ಗಿರಿಜವ್ವ ಕೆಲಸದಲ್ಲಿ ಹುಷಾರ್ ಇದ್ದಳು. ಯಾವುದಕ್ಕೆ ಹೋದರೂ ಸೈ ಅನಿಸಿಕೊಳ್ಳಬಲ್ಲಳು. ಆರಂಭದಲ್ಲಿ ನಾಲ್ಕಾರು ಮನೆಗಳಿಗೆ ರೊಟ್ಟಿ ಮಾಡಲು ಹೋದಳು. ನಂತರ, ಹತ್ತಿರದ ಖಾನಾವಳಿ ಹಿಡಿದಳು. ಆಮೇಲೆ ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿ ಸಣ್ಣ ತರಕಾರಿ ವ್ಯಾಪಾರ ಶುರು ಮಾಡಿದಳು. ಮೊದಮೊದಲು ಅಲ್ಲಿ ಇಲ್ಲಿ ರಸ್ತೆ ಬದಿಯಲ್ಲಿ ಕುಳಿತು ಮಾರುತ್ತಿದ್ದಳು. ನಂತರ ಯಾರನ್ನೋ ಹಿಡಿದು ಮೇನ್ ಮಾರ್ಕೆಟ್ ಆದ ಬಿಡ್ಕಿ ಬಯಲಿಗೆ ಹೋದಳು. ಹಾಗೆಂದು ತಾನು ರೊಟ್ಟಿ ಮಾಡುವ ಮನೆಗಳನ್ನಾಗಲಿ ಖಾನಾವಳಿಯನ್ನಾಗಲಿ ಬಿಡಲಿಲ್ಲ. ತಾಯಿಯ ಕಳಿಸಿದಳು. ‘ನಾಳೆಯಿಂದ ನಮ್ಮವ್ವ ಬರ್ತಾಳ್ರಿʼ ಎಂದಾಗ ಆ ಮನೆಯವರಿಗೆ ಸ್ವಲ್ಪ ಬೇಸರವಾಯಿತು. ಅವಳು ಗಿಜವ್ವಳಷ್ಟು ಕ್ಲೀನಾಗಿ, ರುಚಿಯಾಗಿ ಮಾಡುತ್ತಿರಲಿಲ್ಲ.
ರಾಜು ಹೆಗಡೆ ಬರೆದ ಸಣ್ಣ ಕಥೆ ʼಲಾಕ್‌ ಡೌನ್‌ʼ ಈ ಭಾನುವಾರದ ನಿಮ್ಮ ಓದಿಗೆ

 

ನಾಳೆಯಿಂದ ‘ಲಾಕ್ ಡೌನ್’ ಎಂದಾಗ ಎಲ್ಲವ್ವಳಿಗೆ ಪಟಕ್ಕನೆ ಗೊತ್ತಾಗಲಿಲ್ಲ. ‘ಹಾಂಗಂದ್ರ ಏನ್ರಿ?’ ಎಂದು ಕೇಳಿ ತಿಳಿದುಕೊಂಡಳು. ಯಾವ ಅಂಗಡಿ ಬಾಗಿಲನ್ನೂ ತೆಗೆಯುವುದಿಲ್ಲ, ಹೋಟೆಲು, ಖಾನಾವಳಿ ಯಾವುದೂ ಓಪನ್ ಆಗುವುದಿಲ್ಲ ಎನ್ನುವುದನ್ನು. ‘ಅದೆಷ್ಟು ದಿನ ಮಾಡ್ತಾರ್ರಿ, ನಾಕು ದಿನಕ ಓಪನ್ ಆಗತೈತಿ.. ಒಂದ್ ನಮೂನಿ ಚಲೋನೇ ಆತು ಬಿಡು, ಒಂದಿನ ಬಿಡದೇ ದುಡಿಯದು….’ ಎಂದು ಅಂದುಕೊಳ್ಳುತ್ತಲೇ ತಾನು ಕೆಲಸ ಮಾಡುವ ಖಾನಾವಳಿಗೆ ಹೋದಳು.

ಅಲ್ಲಿ ಬಾಗಿಲು ಮುಚ್ಚಿತ್ತು. ರಸ್ತೆಯಲ್ಲಿ ಜನ ಸಂಚಾರ ಕಮ್ಮಿಯಾಗಿತ್ತು. ಅಲ್ಲಲ್ಲಿ ಪೋಲಿಸರ ಜೀಪು, ಬೈಕುಗಳು ನಿಂತಿದ್ದವು. ಏನೋ ಆದ ಮನೆಯಂತಾಗಿತ್ತು ವಾತಾವರಣ. ಬಾಗಿಲ ಹೊರಗೆ ನಿಂತು, ‘ಭಟ್ರೆ ಭಟ್ರೆ’ ಎಂದು ಕರೆದಳು. ಭಟ್ರ ಮನೆ ಖಾನಾವಳಿಯ ಹಿಂಬದಿಯಲ್ಲಿ ಇತ್ತು. ಖಾನಾವಳಿ ಎಂದರೆ, ಒಂದೆರಡು ಕೋಣೆಗಳಿರುವ ಮನೆ. ಮುಂದಿನ ಜಗಲಿಯಲ್ಲಿ ನಾಲ್ಕಾರು ಬೇಂಚು, ಖುರ್ಚಿ ಇಟ್ಟಿದ್ದರು. ಗಲ್ಲಾ ಎಂದರೆ, ಮುರುಕು ಮೇಜು, ಖುರ್ಚಿ. ಅದರ ಮೇಲೆ ಕುಳಿತುಕೊಳ್ಳುವ ಸಂದರ್ಭವೇನೂ ಬರುತ್ತಿರಲಿಲ್ಲ. ಭಟ್ರ ಗಂಡ ಹೆಂಡತಿಯರೇ ಎಲ್ಲಾ ಮಾಡುವುದು. ತಟ್ಟೆ ಬಟ್ಟಲು ತೊಳೆಯಲು ಒಬ್ಬ ಕೆಲಸದ ಹುಡುಗಿ ಇದ್ದಳು. ಬೆಳಿಗ್ಗೆ ಎರಡು ತಾಸು ಸಂಜೆ ಎರಡು ತಾಸು ಎಲ್ಲವ್ವ ಮತ್ತು ಇನ್ನೊಬ್ಬಳು ರೊಟ್ಟಿ ತಟ್ಟುತ್ತಿದ್ದರು. ಗಿರಾಕಿಗಳು ಹೆಚ್ಚು ಕಮ್ಮಿಯಾದಾಗ ಟೈಮ್ ಸ್ವಲ್ಪ ವ್ಯತ್ಯಾಸವಾಗುತ್ತಿತ್ತು.

ಎಲ್ಲವ್ವ ಇಲ್ಲಿ ಮಾತ್ರವಲ್ಲ, ಇನ್ನೆರಡು ಮನೆಗಳನ್ನು ಹಿಡಿದಿದ್ದಳು. ಬಿಡುವಿನ ವೇಳೆಯಲ್ಲಿ ಆ ಮನೆಗಳಿಗೆ ಹೋಗಿ ರೊಟ್ಟಿ ಪಲ್ಯಾ ಮಾಡಿ ಬರುತ್ತಿದ್ದಳು. ಬಯಲ ಸೀಮೆಯ ಗಾಳಿ ಈ ಕಡೆಗೂ ಬೀಸಿ ಇಲ್ಲಿಯ ಸುಮಾರು ಜನ ಜೋಳದ ರೊಟ್ಟಿ ತಿನ್ನಲು ಶುರು ಮಾಡಿದ್ದರು!

‘ಭಟ್ರೆ ಭಟ್ರೆ’ ಎಂದು ಎರಡು ಮೂರು ಬಾರಿ ಕೂಗಿದಾಗ, ಬಾಗಿಲ ಹಲಗೆಯ ಕಿಂಡಿಯಿಂದಲೇ ‘ಖಾನಾವಳಿ ಬಂದ್ ಮಾಡಿನ್ರವ್ವ, ಕೊರೊನಾ ಬಂದದ ಅಂತ…..” ಎಂದರು ಭಟ್ಟರು. ಎಲ್ಲವ್ವಳಿಗೆ ಮೊದಲ ಸಲ ಸಣ್ಣ ಹೆದರಿಕೆಯಾಯಿತು. ತುಸು ಹೊತ್ತು ಬಾಗಿಲ ಹೊರಗೇ ನಿಂತಿದ್ದಳು. ಭಟ್ಟರು ಕೊಡುವ ಪಗಾರೇನು ಬಾಕಿ ಇರಲಿಲ್ಲ. ಆ ದಿನದ್ದನ್ನು ಆದಿನ ಒಯ್ಯುತ್ತಿದ್ದಳು. ‘ಇಲ್ಲಿ ಇಲ್ಲದಿದ್ದರೆ ಏನು, ಆ ಮನೆಗಳಲ್ಲಿ ಐತಲ್ಲ, ಅದೇನು ಖಾನಾವಳಿ ಅಲ್ಲ, ಸಂಜಿ ಮುಂದ ಹೋಗಿ ಕೇಳಬೇಕು’ ಅಂದುಕೊಳ್ಳುತ್ತಲೇ ವಾಪಸ್ ಬಂದಳು.

ಎಲ್ಲವ್ವ ಮೂಲತಃ ಇಲ್ಲಿಯವಳೇನೂ ಅಲ್ಲ. ಗುಲ್ಬುರ್ಗ, ಬಿಜಾಪುರ ಕಡೆಯ ಹಳ್ಳಿಯೊಂದರಿಂದ ಬಂದವಳು. ಸಣ್ಣ ಬಾಡಿಗೆ ಮನೆ ಹಿಡಿದು ಅಲ್ಲಿ ಇಲ್ಲಿ ಅದು ಇದು ಕೆಲಸ ಮಾಡಿಕೊಂಡು ಇದ್ದವಳು. ಅವಳ ಜೊತೆಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ ಇದ್ದಾನೆ. ಗಂಡ ಮೊದಲೇ ತೀರಿಹೋಗಿದ್ದ. ಊರಲ್ಲೂ ಆಸ್ತಿ ಪಾಸ್ತಿ ಏನೂ ಇದ್ದವಳಲ್ಲ. ಅಲ್ಲಿಯೂ ಯಾರದಾದರೂ ಹೊಲ ಮನಿ ಕೆಲಸ ಮಾಡಿ ಜೀವನ ಸಾಗಿಸುವುದಾಗಿತ್ತು. ಅಲ್ಲಿರುವಾಗಲೇ ಹಿರಿಯವಳಾದ ಗಿರಿಜವ್ವಳನ್ನು ಹತ್ತಿರದ ಊರಿನವನೊಬ್ಬನಿಗೆ ಕೊಟ್ಟು ಮದುವೆ ಮಾಡಿದ್ದಳು. ಆದರೆ ಆ ಗಂಡ ಸರಿಯಿರಲಿಲ್ಲ. ಪೊಕ್ಕಾಪೋಲಿ ಅಡ್ಡಾಡ್ತ, ಹೆಂಡತಿ ದುಡಿದ ದುಡ್ಡಲ್ಲೇ ಕುಡಿದು ಬಂದು ಹೊಡೆದು ಬಡಿದು ಮಾಡುತ್ತಿದ್ದ. ಈ ನಡುವೆ ಮಗಳೊಬ್ಬಳು ಆಗಿದ್ದಳು. ಅವನ ಕಾಟ ತಡೆಯಲಾರದೆ ತಾಯಿಯನ್ನು ಕರೆದುಕೊಂಡು ಅವಳು ಬಂದಳೊ, ಅವಳನ್ನು ಕರೆದುಕೊಂಡು ತಾಯಿ ಬಂದಳೊ, ಅಂತೂ ಬಂದಿದ್ದರು. ಗಂಡನ ಕಡೆಯವರು ಎರಡು ಮೂರು ಸಲ ಕರೆಯಲು ಬಂದಿದ್ದರು. ಅರ್ಧ ರಾಜಿ, ಅರ್ಧ ಜಬರ್ದಸ್ತಿ ಮಾಡಿ ಕರೆದೊಯ್ಯಲು ನೋಡಿದರು. ಒಮ್ಮೆ ಗಿರಿಜವ್ವ ಹೋಗಿಯೂ ಹೋಗಿದ್ದಳು. ಆದರೆ ಆ ಗಂಡ ಮೊದಲಿನ ಹಾಗೇ ಇದ್ದ. ಅವನನ್ನು ತಡದುಕೊಳ್ಳಲಾಗದೇ ತಿರುಗಿ ಬಂದಳು. ಎರಡನೆಯವಳಿಗೂ ವಯಸ್ಸಾಗಿದ್ದರೂ ಮದುವೆ ಆಗಿರಲಿಲ್ಲ. ಕಿರಿಯವ ಮಗ, ಉಂಡಾಡಿಗುಂಡನಂತಿದ್ದ. ಅತ್ಲಾಗೆ ಶಾಲೆಗೂ ಹೋಗದೇ ಇತ್ಲಾಗೆ ಕೆಲಸವನ್ನೂ ಮಾಡದೇ ಅಡಿಗೆ ಮನೆಯ ಸಾಮಾನಿನ ಡಬ್ಬಿ ಹುಡುಕುತ್ತಿದ್ದ! ಹೀಗಾಗಿ ಮನೆಯ ಎಲ್ಲ ಜವಾಬ್ದಾರಿ ಇವರಿಬ್ಬರ ಮೇಲಿತ್ತು.

ಗಿರಿಜವ್ವ ಕೆಲಸದಲ್ಲಿ ಹುಷಾರ್ ಇದ್ದಳು. ಯಾವುದಕ್ಕೆ ಹೋದರೂ ಸೈ ಅನಿಸಿಕೊಳ್ಳಬಲ್ಲಳು. ಆರಂಭದಲ್ಲಿ ನಾಲ್ಕಾರು ಮನೆಗಳಿಗೆ ರೊಟ್ಟಿ ಮಾಡಲು ಹೋದಳು. ನಂತರ, ಹತ್ತಿರದ ಖಾನಾವಳಿ ಹಿಡಿದಳು. ಆಮೇಲೆ ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿ ಸಣ್ಣ ತರಕಾರಿ ವ್ಯಾಪಾರ ಶುರು ಮಾಡಿದಳು. ಮೊದಮೊದಲು ಅಲ್ಲಿ ಇಲ್ಲಿ ರಸ್ತೆ ಬದಿಯಲ್ಲಿ ಕುಳಿತು ಮಾರುತ್ತಿದ್ದಳು. ನಂತರ ಯಾರನ್ನೋ ಹಿಡಿದು ಮೇನ್ ಮಾರ್ಕೆಟ್ ಆದ ಬಿಡ್ಕಿ ಬಯಲಿಗೆ ಹೋದಳು. ಹಾಗೆಂದು ತಾನು ರೊಟ್ಟಿ ಮಾಡುವ ಮನೆಗಳನ್ನಾಗಲಿ ಖಾನಾವಳಿಯನ್ನಾಗಲಿ ಬಿಡಲಿಲ್ಲ. ತಾಯಿಯ ಕಳಿಸಿದಳು. ‘ನಾಳೆಯಿಂದ ನಮ್ಮವ್ವ ಬರ್ತಾಳ್ರಿʼ ಎಂದಾಗ ಆ ಮನೆಯವರಿಗೆ ಸ್ವಲ್ಪ ಬೇಸರವಾಯಿತು. ಅವಳು ಗಿಜವ್ವಳಷ್ಟು ಕ್ಲೀನಾಗಿ, ರುಚಿಯಾಗಿ ಮಾಡುತ್ತಿರಲಿಲ್ಲ. ಈ ಹಿಂದೆ ಖಾನಾವಳಿಯಿಂದ ಸರಿಯಾದ ವೇಳೆಗೆ ಬರಲಾಗದಿದ್ದಾಗ ಅವಳನ್ನು ಕಳಿಸಿದ್ದಳು. ಆಗ ಅವರು ನೋಡಿದ್ದರು.

ಲಾಕ್ ಡೌನ್ ಆದ ಸಂಜೆ ಎಂದಿನಂತೆ ಆ ಮನೆಗಳಿಗೆ ಹೋದಳು. ಅವರು ಗೇಟಿನಾಚೆಯಿಂದಲೇ ‘ಇವತ್ತಿಂದ ಬೇಡ. ಇನ್ನು ಯಾವಾಗ ಎಂದು ನಂತರ ತಿಳಿಸುತ್ತೇವೆ.’ ಎಂದರು. ‘ಈ ಕೊರೊನಾ ಮನೆ ಹಾಳಾಗ್ಲಿ!’ ಎಂದುಕೊಳ್ಳುತ್ತ ವಾಪಸ್ ಆದಳು.

ಲಾಕ್ ಡೌನ್ ನಿಂದ ಗಿರಿಜವ್ವನ ವ್ಯಾಪಾರವೂ ನಿಂತಿತ್ತು, ದೊಡ್ಡ ವ್ಯಾಪಾರಿಗಳು ವಾಹನದ ಮೂಲಕ ಮನೆಮನೆಗೆ ಹೋಗಿ ಮಾರುತ್ತಿದ್ದರು. ಇವಳಿಗೆ ಅದು ಅಸಾಧ್ಯವಾಗಿತ್ತು. ಆದರೆ ಮೊದಮೊದಲು ದಿನ ಕಳೆಯುವುದೇನು ತ್ರಾಸ್ ಆಗಲಿಲ್ಲ. ಕೈಲಿ ಸ್ವಲ್ಪ ದುಡ್ಡಿತ್ತು. ಜೊತೆಗೆ ಸರ್ಕಾರದವರು ಅಕ್ಕಿ ಬೇಳೆಗಳನ್ನೆಲ್ಲ ಕೊಡುತ್ತಿದ್ದರು. ಅದರಲ್ಲೇ ಅಕ್ಕಿ ಮಾರಾಟ ಮಾಡಿದರೆ ದುಡ್ಡೂ ಬರುತ್ತಿತ್ತು.

ಹೀಗೆಲ್ಲ ಇರುವಾಗ, ಎರಡನೆಯವಳು ಒಬ್ಬನ ಜೊತೆಗೆ ಸಂಬಂಧ ಬೆಳೆಸಿದ್ದಳು. ಅವನಿಗೆ ಹೆಂಡತಿ ಮಕ್ಕಳೆಲ್ಲ ಇದ್ದರು. ಅದು ಅವಳಿಗೆ ಗೊತ್ತಿದ್ದಂತಿತ್ತು. ವಯಸ್ಸಿನ ಕಾರಣದಿಂದಲೋ ಚೈನಿ ಹೊಡೆಯಲಾಗುತ್ತದೆ ಎನ್ನುವುದಕ್ಕೋ ಅವನ ಜೊತೆಗೆ ಓಡಾಡುತ್ತಿದ್ದಳು. ಎಲ್ಲವ್ವ ಹೇಳಿ ಕೇಳಿ ಮಾಡುವ ಆಟವೇ ಇರಲಿಲ್ಲ. ಮೈ ಮೇಲೇ ಬರುತ್ತಿದ್ದಳು. ಅಕ್ಕ ಹೇಳಿದರೆ, ‘ನಿ ಹೇಗಿದ್ದಿ ಎಂದು ಗೊತ್ತದ ನನಗ…..’ ಎಂದು ಅವಳು ಗಂಡನ ಬಿಟ್ಟಿದ್ದನ್ನು ಚುಚ್ಚುವಂತೆ ಹೇಳುತ್ತಿದ್ದಳು.

ಕ್ರಮೇಣ ಮನೆಯಲ್ಲಿ ಎರಡು ಹೊತ್ತು ಊಟ ಮಾಡುವುದೇ ಕಷ್ಟಕ್ಕೆ ಬಂತು. ಅವರಿವರು ಕೊಡುವ ಸಾಮಗ್ರಿಗಳು ನಿಧಾನವಾಗಿ ನಿಂತಿದ್ದವು. ಲಾಕ್ ಡೌನ್ ತೆಗೆಯುವ ನಮೂನೆ ಕಾಣುತ್ತಿರಲಿಲ್ಲ. ಒಂದೆರಡು ಬಾರಿ ತಾನು ಕೆಲಸ ಮಾಡುವ ಮನೆಗಳಿಗೆ ಹೋಗಿ ದುಡ್ಡು ತಂದಳು. ಅದು ಖರ್ಚಾದ ಮೇಲೆ ಎಲ್ಲಾದರೂ ಕೆಲಸ ಸಿಗುತ್ತದೋ ನೋಡಿದಳು. ಹೊರಗೆ ಸಲೀಸಾಗಿ ಅಡ್ಡಾಡುವಂತೆಯೂ ಇರಲಿಲ್ಲ. ಸಿಕ್ಕಿದ ಜನ ದೂರದೂರದಲ್ಲಿ ನಡೆಯುತ್ತಿದ್ದರು. ಪೋಲೀಸರು ಬೇರೆ, ‘ಏನು ಕೆಲಸ, ನಡೀರಿ’ ಎಂದು ಅಟ್ಟುತ್ತಿದ್ದರು. ಅಂಗಡಿಗಳ ಮುಂದೆ ದನ ನಾಯಿಗಳು ಮಲಗಿರುತ್ತಿದ್ದವು. ಕೆಲವರಿಗೆ ಜೀವ ಮುಖ್ಯವಾಗಿದ್ದರೆ ಎಲ್ಲವ್ವನಂತವರಿಗೆ ಜೀವನ ಸಾಗಿಸುವುದು ಹೇಗೆ ಎನ್ನುವುದು ಮುಖ್ಯವಾಗಿತ್ತು. ಹರಿದ ಸೀರಯನ್ನೆ ಮಾಸ್ಕಿನ ಹಾಗೆ ಮಾಡಿಕೊಂಡು ಆ ಮನೆಗಳಿಗೆ ಹೋಗಿ, ‘ನಾಳೆಯಿಂದ ಬರ್ಲೇನ್ರಿ?’ ಎಂದು ಕೇಳುತ್ತಿದ್ದಳು. ಅವರು, ‘ಈ ತಿಂಗಳ ಬೇಡ, ಮುಂದಿನ ತಿಂಗಳು ನೋಡ್ವೊ’ ಎಂದು ಹೇಳುತ್ತಿದ್ದರು.

ಒಮ್ಮೆ ಹೀಗೇ ಹೊರಗೆ ಹೋಗಿ ಬಂದಾಗ, ಮೊಮ್ಮಗಳು ಬಾಡಿದ ಮುಖ ಮಾಡಿಕೊಂಡು ಹೊರಗೆ ಕೂತಿದ್ದಳು. ಅವಳಿಗೆ ಆಟ ಆಡಲೂ ಹೊಗುವಂತಿರಲಿಲ್ಲ. ‘ಏನೆ, ಏನಾಯ್ತೆ….?’ ಎಂದು ಎಲ್ಲವ್ವ ಕೇಳಿದಳು. ಒಂದು ಕೋಣೆಯ ಬಾಗಿಲು ಹಾಕಿತ್ತು. ಯಾರೋ ಪಿಸು ದನಿಯಲ್ಲಿ ಮಾತಾಡುವುದು ಕೇಳಿಸುತ್ತಿತ್ತು. ‘ಯಾರಾ ಬಂದಾರ್ಯೆ? ಬಾಗಿಲು ಯಾಕೆ ಹಾಕ್ಯಾರ?’ ಎಂದು ಕೇಳಿದಳು. ಮೊಮ್ಮಗಳು ‘ಯಾರೋ ಮಾಮ ಅಂತ, ಆಗಲಿಂದ ಬಾಗಿಲ ಹಾಕಿ ಅವನ ಜೋಡಿ ಮಾತಾಡಕ ಹತ್ಯಾಳ ಅಮ್ಮ’ ಎಂದಾಗ,
ಎಲ್ಲವ್ವ ಅಪ್ರತಿಭಳಾಗಿ ನಿಂತಳು.