ಜಗತ್ತಿನ ಯಾವ ಭಾಗದಲ್ಲಿ ನಿಂತು ನೋಡಿದರೂ ಕೇಳಿದರೂ ವಲಸೆ ಎನ್ನುವ ಪದ ಸುಲಭವಾಗಿ ಅರ್ಥ ಆಗುತ್ತದೆ. ವಲಸೆಯ ಅನುಭವ ಇಲ್ಲದ ಮನುಷ್ಯರು ಮನೆಗಳು ಇರಲಿಕ್ಕಿಲ್ಲ. ಭೂಮಿಯ ಯಾವ ತುಂಡಿನ ಮೇಲೆ ಯಾವ ಗೆರೆಗಳ ನಡುವೆ ಈಗ ನಾವು ಇದ್ದರೂ ಅಲ್ಲಿನ ಒಳಗೂ ಹೊರಗೂ ನಿರಂತರವಾಗಿ ನಡೆಯುವ ಜನರ ಜೀವನಗಳ ಚಲನೆ ಸುಪರಿಚಿತ. ಕೆಲಸ, ಹೊಟ್ಟೆಪಾಡು, ಅವಕಾಶ, ಹೀಗೆ ಕೆಲವೊಮ್ಮೆ ಮೂಲಭೂತ ಅವಶ್ಯಕತೆ ಅನುಕೂಲತೆಗಳಿಗೆ ಮತ್ತೆ ಕೆಲವೊಮ್ಮೆ ಮಹತ್ವಾಕಾಂಕ್ಷೆಗಳಿಗೆ ಸಣ್ಣ ಪ್ರಾಂತ್ಯದೊಳಗೆ ಅಥವಾ ಅದಕ್ಕಿಂತ ದೊಡ್ಡ ಸೀಮೆ ಹೊಂದಿರುವ ದೇಶದೊಳಗೆ ಮತ್ತೆ ಎಲ್ಲ ಗಡಿ ಗೆರೆಗಳನ್ನು ದಾಟಿ ಹೊರಗೆ ಬಗೆಬಗೆಯ ವಲಸೆಗಳು ನಿತ್ಯವೂ ನಡೆಯುತ್ತಲೇ ಇರುತ್ತವೆ.
ಯೋಗೀಂದ್ರ ಮರವಂತೆ ಬರೆಯುವ ‘ಇಂಗ್ಲೆಂಡ್ ಲೆಟರ್’

 

ಕಾಲದ ಚಲನೆಯಲ್ಲಿ ಅನುಭವಗಳು ನೆನಪುಗಳಾಗುವುದು ಮತ್ತೆ ಆ ನೆನಪುಗಳು ಮಸುಕಾಗುವುದು ಮರೆಯಾಗುವುದು ಸಹಜ . ಮತ್ತೆ ಅದೇ ಕಾಲದ ಆಳದಲ್ಲಿ ಹುದುಗಿರುವ ಸಂಗತಿಗಳು ಇರುವಲ್ಲಿಂದಲೇ ಆಗಾಗ ಎದ್ದು ಬಂದು ವರ್ತಮಾನದಲ್ಲಿ ನಮ್ಮನ್ನು ಮಾತನಾಡಿಸಿ ಕಾಡಿಸಿ ಪೀಡಿಸಿ ಹೋಗುವುದು ಕೂಡ ಸತ್ಯ. ಜೀವ ಇರುವವು ರಹಿತವಾದವು ವಸ್ತುಗಳು ವಿಷಯಗಳು ಯಾವ್ಯಾವುದೋ ಕಾಲಕ್ಕೆ ನಶಿಸಿಹೋಗಿವೆ ಎಂದು ಕಂಡರೂ ಇಂದು ಅಲ್ಲದಿದ್ದರೆ ಮುಂದೆ ಮತ್ತೆ ನಮ್ಮೆದುರು ಹೊಸ ಅವತಾರದೊಂದಿಗೆ ಬಂದು ಕೈಕಟ್ಟಿ ನಿಂತು ಕಣ್ಣು ಮಿಲಾಯಿಸಬಹುದು. ಮತ್ತೆ ಆಗ ಎದುರು ಸಿಕ್ಕಿದವರೊಡನೆ ಒಂದು ಸಂಭಾಷಣೆಯಲ್ಲಿ ತೊಡಗಬಹುದು.

ಅಳಿದು ಎಷ್ಟು ಕಾಲ ಸಂದಿದ್ದರೂ ಇಂದಿಗೂ ಉಳಿದ ಸವಾಲುಗಳಿಗೆ ಜವಾಬುಗಳನ್ನು ಕೇಳಬಹುದು. ಈಗ ನಮ್ಮನ್ನು ಹಾದುಹೋಗುತ್ತಿರುವ ಸುಳಿಗಾಳಿಯೂ ಮುಂದೊಂದು ದಿನ ಕ್ಷೀಣಗೊಂಡು ತಿಳಿಗಾಳಿಯಾಗಿ ಹರಡಬಹುದು, ಇಂದು ಉತ್ತರಿಸಲಾಗದ ಒಗಟಿಗೆ ಮುಂದೆಂದೋ ಪರಿಹಾರವೋ ಸಮಾಧಾನವೋ ದೊರೆಯಬಹುದು ಅಥವಾ ಈಗ ತಿಳಿಯದ ಹೊಸ ವಿವರಗಳು ನೋಟಗಳು ಅಚ್ಚರಿಗಳು ಮುಂದೆಂದೋ ಮುಖಾಮುಖಿಯಾಗಬಹುದು.

ನಾವೆಲ್ಲಾ ಜೊತೆಯಾಗಿ ಕಳೆಯುತ್ತಿರುವ ಈ “ಕೊರೊನ ಸಮಯ” ಅಜ್ಞಾತ ಕಾಲದಲ್ಲಿ ಸರಿದುಹೋಗಲಿ ಎನ್ನುವ ಪ್ರತೀಕ್ಷೆ ಎಲ್ಲರದಾದರೂ ಯತಾರ್ಥದಲ್ಲಿ ಅಂತಹದೇನೋ ಆಗಲು ಇನ್ನೂ ಕಾಯಬೇಕು ಬೇಯಬೇಕು ಎಂದು ನಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳು ತಿಳಿಸುತ್ತಿವೆ. ಸದ್ಯದ ಮಟ್ಟಿಗೆ ಭೂತ ವರ್ತಮಾನ ಭವಿಷ್ಯ ಎಲ್ಲವೂ ಆಗಿರುವ ಕೋವಿಡ್ ಕಾಲವನ್ನು ಕೆಲ ಕ್ಷಣಗಳ ಮಟ್ಟಿಗೆ ಮರೆತು ಇನ್ನೂ ಸ್ವಲ್ಪ ಹಿಂದೆ ಸಾಗಿ, ಅಂದರೆ ಕೋವಿಡ್ ನ ಮೊದಲ ಅಧೀಕೃತ ಪತ್ತೆ ಆಗುವುದಕ್ಕಿಂತ ಮುಂಚಿನ ಬಹಳವೇನೂ ದೂರವಲ್ಲದ ಕಾಲಕ್ಕೆ ಬಂದು ನಿಂತರೆ ಆಗಿನ ಪ್ರಕರಣವೊಂದು ಕಣ್ಮುಂದೆ ಸುಳಿಯುತ್ತಿದೆ.

ಇದೀಗ ನಾವು ಬದುಕುತ್ತಿರುವ ಕೊರೊನ ದೈನಿಕದ ನಡುವೆ, ಇವೆಲ್ಲವೂ ಶುರು ಆಗುವುದಕ್ಕಿಂತ ತುಸು ಮೊದಲು ಬ್ರಿಟನ್ನಿನಲ್ಲಿ ಭಾವಾವೇಶದ ಚರ್ಚೆಗಳನ್ನು ವಿಹ್ವಲ ಮನಕಲುಕುವ ವಿಚಾರಗಳನ್ನು ತೆರೆದಿಟ್ಟ ಘಟನೆಯ ತುಣುಕುಗಳು ಇದೀಗ ಮತ್ತೆ ಇಲ್ಲೇ ಹತ್ತಿರದಲ್ಲಿ ಹಾರಾಡುತ್ತಿವೆ.

ಬ್ರಿಟನ್ನಿನ ಆಗುಹೋಗುಗಳ ಬಗ್ಗೆ ಗಮನ ಇಡುವ ಹತ್ತಿರದವರಿಂದ ಹಿಡಿದು ದೂರದೂರದ ಊರು ದೇಶದವರಿಗೂ, ಕಳೆದ ವರ್ಷ ಇದೇ ಅಕ್ಟೋಬರ್ ಸಮಯಕ್ಕೆ ಇಲ್ಲಿ ನಡೆದ ಘಟನೆಯೊಂದು ಮಸುಕಾಗಿಯಾದರೂ ನೆನಪಿರಬಹುದು. ೨೦೧೯ರ ಅಕ್ಟೋಬರ್ ೨೩ರಂದು ಯೂರೋಪಿನ ದೇಶಗಳ ಮೂಲಕ ಹಾದುಹೋಗುತ್ತ ಸರಕು ತುಂಬಿಸಿಕೊಂಡು ಓಡಾಡುವ ಮಾದರಿಯ ಲಾರಿಯೊಂದು ಲಂಡನ್ ನ ಸಮೀಪದ ಎಸ್ಸೆಕ್ಸ್ ಪ್ರಾಂತ್ಯದಲ್ಲಿ ಬಂದು ನಿಂತಿತ್ತು. ಸರಕು ಸಾಗಾಟದ ದೂರ ಸಂಚಾರಿ ಇತರ ಲಾರಿಗಳಂತೆಯೇ ತನ್ನ ಹಿಂದೆ ಉದ್ದದ ಎತ್ತರದ ಶೀತಲೀಕರಣ ವ್ಯವಸ್ಥೆ ಇರುವ ದಪ್ಪ ತಗಡಿನ ಡಬ್ಬಿ ಅಥವಾ ಕಂಟೈನರ್ ಎಳೆದುಕೊಂಡು ಓಡಾಡುವ ವಾಹನ ಅದಾಗಿತ್ತು.

ನಿತ್ಯವೂ ಬ್ರಿಟನ್ನಿನ ಗಡಿಯೊಳಗೆ ಹತ್ತು ಸಾವಿರಕ್ಕಿಂತ ಹೆಚ್ಚು ಅಂತಹ ಲಾರಿಗಳು ಯಾವುದೊ ಸರಕನ್ನು ಹೊತ್ತು ಯುರೋಪಿನಿಂದ ಪ್ರವೇಶ ಮಾಡುತ್ತವೆ, ಇಲ್ಲಿನ ರಸ್ತೆ ರಸ್ತೆಗಳಲ್ಲಿ ಓಡಾಡುತ್ತವೆ, ವ್ಯಾಪಾರ ವ್ಯವಹಾರಗಳ ಗೋದಾಮು ಮಂಡಿ ಮಳಿಗೆಗಳನ್ನು ತಲುಪುತ್ತವೆ. ಬಿಡಿ, ನಾವು ಕಟ್ಟಿ ಬೆಳೆಸಿಕೊಂಡ ಜಾಗತಿಕ ಜಗತ್ತಿನಲ್ಲಿ ಯಾವ ಊರಿನ ಯಾವುದೂ ಎಲ್ಲೆಲ್ಲಿಗೂ ಸುಲಭವಾಗಿ ಮುಟ್ಟಬಹುದು, ಕಣ್ಣಿಗೆ ಕಾಣುವುದು ಕಾಣದ್ದು ಎಲ್ಲವೂ. ಆದರೆ ಎಸ್ಸೆಕ್ಸ್ ಪ್ರಾಂತ್ಯದ ಬಂದರಿನ ಮೂಲಕ ಬ್ರಿಟನ್ನಿನೊಳಗೆ ಪ್ರವೇಶ ಪಡೆದು ಪ್ರಯಾಣ ಮುಗಿಸಿ ನಿಂತಿದ್ದ ಆ ಲಾರಿಯ ಬೆನ್ನಿಗಿರುವ ಕಂಟೈನರ್ ಒಳಗೆ ಅಂದು ಯಾವುದೇ ಸರಕು ಸಾಮಾನುಗಳಿರಲಿಲ್ಲ, ಬದಲಿಗೆ ಕೆಲ ಘಂಟೆಗಳ ಹಿಂದೆ ಕೊನೆಯ ಉಸಿರಾಡಿದ ಮೂವತ್ತೊಂಬತ್ತು ದೇಹಗಳಿದ್ದವು! ಹದಿನೈದರಿಂದ ನಲವತ್ತ್ನಾಲ್ಕು ವರ್ಷ ವಯಸ್ಸಿನವರಾಗಿದ್ದ ಆ ಮೃತ ವ್ಯಕ್ತಿಗಳ ಶವ ಪರೀಕ್ಷೆ ನಡೆದು, ಇಪ್ಪತ್ತೊಂಭತ್ತು ದೇಹಗಳು ಪುರುಷರದು, ಎಂಟು ಮಹಿಳೆಯರದು ಹಾಗು ಎರಡು ಮಕ್ಕಳದು ಎಂದು ತಿಳಿಯಿತು. ಮತ್ತೆ ಇನ್ನೂ ಹೆಚ್ಚಿನ ವಿಚಾರಣೆಯಿಂದ ಅವರೆಲ್ಲ ವಿಯೆಟ್ನಾಂನವರು ಎಂದೂ ಗೊತ್ತಾಯ್ತು.

ಸರಕು ಸಾಗಿಸುವ ಲಾರಿಯ ಹಿಂದಿನ ತಗಡಿನ ಡಬ್ಬಿಯಲ್ಲಿ ಈ ಹಿಂದೆ ೨೦೦೦ನೆಯ ಇಸವಿಯಲ್ಲಿ ಐವತ್ತೆಂಟು ಚೀನೀಯರ ಶವ ದೊರಕಿತ್ತು. ಹೀಗೆ ಲಾರಿಯಲ್ಲಿ ಗುಟ್ಟಾಗಿ ದೀರ್ಘ ಅಪಾಯಕಾರಿ ಕಾನೂನುಬಾಹಿರ ಯಾನದಲ್ಲಿ ಹೊರಟ ಮನುಷ್ಯರು ತಮ್ಮ ಅಂತಿಮ ನಿಲ್ದಾಣವನ್ನು ತಲುಪುವಾಗ ಶವಗಳಾಗುವ ವಿದ್ರಾವಕ ಘಟನೆಗಳು ತೀರಾ ಸಾಮಾನ್ಯ ಅಲ್ಲದಿದ್ದರೂ ಈ ಹಿಂದೆಯೂ ಕೆಲವು ಬಾರಿ ಬ್ರಿಟನ್ನಿನಲ್ಲಿ ಇಂತಹ ಸಂಗತಿಗಳು ನಡೆದಿವೆ. ಮತ್ತೆ ಅಪರೂಪದ ವಿಹ್ವಲ ಘಟನೆಯ ಮರುಕಳಿಕೆ ಆ ಘಟನೆಯ ಮರೆಯಲ್ಲಿ ಅಡಗಿರುವ ಅಮಾನುಷ ಕಥನಗಳು ಇದೀಗ ನ್ಯಾಯಾಂಗ ವಿಚಾರಣೆಯ ನಡುವೆ ಎಳೆಎಳೆಯಾಗಿ ಹೊರಬರುತ್ತಿವೆ.

ಜಗತ್ತಿನ ಯಾವ ಭಾಗದಲ್ಲಿ ನಿಂತು ನೋಡಿದರೂ ಕೇಳಿದರೂ ವಲಸೆ ಎನ್ನುವ ಪದ ಸುಲಭವಾಗಿ ಅರ್ಥ ಆಗುತ್ತದೆ. ವಲಸೆಯ ಅನುಭವ ಇಲ್ಲದ ಮನುಷ್ಯರು ಮನೆಗಳು ಇರಲಿಕ್ಕಿಲ್ಲ. ಭೂಮಿಯ ಯಾವ ತುಂಡಿನ ಮೇಲೆ ಯಾವ ಗೆರೆಗಳ ನಡುವೆ ಈಗ ನಾವು ಇದ್ದರೂ ಅಲ್ಲಿನ ಒಳಗೂ ಹೊರಗೂ ನಿರಂತರವಾಗಿ ನಡೆಯುವ ಜನರ ಜೀವನಗಳ ಚಲನೆ ಸುಪರಿಚಿತ. ಕೆಲಸ, ಹೊಟ್ಟೆಪಾಡು, ಅವಕಾಶ, ಹೀಗೆ ಕೆಲವೊಮ್ಮೆ ಮೂಲಭೂತ ಅವಶ್ಯಕತೆ ಅನುಕೂಲತೆಗಳಿಗೆ ಮತ್ತೆ ಕೆಲವೊಮ್ಮೆ ಮಹತ್ವಾಕಾಂಕ್ಷೆಗಳಿಗೆ ಸಣ್ಣ ಪ್ರಾಂತ್ಯದೊಳಗೆ ಅಥವಾ ಅದಕ್ಕಿಂತ ದೊಡ್ಡ ಸೀಮೆ ಹೊಂದಿರುವ ದೇಶದೊಳಗೆ ಮತ್ತೆ ಎಲ್ಲ ಗಡಿ ಗೆರೆಗಳನ್ನು ದಾಟಿ ಹೊರಗೆ ಬಗೆಬಗೆಯ ವಲಸೆಗಳು ನಿತ್ಯವೂ ನಡೆಯುತ್ತಲೇ ಇರುತ್ತವೆ.

ವಲಸೆಗಳ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ವಲಸೆ ಸಂಸ್ಥೆಯ ೨೦೨೦ರ ಅಂಕಿ-ಅಂಶದ ಪ್ರಕಾರ ಏಳುನೂರೈವತ್ತು ಕೋಟಿ ಜನಸಂಖ್ಯೆಯ ನಮ್ಮ ಜಗತ್ತಿನಲ್ಲಿ ಇಪ್ಪತ್ತೇಳು ಕೋಟಿ ಜನ ಅಂತಾರಾಷ್ಟ್ರೀಯ ವಲಸಿಗರು ಇದ್ದಾರೆ. ಅಂದರೆ ಜಗತ್ತಿನ ಜನಸಂಖ್ಯೆಯ ಮೂರುವರೆ ಪ್ರತಿಶತಃ ಜನರು ತಮ್ಮ ದೇಶದ ಗಡಿಗಳನ್ನು ದಾಟಿ ವಲಸೆ ಹೋಗಿದ್ದಾರೆ, ಉಳಿದವರು ತಮ್ಮ ತಮ್ಮ ದೇಶಗಳಲ್ಲೇ ಇದ್ದಾರೆ. ಅವರಲ್ಲೂ ವಲಸಿಗರು ಬಹಳ ಮಂದಿ. ಅವರು ದೇಶೀಯ ಅಥವಾ ಸ್ಥಳೀಯ ವಲಸಿಗರು. ಹೀಗೆ ದೇಶದಿಂದ ಹೊರಗೆ ವಲಸೆ ಹೋದ ೨೭ ಕೋಟಿ ಜನರಲ್ಲಿ ಎರಡನೇ ಮೂರರಷ್ಟು ಜನರು ಕೂಲಿಗಾಗಿ ದುಡಿಮೆಗಾಗಿ ವಲಸೆ ಹೋದವರು (ಲೇಬರ್ ಮೈಗ್ರಂಟ್). ಮತ್ತೆ ದೇಶಾಂತರ ವಲಸಿಗರಲ್ಲಿ ಅತ್ಯಂತ ದೊಡ್ಡ ಸಂಖ್ಯೆ ಭಾರತೀಯರದು, ಸುಮಾರು ಒಂದು ಮುಕ್ಕಾಲು ಕೋಟಿ. ನಂತರದ ಸ್ಥಾನ ಮೆಕ್ಸಿಕೋ, ಚೀನಾದವರಿಗೆ.

ಇದೀಗ ನಾವು ಬದುಕುತ್ತಿರುವ ಕೊರೊನ ದೈನಿಕದ ನಡುವೆ, ಇವೆಲ್ಲವೂ ಶುರು ಆಗುವುದಕ್ಕಿಂತ ತುಸು ಮೊದಲು ಬ್ರಿಟನ್ನಿನಲ್ಲಿ ಭಾವಾವೇಶದ ಚರ್ಚೆಗಳನ್ನು ವಿಹ್ವಲ ಮನಕಲುಕುವ ವಿಚಾರಗಳನ್ನು ತೆರೆದಿಟ್ಟ ಘಟನೆಯ ತುಣುಕುಗಳು ಇದೀಗ ಮತ್ತೆ ಇಲ್ಲೇ ಹತ್ತಿರದಲ್ಲಿ ಹಾರಾಡುತ್ತಿವೆ.

ವಲಸೆಗೆ ಕಾರಣಗಳು ಹಲವು ಇದ್ದರೂ ಬದುಕಿಗೆ ಸಹಜವೂ ಅನಿವಾರ್ಯವೂ ಆದ ಈ ಚಲನೆಯನ್ನು ಕಾನೂನುಬದ್ಧ ವಲಸೆ ಹಾಗು ಅಕ್ರಮ ವಲಸೆ ಎಂದೂ ವಿಭಾಗಿಸಿ ನೋಡಬಹುದು. ಇನ್ನೊಂದು ದೇಶಕ್ಕೆ ವಲಸೆ ಹೋಗುವಾಗ ಅನುಮತಿ ಇದ್ದು ಹೋಗುವುದು ಒಂದು ತರಹದ್ದು. ಮತ್ತೆ ಪರವಾನಿಗೆ ದೊರೆಯದು ಎಂದು ತಿಳಿದಿರುವಾಗ ಕಾನೂನುಬಾಹಿರ ಮಾರ್ಗಗಳಿಂದ ಇನ್ನೊಂದು ದೇಶವನ್ನು ಪ್ರವೇಶಿಸಿಸುವುದು ಮತ್ತೊಂದು ಬಗೆಯದು. ಜಗತ್ತಿನ ತುಂಬಾ ನಾವು ಎಳೆದುಕೊಂಡ ಗಡಿ ಗೆರೆಗಳು ಅಲ್ಲಲ್ಲಿಯ ನಿಯಮ ಕಾನೂನುಗಳು ಇಂತಹ ಚಲನೆಯನ್ನು ಹೇಗೆ ವರ್ಗೀಕರಿಸಿ ಕಂಡರೂ ನಿರ್ಬಂಧಿಸಿದರೂ ಆಯಾ ವಲಸೆಗಳಲ್ಲಿ ಭಾಗವಹಿಸುವವರ ನಿಟ್ಟಿನಲ್ಲಿ ಅವರವರ ಹೆಜ್ಜೆ ಬದುಕುವ ಹಾದಿಯ ಸರಳ ಆದರೆ ಸಂಕೀರ್ಣ ವಾಸ್ತವ ಇರಬಹುದು.

ಒಂದಕ್ಕೊಂದು ತಾಗಿಕೊಂಡಿರುವ ಅಥವಾ ತೀರ ಸಮೀಪದಲ್ಲಿರುವ ಯುರೋಪಿನ ದೇಶಗಳಲ್ಲಿ ವಲಸೆ ಪ್ರತಿದಿನದ ಸುದ್ದಿ ಹಾಗು ಸವಾಲು. ಇನ್ನು ಯಾವ ದೇಶದೊಟ್ಟಿಗೂ ನೆಲದ ಗಡಿಯನ್ನು ಹಂಚಿಕೊಳ್ಳದ ಸುತ್ತಲೂ ನೀರು ಆವರಿಸಿರುವ ಬ್ರಿಟನ್ ಕೂಡ ವಲಸಿಗರ ಗಮ್ಯಸ್ಥಳಗಳಲ್ಲಿ ಒಂದು. ಯುರೋಪ್, ಆಫ್ರಿಕಾ, ಕೊಲ್ಲಿರಾಷ್ಟ್ರಗಳಿಂದ ಸಣ್ಣ ಬೋಟಿನಲ್ಲಿ ಮಹಾಸಾಗರವನ್ನು ದಾಟುತ್ತ ವಲಸೆಯಾನವನ್ನು ಮಾಡುವವರ ಬಗ್ಗೆ ಆಗಾಗ ವರದಿಯಾಗುತ್ತದೆ. ಹೀಗೆ ಜಲಮಾರ್ಗದಲ್ಲಿ ಅತ್ಯಂತ ಅಪಾಯದ ಸನ್ನಿವೇಶಗಳನ್ನು ಎದುರಿಸುತ್ತ ಪ್ರಯಾಣಿಸುವವರು ಮಾರ್ಗಮಧ್ಯದಲ್ಲಿ ಜಲಸಮಾಧಿಯಾಗುವುದು, ಯಾವುದೊ ದೇಶದ ಪೊಲೀಸರ ಕೈಗೆ ಸಿಗುವುದು ತಮ್ಮ ನಿಲ್ದಾಣ ತಲುಪದೇ ಇರುವುದು ನಡೆಯುತ್ತದೆ. ಇನ್ನು ಕೆಲವು ವಲಸೆಯಾನಗಳು ಗುರಿಮುಟ್ಟಲೂಬಹುದು. ತಮ್ಮ ದೇಶದಲ್ಲಿ ಉದ್ಯೋಗ ಅವಕಾಶ ಕಡಿಮೆ ಇರುವುದಕ್ಕೋ, ಆಂತರಿಕ ಕಲಹದ ಕಾರಣಕ್ಕೋ, ಯುದ್ಧದಲ್ಲಿ ನಿರಾಶ್ರಿತರಾದುದಕ್ಕೋ ಅಥವಾ ಇನ್ಯಾವುದೋ ಕಾರಣಕ್ಕೋ ತಮ್ಮ ಊರು ಬಿಟ್ಟು ಅಪಾಯದ ಸಾಹಸ ಕೈಗೊಳ್ಳುವ ಜನರು ಒಂದು ವೇಳೆ ಬ್ರಿಟನ್ನಿನ ಗಡಿಯನ್ನು ತಲುಪುವಾಗ ಸಿಕ್ಕಿ ಬಿದ್ದರೆ ನಿರಾಶ್ರಿತರನ್ನು ಆಧರಿಸುವ ಉಪಚರಿಸುವ ವಿಚಾರಿಸುವ ಇಲ್ಲಿನ ಕಾನೂನಿನ ಪ್ರಕ್ರಿಯೆಗೆ ಒಳಗಾಗುತ್ತಾರೆ. ಆ ಪ್ರಕ್ರಿಯೆಯಲ್ಲಿ ಊಟ ವಸತಿಗಳ ಸೌಲಭ್ಯ ಇರುವುದು ಜೀವಾಪಾಯ ಇಲ್ಲದಿರುವುದು ಅವರು ಬಿಟ್ಟುಬಂದ ಬದುಕಿಂತ ಹೆಚ್ಚು ಸುಲಭದ್ದು ಎಂದು ಅವರಿಗೆ ಅನಿಸಿ ಅವರು ಇಲ್ಲಿಗೆ ಬರುವ ಯತ್ನ ಮಾಡಿದವರಿರಬಹುದು.

ಇನ್ನು ಕಾವಲಿನ ಕಣ್ಣುತಪ್ಪಿಸಿ ಒಳಗೆ ಬಂದವರಾದರೆ ಯಾವುದೊ ಕೂಲಿ ಕೆಲಸ ಹಿಡಿದುಕೊಂಡು ಮತ್ತೆ ಕೆಲವೊಮ್ಮೆ ಗುಲಾಮಗಿರಿಯ ಆಧುನಿಕ ರೂಪದಲ್ಲಿ ಸಿಕ್ಕಿಬಿದ್ದು ಅವರು ಜೀವನ ಸಾಗಿಸುವ ಸಾಧ್ಯತೆಯೂ ಇದೆ. ತಮ್ಮ ದೇಶ ಬಿಟ್ಟು ಬರಲು ಅವರಿಗಿರುವ ಕಾರಣದ ಆಧಾರದಲ್ಲೊ ಅಥವಾ ಕಣ್ಣು ತಪ್ಪಿಸಿಯಾದರೂ ದೀರ್ಘ ಕಾಲ ಬ್ರಿಟನ್ನಿನಲ್ಲಿ ವಾಸವಾಗಿರುವ ಕಾರಣಕ್ಕೋ ಮುಂದೆಂದೋ ಅವರಿಗೆ ಇಲ್ಲಿಯೇ ಇರಲು ಬೇಕಾದ ಪರವಾನಿಗೆ ಸಿಗಬಹುದು. ಇಂತಹ ಅಕ್ರಮ ವಲಸೆಗಳ ಹಿನ್ನೆಲೆಯಲ್ಲಿ ಕಾನೂನುಬಾಹಿರ ವ್ಯವಹಾರ ಮಾಡುವ ಅಂತಾರಾಷ್ಟ್ರೀಯ ವ್ಯವಸ್ಥೆಗಳು ಕೆಲಸ ಮಾಡುತ್ತವೆ. ಅಂತಹ ವ್ಯವಸ್ಥೆಗಳನ್ನು ಜಾಲಗಳನ್ನು ಇಲ್ಲಿನ ಕಾನೂನು ಪೊಲೀಸರು ಪತ್ರಿಕೆಗಳು “ಕ್ರಿಮಿನಲ್ ಗ್ಯಾಂಗ್” ಗಳೆಂದು ಕರೆಯುತ್ತಾರೆ. ಮತ್ತೆ ಯೂರೋಪಿನ ಇತರ ದೇಶಗಳ ಅಧಿಕಾರಿಗಳ ಸಹಭಾಗಿತ್ವದಲ್ಲಿ ಅಂತಹವರನ್ನು ಹುಡುಕುವ ಖಾಯಂ ಯತ್ನದಲ್ಲಿರುತ್ತಾರೆ.

ಅಕ್ಟೋಬರ್ ೨೩ರಂದು ಹೀಗೆ ವಲಸೆ ದುರಂತವೊಂದು ಬೆಳಕಿಗೆ ಬಂದ ದಿನದಿಂದ ತೀರಾ ಇತ್ತೀಚಿನ ತನಕ ಲಾರಿಯ ಚಾಲಕನಿಂದ ಹಿಡಿದು ಅಕ್ರಮ ವಲಸೆ ಮಾಡಿಸುವ ವ್ಯವಹಾರದಲ್ಲಿ ಭಾಗೀದಾರರಾಗಿರುವ ಕೆಲವರನ್ನು ಬ್ರಿಟನ್ ಐರ್ಲೆಂಡ್ ಯೂರೋಪಿನ ಭಾಗಗಳಿಂದ ಬಂಧಿಸಲಾಗಿದೆ ಮತ್ತೆ ವಿಚಾರಿಸಲಾಗುತ್ತಿದೆ. ಆ ವಿಚಾರಣೆಯ ಬೆಳವಣಿಗೆಯ ಭಾಗವಾಗಿ ಲಾರಿಯಲ್ಲಿ ಮಡಿದವರ ಮೊಬೈಲ್ ಗಳಿಂದ ಪಡೆದ ಮಾಹಿತಿಯನ್ನೂ ಕಳೆದ ವಾರ ಬಹಿರಂಗ ಮಾಡಲಾಗಿದೆ. ಗ್ಯಾಂಗಿನ ಸಹಾಯ ಸಂಚನ್ನು ನಂಬಿ ಲಾರಿಯ ಕಂಟೈನರ್ ಹತ್ತಿಕೂತವರು ತಮ್ಮತಮ್ಮ ಮನೆಗಳಲ್ಲಿ ಹೇಳಿಯೋ ಹೇಳದೆಯೋ ಹೊರಟವರು, ಹೇಗೋ ಬ್ರಿಟನ್ನಿಗೆ ಬಂದರೆ ತಕ್ಕಮಟ್ಟಿನ ಗಳಿಕೆಯ ಉದ್ಯೋಗ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದವರು.

ಇಂತಹ ಆಸೆಯ ಪ್ರತಿ ಮನುಷ್ಯನ ರವಾನೆಗೆ ಹತ್ತರಿಂದ ಇಪ್ಪತ್ತು ಲಕ್ಷ ರೂಪಾಯಿಗಳ ಹಣ ಪಡೆಯುವ ಸಾಗಣೆದಾರರು ಈ ಘಟನೆ ನಡೆಯುವ ಎರಡು ವಾರಗಳ ಮೊದಲು ಹತ್ತು ಹದಿನೈದು ಜನರನ್ನು ಬ್ರಿಟನ್ನಿಗೆ ತಲುಪಿಸಲು ಮಾಡಿದ ಯತ್ನ ಫಲಕಾರಿ ಆಗಿರಲಿಲ್ಲ. ಆ ತಿಂಗಳಿನಲ್ಲಿ ತಪ್ಪಿಹೋದ ಮಾಮೂಲಿ ಆದಾಯದ ಅವಕಾಶಗಳಿಂದ ಆದ ನಷ್ಟ ಭರಿಸಲು ಒಂದೇ ಪ್ರಯಾಣದಲ್ಲಿ ೩೯ ಜನರನ್ನು ಕಳುಹಿಸುವ ಯೋಜನೆ ಮಾಡಲಾಗಿದೆ. ವಿಯೆಟ್ನಾಂ, ಚೈನಾ ಅಥವಾ ಇನ್ಯಾವುದೋ ದೇಶದಿಂದ ಬ್ರಿಟನ್ನಿಗೆ ಬರುವ ಉದ್ದೇಶ ಇರುವವರನ್ನು ಯೂರೋಪಿನ ಆಯಕಟ್ಟಿನ ನಗರಕ್ಕೆ ಇನ್ಯಾವುದೋ ಮಾರ್ಗದಲ್ಲಿ ಕರೆತರಲಾಗುತ್ತದೆ. ಕಂಟೈನರ್ ನ ಶೀತಲೀಕರಣವನ್ನು ನಿಲ್ಲಿಸಿ, ಕೆಲವೊಮ್ಮೆ ಸರಕುಗಳ ನಡುವೆ ಅಥವಾ ಖಾಲಿಯಾಗಿ ಜನರನ್ನು ಹತ್ತಿಸಿಕೊಂಡು ಹೊರಡುವ ಇಂತಹ ಲಾರಿಗಳು ಹತ್ತು ಹನ್ನೆರಡು ಘಂಟೆಗಳ ಪ್ರಯಾಣದಲ್ಲಿ ಯೂರೋಪಿನ ಯಾವುದೊ ನಗರದಿಂದ ಬ್ರಿಟನ್ ಅನ್ನು ತಲುಪುತ್ತವೆ. ಹಲವು ಸಾವಿರ ಲಾರಿಗಳು ನಿತ್ಯವೂ ಪ್ರವೇಶಿಸುವಾಗ ಪ್ರತಿ ಲಾರಿಯೂ ಸೂಕ್ಷ್ಮವಾಗಿ ತಪಾಸಣೆಗೆ ಒಳಪಡುವುದಿಲ್ಲ. ಹೊರಗಿನವರಿಗೆ ಒಳಗೆ ಕೂತವರು ಮಾತನಾಡುವ ಸದ್ದು ಕೇಳಬಾರದೆಂದು ಕಂಟೈನರ್ ನ ಸಣ್ಣ ರಂಧ್ರಗಳನ್ನೂ ಮುಚ್ಚಲಾಗುತ್ತದೆ. ಉಸಿರಾಡಲು ಹೊರಗಿನ ಸ್ವಚ್ಛ ಗಾಳಿಯ ಸಂಚಲನ ಇಲ್ಲದ, ಘಳಿಗೆ ಘಳಿಗೆಗೂ ಒಳಗಿನ ಉಷ್ಣತೆ ಏರುವುದರ ನಡುವೆಯೇ ಪ್ರಯಾಣ ಮುಂದುವರಿಯುತ್ತದೆ.

ಕಳೆದ ಅಕ್ಟೋಬರ್ ಅಲ್ಲಿ ನಡೆದ ಪ್ರಕರಣದಲ್ಲಿ ಎಂದಿಗಿಂತ ಎರಡು ಮೂರು ಪಾಲು ಹೆಚ್ಚು ಜನರನ್ನು ಸಾಗಿಸುವ ಪ್ರಯತ್ನ ಆಗಿದುದರಿಂದ ಪ್ರಯಾಣದ ಒಂದು ಹಂತದಲ್ಲಿ ಕಂಟೈನರ್ ಒಳಗಿನ ತಾಪಮಾನ ಸುಮಾರು ೩೯ ಡಿಗ್ರಿ ಸೆಂಟಿಗ್ರೇಡ್ ಮುಟ್ಟಿದೆ. ಮತ್ತೆ ದೀರ್ಘ ಕಾಲ ಅವರವರೇ ಉಸಿರಾಡಿ ಬಿಟ್ಟ ಗಾಳಿಯೂ ವಿಷಪೂರಿತವಾಗಿದೆ. ಅಂತ್ಯ ಕಾಣದಿರುವ ಪ್ರತಿಕೂಲ ವ್ಯವಸ್ಥೆಯಲ್ಲಿ ಇನ್ನು ತಾವು ಬದುಕಲಿಕ್ಕಿಲ್ಲ ಎಂದು ಪ್ರಯಾಣಿಸುವವರು ಸಂಶಯಪಟ್ಟು ಕಂಟೈನರ್ ನ ಮೇಲ್ಛಾವಣಿಯನ್ನು ಹೊಡೆದು ಮುರಿಯುವ ಪ್ರಯಾಸವನ್ನೂ ಮಾಡಿದ್ದಾರೆ. ತಮ್ಮ ತಮ್ಮ ಹೆತ್ತವರು ಮಕ್ಕಳು ಬಂಧುಗಳಿಗೆ ಕೊನೆಯ ಕ್ಷಣದಲ್ಲಿ ಕರೆ ಮಾಡುವ ವಿಡಿಯೋ ಮತ್ತೆ ಲಿಖಿತ ಸಂದೇಶ ಕಳುಹಿಸುವ ಯತ್ನವನ್ನೂ ಮಾಡಿದ್ದಾರೆ. ತಮ್ಮ ಬಂಧುಗಳಲ್ಲಿ ತಮ್ಮ ಅಸಹಾಯಕ ವಿಫಲ ಅಚಾತುರ್ಯದ ಬಗ್ಗೆ ಕ್ಷಮೆ ಕೇಳಿದ್ದಾರೆ.

ಕತ್ತಲೆಯ ತಗಡಿನ ಡಬ್ಬಿಯಲ್ಲಿ ವಿಯೆಟ್ನಾಂ ವಲಸಿಗರು ಕಳೆದ ಕೊನೆಯ ಕ್ಷಣಗಳು ಇದೀಗ ಲಂಡನ್ ನ್ಯಾಯಾಲಯದ ವಿಚಾರಣೆಯಲ್ಲಿ ಮರುಜೀವ ಪಡೆದು ಕಟಕಟೆಯಲ್ಲಿ ನಿಂತಿವೆ, ಹೊರ ಜಗತ್ತಿಗೆ ವರದಿ ಆಗುತ್ತಿವೆ. ಇಂತಹ ವಲಸೆ ದುರಂತವೊಂದರ ಮೂಲಭೂತ ಹೊಣೆಗಾರಿಕೆ ಅಲ್ಲಿ ಮೃತ ಪಟ್ಟವರದೇ ಆದರೂ ಇಂತಹ ವ್ಯವಹಾರಗಳಲ್ಲಿ ದೊಡ್ಡ ಪಾತ್ರ ವಹಿಸುವವರು ಅಕ್ರಮ ವಲಸಿಗರ ಸಾಗಾಣಿಕೆಯನ್ನೇ ವೃತ್ತಿಯಾಗಿ ಮಾಡಿಕೊಂಡ ವ್ಯವಸ್ಥೆಗಳು ಸಂಘಟನೆಗಳು. ಮತ್ತೆ ಗ್ಯಾಂಗ್ ಗಳ ಕೆಲವು ಸದಸ್ಯರು ಕಳೆದ ವರ್ಷ ನಡೆದಂತೆ ದೊಡ್ಡ ಅನಾಹುತವೊಂದು ಆದಾಗ ಮಾತ್ರ ಸಿಕ್ಕಿ ಬೀಳುತ್ತಾರೆ ವಿಚಾರಣೆಗೊಳಪಡುತ್ತಾರೆ, ಶಿಕ್ಷೆಗೆ ಒಳಗಾಗುತ್ತಾರೆ. ಉಳಿದ ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ಉದ್ದೇಶಿತ ಸಾಗಾಣಿಕೆಯನ್ನು ವಲಸೆ ಅಧಿಕಾರಿಗಳ ಕಾವಲಿನವರ ಗಮನಕ್ಕೆ ಬಾರದಂತೆ ಸಿಕ್ಕಿಹಾಕಿಕೊಳ್ಳದೇ ಮಾಡಿಮುಗಿಸಿರುತ್ತಾರೆ.

ಅವಶ್ಯಕತೆ ಅವಕಾಶ ಬಯಕೆ ನಿರೀಕ್ಷೆ ಕನಸು ದುರಾಸೆ ಲೋಭ ಕ್ರೌರ್ಯ ಅಪರಾಧ ಎಲ್ಲವೂ ಒಂದಕ್ಕೊಂದು ನೇಯ್ದುಕೊಂಡು ಸಿಕ್ಕುಸಿಕ್ಕಾದ ಸುಲಭದ ಪರಿಹಾರ ಇರದ ಇಂತಹ ಘಟನೆಗಳು ಅವ್ಯಾಹತವಾಗಿ ಜಗತ್ತಿನ ಬೇರೆ ಭಾಗಗಳಲ್ಲಿ ನಡೆಯುತ್ತವೆ. ಕೆಲವೊಮ್ಮೆ ಮಾತ್ರ ಗಮನಕ್ಕೆ ಬರುತ್ತವೆ ಚರ್ಚೆಯಾಗುತ್ತವೆ. ಪತ್ತೆ, ವಿಚಾರಣೆಗಳ ನೆಪದಲ್ಲಿ ಅವುಗಳೊಳಗಿನ ಎಳೆಗಳು ಪದರಗಳು ಕಣ್ಣಮುಂದೆ ಖುಲಾಸೆಗೊಳ್ಳುತ್ತವೆ. ಜವಾಬು ಇರದ ಜಟಿಲ ಪ್ರಶ್ನೆಗಳನ್ನು ಕೇಳುತ್ತ ಎದುರಿಗೆ ನಿಲ್ಲುತ್ತವೆ.