ತನ್ನ ತಾಯಿಯ ಮೇಲೆ ಕತೆ ಬರೆದ ನಾಗಪ್ಪ, ಈಗ ತನ್ನ ಮೇಲೂ ಕಾದಂಬರಿ ಬರೆಯುತ್ತಿರುವದು ತಿಳಿದು, ಇವನ ಸಂಪರ್ಕವುಳ್ಳವರೆಲ್ಲರ ಮುಂದೆ ಈತನ ವಂಶ, ತಂದೆ, ತಂಗಿಯರ ತರಲೆಗಳನ್ನೆಲ್ಲ ಹೇಳಿ ಅಪಪ್ರಚಾರ ಮಾಡುತ್ತಾನೆ. ತನ್ನ ತಾಯಿಯನ್ನು ಹಳ್ಳಿಯಿಂದ ಕರೆಸಿ ನಾಗಪ್ಪನ ಜನ್ಮ ಜಾಲಾಡುತ್ತಾನೆ. ಶ್ರೀನಿವಾಸನ ಮುದಿ ತಾಯಿಯ ಮಾತುಗಳಿಗೆ ನಾಗಪ್ಪ, ಮನದಾಳದಲ್ಲಿ, ಹೀಗೆ ಪ್ರತಿಕ್ರಿಯಿಸುತ್ತಾನೆ: “ಸಾಯಲು ಹೊರಟವಳಲ್ಲಿಯೂ ಕೊಲ್ಲುವ ಛಲದ ಪ್ರವೃತ್ತಿ ಇನ್ನೂ ಜೀವಂತವಾಗಿರಬಹುದೆಂಬ ಗುಮಾನಿಯಿಂದ ದಿಗ್ಭ್ರಮೆಗೊಂಡೆ”. ಆತನಲ್ಲಿ ಮೊದಲ ಬಾರಿಗೆ ಹತಾಶೆ ಕಾಣುತ್ತದೆ.
ಯಶವಂತ ಚಿತ್ತಾಲರ “ಶಿಕಾರಿ” ಕಾದಂಬರಿಯ ಕುರಿತು ಡಿ.ಎಂ. ನದಾಫ್ ಬರೆದ ಲೇಖನ

 

“ಕತೆಯಾದಳು ಹುಡುಗಿ” ಕಥಾಸಂಕಲನಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಯಶವಂತ ಚಿತ್ತಾಲರ ಕ್ಲಾಸಿಕ್ ಕಾದಂಬರಿ ‘ಶಿಕಾರಿ’. “ಬೇಟೆ ಈ ಕಾದಂಬರಿಯ ಕೇಂದ್ರ ಪ್ರತಿಮೆ” ಎನ್ನುತ್ತಾರೆ ವಿಮರ್ಶಕ ಡಾ.ಜಿ.ಎಸ್. ಆಮೂರ್.

ಇಂದಿನ ಕೈಗಾರಿಕೀಕರಣಗೊಂಡ ಪಟ್ಟಣ ನಾಗರಿಕತೆಯಲ್ಲಿ ನಡೆಯುವ ಮನುಷ್ಯನ ಬೇಟೆ, ಅದರಲ್ಲೂ ಹೆಚ್ಚುತ್ತಿರುವ ಔದ್ಯೋಗಿಕ ಸ್ಪರ್ಧೆಗಳ ನಡುವೆ ಸಿಕ್ಕ ಅವಕಾಶಗಳನ್ನು ಉಳಿಸಿಕೊಂಡು ತನ್ನೊಂದಿಗೆ ವ್ಯಕ್ತಿತ್ವ ರೂಪಿಸಿಕೊಳ್ಳುವದೂ ಒಂದು ಸವಾಲು. ಸ್ವಾರ್ಥಿಗಳೆಲ್ಲ ಒಂದಾಗಿ ಪ್ರತಿಭಾವಂತ ನೊಬ್ಬನನ್ನು ಹೊಂಚುಹಾಕಿ, ಸುತ್ತುವರಿದು ಅವನ ಮೇಲೆ ನಡೆಸುವ ಮಾನಸಿಕ ಆಕ್ರಮಣದ ಕತೆ “ಶಿಕಾರಿ”ಯದು.

ಒಂದೇ ಏಣಿಯೇರಲು ಮುಗಿಬಿದ್ದವರು ತಮ್ಮಲ್ಲಿರುವನೊಬ್ಬನನ್ನು ಮುಗಿಸಲು ಸಜ್ಜಾದ ಬೇಟೆ. ಅಸ್ತಿತ್ವಕ್ಕಾಗಿ, ಅನ್ವೇಷಣೆಗಾಗಿ, ಯಾವುದೋ ಕೆಡುಕೊಂದನ್ನು ತೊಡೆದು ಹಾಕುವುದಕ್ಕಾಗಿ ನಡೆಯುವ ಬೇಟೆಯಲ್ಲ ಇದು. ಬದಲಿಗೆ ಸ್ವಾರ್ಥ, ದ್ವೇಷಗಳನ್ನು ನಯ-ನಾಜೂಕಾಗಿ, ಎದುರಿಗೆ ಕಾಣದೇ ಬೆನ್ನಿಗೆ ಚೂರಿಯಿರಿಯುವ ಬೇಟೆ. ಈ ವಸ್ತುವಿಗೆ ಸಮರ್ಥನೆ ಒದಗಿಸುವ ಪಾತ್ರ ಸನ್ನಿವೇಶಗಳನ್ನು ಸೃಷ್ಟಿಸಿ ಸಂಕೀರ್ಣವಾದ ವಸ್ತುವನ್ನು ಸರಳವಾಗಿ ಓದುಗರಿಗೆ ತಲುಪಿಸುವ ಯಶವಂತ ಚಿತ್ತಾಲರ ನಿರೂಪಣೆಯ ಶೈಲಿ ಅದ್ಭುತವಾದದ್ದು. ಕನ್ನಡದ ಫಿಕ್ಷನ್ ಗಳಲ್ಲಿಯೇ ಮನೋವೈಜ್ಞಾನಿಕ ನೆಲೆಗಟ್ಟಿನ ಮೂಲಕ ಪಾತ್ರ ಪೋಷಣೆ ಮಾಡಲಾದ ವಿಶಿಷ್ಟ ಸೃಜನಶೀಲ ಕೃತಿ ‘ಶಿಕಾರಿ’. ಜಾಗತೀಕರಣದ ಬದುಕಿಗೆ ಮಾರ್ಗದರ್ಶಿಯಾಗಬಲ್ಲ ಸಾರ್ವಕಾಲಿಕ ಸಾಹಿತ್ಯ ಕೃತಿ ಇದು ಎನ್ನಬಹುದು.

ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ನಾಗಪ್ಪ, ಈ ಕಾದಂಬರಿಯ ನಾಯಕ. ಜೀವನದಿಂದ ಏನನ್ನೂ ಬಯಸದ, ಕೇವಲ ಮಹತ್ವಾಕಾಂಕ್ಷೆಗೆ ಮಾತ್ರ ಬದುಕದ ಅವನದು ಒಂದು ರೀತಿಯ ಸಂತ ಬದುಕು. ತನ್ನ ನೌಕರಿ, ಲ್ಯಾಬರೋಟರಿ, ಇವುಗಳನ್ನು ಬಿಟ್ಟರೆ, ಅವನು ತನ್ನನ್ನು ತಾನು ಮೈಮರೆತು ತೊಡಗಿಕೊಳ್ಳುವದು ಸಾಹಿತ್ಯದಲ್ಲಿ. ಪ್ರತಿಷ್ಠಿತ ಬಹು ರಾಷ್ಟ್ರೀಯ ಕಂಪನಿಯೊಂದರಲ್ಲಿ ಆರ್ ಆ್ಯಂಡ್ ಡಿ ಹುದ್ದೆಯಲ್ಲಿರುವ ನಾಗಪ್ಪನಿಗೆ, ಕಂಪನಿಯ ದುಷ್ಟಕೂಟ ರಾಜೀನಾಮೆಯ ಒತ್ತಡ ತರುತ್ತದೆ. ಆ ಜನರ ದೃಷ್ಟಿಯಲ್ಲಿ, ಅವನೊಬ್ಬ ಸೆಂಟಿಮೆಂಟಲ್ ಮನಸ್ಸಿನ ಮುಗ್ಧ. ಅವನ ಮೌಲ್ಯಾಧಾರಿತ ಬದುಕು ಮತ್ತು ಸಾಹಿತ್ಯ ಕೃತಿಗಳು (ಅವರ ಪ್ರಕಾರ) ವಾಸ್ತವಿಕ ಜೀವನಕ್ಕೆ ಏನನ್ನೂ ಕೊಡಲಾರವು. ಆದರೆ ನಾಗಪ್ಪನ ದೃಷ್ಟಿಯಲ್ಲಿ ಮೌಲ್ಯಗಳೇ ವಾಸ್ತವವಾದವುಗಳು. ಅವುಗಳ ಪಾಲನೆಗಾಗಿಯೇ ತಾನು ಹೋರಾಡುವದು. ಇದು ಅವನಿಗೆ ತಾನು ಒಳ್ಳೆಯದು ಮಾಡುತ್ತಿರುವೆನೆಂಬ ಹೆಮ್ಮೆಯೇನೂ ಉಂಟು ಮಾಡುವುದಿಲ್ಲ.

ನಾಗಪ್ಪನಲ್ಲಿ ಮಾನವ ಸಹಜ ಕ್ರೌರ್ಯ ಜಾಗೃತವಾಗುವದು, ಅವನಿಗೆ ತನ್ನ ಮಾನ ಮತ್ತು ಪ್ರಾಣಗಳ ರಕ್ಷಣೆಯ ತುರ್ತು ಸಂದರ್ಭ ಬಂದಾಗ! ಚತುರಮತಿಗಳಾದ ಬೇಟೆಗಾರರ ಕೈಯಲ್ಲಿ ನಾಗಪ್ಪ ದಿಢೀರನೆ ಶಿರವನ್ನೇನೂ ಒಪ್ಪಿಸುವದಿಲ್ಲ. ತನ್ನಿಂದಾದ ಎಲ್ಲ ಮಟ್ಟುಗಳನ್ನು ಪ್ರಯೋಗಿಸಿ ಎದುರಿಸುತ್ತಾನೆ.

ಅವನ ಒಳ ಉರಿತಗಳು ಒಮ್ಮೊಮ್ಮೆ ಜ್ವಾಲಾಮುಖಿಯಾಗುವದು, ಅವನ ಬಯ್ಗುಳಗಳಲ್ಲಿ! ಕೋಳಿ ಗಿರಿಯಣ್ಣನಿಂದ ಕಲಿತ ಬೋಳೀಮಗನೇ, ಸೂಳೆ ಮಗನೇ ಅವನಿಗೆ ಹೆಚ್ಚು ಪ್ರಿಯವಾದವುಗಳು. ಇವುಗಳಿಗೆ ಅವನು ಖಾಸಗಿ ಭಾಷೆಯನ್ನೂ ನಿರ್ಮಿಸಿಕೊಂಡಿದ್ದಾನೆ. ಉದಾಹರಣೆಗೆ, ಒಂದೂಮಗನೇ ಅಂದರೆ ಬೋಳೀಮಗನೇ, ಎರಡೂ ಮಗನೇ ಎಂದರೆ ಸೂಳೇಮಗನೇ ಇತ್ಯಾದಿಯಾಗಿ ಹತ್ತೂ ಮಗನೇ ತನಕ. ಇವುಗಳಿಗೆ ಅವನು “ಸಾಂಖ್ಯದ ಸುಭಾಷಿತಗಳು” ಎಂದು ಹೆಸರು ಕೊಟ್ಟಿದ್ದಾನೆ.

ನಾಗಪ್ಪ ಇಂಥ ಸ್ವಭಾವದವನಾದರೂ, ತನ್ನಲ್ಲಿರುವ ಪ್ರತಿಭೆಯಿಂದ ಸಮಾಜದಲ್ಲಿರುವ ಪಟ್ಟಭದ್ರ ಕುಳಗಳನ್ನು ತನ್ನ ಲೇಖನಿಯ ಮೂಲಕ ಮಟ್ಟ ಹಾಕುತ್ತಾನೆ. ಇದರಿಂದಲೇ ಅವನು ಹಲವಾರು ಮಿತ್ರರನ್ನು ಶತೃಗಳನ್ನಾಗಿಸಿಕೊಳ್ಳಬೇಕಾಗುತ್ತದೆ. ಅಂಥವರಲ್ಲಿ ಒಬ್ಬ ಶ್ರೀನಿವಾಸ. ತನ್ನ ತಾಯಿಯ ಮೇಲೆ ಕತೆ ಬರೆದ ನಾಗಪ್ಪ, ಈಗ ತನ್ನ ಮೇಲೂ ಕಾದಂಬರಿ ಬರೆಯುತ್ತಿರುವದು ತಿಳಿದು, ಇವನ ಸಂಪರ್ಕವುಳ್ಳವರೆಲ್ಲರ ಮುಂದೆ ಈತನ ವಂಶ, ತಂದೆ, ತಂಗಿಯರ ತರಲೆಗಳನ್ನೆಲ್ಲ ಹೇಳಿ ಅಪಪ್ರಚಾರ ಮಾಡುತ್ತಾನೆ. ತನ್ನ ತಾಯಿಯನ್ನು ಹಳ್ಳಿಯಿಂದ ಕರೆಸಿ ನಾಗಪ್ಪನ ಜನ್ಮ ಜಾಲಾಡುತ್ತಾನೆ. ಶ್ರೀನಿವಾಸನ ಮುದಿ ತಾಯಿಯ ಮಾತುಗಳಿಗೆ ನಾಗಪ್ಪ, ಮನದಾಳದಲ್ಲಿ, ಹೀಗೆ ಪ್ರತಿಕ್ರಿಯಿಸುತ್ತಾನೆ: “ಸಾಯಲು ಹೊರಟವಳಲ್ಲಿಯೂ ಕೊಲ್ಲುವ ಛಲದ ಪ್ರವೃತ್ತಿ ಇನ್ನೂ ಜೀವಂತವಾಗಿರಬಹುದೆಂಬ ಗುಮಾನಿಯಿಂದ ದಿಗ್ಭ್ರಮೆಗೊಂಡೆ”. ಆತನಲ್ಲಿ ಮೊದಲ ಬಾರಿಗೆ ಹತಾಶೆ ಕಾಣುತ್ತದೆ.

ಖೇತವಾಡಿ, ಮುಂಬಯಿಯ ಚಾಳ್ ಗಳು, ಅಲ್ಲಿಯ ಸ್ಕಾಯ್ ಸ್ಕ್ರೇಪರ್ ಕಟ್ಟಡಗಳು, ರಾತ್ರಿಯಲ್ಲಿಯೂ ಹಗಲನ್ನು ನಾಚಿಸುವ ಬೀದಿ ಬದಿಯ ನೀಯಾನ್ ದೀಪಗಳು, ಮೆಟ್ರೋಪಾಲಿಟನ್ ಸಿಟಿಯೊಂದರ ಸನ್ನಿವೇಶಗಳು ಕಥಾನಾಯಕನ ಮಾನಸಿಕ ತುಮುಲವನ್ನು ಕಣ್ಣಿಗೆ ಕಟ್ಟುವಂತೆ ವಿವರಪೂರ್ಣವಾಗಿವೆ.

ಕಂಪನಿಯ ಫ್ಯಾಕ್ಟರಿಯಿಂದ ಹತ್ತು ಟನ್ನಿನಷ್ಟು ಕಚ್ಚಾಮಾಲನ್ನು ಕಳ್ಳರೀತಿಯಿಂದ ಹೊರ ಸಾಗಿಸಿದ್ದ ಆಪಾದನೆಯ ವಿಚಾರಣೆ ಎದುರಿಸುತ್ತಿದ್ದ ನಾಗಪ್ಪ, ತನ್ನೊಡನಿದ್ದೂ ತನ್ನ ಶತೃಗಳಾದ ಖಂಬಾಟಾ, ಬಂದೂಕವಾಲಾ, ಶ್ರೀನಿವಾಸರ ಸಂಚಿನ ಸುಳಿಗೆ ಸಿಕ್ಕು ಕೊನೆಗೂ ತಾನು ಮಾಡದ ತಪ್ಪಿಗೆ ರಾಜೀನಾಮೆ ಕೊಟ್ಟು ಹೊರ ಬರುತ್ತಾನೆ.


ಏಕಾಂತದಲ್ಲಿ ಮಾನವ ಸಹಜವಾದ ದೌರ್ಬಲ್ಯಗಳನ್ನು ಆತ್ಮವಿಮರ್ಶೆಯಲ್ಲಿ ತೊಡಗಿಕೊಳ್ಳುವ ನಾಗಪ್ಪ, ಅಂತರ್ಮುಖಿಯಾದ ಸಹೃದಯರಿಗೆ ಮೆಚ್ಚುಗೆ ಆಗುತ್ತಾನೆ. ೩೨೩ ಪುಟಗಳ ಸುದೀರ್ಘ ಕಾದಂಬರಿಯಲ್ಲಿ ನಡೆಯುವ ಸಮಗ್ರ ಕಥಾವಸ್ತು ಘಟಿಸಲು ತೆಗೆದುಕೊಳ್ಳುವ ಅವಧಿ, ಹದಿನೈದು ದಿನ ಮಾತ್ರ.