ಪೆಟ್ರೋಲ್ ಕಾರ್ ಓಡಿಸುವ ನನ್ನ ಮುಖದಲ್ಲಿ ಚಿಂತೆಯ ಗೆರೆಗಳು ಹೆಚ್ಚಾಗಿವೆ. ಹಾಗೆಯೆ ಟ್ರಂಪಣ್ಣನನ್ನು ಬಯ್ಯುವುದೂ ಜಾಸ್ತಿಯಾಗಿದೆ. ಅವರಿಗೆ ತಮ್ಮ ಮತಕೊಟ್ಟು, ಸರ್ಕಾರದ ಯಂತ್ರವನ್ನು ದುರುಪಯೋಗ ಮಾಡಲು ಅಧಿಕಾರ ಕೊಟ್ಟ ಅಮೆರಿಕನ್ನರಿಗೂ ಒಂದಷ್ಟು ಬಯ್ಗುಳ. ಕೇವಲ ಒಂದು ದೇಶವು ಇಡೀ ಪ್ರಪಂಚದ ಮೇಲೆ ವಜ್ರಮುಷ್ಠಿ ಹತೋಟಿಯನ್ನು ಇಟ್ಟುಕೊಂಡಿರುವುದು ಆಶ್ಚರ್ಯ. ಬಡದೇಶಗಳು, ಶ್ರೀಮಂತ ದೇಶಗಳು ಎಲ್ಲರಿಗೂ ಟ್ರಂಪಣ್ಣನ ವಕ್ರ ಬುದ್ಧಿಯ ಬಿಸಿ ತಾಕುತ್ತಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಪ್ರಿಯ ಓದುಗರೆ,
ರಸ್ತೆಯಲ್ಲಿ EV – ಎಲೆಕ್ಟ್ರಿಕ್ ವೆಹಿಕಲ್ – ನೋಡಿದಾಗ ಅದರ ಓನರ್ ಬಗ್ಗೆ ಅಸೂಯೆಯಾಗುತ್ತಿದೆ. ನಮ್ಮ ರಾಣಿರಾಜ್ಯದಲ್ಲಿ (Queensland) ಯಥೇಚ್ಛವಾಗಿರುವ, ಎಂದಿಗೂ ಕುಂದದ ಸೂರ್ಯನ ಖಜಾನೆ ಭದ್ರವಾಗಿರುವ ದೆಸೆಯಿಂದ EV ಓನರ್‌ಗಳ ಮುಖದಲ್ಲಿನ ನಸುನಗು ಶಾಶ್ವತವಾಗಿ ಮೆತ್ತಿಕೊಂಡಿದೆ. ಅನೇಕರ ಮನೆ ಮಾಡಿನ ಮೇಲಿರುವ ಸೋಲಾರ್ ಪ್ಯಾನೆಲ್ ಇಂದ ದೊರಕುವ ವಿದ್ಯುತ್ ಶಕ್ತಿ ಮತ್ತು ಎಲೆಕ್ಟ್ರಿಕ್ ವಾಹನಗಳಿಗಾಗಿಯೆ ಇರುವ ಸೂರ್ಯಶಕ್ತಿ ಇಂಧನ ಕೇಂದ್ರಗಳ ಲಭ್ಯತೆಯಿಂದ EV ಕಾರ್ ಓನರ್ ದಿಲ್ ಖುಷ್! ಅವರನ್ನು ನೋಡುತ್ತಾ ನಾನು ಹೂಂ ಅದೃಷ್ಟವಂತರು ಎನ್ನುತ್ತಿದ್ದೀನಿ.
ಪೆಟ್ರೋಲ್ ಕಾರ್ ಓಡಿಸುವ ನನ್ನ ಮುಖದಲ್ಲಿ ಚಿಂತೆಯ ಗೆರೆಗಳು ಹೆಚ್ಚಾಗಿವೆ. ಹಾಗೆಯೆ ಟ್ರಂಪಣ್ಣನನ್ನು ಬಯ್ಯುವುದೂ ಜಾಸ್ತಿಯಾಗಿದೆ. ಅವರಿಗೆ ತಮ್ಮ ಮತಕೊಟ್ಟು, ಸರ್ಕಾರದ ಯಂತ್ರವನ್ನು ದುರುಪಯೋಗ ಮಾಡಲು ಅಧಿಕಾರ ಕೊಟ್ಟ ಅಮೆರಿಕನ್ನರಿಗೂ ಒಂದಷ್ಟು ಬಯ್ಗುಳ. ಕೇವಲ ಒಂದು ದೇಶವು ಇಡೀ ಪ್ರಪಂಚದ ಮೇಲೆ ವಜ್ರಮುಷ್ಠಿ ಹತೋಟಿಯನ್ನು ಇಟ್ಟುಕೊಂಡಿರುವುದು ಆಶ್ಚರ್ಯ. ಬಡದೇಶಗಳು, ಶ್ರೀಮಂತ ದೇಶಗಳು ಎಲ್ಲರಿಗೂ ಟ್ರಂಪಣ್ಣನ ವಕ್ರ ಬುದ್ಧಿಯ ಬಿಸಿ ತಾಕುತ್ತಿದೆ.
ಜಗತ್ತಿನ ಬೇರೆಡೆಯಲ್ಲಿದ್ದಂತೆ ಆಸ್ಟ್ರೇಲಿಯಾದಲ್ಲಿ ಇಂಧನಗಳ ಪೂರೈಕೆ ಕಡಿಮೆಯಾಗುತ್ತಿದೆ. ಸದ್ಯಕ್ಕೆ ಸಪ್ಲೈ ಇರುವ ಇಂಧನಗಳ – ಪೆಟ್ರೋಲ್, ಡೀಸೆಲ್, ಅಡುಗೆ ಗ್ಯಾಸ್ ಇತ್ಯಾದಿ – ಬೆಲೆ ಗಗನಕ್ಕೇರಿದೆ. ವಾರಕ್ಕೆ ಸುಮಾರು ಮುನ್ನೂರು ಅಥವಾ ಇನ್ನೂ ಹೆಚ್ಚು ಕಿಲೋಮೀಟರ್ ಪ್ರಯಾಣಕ್ಕಾಗಿ ಪೆಟ್ರೋಲ್ ಬಳಸುವ ನಾನು ಕಂಗಾಲಾಗಿದ್ದೀನಿ. ಅತ್ಯಂತ ಕಡಿಮೆ ಹಣದ ವೆಚ್ಚದಲ್ಲಿ ಸಾರ್ವಜನಿಕ ಸಾರಿಗೆ ಬಳಸುವ ಅವಕಾಶವಿದ್ದರೂ, ಕಾರ್ pooling ಐಡಿಯಾ ಇದ್ದರೂ, ಅದಕ್ಕೆ ತಗಲುವ ಸಮಯದ ವೆಚ್ಚವು ಇಂಧನಕ್ಕಿಂತಲೂ ಬಹಳ ದುಬಾರಿ. ಟೈಮ್ ಈಸ್ ಮನಿ.
ಅಡುಗೆ ಗ್ಯಾಸ್ ಒಂದು ಸಿಲೆಂಡರ್ ಖಾಲಿಯಾಗಿ ಅದನ್ನು ಬುಕ್ ಮಾಡಲು ನಾವು ವೈಟಿಂಗ್ ಲಿಸ್ಟ್ ಬಾಲದಲ್ಲಿ ಸೇರಿಕೊಂಡಾಗ ಪರ್ಯಾಯ ಇಂಧನದತ್ತ ಅಂದರೆ ಇದ್ದಲು, ಕಟ್ಟಿಗೆ ಒಲೆಯತ್ತ ತಲೆ ಓಡುತ್ತದೆ. ಆದರೆ ಇವಕ್ಕೂ ತೆರಬೇಕು ನಾವು ಸಮಯದ ಖರ್ಚು. ಈ ಸಂದರ್ಭದಲ್ಲಿ ನಮ್ಮ ಜೀವನದ ಗುಣಮಟ್ಟ, ನಾವು ಬದುಕುತ್ತಿರುವ ರೀತಿಗಳು, ಬದುಕಲು ಬೇಕಾಗಿರುವ ಅಗತ್ಯ ಸೌಲಭ್ಯಗಳು, ಸೇವೆ ಇತ್ಯಾದಿಗಳ ಕುರಿತು ಪ್ರಶ್ನೆಗಳು. ಇದ್ದಲು, ಕಟ್ಟಿಗೆ ಒಲೆ ಅಡುಗೆ ಕ್ಯಾಂಪಿಂಗ್ ಸಮಯದಲ್ಲಿ ಅಪ್ಯಾಯಮಾನ. ದಿನನಿತ್ಯ ಜೀವನದಲ್ಲಿ ನಾವು ಬೆಳಗಾದರೆ ಸಾಕು ಕೆಲಸಕ್ಕೆ, ಶಾಲೆ-ಕಾಲೇಜು-ಯೂನಿವರ್ಸಿಟಿಗೆ ಓಡುವ ಧಾವಂತದಲ್ಲಿರುತ್ತೀವಿ. ದಿನಚರಿಯಲ್ಲಿ ಅಲ್ಪಸ್ವಲ್ಪ ಬದಲಾವಣೆಯಾದರೆ ಅದನ್ನು ನಿಭಾಯಿಸುವ ಸಾಮರ್ಥ್ಯ, ಹೊಂದಾಣಿಕೆ, ತಾಳ್ಮೆ ಎಲ್ಲರಲ್ಲೂ ಇದೆಯೆ? ವ್ಯಕ್ತಿ-ಕೇಂದ್ರಿತ ಜೀವನಶೈಲಿಯಲ್ಲಿ ಬದಲಾವಣೆಗೆ ಜಾಗವಿದೆಯೆ? ಕೋವಿಡ್-೧೯ ಪರಿಸ್ಥಿತಿಯಲ್ಲಿ ಉಂಟಾದ ಮಾನಸಿಕ ಕಾಯಿಲೆಗಳ ಬಗ್ಗೆ ಅಧ್ಯಯನಗಳ ವರದಿಗಳು ಇನ್ನೂ ಬರುತ್ತಿರುವಾಗ ಈ ಹೊಸ ಬಿಕ್ಕಟ್ಟು ಎದುರಾಗಿದೆ. ಮತ್ತೆ ಟಾಯ್ಲೆಟ್ ಪೇಪರ್ ಪೇರಿಸಿಟ್ಟುಕೊಳ್ಳುವುದರ ಕಡೆ ಮಾತು ಹೊರಳುವಾಗ ಇದೇನಾಗುತ್ತಿದೆ ಎಂದು ಕಸಿವಿಸಿಯಾಗುತ್ತದೆ. ಇದರ ಬಗ್ಗೆ ಒಂದು ಸಕ್ರಿಯ ನಿರ್ಧಾರವನ್ನು ತೆಗೆದುಕೊಳ್ಳುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಈಗ ನೆನಪಿಗೆ ಬರುವುದು ಭಾರತದ ಡಾ. ವಂದನಾ ಶಿವ ಅವರ ‘ಸ್ಲೋ ಲಿವಿಂಗ್’ ಕೃತಿ. ಈ ಪುಸ್ತಕದಲ್ಲಿ ಅವರು ಕ್ಲೈಮೇಟ್ ಚೇಂಜ್ ಬಗ್ಗೆ ಮಾತನಾಡುತ್ತಾ ನಮ್ಮ ಜೀವನಶೈಲಿಯನ್ನು ನಾವು ಬದಲಿಸಿಕೊಳ್ಳಲು ಸಾಧ್ಯವೇ, ಹೇಗದು ಎಂದು ಮಾತನಾಡುತ್ತಾರೆ. ದಿನನಿತ್ಯ ಜೀವನಕ್ರಮವನ್ನು ಪರಿಶೀಲಿಸಿ, ನಿಧಾನಗತಿಯಿಂದ ನಾವು ಸಾಗಲು ಸಾಧ್ಯವಿದೆಯೇ? ನಮ್ಮ ಆಯ್ಕೆ ಯಾವುದು? ಹವಾಮಾನ ತಾಪವನ್ನು ಕಡಿಮೆ ಮಾಡಲು ನನ್ನ ವೈಯಕ್ತಿಕ ನಿರ್ಧಾರ ಮತ್ತು ಕ್ರಮಗಳು ಏನು? ಇದರಲ್ಲಿ ಸಮಾಜದ, ಸರಕಾರದ ಪಾತ್ರವೇನು?

ಇದೆಲ್ಲಾ ಪ್ರಶ್ನೆಗಳು ಮತ್ತು ಉತ್ತರಗಳು ಅದೆಷ್ಟು ಕಷ್ಟ ಅನ್ನುವುದರ ಅರಿವಾಗುವುದು ಜನರ ಮಾತುಗಳನ್ನು ಕೇಳಿದಾಗ. ‘ಅಯ್ಯೋ, ಪೆಟ್ರೋಲ್ ಸ್ಟೇಷನ್‌ನಲ್ಲಿ ಇರುವ ಕ್ಯೂ ನೋಡಿದರೆ ಭಯವಾಗುತ್ತದೆ. ಜನರ ಮುಖದಲ್ಲಿರುವ ಆತಂಕವನ್ನು ನೋಡಿದರೆ ನಾವೂ ಕೂಡ ಖಿನ್ನತೆಗೆ ಒಳಗಾಗುತ್ತೀವಿ ಅನ್ನೋ ಭಯ. ಮತ್ತೆ ಎಲ್ಲದಕ್ಕೂ ಅಂಗಡಿಗಳಲ್ಲಿ ಕ್ಯೂ ನಿಲ್ಲಬೇಕು ಅನ್ನುವುದನ್ನ ನೆನೆಸಿಕೊಂಡರೆ ಅದಕ್ಕೆ ಬೇಕಾದ ಮನೋಸ್ಥೈರ್ಯ ನನ್ನಲ್ಲಿದೆಯೇ ಎನ್ನುವ ಹೊಯ್ದಾಟ. ಟಾಯ್ಲೆಟ್ ಪೇಪರ್‌ಗಾಗಿ ಪರದಾಡಬೇಕು ಎಂದು ಯಾರೋ ನಕ್ಕರೆ ಅಯ್ಯೋ ಅದು ನಿಜವಾಗದಿರಲಿ ಎಂದು ನನ್ನ ಪ್ರಾರ್ಥನೆ.’ ಇಂತಹ ಮಾತುಗಳು ಸುಳ್ಳಲ್ಲ. ಅವು ಜಾಗತೀಕರಣ ಪರಿಣಾಮದ ಪ್ರತಿಫಲನ. ನಮ್ಮೆಲ್ಲರ ಅಂತಾರಾಷ್ಟ್ರೀಯ ಬದುಕು ಈಗ ಸರಪಣಿಯ ಕೊಂಡಿಗಳಂತೆ ಜೋಡಿಸಿಕೊಂಡಿವೆ. ಅಲ್ಲೆಲ್ಲೋ ಯುದ್ಧವಾಗುತ್ತಿದೆ ಎಂದರೆ ಹೌದಾ, ನಮಗೇನೂ ಸಂಬಂಧವಿಲ್ಲ ಎಂದು ಸುಮ್ಮನಾಗುವ ಕಾಲವಲ್ಲ ಇದು. ಇಂಧನ ಪೂರೈಕೆಯಲ್ಲಿ ಕೊರತೆ ಎಂದರೆ ನಾವು ತಡಬಡಿಸಿ ತಬ್ಬಿಬ್ಬಾಗುವ ಕಾಲವಿದು.
ಇದು ಇಂಧನದ ಕತೆಯಾಯ್ತು. ಮಿಕ್ಕ ದೈನಂದಿನ ಜೀವನದ ಬೇಕು-ಬೇಡಗಳನ್ನು ಗಮನಿಸಿದರೆ ಟ್ರಂಪಣ್ಣನ ಯುದ್ಧ-ಪ್ರೀತಿ ನಮಗೆಲ್ಲಾ ಬರೆ ಹಾಕಿದೆ. ತರಕಾರಿ-ಹಣ್ಣುಗಳ ಬೆಲೆ ಏರಿದೆ. ನನ್ನ ಸಹೋದ್ಯೋಗಿ ಒಬ್ಬರು ಈ ವಾರಾಂತ್ಯದ ಮಾರುಕಟ್ಟೆಗೆ ಹೋಗಿ ಸುಲಭವಾಗಿ, ಶೀಘ್ರವಾಗಿ ಬೆಳೆಯುವ ಸೊಪ್ಪು ಮೊಳಕೆ, ತರಕಾರಿ ಸಸಿಗಳನ್ನು ಕೊಳ್ಳುವುದಾಗಿ ಹೇಳಿದರು. ನಮ್ಮನೆಯಲ್ಲಿ ಬೆಳೆದಿರುವ ನುಗ್ಗೆಕಾಯಿ, ಬೆರಕೆಸೊಪ್ಪು, ನಿಂಬೆಹಣ್ಣು, ಮರಗೆಣಸು, ಅಷ್ಟಿಷ್ಟು ಹಾಗಲಕಾಯಿಗಳನ್ನು ನೆನೆದು ಸ್ವಲ್ಪ ಸಮಾಧಾನವಾಯ್ತು. ನುಗ್ಗೆಕಾಯಿ ಬೇಕಾ ಎಂದು ಅವರನ್ನು ಕೇಳಿದರೆ ಅವರು ಥ್ಯಾಂಕ್ಯೂ ಹೇಳುತ್ತಲೇ ಒಂದಷ್ಟು ಹೌಹಾರಿದರು. ಮಾತು ಬದಲಾಯಿಸಿ ತಮ್ಮ ಕುಟುಂಬದಲ್ಲಿ ಒಬ್ಬರಿಗೆ ಬೇಕಾಗಿದ್ದ ಔಷಧಿಯು ಯೂರೋಪಿನಿಂದ ಬರುವುದು ತಡವಾಗಿದೆ. ಬೇಸರವಾಗಿದೆ ಅಂದರು. ಅದನ್ನು ಕೇಳಿದ ಮತ್ತೊಬ್ಬರು ತಾನು ಮುಂದಿನ ತಿಂಗಳು ಇಂಗ್ಲೆಂಡಿಗೆ ಕೆಲಸದ ಮೇಲೆ ಹೋಗಬೇಕು. ಅದು ರದ್ದಾಗುವುದೊ ಏನೊ ತಿಳಿಯದು, ಒಂದು ಪಕ್ಷ ರದ್ದಾದರೆ ಅದರಿಂದ ನೂರಾರು ಡಾಲರ್ ಲಾಸ್. ಇದೇ ಕೆಲಸಕ್ಕಾಗಿ ಮುಂದಿನ ವರ್ಷ ತಾನು ಹೋಗಲಾಗದು, ಇದರಿಂದ ಕೆರಿಯರ್‌ಗೆ ಪೆಟ್ಟು ಎಂದು ಅವರು ಪೇಚಾಡುತ್ತಾ, ಈ ಅಯೋಮಯ ಸ್ಥಿತಿ ಬೇಡವಾಗಿತ್ತು ಅಂದರು. ಈಗಾಗಲೇ ಅನೇಕ airlines ಸಂಸ್ಥೆಗಳು ವಿಮಾನ ಸಂಚಾರವನ್ನು ಸ್ಥಗಿತ ಮಾಡಿವೆ ಇಲ್ಲಾ ಕಡಿಮೆ ಮಾಡಿವೆ.
ಇನ್ನೇನು ಕೆಲವೇ ದಿನಗಳಲ್ಲಿ Good Friday ಮತ್ತು ಈಸ್ಟರ್ ಹಬ್ಬ ಬರಲಿದೆ. ಅದರ ಜೊತೆಗೆ ಶಾಲೆಗಳಿಗೆ ಎರಡು ವಾರ ಮಿಡ್-ಟರ್ಮ್ ರಜೆ. ನಮ್ಮ ರಾಣಿರಾಜ್ಯದಲ್ಲಿ ಈಗ ಬಿಸಿಲಿನ ಝಳ ಕಡಿಮೆಯಾಗುತ್ತಾ ಮೆಲ್ಲಮೆಲ್ಲನೆ ಸಂಜೆಯ ಚಳಿ ಸಣ್ಣಗೆ ನುಸುಳಿ ಹಿತವಾಗಿದೆ. ಹೊರಾಂಗಣ ಕ್ಯಾಂಪಿಂಗ್‌ಗೆ ಹೇಳಿ ಮಾಡಿಸಿದಂಥಾ ಹವಾಗುಣ. ಈಗಾಗಲೇ ಕ್ಯಾಂಪಿಂಗ್ ಪ್ಲಾನ್ ಇಟ್ಟುಕೊಂಡು ಕ್ಯಾಂಪ್ ಸೈಟ್‌ಗಳಲ್ಲಿ ಸ್ಥಳ ಕಾದಿರಿಸಿದ್ದವರು ಅವನ್ನು ರದ್ದು ಮಾಡುತ್ತಿದ್ದಾರೆ. ಕಾರಣ ಇಂಧನದ ಕೊರತೆ. ಕೆಲಕಡೆ ದಿನಕ್ಕೆ ಡಾಲರ್ ನಲವತ್ತಕ್ಕೆ ಮಾತ್ರ ಪೆಟ್ರೋಲ್, ಡೀಸೆಲ್ ಖರೀದಿ ಎಂದು ನಿಗದಿಯಾಗಿದೆ. ಒಂದು ಲೀಟರ್ ಡೀಸೆಲ್ ಬೆಲೆ ಮೂರು ಡಾಲರ್ ಗೂ ಮೀರಿದೆ, ಈ ವಾರ ನಾಲ್ಕು ಡಾಲರ್ ತಲುಪುವ ಅಂದಾಜಿದೆ. ನಲವತ್ತು ಡಾಲರ್‌ಗೆ ಹತ್ತು-ಹನ್ನೆರಡು ಲೀಟರ್ ಡೀಸೆಲ್. ಇದನ್ನು ನೆಚ್ಚಿಕೊಂಡು ದೂರ ಪ್ರಯಾಣ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಜನ.

ಈ ಬಾರಿಯ ಈಸ್ಟರ್ ಠುಸ್ ಪಟಾಕಿಯಾಗಿದೆ. ಮಕ್ಕಳ ನಿರಾಸೆ ಬೇಸರ ತರಿಸಿದೆ, ಎಂದು ರೇಡಿಯೋದಲ್ಲಿ ಜನರು ಹೇಳಿದ್ದಾರೆ. ಈ ನಿರಾಸೆ, ನಿಟ್ಟುಸಿರು ಇಲ್ಲವಾಗಲಿ. ಪ್ರಪಂಚದಲ್ಲಿ ಎಲ್ಲೂ ಯುದ್ಧವಾಗುವುದು ಬೇಡ. ಯುದ್ಧದ ಕಾರಣದಿಂದ ಯಾರೂ ಸಾಯುವುದು ಬೇಡ. ಒಬ್ಬನ ತಿಕ್ಕಲುತನದಿಂದ ಲಕ್ಷಲಕ್ಷ ಜನರಿಗೆ, ಪ್ರಾಣಿ-ಪಕ್ಷಿಗಳಿಗೆ, ನೈಸರ್ಗಿಕ ಪರಿಸರಕ್ಕೆ ಹಾನಿಯಾಗುವುದು ನಿಲ್ಲಲಿ. ಅಹಿಂಸೆ ಎಲ್ಲರ ಕರ್ತವ್ಯವಾಗಲಿ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

