ಚಿತ್ರದ ಮೊದಲ ದೃಶ್ಯ ತೆರೆದುಕೊಳ್ಳುವುದೇ ಕ್ರಿಮಟೋರಿಯಂನಲ್ಲಿ. ಸಾಲ್‌ ನ ಮುಖಚಹರೆ ಕ್ಲೋಸ್‌ ಅಪ್‌ ನಲ್ಲಿ ನಮಗೆ ಗೋಚರಿಸುತ್ತದೆ. ಇದು ಪ್ರಾರಂಭವಷ್ಟೇ ಅಲ್ಲ. ಸಿನಿಮಾದ ಶೇಕಡಾ ತೊಂಬತ್ತಕ್ಕಿಂತಲೂ ಹೆಚ್ಚಿನ ಅವಧಿ ಹೀಗೇ ಆಗುತ್ತದೆ. ಹಲಕೆಲವರು ಚಿತ್ರದ ಅವಧಿಯಲ್ಲಿ ಅಲ್ಪಾವಧಿಯ ಕಾಲ ಕ್ಲೋ ಅಪ್‌ ನಲ್ಲಿ ಚಿತ್ರಿಸಿರುವ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಆದರೆ ನೆಮೆಸ್‌ ಚಿತ್ರೀಕರಿಸಿರುವ ವಿಶೇಷವೆನೆಂದರೆ ಮುನ್ನೆಲೆಯಲ್ಲಿ ಸಾಲ್‌ ಇದ್ದರೆ ಹಿಂಬದಿಯದನ್ನೆಲ್ಲ ಔಟ್ ಆಫ್‌ ಫೋಕಸ್‌ ಮಾಡಿದ್ದಾನೆ.
ಎ.ಎನ್‌. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್ʼನ ಏಳನೆಯ ಕಂತು

 

ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಉಂಟಾದ ಸಾಮೂಹಿಕ ಹತ್ಯೆ, ದೌರ್ಜನ್ಯ ಮತ್ತು ಅತ್ಯಂತ ಅಮಾನವೀಯ ಘಟನೆಗಳನ್ನು ಬಿಂಬಿಸುವ ನೂರಾರು ಸಿನಿಮಾಗಳು ಈಗಾಗಲೇ ನಿರ್ಮಾಣವಾಗಿವೆ. ಅವುಗಳನ್ನು ನೆನಪಿಸಿಕೊಂಡಾಗ ಥಟ್ಟನೆ ನಮ್ಮ ಮನಸ್ಸಿನಲ್ಲಿ ಸುಳಿಯುವುದು ಸಾಮೂಹಿಕ ಹತ್ಯೆಗಾಗಿ ಜ್ಯೂಗಳನ್ನು ನಾಜಿ಼ ಸೈನಿಕರು ಕೊಂಡೊಯ್ಯಲು ಸಿದ್ಧರಾಗುವ ಸಂದರ್ಭದಲ್ಲಿ ತನ್ನ ಬಳಿ ಕೆಲಸ ಮಾಡುವ ಪೋಲೆಂಡಿನ ಜ್ಯೂ ಜನಾಂಗದವರನ್ನು ಹೇಗಾದರೂ ರಕ್ಷಿಸಬೇಕೆಂದು ಅತ್ಯಂತ ಮಾನವೀಯ ನೆಲಗಟ್ಟಿನ ತಂತ್ರಗಳನ್ನೊಳಗೊಂಡ ಸ್ಪೀಲ್‌ ಬರ್ಗ್‌ ನ ʻಷಿಂಡ್ಲರ್ಸ್ ಲಿಸ್ಟ್ʼ. ಪೋಲಿಷ್‌ ರೇಡಿಯೋ ಸ್ಟೇಷನ್ನಿನಲ್ಲಿ ಪಿಯಾನೋ ನುಡಿಸುವವನು ವಾರ್ಸಾ ಬದಲಾಗುತ್ತಿರುವುದು ಅರಿವಾಗಿ ತನ್ನ ಕುಟುಂಬದವರಿಂದ ಬೇರೆಯಾಗಿ ಅನೇಕ ಸ್ಥಳಗಳಲ್ಲಿದ್ದು ತನ್ನನ್ನು ರಕ್ಷಿಸಿಕೊಳ್ಳುವುದನ್ನು ಬಿಂಬಿಸುವ ಪೋಲಾನ್ಸ್‌ ಕಿಯ ʻಪಿಯಾನಿಸ್ಟ್ʼ, ಕೊಲೆಯ ಆರೋಪಕ್ಕೆ ಒಳಗಾದ ಕರಿಯನೊಬ್ಬನನ್ನು ರಕ್ಷಿಸಲು ಲೆಫ್ಟಿನೆಂಟ್‌ ಆದ ಕಾನೂನು ವಿದ್ಯಾರ್ಥಿ ಕೈಗೊಳ್ಳುವ ಕ್ರಮಗಳನ್ನು ನಿರೂಪಿಸುವ ʻಇನ್ಸೈಡ್‌ ಮ್ಯಾನ್‌: ಮೋಸ್ಟ್‌ ವಾಂಟೆಡ್ʼ ಮುಂತಾದ ಸಿನಿಮಾಗಳು ನೆನಪಾಗುವುದು ತೀರ ಸಹಜ.

ಈ ಸಿನಿಮಾಗಳಲ್ಲಿ ಹಂತ ಹಂತವಾಗಿ ಭೀಕರತೆಯ ಕಾವು, ದೌರ್ಜನ್ಯಕ್ಕೆ ಒಳಗಾದವರ ಆಕ್ರಂದನ, ದಯನೀಯ ಸ್ಥಿತಿಯನ್ನು ತಲುಪುವ ಜನಸಮೂಹ ಮತ್ತು ಖೈದಿಗಳ ಮೇಲೆ ಆರ್ಭಟಿಸುವ ಸೇನಾಧಿಕಾರಿಗಳ ಅಬ್ಬರ ಇತ್ಯಾದಿಗಳೆಲ್ಲ ನಿರೀಕ್ಷಿಸಿದಂತೆಯೇ ಜರುಗುತ್ತವೆ. ಇದರಿಂದಾಗಿ ವಿಸ್ಮಯಕ್ಕೆ ಅವಕಾಶವಿರುವುದಿಲ್ಲ. ಖೈದಿಗಳ ಹೀನಾವಸ್ಥೆಗೆ ಮನಸ್ಸು ಮುದುಡುತ್ತದೆ, ಮರುಕ ಉಂಟಾಗುತ್ತದೆ. ಅವರಿಗೆ ಕೊಡುವ ಹಿಂಸೆ ಅತಿರೇಕವಾದಾಗ ನೋಡಲು ಸಾಧ್ಯವಾಗದೆ ಹೋಗುವ ಸಂದರ್ಭಗಳೂ ಇರುವುದುಂಟು. ಆದರೆ ಇವೆಲ್ಲವುಗಳಿಗಿಂತ ತೀರಾ ಭಿನ್ನವಾದ ರೀತಿಯಲ್ಲಿ ಇಡೀ ಪ್ರಕರಣವೊಂದನ್ನು ತೆರೆದಿಡುತ್ತದೆ ಹಂಗೇರಿಯ ಲಾಸ್ಲೋ ನೆಮೆಸ್‌ ನ ʻಸನ್‌ ಆಫ್‌ ಸಾಲ್‌ʼ ಚಿತ್ರ. ಇದು ಆ ದೇಶದಿಂದ ಅತ್ಯುತ್ತಮ ವಿದೇಶಿ ಚಿತ್ರವೆಂದು ಆಸ್ಕರ್‌ ಪ್ರಶಸ್ತಿ ಪಡೆದ ಮೊದಲ ಚಿತ್ರ.

(ಲಾಸ್ಲೋ ನೆಮೆಸ್)

ಸಿನಿಮಾ ಭಾಷೆಗೆ ಯಾವುದೇ ನಿಗದಿತ ರೂಪವಿಲ್ಲದಿರುವುದು ನಿಜವಾದರೂ, ಸಾಕಷ್ಟು ರೂಢಿಗತವಾದ ಸಿನಿಮಾ ಭಾಷೆಯನ್ನು ಸಂಪೂರ್ಣವಾಗಿ ಅಲಕ್ಷಿಸಿ, ತನ್ನದೇ ಹೊಸ ರೀತಿಯ ಪರಿಕಲ್ಪನೆಯಲ್ಲಿ ನಮ್ಮನ್ನು ಆವರಿಸಿಕೊಳ್ಳುವ ರೀತಿಯಲ್ಲಿ ನಿರೂಪಿಸುತ್ತಾನೆ ನಿರ್ದೇಶಕ ನೆಮೆಸ್. ಈ ಚಿತ್ರದ ನಿರ್ಮಾಣ ಪೂರ್ಣವಾಗಿ ಸಿದ್ಧಪಡಿಸಿದ ಚಿತ್ರಕಥೆ ಎನ್ನುವುದಿಲ್ಲದೆ ಚಿತ್ರೀಕರಿಸಿರಬಹುದು ಎನ್ನಿಸುತ್ತದೆ. ಇಂಥ ರೀತಿಯಲ್ಲಿ ಚಿತ್ರ ಸಂಪೂರ್ಣ ಯಶಸ್ವಿಯಾಗುವುದಕ್ಕೆ ನೆಮೆಸ್‌ ನೊಂದಿಗೆ ಛಾಯಾಗ್ರಾಹಕ ಕ್ಲಾರಾ ರೋವರ್‌ ಸಾಕಷ್ಟು ಪ್ರಮಾಣದಲ್ಲಿ ಕೊಡುಗೆ ನೀಡಿದ್ದಾನೆ. ಈ ಬಗೆಯ ಚಿತ್ರೀಕರಣ ಹೊಸದೇನಲ್ಲ. ಶೂಟಿಂಗ್‌ ಸ್ಥಳದಲ್ಲಿಯೇ ಪಾತ್ರಗಳ ಸಂಭಾಷಣೆ, ಚಲನೆ, ವರ್ತನೆಗಳ ಜೊತೆಗೆ ಕ್ಯಾಮೆರಾ ಸಂಬಂಧಿತ ವಿಷಯಗಳನ್ನು ನಿರ್ಧರಿಸಿ ಒಂದಷ್ಟು ದೃಶ್ಯಗಳನ್ನು ಚಿತ್ರೀಕರಿಸಿದವರಿದ್ದಾರೆ. ಉದಾಹರಣೆಗೆ ಆಲ್‌ ಫ್ರೆಡ್‌ ಹಿಚ್‌ ಕಾಕ್‌, ಸ್ಟಿವೆನ್‌ ಸ್ಟೀಲ್‌ ಬರ್ಗ್ ಮುಂತಾದವರು.

ʻಸನ್ ಆಫ್ ಸಾಲ್‌ʼ ೧೯೪೪ರಲ್ಲಿ ಜರ್ಮನಿಯ ಆಶ್ವಿಟ್ಜ್‌ ಬಿಕೆನಾರ್ ಕ್ರಿಮೆಟೋರಿಯಂನಲ್ಲಿ ಜುರುಗಿದ ಅತ್ಯಂತ ಭೀಕರ ಸನ್ನಿವೇಶವನ್ನು ಕುರಿತದ್ದು. ಇಡೀ ಚಿತ್ರ ಎರಡು ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಜರುಗಿದ ಸಂಗತಿಗಳನ್ನು ಒಳಗೊಂಡಿದೆ. ಚಿತ್ರದ ನಿರೂಪಣಾ ವಿಧಾನ ಚಿತ್ರ ನಿರ್ಮಾಣದಲ್ಲಿ ಹೊಸ ಸಾಧ್ಯತೆಗಳನ್ನು ದಿಕ್ಸೂಚಿಯಾಗುವಂಥಾದ್ದು.

ಚಿತ್ರದಲ್ಲಿ ಯಾವುದೇ ವಿಸ್ತೃತ ರೀತಿಯ ಪ್ಲಾಟ್ ಎನ್ನುವುದಿಲ್ಲ. ಅದರ ಕಥಾವಸ್ತು ಇಷ್ಟೆ. ಜರ್ಮನಿಯಲ್ಲಿ ಅಗಾಧ ಸಂಖ್ಯೆಯ ಜ್ಯೂಗಳನ್ನು ಸಂಹರಿಸುವ ಕಾರ್ಯ ನಡೆದದ್ದು ಆಶ್ವಿಟ್ಜ್‌-ಬಿಕೆನಾವ್‌ ನಲ್ಲಿ. ಅದನ್ನು ನೆರವೇರಿಸುವ ಸೊಂಡರ್‌ ಕಮಾಂಡೋಸ್‌ ಎನ್ನುವ ತಂಡದಲ್ಲಿರುವ ಸಾಲ್‌ ಅಸ್ಲಾಂಡರ್‌ ಎನ್ನುವ ಹಂಗೇರಿಯ ಜ್ಯೂ ಜನಾಂಗಕ್ಕೆ ಸೇರಿದ ಖೈದಿಯೊಬ್ಬ, ತನ್ನ ಮಗನೆಂದು ತಿಳಿದು ಹುಡುಗನೊಬ್ಬನನ್ನು ಅಂತ್ಯಸಂಸ್ಕಾರ ಮಾಡಲು ಪ್ರಯತ್ನಿಸುತ್ತಾನೆ. ಚಿತ್ರದಲ್ಲಿ ಸಾಲ್‌ ಪಾತ್ರದಲ್ಲಿ ಅಭಿನಯಿಸಿರುವ ಗೆಜಾ಼ ರೀರಿಗ್‌ ಖ್ಯಾತ ಕವಿ ಕೂಡ. ಅವನು ಚಿತ್ರವೊಂದರಲ್ಲಿ ಅಭಿನಯಿಸಿದ್ದು ಇದು ಮೊಟ್ಟ ಮೊದಲನೆ ಬಾರಿ.

ಸರಿಸುಮಾರು ಇಡೀ ಚಿತ್ರವನ್ನು ಮುಖ್ಯ ಪಾತ್ರ ಸಾಲ್‌ ನ ದೃಷ್ಟಿಕೋನದಲ್ಲಿ ಬಿಂಬಿಸಲಾಗಿದೆ ಮತ್ತು ಎಲ್ಲಕ್ಕಿಂತ ಪ್ರಮುಖವಾಗಿ ಕೈಯಲ್ಲಿ ಹಿಡಿದ ಕ್ಯಾಮೆರಾ ಬಳಸಿ ಚಿತ್ರಿಸಲಾಗಿದೆ. ಚಿತ್ರದ ಮೊದಲ ದೃಶ್ಯ ತೆರೆದುಕೊಳ್ಳುವುದೇ ಕ್ರಿಮಟೋರಿಯಂನಲ್ಲಿ. ಸಾಲ್‌ ನ ಮುಖಚಹರೆ ಕ್ಲೋಸ್‌ ಅಪ್‌ ನಲ್ಲಿ ನಮಗೆ ಗೋಚರಿಸುತ್ತದೆ. ಇದು ಪ್ರಾರಂಭವಷ್ಟೇ ಅಲ್ಲ. ಸಿನಿಮಾದ ಶೇಕಡಾ ತೊಂಬತ್ತಕ್ಕಿಂತಲೂ ಹೆಚ್ಚಿನ ಅವಧಿ ಹೀಗೇ ಆಗುತ್ತದೆ. ಹಲಕೆಲವರು ಚಿತ್ರದ ಅವಧಿಯಲ್ಲಿ ಅಲ್ಪಾವಧಿಯ ಕಾಲ ಕ್ಲೋ ಅಪ್‌ ನಲ್ಲಿ ಚಿತ್ರಿಸಿರುವ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಆದರೆ ನೆಮೆಸ್‌ ಚಿತ್ರೀಕರಿಸಿರುವ ವಿಶೇಷವೆನೆಂದರೆ ಮುನ್ನೆಲೆಯಲ್ಲಿ ಸಾಲ್‌ ಇದ್ದರೆ ಹಿಂಬದಿಯದನ್ನೆಲ್ಲ ಔಟ್ ಆಫ್‌ ಫೋಕಸ್‌ ಮಾಡಿದ್ದಾನೆ. ಅರೆಬರೆ ಕಾಣಿಸುವ ಆ ಆಕೃತಿಗಳು ಸಾಲ್‌ ಗೆ ಅಡ್ಡವಾಗದೆ ಚಲಿಸುತ್ತಿರುತ್ತವೆ. ಹೀಗಿರುವುದು ಒಂದು ಬಗೆಯಾದರೆ ಹಿಂಬದಿಯಲ್ಲಿರುವುದು ಸ್ಫುಟವಾಗಿ ಚಿತ್ರಿತವಾಗಬೇಕೆಂದು ಪ್ರಯತ್ನಿಸಿ ಡೀಪ್‌ ಫೋಕಸ್‌ ಎನ್ನುವುದರ ಅನ್ವೇಷಣೆಯನ್ನು ೧೯೪೧ರಲ್ಲಿ ಆರ್ಸೆನ್‌ ವೆಲ್ಲೆಸ್‌ ʻಸಿಟಿಜೆ಼ನ್‌ ಕೇನ್‌ʼ ಚಿತ್ರದಲ್ಲಿ ಪ್ರಯೋಗಿಸಿ ಸಫಲನಾದ. ಆದರೆ ʻಸನ್‌ ಆಫ್‌ ಸಾಲ್‌ʼ ನಲ್ಲಿ ಔಟ್ ಆಫ್‌ ಫೋಕಸ್‌ ಪ್ರಮುಖ ತಾಂತ್ರಿಕ ಸಾಧನವಾಗಿದೆ.

ಚಿತ್ರದಲ್ಲಿ ಇದರ ಜೊತೆಜೊತೆಯಾಗಿ ಸೌಂಡ್‌ ಟ್ರಾಕಿ‌ನಿಂದ ಎಲ್ಲ ಬಗೆಯ ನರಳಾಟ, ಕಿರುಚಾಟ, ಅಬ್ಬರಿಸುವ ಸೈನಿಕರ ಧ್ವನಿ, ಗುಂಡು ಹಾರಿಸಿದ ಶಬ್ದಗಳು ಕೇಳಿಸುತ್ತವೆ. ಔಟ್ ಆಫ್‌ ಫೋಕಸ್‌ ನಲ್ಲಿ ಮೈಮೇಲೆ ಮುಳ್ಳೇಳಿಸುವ ದೃಶ್ಯಗಳೆಂದರೆ, ನಿರ್ಜೀವವಾದ ಬೆತ್ತಲೆ ಗಂಡು, ಹೆಣ್ಣುಗಳನ್ನು ಎಳೆಯೊಯ್ಯುತ್ತಿರುವುದು. ಅವನ್ನು ಆ ಸ್ಥಿತಿಗೆ ದೂಡುವ ಕೆಲಸ, ಸೈನಿಕರಿಂದ ನಿಯೋಜಿಸಲ್ಪಟ್ಟ ಸೊಂಡರ್‌ ಕಮಾಂಡೋಸ್‌ ನವರದ್ದು. ಅವರೂ ಜ್ಯೂಗಳಿಂದಲೇ ಆರಿಸಲ್ಪಟ್ಟವರು. ಅವರು ಸೈನಿಕರ ಅಪ್ಪಣೆಯಾನುಸಾರ ಮಾಡಬೇಕಾದ ಕೆಲಸವೇನೆಂದರೆ ತಮ್ಮವರನ್ನೇ ಥಳಿಸುವುದು, ಕೊಲ್ಲುವುದು, ಸುಡುವುದು ಇತ್ಯಾದಿ. ಇಷ್ಟಲ್ಲದೆ ಅವರು ತಮ್ಮವರ ಬಗ್ಗೆ ಯಾವುದೇ ರೀತಿಯ ಆತ್ಮೀಯತೆ ಅಥವ ವಿಶ್ವಾಸವನ್ನು ವ್ಯಕ್ತಪಡಿಸದೆ ಸಂಪೂರ್ಣ ನಿರ್ಭಾವುಕರಾಗಿ, ವಹಿಸುವ ಕೆಲಸಗಳನ್ನು ಪೂರೈಸಬೇಕು. ಇವನ್ನು ಚಿತ್ರದಲ್ಲಿ ನೋಡುವ ಪ್ರೇಕ್ಷಕರಲ್ಲಿ ಉಂಟಾಗುವ ಭಾವನೆಗಳ ಬಗೆಯನ್ನು ವಿವರಿಸಲು ನಿಜಕ್ಕೂ ಅಸಾಧ್ಯ.

ಈ ಸಿನಿಮಾಗಳಲ್ಲಿ ಹಂತ ಹಂತವಾಗಿ ಭೀಕರತೆಯ ಕಾವು, ದೌರ್ಜನ್ಯಕ್ಕೆ ಒಳಗಾದವರ ಆಕ್ರಂದನ, ದಯನೀಯ ಸ್ಥಿತಿಯನ್ನು ತಲುಪುವ ಜನಸಮೂಹ ಮತ್ತು ಖೈದಿಗಳ ಮೇಲೆ ಆರ್ಭಟಿಸುವ ಸೇನಾಧಿಕಾರಿಗಳ ಅಬ್ಬರ ಇತ್ಯಾದಿಗಳೆಲ್ಲ ನಿರೀಕ್ಷಿಸಿದಂತೆಯೇ ಜರುಗುತ್ತವೆ.

ಸೊಂಡೆರ್‌ ಕಮಾಂಡೋಸ್‌ ನಲ್ಲಿ ಮರಗೆಲಸದವರು, ವಿದ್ಯುತ್‌ ಕೆಲಸದವರು, ಕಬ್ಬಿಣದ ಕೆಲಸದವರು, ಮೆಕ್ಯಾನಿಕ್ಕುಗಳು ಮುಂತಾದವರು ಕೂಡ ಇರುತ್ತಾರೆ. ಇಂಥ ಕೆಲಸ ಮಾಡುವುದಕ್ಕೆಂದೇ ಆರಿಸಲ್ಪಟ್ಟಿರುತ್ತಾರೆ. ಈ ಕೆಲಸಗಳಿಂದ ಅವರು ಒಂದಷ್ಟು ಅವಧಿಯ ತನಕ ಸಾವನ್ನು ಮುಂದೂಡುವುದಕ್ಕಷ್ಟೇ ಅವಕಾಶ. ಆ ನಂತರ ಇತರ ಜ್ಯೂಗಳಂತೆ ಒಂದಿಲ್ಲೊಂದು ಬಗೆಯಲ್ಲಿ ಅವರಿಗೂ ಸಾವು ಕಾದಿರುತ್ತದೆ.

ಸಾಲ್‌ ನೋಡುತ್ತಿಂತೆಯೇ ಅವರಲ್ಲಿ ಕೆಲವರು ಅಷ್ಟುದ್ದಕ್ಕೂ ನೇತು ಹಾಕಿದ ಬಟ್ಟೆಗಳ ಜೇಬುಗಳನ್ನು ತಡಕಾಡಿ, ಉಪಯೋಗವಾಗುವ ವಸ್ತು, ದುಡ್ಡು ಇತ್ಯಾದಿಗಳನ್ನು ದೋಚುತ್ತಾರೆ. ಅಲ್ಲದೆ ದೋಚಿದ್ದನ್ನು ದಕ್ಕಿಸಿಕೊಳ್ಳಲು ಭಯದಿಂದ ಅತ್ತಿತ್ತ ನೋಡಿ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ಇದಕ್ಕೆ ಅನುಗುಣವಾಗಿ ದೋಚಿದವರಿಂದಲೂ ಹೇಗಾದರೂ ಸರಿಯೆ ಕಿತ್ತುಕೊಳ್ಳಲು ಹವಣಿಸುವ ಸೈನಿಕರೂ ಅವನ ಕಣ್ಣಿಗೆ ಬೀಳುತ್ತಾರೆ.

ಸಾಲ್ ಅತ್ತಿತ್ತ ನೋಡಿ ಚಲಿಸುತ್ತಿರುವಂತೆ, ಪಕ್ಕದಲ್ಲಿ ಯಾರೋ ಒಬ್ಬ ಸೈನಿಕನಿಂದ ಅಷ್ಟು ದೂರದಲ್ಲಿ ಗುಂಪು ನಿಂತವರಿಗೆ ಬಟ್ಟೆ ಕಳಚಿ ಎಂದು ಅಬ್ಬರಿಸಿ ಹೇಳುತ್ತಾನೆ. ಅವರು ಮರುಮಾತಾಡದೆ ಅವನ ಆಜ್ಞೆಯನ್ನು ಪಾಲಿಸಿ ತಮ್ಮ ಬಟ್ಟೆಗಳನ್ನು ಅಲ್ಲೆಲ್ಲೋ ಪಕ್ಕದಲ್ಲಿ ನೇತು ಹಾಕುತ್ತಾರೆ. ಬೆತ್ತಲೆಯಾದ ಅವರು ಗುಂಪುಗೂಡಿ ಅವಸರದಲ್ಲಿ ದಾಪುಗಾಲಿಡುತ್ತಾ ಅವನು ಹೇಳಿದ ಕಡೆ ಹೋಗುವುದು ದೊಡ್ಡ ಗ್ಯಾಸ್ ಚೇಂಬರಿಗೆ. ಅದನ್ನು ಅರಿತ ಸಾಲ್ ತನ್ನ ಮಿಶ್ರ ಭಾವಗಳ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾನೆ. ಸಾವನ್ನು ಕುರಿತ ಅವನ ಪ್ರತಿಕ್ರಿಯೆ ಯಾವುದೇ ಅತಿರೇಕದಿಂದ ಕೂಡಿರುವುದಿಲ್ಲ. ಮುಖದಿಂದ ಸ್ನಾಯುಗಳು ಕೊಂಚವೇ ಚಲಿಸಿ ಕಂಡ ದೃಶ್ಯದಿಂದ ಮರುಕಗೊಂಡು, ಅತ್ತ ಮುಖ ಮಾಡಿರುವುದು ಕಾಣಿಸುತ್ತದೆ. ಇದೇ ರೀತಿಯಲ್ಲಿ ಸ್ವಲ್ಪ ಕಾಲ ಮುಂದುವರಿದ ಹಾಗೆ ಗ್ಯಾಸ್ ಚೇಂಬರ್ ನಲ್ಲಿ ಸತ್ತ ಗಂಡು ಹೆಣ್ಣುಗಳ ಕಾಲುಗಳನ್ನು ಹಿಡಿದು ಎಳೆದು ಕೊಂಡೊಯ್ಯುತ್ತಿರುವ ಔಟ್ ಆಫ್ ಫೋಕಸ್ ಚಿತ್ರೀಕರಣದಲ್ಲಿ ಕಾಣುತ್ತದೆ.

ಹೀಗೆ ಗ್ಯಾಸ್ ಚೇಂಬರ್ ಗೆ ತಳ್ಳಿಸಿಕೊಂಡು ಅಲ್ಲಿ ಸತ್ತವರನ್ನು ಎಳೆದೊಯ್ಯುವ ದೃಶ್ಯ ಆಗಿಂದಾಗ್ಗೆ ಚಿತ್ರದಲ್ಲಿ ಕಾಣಿಸುತ್ತದೆ. ಸಾಲ್‌ ತನಗೆ ಕಾಣಿಸುವ ಎಲ್ಲ ಬಗೆಯ ದೌರ್ಜನ್ಯ, ಹಿಂಸೆ ಇತ್ಯಾದಿಗಳಿಗೆ, ಕೇಳಿಸುವ ಆಕ್ರಂದನಗಳಿಗೆ, ನೋವು ತಡೆಯಲಾಗದೆ ಚೀರುವ ದನಿಗೆ ನಿಯಂತ್ರಿತ ರೀತಿಯಲ್ಲಿ ಮುಖಭಾವದಲ್ಲಿ ಬದಲಾವಣೆಗಳನ್ನು ತೋರುತ್ತಾನೆ.

ಒಮ್ಮೆ ಸಾಲ್ ನಿರ್ವಿಕಾರವಾಗಿ ಎಲ್ಲಲೋ ನೋಡಿದಾಗ ಅಷ್ಟು ದೂರದಲ್ಲಿ ಅರೆಬೆತ್ತಲೆಯಾಗಿ ಮಲಗಿದ್ದ ಹುಡುಗನೊಬ್ಬ ಕಾಣಿಸಿ, ತಕ್ಷಣವೇ ಅಲ್ಲಿಗೆ ಧಾವಿಸುತ್ತಾನೆ. ಅವನಲ್ಲಿ ಅನುಮಾನ ಹೊಯ್ದಾಡುತ್ತದೆ. ಆ ಹುಡುಗ ತನ್ನ ಮಗ ಎಂದು ತಿಳಿಯುತ್ತಾನೆ. ಅವನನ್ನು ಪರೀಕ್ಷಿಸಿದ ಸಾಲ್‌ ಗೆ ಅವನಿಗಿನ್ನೂ ಜೀವವಿರುವುದು ತಿಳಿದು ಅವನನ್ನು ರಕ್ಷಿಸುವುದು ಹೇಗೆ ಎನ್ನುವ ಚಿಂತೆ ಮತ್ತು ಉದ್ವೇಗಕ್ಕೆ ಒಳಗಾಗುತ್ತಾನೆ. ಇದಕ್ಕಿಂತ ಹೆಚ್ಚಾಗಿ ಅವನಿಗೆ ತಕ್ಷಣವೇ ಅವನಿಗೆ ವೈದ್ಯಕೀಯ ಶುಶ್ರೂಷೆ ಒದಗಿಸುವ ಆಸೆಯಿಂದ ಇನ್ನಿಲ್ಲದಷ್ಟು ಶ್ರಮಿಸುತ್ತಾನೆ. ಆದರೆ ಅವನಲ್ಲುಂಟಾದ ತವಕ, ತಲ್ಲಣಗಳಿಗೆ ತಕ್ಷಣವೇ ಪರಿಹಾರ ದೊರೆಯುವುದಿಲ್ಲ. ತಾನು ಮಾಡುವ ಕರ್ತವ್ಯದಿಂದ ದೂರ ಹೋಗುತ್ತಿರುವುದನ್ನು ಸೈನಿಕರು ಕಂಡು ಹಿಡಿದು, ಹುಡುಗನಿಗೆ ಶುಶ್ರೂಷೆ ಒದಗಿಸಬೇಕೆನ್ನುವ ತನ್ನ ಅಭಿಲಾಷೆಗೆ ಎಲ್ಲಿ ಕಂಟಕವಾಗುವುದೋ ಎನ್ನುವ ಭೀತಿಯೂ ಅವನಿಗುಂಟಾಗುತ್ತದೆ. ಆದರೆ ಅವನಲ್ಲಿರುವ ಆತ್ಮವಿಶ್ವಾಸ ಮತ್ತು ಸಂಕಲ್ಪ ಅವನನ್ನು ಮುನ್ನುಗ್ಗುವಂತೆ ಮಾಡುತ್ತದೆ.

ಅಲ್ಲೊಂದು ಕಡೆ ಸೊಂಡರ್‌ ಕಮಾಂಡೋಸ್‌ ನಲ್ಲಿರುವ ವೈದ್ಯರು ಕಾಣಿಸಿಕೊಳ್ಳುತ್ತಾರೆ. ಅವರು ಹತ್ತಿರ ಬರುವಂತೆ ಮಾಡಿ ಹುಡುಗನನ್ನು ಪರೀಕ್ಷಿಸಿದಾಗ ಅಟೋಪ್ಸಿ ಮಾಡಬೇಕೆಂದು ಹೇಳುತ್ತಾರೆ. ಹೀಗಾದಾಗ ಇನ್ನೊಂದು ಕಡೆ ಹೋಗಬೇಕಾಗುತ್ತದೆ. ಅಲ್ಲಿ ಅವನಿಗೆ ನರ್ಸುಗಳು ಕಾಣಿಸುತ್ತಾರೆ. ಅಲ್ಲಿ ಎಲ್ಲೆಸ್‌ ಎನ್ನುವ ನರ್ಸೊಬ್ಬಳು ಆ ಹುಡುಗನನ್ನು ನೋಡಿ ಪ್ರತಿಕ್ರಿಯಿಸುವ ರೀತಿಯಿಂದ ಅವಳು ಅವನಿಗೆ ತಾಯಿಯಾಗಿರಬಹುದು ಎಂದು ಭಾವಿಸಲು ಸಾಧ್ಯವಿದೆ. ಹಾಗೆಂದೇ ಸಾಲ್‌ ನ ಮುಖ ಭಾವವೂ ಸೂಚಿಸುತ್ತದೆ. ಆದರೆ ತಕ್ಷಣವೇ ಅವನನ್ನು ಶುಶ್ರೂಷೆಗಾಗಿ ಒಳಗೆ ಕರೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ.

ಕೆಲಸಮಯದ ನಂತರ ಆ ಹುಡುಗ ಸತ್ತು ಹೋಗಿದ್ದಾನೆ ಎನ್ನುವುದು ಸಾಲ್‌ ಗೆ ಅರಿವಾಗುತ್ತದೆ. ಈ ಕಾಲಾವಧಿಯ ನಡುವೆ ಎಂದಿನಂತೆ ಗುಂಪುಗುಂಪಾಗಿ ಜ್ಯೂಗಳು ಅತ್ತಿತ್ತ ಚಲಿಸುವುದು, ಸೈನಿಕರು ಅಪ್ಪಣೆ ಮಾಡುವುದು, ಸರಿಯಾದ ಕಾರಣವಿಲ್ಲದೆಯೇ ಗುಂಡು ಹಾಕಿ ಕೊಲ್ಲುವುದು ಮುಂತಾದ ದೈಹಿಕ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಅದೆಲ್ಲದಕ್ಕೂ ಸಾಲ್ ವಿಭಿನ್ನ ರೀತಿಗಳಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಲೇ ಇರುತ್ತಾನೆ. ಇವೆಲ್ಲದರ ನಡುವೆ ಅವನಿಗೆ ಮಗನೆಂದು ಭಾವಿಸಿದ ಆ ಸತ್ತ ಹುಡುಗನ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡುವ ಅಭಿಲಾಷೆ ತೀವ್ರವಾಗುತ್ತದೆ. ಈ ಕೆಲಸಕ್ಕಾಗಿ ಒಬ್ಬ ರಬ್ಬಿಯ ಅಗತ್ಯ ಉಂಟಾಗುತ್ತದೆ. ಹಾಗೆಂದೇ ಇನ್ನೊಬ್ಬ, ಮತ್ತೊಬ್ಬ ಜ್ಯೂನನ್ನು ಕಂಡಾಗ ʻನೀನು ರಬ್ಬಿಯಾ…ʼ ಎಂದು ಪ್ರಶ್ನೆ ಮಾಡುತ್ತಲೇ ಇರುತ್ತಾನೆ. ಮಗನ ಅಂತ್ಯ ಸಂಸ್ಕಾರ ಬಳಿ ಪ್ರಾರ್ಥಿಸುವ ಕೆಲಸವನ್ನು ಯಾರೇ ರಬ್ಬಿ ಮಾಡುವ ಅಗತ್ಯಕ್ಕಾಗಿ ಒಬ್ಬ ರಬ್ಬಿಯ ಹುಡುಕಾಟ ನಡೆಯುತ್ತಲೇ ಇರುತ್ತದೆ.

ಈ ಹುಡುಕಾಟದ ನಡುವೆಯೇ ಅವನು ಸೊಂಡರ್‌ ಕಮಾಂಡರ್ ಗಳು ಅಲ್ಲಿನ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದು ಅಲ್ಲಿಂದ ತಪ್ಪಿಸಿಕೊಳ್ಳುವುದು ಹೇಗೆ ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಉಪಾಯಗಳನ್ನು ಹೆಣೆಯುತ್ತಿರುತ್ತಾರೆ ಇದನ್ನು ಗುಂಪುಗುಂಪಾಗಿ ಪಿಸು ಧ್ವನಿಯಲ್ಲಿ ಚರ್ಚೆ ಮಾಡುವುದು ಗೋಚರಿಸುತ್ತದೆ. ಇದು ಮುಂದುವರಿಯುತ್ತಿದ್ದಂತೆ ಕೊನೆಗೂ ಹುಡುಗನನ್ನು ಹೆಗಲಿಗೇರಿಸಿಕೊಂಡು ನಡೆಯುತ್ತಲೇ ಇರುವ ಸಾಲ್‌ ಗೆ ಒಬ್ಬ ರಬ್ಬಿ ಸಿಗುತ್ತಾನೆ. ಹುಡುಗನ ಅಂತ್ಯ ಸಂಸ್ಕಾರಕ್ಕಾಗಿ ಗುಂಡಿ ತೋಡುವ ಭಾರೀ ಸಲಕೆಗಳನ್ನು ಹಿಡಿದು ಮಣ್ಣು ಅಗೆಯುತ್ತಿರುವಾಗ, ಅವನೊಂದಿಗೆ ಬಂದ ರಬ್ಬಿ ಹೆದರಿಕೆಯಿಂದ ಅವನನ್ನು ಬಿಟ್ಟು ಓಡಿಹೋಗುತ್ತಾನೆ. ಅಷ್ಟು ದೂರದಲ್ಲಿ ಹರಿಯುವ ಹೊಳೆ ಕಾಣುತ್ತದೆ. ಅದರೊಳಗೆ ಹದಿನೈದಿಪ್ಪತ್ತು ಮಂದಿ ಸೊಂಡರ್‌ ಕಮಾಂಡೋಸ್‌ ಕಾಣಿಸುತ್ತಾರೆ. ಏನು ಮಾಡಬೇಕೆಂದು ತೋಚದೆ ಸತ್ತ ಮಗುವನ್ನು ಹೊತ್ತುಕೊಂಡು ಹೊಳೆಯ ಕಡೆ ಧಾವಿಸಿ ಅವರೊಂದಿಗೆ ತಾನು ಒಂದಾಗುತ್ತಾ ಮುಂದೆ ಹೋಗಲು ಶ್ರಮಿಸುತ್ತಾ, ಒದ್ದಾಡುತ್ತಾ, ಮುಳುಗೇಳುತ್ತಾ ಸಾಲ್‌ ಮುಂದುವರಿಯುತ್ತಾನೆ. ಅವನಿಗೆ ಮತ್ತು ಸತ್ತ ಹುಡುಗನಿಗೆ ಮುಂದೇನಾಯಿತೆನ್ನುವುದನ್ನು ಊಹಿಸಲಿಕ್ಕಷ್ಟೇ ಸಾಧ್ಯ.

ಚಿತ್ರದ ಈ ಭಾಗ ತಲುಪುವಷ್ಟರಲ್ಲಿ ಪ್ರೇಕ್ಷಕರ ಮನಸ್ಸಿನ ಮೇಲೆ ಹೆಬ್ಬಂಡೆ ಹೇರಿದ ಹಾಗೆ ಆಗಿರುತ್ತದೆ. ಥಿಯೇಟರ್‌ ನಲ್ಲಿ ಬೆಳಕಾದ ಮೇಲೆ ಚಿತ್ರ ಉಂಟುಮಾಡಿದ ಮೈ ಬಿಗಿತದ ಜೊತೆಗೆ, ಅತಿ ಮುಜುಗರ, ಮರುಕ ಮುಂತಾದ ಮಿಶ್ರ ಭಾವನೆಗಳು ತೀವ್ರವಾಗಿ ಉಂಟಾಗುತ್ತವೆ. ಹೀಗೆ ಮಾಡಿದ ನಿರ್ದೇಶಕ ನೆಮೆಸ್‌, ನಟ ಗೆಜಾ಼ ರೋರಿಂಗ್‌ ರಷ್ಟೇ ಛಾಯಾಗ್ರಾಹಕ ಮತ್ಯಾಸ್‌ ಎರ್ಡೆಲಿಯ ಸಾಮರ್ಥ್ಯವನ್ನು ಮೆಚ್ಚಬೇಕಾಗುತ್ತದೆ.