ಆದಿಪುರಾಣದ ಪ್ರಾರಂಭವನ್ನೊಮ್ಮೆ ಗಮನಿಸಿ, ಲೋಕಾಕಾರ ಕಥನದಿಂದ ಪ್ರಾರಂಭವಾಗಿ ವಿದೇಹದಲ್ಲಿ ಬಂದು ನಿಂತು ಕಥಾಭಿತ್ತಿ ಪ್ರಾರಂಭ ಆಗುತ್ತದೆ. ಇಲ್ಲಿನ ಪ್ರತಿಯೊಂದು ಭಾಗದ ನಾಯಕ ಪಾತ್ರವೂ ಶ್ರೀಮಂತರೇ, ರಾಜರೇ. ಅವರ ಸಾವಿನ ಚಿತ್ರಣವೇ ಬದುಕಿನ ಬಗೆಗೆ ಯೋಚಿಸುವ ಹಾಗೆ ಮಾಡುವಲ್ಲಿ ಚಲನೆ ಪಡೆಯುತ್ತದೆ. ಶ್ರವಣಬೆಳಗೊಳದ ನಂದಿಸೇನ ಮುನಿಯ ಶಾಸನದ ‘ಶ್ರೀರೂಪಲೀಲಾಧನವಿಭವಮಹಾರಾಶಿಗಳ್ ನಿಲ್ಲವಾರ್ಗಂ’ ಅನ್ನುವ ಇತ್ಯಾತ್ಮಕ ಅಂಶವನ್ನು ಸಾರಲು ಪಂಪ ಮಾಡಿಕೊಂಡ ಸಾವಿನ ಕಡೆಗಿನ ನೇತ್ಯಾತ್ಮಕ ಚಲನೆ. ಅವರಿಬ್ಬರದೂ ಅಕಾಲಿಕ ಸಾವು ಅನ್ನುವುದು ಇಲ್ಲಿ ನೇತ್ಯಾತ್ಮಕ ಅನ್ನುವುದಕ್ಕೆ ಬಹುಮುಖ್ಯ ಅಂಶ.
ಆರ್. ದಿಲೀಪ್ ಕುಮಾರ್ ಅಂಕಣ

 

ಆದಿಪುರಾಣ ಕೃತಿಯು ಲೋಕಾಕಾರದಲ್ಲಿನ ಜನ್ಮ ಜನ್ಮಾಂತರದ ಭವಾವಳಿಗಳನ್ನೊಳಗೊಂಡ ಕಥಾಗುಚ್ಛ. ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯರಿಂದ ಮೊದಲು ಬರೆಯಲ್ಪಟ್ಟ ಕೃತಿ. ಕನ್ನಡಕ್ಕೆ ಕಾವ್ಯಮಾರ್ಗದಲ್ಲಿ ಮೊದಲು ಬಂದಿದ್ದು ಆದಿಕವಿ ಪಂಪನಿಂದ. ಒಂದು ಜನ್ಮದಿಂದ ಮತ್ತೊಂದು ಜನ್ಮಕ್ಕೆ ಮೇಲ್ಮುಖವಾಗಿ ಚಲಿಸಿ ಮುಕ್ತಿ ಪಡೆವ ಮನುಕುಲದ ಕಥೆ. ಈ ಕಥೆಯನ್ನು ಕಾವ್ಯದಲ್ಲಿ ತರುವಾಗ ಎಲ್ಲಿಯೂ ಮೂಲಕ್ಕೆ ಧಕ್ಕೆ ಆಗದ ಹಾಗೆ ಮತ್ತು ಕಥಾ ಹಂದರ ಕಡೆದಂತೆ ನಡೆಸುವುದು ಬಹು ಕಷ್ಟದ ಕೆಲಸ. ತನಗಾಗಿ ಬರೆದುಕೊಳ್ಳುವುದು ನನ್ನದಾದರೂ ನನ್ನದಲ್ಲವೆನ್ನುವ ಒಂದು ಪ್ರಜ್ಞೆ ಮತ್ತೆ ಕಥೆ ಕೆಡುತ್ತಿಲ್ಲವೆನ್ನುವ ಪ್ರಜ್ಞೆಗಳು ಜಾಗೃತವಾಗಿ ಇರುತ್ತದೆ, ಆದರೆ ತನಗಾಗಿ ಬರೆದಾಗ ಎಲ್ಲಿಯೂ ಒಮ್ಮೆಯೂ ಮನಸ್ಸಿಗೆ ಇದು ನನ್ನದಲ್ಲ, ನಾ ಹೇಳಬೇಕಾದ ರೀತಿ ಇದಲ್ಲ, ನನ್ನ ಮನದ ಕಥೆ ಓತಪ್ರೋತವಾಗಿ ಎಲ್ಲಿ ಬರಬೇಕು? ಏಕೆ ಬರಬೇಕು? ಬಂದರೆ ಯಾವ ಭಾವ ಸಂವಹನ ಆಗುತ್ತದೆ? ಬಾರದೆ ಇದ್ದರೆ ಯಾವ ಭಾವ ಸಂವಹನ ಆಗುತ್ತದೆ? ಮೂಲಕ್ಕೆ ಧಕ್ಕೆ ಬರುತ್ತದೆಯೇ – ಇಲ್ಲವೇ? ಇಂತಹಾ ಹಲವಾರು ಪ್ರಶ್ನೆಗಳು ಮೂಡುತ್ತದೆ. ಇದಲ್ಲದೆ ಮತ್ತೊಂದು ಅಂಶ ಸಮಕಾಲೀನದಲ್ಲಿನ ಒಂದು ಧರ್ಮಕ್ಕೆ ಸಂಬಂಧಿಸಿದ ಕೃತಿಯನ್ನು ಮುಟ್ಟುವುದು, ತಿದ್ದುವುದು ಮಾರ್ಪಡಿಸುವುದು ಬಹು ಗಟ್ಟಿತನದ ಸವಾಲಿನ ಕೆಲಸ.

ಯಾವುದೇ ಧರ್ಮವನ್ನು ಒಪ್ಪಿದ ಸಮುದಾಯವಾಗಲಿ ಮೂಲ ಕಥೆಯ ಮಾರ್ಪಾಡನ್ನು ಮೊದಲು ಒಪ್ಪಲಾರದು. ಧರ್ಮಸೂಕ್ಷ್ಮತೆಗೆ ಮುಖಾಮುಖಿಯಾಗುವುದು ಕವಿಯೊಬ್ಬನ ಮೊದಲ ‘ಸವಾಲು’. ಇಲ್ಲಿಯ ಮಾರ್ಪಾಡುಗಳು ಯಶಸ್ವಿ ಅಯಶಸ್ವಿ ಅನ್ನುವುದಕ್ಕಿಂತ ಒಟ್ಟಾರೆ ಸಮಾಜದ ದೃಷ್ಟಿ ಅವನ ಬದುಕಿನ ಮೇಲೆ, ಬದುಕಿನ ಬಗೆಗೆ ಅವನ ಗ್ರಹಿಕೆಯ ಮೇಲೆ, ಬದುಕಿನ ಅಭಿವ್ಯಕ್ತಿಯಾದ ಕಾವ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನುವುದು ಬಹು ಮಹತ್ತರವಾದ ಅಂಶ.

ಮಹಾಪುರಾಣವಂತೂ ಜೈನ ಸಮುದಾಯದ ಪಾವಿತ್ರ್ಯತೆಯನ್ನು ಸಾರುವ ಮಹಾಗ್ರಂಥ. ಸಮಗ್ರ ಜೈನ ಸಾಹಿತ್ಯದ ಶಿರೋಮಣಿ ಅನಿಸಿಕೊಂಡಿರುವ ಹತ್ತೊಂಭತ್ತು ಸಾವಿರ ಪದ್ಯಗಳನ್ನು ಹೊಂದಿರುವ ಗ್ರಂಥ. ಇದೊಂದು ಮನುಕುಲದ ಜನ್ಮಜನ್ಮಾಂತರ ಭವಬಂಧ ಮತ್ತು ಭವದ ಬಿಡುಗಡೆಯ ಕಥೆ. ಗುಣಭದ್ರಾಚಾರ್ಯರೇ ಉತ್ತರ ಪುರಾಣದಲ್ಲಿ ಹೇಳುವಂತೆ,

ವೃತ್ತಕಂ ತಸ್ಯ ವಕ್ಷ್ಯಾಮೋ ಜನ್ಮತ್ರಯ ಸಮಾಶ್ರಿತಂ
ಶ್ರುತೇನ ಯೋಗ ಭವ್ಯಾನಾಂ ಭವೇದ್ಭೂಯೋ ಭವಾದ್ಭವಂ

ಕುಮಾರ್ಗವಾರಿಣೀಯಸ್ಮಾತ್ ಯಸ್ಮಾತ್ ಸನ್ಮಾರ್ಗಧಾರಿಣೀ
ತತ್ತೇಧಮ್ಯಾರ್ಂ ಕಥಾಂ ವಕ್ಷ್ಯೇ ಭವ್ಯಾನಾಂ ಮೋಕ್ಷಗಾಮಿನಾಂ

ಪ್ರತಿಯೊಂದು ಜೀವಿಯೂ ಒಮ್ಮೆಲೇ ಮುಕ್ತಿ ಹೊಂದಲು ಸಾಧ್ಯವಿಲ್ಲ, ಅದಕ್ಕೆ ಅನೇಕ ಜನ್ಮ ಜನ್ಮಾಂತರದ ಸಂಸ್ಕಾರ ಸಾಧನೆಯು ಅವಶ್ಯಕ. ಇಲ್ಲಿನ ಸಾವೂ ಕೇವಲ ಸಾವಲ್ಲ, ಕೈವಲ್ಯದ ಬಾಗಿಲ ಬಡಿವ ಕೀಲಿಕೈ. ಆಗ ಸಮ್ಯಕ್ತ್ವ ಹೊಂದಲು ಸಾಧ್ಯ, ಹಾಗೆ ಹೊಂದಿದ ಜೀವವೇ ಭವ್ಯ ಜೀವ ಅನಿಸುತ್ತದೆ. ಈ ಭವ್ಯತ್ವ ಒದಗುವುದನ್ನೇ ಕಾಲಲಬ್ದಿ ಅನ್ನುವರು. ಪುರಾಣಕಾರರು ಭವ್ಯತ್ವ ಪಡೆದ ಮೇಲಿನ ಭವಾಂತರಗಳ ವರ್ಣನೆ ಮಾಡುತ್ತಾರೆ. ಅದು ಜನ್ಮ ಜನ್ಮಾಂತರದ ಕಥಾ ಹಂದರ. ಇದು ಬಹು ಜಟಿಲ ಅನಿಸದೆ ಇರದು.

ಎಲ್ಲಾ ಸವಾಲುಗಳನ್ನೂ ತೆಗೆದುಕೊಳ್ಳುತ್ತಲೇ ಏಕಕಾಲದಲ್ಲಿ ಧರ್ಮ ಮತ್ತು ಜೀವನ ಧರ್ಮದ ಮೇಲೆ ಪ್ರಭಾವ ಬೀರಿರುವ ಮಹತ್ತರ ಕೃತಿಯನ್ನು ಕನ್ನಡದಲ್ಲಿ ರಚಿಸುವ ಕಡೆ ಮನಸ್ಸು ಮಾಡಿ ಗೆದ್ದವನು. ಆ ಕಾಲದಲ್ಲಿ ಬಹು ಪ್ರತಿರೋಧಗಳು ಬಂದಿರಬಹುದು, ಆದರೂ ಅವುಗಳನ್ನು ಮೀರಿಕೊಳ್ಳುವಲ್ಲಿ ಅವನ ಗಟ್ಟಿತನ ಇಂದಿಗೂ ಯಶಸ್ವಿಯಾಗಿಯೇ ಇದೆ. ಈ ಗಟ್ಟಿತನ ಅನ್ನುವುದಕ್ಕೆ ಸಹಾ ಅವನ ತಮ್ಮ ಕೆತ್ತಿಸುವ ಗಂಗಾಧರಂ ಶಾಸನದ ಪಾಠವನ್ನು ಒಮ್ಮೆ ನೋಡಿದರೆ ತಿಳಿಯುತ್ತದೆ. (ಬರೆದುದೆ ತಾಮ್ರಶಾಸನದೇಯಮೆ ಧಮ್ಮವುರಂ/ ನೆಗಳ್ತೆವೆತ್ತರಿಗನ ಕೊಟ್ಟುದೇ/ ನೆಗಳ್ತಪಂಪನ ಪೆತ್ತುದೆ ಪೇಳಿಮೆಂದು/ ನೀಂ ಮರುಳೆ/ ಪಲರ್ಮೆಯುಂ ಪಲಬರಂ ಬೆಸಗೊಳ್ಳದೆ/ ಪೋಗಿ ನೋಡ/ ಸುಂದರ ವೃಷಭಾಚಳೋನ್ನತ ಶಿಲಾತಟದೊಳ್/ ಬರೆದಕ್ಕರಂಗಳಂ – ಜಿನವಲ್ಲಭನ ಶಾಸನ)

ಆದಿಪುರಾಣ ರಚನೆಯ ಹಿಂದೆ ಬಹುದೊಡ್ಡ ಶರಣಾಗತಿ ಮತ್ತು ವ್ಯಕ್ತಿತ್ವ ನಿರಸನ ನಡೆದಿದೆ. ಪಂಪನೇ ಆದಿಪುರಾಣವನ್ನು ಹೇಳುತ್ತಿದ್ದರೂ ಅದರ ಹಿಂದಿನ ವಸ್ತುಧ್ವನಿ ಮಹಾಪುರಾಣಕಾರರದು. ಈ ಪ್ರಜ್ಞೆ ಪ್ರತೀ ಕ್ಷಣವೂ ಪಂಪನಲ್ಲಿ ಎಚ್ಚರವಾಗಿದೆ. ಅದಕ್ಕೆ ಕೆಲವು ಉದಾಹರಣೆಯಾಗಿ ಆದಿಪುರಾಣದ ಕೆಲವು ಸಾಲುಗಳನ್ನೊಮ್ಮೆ ನೋಡಿ.

ಸಂಸಾರದೊಳ್ ಸಾರಮಪ್ಪುದಮಂ ಧರ್ಮಮಂ
ಅದಂ ನಿಮಿರ್ಚುವುದರಿಂ ಸಂಸಾರಸಾರೋದಯಂ ( 1.26 )

ಬುಧ ಸಮೂಹಮ್
ಪೇೞೆಂದೊಡೆ ಪೇಳಲ್ಕೆ ಆಂ ಬಗೆದಂದೆನ್
ಇದು ಎನ್ನಳವೆ
ಗಣಧರೋಚಿತ ಚರಿತಂ? ( 1.33 )

ಪುರುದೇವಾದಿ ಜಿನೇಂದ್ರ ಮಾಲೆ
ಗುಣಭೃತ್ ಸಂತಾನಂ ಎಂದು ಈ ಪರಂಪರೆಯಿಂ
ವಿಶ್ರುತ ವೀರಸೇನ ಜಿನಸೇನಾಚಾರ್ಯ ಪರ್ಯಂತಮಾಗಿರೆ
ಬಂದ ಈ ಕಥೆ ಗುಣ್ಪುವೆತ್ತುದು
ಅವರುಂ ಜ್ಞಾನಾರ್ಥಿ ಸಂಪನ್ನರ್ ಎಂದು ಇರದೆ
ಆಂ ಧೃಷ್ಟನೆನ್
ಈ ಕಥಾಬ್ದಿಯುಮನ್
ಏನ್ ಈಸಲ್ ಮನಂದಂದೆನೋ ( 1.34 )

ಪೇರೀವುದೇಂ
ಪೇರಮಾಡುವುದೇಂ
ಪೇರಿಂದಂ ಅಪ್ಪುದೇಂ ( 1.35 )

ಈ ನೆಗೞ್ದ ಆದಿಪುರಾಣಮನ್
ಅಪರಿಮಿತ ಭಕ್ತಿಯಿಂ ವಿರಚಿಸುವೆಂ ( 1.41 )

ಇದುವೆ
ಸುಕವಿ ಪ್ರಮೋದ ಪ್ರದಮ್
ಇದುವೆ
ಸಮಸ್ತ ಭವ್ಯಲೋಕ ಪ್ರಮುದ ಪ್ರಮದಮ್ ಎನೆ
ನೆಗೞ್ದ ಆದಿಪುರಾಣದೊಳ್ ಅರಿವುದು
ಕಾವ್ಯಧರ್ಮಮಂ ಧರ್ಮಮಂ ( 1.37 )

ಈ ನೆಗೞ್ದ ಆದಿಪುರಾಣಮನ್
ಅಪರಿಮಿತ ಭಕ್ತಿಯಿಂ ‘ವಿರಚಿಸುವೆಂ’ ( 1.41 )

ಈ ಮೇಲಿನ ಸಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲೊಂದು ಮೂಲ ಕಥೆಗೆ, ತನ್ನ ಕಾಲದ ಬದುಕಿಗೆ ಬಹುದೊಡ್ಡ ಶರಣಾಗತಿಯ ಜೊತೆ ಜೊತೆಗೇ ಕಥೆ ಕಡೆದ ಹಾಗಿನ (ವಿ)ರಚನೆಯ ಕಡೆಗೆ ಅವನ ದೃಷ್ಟಿ ಜಾಗೃತವಾಗಿರುವುದು ತಿಳಿಯುತ್ತದೆ. ಆದರೆ ವಸ್ತುವನ್ನು ನಡೆಸುವ ಮತ್ತು ಅದರಿಂದ ಹೊಸದೊಂದು ತನ್ನ ಕಾಲದ ಧ್ವನಿಯನ್ನು ಹೊರಡಿಸುವ ಅವನ ಶೋಧ ಇಲ್ಲಿ ದರ್ಶನವಾಗಿ ಯಶಸ್ವಿಯಾಗಿದೆ. ಈ ನೆಗೞ್ದ ಆದಿಪುರಾಣದೊಳ್ ಅರಿವುದು ಕಾವ್ಯಧರ್ಮಮಂ ಧರ್ಮಮಂ ಸಾಲಂತೂ ಬಹುವಾಗಿ ಕಾಡುತ್ತದೆ. ತನ್ನ ಕಾವ್ಯವನ್ನು ಅರ್ಥಮಾಡಿಕೊಳ್ಳಲು ಅವನೇ ಒಂದು ಹೊಳಹನ್ನು ಸಹಾ ಕೊಡುತ್ತಾನೆ. (ಕಾವ್ಯಧರ್ಮಮಂ ಧರ್ಮಮಂ) ಕಾವ್ಯಧರ್ಮದ ಹೊದಿಕೆಯನ್ನು ಹೊದ್ದು ಬಂದ ಜೈನಧರ್ಮದ ಹರಳುಗಳಿವು.

ಆದಿಪುರಾಣದ ಭವಾವಳಿಗಳಲ್ಲಿ ಮೂರನೆಯದು ಶ್ರೀಮತಿ ಮತ್ತು ವಜ್ರಜಂಘರೆಂಬ ಜೋಡಿಯ ಕಥೆ. ಇಲ್ಲಿನ ಸಾವು ಶೃಂಗಾರದಿಂದ ಶಾಂತಕ್ಕೆ ನಡೆವ ಕ್ರಮ ಬಹುಮುಖ್ಯವಾದುದು. ಇಲ್ಲಿನ ಸಾವು ಕಾರ್ಯವಾದರೆ ಇದಕ್ಕೆ ಕಾರಣಕರ್ತರು ಮೂರನೆಯವರು. ಒಬ್ಬ ಸೇವಕಿ ಮಾಡಬೇಕಾದ ಒಂದು ಕಾರ್ಯವನ್ನು ಮರೆಯುವಂತಹಾ ಅವಳಲ್ಲಿನ ಮರೆವು ಅನ್ನುವ ಸಣ್ಣ ಸಮಸ್ಯೆ ಬಹುದೊಡ್ಡದಾಗಿ ಇಬ್ಬರ ಜೀವವೇ ನಾಶವಾಗುತ್ತದೆ. ಕೊನೆಗೆ ಅದನ್ನು ಗಮನಿಸಿ ತೆರೆಯಬೇಕಾದ ಇವರೂ ಮರೆತರು. (ಗಮನಿಸಿ – ಯಶೋಧರ ಚರಿತೆಯಲ್ಲಿಯೂ ಅಮೃತಮತಿಗೆ ಅವಳ ದೂತಿ ರೇಗಿಸಲು ಆಡುವ ಒಂದು ಮಾತು ‘ಕಾಮದೇವನ್ ಇಂದ್ರನ್ ಚಂದ್ರನ್’ ಅನ್ನುವುದೇ ಸತ್ಯವಾಗುವುದು ಬಹುಮುಖ್ಯ ಅಂಶ. ಆ ನಂತರವೇ ‘ಕರಿದಾದೊಡೆ ಕತ್ತುರಿ, ಮುರುಟಾದೊಡೆ ಮಲಯಜ, ಕೊಂಕಿದ ಸ್ಮರ ಚಾಪದ’ ರೂಪಕ ಬರುವುದು)

ಲೋಕಾಂತಕ್ಕೆ ಹಾದಿಯನ್ನು ತೋರುವ ಜೈನ ಧರ್ಮದ ಕಥೆಗೆ ತನ್ನ ಕಾಲದಲ್ಲಿ ಗ್ರಹಿಸುವ ಅವನ ಸಮಕಾಲೀನಗೊಳಿಸುವ ಪ್ರಜ್ಞೆಯೇ ಸೆಳೆದುಬಿಡುತ್ತದೆ. ಹತ್ತನೆಯ ಶತಮಾನದಲ್ಲಿ ಸತಿಸಹಗಮನ ಪದ್ಧತಿ ಇದ್ದು, ಇದರಲ್ಲಿಯೂ ಸಹಗಮನ ಮತ್ತು ಅನುಗಮನ ಎಂಬ ಎರಡು ಪ್ರಕಾರಗಳು ಇದೆ. ಗಂಡನ ಹೆಣದ ಜೊತೆಗೇ ಚಿತೆ ಏರುವುದು ಸಹಗಮನವಾದರೆ, ದೂರದಲ್ಲಿ ಎಲ್ಲೋ ಗಂಡ ಸತ್ತ ಸುದ್ದಿಯನ್ನ ತಿಳಿದು ಅವನ ನೆಚ್ಚಿನ ವಸ್ತುಗಳನ್ನು ಚಿತೆಯಲ್ಲಿ ಇಟ್ಟು ಅದರೊಂದಿಗೆ ಬೆಂಕಿಗೆ ಹಾಯುವುದು ಅನುಗಮನ. (ಆಫ್ರಿಕಾದ ಬುಡಕಟ್ಟು ಜನಾಂಗದಲ್ಲಿ ಪತಿಬಲಿ ಅನ್ನುವುದು ಸಹಾ ಇತ್ತು. ಘಾಶಾದ ಆಶಾಂಟಿ ಪ್ರದೇಶದ ನ್ಯಾಚ್ಛೆಯ ಬುಡಕಟ್ಟಿನಲ್ಲಿ ಹೆಂಡತಿ ಸತ್ತಾಗ ಗಂಡನಾದವನು ಅವಳ ಜೊತೆ ಚಿತೆ ಏರುವ ಆಚರಣೆ ಇತ್ತು) ರನ್ನನು ಅಜಿತ ತೀರ್ಥಂಕರ ಪುರಾಣ ತಿಲಕದಲ್ಲಿ ಸತಿಸಹಗಮನವನ್ನು “ಶುಭ ಚರಿತ ಮರಣ” ಎಂದು ಕರೆದಿದ್ದಾನೆ. (ಎರಡೆವಲಂ ಕುಲವಧಿಗಾ/ ಚರಿಸಲ್ ಪತಿಯಿಂ ಪರೋಪದೊಳ್ ಜಿನದೀಕ್ಷಾ/ ಚರಣಂ ಮೇಣ್ ಶುಭ ಚರಿತದೆ/ ಮರಣಂ ಮೇಣೞಿಪಿ ನಿಂದೆ ಬಾಳ್ವುದು ದೊರೆಯೇ?) ಈ ಪದ್ದತಿ ಜೀವಂತವಾಗಿದ್ದ ಕಾಲದಲ್ಲಿದ್ದವನು ಪಂಪ. ಅವುಗಳನ್ನು ಮೀರಿಸಿದ ಅಥವಾ ಪಲ್ಲಟಗೊಂಡ ಒಂದು ಸಂದರ್ಭ ಸಿಕ್ಕಾಗ ಅದಕ್ಕೆ ಕವಿ ಮನಸ್ಸು ಪ್ರತಿಸ್ಪಂದಿಸುವ ರೀತಿ ಬಹಳ ಮುಖ್ಯವಾಗುತ್ತದೆ. ಆ ಭಾಗ ಹೀಗಿದೆ…

ವಚನ : ಅಂತು ಅನೇಕ ಸಂವತ್ಸರರಂಗಳ್ ಸಲ್ವಿನಂ ಒಂದು ದಿವಸಂ-ರಜನೀ ಸಮಯದೊಳ್, ಅನರ್ಘ್ಯ ಮರಕತಮಣಿ ಶಿಲಾ ಸಂಪಾದಿತ ಮೇಧಿನೀ ಭಾಗದೊಳ್, ಅಮರ ಖಚರ ಕಿನ್ನರ ಮಿಥುನ ಸನಾಥ ಚಿತ್ತಭಿತ್ತಿ ವಿರಾಜಿತದೊಳ್, ಅತಿ ಬಹುಳ ಕಾಳಾಗರು ಧೂಪ ಧೂಮ ಅಮೋದದೊಳ್, ಪ್ರದೀಪಿಕೋದ್ಯೋತ ದೂರೀಕೃತ ತಮಸ್ತಮದೊಳನೇಕ ರತ್ನರಚಿತ ಪ್ರತಿಪಾದುಕ ವಿನ್ಯಸ್ತ ಕಾಂಚನ ಮಂಚೋಪ ಶೋಭಿತದೊಳ್, ಅತಿ ವಿಶದ ಮಣಿಪ್ರದೀಪಿಕಾ ಉದ್ಯೋತ ದೂರೀಕೃತ ಸಮಸ್ತಮದೊಳ್, ಪಯಃಪಯೋಧೀ ಫೇನ ಸಂಕಾಶ ದುಕೂಲ ಪ್ರಚ್ಛದಾಚ್ಛಾದಿಪ ವಿಚಿತ್ರ ನೇತ್ರೋಭಯೋಪಧಾನ ಶಯ್ಯಾತಳ ವಿಳಸಿತದೊಳ್, ಅನೇಕ ವಿಳಾಸ ನಿವಾಸ ಭವನದೊಳ್ ಆ ದಂಪತಿಗಳ್ ಅನ್ಯೋನ್ಯ ಅಂಗಸ್ಪರ್ಶ ಸುಖ ನಿಮೀಳಿತ ವಿಳೋಚನರ್ ಅಂತಂತೆ ನಿದ್ರಾರಸ ವಶಗತರಾದರ್

ಅನ್ನೆಗಂ ಅಲ್ಲಿ ಮುಚ್ಚಿದ ಹರಿನೀಲ ಗವಾಕ್ಷಾಜಾಲ ಕವಾಟ ಪುಟಂಗಳಂ ತೆರೆಯಲ್ ಮರೆದು, ಸೂರ್ಯಕಾಂತದ ಧೂಪಗುಂಡಿಯೊಳ್ ಅಳವನಱಿಯದೆ ಸಜ್ಜೆವಳನ್ ಇಕ್ಕಿದ ಕೇಶಸಂಸ್ಕಾರ ಕಾಳಾಗರು ಧೂಪಂ

ಮೊದಲೊಳ್ ನೀಳ್ದು ಪೇೞೆದು ಪರ್ಬಿ
ಪರಮಂ ಕೈಗೊಂಡು
ಮುಂದೈಸಿ ಮಾಣದೆ
ತನ್ನಂದದೊಳ್ ಏಳ್ಗೆ ಕುಂದದೆ
ನಿರುದ್ಧೋಚ್ಛ್ವಾಸಂ ಅಪ್ಪನ್ನೆಗಂ ಪುದಿದು
ಆ ದಂಪತಿಯಂ ಪುದುಂಗೊಳಿಸಿ
ಲೋಕಾಶ್ಚರ್ಯಮಂ ಮಾಡಿ ಕೊಂದುದು
ಕಾಳಾಗರು ಧೂಪ ಧೂಮನಿವಹಂ
ಕೃಷ್ಣೋರಗಂ ಕೊಲ್ವವೋಲ್ ( 5. 23 )

ಬಿಡದೆ ಪೋಗೆ ಸುತ್ತಿ
ತೋಳಂ ಸಡಲಿಸದೆ
ಆ ಪ್ರಾಣವಲ್ಲಭರ್ ಪ್ರಾಣಮನ್ ಅಂದು ಒಡಗಳೆದರ್
ಓಪರ್ ಓಪರೊಳ್ ಒಡಸಾಯಲ್ ಪಡೆದರ್
ಇನ್ನುವೇಂ ಸೈಪು ಒಳವೇ ( 5. 24 )

ಭೋಗಾಂಗಮ್ ಆಗಿಯುಮ್ ಕೃಷ್ಣಾಗರು ಧೂಪಂ
ಮುಸುಂಕಿ ಕೊಂದಿಕ್ಕಿದುದು ಆ ಭೂಗಿಗಳನ್
ಇಂತು ಸಂಸೃತಿಭೋಗಂಗಳ್
ಭೋಗಿ ಭೋಗದಿಂ ವಿಷಮಂಗಳ್ ( 5. 25 )

ಅನಿತು ಸುಖದ
ಅನಿತು ಭೋಗದ ಮನುಜಕುಲಂ
ನೋಡೆ ನೋಡೆ
ತತ್ ಕ್ಷಣದೊಳ್ ತಾನ್ ಇನಿತೊಂದು ದೆಸೆಯನ್ ಎಯ್ದುದುದು ಎನೆ
ಜಡರೇನೆಂದು ನಂಬುವರ್ ಸಂಸೃತಿಯಂ ( 5. 26 )

ಬೆಳಗುವ ಸೊಡರ್ಗುಡಿ ಕಿಡೆ
ಮನೆಯೊಳಗೆ ತಮಂ ಪರ್ವುವಂತೆ
ಜೀವಂ ತನುವಿಂ ತೆರಳಲೊಡಂ
ವಿಚ್ಛಾಯತೆಗೆ ಒಳಗಾದವು
ತೊಳಗುವರವರ ಸುಂದರ ತನುಗಳ್ ( 5.27 )

ಆದಿಪುರಾಣದ ಭವಾವಳಿಗಳಲ್ಲಿ ಮೂರನೆಯದು ಶ್ರೀಮತಿ ಮತ್ತು ವಜ್ರಜಂಘರೆಂಬ ಜೋಡಿಯ ಕಥೆ. ಇಲ್ಲಿನ ಸಾವು ಶೃಂಗಾರದಿಂದ ಶಾಂತಕ್ಕೆ ನಡೆವ ಕ್ರಮ ಬಹುಮುಖ್ಯವಾದುದು. ಇಲ್ಲಿನ ಸಾವು ಕಾರ್ಯವಾದರೆ ಇದಕ್ಕೆ ಕಾರಣಕರ್ತರು ಮೂರನೆಯವರು.

ಇದೊಂದು ಸುಂದರವಾದ ಸಂಭೋಗ ಶೃಂಗಾರದ ಸಂದರ್ಭ, ಅಂತೆಯೇ ಧುತ್ತೆಂದು ಘಟಿಸುವ ಉಸಿರು ಕಟ್ಟಿಸುವ ಸಾವು. ಆಚಾರ್ಯ ತ. ಸು. ಶಾಮರಾಯರು ಆದಿಪುರಾಣ ದೀಪಿಕೆಯಲ್ಲಿ ಹೇಳುವಂತೆ “ಈ ಭಾವ ಪೂರ್ವಪುರಾಣದಲ್ಲಿಲ್ಲ. ಕೃಷ್ಣೋರಗದ ಉಪಮಾನವಾಗಲಿ, ಅದು ಧೂಪಧೂಮ ಕ್ರಮವಾಗಿ ಹಬ್ಬಿದ್ದರ ವರ್ಣನೆಯಾಗಲಿ, ಅದಕ್ಕೆ ತಕ್ಕ ಛಂದಸ್ಸಿನ ಸರ್ಪದೀರ್ಘ ವಿನ್ಯಾಸವಾಗಲಿ ಪೂರ್ಣವಾಗಿ ಪಂಪನದೇ” ಇಲ್ಲಿನ ಪದ್ಯವನ್ನು ಛಂದೋ ಪಾದ ವಿನ್ಯಾಸದಲ್ಲಿ ಗಮನಿಸಿದರೆ ಏರುಗತಿಯಲ್ಲಿ ತನ್ನ ಲಯ, ವಸ್ತು ಮತ್ತು ಅರ್ಥ ಕೆಡದಂತಹಾ ಕ್ರಮವಿದೆ. ಮತ್ತದು ಯಶಸ್ವಿಯನ್ನು ಸಹಾ ಪಡೆದಿದೆ. ಏಕಕಾಲದಲ್ಲಿ ಎರಡೂ ವೈರುಧ್ಯಗಳನ್ನು ಹೇಳುವುದು ಇಲ್ಲಿನ ಭಾಗದ ಕ್ರಿಯೆ.

ಒಂದು ಸಂದರ್ಭದಲ್ಲಿನ ರಸವನ್ನು ಗಮನಿಸಲು ಬಹುವಾಗಿ ಅಲ್ಲಿನ ಪರಿಸರ ಕಾರಣವಾಗುತ್ತದೆ. ವಚನದಲ್ಲಿ ಹೇಳುವ ಹಾಗೆ ಬಹಳ ಕತ್ತಲಾಗಿದೆ, ಮರಕತಮಣಿಯನ್ನೇ ನೆಲಹಾಸನ್ನಾಗಿ ಕೂಡಿದ ಕೊಠಡಿ, ಕೊಠಡಿಯ ಒಳಗೆ ಸುತ್ತಾ ಚಿತ್ರಪಟಗಳಿವೆ, ಒಂದು ಚಿನ್ನದ ಮಂಚ, ಮಂಚದ ಒಂದೊಂದು ಕಾಲುಗಳೂ ಚಿನ್ನದಿಂದ ಮಾಡಿದ್ದು, ಅಲ್ಲೊಂದು ಚಿನ್ನದ ದೀಪ ಉರಿಯುತ್ತಿದೆ. ಅದರ ಬೆಳಕು ಮಬ್ಬು ಮಬ್ಬಾಗಿಲ್ಲದೆ ಉಜ್ವಳವಾಗಿದೆ. ರಾಣೀವಾಸದ ಅಂತಃಪುರವು ಹೇಗಿತ್ತು? ರಾಣಿಯರು ಹೇಗಿರುತ್ತಿದ್ದರು? ಮತ್ತು ಏನೇನು ವಸ್ತುಗಳನ್ನು ಬಳಸುತ್ತಿದ್ದರೆಂಬ ಒಂದು ಪಟ್ಟಿ ಇದೆ. ಆ ಪಟ್ಟಿಯಲ್ಲಿನ ಒಂದು ಅಂಶ ಬಹುವಾಗಿ ಸೆಳೆದು ಬಿಡುತ್ತದೆ. ಅದೇ “ಕಾಳಾಗರು ಧೂಪ” ಆ ಧೂಪವು ಹಾಕುವುದು ಕೊಠಡಿಯು ಸುವಾಸನೆ ಭರಿತವಾಗಲಿ ಎಂದು, ಹಾಗೆ ಒದ್ದೆಯಾದ ಕೂದಲು ಒಣಗಿಸಿಕೊಳ್ಳಲು. ಅದು ಹೆಚ್ಚಾದುದು ಇಲ್ಲಿನ ಸಾವಿಗೆ ಬಹುಮುಖ್ಯ ಕಾರಣ (ಇಂದು ಕೊಠಡಿಗೆ ಹಾಕುವ ಏರ್ ಫ್ರೆಷ್ನರ್ ಸಹಾ ಇದೇ ಅಪಾಯ ತರುತ್ತದೆಂದು ಹೇಳುವರು)

ಅವರಿಬ್ಬರೂ ಒಬ್ಬರಿಗೊಬ್ಬರು ಅಂಗಸುಖದಲಿ ಕೂಡಿ, ನಿಮೀಳಿತ ನೇತ್ರರಾಗಿ, ನಂತರ ನಿದ್ರೆಗೆ ಜಾರುತ್ತಾರೆ. ಮೊದಲೇ ಧೂಪ ಹಾಕಿದ ಮೇಲೆ ಅಲ್ಲಿನ ಹೊಗೆ ಹೋಗುವ ಹಾದಿಯಲ್ಲಿನ ಕಿಟಕಿಯನ್ನು ತೆಗೆಯದೆ ಮರೆತು ಹೋಗಿರುವುದಲ್ಲದೆ, ಸ್ವಲ್ಪ ಹೆಚ್ಚಾಗಿ ಧೂಪವನ್ನೂ ಹಾಕಿರುತ್ತಾರೆ. ಏಕಕಾಲದಲ್ಲಿ ದಣಿದ ದೇಹ, ಮನಸ್ಸು, ಸೆಳೆದ ನಿದ್ರೆ ಇವುಗಳ ಜೊತೆಗೆ ಆ ಉಸಿರು ಕಟ್ಟಿಸುವ ಹೊಗೆ ಇವರಿಗೆ ಚಿರನಿದ್ರೆಯನ್ನು ತರುತ್ತದೆ. ಸಂದರ್ಭದ ಜೊತೆಗೆ ಅಲ್ಲಿನ ಸಾವಿನ ನಂತರದ ಉದ್ಗಾರಗಳು ಸಹಾ ಬಹುಮುಖ್ಯವಾದದ್ದು.

ಇಲ್ಲಿನ ಪದ್ಯವನ್ನೊಮ್ಮೆ (23) ಗಮನಿಸಿ. ನಿಧನಿಧಾನವಾಗಿ ಕಪ್ಪಾದ ಹೊಗೆ ಸ್ವಲ್ಪ ಸ್ವಲ್ಪವೇ ಕೊಠಡಿಯನ್ನೆಲ್ಲಾ ಆಕ್ರಮಿಸುತ್ತಿದೆ, ಅದು ಮೊದಲಲ್ಲಿ ಉದ್ದವಾಗಿ ಹೊರಟು, ಹಬ್ಬುತ್ತಾ, ಹರಡುವಿಕೆ ಹೆಚ್ಚಾಗುತ್ತಾ ದಟ್ಟವಾಗಿ ಸಾಗಿ, ಸ್ವಲ್ಪವೂ ಕಡಿಮೆ ಆಗದೆ, ಅವರಿಬ್ಬರ ಉಸಿರು ಕಟ್ಟುವ ತನಕವೂ, ಸಾಂದ್ರವಾಗಿ ಆ ಗಂಡ ಹೆಂಡತಿಯನ್ನು ಒಟ್ಟಾಗಿ ಸೇರಿಸಿ, ‘ಲೋಕ ಆಶ್ಚರ್ಯ ಪಡುವ ಹಾಗೆ’ ಕಪ್ಪಾದ ಹಾವು ಕೊಲ್ಲುವ ಹಾಗೆ ಕೊಂದಿತು.

ಈ ವಿವರಣೆಯಲ್ಲಿ ಎಲ್ಲವೂ ಉಸಿರುಗಟ್ಟುವ ಕ್ರಿಯಾಪದಗಳ ಸರಮಾಲೆಯೇ ಇದೆ. ಈ ಕ್ರಿಯಾಪದ ಸಮೂಹವೇ ಮುಂದಿನ ಕ್ರಿಯೆಯನ್ನು ಯಶಸ್ವಿಯಾಗಿ ಕಟ್ಟಿಕೊಡುತ್ತಿದೆ. ನೀಳ್ದು, ಪರ್ಬಿ, ಪರಮಂ ಕೈಕೊಂಡು, ಮಂದೈಸಿ, ಮಾಣದೆ, ಏಳ್ಗೆ ಕುಂದದೆ, ನಿರುದ್ಧೋಚ್ಛ್ವಾಸಂ ಅಪ್ಪನ್ನೆಗಂ, ಪುದುಂಗೊಳಿಸಿ, ಕೊಂದುದು ಇವಿಷ್ಟೂ ಪದಗಳು ಒಂದೊಂದು ಸಹಾ ಸಾವಿನ ಕ್ರಿಯೆಯನ್ನು ತೀವ್ರವಾಗಿಸುತ್ತಾ, ಸರ್ಪದ ಏರುಗತಿಯನ್ನ ತಿಳಿಸುತ್ತಲೇ ಮುಂದಿನ ಚಿತ್ರವಾದ ಹೆಡೆ ಎತ್ತಿ ಬುಸುಗುಡುತ್ತಿರುವ ಹಾವಿನ ಚಿತ್ರ ಕಣ್ಣಿಗೆ ಕಟ್ಟಿ ಬಿಡುತ್ತದೆ. ಕಾಳ ಅಥವಾ ಕಾಲಾ ಅಂದರೆ ಕಪ್ಪು, ಸಾವಿಗೆ ಸಂಕೇತವಾಗಿ ಬಳಸಿದ್ದಾನೆ. “ಲೋಕಾಶ್ಚರ್ಯಮಂ ಮಾಡೆ ಕೊಂದುದು” ಅನ್ನುವ ಸಾಲು ಪದ್ಯದ ಓದುಗನಲ್ಲಿ ಕೊಕ್ಕೆಯಾಗಿ ನಿಲ್ಲುತ್ತದೆ. ಏನದು ಲೋಕಾಶ್ಚರ್ಯ? ಏಕೆ ಲೋಕಾಶ್ಚರ್ಯ? ಅನ್ನುವಂತಹಾ ಪ್ರಶ್ನೆಗಳು ಮೂಡುತ್ತದೆ.

ಪಂಪನ ಕಾಲದಲ್ಲಿ ಸತೀಸಹಗಮನ ಪದ್ಧತಿಯು ಚಾಲ್ತಿಯಲ್ಲಿತ್ತು ಅನ್ನುವುದನ್ನು ಗಮನದಲ್ಲಿಟ್ಟು, ಅದರಲ್ಲಿಯೂ ಅನುಗಮನ ಸಹಗಮನಗಳು ಆ ಕಾಲದ ಜನರಿಗೆ ಸಮಾಜವೊಂದು ಒಪ್ಪಿತ ಮೌಲ್ಯವಾಗಿ ಸಾಮಾನ್ಯವಾಗಿತ್ತು. ಈ ಎರಡೂ ಕ್ರಿಯೆಗಳು ಒಬ್ಬನ ಜೀವಹೋದ ನಂತರ ಉಳಿದ ಹೆಣ್ಣು ಸತ್ತವನನ್ನು ಅನುಸರಿಸಿ ತನ್ನ ಜೀವ ತ್ಯಾಗ ಮಾಡುವುದು ಸಹಗಮನವಾದರೆ, ಎಲ್ಲೋ ಸತ್ತ ಗಂಡನ ಪ್ರಿಯ ವಸ್ತುಗಳನ್ನು ಚಿತೆಯಲ್ಲಿಟ್ಟು ಅದರೊಂದಿಗೆ ಬೆಂಕಿಗೆ ಹೋಗುವುದನ್ನು ಅನುಗಮನ ಅನ್ನುವರು. (ಗಮನಿಸಿ-ಮಹಾಸತಿ ಕಲ್ಲು) ಆದರೆ ಇಲ್ಲಿ ಇಬ್ಬರೂ ಒಟ್ಟಿಗೆ ‘ತೋಳಂ ಸಡಲಿಸದಾ ಪ್ರಾಣವಲ್ಲಭರ್, ಮನಂ ಎಡೆಗೊಳದಂದು, ಓಪರೋಪರೊಳ್ ಒಡ’ ಸಾಯುವ ಚಿತ್ರವನ್ನು ಕಟ್ಟಿ ಕೊಡುವುದು ಲೋಕಕ್ಕೆ ಆಶ್ಚರ್ಯವಲ್ಲದೆ ಮತ್ತಿನ್ನೇನು?

ಈ ಲೋಕವು ಆಶ್ಚರ್ಯ ಪಡುವುದು ಒಲಿದ ಜೋಡಿಗಳು ಒಟ್ಟಾಗಿ ಹೀಗೆ ಜೀವ ಕಳೆದುಕೊಳ್ಳುವುದನ್ನಲ್ಲವೇ. ಇದನ್ನು ಮೂಲದ ಕಥೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದ ಪಂಪ ಮೂಲದ ಕಥೆಯಿಂದ ಒಂದು ಹೊಸಾ ತತ್ವ ತನ್ನ ಕಾಲಕ್ಕೆ ಸ್ಪುರಿಸುವಂತೆ ಮಾಡುತ್ತಾನೆ. ಇದನ್ನು ದರ್ಶನ ಎಂದಾದರೂ ಅನ್ನಿ. ಮೂಲದಲ್ಲಿ ಮುಂದಿನ ಭವಕ್ಕೆ ಜಾರುವ, ಕಥೆಯು ಮುಂದಕ್ಕೆ ಹೋಗಲು ಮೆಟ್ಟಿಲಾಗಿ ಬರುವ ಇವರಿಬ್ಬರ ಸಾವು, ಆದಿಪುರಾಣದಲ್ಲಿ ‘ಆಶ್ಚರ್ಯ’ ಅನಿಸುವುದು ಸಮಕಾಲೀನ ಸಮಾಜದ ಒಂದು ಕಾರ್ಯದಲ್ಲಿ ಆದ ಮಹತ್ತರವಾದ ಬದಲಾವಣೆಯನ್ನು ತಿಳಿಸಿ ಲೋಕೋತ್ತರವಾದ ಕಥೆಗೆ ಲೋಕಾಕಾರದಲ್ಲಿ ಜಾಗ ಕೊಟ್ಟು, ಶ್ರೀಮತಿ ವಜ್ರಜಂಘರ ಕಥೆಗೆ ಸಮಕಾಲೀನ ದರ್ಶನದ ಸ್ಪರ್ಷ ಕೊಟ್ಟು ಬಿಡುತ್ತಾನೆ.

ವೃತ್ತದ ಕೊನೆಯಲ್ಲೊಂದು ಉಪಮೆ ಬರುತ್ತದೆ-ಅದು ರೂಪಕವೂ ಹೌದು- ಕೃಷ್ಣೋರಗಂ ಕೊಲ್ವವೋಲ್ (ಕಪ್ಪಾದ ಹೊಗೆ ಹಾವು ಕೊಲ್ಲುವಂತೆ) ಇಲ್ಲಿ ಹೊಗೆಯೇ ಹಾವಾಗಿ ಬಂದ ಸ್ಥಿತಿ. ಎರಡು ಆಯಾಮಗಳು ಬಹುಮುಖ್ಯವಾಗುತ್ತದೆ. ಪಾಶ್ಚಾತ್ಯ ಮನೋವಿಜ್ಞಾನದಲ್ಲಿ ಹಾವು ಕಾಮಕ್ಕೆ ಸಂಕೇತವಾದರೆ, ಭಾರತೀಯಲ್ಲಿ ಜಾಗೃತ ಪ್ರಜ್ಞೆಗೆ ಸಂಕೇತ. ಇಲ್ಲಿನ ಸಂದರ್ಭಕ್ಕೆ ಇವೆರಡೂ ಯಶಸ್ವಿಯಾಗಿ ಅನ್ವಯವಾಗುತ್ತಾ ಎರಡೂ ಅಂಶಗಳು ಓದುಗನೊಂದಿಗೆ ಸಂವಹನ ಆಗುತ್ತದೆ. ಒಂದು ಅವರಿಬ್ಬರಲ್ಲಿನ ಕಾಮದ ಸಂಕೇತವಾದರೆ, ಇನ್ನೊಂದು ದೇಹದಲ್ಲಿನ ಜೀವ ದೇಹವನ್ನು ಕಳಚಿಕೊಂಡು ಮೇಲ್ಮುಖವಾಗಿ ಜಾಗೃತತೆ ಪಡೆದು ಸಾಗುವ ಹಂತ. ಅದು ಕೃಷ್ಣಾಗರುಗವಾಗಿ ಕಂಡರೂ ನೈಜವಾಗಿ ಅದು ಕೃಷ್ಣಾಗರು. ಹೀಗೆ ಬಹುದೊಡ್ಡ ಉಪಮೆ, ರೂಪಕವನ್ನು ಬಳಸಿ ಪಂಪ ಒಂದು ಸಾವನ್ನ ಕಾವ್ಯದಲ್ಲಿ ಮುನ್ನಡೆಸಿ ಭವದ ಸತ್ಯ ಕಾಣಿಸಿಬಿಡುತ್ತಾನೆ.

ನಂತರದ ಪದ್ಯಗಳಲ್ಲಿ (24) ಒಂದು ದೀರ್ಘವಾದ ಉದ್ಗಾರ ಇದೆ. ಅವರಿಬ್ಬರೂ ಪ್ರೇಮಿಗಳು ಒಬ್ಬರಿಗೊಬ್ಬರು ತಬ್ಬಿಕೊಂಡು ಸತ್ತರಲ್ಲಾ ಆ ಸಾವಿಗಿಂತ ಪುಣ್ಯ ಮತ್ತೊಂದು ಇದೆಯೇ? ನಂತರದಲ್ಲಿ (25) ವಿಷಯವೆನ್ನುವ ಸುಖದ ಹಾವು ಎಂತಹವರನ್ನಾದರೂ ಕೊಂದುಬಿಡುತ್ತದೆ. ಹಾವಿನ ಹೆಡೆಯಹಾಗೆ ಅದು ಕೊಲ್ಲುತ್ತದೆ ಎಂದು ಸ್ಪಷ್ಟ ಉತ್ತರ ಕೊಡುತ್ತಾನೆ. ಇಲ್ಲಿಯವರೆವಿಗೂ ಸಂದರ್ಭದಲ್ಲಿ ನಡೆಯುತ್ತಿದ್ದ ಮಾತು ಧುತ್ತೆಂದು ಅವರಿಬ್ಬರನ್ನೂ ಒಟ್ಟಾರೆ ಮನುಜಕುಲದ (ಮನುಜಯುಗಂ-ಮಾನವ ದ್ವಯವು ಅನ್ನುವ ಹಾಗೆ ಅದನ್ನು ಗಟ್ಟಿಯಾಗಿ ಓದಿದಾಗ ಮನುಜಕುಲಂ ಅನ್ನುವ ಹಾಗೆ ಅನಿಸುತ್ತದೆ) ಪ್ರತಿನಿಧಿಯಾಗಿ ಮಾಡಿಕೊಂಡು ಮಾತು ಪ್ರಾರಂಭ ಮಾಡಿಬಿಡುತ್ತಾನೆ (26) ‘ಮನುಜ ಯುಗವು’ ನೋಡುನೋಡುತ್ತಿದ್ದಂತೆ, ಸುಖದ ಉಲುಹಿಗೆ ಸಿಕ್ಕು ಒಂದು ಸ್ಥಿತಿಯನ್ನು ಕಳೆದುಕೊಂಡು ಮತ್ತೊಂದು ಸ್ಥಿತಿಯನ್ನು ಪಡೆದೇ ಬಿಟ್ಟಿತು. ಬುದ್ದಿ ಹೀನರು, ಜಡರಾದವರು ಸಂಸಾರ ಅಂದರೆ ಏನೆಂದು ಅರ್ಥ ಮಾಡಿಕೊಳ್ಳುತ್ತಾರೋ? (27) ರಲ್ಲಿ ಥಳ ಥಳ ಹೊಳೆಯುವ ದೀಪದ ಕುಡಿ ಆರಿದರೆ ಮನೆಯಲ್ಲೆಲ್ಲಾ ಕತ್ತಲೆ ತುಂಬುವಂತೆ, ಅವರ ಜೀವವು ದೇಹದಿಂದ ಹೊರಟು ಹೋಗಿದ್ದು, ಥಳಥಳ ಹೊಳೆಯುವ ಅವರ ಸುಂದರ ದೇಹಗಳು ಕಾಂತಿಹೀನತೆಗೆ ಒಳಗಾದವು, ಎನ್ನುತ್ತಲೇ ದೊಡ್ಡಪ್ರತಿಮೆಯೊಂದನ್ನು ತಂದಿಟ್ಟು ಕತ್ತಲೆ, ದೀಪ, ಕುಡಿಬೆಳಕುಗಳ ಮೂಲಕ ಬದುಕಿನ ದೊಡ್ಡ ಸತ್ಯವನ್ನು ಇವರಿಬ್ಬರ ಸಾವಿನ ಮೂಲಕ ಕಾಣಿಸಿಬಿಡುವುದರ ಜೊತೆಗೆ ಓದುಗರಲ್ಲಿ ಬದುಕು, ಜೀವ, ಸಾವುಗಳ ಬಗೆಗೆ ಆಲೋಚನೆಗೆ ಹಚ್ಚುತ್ತಾನೆ.

ಕನ್ನಡ ಕಾವ್ಯ ಓದುಗ ಪರಂಪರೆ ಮತ್ತು ವಿಮರ್ಶಾ ಪರಂಪರೆ ಆದಿಪುರಾಣದ ಈ ಭಾಗಕ್ಕೆ ಹೆಚ್ಚು ಒತ್ತು ಕೊಟ್ಟು ನೋಡಿದೆ. ಪಂಪನ ಕಾವ್ಯಗಳಲ್ಲಿ ಬಹುಚರ್ಚಿತವಾದ ಭಾಗಗಳಲ್ಲಿ ಇದೂ ಸಹಾ ಒಂದು. ಶೃಂಗಾರದಿಂದ ಪ್ರಾರಂಭವಾಗಿ ಶಾಂತಕ್ಕೆ ಚಲಿಸುವ ಕ್ರಮವು ಇಲ್ಲಿ ಬಹು ಸಂಕೇತಗಳನ್ನು ಹೊಂದಿ ಬಂದಿದೆ. ಅತಿಯಾದ ಯಾವುದೇ ಆದರೂ ವಿನಾಶಕ್ಕೆ ಹಾದಿಮಾಡಿಕೊಡುತ್ತದೆ ಅನ್ನುವುದಕ್ಕೆ ಇದು ಉದಾಹರಣೆ. ಮೇಲ್ನೋಟಕ್ಕೆ ಅವನೇ ಹೇಳುವ ಹಾಗೆ “ಬೆಳಗುವೆನಿಲ್ಲಿ ಲೌಕಿಕಂ ಅಲ್ಲಿ ಜಿನಾಗಮಮಂ” ಅನ್ನುವುದನ್ನು ಮುಖ್ಯವಾಗಿಟ್ಟುಕೊಂಡು ನೋಡಿದರೆ ಆದಿಪುರಾಣವು ಧಾರ್ಮಿಕ ಕಾವ್ಯವಾಗಿ ಕಂಡರೂ ಸಹಾ ಇದು ವಿಕ್ರಮಾರ್ಜುನ ವಿಜಯದಷ್ಟೇ ಲೌಕಿಕವಾದ ಕಾವ್ಯ. ಕಾವ್ಯದ ವಸ್ತು ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯರಿಂದ ಧರ್ಮದ ಕತೆಗಾಗಿ ಪಡೆದರೂ, ಕನ್ನಡದಲ್ಲಿ ಪೂರ್ವಪುರಾಣದ ವಿನ್ಯಾಸ ಆದಿಪುರಾಣವಾಗಿ ಪಂಪನದೇ. ಕಾವ್ಯದ ಹೆಸರೇ ಹೇಳುವ ಹಾಗೆ “ಆದಿ”ತೀರ್ಥಂಕರನು ಜನ್ಮ ಜನ್ಮಾಂತರಗಳಲ್ಲಿ ಸಾಧಿಸಿದ ಮೋಕ್ಷ ಅಥವಾ ಮುಕ್ತಿಯ ಕಥಾ ಗುಚ್ಛ. ಈ ಕಾವ್ಯದ ಓದು ಮತ್ತು ಶ್ರವಣದಿಂದ (ಚಂಪೂ ಓದುಗಬ್ಬ ಅನ್ನುವುದು ಬಹುಮುಖ್ಯ ಹಾಗೆಯೇ ಅದನ್ನು ಕೇಳುತಿದ್ದವರೂ ಇಲ್ಲಿ ಮುಖ್ಯ) ಇದಕ್ಕೆ ನಾಯಕನಾದವನಿಂದ ಪೂಜ್ಯಭಾವ ಬಂದು “ಪುರಾಣ”ವಾಗಿದೆ.

ಆದಿಪುರಾಣದ ಪ್ರಾರಂಭವನ್ನೊಮ್ಮೆ ಗಮನಿಸಿ ಲೋಕಾಕಾರ ಕಥನದಿಂದ ಪ್ರಾರಂಭವಾಗಿ ವಿದೇಹದಲ್ಲಿ ಬಂದು ನಿಂತು ಕಥಾಭಿತ್ತಿ ಪ್ರಾರಂಭ ಆಗುತ್ತದೆ. ಇಲ್ಲಿನ ಪ್ರತಿಯೊಂದು ಭಾಗದ ನಾಯಕ ಪಾತ್ರವೂ ಶ್ರೀಮಂತರೇ, ರಾಜರೇ. ಅವರ ಸಾವಿನ ಚಿತ್ರಣವೇ ಬದುಕಿನ ಬಗೆಗೆ ಯೋಚಿಸುವ ಹಾಗೆ ಮಾಡುವಲ್ಲಿ ಚಲನೆ ಪಡೆಯುತ್ತದೆ. ಶ್ರವಣಬೆಳಗೊಳದ ನಂದಿಸೇನ ಮುನಿಯ ಶಾಸನದ ‘ಶ್ರೀರೂಪಲೀಲಾಧನವಿಭವಮಹಾರಾಶಿಗಳ್ ನಿಲ್ಲವಾರ್ಗಂ’ ಅನ್ನುವ ಇತ್ಯಾತ್ಮಕ ಅಂಶವನ್ನು ಸಾರಲು ಪಂಪ ಮಾಡಿಕೊಂಡ ಸಾವಿನ ಕಡೆಗಿನ ನೇತ್ಯಾತ್ಮಕ ಚಲನೆ. ಅವರಿಬ್ಬರದೂ ಅಕಾಲಿಕ ಸಾವು ಅನ್ನುವುದು ಇಲ್ಲಿ ನೇತ್ಯಾತ್ಮಕ ಅನ್ನುವುದಕ್ಕೆ ಬಹುಮುಖ್ಯ ಅಂಶ.

ಆದಿಪುರಾಣದ ಈ ಭಾಗದಲ್ಲಂತೂ ಎಂತಹಾ ಅಂಶಗಳು ಕಾಣುತ್ತದೆ ಎಂದರೆ, ಇಲ್ಲಿನ ಜೋಡಿಗಳು ಆಗರ್ಭ ಶ್ರೀಮಂತರು, ರಾಜರು. ಎರಡೂ ಜೀವಿಗಳು ಬದುಕಿಗೆ ಬದುಕಿನ ಸುಖಕ್ಕೆ ಪ್ರತೀಕ್ಷಣವೂ ತೆರೆದುಕೊಂಡು ತಹತಹಿಸುವ ಜೋಡಿಗಳು. ಬಹಳ ಕಾಲದ ನಂತರ ಹುಡುಕಾಟ ಮಾಡಿ ಸಿಕ್ಕ ಅನುರೂಪ ಜೋಡಿಗಳಿವು. ಅವರಲ್ಲಿನ ಶ್ರೀಮಂತಿಕೆ, ಮೋಹಗಳೇ ಜೀವಕ್ಕೆ ಮುಳ್ಳಾಗಿ ಕಾಡುವ ಕಥೆಯಾಗಿ ನಿಲ್ಲುವುದು. ಯಾವುದನ್ನು ಮನುಷ್ಯ ಅತೀ ಹೆಚ್ಚಾಗಿ ನಂಬಿಕೊಂಡು ಅದನ್ನು ಪಡೆಯುತ್ತಾನೋ ಅದೇ ಅವನಿಗೆ ಕೊನೆಗಾಣಿಸುವ ಸತ್ಯವನ್ನು ತಿಳಿಸುತ್ತಲೇ ಒಂದಷ್ಟು ಎಚ್ಚರವಾಗಿರಬೇಕಾದುದರ ಕಡೆಗೆ ಮುಖ ಮಾಡಿಸುತ್ತದೆ. ನಾವಷ್ಟೇ ಜಾಗೃತವಾಗಿದ್ದರೆ ಸಾಲದು ನಮ್ಮೊಂದಿಗಿನವರೂ ನಮ್ಮಷ್ಟೇ ಜಾಗೃತರಾಗಿ ಇರುವಂತೆ ನೋಡಿಕೊಳ್ಳಬೇಕಾದ ತುರ್ತನ್ನು ತಿಳಿಸುತ್ತದೆ. ಈ ತುರ್ತು ಎಲ್ಲಾ ಕಾಲಕ್ಕೂ ಮಾದರಿ. ಕೇವಲ ಇಲ್ಲಿನ ಸಾವು ಶ್ರೀಮತಿ ಮತ್ತು ವಜ್ರಜಂಘರದಲ್ಲ, ಜಾಗೃತರಾಗದೆ ಸ್ವಲ್ಪ ಉದಾಸೀನರಾದರೆ ಮತ್ತೊಂದು ರೀತಿಯಲ್ಲಿ ಮನುಕುಲವೂ ಈ ಕೃಷ್ಣಗರುವಿನಂತಹಾ ಮತ್ತೊಂದಕ್ಕೆ ಮುಖಾಮುಖಿಯಾಗಿ ಸೆಣೆಸಾಡಲು ಸಾಧ್ಯವಾಗದೆ ಸೋಲಬಹುದು ಅಥವಾ ಸಾಯಲೂ ಬಹುದು ಅನ್ನುವುದನ್ನು ತಿಳಿಸುತ್ತಿದೆ.

ಈ ಸೂಚನೆ ಕೊಡಲು ಶ್ರೀಮಂತರನ್ನೇ ಆಯ್ಕೆ ಮಾಡಿಕೊಂಡ ಕಾರಣ ಕೇವಲ ಮೂಲಕಥಾವಸ್ತುವಿನ ಪ್ರಭಾವ ಪ್ರೇರಣೆ ಅನಿಸಿದರೂ, ಮೂಲಕ್ಕಾದರೂ ಕಾರಣ ಏನು? ಮೂಲಕ್ಕೇ ಮೂಲವಾದ ಬದುಕಿನಲ್ಲಿ, ಸಮಾಜದ ಶ್ರೀಮಂತರ ಪ್ರಭಾವ ಪ್ರೇರಣೆಗಳೇನು? ಇವರ ಹುಚ್ಚಾಟದ ಲೋಲುಪತೆಯ ಪರಮಾವಧಿ ಇಂತಹದ್ದನ್ನು ಸೃಷ್ಟಿಸುತ್ತವೆ ಅನ್ನುವುದೇ ಮುಖ್ಯ ಅಂಶವೇ? ಅಥವಾ ಅವರು ಜಾಗರೂಕವಾಗಿಲ್ಲ ಅನ್ನುವುದೇ ಪ್ರತೀ ಹೆಜ್ಜೆಯಲ್ಲೂ ಸಾರಿ ಹೇಳುತ್ತಲೇ ಕೊನೆಯಲ್ಲಿ ಎಲ್ಲೋ ಎಲ್ಲದರಿಂದ ವಿಮುಕ್ತಿ ಪಡೆದು ಹೊರನಡೆದು ತಮ್ಮ ಅಸ್ಥಿತ್ವ ಕಂಡುಕೊಂಡಿದ್ದು ಸತ್ಯ ಅಲ್ಲವೇ?

ಪ್ರತಿಯೊಂದು ಹೆಜ್ಜೆಯಲ್ಲಿಯೂ ದೊಡ್ಡ ತೊಳಲಾಟಗಳು ಈ ಜೋಡಿಯ ಕಥೆಯಲ್ಲಿ ಮನೆಮಾಡಿದೆ. ಸಿಗುವುದಕ್ಕೆ ಮುಂಚಿನ ಹುಡುಕಾಟವೇ ಹುಚ್ಚಾಗಿ, ಸಿಕ್ಕಾಗ ಅವನೊಂದಿಗೆ ಬದುಕುವಲ್ಲಿನ ಅತಿಯಾದ ಮೋಹವೇ ಹುಚ್ಚಾಗಿ, ಆ ಮೋಹದಲ್ಲೆ ಮೈಮರೆವ ಗುಣ ಕೊನೆಗೆ ಅಲ್ಲಿಂದಲೂ ಬಿಡಿಸಿಕೊಳ್ಳಲಾರದ ಕೊನೆಗೆ ಯಾವುದನ್ನೂ ಸರಿಮಾಡಲಾರದ ಸಾವು. ಯಾರೋ ಮಾಡಿದ ಒಂದು ಅಕಾರ್ಯದ ಕಾರಣದಿಂದ, ಯಾವ ತಪ್ಪೂ ಮಾಡದವರು ಸ್ವಲ್ಪ ಜಾಗರೂಕರಾಗದೆ ತಮ್ಮ ಜೀವವನ್ನೇ ಬೆಲೆ ತೆರಬೇಕು ಅನ್ನುವುದನ್ನು ಬಹಳ ಸ್ಪಷ್ಟವಾಗಿ ಸಂವಹನಗೊಳಿಸಲು ಪಂಪ ಮುಂದಾದನೆ? ಇದೇ ಧ್ವನಿ ಹೊರಡಿಸುವ ಭಾಗ ಮುಂದೆ ಜನ್ನನಲ್ಲಿ ಅದೂ ನೋಂಪಿಯ ಕಥೆಯಲ್ಲಿ ಸಿಕ್ಕುತ್ತದೆಯಲ್ಲ ಏಕೆ?

ಇಲ್ಲಿ ಒಂದು ಯಕಶ್ಚಿತ್ ಕಿಟಕಿಯನ್ನು ತೆಗೆಯದೆ ಜೀವವೇ ಹಾರಿ ಹೋಗುವಂತೆ ಕ್ರಿಯೆ ನಡೆದರೆ, ಜನ್ನ ಕೆಣಕುವ ಒಂದು ಮಾತಾಡಿಸಿ ಜೀವಗಳನ್ನು ಕೊಲ್ಲಿಸುವನಲ್ಲ. ಮೌನ – ಮಾತು – ಕ್ರಿಯೆಗಳು ಕಾರ್ಯ ಕಾರಣಗಳ ಬಗೆಗೆ ಇರಬೇಕಾದ ಜಾಗರೂಕತೆಯನ್ನು ಒತ್ತಿ ಹೇಳುತ್ತಲೇ ಆದಿಪುರಾಣ ಕೇವಲ ಆಗಮಿಕ ಪ್ರಕಾರಕ್ಕೆ ಸಿಕ್ಕಿ ಹಾಕಿಕೊಳ್ಳದೇ ಪ್ರತೀ ಕ್ಷಣದ ಭವಕ್ಕೆ ಪಾಠ ಮಾಡುತ್ತಲೇ ಯಶಸ್ವಿಯಾಗಿ ಲೌಕಿಕಕಾವ್ಯ ಅನಿಸದೆ?