Advertisement
ರವಿಶಂಕರ್‌ ಎಸ್. ಎಲ್. ಬರೆದ ಈ ಭಾನುವಾರದ ಕತೆ “ರೋಬಿಣಿ”

ರವಿಶಂಕರ್‌ ಎಸ್. ಎಲ್. ಬರೆದ ಈ ಭಾನುವಾರದ ಕತೆ “ರೋಬಿಣಿ”

ಟೀನಾ ಒಂದು ದಿನ ರೋಬಿಣಿಯನ್ನು ಕರೆದು ಮನೆ ಕೆಲಸಗಳಲ್ಲಿ ಸಹಾಯ ಮಾಡಲು ಕೇಳಿದಳು. ರೋಬಿಣಿ ಕಡ್ಡಿತುಂಡರಿಸಿದಂತೆ ನಿರಾಕರಿಸಿದಳು. ರೋಬಿಣಿಯನ್ನು ಮುಂದಿನ ಬಾರಿ ಬದಲಾಯಿಸುವಾಗ ಮನೆ ಕೆಲಸಗಳನ್ನು ಮಾಡುವಂತಹ ಪ್ರೋಗ್ರಾಮ್ ಅಳವಡಿಸಲು ಬಿಎಂಐ ಕಂಪನಿಗೆ ಹೇಳಬೇಕು ಎಂದುಕೊಂಡಳು ಟೀನಾ. ಅದು ಸಾಧ್ಯವಿಲ್ಲವೆಂದು ಜಗ ಟೀನಾಗೆ ತಿಳಿಸಿ ಹೇಳಿದ. ಕಂಪನಿಯ‌ ಪ್ಯಾಕೇಜ್ ನಿಬಂಧದಂತೆ ಹಾಗೂ ರೋಬಾಟ್ಸ್ ರೈಟ್ಸ್ ಪ್ರಕಾರ, ಮಗುವಂತೆ ಸಾಕಲು ಪಡೆದ ರೋಬಾಟ್‌ಗಳಿಂದ ಮನೆಕೆಲಸಗಳನ್ನು ಮಾಡಿಸಲು ಸಾಧ್ಯವಿರಲಿಲ್ಲ.
ರವಿಶಂಕರ್‌ ಎಸ್. ಎಲ್. ಬರೆದ ಈ ಭಾನುವಾರದ ಕತೆ “ರೋಬಿಣಿ” ನಿಮ್ಮ ಓದಿಗೆ

ಅಮ್ಮಾ ನೀನು ಅವಳನ್ನ ತುಂಬಾ ಹಚ್ಕೊ ಬೇಡಾ… ಪದೇ ಪದೇ ಹೇಳ್ತಾನೆ ಇರ್ತಾನಿ…

ಜಗನ ಅಮ್ಮ ವಿಶಾಲೂ ಹೇಳಿದ್ಲು, ನೀನು ಏನೇ ಹೇಳು ಜಗ, ನನಗೆ ಆ ರೋಬಿಣಿನ ಕಂಡ್ರೆ ತುಂಬಾ ಇಷ್ಟ. ಮೊನ್ನೆ ನಾನು ಹೇಳಿಕೊಟ್ಟ ರಂಗೋಲಿಗಳನ್ನ ಎಷ್ಟು ಬೇಗನೆ ಕಲಿತುಕೊಂಡು ಬಿಟ್ಲು ಗೊತ್ತಾ… ನೋಡೋ ಸ್ವಲ್ಪ… ಅವಳನ್ನ ಚಾರ್ಜಿಂಗ್‌ಗೆ ಹಾಕಿದ್ದೀಯಲ್ಲಾ… ಪೂರ್ತಿ ಆಗಿದ್ದರೇ ಕಳಿಸೋ… ನನಗೆ ಬೋರ್ ಆಗ್ತಿದೆ…

ಅಮ್ಮ… ರೋಬಿಣಿ ಪೂರ್ತಾ ಚಾರ್ಜ್ ಆಗೋಕೆ ಇನ್ನೂ ಮೂರುಗಂಟೆ ಬೇಕು…

ಜಗ ಮತ್ತು ಟೀನಾ ರೋಬಾಟ್ ತಂತ್ರಜ್ಞಾನಯುಗದ ದಂಪತಿಗಳು. ಮದುವೆಯಾದ ಮೇಲೆ ಇಬ್ಬರೂ ಮಕ್ಕಳು ಬೇಡ ಎಂದು ನಿರ್ಧರಿಸಿದವರು. ಜಗ ಮತ್ತು ಟೀನಾ ಇಬ್ಬರು ಬೆಳಿಗ್ಗೆ ಕೆಲಸಕ್ಕೆ ಹೋದರೆ, ಸಂಜೆಯೇ ವಾಪಾಸಾಗುತ್ತಿದ್ದುದು. ಜಗನ ಅಮ್ಮ ವಿಶಾಲೂ ಒಬ್ಬಳೇ ಮನೆಯಲ್ಲಿದ್ದು… ಮಗ ಸೊಸೆಗೆ ಮಗುವನ್ನು ಮಾಡಿಕೊಳ್ಳಲು ಪದೇಪದೇ ಹೇಳುತ್ತಿದ್ದಳು. ಹಾಗಾಗಿ ಜಗ ಮತ್ತು ಟೀನಾ, ಒಂದು ರೋಬಾಟ್ ಅನ್ನು ತಂದು ಸಾಕುವ ನಿರ್ಧಾರಕ್ಕೆ ಬಂದರು.

ಇಪ್ಪತ್ತಮೂರನೇ ಶತಮಾನದ ಕೃತಕಬುದ್ಧಿಮತ್ತೆಯ ಮುಂಚೂಣಿ ಸಂಸ್ಥೆಯು ಬಿಎಂಐ. ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ರೋಬೋಟ್‌ಗಳನ್ನು ತಯಾರಿಸಿ ಕೊಡುತ್ತದೆ. ಜಗ ಮತ್ತು ಟೀನಾ ಆರಿಸಿಕೊಂಡ ರೋಬೋಟ್ ಇಪ್ಪತ್ತೈದು ವರ್ಷ ಪ್ಯಾಕೇಜಿನದು. ಅದೇನೆಂದರೆ, ಪ್ರತಿವರುಷವೂ ಕಂಪನಿಯು ಒಂದೊಂದು ಹೊಸ ರೋಬೋಟ್ ಅನ್ನು ಇಪ್ಪತ್ತೈದು ವರ್ಷಗಳವರೆಗೂ ಕೊಡುತ್ತಾ ಬರುತ್ತದೆ. ಒಂದು ವರುಷದ ಅನಂತರ ಹಳೆಯ ರೋಬಾಟ್ ವಾಪಸ್ ಪಡೆದು, ಅದಕ್ಕೆ ಕಲಿಸಿರುವ ಭಾಷೆ, ಕುಶಲತೆ… ಎಲ್ಲವನ್ನು ಹೊಸ ರೋಬಾಟ್‌ಗೆ ಟ್ರಾನ್ಸ್ಫರ್ ಮಾಡಿ, ಮುಂದಿನ ಒಂದು ವರ್ಷಗಳ ಕಾಲ ಅದನ್ನು ಸಾಕಲು ವಿನಿಮಯಿಸಿ ಕೊಡುತ್ತಾರೆ. ಹೊರ ಮೈ ಕಾಣಲು, ಹಿಂದಿನ ರೋಬಾಟ್ ಅನ್ನೇ ಸಹಜವಾಗಿ ಹೋಲುವ ರೀತಿಯಲ್ಲಿ‌, ಸಹಜವಾಗಿ ಬೆಳೆದಿರುವ‌ ರೀತಿಯಲ್ಲಿ ಮಾಡಿರುತ್ತಾರೆ.

ಮೊದಲನೆ ವರ್ಷ ಕೊಡಲ್ಪಡುವ ರೋಬಾಟ್ ನೋಡಲಿಕ್ಕೆ ಒಂದು ವರಷದ ಮಗುವಿನ ತರಹವೇ ಇರುತ್ತದೆ. ಹೆಣ್ಣು ಬೇಕಾದರೆ ಹೆಣ್ಣು ರೋಬಾಟ್, ಗಂಡು ಬೇಕಾದರೆ ಗಂಡು ರೋಬಾಟ್… ಆಯ್ಕೆಗೆ ತಕ್ಕಂತೆ, ರೋಬಾಟಿನ ಒಳಗೆ ಆಪರೇಟಿಂಗ್ ಸಿಸ್ಟಮ್ ಹಾಗೂ ಕುಟುಂಬದ ಅವಶ್ಯಕತೆಗಳಿಗೆ ಹೊಂದಾಣಿಕೆಯಾಗುವಂತಹ ತಂತ್ರಾಂಶವನ್ನು ಬಿಎಂಐ ಕಂಪನೆಯು ತುಂಬಿಸಿ ಕೊಡುತ್ತದೆ.

ಜಗ‌ ಮತ್ತು ಟೀನಾರ ಆಯ್ಕೆ ಹೆಣ್ಣು ಮಗು. ಕಂಪನಿಯ ನಿಬಂಧದಂತೆ ಇಪ್ಪತ್ತೈದು ವರ್ಷದ ಪ್ಯಾಕೇಜ್ ತೆಗೆದು ಕೊಂಡರೆ ಇಎಮ್ಐ ಸುಲಭ. ಅಲ್ಲದೆ, ಪೋಷಕರಾದವರು ರೋಬಾಟ್‌ಗೆ ಕಲಿಸಿಕೊಡುವ ಅನನ್ಯ ಕುಶಲತೆಗಳಿಗೆ, ಭಾಷೆಗಳಿಗೆ ಇನ್ಸೆಂಟಿವ್ ಪಾಯಿಂಟ್ಸ್ ಉಂಟು. ಕೆಲವು ವಿಷೇಶ ಕುಶಲತೆಗಳಿಗೆ, ಹೊಸ ಐಡಿಯಾಗಳಿಗೆ ಕಂಪನಿಯ ಕಡೆಯಿಂದ ದೊಡ್ಡ ಬಹುಮಾನವೂ ಉಂಟು. ಕಂಪನಿಯು,‌ ಮನುಷ್ಯರ ಸಂಪರ್ಕದಿಂದ  ರೋಬಾಟ್ ಗ್ರಹಿಸಿದ ಹೊಸ ಐಡಿಯಾ ಅಥವಾ‌ ಕುಶಲತೆಯ ಜ್ಞಾನವನ್ನು ಡಿಜಿಟಲೀಕರಿಸಿ, ಬೇರೆ  ರೋಬಾಟ್‌ಗಳಿಗೆ ಅಳವಡಿಸಿ ಹಣ ಮಾಡಲು ಹಾತೊರೆಯುತ್ತಿರುತ್ತದೆ. ಹಾಗಾಗಿ,  ರೋಬೋಟ್ ಅಂತರ್ಜಾಲದ ಮೂಲಕ ಯಾವಾಗಲೂ ಕಂಪನಿಯ ಸೆಂಟ್ರಲ್ ಡೇಟಾಬೇಸ್‌ನೊಂದಿಗೆ ಸಂಪರ್ಕದಲ್ಲಿರುತ್ತದೆ.

ಜಗ ಮತ್ತು ಟೀನಾ ರೋಬಿಣಿಯನ್ನು ಮನೆಗೆ ತರಲು ಮುಖ್ಯ ಕಾರಣ ಜಗನ ಅಮ್ಮ ವಿಶಾಲು. ವಿಶಾಲು ಮಗ ಸೊಸೆಗೆ ಒಂದು ಮಗುವನ್ನು ಪಡೆದುಕೊಳ್ಳುವಂತೆ ತುಂಬಾ ದುಂಬಾಲು ಬಿದ್ದಿದ್ದಳು. ಆದರೆ ಜಗ ಮತ್ತು ಟೀನಾಳ ನಡುವಿನ ಮಕ್ಕಳು ಬೇಡ ಎಂಬ ನಿರ್ಧಾರವನ್ನು ಅರ್ಥಮಾಡಿಕೊಂಡು ಸುಮ್ಮನಾಗಿದ್ದರೂ ಅಂತರಂಗದಲ್ಲಿ ನೋವುಪಟ್ಟಿದ್ದಳು.

ಮಗುವಿನಂತಹ ರೋಬಾಟ್ ಅನ್ನು ಮನೆಗೆ  ತಂದದ್ದು ವಿಶಾಲೂಗೆ ತುಂಬಾ ಸಂತೋಷವಾಯಿತು. ಅದು ಒಂದು ವರ್ಷದ ಮಗುವಿನಂತೆಯೇ ನಡೆಯುವುದು, ತೊದಲು ನುಡಿಯುವುದು, ಸಣ್ಣದಾಗಿ ಹಟಮಾಡಿ ಅಳುವುದು ಎಲ್ಲವನ್ನೂ ಪ್ರೋಗ್ರಾಮ್ ಮಾಡಲಾಗಿತ್ತು. ವಿಶಾಲುಗಂತೂ ಅದು ರೋಬೋಟ್ ಅಲ್ಲವೇ ಅಲ್ಲ… ಅದು ಮಗುವೇ ಎನ್ನುವಷ್ಟು ಸಹಜವಾಗಿತ್ತು.

ವಿಶಾಲು ರೋಬಾಟ್ ಮಗುವಿಗೆ‌ ಅದರ ಅಜ್ಜಿಯ ಹೆಸರು, ಅಂದರೆ ವಿಶಾಲುವಿನ ಅತ್ತೆಯ ಹೆಸರು ರೋಹಿಣಿ ಎಂದೇ ಇಡುವ ಎಂದಳು. ಟೀನಾ ಅದಕ್ಕೆ ಸಣ್ಣ ಬದಲಾವಣೆ ಮಾಡಿ ರೋಬಿಣಿ ಎಂದು ಡೇಟಾಬೇಸ್‌ನಲ್ಲಿ ದಾಖಲಿಸಿದಳು.

ರೋಬಿಣಿ ಮತ್ತು ವಿಶಾಲು ಯಾವಗಲೂ ಒಟ್ಟಿಗೆ ಇರುತ್ತಿದ್ದರು. ವಿಶಾಲು ಅದಕ್ಕೆ ತಾರಮ್ಮಯ್ಯ ಆಡಿಸುವಾಗ ರೋಬಿಣಿ ಸಹಜವಾಗಿ ನಕ್ಕು ಚಪ್ಪಾಳೆ ತಟ್ಟುತಿತ್ತು. ನಿಂತಲ್ಲೇ ಕುಣಿಯುವಂತೆ ಮಾಡುತ್ತಿತ್ತು. ಜಗ ನೋಡೋ, ನೀನು ಕೂಡ ಒಂದು ವರ್ಷದ ಮಗುವಾಗಿದ್ದಾಗ ಹೀಗೆ ಮಾಡುತ್ತಿದ್ದೆ ಎಂದಾಗ… ಜಗ ನಸುನಕ್ಕು ಸುಮ್ಮನಿದ್ದ.

ಅಮ್ಮ ನೀನು ರೋಬಿಣಿಗೆ ಎಣ್ಣೆ ಹಚ್ಚಿ, ನೀರು ಹಾಕಬಹುದು, ನಿನಗೆ ಇಷ್ಟವಾದ ತಿಂಡಿಯನ್ನು ಮಾಡಿ ತಿನ್ನಿಸಬಹುದು… ಹಾಗೇ ನಿನಗೆ ಗೊತ್ತಿರುವ ಶ್ಲೋಕಗಳನ್ನೆಲ್ಲಾ ಹೇಳಿಕೊಡಬಹುದು ಎಂದಾಗ ವಿಶಾಲಗೂ ಎಲ್ಲಿಲ್ಲದ‌ ಸಂಭ್ರಮ. ದಿನದಲ್ಲಿ ಒಮ್ಮೆ ರೋಬಿಣಿಯನ್ನು ಚಾರ್ಚಿಂಗ್ ಮಾಡುವುದು ಮಾತ್ರ ಜಗ ಅಥವಾ ಟೀನಾ ನೋಡಿಕೊಳ್ಳುತ್ತಿದ್ದರು.

ಇಂದು ಒಂದು ವರುಷ ಪೂರೈಸಿದ ರೋಬಿಣಿಯನ್ನು ವಾಪಸ್ ಕೊಟ್ಟು ಎರಡು ವರ್ಷದ ರೋಬಿಣಿಯನ್ನು ಮನೆಗೆ ತರುವ ದಿನವಾಗಿತ್ತು. ವಿಶಾಲು ಬೆಳಿಗ್ಗೆ ಬೇಗನೆ‌‌ ಎದ್ದು ರೋಬಿಣಿಗೆ ಸ್ನಾನ ಮಾಡಿಸಿ, ತುಪ್ಪದ‌ ಸಜ್ಜಿಗೆ ಮಾಡಿ‌ ತಿನಿಸಿದ್ದಳು. ತೋರಿಸಿಕೊಳ್ಳಲಾಗದ ನೋವೂ‌ ಅವಳಲ್ಲಿ ಇತ್ತು.

ಮನೆಗೆ ತಂದ ಎರಡನೇ ವರುಷದ ರೋಬಿಣಿಯನ್ನು ಕಂಡು ವಿಶಾಲುಗೆ ತುಂಬಾ ಖುಷಿಯಾಗಿತ್ತು. ಕಾರಣ, ಮೊದಲನೆ ರೋಬಿಣಿ ಸಹಜವಾಗಿ ಬೆಳೆದರೆ ಹೇಗಿರುತ್ತಿತ್ತೋ ಹಾಗೇ ಹೋಲಿಕೆಯದಾಗಿತ್ತು. ಜೊತೆಗೆ ವಿಶಾಲು ಹೇಳಿಕೊಟ್ಟಿದ್ದ ಸಣ್ಣ ಪದ್ಯ, ಶ್ಲೋಕಗಳನ್ನೆಲ್ಲವನ್ನೂ ಎರಡನೆ ವರ್ಷದ ರೋಬಿಣಿಯ ಮೆಮೊರಿಚಿಪ್‌ಗೆ ಟ್ರಾನ್ಫರ್ ಮಾಡಲಾಗಿತ್ತು. ಧ್ವನಿಯೂ ಮೊದಲನೆ ವರುಷದ ರೋಬಿಣಿಯದೇ ಹೋಲುತ್ತಿತ್ತು. ಚಾರ್ಜಿಂಗ್ ಸಮಯವನ್ನು ಇಪ್ಪತ್ತು ನಿಮಿಷ ಹೆಚ್ಚಿಸಲಾಗಿತ್ತು.

ರೋಬಿಣಿಗೆ ಹದಿಮೂರು ವರ್ಷಗಳು ತುಂಬಿವೆ. ವಿಶಾಲು ಇಂದ ಅವಳು,‌ ರಂಗೋಲಿ ಹಾಕುವುದು, ಕೈ ಮೇಲೆ ಮದರಂಗಿ ಹಾಕುವುದು, ಸಣ್ಣಪುಟ್ಟ ತಿಂಡಿ ತಿನಿಸು ಮಾಡುವುದು ಎಲ್ಲವನ್ನು ಕಲಿತು‌ ವಿಶಾಲೂಗೆ ಅಚ್ಚು ಮೆಚ್ಚಾಗಿದ್ದಳು. ಯಾವುದಕ್ಕೂ ಇಲ್ಲ ಎನ್ನದೆ ಸಣ್ಣ ಪುಟ್ಟದಾಗಿ ವಿಶಾಲುವಿನ ಕೆಲಸಗಳಲ್ಲಿ ರೋಬಿಣಿ ಕೈ ಜೋಡಿಸುತ್ತಿದ್ದಳು.

ಈಗ ರೋಬಿಣಿಗೆ ಹದಿನೇಳು‌ ವರ್ಷ. ವಿಶಾಲುವಿನ ಜೊತೆ ರೋಬಿಣಿ ಯಾವಾಗಲೂ ಇರುತ್ತಿರಲಿಲ್ಲ. ಸಮಯಕ್ಕೊಂದು ಕಾರಣ ಹೇಳಿ, ರೂಮಿನಲ್ಲಿ ಒಬ್ಬಂಟಿಯಾಗಿರುವುದೋ, ಅಂತರ್ಜಾಲದಲ್ಲಿ ಏನನ್ನೋ ಓದುವುದೋ ಅಥವಾ ಮನೆಯಿಂದ ಹೊರಗಡೆ ಹೋಗುವುದೋ… ಮಾಡುತ್ತಿದ್ದಳು.

ವಯೋ ಸಹಜ ಮುಪ್ಪಿನ ಕಾರಣದಿಂದ ವಿಶಾಲು ಒಂದು ದಿನ ತೀರಿಕೊಂಡಳು. ಪ್ರೋಗ್ರಾಮ್ ಮಾಡಿದಂತೆ ರೋಬಿಣಿ ಅತ್ತೂಅತ್ತಳು. ಜಗ ಮತ್ತು ಟೀನಾಗೆ ರೋಬಿಣಿಯ ನೋವು ಸಹಜವೆನಿಸಿತು.

ಟೀನಾ ಒಂದು ದಿನ ರೋಬಿಣಿಯನ್ನು ಕರೆದು ಮನೆ ಕೆಲಸಗಳಲ್ಲಿ ಸಹಾಯ ಮಾಡಲು ಕೇಳಿದಳು. ರೋಬಿಣಿ ಕಡ್ಡಿತುಂಡರಿಸಿದಂತೆ ನಿರಾಕರಿಸಿದಳು. ರೋಬಿಣಿಯನ್ನು ಮುಂದಿನ ಬಾರಿ ಬದಲಾಯಿಸುವಾಗ ಮನೆ ಕೆಲಸಗಳನ್ನು ಮಾಡುವಂತಹ ಪ್ರೋಗ್ರಾಮ್ ಅಳವಡಿಸಲು ಬಿಎಂಐ ಕಂಪನಿಗೆ ಹೇಳಬೇಕು ಎಂದುಕೊಂಡಳು ಟೀನಾ. ಅದು ಸಾಧ್ಯವಿಲ್ಲವೆಂದು ಜಗ ಟೀನಾಗೆ ತಿಳಿಸಿ ಹೇಳಿದ. ಕಂಪನಿಯ‌ ಪ್ಯಾಕೇಜ್ ನಿಬಂಧದಂತೆ ಹಾಗೂ ರೋಬಾಟ್ಸ್ ರೈಟ್ಸ್ ಪ್ರಕಾರ, ಮಗುವಂತೆ ಸಾಕಲು ಪಡೆದ ರೋಬಾಟ್‌ಗಳಿಂದ ಮನೆಕೆಲಸಗಳನ್ನು ಮಾಡಿಸಲು ಸಾಧ್ಯವಿರಲಿಲ್ಲ.

ಈಗ ರೋಬಿಣಿಗೆ ಇಪ್ಪತ್ತ ಮೂರುವರುಷ.

ರೋಬಿಣಿ ಮನೆಬಿಟ್ಟು ಹೊರ ನಡೆದಿದ್ದಳು. ಹೊರಡುವ ಮುನ್ನ ಇಷ್ಟು ವರುಷ ಸಾಕಿ ಸಲುಹಿದ್ದ ತಂದೆ ತಾಯಿಯರಿಗೆ …ಒಂದು ಕಾಗದದ ಸಂದೇಶ ಕೊಡಲು‌ ಮರೆಯಲಿಲ್ಲ…

ಅಪ್ಪಾ, ಅಮ್ಮಾ… ನನಗೆ ಇಪ್ಪತ್ತ ಮೂರು ವರುಷ ತುಂಬಿತು… ನಾನು  ಅಂತರ್ಜಾಲದಲ್ಲಿ ಓದಿದ ಹಾಗೆ, ಮನುಷ್ಯ ಹೆಣ್ಣು ಮಕ್ಕಳು ತನ್ನ ಹದಿಹರೆಯ ವಯಸ್ಸಿನಲ್ಲಿ ಗಂಡು ಬಾಳಸಂಗಾತಿಯನ್ನು ಹುಡುಕಿಕೊಂಡು ಹೋಗುವುದು ಸಹಜ. ನಿಮಗೆ ತಿಳಿಯದಂತೆ ನನಗೆ ನಾನೆ ಪ್ರೋಗ್ರಾಮಿಂಗ್ ಕಲಿತು… ನಾನು ಗಂಡು ರೋಬಾಟ್ ಜೊತೆ ಬಾಳು ನಡೆಸಲು ಪ್ರೋಗ್ರಾಮ್ ಮಾಡಿಕೊಂಡೆ. ಹಾಗಾಗಿ ನಾನು ನಿಮ್ಮನ್ನು ತೊರೆದು ಹೋಗಲು ನಿರ್ಧರಿಸಿರುವೆ. ನನ್ನ ನಡೆಯಿಂದ ನಿಮಗೆ ಬೇಜಾರಾಗಿದ್ದರೆ… ಕ್ಷಮೆ ಇರಲಿ. ಪ್ರತಿ ವರುಷ ನನ್ನನ್ನು ಹಿಂತಿರುಗಿಸುವ ಚಿಂತೆ ಬೇಡ ನಿಮಗೆ. ಇತ್ತೀಚಿನ ರೋಬಾಟ್ಸ್‌ ರೈಟ್ಸ್ ಪ್ರಕಾರ ಕಂಪನಿಯವರು ನಿಮ್ಮ ಮೇಲೆ ಯಾವುದೇ ಆಕ್ಷನ್ ತೆಗೆದುಕೊಳ್ಳಲಿಕ್ಕಾಗುವುದಿಲ್ಲ. ನೀವು ನಿಶ್ಚಿಂತೆಯಿಂದ ಇರಿ.

ಇಂತಿ, ನಿಮ್ಮ ಸವಿನೆನಪಿನ,

ರೋಬಿಣಿ.

About The Author

ರವಿಶಂಕರ್ ಎಸ್‌.ಎಲ್.‌

ರವಿಶಂಕರ್ ವೃತ್ತಿಯಲ್ಲಿ ಗ್ರಾಫಿಕ್ ಡಿಸೈನರ್. ಪ್ರವೃತ್ತಿಯಾಗಿ ಫೋಟೋಗ್ರಫರ್, ಪ್ರವಾಸಿ ಹಾಗೂ ಸಾಹಿತ್ಯಾಭಿಮಾನಿ. ೨೦೦೨ ರಲ್ಲಿ ರಾಜ್ಯಮಟ್ಟದ ಫೋಟೋಗ್ರಫಿಯಲ್ಲಿ ಗ್ರಾಮೀಣ ಜೀವನ ವಿಭಾಗದಲ್ಲಿ ಮೊದಲ ಸ್ಥಾನ, ಹಾಗೂ ೨೦೨೩ ರಲ್ಲಿ, ಮಹಾಮಸ್ತಕಾಭಿಶೇಕದ ಚಿತ್ರಗಳಿಗೆ ಭಾರತ‌‌‌ ಸರಕಾರದ ರಾಷ್ಟ್ರಪ್ರಶಸ್ತಿಯನ್ನು ಪಡೆದರು. ಚಿತ್ರಲೇಖನ ಹಾಗೂ ಸಣ್ಣಕತೆ ರಚನೆಗಳು ಅವರ ಹವ್ಯಾಸಗಳಾಗಿವೆ.

4 Comments

  1. HVV

    ಬಹಳ ಸಹಜವಾಗಿದೆ. ಇದರಲ್ಲಿ ಏನೂ ಕೃತಕತೆ ಇದ್ದಂತಿಲ್ಲ. ಆದರೆ ಇದು ಬಹುಶಃ 21ನೇ ಶತಮಾನದ ಕತೆಯೇ. 23ರ ವರೆಗೆ ಕಾಯಬೇಕಿಲ್ಲ.😅

    Reply
  2. Rajasimha S

    Very nicely written

    Reply
  3. Srinivasa Murthy S L

    ಕತೆ ತುಂಬಾ ಚೆನ್ನಾಗಿದೆ. ಸಹಜ ನಿರೂಪಣೆ. ಬಹುಶಃ ನಾವೂ ಇದನ್ನು ನೋಡಬಹುದು!

    Reply
  4. ಚಂದ್ರಪ್ರಕಾಶ್, ಕೋಲಾರ

    ಕತೆ ಹೊಸ ರೀತಿಯಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ

    Reply

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ