ಆಕೆ
ಇಂದಿಗೂ ನಿಗೂಢ ಸಂಕೀರ್ಣ ಕಾವ್ಯದ ಹಾಗೆ
ಓದಲು ಪ್ರಯತ್ನಿಸಿದಂತೆಲ್ಲ
ಉಸಿರುಗಟ್ಟುತ್ತದೆ ಎದೆ-
-ತೆರೆದು ತೋರುವುದು
ಆಕೆಯ ಹುಚ್ಚು ನಂಬಿಕೆ
ಲೋಕ ಓದಿದ್ದೂ ಕಡಿಮೆಯೇ

ತುಯ್ದಾಡುವ ಅವಳ ಕಣ್ಣುಗಳಲ್ಲಿ
ಕೆಲವೊಮ್ಮೆ ಉಕ್ಕುವ ಸಮುದ್ರವನ್ನು
ಹೊತ್ತೊಯ್ಯುವ ಚಂಡಮಾರುತವನ್ನು
ಒಕ್ಕಲೆಬ್ಬಿಸುವ ಕಂಪನವನ್ನು
ಕಂಡಿದ್ದೆನೆ
ಆದರೂ ಆಕೆ ನಿಶ್ಯಬ್ದ ಕವಿತೆ

ಸುಡುತ್ತಾಳೆ ಸಿಗರೇಟನ್ನು
ಶತಮಾನದ ನೋವಗಳನ್ನು
ಒಂದೇ ಬಾರಿಗೆ ಸುಡುವ ಸಿಟ್ಟಿನಿಂದ
ಮತ್ತು…..
ಬಿಡುತ್ತಾಳೆ ಹೊಗೆಯನ್ನು
ಇರಿದವರೆಲ್ಲರೂ ನನ್ನ ಮಕ್ಕಳೆ
ಎನ್ನುವ ನಿರಾಳತೆಯಿಂದ

ಹುಲುಮಾನವರು ನಾವು
ಆಕೆಯ ನಶೆಯನ್ನು ಗೇಲಿಮಾಡುತ್ತೆವೆ
ಅಸಲಿಗೆ ಈ ಕವಿತೆಯೂ
ತಮಾಷೆಯೇ ಆಕೆಗೆ……

ಲಕ್ಷ್ಮಣ ಬಡಿಗೇರ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕು ಬನ್ನೂರಿನವರು.
ಸಧ್ಯ ಕಾರವಾರ ಜಿಲ್ಲೆ ಸಿದ್ದಾಪುರದಲ್ಲಿ ವಿದ್ಯುತ್ ಇಲಾಖೆಯಲ್ಲಿ ಮಾರ್ಗದಾಳು (ಲೈನ್‌ಮನ್) ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಸಾಹಿತ್ಯ, ಚಿತ್ರಕಲೆ ಮತ್ತು ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ
ಗೆಳೆಯರೊಂದಿಗೆ ಸೇರಿ ‘ಕಾಚಕ್ಕಿ ಪ್ರಕಾಶನʼದ ಮೂಲಕ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ