Advertisement
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹೊಸ ಅಂಕಣ “ಇನ್ನೊಂದು ಬದಿ” ಇಂದಿನಿಂದ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹೊಸ ಅಂಕಣ “ಇನ್ನೊಂದು ಬದಿ” ಇಂದಿನಿಂದ

ನಮ್ಮ ಪುರಾಣಗಳನ್ನು ಕೆದಕುತ್ತಾ ಹೋದರೆ ಇಂತಹ ಬಹಳಷ್ಟು ಮಾದರಿಗಳು ಸಿಗಬಹುದು. ಪ್ರತಿಯೊಬ್ಬರ ಪರಿಸ್ಥಿತಿಗಳು ಪ್ರತಿಯೊಬ್ಬರ ಋಣದ ಬೇರುಗಳು ಭಿನ್ನವಾಗಿರಬಹುದು. ಆದರೆ ಧರ್ಮಸಂಕಟದ ಆ ಉತ್ಕಟ ಕ್ಷಣಗಳಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ಖಂಡಿತವಾಗಿಯೂ ನಮ್ಮ ಬದುಕಿನ ಸಮಸ್ಯೆಗಳಿಗೂ ಒಂದು ದಾರಿಯನ್ನು ತೋರಿಸಬಹುದು. ಬದುಕಿನ ಅನಾಮಿಕ ತಿರುವಿನಲ್ಲಿ ಎದುರಾಗುವ ದ್ವಂದ್ವಗಳಲ್ಲಿ ಇಲ್ಲಿದ್ದು ಇಲ್ಲಿಲ್ಲ; ಅಲ್ಲಿದ್ದು ಅಲ್ಲಿಲ್ಲ ಅನ್ನುವಂತಾಗಿ ಇದು ಅಥವಾ ಅದು ಅನ್ನುವ ಆಯ್ಕೆ ಮಾಡಲೇಬೇಕಾದ ಪರಿಸ್ಥಿಗಳಲ್ಲಿ ನಮ್ಮ ಮುಂದೆ ಇವರು ಕೊಟ್ಟು ಹೋದ ಮಾದರಿಗಳಿವೆ. ಅಲ್ಲದಿದ್ದಲ್ಲಿ ಈಜು ಬಾರದೆ ಈಸು ಬೀಳುವುದೆ ಬದುಕು ಅನ್ನುವಂತಾಗುತ್ತದೆ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹೊಸ ಅಂಕಣ “ಇನ್ನೊಂದು ಬದಿ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

ಪದಕುಸಿಯೆ ನೆಲವಿಹುದು

ಊರೆ ತಪ್ಪಿಸಿ ಕಿತ್ತುನೆಟ್ಟ, ಕಾಯಿಬಿಟ್ಟ ಈ ಮರ ಇಲ್ಲಿ ಬೇರು ಬಿಟ್ಟಿತೇನು?

~ ಗೋಪಾಲಕೃಷ್ಣ ಅಡಿಗ

ಕೃಷ್ಣ ಬಂದು ಭೇಟಿಯಾಗಿ ಹೋದ ನಂತರ ಕರ್ಣನ ನಿದ್ದೆಯೇ ಹಾರಿಹೋಗಿದೆ. ಇಷ್ಟು ದಿನ ನಂಬಿಕೊಂಡು ಬಂದ ಬದುಕಿನ ನಂಬುಗೆಗಳಿಗೆ ಬಲವಾದ ಪೆಟ್ಟು ಕೊಟ್ಟಿದ್ದಾನೆ. ತಾನು ನೇರವಾಗಿ ಯುದ್ಧದಲ್ಲಿ ಭಾಗವಹಿಸುವುದಿಲ್ಲ ಅಂತ ಹೇಳಿದ್ದ ಕೃಷ್ಣ ಈ ರೀತಿಯ ಕಣ್ಣಿಗೆ ಕಾಣದ ಬಾಣಗಳನ್ನು ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಂಡಿದ್ದಾನೆ ಅನ್ನುವ ಅರಿವಿರಲಿಲ್ಲ. ಆ ಕುಂತಿಯ ಮಗ ನೀನು. ನಿಜವಾದ ಸಿಂಹಾಸನದ ವಾರಸುದಾರ ನೀನೇ. ಬಾ ನನ್ನ ಜೊತೆಗೆ. ನೀನೇ ಹಸ್ತಿನಾಪುರದ ರಾಜ. ಇಬ್ಬರೂ ನಿನ್ನನು ಓಲೈಸುವರು. ನಿನ್ನ ವೈಭವಕೆ ಆರು ಸರಿಯೈ ಕರ್ಣ ನಡೆ ನಡೆ ಧಾರುಣೀಪತಿಯಾಗು. ನೀನಿರೆ ವೈರವಿತ್ತಂಡಕ್ಕೆ ಬಳಿಕಿಲ್ಲ. ಇಂತಹ ಕಡು ವಿಲಾಸವ ಬಿಟ್ಟು ಕುರುಪತಿ ನುಡಿಸೆ ಜಿಯಾ ಹಸಾದವೆಂಬುದು ಕಷ್ಟ. ದುರ್ಯೋಧನನಲಿ ವೃಥಾ ಸೇವಕತನದಲಿಹುದು ನಿನಗೆ ಉಚಿತವಲ್ಲ ಅಂತ ಹೇಳಿ ಕೃಷ್ಣ ಭೇದದಲಿ ನಯವಾಗಿಯೇ ಹೊಕ್ಕಿರಿದಿದ್ದಾನೆ. ಅದೆಂತಹ ಸಮಯದಲ್ಲಿ ತನ್ನ ಹುಟ್ಟಿನ ಗುಟ್ಟನ್ನು ಹೇಳಿದ. ಈ ಗುಟ್ಟನ್ನು ಒಪ್ಪಿಕೊಂಡು ಹೊಸ ಮನುಷ್ಯನಾಗು ಅಂತ ಹೇಳುತ್ತಿದ್ದಾನೆ. ಅದೆಷ್ಟು ಸುಲಭ ಹೊರಗೆ ನಿಂತು ಹೀಗೆ ಹೇಳಿ ಬಿಡುವುದು? ತೊಳೆದಿಟ್ಟ ಬಾನಲ್ಲಿ ಬಿರುಗಾಳಿಗಳ ಜೀಜ ಮೊಳೆಯುತ್ತಲೇ ಇರುತ್ತದೆ.

ಕರ್ಣನ ಮನಸ್ಸಿನಲ್ಲಿ ಆ ಕ್ಷಣದಲ್ಲಿ ನಡೆಯುವ ತಾಕಲಾಟ ದ್ವಂದ್ವ ಮನಸ್ಸನ್ನು ಕಲಕಿಬಿಡುತ್ತವೆ. ಇದುವರೆಗೆ ಅಮ್ಮ ಅಂತ ಕರೆದು ಅವಳ ಲಾಲನೆ ಪಾಲನೆಯಲ್ಲಿಯೆ ತನ್ನ ಅರಿವಿನ ಬದುಕಿನ ಅಡಿಪಾಯವನ್ನು ಕಟ್ಟಿಕೊಂಡಿದ್ದ ಮನಸ್ಸಿಗೆ ಅವಳು ನನ್ನ ತಾಯಿಯಲ್ಲ ಅನ್ನುವ ಗುಟ್ಟು ತಿಳಿದ ತಕ್ಷಣ ಮನದಲ್ಲಿ ಒಂದು ಪ್ರಕ್ಷಬ್ದ ಸುನಾಮಿಯೇ ಎದ್ದಿರಬೇಕು. ಹೊಸತಾದ ಬದುಕಿನ ಒಂದು ಗುಟ್ಟು ಬಿಚ್ಚಿಕೊಳ್ಳುವಾಗ ಕುರುಡನಿಗೆ ಕಣ್ಣು ಬಂದು ಬೆಳಕಿಗೆ ಹೊಂದಿಕೊಳ್ಳುವಾಗ ಹೇಗೆ ಅವನು ಕಷ್ಟಪಡುತ್ತಾನೋ ಹಾಗಾಗಿದೆ ಕರ್ಣನ ಸ್ಥಿತಿ. ಈ ಹೊಸ ಸಂಬಂಧವನ್ನು ಅಪ್ಪಿಕೊಳ್ಳುವುದೇ ಎಲ್ಲಾ ಸಮಸ್ಯೆಗಳ ಪರಿಹಾರ ಅಂತ ಹೇಳುತ್ತಿದ್ದಾನೆ ಕೃಷ್ಣ. ಹೃದಯಕ್ಕೆ ಕಾವು ತಾವು ಇತ್ತು ಹೊತ್ತು ಆವರಣ ನಿರ್ಮಿಸಿ ನನ್ನ ತೊಂಡು ಚಿತ್ತಕ್ಕೆ ಗತಿ ಗುರಿ ಕೊಟ್ಟ ಅಪ್ಪ ಅಮ್ಮ ಹೆಂಡತಿ ಮಕ್ಕಳ ಬಿಟ್ಟು ಕೃಷ್ಣ ಹೇಳಿದ ಹಾಗೆ ಮಾಡುವುದೆ? ಯಾವ ಸಂಬಂಧ ದೊಡ್ಡದು? ರಕ್ತ ಸಂಬಂಧ? ಬದುಕು ಕಟ್ಟಿಕೊಟ್ಟ ಸಂಬಂಧ? ತಾನು ಇದುವರೆಗೆ ತನ್ನ ಶತ್ರುಗಳು ಅಂತ ಅನ್ನಿಸಿಕೊಂಡವರೆಲ್ಲಾ ತನ್ನ ಸೋದರರು ಅನ್ನುವ ಹೊಸ ಸಂಬಂಧದ ಸುಳಿಯಲ್ಲಿ ಕರ್ಣನ ಮನಸ್ಸು ಡೋಲಾಯಮಾನವಾಯಿತು. ಕೃಷ್ಣ ಹೇಳಿದ ಹಾಗೆ ಪಕ್ಷ ಬದಲಾಯಿಸುವುದೇ? ಅಥವಾ ತನಗೆಲ್ಲವನ್ನೂ ಕೊಟ್ಟ ಮಿತ್ರ ದುರ್ಯೋಧನನ ಪರ ನಿಂತು ಹುಟ್ಟಿನ ಗುಟ್ಟನ್ನು ತನ್ನಲ್ಲೇ ಉಳಿಸಿಬಿಡುವುದೆ?

ಕರ್ಣನ ತಳಮಳಗಳು ಅವನಿಗೆ ಒದಗಿದ ಪರಿಸ್ಥಿತಿಗಳು ಬೇರೆ ಯಾರನ್ನೂ ಕಾಡಿಲ್ಲವೇ ಅನ್ನುತ್ತಾ ಮನ್ನಸ್ಸು ಯೋಚಿಸುತ್ತಿತ್ತು. ಸೀತೆಯನ್ನು ರಾಮನಿಗೊಪ್ಪಿಸು. ಪತಿವ್ರತೆಯನ್ನು ಕೆಣಕಬೇಡ. ಪೆಣ್ ತನಗೆ ತಾನೊಲಿದು ಬರೆ, ಸೊಗಂ ಮೇಣರಂ, ಬರದಿರಲ್ ತವಿವುವೆರಡುಂ ಅಂತ ರಾವಣನಿಗೆ ಎಷ್ಟು ಬುದ್ಧಿವಾದ ಹೇಳಿದರೂ ರಾವಣ ಸೀತೆಯನ್ನು ಒಪ್ಪಿಸಲು ಕೇಳುವುದಿಲ್ಲ. ತನ್ನ ಮನಸ್ಸಿಗೆ ವಿರುದ್ಧವಾಗಿ ಅನ್ನದ ಋಣ ತಾಯ್ನಾಡಿನ ಋಣ ಅಂತ ಅಣ್ಣನಿಗೆ ಬೆಂಬಲವಾಗಿ ನಿಲ್ಲುವುದೋ ಅಥವಾ ನಾನು ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ ಅಂತ ಹೊರಗೆ ಉಳಿಯುವುದೋ ಅನ್ನುವ ವಿಚಾರದಲ್ಲಿ ವಿಭೀಷಣ ಕೂಡಾ ಸಾಕಷ್ಟು ಮಾನಸಿಕ ಹಿಂಸೆಯನ್ನು ಖಂಡಿತಾ ಅನುಭವಿಸಿರಬೇಕು. ಕೊನೆಗೆ ಅವನು ಅನುಸರಿಸಿದ್ದು ಅವನ ಪಾಲಿಗೆ ಧರ್ಮದ ಮಾರ್ಗವನ್ನೇ ಆದರೂ ಲಂಕೆಯ ಪಾಲಿಗೆ ಅದು ರಾಜ ದ್ರೋಹದ ಕೆಲಸ. ಶತ್ರು ಪಾಳಯವನ್ನು ಸೇರಿ ಇಂದ್ರಜಿತ್ ಮತ್ತು ರಾವಣನ ಕುರಿತಾಗಿ ಹಲವು ರಹಸ್ಯ ಮಾಹಿತಿಗಳನ್ನು ನೀಡಿ ಅವರ ಸಾವಿಗೂ ಕಾರಣನಾಗುತ್ತಾನೆ. ಶತ್ರು ಪಕ್ಷ ತನ್ನನ್ನು ಸೇರಿಸಿಕೊಳ್ಳುತ್ತದೆ ಗೌರವಯುತವಾಗಿ ನಡೆಸಿಕೊಳ್ಳುತ್ತದೆ ಅನ್ನುವ ಯಾವ ಖಾತರಿಯೂ ಇಲ್ಲದೇ ಲಂಕೆಯನ್ನು ತೊರೆದು ರಾವಣನ ವಿರುದ್ಧವಾಗಿ ನಿಲ್ಲುವ ನಿರ್ಧಾರದ ಹಿಂದೆ ಹೃದಯದ ಯಾವ ಮಿಡಿತ ಕೆಲಸ ಮಾಡಿತು?

ಮಹಾಭಾರತದ ಯುದ್ಧದಲ್ಲಿ ಯುದ್ಧರಂಗದಲ್ಲಿಯೇ ಮನಸ್ಸು ಬದಲಾಯಿಸಿ ಪಕ್ಷ ಬದಲಾಯಿಸಿ ಪಾಂಡವರ ಪರ ನಿಂತವನು ಯುಯುತ್ಸು. ಅವನೂ ತನ್ನ ಸಹೋದರ ದುರ್ಯೋಧನನ ಪರವಾಗಿಯೇ ಯುದ್ಧ ಮಾಡಲು ರಣರಂಗಕ್ಕೆ ಬಂದವನು. ಈ ನಿರ್ಧಾರ ಕೊನೆಯ ಕ್ಷಣದಲ್ಲಿ ನಡೆದರೂ ಅದು ಅವನ ತತ್ ಕ್ಷಣದ ನಿರ್ಧಾರವೇ? ಖಂಡಿತಾ ಆಗಿರಲಿಕ್ಕಿಲ್ಲ. ಭೀಷ್ಮ ದ್ರೋಣರ ಹಾಗೆ ಅವನ ಮನಸ್ಸಿನಲ್ಲಿಯೂ ಖಂಡಿತವಾಗಿಯೂ ಅನ್ನದ ಋಣದ ಪ್ರಶ್ನೆ ಎದ್ದಿರಬಹುದು. ಹಾಗಾಗಿಯೇ ಅವನು ಅಲ್ಲಿಯತನಕವೂ ಕೌರವರ ಪರವಾಗಿಯೇ ಹೋರಾಡುವುದಾಗಿ ರಣರಂಗಕ್ಕೆ ಬಂದಿದ್ದವನು. ನಾವು ಮಾಡುತ್ತಿರುವುದು ಧರ್ಮಯುದ್ಧ. ಧರ್ಮದ ಮೇಲೆ ವಿಶ್ವಾಸವುಳ್ಳವರಿಗೆ ಇನ್ನೂ ನಮ್ಮ ಪಕ್ಷದ ಬಾಗಿಲು ತೆರೆದೇ ಇದೆ ಅಂತ ಧರ್ಮರಾಯ ಯುದ್ಧರಂಗದಲ್ಲಿ ನಿಂತು ಹೇಳಿದಾಗ ಹಿಂದೆ ಮುಂದೆ ನೋಡದೆ ಪಾಂಡವರ ಪಕ್ಷ ಸೇರಿದ. ಹಾಗಾದರೆ ಅಲ್ಲಿಯವರೆಗೂ ತಾನು ಅಧರ್ಮದ ಪಕ್ಕದಲ್ಲಿರುವುದು ಅವನ ಅರಿವಿಗೆ ಬಂದಿರಲಿಲ್ಲವೇ? ಅಥವಾ ಅವನಿಗೆ ಈ ತುಮುಲಗಳ ತೆರೆಯನ್ನು ದಾಟಿ ಹೋಗಲು ಬಲವಾದ ಒಂದು ನಾವೆಯ ಸಹಾಯಕ್ಕಾಗಿ ಕಾಯುತ್ತಿದ್ದನೇ? ಅಂತಹ ಮನಸ್ಥಿತಿಯಲ್ಲಿದ್ದವನಿಗೆ ಎಲ್ಲಾ ಋಣಗಳನ್ನು ಮೀರಿ ತನ್ನ ಮನಸ್ಸಿಗೆ ಒಪ್ಪಿತವಾದ ಧರ್ಮದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಧರ್ಮರಾಯನ ಒಂದು ಕರೆ ಕಾರಣವಾಗಿರಬಹುದಾ?

ಭೀಷ್ಮ ದ್ರೋಣರ ಹಾಗೆ ವಿದುರನೂ ಹಸ್ತಿನಾವತಿಯ ಅನ್ನದ ಋಣಕ್ಕೆ ಬಿದ್ದು ಕೌರವನ ಯಾವ ನಡೆಯೂ ಇಷ್ಟವಿಲ್ಲದಿದ್ದರೂ ಅವನ ಪರವಾಗಿಯೇ ಇದ್ದವನು. ಆದರೆ ಯಾವಾಗ ದುರ್ಯೋಧನ ತುಂಬಿದ ಸಭೆಯಲ್ಲಿ ಕೃಷ್ಣನೆದುರಲ್ಲಿ ವಿದುರನನ್ನು ತೊತ್ತಿನಮಗ ಅಂತ ಮೂದಲಿಸುತ್ತಾನೋ ಆಗ ಈ ನಿರ್ಧಾರ ಸಡಿಲವಾಗುತ್ತದೆ. ಭೀಮ ದುರ್ಯೋಧನನ ತೊಡೆಗಳನ್ನು ಮುರಿಯುವ ಸಮಯದಲ್ಲಿ ಅವನನ್ನು ಕಾಪಾಡಬೇಕು ಅಂತ ಇಟ್ಟುಕೊಂಡಿದ್ದ ಬಿಲ್ಲನ್ನು ಸಿಟ್ಟಿನಲ್ಲಿ ಮುರಿದು ಹಾಕುತ್ತಾನೆ. ಮತ್ತು ತಾನು ಕುರುಕ್ಷೇತ್ರದ ಯುದ್ಧದಲ್ಲಿ ಭಾಗವಹಿಸುವುದಿಲ್ಲ ಅಂತ ತಟಸ್ಥ ಉಳಿದುಬಿಡುವ ನಿರ್ಧಾರಕ್ಕೆ ಬರುತ್ತಾನೆ.

ವಿಭೀಷಣ ವಿದುರ ಮತ್ತು ಯುಯುತ್ಸುಗೆ ಸಾಧ್ಯವಾದ ಈ ನಿರ್ಧಾರ ಕೃಷ್ಣನೇ ಬಂದು ಪ್ರೀತಿಯಿಂದ ಕರೆದರೂ ಕರ್ಣನಿಗೆ ಯಾಕೆ ಸಾಧ್ಯವಾಗಲಿಲ್ಲ? ಇವರು ಸುಲಭವಾಗಿ ದಾಟಿಬಂದ ಅನ್ನದ ಋಣದ ಸೇತುವೆಯನ್ನು ದಾಟಲು ಕರ್ಣನಿಗೇಕೆ ಸಾಧ್ಯವಾಗಲಿಲ್ಲ? ಆ ಕ್ಷಣದಲ್ಲಿ ತಾನು ಅಧರ್ಮದ ಪಕ್ಷದಲ್ಲಿಯೇ ನಿಂತು ಯುದ್ಧ ಮಾಡಬೇಕಾಗುತ್ತದೆ ಅಂತ ತಿಳಿದ ಮೇಲೂ ಯಾವ ಮೋಹದ ತಂತು ಅವನನ್ನು ಅಲ್ಲಿಯೇ ಉಳಿಯುವಂತೆ ಮಾಡಿತು? ನೋಡಿ ದಣಿಯನು ಬಿರುದ ಹೊಗಳಿಸಿ ಹಾಡಿ ದಣಿಯನು. ನಿಚ್ಚಲುಚಿತವ ಮಾಡಿ ತಣಿಯನು ಮಾನನಿಧಿಯನ್ನೆಂತು ಮರೆದಪೆನು? ಕಾಡಲಾಗದು ಕೃಷ್ಣ ಖಾತಿಯ ಮಾಡಲಾಗದು. ಬಂದೆನಾಡೊಡೆ ರೂಢಿ ಮೆಚ್ಚದು ಕೌರವನ ಹಗೆ ಹರಿಬ ತನಗೆಂದ. ಬದುಕಿನ ಎಲ್ಲಾ ಸಿರಿಗಳನ್ನು ನೀಡಿದ ಮಿತ್ರ ಸುಯೋಧನನನ್ನು ಬಿಟ್ಟುಬರುವ ಮಾತೇ ಇಲ್ಲ. ಈ ಭೂಮಿ ಸುಯೋಧನನ ಹೆಂಡತಿ. ಅವಳ ಜೊತೆಯಲ್ಲಿ ನಾನು ಸಂಸಾರ ಮಾಡಲಾರೆ. ರಾಜ್ಯದ ಸಿರಿಗೆ ನಾನು ಸೋಲುವವನಲ್ಲ ಅಂತ ಕರ್ಣ ಧೃಢವಾಗಿ ಹೇಳುತ್ತಾನೆ.

ಕೃಷ್ಣನ ನಂತರ ಕುಂತಿಯೂ ಬಂದು ನಾನೇ ನಿನ್ನ ತಾಯಿ. ರಾಧೆ ನಿನ್ನ ಸಾಕುತಾಯಿ. ನನ್ನ ಜೊತೆ ಬಂದು ಬಿಡು.

ತಾಯ್ತಂದೆಯರನ್ನು ಸಂತೋಷಪಡಿಸುವುದೇ ಮಕ್ಕಳ ಧರ್ಮ ಅಂತ ಹೇಳಿ ಮಾತೃತ್ವದ ಮಮತೆಯ ಸುಳಿಯಲ್ಲಿ ಕರ್ಣನನ್ನು ಸಿಲುಕಿಸಲು ನೋಡುತ್ತಾಳೆ. ಕೃಷ್ಣ ಹುಟ್ಟಿನ ಗುಟ್ಟು ಬಯಲು ಮಾಡಿ ಹೋದ ನಂತರ ಕರ್ಣನ ಮನಸ್ಸಿನ ತುಮುಲಗಳ ತೆರೆ ಸರಿದು, ಹರಿಯುತ್ತಿದ್ದ ಪ್ರಕ್ಷುಬ್ದ ನದಿ ಶಾಂತವಾಗಿದೆ ಅನ್ನುವುದು ಅವನು ಕುಂತಿಯ ಜೊತೆ ನಡೆದುಕೊಂಡ ರೀತಿಯಿಂದ ವ್ಯಕ್ಯವಾಗುತ್ತದೆ. ಅವನ ಮನಸ್ಸಿನಲ್ಲಿ ನಿರ್ಧಾರ ಮಾಡಿ ಆಗಿದೆ. ಇನ್ನೇನಿದ್ದರೂ ತೆಗೆದುಕೊಂಡ ತೀರ್ಮಾನ ಸರಿ ಅಂತ ಸಮರ್ಥಿಸುವ ದಾರಿಯನ್ನು ಕಂಡುಕೊಳ್ಳುವುದು. ಕುಂತಿಗೆ ಕೊಟ್ಟ ಉತ್ತರದಲ್ಲಿ ಅದನ್ನು ಸ್ಪಷ್ಟವಾಗಿ ಕಾಣಬಹುದು.

ಪರ್ವ ಕಾದಂಬರಿಯ ಕರ್ಣ ತನ್ನ ಜೊತೆ ಬಾ ಅಂತ ಕರೆಯುವ ತಾಯಿ ಕುಂತಿಗೆ ಕೇಳುವ ಪ್ರಶ್ನೆ ಪಕ್ಷಾಂತರ ಮಾಡಿದರೆ ಮುಂದೆ ಏಳಬಹುದಾದ ಪ್ರಶ್ನೆಗಳಿಗೆ ಕನ್ನಡಿ ಹಿಡಿಯುತ್ತದೆ. ಪಾಂಡವರೈವರಿಗೂ ಹೆಂಡತಿಯಾದ ಅವಳು ಈಗ ನನ್ನನ್ನು ತನ್ನ ಜೇಷ್ಠಪತಿ ಎಂದು ಭಾವಿಸಿ ನಡೆಯಬಲ್ಲಳೆ? ಸ್ವಸಂತೋಷದಿಂದ? ಕುಂತಿ ಕರ್ಣನನ್ನು ಬಾ ಅಂತ ಕರೆದಳು ಆದರೆ ಸಂಬಂಧಗಳ ಈ ಪಲ್ಲಟವನ್ನು ಕುರಿತು ಖಂಡಿತಾವಾಗಿಯೂ ಯೋಚಿಸಿರಲಿಕ್ಕಿಲ್ಲ. ಎಷ್ಟೋ ವರ್ಷಗಳ ಭಾವದಾನದ ಮೂಲಕ ಗಟ್ಟಿಗೊಂಡ ಸಂಬಂಧಗಳ ನಡುವೆ ಧುತ್ತೆಂದು ಬಾಂಧವ್ಯ ಆರೋಪಿಸಿಕೊಂಡು ಬಂದ ಒಂದು ಪಾತ್ರ ಉಂಟುಮಾಡುವ ಅಭದ್ರತೆಯ ಭಾವ ಸಂಬಂಧಗಳ ಅಡಿಪಾಯವನ್ನೇ ನಡುಗಿಸಬಲ್ಲುದು.

ಕುಂತಿಯ ಮೌನದಲ್ಲಿ ಕರ್ಣ ಹೇಳುವ ಮಾತು ತಾನು ಮಾಡಿದ ನಿರ್ಧಾರವನ್ನು ಬಲವಾಗಿಯೇ ಸಮರ್ಥಿಸುವ ಹಾಗಿದೆ. ನೀನು ಹೇಳಿದೆ ಅಂತ ನಿನ್ನ ಮಕ್ಕಳು ನನ್ನನ್ನು ಅಣ್ಣ ಎಂದು ಒಪ್ಪಬಹುದು. ಹೊರಗಿನವಳಾಗಿ ಬಂದು ನಿನ್ನ ಮಕ್ಕಳ ಮನೆಯನ್ನು ಕಟ್ಟಿರುವ ಅವಳು, ನಾನು ಹಿರಿಯನಾಗಿ ಸಿಂಹಾಸನದ ಮೇಲೆ ಕೂರುವುನ್ನೋ ಯಜಮಾನಿಕೆ ನಡೆಸುವುದನ್ನೋ ಒಪ್ಪುತ್ತಾಳೆಯೆ? ನನ್ನ ಅನುಭವ ಬೇರೆ ನೆಲದಲ್ಲಿ ಆಗಿರುವಂತೆ ಅವಳದೂ ಬೇರೆಯಾಗಿದೆ. ಇತರ ಐವರದೂ ಬೇರೆಬೇರೆಯೇ. ಇನ್ನು ನನ್ನ ಹೆಂಡಿರು ಮಕ್ಕಳು ಮೊಮ್ಮಕ್ಕಳ ಅನುಭವ? ಇದನ್ನೆಲ್ಲಾ ಒಟ್ಟಿಗೆ ನೆನೆಸಿ ಅಗೆಸಿ ತುಳಿದು ಕಲಸಿ ಮತ್ತೆ ಹೊಸ ರೀತಿಯ ಕಟ್ಟಡ ಕಟ್ಟುವುದು ಸಾಧ್ಯವಿಲ್ಲ. ಪರ್ವದ ಕರ್ಣ ಸಮಸ್ಯೆಯ ಇನ್ನೊಂದು ಬದಿಯನ್ನು ಅದೆಷ್ಟು ಸರಿಯಾಗಿ ಗ್ರಹಿಸುತ್ತಾನೆ. ಬಹುಶಃ ತಾನು ಪಾಂಡವ ಪಕ್ಷಕ್ಕೆ ಹೋಗದೇ ತಾನು ಕಟ್ಟಿದ ಬದುಕಿನಲ್ಲಿಯೇ ಉಳಿದು ಬಿಡಲು ಸಂಬಂಧಗಳ ಸುಳಿಯಲ್ಲಿ ಉದ್ಭವಿಸಬಹುದಾದ ಈ ಪ್ರಶ್ನೆ ಕೂಡಾ ಬಹಳ ಮಹತ್ವದ್ದೆಂದು ಅನ್ನಿಸದೇ ಇರಲಾರದು.

ನಮ್ಮ ಪುರಾಣಗಳನ್ನು ಕೆದಕುತ್ತಾ ಹೋದರೆ ಇಂತಹ ಬಹಳಷ್ಟು ಮಾದರಿಗಳು ಸಿಗಬಹುದು. ಪ್ರತಿಯೊಬ್ಬರ ಪರಿಸ್ಥಿತಿಗಳು ಪ್ರತಿಯೊಬ್ಬರ ಋಣದ ಬೇರುಗಳು ಭಿನ್ನವಾಗಿರಬಹುದು. ಆದರೆ ಧರ್ಮಸಂಕಟದ ಆ ಉತ್ಕಟ ಕ್ಷಣಗಳಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ಖಂಡಿತವಾಗಿಯೂ ನಮ್ಮ ಬದುಕಿನ ಸಮಸ್ಯೆಗಳಿಗೂ ಒಂದು ದಾರಿಯನ್ನು ತೋರಿಸಬಹುದು. ಬದುಕಿನ ಅನಾಮಿಕ ತಿರುವಿನಲ್ಲಿ ಎದುರಾಗುವ ದ್ವಂದ್ವಗಳಲ್ಲಿ ಇಲ್ಲಿದ್ದು ಇಲ್ಲಿಲ್ಲ; ಅಲ್ಲಿದ್ದು ಅಲ್ಲಿಲ್ಲ ಅನ್ನುವಂತಾಗಿ ಇದು ಅಥವಾ ಅದು ಅನ್ನುವ ಆಯ್ಕೆ ಮಾಡಲೇಬೇಕಾದ ಪರಿಸ್ಥಿಗಳಲ್ಲಿ ನಮ್ಮ ಮುಂದೆ ಇವರು ಕೊಟ್ಟು ಹೋದ ಮಾದರಿಗಳಿವೆ. ಅಲ್ಲದಿದ್ದಲ್ಲಿ ಈಜು ಬಾರದೆ ಈಸು ಬೀಳುವುದೆ ಬದುಕು ಅನ್ನುವಂತಾಗುತ್ತದೆ.

ಒಂದು ಮಣ್ಣಿನಲ್ಲಿ ಸಮೃದ್ಧವಾಗಿ ಬೇರು ಬಿಟ್ಟು ಕಾಯಿಬಿಟ್ಟ ಮರವನ್ನು ಅಲ್ಲಿಂದ ಕಿತ್ತು ಮತ್ತೊಂದು ಪರಿಸರದ ಮಣ್ಣಿನಲ್ಲಿ ನೆಟ್ಟರೆ ಅದು ಬೆಳೆಯಬಹುದು ಆದರೆ ಯಾವುದೋ ನೆಲನೆಮ್ಮಿ ಬೆಳೆದ ಆಧಾರವನ್ನು ಅದು ಕಳೆದುಕೊಳ್ಳುತ್ತದೆ. ಯಾವುದೋ ಮೋಹದ ತಂತು ಮನುಷ್ಯನನ್ನು ಇಲ್ಲಿ ಕಟ್ಟಿಡುತ್ತದೆ. ಅದು ತುಂಡಾಗುವ ತನಕ ಅಷ್ಟೇ ಅವನು ಇಲ್ಲಿನ ಬದುಕಿಗೆ ನಿಷ್ಠನಾಗಿರುತ್ತಾನೆ. ಆದರೆ ಅದಕ್ಕೂ ಬಲವಾದ ಕಾರಣ ಬೇಕು. ಪರವಾಗಿ ತಟಸ್ಥವಾಗಿ ವಿರೋಧವಾಗಿಕ್ಷಣಗಳಲ್ಲಿ ತೆಗೆದುಕೊಂಡ ನಿರ್ಧಾರ ಎಲ್ಲವೂ ಅವರಿಗೆ ಸಿಕ್ಕಿದ ಆ ಬಲವಾದ ಕಾರಣದಿಂದಲೇ ಆಗಿರುತ್ತದೆ.

About The Author

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ