ಬದುಕ ಕನ್ನಡಿ

ತೊಳೆದಾಗೊಮ್ಮೆ ಅಳಿಸಿ‌ ಹೋಗುತ್ತವೆ
ಇರಾನಿ ಚಾಯ್‌ ವಾಲಾನ್ ಅಂಗಡಿಯ
ಗಾಜಿನ ಗ್ಲಾಸಿಗಂಟಿದ ಜನರ ತುಟಿಯ
ಗುರುತುಗಳು‌..
ಹಳೆಯದೊಂದು ಬಣ್ಣವೇ ಮಾಸಿದ
ತಗಡಿನ ಬಕೆಟ್ ಒಂದರಲ್ಲಿ ಗಲಗಲ
ಸದ್ದಿನೊಂದಿಗೆ.

ಯಾರ್‍ಯಾರದೋ ಅಂತರಂಗ ಬಹಿರಂಗ
ಒಳಿತು‌ – ಕೆಡಕುಗಳು
ಎಂದೂ ತೀರದ ನೋವಿನ ಸರಕುಗಳು
ಬಚ್ಚಿಟ್ಟುಕೊಂಡು- ಬಿಚ್ಚಿಟ್ಟ ಕಥೆಗಳು
ಹಲ್ಕಟ್ಟಾಗಿ ಬೈಯುವ ಬೈಗುಳಗಳು
ತುಟಿಯಂಚಿಗೆ ಬಂದು ಹೇಳಲೊಲ್ಲದೇ
ಹೇಳಿದ ಮಾತುಗಳೆಲ್ಲವೂ ಆ ಬಕೆಟ್
ಸೇರಿಕೊಳ್ಳುತ್ತವೆ ಸಮನಾಂತರವಾಗಿ.

‘ಸತ್ಯ- ಸುಳ್ಳುಗಳೆರಡು ಒಂದೆ‌ ತಾಯಿ ಮಕ್ಕಳು’
ಎನ್ನುತ್ತಿರುತ್ತಾನೆ ತರುಣ ಚಾಯ್ ವಾಲ್
ತನ್ನ ಪುಟಾಣಿ ಚಾಯ್ ಅಂಗಡಿಯ ಕೋರ್ಟಿನಲ್ಲಿ
ಭಯವಿರದೆ ಅಪರಾಧಿ ಗುಟ್ಟು ಬಿಚ್ಚಿರುತ್ತಾನೆ
ಕರಿ ಕೋಟಿನ ಎದುರಿಗೆ ‘ಏಕ್ ಬಾರ್ ಬಚಾವೋ’
ಅನ್ನುತ್ತಲೇ ಆರಿದ ಚಾ ಸರ್ರನೇ ಒಳಗಿಳಿಸುತ್ತಾನೆ
ಮತ್ತೊಬ್ಬ.
ಏನೂ ಮಾಡದೆಯೂ ಲೋಕಮಾತಿಗೆ ಕಟಕಟೆಗೆ
ಬಂದವನೊಬ್ಬ ಆರಿದ ಚಾಯ್ ಮೇಲಿನ ಕೆನೆ ಊದಿ
ದಕ್ಕದ ಸ್ವಾದಕ್ಕೂ ಶಪಿಸುತ್ತಾನೆ.

ಹೈಸ್ಕೂಲೂ ಓದದ ಚಾಯ್ ಹುಡುಗನಿಗೆ
ವಿಜ್ಞಾನಕಿಂತ ಲೋಕಜ್ಞಾನ ಬಲು ರುಚಿಸುತ್ತದೆ
ಒಮ್ಮೊಮ್ಮೆ ಯಾರಿಗೋ ಅವನು ಓಶೋ ಆಗುತ್ತಾನೆ
ದಾರಿ ತಪ್ಪಿ ಬಂದವರ ಕೈಗೊಂದು ಚಾ ಇಟ್ಟು
ದಿಕ್ಕು ತೋರಿಸುತ್ತಾನೆ…
ಚಾದ ಮೇಲಿನ ಹೊಗೆಯಂತೆಯೇ ಬಂದವರು
ಇವನ ಕೈ ಬೆರಳಿನ ನೇರಕ್ಕೆ ಹೋಗಿ ಎತ್ತಲೋ ತಿರುಗಿ ಮರೆಯಾಗುತ್ತಾರೆ
ಒಳಗೊಳಗೇ ಇವನಿಗೆ ಎಂಥದೋ ಖುಷಿ…

ಇಡೀ ಮೈಗೆ ಮಸಿ ಅಂಟಿಸಿಕೊಂಡೇ ಬರುವ
ಗ್ಯಾರೇಜಿನ ಕಾಸಿಂ ಚಾಚಾ
ಮನೆಯ ಅಂಗಳ ಗುಡಿಸಿದಷ್ಟೇ ನೆಮ್ಮದಿಯಲಿ
ಈ ಬೀದಿಯ ಕಸ ಗೂಡಿಸುವ ಗಂಗು ಬಾಯೀ
ಬೆಳ್ಳಂಬೆಳಿಗ್ಗೆ ಟ್ರಕ್ಕು ನಿಲ್ಲಿಸಿ ಚಾ ಕುಡಿಯುವ
ಪಾಂಚಾಲಾ
ಇಳಿ‌ ಸಂಜೆಯಲ್ಲಿ ಪ್ರತ್ಯಕ್ಷಳಾದ ದೇವತೆಯಂತೆ
ಕ್ಷಣಾರ್ಧದಲ್ಲಿ ಮಾಯವಾಗುವ ಆ ಹುಡುಗಿ.
ಗೂತ್ತಿದ್ದೂ – ಇಲ್ಲದೆಯೂ ತನ್ನವರು ಅನ್ನಿಸುತ್ತಾರೆ
ಅವನಿಗೆ.

ಮುಗಿದ ಜಾತ್ರೆಯ ಖಾಲಿ ಟೆಂಟಿನಂತೆ
ರಥ ಬೀದಿಯ ರಾತ್ರೀಲಿ ಚಾಯ್ ಅಂಗಡಿ ನಿಂತಿರುತ್ತದೆ
ದಿನದ ಆಯಾಸ ಹೊದ್ದುಕೊಂಡೇ
ನಿದ್ರೆಗಿಳಿಯುತ್ತಾನೆ ಚಾಯ್ ವಾಲ್
ಆ ರಾತ್ರೀಲಿ ಅವನ ದೇವತೆ ಕನಸೊಳಗೆ ಬಂದರೆ ಸಾಕು
ಮತ್ತೊಂದು ದಿನ ವಿವರಿಸಲಾಗ ಉತ್ಸಾಹ
ಅವನಲ್ಲಿ…

ರವಿ ಶಿವರಾಯಗೊಳ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ್ ತಾಲೋಕಿನ ಭೀವರ್ಗಿ ಗ್ರಾಮದವರು.
ವಿಜಯಪುರದಲ್ಲಿ ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜನಿಯರಿಂಗ್ ಓದಿದ್ದು, ಪ್ರಸ್ತುತ ಹುಟ್ಟೂರಿನಲ್ಲಿ ಕೃಷಿಯಲ್ಲಿ ತೊಡಗಿದ್ದಾರೆ.
ಕತೆ, ಕವಿತೆ ಇವರ ಇಷ್ಟದ ಬರಹ ಪ್ರಕಾರವಾಗಿದ್ದು, ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ