಿದ ಸಂದರ್ಶನವನ್ನು ಬರೆದಿದ್ದಾರೆ ಕೃತಿ ಆರ್‌ ಪುರಪ್ಪೇಮನೆ

ಕನ್ನಡದ ‘ಆಧುನಿಕ’ ಪ್ರದರ್ಶನ ಪ್ರಕಾರಗಳ ವಿಮರ್ಶೆಯು ಕೆಲವೊಂದು ರಂಗಕರ್ಮಿಗಳ ಬರಹಗಳ ಹೊರತಾಗಿ ಬೆಳೆದಿಲ್ಲ. ಯಕ್ಷಗಾನದಂಥ ಜನಪದೀಯ ಎಂದು ಕರೆಸಿಕೊಳ್ಳುವ ಕಲೆಯ ಬಗ್ಗೆ ಹೆಚ್ಚಿನ ಬರಹಗಳೆಲ್ಲ ಅದನ್ನು ಜಾನಪದ ಶಾಸ್ತ್ರದ ಚೌಕಟ್ಟಿನೊಳಗೆ ನೋಡುವ ಪ್ರಯತ್ನವಾಗಿಯೆ ಬಂದಿದೆ. ಒಂದು ಪ್ರದರ್ಶನವನ್ನು ರಂಗಪಠ್ಯವಾಗಿ ಪರಿಗಣಿಸಿ ಅದರ ಬಗ್ಗೆ ಬರೆದವರು ವಿರಳ. ಕಲಾವಿದರಲ್ಲದವರು ಯಕ್ಷಗಾನದ ಬಗ್ಗೆ ಮಾತನಾಡುವುದು ಅಧಿಕೃತತೆಯ ಪ್ರಶ್ನೆಯಾಗಿ ಕಾಡುತ್ತಿರುವಂತಹ ವಾತಾವರಣದಲ್ಲಿ ಜಿ ಎಸ್ ಭಟ್ ಅವರು ಕಲಾವಿದರಾಗಿ ತಾಳಮದ್ದಲೆಯ ಅರ್ಥ ಹೇಳುವುದನ್ನು ಬಿಟ್ಟು ಯಕ್ಷಗಾನದ ವಿಮರ್ಶೆಯಲ್ಲಿ ತಮ್ಮ ಇಡೀ ಜೀವನವನ್ನು ತೊಡಗಿಸಿಕೊಂಡಿದ್ದಾರೆ. ಇದು ಅವರ ಯಕ್ಷಗಾನದ ಮೇಲಿನ ಪ್ರೀತಿಯನ್ನು ಮತ್ತು ಅವರು ಯಕ್ಷಗಾನದ ವಿಮರ್ಶೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆಂಬುದನ್ನು ತೋರಿಸುತ್ತದೆ.

ಯಕ್ಷಗಾನದ ಆವರಣದಲ್ಲೇ ಹುಟ್ಟಿ ಬೆಳೆದ ಜಿ ಎಸ್ ಭಟ್ಟರು, ಗುಂಡುಬಾಳದ ಆಟ ನೋಡುತ್ತಲೇ ಬೆಳೆದವರು. ಅವರ ಯೌವನ ಕಾಲದಲ್ಲಿ ನಾಟಕದ ಬಗ್ಗೆಯು ಆಸಕ್ತಿ ವಹಿಸಿದ್ದರು. ಗುಂಡುಬಾಳದ ಹರಕೆ ಆಟವು ಯಕ್ಷಗಾನ ಕಲಾ ಪ್ರಕಾರದಲ್ಲೇ ವಿಶಿಷ್ಟವಾದ ಮಾದರಿ. ಅಲ್ಲಿ ದೇವರೇ ಪ್ರೇಕ್ಷಕರು. ಹಾಗಾದ್ದರಿಂದಲೇ ಅದು ಹೊಸ ನಡೆಯ ಪ್ರಯೋಗಗಳಿಗೆ, ಕಲಿಯುವವರಿಗೆ ಧೈರ್ಯದಿಂದ ತಮ್ಮ ಪ್ರಯತ್ನವನ್ನು ರಂಗದ ಮೇಲೆ ತಂದು ಅದರ ಸಾರ್ಥಕತೆಯನ್ನು ಪರಿಶೀಲಿಸುವ ಕಲಿಕಾ ಕೇಂದ್ರವಾಗಿದೆ ಎನ್ನುವುದನ್ನು ಜಿ ಎಸ್ ಭಟ್ಟರು ಗುರುತಿಸಿದ್ದಾರೆ. ಜೊತೆಗೆ ಯಕ್ಷಗಾನ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಮಾಡಿಕೊಂಡ ಅನುಸಂಧಾನಗಳನ್ನು ಸೂಕ್ಷ್ಮವಾಗಿ ಗಮನಿಸಿರುವುದನ್ನು ಅವರ ಈ ಮಾತುಗಳಲ್ಲಿ ಕಾಣಬಹುದು: “ಆ ಕಾಲದಲ್ಲಿ ಎಲ್ಲೆಲ್ಲಿ ಯಕ್ಷಗಾನ ಇರುತ್ತಿತ್ತೊ ಅಲ್ಲೆಲ್ಲ ನಾಟಕ ಮಂಡಳಿಯು ಸ್ಥಾಪನೆಯಾಗುತಿತ್ತು. ಉತ್ತರದಲ್ಲಿ ಜೋಳದರಾಶಿ ದೊಡ್ಡನಗೌಡರು ಬಯಲಾಟದ ಶ್ರೇಷ್ಠ ಕಲಾವಿದರಾಗಿದ್ದರು. ಅವರು ನಾಟಕ ಕಂಪನಿ ಕಟ್ಟಿದ್ದರು. ಆದರೆ ಕರಾವಳಿಯಲ್ಲಿ ನಾಟಕದ ಕಂಪನಿ ಮಾಡಲಿಲ್ಲ. ಅದರ ಕೆಲವೊಂದನ್ನು ಯಕ್ಷಗಾನಕ್ಕೆ ಸೇರಿಸಿಕೊಂಡರು. ನಾಟಕ ಕಂಪನಿ ಮಾಡದೆ ಇದ್ದುದು ಯಕ್ಷಗಾನದ ಸುದೈವ”.

ಅಲ್ಲಿಯ ಪ್ರೇಕ್ಷಕರಿಗೆ ಯಕ್ಷಗಾನದ ಸಂಸ್ಕಾರವನ್ನೂ ಮತ್ತು ಅದು ಒಂದು ಹರಕೆಯಾಗಿಯೇ ಹೊಸ ಹೊಸ ಯಕ್ಷಗಾನದ ಪ್ರಯೋಗಗಳಿಗೆ ಹೇಗೆ ತೆರೆದುಕೊಂಡಿತು ಅನ್ನುವ ಅವರ ಬಾಲ್ಯಕಾಲದ ಅನುಭವವು, ಅವರ ಯಕ್ಷಗಾನ ಕಲಾಪ್ರಕಾರದ ಒಳನೋಟಗಳಿಗೆ, ಅವರ ವೃತ್ತಿಯಾದ ಸಾಹಿತ್ಯದ ಅಧ್ಯಯನದಷ್ಟೇ ಮಹತ್ವದ್ದಾಗಿದೆ.

ಪ್ರಶ್ನೆ: ಇವತ್ತಿನ ಯಕ್ಷಗಾನದ ಸ್ವರೂಪ ಹೇಗಿದೆ? ಹರಕೆಯ ಆಚರಣೆಯಿಂದ ಶುರುವಾದದ್ದು ಒಂದು ಕಲಾಪ್ರಕಾರವಾಗಿ ಬೆಳೆದಿದೆಯೆ?

ಉತ್ತರ: ಇತ್ತೀಚಿನ ವರ್ಷಗಳಲ್ಲಿ ಯಕ್ಷಗಾನದ ಮಾಧ್ಯಮ ಪ್ರಜ್ಞೆ ನಿಜವಾಗಿಯು ಬಹಳ ಬೆಳೆದಿದೆ. ಹಿಂದೆ ಯಾವುದಾದರೂ ವೇಷ ಭೂಷಣ ತೊಟ್ಕೊಂಡು ಏನಾದ್ರು ಮುಖವರ್ಣಿಕೆಯನ್ನು ಮಾಡ್ಕೊಂಡು ಹೇಗಾದರು ರಂಗಸ್ಥಳಕ್ಕೆ ಬರಬೇಕು, ಕುಣೀಬೇಕು, ಅರ್ಥ ಹೇಳಬೇಕು ಅನ್ನೋದು ಇತ್ತು. ಆದರೆ ವ್ಯವಸಾಯಿಕ ವ್ಯವಸ್ಥೆ ಬಂದ ನಂತರ ಪ್ರೇಕ್ಷಕರಲ್ಲಿಯೂ ಸಾಕಷ್ಟು ಮಾಧ್ಯಮ ಪ್ರಜ್ಞೆ ಬೆಳೆದಿದೆ. ಕಲಾವಿದರು ಬೆಳೆದಿದ್ದಾರೆ. ಯಕ್ಷಗಾನ ಇವತ್ತು ಹಾಳಾಗಿದೆ ಅನ್ನೋದು ನಾನು ಒಪ್ಪೋದಿಲ್ಲ. 1975 ನೇ ಇಸವಿಯಲ್ಲಿ ಸಾಗರದಲ್ಲಿ ಒಂದು ಆಟದಲ್ಲಿ ಒಬ್ಬ ಪ್ರಸಿದ್ದ ಕಲಾವಿದರು ಹಂಸಧ್ವಜನನ್ನು ಮಾಡಿದ್ದರು. ಅವರು ಮಡಿ ಉಟ್ಕೊಂಡು ಬಂದಿದ್ರು. ನಾನು ಕೇಳಿದೆ. ಯಾಕೆ ವೇಷ ಭೂಷಣ ಹಾಕ್ಕೊಂಡು ಬರಲಿಲ್ಲ ಅಂತ. ಹಂಸಧ್ವಜ ಯಜ್ಞ ಮಾಡ್ತಿದಾನೆ, ಅವನು ಇನ್ನು ಹೇಗೆ ವೇಷ ತೊಟ್ಟುಕೊಳ್ಳೋಕೆ ಸಾಧ್ಯವಿದೆ ಅಂತ ಅವರು ನನ್ನನ್ನೇ ಕೇಳಿದರು. ನನ್ನ ಬಾಯಿ ಮುಚ್ಚಿತು. ಆಗ ನನಗೂ ಸಮರ್ಥಿಸಿಕೊಳ್ಳೋಕೆ ಬರ್ತಿರಲಿಲ್ಲ. ಆದರೆ ಯಕ್ಷಗಾನವು ವಾಸ್ತವ ರಂಗಭೂಮಿ ಅಲ್ಲ ಅಂತ ನನಗೆ ನಂತರ ಬಂದ ಕಲ್ಪನೆ. ಭಸ್ಮಾಸುರ ಬೂದಿಯಿಂದ ಹುಟ್ಟಿದವನು, ವೇಷಭೂಷಣ ತೊಟ್ಟುಕೊಳ್ಳುವ ಅಗತ್ಯ ಇಲ್ಲ. ಬಟ್ಟೆ ಸುತ್ತಿಕೊಂಡರೆ ಸಾಕು ಅನ್ನುವಂತಹ ಕಲ್ಪನೆಗಳು ಕಲಾವಿದರಲ್ಲೂ ಪ್ರೇಕ್ಷಕರಲ್ಲೂ ಇತ್ತು. ವಾಸ್ತವ ದೃಷ್ಟಿಯ ರಂಗಭೂಮಿಯ ದೃಷ್ಟಿಕೋನದಿಂದಲೇ ಯಕ್ಷಗಾನವನ್ನು ಅವರು ನೋಡ್ತಿದ್ರು. ವೇಷಭೂಷಣ ಎಲ್ಲಾ ಪಾತ್ರಗಳು ತೊಟ್ಕೊಬೇಕು, ಶಿರೋಭೂಷಣ ಮುಖವರ್ಣಿಕೆ ನಿರ್ದಿಷ್ಟವಾಗಿರಬೇಕು ಎನ್ನುವ ಮಾಧ್ಯಮ ಪ್ರಜ್ಞೆ ಈಗಿನಷ್ಟು ನಿಖರವಾಗಿರಲಿಲ್ಲ.

ಪ್ರಶ್ನೆ: ವ್ಯವಸಾಯಿ ಮೇಳ, ಡೇರೆ ಮೇಳ ಆಯೋಜಕ, ಸಂಘಟಕ, ಹೀಗೆ ಯಕ್ಷಗಾನದ ಸಂಘಟನೆ ಬದಲಾಗಿದೆಯಲ್ಲವೇ? ಅದರ ವ್ಯತ್ಯಾಸಗಳು ಮತ್ತು ಪರಿಣಾಮಗಳ ಬಗ್ಗೆ ಹೇಳಿ…

ಉತ್ತರ: ಅದನ್ನ ನಾನು ಇತ್ತೀಚೆಗೆ ಬರೆದಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ಡೇರೆ ಮೇಳ ಮತ್ತು ವ್ಯವಸಾಯಿ ಮೇಳಗಳಲ್ಲಿ ವ್ಯತ್ಯಾಸ ಇದೆ. ಒಂದು ಕಾಲದಲ್ಲಿ ವ್ಯವಸಾಯಿ ಮತ್ತು ಡೇರೆ ಒಂದೇ ಆಗಿತ್ತು. ಈಗ ಹಾಗಿಲ್ಲ. ಡೇರೆ ಮೇಳೆ ಅಂದರೆ ಡೇರೆ ಉಳ್ಳದ್ದು ಅದು ವ್ಯವಸಾಯಿ ಇರಬಹುದು ಇಲ್ಲದೆಯೂ ಇರಬಹುದು. 10 ವರ್ಷದೀಚೆ ಆದ ಬದಲಾವಣೆ ಇದು. ಈಗ ಯಕ್ಷಗಾನದಲ್ಲಿ ಹಲವು ವ್ಯವಸಾಯಿ ಮೇಳಗಳು ಡೇರೆ ಹಾಕೊಲ್ಲ. ಕಾಲಮಿತಿ ಯಕ್ಷಗಾನ ಹಾಲಿನಲ್ಲಿ ಅಥವಾ ಪ್ರಾಯೋಜಕತ್ವದ ಟಿಕೆಟ್ ಇಲ್ಲದೆ ಮಾಡೋದು. ಇದು ವ್ಯವಸಾಯಿನೆ, ಆದರೆ ಡೇರೆ ಇಲ್ಲ ಅಷ್ಟೆ.

ಸಂಘಟಕ ಮತ್ತು ಆಯೋಜಕ ಇಬ್ಬರೂ ಬೇರೆ ಬೇರೆ. ಸಂಘಟಕ ಅಂದರೆ ಅದರ ಎಲ್ಲಾ ಘಟಕಗಳ ಮಧ್ಯೆ ಒಂದು ಸಂಯೋಜನೆ ತರುವವನು. ಕಾಯಂ ಪ್ರೇಕ್ಷಕರು, ಅವರ ಅಭಿರುಚಿ, ಒಂದು ಮೇಳದ ನಿಲುವು ಇತ್ಯಾದಿಗಳ ಬಗ್ಗೆ ಸಂಘಟಕರಿಗೆ ಎಚ್ಚರವಿರುತ್ತದೆ. ಆಯೋಜಕರು ನಿರ್ದಿಷ್ಟವಾದ ಕಾರ್ಯಕ್ರಮಕ್ಕೆ ದುಡ್ಡು ತರ್ತಾರೆ ಅಷ್ಟೆ. ಹಿಂದಿನದು ಮುಂದಿನದರ ಯೋಚನೆ ಇಲ್ಲ.

ಪ್ರಶ್ನೆ: ಆದರ್ಶ ಸಂಘಟಕ ಯಾರು ನಿಮ್ಮ ದೃಷ್ಟಿಯಲ್ಲಿ?

ಉತ್ತರ: ಪ್ರೇಕ್ಷಕರು, ಪೋಷಕರು(ಪ್ರಾಯೋಜಕರು), ಸಾರ್ವಜನಿಕರು, ಕಲಾವಿದರು, ಈ ಎಲ್ಲಾ ಘಟಕಗಳ ನಡುವೆ ಒಂದು ಸಂಯೋಜನೆ, ಸಾಮರಸ್ಯ ಉಂಟು ಮಾಡುವವನು ಮತ್ತು ಯಕ್ಷಗಾನಕ್ಕೆ ಒಳ್ಳೆಯದನ್ನು ಹಾರೈಸುವವನು ಸಂಘಟಕ. ಈಗ ಆದರ್ಶ ಸಂಘಟಕರು ಅಂತ ಯಾರು ಇಲ್ಲ ಅನ್ನಿಸುತ್ತಿದೆ. ಯಾರು ಕಲಾವಿದರಾಗಿ ಮಂಡಳಿಯನ್ನು ನಡೆಸುತ್ತಿದ್ದರೊ ಅಂತಹವರು ಒಳ್ಳೆಯ ಸಂಘಟಕರೂ ಆಗಬಹುದು. ಈಗ ಅಂತಹ ತಂಡಗಳಿದ್ದರೂ ಅದರ ಪರಿಣಾಮಗಳು ಸೀಮಿತ.

ಪ್ರಶ್ನೆ: ಒಬ್ಬ ಪ್ರೇಕ್ಷಕ ಇವತ್ತಿನ ಯಕ್ಷಗಾನ ಚೆನ್ನಾಗಿತ್ತು, ಅಂದಾಗ ಪ್ರಸಂಗ ಪರಿಣಾಮಕಾರಿಯಾಗಿ ಮೂಡಿ ಬಂತು ಎನ್ನುವ ಅಭಿಪ್ರಾಯದಲ್ಲಿ ಮಾತಾಡುತ್ತಾನೆ. ನೀವು ಹೇಗೆ ಯಕ್ಷಗಾನವನ್ನು ನೋಡುತ್ತೀರಿ?

ಉತ್ತರ: ನಾನು ಪರಿಣಾಮಗಳ ದೃಷ್ಟಿಯಿಂದ ನೋಡುವುದಿಲ್ಲ. ನಾನು ನೋಡೋದು, ವಿಧಾನದ ದೃಷ್ಟಿಯಿಂದ ಅದರ ಪೂರ್ವಾಪರ ಪ್ರಯೋಜನ ಏನು ಅನ್ನೋದು ಗಮನಿಸಬೇಕಾಗತ್ತೆ. ಅದರ ಮುಂದಿನ ದಾರಿ ಏನು? ಅದರ ಮುಂದಿನ ಪರಿಣಾಮಗಳೇನು ಅನ್ನೋದು. ಗದಾಯುದ್ಧದ ಕೌರವನ ಪಾತ್ರ ಮಾಡಿದವನು ಶ್ರಮ ಹಾಕಿ ಕುಣಿದ, ಮಾತಾಡಿದ ಅನ್ನೋದನ್ನು ನಾವು ಗಮನಿಸೋದಕ್ಕಿಂತ, ಕೌರವನ ಪಾತ್ರ ಚಿತ್ರಣದ ವಿಧಾನ ಅನ್ನೋದು ಇರುತ್ತಲ್ಲ ಅದನ್ನ ನಾವು ಗಮನಿಸಬೇಕು.

ಪ್ರಶ್ನೆ: ಹೊಸ ತರದ ಕೌರವನನ್ನು ಒಬ್ಬ ಕಲಾವಿದರು ಮಾಡಿದರು ಅಂದ್ರೆ ಆ ಹೊಸ ತರದ ಕೌರವನಿಂದ ಆಗುವ ಮುಂದಿನ ಪರಿಣಾಮಗಳೇನು ಅನ್ನುವ ರೀತಿಯಲ್ಲಾ?

ಉತ್ತರ: ಹೌದು, ಬದಲಾವಣೆಗಳನ್ನು ಮಾಡಿಕೊಂಡರೆ ಪ್ರೇಕ್ಷಕರು ಸ್ವೀಕರಿಸಬಹುದೆ ಮತ್ತು ಈ ರಂಗಭೂಮಿಗೆ ಅದು ಹಿತ ಆಗಬಹುದೆ ಅಂತ ಯೋಚಿಸಬೇಕು. ಇಲ್ಲ ಅಂದರೆ ಪ್ರಯೋಜನ ಆಗೋದಿಲ್ಲ.

ಪ್ರಶ್ನೆ: ಪ್ರೇಕ್ಷಕರು ಸ್ವೀಕರಿಸೋದು ಅಂದರೆ ಅದನ್ನ ಮತ್ತೆ ಮತ್ತೆ ನೋಡೋದು, ಅದು ಪರಿಣಾಮನೆ ಅಲ್ಲವಾ?

ಉತ್ತರ: ಒಂದು ಉದಾಹರಣೆಯೊಂದಿಗೆ ಹೇಳೋಕೆ ಪ್ರಯತ್ನಿಸ್ತೇನೆ. ಸುಭದ್ರಾ ಕಲ್ಯಾಣದ ಬಲರಾಮನ ಪಾತ್ರ. ಹೆಚ್ಚಾಗಿ ಸುಭದ್ರಾ ಕಲ್ಯಾಣವನ್ನು ಪ್ರೇಮ ವಿವಾಹದ ಕತೆಯಾಗಿ ಅರ್ಥೈಸುತ್ತಾರೆ. ಆದರೆ ಪ್ರಸಂಗದಲ್ಲಿರೋದು ಅಷ್ಟೇ ಅಲ್ಲ. ಇಡೀ ಪ್ರಸಂಗ ರಾಜಕಾರಣ ಮತ್ತು ಧರ್ಮದ ಸಂಬಂಧವನ್ನು ವಿಶ್ಲೇಷಣೆ ಮಾಡತ್ತೆ. ಒಂದು ಹುಂಬ ರಾಜಕಾರಣ ಅಂದರೆ ಹಿಂದೆ ಮುಂದೆ ಆಲೋಚನೆ ಇಲ್ಲದ ರಾಜಕಾರಣ, ಕೃತ್ರಿಮವಾದ ಇನ್ನೊಂದು ವ್ಯವಸ್ಥೆಯಿಂದ ಮೋಸ ಹೋಗತ್ತೆ ಅಂತ. ಅಲ್ಲಿ ಅರ್ಜುನ ಕಪಟ ವೇಷದಿಂದ ಬರ್ತಾನೆ, ಬಲರಾಮ ಅದನ್ನ ನಂಬುತ್ತಾನೆ. ನಂಬಿ ಅವನು ಯಾವುದೋ ಆಸೆಗೆ ಒಳಗಾಗ್ತಾನೆ. ಹಾಗಾಗಿ ಅಲ್ಲಿ ಅರ್ಜುನನ್ನ ಕರೆದುಕೊಂಡು ಬರೋದು, ಅವನಿಗೆ ಪೂಜೆ ಇತ್ಯಾದಿ ಮಾಡೋದು. ಅವನನ್ನು ಓಲೈಸುವ ಸಂದರ್ಭ ಇದೆ. ಇಲ್ಲಿ ಎರಡು ವಿಧಾನಗಳಿವೆ. ಸಾರ್ವತ್ರಿಕವಾಗಿಯೆ ಇದೆ. ತೆಂಗಿನಕಾಯಿ ಒಡೆಯೋದು, ಕತ್ತಿ ತರೋದು, ಹಾಸ್ಯಗಾರ ಜಾಗಟೆಯನ್ನು ಬಾರಿಸೋದು. ಒಂದು ಆವರಣವನ್ನು ಜಾನಪದೀಯವಾಗಿ ಸೃಷ್ಟಿಸುವುದು. ಅದನ್ನ ಜನ ಖುಷಿ ಪಡ್ತಾರೆ. ಪದ್ಯದಲ್ಲೂ ಅಂತದ್ದು ಇದೆ. ಆದರೆ ಸ್ವಲ್ಪ ಬೇರೆ ರೀತಿಯಾಗಿದೆ. ಅದರ ಬದಲಿಗೆ ಅದನ್ನ ಪಲ್ಲಕ್ಕಿ ಕಲ್ಪನೆ ಮಾಡಿ, ಆ ಪಲ್ಲಕ್ಕಿ ಮೇಲೆ ಹೊತ್ತುಕೊಂಡು ಬಂದು ವಿಜೃಂಭಣೆ ಮಾಡಿ ಪೂಜೆಗೆ ಒಂದು ಪೂಜಾ ನೃತ್ಯವನ್ನು ಬಳಸೋದು. ಇದೂ ಯಕ್ಷಗಾನೀಯ ಮಾಧ್ಯಮವೇ. ಅದು ಸರಿಯೊ ಇದು ಸರಿಯೊ? ಅದು ಒಂದು ವಿಧಾನ ಇದು ಒಂದು ವಿಧಾನ. ಕತ್ತಿ ಕಾಯಿ ಬಲರಾಮ ಅಂತಲೇ ಹೆಸರಿದೆ ದಕ್ಷಿಣ ಕನ್ನಡದಲ್ಲಿ. ವೀರಭದ್ರ ನಾಯಕರಿಗೆ ಕತ್ತಿ ಕಾಯಿ ಬೇಕಾಗಿತ್ತು. ಇಲ್ಲಿ ಮಹಾಬಲ ಹೆಗಡೆಯವರು ಅದನ್ನೆ ಮಾಡ್ತಿದ್ದರು. ಆಮೇಲೆ ಅದರಲ್ಲಿ ಬದಲಾವಣೆ ತಂದರು. ಎರಡು ಜನ ಪಲ್ಲಕ್ಕಿ ಹೊತ್ತಿರೊ ತರ ಮೈಮ್ ಮಾಡ್ತಾರೆ. ಈಗ ಎಲ್ಲರೂ ತರ್ತಾರೆ. ಆ ಮೂಲಕ ರಾಜಕಾರಣದ ಮೇಲೆ ಕಪಟವಾದ ಧರ್ಮ ಹ್ಯಾಗೆ ಸವಾರಿ ಮಾಡತ್ತೆ ಅಂತ ತೋರಿಸೋದು. ಹಟ್ಟಿ ಅಂಗಡಿ ರಾಮಭಟ್ಟರು ಬರೆದ ಪ್ರಸಂಗ. ಅದರಲ್ಲಿ ಗರ್ನಾಲ್ ಹೊಡೆಯೋದು ಎಲ್ಲಾ ಇತ್ತು ಮೊದಲು. ಅದರಲ್ಲಿ ತಪ್ಪೇನು ಇಲ್ಲ. ಆದರೆ ಯಕ್ಷಗಾನಕ್ಕೆ ಯಾವುದು ಒಪ್ಪುತ್ತೆ ಅಂತ ಯೋಚನೆ ಮಾಡಬೇಕು.

ಯಕ್ಷಗಾನದ ರಂಗಮಾಧ್ಯಮದಲ್ಲಿ ಪ್ರತ್ಯಕ್ಷ ವಸ್ತುಗಳ ಬಳಕೆ ವಿಷಯದಲ್ಲಿ ಬೇರೆ ಸಿದ್ಧಾಂತಗಳೇ ಇದಾವೆ. ಇಲ್ಲಿ ಯಾವುದೂ ಪ್ರತ್ಯಕ್ಷ ವಸ್ತುಗಳನ್ನು ಬಳಸೊ ಪರಂಪರೆಯಿಲ್ಲ. ಅಕಸ್ಮಾತ್ ಬಳಸುವುದಾದರೆ ಅಲ್ಲೇ ಇರುವ ವಸ್ತುಗಳನ್ನು ಮಾರ್ಪಾಡು ಮಾಡಿಕೊಳ್ಳುತ್ತಾರೆ. ಪಾದುಕೆ ಅಂದರೆ ತಾಳದ ಎರಡು ಕಡಿಗಳನ್ನು ಮೇಲ್ಮುಖವಾಗಿ ಬೆರಳುಗಳಲ್ಲಿ ಸಿಕ್ಕಿಸಿಕೊಂಡರೆ ಅದು ಪಾದುಕೆ ಆಯ್ತು. ರಾಕ್ಷಸ ವೇಷದ ಎರಡು ಭುಜ ಕೀರ್ತಿ ಜೋಡಿಸಿ ಇಟ್ರೆ ಅದು ಶಿವಲಿಂಗ ಆಯ್ತು. ಆದರೆ ಕೆಲವು ಮೇಳದಲ್ಲಿ ಪ್ರತ್ಯಕ್ಷ ಗಣಪತಿಯನ್ನು ಬಳಸುತ್ತಾರೆ. ಅದು ಒಂದು ರೀತಿಯ ವಿಜೃಂಭಣೆ. ಪ್ರತ್ಯಕ್ಷ ಬಿಂಬವನ್ನ ತರುವುದು ಯಕ್ಷಗಾನದ ಕ್ರಮವೇ ಅಲ್ಲ. ಕಿರೀಟಕ್ಕೆ ವೀರಗಾಸೆಯನ್ನು ಕಟ್ಟಿ ಗಣಪತಿಯನ್ನು ಉಪಯೋಗಿಸೋದು ಯಕ್ಷಗಾನದ ಪರಂಪರೆ. ಅದು ಯಕ್ಷಗಾನೀಯ ಗಣಪತಿ. ಸಾಮಾಜಿಕ ವಸ್ತುಗಳನ್ನು ಬಳಸೋದು ಯಕ್ಷಗಾನದ ಕ್ರಮ ಅಲ್ಲ.

ಪ್ರಶ್ನೆ: ಔಚಿತ್ಯ ಮತ್ತು ಯಕ್ಷಗಾನೀಯತೆ ಅನ್ನೋದು ಏನು? ಅದನ್ನು ಹೇಗೆ ನಿರ್ಧರಿಸೋದು? ಕಾರಂತರು ಸ್ತ್ರೀ ಪಾತ್ರದ ವೇಷಭೂಷಣಕ್ಕೆ ಹಲವು ಬದಲಾವಣೆ ತಂದವರು, ಅದರ ಹಿನ್ನಲೆಯಲ್ಲಿ ವಿವರಿಸ್ತೀರಾ?

ಉತ್ತರ: ಔಚಿತ್ಯವನ್ನು ಬಹಳ ಸರಳವಾಗಿ ಹೇಳಬಹುದು, ಯಾವುದು ಯಕ್ಷಗಾನೀಯವಾಗಿರತ್ತೊ ಅದು ಔಚಿತ್ಯ. ಅಯಕ್ಷಗಾನೀಯವಾಗಿದ್ದೆಲ್ಲವೂ ಅನೌಚಿತ್ಯ. ಆದರೆ ಯಕ್ಷಗಾನೀಯತೆಯನ್ನು ನಿರ್ಧರಿಸುವುದು ಕಷ್ಟ. ಮುಂಚಿನ ಸ್ತ್ರೀ ವೇಷಭೂಷಣದಲ್ಲಿ ಶಿರೋಭೂಷಣ ಇರಲಿಲ್ಲ. ಆಯಾ ಕಾಲದ ಶ್ರೀಮಂತ ಹೆಂಗಸರು ಹೇಗಿರ್ತಾರೊ ಹಾಗೆ ಯಕ್ಷಗಾನದ ಸ್ತ್ರೀ ಪಾತ್ರಗಳು ಇರ್ತಿದ್ವು. ಕೆಲವೊಂದು ಸಲ ಕಚ್ಚೆ ಸೀರೆ ಹಾಕ್ತಿದ್ರು. ಕಾರಂತರು ಒಂದು ಕಡೆ ಬರೆದಿದ್ದಾರೆ, ಸ್ತ್ರೀ ವೇಷಗಳು ಮಿಸ್ ಮಾಡ್ರನ್ ಹಾಗೆ ಕಾಣ್ತಾರೆ ಅಂತ. ಕಾರಂತರು ಸ್ತ್ರೀ ವೇಷವನ್ನು ಪರಿಷ್ಕರಿಸಿದರು. ಈಗ ಒಂದು ರೀತಿಯ ಶಿರೋಭೂಷಣವನ್ನು ಉಪಯೋಗಿಸುತ್ತಾರೆ, ಅದು ಪೂರ್ತಿ ಸಾಕಾಗೋದಿಲ್ಲ. ರಾಣಿಯರಿಗೆ ಅಂದರೆ ಪಕ್ಕಾ ಪಟ್ಟದ ರಾಣಿಯರಿಗೆ ಬೇರೆ ರೀತಿಯ ಶಿರೋಭೂಷಣ ನಿರ್ಮಾಣವಾಗಬೇಕು ಅನ್ನೋ ಸಲಹೆ ಇದೆ. ಯಾವುದನ್ನು ಯಕ್ಷಗಾನೀಕರಣ ಮಾಡಿದಾರೊ ಅದೆಲ್ಲ ಔಚಿತ್ಯವಾಗುತ್ತದೆ. ಅಂದರೆ ಯಕ್ಷಗಾನದ ಇತರ ಅಂಗಗಳಿಗೆ ಅದು ಹೊಂದಿಕೆಯಾಗುತ್ತದೆ ಅನ್ನೋದು ಮುಖ್ಯ.

ಯಕ್ಷಗಾನವು ವಾಸ್ತವ ರಂಗಭೂಮಿ ಅಲ್ಲ ಅಂತ ನನಗೆ ನಂತರ ಬಂದ ಕಲ್ಪನೆ. ಭಸ್ಮಾಸುರ ಬೂದಿಯಿಂದ ಹುಟ್ಟಿದವನು, ವೇಷಭೂಷಣ ತೊಟ್ಟುಕೊಳ್ಳುವ ಅಗತ್ಯ ಇಲ್ಲ. ಬಟ್ಟೆ ಸುತ್ತಿಕೊಂಡರೆ ಸಾಕು ಅನ್ನುವಂತಹ ಕಲ್ಪನೆಗಳು ಕಲಾವಿದರಲ್ಲೂ ಪ್ರೇಕ್ಷಕರಲ್ಲೂ ಇತ್ತು.

ಪ್ರಶ್ನೆ: ಯಕ್ಷಗಾನದ ಕಲೆಯ ಬದುಕಲ್ಲಿ, ಯಕ್ಷನಾಟಕ ಅಂತೆಲ್ಲ ಬಂತೆಲ್ಲ, ಕಂಪನಿ ನಾಟಕಗಳ ಪ್ರಭಾವ, ಇತ್ಯಾದಿ. ಆಗ ಬೇರೆ ತರದ ಸಾಮಾಜಿಕ ಪಲ್ಲಟ ಆಗಿದ್ದರೆ ಯಕ್ಷಗಾನೀಯತೆ ಅನ್ನುವುದು ಬೇರೆ ರೀತಿಯಲ್ಲೆ ವ್ಯಾಖ್ಯಾನಿಸಲ್ಪಡುತ್ತಿತ್ತಲ್ವಾ?

ಉತ್ತರ: ಖಂಡಿತಾ ಹೌದು. ಯಕ್ಷಗಾನಕ್ಕೆ ಆದ ಪಲ್ಲಟಗಳಲ್ಲಿ ಯಕ್ಷಗಾನೀಯತೆ ಅನ್ನೋ ಅಲೋಚನೆ ಬರುವುದಕ್ಕೆ ಕಾರಂತರೇ ಕಾರಣ. ಕಾರಂತರು ಮಾಧ್ಯಮ ಪ್ರಜ್ಞೆಯನ್ನು ಬೆಳೆಸಿದರು. ಬಹುಶಃ ಅವರೊಬ್ಬರು ಇಲ್ಲದೆ ಹೋಗಿದ್ದರೆ ಇಷ್ಟು ಹೊತ್ತಿಗೆ ಯಕ್ಷಗಾನ ಹೋಗಿ ಅದರ ಅವಶೇಷವೂ ಉಳೀತಿರಲಿಲ್ಲ. ಅವರಿಗೂ ಕೆಲವೊಂದು ವಿಷಯದಲ್ಲಿ ಮಾಧ್ಯಮ ಪ್ರಜ್ಞೆ ಬಹಳ ಸಶಕ್ತವಾಗಿ ಇರಲಿಲ್ಲ. ಉದಾಹರಣೆಗೆ ಋಷಿಗಳ ವೇಷ ಭೂಷಣ ಹೇಗೆ ಅಂದರೆ ಕುಂದಾಪುರದ ಆಸು ಪಾಸು ಯಾವುದು ಇದೆಯೊ ಅದನ್ನು ಬಳಸೋದು ಅಂದರು. ಶಿಖೆ ಅಥವಾ ಮುಡಿ ಇದೆ ಅನ್ನೋದನ್ನು ಅವರು ಗಮನಿಸಿಲ್ಲ. ಇನ್ನೊಂದು ಪುರಾಣವೇ ಯಕ್ಷಗಾನ ಅಂತ ಅವರು ತಿಳಕೊಂಡರು. ಯಕ್ಷಗಾನ ಯಕ್ಷಗಾನವೇ. ಅದು ಬರೀ ಪುರಾಣವಲ್ಲ. ಪುರಾಣ ಹೋಗಿ ಯಕ್ಷಗಾನ ಆಗತ್ತೆ, ಅವೆರಡು ಒಂದೇ ಅಲ್ಲ. ಪುರಾಣ ಚಲನಚಿತ್ರ, ನಾಟಕಕ್ಕು ಹೋಗುತ್ತದೆ. ಆದರೆ ಅಲ್ಲಿ ಬೇರೆ ರೀತಿ ಆಗುತ್ತದೆ. ಒಬ್ಬ ಯಕ್ಷಗಾನದ ರಾಜ, ನಾಟಕದ ರಾಜ, ಸಿನಿಮಾ ರಾಜ ಬೇರೆ. ಹಂಗಾಗಿ ಪುರಾಣವೇ ಯಕ್ಷಗಾನ ಅಲ್ಲ. ಒಂದು ವರ್ಷದ ಹಿಂದೆ ವಿಜಯ ಕರ್ನಾಟಕ ಪತ್ರಿಕೆ ಆರು ಪ್ರಶ್ನೆಗಳನ್ನು ಆರು ಜನರಿಗೆ ಕೇಳಿದರು. ಅದರಲ್ಲಿ ಇದೇ ಪ್ರಶ್ನೆ ಬಂದಿತ್ತು. ಔಚಿತ್ಯ ಅಂದರೆ ಏನು ಅಂತ. ಅದಕ್ಕೆ ಒಂದು ನಿದರ್ಶನ ಕೊಟ್ಟಿದ್ದೆ. ಔಚಿತ್ಯ ಅನ್ನೋದು ಕಾಲ ಕಾಲಕ್ಕೆ ಬದಲಾವಣೆ ಆಗತ್ತೆ. ಆಗಬಹುದು. ಇಲ್ಲ ಅಂತಲ್ಲ. ಒಂದು ಕಾಲಕ್ಕೆ ಸುಸಂಬದ್ಧ ಇನ್ನೊಂದು ಕಾಲಕ್ಕೆ ಅಸಂಬದ್ಧ ಅನ್ನಿಸಬಹುದು.

ಈಗ ನೋಡಿ, ಗದಾಯುದ್ಧದಲ್ಲಿ ಕೌರವ ಸರೋವರಕ್ಕೆ ಇಳಿತೀನಿ ಅಂತ ರಂಗಸ್ಥಳದಿಂದ ಹೋಗ್ತಾನೆ. ಆ ಇಳಿದು ಹೋಗೋದು ಮತ್ತು ಪುನಃ ಬರೋದು ಅವೆಲ್ಲ ಅಭಿನಯದ ಭಾಗವಾಗಿದೆ. ಆದರೆ ಭೀಮ ರಂಗಸ್ಥಳದಲ್ಲೇ ಬೀಳ್ತಾನೆ. ಅವನು ಕೆಳಗಿಳಿದು ಹೋಗಬಹುದಾಗಿತ್ತಲ್ಲ, ಕೌರವ ಸರೋವರದಲ್ಲಿ ಕೂತ್ಕೊಂಡೆ ಅಂತ ರಂಗಸ್ಥಳದ ಮೂಲೆಲಿ ಕೂತ್ಕೊಬೋದಿತ್ತು. ಅದು ಈಗ ಅಭಾಸ ಅನ್ನಿಸುತ್ತದೆ. ಆದರೆ ಭೀಮ ರಂಗಸ್ಥಳದಲ್ಲೆ ಬೀಳೋದು ಯಕ್ಷಗಾನದ ಪರಂಪರೆಯಾಗಿದೆ. ಸುಮಾರು ಹತ್ತು ಜನ ಭೀಮನ ಪಾತ್ರಧಾರಿಗಳು ನಮಗೆ ಸಿಗ್ತಾರೆ. ಮುರೂರು ದೇವರ ಹೆಗಡೆಯಿಂದ ಇವತ್ತಿನವರೆಗೆ. ಎಲ್ಲರೂ ರಂಗಸ್ಥಳದಲ್ಲಿ ಬೀಳ್ತಾರೆ. ಅನೇಕ ಸಲ ರಂಗಸ್ಥಳದಲ್ಲಿ ಜಾಗ ಸಾಕಾಗೋಲ್ಲ. ಅಲ್ಲಿ ಕೌರವಂಗೆ ಐದು ಪದ್ಯಗಳಿದಾವೆ. ನನಗೆ ಹಿರಿಯವರು ಹೇಳ್ತಿದ್ರು, ಒಮ್ಮೊಮ್ಮೆ ಶಿವರಾಮ ಹೆಗಡೆಯವರು ಬಿದ್ದ ಭೀಮನನ್ನು ಎಳೆದು ಅಭಿನಯವನ್ನು ಮಾಡ್ತಿದ್ರು ಅಂತ. ಆದರೂ ಅವನು ರಂಗಸ್ಥಳದಲ್ಲಿ ಬೀಳ್ತಾನೆ. ಯಾವುದು ಔಚಿತ್ಯ ಹಾಗಾದ್ರೆ? ಯಾವ ಭೀಮನೂ ಬಿದ್ದಾಗ ಒಳಗೆ ಹೋಗೊಲ್ಲ. ಒಬ್ರಿಬ್ರು ಮಾಡಿದರಂತೆ, ಅದು ನಿಲ್ಲಲಿಲ್ಲ. ನನ್ನ ದೃಷ್ಟಿಯಿಂದ ಯಾವುದು ಯಕ್ಷಗಾನೀಯವಲ್ಲವೋ ಅದು ಔಚಿತ್ಯವಲ್ಲ. ಭೀಮ ಸಶಕ್ತವಾಗಿ, ಪರಿಣಾಮಕಾರಿಯಾಗಿ ಒಳಗೆ ಹೋಗಿ ಬಂದಿದ್ದರೆ ಅದು ಔಚಿತ್ಯವೇ ಆಗ್ತಿತ್ತು. ಆದರೆ ಯಾರೂ ಮಾಡಿಲ್ಲ. ವ್ಯಕ್ತಿ ಸ್ಥಾಪಿತ ಕ್ರಮ, ಅದೇ ಪರಂಪರೆ ಆಯ್ತು. ಔಚಿತ್ಯ ಅನೌಚಿತ್ಯಗಳು ಅದರ ಮೇಲೆ ನಿರ್ಧಾರ ಆಗೋದು.

ಪ್ರಶ್ನೆ: ಅಂದರೆ ನಟ ಅಥವಾ ವ್ಯಕ್ತಿ ಪ್ರಧಾನ ಅಂದ ಹಾಗಾಯ್ತು. ಯಕ್ಷಗಾನದ ಪರಂಪರೆಯಲ್ಲಿ ಇದು ಎಷ್ಟು ಮುಖ್ಯ.?

ಉತ್ತರ: ಜಗತ್ತಿನ ಇತರ ಕಲೆಗಳ ಮಧ್ಯೆ ಯಕ್ಷಗಾನವನ್ನು ನೋಡಿದರೆ ಇದು ನಟ ಪ್ರಾಧಾನ್ಯದ ರಂಗಭೂಮಿ ಅನ್ನೋದು ಗೊತ್ತಾಗುತ್ತದೆ. ಅಂದರೆ ಯಾವುದೊ ನಿರ್ದಿಷ್ಟ ನಟ ಅಥವಾ ಭಾಗವತ ಅಂತ ಅಲ್ಲ. ಸಾಮಗ್ರಿ ಪ್ರಧಾನ ಅಲ್ಲ ಅನ್ನೊ ಲೆಕ್ಕದಲ್ಲಿ. ಹಾಗಾಗಿ ನಟ ಸ್ಥಾಪಿತ ಸಂಪ್ರದಾಯ ಅನ್ನೋದು ಮುಂದಿನವರಿಗೆ ಮಾರ್ಗದರ್ಶನ ಆಗತ್ತೆ. ಯಕ್ಷಗಾನ ರಂಗ ಮಾಧ್ಯಮದಲ್ಲಿ, ಅನುಕರಣೆ ಮತ್ತು ನಟ ಸಂಪ್ರದಾಯದ ಸಾತತ್ಯ ಅನ್ನುವ ಲೇಖನ ಬರೆದೆ. ಒಂದು ರೀತಿಯ ಅನುಕರಣೆ, ಅನುಸರಣೆ ಅನ್ನಬಹುದೇನೊ. ಅದು ಇಲ್ಲದಿದ್ದರೆ ಉತ್ತರ ಕರ್ನಾಟಕದ ಬಯಲಾಟದ ಗತಿಯೇ ಇದಕ್ಕೂ ಬರ್ತಿತ್ತೇನೊ. ಅನುಸರಣೆಯಿಂದಲೇ ಪರಂಪರೆ ಇವತ್ತಿಗೂ ಉಳಿಯಿತು.

ಪ್ರಶ್ನೆ: ಯಕ್ಷಗಾನದ ಕಲಿಕೆಯೆ ಹಾಗಿದೆ. ಸಣ್ಣ ಪಾತ್ರಗಳನ್ನು ಮಾಡಿ ಕಲಿಯುವುದು, ಅನುಕರಣೆಯಿಂದಲು ಬರುತ್ತೆ. ಈಗ ಕಾಲಮಿತಿ ಜಾಸ್ತಿ ಆಗ್ತಿದ್ದ ಹಾಗೆ ಸಣ್ಣ ಪಾತ್ರಗಳನ್ನು ಬಿಟ್ಟು ಪ್ರಸಂಗಗಳನ್ನು ರಂಗದ ಮೇಲೆ ತಂದರೆ ಕಲಿಕೆ ಹೇಗೆ ಆಗತ್ತೆ?

ಉತ್ತರ: ನೋಡಿ ಕಲಿಕೆ ವಿಧಾನ ಮೊದಲು ನಿಜವಾಗಿ ಹಾಗೇ ಇತ್ತು. ಭರತನಾಟ್ಯದ ಹಾಗೆ ಸಂಪೂರ್ಣ ಸಿದ್ಧತೆಯನ್ನು ಮಾಡಿ ರಂಗಪ್ರವೇಶದ ಕ್ರಮ ಇರ್ಲಿಲ್ಲ. ರಂಗ ಪ್ರವೇಶ ಮಾಡಿ ಕಲಿಕೆ ಅನ್ನೋದು ಇತ್ತು. ಕೇಂದ್ರದ ಕಲಿಕೆ ಬಂದ ಮೇಲೂ ಏನಾಗುತಿತ್ತು ಅಂದರೆ ಕಲಾವಿದ ಪ್ರಾಥಮಿಕ ಸಾಮಗ್ರಿಗಳನ್ನು ಮಾತ್ರ ಕಲಿತಿದ್ದ. ಹೆಜ್ಜೆ, ಹಸ್ತಾಭಿನಯ, ಚಲನೆ, ಪಾತ್ರ ಪ್ರವೇಶ ನಿರ್ಗಮನ ಇತ್ಯಾದಿ ಪ್ರಾಥಮಿಕ ಜ್ಞಾನವನ್ನು ಸಂಪಾದಿಸ್ತಿದ್ದ. ಆದರೆ ಅದನ್ನು ಪಾತ್ರೋಚಿತವಾಗಿ ಹೇಗೆ ಬಳಸಿಕೋಬೇಕಿತ್ತು ಅನ್ನೋದು ಅವನಿಗೆ ಅಲ್ಲಿ ಸಿಗೊದಿಲ್ಲ. ರಂಗದ ಮೇಲೆ ಅನುಸರಣೆಯಿಂದ ಅದನ್ನು ಮಾಡ್ತಿದ್ದ. ನಿಜವಾಗಿ ಈಗಿನ ಕೇಂದ್ರಗಳು ಅದನ್ನ ಕಲಿಸಬೇಕಾಗಿತ್ತು. ಆದರೆ ಹೆಚ್ಚಿನ ಕೇಂದ್ರಗಳಲ್ಲಿ ಪ್ರಾಥಮಿಕ ಸಾಮಗ್ರಿಗಳನ್ನು ಮಾತ್ರ ಕಲಿಸ್ತಾರೆ. ಹಾಗಾಗಿ ಪ್ರಾಥಮಿಕ ಸಾಮಾಗ್ರಿಗಳನ್ನು ಒಂದು ಮೂರು ತಿಂಗಳು ಕಲಿತ ನಂತರ ವ್ಯವಸಾಯಿ ಮೇಳದವರು ಅವನನ್ನ ಹಾರಿಸಿಬಿಡ್ತಾರೆ. ಪಾತ್ರೋಚಿತವಾಗಿ ಹ್ಯಾಗೆ ಕಲಿತದ್ದನ್ನು ಪರಿವರ್ತಿಸಿಕೊಳ್ಳಬೇಕು ಅನ್ನೋದು ಆಮೇಲೆ ಅವನ ಸ್ವಂತ ಶಕ್ತಿಗೆ ಬಿಟ್ಟದ್ದಾಗಿಬಿಡತ್ತೆ.

ಪ್ರಶ್ನೆ: ಯಾವುದು ಪರಿಣಾಮ, ಯಾವುದು ಯಕ್ಷಗಾನಕ್ಕೆ ಹಿತ ಅನ್ನುವುದನ್ನು ನಿರ್ಧರಿಸೋದು ಕಷ್ಟವಲ್ಲವೇ? ವೈಯಕ್ತಿಕವಾದ ವೈಶಿಷ್ಟ್ಯವುಳ್ಳ ಕಲಾವಿದರಲ್ಲಿ ಇದನ್ನು ನಿರ್ಧರಿಸುವುದು ಇನ್ನೂ ಸಮಸ್ಯಾತ್ಮಕ ಆಗುತ್ತದೆಯಲ್ಲ? ಜನರ ಮೆಚ್ಚುಗೆಯಲ್ಲೂ ಹಲವು ರೀತಿಯ ವೈವಿಧ್ಯತೆ ಇವೆಯಲ್ಲ. ಅದನ್ನು ಯಕ್ಷಗಾನದಲ್ಲಿ ಹೇಗೆ ಅರ್ಥೈಸುತ್ತೀರಿ?

ಉತ್ತರ: ನನ್ನ ದೃಷ್ಟಿಯಲ್ಲಂತೂ ಯಾವುದು ಸ್ಥಾಪಿತ ಕ್ರಮ ಇದೆಯೊ ಅದಕ್ಕೆ ಅತ್ಯುತ್ತಮವಾಗಿ ಒಪ್ಪುವ ಬದಲಾವಣೆಯನ್ನ ಮಾಡಬಹುದು. ನೃತ್ಯವಿಧಾನ, ಪಾತ್ರ ಚಿತ್ರಣ, ಎಲ್ಲಾ ವಿಭಾಗಗಳಲ್ಲಿಯೂ, ಅದನ್ನ ನಾನು ಒಳ್ಳೆಯ ಯಕ್ಷಗಾನ ಅಂತ ಕರಿಯಬಹುದು. ಅಲ್ಲದೆ ಹೋದರೆ ಪರಿಣಾಮದ ದೃಷ್ಟಿ ಮಾತ್ರ ಇಟ್ಕೊಬೇಕಾಗತ್ತೆ. ನಾನು ಯಾವತ್ತೂ ಹೇಳುತ್ತಾ ಬಂದಿರೋದು ಯಕ್ಷಗಾನದಲ್ಲಿ ಪ್ರತಿಯೊಬ್ಬ ರಂಗನಟನೂ ಅಧ್ಯಯನ ಯೋಗ್ಯ. ಜನಪ್ರಿಯ ಆಗಿರಲಿ ಆಗಿರದಿರಲಿ. ಆದರೆ ಆಧ್ಯಯನ ಮಾಡಬೇಕಿದ್ದರೆ ಎಲ್ಲರನ್ನೂ ಒಂದೇ ಮಾನದಂಡದಲ್ಲಿ ಮಾಡೋದು ಅಲ್ಲ. ಅವರಿಗೆ ವ್ಯಕ್ತಿ ವಿಶಿಷ್ಟ ವಿಧಾನಗಳಿರುತ್ತವೆ. ಚಿಟ್ಟಾಣಿಯವರ ವ್ಯಕ್ತಿ ವಿಶಿಷ್ಟತೆ ಇಟ್ಟುಕೊಂಡೇ ಔಚಿತ್ಯ ಮತ್ತು ಅದರ ಪರಿಣಾಮಗಳನ್ನ ನೋಡಬೇಕಾಗುತ್ತದೆ. ಈ ರಂಗಭೂಮಿಯಲ್ಲಿ ಅತ್ಯಂತ ಸಣ್ಣ ಪಾತ್ರವೂ ಒಂದು ರಂಗಪರಂಪರೆಯನ್ನು ಸ್ಥಾಪನೆ ಮಾಡಿದೆ. ಉದಾಹರಣೆಗೆ ಬೆಳೆಯೂರು ಕೃಷ್ಣಮೂರ್ತಿಯವರ ಸತ್ಯ ಹರಿಶ್ಚಂದ್ರದ ಶಿವ. ಶಿವನದ್ದು ಸಣ್ಣ ಪಾತ್ರ. ಒಂದು ಘೋಷಣಾ ವಾಕ್ಯದಲ್ಲಿ ಸಮರ್ಥವಾಗಿ ಸಂಭಾಷಣೆಯನ್ನು ಹೆಣೆದುಕೊಂಡಿದ್ದರು. ಅದನ್ನು ರಂಗ ಪೀಠದಲ್ಲಿ ನಿಂತು ಹೇಳುತ್ತಿದ್ದರು. ಅದನ್ನು ಎಲ್ಲರೂ ಅತ್ಯಂತ ಗೌರವದಿಂದ ಸ್ವೀಕರಿಸಿದ್ದರು. ಶಿವ ಬರೋದು ಎಲ್ಲರೂ ಎದ್ದು ಹೊರಡುವ ಬೆಳಗಿನ ಜಾವದ ಹೊತ್ತು. ಆದರೆ ಜನರನ್ನು ಹಿಡಿದು ನಿಲ್ಲಿಸುತ್ತಿದ್ದರು. ಇದರಲ್ಲಿ ಶ್ರೇಷ್ಠ ಪಾತ್ರ, ಕನಿಷ್ಟ, ಜನಪ್ರಿಯ ಅಮುಖ್ಯ ಇವೆಲ್ಲ ಮುಖ್ಯ ಅಲ್ಲ.

ಯಕ್ಷಗಾನದಲ್ಲಿ ಇತಿಹಾಸದ ಎಲ್ಲಾ ಕಾಲಘಟ್ಟಗಳಲ್ಲೂ ಜನರ ಮೆಚ್ಚುಗೆಗಳಲ್ಲಿ ಅಜಗಜಾಂತರ ವ್ಯತ್ಯಾಸ ಯಾವಾಗಲೂ ಇದೆ. ಯಕ್ಷಗಾನೀಯವಾಗಿ ಪಾತ್ರ ಮಾಡಿ ಜನರನ್ನು ಮೆಚ್ಚಿಸಿದವರು ಇದ್ದಾರೆ. ಅದೇ ಕಾಲದಲ್ಲಿ ಏನೇನೂ ಯಕ್ಷಗಾನೀಯ ಅಲ್ಲದ ಪಾತ್ರ ಚಿತ್ರಣ ಮಾಡಿ ಜನ ಮೆಚ್ಚಿಸಿದವರು ಇದ್ದಾರೆ. ಸಾಧ್ಯತೆಯ ಎರಡು ಶಿಖರಗಳು, ದೇವರ ಹೆಗಡೆ ಮತ್ತು ಶಿವರಾಮ ಹೆಗಡೆಯವರು. ಎರಡು ಸಾಧ್ಯತೆಗಳನ್ನು ಅವರು ತೊರಿಸಿದ್ದರು. ಈ ಜನಾಕರ್ಷಣೆಯ ಕಲೆಯಲ್ಲಿ ಆಕರ್ಷಣೆ ಉಂಟು ಮಾಡೋದೇ ಒಮ್ಮೊಮ್ಮೆ ಒಂದು ಮಾನದಂಡ ಆಗಿಬಿಡುತ್ತದೆ. ಅದು ಬೇಡ ಅಂತ ಹೇಳಲಿಕ್ಕೆ ಸಾಧ್ಯ ಇಲ್ಲ.

ಕಾಲಮಿತಿ ಪ್ರದರ್ಶನಗಳಿಗೆ ಬೇಕಾದ ಪ್ರಜ್ಞಾಪೂರ್ವಕ ರಚನಾತ್ಮಕ ಬದಲಾವಣೆಗಳು ಮತ್ತು ಇತ್ತೀಚಿನ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚರ್ಚೆಗಳು ತರುವ ಜಾಗತಿಕ ನಿಯಂತ್ರಣ, ಸ್ತ್ರೀಯರ ಯಕ್ಷಗಾನ ಬೆಳೆಯಬೇಕಾದ ರೀತಿ ಮುಂತಾದವುಗಳ ಬಗ್ಗೆ ಮಾತನಾಡಿದರು. “ನಾನು ಕೆಲವೊಂದರ ಥೀಸಿಸ್ ಬರೆದು 20 ವರ್ಷಗಳ ಮೇಲಾಯಿತು, ನನ್ನ ಅಭಿಪ್ರಾಯವೇ ಅಂತಿಮವಲ್ಲ” ಎನ್ನುವ ಅವರ ಕೊನೆಯ ಮಾತು, ಅವರ ವಿನಯಕ್ಕೆ ಮತ್ತು ತಮ್ಮ ಅನಾರೋಗ್ಯದ ಮಧ್ಯೆಯೂ ಯಕ್ಷಗಾನದೊಟ್ಟಿಗೆ ಇಟ್ಟುಕೊಂಡಿರುವ ಒಡನಾಟದ ಉತ್ಸಾಹಕ್ಕೆ ಸುಮಾರು ಐದು ತಾಸಿನ ಸಂದರ್ಶನ ಸಾಕ್ಷಿಯಾಯಿತೆನಿಸಿತು.