ನಿಜವಾಗಿ ಹೇಳೊದಂದ್ರೆ ನಮಗೆ ಯಕ್ಷಗಾನದ ಮೇಲಿರೊ ಪ್ರೀತಿನೆ ಯಕ್ಷಗಾನ ಮಾಡಿಸೋಕೆ ಇರೊ ಕಾರಣ. ಇಲ್ಲಿ ಪ್ರತಿ ದಿನ ಒಂದಿಪ್ಪತ್ತು ಜನ ಇಲ್ಲಿ ಸೇರ್ತೇವಲ್ಲ, 365 ದಿನನೂ ಯಕ್ಷಗಾನದ ಏನಾದ್ರು ಒಂದು ಸುದ್ದಿ ಮಾತಾಡೇ ಆಡ್ತಿವಿ. ಮಳೆಗಾಲದಲ್ಲಿ ತಾಳಮದ್ದಲೆ ನೋಡ್ತಿವಿ. ಇಲ್ಲಿ ಈ ತರ ಅರ್ಥ ಹೇಳಿದರು. ಅಲ್ಲೊಂದು ಆಟ ನೋಡಿಕೊಂಡು ಬಂದೆ, ಹಿಂಗಾಯಿತು, ಹಂಗಾಯಿತು ಅಂತ ಏನೊ ಒಂದು ಮಾತು ಇರತ್ತೆ. ಕಲಾವಿದರ ಬಗ್ಗೆ, ಪ್ರಸಂಗದ ಬಗ್ಗೆ ಒಂದು ವಿಮರ್ಶೆಯಾದರೂ ಇರತ್ತೆ. ಒಟ್ಟಿನಲ್ಲಿ ಯಕ್ಷಗಾನ ವಿಷಯ ಬರದ ದಿನವೇ ಇಲ್ಲ.
“ಯಕ್ಷಾರ್ಥ ಚಿಂತಾಮಣಿ” ಅಂಕಣದಲ್ಲಿ ಯಕ್ಷಗಾನದ ಸಂಘಟಕರನ್ನು ಮಾತನಾಡಿಸಿ ಅವರ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ ಕೃತಿ ಆರ್ ಪುರಪ್ಪೇಮನೆ

ಹಳ್ಳಿಗಳಲ್ಲಿ ದೇವಸ್ಥಾನದ ಗುಂಪು ಅಥವಾ ಅಲ್ಲಿರುವ ಚಿಕ್ಕ ಪುಟ್ಟ ಸಂಘಟನೆಗಳು ವರ್ಷಕ್ಕೊಮ್ಮೆ ವೃತ್ತಿ ಕಲಾವಿದರ ಯಕ್ಷಗಾನ ಮಾಡಿಸುತ್ತಾರೆ. ಅದಕ್ಕೆ ಬೇಕಾದ ತಯಾರಿ, ಚರ್ಚೆಗಳು, ಅಂತಹ ಹಳ್ಳಿಗಳ ಬದುಕಿನಲ್ಲಿ ಯಕ್ಷಗಾನಕ್ಕಿರುವ ಸ್ಥಾನ, ಅದರ ಜನಪ್ರಿಯತೆ, ಅದು ಅವರಿಗೆ ಕೊಡುವ ಅಸ್ಮಿತೆ, ಹೆಮ್ಮೆ, ಆಟ ಮಾಡಿಸುವಾಗಿನ ಅವರ ಮಾನದಂಡಗಳು ಹೇಗಿರುತ್ತವೆ ಎನ್ನುವುದನ್ನು ತಿಳಿಯುವುದಕ್ಕೆ ಮಾಡಿದ ಗುಂಪು ಸಂದರ್ಶನಗಳಲ್ಲಿ ಒಂದಿದು. ಮೂಲೆ ಮೂಲೆ ಹಳ್ಳಿಗಳಲ್ಲಿ ಇರುವ ಕಾರ್ಗತ್ತಲಿನ ಮೌನದಲ್ಲಿ, ದಿನದ ಕೃಷಿ ಕೆಲಸಗಳನ್ನು ಮುಗಿಸಿ, ಸಂಜೆಯ ಹಾಲು ಕರೆದು, ಅದನ್ನು ಸುತ್ತಮುತ್ತಲ ಹಳ್ಳಿಗಳಿಗೆ ಕೇಂದ್ರವಾಗಿರುವ, ಹೆಚ್ಚಾಗಿ ಬಸ್ ಒಡಾಡುವ ಮೇಯಿನ್ ರೋಡಿನಲ್ಲಿರುವ ಊರಿಗೆ ಹೋಗಿ, ಅಲ್ಲಿನ ಡೈರಿಯಲ್ಲಿ ಹಾಲು ಹಾಕಿ, ಅಲ್ಲಿಯೇ ಕೇರಂ ಆಡಿ, ಹರಟೆ ಹೊಡೆದು ರಾತ್ರಿ ಊಟಕ್ಕೆ ಮನೆಗೆ ಬರುವ ದಿನಚರಿಯಿರುವ ಊರಿನ ಸಂಘಗಳಿಗಿರುವ ಲವಲವಿಕೆಯನ್ನು ಇಂತಹ ಬರಹ ಹಿಡಿದಿಡಲಾಗದಿದ್ದರೂ ಇಂತಹ ಮಾತುಕತೆಗಳು ಯಕ್ಷಗಾನದ ನನ್ನ ಅಧ್ಯಯನಕ್ಕೆ ಆಕರಗಳಾಗಿವೆ. ಎಲ್ಲಾ ವೃತ್ತಿಪರ ಕಲಾವಿದರನ್ನು ಕರೆಸಿ ವರ್ಷಕ್ಕೊಂದು ಆಟ ಮಾಡಿಸುವ ಒಂದು ಹಳ್ಳಿಯಲ್ಲಿ ಸಂಜೆ ನಡೆದ ಲೋಕಾಭಿರಾಮದ ಚರ್ಚೆಯಾದ್ದರಿಂದ ವಿಷಯಗಳನ್ನು ಮಾತಾಡುತ್ತಾ ಬಂದ ಅನುಕ್ರಮದಲ್ಲಿಯೇ ಇಟ್ಟಿದ್ದೇನೆ.

ಉದ್ದೇಶ, ತಯಾರಿ ಮಾನದಂಡಗಳು

ಎಲ್ಲಾ ಕಲಾವಿದರನ್ನು ಸೇರಿಸಿ ಆಟವಾಡಿಸೊದು ನಮ್ಮ ಉದ್ದೇಶ. ಇದೊಂತರ ಸಮಾರಾಧನೆಯ ರೀತಿ, ನಾವೆಲ್ಲ ಕೂತು ಮಾತಾಡುತ್ತೇವೆ. ಮೂರು ನಾಲ್ಕು ತಿಂಗಳು ಮೊದಲೇ, ಮಳೆಗಾಲದಲ್ಲಿ ಇತರ ತಿರುಗಾಟ ಕಡಿಮೆ ಇರುವಾಗಲೇ ಇದಕ್ಕೆ ತಯಾರಿ ಆರಂಭವಾಗುತ್ತದೆ. ಪ್ರಸಂಗದ ಆಯ್ಕೆ ಮೇಲೆ ಯಾರನ್ನು ಕರೆಯಬೇಕು, ಯಾವ ಪಾತ್ರ ಮಾಡಿಸಬೇಕು ಎನ್ನುವುದು ನಿರ್ಧಾರವಾಗುತ್ತದೆ. ಕೆಲವೊಂದು ಪಾತ್ರಗಳಿಗೆ ಕಲಾವಿದರು ಪ್ರಸಿದ್ಧರಾಗಿರುತ್ತಾರೆ. ಅವರನ್ನು ಕರೆಸುತ್ತೇವೆ. ಜೊತೆಗೆ ಇನ್ನೂವರೆಗು ಮಾಡಿರದ ಕಾಂಬಿನೇಶನ್ ಮಾಡುವುದಕ್ಕೆ ಪ್ರಯತ್ನಿಸುತ್ತೇವೆ. ನೋಡಿ ನೋಡಿ ರೂಢಿಯಾಗಿರುವ ಎದುರು ಪಾತ್ರಗಳನ್ನು ತಪ್ಪಿಸಿ ಹಾಕಿದಾಗ, ನಮಗೂ ಹೊಸ ನಿರೀಕ್ಷೆ ಹುಟ್ಟುತ್ತದೆ. ಮತ್ತು ಜನಾಕರ್ಷಣೆಯು ಆಗುತ್ತದೆ, ಸ್ಪರ್ಧೆ ಏರ್ಪಡುತ್ತದೆ. ಒಂದೇ ಮೇಳದ ಇಬ್ಬರು ಕಲಾವಿದರನ್ನು ಒಟ್ಟಿಗೇ ಹಾಕದಿದ್ದರೆ ಅವರು ಹೇಗೆ ಪಾತ್ರ ಮಾಡುತ್ತಾರೆ ಅನ್ನುವುದು ಕುತೂಹಲಕರವಾಗಿರುತ್ತದೆ. ಎಲ್ಲಾ ರೀತಿಯ ಪ್ರೇಕ್ಷಕರು ಬರ್ತಾರೆ, ಹಾಸ್ಯ ಪಾತ್ರಗಳು, ಸ್ತ್ರೀ ವೇಷ, ಎಲ್ಲದೂ ಇರೊ ಹಾಗೆ ಪ್ರಸಂಗ ಹುಡುಕ್ತೀವಿ. ಒಬ್ಬೊಬ್ಬರಿಗೆ ಒಂದೊಂದು ಇಷ್ಟ. ಇಂತವರ ಇಂತಹ ಪಾತ್ರ ನೊಡೋಕೆ ಇಷ್ಟ ಅಂತ ಕೆಲವರೂ ಊರಿನಲ್ಲಿ ಹೇಳಿದ್ದನ್ನೂ ಕೇಳಿಸಿಕೊಂಡಿರ್ತೀವಿ. ಅದೆಲ್ಲವು ಗಣನೆಗೆ ಬರುತ್ತೆ.

ಕಲರ್ ಹ್ಯಾಂಡ್ ಬಿಲ್, ಹೊಸ ರೀತಿಯಲ್ಲಿ ನಾವೇ ಮೊದಲು ಮಾಡಿದ್ದು. ಕೆಲವು ಹ್ಯಾಂಡ್‌ಬಿಲ್‌ನಲ್ಲಿ ಕಿರೀಟವೊ, ಮುಂಡಾಸವೊ ಅಂತ ಗೊತ್ತಾಗದೆ ಇರೊ ಹಾಗೆ ಹಿಂದೆ ಇರ್ತಿತ್ತು. ಪಾಂಪ್ಲೇಟ್ ಮಾಡೊಕೇ ನಮಗೆ ಒಂದು ತಿಂಗಳಾಗತ್ತೆ. ಆಟದ ಹಿಂದಿನ ದಿನ, ಅಥವಾ ಅದೇ ದಿನ, ಜೀಪಿಗೆ ಮೈಕ್ ಕಟ್ಟಿಕೊಂಡು ಸುತ್ತಮುತ್ತಲ ಹಳ್ಳಿಗಳಿಗೆ ಪ್ರಚಾರ ಮಾಡೋಕೆ ಹೋಗ್ತೀವಿ. ಒಟ್ಟಿನಲ್ಲಿ ಯಕ್ಷಗಾನದ ವಾತಾವರಣ ತರೋಕೆ ಏನು ಬೇಕೊ ಅದೆಲ್ಲ ಮಾಡ್ತೀವಿ. ಒಬ್ಬರ ಮನೆಯಿಂದ ಟಾರ್ಪಲ್, ಇನ್ನೊಬ್ಬರ ಮನೆಯಿಂದ ಮತ್ತಿನ್ನೇನೊ, ಹೀಗೆ ಬಾಡಿಗೆಗೆ ಸಿಗದದ್ದನ್ನು ಊರಿನಲ್ಲೇ ಸಂಗ್ರಹಿಸಿ ಉಪಯೋಗಿಸ್ತೀವಿ.

ಗುಂಪಿನಲ್ಲಿ ವೈಯಕ್ತಿಕವಾದ ಇಷ್ಟ ಅನಿಷ್ಟಗಳು

ನಮ್ಮ ವೈಯಕ್ತಿಕ ಇಷ್ಟಗಳನ್ನು ಇಲ್ಲಿ ತರೋದಿಲ್ಲ. ಕಾರ್ಯಕ್ರಮ ಚೆನ್ನಾಗಿ ಆಗಬೇಕು, ಹೆಚ್ಚು ಜನರಿಗೆ ಯಾವುದು ಇಷ್ಟ ಆಗಬಹುದು ಅಂತ ಯೋಚಿಸ್ತೇವೆ. ನಮಗೆ ವೈಯಕ್ತಿಕವಾಗಿ ಇಷ್ಟ ಇರೊ ಕಲಾವಿದರೊ, ಪ್ರಸಂಗವೊ ನೊಡೋಕೆ ನಾವು ಬೇರೆ ಕಡೆ ಹೋಗಬಹುದು. ಆದರೆ ಎಲ್ಲರೂ ಹಾಗೆ ಬೇರೆ ಕಡೆಗೆ ಹೋಗಿ ನೋಡೋರಲ್ಲ. ಇಲ್ಲಿ ಕಾರ್ಯಕ್ರಮ ಬಂದವರಿಗೆ ಇಷ್ಟ ಆಗಬೇಕು, ಪ್ರಸಂಗ ಚೆನ್ನಾಗಿ ಆಗಬೇಕು ಅಂತ ಯೋಚಿಸ್ತೇವೆ. ನಮಗೆ ಕೆಲವರಿಗೆ ಬೇರೆಯವರನ್ನು ನೋಡೊದೇ ಕಷ್ಟ. ಆದರೆ ಇಲ್ಲಿ ಅಂತಹ ಅಭಿಪ್ರಾಯವನ್ನು ತರೋದಿಲ್ಲ. ಆಟದ ದಿನ ನಮಗೆ ಸಂಘಟಕರಿಗೆ ಸರೀ ಅಟ ನೋಡೋಕೆ ಹೇಗೂ ಆಗೊಲ್ಲ, ವ್ಯವಸ್ಥೆಯ ಕೆಲಸಗಳಿರುತ್ತವೆ. ಜಾಸ್ತಿ ಸಮಯ ನೆನಪಿಡೊ ಹಾಗೆ ಆಟ ಮಾಡಬೇಕು ಅನ್ನೋದು ನಮಗೆಲ್ಲರಿಗೂ ಇರುತ್ತೆ. ಕೆಲವೊಮ್ಮೆ ತಮ್ಮದನ್ನು ನುಗ್ಗಿಸೋಕೆ ಪ್ರಯತ್ನಿಸೋರು ಇರ್ತಾರೆ (ನಗು). ಒಮ್ಮೊಮ್ಮೆ ಕಲಾವಿದರು, ಪ್ರೇಕ್ಷಕರಲ್ಲಿ ಯಾವ ಪ್ರಸಂಗ ಮಾಡಿಸಬಹುದು ಅಂತ ಕೇಳ್ತೇವೆ. ಕೆಲವರು ಫೋನ್ ಮಾಡಿ ಹೇಳ್ತಾರೆ. ಅದನ್ನೇ ಮಾಡ್ತೇವೆ ಅಂತಲ್ಲ, ಆದರೆ ನಿರ್ಧಾರ ಮಾಡುವಾಗ ಅದನ್ನೂ ಮನಸ್ಸಲ್ಲಿ ಇಟ್ಕೊತೇವೆ.

ಕಲಾವಿದರ ಸಹಕಾರ

ಎಲ್ಲಾ ಕಲಾವಿದರು ಒಳ್ಳೆಯ ಸಹಕಾರ ಕೊಡ್ತಾರೆ. ಎಲ್ಲಾ ಮೇಳಗಳಲ್ಲೂ, ವಲಯದಲ್ಲೂ, ನಮ್ಮಲ್ಲೂ ಕೆಲವೊಂದು ರಾಜಕೀಯ ಇರುತ್ತೆ, ಕೆಲವು ಭಾಗವತರಿಗೆ, ಕಲಾವಿದರಿಗೆ ಆಗಿ ಬರೊದಿಲ್ಲ, ಇಂತವರ ಎದುರಾಗುವುದಿಲ್ಲ ಅಂತೆಲ್ಲಾ ಇರ್ತದೆ. ಕಲಾವಿದರಿಗೆ ಜನರನ್ನು ಬಿಟ್ಟುಕೊಳ್ಳೊಕೆ ಆಗಲ್ಲ. ಅವರಿಗೆ ಜನರ ಮುಂದೆ ಕಾಣಿಸಿಕೊಳ್ಳೋದು ಮುಖ್ಯ. ಅವರೂ ಎಲ್ಲಾ ಕಡೆ ದುಡ್ಡೇ ಮುಖ್ಯ ಅಂತ ನೋಡಲ್ಲ, ಹಾಗಂತ ದುಡ್ಡು ಕಡಿಮೆ ಕೊಟ್ರೆ ತಗೊತಾರೆ ಅಂತ ಅಲ್ಲ.(ನಗು).

ನಾವು ಯಾವುದೊ ಒಬ್ಬ ಕಲಾವಿದನನ್ನು ಹೈಲೈಟ್ ಮಾಡೊಕೆ ಮಾಡೊದಲ್ಲ. ಹೋದವರ್ಷ ಬೆಳಗಿನ ಜಾವದ ಪ್ರಸಂಗದಲ್ಲಿ ಪಾತ್ರ ಮಾಡೊಕೆ ಹೇಳಿದ್ರೆ ಈ ವರ್ಷ ಅವರಿಗೆ ಮೊದಲ ಪ್ರಸಂಗದಲ್ಲಿ ಮಾಡೊಕೆ ಹೇಳೊದು. ಎರಡು ವರ್ಷದಿಂದ ದೊಡ್ಡ ಪಾತ್ರ ಕೊಟ್ಟೊರಿಗೆ, ಕೆಲವೊಮ್ಮೆ ಸಣ್ಣ ಪಾತ್ರ ಕೊಡೋದಾಗತ್ತೆ. ಪ್ರಸಂಗ, ಪಾತ್ರಗಳನ್ನು ಹೊಂದಿಸುವಾಗ ಹಾಗೆ ಆಗತ್ತೆ. ಅದನ್ನೂ ಚೆನ್ನಾಗಿಯೇ ಮಾಡ್ತಾರೆ. ತೆಂಕಿನ ಕಲಾವಿದರನ್ನೂ ಕರಿತೀವಿ. ಕೆಲವೊಮ್ಮೆ ಒಳ್ಳೇ ಕಲಾವಿದನಿಗೆ ಎರಡೇ ಪದ್ಯ ಬರೋದು ಇದೆ. ಆಗ ಕೆಲವು ಪ್ರೇಕ್ಷಕರಿಗೆ ಇಂತವರಿಗೆ ಪ್ರಾಮುಖ್ಯತೆ ಕೊಟ್ಟಿದ್ದೇವೆ ಅಂತ ಅನ್ನಿಸಬಹುದು. ಅಷ್ಟೆಲ್ಲಾ ಕಲಾವಿದರನ್ನು ಕರೆಸಿ ನಾವೆ ಸಂಘಟನೆ ಮಾಡುವಾಗ, ಪ್ರಸಂಗದ ಮೇಲೆ ಕೆಲವೊಂದು ಅನಿವಾರ್ಯವಾಗಿಬಿಡತ್ತೆ. ಆದರೆ ಬೇಕಂತಲೇ ಮಾಡೊದಲ್ಲ.

ಇಲ್ಲಿ ಕಾರ್ಯಕ್ರಮ ಬಂದವರಿಗೆ ಇಷ್ಟ ಆಗಬೇಕು, ಪ್ರಸಂಗ ಚೆನ್ನಾಗಿ ಆಗಬೇಕು ಅಂತ ಯೋಚಿಸ್ತೇವೆ. ನಮಗೆ ಕೆಲವರಿಗೆ ಬೇರೆಯವರನ್ನು ನೋಡೊದೇ ಕಷ್ಟ. ಆದರೆ ಇಲ್ಲಿ ಅಂತಹ ಅಭಿಪ್ರಾಯವನ್ನು ತರೋದಿಲ್ಲ. ಆಟದ ದಿನ ನಮಗೆ ಸಂಘಟಕರಿಗೆ ಸರೀ ಅಟ ನೋಡೋಕೆ ಹೇಗೂ ಆಗೊಲ್ಲ, ವ್ಯವಸ್ಥೆಯ ಕೆಲಸಗಳಿರುತ್ತವೆ. ಜಾಸ್ತಿ ಸಮಯ ನೆನಪಿಡೊ ಹಾಗೆ ಆಟ ಮಾಡಬೇಕು ಅನ್ನೋದು ನಮಗೆಲ್ಲರಿಗೂ ಇರುತ್ತೆ.

ಆಸಕ್ತಿಯ ಆರಂಭ

ಬೇರೆ ಬೇರೆ ಸಣ್ಣ ಆಟ, ಹವ್ಯಾಸಿಗಳ ಆಟ ಮಾಡಿಸ್ತಾ ಬಂದಿದ್ವಿ. ಹಿಂದಿನಿಂದಲೂ ಅದು ಬಂದಿದೆ. ನಾವು ಊರವರೇ ವರ್ಷಕ್ಕೆ ಒಂದು ಯಕ್ಷಗಾನ ಮಾಡ್ತೀವಿ, ಒಂದು ತಾಳಮದ್ದಲೆ ಮಾಡ್ತೀವಿ, ಪ್ರಸಂಗ ಕಲಿತು ಮಾಡೊದು. ನಾವೆಲ್ಲಾ ಕಲಾವಿದರೆ. ನಮ್ಮಲ್ಲೂ ಒಳ್ಳೊಳ್ಳೆ ಅರ್ಥದಾರಿಗಳಿದ್ದಾರೆ(ನಗು). ಪ್ರತಿ ವರ್ಷ ನವರಾತ್ರಿ ಹುಣ್ಣಿಮೆಗೆ ಮಾಡ್ತೀವಿ. ನಿಮಗೆ ಪಾತ್ರ ಮಾಡಬೇಕು, ಅರ್ಥ ಹೇಳಬೇಕು ಅಂತಿದ್ರೆ ನೀವೂ ಬರಬಹುದು. ಇಲ್ಲಿ ನಾವು ನಾವೇ ಇರ್ತೆವೆ. ಅದೊಂತರ ಚೆನ್ನಾಗಿರತ್ತೆ. ಏನೇನೊ ತಮಾಷೆಗಳು ನಡೆಯತ್ತೆ. ನೀವು ಎಲ್ಲಿದ್ದರೂ ಯಾವ ವರ್ಷವಾದರು ಆ ದಿನ ಬಂದ್ರೆ ನಿಮಗೂ ಅವಕಾಶ ಇದೆ ನೋಡಿ.

ಆದರೆ ನಿಜವಾಗಿ ಹೇಳೊದಂದ್ರೆ ನಮಗೆ ಯಕ್ಷಗಾನದ ಮೇಲಿರೊ ಪ್ರೀತಿನೆ ಯಕ್ಷಗಾನ ಮಾಡಿಸೋಕೆ ಇರೊ ಕಾರಣ. ಇಲ್ಲಿ ಪ್ರತಿ ದಿನ ಒಂದಿಪ್ಪತ್ತು ಜನ ಇಲ್ಲಿ ಸೇರ್ತೇವಲ್ಲ, 365 ದಿನನೂ ಯಕ್ಷಗಾನದ ಏನಾದ್ರು ಒಂದು ಸುದ್ದಿ ಮಾತಾಡೇ ಆಡ್ತಿವಿ. ಮಳೆಗಾಲದಲ್ಲಿ ತಾಳಮದ್ದಲೆ ನೋಡ್ತಿವಿ. ಇಲ್ಲಿ ಈ ತರ ಅರ್ಥ ಹೇಳಿದರು. ಅಲ್ಲೊಂದು ಆಟ ನೋಡಿಕೊಂಡು ಬಂದೆ, ಹಿಂಗಾಯಿತು, ಹಂಗಾಯಿತು ಅಂತ ಏನೊ ಒಂದು ಮಾತು ಇರತ್ತೆ. ಕಲಾವಿದರ ಬಗ್ಗೆ, ಪ್ರಸಂಗದ ಬಗ್ಗೆ ಒಂದು ವಿಮರ್ಶೆಯಾದರೂ ಇರತ್ತೆ. ಒಟ್ಟಿನಲ್ಲಿ ಯಕ್ಷಗಾನ ವಿಷಯ ಬರದ ದಿನವೇ ಇಲ್ಲ. ಇದರಿಂದಲೇ ಹೊಸ ಹುಡುಗರಿಗೂ ತನ್ನಿಂದ ತಾನೆ ಆಸಕ್ತಿ ಬರತ್ತೆ. ಮತ್ತೆ ಇಂತಹ ಹಳ್ಳಿಲಿ ಭರತನಾಟ್ಯ, ಶಾಸ್ತ್ರೀಯ ಸಂಗೀತಕ್ಕೆಲ್ಲ ಜನ ಬರೊಲ್ಲ. ಯಕ್ಷಗಾನ ಅಂತ ಇಡೀ ರಾತ್ರಿ ಇದ್ರೆ ಬರ್ತಾರೆ. ಜಗ ಜಗ ಲೈಟ್ ಉರಿಬೇಕು, ಚಂಡೆ ಶಬ್ದ ಕೇಳಬೇಕು. ಈಗ ಈ ಸಂಘಟನೆ ಇಟ್ಟುಕೊಳ್ಳೊದಕ್ಕಾದರೂ ಮುಂದೆ ಮಾಡುತ್ತಲೇ ಇರಬೇಕು ಅಂತನೂ ಅನ್ನಿಸ್ತದೆ.

ಖರ್ಚು, ವೆಚ್ಚ

ನಾವು ದುಡ್ಡಿಗಾಗಿ ಮಾಡೊದಲ್ಲ. ಅಲ್ಲಿಗಲ್ಲಿಗೆ ಆಗತ್ತೆ. ಟಿಕೇಟ್ ಮುಂಚೆನೆ ಹಂಚೋದು, ಗೌರವ ಪ್ರವೇಶ ಅಂತ ಜಾಸ್ತಿ ಮೊದಲೆ ಇಸ್ಕೊಳೋದು ಅದೆಲ್ಲಾ ಮಾಡಲ್ಲ. ಎಲ್ಲರೂ ಆ ದಿನ ಟಿಕೇಟ್ ಕೌಂಟರ್‌ನಲ್ಲೆ ಟಿಕೇಟ್ ತಗೊಳೋದು. ಕೆಲವರು ಮುಂಚೆನೇ ನಮಗೆ ಫೋನ್ ಮಾಡಿ ಇಷ್ಟು ಟಿಕೇಟ್ ಇಟ್ಟಿರಿ ಅಂತ ಹೇಳ್ತಾರೆ. ಆದರೆ ಅವತ್ತೆ ಅವರಿಗೆ ಟಿಕೇಟ್ ಸಿಗೊದು. ಲಾಸ್ ಅಂತ ಹೆಚ್ಚಾಗಿ ಆಗೋದು ವಾತಾವರಣದಿಂದ. ಮಳೆ ಬಂದರೆ ಅವತ್ತು ಜನ ಕಡಿಮೆ ಆಗ್ತಾರೆ. ಅವತ್ತೇ ಇನ್ನೇನೊ ಕಾರ್ಯಕ್ರಮ ಹತ್ತಿರದಲ್ಲಿದ್ರೆ ಈ ತರ ಆಗತ್ತೆ. ಅಲ್ಪ ಸ್ವಲ್ಪ ಲಾಸ್ ಆಗತ್ತೆ. ಆದರೆ ಜನಾನೂ ನಮಗೆ ಒಳ್ಳೆಯ ಸಪೋರ್ಟ್ ಮಾಡಿದಾರೆ. ನಮ್ಮ ಕ್ಷೇತ್ರದಲ್ಲಿ ಒಂದು ಒಳ್ಳೆಯ ಯಕ್ಷಗಾನ ಆಗಬೇಕು ಅನ್ನೋದು ನಮಗೆ ಮುಖ್ಯ. ಒಳ್ಳೆಯ ಪ್ರಸಂಗ, ಜನಾಕರ್ಷಣೆ ಇದ್ದಾಗ ಸ್ವಲ್ಪ ಲಾಭ ಬಂದಿದ್ದೂ ಇದೆ. ದುಡ್ಡಿಗಾಗಿ ನಾವು ಗಿಮಿಕ್‌ಗಳನ್ನು ಮಾಡೊಲ್ಲ. ಹೊಸ ಪ್ರಸಂಗ ಬಿಡಿ, ಪೌರಾಣಿಕದಲ್ಲೇ, ಹವ್ಯಕ ಭಾಷೆದು ಅಂತೆಲ್ಲಾ ನಾವು ಮಾಡಲ್ಲ.

ಹವ್ಯಾಸಿ ಕಲಾವಿದರು

ಹವ್ಯಾಸಿ ಕಲಾವಿದರನ್ನು ಕೆಲವೊಮ್ಮೆ ಕರೆದಾಗ ಅದು ಸರಿ ಹೋಗಲಿಲ್ಲ. ಸಣ್ಣ ಪಾತ್ರ ಕೊಟ್ಟರೂ ಆ ದೃಶ್ಯ ಡಲ್ ಆಗಿಬಿಡತ್ತೆ. ವೃತ್ತಿಪರರಿಗೆ ಸಮನಾಗಿ ಮಾಡೊಕೆ ಆಗೊಲ್ಲ. ಗುಣಮಟ್ಟ ಇಳಿದು ಹೋಗತ್ತೆ. ಇಲ್ಲಿ ನಾವು ಬೇರೆ ಬೇರೆ ಮೇಳದವರನ್ನು ಹಾಕಿದರೂ ಅವರಿಗೆ ಅದಕ್ಕೆ ತಕ್ಕನಾಗಿ ಹೊಂದಿಸಿಕೊಂಡು ಹೋಗೊಕೆ ಆಗತ್ತೆ. ಹವ್ಯಾಸಿಗಳದ್ದು ಬೇರೆ ತರದಲ್ಲಿ ಚೆನ್ನಾಗಿರತ್ತೆ. ಇವರ ಜೊತೆಗಾಗಲ್ಲ. ಇಂತಹ ಆಟಕ್ಕೆ ಬೇಡಿಕೆ ದೃಷ್ಟಿಯಿಂದ ವೃತ್ತಿ ಕಲಾವಿದರನ್ನೇ ಕರೆಯೊದು. ಎಷ್ಟೆಂದರೂ ದಿನ ಮಾಡೊರಿಗೂ, ಅಪರೂಪಕ್ಕೆ ಮಾಡೊರಿಗೂ ವ್ಯತ್ಯಾಸ ಇದ್ದೇ ಇರತ್ತೆ.

ಆಗಿರುವ ಪ್ರದರ್ಶನಗಳಿಂದ ಕಲಿತ ಸಂಘಟನೆಯ ಪಾಠಗಳು

ಜೋಡಿ ಭಾಗವತಿಕೆ ಇಲ್ಲಿ ಭಾರೀ ಪರಿಣಾಮ ಕೊಟ್ಟಿದೆ. ಎಲ್ಲರು ಮಾಡ್ತಾರೆ, ಆದರೆ ನಾವು ಎಲ್ಲಾ ಪ್ರಸಂಗದಲ್ಲೂ ದ್ವಂದ್ವ ಇಡ್ತೇವೆ. ಅದು ಇಲ್ಲಿವರೆಗೂ ಚೆನ್ನಾಗಾಗಿದೆ. ಕೆಲವೊಂದು ಪ್ರಸಂಗ, ಈಗ ಭೀಷ್ಮ ವಿಜಯದಂತಹ ಪ್ರಸಂಗಗಳು ಜಾಸ್ತಿ ಸಮಯ ತಗೊಂಡು, ಉಳಿದೆರಡು ಪ್ರಸಂಗಕ್ಕೆ ಸಮಯ ಕಡಿಮೆ ಆಗತ್ತೆ ಅಂತ ಗೊತ್ತಾಗಿದೆ(ನಗು). ಆದರೂ ಅಂತಹ ಪ್ರಸಂಗಗಳನ್ನು ತಗೊಂಡರೆ ಸುಮಾರು ಪಾತ್ರಗಳು ಬರೊದ್ರಿಂದ ಎಲ್ಲರಿಗೂ ಅವಕಾಶ ಸಿಗತ್ತೆ ಅಂತ ಅನಿವಾರ್ಯವಾಗಿ ಹಾಕೊದಾಗತ್ತೆ. ಒಂದೇ ಪೌರಾಣಿಕ ಪ್ರಸಂಗ, ಒಂದು ಪದ್ಯನೂ ಬಿಡದೆ ಇಡೀ ರಾತ್ರಿ ಮಾಡಿಸಿದರೆ ಜನನ ಹಿಡಿದಿಟ್ಟುಕೊಳ್ಳಲಿಕ್ಕಾಗೊದಿಲ್ಲ. ನಾವು ಯಾವ ಪ್ರಸಂಗಕ್ಕೆ ಜನ ಎದ್ದು ಹೋಗ್ತಾರೆ, 12 ಘಂಟೆಯ ಮೇಲೆ ಜನ ಜಾಸ್ತಿ ಇರ್ತಾರೆ ಇದೆಲ್ಲಾ ಗಮನಿಸ್ತೀವಿ. ಹಿಂದೆಲ್ಲಾ ಬಾಲಗೋಪಾಲ ವೇಷ, ಒಡ್ಡೋಲಗ ಅದು ಇದು ಅಂತ ಪ್ರಸಂಗ ಶುರುವಾಗುವಾಗಲೇ ಹೊತ್ತಾಗ್ತಾ ಇತ್ತು. ಈಗ ಅದಕ್ಕೆಲ್ಲಾ ಜನರನ್ನ ನಿಲ್ಲಿಸೊದು ಕಷ್ಟ. ಜನರಿಗೆ ತಾಳ್ಮೆ ಇರೊಲ್ಲ. ಪ್ರಸಂಗ ಪಟ ಪಟ ಶುರುವಾಗಬೇಕು. ಬೆಳಗಿನ ಜಾವದಲ್ಲಿ ಚುರುಕಾಗಿರುವ ಪ್ರಸಂಗ ಹಾಕಿದರೆ, ಜನಕ್ಕೆ ಖುಷಿಯಾಗತ್ತೆ.

ಗುಡು ಗುಡಿ ಆಟ
(ಈಗ ಅದನ್ನು ಆಡುವ ಹಾಗಿಲ್ಲ, ಹಿಂದೆ ಇತ್ತು)

ಹಿಂದೆಲ್ಲಾ, ಈ ಮೊಬೈಲ್ ಆಟಗಳು ಇರಲಿಲ್ಲ. ಆಟ ಅಂದ್ರೆ ಗುಡುಗುಡಿನೂ ಇರ್ತಾ ಇತ್ತು. ಆಟಕ್ಕೆ ಬಂದವರು ಇದನ್ನು ಆಡುತ್ತಿದ್ದರು. ಮೂರು ಗುಂಡಿನ ಮೇಲೆ ನಾಲ್ಕು ಇಸ್ಪೀಟಿನ ಗುರುತುಗಳು, ಮತ್ತು ಸೂರ್ಯ ಚಂದ್ರ ಒಟ್ಟು ಆರು ಮುಖ ಇರ್ತದೆ. ಅದನ್ನ ಒಂದು ಡಬ್ಬದಲ್ಲಿ ಹಾಕಿ ಕಟ ಕಟ ಮಾಡಿ ಪಟದ ಮೇಲೆ ಹಾಕ್ತಾರೆ. ಅಲ್ಲೂ ಆರು ಮುಖಗಳಿರತ್ತೆ. ಕಳಾವಾರಕ್ಕೆ ದುಡ್ಡು ಹಾಕಿದ್ರೆ ಅದರ ಮೇಲೆ ಗುಂಡು ಬಿದ್ರೆ ಎರಡು ಪಟ್ಟು ದುಡ್ಡು. ಮೂರು ಗುಂಡುಗಳೂ ಅದರ ಮೇಲೆಯೇ ಬಿದ್ರೆ ಮೂರು ಪಟ್ಟು ದುಡ್ಡು. ನಾವೆಲ್ಲಾ ಸಣ್ಣಕಿದ್ದಾಗ ಗಧಾಯುದ್ಧದ ಸಂಜಯನ ಭಾಗವೊ, ಆ ತರದ್ದು ಇನ್ಯಾವುದೊ ಬಂದಾಗ, ಬೇಜಾರಾಗಿ ಚಾ ಕುಡಿಯೊಕೆ ಹೋದಾಗ ಒಂದು ಹತ್ತು ನಿಮಿಷ ಆಡಿ ಬರೊದು. ಒಮ್ಮೆ ನಮ್ಮತ್ರ ಇರೊ ಹತ್ತೊ, ಐದೊ ರುಪಾಯಿ ಕಳಕೊಂಡು, ಬೆಳಗಿನ ತನಕ ಒಂದು ಕವಳ ಹಾಕೊಕು ದುಡ್ಡಿಲ್ಲದೆ ಆಟ ನೋಡಿಕೊಂಡು ಬಂದ ಸಂದರ್ಭಗಳಿವೆ. ಹತ್ತು ನಿಮಿಷದಲ್ಲಿ ಇರೊ ನೂರು ರುಪಾಯಿ ಮುನ್ನೂರಾಗಿ, ಇನ್ನೈದು ನಿಮಿಷದಲ್ಲಿ ಮುನ್ನೂರೂ ಖಾಲಿಯಾಗುವಂತಹ ಆಟ. ಕೆಲವರು ಅದರಲ್ಲೇ ವೃತ್ತಿಪರರು(ನಗು). ಈಗೆಲ್ಲಾ ಎಲ್ಲರೂ ಮೊಬೈಲ್ ಹಿಡ್ಕೊಂಡಿರ್ತಾರೆ.