ಒಂದು ಸಂಚಾರ…

ತನ್ನ ಸುತ್ತಲು ತಾನು ತಿರುಗುತ್ತಲೇ
ತನ್ನೊಂದಿಗೇ ತಾನು ಪ್ರೀತಿಗಿಳಿಯುತ್ತೆ
ಭೂಮಿ ಒಂದು ನಾರ್ಸಿಸಿಸ್ಟ್!

ಅಲೆ ಅಲೆಯಾಗಿ ಬೀಸುತ್ತಾ
ತನ್ನಿಂದಲೇ ಈ ಲೋಕ ಸಜೀವವೆಂದು ಬೀಗುವ
ಗಾಳಿ ಒಂದು ಇಗೋಯಿಸ್ಟ್!

ಏನೋ ಇದೆಯೆನ್ನುವ ಭ್ರಮೆಯನ್ನು ಹುಟ್ಟುಹಾಕುತ್ತ
ಶೂನ್ಯವನ್ನು ಶೂನ್ಯದಿಂದ ಶೂನ್ಯದೆಡಗೆ
ಅಳೆಯುತ್ತಿರುತ್ತದೆ ಆಕಾಶ ಒಂದು ನಿಹಿಲಿಸ್ಟ್!

ಮೇಲೇರುತ್ತಾ ಏರಿ ಬೀಳುತ್ತಾ
ನಿತ್ಯವೂ ಸಂಚಲನವನ್ನುಂಟುಮಾಡುತ್ತದೆ
ಸಮುದ್ರವೊಂದು ಎಕ್ಸೆಂಟ್ರಿಕ್!

ಒಡಲೆಲ್ಲಾ ದುಃಖವನ್ನು ಹೊರುತ್ತಲೇ
ಯಾವಾಗಲೋ ಆಗಲಿ ಒಮ್ಮೆ ಕಣ್ಣೀರಾಗಿ ಸುರಿಯುವುದಿಲ್ಲ
ಮೋಡ ಒಂದು ಇಂಟ್ರಾವೆರ್ಟ್!

ಜಗತ್ತಿಗೇನು ಒಳಿತು ಮಾಡುತ್ತಿದ್ದೇನೆ ಎನ್ನುವುದಕ್ಕಿಂತಲೂ
ತನ್ನ ಬೆಳಕನ್ನು ಕಂಡು
ಸಂಭ್ರಮಿಸುತ್ತದೆ
ನಕ್ಷತ್ರ ಒಂದು ಹೆಡೋನಿಸ್ಟ್!

ಬಣ್ಣದ ಬಾಣಗಳನ್ನು ಒಂದೊಂದಾಗಿ ಅಲ್ಲದೆ
ಎಲ್ಲವನ್ನು ಒಟ್ಟಿಗೆ ಹೂಡಿ
ಪ್ರಯೋಗಿಸುತ್ತದೆ
ಬಹು ಮುಖ ಸೌಂದರ್ಯವನ್ನು
ದಿಗಂತಗಳವರೆಗೆ ಆವಿಷ್ಕಾರ ಮಾಡುತ್ತದೆ
ಕಾಮನ ಬಿಲ್ಲು ಒಂದು ಪ್ಲೂರಲಿಸ್ಟ್!

ಹಾರುತ್ತ ಕಲ್ಪನೆಗಳಲ್ಲಿ ವಿಹರಿಸುತ್ತ
ಮತ್ತೊಂದು ಪ್ರಪಂಚದಲ್ಲಿ ಮೈಮರೆತು
ತೇಲಾಡುತ್ತದೆ
ಹಕ್ಕಿ ಒಂದು ಐಡಿಯಲಿಸ್ಟ್!

ನಿಲ್ಲಲು ನೆಲೆ ನೀಡಿದ ಜಾಗವನ್ನಾಕ್ರಮಿಸುತ್ತಾ
ಕೊಂಬೆಗಳಿಂದ ಬಹಿರಂಗವಾಗಿ
ಬೇರುಗಳಿಂದ ಅಂತರಂಗವಾಗಿ ಹರಡುತ್ತದೆ
ಮರ ಒಂದು ಇಂಪೀರಿಯಲಿಸ್ಟ್!

ಮರಳಿನ ಕಣಗಳನ್ನು ಒಟ್ಟಾಗಿ ರಾಶಿ ಸುರುವಿ
ಧರಣಿಯ ಮತ್ತೊಂದು ಮುಖವನ್ನು ತೋರುತ್ತದೆ
ಮರಳುಗಾಡು ಒಂದು ಪ್ರಾಗ್ಮಾಟಿಸ್ಟ್!

ಅಲುಗಾಟದಲ್ಲೇ ಅಸ್ಥಿತ್ವವನ್ನು
ಕಣ್ಣೋಟದಲ್ಲಿ ಸದಾ ಎಚ್ಚರವನ್ನು
ತೋರುತ್ತಾ
ಬ್ರಾಂಡೆಡ್ ಜಡ್ಜ್ಮೆಂಟ್ ಗಳಿಗೆ ಅತೀತವಾಗಿ
ಆಲೋಚನೆಗಳಿಗೆ ಚೈತನ್ಯಲೋಚನಗಳನ್ನು
ತೊಡಿಸುತ್ತದೆ
ಜಿಂಕೆ ಒಂದು ಎಕ್ಸಿಸ್ಟೆನ್ಷಿಯಲಿಸ್ಟ್!

ಮೊಂಡು ಕೈಗಳನ್ನು ಮುಷ್ಟಿಯಾಗಿಸಿ
ಸೀತಾದೇವಿಯನ್ನು ಸೈತ ತನ್ನಲ್ಲಿ ಲೀನವಾಗಿಸಿಕೊಳ್ಳುತ್ತದೆ
ಮಣ್ಣು ಒಂದು ರಿಯಲಿಸ್ಟ್!

ನೆಲವನ್ನು ಸೀಳಿ ತಲೆಯೆತ್ತಿ ಆತ್ಮಗೌರವವನ್ನು-
ತುಳಿತಗಳನ್ನು ಧಿಕ್ಕರಿಸಿ ಅಸ್ತಿತ್ವವನ್ನು
ಪ್ರಕಟಿಸುತ್ತದೆ
ಬೀಜ ಒಂದು ರೆವೆಲ್ಯೂಷನರಿ!

ನಿರಂತರ ತನ್ನನ್ನು ತಾನು ದಹಿಸಿಕೊಳ್ಳುತ್ತ
ಕಾಲಕ್ಕೆ ಕಿರಣಗಳ ತೊಡಿಸಿ
ಪುನರಪಿ ಜನನ ಮರಣಗಳ ಸ್ಫೂರ್ತಿಯಿಂದ
ನಿರ್ದುಷ್ಟ ರೂಪವಿರದ ನೆನಪಾಗಿ ಉಳಿಯುತ್ತಾನೆ
ಸೂರ್ಯ ಒಂದು ಸರ್ರಿಯಲಿಸ್ಟ್!

ಎಲ್ಲದಕ್ಕೂ ತನ್ನ ಕಣ್ಣುಗಳನ್ನು ಅಂಟಿಸಿ
ತನಗೆ ಅನುಕೂಲವಾಗಿ ವರ್ಣಿಸುತ್ತ ರಚಿಸುತ್ತ
ತನ್ನ ಲಕ್ಷಣಗಳನ್ನೇ ಎಲ್ಲದಕ್ಕೂ ಅನ್ವಯಿಸುತ್ತದೆ
ಎಲ್ಲವನ್ನೂತನ್ನೊಳಗೆ ಹುದುಗಿಕೊಂಡು
ಅರ್ಥವಾಗಿಯೂ ಅವಗಾಹನೆಗೆ ಒಳಪಡದೆ
ರೆಟಿನಾ ಸಂದಿಗಳಿಂದ ಜಾರಿಹೋಗುತ್ತದೆ
ಕತ್ತಲು ಒಂದು ಮಿಸ್ಟಿಕ್!

ಒಂದು ಪ್ರಶಾಂತ-ಕೋಟಿ ಅಸಂತೃಪ್ತಿಗಳ ನಡುವೆ
ನನ್ನ ಅಸ್ಮಿತೆಯನ್ನೇ ಕಳೆದುಕೊಳ್ಳುತ್ತಾ
ಹುಡುಕುತ್ತಾ
ಒಂದೇ ದೇಹದಲ್ಲಿ ಬಹುರೂಪಗಳನ್ನು
ಧರಿಸುತ್ತಾ
ಅನೇಕ ವಾಕ್ಯಗಳನ್ನ ಏಕ ವಾಕ್ಯವಾಗಿ
ಕುಗ್ಗಿಸುತ್ತಾ
ಅವಧಾನವನ್ನು-ಅಲ್ಜಿಮರ್ಸ್ ಅನ್ನು ಏಕ ಕಾಲದಲ್ಲಿ
ಅನುಭವಿಸುತ್ತೇನೆ
ನಾನು ಒಂದು ಮಿತ್!

ಲೋಕಗಳನ್ನ ಸುತ್ತುಹಾಕಿ ಯುಗಗಳನ್ನ ತಡವಿ
ಅವನಿಯನ್ನು, ಅಂಭೋಧಿಯನ್ನು, ಅಂತರಿಕ್ಷವನ್ನು
ಲಂಘಿಸಿ
ಎಷ್ಟು ಶಾಸ್ತ್ರಗಳನ್ನು ಓದಿದರೂ ಮತ್ತೆಷ್ಟು ಜ್ಞಾನ ದ್ವಾರಗಳನ್ನು ತೆರೆದರು
ಅನುಭವವಿನ್ನೂ ಉಳಿದೆ ಇರುತ್ತೆ
ನೀನು ಒಂದು ಎನಿಗ್ಮಾ!

ಆಸೆ ನಿರಾಸೆಗಳ ಪ್ರಸ್ಥಾನದಲ್ಲಿ
ಅರ್ಥಪರ್ಥವಿಲ್ಲದ ಗಮನದಲ್ಲಿ
ಕಡೆಗೇನೂ ಉಳಿಯದೆ ವ್ಯರ್ಥಾವಶೇಷವಾಗಿ
ಕರಗಿಹೋಗುತ್ತೆ
ಜೀವನ ಒಂದು ವಾಗಬಾಂಡ್!

ರೋಹಿಣಿಸತ್ಯ ಗೃಹಿಣಿ,
ತೆಲುಗಿನಲ್ಲಿ ಬರೆಯಲು ಆರಂಭಿಸಿದ್ದ ರೋಹಿಣಿಸತ್ಯ, ನಂತರ ಕನ್ನಡ ಭಾಷೆ ಕಲಿತು ಕನ್ನಡದಲ್ಲಿಯೂ ಕವನ, ಲೇಖನ, ಕಥೆಗಳನ್ನು ಬರೆಯಲಾರಂಭಿಸಿವರು.
ಮೂರು ನಾಲ್ಕು ವರುಷಗಳಿಂದ ಎರಡು ಭಾಷೆಗಳಲ್ಲಿ ಬರವಣಿವೆ ಮತ್ತು ಅನುವಾದ ಮಾಡುತ್ತಿದ್ದಾರೆ.