ಅವಳು ಕಿರುನಿದ್ದೆಯಿಂದ ಎದ್ದಾಗ ಈಗಾಗಲೇ ಅಜ್ಜಯ್ಯನ ಅಂಗಡಿಗೆ ಸಾಮಾನಗಳ ಪಟ್ಟಿ ಕೊಟ್ಟು ನಾಲ್ಕು ಗಂಟೆಗಳಾದ ನೆನಪು ಆಯಿತು. ಮೊದಲು ತಡವಾಗಬಹುದೆಂದು ಅಮ್ಮನಿಗೆ ಬೇಕಾದ ಅಕ್ಕಿಯನ್ನು ತರಲು ಚೀಲ ಒಯ್ಯುವುದು ಎಂದುಕೊಂಡಳು. ಅಂಗಡಿಯವನು ಇನ್ನೊಂದು ಗಂಟೆಯಲ್ಲಿ ಸಾಮಾನು ತಂದುಕೊಡುವುದಾಗಿ ಹೇಳಿದ್ದರಿಂದ ಆ ಯೋಚನೆ ಕೈಬಿಟ್ಟಳು. ಕಿರಿಕಿರಿ ಉಂಟಾಗಿ ಅಂಗಡಿಗೆ ಫೋನ್ ಮಾಡಿದಳು “ತಲುಪಲು ಸಾಧ್ಯವಾಗುತ್ತಿಲ್ಲ” ಎಂಬ ಉತ್ತರ ಬಂದಿತು. ಆಗ ಅಂಗಡಿಗೆ ಹೋಗದೆ ಬೇರೆ ದಾರಿ ಇಲ್ಲ ಎಂದು, ಅಂಗಡಿಯ ಕಡೆಗೆ ಬಿಸಿಲಿನಲ್ಲಿ ಕೊಡೆ ಹಿಡಿದು ನಡೆದಳು.
ರಘುನಾಥ್‌ ಕೆ. ಅನುವಾದಿಸಿದ ಭೂಮಿಕಾ ರಾಜನ್‌ ಕಥೆ “ಶಾಹೀನಳ ದುಃಸ್ವಪ್ನ” ನಿಮ್ಮ ಈ ಭಾನುವಾರದ ಓದಿಗೆ

ಶಾಹೀನ್ ಕೆಮ್ಮುತ್ತಾ ಉಸಿರು ಬಿಡಲು ಕಷ್ಟ ಪಡುತ್ತಾ ಎದ್ದಳು. ಆಗ ಅವಳ ಸ್ಮಾರ್ಟ್ ವಾಚ್‌ನಲ್ಲಿ ಬೆಳಿಗ್ಗೆ ಎರಡೂವರೆ ಗಂಟೆಯಾಗಿತ್ತು. ಅದರಂತೆ ಇನ್ನೂ ಮೂರು ಗಂಟೆಗಳ ಕಾಲ ಅವಳು ಮಲಗಬಹುದಾಗಿತ್ತು. ಅದು ಅವಳನ್ನು ಎಬ್ಬಿಸುವವರೆಗೆ. ಇದು ನಾನು ರಾತ್ರಿ ತಿಂದ ಕಾಲಿಫ್ಲವರ್‌ನ ಪಲ್ಯದ ಪರಿಣಾಮವಾಗಿರಬೇಕು ಎಂದುಕೊಂಡು, ಪಕ್ಕದಲ್ಲಿದ್ದ ಚೊಂಬಿನಿಂದ ನೀರು ಕುಡಿದಳು. ಬೆಳಗ್ಗೆ ಐದೂವರೆಗೆ ಸರಿಯಾಗಿ ತನ್ನನ್ನು ಗಡಿಯಾರ ಎಬ್ಬಿಸುವುದನ್ನು ಖಚಿತಪಡಿಸಿಕೊಂಡು, ಅವಳು ಮಧ್ಯೆ ಏಳಲು ಕಾರಣವನ್ನು ಚಿಂತಿಸುತ್ತಾ ನಿದ್ದೆಗೆ ಜಾರಿದಳು. ಬೆಳಿಗ್ಗೆ ಐದೂವರೆಗೆ ಎಬ್ಬಿಸಿದ ಗಡಿಯಾರದ ಎಚ್ಚರಿಸುವ ಗುಂಡಿಯನ್ನು ಅದುಮಿ, ಮೇಲೆದ್ದು ಎರಡು ವರ್ಷಗಳ ಹಿಂದೆ ತನ್ನ ಹುಟ್ಟಿದ ಹಬ್ಬಕ್ಕೆ ತನ್ನ ಸಹೋದ್ಯೋಗಿ ಕೊಟ್ಟ ಗಿಡಕ್ಕೆ -ನೀರು ಹಾಕಿದಳು. ಗಿಡದ ಬೆಳವಣಿಗೆ ಸಾಧಾರಣವಾಗಿ ಇತ್ತು; ಗಿಡ್ಡವಂತೂ ಆಗಿರಲಿಲ್ಲ. ಎದುರುಗಡೆ ಇದ್ದ, ಇನ್ನೆರಡು ದಿನಗಳಲ್ಲಿ ಬದಲಿಸಬೇಕಾದ, ಧೂಳು ತುಂಬಿದ ಹೂಗಳ ಪರದೆಯ ಕಡೆ ನೋಡಿದಳು.

ಬೆಣ್ಣೆ ಹಾಕಿದ ಬ್ರೆಡ್‌ ತಿಂದು, ಹೈದರಾಬಾದ್ ಚಹಾ ಕುಡಿಯುವಾಗ ಅವಳ ಮನಸ್ಸು ಗುರಿಯಿಲ್ಲದೆ ಅಲೆದಾಡುತ್ತಿತ್ತು. ಅವಳು ಕೆಲಸ ಮಾಡುತ್ತಿದ್ದ ಪತ್ರಿಕೆಯಲ್ಲಿ ಅವಳಿಗೆ ಇಂದು ರಜೆ ಇದ್ದುದರಿಂದ ಅವಳು ಪಕ್ಕದ ಉದ್ಯಾನಕ್ಕೆ ತಿರುಗಾಡಲು ಹೋಗಲು ನಿರ್ಧರಿಸಿದಳು. ಅವಳು ಉದ್ಯಾನದಲ್ಲಿ ತಿರುಗಾಡುವಾಗ ಅವಳಿಗೆ ಬಿದ್ದ ದುಃಸ್ವಪ್ನ ಮಸುಕು ಮಸುಕಾಗಿ ನೆನಪಿಗೆ ಬಂದು ಬೆನ್ನು ಮೂಳೆಯಲ್ಲಿ ನಡುಕ ಹುಟ್ಟಿಸಿತು. ಅವಳಿಗೆ ಆಘಾತ ಉಂಟಾಗಿ ಆ ವಿಚಿತ್ರ ಸ್ವಪ್ನದ – ಒಂದಕ್ಕೊಂದು ಸಂಬಂಧವಿಲ್ಲದ ತುಣುಕುಗಳನ್ನು ಜೋಡಿಸತೊಡಗಿದಳು. ತಾನು ಕಾಫಿ ಮೇಜಿನ ಮೇಲಿಟ್ಟ ಆ ಸಸಿಗೆ ಯಾವುದೋ ಮಿಂಚು ಹೊಡೆದು ಸುಟ್ಟು ಕರಕಲಾಗಿದ್ದು ನೆನಪಿಗೆ ಬಂತು. ಆಗಲೇ ಅವಳಿಗೆ ಉಸಿರು ಕಟ್ಟಿದಂತಾಗಿ ಎಚ್ಚರಗೊಂಡದ್ದು. ಇವೆರಡು ತುಣುಕುಗಳನ್ನು ಮಾತ್ರ ಅವಳಿಗೆ ಈಗ ನೆನಪಿಸಿಕೊಳ್ಳಲು ಸಾಧ್ಯವಾಯಿತು.


ಗಾಢವಾಗಿ ಉಸಿರೆಳೆದುಕೊಂಡು ಬಲವಂತವಾಗಿ ಉದ್ಯಾನದಲ್ಲಿ ಆಗುತ್ತಿದ್ದ ಗದ್ದಲಗಳ ಕಡೆಗೆ ಗಮನ ಹರಿಸಿದಳು- ಮಕ್ಕಳು ಯಾವುದೋ ಆಟವಾಡುತ್ತಾ ಕೂಗುತ್ತಿದ್ದರು, ಇನ್ನೊಬ್ಬ ಜಾಗ ಕೊಂಡುಕೊಳ್ಳುವ ಅದರ ಬೆಲೆ ಕುರಿತು ದೂರವಾಣಿಯಲ್ಲಿ ಜೋರಾಗಿ ಮಾತನಾಡುತ್ತಿದ್ದ. ಜತೆಗೆ ಮರದ ಮೇಲಿನ ಕೋತಿಗಳು ಕೀಚ್ ಕೀಚ್ ಎಂದು ಸದ್ದು ಮಾಡುತ್ತಿದ್ದವು. ತನ್ನ ಕನಸನ್ನು ಮನಸ್ಸಿನ ಆಳಕ್ಕೆ ಹುಗಿಯಲು ಪ್ರಯತ್ನಿಸಿದಳು. ಇನ್ನಷ್ಟು ಉಸಿರನ್ನು ಎಳೆದುಕೊಂಡು ಎಲೆಗಳು ಉದುರಿದ್ದ ಸಿಮೆಂಟ್‌ನ ಕಾಲುದಾರಿಯಲ್ಲಿ ನಡೆದಳು. ಸುಮಾರು ನಲವತ್ತೈದು ನಿಮಿಷಗಳ ಕಾಲ ಅವಳು ನಡೆದ ಮೇಲೆ, ಮನೆಗೆ ಹಿಂದಿರುಗಿ ತನ್ನ ಬೆವರಿನ ವಾಸನೆಯನ್ನು ಕಳೆದುಕೊಳ್ಳಲು ಸ್ನಾನ ಮಾಡಲು ನಿರ್ಧರಿಸಿದಳು. ತಾನು ತರಬೇಕಾದ ಸಾಮಾನುಗಳ ಪಟ್ಟಿಯನ್ನು ತನ್ನ ಮೊಬೈಲ್‌ನಲ್ಲಿ ಇಟ್ಟು ನೆನಪು ಮಾಡುವಂತೆ ಇಟ್ಟಿದ್ದನ್ನು, ಅದು ಪ್ರಾಮಾಣಿಕವಾಗಿ ನೆನಪು ಮಾಡಿತು. ತಮಗೆ ಬೇಕಾದ ಸಾಮಾನುಗಳ ಪಟ್ಟಿಯನ್ನು, ತಾನು ತನ್ನ ಅಮ್ಮ ಕಳೆದ ಎರಡು ದಶಕಗಳಿಂದ ಖರೀದಿಸುತ್ತಿದ್ದ- ಕಿರಾಣಿ ಅಂಗಡಿಗೆ ಕೊಡಬೇಕಾಗಿತ್ತು. ಈ ಕಿರಾಣಿ ಅಂಗಡಿಗೆ ಯಾವುದೇ ಹೆಸರು ಇರಲಿಲ್ಲ. ಅಥವಾ ಹೆಸರಿನ ಫಲಕ ಕೂಡ ಇರಲಿಲ್ಲ. ಹೆಚ್ಚಿನವರು ಅದನ್ನು ಹೆಸರಿಲ್ಲದ ಅಜ್ಜಯ್ಯನ ಅಂಗಡಿ ಎಂದೇ ಕರೆಯುತ್ತಿದ್ದರು. ತನ್ನ ಸಾಮಾನು ಪಟ್ಟಿಯನ್ನು ಹೆಸರಿಲ್ಲದ ಅಜ್ಜಯ್ಯನ ಅಂಗಡಿಗೆ ಕೊಟ್ಟು ಮನೆಯ ಕಡೆಗೆ ನಡೆದಳು.

ಪಕ್ಕದ ರಸ್ತೆಯಲ್ಲಿ ಇದ್ದ ಬೇಕರಿಯಿಂದ ಎರಡು ಆಲೂಗಡ್ಡೆಯ ಬೋಂಡಾಗಳನ್ನು, ತನಗೊಂದು ತನ್ನ ಅಮ್ಮನಿಗೊಂದು ಕೊಂಡಳು. ಏಪ್ರಿಲ್‌ನ ಸೂರ್ಯನ ಬಿಸಿಲಿನ ಜಳವನ್ನು ತಪ್ಪಿಸಿಕೊಳ್ಳಲು ಬೇಗ ಬೇಗ ಮನೆಯ ಕಡೆ ಹೆಜ್ಜೆ ಹಾಕಿದಳು. ತಾನು ತಂದ ಒಂದು ಆಲೂಗಡ್ಡೆ ಬೋಂಡಾವನ್ನು ಅಮ್ಮನಿಗೆ ಕೊಟ್ಟು, ತಾನೊಂದರ ಖಾರದ ಘಮಲನ್ನು ಸವಿಯತೊಡಗಿದಳು. “ಸಾಮಾನಿನವನು ಅಂಗಡಿಯಿಂದ ತಂದುಕೊಟ್ಟ ಕೂಡಲೇ ಚಿಕನ್‌ ಫ್ರೈ ಮತ್ತು ಮಂಚೂರಿಯನ್ನು ಮಾಡುವೆ. ಅದರ ಜತೆಗೆ ನಿನಗೆ ಇನ್ನೇನಾದರೂ ಬೇಕಾ?” ಎಂದು ಕೇಳಿದ ಅವರ ಅಮ್ಮನಿಗೆ “ಕುಡಿಯಲು ಒಂದು ಲೋಟಾ ಮಜ್ಜಿಗೆ ದಯವಿಟ್ಟು” ಎಂದಳು ತನ್ನ ಆಲೂಗಡ್ಡೆ ಬೋಂಡಾ ತಿನ್ನುತ್ತಾ. “ಅದನ್ನು ಮಾಡಬಹುದು. ಸಾಮಾನು ತಂದುಕೊಡಲಿ ಮೊದಲು. ಅಲ್ಲಿಯವರೆಗೆ ಅಡುಗೆ ಮಾಡಲು ಬೇಕಾದ ಅಕ್ಕಿಯಾಗಲಿ, ಮೊಸರಾಗಲಿ ಸದ್ಯ ಇಲ್ಲ” ಎಂದರು. ವೆರಾಂಡಲ್ಲಿದ್ದ ಮರದ ಸೋಫಾದ ಮೇಲೆ ಒರಗಿ ನಿದ್ದೆಗೆ ಜಾರಿದ ಮಗಳ ಕಡೆ ಅಸಹನೆಯಿಂದ ನೋಡುತ್ತಾ. “ಈ ನನ್ನ ಮಗಳಿಗೆ ಕೇಳಿಸಿಕೊಳ್ಳುವ ಸಹನೆಯೆ ಇಲ್ಲ ಈಗಾಗಲೇ ರಜೆಯ ನಿದ್ದೆ ಮುಗಿದಿದೆಯಲ್ಲ” ಎಂದುಕೊಂಡಳು ಸೋಫಾದ ಮೇಲೆ ಒರಗಿದ ಮಗಳನ್ನು ನೋಡುತ್ತಾ… ಹಾಲ್‌ನಲ್ಲಿ ಇದ್ದ. ಟಿ ವಿ ಯ ಕಡೆಗೆ ನಡೆದಳು ಸಂಗೀತ ಕಾರ್ಯಕ್ರಮ ನೋಡಲು.

ಅವಳು ಕಿರುನಿದ್ದೆಯಿಂದ ಎದ್ದಾಗ ಈಗಾಗಲೇ ಅಜ್ಜಯ್ಯನ ಅಂಗಡಿಗೆ ಸಾಮಾನಗಳ ಪಟ್ಟಿ ಕೊಟ್ಟು ನಾಲ್ಕು ಗಂಟೆಗಳಾದ ನೆನಪು ಆಯಿತು. ಮೊದಲು ತಡವಾಗಬಹುದೆಂದು ಅಮ್ಮನಿಗೆ ಬೇಕಾದ ಅಕ್ಕಿಯನ್ನು ತರಲು ಚೀಲ ಒಯ್ಯುವುದು ಎಂದುಕೊಂಡಳು. ಅಂಗಡಿಯವನು ಇನ್ನೊಂದು ಗಂಟೆಯಲ್ಲಿ ಸಾಮಾನು ತಂದುಕೊಡುವುದಾಗಿ ಹೇಳಿದ್ದರಿಂದ ಆ ಯೋಚನೆ ಕೈಬಿಟ್ಟಳು. ಕಿರಿಕಿರಿ ಉಂಟಾಗಿ ಅಂಗಡಿಗೆ ಫೋನ್ ಮಾಡಿದಳು “ತಲುಪಲು ಸಾಧ್ಯವಾಗುತ್ತಿಲ್ಲ” ಎಂಬ ಉತ್ತರ ಬಂದಿತು. ಆಗ ಅಂಗಡಿಗೆ ಹೋಗದೆ ಬೇರೆ ದಾರಿ ಇಲ್ಲ ಎಂದು, ಅಂಗಡಿಯ ಕಡೆಗೆ ಬಿಸಿಲಿನಲ್ಲಿ ಕೊಡೆ ಹಿಡಿದು ನಡೆದಳು. ‘ಈ ಅಂಗಡಿಯವನಿಗೆ ಅಹಂಕಾರ ಬಂದಿದೆ ಅಥವಾ ಬೇಜವಾಬ್ದಾರಿ ಅಥವಾ ಮರೆಗುಳಿಯಾಗಿಬಿಟ್ಟಿದ್ದಾನೆ” ಅಂಗಡಿ ಕಡೆಗೆ ನಡೆಯುತ್ತಾ ಅಂದುಕೊಂಡಳು. ಅಂಗಡಿ ಬಳಿಗೆ ಬಂದಾಗ ಅವಳಿಗೆ ಬೇರೆ ಯಾವುದೋ ರಸ್ತೆಗೆ ಬಂದುಬಿಟ್ಟಿರುವೆನಾ ಎಂಬ ಸಂದಿಗ್ಧತೆ ಉಂಟಾಯಿತು. ಬೀದಿಯ ಸಂಖ್ಯೆ ನೋಡಿದ ಮೇಲೆ ಅವಳಿಗೆ ತಾನು ಸರಿಯಾದ ಕಡೆಗೆ ಬಂದಿರುವುದು ಖಚಿತವಾಯಿತು. ಅಂಗಡಿ ಸುಟ್ಟು ಹೋಗಿ ಅಲ್ಲಿ ಇದ್ದ ಸಾಮಾನುಗಳಿಂದ ಸೀದ ವಾಸನೆ ಬರುತ್ತಿತ್ತು. ಅಂಗಡಿಯವನ ಬಳಿ ಮಾಂಸ ಇಡಲು ರೆಫ್ರಿಜರೇಟರ್ ಇರಲಿಲ್ಲ. ಮತ್ತೇಕೆ ಮಾಂಸ ಸುಟ್ಟ ವಾಸನೆ. ಅಂಗಡಿಯ ಎದುರು ಹಣ್ಣು ಮಾರುತ್ತಿದ್ದ ಗಾಡಿಯವನನ್ನು “ಏನಾಯಿತು ಅಗ್ನಿ ಶಾಮಕ ವಾಹನ ಬರಲಿಲ್ಲವೆ” ಎಂದು ಕೇಳಿದಳು. ಅವಳ ಮೊದಲ ಪ್ರಶ್ನೆಗೆ ಅವನು ಉತ್ತರಿಸುತ್ತಾ “ಶಾರ್ಟ್ ಸರ್ಕ್ಯೂಟ್ ಮೇಡಂ. ಅಂಗಡಿಯಲ್ಲಿ ಇದ್ದ ಎಲ್ಲರೂ ಅದಕ್ಕೆ ಸಿಕ್ಕಿ ಸುಟ್ಟು ಹೋಗಿರಬೇಕು. ಆ ಮುದುಕ ಕೂಡ ಸತ್ತಿರಬೇಕು” ಎಂದ ನಿರ್ಲಿಪ್ತವಾಗಿ. ತನ್ನ ಬಾಯಲ್ಲಿ ಇದ್ದ ಅಡಿಕೆ ಮೆಲ್ಲುತ್ತಾ. ಸುಟ್ಟು ಹೋದ ಅಂಗಡಿಯಿಂದ ವಿಚಲಿತನಾಗದೆ ತನ್ನ ಗಿರಾಕಿಗೆ ಹಣ್ಣುಗಳನ್ನು ಕೊಟ್ಟು ಅವನಿಂದ ಹಣ ಪಡೆದು ಎಣಿಸುತ್ತಿದ್ದ.

ಶಾಹೀನ ಅರ್ಧ ತೆಗೆದಿದ್ದ ಅಂಗಡಿಯನ್ನು ನೋಡಿ ಅವರು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಲಿಲ್ಲವೆ ಎಂದು ಕೊಂಡಳು. ಎದುರಿದ್ದ ಹಣ್ಣಿನ ಅಂಗಡಿಯವನಿಗೆ ಬೆಂಕಿಬಿದ್ದಾಗ ಏನಾದರೂ ಸಹಾಯ ಮಾಡಿದೆಯ ಅಥವಾ ಅಗ್ನಿ ಶಾಮಕ ದಳವನ್ನಾದರೂ ಕರೆದೆಯಾ ಎಂದು ಕೇಳಬೇಕು ಎಂದುಕೊಂಡಳು. ವಿಚಿತ್ರವಾದ ಸಂಕಟವಾಗಿ ವಾಂತಿ ಬರುವ ಹಾಗೆ ಆಯಿತು. ಬಾಯಿಗೆ ಬಂದ ಮಾತುಗಳನ್ನು ನುಂಗಿಕೊಂಡು ಬಿಸಿಲಿನಲ್ಲಿ ಮನೆಯ ಕಡೆಗೆ ನಡೆದಳು.