ರಮೇಶ ಅವರಿಗೆ ಪಾಶ್ಚಾತ್ಯ ತತ್ವಪರಂಪರೆಗಳ ಕಾವ್ಯ ಪರಂಪರೆಗಳ ಒಡನಾಟವಿದೆ.ಹಾಗಾಗಿ ಅವರಿಗೆ ಈ ನೆಲದ ಕಾವ್ಯ ಪರಂಪರೆಗಳ ಅನುಸಂಧಾನ ತೊಡಕಿನ ಸಂಗತಿಯೇನಲ್ಲ. ಅಂತಹ ಅನುಸಂಧಾನದ ಮೂಲಕ ಮಾತ್ರ ದೇಸಿ ಕಾವ್ಯ ಮೀಮಾಂಸೆಗಳೊಡನೆ ಮಾತುಕತೆ ಸಾಧ್ಯವಾಗುತ್ತದೆ.ಇಲ್ಲಿನ ಮೀಮಾಂಸಾ ಪರಂಪರೆಗಳ ಅರಿವಿಲ್ಲದಿರುವ ಆವರಣಗಳಲ್ಲಿ ಮಾತ್ರ ನಿರ್ದಿಷ್ಟ ಮಾದರಿಯ ಭಾಷೆಯೊಂದು ತಾನೇ ಪ್ರಮಾಣವೆನ್ನುವ ಅಹಂ ಅನ್ನು ಪ್ರದರ್ಶಿಸಬಹುದು.
ಕವಿ ಎಚ್. ಆರ್ ರಮೇಶ ಅವರ ಹೊಸ ಕವಿತಾ ಸಂಕಲನಕ್ಕೆ ಎಸ್.ನಟರಾಜ ಬೂದಾಳು ಬರೆದ ಮುನ್ನುಡಿ.

 

ದರ್ಶನ, ಕಾವ್ಯ ಮತ್ತು ಮೀಮಾಂಸೆಗಳು ವರ್ತಮಾನದೊಡನೆ ಅನುಸಂಧಾನವನ್ನು ಬಿಟ್ಟರೆ ಜಡವಾಗುತ್ತವೆ. ಅವುಗಳನ್ನು ವರ್ತಮಾನದ ಈ ನೆಲಕ್ಕೆ ಎಳೆದು ತರುವ ಜವಾಬುದಾರಿಯನ್ನು ಕವಿ ನಿಭಾಯಿಸಬೇಕು. ಹಾಗೆ ಕರೆತರುವಾಗ ಅನೇಕ ಹಂಗುಗಳಿಂದ ಅವನ್ನು ಮುಕ್ತಗೊಳಿಸಬೇಕಾಗುತ್ತದೆ. ಪರಂಪರೆಯ ಕಿಲುಬಿನಿಂದ, ಭಾಷೆಯ ಜಡತ್ವದಿಂದ, ಅರ್ಥದ ಬಂಧನದಿಂದ ಮತ್ತು ಸಿದ್ಧಗೊಂಡಿರುವ ಹಠಮಾರಿ ಓದಿನ ಮಾದರಿಯಿಂದ ಕಾವ್ಯವನ್ನು ಕಳಚಿ ತರಬೇಕು. ಅಂತಹ ಪ್ರಕ್ರಿಯೆಯೊಂದನ್ನು ಎಚ್ ಆರ್ ರಮೇಶ ಅವರ ಕಾವ್ಯದಲ್ಲಿ ನಾನು ಕಂಡೆ. ಕಟ್ಟುವ ಕಾವ್ಯದ ಮಾದರಿಯಿಂದ ಕಳಚುವ ಮಾದರಿಗೆ ಕಾವ್ಯವನ್ನು ಒಗ್ಗಿಸಿದಾಗ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಲಾಳಿಯಾಟದ ಲಾಸ್ಯವೊಂದು ಸಿದ್ಧಿಸುತ್ತದೆ. ಅದನ್ನೂ ಲಯವೊಂದಕ್ಕೆ ತೂಗಿಬಿಟ್ಟರೆ ಜಡವೆನ್ನುವುದು ಕರಗಿ ಹೋಗುತ್ತದೆ. ಹೀಗೆ ಭೂಮಿಯಾಕಾಶಕ್ಕೆ ನಡೆಯುವ ಲಾಳಿಯಾಟವನ್ನು ಕೆಲವು ಮೀಮಾಂಸಕರು ಕಾವ್ಯವೆಂದಿದ್ದಾರೆ. ಇಂತಹ ತೂಗಾಟದ ಮೂಲಕ ವರ್ತಮಾನದ ಕಾಠಿಣ್ಯವನ್ನು ಕರಗಿಸುವ ಮಾದರಿಗಳು ಕನ್ನಡದ ಕಾವ್ಯ, ದರ್ಶನ ಪರಂಪರೆಯಲ್ಲಿ ಹಾಸು ಹೊಕ್ಕಾಗಿವೆ. ಕಾವ್ಯವೆನ್ನುವುದು ಒಂದು ನೇಯ್ಗೆ, ಒಂದು ಕೌಶಲ, ಒಂದು ಕಸುಬು ಮತ್ತು ಬದುಕುವ ಒಂದು ದಾರಿ. ಇವುಗಳಲ್ಲಿ ಕೆಲವನ್ನಾದರೂ ಕವಿ ಪ್ರಯತ್ನಿಸದೇ ಹೋದಲ್ಲಿ ಕನ್ನಡಿಗರು ಅಂತಹವರ ಕಾವ್ಯವನ್ನು ಓದಿಲ್ಲ, ಓದುವುದಿಲ್ಲ. ಇವೆಲ್ಲ ಕಾವ್ಯಾನುಸಂಧಾನಕ್ಕೆ ಹೊರಗಿನಿಂದ ಒದಗಿಸಿಕೊಳ್ಳಬೇಕಾದ ಹತಾರುಗಳಲ್ಲ; ಬದಲಿಗೆ ಈ ನೆಲದ ಬಿತ್ತನೆಗೆ ಒಗ್ಗಿಬರುವ ಕೂರಿಗೆಯ ಕಣ್ಣುಗಳು. ಈ ಸಂಕಲನದ ಅನೇಕ ಕವನಗಳು ಇಂತಹ ಕೂರಿಗೆಯ ಕಣ್ಣುಗಳಂತೆ ನನ್ನನ್ನು ಮಾತನಾಡಿಸಿದವು.

***

ಧರ್ಮಕ್ಕೆ ಕಾಲ ಸರಿದಂತೆಲ್ಲಾ ನೆತ್ತರ ವರ್ಣ ಮೆತ್ತಿಕೊಳ್ಳುತ್ತಲೇ ಇದೆ
ಇವನು ನೋಡುತ್ತಿದ್ದಾನೆ
ಅವರು ನೋಡುತ್ತಿಲ್ಲ
ಪೂರ್ಣಿಮೆ ಅನಾಥವಾಗಿ ಅಳುತ್ತಿದೆ ಇವರ ಕಂಡು ಅಥವಾ ಅಳುತ್ತಿಲ್ಲ ನಗುತ್ತಿದೆ
ಅವನ ನಗು ಪೂರ್ಣಿಮೆಯ ತುಂಬಿದೆ
ಇವರು ಪೂರ್ಣಿಮೆಯನ್ನೂ ನೋಡುತ್ತಿಲ್ಲ
ಅಗಾಧವಾಗಿ ತುಂಬಿಕೊಂಡಿದ್ದರೂ ಕಣ್ಣ ಕೋರೈಸುವ ಲೈಟುಗಳ ತರಂಗಗಳು
ಅವರ ಸುತ್ತಿಕೊಂಡು ಹರಿಯುತ್ತಿವೆ
ಅವನು ಮಲಗಿದ್ದಾನೆ ಅವನ ಒಂದೊಂದು ಭಂಗಿಯೂ ಜಗದ ಚೆಲುವು
ಪೂರ್ಣಿಮೆಗೆ ಕಳೆ
(ಅವನು ಮಲಗಿಲ್ಲ)

(ಎಸ್.ನಟರಾಜ ಬೂದಾಳು)

ಇಂತಹ ಸಾಲುಗಳು ಕವನವೆನ್ನುವುದು ಮುಗಿದುಹೋದ ಸಂಗತಿಯಲ್ಲ; ಬದಲಿಗೆ ಅದರ ಇನ್ನೊಂದರ್ಧವು ಕೇಳುಗರಲ್ಲಿ ಬೆಳೆಯುವ ಬಿತ್ತನೆಯ ಕಾಳು ಎಂಬುದಕ್ಕೆ ಸಾಕ್ಷಿಯನ್ನೊದಗಿಸುತ್ತವೆ. ಆ ಇನ್ನರ್ಧಕ್ಕೆ ನಡೆಯುವ ಹುಡುಕಾಟದಂತಿರುವ ರಮೇಶರ ಅನೇಕ ಕವನಗಳು ತಟಕ್ಕನೆ ಅರ್ಧಕ್ಕೆ ನಿಂತುಹೋದಂತೆ ಭಾಸವಾಗುತ್ತವೆ. ಇದು ಓದುಗರನ್ನು ಕಾವ್ಯ ಪ್ರಕ್ರಿಯೆಗೆ ಒಳಗುಮಾಡಿಕೊಳ್ಳುವ ಕ್ರಮವೂ ಹೌದು. ಕಾವ್ಯವೆನ್ನುವುದು ಕವಿ ಮತ್ತು ಕೇಳುಗರಿಬ್ಬರೂ ಸೇರಿ ತಮ್ಮ ತಮ್ಮ ಕಾಲದೇಶದೊಡನೆ ನಡೆಸುವ ಅನುಸಂಧಾನದ ಫಲವಾಗಿರುವುದರಿಂದ ಸಿದ್ಧ ಕಾವ್ಯವಾಗಲೀ ಸಿದ್ಧ ಕವಿಯಾಗಲೀ ಸಿದ್ಧ ಓದುಗರಾಗಲೀ ಇರಲು ಸಾಧ್ಯವಿಲ್ಲ. ಎಲ್ಲವೂ ಒಗ್ಗೂಡಿದಾಗ ಉಂಟಾಗುವ ಪರಿಣಾಮವೂ ಸ್ಥಿತವಲ್ಲ. ಇಂತಹ ಪ್ರವಾಹರೂಪೀ ಕಾವ್ಯ ಪ್ರಕ್ರಿಯೆಯನ್ನು ಹರಿಯಬಿಡುವ ಅನೇಕ ಕವನಗಳು ಈ ಸಂಕಲನದಲ್ಲಿವೆ. ‘ಹಳೆಯ ಆಕಾಶ ಹೊಸ ಸೆಲ್ಫಿ’ ಕವನದ ಈ ಕೆಲವು ಸಾಲುಗಳನ್ನು ಉದಾಹರಿಸದಿರಲಾರೆ:

ಬೆಳದಿಂಗಳು ಹಳೆಯದು
ಕೋಟಿ ಸಮಯ
ದಿಂದ ಹೀಗೆ ಉರಿದು ಹೋಗಿರಬಹುದು
ಬೆಳಗಿರಬಹುದು
ಅವಳ ಕಣ್ಣುಗಳಲ್ಲಿ ಅದು ಹರಿಯುತ್ತಿದೆ
ಅಥವಾ ಮಾರಿ ಹಬ್ಬದ ಬಾಡಿನ ಘಮಲ ಸವಿಯುತ್ತಿದ್ದ
ಅಜ್ಜನಂತೆ ಅಜ್ಜನಜ್ಜನಂತೆ ಮುತ್ತಜ್ಜನ ಮುತ್ತಜ್ಜಿಯಂತೆ
ಹಳೆಯ ಬೆಳದಿಂಗಳು ಅವಳ ಕಣ್ಣುಗಳಲಿ ಹರಿಯುತ್ತಿದೆ
ರೂಪಕ ಹಳೆಯದೆನ್ನಿಸಬಹುದು
ಅಮ್ಮನ ರೊಟ್ಟಿಯೂ ಹಳೆಯದು
ಅಪ್ಪನ ಸಾಲದಂತೆ, ಅವನ ಚಪ್ಪಲಿಯಂತೆ
(ಹಳೆಯ ಆಕಾಶ ಹೊಸ ಸೆಲ್ಫಿ)

ಶಬ್ದಾರ್ಥಗಳ ಸಂಬಂಧ ಸ್ವರೂಪವನ್ನು ದರ್ಶನ, ಮೀಮಾಂಸೆ ಮತ್ತು ಕಾವ್ಯಗಳು ಎಂದಿನಿಂದಲೂ ಶೋಧಿಸುತ್ತಲೇ ಬಂದಿವೆ. ಶರೀಫಜ್ಜನಂತೂ ‘ಭಾಷೆ ಒಂದೇ ಭವನಾಶ ಒಂದೇ’ ಎನ್ನುತ್ತ ಭಾಷೆಯನ್ನು ಸಮಸ್ತ ಲೌಕಿಕ ಎಂಬರ್ಥದಲ್ಲಿ ಬಳಸಿ ನೋಡುತ್ತಾನೆ. ಶಬ್ದಾರ್ಥ ಸಂಬಂಧವನ್ನು ಪಾರ್ವತಿ ಪರಮೇಶ್ವರರಂತೆ ಪಾರಲೌಕಿಕಗೊಳಿಸಿರುವ ಮೀಮಾಂಸಾ ಪ್ರಯತ್ನಗಳಿವೆ. ಇನ್ನು ಭಾಷೆ ಅರ್ಥದ ಸಂಬಂಧಗಳು ಈ ಲೋಕದ ಈ ಕ್ಷಣದ ಆಗುವಿಕೆಯನ್ನು ದಾಖಲಿಸಲು ಬಳಸುವ ಪ್ರಕ್ರಿಯಾ ಮೀಮಾಂಸೆಯ ಪರಿಕರಗಳು ಮಾತ್ರ. ಅವುಗಳಾಚೆಗೆ ಯಾವುದೇ ಪಾರಲೌಕಿಕತೆಯನ್ನು ಆರೋಪಿಸುವುದರಲ್ಲಿ ಅರ್ಥವಿಲ್ಲವೆನ್ನುವ ಪ್ರಕ್ರಿಯಾ ಮೀಮಾಂಸಕರೂ ನಮ್ಮ ನಡುವೆ ಇದ್ದಾರೆ. ತೊಡೆಯಲಾಗದ ಲಿಪಿಯ ಬರೆಯಲಾಗದು ಎಂದ ಅಲ್ಲಮ ಆಹ್ವಾನ ಮತ್ತು ವಿಸರ್ಜನೆಯೇ ನಿಸರ್ಗದ ಮತ್ತು ಕಾವ್ಯದ ಆರೋಗ್ಯದ ಗುಟ್ಟು ಎಂದು ಎಚ್ಚರಿಸುತ್ತಾನೆ. ಅಂತಹ ಒಂದೆರಡು ತೀವ್ರ ಎಚ್ಚರದ ಸಾಲುಗಳು ಈ ಸಂಕಲನದಲ್ಲಿವೆ. ಈ ಎರಡು ಪುಟ್ಟ ಕವನಗಳು ನನ್ನನ್ನು ಹೀಗೆ ಮಾತಾಡಲು ಹಚ್ಚಿದವು:

ಅನುವಾದ

ಒಳಗೆ ಹೋದಂತೆಲ್ಲ ಅರ್ಥಗಳು ಓಡುತ್ತಿವೆ
ಅಥವ
ಸಿಕ್ಕ ಅರ್ಥ
ಅರ್ಥವಾಗುತ್ತಿಲ್ಲ
ಅನುವಾದಿಸುತ್ತಲೇ ಇದ್ದೇನೆ ನಿನ್ನ

ಕಣ್ಣಿಗೆ ಕಾಣುವ ಹೂವು ಕಾಣುತ್ತಿಲ್ಲ
ವೆಂಬಂತೆ ಅನುವಾದಿಸುತ್ತಿದ್ದೇನೆ.

ಮಂಜುಗಡ್ಡೆಯ ಮೇಲೆ

ಬರೆದರೆ ಮತ್ತೆ ಅವೇ ಸಾಲುಗಳು
ಇಲ್ಲಿ ಅಮರತ್ವದ ಕೊಳಕುನಾತ
ಪ್ರತಿಮೆಗಳಲಿ, ಮಿನಾರುಗಳಲಿ, ಮಂದಿರಗಳಲಿ
ಧರ್ಮಗ್ರಂಥದ ಕಟ್ಟುಗಳಲಿ
ಬರೆಯಬೇಕು ಮಂಜುಗಡ್ಡೆಯ ಮೇಲೆ
ಹರಿಯುತ್ತ ತನ್ನನು ತಾನು ಕಳಕೊಂಡು ಹಬ್ಬುತ್ತಾ ಪಡೆಯುತ್ತಾ

ಭಾಷೆಗೆ ತನ್ನದೇ ಆದದ್ದು ಇಲ್ಲವೆನ್ನುವ ನಿಲುವಿನ ಮೂಲಕ ಪ್ರಮಾಣ ನಿರಾಕರಣೆಯಂತಹ ನಿಲುವನ್ನು ಪ್ರತಿಪಾದಿಸುವ ಕವನವೊಂದು ನನ್ನ ಗಮನವನ್ನು ಸೆಳೆಯಿತು. ಪ್ರಮಾಣ ನಿರಾಕರಣೆ ಕನ್ನಡ ಕಾವ್ಯ ನಿರಂತರವಾಗಿ ಕಾಪಾಡಿಕೊಂಡು ಬಂದ ಎಚ್ಚರ. ಇಂತಹ ಪ್ರತಿಕ್ರಿಯಾತ್ಮಕ ನಿಲುವುಗಳು ಹುಟ್ಟಲು ಕಾರಣ ಈ ನೆಲವನ್ನು ಸಾವಿರಾರು ವರುಷಗಳಿಂದ ಅನೇಕ ರೀತಿಯ ತಲ್ಲಣಗಳಿಗೆ ನೂಕಿದ ಸಾಂಸ್ಕøತಿಕ ವಸಾಹತುಶಾಹಿ. ಇದಕ್ಕೆ ಪ್ರತಿಕ್ರಿಯಿಸುವುದಕ್ಕೇ ತನ್ನ ಚೈತನ್ಯದ ಬಹುಭಾಗವನ್ನು ಈ ನೆಲ ವ್ಯಯ ಮಾಡುತ್ತಾ ಬಂದಿದೆ. ಇಲ್ಲಿನ ಕವಿ, ದಾರ್ಶನಿಕರು ಯಾರೋ ಹೊರಿಸಿದ ಈ ಅನಿವಾರ್ಯ ಹೊರೆಯನ್ನು ನಿಭಾಯಿಸುತ್ತಲೇ ತಮ್ಮ ಕಾವ್ಯೋದ್ಯೋಗ ಮಾಡುತ್ತಾ ಬಂದಿದ್ದಾರೆ. ಈ ಊಳಿಗ ಇನ್ನೂ ತಪ್ಪಿಲ್ಲ. ಸಾಂಸ್ಕøತಿಕ ವಸಾಹತುಶಾಹಿಯಡಿಗೆ ಸಿಕ್ಕ ಆವರಣಗಳು ಈ ಸಂಕಟದಿಂದ ಹೊರಬರುವುದು ಅಷ್ಟು ಸುಲಭವಲ್ಲ. ಅಂತಹ ಬಿಡುಗಡೆಯನ್ನು ಸಾಧ್ಯವಾಗಿಸಿಕೊಂಡಿರುವ ಕೆಲವೇ ತಾತ್ವಿಕ ಆವರಣಗಳಿವೆ. ನಾನು ಬಲ್ಲ ಹಾಗೆ ಕನ್ನಡದ ತತ್ವಪದಕಾರರು ಮಾತ್ರ ಅಂತಹ ಬಿಡುಗಡೆಯನ್ನು ಅನುಭವಿಸಿದ್ದಾರೆ. ಕನ್ನಡದ ಕವಿಗಳು ಒಮ್ಮೆಯಾದರೂ ತತ್ವಪದಗಳ ಒಳಹೊಕ್ಕು ಬರದೆ ಹೋದರೆ ಈ ನಾಡಿನ ಅಸ್ಮಿತೆಯ ಜೊತೆಗೆ ಸಂಬಂಧ ಸಾಧಿಸಲಾರರು ಎಂಬುದೇ ನನ್ನ ಗಟ್ಟೆ ನಂಬುಗೆ. ರಮೇಶ ಅವರಿಗೆ ಪಾಶ್ಚಾತ್ಯ ತತ್ವಪರಂಪರೆಗಳ ಕಾವ್ಯ ಪರಂಪರೆಗಳ ಒಡನಾಟವಿದೆ. ಹಾಗಾಗಿ ಅವರಿಗೆ ಈ ನೆಲದ ಕಾವ್ಯ ಪರಂಪರೆಗಳ ಅನುಸಂಧಾನ ತೊಡಕಿನ ಸಂಗತಿಯೇನಲ್ಲ. ಅಂತಹ ಅನುಸಂಧಾನದ ಮೂಲಕ ಮಾತ್ರ ದೇಸಿ ಕಾವ್ಯ ಮೀಮಾಂಸೆಗಳೊಡನೆ ಮಾತುಕತೆ ಸಾಧ್ಯವಾಗುತ್ತದೆ. ಇಲ್ಲಿನ ಮೀಮಾಂಸಾ ಪರಂಪರೆಗಳ ಅರಿವಿಲ್ಲದಿರುವ ಆವರಣಗಳಲ್ಲಿ ಮಾತ್ರ ನಿರ್ದಿಷ್ಟ ಮಾದರಿಯ ಭಾಷೆಯೊಂದು ತಾನೇ ಪ್ರಮಾಣವೆನ್ನುವ ಅಹಂ ಅನ್ನು ಪ್ರದರ್ಶಿಸಬಹುದು. ಅದನ್ನು ಸೂಚಿಸುವ ಕವನವೆಂದೇ ಇದನ್ನು ಇಲ್ಲಿ ಉದ್ಧರಿಸುತ್ತಿದ್ದೇನೆ.

ಇಲ್ಲಿ ಅದನ್ನು
ಅದು
ಎಂದು ಕರೆಯಬೇಕು
ಅದನ್ನು ಹೆಸರ್ಹಿಡಿದು ಕರೆದರೆ
ಅಶ್ಲೀಲ
ಮರ್ಯಾದೆಗೆಟ್ಟ ಅಸಭ್ಯತನ
ಲಂಗಿಲ್ಲ ಲಗಾಮಿಲ್ಲ
ಎಂದು
ಎಳೆದು ತಂದು
ಲೋಕವನೇ ಕೂಗಿ ಕರೆದು
ಧರ್ಮದ ಹಗ್ಗದಲ್ಲಿ ನೇಣು ಹಾಕುವರು


ಅದನ್ನು ಅದಾಗಿ ಕರೆದರೆ
ಹೇಸಿಗೆ
ಭಾಷೆಯೇ ಸೃಷ್ಟಿಯ ಅರ್ಥದ ದಾರಿಯೇ

ಅರ್ಥವುಳಿವುದೇ ನಿರಂತರ
ಏನೆಲ್ಲಾ ಅಳಿದಿರುವ ಈ ಜಗದಲ್ಲಿ
ಅನಂತ ಕಾಲದ ಪರಿಯ ಅಪರಿಮಿತದಲಿ?

(ಕವಿ ಹೆಚ್ ಆರ್ ರಮೇಶ್)

ಈ ಕವನಗಳಲ್ಲಿನ ಕ್ರಿಯಾಲೋಕ ವರ್ತಮಾನದ ಸಂಕಟದ ಅನುಸಂಧಾನವೇ ತನ್ನ ಮೊದಲ ಆಯ್ಕೆ ಎಂದುಕೊಂಡಿರುವುದರಿಂದ ಸಹಜವಾಗಿ ವರ್ತಮಾನದ ಅನೇಕ ಸಂಘರ್ಷಗಳು ಇಲ್ಲಿ ಜಾಗ ಪಡೆದಿವೆ. ವೇಮುಲ, ಯು.ಆರ್. ಅನಂತಮೂರ್ತಿ, ಆಕ್ರಮಣ, ಅವನು, ಇವರು, ಅವರು ಮತ್ತು ರಾಷ್ಟ್ರನಾಯಕ, ಮೊದಲಾದ ಕವನಗಳು ಈ ಮಾದರಿಯವು. ವೇಮುಲನನ್ನು ಕುರಿತ ಕವನ ತನ್ನೆಲ್ಲ ಮೂರ್ತ ವಿವರಗಳಿಂದಲೇ ಈ ಹೊತ್ತು ನಮ್ಮ ತಟ್ಟೆಯನ್ನು ತುಂಬಿಕೊಂಡಿರುವ ಸಂಕಟವನ್ನು ಧ್ವನಿಯಾಗಿಸಿ ಕಾವ್ಯವೆಂದರೆ ಹಸಿವಿಗೆ ಅನ್ನವೋ ಆನಂದಕ್ಕೆ ರಸವೋ? ಎನ್ನುವ ಮೀಮಾಂಸೆಯ ಗಟ್ಟಿ ಪ್ರಶ್ನೆಯನ್ನು ಎತ್ತುತ್ತದೆ.

ನೀನು ಇರಬೇಕಿತ್ತು ಅವರ ವಿರುದ್ಧ ಸೆಣಸಲು
ಬಾಬಾ ಸಾಹೇಬರು ಸಾವಿರ ಸಲ ಸತ್ತು ಬದುಕಿದರು
ಹೋರಾಡುತ್ತ
ಗಾಂಧಿಯ ಜೊತೆಗಂತೂ ಸೆಣಸಿ ಹೈರಾಣಾಗಿ
ಮುನಿದರು, ಸಿಟ್ಟಾದರು, ಕೋಪಗೊಂಡರು
ಜಗದ ಯಾವ ಯುದ್ಧಕ್ಕಿಂತ ಕಡಿಮೆ ಅವರ ಸೆಣಸಾಟ
ಗಾಂಧಿಯನ್ನೂ ಬಿಟ್ಟರಾ ಅವರು
ಅವನ ರಾಮ
ಅವನ ಗೀತೆ
ಅವನ ಕಾಪಾಡಲಿಲ್ಲ
ಸುಸ್ತಾದ ಬಾಬಾರ ಆವರಿಸಿತು ತಥಾಗತನ ಬೆಳದಿಂಗಳು
ನೀನು ಇರಬೇಕಿತ್ತು
ನಿನಗಾಗಿ
ನಿನ್ನ ಅಮ್ಮ ಅನ್ನವ ಬೇಯಿಸುತ್ತಿದ್ದಳು
ಸಿಮೆಂಟ್ ಶೀಟಿನಡಿಯ ಧಗೆಯಲಿ
ನಿನಗಾಗಿ
ನಿನ್ನ ಸ್ನೇಹಿತರು ನಿನ್ನ ಗೆಳತಿಯರು
ಹೊಸ ಪುಸ್ತಕಗಳ ಕೊಂಡಿದ್ದರು
ಇಲ್ಲಿ ಗಾಂಧಿಯಾದರೆ ಕೊಲೆ ಮಾಡುತ್ತಾರೆ
ಬಾಬಾ ಸಾಹೇಬರಾದರೆ ಸರ್ಕಲ್ ಮಧ್ಯೆ ನಿಲ್ಲಿಸಿ ಪ್ರತಿಮೆ ಮಾಡುತ್ತಾರೆ
(ವೇಮುಲ)

Form is emptiness ಎಂಬ ನಿಲುವನ್ನು ಪ್ರತಿಪಾದಿಸುವ ಅನೇಕ ವಚನಗಳು ಇವೆ. ಇಂತಹ ವಚನಗಳನ್ನು ವೀರಶೈವದ ಆವರಣಕ್ಕೋ, ಲಿಂಗಾಯತ ಆವರಣಕ್ಕೋ ಸೀಮಿತವಾಗಿ ಓದುವುದು ಅವುಗಳನ್ನು ಸೀಮಿತಗೊಳಿಸಿದಂತೆಯೆಂಬುದು ನನ್ನ ಅನಿಸಿಕೆ. ಇದು ಕಾವ್ಯಕ್ಕೂ ಅನ್ವಯವಾಗುವ ಮಾತು. ಕಾವ್ಯವೆಂದರೆ ರಸ, ಧ್ವನಿ, ಆನಂದವೆನ್ನುವ ಮೀಮಾಂಸೆಯ ದಾರಿಗೆ ಕನ್ನಡದ ಕಾವ್ಯ ಎಂದೋ ವಿದಾಯ ಹೇಳಿದೆ. ಇಂತಹ ನಿಲುವುಗಳು ವ್ಯಕ್ತವಾಗುವ ಪಾಶ್ಚಾತ್ಯ ಕಾವ್ಯ ಮೀಮಾಂಸೆ ಮತ್ತು ಭಾಷಾ ವಿಜ್ಞಾನದ ಹೊಳಹುಗಳು ಆಧುನಿಕ ಕಾವ್ಯದಲ್ಲಿ ಜಾಗ ಕಂಡುಕೊಳ್ಳುವುದನ್ನು ನಾವು ಸ್ವೀಕರಿಸಬೇಕು. ಏಕೆಂದರೆ ಸಮಾನ ಚಿಂತನೆಗಳು ಕನ್ನಡದ ತತ್ವ ಮತ್ತು ಮೀಮಾಂಸಾ ಪ್ರಸ್ಥಾನಗಳಲ್ಲಿ ಅನುರಣಿಸಿವೆ. ಅವು ಹೊಸಗನ್ನಡ ಕಾವ್ಯದಲ್ಲಿ ಯಾವ ರೂಪದಲ್ಲಿಯೇ ಬಂದರೂ ಇಂತಹ ತತ್ವಪ್ರಸ್ಥಾನದೊಡನೆ ಮಾತನಾಡತೊಡಗುತ್ತವೆ ಅನ್ನಿಸುತ್ತದೆ. ಅಂತಹ ಒಂದು ಕವನ:

ನಿನಗೆ ಅಳಿವಿಲ್ಲ

ನಿನಗೆ ಅಳಿವಿಲ್ಲ.
ನನಗೆ;
ಮಾಗಿಯ ಎಲೆ
ಯಂತೆ ನಾನು
ಋತುಮಾನದ ಪರಿಕರಗಳಾದಿಯಾಗಿ ಜೀವ
ಅಜೀವಗಳ
ರೂಪಕಗಳಲಿ ಬಿದ್ದು ಒದ್ದಾಡಿ
ಅಳಿಯುವೆ.
ನೀನ ರೂಪಕಗಳಾಚೆ
ಅದಕೆ ಏನೋ ನಿನಗೆ ರೂಪಿಲ್ಲವೆನ್ನುವರು.
ನೀನು
ಪ್ರಶ್ನೆ
ಅದಕುತ್ತರವೂ ನಿರುತ್ತರ
ಡೆರಿಡಾದಿಗಳು ರೂಪಿಲ್ಲದಿರುವುದು ರೂಪವೇ ಎನ್ನುವರು
ನಿರುತ್ತರವೂ ಉತ್ತರವೆನ್ನವರು.